Oppanna.com

ಸಮಸ್ಯೆ : 43 ರಾಮ-ಹನುಮರ ಭೇಟಿ

ಬರದೋರು :   ಸಂಪಾದಕ°    on   17/08/2013    56 ಒಪ್ಪಂಗೊ

ಈ ವಾರ ಒ೦ದು ಹೊಸ ಪ್ರಯತ್ನ ಮಾಡುವ.
ಋಷ್ಯಮೂಕ ಪರ್ವತದ ಬುಡಲ್ಲಿ  ಸೀತಾದೇವಿಯ ಹುಡುಕ್ಕುತ್ತಾ ಬ೦ದ ರಾಮಲಕ್ಷ್ಮಣರ ಮತ್ತೆ ವಟುರೂಪಿ ಹನುಮ೦ತನ ಭೇಟಿಯ ಸನ್ನಿವೇಶವ ಕವನ ರೂಪಲ್ಲಿ ಏವದಾರು ಛ೦ದಸ್ಸಿಲಿ  ಬರೆಯಿ.

56 thoughts on “ಸಮಸ್ಯೆ : 43 ರಾಮ-ಹನುಮರ ಭೇಟಿ

  1. ರೈಸಿತ್ತೋ..ರೈಸಿತ್ತು. !

  2. ಕೇಳಾಣ ೩ ಪಾದಲ್ಲಿ ಆದಿ ಪ್ರಾಸ ವ್ಯತ್ಯಾಸ ಅಗಿತ್ತು. ಇಲ್ಲಿ ಸರಿ ಮಾಡಿದೆ.
    ಮಾರು ವೇಷಲಿ ಹೋದ
    ಮಾರುತನ ಚತುರ ಸುತ
    ನೇರ ಮಾತಿಂಗಿಳಿದ ನಯವಿನಯಲಿ
    ಆರು ನಿಂಗಾರು ? ಯಾ
    ವೂರು ?ಜಟೆಯ ಮುನಿಗಳೋ ?
    ಊರು ಬಿಟ್ಟರಸರೋ ?ರವಿಸೋಮರೋ ?
    ದೂತಾನು ಕಾರ್ಯಲ್ಲಿ
    ಮಾತಿಲ್ಲೆ ಮುಚ್ಚುಮರೆ
    ಈ ತರದ ವೇಷವಿದು ಅರಸನಾಜ್ಞೆ
    ಕಾತರಲಿ ಕಾಯ್ಗೆನ್ನ
    ಎತ್ತರದ ಶಿಖರಲ್ಲಿ
    ಆತುರಲಿ ಸೇರುವನೊ ಸುಗ್ರೀವನಾ
    ದೂತನಿವ ಪ್ರಾಜ್ಞನೇ
    ಮಾತದೆಂತಾ ಮಧುರ
    ಆತುರದ ಗಳಿಗೆಲ೦ಜದ್ದ ವಟುವು
    ಈತನೊಡೆಯನು ಧನ್ಯ !
    ಸೋತು ಸುಣ್ಣಾದ ನ
    ಮ್ಮಾತುಮ ಕತೆಯಿವಂಗೆ ಗೊ೦ತು ಮಾಡು
    ಹಿರಿಯ ತಮ್ಮನ ವರದಿ
    ಲರರೆ! ಕುಂಡಲ ಕಂಡ
    ಪರಮಪುರುಷನು ಕೇಳಿದ ಹೆಸರೇoಗೆ
    ಕರಗಿ ಹೋತದ ಶಾಪ
    ವೊರಗಿದಾ° ಪಾದಲ್ಲಿ
    ಹರುಶದಾ ಮೊರೆಯದುವೆ ರಾಮ ! ರಾಮ !

  3. ಲಂಕೆಯಧಿಪತಿ ಹೊತ್ತ ಸೀತೆಯ
    ತೆಂಕು ದಿಕ್ಕಿನ ತನ್ನ ರಾಜ್ಯಕೆ
    ಮಂಕು ಕವಿದತು ರಾಮ ಮನಸಿಗೆ ಸತಿಯ ಕಾಣದ್ದೆ
    ಕಂಕಣವ ತೊಟ್ಟ ಜನಕನಳಿಯ
    “ಶಂಕೆ ಬೇಡಾರಿಂಗು ರಾವಣ
    ನಂಕದ ಪರದೆಯೆಳದು ಪತ್ನಿಯ ಮರಳಿ ಕರೆತತ್ತೆ”
    ಪೆಟ್ಟುಗುಟ್ಟಿಲಿ ಸೋತ ವಾನರ
    ಬಿಟ್ಟು ಪಟ್ಟಣ ಕಾಡು ಸೇರಿದ
    ದಟ್ಟ ಕಾಡೊಳ ಹುಡುಕಿದವವನ ರಾಮ ಲಕ್ಷ್ಮಣರು
    ಗಟ್ಟಿಯಪ್ಪಲೆ ಕಪಿಗಳರಸನು
    ರಟ್ಟೆ ಸಾಧನೆ ಮಾಡ್ವ ಸಮಯಲಿ
    ನೆಟ್ಟ ನೋಟದ ಪುರುಷ ರೂಪರ ನಡಿಗೆ ಕಂಡತ್ತು
    “ಪೀಡೆ ವಾಲಿಯ ಪ್ರೀತಿ ಬಂಟರೊ
    ಚಾಡಿಕೋರರೊ ದಾಳಿಕೋರರೊ
    ನೋಡು ಮಾರುತಿ” ಹೇಳಿ ಸುಗ್ರೀವಾಜ್ಞೆ ಹೊರಡಿಸಿದ
    “ಜೋಡಿ ಮನುಜರ ನಡೆಯ ನೋಡಿರೆ
    ಕಾಡುಲೆಂಗಳ ಬಂದದಾಗಿರ
    ಕಾಡು ದಾರಿಲಿ ಬಂದದೆಂತಕೊ ಹೋಗಿ ನೋಡಲ್ಲಿ”
    ಚೆಂದ ವಟುವಿನ ರೂಪ ಹಾಕಿದ
    ನಿಂದ ರಾಮನೆದುರಿಲಿ ಸುಂದರ
    “ಬಂದದೆಲ್ಲಿಂದಾವ ಹೊಡೆ” ಕೇಳಿದ ವಿನಯಿ ಹನುಮ
    “ತೊಂದರೆ ಕಳವ ರಘುಕುಲ ತಿಲಕ
    ಮುಂದೆಯಿಪ್ಪದು ಧನ್ಯ” ಹೇಳಾ
    ನಂದ ಭಾಷ್ಪಲಿ ಪಾದಕಂಜನೆಯಮಗ ಶರಣಾದ

    1. ಲಾಯಿಕಾಯಿದು ಅದಿತಿಯಕ್ಕ. ಸುಗ್ರೀವಾಜ್ಞೆ — ಮತ್ತೂ ಒೞೆದಾಯಿದು.

  4. ವೇಷ ಮರೆಸಿದ ಹನುಮನಿಳುದೂ
    ಕೋಸಲ ದೊರೆಯ ಬಂದು ನೋಡಿರೆ
    ಪಾಶವೆಳದತು ದೇವದರ್ಶನವಾದ ಮಾರುತಿಗೆ ।
    ಈಶನಿವನೆನ್ನೊಡೆಯನೆಂದವ°
    ತೋಷ ಹೆಚ್ಚಿಯೆ ಬಿದ್ದ ಪಾದಕೆ
    ದಾಸನಾಗಿಯೆ ದೇವರಾದವ° ಪೂಜ್ಯ ಹನುಮಂತ ॥

  5. ಕಲ್ಲು ಮರ ಬಳ್ಳಿಗಳೆ ಸೀತೆಯ
    ಸೊಲ್ಲು ಕೇಟಿರೊ ಕ೦ಡಿದಿರೊ ನೀ
    ನೆಲ್ಲಿ ಹೋದೆಯೊ ಜನಪನಾತ್ಮಜೆ ಹೇಳುತಸಬಡುದು।
    ಮೆಲ್ಲ ತಮ್ಮನ ಕೈಹಿಡುದು ಹೋ
    ಪಲ್ಲಿ ಬಿದ್ದ ಜಟಾಯು ಹಾರಾ
    ಟಲ್ಲಿ ರಾವಣ ಕದ್ದ ಶುದ್ದಿಯನೊಪ್ಪುಸಿದ ಮೇಲೇ||
    ಅಬಲೆ ಸೀತೆಯ ಹುಡುಕಿ ಕಾಡಿಲಿ
    ಶಬರಿಯೆ೦ಜಲ ಹಣ್ಣ ರುಚಿ ಸವಿ
    ದಬುಜ ಬ೦ಧುವ ವ೦ಶ ಬೆಳಗಿದ ರಾಮಚ೦ದ್ರಮನು।
    ಸೊಬಗ ಪ೦ಪಾಕರೆಲಿ ನೋಡಿದ°
    ಕೊಬಳಿಳಿವ ವರವಿಪ್ರನಾಕೃತಿ
    ಸಬಲನಪ್ಪೀ ಬಾಲವಟುವಿವ° ಯೇವ ಗೋತ್ರಜನೋ ||
    ಅಕ್ಷಿಗಳ ಮುಚ್ಚದ್ದೆ ಮನಸಿಲೆ
    ದಕ್ಷನಪ್ಪೀ ಜವ್ವನಿಗನಿವ°
    ರಕ್ಷಿಸುವ ನೆರಳಕ್ಕು ಮು೦ದ೦ಗೆ೦ಬ ಯೋಚನೆಲೇ।
    ದಕ್ಷಿಣಕೆ ನೆಡೆತ೦ದವಕೆ ಪ್ರ
    ದಕ್ಷಿಣೆಯ ಮಾಡಿಕ್ಕಿ ಕೈ ಮುಗಿ
    ದಕ್ಷರದ ಮುತ್ತುಗಳ ಮಾಲೆಯನರ್ಪಿಸಿದ ಹನುಮ°||
    ದೇವ ನಿನ್ನಯ ಪಾದಯುಗಳವ
    ಸೇವೆ ಮಾಡುವೆ ನೋಡು ಜೀವನ
    ನಾವೆಯಾ ದುಷ್ಟಾತ್ಮ ವಾಲಿಯು ಮುಳುಗುಸಿದನಯ್ಯೋ।
    ಬಾ ವರವ ನೀಡೆನ್ನ ಹೆಗಲಿನ
    ಸಾವಕಾಶಲ್ಲೇರು ದಿನದಿನ
    ಸಾವ ಕಿಷ್ಕಿ೦ದಾಧಿಪನ ತಮ್ಮ೦ಗೆ ಬದುಕು ಕೊಡು||
    ಆ ರವಿಯ ವರವ೦ಶ ಸ೦ಭವ°
    ಮಾರುತಿಯ ಮಾತುಗಳ ಕೇಳಿದ°
    ಭಾರ ಮನಸಿಲಿ ಸೂರ್ಯಪುತ್ರನ ಕಷ್ಟಕತೆಯಿಡಿಕ।
    ನೂರು ವಾಲಿಗಳಡ್ಡ ಬ೦ದರು
    ತೋರುಸುವೆ ನಿಜಧರ್ಮಮಾರ್ಗವ
    ಹಾರು ಹನುಮನೆ ಋಷ್ಯಮೂಕದ ಗುಡ್ಡೆಕೊಡಿ ಸೇರು||

    1. ಅವರಿಬ್ಬರ ಭೇಟಿಯ ಕರೇ…ಲಿ ನಿಂದು ನೋಡಿದ ಹಾಂಗಿದ್ದನ್ನೆ- ಅದ್ಭುತ !

    2. ಆಹಾ….! ಅಕ್ಷರದ ಮಾಲೆಯನರ್ಪಿಸಿದ … ,ಕಿಷ್ಕಿಂಧಾಧಿಪನ ತಮ್ಮಂಗೆ ಬದುಕು ಕೊಡು.., ತೋರುಸುವೆ ನಿಜ ಧರ್ಮ ಮಾರ್ಗವ …. , ಮುಳಿಯದಣ್ಣಾ, ಎಂತಾ ಮಾತುಗಳ ಮಾಲೆ ಕಟ್ಟಿದಿರಪ್ಪಾ… , ಕವಿಗೆ ಕವಿ ಮಣಿವಂ, ಮಣಿದೆಂ.

  6. ಸ್ಫರ್ಧೆಗೆ ಬಿದ್ದ ಹಾಂಗೆ ಎಲ್ಲೋರು ಬರವದು ನೋಡಿ ತುಂಬಾ ಕುಶಿಯಾತು.

    1. ಈ ಸ್ಪರ್ಧೆ ಎವತ್ತೂ ನಿಲ್ಲದ್ದೆ ಮುಂದುವರಿಯಲಿ, ಅಲ್ಲದೋ ಅಕ್ಕ.

  7. ದಿಕ್ಕು ದಕ್ಷಿಣ ಹೊಡೆಲಿ ರಾವಣ
    ಬಿಕ್ಕಿ ಕೂಗುವ ಸೀತೆಯೊಯ್ವಗ
    ಕುಕ್ಕಿ ಕೊಕ್ಕಿಲಿ ಕೊಂದ ಪುಷ್ಪಕ ಯಾನ ಸಾರಥಿಯ
    ಸಿಕ್ಕ ಹಕ್ಕಿ ಜಟಾಯು ಶುದ್ದಿಯು
    ತಕ್ಕ ಮಟ್ಟಿನ ದಾರಿ ತಿಳುಶಿದ
    ದುಕ್ಕ ತೀರಿ ಕಬಂಧ ಮೋಕ್ಷವ ಪಡೆದು ರಾಮಂಗೆ ||
    ಆದರದರಾತಿಥ್ಯ ಮುಗುಶಿಯೆ
    ಕಾದ ಶಬರಿಗೆ ಮೋಕ್ಷ ಕರುಣಿಸಿ
    ಮೇದಿನಿಲಿ ಹರಿವ ಪಂಪಾ ತೀರ ತಲುಪುವಗ
    ಗಾದಿ ಹಸುರಿಲಿ ಕಂಗೊಳಿಪ ಸಿರಿ
    ಬಾದಿಯಾಯಿದೊ ಹೇಳ್ವ ರೀತಿಲೆ
    ಸೀದ ಕಂಡದು ಋಷ್ಯ ಮೂಕದ ಶೈಲಗಳ ಶೃಂಗ ||
    ಅಟ್ಟಿನಳಗೆಯ ರಾಶಿ ಕೊಟ್ಟಿಗೆ
    ಯಟ್ಟಿ ಮಡುಗಿದ ಹಾಂಗೆ ಕಾಂಬದು
    ಮುಟ್ಟದಷ್ಟೆತ್ತರಕೆ ಹಬ್ಬಿದ ಶಿಖರ ತಪ್ಪಲುಗೊ
    ಮೊಟ್ಟಮೊದಲಿಲಿ ಕಂಡನನುಜರ
    ಸುಟ್ಟ ಕಾಲಿಲಿ ಹುಗ್ಗಿ ವಾಲಿಗೆ
    ಜಟ್ಟಿಯಾದರು ಹೆದರಿದಾ ಕಪಿರಾಜ ಸುಗ್ರೀವ ||
    ತನ್ನ ಮೆಚ್ಚಿನ ಮಂತ್ರಿ ಹನುಮನ
    ಭಿನ್ನವಿಸಿ ಕಳುಸಿದರವರ ರಜ
    ಹಿನ್ನಲೆಯ ತಿಳಿವಲೆ ಕೆಣಿಲಿದ ವಿಪ್ರ ವೇಷಲಿಯೆ
    ಹೊನ್ನಕಲಶದ ಸೇವೆನಿಷ್ಠೆಲಿ
    ತನ್ನತನವಿಡಿ ತೋರ್ಸಿ ಬೆಳಗುಲೆ
    ಸನ್ನೆ ಮಾರುತಿ ಕಂಡನಲ್ಲಿಯೆ ದಿವ್ಯ ದರುಶನಲಿ ||
    (ಹನುಮನ ಸ್ವಾಮಿನಿಷ್ಠೆಯ ಲೋಕ ಅರಿವಲೆ ರಾಮ ನೆಪ ಮಾತ್ರ)

    1. ಶೈಲಜಕ್ಕ,
      ತುಂಬಾ ಲಾಯ್ಕಾಯ್ದು.
      “ಅಟ್ಟಿನಳಗೆಯ ರಾಶಿ ಕೊಟ್ಟಿಗೆ” – ಒಳ್ಳೆ ಕಲ್ಪನೆ.

    2. ಭಾರೀ ಲಾಯ್ಕ ಆಯಿದು ಶೈಲಜಕ್ಕಾ.
      ಎರಡು ಜಾಗೆಲಿ ತಿದ್ದೆಕ್ಕು.
      ೧. ಮೇದಿ/ನಿಲಿ ಹರಿ/ವ ಪಂ/ಪಾ ತೀ/ರ ತಲು/ಪುವಗ – ಇಲ್ಲಿ ಯತಿಭ೦ಗ ಆಯಿದು. ವ ಪ೦ ಹೇಳ್ತಲ್ಲಿ ಓದುಲೆ ಕಷ್ಟ .ಮಾತ್ರೆ ಲೆಕ್ಕ ಕಮ್ಮಿ ಇದ್ದು.
      ೨. ಹಿನ್ನ/ಲೆಯ ತಿಳಿ/ವಲೆ ಕೆ/ಣಿಲಿದ ವಿ/ಪ್ರ ವೇ/ಷಲಿಯೆ – ಇಲ್ಲಿ ಣಿಲಿದ ವಿ ಹೇಳುವಲ್ಲಿ ಐದು ಮಾತ್ರೆಗೊ ಬ೦ತು,ವಾಕ್ಯಲ್ಲಿ ಮಾತ್ರೆ ಲೆಕ್ಕ ಕಮ್ಮಿ ಇದ್ದು.

      1. ಅಣ್ಣಾ …ಧನ್ಯವಾದಂಗೋ…
        ನದಿ ಹೇಳ್ವ ಶಬ್ದ ಟೈಪು ಮಾಡ್ವಗ ಬಿಟ್ಟುಹೋದ್ದು…..
        ದಿಕ್ಕು ದಕ್ಷಿಣ ಹೊಡೆಲಿ ರಾವಣ
        ಬಿಕ್ಕಿ ಕೂಗುವ ಸೀತೆಯೊಯ್ವಗ
        ಕುಕ್ಕಿ ಕೊಕ್ಕಿಲಿ ಕೊಂದ ಪುಷ್ಪಕ ಯಾನ ಸಾರಥಿಯ
        ಸಿಕ್ಕ ಹಕ್ಕಿ ಜಟಾಯು ಶುದ್ದಿಯು
        ತಕ್ಕ ಮಟ್ಟಿನ ದಾರಿ ತಿಳುಶಿದ
        ದುಕ್ಕ ತೀರಿ ಕಬಂಧ ಮೋಕ್ಷವ ಪಡೆದು ರಾಮಂಗೆ ||
        ಆದರದರಾತಿಥ್ಯ ಮುಗುಶಿಯೆ
        ಕಾದ ಶಬರಿಗೆ ಮೋಕ್ಷ ಕರುಣಿಸಿ
        ಮೇದಿನಿಲಿ ಹರಿವ ನದಿ ಪಂಪಾ ತೀರ ತಲುಪುವಗ
        ಗಾದಿ ಹಸುರಿಲಿ ಕಂಗೊಳಿಪ ಸಿರಿ
        ಬಾದಿಯಾಯಿದೊ ಹೇಳ್ವ ರೀತಿಲೆ
        ಸೀದ ಕಂಡದು ಋಷ್ಯ ಮೂಕದ ಶೈಲಗಳ ಶೃಂಗ ||
        ಅಟ್ಟಿನಳಗೆಯ ರಾಶಿ ಕೊಟ್ಟಿಗೆ
        ಯಟ್ಟಿ ಮಡುಗಿದ ಹಾಂಗೆ ಕಾಂಬದು
        ಮುಟ್ಟದಷ್ಟೆತ್ತರಕೆ ಹಬ್ಬಿದ ಶಿಖರ ತಪ್ಪಲುಗೊ
        ಮೊಟ್ಟಮೊದಲಿಲಿ ಕಂಡನನುಜರ
        ಸುಟ್ಟ ಕಾಲಿಲಿ ಹುಗ್ಗಿ ವಾಲಿಗೆ
        ಜಟ್ಟಿಯಾದರು ಹೆದರಿದಾ ಕಪಿರಾಜ ಸುಗ್ರೀವ ||
        ತನ್ನ ಮೆಚ್ಚಿನ ಮಂತ್ರಿ ಹನುಮನ
        ಭಿನ್ನವಿಸಿ ಕಳುಸಿದರವರ ರಜ
        ಹಿನ್ನಲೆಯ ತಿಳಿದರಿವ ಕೆಣಿಲಿದ ವಿಪ್ರ ವೇಷಲಿಯೆ
        ಹೊನ್ನಕಲಶದ ಸೇವೆನಿಷ್ಠೆಲಿ
        ತನ್ನತನವಿಡಿ ತೋರ್ಸಿ ಬೆಳಗುಲೆ
        ಸನ್ನೆ ಮಾರುತಿ ಕಂಡನಲ್ಲಿಯೆ ದಿವ್ಯ ದರುಶನಲಿ ||
        (ಹನುಮನ ಸ್ವಾಮಿನಿಷ್ಠೆಯ ಲೋಕ ಅರಿವಲೆ ರಾಮ ನೆಪ ಮಾತ್ರ)

        1. ಶೈಲಕ್ಕಾ,ಲಾಯಕಕೆ ಬರದ್ದಿ
          *ಅಟ್ಟಿನಳಗೆಯ……ಶಿಖರ ತಪ್ಪಲುಗೊ-ಕೊಶಿಯಾತು.
          *ಸುಟ್ತ ಕಾಲಿಲಿ ಹುಗ್ಗಿ….ಎಂತದು ಗೊಂತಾತಿಲ್ಲೆನ್ನೆಪ್ಪಾ!

          1. ಧನ್ಯವಾದಂಗೋ ಮಾವ…
            ಅಣ್ಣ ವಾಲಿಯ ಹತ್ತರೆ ಯುದ್ಧ ಮಾಡಿ ಕಾಲು ಸುಟ್ಟುಗೊಂಡು ಸ್ಥೈರ್ಯ ಇಲ್ಲದ್ದೆ ಆರಿಂಗೂ ಗೊಂತಾಗದ್ದ ಹಾಂಗೆ ಹುಗ್ಗಿ ಕಿಷ್ಕಿಂಧೆಲಿಪ್ಪದರ ಹೀಂಗೆ ಹೇಳಿದ್ದು

          2. ಲಾಯಿಕ ಆಯಿದು ಶೈಲಕ್ಕ.ದೊಡಾ ಅಟ್ಟಿನಳಗೆ , ಅದರಲ್ಲಿ ತು೦ಬ ಕೊಟ್ಟಿಗೆ ,ವಿಶೇಷ ಕಲ್ಪನೆ !

    1. ಮಹರ್ಷಿ ಮೌನಿಯ ಬೆಟ್ಟ ಸಾಕ್ಷಿಗೆ –ಈ ಸಾಲುಗೊ ಕೊಶಿಯಾತು ಶ್ಯಾಮಣ್ಣ

  8. ಅಪ್ಪನಾಡಿದ ಮಾತು,
    ಅಮ್ಮನ ಅಣತಿ ಪಾಲಿಸಿ
    ಕಾಡುಮೇಡಿಲಿ ಅಲೆದು ನಲ್ಲೆಯ
    ಕಳೆದು ಕೊಂಡವ
    ಹುಡುಕಿ ಬಂದನೋ
    ಸೌಮಿತ್ರಿಯಣ್ಣನೇ
    ಶ್ಯಾಮಸುಂದರನು?
    ಹಣೆಗೆ ಗಂಧ ವಿಭೂತಿ ಕುಂಕುಮ
    ಎಡದ ಹೆಗಲಿನ ನೂಲಿನೆಳೆ
    ಯಜ್ಞೋಪವೀತದ ಸೊಬಗು ಕಂಡೆಯ…
    ಮಂತ್ರ ಹೇಳುವ ಮಾಣಿ ನೋಡಾ
    ಗಾಳಿ ಪುತ್ರನೆ
    ದಾರಿ ಅಡ್ಡಕೆ ನಿಂದಿದದ
    ಸುಕುಮಾರ ಸುಂದರನೋ?
    ಮಹರ್ಷಿ ಮೌನಿಯ ಬೆಟ್ಟ ಸಾಕ್ಷಿಗೆ
    ಸಹರ್ಷ ಸಮ್ಮಿಲನ
    ——————-
    ಶ್ಯಾಮಸುಂದರ=ರಾಮ
    ಸುಂದರ=ಹನುಮ (ಸುಂದರ ಕಾಂಡ ಇಡೀ ಹನುಮಂತಂದಲ್ಲದಾ?)
    ಮಹರ್ಷಿ ಮೌನಿಯ ಬೆಟ್ಟ=ಋಷ್ಯಮೂಕ ಪರ್ವತ

    1. ” ಪೆನ್ಸಿಲು” ಓಡಿದ ಹಾಂಗೆ ಇದು ಓಡಿದ್ದಿಲೆ ಭಾವ.

  9. ಆಹೋಹೋ..ಶಾಭ…(ಶ್)… ಬಾಲ….ಣ್ಣ… ಬಾರೀ ಲಾಯ್ಕಾಯಿದು…

  10. ಅಲ್ಲಿ ನೋಡಾ ಗುಡ್ದೆಕೊಡಿಲದ
    ಮೆಲ್ಲ ಮೆಲ್ಲಂಗಿಳಿದೆ ಬಪ್ಪೊರ
    ಬಿಲ್ಲು ಬಾಣವೊ ಕೈಲೆ ಕಾಣುತ್ತಾರೊ ಗೊಂತಿಲ್ಲೇ /
    ಎಲ್ಲಿ ಇಪ್ಪೋರಾರು ಊರಾ
    ರೆಲ್ಲಿ ಹೋಪೋರಾರು ಇಂದವು
    ಇಲ್ಲಿಗೆಂತಕೆ ಬಂದವದ ನೀ ತಿಳಿದು ಬಾ ಹನುಮಾ/೧/
    ಅಡ್ದ ಇಪ್ಪಾ ಗುಡ್ದೆ ಹಾರಿದ
    ದೊಡ್ಡ ಮರದಾ ಮೇಲೆ ಏರಿದ
    ಚಡ್ಡಿ ಬಿಗಿದಾ ಕುಂಞಿಮಾಣಿಯೆ ಆದ ಆ ಹನುಮಾ/
    ಮಡ್ಡಿ ಮಂಕನೊ? ಅಲ್ಲ ‘ರಣಕಲಿ ‘
    ಅಡ್ದ ಬಂದರೆ ವೀರನೇ ಸರಿ
    ಸೆಡ್ಡು ಹೊಡದೇ ನಿಂಗು ಪವನಜ ವೀರ ಕಪಿರಾಯ /೨/
    ರಾಮ ಲಚುಮಣರೆದುರು ಬಂದನೊ!
    ಕಾಮರೂಪವ ಹೊಂದಿ ಕಪಿಕುಲ
    ಸೋಮ ನಿಂದನೊ ಸಲುಸಿ ನಮನವ ಜೋಡುಸಿದ ಕರವಾ/
    “ನಾಮಧೇಯವದೇನುನಿಮ್ಮದು?”
    “ರಾಮನಾನಿವನನುಜ ಲಕ್ಶ್ಮಣ
    ಧಾಮವಮ್ಮದಯೋಧ್ಯೆ “ಎಂದನು ದಾಶರಥಿಯಂದು / ೩/
    ( ಹನುಮ ಕನ್ನಡಿಗ ಆದ ಕಾರಣ ಕನ್ನಡಲ್ಲಿ ಮಾತಾಡಿದನಾಡ )
    ಕಾಡು ತಿರುಗುವ ಕೋಡಗಂಗಳೊ
    ಮಾಡು ನೆಲ ಈ ಕಾಡೆ ಎಂಗೊಗೆ
    ಗೂಡು ತಪ್ಪಿತ್ತಂದು ಸುಗ್ರೀವಂಗೆ ವಾಲಿಂದ/
    ಓಡುಸಿದ ಊರಿಂದ ಅವನೊಡ
    ನಾಡಿ ಆನಿದ ಆಂಜನೇಯನು
    ಕೂಡಿ ಇದ್ದೆಯೊ ಋಷ್ಯಮೂಕದ ಗುಡ್ಡೆ ಕೊಡಿಲೀಗ/೪/
    ಬನ್ನಿ ಎಂಗಳ’ ರಾಯ’ ಓ ಅದ
    ಪೊನ್ನೆ ಮರದಡಿ ಕಾದು ಕೂಯಿದ
    ಸನ್ನಿಧಿಯೆ ಚಿತ್ತೈಸೆಕಲ್ಲಿಗೆ ತಮ್ಮನೊಟ್ಟಿಂಗೆ /
    ತಿನ್ನಿ ಇದ ಹಣ್ಣು ಹಂಪಲು
    ಕನ್ನಡದ ಮಗ ಆನು ತಂದದು
    ಮನ್ನುಸೆಕು ತಪ್ಪಿದರೆ ತಿದ್ದೆಕು ದೇವ ಶರಣಾದೆ /೫/

    1. ಭಾರೀ ಲಾಯ್ಕಾಯ್ದು. ಸೂಪರ್.
      ಪ್ರತಿ ವಾರವೂ ಬಂದುಕೊಂಡಿರಿ ಮಾವ. 🙂

    2. ಎ೦ಥಾ ಕಲ್ಪನೆ,ಕವಿತ್ವ ಮಾವಾ..ಅಡ್ಡಬಿದ್ದೆ.
      ಇಡೀ ರಾಮಾಯಣವ ಇದೇ ಓಟಲ್ಲಿ,ನೆಡೆಲಿ ಒ೦ದರಿ ಪುರುಸೊತ್ತು ಮಾಡಿ ಬರೆವಿರೋ?ಮನಸ್ಸು ತು೦ಬಿತ್ತು ನಮ್ಮ ಭಾಷೆಯ ಇಷ್ಟು ಗಟ್ಟಿಯಾಗಿ ತು೦ಬುಸೊದರ ನೋಡಿ.ಅಭಿನ೦ದನೆಗೊ.

      1. ಮುಳಿಯದಣ್ಣಾ, ಧನ್ಯವಾದಂಗೊ. ಆ” ರಘುರಾಮ”ನ ಆಶೀರ್ವಾದ ಇದ್ದರೆ ಸಾಧ್ಯವಾಗದ್ದ ಕೆಲಸ ಇದ್ದೋ?
        ನಮ್ಮ ಭಾಶೆಲಿ ಬರವಾಗ ಬತ್ತ ತೊಂದರೆ ಹೇದರೆ ಶಬ್ದಂಗಳ ಛಂದಸ್ಸಿಂಗೆ (ಪರ್ಯಾಯ ಶಬ್ದ ಇಲ್ಲದ್ದೆ )
        ಹೊಂದುಸುತ್ಸು…ಅಲ್ಲದೋ, ಕೆಲಾವು ಸರ್ತಿ ಕೈಕಟ್ಟುತ್ತು… .ನೋಡೋ೦….

        1. ಬಾಲಣ್ಣ ಮನಸ್ಸು ಮಾಡಿರೆ ಆಗದ್ದ ಕಾರ್ಯ ಅಲ್ಲ ಇದು. ಕೆಲವು ಸರ್ತಿ ಛಂದಸ್ಸಿನ ಬಗ್ಗೆ ಗಮನ ಕೊಟ್ಟು ಬರವಗ ಭಾಷೆ, ಶಬ್ದಂಗಳ ಮಿತಿಂದಾಗಿ ಕೈ ಕಟ್ಟುಗು. ಅದಕ್ಕಾಗಿ ಚಂಪೂ ಕಾವ್ಯದ ಹಾದಿ ತೆಕ್ಕೊಂಡ್ರೆ ಸುಲಭ ಅಕ್ಕು ಹೇಳಿ ಎನ್ನ ಅಭಿಪ್ರಾಯ. ಎಂತ ಹೇಳ್ತಿ ಬಾಲಣ್ಣ.
          ಶುಭಸ್ಯ ಶೀಘ್ರಂ.

    3. ರಾಮ – ಹನುಮ ಇಬ್ರಿಂಗೂ ತೃ…ಪ್ತಿ ಆದಿಕ್ಕು, ಅವರಿಬ್ಬರ ಭೇಟಿಯ ಇಷ್ಟು ಚೆಂದಕ್ಕೆ ಪದ ಕಟ್ಟಿ ಹಾಡಿದ್ದು ನೋಡಿ. ಬಾಲಣ್ಣ ಇನ್ನೊಂದರಿ ನಮೋನಮಃ .

  11. ಮಾರು ವೇಷಲಿ ಹೋದ
    ಮಾರುತನ ಚತುರ ಸುತ
    ನೇರ ಮಾತಿಂಗಿಳಿದ ನಯವಿನಯಲಿ
    ಆರು ನಿಂಗಾರು ? ಯಾ
    ಯಾವೂರು ?ಜಟೆಯ ಮುನಿಗಳೋ ?
    ಊರು ಬಿಟ್ಟರಸರೋ ?ರವಿಸೋಮರೋ ?
    ದೂತಾನು ಕಾರ್ಯಲ್ಲಿ
    ಮಾತಿಲ್ಲೆ ಮುಚ್ಚುಮರೆ
    ಈ ತರದ ವೇಷವಿದು ಅರಸನಾಜ್ಞೆ
    ಕಾತರಲಿ ಕಾಯ್ಗೆನ್ನ
    ಎತ್ತರದ ಶಿಖರಲ್ಲಿ
    ಆತುರಲಿ ಸೇರುವನೊ ಸುಗ್ರೀವನಾ
    ದೂತನಿವ ಪ್ರಾಜ್ಞನೇ
    ಮಾತದೆಂತಾ ಮಧುರ
    ಆತುರದ ಗಳಿಗೆಲ೦ಜದ್ದ ವಟುವು
    ಈತನೊಡೆಯನು ಧನ್ಯ !
    ಸೋತು ಸುಣ್ಣಾದ ನ
    ಮ್ಮಾತುಮ ಕತೆಯಿವಂಗೆ ಗೊ೦ತು ಮಾಡು
    ಹಿರಿಯ ತಮ್ಮನ ವರದಿ
    ಲರರೆ! ಕುಂಡಲ ಕಂಡ
    ಪರಮಪುರುಷನು ಕೇಳಿದ ಹೆಸರೇoಗೆ
    ತೋರಿತದ ಹನುಮ೦ಗೆ
    ದಾರಿ ಸೇರುವ ಪಾದ
    ಹರ್ಷದಾ ಮೊರೆಯದುವೆ ರಾಮ ! ರಾಮ !

    1. ಇದನ್ನೇ ಒಂದೇ ಪದ್ಯಲ್ಲಿ ಬರೆತ್ತರೆ ಹೇಂಗೆ ಬರೆತ್ತಿ..? ಪ್ರಯತ್ನ ಮಾಡ್ಲಕ್ಕು ಏಂತ ಹೇಳ್ತಿ..?

      1. ದೂತನಾಗಿ ಬಂದ ಹನುಮ
        ಸೋತ ಅರಸು ದಾಶರಥಿಗೆ
        ಕಾಂತಿ ಬಪ್ಪ ಕಾರ್ಯ ಮಾಡಿ ಸಖ್ಯ ಬೆಳೆಶಿದಾ
        ಮಾತಿನೆಡೆಲಿ ಕೆಮಿಯ ಕಂಡು
        ಸೀತೆ ನಾಥ ಕೇಳುವಗಳ
        ದೆಂತ ಭಾಗ್ಯ ಉದಯವಾತು ರಾಮ -ಹನುಮಗೆ
        ರಾಮ-ಹನುಮ =ಇಬ್ರಿಂಗೂ ಒಟ್ಟಿ೦ಗೆ ಭಾಗ್ಯೋದಯ ಆತು ಹೇಳುವ ಅರ್ಥ.
        ಮುಗಿಶುವಾಗ ರಾಮ ಜೆಪ ಮಾಡ್ಲೆ ಎಡಿತ್ತಿದಿಲ್ಲೆ ಮಾವ .

        1. ಧನ್ಯವಾದ ಭಾಗ್ಯಕ್ಕ. ತೃಪ್ತಿ ಆತು. ತುಂಬ ಲಾಯ್ಕದ ಷಡ್ಪದಿ.

          1. ನಿ೦ಗೊಲ್ಲಾ ಸೇರಿ ಎನ್ನ ; ಷಡ್ದದಿ ”ರಜ್ಜವೂ ಗೊ೦ತಿಲ್ಲೆ” ಹೇಳುವ ಷಡಕ್ಶರಿ ಮಹಿಮೆಯ ” ರಜ್ಜ ಗೊ೦ತಾತು ” ಹೇಳುವ ಪ೦ಚಾಕ್ಶರಿಗೆ ಏರ್ಸಿದ್ದಿ. ಹಾ೦ಗಾಗಿ ಧನ್ಯವಾದ ಆನೇ ಎಲ್ಲೋರಿ೦ಗೂ ಹೇಳೆಕ್ಕಪ್ಪದು.
            ತಿದ್ದಿ ತೋರ್ಸುವ ಎಲ್ಲೊರಿ೦ಗೂ ಧನ್ಯವಾದ೦ಗೊ.

    2. ಸೂ… ಪರ್ ಆಯ್ದು ಭಾಗ್ಯಕ್ಕ 🙂
      ಓದಿ ತುಂಬಾ ಕುಶಿಯಾತು. ಹೀಂಗೆ ಬರೆತ್ತಾ ಇರಿ.
      (ಭಾವನೆ ವ್ಯಕ್ತವಾದ ರೀತಿಯ ಮುಂದೆ ಕೆಲವು ಕಡೆ ಬಂದ ವಿಸಂಧಿ ದೋಷಂಗ ಗೌಣ.)

  12. ನಾರುಮಡಿ ಸುತ್ತಿದ ಕ್ಷತ್ರಿಯರ ವಂದಿಸಿದ
    ಮಾರುತಿ ಅವಕ್ಕೆ ಹೇಳಿದ ತನ್ನ ಪರಿಚಯವ
    ಊರು ಬಿಟ್ಟೋಡಿ ಹುಗ್ಗಿದ್ದ ಸುಗ್ರೀವನ ಗೆಳೆಯ,ಮಂತ್ರಿ ಆನು ಹನುಮ
    ಚಾರು ಮಾತುಗಳ ಕೇಳಿದ ರಾಮಲಕ್ಷ್ಮಣರು
    ಸೂರಿಲ್ಲದೆ ತಿರುಗುವ ಕಾರಣವ ಹೇಳಿದವು
    ಕೂರುಸಿಯವರ ಭುಜಲ್ಲಿ ಹಾರಿದ ಹನುಮಂತ ಋಷ್ಯಮೂಕ ಪರ್ವತಕೆ

    1. ಹನುಮ -ರಾಮರ ಭೇಟಿಯ ಸುದೀರ್ಘವಾಗಿ ವಿವರುಸುಲೆ (ಷಡ್ಪದಿಗಳ ಪೈಕಿ)ವಾರ್ಧಕವೆ ಸೂಕ್ತ. ಅಕೇರಿಯಾಣ ಸಾಲಿಲಿ ಎರಡು ದಿಕ್ಕೆ ‘ಲಗಂ’ಬಯಿಂದು, ಮಾವ.ಅದರ ಗಮನಿಸಿ.

  13. ಅತ್ತೆ ಬಳಸಿದ ಪದ೦ಗೊ+ ವಿಷಯ ಒೞೆದಿದ್ದು.

  14. ನೀಡಿದಳಂಜನೆ ದಿವ್ಯದ ಕುಂಡಲ
    ಕಂಡನು ರಾಮನು ಮಾರುತಿ ಕೆಮಿಯೊಳ
    ಮೌಢ್ಯವು ಕರಗಿತು, ಭಾಗ್ಯದ ಬಾಗಿಲು ತೆಗದತು ಹನುಮಂಗೇ ।
    ಜೋಡಿಸಿ ಕೈಗಳ ರಾಮನ ಮುಂದೆಯೆ
    ಬೇಡಿಯೆ ಹೊಂದಿದ° ಸಾರ್ಥಕ ಬಾಳ್ವೆಯ
    ಕೂಡಿಸಿ ಹೆಗಲಿಲಿ ಹೊತ್ತೇ ಹತ್ತಿದ° ಪರ್ವತ ಶಿಖರಕ್ಕೇ ॥
    ಪಾವನಚರಿತನು ದಶರಥನಂದನ
    ರಾವಣನೂರಿನ ತೆಂಕಿನ ದಾರಿಲಿ
    ಮಾವನಮಗಳಿನ ಹುಡುಕುತ ಬಂದನು ಪಂಪಾತೀರಕ್ಕೇ ।
    ಕೋವಿದ ಹನುಮನು ತನಿಖೆಗೆ ಬಂದರೆ
    ದೇವರ ದರ್ಶನ ಜಾಡ್ಯವ ನೀಗಿತು
    ಸೇವಕನಾಗಿಯೆ ಮುಖ್ಯಪ್ರಾಣನು ಧನ್ಯತೆ ಹೊಂದಿದನೂ ॥

    1. ಎರಡೂ ಪದ್ಯಂಗೊ ಚೆಂದ ಆಯಿದು.
      ಶುರುವಾಣದ್ದರಲ್ಲಿ ಕೆಲವು ಕನ್ನಡ ಶಬ್ದಂಗೊ ಬಂದರೂ, ಒಳ್ಳೆ ಹವಿಗನ್ನಡ ಪದ್ಯವೇ .
      ಎರಡ್ನೆ ಪದ್ಯಲ್ಲಿ ಒಂದೆರಡು ಹವಿಗನ್ನಡ ಶಬ್ದಂಗೊ ಬಂದರೂ, ಕನ್ನಡ ಷಡ್ಪದಿಯ ಹಾಂಗೆ ಅನುಸುತ್ತು. ಆದರೂ ಎರಡ್ನೆ ಪದ್ಯ ತುಂಬ ಲಾಯ್ಕ ಆಯಿದು.
      ಷಡ್ಪದಿಲಿ ಮೂರನೆ+ಆರನೆ ಸಾಲಿನ ಅಕೇರಿಗೆ ಲಘು ಬಂದರೂ, ಗುರು ಹೇಳಿ ತೆಕ್ಕೊಂಬ ಕಾರಣ ಹನುಮಂಗೇ, ಶಿಖರಕ್ಕೇ, ತೀರಕ್ಕೇ —> ಹೇಳಿ ದೀರ್ಘ ಮಾಡೆಕ್ಕಾದ ಕಾರಣ ಇಲ್ಲೆ ಕಾಣುತ್ತು.

      1. ಅಪ್ಪು ಮಾವ, ಸರಿಯಾದ ಹವಿಗನ್ನಡ ಶಬ್ದಂಗ ಹೇಂಗಕ್ಕು ಹೇಳಿ ಅರಡಿಯದ್ದೆ ಕನ್ನಡ ಶಬ್ದಂಗಳನ್ನೇ ಬರದೆ- ತಿದ್ದುಲೆ ನಿಂಗೊ ಎಲ್ಲಾ ಇದ್ದೀರನ್ನೆ ಹೇಳ್ತ ಧೈರ್ಯ! ಅಲ್ಲಿಗೆ ಉಚಿತವಾದ [ ಉಚಿತ ಹೇಳಿರೆ ಫ್ರೀ ಹೇಳಿ ಅಲ್ಲ !] ಶಬ್ದಂಗಳ ತಿಳಿಸಿದರೆ ತಿದ್ದಿ ಬರೆತ್ತೆ . ಕಡೆಯಾಣ ಮಾತ್ರೆ ಬಗ್ಗೆ ಇನ್ನು ಮುಂದೆ ಗಮನಲ್ಲಿ ಮಡಿಕೊಳ್ತೆ . ನಿಬಿಡಬಂಧಲ್ಲಿ ಕವನರಚನೆ ಮಾಡುವ ಪ್ರಯತ್ನಲ್ಲಿ ಹೆಚ್ಚಿನ ಗೆಲುವು ಸಿಕ್ಕುತ್ತಾ ಇಲ್ಲೆ- ಆದರೂ ಆ ಬಗ್ಗೆಯೂ ಪ್ರಯತ್ನ ಮುಂದುವರುಸುತ್ತೆ. ನಿಂಗಳ ಸಕಾಲಿಕ ಮಾರ್ಗದರ್ಶನಕ್ಕೆ ಧನ್ಯವಾದಂಗೊ ಮಾವ.

    2. ಪದ್ಯಂಗೊ ಲಾಯಕ ಆಯಿದು ಇಂದಿರಕ್ಕ. ಎಲ್ಲಾ ಹವ್ಯಕ ಶಬ್ದಂಗಳ ಉಪಯೋಗಿಸಿದ್ದರೆ ಇನ್ನು ಎಂದ ಆವುತ್ತಿತ್ತು ಹೇಳಿ ಕಂಡತ್ತು ಎನಗೆ.

  15. ಅದಿತಿ ಅಕ್ಕಾ…. ಭಾರೀ ಪಷ್ಟಾಯಿದು…..

  16. ತುಂಬ ಕಷ್ಟದ ಆದಿಪ್ರಾಸ.ಅದೂ ಅಲ್ಲದ್ದೆ ಹವಿಗನ್ನಡಲ್ಲಿ ಶಬ್ದಂಗಳೇ ದುರ್ಲಭ. ಹೀಂಗಿದ್ದೂ ಈ ಪದ್ಯ ಬರದ ನಿಂಗಳ ಪ್ರಯತ್ನಕ್ಕೆ ಮೆಚ್ಚೆಕ್ಕು.
    ಅಭಿನಂದನೆಗೊ.

  17. ಮುಳಿಯ ಭಾವನ ಮಾರ್ಗದರ್ಶನಲ್ಲಿ ಪದ್ಯ ತಿದ್ದುಪಡಿ ಮಾಡಿದ್ದೆ. ಧನ್ಯವಾದ ಮುಳಿಯ ಭಾವ೦ಗೆ ಃ-)
    ಋಷ್ಯಧೀನ ಜಾಗೆಯಾದ
    ಋಷ್ಯಮೂಕ ಮಣ್ಣು ಮೆಟ್ಟಿ
    ಪುಷ್ಯರಾಗ ರಂಗು ತಂದವಣ್ಣತಮ್ಮರು
    ಶಿಷ್ಯನಾದ ವಾನರನು ಭ-
    ವಿಷ್ಯಪೂರ ರಾಘವನ ಮ-
    ನುಷ್ಯನಾಗಿ ಭೇಟಿ ಮಾಡಿ ಗುಡ್ಡೆ ಕೊಡಿಲಿಯೆ

    1. ಇಲ್ಲಿ, ತು೦ಬಾ ಲಾಯಿಕಾಯಿದು .
      ಓದುವವನ ಭಾವನೆಗಳೇ ಬೇರೆ; ಬರವವನ ಭಾವನೆಳೇ ಬೇರೆ.ಮೇಲೆ ಬರದ್ದರ ಓದಿಯಪ್ಪಗ ಎನಗನಿಸಿದ್ದು-ಸಾ೦ದರ್ಭಿಕವಾಗಿ ” ಭ-ವಿಷ್ಯಪೂರ” ಹೇಳುದರ ಬದಲು ಭ-ವಿಷ್ಯ ‘ಬರೆದ’ ರಾಘವನ ಹೇಳಿದರೆ ಹೇಚ್ಹು ಸೂಕ್ತ ಅಕ್ಕು ಹೇಳಿ ಅನ್ಸಿತ್ತು.

      1. ಭಾಗ್ಯಕ್ಕ, “ಭವಿಷ್ಯಪೂರ” ಹೇಳಿರೆ “ಮುಂದೆ ಎಂದೆಂದಿಗೂ” ಹೇಳುವ ಅರ್ಥಲ್ಲಿ ಆನು ಉಪಯೋಗಿಸಿದೆ.

  18. ಆನು “ಷ್ಯ” ವನ್ನೇ ಪ್ರಾಸಲ್ಲಿ ತರೆಕ್ಕು ಹೇಳಿ ಹಠಲ್ಲಿ ಬರದ್ದು. ಶಬ್ದಗ ಸರಿಯಾಗಿ ಸಿಕ್ಕದ್ದೆ ಕೆಲವು ಲೋಪಂಗ ಬಂದಿದು.
    ೫ನೆಯ ಸಾಲಿಲಿ “ಲಗಂ” ಬೈಂದು. ಮೂರನೆಯ ಸಾಲು ಅಲ್ಲಿಗೇ ಮುಗಿಯೆಕ್ಕಾತು. 🙁
    ಇದರ ಇನ್ನೂ ಚೆಂದಕ್ಕೆ ಮಾಡುಲೆ ದಯವಿಟ್ಟು ಸಲಹೆ ಕೊಡಿ.
    ಋಷ್ಯಮೂಕ ಜಾಗೆ ಹತ್ರೆ
    ಪುಷ್ಯರಾಗ ತರಲಿ ಹೊಳದು
    ಶಿಷ್ಯಗುರುವ ನಮುನೆ ನಡೆದವಣ್ಣ ತಮ್ಮ ಮ-
    ನುಷ್ಯರೂಪ ತಾಳಿ ಸುಖಭ-
    ವಿಷ್ಯದ ಮುನ್ನುಡಿ ಬರದಾ-
    ಯುಷ್ಯವಂತ ಹನುಮ ಭೇಟಿಯಾದ ಗುಡ್ದೆಲಿ

    1. ಪುಷ್ಯರಾಗ – ಹೇಳುವ ಪದ ಪ್ರಯೋಗ ಎನಗೆ ತು೦ಬಾ ಇಷ್ಟ ಆತು ಅದಿತಿಯಕ್ಕ. ‘ಹಟ’ ಮತ್ತು ‘ಹಠ’ಕ್ಕಿಪ್ಪ ವ್ಯತ್ಯಾಸ ಗೊ೦ತಾತು ಃ-).

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×