Oppanna.com

ಚೈನು- ಭಾಗ ಎಂಟು

ಬರದೋರು :   ಶ್ಯಾಮಣ್ಣ    on   08/10/2013    9 ಒಪ್ಪಂಗೊ

ಶ್ಯಾಮಣ್ಣ

(ಈ ಕತೆಲಿ ಬಪ್ಪ ಎಲ್ಲ ವ್ಯಕ್ತಿಗಳುದೇ, ಸ್ಥಳ, ಘಟನೆಗಳುದೇ ಕೇವಲ ಕಾಲ್ಪನಿಕ, ಯಾವದೇ ವ್ಯಕ್ತಿ ಅತವಾ ಘಟನೆಗೆ ಸಾಜ ಕಂಡತ್ತು ಹೇಳಿ ಆದರೆ ಅದು ಕೇವಲ ಕಾಕತಾಳೀಯ. ಈ ಕತೆ ಐವತ್ತು ವರ್ಷದ ಮೊದಲು ನಡದ್ದು ಹೇಳಿ ತಿಳ್ಕೊಳ್ಳೆಕ್ಕು.)
————————————————————————————————-
ಇಲ್ಯಾಣವರೇಗೆ…..
…ರಾಮಣ್ಣನ ಹೆಂಡತ್ತಿಗೆ ಮನೆಕೆಲಸಕ್ಕೆ ತುಕ್ರನ ಹೆಂಡತ್ತಿ ಯಾವಾಗಳು ಹಾಜರು…
ಮುಂದೆ ಓದಿ…..
——————————————————————————————-
ತೌಡೂರು ರಾಮಣ್ಣನ ಮನೆಂದ ರಜಾ ಕೆಳಂದಾಗಿ ಹೋದರೆ ವಾಮನ ಪೂಜಾರಿಯ ಮನೆ. ಸೋಗೆ ಮನೆ ಅದು. ಒಂದು ದಿನ ವಾಮನ ಪೂಜಾರಿಯ ಹೆಂಡತಿ ರತ್ನ ಮನೆ ಹಿಂದೆ ತಾಗಿದಾಂಗೆ ಇಪ್ಪ ಬೆಶಿನೀರ ಕೊಟ್ಟಗೆಲಿ ಬೆಶಿನೀರಿಂಗೆ ಕಿಚ್ಚು ಹಾಯ್ಕೊಂಡು ಇತ್ತಿದ್ದು. ನಡೂವಿಲಿ ಒಂದು ಸರ್ತಿ ಬಾಲೆ ಕೂಗಿತ್ತು ಹೇಳಿ ಮನೆಯೊಳ ಹೋತು. ಹಾಂಗೆ ಹೋದ್ದು ಬಾಲೆಗೆ ಹೆಜ್ಜೆ ಉಣ್ಸಿಕೊಂಡು ಕೂದತ್ತು. ಕೊಟ್ಟಗೆಲಿ ಬೆಶಿನೀರಿಂಗೆ ಹಾಕಿದ ಕಿಚ್ಚು ಹಾಂಗೆ ಮುಂದೆ ಮುಂದೆ ಹೊತ್ತಿ ಒಲೆ ಹತ್ತರೆ, ಹೆರ ತುಂಬಿಸಿ ಮಡುಗಿತ್ತಿದ್ದ ಬಜಕ್ಕುರೆ ರಾಶಿಗೆ ಹಿಡುತ್ತು. ಅಲ್ಲಿಂದ ದಗ ದಗ ಹೊತ್ತಿದ ಕಿಚ್ಚು ಮೇಲೆ ಮನೆ ಮಾಡಿನ ಸೋಗೆಗೆ ಹಿಡುತ್ತು. ರತ್ನಂಗೆ ಎಂತಾತು ಹೇಳಿ ಗೊಂತಪ್ಪಗ ಮನೆ ಮಾಡಿಂಗೆ ಕಿಚ್ಚು ಹಬ್ಬಿ ಆಯಿದು. ಬಾಲೆಯ ಹಿಡ್ಕೊಂಡು ಹೆರ ಓಡುದು ಅಷ್ಟೇ ಒಳುದ್ದು ರತ್ನಂಗೆ. ಮನೆಯ ಒಳ ಇತ್ತಿದ್ದ ಎಲ್ಲ ವಸ್ತುಗಳೂ ಹೊತ್ತಿಹೋತು. ವಸ್ತ್ರ, ಪಾತ್ರೆ ಸಾಮಾನು, ಕಟ್ಟಿ ಮಡುಗಿತ್ತಿದ್ದ ಬತ್ತ, ಅಕ್ಕಿ ಎಲ್ಲವುದೆ ಹೊತ್ತಿ ಹೋತು. ಕೆಲಸಕ್ಕೆ ಹೋಗಿತ್ತಿದ್ದ ವಾಮನ ಓಡಿಗೊಂಡು ಬಂತು. ಎಂತ ಪ್ರಯೋಜನ? ರತ್ನಂಗೂ ಬಾಲೆಗೂ ಎಂತ ಆಯಿದಿಲ್ಲೆ ಹೇಳುದಷ್ಟೆ ಸಮಾದಾನ.
ಸುದ್ದಿ ರಾಮಣ್ಣಂಗೂ ಎತ್ತಿತ್ತು. ರಾಮಣ್ಣ ಬಂದ°. ಬಪ್ಪಗ ಒಬ್ಬನೇ ಬಯಿಂದಾಯಿಲ್ಲೆ. ಮನೆ ಹತ್ತರೆ ಕೊಟ್ಟಗೆ ಕಟ್ಳೆ ಹೇಳಿ ತರ್ಸಿ ಮಡುಗಿತ್ತಿದ ಓಡಿನ ಕೆಲಸದೋರ ಕೈಲಿ ಹೊರ್ಸಿಕೊಂಡೇ ಬಂದ°. ಮನೆಲಿ ಇತ್ತಿದ್ದ ತೆಂಗಿನ ಮರಲ್ಲೆ ಮಾಡ್ಸಿ ಮಡುಗಿತ್ತಿದ್ದ ಅಡ್ಡಂಗ ಇತ್ತಿದ್ದು. ಅದರನ್ನೂ ತರ್ಸಿದ°. ಒಂದು ಆಚಾರಿಯನ್ನು ಬಪ್ಪಲೆ ಹೇಳಿದ°. ಕಸ್ತಲೆ ಉದಿ ಆಯೆಕ್ಕಾರೆ ವಾಮನನ ಮನೆ ಮಾಡು ವಾಪಾಸು ಮಾಡ್ಸಿ ಬಿಟ್ಟ°. ಮನೆಂದ ಒಂದು ಮುಡಿ ಅಕ್ಕಿ ತರ್ಸಿ ವಾಮನನ ಮನೆಯೊಳ ಮಡುಗಿಸಿದ°. ರಾಮಣ್ಣನ ಹೆಂಡತ್ತಿ ಅದರ ನಾಲ್ಕು ಹಳೆ ಸೀರೆಯ ರತ್ನಂಗೆ ಕಳಿಸಿಕೊಟ್ಟತ್ತು. ರಾಮಣ್ಣನ ನಾಲ್ಕು ಹಳೆ ಅಂಗಿದೆ, ಮುಂಡುದೆ ವಾಮನಂಗೆ ಕಳ್ಸಿತ್ತು.
ವಾಮನ ರಾಮಣ್ಣನ ಕಾಲಿಂಗೆ ಬಿದ್ದತ್ತು.
ಹಾಂಗೇಳಿ ಈ ತೌಡೂರು ರಾಮಣ್ಣಂಗೆ ಪಿಸುರು ಬತ್ತೇ ಇಲ್ಲೆ ಹೇಳಿ ಏನಿಲ್ಲೆ.
ರಾಮಣ್ಣನ ಮನೆಗೆ ಹೋಪ ರೋಟು ಸಾಲೆತ್ತೂರು ಮಾರ್ಗಲ್ಲಿ ಇಪ್ಪದು. ಮಾರ್ಗಂದ ತಿರುಗಿದ ಕೂಡ್ಳೆ ರಜ ದೂರ ರೋಟಿನ ಬಲತ್ತಿಂಗೆಗೆ, ರೋಟಿನ ಅರ್ದ ಜಾಗೆ ಕೋಡಿ ಸುಬ್ರಾಯನ ಜಾಗೆ. ಎಡತ್ತಿನ ಅರ್ದ ರಾಮಣ್ಣಂದು. ಮುಕ್ಕಾಲು ಪರ್ಲಾಂಗು ಹೋದ ಮತ್ತೆ ಪೂರ್ತಿ ರಾಮಣ್ಣಂದು. ಈ ರಾಮಣ್ಣನ ಜಾಗೆ ಸುರು ಆಗಿ ಅರ್ದ ಪರ್ಲಾಂಗು ಮುಂದೆ ಹೋದ ಮತ್ತೆ ಬಲತ್ತಿಂಗೆ ಸುಬ್ರಾಯನ ಮನೆಗೆ ತಿರುಗುವ ರೋಟು.
ಈ ಕೋಡಿ ಸುಬ್ರಾಯ ಬರೀ ಪಿಸುಂಟ. ರಾಮಣ್ಣನ ಕಂಡ್ರೆ ಅವಂಗೆ ಯಾವಾಗಳೂ ಒಂತರಾ ಹೊಟ್ಟೆ ಉರಿ. ಒಂದು ದಿನ ಉದಿಯಪ್ಪಗ ಈ ರೋಟಿಲಿ ಅವನ ಅರ್ದ ಜಾಗೆಗೆ ಉದ್ದಕ್ಕೆ ಬೇಲಿ ಹಾಕ್ಸಿದ°. ರೋಟಿಲಿ ರಾಮಣ್ಣನ ಅಂಬಡೆ ಸಾಂಬಾರು ಕಾರು ಬಾರೀ ಕಷ್ಟಲ್ಲಿ ಹೋಪ ಹಾಂಗೆ ಆತು. ಮಾತಾಡ್ಳೆ ಹೋದ ರಾಮಣ್ಣನ ಹತ್ತರೆ ಪೆದಂಬು ಮಾತಾಡಿದ° ಹೇಳಿ ಸುದ್ದಿ.
ರಾಮಣ್ಣಂಗೆ ಪಿಸುರು ಎಳಗಿತ್ತು. ರೋಟು ಅವನ ಮನೆಗೆ ಮಾತ್ರ ಇಪ್ಪದಲ್ಲ. ಆ ಹೊಡೆಂಗೆ ಹೋಪ ಎಲ್ಲ ಜೆನಂಗಳೂ ಆ ರೋಟಿಲೇ ಹೋಪದು. ಈ ಸುಬ್ರಾಯನ ಕೆಲಸಂದಾಗಿ ಇಡೀ ಊರಿನೋರ ಕೆಲಸಂಗೊಕ್ಕೆ, ಹೋಪವಕ್ಕೆ, ಬಪ್ಪವಕ್ಕೆ, ಇಡ್ಡೂರ ಆಯಿದು.
ಸುಬ್ರಾಯ ಆರಿಂಗೂ ಬಗ್ಗುವ ಹಾಂಗೆ ಕಂಡತ್ತಿಲ್ಲೆ. ಒಂದು ದಿನ ರಾಮಣ್ಣನ ಜಾಗೆಂದ ಸುಬ್ರಾಯನ ಮನೆಗೆ ತಿರುಗುವ ರೋಟಿಂಗೆ ಕಸ್ತಲೆ ಉದಿ ಆಯೆಕ್ಕಾರೆ ಕಡ್ಪ ಕಲ್ಲಿನ ಗೋಡೆ, ಅಡ್ಡಕ್ಕೆ ಎದ್ದತ್ತು. ಸುಬ್ರಾಯನ ಮನೆಗೆ ಹೋಪಲೆ ರೋಟು ಇರ್ಲಿ, ನಡವ ಕಾಲುದಾರಿದೆ ಬಂದ್ ಆತು.
ಮೂರೇ ದಿನ… ಸುಬ್ರಾಯ ಬಗ್ಗಿದ°. ಬೇರೆ ದಾರಿ ಇಲ್ಲೆ ಅವಂಗೆ.
———————————————————————————
ಎಂಕಣ್ಣಂಗೆ ರಾಮಣ್ಣ ಬಂದ ಕೂಡ್ಳೆ ಒಂಸರ್ತಿ ಜೀವ ಬಂದಾಂಗೆ ಆತು. ಇನ್ನು ತೊಂದರೆ ಇಲ್ಲೆ…ರಾಮಣ್ಣ ಇದ್ದ°.
ರಾಮಣ್ಣ ಎಂಕಣ್ಣನ ಕರೇಂಗೆ ದಿನುಗಿ ವಿಷಯ ಎಂತ ಹೇಳಿ ತಿಳ್ಕೊಂಡ°.  ಎಂಕಣ್ಣನ ಸೊಡ್ಡು ನೋಡ್ಳೆ ಎಡಿತ್ತಿಲ್ಲೆ.  ಉದಿಯಂದ ಹೊಟ್ಟೆಗೆ ಎಂತ ಇಲ್ಲದ್ದೆ  ಇಲ್ಲಿ ತೋಟಲ್ಲಿ ನಟ ತಿರುಗ್ಗುದೆ ಆಯಿದು ಅದಾ.
“ನೀನು ಉದಿಯಂದಲೇ ಇಲ್ಲಿ ಇದ್ದೆಯೋ?” ರಾಮಣ್ಣ ಕೇಳಿದ°.
“ಅಪ್ಪು”
“ನಿನ್ನ ಊಟ ಗೀಟ ಆಯಿದಿಲ್ಲೆಯೋ?”
“ಇಲ್ಲೆ…”
“ಹೋಗು. ಮನೆಗೆ ಹೋಗಿ ಹೊಟ್ಟೆಗೆ ಎಂತಾರೂ ಹಾಕಿಕೊಂಡು ಬಾ…”
“ಅಲ್ಲ… ಇಲ್ಲಿ….?”
“ಇಲ್ಲಿ ಎಂತರ? ಆನಿದ್ದೆ ಹೋಗು…”
“ಅಲ್ಲ… ಹೆಣ ತೆಗೆಯದ್ದೆ ತಿಂಬದು ಹೇಂಗೆ?”
“ಎಂತ ಹೆಣ ನಿನ್ನ ಕುಟುಂಬಸ್ತರದ್ದೋ? ಹೋಗು… ಹೋಗು”
“ಅಲ್ಲ… ಆ ಸಬ್ಬಿನಿಸ್ಪೇಟ….?”
ಎಂಕಣ್ಣಂಗೆ ಹೆದರಿಕೆ, ಹಾಂಗೆ ಹೋದರೆ ಇನ್ನು ಸಬ್ಬಿನಿಸ್ಪೇಟ ಎಂತಾರೂ ಹೇಳಿರೆ?
“ಅದಕ್ಕೆ ಆನು ಹೇಳ್ತೆ… ನೀನು ಹೋಗು….”
ರಾಮಣ್ಣ ಹೇಳಿದ ಮತ್ತೆ ಇನ್ನೆಂತರ… ಎಂಕಣ್ಣ ಮನೆಗೆ ಹೋದ°. ಹಾಂಗೆ ಹೋದರೂ ಅವಂಗೆ ಪಿಟಿ ಪಿಟಿ ಹೇಳ್ತಾ ಇದ್ದು. ಮೀಯದ್ದೆ, ಜೆಪ ಆಗದ್ದೆ, ಪೂಜೆ ಆಗದ್ದೆ ಉಂಬಲಾವುತ್ತ…? ಮದ್ಯಾನ್ನದ ಪೂಜೆ ಹಾಂಗೇ ಬಾಕಿ ಆಯಿದು…
ಎಂಕಣ್ಣ ರಜಾ ಹೊಡಿ ಅವಲಕ್ಕಿಗೆ ಮೊಸರು ಹಾಕಿ, ರಜಾ ಉಪ್ಪಿನಕಾಯಿ ಹಾಕಿ ಮುಕ್ಕಿಕ್ಕಿ ವಾಪಾಸು ಬಂದ°.
———————————————————————————————————-
ರಾಮಣ್ಣ ಸಬ್ಬಿನಿಸ್ಪೇಟನ ಹತ್ತರೆ ಹೋಗಿ ” ಏನು ಸಬ್ಬಿನಿಸ್ಪೇಟ್ರೇ” ಹೇಳಿ ಕೇಳಿದ°. ಸಬ್ಬಿನಿಸ್ಪೇಟಂಗೆ ಗೊಂತಿದ್ದು ಇವ ಆರು ಹೇಳಿ. ಹಾಂಗಾಗಿ ಗೌರವ ಕೊಡದ್ದೆ ಗೊಂತಿಲ್ಲೆ. “ಹೆ.. ಹೆ.. ನಮಸ್ಕಾರ.. ನಮಸ್ಕಾರ” ಹೇಳಿತ್ತು.
“ಏನು… ಮಹಜರು ಮಾಡಿ ಆಯ್ತೋ?” ಕೇಳಿದ° ರಾಮಣ್ಣ.
“ಹೂ… ಆಗ್ತಾ ಉಂಟು … ಆಗ್ತಾ ಉಂಟು” ಹೇಳಿತ್ತು.
“ಏನೂಂತ ಮಾಡಿದ್ದೀರಿ ಈಗ…ಸತ್ತದ್ದು ಹೇಗಂತೆ? ಯಾರಾದ್ರೂ ಕೊಂದದ್ದೋ? ಅಥವಾ ಬೇರೆ ಏನಾದ್ರೋ?”
“ಕೊಲೆ ಅಂತ ಕಾಣ್ತದೆ… ತನಿಕೆ ಮಾಡ್ತಾ ಇದ್ದೇವೆ.”
“ಹೌದಾ? ಯಾರ ಮೇಲೆ ನಿಮ್ಮ ಸಂಶಯ?”
“ಏನು? ನಿಮಿಗೆ ಹೇಳ್ಬೇಕಾ?”
“ಪಂಚನಾಮೆಗೆ ಐದು ಜನ ಸಾಕ್ಷಿ ಬೇಕಲ್ವಾ ನಿಮಿಗೆ? ಯಾರೂ ದಸ್ಕತ್ತು ಹಾಕದಿದ್ರೆ ಏನ್ಮಾಡ್ತೀರಿ?”
“————-”
“ಮೊದ್ಲು ಸತ್ತದ್ದು ಹೇಗೆ ಅಂತ ಸರಿಯಾಗಿ ನೋಡಿದ್ದಿರಾ? ಬನ್ನಿ ಸರಿಯಾಗಿ ಜಾಗೆ ತಲಾಶು ಮಾಡ್ಬೇಕು…”
ರಾಮಣ್ಣ ಅಷ್ಟು ಹೇಳಿದ ಮೇಲೆ ಆತು… ಸಬ್ಬಿನಿಸ್ಪೇಟಂಗೆ ಮತ್ತೆ ಬೇರೆ ದಾರಿ ಇಲ್ಲೆ. ಎದ್ದು ಹೆರಟತ್ತು ರಾಮಣ್ಣನ ಒಟ್ಟಿಂಗೆ.
ಪೇರಳೆ ಮರದ ಬುಡಲ್ಲಿ ನಿಂದು ಸುರುವಿಂಗೆ ನೋಡಿದವು. ಕೆಳಂದಲೆ ಮೇಲಾಣ ಬರೆಯ ನೋಡಿದ° ರಾಮಣ್ಣ. ಎಲ್ಲೋರು ಕೆಳ ಗುರ್ಮೆಯ ನೋಡಿರೆ ರಾಮಣ್ಣ ಬರೆಯ ಮೇಲೆ ನೋಡಿದ°.
“ನೀವು ಮೇಲೆ ಹೋಗಿ ನೋಡಿದ್ದೀರಾ?” ಸಬ್ಬಿನಿಸ್ಪೇಟನ ಹತ್ತರೆ ಕೇಳಿದ°. ಸಬ್ಬಿನಿಸ್ಪೇಟ ಎಂತ ಹೇಳುದು ಅದರ ತಲೆಗೆ ಹೊಕ್ಕಿದರೆ ಅಲ್ಲದಾ?.
“ಇಲ್ಲ”
“ಮತ್ತೆಂತದು ನಿಮ್ದು? ಬನ್ನಿ ಮೇಲೆ ಹೋಗಿ ನೋಡುವಾ”
ನಾಣಿಯ ಮನೆಗೆ ಹೋಪ ದಾರಿಲಿ ಮೇಲೆ ಹತ್ತಿ , ಪಳಿಕ್ಕೆ ಹೊಡೆಂಗೆ ಹೋಪ ದಾರಿಲಿ ಗುರ್ಮೆಗೆ ಸರೀ ಮೇಲಾಣ ಹೊಡೆಂಗೆ ಬಂದವು. ಮೇಲಂದಲೇ ಕೆಳ ಗುರ್ಮೆಗೆ ಇಣ್ಕಿದವು. ರಾಮಣ್ಣ ಸಬ್ಬಿನಿಸ್ಪೇಟಂಗೆ ಕೆಳ ತೋರ್ಸಿದ°.
“ನೋಡಿ, ಇದೆಂತ ಗುರ್ತ ಇಲ್ಲಿ? ಅಲ್ಲಿ ಕೆಳಗೆ ನೋಡಿ ಎಂತ ಸಿಕ್ಕಿಹಾಕಿಕೊಂಡದ್ದು?” ಅಪ್ಪು, ತ್ಯಾಂಪ ಬೀಳುವಗ, ಕರೇಲಿ ಜರುದ ಗುರ್ತ ಸರೀ ಕಾಣ್ತು ಅಲ್ಲಿ. ಅಲ್ಲದ್ದೆ ರಜಾ ಕೆಳ, ಬೆಳಿ ಮುಂಡು ಕೇಪ್ಳೆಯ ಬಲ್ಲೆಗೆ ಸಿಕ್ಕಿಹಾಕಿಕೊಂಡದು ಕಾಣ್ತಾ ಇದ್ದು.
“ಇದು ಜಾರಿ ಬಿದ್ದದ್ದು, ಸಬ್ಬಿನ್ಸ್ಪೇಟ್ರೆ… ಕೊಂದದ್ದಾದ್ರೆ ಆ ಬಿಳೀ ಮುಂಡು ಅಲ್ಲಿ ಸಿಕ್ಕಿ ಹಾಕಿಕೊಳ್ತದೋ?” ರಾಮಣ್ಣ ಕೇಳಿದ. ಅದಪ್ಪು…. ಆರಾದ್ರೂ ಕೊಂದದು ಹೇಳಿ ಆದರೆ ಹಾಂಗೆ ಬೆಳಿ ಮುಂಡು ಸಿಕ್ಕಿ ಹಾಕಿಕೊಂಬದು ಹೇಂಗೆ? ಕೊಂದೋರು ಎಂತ ಹೆಣಕ್ಕೆ ಮುಂಡು ಸುತ್ತಿ ಕೆಳ ಹಾಕುತ್ತವೋ?
ಮತ್ತೆ ಕೆಳ ತೋಟದ ಒಳ ಬಂದವು. ಪುನ ಗುರ್ಮೆ ಹತ್ರೆ ನಿಂದವು. ಪುನ ರಾಮಣ್ಣ ಕೇಳಿದ ಸಬ್ಬಿನ್ಸ್ಪೇಟನ ಹತ್ತರೆ “ಎಂತ ಹೇಳ್ತೀರಿ?”
“ನಂಗೆ ಇನ್ನೂ ಸಂಶಯ ಉಂಟು..” ಅದಕ್ಕೆ ಬೆಶಿ ಎಂತಕೆ? ಬಿದ್ದು ಸತ್ತದು ಹೇಳಿ ಆದರೆ ಆರನ್ನೂ ಮತ್ತೆ ಹೆದರ್ಸುವ ಹಾಂಗೆ ಇಲ್ಲೆ ಅದಾ…
“ಇನ್ನೂ ಸಂಶಯವೋ? ಯಾರ ಮೇಲೆ?”
“ಈ ಲಿಂಗಪ್ಪ ಇದ್ದಾನಲ್ಲಾ? ಅವ್ನ ಮೇಲೆ”
“ಲಿಂಗಪ್ಪನ ಮೇಲೋ? ಯಾಕೆ?”
“ಕೆಳಗೆ ಗುರ್ಮೆಯಲ್ಲಿ ಅವ್ನ ಕಾಲು ಗುರ್ತ ಉಂಟು”
“ಅದು ಎಂಕಣ್ಣ ಹೇಳಿದ್ದಕ್ಕೆ ನೋಡ್ಳಿಕ್ಕೆ ಅಂತ ಅವ್ನು ಇಳಿದದ್ದಲ್ವೋ… ನಿನ್ನೆ ರಾತ್ರಿ ಇಡಿ ಅವ್ನು ನಮ್ಮ ಮನೆಯಲ್ಲಿ ಅಡಿಕೆ ಸುಲಿತಾ ಇದ್ದ…. ಗೊತ್ತುಂಟ ನಿಮಿಗೆ? ಅಲ್ಲದೆ ನಿಮ್ಮ ಕಾಲು ಗುರ್ತ ಸಹಾ ಅಲ್ಲಿ ಇರಬೌದಲ್ವಾ? ಹಾಗಂತ ನೀವೂ ಕೊಂದಿರ್ಬೌದು ಅಂತ ಹೇಳ್ಲಿಕ್ಕಾಗ್ತದಾ?”
ಇದ್ದಕ್ಕಿದ್ದ ಹಾಂಗೆ ಸಬ್ಬಿನಿಸ್ಪೇಟ ನಿಂದಲ್ಲಿಂದ ತಬುಕ್ಕನೆ ಮೇಲೆ ಹಾರಿತ್ತು. ಅದರ ಮೋರೆ ಕೆಂಪಾತು… ಅದಕ್ಕೆ ಕೋಪ ಬಂತು ಹೇಳಿ ರಾಮಣ್ಣ ಗ್ರೇಶಿದ°.
ಆದರೆ ವಿಶಯ ಹಾಂಗಲ್ಲ. ಸಬ್ಬಿನಿಸ್ಪೇಟ ನಿಂದ ಜಾಗೆ ಇದ್ದಲ್ದ? ಅಲ್ಲಿಯೇ ಕಚ್ಚುವ ಎರುಗಳದ್ದು ಒಂದು ಸಾಲು ಹೋಯ್ಕೊಂಡು ಇತ್ತು. ಸಬ್ಬಿನಿಸ್ಪೇಟ ಎರಡೂ ಕಾಲು ಆ ಸಾಲಿನ ಮೇಲೆ ಮಡುಗಿ ನಿಂದದು. ಹೋಯ್ಕೊಂಡಿತ್ತ ಎರುಗು ಸಬ್ಬಿನಿಸ್ಪೇಟನ ಕಾಲಿಂಗೆ ಹತ್ತಿದವು. ಸುರುವಿಂಗೆ ಬೂಡ್ಸು ಇತ್ತಲ್ದ… ಹಾಂಗಾಗಿ ಸಬ್ಬಿನಿಸ್ಪೇಟಂಗೆ ಅಂದಾಜಿ ಆಯಿದಿಲ್ಲೆ. ಎರುಗು ಮೇಲೆ ಹತ್ತಿ ಮೊಣಕ್ಕಾಲು ಗೆಂಟಿನವರೆಗೆ ಎತ್ತಿ ಕಚ್ಚುಲೆ ಸುರು ಮಾಡುವಗಳೇ ಗೊಂತಾದ್ದು… ಕಚ್ಚುದು ಉರಿವಲೆ ಸುರು ಅಪ್ಪಗ ಸಬ್ಬಿನಿಸ್ಪೇಟ ಮೇಲೆ ಹಾರಿದ್ದು…. ಪ್ಯಾಂಟಿನ ಒಳವೇ ಎರಡು ಕಾಲಿಂಗೆ ಕಚ್ಚುಲೆ ಸುರು ಮಾಡಿದ್ದವು ಎರುಗು… ಇನ್ನು ತೊಡೆ ಬುಡದ ವರೆಗೂ ಕಚ್ಚಿಗೊಂಡು ಎತ್ತುಗು ಹೇಳಿ ಸಬ್ಬಿನಿಸ್ಪೇಟ ಹೆದರಿತ್ತು. ಕೇಳೆಕ್ಕಾ…? ತಕತಕ ಕೊಣಿವಲೆ ಸುರು ಮಾಡಿತ್ತಯ್ಯ… 🙂 🙂
———————————————————————————————————-
ಕಿಟ್ಟಣ್ಣ ಒಂದು ಗೇಸು ಲೈಟು ತಂದದರ ಅಲ್ಲಿಯೇ ಒಂದು ಅಡಕ್ಕೆ ಮರದ ಬುಡಲ್ಲಿ ಮಡುಗಿದ°.
ಗಂಟೆ ಐದೂವರೆ- ಆರು ಗಂಟೆ ಹತ್ತರೆ ಹತ್ತರೆ ಆತು.
ಡಾಟ್ರನ ಕೆಲಸ ಮುಗುತ್ತು ಕಾಣ್ತು. ಅಡ್ಡಂದ ಹೆರ ಬಂದು ಕೈಗೆ ಹಾಕಿತ್ತಿದ್ದ ರಬ್ಬರಿನ ಗ್ಲವುಸು ತೆಗದು ಹಾಕಿ ದುಜನ ಕೈಲಿ ಒಂದು ಬಾಲ್ದಿ ನೀರು ತರ್ಸಿ ಸಾಬೂನು ಹಾಕಿ ತೊಳತ್ತು.
ಮತ್ತೆ ಮೋರೆ ತೊಳದು, ಕಿಸೆಂದ ಚೌಕ್ಕ ತೆಗದು ಉದ್ದಿಕೊಂಡತ್ತು. “ಅಯ್ಯಬ್ಬ..”ಹೇಳಿ ಕುರ್ಸಿಲಿ ಕೂದು “ಬೊಂಡ ತನ್ನಿ ಬೊಂಡ, ಕುಡೀಲಿಕ್ಕೆ’ ಹೇಳಿ ಅಪ್ಪಗ ಅದಕ್ಕೆ ರಾಮಣ್ಣನ ಕಂಡತ್ತು. “ಓ… ನಮಸ್ಕಾರ ರಾಮಣ್ಣನವ್ರಿಗೆ…” ಹೇಳಿತ್ತು.
“ನಮಸ್ಕಾರ” ಹೇಳಿದ° ರಾಮಣ್ಣ. ಅಷ್ಟೊತ್ತಿಂಗೆ ಪ್ಯಾಂಟಿಂಗೆ ಹತ್ತಿದ ಎರುಗಿನ ಎಲ್ಲ ಕುಡುಗಿ ಹಾಕಿಕ್ಕಿ ಸಬ್ಬಿನಿಸ್ಪೇಟನು ಅಲ್ಲಿ ಬಂತು.
“ಡಾಕ್ಟ್ರೆ.. ಏನು ಹೇಳ್ತೀರಿ ನೀವು… ಕೊಲೆಯ ಹಾಗೆ ಕಾಣ್ತದೋ?” ಕೇಳಿದ° ರಾಮಣ್ಣ.
“ಹಾಗೆ ಕಾಣೂದಿಲ್ಲ ಮಾರಾಯ್ರೆ… ಮೇಲಿಂದ ಬೀಳುವಾಗ ತಲೆ ನೆಲಕ್ಕೆ ತಾಗಿ ಕುತ್ತಿಗೆ ಮುರ್ದಿದೆ. ಅದ್ರಿಂದಾಗಿ ಜೀವ ಹೋದ ಹಾಗೆ ಕಾಣ್ತದೆ.”
“ಚೆ… ಹಾಗಿದ್ರೆ ಕೊಲೆಯ ಹಾಗೆ ಕಾಣೂದಿಲ್ವಾ?” ಸಬ್ಬಿನಿಸ್ಪೇಟಂಗೆ ನಿರಾಶೆ ಆತು.
“ಫೋರ್ಟ್ವೆಂಟಿ… ಪೇಪರು ಪ್ಯಾಡು ತನ್ನಿ… ಮಹಜರು ಬರಿವಾ…..”
ಕಿಷ್ಣಪ್ಪ ಎಲ್ಲಿದ್ದು? ಅದು ದೂಜನ ಹತ್ತರೆ ಅಲ್ಲಿ ತೆಗದು ಹಾಕಿದ ತೆಂಗಿನ ಕಾಯಿ ಇತ್ತಿಲ್ಲೆಯಾ? ಅದರ ಪೋಲಿಸು ಜೀಪಿಂಗೆ ಸಾಗಿಸಿ ಹಾಕ್ಸುವ ವ್ಯೆವಸ್ತೆ ಮಾಡ್ಸಿಕೊಂಡು ಇತ್ತಿದ್ದು.
ಕಸ್ತಲೆ ಕಸ್ತಲೆ ಆವುತ್ತ ಇದ್ದು. ಆಬ್ದುಲ್ಲನ ಹತ್ತರೆ ಗೇಸು ಲೈಟು ಹೊತ್ಸುಲೆ ಹೇಳಿತ್ತು ಸಬ್ಬಿನಿಸ್ಪೇಟ°.
ಗೇಸು ಲೈಟು ಹೊತ್ಸೆಕ್ಕಾರೆ ಮೊದಲು ಅದಕ್ಕೆ ಚಿಮ್ಣಿ ಎಣ್ಣೆ ತುಂಬುಸೆಕ್ಕು. ಗೇಸುಲೈಟಿನ ಕೆಳಾಣ ಹೊಡೆಲಿ ಸ್ಟೀಲಿನ ಅಂಡೆ ಇರ್ತು. ಕರೇಲಿ ಒಂದು ತಿರುಪ್ಪಣೆಯ ಬೂಚು. ಅದರ ತಿರುಗಿಸಿ ತೆಗದು ಅಲ್ಲಿಂದ ಚಿಮ್ಣಿಎಣ್ಣೆ ತುಂಬುಸುದು. ಮತ್ತೆ ಮೆಂಟ್ಳು ಸರಿ ಇದ್ದೋ ನೋಡೆಕ್ಕು. ಮೆಂಟ್ಳು ಹೇಳಿರೆ ಗೇಸುಲೈಟಿನ ಮೇಲಾಣ ಹೋಡೆಲಿ ಇಪ್ಪದು. ನೂಲಿನ ಬಲೆಯ ಸಣ್ಣ ಚೀಲದ ಹಾಂಗೆ ಇರ್ತು. ಕೆಳಾಣ ಅಂಡೆಂದ ಒಂದು ಪೈಪ್ಪು ಮೇಲೆ ಬತ್ತು. ಮೇಲೆವರೆಂಗೆ ಬಂದು ಆ ಪೈಪ್ಪು ಪುನ ಕೊಡೀಲಿ ಕೆಳಂಗೆ ಕೊಕ್ಕೆಯ ಹಂಗೆ ತಿರುಗುತ್ತು. ಅಲ್ಲಿ ಈ ನೂಲಿನ ಬಲೆಯ ಹಾಂಗೆ ಇಪ್ಪ ಮೆಂಟ್ಳಿನ ಸಿಕ್ಕುಸುದು. ಕೆಳಾಣ ಅಂಡೆಗೆ ಇನ್ನೊಂದು ಹೊಡೆಲಿ ಗಾಳಿ ತುಂಬುಸುಲೆ ಒಂದು ಕುಟ್ಟಿ ಇದ್ದು. ಅದರ ಹೆರ ಎಳವದು, ಪುನಾ ಒಳ ಒತ್ತುದು…. ಪಂಪು ಹೊಡವದು ಹೇಳಿ ಇದಕ್ಕೆ ಹೆಸರು. ಈ ಪಂಪು ಹೊಡವಗ “ಟಕ್ಕು ಟಕ್ಕು…ಟಕ್ಕು…ಟಕ್ಕು…” ಹೇಳಿ ಶಬ್ದ ಬತ್ತು. ಒಳ ತುಂಬಿದ ಗಾಳಿ, ಚಿಮ್ಣಿ ಎಣ್ಣೆಯ ಮೇಲಂಗೆ ಪೈಪ್ಪಿಲಿ ಒಳ್ಳೆ ಫೋರ್ಸಿಲಿ ನೂಕುತ್ತು. ಮೆಂಟ್ಳಿನ ಹತ್ತರಂಗೆ ಕಿಚ್ಚು ಕೊಟ್ಟಪ್ಪಗ ಅದರ ಬೆಶಿಗೆ ಚಿಮ್ಣಿ ಎಣ್ಣೆ ಗೇಸಿಂಗೆ ಬದಲಾಗಿ,ಮುಂದೆ ಹೋಗಿ ನೂಲಿನ ಚೀಲದ ಒಳ ತುಂಬುತ್ತು. ಕಿಚ್ಚು ಆ ನೂಲಿನ ಬಲೆಗೆ ಹಿಡಿತ್ತು. ಬಲೆಯ ಒಳ ಚಿಮ್ಣಿ ಎಣ್ಣೆಯ ಗೇಸು ಇರ್ತು.ಈ ಮೆಂಟ್ಳುದೆ, ಚಿಮ್ಣಿ ಎಣೆದೆ ಹೊತ್ತುವಗ ಬೆಳಿ ಬಣ್ಣ್ದ ಬೆಣ್ಚಿ ಹರಡುತ್ತು.
ಅಬ್ದುಲ್ಲ° ಗೇಸುಲೈಟಿಂಗೆ ಕಿಟ್ಟಣ್ಣ ತಂದುಕೊಟ್ಟ ಚಿಮ್ಣಿ ಎಣ್ಣೆ ತುಂಬುಸಿತ್ತು. ಹೊಸ ಮೆಂಟ್ಳಿನ ಅದಕ್ಕೆ ಸಿಕ್ಕುಸಿತ್ತು. “ಟಕ ಟಕ ಟಕ” ಹೇಳಿ ಪಂಪು ಬಡುದು ಗಾಳಿ ತುಂಬುಸಿತ್ತು. ಮತ್ತೆ ಕಿಚ್ಚು ಕೊಟ್ಟು ಹೊತ್ತುಸಿತ್ತು. ಈದು ಗೇಸು ಲೈಟು ಹೊತ್ತುಸುವ ಚೆಂದ ನೋಡ್ಳೆ ಅಲ್ಲಿ ಸೇರಿದ ಮಕ್ಕ ಎಲ್ಲ ಸುತ್ತ ನಿಂದಿದವು.
ಡಾಟ್ರಂಗೆ ಗಡಿಬಿಡಿ. ಆದರ ರಿಪೋರ್ಟು ಬರದು ಕೊಟ್ಟದೇ “ಉಳ್ದದ್ದು ನಾಳೆ ನೋಡುವಾ… ಶವ ಬಿಟ್ಟುಕೊಡಿ… ನಂಗೆ ಹೋಗ್ಲಿಕ್ಕೆ ವ್ಯೆವಸ್ತೆ ಮಾಡಿ” ಹೇಳಿ ಸಬ್ಬಿನಿಸ್ಪೇಟಂಗೆ ಗಡಿಬಿಡಿ ಮಾಡಿತ್ತು. ಸಬ್ಬಿನಿಸ್ಪೇಟ° “ಹಾಗಿದ್ರೆ ನಾಳೆ ಸಿಕ್ಕುವಾ ಡಾಕ್ಟ್ರೆ… ” ಹೇಳಿ ಡಾಟ್ರನ ಕಳಿಸಿಕೊಟ್ಟತ್ತು.
ಸಬ್ಬಿನಿಸ್ಪೇಟನ ಮಹಜರಿಂಗೆ ಐದು ಜೆನಂಗೋ ಬೇಕಲ್ಲದಾ ಸಾಕ್ಷಿಗೆ? ಒಬ್ಬ ರಾಮಣ್ಣ, ಮತ್ತೆ ಇಬ್ರು ಅಲ್ಲೆಯೇ ನೋಡ್ಳೆ ಬಂದೋರು, ಮತ್ತೊಬ್ಬ ಎಂಕಣ್ಣ, ಮತ್ತೊಂದು ಲಿಂಗಪ್ಪನ ಹೆಬ್ಬೆಟ್ಟು. (ಲಿಂಗಪ್ಪ ಸುರುವಿಂಗೆ ಹೆಬ್ಬೆಟ್ಟು ಒತ್ತುಲೆ ಕೇಳಿದ್ದಿಲ್ಲೆ, ಮತ್ತೆ ರಾಮಣ್ಣ ಧೈರ್ಯ ಹೇಳಿದ ಮತ್ತೆಯೇ ಹೆಬ್ಬೆಟ್ಟು ಒತ್ತಿದ್ದು)
ಸಬ್ಬಿನಿಸ್ಪೇಟ° ತ್ಯಾಂಪನ ಮಕ್ಕಳ ದಿನಿಗಿತ್ತು. “ನೋಡಿ, ನಿಮ್ಮ ಅಪ್ಪನ ಹೆಣ ತೆಕ್ಕೋಂಡೋಗಿ. ಮತ್ತೆ ನಾಳೆ ಬೆಳಿಗ್ಗೆ ಏಳು ಗಂಟೆಗೆ ಪೋಲೀಸು ಸ್ಟೇಷನಿಗೆ ಬರ್ಬೇಕು ಏನು…” ತ್ಯಾಂಪನ ಮಕ್ಕ ತಲೆ ಆಡ್ಸಿದವು.
“ನಾವು ಬರ್ತೇವೆ” ಹೇಳಿ ಸಬ್ಬಿನಿಸ್ಪೇಟನ ಪಟ್ಳಾಮು ಅಲ್ಲಿಂದ ಹೆರಟತ್ತು.
——————————————————————————————————-
“ಅಬ್ಬ…” ಹೇಳಿ ಉಸುಲು ಬಿಟ್ಟ° ಎಂಕಣ್ಣ. ಉದಿಯಾಂದ ಹಿಡುದ ಬೂತ ಬಿಟ್ಟಾಂಗೆ ಆತು ಅವಂಗೆ. ಹೆಣವ ಅತ್ಲಾಗಿ ತ್ಯಾಂಪನ ಮಕ್ಕ ಹೊತ್ತುಕೊಂಡು ಹೋದವಾ… ಗೇಸು ಲೈಟುದೆ ಅವ್ವೇ ಕೊಂಡೋದವು. ತೊಂದರೆ ಇಲ್ಲೆ. ಅದರ ಪೈಶೆ ಅವ್ವೇ ಕೊಡ್ಳಿ. ಪೇಟೆಲಿ ಕರ್ಚಾದ ಪೈಶೆ ಬಿಟ್ರೆ, ತೆಂಗಿನ ಕಾಯಿದೆ, ಬೊಂಡದೆ ಒಂದು ಹೆಚ್ಚು ಕರ್ಚು. ಆ ಅಂಡೆ ದೂಜಂದಾಗಿ ಆದ್ದು….
“ಇನ್ನೆಂತಾರೂ ಉಪದ್ರ ಕಂಡರೆ ಹೇಳಿ ಕಳುಸು” ಹೇಳಿಕ್ಕಿ ರಾಮಣ್ಣ ಮನೆಗೆ ಹೋದ°. ತೋಟಂದ ಜೆನ ಬಿರುದತ್ತು. ಎಂಕಣ್ಣಂದೆ, ಕಿಟ್ಟಣ್ಣಂದೆ ತೋಟಂದ ಮನೆಗೆ ಎತ್ತಿದವು.
ಎಂಕಣ್ಣ ಸೀದ ಹೋದ್ದು ಬೆಶಿನೀರ ಕೊಟ್ಟಗೆಗೆ. ಮಿಂದಿಕ್ಕಿ ಬಂದು ಜೆಪಕ್ಕೆ ಕೂಪಗ ಕಿಟ್ಟಣ್ಣ ಮೀವಲೆ ಹೋದ°. ಜೆಪಕ್ಕೆ ಕೂದ ಎಂಕಣ್ಣಂಗೆ ಜೆಪ ಮುಗಿವಲಪ್ಪಗ ಹೆರಂದ ಆರೋ ದಿನಿಗೇಳಿದ ಹಾಂಗೆ ಆತು.
“ಎಂಕಣ್ಣಾ.. ಏ ಎಂಕಣ್ಣೋ…”
‘ಆರಿದು.. ಪುನಾ ಎಂತಾರೂ ತಾಪತ್ರಯವೋ?’ ಹೇಳಿ ಗ್ರೇಶಿಕೊಂಡು ಎಂಕಣ್ಣ ಚಿಮ್ಣಿ ಎಣ್ಣೆ ದೀಪ ಹಿಡ್ಕೊಂಡು, ಜೆಗಿಲಿಗೆ ಬಂದು ದೀಪಕ್ಕೆ ಕೈ ಅಡ್ಡ ಹಿಡುದು, ದಳಿ ಎಡೇಂದ ಹೆರ ನೋಡಿದ°.
ಹೆರ ಜಾಲಿಲಿ ಒಂದು ಜೆನ ನಿಂದುಕೊಂಡು ಇದ್ದು. ಭರ್ತಿ ಜೀವ. ದೊಡ್ಡ ಹೊಟ್ಟೆ. ಅಂಗಿ ಹಾಕಿದ್ದಿಲ್ಲೆ. ಬೆಳಿ ಮುಂಡು ಎತ್ತಿ ಕಟ್ಟಿದ್ದು. ಹೆಗಲಿಂಗೆ ಒಂದು ಬೈರಾಸಿನ ಶಾಲಿನ ಹಂಗೆ ಹಾಯ್ಕೊಂಡಿದ್ದು. ಕಾಲಿಂಗೆ ಜೋಡು ಇಲ್ಲೆ. ಕೊರಳಿಲಿ ರುದ್ರಾಕ್ಷಿಯ ದಪ್ಪದ ಎರಡೆಳೆಯ ಮಾಲೆ. ಪೋಳೆ ಕಣ್ಣು…. ಹಣೆಗೆ ಭಸ್ಮ ಹಾಕಿದ ಗುರ್ತ ಇದ್ದು…
——————————————————————————————————
ಆರಿಕ್ಕು? ಕತೆ ಇನ್ನುದೇ ಮುಗುದ್ದಿಲ್ಲೆ… ಮತ್ತೆ ನೋಡುವೋ….

9 thoughts on “ಚೈನು- ಭಾಗ ಎಂಟು

  1. ಗೇಸು ಲೈಟು ಹೊತ್ತುಸುವ ವರ್ಣನೆ ಗಮ್ಮತ್ತಾಯಿದು. ಒ೦ದು ‘ಪಿನ್ ‘ ಬೇಕನ್ನೆ ಶ್ಯಾಮಣ್ಣ? ಚಿಮಿಣಿ ಎಣ್ಣೆ ಅ೦ಡೆ೦ದ ಪೈಪ್ಪಿಲಿ ಮೇಲೆ ಬ೦ದು ಮೆ೦ಟಲಿನ ಹತ್ತರೆ ಹೆರ ಬಪ್ಪಲ್ಲಿ ಇಪ್ಪ ಸಣ್ಣ ಒಟ್ಟೆಲಿ ಕಸವು ಕಟ್ಟಿರೆ ತೆಗವಲೆ..ಹಳೆ ನೆ೦ಪುಗೊ ಮತ್ತೆ ಹಸುರಾತು..

  2. ರಾಮಣ್ಣನ ಹಾಂಗಿರ್ತವು ಒಂದೊಂದು ಊರಿಂಗೂ ಒಬ್ಬೊಬ್ಬ ಬೇಕಾವುತ್ತು. ಅದರ ಅಂಬಡೆ ಸಾಂಬಾರು ಕಾರು ಪೆಟ್ರೋಲಿಂದೋ…ಡೀಸಿಲಿಂದೋ ?
    ಎಂತದೇ ಇರಳಿ ಶ್ಯಾಮಣ್ಣ, ಈ ‘ಚೈನು’ ಓದುವಾಗ ಗೋರೂರು ರಾಮಸ್ವಾಮಿಯವು ಬರದ “ನಮ್ಮೂರ ರಸಿಕರು” ನೆಂಪಾವುತ್ತು.

  3. ಗ್ರಾಮ ಜೀವನದ ಸುಂದರ ವರ್ಣನೆ ಮಾಡ್ತಾ ಇದ್ದಿ ಶಾಮಣ್ಣಾ..
    ರಾಮಣ್ಣನ ಹಾಂಗಿಪ್ಪ ಪರೋಪಕಾರಿಗೊ ಐವತ್ತು ವರ್ಷ ಹಿಂದೆ ಇದ್ದಿಕ್ಕು.. ಈಗ ಕಾಂಬಲೆ ಸಿಕ್ಕುದು ಸಂಶಯ…
    ಅಂಬಡೆ ಸಾಂಬಾರು ಕಾರು ?? ಹೋ..ಗೊಂತಾತು… !!!
    ಗೇಸು ಲೈಟ್ ವರ್ಣನೆ ಲಾಯ್ಕಾಯಿದು…ಈಗಾಣ ಪೇಟೆ ಮಕ್ಕೊಗೆ ಇದರ ನೋದಿ ಗೊಂತಿರ..
    ಅದಾರು ಬಂದದು????..ತ್ಯಾಂಪನ ಭೂತ ಅಲ್ಲನ್ನೆ?
    ಅಬ್ಬಾ… ಮುಂದಾಣ ಕಂತು ಬೇಗ ಬರಲಿ ಶಾಮಣ್ಣಾ… ಈ ಚೈನು ೩೦ ಇಂಚಿಂದಲೂ ಉದ್ದ ಇದ್ದು ಹೇಳಿ ಕಾಣ್ತು..

  4. ಇದು ಹೇಂಗಾಯಿದು ಹೇಳೆಕ್ಕಾರೆ….. ಇಷ್ಟೇ ದೊಡ್ಡ ಕಥೆ ಬರೆಯೆಕಕ್ಕು…..ಮುಂದಾಣ ಕೊಂಡಿ ಬರ್ಲಿ
    ಶಾಮಣ್ಣಾ ಆನು ಮೊದಲೇ ಹೇಳಿದ್ದೆ ಇದು ಸತ್ಯ ಕಥೆಯೇ ಹೇಳಿ..

  5. ಪರೋಪಕಾರಿ ರಾಮಣ್ಣನ ಹಾಂಗಿಪ್ಪವು ಮದಲಾಣ ಕಾಲಲ್ಲಿ ಕೆಲಾವು ಜೆನ ಇತ್ತಿದ್ದವು. ಊರಿಂಗೆ ಗುರಿಕ್ಕಾರನ ಹಾಂಗೆ. ಪಾಪದವಕ್ಕೆ ಉದಾರಿ, ಪೆರಂಟಿಂಗೆ ಪೆರಂಟು ಲಾಯಕಾಯಿದು.
    ಅಂಬಡೆ ಸಾಂಬಾರು ಕಾರು – ಒಳ್ಳೆ ಪ್ರಯೋಗ ಶಾಮಣ್ಣ.
    ರಾಮಣ್ಣ, ಕೊಲೆಕ್ಕೇಸಿನ ಅವಗಢ ಹೇಳಿ ಸಾಧುಸಿ ತೋರುಸಿದ್ದದು, ಪೋಲೀಸಿನ ಪೇಂಟಿನೊಳಾಂಗೆ ಎರುಗು ಹೊಕ್ಕದು, ಗೇಸುಲೈಟಿನ ವರ್ಣನೆ ಎಲ್ಲವುದೆ ಕೊಶಿ ಕೊಟ್ಟತ್ತು. ಗೇಸು ಲೈಟು ಹೊತ್ತುಸುವಗ ಮಕ್ಕೊಗೆ ಅದೊಂದು ಕುತೂಹಲದ ವಿಷಯ.
    ಆಯನಕ್ಕೆ ಹೋಗಿ ಚಳಿ ಅಪ್ಪಗ ಗೇಸುಲೈಟಿನ ಹತ್ರೆ ಕೂದು ಚಳಿ ಕಾಸಲುದೆ ಆವುತ್ತು, ಅಲ್ದೊ ಶಾಮಣ್ಣ ?
    ಒಟ್ರಾಸಿ ಎಂಕಣ್ಣಂಗೆ ಇರುಳು ಪುನಃ ಒರಗೆಲೆಡಿಯದ್ದ ಹಾಂಗಾತಾನೆ. ಅವಂಗೆ ಸುತ್ತಿದ ಶೆನಿ ಇನ್ನುದೆ ಬಿಟ್ಟಿದಿಲ್ಲಿಯೋ ಅಪ್ಪಾ.
    ಚೈನಿನ ಇನ್ನಾಣ ತುಂಡಿಂಗೆ ಕಾದು ಕೂಯಿದೆ.

  6. ಕಾಲಿಂಗೆ ಜೋಡು ಇಲ್ಲೆ. ಕೊರಳಿಲಿ ರುದ್ರಾಕ್ಷಿಯ ದಪ್ಪದ ಎರಡೆಳೆಯ ಮಾಲೆ. ಪೋಳೆ ಕಣ್ಣು…. ಹಣೆಗೆ ಭಸ್ಮ ಹಾಕಿದ ಗುರ್ತ ಇದ್ದು…ಆರಪ್ಪಾ ಈ ಜೆನ ?ಹೇಳುದರ ತಿಳಿವಲೆ ತುಂಬಾ ಕುತೂಹಲ ಇದ್ದು ,ಲಾಯಕ್ಕು ಆಯಿದು

  7. ಈ ರಾಮಣ್ನ ಒಬ್ಬ°ಎಂಕಣ್ನಂಗೆ ಆಪದ್ಬಾಂಧವನ ಹಾಂಗೆ ಬಂದುಎತ್ತಿಗೊಂಡ° ಅಲ್ಲದೋ? ಇಲ್ಲದ್ರೆ ಎಂಕಣ್ನ ನಡಿರುಳುವರೆಂಗೂ ಹೆಣವ ಕಾದುಕುರೆಕ್ಕಾತು. ಸಬ್ಬಿನ್ಸ್ಪೇಟ ಇರುಳಾಣ ಊಟದ ಬಾಬ್ತಿನ ಖರ್ಚಿನ ಎಂಕಣ್ನನ ತಲೆಗೇ ಕಟ್ಟಿಬಿಡ್ತಿತ್ತು. ರಾಮಣ್ಣನ ದೆಸೆಂದ ಎಂಕಣ್ನಂಗೆ ಉಸುರು ಬಿಡುವ ಹಾಂಗಾತು. ಈಗ ಮತ್ತೆ ಬಂದದು ಎಂಕಣ್ನಂಗೆ ಹಿಡುದ ಗ್ರಾಚಾರವ ಓಡ್ಸುಲೆ ಮಾಡುವ ಪ್ರಾಯಶ್ಚಿತ್ತ ಹೋಮ ಮಾಡ್ಸುವವರ ಏಜೆಂಟೋ ಏನೋ ! ಇನ್ನೊಂದರಿ ರಾಮಣ್ಣನ ಎಂಟ್ರಿ ಇದ್ದಂಬಗ !

  8. ಕಂತುಪಿತನ ಅನುಗ್ರಹಂದ ಮತ್ತೆ ಚೈನು ಎಳದು ಜೋಡ್ಸಿದ್ದದು ಕೊಶಿ ಆತು.
    ಪಾಪ! ಪೂಜಾರಿಯ ಮನಗೆ ಕಿಚ್ಚು ಹಿಡುದು ಒಂದರಿಯಾಣದ್ದೆಲ್ಲ ಅಳುದು ಹೋದ್ದು. ಬಹುಶಃ ಅಗ್ನಿ ಶುದ್ಧ ಮಾಡಿದ್ದಾಯ್ಕು. ನಮ್ಮ ರಾಮಣ್ಣನೇ ಕಂತುಪಿತನಾಗಿ ಅದಕ್ಕೆ ಸಕಾಯ ಮಾಡಿದ್ದದು ಉತ್ತಮ ನಿರೂಪಣೆ.
    [ಎಡತ್ತಿನ ಅರ್ದ ರಾಮಣ್ಣಂದು. ಮುಕ್ಕಾಲು ಪರ್ಲಾಂಗು ಹೋದ ಮತ್ತೆ ಪೂರ್ತಿ ರಾಮಣ್ಣಂದು.] – ಲಾಯಕ ಆಯ್ದು.
    [ಸುಬ್ರಾಯ ಬಗ್ಗಿದ° ] – ನಿಂಗಳ ಸುಬ್ರಾಯ ಪಾಪ ಕಾಣುತ್ತು. ಎಂಗಳ ಗೋಣಸುಬ್ರಾಯ° ಒಬ್ಬ ಇದ್ದ° ಶ್ಯಾಮಣ್ಣೋ.. ಹೇಳಿ ಸುಖ ಇಲ್ಲೆ.
    [ಎಲ್ಲೋರು ಕೆಳ ಗುರ್ಮೆಯ ನೋಡಿರೆ ರಾಮಣ್ಣ ಬರೆಯ ಮೇಲೆ ನೋಡಿದ°. ] – ಹೀರೋ ಏವತ್ತೂ ವ್ಯತ್ಯಾಸವಾಗ್ಯೇ ನೋಡುಗಟ್ಟೇಪ್ಪೋ . ಡೈರಕ್ಟ್ರ ಉಷಾರಿದ್ದವು ಇವು.
    [ಸಬ್ಬಿನಿಸ್ಪೇಟ ನಿಂದ ಜಾಗೆ ಇದ್ದಲ್ದ? ಅಲ್ಲಿಯೇ ಕಚ್ಚುವ ಎರುಗಳದ್ದು ಒಂದು ಸಾಲು ಹೋಯ್ಕೊಂಡು ಇತ್ತು] [ಪೋಲಿಸು ಜೀಪಿಂಗೆ ಸಾಗಿಸಿ ಹಾಕ್ಸುವ ವ್ಯೆವಸ್ತೆ ಮಾಡ್ಸಿಕೊಂಡು ಇತ್ತಿದ್ದು.] 😀 😀
    ಓಯ್… ಅದಾರಪ್ಪ ಈಗ ಬಂದ್ಸು ಹೊಸ ರಾವಣ ಸನ್ಯಾಸಿ!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×