- ಜೀವನಲ್ಲಿ ಮುಂದೆ ಬಪ್ಪಲೆ ಓಡುದರೊಟ್ಟಿಂಗೆ ಓದುದೂ ಮುಖ್ಯವೇ - July 9, 2014
- “ಯಕ್ಷತ್ರಿವೇಣಿ” - September 24, 2012
- ಬದಲಾಗದ್ದದು ಬದಲಾವಣೆ ಮಾಂತ್ರ ! - September 12, 2012
ಬೈಲಿಂಗೆ ಬಾರದ್ದೆ ಸುಮಾರು ಸಮಯ ಆತು, ಎಷ್ಟು ಸಮಯ ಆತು ಹೇಳಿರೆ.. ಮೊನ್ನೆ ಬೈಲಿಂಗೆ ಲಾಗ ಹಾಕುಲೆ ಹೆರಟಪ್ಪಗ ಒಳ ಬಪ್ಪಲೆ ಬಿಟ್ಟತ್ತಿಲ್ಲೆ!! ಬೈಲಿಂಗೆ ಎನ್ನ ಮರತ್ತು ಹೋಯ್ದಡ! ಆದರೆ ಬೈಲಿನೋರು ಮರತ್ತಿದವಿಲ್ಲೆ ಒಪ್ಪಣ್ಣ ನೆಂಪು ಮಾಡಿಕೊಟ್ಟಮತ್ತೆಯೇ ಎನಗೆ ಒಳಾಂಗೆ ಪ್ರವೇಶ ಸಿಕ್ಕಿದ್ದು.
ಲ್ಯಾಪ್ಟಾಪಿಂಗೆ ಹೊಸ ಇಂಟರ್ನೆಟ್ ಸಂಪರ್ಕ ಸಿಕ್ಕಿದ ಕೂಡ್ಲೇ ಮೊದಲು ಬಂದದು ಬೈಲಿಂಗೇ. ಅಯಸ್ಕಾಂತದ ಹಾಂಗೆ ಎಳೆತ್ತು ಈ ಹೊಡೇಂಗೆ! ಅದಕ್ಕೆ ಕಾರಣ ಇಲ್ಲದ್ದೆ ಅಲ್ಲ. ಮುಖ್ಯ ಕಾರಣ ಬೈಲಿನೋರ, ನೆರೆಕರೆಯೋರ ಪ್ರೀತಿ. ಆನು ಬೈಲಿಂಗೆ ಬಾರದ್ದಿಪ್ಪಗಳೂ ಅಂಬಂಬಗ ಫೋನು, ಮೆಸ್ಸೇಜು ಮಾಡಿಗೊಂಡಿತ್ತಿದ್ದವು. ಕಳದೊರ್ಷ ಶ್ರೀ ಅಕ್ಕ ಕಳ್ಸಿದ ದೊಡ್ಡ ತಿಂಡಿಯ ಕಟ್ಟೂ.. ಅದರಿಂದಲೂ ದೊಡ್ಡ ಅವರ ಪ್ರೀತಿಯ ಮರವಲೆಡಿಗಾ?
ಬೈಲಿಂಗೆ ಎನ್ನ ಎಳೆವ ಇನ್ನೊಂದು ಆಕರ್ಷಣೆ ಹೇಳಿರೆ ಇಲ್ಲಿ ಇಪ್ಪ ಶುದ್ದಿಗೊ. ಎನಗೆ ಮೊಂದಲಿಂದಲೂ ಓದುವ ಆಸಕ್ತಿ. ಪುಸ್ತಕ ಓದುವ ಅಭ್ಯಾಸ ಎನಗೆ ಯಾವಗಂದ ಶುರುವಾದ್ದು ಹೇಳಿ ನೆಂಪಿಲ್ಲೆ. ತುಂಬ ಸಣ್ಣ ಇಪ್ಪಗಳೇ ಅಪ್ಪ ಅಮ್ಮ ಸಣ್ನ ಮಕ್ಕಳ ಪುಸ್ತಕ ತಂದು ಕೊಡುಗು, ಅದರ ಕಥೆ ಓದಿ ಹೇಳುಗು. ಅಂಬಗಂದ ಬೆಳದ ಆಕರ್ಷಣೆ. ರಜ್ಜ ದೊಡ್ದ ಆಗಿ ಆನು ಓದುಲೆ ಕಲ್ತಪ್ಪಗ ಪುಸ್ತಕಂಗಳ ತಂದುಕೊಟ್ಟು ಓದುಲೆ ಪ್ರೋತ್ಸಾಹ ಕೊಡುಗು. ಅಷ್ಟೇ ಅಲ್ಲದ್ದೆ ಓದುದು-ಬರವದು ಅಪ್ಪನ ಹವ್ಯಾಸವೂ ಅಪ್ಪು, ವೃತ್ತಿಯೂ ಅಪ್ಪು. ಅಮ್ಮಂಗೂ ಓದುವ ಹವ್ಯಾಸ.
ಓದುದರ ಬಗ್ಗೆ ಇಷ್ಟೊಂದು ಎಂತಕೆ ಬರವದು?! ಓದುವ ಹವ್ಯಾಸದ ಬಗ್ಗೆ ಆನು ಇತ್ತೀಚ್ಗೆ ಹೆಚ್ಚು ಆಲೋಚನೆ ಮಾಡ್ಲೆ ಶುರು ಮಾಡಿದೆ. ಅದಕ್ಕೆ ಕಾರಣ ಹತ್ತು ತಿಂಗಳು ಪ್ರಾಯದ ಎನ್ನ ಮಗ. ಅವನ ಹೇಂಗೆ ಬೆಳಶೆಕು, ಯಾವಗ ಎಂತ ಕಲುಶೆಕು ಹೇಳುದರ ಬಗ್ಗೆ ಹೆಚ್ಚು ತಿಳ್ಕೊಂಬ ಪ್ರಯತ್ನ ಮಾಡ್ತೆ. ಮಕ್ಕಳ ಮಾನಸಿಕ ಮತ್ತೆ ಶಾರೀರಿಕ ಬೆಳವಣಿಗೆಯ ಗಮನಲ್ಲಿ ಮಡಿಕ್ಕೊಂಡು ಯಾವ ಪ್ರಾಯಲ್ಲಿ ಎಂತ ಆಯೆಕ್ಕು ಹೇಳುದರ ನಿರ್ಧರಿಸೆಕಾದ್ದು, ಮತ್ತೆ ಅದರ ಸರಿಯಾಗಿ ಮಾಡೆಕಾದ್ದು ತುಂಬ ಮುಖ್ಯವಾದ ಕೆಲಸ. ದೊಡ್ಡ ಕಷ್ಟದ ವಿಷಯ ಅಲ್ಲ. ಆದರೆ ಮುಖ್ಯವಾದ್ದು. ಇದರ್ಲಿ ಹಲವು ಅಂಶಂಗೊ ಇದ್ದು, ಊಟದ ಅಭ್ಯಾಸಂದ ಹಿಡುದು ಆಟದ ವರೆಗೆ, ಮಾತಿನ ಕ್ರಮಂದ ಹಿಡುದು ಸಂಸ್ಕಾರ ಸಂಸ್ಕೃತಿಗಳ ವರೆಗೆ. ಈ ಮುಖ್ಯವಾದ ಕೆಲವು ಸಂಗತಿಗಳಲ್ಲಿ ‘ಓದು’ದೂ ಒಂದು.
ಓದುದು ಎಂತಗೆ?
ಈ ಪ್ರಶ್ನೆಯ ಬೇರೆ ಬೇರೆ ಜನಂಗಳ ಹತ್ತರೆ ಕೇಳಿರೆ ಬೇರೆ ಬೇರೆ ಉತ್ತರ ಸಿಕ್ಕುಗು. ಪರೀಕ್ಷೆಲಿ ಪಾಸಪ್ಪಲೆ, ಹೊತ್ತು ಕಳವಲೆ, ವಿಷಯ ತಿಳಿವಲೆ…ಇತ್ಯಾದಿ. ಆದರೆ ಮಕ್ಕಳಲ್ಲಿ ಓದುವ ಅಭ್ಯಾಸ ಬೆಳೆಶೆಕಾದ್ದಕ್ಕೆ ಕಾರಣಂಗೊ ಎಂತರ?
• ಅದೊಂದು ಉತ್ತಮ ಅಭ್ಯಾಸ – ಅದಕ್ಕೆ ಕಾರಣವೇ ಬೇಡ!
• ಬೇರೆ ಬೇರೆ ವಿಷಯಂಗಳ ಬಗ್ಗೆ, ಬೇರೆ ಬೇರೆ ದೇಶ-ಸಂಸ್ಕೃತಿಗಳ ಬಗ್ಗೆ ಮಾಹಿತಿ ಸಿಕ್ಕುತ್ತು, ಜ್ಞಾನ ಬೆಳೆತ್ತು.
• ಸಣ್ಣ ಪುಸ್ತಕ, ಪತ್ರಿಕೆಗಳ ಓದುವ ಅಭ್ಯಾಸ ಬೆಳದರೆ ಶಾಲೆ/ಕಾಲೇಜಿನ ದೊಡ್ಡ ದೊಡ್ಡ ಪಠ್ಯಂಗಳ ಓದುದು ಸುಲಭ ಆವ್ತು, ಅಲ್ಲದ್ದೆ ಆಸಕ್ತಿಯೂ ಬೆಳೆತ್ತು.
• ಕಥೆ ಪುಸ್ತಕಂಗಳ ಸಣ್ಣಾದಿಪ್ಪಗಳೇ ಓದುದರಿಂದ ಮಕ್ಕೊಗೆ ಕಲ್ಪನೆ ಮಾಡುವ ಶಕ್ತಿ ಬೆಳೆತ್ತು, ಮೆದುಳಿಂಗೆ ಉತ್ತಮ ಕೆಲಸ ಕೊಡುದಲ್ಲದ್ದೇ ಮೆದುಳಿನ ಬೆಳವಣಿಗೆಲಿ ಸಹಾಯ ಮಾಡ್ತು ಈ ಓದುವ ಅಭ್ಯಾಸ. ಇದರಿಂದ ಅವರ ಮೆದುಳಿನ ಆಲೋಚನೆ ಮಾಡುವ ಶಕ್ತಿ ಹೆಚ್ಚುತ್ತು. ಟಿವಿ ನೋಡುದು, ಮೊಬೈಲ್ ಅಥವಾ ಕಂಪ್ಯೂಟರಿಲ್ಲಿ ಆಡುದು ಮೆದುಳಿನ ಬೆಳವಣಿಗೆ ಹಾಳು.
• ಹೆಚ್ಚು ಹೆಚ್ಚು ಓದಿದಷ್ಟೂ ಭಾಷಾಜ್ಞಾನ – ವ್ಯಾಕರಣ, ಪದ ಸಂಗ್ರಹ ಇತ್ಯಾದಿ, ಭಾಷೆಯ ಮೇಲೆ ಹಿಡಿತ ಹೆಚ್ಚಾವ್ತು.
• ಹೆಚ್ಚು ವಿಷಯವ ತಿಳ್ಕೊಂಬ ಕಾರಣಮ್ದಾಗಿ ಎಲ್ಲಿಯೇ ಯಾವುದೇ ವಿಷಯಂಗಳ ಬಗ್ಗೆ ಮಾತಾಡುಲೆ, ಭಾಷಣ ಮಾಡುಲೆ, ಚರ್ಚೆ ಮಾಡುಲೆ ಧೈರ್ಯ ಬತ್ತು. ಅಲ್ಲದ್ದೇ ಬರವಣಿಗೆಯ ಅಭ್ಯಾಸವನ್ನೂ ಪೋಷಿಸುತ್ತು.
• ಏಕಾಗ್ರತೆ ಬೆಳೆತ್ತು ಮತ್ತೆ ನೆನಪಿನ ಶಕ್ತಿ ಹೆಚ್ಚಾವ್ತು.
• ಸೃಜನಶೀಲತೆಯ ಹೆಚ್ಚುಮಾಡ್ತು.
• ವಿವಿಧ ವಿಷಯಂಗೊಕ್ಕೆ ಸಂಬಂಧಪಟ್ಟ ಪುಸ್ತಕಂಗಳ ಓದಿ ತಿಳಿವದರಿಂದ ಮಕ್ಕೊಗೆ ದೊಡ್ದ ಆಗಿ ತಾನು ಕಲಿಯಕಾದ ವಿಷಯ ಯಾವುದು ಹೇಳುವ ಬಗ್ಗೆ ಸ್ಪಷ್ಟತೆ ಸಿಕ್ಕುತ್ತು.
• ಶ್ರೇಷ್ಠ ವ್ಯಕ್ತಿಗಳ ಬಗ್ಗೆ ಓದುದರಿಂದ, ನೀತಿಕಥೆಗಳ ಓದುದರಿಂದ ಅದು ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರಿ ಜೀವನಲ್ಲಿ ಉತ್ತಮ ನಡವಳಿಕೆ, ಅಭ್ಯಾಸಂಗಳ ಅಳವಡಿಸಿಗೊಂಬಲೆ ಸಹಾಯ ಆವ್ತು.
• ವಿಷಯಂಗಳ ವಿಮರ್ಶೆ ಮಾಡುವ, ಸರಿ ತಪ್ಪುಗಳ ಬಗ್ಗೆ ಚಿಂತನೆ ಮಾಡುವ ಅಭ್ಯಾಸವೂ ಬೆಳೆತ್ತು.
• ಮನಸ್ಸಿಂಗೆ ಸಂತೋಷ ಕೊಡ್ತು, ಇದೊಂದು ಉತ್ತಮ ಮನೋರಂಜನೆಯ ಅಭ್ಯಾಸ. ಎಲ್ಲಿಯೇ ಹೋದರೂ ಉದಾಸಿನ ಆವ್ತು ಹೇಳುವ ಅವಕಾಶವೇ ಇಲ್ಲೆ! ಓದುಲೆ ಎಂತಾರು ಸಿಕ್ಕಿರೆ ಸಾಕು, ಓದುವ ಅಭ್ಯಾಸ ಇಪ್ಪೋರು ಎಲ್ಲಿದ್ದರೂ ಖುಷಿಲಿ ಇರ್ತವು,
• ಮಾನಸಿಕ ಒತ್ತಡ ಕಮ್ಮಿ ಮಾಡುಲೆ ಓದುದು ತುಂಬಾ ಒಳ್ಳೆ ಮದ್ದು
• ಎಲ್ಲಕ್ಕಿಂತ ಮುಖ್ಯವಾಗಿ – ಪುಸ್ತಕ ಒದುದರಿಂದ ಯಾವುದೇ ರೀತಿಯ ಹಾನಿ ಇಲ್ಲಲೇ ಇಲ್ಲೆ!
ಇಷ್ಟೊಂದು ಕಾರಣಂಗಳಲ್ಲಿ ಯಾವುದಾದರೂ ಒಂದು ಕಾರಣ ಸಾಲದೋ? ನಮ್ಮ ಮಕ್ಕೊ ದೊಡ್ಡ ಆಗಿ ಇಂಜಿನಿಯರೋ, ಡಾಕ್ಟರೋ ಅಥವಾ ಟೀಚರೋ ಅಥವಾ ಕೃಷಿಕನೋ ಆಯಕು ಹೇಳಿ ಬಯಸುವ ನಾವು… ಎಲ್ಲಕ್ಕಿಂತ ಮೊದಲು ಉತ್ತಮ ಪ್ರಜೆಯಾಗಿ ತನ್ನ ಜೀವನ ರೂಪಿಸಿಗೊಂಬಲೆ ಅವಕ್ಕೆ ಒಂದು ಸರಳ ಬುನಾದಿ ಹಾಕಿಕೊಡುವ.
ಓದುವ ಅಭ್ಯಾಸ ಶುರು ಮಾಡ್ಸುದು ಹೇಂಗೆ?
ಕೆಲವು ಮಕ್ಕೊಗೆ ಅವಕ್ಕೇ ಪುಸ್ತಕಂಗಳ ಓದುವ ಆಸಕ್ತಿ ಬೆಳೆತ್ತು. ಹಾಂಗಿದ್ದರೆ ತುಂಬ ಒಳ್ಳೆದು. ಇಲ್ಲದ್ರೆ ಆ ಅಭ್ಯಾಸವ ಬೆಳಶೆಕಾದ್ದು ಹೆತ್ತವರ ಕೆಲಸ. ನವಗೆ ಓದುವ ಅಭ್ಯಾಸ ಇಲ್ಲದ್ದರೂ ಮಕ್ಕಳಲ್ಲಿ ಓದುವ ಉತ್ತಮ ಹವ್ಯಾಸ ಬೆಳಶುದು ಅವಕ್ಕೆ ನಾವು ಕೊಡುವ ದೊಡ್ಡ ಉಡುಗೊರೆ.
ಸುಮಾರು ಪುಸ್ತಕ ತಂದುಕೊಟ್ಟರೂ, ಮುಟ್ಟಿ ನೋಡ್ತವಿಲ್ಲೆ ಮಕ್ಕೊ ಹೇಳುದು ಸುಮಾರು ಜನರ ಸಮಸ್ಯೆ. ತಂದು ಕೊಟ್ತರೆ ಸಾಲ! ರುಚಿ ತೋರ್ಸೆಕು! ರುಚಿಯಾದ ತಿಂಡಿ ಡಬ್ಬಿಲಿ ಮಡುಗಿದ್ದು ಹೇಂಗೆ ಹುಡ್ಕಿ ತೆಕ್ಕೊಳ್ತವೋ, ಹಾಂಗೆ ಪುಸ್ತಕದ ರುಚಿಯೂ ಹಾಂಗೆಯೇ ಒಂದರಿ ಹಿಡುದರೆ ಅವ್ವೇ ಕೈಗೆ ತೆಕ್ಕೊಳ್ತವು ಪುಸ್ತಕವ
• ಸಣ್ಣಾದಿಪ್ಪಗಳೇ ಅವರ ಪ್ರಾಯದವಕ್ಕೆ ಇಪ್ಪ ಪುಸ್ತಕಂಗಳ ತಂದು, ನಿಂಗಳೂ ಅವರೊಟ್ಟಿಂಗೆ ಕೂದು ಆ ಪುಸ್ತಕಂಗಳ ಓದಿ.
• ಹಣ್ಣುಗೊ, ತರಕಾರಿಗೊ, ಪ್ರಾಣಿಗೊ, ವಾಹನಂಗೊ ಇತ್ಯಾದಿಗಳ ದೊಡ್ಡ ಚಿತ್ರ ಇಪ್ಪ ಪುಸ್ತಕಂಗೊ ಒಳ್ಳೆದು. ಅದರ ಅವಕ್ಕೆ ತೋರ್ಸಿ ಸ್ವಾರಸ್ಯಕರವಾಗಿ ಓದಿ, ವಿವರ್ಸಿ.
• ಅವಕ್ಕೆ ಅಕ್ಷರಜ್ಞಾನ ಇನ್ನೂ ಇಲ್ಲದ್ರೂ ಪದಂಗಳ ಮತ್ತೆ ಚಿತ್ರಂಗಳ ತೋರ್ಸಿ ಅದೆಂತರ ಹೇಳಿ ಹೇಳಿ ಕೊಟ್ಟರೆ ಅವ್ವು ಅದರ ಕಲಿತ್ತವು. ಪ್ರಾಣಿಗಳ ಚಿತ್ರ ತೋರ್ಸಿರೆ ಅದೆಂತರ ಹೇಳಿ ಅವ್ವೇ ಹೇಳುಗು, ಅವರ ತೊದಲು ಭಾಷೆಲಿ
• ನಿಧಾನಕ್ಕೆ ಸಣ್ಣ ಸಣ್ಣ ಕಥೆ, ಕವನ ಇಪ್ಪ ಪುಸ್ತಕಂಗಳ ತಂದು ಪದ್ಯಂಗಳ ಬಾಯಿಪಾಠ ಮಾಡ್ಸೆಕು. ಹೊಸ ಹೊಸ ಶಬ್ದಂಗಳ ಅರ್ಥವ ನಮ್ಮ ಭಾಷೆಲಿ ವಿವರ್ಸುದರಿಂದ ಅವಕ್ಕೆ ಕನ್ನಡ ಅಥವಾ ಇಂಗ್ಲಿಶ್ ಕಲಿವಲೆ ಸುಲಭ ಆವ್ತು. ಪದ್ಯ ಕಲುಶುದರಿಂದ ನೆನಪಿನ ಶಕ್ತಿ ಹೆಚ್ಚಾವ್ತಲ್ಲದ್ದೆ ಉಚ್ಛಾರಣೆಯನ್ನೂ ಕಲಿತ್ತವು.
• ಇನ್ನು ರಜ್ಜ ದೊಡ್ಡ ಮಕ್ಕೊ ಹೇಳಿರೆ ಶಾಲೆಗೆ ಹೋಪಲೆ ಶುರು ಮಾಡಿದ ಮಕ್ಕೊ ಆದರೆ ಅವಕ್ಕೆ ಮಕ್ಕಳ ಪತ್ರಿಕೆ, ಚಿತ್ರಕಥಾ ಪುಸ್ತಕಂಗೊ ಇತ್ಯಾದಿಗಳ ತಂದು ಕೊಟ್ಟು ನಾವು ಓದ್ಸೆಕು. ಸುರೂವಿಂಗೆ ನಾವೇ ಓದಿ ಕಥೆ ಹೇಳಿರೂ ನಿಧಾನಕ್ಕೆ ಅವಕ್ಕೇ ಅಕ್ಷರ ಜೋಡ್ಸಿ ಜೋಡ್ಸಿ ಓದುಲೆ ಪ್ರೇರೇಪಿಸೆಕು. ತಪ್ಪಿದಲ್ಲಿ ತಿದ್ದಿ ಹೇಳಿಕೊಡೆಕು. ತಪ್ಪಿಯಪ್ಪಗ ಬೈದರೆ, ಜೋರುಮಾಡಿರೆ ಅವರ ಓದುವ ಪ್ರಯತ್ನ ಅಲ್ಲಿಗೇ ನಿಂಗು. ಅವರ ಪ್ರಾಯದ ಬೇರೆ ಮಕ್ಕೊಗೆ ಹೋಲಿಸಿ ನೋಡುದೂ ತಪ್ಪು.
• ಚಿತ್ರಂಗೊ ಇಪ್ಪ ಪುಸ್ತಕಂಗೊ ಆಸಕ್ತಿ ಬೆಳವಲೆ ಒಳ್ಳೆದು, ಚಿತ್ರ ಇಪ್ಪಕಾರಣ ಪುಟಲ್ಲಿ ಕಮ್ಮಿ ಬರವಣಿಗೆ ಇಪ್ಪ ಹಾಂಗೆ ಕಾಣ್ತು, ಹಾಂಗಾಗಿ ಉದಾಸೀನವೂ ಕಮ್ಮಿ ಆವ್ತು
• ನ್ಯೂಸ್ ಪೇಪರುಗಳ ಓದುಲೆ ಕೊಡಿ, ಅದರ್ಲಿ ಬಪ್ಪ ಸಣ್ಣ ಸಣ್ನ ಶುದ್ದಿಗಳ ಓದುದರಿಂದಾಗಿ ಓದುವ ಅಭ್ಯಾಸ ಅಪ್ಪದರೊಟ್ಟಿಂಗೆ ದಿನ ದಿನದ ವಿಷಯಂಗಳೂ ತಿಳಿತ್ತು.
• ಅವರ ಪ್ರಾಯಕ್ಕೆ ಇಪ್ಪ ಪುಸ್ತಕಂಗಳನ್ನೇ ತಂದು ಕೊಡುದರಿಂದ ಅವಕ್ಕೆ ಸುಲಭ ಆವ್ತು. ದೊಡ್ಡವರ ಪುಸ್ತಕಂಗಳ ಅವಕ್ಕೆ ಕೊಟ್ಟರೆ ಅರ್ಥ ಆಗದ್ದೆ, ಆಸಕ್ತಿಯನ್ನೇ ಕಳಕ್ಕೊಂಬಲೂಸಾಕು.
• ಸಾಧ್ಯ ಆದಷ್ಟೂ ಕನ್ನಡದ/ನಮ್ಮ ಭಾಷೆಯ ಪುಸ್ತಕದೊಟ್ಟಿಂಗೆ ಶುರು ಆದರೆ ಒಳ್ಳೆದು. ಅರ್ಥ ಮಾಡಿಗೊಂಬಲೆ ಸುಲಭ. ನಿಧಾನಕ್ಕೆ ಇಂಗ್ಲಿಷ್ ಭಾಷೆಯ ಪುಸ್ತಕದ ಅಭ್ಯಾಸ ಮಾಡ್ಸೆಕು. ಮನೆಲಿ ಇಂಗ್ಲಿಷನ್ನೇ ಮಾತಾಡುವವ್ವಾದರೆ ಆ ಭಾಷೆಲಿಯೇ ಸುರುಮಾಡ್ಲಕ್ಕು.
• ದಿನಾಗ್ಲೂ ಇರುಳು ಮನುಗುವನ್ನ ಮೊದಲು ಒಂದು ಪುಟ ಆದರೂ ಓದಿಕ್ಕಿ ಮನುಗುವ ಅಭ್ಯಾಸ ಬೆಳಶಿರೆ ಒಳ್ಳೆದು.
• ಓದುದರಿಂದ ಅಪ್ಪ ಪ್ರಯೋಜನಂಗಳ ವಿವರ್ಸಿ ಹೇಳುದರಿಂದಲೂ ಅವರಲ್ಲಿ ಈ ಉತ್ತಮ ಅಭ್ಯಾಸ ಬೆಳೆವಲೆ ಸಹಾಯ ಅಕ್ಕು.
ಓದುದು ಒಂದು ತುಂಬ ಮುಖ್ಯ ಅಭ್ಯಾಸ ಹಾಂಗಾಗಿ ಮಕ್ಕಳಲ್ಲಿ ಅದರ ಬೆಳೆಶೆಕಾದ್ದು ನಮ್ಮ ಕರ್ತವ್ಯ ಹೇಳಿ ಎನಗೆ ಕಂಡ ಕಾರಾಣ ‘ಓದುವ ಅಭ್ಯಾಸ’ದ ಬಗ್ಗೆ ಗಮನಚೆಲ್ಲುವ ಪ್ರಯತ್ನ ಮಾಡಿದ್ದೆ ಅಷ್ಟೇ. ಆನು ಇಲ್ಲಿ ಬರದ್ದಷ್ಟೇ ಅಲ್ಲದ್ದೆ ಇನ್ನೂ ಸುಮಾರು ಕ್ರಮಂಗೊ, ರೀತಿಗೊ ಇಕ್ಕು. ನಿಂಗಳದ್ದೇ ಹೊಸ ವಿಧಾನಂಗಳ ಅಳವಡಿಸಿಗೊಂಬಲಕ್ಕು.
ಕಲ್ಲುಸಕ್ಕರೆ ಸವಿ ಬಲ್ಲವನೇ ಬಲ್ಲ….ಪುಸ್ತಕದ ರುಚಿಯೂ ಹಾಂಗೆಯೇ..
-ನಿಂಗಳ
ಸುವರ್ಣಿನೀ ಕೊಣಲೆ
ಧನ್ಯವಾದಂಗೊ
ದಿಕ್ಕುದೆಸೆಯಿಲ್ಲದ್ದೆ ಓಡುವ ಈ ದಿನಂಗಳಲ್ಲಿ ಓದುವ ಅಭ್ಯಾಸಕ್ಕೆ ಮಹತ್ವವೇ ಇಲ್ಲದ್ದಾಯಿದು . ಡಾಗುಟ್ರಕ್ಕನ ಶುದ್ದಿ ಸುಮಾರು ಮಾಹಿತಿಗಳ ಕೊಟ್ಟತ್ತು. ಧನ್ಯವಾದ .
ಸವಿವರವಾದ ಲೇಖನ.
ಮಕ್ಕೊಗೆ ಓದುತ್ತ ಅಭ್ಯಾಸ ಬೆಳಶುವದು ಇಂದಿನ ಅಗತ್ಯ. ಇಲ್ಲದ್ರೆ ಟೀವಿ ನೋಡುವದೋ, ಮೊಬೈಲ್ ಗುರುಟುವದೋ ಮಾಡಿಂಡು ಕಾಲ ಕಳೆತ್ತವು.
ಇಂಗ್ಲಿಶ್ ಮೀಡಿಯಮ್ ಲ್ಲಿ ಕಲಿತ್ತ ೫ ನೇಕ್ಲಾಸಿನ ಸಹಪಾಠಿಗೊ ಕನ್ನಡ ಅಕ್ಷರ ಓದಲೇ ಕಷ್ಟ ಪಟ್ಟೊಂಡಿಪ್ಪಗ, ಮಗಳು ಕನ್ನಡ ಪೇಪರಿನ ಸರಾಗ ಓದಿಂಡು ಇತ್ತಿದ್ದು. ಕಾರಣ ಮನೇಲಿ ಕನ್ನಡ ಓದುಸುವ ಅಭ್ಯಾಸ ಬೆಳೆಶಿದ್ದು
ಓದುತ್ತ ಅಭ್ಯಾಸ ಬೆಳೆಶಿಗೊಂಡರೆ ಸಮಯದ ಸದುಪಯೋಗ ಮಾಡ್ಲೆ ತುಂಬಾ ಸಹಕಾರಿ ಆವ್ತು.
ಬೈಲಿನ್ಗೆ ತಡವಾಗಿ ಬಂದದಾದರೂ ಒಳ್ಳೆ ಲೇಖನ ಒದಗಿಸಿದ ಸುವರ್ಣಿನಿ ಅಕ್ಕಂಗೆ ಧನ್ಯವಾದಂಗೋ
ಶರ್ಮಪ್ಪಚ್ಚಿ, ಧನ್ಯವಾದಂಗೊ. ನಿಂಗೊ ಹೇಳಿದ ಅಂಶ ಗಮನಿಸೆಕಾದ್ದು.ನಿಂಗೊ ಹೇಳಿದ ಹಾಂಗೆ ಇಂಗ್ಲಿಷ್ ಮೀಡಿಯಮ್ ಶಾಲೆಲಿ ಕಲಿವ ಮಕ್ಕೊ ಕನ್ನಡ ಓದುಲೆ ಪರದಾಡುವ ಸ್ಥಿತಿ ಇದ್ದು. ಹೀಂಗಿದ್ದ ಸಂದರ್ಭಲ್ಲಿ ಮನೆಲಿಯೇ ಕಲುಶೆಕಾದ್ದು ನಮ್ಮ ಕರ್ತವ್ಯ. ಶಾಲೆಲಿ ಕಲುಶುತ್ತವಿಲ್ಲೆ ಹೇಳಿ ದೂರಿಗೊಂಡು ಕೂಬ ಹಲವು ಜನ ಅಬ್ಬೆಪ್ಪಂಗೊ ಇದ್ದವು. ನಮ್ಮ ಮಕ್ಕೊಗೆ ಬೇಕಾರೆ ನಾವೇ ಕಲುಶೆಕು ಹೇಳುದು ಅವಕ್ಕೆ ಅರ್ಥ ಆಯಕು.
ಮನೇಲಿ ದೊಡ್ಡೋರು ಓದುವ ಅಭ್ಯಾಸ ಮಾಡಿಗೊಂದರೆ ಮಕ್ಕಳೂ ಓದುಲೇ ಶುರು ಮಾಡ್ತವು. ಮುಂದೆ ಅದುವೇ ಹವ್ಯಾಸ ಆವುತ್ತು ಹೇಳ್ವದು ಸತ್ಯ
ಖಂಡಿತಾ ಅಪ್ಪು, ಎನ್ನ ಅಮ್ಮಂಗೆ ಓದುವ ಅಭ್ಯಾಸ ಇದ್ದ ಕಾರಣ ಎನಗೂ ಪುಸ್ತಕ/ಪತ್ರಿಕೆಗಳ ತಂದುಕೊಟ್ಟು ಪ್ರೋತ್ಸಾಹಿಸಿದ ಕಾರಣ ಎನಗೂ ಓದುವ ರುಚಿ ಹಿಡುದ್ದು.
ತುಂಬಾ ಸಮಯದ ನಂತರ ಸುವರ್ಣಿನಿ ಅಕ್ಕನ ಲೇಖನ ಓದಲೆ ಸಿಕ್ಕಿತ್ತದಾ!
ಕೇಳುವದು, ಮಾತಾಡುವದು, ಓದುವದು, ಬರವದು (ಶ್ರವಣ, ಭಾಷಣ, ಪಠನ, ಲೇಖನ) ಈ ನಾಲ್ಕು ಭಾಷಾ ಶಿಕ್ಷಣದ ಮೆಟ್ಳುಗೊ. ಓದುವಿಕೆ ಸರಿ ಇಲ್ಲದ್ರೆ ‘ಭಾಷೆ ಇಲ್ಲದ್ದವು’ ಆಗಿ ಹೋಕು, ಅಲ್ಲದ?
ಪುಸ್ತಕ ಓದಿ ಹೊಸ ವಿಷಯ ತಿಳ್ಕೊಂಬಗ ಸಿಕ್ಕುವ ಆನಂದ ಅವರ್ಣನೀಯ! ‘ಜ್ಞಾನವೇ ಸುಖ’ ಹೇಳುವದು ಇದನ್ನೇ ಆಗಿರೆಕು!
ಓದುವ ಹವ್ಯಾಸವ ಹೇಂಗೆ ಬೆಳೆಸುವದು ಹೇಳಿ ಸವಿವರವಾಗಿ ಚೆಂದಕೆ ಬರದ ಈ ಲೇಖನ ಓದಿ ಖುಷಿಯಾತು.
ಸತ್ಯವಾದ ಮಾತು ಮಹೇಶಣ್ಣ.
ಧನ್ಯವಾದಂಗೊ
ಸವಿವರ ಶುದ್ದಿಗೊಂದು ಒಪ್ಪ. ಲಾಯಕ ಆಯ್ದು.
ಧನ್ಯವಾದಂಗೊ ಚೆನ್ನೈಭಾವ
ಓದುವ ಹವ್ಯಾಸ ಇದ್ದವಂಗೆ ಬೇಜಾರ ಹೇಳಿ ಇಲ್ಲೆ. ಒಬ್ಬ ಟಿವಿ ನೋಡುವಾಗ ಮತ್ತೊಬ್ಬಂಗೆ ತೊಂದರೆ ಅಕ್ಕು. ಓದುವುದರಲ್ಲಿ ಅಂತ ತೊಂದರೆ ಆಗ.ಒಂದು ಮೂಲೇಲಿ ಕೂದು ಓದಿದರೆ ಆತು .ಓದಿನ ಕಾರಣಂದ ಹಲವು ವಿಷಯ ಗೊಂತಾವುತ್ತು.ಮನೇಲಿ ಕೂದು ಓದಿ ಪರೀಕ್ಷೆ ಉತ್ತೀರ್ಣ ಆಗಿ ಜೀವನೋಪಾಯ ಸಂಪಾದಿಸಲೂ ಆವುತ್ತು.ಆದರೆ ಸಿಕ್ಕುವ ಪುಸ್ತಕ ಯಾವುದು,ಅದರಲ್ಲಿಪ್ಪ ವಿಷಯ ಸರಿಯೋ ಹೇಳಿ ವಿಚಾರ ಮಾಡೆಕ್ಕು.ಮತ್ತೆ ಮತ್ತೆ ತಿದ್ದೆಕ್ಕು.[ತಿದ್ದಿಕೊಳೆಕ್ಕು].ಪುಸ್ತಕ ಖರೀದಿ ಮಾಡುದು,ಮತ್ತೆ ಅದರ ಕಾಪಾಡುದು ಕಷ್ಟ.ಮನೆ ಒಳ ಜಾಗೆ ಬೇಕು,ಕಪಾಟು ಬೇಕು,ಒರಳೆ ಬತ್ತು,ಹೀಂಗೆ ಕೆಲವು ಸಮಸ್ಯೆ ಇದ್ದರೂ ವಾಚನ ಅಭ್ಯಾಸ ನಿರಂತರವಾಗಿ ಇದ್ದರೆ,ಬದುಕು ಲವಲವಿಕೆಲಿ ಇರುತ್ತು.
ನಿಂಗೊ ಹೇಳೀದ ವಿಚಾರ ಅಪ್ಪು, ಪುಸ್ತಕಂಗಳ ಮನೆಲಿ ಸಂಗ್ರಹಿಸುಲೆ ವ್ಯವಸ್ತೆ ಬೇಕು. ಅಥವಾ ಅವಕಾಶ ಇಪ್ಪವ್ವು ಲೈಬ್ರೆರಿಂದ ತಂದೂ ಓದುಲಕ್ಕು. ಮಕ್ಕೊಗೆ ಲೈಬ್ರೆರಿಲಿ ಒಂದು ಕಾರ್ಡ್ ಮಾಡ್ಸಿಕೊಟ್ಟರೆ ಅವ್ವು ಅಲ್ಲಿಂದ ಪುಸ್ತಕ ತಂದು ಓದುಲೆ ಅಭ್ಯಾಸ ಮಾಡುಗು.
ಮಕ್ಕೊ ಯಾವ ವಿಷಯ ಓದುತ್ತವು, ಅದುಒಳ್ಳೆದೋ ಅಲ್ಲದೋ ಹೇಳುದರ ದೊಡ್ಡವ್ವು ಗಮನಿಸಲೇಬೇಕು.
ಧನ್ಯವಾದ
ಓದಿನ ಮಹತ್ವ ದ ಬಗೆಗಿನ ಬರಹ ಲಾಯಕ ಆಯಿದು
ಧನ್ಯವಾದಂಗೊ.
ಕೇರಳದ ಎಲ್ಲಾ ಶಾಲಗಳಲ್ಲಿ ಜೂನ್ ತಿಂಗಳಿಲ್ಲಿ ಒಂದು ವಾರ ವಾಚನಾ ಸಪ್ತಾಹ ಹೇಳಿ ಆಚರಣೆ ಮಾಡ್ತವು.ಓದುವುದರ ಪ್ರಾಮುಖ್ಯತೆಯ ಮಕ್ಕೊಗೆ ತಿಳುಶುಲೆ ಬೇಕಾಗಿ.ಶುದ್ದಿ ಲಾಯಕಾಯಿದು.ಅಭಿನಂದನೆ.
ಕೇರಳದ ಶಾಲೆಗಳಲ್ಲಿ ಈ ಕ್ರಮ ಇಪ್ಪದು ತುಂಬಾ ಸಂತೋಷದ ವಿಷಯ. ಎಲ್ಲ ಕಡೆಲಿಯೂ ಶಾಲೆಗಳಲ್ಲಿ ಮಕ್ಕೊಗೆ ಓದುವ ಅಭ್ಯಾಸವ ಪ್ರೇರೇಪಿಸುವ ಕೆಲಸ ಆಯಕು