ಒಂದು ಪ್ರಕರಣದ ಸುತ್ತ – ೧೫
-ರಮ್ಯ ನೆಕ್ಕರೆಕಾಡು
ಮದನನ ಹಿಡಿವಲೆ ಎಲ್ಲರೂ ಅಮಸರಲ್ಲಿ ಹೆರಟವು. ಶರತ್ಚಂದ್ರ ಕೇಶವನನ್ನುದೇ ರಾಘುವನ್ನುದೇ ಸ್ಟೇಷನ್ ಹತ್ರೆ ಇಳಿಶಿದ. “ಭಾವ ನಿಂಗ ಮನೆಗೆ ಹೋಗಿ.. ಇಂದು ಮದನನ ಹಿಡಿಯದ್ದೆ ಬಿಡೆ..” ಹೇಳಿ ಹೇಳಿಯಪ್ಪದ್ದೇ ಕೇಶವ, “ಭಾವ ಆನುದೇ ಬತ್ತೆ.. ಆ ಮದನನೇ ಇದಕ್ಕೆಲ್ಲ ಕಾರಣ ಆದಿಕ್ಕಾ ಹೇಳಿ ತಿಳ್ಕೊಳ್ಳೆಕ್ಕು..” ಹೇಳಿದ. ಶರತ್ಚಂದ್ರ, “ಬೇಡ ಭಾವ.. ಹಾಂಗೆ ಕ್ರಿಮಿನಲ್ಸ್ ಗಳ ಹಿಡಿವಲೆ ಹೋಪಗ ಎಂಗ ರಿಸ್ಕ್ ತೆಕ್ಕೊಂಬದು ಸರಿ ಅಲ್ಲ.. ಹಾಂಗುದೇ ನಿಂಗೊಗೆ ಮನಸ್ಸು ಒಪ್ಪದ್ರೆ ರಜ್ಜ ಹೊತ್ತು ಕಳ್ದಿಕ್ಕಿ ಮದನನ ಕರ್ಕೊಂಡು ಬಪ್ಪ ಹೊತ್ತಿಂಗೆ ಸ್ಟೇಷನಿಂಗೆ ಬನ್ನಿ..” ಹೇಳಿಕ್ಕಿ ಜೀಪಿಲಿ ಸೀದಾ ಹೋದವು.
ಕೇಶವ ಸೀದಾ ಮನೆಗೆ ಹೋದ. ವೀಣಾ, ” ಎಂತ ಅಣ್ಣ ಇಷ್ಟೊತ್ತಾದ್ದು..?? ಇವು ಎಲ್ಲಿ ಹೋದವು.. ಆನೀಗ ನಿಂಗಳ ಹುಡ್ಕಿಗೊಂಡು ಸ್ಟೇಷನಿಂಗೆ ಬಪ್ಪಲೆ ಹೆರಟದು..” ಹೇಳಿಗೊಂಡೇ ಒಂದು ಗ್ಲಾಸು ನೀರು ತಂದುಕೊಟ್ಟತ್ತು. ” ವೀಣಾ ಅಂಜಲಿಯ ಪ್ರಕರಣಕ್ಕೆ ಒಳ್ಳೆ ಸುಳಿವು ಸಿಕ್ಕಿದ್ದು.. ಒಟ್ಟಾರೆ ಈ ಪ್ರಕರಣದ ಅಂತ್ಯ ಆದಷ್ಟು ಬೇಗ ಅಪ್ಪ ಎಲ್ಲಾ ಸೂಚನೆಯೂ ಕಾಣ್ತಾ ಇದ್ದು..” ಹೇಳಿ ಕೇಶವ ಘಟನೆಯ ವೀಣಾಂಗೆ ವಿವರ್ಸಿದ. ” ಯಬ್ಬಾ.. ಆಫ್ಟ್ರಾಲ್ ಒಂದು ಪೇಪರಿನ ತುಂಡು..!! ಇದಾ ಎನ್ನ ರೋಮ ಇಡೀ ಕುತ್ತ ಕುತ್ತ ಆತು..! ಈ ಮದನನೇ ಎಲ್ಲದಕ್ಕೂ ಕಾರಣ ಅದರಲ್ಲಿ ಸಂಶಯವೇ ಇಲ್ಲೆ.. ಗೋಪಾಲಣ್ಣ ಮಗಂದಾಗಿ ಎಷ್ಟು ಬೇನೆ ತಿಂದವು.. ಅಬ್ಬೆ ಅಪ್ಪನ ಮೇಲೆ ಕರುಣೆ ಇಲ್ಲದ್ದ ಮದನ ಅಪ್ಪನನ್ನೇ ಕೊಂದದು ಹೇಳ್ರೆ ನಂಬುಲೆಡಿಗು.. ಆದರೆ ಅಂಜಲಿ ಎಂತ ಮಾಡಿತ್ತು..” ಹೇಳಿಗೊಂಡಿದ್ದಾಂಗೆ ಅಂಜಲಿಯ ಗ್ರೇಶಿ ವೀಣಾಂಗೆ ದುಃಖಲ್ಲಿ ಮಾತೇ ಹೆರ ಬೈಂದಿಲ್ಲೆ. ಕೇಶವ, ” ಎಲ್ಲಾ ಎನ್ನ ಗತಜನ್ಮದ ಪಾಪ ಆದಿಕ್ಕು.. ಅಬ್ಬೆ ಮಗಳು ಎನ್ನ ಈ ನರಕಲ್ಲಿ ಬಿಟ್ಟಿಕ್ಕಿ ಮೇಲೆ ಖುಷೀಲಿ ಇಕ್ಕು..” ಹೇಳಿ ಎಕ್ಕಿ ಎಕ್ಕಿ ಕೂಗಿದ. ” ಛೇ.. ನಮ್ಮ ಜೀವನಲ್ಲಿಯೇ ಎಂತಕೆ ಹೀಂಗಾತು.. ಈ ಕಡಿವದು ಕೊಲ್ಲುದು ಪೂರಾ ಟಿವಿಲಿ, ಪುಸ್ತಂಕಗಳಲ್ಲಿ ಎಲ್ಲ ಬಪ್ಪದು ಸುಮ್ಮನೆಯಾ..!! ಹೀಂಗೆಲ್ಲಾ ಆಗಿ ನಮ್ಮವರ ಕಳಕ್ಕೊಂಡಪ್ಪಗ ಅಪ್ಪಾಂಗಿಪ್ಲ ಬೇನೆ ಇದ್ದನ್ನೆ.. ಬೇಡ ಆರಿಂಗೂ ಬೇಡಪ್ಪ.. ಇಲ್ಲಿಗೇ ಅಕೇರಿ ಆಗಲಿ.. ಛೇ ಆನೊಂದು ಪೆದ್ದಿ ನಿಂಗೊಗೆ ಧೈರ್ಯ ಹೇಳುದು ಬಿಟ್ಟು ನಿಂಗಳನ್ನೇ ಕೂಗಿಸಿ ಹಾಕಿದೆ ಅಣ್ಣಾ..” ಹೇಳಿ ವೀಣಾ ಸೆರಗಿಲಿ ಕಣ್ಣನೀರು ಉದ್ದಿಗೊಂಡತ್ತು. ” ಇಲ್ಲೆ ವೀಣಾ.. ಇಷ್ಟು ಸಮಯ ಒಟ್ಟಿಂಗಿದ್ದವು ಈಗ ಇಲ್ಲೆ ಹೇಳ್ತದರ ಸ್ವೀಕರ್ಸುಲೆ ಎಡಿತ್ತಿಲ್ಲೆ. ಅವು ನಮ್ಮೊಟ್ಟಿಂಗಿಲ್ಲೆ ಹೇಳ್ತ ವಾಸ್ತವ ನಮಗೆ ದುಃಖವನ್ನೇ ಕೊಡುದು.. ಅಂದು ಎನ್ನ ಪುಟ್ಟು ಮದುವೆ ಬೇಡ ಹೇಳಿಯಪ್ಪಗ ಆನು, ‘ ಮಗಳೋ.. ವಾಸ್ತವ ನಮಗೆ ಪೂರಕ ಅಪ್ಪಲೂ ಸಾಕು.. ಕೇಡಾಪ್ಪಲೂ ಸಾಕು.. ನಾವದರ ಬೇಡ ಹೇಳಿ ನೂಕುಲೆಡಿಯ.. ಎಲ್ಲವನ್ನುದೇ ಸ್ವೀಕರ್ಸದ್ದೆ ವಿಧಿ ಇಲ್ಲೆ..’ ಹೇಳಿ ಇದೇ ಬಾಯಿಂದ ಹೇಳಿದ್ದು ವೀಣಾ. ಈಗ ನೋಡು ಅದುವೇ ಎನಗೆ ತಿರುಗಿ ಬೈಂದು. ಬುದ್ಧಿಮಾತುಗ ಇನ್ನೊಬ್ಬಂಗೆ ಹೇಳುಲೆ ಚಂದ. ಅದು ನಮಗೇ ತಿರುಗಿ ಬಪ್ಪಗ ಗೊಂತಾಪ್ಪದು ಅದರ ನಿಭಾಯಿಸುದು ಎಷ್ಟು ಕಷ್ಟ ಹೇಳಿ.. ಥಕ್.. ಬೇಜಾರಲ್ಲಿ ಈ ನಾಲಗೆ ಎಂತೆಲ್ಲಾ ಮಾತಾಡ್ತು.. ನಾವು ಕಾಪಿ ಕುಡ್ದಿಕ್ಕಿ ಸ್ಟೇಷನಿಂಗೆ ಹೋಪ.. ಎಲ್ಲದಕ್ಕೂ ಉತ್ತರ ಸಿಕ್ಕುವ ಕಾಲ ಬಂತು..” ಹೇಳಿ ಕೇಶವ ಗಟ್ಟಿ ಮನಸ್ಸು ಮಾಡಿಗೊಂಡ.
ಮದನನ ಹಿಡಿವಲೆ ಕಾತುರಲ್ಲಿ ಹೆರಟ ಶರತ್ಚಂದ್ರಗೆ ಜೀಪು ಅರ್ಧ ದಾರಿಲಿ ಕೈಕೊಟ್ಟತ್ತು. ಏನ ಮಾಡ್ರೂ ಜೀಪು ಸ್ಟಾರ್ಟ್ ಆಗ.. ಶರತ್ಚಂದ್ರ ಡ್ರೈವರ್ ಹತ್ರೆ ” ಎಂತ ಇದು.. ಜೀಪು ಹೆರಡುವ ಮೊದಲೇ ಹೀಂಗೆಪ್ಪದರ ಎಲ್ಲ ಚೆಕ್ ಮಾಡೆಕ್ಕು.. ಈ ಒಂದು ಸಣ್ಣ ಮಿಸ್ಟೇಕ್ ಇಡೀ ಬುಡಮೇಲು ಮಾಡುವಾಂಗಿದ್ದು.. ಚೆಕ್ ಈ ಜೀಪು ಹೀಂಗೆ ಅರ್ಧಲ್ಲಿ ಕಂಜಿ ಹಾಕುತ್ತು ಹೇಳಿ ಆರಿಂಗೆ ಗೊಂತಿತ್ತು ನಿನ್ನ ಹೇಳಿ ಎಂತ ಪ್ರಯೋಜನ ಇಲ್ಲೆ.. ಸರಿ ಮೆಕಾನಿಕಿಂಗೆ ಫೋನು ಮಾಡಿ ಬಪ್ಪಲೆ ಹೇಳು..” ಹೇಳಿ ಬಾಯಿಮುಚ್ಚೆಕ್ಕಾರೆ ಶರತ್ಚಂದ್ರಂಗೆ ಪೇದೆದು ಫೋನು ಬಂತು, “ಹಲೋ ಸರ್.. ಆ ಜನ ಪುನಾ ಎಲ್ಲಿಗೋ ಹೆರಟತ್ತು.. ಎಂತ ಮಾಡುದು ಹೇಳಿ ಗೊಂತಾವ್ತಿಲ್ಲೆ.. ಬೇಗ ಬನ್ನಿ..” ಹೇಳಿಯಪ್ಪದ್ದೇ ಶರತ್ಚಂದ್ರ, “ಹರ್ರೀ ಅಪ್…!! ಕೂಡ್ಲೇ ಅದರ ಫಾಲೋ ಮಾಡಿ.. ಅದಕ್ಕೆ ನಿಂಗ ಅದರ ಫಾಲೋ ಮಾಡುದು ಗೊಂತಾಪ್ಪದು ಬೇಡ.. ಈ ಆಪರೇಷನ್ ಫೇಲ್ ಅಪ್ಪ ವಿಷಯ ಎನಗೆ ಕೇಳುಲೆ ಇಷ್ಟ ಇಲ್ಲೆ.. ಸೋ ಬಿ ಕೇರ್ ಫುಲ್.. ನಿಂಗಳ ಲೊಕೇಷನ್ ಎನಗೆ ಶೇರ್ ಮಾಡಿ.. ಎಲ್ಲಿಗೆ ಹೋವ್ತಾ ಇದ್ದಿ.. ಅದೆಂತ ಮಾಡ್ತು ಎಲ್ಲವು ಎನಗೆ ಅಪ್ಡೇಟ್ ಆವ್ತಾ ಇರೆಕ್ಕು.. ಆನು ಆದಷ್ಟು ಬೇಗ ಸೇರಿಗೊಳ್ತೆ..” ಹೇಳಿ ಫೋನು ಮಡುಗಿ, “ನಾಗರಾಜ ಈ ಜೀಪಿನ ಕಾದರಾಗ.. ನಾವೀಗಳೇ ಬೇರೆ ವಾಹನಲ್ಲಿ ಹೋಯೆಕ್ಕು.. ಮದನ ಪುನಾ ಎಲ್ಲಿಗೋ ಹೆರಟತ್ತಡ. ನೋಡು ಒಂದು ರಿಕ್ಷಾ ಬಂತದ.. ಅದರಲ್ಲೇ ಹೋಪ..” ಹೇಳಿಕ್ಕಿ ಡ್ರೈವರ್ ಹತ್ರೆ, “ಜೀಪು ಆದಷ್ಟು ಬೇಗ ಸರಿ ಮಾಡ್ಸಿಕ್ಕಿ ಫೋನು ಮಾಡು ಎಂಗ ಇಪ್ಪ ಜಾಗೆಯ ಲೊಕೇಶನ್ ಕಳ್ಸುತ್ತೆ..” ಹೇಳಿ ರಿಕ್ಷಾಲ್ಲಿ ಹತ್ತಿಕ್ಕಿ ಹೋದವು.
“ಹಲೋ ಸರ್ ಈ ಜನ ಯಾವುದೋ ಒಂದು ಪಾಳು ಬಿದ್ದ ಕಟ್ಟಡಕ್ಕೆ ಹೋತಾ ಇದ್ದು.. ಸುತ್ತಮುತ್ತ ಇಡೀ ಬಲ್ಲೆ ಇದ್ದ ಕಾರಣ ಎಂಗ ಫಾಲೋ ಮಾಡ್ತಾ ಇಪ್ಪದು ಅದಕ್ಕೆ ಗೊಂತಿಲ್ಲೆ.. ಆ ಜನ ಮೋರೆಯ ವಸ್ತ್ರಲ್ಲಿ ಕವರ್ ಮಾಡಿಗೊಂಡಿದು. ಸೊ ಮೋರೆ ಕಾಣ್ತಾ ಇಲ್ಲೆ.. ಲೊಕೇಶನ್ ಕಳ್ಸಿದ್ದೆ ಬೇಗ ಬನ್ನಿ..” ಹೇಳಿ ಪೇದೆ ಎಲ್ಲ ವಿಷಯಂಗಳ ತಿಳಿಶಿತ್ತು. ಶರತ್ಚಂದ್ರ ಪೇದೆ ಕಳ್ಸಿದ ಲೊಕೇಶನ್ ನೋಡಿ “ಓಹ್ ಈ ಜಾಗೆಂದ ನಾವು ತುಂಬಾ ದೂರ ಇಲ್ಲೆ.. ಯಾವುದೋ ದೊಡಾ ಪಾಳುಬಿದ್ದ ಕಟ್ಟಡ ಅಡ.. ಅಲ್ಲಿ ಮದನ ಒಬ್ಬನೆಯ ಅಲ್ಲ ಒಂದು ದೊಡ್ಡ ಗ್ಯಾಂಗೇ ಇದ್ದಾ.. ಎಂತದೂ ಗೊಂತಿಲ್ಲೆ.. ನಾವು ನಾಕೇ ಜನ ಆದ ಕಾರಣ ನಮ್ಮ ಕೈಂದ ತಪ್ಸಿಕ್ಕಿ ಹೋಪ ಚಾನ್ಸಸ್ ಇದ್ದು.. ನಮ್ಮೊಟ್ಟಿಂಗೆ ಹೆಚ್ಚಿಗೆ ನಾಕು ಜನ ಇದ್ದರೆ ಹಿಡಿವಲೆ ಸುಲಭ.. ಈ ಏರಿಯಾಕ್ಕೆ ಸೇರಿದ ಸ್ಟೇಷನಿನ ಪೋಲಿಸುಗಳ ಹೆಲ್ಪ್ ತೆಕ್ಕೊಂಬದು ಒಳ್ಳೆದು ಈಗಳೇ ಅವಕ್ಕೆ ವಿಷಯ ತಿಳಿಶಿ ಬಪ್ಪಲೆ ಹೇಳ್ತೆ..” ಹೇಳಿ ಶರತ್ಚಂದ್ರ ರಜ್ಜ ಮುಂದಾಲೋಚನೆ ಮಾಡಿದ. ಎಲ್ಲರೂ ಪಾಳುಬಿದ್ದ ಕಟ್ಟಡದ ಹತ್ರೆ ಬಂದು ಸೇರಿದವು. ಶರತ್ಚಂದ್ರ ಎಲ್ಲರತ್ರೂ, “ಇಂದು ಅವ ತಪ್ಸಿಗೊಂಡರೆ ಮತ್ತೆ ನಮ್ಮ ಕೈಗೇ ಅವ ಸಿಕ್ಕ.. ಆನುದೆ ನಾಗರಾಜಂದೇ ಬಿಲ್ಡಿಂಗ್ ಒಳಂಗೆ ಹೋತೆಯ.. ನಿಂಗ ಎಲ್ಲ ಈ ಬಿಲ್ಡಿಂಗ್ ನ ಕವರ್ ಮಾಡಿ.. ಅವ ಕ್ರಿಮಿನಲ್ ಹೇಳಿ ಕನ್ಫರ್ಮ್ ಆಯ್ದಿಲ್ಲೆ.. ಇನ್ಕೇಸ್ ಅವ ಕ್ರಿಮಿನಲ್ ಆದರುದೇ ಎಂತಕೆ ಇದೆಲ್ಲ ಮಾಡಿದ ಹೇಳಿ ಕಾರಣ ತಿಳ್ಕೊಳ್ಳದ್ದೆ ಅವನ ಎನ್ಕೌಂಟರ್ ಮಾಡುವಾಂಗೂ ಇಲ್ಲೆ.. ಸೊ ತಪ್ಸಿಗೊಂಬಲೆ ಯಾವುದೇ ಕಾರಣಕ್ಕೂ ಬಿಡೆಡಿ.. ಬಿ ರೆಡಿ.. ಎಂಗ ಒಳ ಹೋತೆಯ..” ಹೇಳಿ ಒಂದು ಸಣ್ಣ ಮಟ್ಟಿಂಗೆ ಪ್ಲ್ಯಾನ್ ಮಾಡಿ ಒಳ ಹೋದ.
ನಾಕು ಅಂತಸ್ತಿನ ಕಟ್ಟಡ. ಪಾಳು ಬಿದ್ದು ಕಟ್ಟಡದ ಒಳ ಪೂರಾ ಬಲ್ಲೆ ಬೆಳದ್ದು. ಶಬ್ದ ಮಾಡದ್ದೆ ಇಬ್ರುದೇ ಎರಡ್ನೆ ಮಾಳಿಗೆಗೆ ಹೋಪಗ, “ಸದ್ಯಕ್ಕೆ ನಿನಗೆ ಬಿಡುಗಡೆ ಇಲ್ಲೆ.. ನಾಳೆ ಬತ್ತೆ..” ಹೇಳಿ ಮಾತು ಕೇಳಿತ್ತು. ಕೂಡ್ಲೆ ಆ ಜನ ಹೆರಟತ್ತು ಹೇಳಿ ಗೊಂತಾಗಿ ಶರತ್ಚಂದ್ರಂದೇ ನಾಗರಾಜಂದೇ ಅಲ್ಲಿಯೇ ಗೋಡೆ ಎಡೆಲಿ ಹುಗ್ಗಿ ನಿಂದವು. ಆ ಜನರ ಹೆಜ್ಜೆ ಶಬ್ದ ಹತ್ತರೆ ಹತ್ತರೆ ಬಪ್ಪದು ಕೇಳಿಯಪ್ಪಗ ಶರತ್ಚಂದ್ರ ಅಲರ್ಟ್ ಆದ. ಆ ಹೆಜ್ಜೆ ಶಬ್ದ ಪುನಾ ದೂರ ದೂರ ಆತು. ಶರತ್ಚಂದ್ರಂಗೆ ಅಂಬಗ ಗೋಷ್ಠಿ ಆತು ಅವನ ಕಾಲು ಆ ಜನಕ್ಕೆ ಕಾಂಬ ಹಾಂಗೆ ಇತ್ತು ಹೇಳಿ.. ಬಗ್ಗಿ ನೋಡುವಾಗ ಆ ಜನ ಇನ್ನೊಂದು ಹೊಡೆಂಗೆ ಓಡುದು ಕಂಡತ್ತು. ಕೂಡ್ಲೆ ಇಬ್ರುದೇ ಅದರ ಹಿಂದೆಂದ ಓಡಿದವು. ಅದು ಅಲ್ಲಿಯೇ ಕಿಟಕಿಂದ ಕೆಳ ಕಟ್ಟಡದ ಹೆರಂಗೆ ಹಾರಿತ್ತು. ಶರತ್ಚಂದ್ರ ,”ಕಾನ್ಸ್ಟೇಬಲ್ಸ್ ಅವನ ಹಿಡಿರಿ…” ಹೇಳಿ ಬೊಬ್ಬೆ ಹೊಡೆದ. ಕೆಳಂಗೆ ಬಗ್ಗಿ ನೋಡಿಯಪ್ಪಗ ನಿಷ್ಠಾವಂತರಾಗಿಪ್ಪ ಕಾನ್ಸ್ಟೇಬಲ್ಸ್ ಅವನ ಹಿಡ್ದಿತ್ತಿದವು. ಶರತ್ಚಂದ್ರ ಅಂಗೈಯ ಮುಷ್ಟಿ ಬಿಗುದು “ಯೆಸ್ಸ್…” ಗೆಲುವಿನ ಸಂಭ್ರಮಿಸಿದ. “ನಾಗರಾಜ ಆ ಜನ ಆರತ್ರೋ ಮಾತಾಡಿತ್ತಲ್ದ.. ಬಾ ಅಲ್ಲಿ ಹೋಪ..” ಹೇಳಿ ಸಣ್ಣ ಕೋಣೆ ಒಳಂಗೆ ನುಗ್ಗಿದವು. ಆ ಕೋಣೆಲಿ ನೀರಿನ ಕುಪ್ಪಿ, ಬಟ್ಲು ಎಲ್ಲ ಅಲ್ಲಲ್ಲಿ ಬಿದ್ದಿತ್ತು.. ಒಂದು ಮೂಲೆಲಿ ಯಾವುದೋ ಹುಡುಗಿಯ ಕೈ ಕಾಲಿಂಗೆ ಸಂಕೋಲೆ ಕಟ್ಟಿ ಮಡುಗಿದ್ದು ಕಂಡತ್ತು. ಕೂದಲೆಲ್ಲ ಮೋರೆಗೆ ಹರಗಿತ್ತು. ಶರತ್ಚಂದ್ರ, “ಏಯ್.. ಆರು ನೀನು.. ಹೆದರೆಡ ಎಂಗ ಪೋಲೀಸ್ ಬೈಂದೆಯ.. ನೋಡಿಲ್ಲಿ..” ಹೇಳಿ ಆ ಹುಡುಗಿಯ ಹತ್ರೆ ಹೋಗಿ ಕೈ ಕಾಲು ಬಿಡ್ಸುಲಪ್ಪಗ ಆ ಹುಡುಗಿ ಶರತ್ಚಂದ್ರನ ನೋಡಿ “ಮಾವಾ..” ಹೇಳಿ ಜೋರು ಕೂಗಿತ್ತು. ಶರತ್ಚಂದ್ರಂಗೆ ಅವನ ಕಣ್ಣನ್ನೇ ನಂಬುಲೆಡಿಗಾತಿಲ್ಲೆ.. “ಅಂಜಲೀ….” ಹೇಳಿ ದೊಂಡೆ ಹರಿವಾಂಗೆ ಸಂತೋಷಲ್ಲಿ ಬೊಬ್ಬೆ ಹೊಡೆದ.
-ಮುಂದುವರೆತ್ತು….
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಲಾಯ್ಕಲ್ಲಿ ಓದುಸೆಂಡು ಹೋವ್ತು