Oppanna.com

ಗಿಳಿ ಬಾಗಿಲಿಂದ -ಅದೇ ಹತ್ತಿ ಅದೇ ನೂಲು

ಬರದೋರು :   ಲಕ್ಷ್ಮಿ ಜಿ.ಪ್ರಸಾದ    on   09/07/2014    18 ಒಪ್ಪಂಗೊ

ಎನ್ನ ಸ್ನೇಹಿತೆ ಹತ್ತರೆ ಮಾತಾಡುತ್ತಾ ಇಪ್ಪಗ ಅವರ ಪಕ್ಕದ ಮನೆಯ ಹೆಮ್ಮಕ್ಕಳ ಕೈತೋಟದ ವಿಚಾರ ಬಂತು .ಅಲ್ಲಿಯಣ ಹೆಮ್ಮಕ್ಕ ಕೃಷಿಲಿ ಭಾರೀ ಉಷಾರಿ .ಅವರ ಅರ್ಧ ಎಕರೆ ಜಾಗಲ್ಲಿ ಇಲ್ಲದ್ದೆ ಇಪ್ಪ ತರಕಾರಿಗ ಇಲ್ಲೆ ,ಪಾಲಾಕು ಸೊಪ್ಪಿಂದ ಹಿಡುದು ಎಲಸಂಡೆ, ಅಬರೆ ,ಬೆಂಡೆಕಾಯಿ,ತೊಂಡೆಕಾಯಿ ,ಕನ್ನಡ ಪೀರೆ ,ಸೀಮೆ ಸೌತೆ .ಮೂಲಂಗಿ ನೀರುಳ್ಳಿ,ಏಲಕ್ಕಿ ಎಲ್ಲವೂ ಇದ್ದು ,ಕಳುದ ಸರ್ತಿ ಎನ್ನ ಸ್ನೇಹಿತೆ ಮನೆಗೆ ಹೋದಿಪ್ಪಗ ಅವರ ತೋಟ ನೋಡುಲೆ ಹೋಗಿತ್ತಿದೆ ಭಾರೀ ಆತ್ಮೀಯತೆಲಿ ಎಲ್ಲವನ್ನೂ ತೋರ್ಸಿತ್ತಿದವು .ಹಾಂಗೆ ಅವರ ತೋಟ ನೆಂಪಾಗಿ ಅವರ ತೋಟ ಹೆಂಗಿದ್ದು ? ಈಗಲೂ ಅವರ ತೋಟಲ್ಲಿ ಎಲ್ಲವೂ ಬೆಳೆತ್ತಾ ಇದ್ದ ?ಹೇಳಿ ಕೇಳಿದೆ .
ಅಷ್ಟಪ್ಪಗ ಎನ್ನ ಸ್ನೇಹಿತೆ “ಅಪ್ಪಪ್ಪ ,ಅಲ್ಲಿ ಈಗಲೂ ಹಾಂಗೆ ಇದ್ದು ,ಈಗ ಮನೆ ಎದುರು ತಾವರೆ ಮತ್ತೆ ನೈದಿಲೆಗೆ ಸಣ್ಣ ಕೆರೆ ಮಾಡಿದ್ದವು ,ಹಗಲು ತಾವರೆ ಅರಳುತ್ತು ಇರುಳು ನೈದಿಲೆ ಅರಳುತ್ತು ,ಆಚ ಮನೆ ಅಕ್ಕ ಭಯಂಕರ ಅದರ ಹಾಂಗೆ ಕೃಷಿ ಕೆಲಸ ಮಾಡುಲೇ ಆರಿಂಗೂ ಎಡಿಯ .ಅದೇ ಹತ್ತಿ ಅದೇ ನೂಲು ಹೇಳಿ ಇಡೀ ದಿನ ತೋಟಲ್ಲಿಯೇ ಕೆಲಸ ಮಾಡಿಕೊಂಡು ಇರ್ತು “ಎಲ್ಲ ಕೆಲಸ ಅವೇ ಸ್ವಂತ ಮಾಡುದು ,ಎನಗೆ ಅವರ ತೋಟದ ಮೇಲಣ ಪ್ರೀತಿ, ಕೆಲಸ ಮಾಡುವ ಉತ್ಸಾಹ ನೋಡುವಾಗ ನಾಚಿಕೆ ಆವುತ್ತು ” ಹೇಳಿ ಹೇಳಿತ್ತು !
ಅದರ ಮಾತಿನ ಕೇಳಿ ಅಪ್ಪಗ ಎನಗೂ ಅದೇ ಹತ್ತಿ ಅದೇ ನೂಲು ಹೇಳುವ ಆಡುಮಾತಿನ ಸಣ್ಣಾದಿಪ್ಪಗ ಕೇಳಿದ್ದು ನೆನಪಾತು .
“ಯಬ್ಬ !ಅದರ/ಅವನ ಹಾಂಗೆ ಸಾಧನೆ ಮಾಡುಲೆ ಆರಿಂಗೂ ಎಡಿಯಪ್ಪ,ಅದೇ ಹತ್ತಿ ಅದೇ ನೂಲು ಹೇಳಿ ಒಂದನ್ನೇ ಹಿಡುದು ಕೆಲಸ ಮಾಡುಲೆ ಅದಕ್ಕೆ/ಅವಂಗೆ ಮಾತ್ರ ಎಡಿಗು!: ಈ ಮಾತಿನ ನಾವು ಮಾತಿನ ನಡುವೆ ಆರಾದರೂ ಒಂದೇ ಸಮನೆ ಪಟ್ಟು ಹಿಡುದು ಕೆಲಸ ಮಾಡುವೋರ ಬಗ್ಗೆ ಬಳಕೆ ಮಾಡುತ್ತು.
ಯಾವದೇ ಕ್ಷೇತ್ರಲ್ಲಿ ಸಾಧನೆ ಮಾಡಕ್ಕಾದರೂ ನಿರಂತರ ಪ್ರಯತ್ನ ಬೇಕಾವುತ್ತು .ಒಂದರಿಯಂಗೆ ಯಶಸ್ಸು ಸಿಕ್ಕುತ್ತಿಲ್ಲೆ,ನಿರಂತರ ಒಂದೇ ದಿಕ್ಕಿಲಿ ಒಂದೇ ಗುರಿ ಮಡಿಕ್ಕೊಂಡು ಕೆಲಸ ಮಾಡಕ್ಕಾವುತ್ತು.ಯಾವುದೊಂದು ಕೆಲಸ ಮಾಡಕ್ಕಾದರೂ ಸುರುವಿಂಗೆ ಎಲ್ಲ ಕಡೆಂದ ಋಣಾತ್ಮಕ ಅಭಿಪ್ರಾಯಂಗಳೇ ಬತ್ತು ..ಸುರು ಮಾಡಿದ ನಂತರವೂ ಸುಮಾರು ವ್ಯಂಗ್ಯದ ಮಾತುಗ ,ನೆಗೆಗ ಎದುರಾವುತ್ತು .ಆದರೆ ಎಷ್ಟೋ ಜನಂಗ ಇದಾವುದರ ಲೆಕ್ಕಿಸದ್ದೆ ಆನೆ ನಡದ್ದೇ ದಾರಿ ಹೇಳುವ ಹಾಂಗೆ ಮುಂದುವರಿತ್ತವು .ಎಷ್ಟೇ ಅಡ್ಡಿ ಆತಂಕಂಗ ಎದುರಾದರೂ ಹಿಡುದ ಕೆಲಸವ ಬಿಡದ್ದೆ ಮುಂದುವರುಸುತ್ತವು.ಒಂದು ದಿನ ಯಶಸ್ಸಿನ ಪಡೆತ್ತವುದೆ.
ಹೀಂಗೆ ಸಾಧನೆ ಮಾಡುವೋರ ಸೂಕ್ಷ್ಮವಾಗಿ ಗಮನಿಸಿದೋರು.ಅವನ /ಅದರ ಹಾಂಗೆ ಅದೇ ಹತ್ತಿ ಅದೇ ನೂಲು ಹೇಳಿ ಒಂದೇ ಸಮನೆ ಕೆಲಸ ಮಾಡುಲೆ ಸುಮಾರಿಂಗೆ ಆರಿಂಗೂ ಎಡಿಯ ಹೇಳುವ ಮೆಚ್ಚುಗೆಯ ,ಉದ್ಗಾರದ ಮಾತಿನ ಹೇಳುತ್ತವು .
ಅದೇ ಹತ್ತಿ ಅದೇ ನೂಲು ಹೇಳಿರೆ ಎಂತ ಅರ್ಥ ಆಯಕ್ಕಾದರೆ ಚರಕಂದ ನೂಲು ತೆಗವದರ ನೋಡಕ್ಕು.ಹತ್ತಿಯ ಮುದ್ದೆ ಮಾಡಿ ಹಿಡುದು ಏಕಾಗ್ರತೆಂದ ಚರಕವ ತಿರುಗಿಸಿ ನೂಲು ಮಾಡುತ್ತವು .ಒಂದು ಕ್ಷಣ ಗಮನ ಅತ್ತೆ ಇತ್ತೆ ಹೋದರೂ ನೂಲು ಕಡಿತ್ತು.ಎಂಗಳ ನೆರೆ ಕರೆಯ ಕಾರಂತ ಮಾವ (ಕೋಳ್ಯೂರು ಆನಂದ ಕಾರಂತರು ) ಚರಕಂದ ಹತ್ತಿ ನೂಲು ಮಾಡಿ ಜನಿವಾರ ಮಾಡುದರ ಸಣ್ಣಾದಿಪ್ಪಗಂದಲೇ ಆನು ನೋಡುತ್ತಾ ಇದ್ದೆ .ಹಾಂಗಾಗಿ ಹತ್ತಿಂದ ನೂಲು ತೆಗೆಯಕ್ಕಾದರೆ ಎಷ್ಟು ಗಮನ ಮಡುಗಕ್ಕಾವುತ್ತು ಮತ್ತೆ ಒಂದೇ ಸಮನೆ ಚರಕ ತಿರುಗಿಸಿಕೊಂಡು ಕೆಲಸ ಮಾಡಕ್ಕಾವುತ್ತು ಹೇಳುದರ ಬಗ್ಗೆ ಒಂದು ಅಂದಾಜು ಇದ್ದು ಎನಗೆ .ಹಾಂಗಾಗಿ ಈ ನುಡಿಗಟ್ಟಿನ ಅರ್ಥ ಪಕ್ಕನೆ ತಲೆಗೆ ಹೋತು .
ಹತ್ತಿಂದ ನೂಲು ತೆಗವಲೆ ತುಂಬಾ ಗಮನ ಕೊಟ್ಟು ಒಂದೇ ಸಮನೆ ಮಾಡಕ್ಕಾದ ಕಾರಣ ಈ ರೀತಿಯ ನಿರಂತರವಾಗಿ ಒಂದೇ ಕ್ಷೇತ್ರಲ್ಲಿ ಪಟ್ಟು ಹಿಡುದು ಕೆಲಸ ಮಾಡಿ ಯಸಸ್ಸು ಗಳಿಸಿದೋರ ಬಗ್ಗೆ ಮಾತಾಡುವಾಗ ಇದು ನುಡಿಗಟ್ಟು ಆಗಿ ಬಳಕೆ ಆವುತ್ತು.
ಇದಕ್ಕೆ ಬೇರೆ ಏನಾರು ಅರ್ಥ ಇದ್ದ ?ಇದಕ್ಕೆ ಸಮಾನಾಂತರವಾಗಿ ಬಳಕೆ ಅಪ್ಪ ಮಾತುಗ ನಮ್ಮ ಭಾಷೆಲಿ ರೂಡಿಲಿ ಇದ್ದ ?ಗೊಂತಿಪ್ಪೋರು ತಿಳುಸಿ

18 thoughts on “ಗಿಳಿ ಬಾಗಿಲಿಂದ -ಅದೇ ಹತ್ತಿ ಅದೇ ನೂಲು

  1. ಉದಾಹರಣೆಯ ಒಟ್ಟಿ೦ಗೆ ನುಡಿಗಟ್ಟಿನ ಬಳಕೆಯ ಅರ್ಥಪೂರ್ಣ ವಿವರ . ಧನ್ಯವಾದ ಅಕ್ಕ .

    1. ನಿಂಗಳ ಎಲ್ಲರ ಪ್ರೋತ್ಸಾಹ ಎನ್ನ ಸೋಮಾರಿತನ (ಸುರೇಖ ಚಿಕ್ಕಮ್ಮನ ಮಾ ಮಾ ದೆವ್ವ ,ನಿಂಗಳ ನಾಮಾ ದೆವ್ವವ ರಜ್ಜ ದೂರ ದೂರ ಓಡ್ಸಿ ಬರೆಸುತ್ತಾ ಇದ್ದು ರಘುರಾಮಣ್ಣ ,ಧನ್ಯವಾದಂಗ

  2. ಅಬ್ಬೆ ಹಾಂಗೆ ಮಗಳು, ಯಥಾ ರಾಜಾ ತಥಾ ಪ್ರಜಾ, ಹತ್ತಿಯ ಹಾಂಗೆ ನೂಲು, ಒಂದಕ್ಕೊಂದು ಹೊಂದುತ್ತ ಹಾಂಗೆ ಇದ್ದಲ್ಲದಾ?
    ನುಡಿಗಟ್ಟಿನ ವಿವರಣೆ ಅರ್ಥವತ್ತಾಗಿ ಬಯಿಂದು. ಧನ್ಯವಾದಂಗೊ

    1. ಅಪ್ಪು ನೂಲಿನಾಂಗೆ ಸೀರೆ ಹೇಳುವ ಮಾತುದೆ ಎಂಗಳ ಕಡೆ ಪ್ರಚಲಿತ ಇದ್ದು ,ಧನ್ಯವಾದಂಗ

  3. ಒಳ್ಳೆ ನುಡಿಗಟ್ಟು. ವಿಜಯತ್ತೆ ಹೇದಾಂಗೆ ಟೀಕೆ ಮಾಡ್ತೊರುದೇ ಬಳಕೆ ಮಾಡ್ತವು. ( ಬೆಂಗಳೂರ ಭಾವನೂ ಮನ್ನೆ ಹಾಂಗೆ ಹೇಳಿಯೊಂಡಿತ್ತಿದ್ದ)

    1. ಅಪ್ಪಾ ?ಎನಗೆ ಅದು ವಿಜಯಕ್ಕ ಹೇಳಿದ ಮೇಲೆ ಗೊಂತಾದ್ದು ,ಧನ್ಯವಾದಂಗ

  4. ಹರೇ ರಾಮ, ಲಕ್ಷ್ಮೀ ಸರಿ ಅಂಬಗ ನಿಂಗಳ ಊರ ಹೇಳಿಕೆ ಮಾತು ಎನಗೂ ಗೊಂತಾದ ಹಾಂಗಾತು . ಈ ಉರಿಲ್ಲಿ ಅದೇ ಹತ್ತಿ ಅದೇ ನೂಲು ಹೇಳಿ ಉಪಯೋಗ್ಸುವದು ಹೇಳಿದ್ದದರನ್ನೇ ಹೇಳುವದು, ಮಾಡಿದ್ದದರನ್ನೇ ಮಾಡುವದು, ( ಒಟ್ಟಾರೆ ಕೇಳುಗರಿಂಗೆ, ನೋಡ್ದ್ದುಗರಿಂಗೆ ಬೊಡಿವ ವಿಷಯ ) ಇದಕ್ಕೆ ಹೇಳ್ತವು. ಹಂಗಾಗಿ ಹೇಳಿದೆ . ಹರೇ ರಾಮ .

    1. ಒಂದೊಂದು ಕಡೆಲಿ ಒಂದೊಂದು ರೀತಿಲಿ ಪಡೆನುಡಿಗ ಇರುತ್ತು ಅಲ್ಲದ ?
      ಧನ್ಯವಾದಂಗ

  5. ಇದರ ‘ಯಥಾ ಪ್ರಕಾರ’ಹೇಳಿಯೂ ಅರ್ಥೈಸುಲಕ್ಕುಹೇಳಿ ಕಾಣುತ್ತು.ಅಂಕಣ ಭಾರೀ ಲಾಯಕಾಗಿ ಬತ್ತಾ ಇದ್ದು.ಅಭಿನಂದನೆ.

    1. ನಿಂಗಳ ಬೆಂಬಲಕ್ಕೆ ಆನು ಆಭಾರಿ ,ಧನ್ಯವಾದಂಗ

  6. ಹರೇರಾಮ, ಲಕ್ಷ್ಮಿ, ನೀನು ಬರದ ಶೈಲಿ ಒಳ್ಳೆದಾಯಿದು ಆದರೆ ಈ ಹೇಳಿಕೆಯ ಟೀಕೆ ಮಾಡುವಾಗ ಉಪಯೋಗುಸುವದು. ಇದಕ್ಕೆ ಬೆನ್ನು ಬಿಡದ್ದ ಸಾಧನೆ ಹೇಳ್ಲಕ್ಕು ಕಾಣುತ್ತು. ನೀನು ಕೇಳಿದ ಕಾರಣ ಹೇಳಿದೆ . ಬೇಜಾರಿಲ್ಲೆನ್ನೆ?

    1. ಭಾಷೆಯ ಬಳಕೆ ಅರ್ಥಲ್ಲಿ ಪ್ರಾದೇಶಿಕ ವ್ಯತ್ಯಾಸಂಗ ಇರುತ್ತು ವಿಜಯಕ್ಕ ,ಎಂಗಳ ಕೋಳ್ಯೂರು ಕಡೆಲಿ ಅದೇ ಹತ್ತಿ ಅದೇ ನೂಲು ಹೇಳುವ ಮಾತಿನ ಮೆಚ್ಚುಗೆಯಾಗಿ ಬಳಕೆ ಮಾಡುತ್ತವು ,ಈ ಮಾತಿನ ಬಳಕೆ ಮಾಡಿ ಎನಗೆ ನೆನಪಿಸಿ ಕೊಟ್ಟ ಎನ್ನ ಸ್ನೇಹಿತೆ ಅರಸಿನ ಮಕ್ಕಿಲಿ ಇಪ್ಪದು ,ಅದು ಕೂಡ ಈ ಮಾತಿನ ಮೆಚ್ಚುಗೆಯ ರೂಪಲ್ಲಿ ಬಳಕೆ ಮಾಡಿದ್ದು ,ಟೀಕೆ ಮಾಡುವಾಗಲೂ ಈ ಮಾತಿನ ಋಣಾತ್ಮಕವಾಗಿ ಬಳಸುವ ವಿಚಾರ ಈಗ ನಿಂಗ ಹೇಳಿ ಗೊಂತಾತು ,ತಿಳಿಸಿದ್ದಕ್ಕೆ ,ಸದಾ ಬೆಂಬಲಿಸುತ್ತಾ ಇಪ್ಪದಕ್ಕೆ ಧನ್ಯವಾದಂಗ ವಿಜಯಕ್ಕ

  7. ನುಡಿಗಟ್ಟು ಬರದ ರೀತಿ ಒಳ್ಳೆದಾಯಿದು ಲಕ್ಷ್ಮಿಯಕ್ಕ. ”ಭಗೀರಥ ಪ್ರಯತ್ನ ” ಹೇಳುದು ಇದಕ್ಕೆ ಸರಿ ಹೊಂದುಗಲ್ಲದೋ?
    ”ಹಗಲು ತಾವರೆ ಅರಳುತ್ತು ,ಇರುಳು ನೈದಿಲೆ ಅರಳುತ್ತು ” :-)ಇದರ ಓದುವಗಳೇ ಖುಶಿ ಆವುತ್ತು . ಇನ್ನು ಕಂಡರೆ … ??

    1. ಅಪ್ಪು ,ಎಂಥ ಮಾದರಿ ತೋಟ ಅಲ್ಲದ ?ಒಂದು ಕೆರೆಲಿ ತಾವರೆ ಮಾತು ನೈದಿಲೆಯ ಗೆಡು ಹಾಕಿ ಹಗಲು ಇರುಳು ಹೂಗು ಅರಳುವ ಹಾಂಗೆ ಮಾಡಿದ್ದು ಎನಗೆದೆ ಕೇಳಿ ಭಾರಿ ಕುಶಿ ಆತು ,,ಓದಿ ಅಭಿಪ್ರಾಯಿಸಿದ್ದಕ್ಕೆ ಧನ್ಯವಾದಂಗ

  8. ಚರಕ ತಿರುಗಿಸುದು ಏಕಾಗ್ರತೆಗೆ ಒಳ್ಳೇದು.ಮಹಾತ್ಮ ಗಾಂಧೀ ನೂಲು ಮಾಡುವಾಗಲೇ ಆಲೋಚಿಸಿ ಹಲವು ಸಮಸ್ಯೆಗೊಕ್ಕೆ ಪರಿಹಾರ ಕಂಡುಹಿಡಿದ್ದವು.ಹಠ ಬಿಡದೆ ತಮ್ಮ ಸತ್ಯಾಗ್ರಹ,ಪ್ರಯೋಗಂಗಗಳಲ್ಲಿ ಮುಂದುವರಿದ್ದವು. ಒಳ್ಳೆ ನುಡಿಗಟ್ಟು.

    1. ವರ್ಷ ಪ್ರಾಯದ ಅವರ ಕಾಯಕ ನಿಷ್ಠೆ ನೋಡುವಾಗ ಹೆಮ್ಮೆ ಹೇಳಿ ಅನ್ಸುತ್ತು

      1. 70-75 ವರ್ಷ ಪ್ರಾಯದ ಕಾರಂತ ಮಾವ ಈಗಲೂ ಹತ್ತಿಂದ ನೂಲು ಮಾಡಿ ಜೆನಿವಾರ ಮಾಡುತ್ತವು ,ಸದಾ ಓದಿ ಪ್ರೋತ್ಸಾಹಿಸುವ ನಿಂಗೋಗೆ ಧನ್ಯವಾದಂಗ ಗೋಪಾಲಣ್ಣ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×