Oppanna.com

ಪೆನ್ಸಿಲು ಭಾಗ – ಎರಡು

ಬರದೋರು :   ಶ್ಯಾಮಣ್ಣ    on   28/03/2013    23 ಒಪ್ಪಂಗೊ

ಶ್ಯಾಮಣ್ಣ

(ಈ ಕತೆಲಿ ಬಪ್ಪ ಎಲ್ಲ ವ್ಯಕ್ತಿಗಳುದೇ, ಸ್ಥಳ, ಘಟನೆಗಳುದೇ ಕೇವಲ ಕಾಲ್ಪನಿಕ, ಯಾವದೇ ವ್ಯಕ್ತಿ ಅತವಾ ಘಟನೆಗೆ ಸಾಜ ಕಂಡತ್ತು ಹೇಳಿ ಆದರೆ ಅದು ಕೇವಲ ಕಾಕತಾಳೀಯ. ಈ ಕತೆ ಐವತ್ತು ವರ್ಷದ ಮೊದಲು ನಡದ್ದು ಹೇಳಿ ತಿಳ್ಕೊಳ್ಳೆಕ್ಕು.)

*****************************************************************
(ಇಲ್ಯಾಣವರೆಗೆ…)

ನಾಣಿ ಬೇಗಿನ ಒಳ ಇತ್ತದರ ಎಲ್ಲ ಮಾಷ್ಟನ ಎದುರು ಸೊರುಗಿದ°.

‘ಟಪಕ್’ ಹೇಳಿ ಒಳುದ ಪುಸ್ತಕಂಗಳ ಒಟ್ಟಿಂಗೆ ಮಾಷ್ಟನ ಕಣ್ಣಿನ ಎದುರು ಪೆನ್ಸಿಲು ಉರುಳಿ ಬಿದ್ದತ್ತು.

ಹೊಸಾ ಪೆನ್ಸಿಲು, ಕೆಂಪು ಬಣ್ಣದ್ದು, ಕಪ್ಪು ಉದ್ದದ ಗೀಟು ಇಪ್ಪದು, ಹಿಂದಾಣ ಹೊಡೆಲಿ ಒಂದು ಇಂಚು ಉದ್ದಕ್ಕೆ ಕಪ್ಪು ಬಣ್ಣ ಇಪ್ಪದು, ಚಿನ್ನದ ಕಲರಿಲಿ ‘ನಟರಾಜ’ ಹೇಳಿ ಇಂಗ್ಲಿಷಿಲಿ ಬರಕ್ಕೊಂಡಿಪ್ಪ ಪೆನ್ಸಿಲು.

ದಾಸಪ್ಪ ಮಾಷ್ಟನ ಕಣ್ಣು ನೂರಿಪ್ಪತ್ತು ವೋಲ್ಟಿನ ಬಜಾಜ್ ಬಲ್ಬಿನ ಹಾಂಗೆ ಹೊಳತ್ತು.

ಒಂದು ಸರ್ತಿ ನಾಣಿಯ ಕೆಕ್ಕರಿಸಿ ನೋಡಿತ್ತು.

ನಾಣಿಗೆ ಮೈಯ ರೋಮ ಎಲ್ಲ ಕುತ್ತ ಆತು… ಹೆದರಿ…

"ಏನಾ? ಎಲ್ಲಿಂದ್ಲಾ ಇದು ಪೆನ್ಸಿಲು?" ದಾಸಪ್ಪ ಮಾಷ್ಟನ ಸ್ವರಕ್ಕೆ ಆರಿಂಗು ಚಳಿ ಹಿಡಿಯೆಕ್ಕು…

"ಅ…ಅದು ನಂದು…. ನಂಗೆ ಕಿ.. ಕಿಟ್ಟಣ್ಣ ಕೊಟ್ಟದ್ದು….."

"ಯಾರಾ ಅದು ಕಿಟ್ಟಣ್ಣ…"

"… ನ… ನಮ್ಮ ಮ.. ಮನೆ ಹತ್ರದವ್ನು… ಸಾ…"

"ಏನಾ..? ನೀನು ಹೇಳಿದ್ದೆಲ್ಲ ಎಂತ ನಾನು ನಂಬ್ತೇನಾ…"

ದಾಸಪ್ಪ ಮಾಷ್ಟನ ಪಿತ್ತ ಏರ್ತಾ ಇದ್ದು.

"ಎಷ್ಟೊತ್ತಿಗಾ ನೀನು ಅವ್ಳ ಪೆನ್ಸಿಲು ತೆಗ್ದದ್ದು?" ಸ್ವರ ಇನ್ನುದೆ ಏರಿತ್ತು ದಾಸಪ್ಪಂದು.

"……….ಇಲ್ಲ… ಇಲ್ಲ… ನಾನು ತೆಗಿಲಿಲ್ಲ…."

"ತೆಗೀಲಿಲ್ವಾ…?"

ರ್ರಪ್….ಸುರುವಾಣ ಪೆಟ್ಟು… ನಾಣಿಯ ಬೆನ್ನಿಂಗೆ…

“ಅಯ್ಯೋ… ಅಮ್ಮಾ…ನಾ ತೆಗೀಲಿಲ್ಲಾ…..”

ರ್ರಪ್… ರ್ರಪ್..….ಇನ್ನೆರಡು ಬಿದ್ದತ್ತು… ಈಸರ್ತಿ ಕುಂಡೆ ಮೇಗೆ….

“ಹೇಳು ಸತ್ಯ ಹೇಳು, ನೀನೇ ಅಲ್ವಾ ತೆಗ್ದದ್ದು ಅವಳ ಪೆನ್ಸಿಲು.. ಸತ್ಯ ಹೇಳು..” ದಾಸಪ್ಪನ ಗರ್ಜನೆ ಆಚೀಚಿನ ಕ್ಲಾಸುಗೊಕ್ಕು ಕೇಳುಗು.pettu

ಈಡೀ ಕ್ಲಾಸು ಗಪ್ ಚುಪ್…. ಎಳ್ಳು ಕಾಳು ಬಿದ್ದರೂ ಶಬ್ದ ಕೇಳುಗು.

ಕೆಲವು ಮಕ್ಕೊಗೆ ತಲೆ ಎತ್ತಿ ಮಾಷ್ಟನ ನೋಡ್ಲೂ ದೈರ್ಯ ಇಲ್ಲೆ.

ನಾಣಿಯ ಬೊಬ್ಬೆ ತಾರಕಕ್ಕೆ ಏರಿತ್ತು.

“ಇಲ್ಲಾ ಸಾರ್ ಇಲ್ಲಾಆಆಆಆಅ….. ನಾನು ತೆಗೀಲಿಲ್ಲಾಆಆಆಅ… ಅದು ಕಿಟ್ಟಣ್ಣ ಕೊಟ್ಟದ್ದೂಊಊಊ…”

ರ್ರಪ್… ರ್ರಪ್..ರಪ …ರಪ್…. ಇನ್ನೂ ನಾಲ್ಕು ಬೆನ್ನಿಂಗೆ ಬಿದ್ದತ್ತು.

ಯಬ್ಬೋ… ನಾಣಿಯ ಅವಸ್ತೆ ನೋಡ್ಲೆಡಿಯ…. ಕೆಲವು ಮಕ್ಕ ಅಲ್ಲಿಯೇ ಸಣ್ಣಕ್ಕೆ ಕೂಗ್ಲೆ ಸುರುಮಾಡಿದವು.

ಈ ಮಾಷ್ಟಂಗೆಂತ ಸ್ವಯ ಇಲ್ಲೆಯ… ಅವನೇ ತೆಗದ್ದು ಹೇಳ್ಲೆ ಎಂತ ಪ್ರೂಫು ಇದ್ದು? ಸರೀ ಕೇಳೆಕ್ಕಾ ಬೇಡದಾ?
ಆರತಿಯ ಹತ್ರೆ ಆದರೂ “ಇದು ನಿಂದಾ ಪೆನ್ಸಿಲು ಹೇಳಿ” ಕೇಳೆಕ್ಕಾ ಬೇಡದಾ? ಅದೆಂತ ಇಲ್ಲೆ… ಸೀದ ನಾಣಿಯೇ ಕಳ್ಳ° ಹೇಳುವ ಹಾಂಗೆ ಅವಂಗೆ ಎಂತರ ಅಕಲು ಇಲ್ಲದ್ದೋರ ಹಾಂಗೆ, ಹಾಲುಕೊಡದ್ದ ಎಮ್ಮೆಗೆ ಬಡಿವ ಹಾಂಗೆ ಬಡಿವದು? ರಕ್ಕಸ°…

“ಹೇಳು.. ನೀನೆ ತೆಗ್ದದ್ದು ಹೇಳು… ಬೊಗಳ್ತಿಯಾ ಇಲ್ವಾ..ಅ°….”

ರ್ರಪ್… ರ್ರಪ್..ರಪ …ರಪ…ರಪ.. (ಎಷ್ಟಾತು ಒಟ್ಟು? ಲೆಕ್ಕ ಮಡಿಕ್ಕೊಳ್ಳಿ…)
ಬೀಳ್ತಾ ಇದ್ದು ನಾಣಿಯ ಬೆನ್ನಿಂಗೆ..

ಆರತಿಗೆ ಎಂತ ಮಾಡೆಕು ಹೇಳಿ ಗೊಂತಾವ್ತಾ ಇಲ್ಲೆ… ಅದು ಗ್ರೇಷಿದ್ದೂ ಕೂಡಾ ಇಲ್ಲೆ… ನಾಣಿಯ ಚೀಲಲ್ಲಿ ಹೀಂಗೊಂದು ಹೊಸ ಪೆನ್ಸಿಲು ಇಕ್ಕು ಹೇಳಿ. ಇಷ್ಟು ಸಮೆಯಲ್ಲಿ ಒಂದು ಸರ್ತಿಯೂ ಹೊಸ ಪೆನ್ಸಿಲು ಇಲ್ಲಾದ್ದೋನ ಕೈಲಿ ಈಗ ಸಡನ್ನಾಗಿ ಹೊಸ ಪೆನ್ಸಿಲು ಇದ್ದು ಹೇಳಿ ಆದರೆ ಆರಿಂಗಾದ್ರೂ ಸಂಶಯ ಬಾರದ್ದೆ ಇಕ್ಕಾ?

ಆದರೆ ಆರತಿಗೆ ಸಂಶಯ ಇಲ್ಲೆ… ನಾಣಿ ಕದ್ದದಲ್ಲ, ದಿನೇಸ°ನೇ ಕದ್ದದು ಹೇಳಿ ಅದಕ್ಕೆ ಗೊಂತಿದ್ದು.

ಆದರೆ ಹೇಂಗೆ ಹೇಳುದು ಮಾಷ್ಟನ ಹತ್ತರೆ…” ಸಾರ್.. ನಿಮ್ಮ ಮಗ ಕದ್ದದ್ದು” ಹೇಳಿ…

ದಿನೇಸ°ನ ಹತ್ತರೆ ಆ ಪೆನ್ಸಿಲು ಇದ್ದು ಹೇಳಿ ಪ್ರೂಫು ತೋರುಸೆಡದ?. ಲತ° ಸಾಕ್ಷಿ ಹೇಳುಗಾ? ಹ… ಮಹಾ ಹೆದರುಪುಕ್ಕಲಿ ಅದು. ಆರತಿಗೆ ಹೇಳಿದ್ದೇ “ನಾನು ಹೇಳಿದ್ದೂಂತ ಯಾರಿಗೂ ಹೇಳ್ಬೇಡ” ಹೇಳಿಕೊಂಡು.

ಇನ್ನು ಆ ದಿನೇಸನಾ, ಅದು ಮಹಾ ಕದೀಮ. ಕದ್ದ ಮಾಲಿನ ಬೇಗಿಲಿ ಆಗಲೀ, ಕಿಸೆಲಿ ಆಗಲಿ ಮಡಿಕ್ಕೊಂಡು ಸಿಕ್ಕಿಬೀಳುವ ಜಾತಿ ಅಲ್ಲ. ಕದ್ದ ರಜ ಹೊತ್ತಿಲಿ ಕದ್ದಮಾಲಿಂಗೆ ಯೆವಸ್ತೆ ಮಾಡಿ ಆವ್ತು ಅದಕ್ಕೆ.ನಾಣಿ ಕದ್ದದು ಅಲ್ಲ ಹೇಳಿ ಮಾಡಿರೆ ಬೇರೆ ಆರಾದ್ರೂ ಸಿಕ್ಕಿಬೀಳುಗು.

ನಾಣಿ ಕದ್ದದು ಅಲ್ಲ ಹೇಳಿ ಮಾಡೆಕ್ಕಾರೆ ಈಗ ಆರತಿ ಎಂತಾರು ಸುಳ್ಳು ಹೇಳೆಕ್ಕಾವ್ತಷ್ಟೆ.

ದಾಸಪ್ಪಂಗೆ ಎಂತ ಆಷ್ಟು ಏರಿದ್ದು? ದಿನೇಸ° ಕದ್ದದು ಹೇಳಿ ಗೊಂತಿದ್ದು ಅದಕ್ಕೆ. ಆರೂ ಹೇಳೆಕ್ಕು ಹೇಳಿ ಇಲ್ಲೆ. ಹಾಂಗೇಳಿ ಸೀದಾ ದಿನೇಸ°ನ ಹಿಡುದು ಹಾಕಿತ್ತೋ, ಮತ್ತೆ ಮನೆಲಿ ಹೆಂಡತ್ತಿ ಸುಗುಣನ ಕೈಂದ ಅದು ಪೂಜೆ, ಪ್ರಸಾದ ಎಲ್ಲ ತೆಕ್ಕೊಳ್ಳೆಕ್ಕಾವ್ತು. ಈಗ ಹೇಂಗಾರೂ ನಾಣಿಯ ಕೈಲಿ “ಹೌದು… ನಾನೇ ಕದ್ದದ್ದು” ಹೇಳಿ ಹೇಳಿಸಿ ಬಿಟ್ರೆ, ಅದು ಬಚಾವದ.

ಮತ್ತೆ ನಾಣಿಯ ಹೊಡೆಂದ ಕೇಳಿಕೊಂಡು ಬಪ್ಪವು ಆರೂ ಇಲ್ಲೆ. ಅದೂ ದಾಸಪ್ಪ ಮಾಷ್ಟನ ಹತ್ರೆ?

“ಹೇಳು. ನಾನೇ ಕದ್ದದ್ದೂಂತ… ಒಪ್ಪಿಕೋ…” ದಾಸಪ್ಪನ ಆರ್ಭಟೆ.

“ಇಲ್ಲಾ… ಇ.. ಇಲ್ಲಾ… ನಾನು ಕದೀಲಿಲ್ಲ….” ನಾಣಿ ಬೊಬ್ಬೆ ಹೊಡೆತ್ತ ಇದ್ದ.

ಆರತಿಗೆ ತಡವಲೆ ಎಡಿಗಾಯಿದಿಲ್ಲೆ, ಸೀದ ಓಡಿಗೊಂಡು ಬಂದು ಮಾಷ್ಟನ ಕೈಯ ಬೆತ್ತವ ಹಿಡ್ಕೊಂಡತ್ತು.

“ಸರ್.. ಸಾರ್… ಬಿಡಿ ಸಾರ್… ಅವ್ನು ಕದೀಲಿಲ್ಲ”

“ಕದೀಲಿಲ್ವಾ… ಅವ್ನ ಚೆಂಡೆ ಬಿಡಿಸ್ತೇನೆ ಇವತ್ತು…”

“ಇಲ್ಲ ಸಾರ್.. ನನ್ನ ಪೆನ್ಸಿಲು ಯಾರೂ ಕದೀಲಿಲ್ಲ.. ಸಾರ್…”

“ಎಂತ!!!???”

“ಇಲ್ಲ ಸಾರ್… ಯಾರೂ ಕದೀಲಿಲ್ಲ… ನಂಗೆ ಈಗ ನೆನ್ಪಾಯ್ತು… ನಾನು ಅದನ್ನು ಮನೆಯಲ್ಲಿ ಮರ್ತು ಬಂದಿದೇನೆ…” (ಆರತಿ ಹೇಳಿದ್ದು ಸುಳ್ಳು. ಇನ್ನು ಬೇರೆ ಆರುದೇ ಮಾಷ್ಟನ ಕೈಗೆ ಸಿಕ್ಕಿ ಬೀಳುದು ಬೇಡ.)

ದಾಸಪ್ಪನ ಬೂತ ಬಿಟ್ಟತ್ತು… ಕೈ ಕಟ್ಟಿಹಾಕಿದಾಂಗೆ ಆತು.

“ಎಂತ ಹೇಳುದಾ ನೀನು?”

“ತಪ್ಪಾಯ್ತು…ಸಾರ್… ನಂಗೆ ಗೊತ್ತಾಗ್ಲಿಲ್ಲ… ನಾನು ಪೆನ್ಸಿಲು ಮನೆಯಲ್ಲಿ ಮರ್ತು ಬಂದಿದ್ದೆ…”

ಒಂದ್ಸರ್ತಿ ಆರತಿಯ ದುರುಗುಟ್ಟಿ ನೋಡಿತ್ತು. “ಹೋಗು. ನಿನ್ನ ಜಾಗದಲ್ಲಿ ಕುತ್ಕೋ…” ಆರತಿ ತಲೆ ತಗ್ಗುಸಿ ಅದರ ಜಾಗೆಲಿ ಹೋಗಿ ಕೂದತ್ತು.

ಮಾಷ್ಟ ಒಂದರಿ ನಾಣಿಯ ನೋಡಿತ್ತು. ನಾಣಿ ದೇವರಿಂಗೆ ಹೊಡಾಡುವೋನ ಹಾಂಗೆ ಕೈಲಿ ತಲೆ ಗಟ್ಟಿ ಹಿಡ್ಕೊಂಡು ನೆಲಲ್ಲಿ ಬಿದ್ದುಕೊಂಡಿದ.

“ಏ… ಹೋಗಾ ನಿನ್ನ ಜಾಗಕ್ಕೆ…” ದಾಸಪ್ಪ ಕರ್ಕಶವಾಗಿ ಹೇಳಿಕ್ಕಿ ಮೇಜಿನ ಹಿಂದೆ ಕುರ್ಶಿಲಿ ಹೋಗಿ ಕೂದತ್ತು. ಒಂದು ಚೂರಾದ್ರು ಪಶ್ಚಾತ್ತಾಪವೂ ಅದಕ್ಕಿಲ್ಲೆ.

************************************
‘ಅಶ್ವಂ ನೈವ, ಗಜಂ ನೈವ, ವ್ಯಾಘ್ರಂ ನೈವಚ ನೈವಚ।
ಅಜಾ ಪುತ್ರಂ ಬಲಿಂ ದಧ್ಯಾತ್ ದೇವೋ ದುರ್ಬಲ ಘಾತಕಃ।

“ಹಾಂಗೇಳಿದರೆ ಎಂತರ ಕಿಟ್ಟಣ್ಣ?” ಕಿಟ್ಟಣ್ಣಂಗೆ ನಾಣಿಯ ಪ್ರಶ್ಣೆ.

ಕಿಟ್ಟಣ್ಣ ಹತ್ತನೇ ಕ್ಲಾಸಿಲಿ ಕಲಿವದಲ್ಲದಾ… ಅವ° ಸಂಸ್ಕೃತಲ್ಲಿ ಬಾರೀ ಉಷಾರು. ಹಾಂಗಾಗಿ ಶಾಲೆಲಿ ಅವಂಗೊಂದು ಜೆವಾಬ್ದಾರಿ ಇದ್ದು. ಶಾಲೆಲಿ ಎಂತಾರೂ ಸಮಾರಂಭ ಇದ್ದರೆ ಕೆಲವು ಸಂಸ್ಕೃತ ಸುಭಾಷಿತ ಹೇಳುದು. ಹಾಂಗಾಗಿ ಅವ° ಇಂತ ಸುಭಾಷಿತಂಗಳ ಕಲ್ತುಗೊಂಡು ಇರ್ತ°. ಹಾಂಗೇ ಮೇಲಾಣ ಸುಭಾಷಿತವ ಕಲಿವಗ ನಾಣಿ ಅಲ್ಲೇ ಇತ್ತಿದ್ದ°
.
“ಹಾಂಗೇಳಿದರೆ, ಕುದುರೆ, ಆನೆ, ಹುಲಿಗಳ ಎಲ್ಲ ದೇವರಿಂಗೆ ಬಲಿ ಕೊಡ್ತವಿಲ್ಲೆ, ಏಡು, ಇಲ್ಲದ್ರೆ ಕುರಿಯ ಬಲಿ ಕೊಡುದು. ಎಂತಕೆ ಹೇಳಿರೆ ಅವಕ್ಕೆ ಶಕ್ತಿ ಇರ್ತಿಲ್ಲೆ. ಕುದುರೆ, ಆನೆ, ಹುಲಿಗೊಕ್ಕೆ ಶಕ್ತಿ ಇರ್ತು. ದೇವರೂ ಕೂಡಾ ಶಕ್ತಿ ಇಲ್ಲದ್ದೋರನ್ನೆ ಬಲಿ ಕೇಳುದು. ಹಾಂಗಾಗಿ ನವಗೆ ಆರಾದ್ರೂ ಅನ್ಯಾಯ ಮಾಡಿರೆ ನಾವು ನವಗೆ ಇಪ್ಪ ಶಕ್ತಿಯ ಎಲ್ಲಾ ಉಪಯೋಗುಸಿ ಆ ಅನ್ಯಾಯವ ಪ್ರತಿಭಟಿಸೆಕ್ಕು ಹೇಳಿ ಅರ್ತ…..”

ಕೃಷ್ಣ ಅರ್ಜುನಂಗೆ ಗೀತೋಪದೇಶ ಮಾಡಿದಾಂಗೆ ಕಿಟ್ಟಣ್ಣ ನಾಣಿಗೆ ಸುಭಾಷಿತೋಪದೇಶ ಮಾಡಿತ್ತಿದ್ದ°.

***************************************************

ನಾಣಿ ನಿಧಾನಕ್ಕೆ ತಲೆ ಎತ್ತಿದ°.

ಮಾಷ್ಟನ ಮೋರೆ ನೋಡಿದ°. ಕಾಣ್ತಿಲ್ಲೆ… ಮೇಜು ಅಡ್ಡ ಇದ್ದು. ನಿಧಾನಕ್ಕೆ ಅಲ್ಲೆ ಕೂದುಕೊಂಡ°. ಈಗ ಮಾಷ್ಟನ ಮೋರೆ ಕಾಣ್ತಾ ಇದ್ದು. ಅವನ° ಕಣ್ಣಿಲಿ ನೀರು ಬಪ್ಪದು ಈಗ ನಿಂದಿದು. ಕಣ್ಣು ಕೆಂಪಾಯಿದು. ಮೊದಲೇ ಪೋಳೆ ಕಣ್ಣು.

ಮಾಷ್ಟನ ದುರುಗುಟ್ಟಿ ನೋಡಿದ°. ದಾಸಪ್ಪ ಅವನನ್ನ್ನೆ ನೋಡಿತ್ತು. ನಾಣಿ ಕಣ್ಣು ತಪ್ಪುಸಿದ್ದಾಯಿಲ್ಲೆ. ದಾಸಪ್ಪಂಗೆ ಒಳಂದ ಕುಟ್ಟಿದಾಂಗೆ ಆತು.ಒಂದ್ಸರ್ತಿ ಎಡತ್ತಿಂಗೆ ನೋಡಿತ್ತು, ಒಂದ್ಸರ್ತಿ ಬಲತ್ತಿಂಗೆ ನೋಡಿತ್ತು, ಒಂದ್ಸರ್ತಿ ಬಾಗಿಲು ನೋಡಿತ್ತು.

ಮತ್ತೆ ಪುನಾ ಅವನ ನೋಡಿತ್ತು.

“ಏ… ಹೋಗಾ… ಹೋಗಿ ನಿನ್ನ ಜಾಗದಲ್ಲಿ ಕೂತ್ಕೋ..” ಸ್ವರ ಚೂರು ನಡುಗಿತ್ತ ಹೇಂಗೆ?

ನಾಣಿ ನಿಧಾನಕ್ಕೆ ಎದ್ದ°. ಸರ್ತ ನಿಂದು ಮಾಷ್ಟನ ನೋಡಿದ°.

ನಿಧಾನಕ್ಕೆ ಮುಂದೆ ಮೇಜಿನ ಹತ್ತರಂಗೆ ಹೋಗಿ ಮಾಷ್ಟನ ಎದುರೇ ನಿಂದ°. ಮಾಷ್ಟನ ಮೋರೆಯೇ ನೋಡ್ತಾ ಇದ್ದ°. ಕಣ್ಣು ತಪ್ಪುಸಿದಾಯಿಲ್ಲೆ.

ನಿಧಾನಕ್ಕೆ ಅಂಗಿಯ ಗುಬ್ಬಿ ತೆಗದ°.

ಎರಡ್ನೆ ಗುಬ್ಬಿ ತೆಗದ°.

ಮೂರ್ನೆ ಗುಬ್ಬಿ ಇಲ್ಲೆ. ಮೊದಲೆ ರಟ್ಟಿದ್ದು.

ಅವನ ಅಂಗಿಗೆ ಮೂರೆ ಗುಬ್ಬಿ ಇಪ್ಪದು.

ಅಂಗಿಯ ಎಳದು ತೆಗದ°!

“ಊಹ್” ಕ್ಲಾಸಿನ ಮಕ್ಕ ಎಲ್ಲವುದೆ ಒಂದ್ಸಲ ಉಸುಲು ಬಿಟ್ಟವು!!!

ನಾಣಿಯ ಬೆನ್ನಿಲಿ ಮಾಷ್ಟನ ಬೆತ್ತದ ಗುರ್ತಂಗ ಕಾಣ್ತಾ ಇದ್ದು, ಕನಿಪ್ಪೆ ಕಟ್ಟಿದ್ದು, ಗಾಯವುದೇ ಆಯಿದು. ಎಷ್ಟು ಪೆಟ್ಟು ಬಿದ್ದಿದು?
(ಲೆಕ್ಕ ಮಡಿಕ್ಕೊಂಬಲೆ ಹೇಳಿತ್ತಿದ್ದೆ, ಮಡಿಕ್ಕೊಂದಿಡಿದಿರಿಲ್ಲೆಯಾ?)
ಇಪ್ಪತ್ಮೂರು ಪೆಟ್ಟು ಬಿದ್ದಿದು (ಎನ್ನತ್ರೆ ಲೆಕ್ಕ ಇದ್ದು)

ಮಾಷ್ಟ° ಕಣ್ಣು ದೊಡ್ಡ ಮಾಡಿ ನಾಣಿಯ ನೋಡಿತ್ತು. ನಾಣಿಯ ಕೈ ಚಡ್ಡಿಯ ಗುಬ್ಬಿ ಮೇಲೆ ಹೋತು. ಚಡ್ಡಿಯ ಗುಬ್ಬಿಯನ್ನುದೆ ಎಳದು ತೆಗದ°.

ಮಾಷ್ಟ ನೋಡಿಕೊಂಡು ಇದ್ದಹಾಂಗೆ ಜೋಂಗ್ಳೀಸು ಚಡ್ಡಿ ಕೆಳ ಜಾರಿತ್ತು.ಎಳದ್ದು ಅತ್ಲಾಗಿ ಇಡ್ಕಿದ.

ಒಳ?
ಸೊಂಟಕ್ಕೆ ಕಪ್ಪು ಟೈನೂಲು ಕಟ್ಟಿದ್ದು. ಅದಕ್ಕೆ ಅಬ್ಬೆಯ ಹರ್ಕಟೆ ಸೀರೆಂದ ಹರುದು ತೆಗದ ಒಂದು ತುಂಡು ಕೋಣ ಕಟ್ಟಿಕೊಂಡಿದ°.

ಈಗ ಕಾಲಿ ಹರ್ಕಟೆ ಸೀರೆಯ ಕೋಣ ಕಟ್ಟಿದ, ಕಂದು ಒತ್ತಿದ ಕಪ್ಪು ಮೈಯ ಮಾಣಿ ಮಾಷ್ಟನ ಎದುರು ನಿಂದು ಕೊಂಡು ಕೆಂಪು ಕಟ್ಟಿದ ಪೋಳೆ ಕಣ್ಣಿಲಿ ಮಾಷ್ಟನ ದುರುಗುಟ್ಟಿ ನೋಡಿದ°, ಗುಳಿಗ್ಗ ನೋಡಿದ ಹಾಂಗೆ. ಹಾಂಗೇ ನೋಡ್ತಾ ನಿಂದ°
.

“ಏ… ಎಂತದಾ ನಿಂದು…..?” ಪೊಟ್ಟು ಬಾವಿಂದ ಸ್ವರ ಬಂದ ಹಾಂಗೆ ಮಾಷ್ಟನ ಸ್ವರ. ನಾಣಿಯ ಉತ್ತರ ಇಲ್ಲೆ.

ಇಡೀ ಕ್ಲಾಸು ಮೌನ. ಆರತಿ ಕೈಲಿ ಮೋರೆ ಮುಚ್ಚಿಕೊಂಡು ತಲೆ ತಗ್ಗಿಸಿ ಕೂದತ್ತು.

ದಿನೇಸ°? ಅದರ ವಿಶಯ ಬಿಡಿ… ಅದಕ್ಕೆ ಅಂಡಿ ಇಲ್ಲೆ, ಕುಂಡಿ ಇಲ್ಲೆ. ಎಂತದೂ ಆವುತ್ತಿಲ್ಲೆ ಅದಕ್ಕೆ.

ಹತ್ತು ನಿಮಿಷ ಆತು. ನಾಣಿ ಹಾಂಗೇ ನಿಂದಿದ°. ಹಂದುತ್ತಾಯಿಲ್ಲೆ. ಮಾಷ್ಟಂಗೆ ಎಂತ ಮಾಡೆಕ್ಕು ಹೇಳಿ ಗೊಂತವ್ತಾ ಇಲ್ಲೆ. ವಿಚಿತ್ರ… ಈಗ ಅದಕ್ಕೆ ನಾಣಿಯ ಜೋರು ಮಾಡ್ಲೂ ದಮ್ಮಿಲ್ಲೆ… ಬಡಿವಲೂ ದಮ್ಮಿಲ್ಲೆ.

ನಾಣಿಯ ಕ್ಷಮೆ ಕೇಳುದಾ? ಛೆ… ಮಾಷ್ಟ… ಅದೂ ದಾಸಪ್ಪ ಮಾಷ್ಟ… ಹುಡುಗನ ಹತ್ರೆ ಕ್ಷಮೆ ಕೇಳುದಾ?

ಬೆಲ್ಲಾತು. ದಾಸಪ್ಪಂಗೆ ರಪಕ್ಕ ಜೀವ ಬಂದಾಂಗೆ ಆತು. ಅದರ ಪುಸ್ತಕ, ಬೆತ್ತ ತೆಕ್ಕೊಂಡದೇ… ತುರ್ಕನೆ ಕ್ಲಾಸು ಬಿಟ್ಟಿಕ್ಕಿ ಹೆರ ಓಡಿತ್ತು.

ಓಡಿದ್ದು ಸೀದಾ ಹೆಡ್ಮಾಷ್ಟನ ಕೋಣೆಗೆ. ಹೆಡ್ಮಾಷ್ಟಂಗೆ ಹೇಳ್ಲೆ ಅಲ್ಲ. ಆದಿನ ಹೆಡ್ಮಾಷ್ಟ ಕರಿಯಪ್ಪ ಶೆಟ್ಟಿ ಬೈಂದಿಲ್ಲೆ. ಹಾಂಗಾಗಿ ಇಂದು ಇದುವೇ ಹೆಡ್ಮಾಷ್ಟ°.

ಕರಿಯಪ್ಪ ಶೆಟ್ಟಿ ಹದಿಮೂರು ಮೈಲು ದೂರಂದ ಕೇಬೀಟಿ ಬಸ್ಸಿಲಿ ದಿನಾಗುಳೂ ಬಪ್ಪದು. ಅದು ಯಕ್ಷಗಾನದ ದೊಡ್ಡ ಮರ್ಲ°. ನಿನ್ನೆ ಅದರ ಮನೆಯ ಹತ್ರಾಣ ಗೆದ್ದೆಲಿ ದೇವಿಮಾತ್ಮೆ ಆಟ ಇದ್ದತ್ತು. ಅದು ಉದಿಯಾವರೆಗೆ ನೋಡುಗು. ಹಾಂಗಾಗಿ ಇಂದು ಅದು ರಜೆ. ಅದರ ವರಕ್ಕಿಲಿ ಮೈಷಾಸುರ ಕೊಣ್ಕೊಂಡು ಇಕ್ಕು ಈಗ.

ದಾಸಪ್ಪ ಮಾಷ್ಟ° ಹೆಡ್ಮಾಷ್ಟನ ಕೋಣೆಗೆ ಹೊಕ್ಕಿದ್ದೇ ಹೆಡ್ಮಾಷ್ಟನ ಕುರ್ಶಿಲಿ ಎರಡೂ ಕೈಲಿ ತಲೆ ಹಿಡ್ಕೊಂಡು ಕೂದತ್ತು.

ಅಷ್ಟಪ್ಪಗ ಬಾಗಿಲಿನ ಹತ್ರೆ ಆರೋ ಆಂಜಿದಾಂಗೆ ಆತು. ಕಣ್ಣ ಕರೇಲಿ ಆರದು ಹೇಳಿ ನೋಡಿತ್ತು. ಒಂದು ಸಲ ಅದಕ್ಕೆ ಜಿಗ್ಗ ಆತು.

ನಾಣಿ!naani2

ಹೆಡ್ಮಾಷ್ಟನ ಕೋಣೆಯ ಬಾಗಿಲಿನ ಎದುರಿಂಗೆ ಇಪ್ಪದು ಜೆಗಿಲಿ. ಅದರಂದ ಆಚಿಗೆ ಸಣ್ಣಕ್ಕೆ ಜಾಲು. ಅದರಂದ ಆಚಿಗೆ ದ್ವಜಸ್ಥಂಭ. ಅದರಂದ ಆಚಿಗೆ ಇಪ್ಪದು ಮಕ್ಕಳ ಆಟದ ಮೈದಾನ.
ಜೆಗಿಲಿಗೂ ದ್ವಜಸ್ಥಂಭಕೂ ನಡುವಾಣ ಸಣ್ಣ ಜಾಲಿಲಿ ನಾಣಿ ನಿಂದುಕೊಂಡಿದ°. ಬೆಶಿಲಿಲಿ.


ಹರ್ಕಟೆ ಸೀರೆಯ ಕೋಣ ಕಟ್ಟಿದ, ಕಂದು ಒತ್ತಿದ ಕಪ್ಪು ಮೈಯ ಮಾಣಿ, ಕೆಂಪು ಕಟ್ಟಿದ ಪೋಳೆ ಕಣ್ಣಿಲಿ ದುರುಗುಟ್ಟಿಗೊಂಡು ಕೋಣೆಯ ಒಳಂಗೆ ದಾಸಪ್ಪನನ್ನೇ ನೋಡಿಕೊಂಡು ನಿಂದಿದ° ಗುಳಿಗ್ಗ ನೋಡಿದ ಹಾಂಗೆ.
.

“ತಿಮ್ಮಪ್ಪಾ…” ದಾಸಪ್ಪ ಪಿಯೋನು ತಿಮ್ಮಪ್ಪನ ದಿನಿಗಿತ್ತು. ತಿಮ್ಮಪ್ಪ ಓಡಿಕೊಂಡು ಬಂತು.

“ಅಕಾ… ಆ ಹುಡುಗನಿಗೆ ಎಂತ ಬೇಕಂತೆ… ಕೇಳು…..” (ಮಾಡುದು ಮಾಡಿಕ್ಕಿ ಈಗ ಕಾಣ್ತಿಲ್ಲೆಯ ..ಸುಬಗನ ಹಾಂಗೆ…)

ತಿಮ್ಮಪ್ಪ ನಾಣಿಯ ಹತ್ರಂಗೆ ಹೋತು. ಆದರೆ ನಾಣಿ ಅದರ ಹತ್ರೆ ಮಾತಾಡಿದ್ದಾಯಿಲ್ಲೆ°. ತಿಮ್ಮಪ್ಪ ವಾಪಾಸು ಬಂತು, ಎಂಕು ಪಣಂಬೂರಿಂದ ವಾಪಾಸು ಬಂದ ಹಾಂಗೆ.

“ಅವ್ನು ಮಾತಾಡುದಿಲ್ಲ ಸಾ…” ಮಾಷ್ಟಂಗೆ ಹೇಳಿತ್ತು. ದಾಸಪ್ಪ ಈಗ ಎಂತ ಮಾಡೆಕ್ಕು? ಇನ್ನುದೆ ನಾಣಿಯತ್ರೆ ಒಂದು ಕ್ಷಮೆ ಕೇಳಿಕ್ಕುವಾ ಹೇಳಿ ಅದಕ್ಕೆ ಕಂಡಿದಿಲ್ಲೆ. ಹಾಂಕಾರ ಬಿಡೆಕ್ಕನ್ನೆ?

“ಆ ಬಾಗಿಲು ಹಾಕು” ತಿಮ್ಮಪ್ಪಂಗೆ ಹೇಳಿತ್ತು. ನಾಣಿಗೂ ಅದಕ್ಕು ಅಡ್ಡ ಆವುತ್ತನ್ನೆ. ತಿಮ್ಮಪ್ಪ ಬಾಗಿಲು ಹಾಕಿತ್ತು ಹೆರಂದ. ಹೆರಂದಲೆ ತಲೆ ಮಾಂತ್ರ ಒಳ ಹಾಕಿ “ಸಾ… ಬೀಗ ಹಾಕ್ಬೇಕಾ?” ಕೇಳಿತ್ತು.

“ಬೀಗ? ಎಂತ ಕರ್ಮಕ್ಕೆ ಬೀಗ? ನಾನಿಲ್ವಾ ಒಳಗೆ?” ದಾಸಪ್ಪ ಪರಂಚಿತ್ತು.

ಒಂದು ಅರ್ಧ ಗಂಟೆ ಆದಮೇಲೆ ಮೆಲ್ಲಂಗೆ ಬಾಗಿಲ ಸೆರೇಲಿ ನೋಡಿತ್ತು… ಅರೆ…. ಮಾಣಿ ಅಲ್ಲೇ ನಿಂದುಕೊಂಡು ಇದ್ದ°. ದುರುಗುಟ್ಟಿಗೊಂಡು. ಅಲ್ಲಾ… ಈ ಮಾಣಿಯ ತಲೆಲಿ ಎಂತ ಇದ್ದೂಳಿ?

****************************************************************************************

ಒಂದೊಂದೇ ಪಿರಿಡು ಆವ್ತಾ ಇದ್ದು. ಟೀಚರುಗೊ ಮಾಷ್ಟಂಗೊ ಒಬ್ಬೊಬ್ಬನೇ ಹೆಡ್ಮಾಷ್ಟನ ಕೋಣೆಗೆ ಬಪ್ಪದು, ಹೋಪದು, ನಾಣಿಯನ್ನೆ ನೋಡುದು, ಆವಾಗ ಒಂದುಸಲ ಬಾಗಿಲು ತೆಗವದು, ದಾಸಪ್ಪ ಓರೆಕಣ್ಣಿಲಿ ನಾಣಿಯ ನೋಡುದು, ನಾಣಿ ದುರುಗುಟ್ಟಿಕೊಂಡು ಒಳವೇ ನೋಡ್ತಾ ಇದ್ದ°. ದೇವಕ್ಕಿ ಟೀಚರಿಂಗೆ ಮಕ್ಕ ಹೇಳಿರೆ ಬಾರಿ ಪ್ರೀತಿ. ಈ ದಾಸಪ್ಪನ ಇಂದ್ರಾಣ ಪ್ರತಾಪ ಇಡಿ ಶಾಲೆಗೆ ಸುದ್ದಿ ಹಬ್ಬಿದ್ದು. ನಾಣಿಗೆ ಪೆಟ್ಟು ಬಿದ್ದದು ದೇವಕ್ಕಿ ಟೀಚರಿಂಗೂ ಗೊಂತಾಯಿದು. ಅದುದೆ ಹೆಡ್ಮಾಷ್ಟನ ಕೋಣೆ ಎದುರು ನಿಂದ ನಾಣಿಯ ನೋಡಿದ್ದು. ಅದಕ್ಕೆ ಪಾಪ ಕಂಡತ್ತು. ಅದು ಟಿಂಚರಿನ ಒಂದು ಸಣ್ಣ ಕುಪ್ಪಿಯನ್ನುದೆ, ಒಂದು ಪೆನ್ಸಿಲು ಮುಲಾಮುದೆ ಹಿಡ್ಕೊಂಡು ನಾಣಿಯ ಹತ್ರಂಗೆ ಹೋತು.

“ನಾಣಿ ಬೇಜಾರು ಮಾಡ್ಬೇಡ. ನಿಂಗೆ ನಾನು ಮದ್ದು ಹಚ್ತೇನೆ ಆಯ್ತಾ….” ಮುಲಾಮು ಉದ್ದುಲೆ ನೋಡಿರೆ, ನಾಣಿ ತೆಗದ್ದು ಅದರ ಮುಲಾಮಿನ ಟ್ಯೂಬಿನ ಎಳದು, ಇಡ್ಕಿಕ್ಕಿ, ಟೀಚರಿನ ದುರುಗುಟ್ಟಿ ನೋಡಿದ°. ಪಾಪ ದೇವಕ್ಕಿ ಟೀಚರು ಅಲ್ಲಿಂದ ಪದ್ರಾಡ್.

ಒಂದೊಂದೆ ಪಿರಿಡು ಆದಾಂಗೆ ಮಕ್ಕ ಹೆರಬಪ್ಪದು…. ಗುಂಪು ಗುಂಪು ನಿಂದು ನಾಣಿಯ ನೋಡುದು….. ಮಾಷ್ಟಕ್ಕ ಅವರ ಒಳಂಗೆ ಓಡುಸುದು.
ಒಟ್ಟಾರೆ ಆರಿಂಗೂ ಎಂತ ಮಾಡೆಕ್ಕು ಹೇಳಿ ಗೊಂತಾವ್ತಾ ಇಲ್ಲೆ.

ಮದ್ಯಾನ್ನ ಆತು. ಬೆಶಿಲು ತಲೆ ಹೊಟ್ಟುವಾಂಗೆ ಬೆಶಿ ಏರಿದ್ದು. ಆದರೆ ನಾಣಿ ಅಲ್ಲೇ ನಿಂದಿದ°, ಹೆಡ್ಮಾಷ್ಟನ ಕೋಣೆ ಎದುರು ದುರುಗುಟ್ಟಿಕೊಂಡು ಗುಳಿಗ್ಗನ ಹಾಂಗೆ.

***************************************
ಕತೆ ಮುಗುತ್ತಾ? ಇಲ್ಲೆ. ಅಂಬಗ ಮತ್ತೆಂತಾತು? ಬಪ್ಪ ವಾರ ನೋಡುವೋ.. ಆಗದಾ?

23 thoughts on “ಪೆನ್ಸಿಲು ಭಾಗ – ಎರಡು

  1. ಮನ ಕಲಕುವ ನಿರೂಪಣೆ

  2. ಅಬ್ಬಾ..ಸ್ವಾಭಿಮಾನ ಹೇ೦ಗಿರೇಕು ಹೇಳಿ ತೊರುಸಿಕೊಟ್ಟ ನಾಣಿ.
    ಅದ್ಭುತ ನಿರೂಪಣೆ,ಶ್ಯಾಮಣ್ಣ.ಮು೦ದುವರಿದ ಭಾಗಕ್ಕೆ ಕಾಯ್ತಾ ಇದ್ದೆ.

    1. ಮುಳಿಯ ಭಾವಂಗೆ ಧನ್ಯವಾದಂಗೊ…

  3. ಎಲ್ಲೊರತ್ತಲೂ ಶ್ಯಾಮಣ್ಣ ಕತೆಯ ಊಹಿಸುಲೆ ಹೇಳಿದ್ದು ಎನ್ತಕೆ ಹೆಳಿ ಈಗ ಗೊನ್ತಾತಿದ. ”ಕಥೆಲಿ ಬಂದ ತಿರುಗಾಸು, ಗ್ರೇಶದ್ದ ಹಾಂಗಿತ್ತು. ” ಹೇಳಿ ಬೊಳುಮ್ಬು ಮಾವನ ಮಾತು.ಎನಗೆ ಕತೆಯ ತಿರುವು ಹೇ೦ಗೆ ಕ೦ಡತ್ತು ಹೇಳಿರೆ-ಜನಸನ್ದಣಿಯೂ, ವಾಹನಸನ್ದಣಿಯೂ ಇಪ್ಪ ಪೇಟೆಲಿ ನಡು ಮಾರ್ಗಲ್ಲಿ ಹಿನ್ದಾಣವಕ್ಕೆ ಸಿಗ್ನಲ್ ತೋರುಸದ್ದೆ ತಿರುಗುವ ರಿಕ್ಷದ ಹಾ೦ಗೆ !

    ಒ೦ದು ಡಜನಿನಶ್ಟೆ ಪೆಟ್ಟು ಲೆಕ್ಕಕ್ಕೆ ಸಿಕ್ಕಿತ್ತು. ಒಳುದ್ದೆಲ್ಲಾ ಉಚಿತವೊ? ಹೇಳಿ ಕಾದೊ೦ಡು ಇದ್ದೆ. ಚಿತ್ರ೦ಗೊ ಲಾಯಿಕಿದ್ದು.

    1. ನಿಂಗಳ ರಿಕ್ಷದ ಕಲ್ಪನೆ ಬಾರಿ ಲಾಯ್ಕಿದ್ದು… ಹಹಹ ಹಾ… 🙂

  4. Adbutha kathe. Namma aasupaasili nadada naija ghataneyo heli aavthu. Katheya abbeyathare helide. Engala maneli ellorude idara 3 ne bhagakke kaadugondiddeya. Dasappangu dinesangu sariyada pata kalishi kodi:-)

    1. ನಾಣಿ ಎಂತಾರೂ ಪಾಠ ಕಲುಶುಗು ಹೇಳಿ ಹಾರೈಸುವಾ… ಎಂತ ಹೇಳ್ತಿ… 🙂

  5. ಓಹ್.. ಕಾದುಕೂದುಗೊಂಡಿತ್ತಿದ್ದೆ, ಎರಡನೇ ಕಂತು ಬಂತು. ಪಾಪದ ನಾಣಿಗೆ ಅಷ್ಟು ಪೆಟ್ಟು ಬೀಳುವಗ ಮಾತ್ರ ತುಂಬಾ ಬೇಜಾರ ಆತು. ಯಬ್ಬ ಎಂತ ಕ್ರೂರ ಮಾಷ್ತ್ರ ಅಪ್ಪ ಅದು?. ಭಾರೀ ಲಾಯಿಕಲ್ಲಿ ಬಯಿಂದು ವಾಕ್ಯಂಗೊ ಎಲ್ಲಾ… ಕೆಂಪು ಅಕ್ಷರಲ್ಲಿ ಬರದ್ದು ರೈಸಿದ್ದು ಚೆನ್ನೈ ಭಾವ ಹೇಳಿದಾಂಗೆ. ಮಾಷ್ತ್ರಂಗೆ ಹಾಂಗೆ ಆಯೆಕು ನಾಣಿ ತಿರುಗಿ ಕೋಪ ತೋರ್ಸುತ್ತಾ ಇದ್ದ… ಆಗಲಿ, ಆ ಕ್ರೂರ ಮಾಷ್ಟ್ರಂಗೆ ಸರೀ ಬುಧ್ಧಿ ಕಲುಶಲಿ ನಾಣಿ… ಬೇಗ ಬರಳಿ ಇನ್ನಾಣ ಕಂತು.

    1. ನೋಡುವಾ… ಎಂತಾರೂ ಬುದ್ದಿ ಕಲುಶುಗು ಅವ ಹೇಳಿ ಕಾಣ್ತು… 🙂

  6. ಶ್ಯಾಮಣ್ಣನ ನಿರೂಪಣೆ ಫಸ್ಟ್ ಕ್ಲಾಸ್ ಆಯಿದು. ಕುತೂಹಲವ ಇನ್ನೂದೆ ಒಳುಶಿಗೊಂಡು ಇನ್ನಾಣದ್ದಕ್ಕೆ ಕಾಯ್ತ ಹಾಂಗೆ ಇದ್ದು.
    ಸಹನೆಗೂ ಒಂದು ಮಿತಿ ಇದ್ದು ಹೇಳ್ತರ ನಾಣಿ ತೋರ್ಸಿ ಕೊಡ್ತಾ ಇದ್ದ°.

    1. ಧನ್ಯವಾದ.. ಶರ್ಮಪ್ಪಚ್ಚಿಗೆ…..

    1. ಅಪ್ಪು ಭಾವ.. ಪೆನ್ಸಿಲು ಉದ್ದ ಇದ್ದು.. ಎನಗುದೆ ಮೊನೆ ದೂಂಚಿ ಮಾಡಿ ಸಕಾವುತ್ತಾ ಇದ್ದು… 🙂

  7. ಅಬ್ಬಾ…! ನಾಣಿಯ ಮೈಗೆ ಭೂತ ಹಿಡಿದ್ದಾ ಹೇಂಗೆ ಶ್ಯಾಮಣ್ಣಾ…? ಆನು ಎಂತದೋ ಗ್ರೇಶಿದ್ದೆ. ಎಂತದೋ ಆತು 🙂
    ಮುಂದಿನ ಭಾಗ ಬೇಗ ಬರಲಿ 🙂 🙂 🙂

    1. ಎನಗೂ ಸಂಶಯ ಇದ್ದು… ಗುಳಿಗ್ಗನೋ ಹೇಳಿ… 🙂

  8. ಎಷ್ಟೋ ಸರ್ತಿ ಹೀಂಗೆ ಆವ್ತು. ಮಾಡದ್ದ ತಪ್ಪಿಗೆ ಮಾಷ್ಟ್ರಕ್ಕ ಈ ಕೂಸು/ಮಾಣಿ ಹೀಂಗೆ ಮಾಡುವ ಜನವೋ ಅಲ್ಲದೋ ಹೇಳಿ ನೋಡದ್ದೆ ಪೆಟ್ಟು ಕೊಡ್ತವು.ಪೆಟ್ಟು ಬಿದ್ದರೂ ನಾಣಿ ಪ್ರತಿಭಟನೆ ಮಾಡ್ತಾ ಇದ್ದ. ಹಾಂಗಾಗಿ ಚೂರಾದ್ರೂ ಮನಸಿಗೆ ಸಮಾಧಾನ ಆತು.

    1. ಎಂತ ಮಾಡುದು.. :(… ಕೆಲವು ಸರ್ತಿ ಹಾಂಗೆ ಆವುತ್ತು… ಅಲ್ಲದಾ ಅಕ್ಕೋ?

  9. [ಆರತಿಯ ಹತ್ರೆ ಆದರೂ “ಇದು ನಿಂದಾ ಪೆನ್ಸಿಲು ಹೇಳಿ” ಕೇಳೆಕ್ಕಾ ಬೇಡದಾ?][ ಹಾಲುಕೊಡದ್ದ ಎಮ್ಮೆಗೆ ಬಡಿವ ಹಾಂಗೆ ಬಡಿವದು?][ಒಂದ್ಸರ್ತಿ ಎಡತ್ತಿಂಗೆ ನೋಡಿತ್ತು,…..][ ಸ್ವರ ಚೂರು ನಡುಗಿತ್ತ ಹೇಂಗೆ?] [ಲೆಕ್ಕ ಮಡಿಕ್ಕೊಂಬಲೆ ಹೇಳಿತ್ತಿದ್ದೆ, ಮಡಿಕ್ಕೊಂದಿಡಿದಿರಿಲ್ಲೆಯಾ?)] [ಕಪ್ಪು ಟೈನೂಲು ಕಟ್ಟಿದ್ದು. ] [ಎಂತ ಮಾಡೆಕ್ಕು ಹೇಳಿ ಗೊಂತವ್ತಾ ಇಲ್ಲೆ.] …. ಹು ಹು ಹು … ಅದ್ಭುತ ಆಯ್ದು ನಿರೂಪಣೆ. ಕೆಂಪು ಅಕ್ಷರಲ್ಲಿ ಒತ್ತಿ ಹೇಳಿದ್ದು ರೈಸಿದ್ದು.

    ಕಣ್ಣೆದುರೆ ಸಿನೇಮಾ ನೋಡ್ತಾಂಗೆ … ಅಲ್ಲ ಅಲ್ಲ… ನಮ್ಮ ಶಾಲೆಲಿ ನಾವು ಆ ದಾಸಪ್ಪನ ಕ್ಲಾಸಿಲ್ಲಿ ನಾಣಿಯ ಸಹಪಾಠಿಯಾಗಿ ನೋಡ್ತಾಂಗೆ ಆಯ್ದು . ಹೆಮ್ಮಕ್ಕಳ ಕಣ್ಣೀರು ಹಾಕುಸುವ ಯಾವುದೇ ಟಿ.ವಿ ಧಾರವಾಹಿಗಿಂತ ಎಷ್ಟೋ ಉತ್ತಮ ಆಯ್ದು ಈ ಧಾರವಾಹಿ.

    ದೇವಕ್ಕಿ ಟೀಚರ ಟಿಂಚರ್ ಬಲ್ಗಿ ಇಡ್ಕುತ್ತಷ್ಟು ಧೈರ್ಯ ಹೊಂದಿದ ನಾಣಿ ಎಂತದೋ ಒಂದು ತೀರ್ಮಾನ ಗಟ್ಟಿಗೆ ಮಾಡಿದ್ದ ಹೇಳಿ ಅಷ್ಟು ಮಾತ್ರ ಗೊಂತಾತು. ಆಗಲಿ ಆಗಲಿ… ಎಂತ ಮಾಡ್ತ ನೋಡೇಕು. ಆನು ನಾಣಿಯ ಕಡೆ.

    ಬೊಳುಂಬು ಮಾವನ ಒಪ್ಪಕ್ಕೆ ಹೆಬ್ಬಟೆ ಬೆರಳು ಮೇಗಾಂತಾಗಿ ನೆಗ್ಗಿದ್ದು ಇತ್ಲಾಗಿಂದ .. ಕಾಣುತ್ತೋ..

    1. ಸಿನೆಮಾ ಮಾಡ್ತರೆ ಎನ್ನ ಅಡ್ಡಿ ಇಲ್ಲೆ ಭಾವ…:)

  10. ಶ್ಯಾಮಣ್ಣನ ಪೆನ್ಸಿಲಿಂಗೆ ಕಾಯ್ತಾ ಇದ್ದಿದ್ದೆ. ಬಂದೇ ಬಂತು. ಕಥೆಲಿ ಬಂದ ತಿರುಗಾಸು, ಗ್ರೇಶದ್ದ ಹಾಂಗಿತ್ತು. ನಾಣಿಯ ಬೆನ್ನಿಂಗೆ ಬಿದ್ದ ಪೆಟ್ಟು ಎನ್ನ ಬೆನ್ನಿಂಗೆ ಬಿದ್ದ ಹಾಂಗೇ ಅನಿಸಿತ್ತು. ಕಥೆ ಓದಿ ಕಣ್ಣೀರಿಳಿಸಿದೆ. ಆರತಿಯ ಮಾತು ಕೇಳಿ ಕೊಶಿ ಆತು. ನಾಣಿಯ ಅಸಹಕಾರ ಚಳವಳಿ ಲಾಯಕಾಯಿದು. ದಾಸಪ್ಪ ಮಾಸ್ಟ್ರ ಹಾಂಗೇ, ಈಗಾಣ ಕಾಲಲ್ಲಿ ಕೆಲವು ಕೇಸುಗಳ ಪೋಲೀಸುಗೊ ಪಾಪದವರ ತಲಗೆ ಹಾಕಿ ಪುಸ್ಕ ಮಾಡ್ತವು. ಅಲ್ಲದೊ ? ಶ್ಯಾಮಣ್ಣಾ, ಧಾರಾವಾಹಿ ಮುಂದುವರಿಯಲಿ. ನಾಣಿಯ ಚಿತ್ರಲ್ಲಿ ಒಂದೆರಡು ಬೆತ್ತದ ಗೆರಗೊ ಬಂದಿದ್ರೆ ಇನ್ನೂ ಲಾಯಕಾವ್ತಿತು.

    1. ಬೊಳುಂಬು ಮಾವಾ… ಅದು ಪೆಟ್ಟು ನಾಣಿಯ ಬೆನ್ನಿಂಗೆ ಮತ್ತೆ ಕುಂಡೆಗೆ ಬಿದ್ದದು ಇದಾ…! ಹಾಂಗಾಗಿ ಚಿತ್ರಲ್ಲಿ ಕಾಣ್ತಿಲ್ಲೆ… 😉 😀

    2. ಪುನಾ ಬೊಳುಂಬು ಭಾವ ಫಸ್ಟ್ ಒಪ್ಪ ಕೊಡ್ಲೆ…!!
      ಎಂತ ಟೈಮಿಂಗೆ ಸರಿಯಾಗಿ ಕಾದು ಕೂತಿದ್ರೋ ಹೇಂಗೆ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×