ಒಂದು ಪ್ರಕರಣದ ಸುತ್ತ -೮
-ರಮ್ಯ ನೆಕ್ಕರೆಕಾಡು
ಸುದ್ದಿ ಗಾಳಿಂದ ಬೇಗ ಹಬ್ಬುತ್ತು ಹೇಳಿ ಹಿರಿಯೋರು ಹೇಳುವ ಕ್ರಮ ಇದ್ದು. ಅಂಜಲಿಯ ವಿಷಯಲ್ಲಿದೇ ಹೀಂಗೆ ಆತು. ” ಅಂಜಲಿ ಗೋಪಾಲಣ್ಣನ ಕೊಂದು ಓಡಿಹೋದ್ದಡ..”, “ಕಾಣೆ ಅಪ್ಪದಕ್ಕೆ ಒಂದು ವಾರ ಮೊದಲೇ ಅದಕ್ಕೆ ಮಾನಸಿಕ ಸೀಕಿತ್ತಡ”,” ಅದು ಯಾವುದೋ ಜನರೊಟ್ಟಿಂಗೆ ಓಡಿ ಹೋದ್ದಡ..” ಹೀಂಗೆ ರಂಗು ರಂಗು ಮಾಡಿ ಜೆನಂಗ ಬಾಯಿಗೆ ಬಂದಾಂಗೆ ಮಾತಾಡ್ಲೆ ಸುರು ಮಾಡಿದವು. ಈ ಗಾಳಿಸುದ್ದಿಯ ವಾಸನೆ ಮನೆಯವಕ್ಕುದೇ ಬಡುದತ್ತು. ಶಾಂತಂಗೆ ಇದರ ಎಲ್ಲಾ ಕೇಳಿ ಚಪ್ಡಿ ಕಲ್ಲು ಹಿಡ್ಕೊಂಡು ತಲೆಗೆ ಜೆಪ್ಪಿದಾಂಗಾತು.” ಇದರ ಎಲ್ಲಾ ಕೇಳಿಗೊಂಡು ಎನ್ನಂದ ಬದ್ಕುಲೆಡಿಯ.. ದೇವರೇ ಎನ್ನ ಎಡಿಗಾಷ್ಟು ಬೇಗ ಕರಕ್ಕೋ..” ಹೇಳಿ ಶಾಂತ ಸಂಕಟಲ್ಲಿ ಜೋರು ಕೂಗಿತ್ತು. ” ಅಕಲಿಲ್ಲದ್ದವು ಬಾಯಿಗೆ ಬಂದಾಂಗೆ ಮಾತಾಡ್ತವು.. ನಾವದರ ತಲೆಗೆ ಹಾಯಿಕ್ಕೊಂಬಲಾಗ ಅತ್ತಿಗೆ..” ಹೇಳಿ ವೀಣಾ ಶಾಂತಂಗೆ ಸಮಾಧಾನ ಮಾಡಿತ್ತು. ” ಆ ಒಂದು ವಾರ ಎನ್ನ ಮಗಳಿನ ಮನಸ್ಸಿಂಗೆ ಎಷ್ಟು ಬೇನೆ ಆದಿಕ್ಕು.. ಎಲ್ಲವನ್ನುದೇ ಹೆತ್ತ ಅಬ್ಬೆಯತ್ರೆ ಹೇಳಿಗೊಂಬಲಕ್ಕು ಹೇಳೆರೆ ಈ ಪಾಪಿಯೇ ಅದರ ಕಷ್ಟಕ್ಕೆ ಸಿಕ್ಸಿ ಹಾಕಿದ್ದು.. ಈ ಪಾಪಿಗಳೊಟ್ಟಿಂಗೆ ಇಪ್ಪಲೆಡಿಯ ಹೇಳಿ ನಡಿರುಳೇ ಎದ್ದು ಹೋಗಿ ಒಳ್ಳೆ ಕೆಲಸ ಮಾಡಿದ್ದೆ ಮಗಳೋ…” ಹೇಳಿ ಕಣ್ಣನೀರು ಹಾಕಿಗೊಂಡೇ ಮಾತಾಡಿತ್ತು ಶಾಂತ.
“ಅಂಜಲಿ ಗೋಪಾಲಣ್ಣನ ಕೊಂದಿಕ್ಕಿ ಓಡಿ ಹೋತಡ..” ಹೇಳ್ತ ಸುದ್ದಿ ಅಂಜಲಿಯ ಜೋಸ್ತಿ ಸಹನಾನ ಕೆಮಿಗುದೇ ಬೀದ್ದತ್ತು. ಅಂಜಲಿಯ ಮೇಲೆ ಸುಳ್ಳು ಆರೋಪ ಕೇಳಿ ಬಂದಪ್ಪದ್ದೆ ಸಹನಾಂಗೆ ಕಣ್ಣೆರಡು ಎರ್ಕಿ ಬಂತು. ಕೂಡ್ಲೇ ಇದ್ದ ಹಾಂಗೆ ಎದ್ದುಗೊಂಡು ಅಂಜಲಿಯ ಮನೆಗೆ ಹೋತು.
ಶರತ್ಚಂದ್ರ ಸ್ಟೇಷನಿಂಗೆ ಹೋಪಲೆ ಹೆರಟಿತ್ತಿದ. ಸಹನಾ ಅನಿರೀಕ್ಷಿತವಾಗಿ ಬಂದದು ಎಲ್ಲರಿಂಗೂ ಕುತೂಹಲ ಹುಟ್ಟುಸಿತ್ತು. ಹೆರಟು ಬಾಗಿಲತ್ರೆ ನಿಂದ ಶರತ್ಚಂದ್ರನ ನೋಡಿ ಸಹನಾ ಹೆದರಿಗೊಂಡೇ,” ಒಂದು ಮುಖ್ಯವಾದ ಸಂಗತಿ ಹೇಳುಲಿದ್ದು..” ಹೇಳಿ ಅವನ ದಾಂಟಿ ಒಳ ಹೋತು. ಸಹನಾ ಅದಕ್ಕೆ ಗೊಂತಿಪ್ಪ ಎಂತದೋ ವಿಷಯವ ಅದುವಾಗಿಯೇ ಹೇಳ್ತು ಹೇಳಿ ಮೊದಲೇ ಊಹೆ ಇದ್ದ ಶರತ್ಚಂದ್ರಂಗೆ ಮನಸ್ಸಿಲಿಯೇ ಸಣ್ಣಕ್ಕೆ ನೆಗೆ ಬಂತು. ಸ್ಟೇಷನಿಂಗೆ ಹೆರಟವಂದೆ, ಸಹನಾ ಹೇಳುವ ವಿಷಯ ಎಂತಾದಿಕ್ಕಪ್ಪಾ ಹೇಳಿ ಕುತೂಹಲಲ್ಲಿಯೇ ತಿರುಗಿ ಒಳ ಬಂದ. ಸಹನಾ ಎಂತದೂ ಹೇಳದ್ದೇ ಶಾಂತನ ಅವಸ್ಥೆ ನೋಡಿ,” ಎನ್ನದು ತಪ್ಪಾತು… ಅಂಜಲಿ ಕಾಣೆ ಅಪ್ಪಲೆ ಆನುವೇ ಕಾರಣ… ಕ್ಷಮಿಸಿ ಅತ್ತೆ ಎನ್ನ… ಅಂಜಲಿ ಎಲ್ಲಿ ಹೋಯಿದು ಹೇಳಿ ಎನಗೆ ಗೊಂತಿದ್ದು..” ಹೇಳಿ ಕೂಗಿಗೊಂಡು ಶಾಂತಂಗೆ ಕೈ ಮುಗುದತ್ತು. ಎಲ್ಲರ ಮೋರೆಲಿ ಪ್ರಶ್ನಾರ್ಥಕ ಭಾವನೆ ಎದ್ದು ಕಂಡತ್ತು. ಸಹನಾ ಕಣ್ಣುದ್ದಿಗೊಂಡು,” ಅಪ್ಪು ಅಂಜಲಿ ಕಾಣೆ ಅಪ್ಪಲೆ ಆನೇ ಕಾರಣ.. ಮೊನ್ನೆ ಅಂಜಲಿಗೆ ಪುಸ್ತಕ ಕೊಡ್ಲೆ ಬಂದಿಪ್ಪಗ ಎಲ್ಲ ವಿಷಯವನ್ನುದೇ ಎನ್ನತ್ರೆ ಹೇಳಿತ್ತು. ಅರವಿಂದ ನಿನ್ನ ಮದುವೆ ಆಯ್ಕಾದ ಪರಿಸ್ಥಿತಿ ಬಂದರೆ ಓಡಿ ಹೋಗು ಹೇಳಿ ಉಪಾಯ ಕೊಟ್ಟು ಹೋಗಿತ್ತಿದೆ. ಅಂಜಲಿ ಅರವಿಂದನ ಮೀಟ್ ಆದ ದಿನ ಹೊತ್ತಪ್ಪಗ…” ಹೇಳಿ ಅರ್ಧಲ್ಲಿ ನಿಲ್ಸಿತ್ತು. ಎಲ್ಲರೊಟ್ಟಿಂಗೆ ಕುತೂಹಲಲ್ಲಿಯೇ ಕೇಳಿಗೊಂಡಿತ್ತ ಶರತ್ಚಂದ್ರ,” ಎಂತಾತು??… ಈಗ ಅಂಜಲಿ ಎಲ್ಲಿದ್ದು..?” ಹೇಳಿ ಬೇಗ ಬೇಗ ಕೇಳಿದ. ಸಹನಾ,” ಆನು ಈಗ ಅಂಜಲಿ ಎಲ್ಲಿದ್ದು ಹೇಳಿ ಹೇಳುವೆ.. ಆದರೆ ನಿಂಗ ಅದರ ಅರವಿಂದನೊಟ್ಟಿಂಗೆ ಮದುವೆ ಮಾಡ್ಸುಲಾಗ.. ಅದರ ಸ್ವತಂತ್ರಲ್ಲಿ ಇಪ್ಪಲೆ ಬಿಡೆಕ್ಕು..” ಹೇಳಿ ಶಾಂತ ಮತ್ತೆ ಕೇಶವನ ಮೋರೆ ನೋಡಿತ್ತು. ಕೇಶವ ಕೂಡ್ಲೇ,” ಅಯ್ಯೋ… ಕೆಟ್ಟ ಮೇಲೆ ಬುದ್ಧಿ ಹೇಳುವಾಂಗೆ ಎಂಗೊಗೆ ಎಂಗಳ ತಪ್ಪಿನ ಅರಿವಾಯ್ದು.. ಇನ್ನೆಂದಿಂಗೂ ಅದರ ಇಷ್ಟಕ್ಕೆ ವಿರುದ್ಧವಾಗಿ ಹೋಗೆಯ..” ಹೇಳಿ ತಲೆ ಆಡ್ಸಿದ. ಅಂಬಗ ಸಹನಾಂಗೆ ಅವರ ಮೇಲೆ ನಂಬಿಕೆ ಬಂತು. ಇಪ್ಪ ಸತ್ಯವ ಹೇಳುಲೆ ಸುರು ಮಾಡಿತ್ತು.
ಆ ದಿನ ಹೊತ್ತಪ್ಪಗ ಸುಮಾರು ಏಳು ಗಂಟೆ ಹೊತ್ತಿಂಗೆ ಸಹನಾಂಗೆ ಅಂಜಲಿಯ ಫೋನು ಬಂತು.” ಹಲೋ ಸಹನಾ… ಎನ್ನ ಜೀವನ ಹಾಳಾಪ್ಪ ಎಲ್ಲಾ ಲಕ್ಷಣ ಕಾಣ್ತಾ ಇದ್ದು.. ಆ ತೊಂಡ ಇಂದು ಎನ್ನ ಮದುವೆ ಅಪ್ಪಲೆ ಒಪ್ಪಿಗೊಂಡಿದ ಹೇಳಿ ಅವನ ನಡವಳಿಕೆ ನೋಡಿಯಪ್ಪಗಳೇ ಗೊಂತಾಯ್ದು ಎನಗೆ. ಅವ ಮದುವೆ ಆವ್ತರೆ ಎನ್ನ ಹೆಣವನ್ನೇ ಆಗಲಿ..” ಹೇಳಿಕ್ಕಿ ಒಂದುಜಾತಿ ಕೂಗುಲೆ ಸುರು ಮಾಡಿತ್ತು. ಸಹನಾಂಗೆ ಆ ಹೊತ್ತಿಂಗೆ ಎಂತ ಮಾಡುದು ಹೇಳಿ ಅರೆಡಿಗಾಯ್ದಿಲ್ಲೆ.” ನೀನು ಕೂಗೆಡ ಎನಗೊಂದು ಅರ್ಧ ಗಂಟೆ ಟೈಮ್ ಕೊಡು ಆನು ಪುನಃ ಫೋನು ಮಾಡ್ತೆ” ಹೇಳಿ ಸಹನಾ ಫೋನು ಕಟ್ ಮಾಡಿತ್ತು. ಅಂಜಲಿಯ ಬದುಕು ಸುಮ್ಮನೇ ಹಾಳಾಪ್ಪಲಾಗ.. ಎಂತಾರು ಒಳ್ಳೆ ದಾರಿ ನೋಡಿ ಬದ್ಕಿಗೊಂಬಾಂಗೆ ಆಯೆಕ್ಕು.. ಹೇಳಿ ಗ್ರೇಶಿಗೊಂಡು ಒಂದೇ ಕಡೆಂಗೆ ದೃಷ್ಟಿ ಮಡುಗಿ ಆಲೋಚನೆ ಮಾಡಿಗೊಂಡಿದ್ದ ಸಹನಾಂಗೆ ಕಂಡದು ಅಲ್ಲಿಯೇ ನೆಲಕ್ಕೆ ಬಿದ್ದುಗೊಂಡಿತ್ತ ಪೇಪರ್ ನ ಎಡೆಲಿ ಬಂದ ದಾರಿದೀಪ ಹೇಳಿ ದೊಡ್ಡಕ್ಕೆ ಬರೆದ ಒಂದು ಪಾಂಪ್ಲೇಟ್!!
ಅದೊಂದು ಆಶ್ರಮದ ಪಾಂಪ್ಲೇಟ್ ಆಗಿತ್ತು. ಆ ಆಶ್ರಮ ಗೆತಿ ಇಲ್ಲದ್ದವರ ಬದುಕ್ಕಿಂಗೆ ದಾರಿದೀಪ ಆಗಿತ್ತು. ನೂರೈವತ್ತು ಕಿ.ಮೀ ದೂರಲ್ಲಿಪ್ಪ ಈ ದಾರಿದೀಪ ಆಶ್ರಮ ಅಲ್ಲಿಪ್ಪವಕ್ಕೆ ಕೆಲಸ ಕೊಟ್ಟು ಸಂಬಳ ಕೊಡುವ ಕೆಲಸವನ್ನುದೇ ಮಾಡಿಗೊಂಡಿತ್ತು. ಅಂಜಲಿಯ ಬದುಕಿಂಗೆ ದಾರಿದೀಪವೇ ಆಸರೆ ಅಕ್ಕು ಹೇಳಿ ನಿರ್ಧಾರಕ್ಕೆ ಬಂದ ಸಹನಾ ಅಂಜಲಿಗೆ ಫೋನು ಮಾಡಿಕ್ಕಿ ಎಲ್ಲಾ ವಿಷಯವನ್ನುದೇ ಹೇಳಿತ್ತು.” ನೋಡು ಅಂಜು… ದೇವರೇ ನಿನಗೆ ಒಂದೊಳ್ಳೆ ದಾರಿ ತೋರ್ಸಿದ್ದ. ಇಂದು ನಡಿರುಳೇ ಹೆರಟಿಕ್ಕಿ ಹೋಗು… ಹೆಚ್ಚು ತಡವು ಮಾಡೆರಾಗ.. ಇದ್ದಾಂಗೆ ಎದ್ದಿಕ್ಕಿ ಹೋಗು.. ಎಂತ ತೆಕ್ಕೊಂಬಲೆ ಹೋಗೆಡ. ಮೊದಲು ನಿನ್ನ ಮೊಬೈಲಿಲಿಪ್ಪ ಎನ್ನ ಕಾಲ್ ಹಿಸ್ಟರಿ ಡಿಲೀಟು ಮಾಡು. ಇಲ್ಲದ್ರೆ ನಮ್ಮ ಪ್ಲ್ಯಾನ್ ಪೂರಾ ನೀರಿಲಿ ಹೋಮ ಮಾಡಿದಾಂಗಕ್ಕು. ಮೊಬೈಲು ಸಾನು ಬಿಟ್ಟಿಕ್ಕಿ ಹೋಗು. ನೀನು ಎಲ್ಲಿಗೆ ಹೋಯಿದೆ ಹೇಳಿ ಗೊಂತಾಗದ್ದಿರೆಕ್ಕಾರೆ ಹೀಂಗೆಲ್ಲಾ ಮಾಡಲೇ ಬೇಕು.. ಇಲ್ಲದ್ರೆ ನಿನ್ನ ಆ ತೊಂಡಂಗೆ ಕಟ್ಟಿ ಹಾಕುಗು.. ನಿನ್ನ ಹೊಸಾ ಫ್ಯೂಚರಿಂಗೆ ಎನ್ನ ಕಡೆಂದ ಗುಡ್ ಲಕ್ ಅಂಜುಕಟ್ಟೀ… ಬಾಯ್…” ಹೇಳಿ ಫೋನು ಮಡುಗಿ “ಹಬ್ಬಾ..” ಹೇಳಿ ದೀರ್ಘ ಉಸುಲು ಬಿಟ್ಟತ್ತು.
“ಅಂಜಲಿಯ ಭವಿಷ್ಯವ ಮಾತ್ರ ಆಲೋಚನೆ ಮಾಡಿದ್ದಾನು. ಇದರಿಂದ ಅಂಜಲಿಗೆ ಕೆಟ್ಟ ಹೆಸರು ಬಕ್ಕೋಳಿ ಎನಗೆ ಗೊಂತಿತ್ತಿಲ್ಲೆ. ಆನು ಹೀಂಗೆ ಮಾಡಿದ್ದಕ್ಕೆ ಎನ್ನ ಮೇಲೆ ಕೇಸಾವ್ತಾ..??” ಹೇಳಿ ಸಹನಾ ಹೆದರಿಗೊಂಡು ಶರತ್ಚಂದ್ರನತ್ರೆ ಕೇಳಿತ್ತು. ಶರತ್ಚಂದ್ರ ಸಹನಾನ ಹತ್ತರೆ ಬಂದು,” ಇಷ್ಟು ಸಣ್ಣ ಪ್ರಾಯಲ್ಲಿ ಒಂದು ಕೂಸಿನ ಭವಿಷ್ಯ ರೂಪುಸುಲೆ ಒಳ್ಳೆ ದಾರಿ ಮಾಡಿಕೊಟ್ಟಿದೆ. ಪ್ರೌಡ್ ಆಫ್ ಯು!! ಇಲ್ಲದ್ರೆ ಅಕ್ಕ ಭಾವಂಗೆ ಬುದ್ಧಿ ಬರ್ತಿತ್ತಿಲ್ಲೆ. ಇನ್ನೆಂತ ಇದ್ದರೂ ಅಂಜಲಿಯ ಕರ್ಕೊಂಡು ಬರೆಕ್ಕು. ಮತ್ತೆ ಗೋಪಾಲಣ್ಣನ ಕೊಲೆಯ ಬಗ್ಗೆ ಎಂತಾರು ಕ್ಲೂ ಸಿಕ್ಕುತ್ತಾ ಹೇಳಿ ನೋಡೆಕ್ಕು.. ಭಾವ ನಾವು ಈಗ ಮೊದಲು ದಾರಿದೀಪಕ್ಕೆ ಹೋಪ.. ಅಂಜಲಿಯ ಕರಕ್ಕೊಂಡು ಬಪ್ಪ.. ಜೀಪು ತಪ್ಪಲೆ ಹೇಳ್ತೆ..” ಹೇಳಿಯಪ್ಪಗ ಶಾಂತ, ವೀಣಾ, ಸಹನಾ ಮೂರು ಜನವುದೆ ಅಂಜಲಿಯ ಕರಕ್ಕೊಂಡು ಬಪ್ಪಲೆ ಎಂಗಳೂ ಬತ್ತೆಯ ಹೇಳಿದ್ದಕ್ಕೆ ಶರತ್ಚಂದ್ರ ಬೇಡ ಹೇಳಿದ್ದನೇಲ್ಲೆ. ಎಲ್ಲರೂ ಅಂಜಲಿಯ ಕರಕ್ಕೊಂಡು ಬಪ್ಪಲೆ ದಾರಿದೀಪಕ್ಕೆ ಹೆರಟವು.
– ಮುಂದುವರೆತ್ತು..>>>>
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021