- ಉಪ್ಪುಸೊಳೆಯ ಸುತ್ತ - May 1, 2020
- ಮಂಗಳೂರು ಹವ್ಯಕ ಸಭೆಲಿ “ವಿಷು ಸಂಭ್ರಮದ ಸಂಗೀತ ಸೌರಭ” - May 1, 2017
- ಶಪಥಪರ್ವ – ಕ್ಯಾಮರಲ್ಲಿ - October 9, 2016
ನಮ್ಮ ಪ್ರೀತಿಯ ಬೈಲಿಂಗೆ ಐದು ವರ್ಷ ಕಳುದು ಆರನೇ ವರ್ಷತುಂಬುತ್ತಾ ಇದ್ದು ಹೇಳುವಗ ತುಂಬಾ ಕೊಶಿ ಆವ್ತಾ ಇದ್ದು, ಹೆಮ್ಮೆ ಅನಿಸುತ್ತಾಇದ್ದು. ಇದೀಗ ೨೦೧೪ ಇಂಗ್ಳೀಷ್ ತಿಂಗಳ ಹೊಸ ವರ್ಷ ಆದರೂ ನಮ್ಮ ಬೈಲಿನ ಮಟ್ಟಿಂಗೆ ಹುಟ್ಟು ಹಬ್ಬದ ಆಚರಣೆಯ ಲೆಕ್ಕಲ್ಲಿ ಸಂತೋಷದ ಸಮಯ. ನಮ್ಮ ಬೈಲು ಈ ಐದು ವರ್ಷಲ್ಲಿ ಅದೆಷ್ಟು ಬೆಳದ್ದೂ ಹೇಳಿ ನವಗೆಲ್ಲಾ ಗೊಂತಿದ್ದು. ನಮ್ಮ ಬೈಲಿಲ್ಲಿ ನೆಡೆತ್ತಾಇಪ್ಪ ಸಾಹಿತ್ಯ ಕೃಷಿಲಿ ಕುರುಳೆ ಸೆಸಿಗೊ ಮರ ಆಗಿ ಬೆಳದು ದೊಡ್ಡ ದೊಡ್ಡ ಗೊನೆಗಳ ಬಿಡುತ್ತಾಇದ್ದು, ಒಳ್ಳೆ ಫಸಲುಕೊಡ್ತಾಇದ್ದು. ಬೈಲಿಲ್ಲಿ ದಾರಿದೀಪವಾಗೆಂಡಿದ್ದಿದ್ದ ಒಂದಿಬ್ಬರು ಹಿರಿಯರು ಗತಿಸಿ ಹೋದ್ದದು ತುಂಬಾ ಬೇಜಾರಿನ ಸಂಗತಿ. ಕೆಲವು ಕುಂಞಿಬಾಬಗೊ ನಮ್ಮ ಬೈಲಿಲ್ಲಿ ಜನ್ಮತಾಳಿ ಮನಸ್ಸಿಂಗೆ ತುಂಬಾ ಸಂತೋಷ ಪಡುಸಿದ್ದವು. ಒಪ್ಪಣ್ಣ ಪ್ರತಿಷ್ಠಾನದ ಮೂಲಕ ಬೈಲು ಹಲವಾರು ಜೆನಕ್ಕೆ ಆರೋಗ್ಯ, ವಿದ್ಯೆ ಹೇಳಿ ಸಹಾಯವನ್ನೂ ಕೊಟ್ಟಿದು. ಸಾಹಿತ್ಯಕ್ಷೇತ್ರಲ್ಲಿ ಕೊಡುಗೆಯಾಗಿ ಮೂರು ಹವ್ಯಕ ಪುಸ್ತಕಂಗಳನ್ನೂ ಸಮಾಜಕ್ಕೆ ಕೊಟ್ಟಿದು. ಶ್ರೀಗುರುಗೊ ನಮ್ಮೆಲ್ಲೋರನ್ನೂ ಪ್ರೀತಿಲಿ ಹರಸೆಂಡು, ಅಂಬಗಂಬಗ ನವಗೆ ಒಪ್ಪವನ್ನೂ ಕೊಡ್ತಾಇಪ್ಪದು ಇನ್ನೂ ಸಂತೋಷದ ವಿಚಾರ. ಹೀಂಗಿಪ್ಪ ಬೈಲಿನ ಒಬ್ಬ ಸದಸ್ಯ ಹೇಳ್ಯೊಂಬಲೆ ಕೊಶಿ ಆವ್ತಾ ಇದ್ದು. ಈ ಹೊಸ ವರ್ಷ ಸುರು ಆವ್ತ ಗಡಿಬಿಡಿಲಿ ಎನಗೆ ಹೊಸ ಒಂದು ಅನುಭವ ಆಗಿತ್ತು, ಅದರ ನಿಂಗಳ ಒಟ್ಟಿಂಗೆ ಹಂಚೆಂಬೊ ಹೇಳಿ ಕಂಡತ್ತು.
ಎಲ್ಲೋರು ಹೊಸವರ್ಷದ ಆಗಮನದ ನಿರೀಕ್ಷೆಲಿ ಇಪ್ಪಸಮಯ, ಎಂಗೊಗೆ ಬೇಂಕಿಲ್ಲಿ ಹೊಸ ಅಧ್ಯಕ್ಷನ ನಿಯುಕ್ತಿ ಆಗಿ ಪ್ರತಿಯೊಬ್ಬ ಸಿಬ್ಬಂದಿ ಮೇಲುದೆ ಹೊಸ ಹೊಸ ಖಾತೆಗಳ ತೆರಶುತ್ತ ಜವಾಬ್ದಾರಿ. ಅದರೆಡೆಲಿ ಬ್ಯಾಂಕಿನ ಎಂಗಳ ಕನ್ನಡ ಬಳಗ ಸಿರಿಗಂಧದ ಲೆಕ್ಕಲ್ಲಿ ರಾಜ್ಯೋತ್ಸವ ನಿಮಿತ್ತ ಸ್ಪರ್ಧೆಗಳ ನೆಡಶುವ ಜವಾಬ್ದಾರಿ. ಬೇಜಾರಿನ ವಿಷಯ ಎಂತರ ಹೇಳಿರೆ ಹೊಸ ಅಧ್ಯಕ್ಷರ ಗಡಿಬಿಡಿಲಿ, ಅವರ ಒಪ್ಪಿಗೆ ಸಿಕ್ಕದ್ದೆ ಇನ್ನುದೆ ರಾಜ್ಯೋತ್ಸವ ಆಚರಣೆ, ಬಳಗದ ವಾರ್ಷಿಕೋತ್ಸವ ಮಾಡ್ಳೆ ಆಯಿದಿಲ್ಲೆ ! ಎಂಗೊ ಎಲ್ಲ ಸೇರಿ ಆಡೆಕಾಗಿದ್ದ “ಮಹಿಷಮರ್ದಿನಿ” ಯಕ್ಷಗಾನ ಬಯಲಾಟ ಇನ್ನುದೆ ಆಯಿದಿಲ್ಲೆ, ಹೊಸ ವರ್ಷಲ್ಲಿ ಜನವರಿಲಿ ಎಂಗಳ ಮಹಿಷಂಗೆ ಆರ್ಭಟೆಕೊಡ್ಳೆ ಅವಕಾಶ ಸಿಕ್ಕುತ್ತೋ ಹೇಳಿ ನೋಡೆಕಷ್ಟೆ. ಜನವರಿಲಿ ಹವ್ಯಕ ಸಭಾದ ವಾರ್ಷಿಕೋತ್ಸವಲ್ಲಿ ಹವ್ಯಕ ನಾಟಕಕ್ಕೆ ತಯಾರಿ. ಈ ಸರ್ತಿ ಹವ್ಯಕ ಸಭೆಲಿ, ಬೈಲಿಲ್ಲಿಒಪ್ಪಣ್ಣ ಮತ್ತೆ ಗೋಪಾಲಣ್ಣ ಬರದ ಎರಡು ಕತಗಳ ಸೇರುಸಿ ಬೋಚಬಾವನ ಅದರಲ್ಲಿ ಸೇರುಸೆಂಡು ಒಂದು ನಾಟಕ ತಯಾರು ಮಾಡಿದ್ದು ನಾವು. ಬೋಚಬಾವನ ರೂಪಲ್ಲಿ ವೇದಿಕೆಗೆ ಬಪ್ಪ ವಿಚಾರವುದೆ ಇತ್ತು ಆ ಸಮೆಲಿ. (ಬೋಚ ಭಾವನ ನಾಟಕ ಲಾಯಕಾಗಿತ್ತು, ಅದರ ಇನ್ನೊಂದರಿ ತೋರುಸುತ್ತೆ)
ಹೀಂಗಿಪ್ಪ ತೆರಕ್ಕಿಲ್ಲಿ ಇಪ್ಪಗ ಬೆಂಗ್ಳೂರಿಲ್ಲಿ ಇಂಜಿನಿಯರು ಕಲಿತ್ತ ಇಪ್ಪ ಎನ್ನ ಮಗ ಚಿನ್ನುವಿನ ಸಮೋಸ, “ಅಪ್ಪಾ ಮೋರೆಲಿ ಗುಳ್ಳೆ ಬಿದ್ದಿದು, ಕೋಟ್ಳೆ (ಚಿಕನ್ ಪಾಕ್ಸು) ಹೇಳಿ ಕಾಣ್ತು”. ಹೇಳಿ.
ಚೆ. ಒಟ್ರಾಸಿ ಸೋತತ್ತಾನೆ. ಅವನ ಐದನೇ ಸೆಮಿಸ್ಟರಿನ ದೊಡ್ಡ ಪರೀಕ್ಷೆ. ಈ ಸಮೆಲೇ ಇದು ಬರೆಕೋ ? ಡಾಕ್ಟ್ರ ಕಂಡಿದೆಯೋ ಪುಟ್ಟ, ಕೇಳಿದ್ದಕ್ಕೆ, ಅಷ್ಟೊಂದು ಜಾಸ್ತಿ ಬಿದ್ದಿದಿಲ್ಲೆ, ನಾಲ್ಕೈದು ಗುಳ್ಳೆ ಅಷ್ಟೆ, ಜ್ವರವುದೆ ಇಲ್ಲೆ, ಡಾಕ್ಟ್ರ ಮದ್ದುದೆ ತೆಕ್ಕೊಂಡಿದೆ” ಹೇಳಿ ಅಪ್ಪಗ ಸಮಾಧಾನ ಆತು. ಆನು ಇವಂಗೆ ಧೈರ್ಯ ಹೇಳ್ಲೆ ಇನ್ನು ಬೆಂಗ್ಳೂರಿಂಗೆ ಹೋಯೆಕಾಗಿ ಬಕ್ಕೊ ಹೇಳಿ ಗ್ರೇಶಿದ್ದವಂಗೆ ಸದ್ಯಕ್ಕೆ ಬೇಡ ಹೇಳಿ ಕಂಡತ್ತು. ನೋಡೊ, ಎಂತೂ ಆಗ, ಇನ್ನು ಹೆಚ್ಚು ಬೀಳದ್ರೆ ಸಾಕು ಮೈಲಿ, ಹೇಳಿ ಗ್ರೇಶಿದೆ. ಮರದಿನ ಉದಿಯಪ್ಪಗ ವಿಚಾರುಸಿದರೆ, ಸಂಗತಿ ಮೋಸವೇ. ಹಾಸ್ಟೆಲು ವಾರ್ಡನು ಬೇರೆ ರೂಮಿಲ್ಲಿ ನಿಂಬಲೆ ಹೇಳಿದ್ದು, ಮನೆಯವು ಬಂದರೆ ಒಳ್ಳೆದು ಹೇಳಿದ. ಕೂಡ್ಳೆ ನಾವು ನಾಲ್ಕು ದಿನ ರಜೆ ಹಾಕಿತ್ತು, ಮನೆಯ ಜವಾಬ್ದಾರಿ ಎಲ್ಲ ಹೆಂಡತ್ತಿ, ಸಣ್ಣ ಮಗನ ಕೈಲಿ ಕೊಟ್ಟೆ. ಸಣ್ಣ ಮಗ ಚಿಂತುವಿನ ಮೋರೆ ರಜಾ ಕುಂಞಿ ಆತು. ಕಂಪ್ಯೂಟರಿನ ಪಾಸುವರ್ಡು ಅವಂಗೆ ಕೊಟ್ಟೆ. ಚಾಕಲೇಟು, ಬದಲಿಂಗೆ ಪಾಸು ವರ್ಡ್ ! ಬೊಡಿವಗ ರಜಾ ಗೇಮು ಆಡ್ಳೆ, ಎಂತ ಹೇಳ್ತಿ? ಒಟ್ಟಾರೆ ಸಮಾದಾನ ಆಯೇಕಾನೆ. ರಜಾ ಕಹಿಬೇವಿನ ಸೊಪ್ಪುದೆ ಬೇಗಿಂಗೆ ಹಾಕೆಂಡು ಬೆಂಗ್ಳೂರು ಬಸ್ಸು ಹತ್ತಿತ್ತು.
ಉದಿಯಪ್ಪಗ ಎಮ್ ವಿ ಐ ಟಿ ಹಾಸ್ಟೆಲಿಂಗೆ , ಅವನ ಹೊಸಾ ರೂಮಿಂಗೆ ಬಂದರೆ ! ಯಬ್ಬೋ, ಅವನ ಮೋರೆಲಿ ಎದೆಲಿ, ಬೆನ್ನಿಲ್ಲಿ ಎಲ್ಲಾ ಗುಳ್ಳಗೊ. ಮೈಯಿಡೀ ಅರುಶಿನ ಅರುಶಿನ. ನಮ್ಮ, ಕೋಟ್ಳೆ (ಕಷ್ಟ ಕೋಟಲೆ)ಯ ರೌದ್ರ ಇಷ್ಟೆಲ್ಲಾ ಇದ್ದೊ ಹೇಳಿ ಆತು. ಅಲ್ಯಾಣ ಆಯಂಗೊ ಅವಂಗೆ ಕಹಿಬೇವುದೆ, ಅರುಶಿನವುದೆ ಕಡದು, ಮೈಗೆ ಕಿಟ್ಳೆ ಕೊಟ್ಟವಾಡ. ಅವನ ಕೈಗೆ ಒಂದು ಲಿಂಬೆ, ಮೋರಗೆ ಬೊಟ್ಟು ಹಾಕಲೆ ಕುಂಕುಮ ಎಲ್ಲವನ್ನುದೆ ಕೊಟ್ಟಿದವು ! ಅವು ಅಲ್ಲೇ ಹತ್ರಾಣ ದೇವಿಯ ದೇವಸ್ಥಾನಕ್ಕೆ ಹೋಗಿ ಪ್ರಸಾದ ತಂದಿದ್ದವು. ಅಲ್ಯಾಣ ಆಯಂಗಳ ಪ್ರೀತಿ, ಕರುಣೆ, ಸಹಕಾರ ಕಂಡು ಕೊಶಿಯಾತು. ಅವನ ಹಾಸಿಗೆಯ ಮೇಲೆಲ್ಲ, ಕಹಿಬೇವಿನ ಸೊಪ್ಪು ಹಾಕಿದ್ದವು, ಅದರ ಮೇಗೆ ಮನುಗಲೆ. (ಸಿನೆಮಾಲ್ಲಿ ಮದಲಾಣ ಇರುಳಿಂಗೆ ಹೂಗು ಹಾಕಿದ ಹಾಂಗೆ !).
ಸದ್ಯ, ಅವಂಗೆ ಜ್ವರ ತಲೆಬೇನೆ ಇತ್ತಿಲ್ಲೆ, ಹಾಂಗಾಗಿ ಅವಂಗೆ ಓದಲೆ, ಬರವಲೆ ಕಷ್ಟ ಆಯಿದಿಲ್ಲೆ.
ಮಗನ ಆರೈಕೆಯ ಹೆಳೆಲಿ ಎನ್ನ ಹಾಸ್ಟೆಲಿನ ಜೀವನ ಶುರುವಾತದ !! ಮಗಂಗೆ ಪಥ್ಯ ಮಾಡೆಕು, ಆದರೆ ಅಲ್ಲಿ ಎಂತ ಹೇಳಿ ಮಾಡುವೊ ? ಬೆಳ್ತಿಗೆ ಅನ್ನ, ದಾಲು ತೋವೆ, ಹಾಲು ಅಷ್ಟೆ. ನಮ್ಮ ಕುಚ್ಚಿಲಕ್ಕಿ ಗಂಜಿ ಅಲ್ಲಿ ಎಲ್ಲಿದ್ದು ? ಬೊಂಡ ಮತ್ತೆ ಹಣ್ಣುಗೊ. ದಿನಾಗಿಲು ಮನೆಲಿ ರುಚಿ ರುಚಿ ತೆಳ್ಳವು, ಉಂಡೆ, ಕೊಟ್ಟಿಗೆ, ಗೋಧಿದೋಸೆ ಎಲ್ಲ ತಿಂದೊಂಡಿದ್ದಿದ್ದ ಎನಗೆ, ಮಗನ ಹಾಸ್ಟೆಲಿನ ಒಣಕ್ಕಟೆ ಚಪಾತಿ, ಪೂರಿ, ಕೂರ್ಮ, ಖಾರ ಖಾರದ ಪುಳಿಯೋಗರೆ, ವಡೆ, ಬ್ರೆಡ್ಡು ಜಾಮು, ಗೋಬಿ ಮಂಚೂರಿ, ಮಸಾಲೆ ಬೆಂದಿಗೊ ಹೇಳಿ ಎಂತೆಂತದೋ ತಿಂತ ಯೋಗವೋ, ಕರ್ಮವೋ ಎನಗೆ ಗೊಂತಿಲ್ಲೆ. ಒಂದೊಂದು ದಿನ ಒಂದೊಂದು ಐಟಮು. ರುಚಿ ಎಲ್ಲವನ್ನೂ ನೋಡಿದೆ. ನವಗೆಷ್ಟು ಬೇಕು. ಒಂದು ಮುಷ್ಟಿ ಅಶನ ಅಷ್ಟೆ. ಮಸರು ಉಪ್ಪಿನ ಕಾಯಿ. ನಮ್ಮ ಬೋಚ ಭಾವಯ್ಯ ಬಂದಿದ್ರೆ ದಿನವೂ ಹೊಟ್ಟೆತುಂಬಾ ಹೊಡವಲಾವ್ತಿತು. ದೊಡ್ಡ ಫ್ಲಾಸ್ಕುಗಳ ಹಾಂಗಿಪ್ಪ ಲೋಟೆಲಿ, ಹಾಸ್ಟೆಲಿನ ಮಕ್ಕೊ ಎಲ್ಲ ಕಾಪಿ/ಚಾ/ಹಾಲಿನ ತೆಕ್ಕೊಂಡು ಹೋಗೆಂಡಿದ್ದಿದ್ದವು. ನಾನ್ನೂರು ಐನ್ನೂರು ಮಕ್ಕೊಗೆ ಅಲ್ಲಿ ನಿತ್ಯ ಸಮಾರಾಧನೆ. ಅಲ್ಯಾಣ ಮಸಾಲೆ ಊಟ, ಎನಗೆ ಎರಡು ದಿನಲ್ಲೇ ಬೊಡಿವಲೆ ಸುರುಆತು. ಅಂತೂ ಮಗನ ಹಾಸ್ಟೆಲಿನ ಕಷ್ಟ ಅಪ್ಪಂಗೆ ಗೊಂತಾವ್ತ ಹಾಂಗಾತದ !
ರೂಮಿನ ಇಡೀ ಉಡುಗಿ, ಉದ್ದಿ, ಅವನ ವಸ್ತ್ರ ತೊಳದು ಹಾಕಿದೆ. ಎನಗೆ ಮನಸ್ಸಿನ ಒಳವೇ ನೆಗೆ ಬಂತು. ಮಗಳಕ್ಕೊ ಇದ್ದ ಅಮ್ಮಂದ್ರು, ಅವರ ಬಾಣಂತನ ಮಾಡ್ತದರ ಗ್ರೇಶಿ ಹೋತು. ಅವನ ಸ್ನೇಹಿತರು ಅಂಬಗಂಬಗ ಬಂದು ದೂರವೇ ನಿಂದು ಅವನ ವಿಚಾರುಸೆಂಡಿದ್ದಿದ್ದವು. ಅವರಲ್ಲಿ ಹಾಸ್ಟೆಲಿನ ಕೆಲಸದವು ಹೇಳಿದವಾಡ, “ಹುಡುಗನ ಮೈ ಮೇಲೆ ಅಮ್ಮ ಬಂದಿದ್ದಾಳೆ, ಭಾರೀ ಜಾಗ್ರತೆಯಲ್ಲಿ ಇರಬೇಕು” ಹೇಳಿ. “ಆದರೆ ಇವನ ಮೈ ಮೇಲೆ ಬಂದ ಈ ಅಮ್ಮ ಸ್ವಲ್ಪ ಸಾಧು ಅಂತ ಕಾಣ್ತದೆ, ಹೆಚ್ಚು ರೌದ್ರ, ಅಬ್ಬರ ಇಲ್ಲ. ಹೆಚ್ಚು ಮಾತಾಡುವುದಿಲ್ಲ” ಹೇಳಿ ಅವಕ್ಕೆ ಸಮಾಧಾನ ಆಡ. ಎನ್ನ ಮಗ ಮೃದು ಭಾಷೆಯವ ಹೇಳಿ ಗೊಂತಿದ್ದ ಎನಗೆ ನೆಗೆ ಬಂದು ತಡೆಯ. ಇನ್ನೆಂತ, ಮೈಮೇಲೆ ಚಿಕ್ಕನ್ ಪಾಕ್ಸು ಅಮ್ಮ ಬಂದವು, ನಮ್ಮೂರಿನ ವಿಷ್ಣುಮೂರ್ತಿ ದೈವ, ಧೂಮಾವತಿ, ಗುಳಿಗಂಗಳ ಹಾಂಗೆ ಮೈ ದರುಸಿ ಆರ್ಭಟೆ ಕೊಡೆಕೊ ?!! ಪಾಪ ಅವನ ಕಷ್ಟ ಅವಂಗೆ. ಒಂದೊಂದು ಊರಿಲ್ಲಿ ಕೋಟ್ಳೆಗೆ ಒಂದೊಂದು ಹೆಸರು, ಒಂದೊಂದು ತರ, ಅಲ್ಯಾಣ ಅಲ್ಯಾಣ ಜೆನಂಗವಕ್ಕೆ ಬೇಕಾದ ಹಾಂಗೆ ಆಚಾರಂಗೊ. ನಾಲಗೆ ಸರೀ ತೆರ್ಚದ್ದ ಅಲ್ಯಾಣ ಅಂಗಡಿಯ ಒಂದು ಜೆನ ಅವನಿಗೆ “ತಿಕ್ಕ”ನ್ ಪಾಕ್ಸು ಹೇಳಿ ಹೇಳಿತ್ತು ಹೇಳಿ ಅವನ ಸ್ನೇಹಿತ ಒಬ್ಬ ನೆಗೆ ಮಾಡ್ಯೊಂಡಿದ್ದಿದ್ದ !
ಮರದಿನ ಮಧ್ಯಾಹ್ನ ಅವಂಗೆ ಪರೀಕ್ಷೆ. ಇರುಳು ಓದುವಗ, “ಇದಾ ಮೊಬೈಲಿಲ್ಲಿ ಗುರುಟೆಡ ಮಗಾ, ಪದ್ಯ ಹಾಕಿದ್ದು ಸಾಕು, ಸರೀ ಓದು”, ಎನ್ನ ಉಪದೇಶ ಸಾಗೆಂಡೇ ಇತ್ತು. “ಆತಪ್ಪಾ” ಅವನ ರೆಡಿಮೇಡು ಉತ್ತರ ಬಂದೊಂಡಿತ್ತು. ಕಾಲೇಜಿಲ್ಲಿ ಅವಂಗೆ ಬೇರೆ ರೂಮು ಕೊಟ್ಟು ಪರೀಕ್ಷೆಗೆ ಬರವಲೆ ಎಲ್ಲ ಏರ್ಪಾಡು ಮಾಡಿ ಉದಾರತೆ ತೋರುಸಿದವು ಕಾಲೇಜಿನವು. ಪ್ರತೀ ವರ್ಷವುದೆ ಹೀಂಗಿಪ್ಪ ಎರಡು ಮೂರು ಕೇಸುಗೊ ಇರ್ತಾಡ, ಹಾಂಗಾಗಿ ವಿಶೇಷ ಮರ್ಯಾದೆಲಿ ಕಂಡವು. ಬೆಶಿಲಿಂಗೆ ಅವ ನೆಡಕ್ಕೊಂಡು ಹೋಪದು ಬೇಡ ಹೇಳಿ ಮೂರು ನಿಮಿಷದ ನೆಡತ್ತ ದಾರಿಗೆ ರಿಕ್ಷಾವುದೆ ಮಾಡಿ ಕರಕ್ಕೊಂಡು ಹೋದೆ. ಮಗರಾಯ, ಅವನ ಸ್ನೇಹಿತರ ಕಣ್ಣು ತಪ್ಪುಸಲೆ ಬೇಕಾಗಿ ಒಂದು ಗಂಟೆ ಮದಲೇ ಪರೀಕ್ಷೆ ರೂಮಿಂಗೆ ಹೋಯೆಕಾಗಿ ಬಂತು. ಇವ ಬರೆತ್ತರ ನೋಡ್ಳೆ ಪ್ರತ್ಯೇಕ ಪರೀಕ್ಷಕಿಯುದೆ ಒಂದು ಬಂದಿತ್ತು. ಪಾಪ, ಆ ಕೂಚಕ್ಕನ ಅವಸ್ಥೆ, ಹೇಳಿ ಪ್ರಯೋಜನ ಇಲ್ಲೆ !! ಇವನ ಹತ್ರೆ ಕೂದರೆ, ಎಲ್ಯಾರು ಮಾರಿಯಮ್ಮ ಅದಕ್ಕೆ ಪಗರಿರೊ ? ಹೆದರಿ ಹೆದರಿ ಹದಿನೈದು ಫೀಟು ದೂರಲ್ಲಿ ಕೂದತ್ತಾಡ. ಪರೀಕ್ಷೆ ಎಲ್ಲ ಲಾಯಕು ಮಾಡಿದ ಮಗ. ಮತ್ತೆ ಉತ್ತರ ಪತ್ರಿಕೆ ಕೊಡುವಗ, ಒಂದು ಲಕ್ಕೋಟೆ ಕೊಟ್ಟು ಅದರಲ್ಲಿ ಪ್ರತ್ಯೇಕ ಹಾಕಲೆ ಹೇಳಿತ್ತಾಡ, ಆ ಲಲನಾ ಮಣಿ ! ಅಪ್ಪಪ್ಪಾ, ನಮ್ಮ ನಮ್ಮ ಜಾಗ್ರತೆ ನಾವು ಮಾಡೆಕಾನೆ. ಕೋಟ್ಳೆ ಮದಲೆ ಬಾರದ್ದ, ಅವನ ರೂಮು ಮೇಟು ಒಬ್ಬ, ಅವನ ಕಾಂಬಲೆ ಬಯಿಂದನೇ ಇಲ್ಲೆ. ಜಾಗ್ರತೆ ಬೇಕಪ್ಪ, ಮತ್ತೆ ಪರೀಕ್ಷೆಗೆ ತೊಂದರೆ ಆದರೆ. ಅಲ್ದೊ ?
ಪುನ: ಹಾಸ್ಟೆಲಿಂಗೆ ಬಪ್ಪಗ, ಅವನ ಹಾಸ್ಟೆಲಿನ ಕೆಲವು ಕೆಲಸದವು ಅವನ ನೋಡಿ, “ಅವ ಚಪ್ಪಲ್ ಯಾಕೆ ಹಾಕಿದ್ದಾನೆ? ಚಪ್ಪಲ್ ಹಾಕ್ಬಾರ್ದಲ್ವ” ? ಕೇಳಿದವು. ಅದೇನು ಹಾಗೆ ? ಕೇಳಿದೆ. “ಅಲ್ಲ, ಅಮ್ಮ ಅವನ ಮೈಮೇಲೆ ಇರುವಾಗ ಚಪ್ಪಲ್ ಹಾಕಿದ್ರೆ ಅವಳಿಗೆ ಮೈಲಿಗೆ ಆಗುತ್ತಲ್ಲ” ? ಹೇಂಗಿತ್ತು ಉತ್ತರ. ಚೆ, ಅಪ್ಪಾನೆ, ಶಬರಿಮಲಗೆ ಎಲ್ಲ ಹೋವ್ತವು ಚಪ್ಪಲ್ ಹಾಕಲಿಲ್ಲೇನೆ, ಹಾಂಗೆ ಆಯಿಕ್ಕು. “ನಮ್ಮೂರಲ್ಲಿ ಹಂಗೇನಿಲ್ಲ” ಹೇಳಿ ಸಮಾಧಾನ ಮಾಡಿದೆ ಅವರ. ಈ ಅಮ್ಮಂಗೆ, ಆನು ಉದಿಯಪ್ಪಗ ರಿಕ್ಷಾದ ವರೆಗೆ ಕೊಡೆ ಹಿಡುಕ್ಕೊಂಡು ಹೋದ್ದದು ನೆಂಪಾಗಿ ನೆಗೆಬಂತು.
ಮಗಂಗೆ ಅವನ ಪರೀಕ್ಷೆ ಸುಪರ್ ವೈಸರು ಕೇಳಿದ ಹಾಂಗೆ ಮೆಡಿಕಲ್ ಸರ್ಟಿಫಿಕೇಟು ಒಂದು ಬೇಕಾಗಿತ್ತು. ಅವ ಹೋದ ಡಾಕ್ಟ್ರಿನ ಹತ್ರಂಗೆ ಹೋಗಿ ಅವ ಕೊಟ್ಟ ಚೀಟಿ ಕೊಟ್ಟು, “ನಮ್ಮ ಹುಡುಗ”ನಿಗೆ ಚಿಕನ್ ಪಾಕ್ಸ್ ಅದಕ್ಕೆ ಒಂದು ಸರ್ಟಿಫಿಕೇಟು. ಹೇಳಿ ಅಪ್ಪಗ ಅದು ನೆಗೆ ಮಾಡಿ, “ನೀವೇ ಹುಡುಗನ ಹಾಗಿದ್ದೀರಿ, ಇವ ನಿಮ್ಮ ಹುಡುಗನೇನ್ರಿ”? ಹೇಳಿ ಕೇಳಿ ಅಪ್ಪಗ, ಎನಗೆ ಒಳ ಒಳವೇ ಕೊಶಿ ಆತು ! ಹುಡುಗರ ಹಾಸ್ಟೆಲು ಊಟ ಉಂಡ ಬೇಜಾರೆಲ್ಲ ಹೋತು.
ಮಗಂಗೆ ದಿನಾಲು ತಂಪಿಂಗೆ ಬೊಂಡ ಕುಡಿಯಲೆ ಕೊಡುವೊ, ಹೇಳಿರೆ, ಅಲ್ಲಿ ಅಂಗಡಿಲಿ ಬೊಂಡ ಎಲ್ಲಿದ್ದು ? ಹತ್ರಾಣ ಹುಣಸೆಮಾರನ ಹಳ್ಳಿಗೆ ನೆಡಕ್ಕೊಂಡು ಹೋಯೆಕು. ಎನ್ನ ಏವತ್ರಾಣ ವಾಕಿಂಗುದೆ ಆತು ಹೇಳಿ ಹಳ್ಳಿಗೆ, ಹತ್ರಾಣ ಸುಘಟ್ಟಕ್ಕೆ ದಿನಾಲು ಎನ್ನ ವಾಕಿಂಗು. ಮಗನ ರೂಮಿಲ್ಲಿ ದಿನವಿಡೀ ಕೂದು ಆನೆಂತ ಮಾಡ್ತದು ? ಅದೇ ಕಾಲೇಜಿಲ್ಲಿ ಕಲಿತ್ತ ಎನ್ನ ಅಣ್ಣನ ಮಗಳ ಹಾಸ್ಟೆಲುದೆ ಅಲ್ಲೇ ಹತ್ರೆ. ಅಲ್ಲಿ ಹತ್ರೆ ಒಂದು ತಳ್ಳುಗಾಡಿಲಿ ಬೊಂಡ ಸಿಕ್ಕೆಂಡಿತ್ತು. ಹಾಂಗೆ ದಿನಾಗಿಲು ಕೂಸುಗಳ ಹಾಸ್ಟೆಲಿನ ಹತ್ರಂಗುದೆ ಎನ್ನದೊಂದು ವಾಕಿಂಗು !! ಈ ಬೆಳಿಮೀಸೆ ಮಾವನ ದಿನಾಗಿಲು ಅಲ್ಲಿ ನೋಡಿ ಜೆನಂಗವಕ್ಕೆ ಆಶ್ಚರ್ಯ ಆತೋ ಎಂತೊ. ಅಲ್ಯಾಣ ಸೆಕ್ಯೂರಿಟಿ ಒಂದು ನೇಪಾಳದ್ದು, ಗುರ್ತವುದೆ ಆತು. ಪ್ರಕಾಶ್ ಗೋರ್ ಹೇಳಿ. ದಿನಾಗಿಲು ಬೊಂಡದ ಗಾಡಿಯವನ ಬಗ್ಗೆ ಅದರ ಹತ್ರೇ ಮಾಹಿತಿ ಸಿಕ್ಕೆಂಡಿತ್ತು. ಊರಿಂಗೆ ಬಂದು ಆರು ತಿಂಗಳಿಲ್ಲಿ ಎಷ್ಟು ಚೆಂದಕೆ ಕನ್ನಡ ಕಲ್ತಿದು ಗೊಂತಿದ್ದೊ ? ಕನ್ನಡಲ್ಲಿ ಸಣ್ಣ ಸಣ್ಣ ವಾಕ್ಯಂಗಳ ಹೇಳುತ್ತು ಅದು. ನಮ್ಮ ಕನ್ನಡದವೇ, ಕನ್ನಡ ಬತ್ತರುದೆ ಅದರ ಬಿಟ್ಟು ಇಂಗ್ಳೀಲ್ಲಿ ಟುಸ್ ಪುಸ್ ಹೇಳ್ತು ಕೇಳುವಗ ತುಂಬಾ ಬೇಜಾರಾವ್ತು.
ರೂಮಿಲ್ಲಿ ಬೊಂಡದ ಸಿಪ್ಪೆ, ಹಣ್ಣಿನ ಚೋಲಿ ಎಲ್ಲ ಒಂದು ತೊಟ್ಟೆಲಿ ಹಾಕಿ, ಉದಿಯಪ್ಪಗ ಅದರ ಅಲ್ಲಿ ಹಾಸ್ಟೆಲಿಲ್ಲಿ ಮಡಗಿದ ಕಸದ ಡಬ್ಬಿಲಿ ಹಾಕಿಕ್ಕಿ ಬಂದೆ. ಅರ್ಧ ಗಂಟೆ ಕಳುದಿಕ್ಕಿ ನೀರು ತಪ್ಪಲೆ ಹೋದರೆ, ಅಲ್ಲಿ ಎಂತಾಯಿದು ? ಬೊಂಡ, ಕಸ ಎಲ್ಲ ನೆಲಕ್ಕಲ್ಲಿ ಹರಡಿ ಚಾಂದ್ರಾಣ ಆಯಿದು. ಇಡೀ ಹಟ್ಟಿ ಹಾಂಗಾಯಿದು. ಚಿ. ಇಲ್ಯಾಣ ಹಾಸ್ಟೆಲಿನ ಮಕ್ಕಳ ಹೇಸಿಗೆ ಹುಟ್ಟುಸುವ ಈ ಕೆಲಸಕ್ಕೆ ಬೇಜಾರಾಗಿ, ಮಗನ ಹತ್ರೆ ಬಂದು ಹೇಳಿದೆ. ಅವ ನೆಗೆ ಮಾಡಿ, ಅದು ಮಂಗಂಗಳ ಕಾರ್ಬಾರು ಅಪ್ಪ, ನಿಂಗೊ ಎಂತಕೆ ತಲೆ ಬೆಶಿ ಮಾಡ್ತಿ. ಹೇಳಿದ. ಮತ್ತೆ ನೋಡಿದರೆ, ಮಂಗಂಗಳ ದೊಡ್ಡ ಕುಟುಂಬವೇ ಅಲ್ಲಿತ್ತು.
ಉದಿಯಪ್ಪಗ ಕಾಪಿ ಕುಡಿವಲೆ, ಹೋದರೆ ಹಾಸ್ಟೆಲು ಮೇಟುಗೊ ಎಲ್ಲ ಎನ್ನ ನೋಡುಗು. ಇದೇವದು ಹೊಸ ಜೆನ ಹೇಳಿ. ಕೆಲವು ಜೆನ ಹೇಳಲೆ ಸುರುಮಾಡಿದವು. ಅದು “ಅಮ್ಮ ಬಂದ ಹುಡುಗನ ಅಪ್ಪ” ಹೇಳಿ. ಅಲ್ಲಿ ಹೋಗಿ ಕೂದರೆ, ಒಂದೊಂದು ಟೇಬಿಲಿಲ್ಲಿ ಒಂದೊಂದು ತರದ ಜೆನ. ಕರಿಯವು, ಬೆಳಿಯವು, ಸಣ್ಣ ಕಣ್ಣಿನವು, ಕುರುಚಲು ಗೆಡ್ಡದವು, ಕೆದರಿದ ಕೂದಲಿನವು, ಸಾಣೆ ಮಂಡೆಯವು, ದಪ್ಪ ಕನ್ನಡಕ್ಕದವು, ವಿಚಿತ್ರ ಬನಿಯನ್ನಿನವು, ಬರೀ ಬರ್ಮುಡದವು, ಹಿಂದಿಯವು, ಭಾಷೆಯೇ ಇಲ್ಲದ್ದವು, ತಮಿಳರು, ಮಲೆಯಾಳಿಗೊ. ವಿವಿಧತೆಲಿ ಏಕತೆ, ಎಲ್ಲೋರು ಇಂಜಿನಿಯರು ಕಲಿತ್ತವು.
ಮಗಂಗೆ ಎರಡ್ನೆ ಪರೀಕ್ಷೆಯುದೆ, ಅಮ್ಮನ ಆವಾಂತರಲ್ಲೇ ಕಳುದತ್ತು. ಸದ್ಯ, ಬೆಂಗಳೂರಿನ ಚಳಿಯ ವಾತಾವರಣ ಆದ್ದರಿಂದ ಮಗಂಗೆ ಅಷ್ಟೊಂದು ಕಿರಿಕಿರಿ ಆದಿಲ್ಲೆ. ಅಮ್ಮನ ಅಬ್ಬರ ಕೆಳ ಇಳುದತ್ತು. ಸಾಧಾರಣ ಗುಣವುದೆ ಆಗೆಂಡು ಬಂತು. ಮತ್ತುದೆ ಎರಡು ದಿನ ಮುಂದೆ ದೂಡಿ ಆದಿತ್ಯವಾರ ಊರಿಂಗೆ ಹೆರಟೆ. ಇನ್ನುದೆ ಎರಡು ಪರೀಕ್ಷೆ ಬಾಕಿ ಇದ್ದ ಕಾರಣ ಅವಂಗೆ ಬಪ್ಪಲಾತಿಲ್ಲೆ. ಅವನ ಬಿಟ್ಟಿಕ್ಕಿ ಹೆರಟು ಬಪ್ಪಗ, ಹೆಣ್ಣು ಒಪ್ಪುಸಿ ಕೊಡುವ ಅಪ್ಪ ಅಮ್ಮನ ಮನಸಿನಾಳದ ವೇದನೆ ಹೇಂಗಿಕ್ಕು ಹೇಳಿ ಎನಗೆ ಅರ್ಥ ಆದ್ದಂತೂ ನಿಜ !! ಒಂದು ವಾರ, ಹಾಸ್ಟೆಲಿನ ವಾಸದ ಅನುಭವ ಪಡಕ್ಕೊಂಡು, ಮಗನ ಬಾಣಂತನವನ್ನೂ ಮುಗುಶಿ ಊರಿಂಗೆ ಬಂದೆ. ಊರಿಂಗೆ ಬಂದರೆ, ಮನೆಲಿ ಎನ್ನ ಮಗನ ಅಮ್ಮ ಹೇಳಿತ್ತು, “ರಜಾ ತೋರ ಆಯಿದಿರೊ” ಹೇಳಿ !! ಹಾಸ್ಟೆಲಿನ ಊಟ ಅಲ್ಲದೊ ?! ಉಂಡದು ರಜಾ ಹೆಚ್ಚಾತಾಯಿಕ್ಕು !
ಮರದಿನಂದ ಸುರುವಾತು, ಕಾವುಬೈಲಿನ ಉದೀಯಪ್ಪಾಣ ನಿತ್ಯ ಧನುಪೂಜೆಯ ದರ್ಶನ, ಕೊಡೆಯಾಲದ ಬೆಶಿ ಬೆಶಿಯ ವಾತಾವರಣ. ಇಲ್ಯಾಣ ಹೊಂಡ ಗುಂಡಿಯ ಮಾರ್ಗಂಗಳಲ್ಲಿ ನೆಡವ ವಾಹನದ ನರ್ತನ. ಎಲ್ಲವುದೆ. ಎನ್ನ ಬೆಂಗಳೂರು ಪಯಣಂದಾಗಿ ವಿಶ್ವನುಡಿಸಿರಿ, ನೀರ್ಚಾಲು ಶಾಲೆಯ ಶತಮಾನೋತ್ಸವ ಎಲ್ಲವುದೆ ತಪ್ಪಿ ಹೋತು. ಎನ್ನ ವಿಷಯ ಹಾಂಗೆ ಇರಳಿ. ಎಲ್ಲೋರಿಂಗು ಹೊಸ ವರುಷ ಹೊಸ ಹರುಷ ತರಲಿ.
ಇದು ಬಾರೀ ಲಾಯ್ಕಾಯಿದು… ಹೀಂಗಿಪ್ಪದು ಇನ್ನುದೇ ಬರಲಿ…
ಶ್ಯಾಮಣ್ಣ, “ಕೋಟ್ಳೆ” ಒಂದರಿ ಮಾಂತ್ರ ಬಪ್ಪದಾಡ ! ಎಂತ ಮಾಡುವೊ ಅಪ್ಪಾ ಈಗ.
ಅದು ಭಾವ… ಒಂದರಿ ಕೋಟ್ಳೆ ಬಂದಪ್ಪಗ ಆದು ಸರಿಯಾದ ರೀತಿಲಿ ಗುಣ ಆಯೆಕ್ಕಡಾ… ಇಲ್ಲದ್ದರೆ ಮುಂದಂಗೆ ಇನ್ನೊಂದರಿ ಬಪ್ಪ ಚಾನ್ಸು ಇರ್ತಡಾ…
ಅದು ಏವಗ ಹಾಡಿದ್ದಪ್ಪಾ, ನೆಂಪಾವ್ತಿಲ್ಲೇನೆ. ಶರ್ಮಪ್ಪಚ್ಚಿಯ ಒಗ್ಗರಣೆಗೆ ಧನ್ಯವಾದಂಗೊ.
[ಒಂದು ವಾರ, ಹಾಸ್ಟೆಲಿನ ವಾಸದ ಅನುಭವ ಪಡಕ್ಕೊಂಡು, ಮಗನ ಬಾಣಂತನವನ್ನೂ ಮುಗುಶಿ ಊರಿಂಗೆ ಬಂದೆ. ಊರಿಂಗೆ ಬಂದರೆ, ಮನೆಲಿ ಎನ್ನ ಮಗನ ಅಮ್ಮ ಹೇಳಿತ್ತು, “ರಜಾ ತೋರ ಆಯಿದಿರೊ” ಹೇಳಿ !! ಹಾಸ್ಟೆಲಿನ ಊಟ ಅಲ್ಲದೊ ?! ಉಂಡದು ರಜಾ ಹೆಚ್ಚಾತಾಯಿಕ್ಕು !] ಅ೦ತೂ ಹಾಸ್ಟೆಲ್ಲಿ ದ್ವಿ-ಪಾತ್ರಾಭಿನಯ ಮಾಡಿಕ್ಕಿ ಬ೦ದಿ ಹೇದಾತು!ಬಾಲ್ಯದ ಶಾಲಾ ಜೀವನಲ್ಲಿ “ ಏಕ ಪಾತ್ರಾಭಿನಯ ಮಾಡಿದ ಸುದ್ದಿಯೇನೂ ಕ೦ಡತ್ತಿಲ್ಲೆ!ನಿ೦ಗಳ ದ್ವಿ-ಪಾತ್ರಾಭಿನಯ ಬಾರೀ ರೈಸಿದ್ದು ಹೇದು ವಿವರಣೇ೦ದ ಗೊ೦ತಾತು!ನೈಜ ಘಟನೆಯೇ ಆದರೂ (?)ಒಳ್ಳೆಯೆ ಹರಟೆಯ ಗುಣ೦ಗಳಿ೦ದ ಲೇಖನ ತು೦ಬಾ ಕೊಶಿಕೊಟ್ಟತ್ತು. ಬೊಳು೦ಬು ಭಾವ೦ಗೆ ಅಭಿನ೦ದನಗೊ.ಹರೇ ರಾಮ.
ಅನುಭವ ಕಥನ ಲಾಯಿಕಕೆ ನಿರೂಪಣೆ ಆಯಿದು.
ಅಕೇರಿಗೆ “ನಿನ್ನಂಥ ಅಪ್ಪ ಇಲ್ಲಾ….ನಿನ್ನಂಥ ಮಗನೂ ಇಲ್ಲಾ” ಹೇಳಿ ಡ್ಯೂಯೆಟ್ ಹಾಡಿದ ಸುದ್ದಿ ಇಲ್ಲೆ ಇದ್ರಲ್ಲಿ 🙂
ಅನುಭವ ಸೂಪರ್ ಆಯ್ದು !
(ಸಿನೆಮಾಲ್ಲಿ ಮದಲಾಣ ಇರುಳಿಂಗೆ ಹೂಗು ಹಾಕಿದ ಹಾಂಗೆ !)
ಕಾಡುಮನುಷ್ಯ ಅಥವಾ ಚೀಂಪಾಂಜಿ ಮನಗಿದ ಹಾಂಗೆ ಕಂಡಿದಿಲ್ಲೆ ಸದ್ಯ !!! ಕಲ್ಪನೆ ಮಾಡಿದ್ರುದೆ ಉಚ್ಚೋಪಮೆ ಮಾಡೆಕು. ನೀಚೋಪಮೆ ಮಾಡ್ಲಾಗ. ಸರಿ.. ಸರಿ…
ಕಳೆದವಾರ ಬೈಟೂ ಬೈಲಿಲಿ ,ನಿ೦ಗಳ ಮ೦ರ್ಥಿ(ಮ೦ಥರೆ)ಸ್ವಗತ -ಕನಸು-ಕಲ್ಪನೆ-ಒನ್ಸ್ ಮೋರ್ ಹೇಳುವಾ೦ಗೆ ಇತ್ತು.
ಖುಷಿಯಾತು….. ನಿಂಗಳೆಲ್ಲರ ಪ್ರೋತ್ಸಾಹವೇ ಎನ್ನ ಮುಂದಿನ ಲೇಖನಕ್ಕೆ ಸ್ಫೂರ್ತಿ ! ಧನ್ಯವಾದಂಗೊ.
ಅನುಭವದ ನಿರೂಪಣೆ ತುಂಬಾ ಲವಲವಿಕೆಂದ ಕೂಡಿದ್ದು.ವಿವಿಧ ರಂಗಂಗಳಲ್ಲಿ ಕೆಲಸ ಮಾಡ್ತಾ ಇಪ್ಪದರಿಂದ ಇದು ಸಾಧ್ಯ ಆಯಿದು ಹೇದು ಎನ್ನ ಭಾವನೆ.ಅಭಿನಂದನೆಗೊ ಬೊಳುಂಬು ಭಾವ.
ಲೇಖನ ಭಾರಿ ಲಾಯಿಕ ಆಯಿದು.. ಃ) ಅನುಭವವ ಲಾಯಿಕಲಿ ಬರದ್ದಿ..
ಹೃದಯಸ್ಪರ್ಶೀ ಲೇಖನಕ್ಕೊಂದು ಒಪ್ಪ. ಕತೆ ಇಡೀ ಓದಿದ ಮತ್ತೆ ಒಂದು ಮಿನಿಟು ಮಾತೇ ಹೆರಡ
enna mane yelahanka new townli iddu .innodari Banglore bandare ba aata .
mob:9449963133
ವಾವ್, ಪಿ.ಗಣಪತಿ, ಎನ್ನ ಚಡ್ಡಿ ದೋಸ್ತಿ, ಒಪ್ಪಣ್ಣ ಬೈಲಿಲ್ಲಿ ಇಪ್ಪದು ಕಂಡು ಭಾರೀ ಕೊಶಿ ಆತು. ಒಪ್ಪ ಕೊಟ್ಟದಕ್ಕೆ ಧನ್ಯವಾದಂಗೊ. ಮನ್ನೆ ಬಂದ ಹೆಳೆಲಿ ಇನ್ನೊಂದರಿ ಬೆಂಗಳೂರಿಂಗೆ ಬಪ್ಪಲೆ ಇಲ್ಲೆ. ಬೇರೆ ವಿಷಯಲ್ಲಿ ಬಂದರೆ ಖಂಡಿತಾ ಬತ್ತೆ.
enna mane yelahanka new town iddu .innodari Banglore bandare ba aata .
mob:9449963133
ಬೊಳುಂಬು ಮಾವನ ಹಾಸ್ಟೆಲ್ ವಾಸದ ಅನುಭವ ಕಥನ ಭಾರೀ ಲಾಯ್ಕ ಆಯಿದು “, “ನೀವೇ ಹುಡುಗನ ಹಾಗಿದ್ದೀರಿ, ಇವ ನಿಮ್ಮ ಹುಡುಗನೇನ್ರಿ”? ಹೇಳಿ ಕೇಳಿ ಅಪ್ಪಗ, ಎನಗೆ ಒಳ ಒಳವೇ ಕೊಶಿ ಆತು ! ಹುಡುಗರ ಹಾಸ್ಟೆಲು ಊಟ ಉಂಡ ಬೇಜಾರೆಲ್ಲ ಹೋತು.”ಇದರ ಓದಿ ನೆಗೆ ಬಂತು !
ಅಂತೂ ಬೆಂಗ್ಳೂರಿಲ್ಲಿಪ್ಪ ಮಗಂಗೆ ಅಮ್ಮನೂ ಅಪ್ಪನೂ ಒಟ್ಟಿಂಗೆ ಚಾಕರಿ ಮಾಡಿ ಕೊನೆಗೂ ಅಪ್ಪನೇ ಗೆದ್ದದು ಸಂತೋಷ ಆತು. ಹರೇ ರಾಮ.