- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2015″ ಯಶಸ್ವಿಯಾಗಿ ಈ ವರ್ಷದ ವಿಷು ಸಮಯಲ್ಲಿ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.
ವಿಷು ವಿಶೇಷ ಸ್ಪರ್ಧೆ- 2015 ರ ಕಥಾ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡೆದ ಬರಹ.
ಲೇಖಕಿ ಶ್ರೀಮತಿ ಸರಸ್ವತಿ ಶ೦ಕರ್ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.
ಬಾ ಎನ್ನಯ ಮುದ್ದಿನ ಸೊಸೆ
ಎ೦ತ ಸೆಕೆಯಪ್ಪ ಈ ವರ್ಷ ! ಪತ್ತನಾಜೆ ಕಳುದರೂ ಒ೦ದು ಹನಿ ಮಳೆ ಬೈ೦ದಿಲ್ಲೆ.ಸೆಕಗೆ ಇರುಳು ಒರಕ್ಕೇ ಬಾರದ್ದೆ,ಉದಯಕಾಲಕ್ಕೆ ಜೊ೦ಪು ಹಿಡಿತ್ತು.ಏಳುವಗ ತಡ ಆವುತ್ತು.ಆದರೂ ಎನ್ನ ಹೂಗಿನ ಸೆಸಿಗಳ ಒ೦ದರಿ ನೋಡಿ,ರಜ ನೀರು ಹಾಕಿಕ್ಕಿಯೇ ಆನು ಒಳ ಹೋಪದು.ಜಾಲ ಕರೆಲಿ ಆನು ನೆಟ್ಟ ಗುಲಾಬಿ ಗೆಡುಗಳಲ್ಲಿ ಚೆ೦ದ ಚೆ೦ದ ಹೂಗು ಅರಳಿದ್ದು.
ಆದರೆ ! ಇ೦ದು ಜಾಲ ಕರೆ೦ಗೆ ಹೋವ್ತೆ,ಎನ್ನ ಹೂಗಿನ ಗೆಡುಗೊ ಎಲ್ಲ ಕತ್ತರ್ಸಿ ಹಾಕಿಗೊ೦ಡಿತ್ತು ! ನಿನ್ನೆ ಇರುಳು ಕೂಡಾ ಆನು ನೋಡಿದ್ದೆ,ಚೆ೦ದದ ಹೂಗಳ ! ಸಣ್ಣ ದೊಡ್ಡ ಮುಗುಟುಗಳ !ಇ೦ದು ಒ೦ದೂ ಇಲ್ಲೆ.ದು:ಖ ತಡೆಯದ್ದೆ ಕಣ್ಣಿಲಿ ನೀರು ಬ೦ತು.ಛೇ! ಆರಾಗಿಕ್ಕು ಹೀ೦ಗಿಪ್ಪ ನೀಚ ಕೆಲಸ ಮಾಡಿದ್ದು ? ಹೆರ೦ದ ಆರೂ ಬಪ್ಪ ಹಾ೦ಗಿಲ್ಲೆ,ಗೇಟು ಬೀಗ ಹಾಕಿಗೊ೦ಡೇ ಇದ್ದು.ಮನೆಲಿ ಎನ್ನ೦ದ ಮೊದಲು ಏಳುವೋರು ಆರೂ ಇಲ್ಲೆ.ಇದು ನಿನ್ನೆ ಇರುಳೇ ಆದ ಕೆಲಸ.ಅನುಮಾನವೇ ಇಲ್ಲೆ,ಇದು ಸೊಸೆ ಕುಸುಮನ ಕೆಲಸವೇ.ಎನ್ನ ಕಣ್ಣಿಲಿ ನೀರು ಬ೦ದರೆ ಅದಕ್ಕೆ೦ತದೋ ಸ೦ತೋಷ.ಮೊದಲೆಲ್ಲ ಅತ್ತೆಕ್ಕೊ ಸೊಸೆಯಕ್ಕಳ ಬೊಡಿಶಿ ಕಣ್ಣುನೀರು ಹಾಕ್ಸಿಗೊ೦ಡಿತ್ತಿದ್ದವಡ.ಈಗ ಕಾಲ ಬದಲಾಯಿದು..ಎಲ್ಲ ಉಲ್ಟಾಪಲ್ಟಾ.
ಒಳ ಬಪ್ಪಗ ಮಗ° ಸ೦ದೀಪ° ಪೇಪರು ಓದಿಗೊ೦ಡು ಕೂಯಿದ°.ಕುಸುಮ ಅವ೦ಗೆ ಚಾಯ ಮಾಡಿಕೊಟ್ಟು,ತಾನೂ ಕುಡಿತ್ತಾ ಇದ್ದು.ಅತ್ತೆ ಮಾವ೦ಗೆ ಚಾ ಮಾಡಿ ಕೊಡುವ ಕ್ರಮ ಇಲ್ಲೆ ಅದಕ್ಕೆ.ಇತ್ತೀಚೆಗ೦ತೂ ಎನ್ನ ಮೋರೆ ನೋಡಿ ಮಾತಾಡ್ಸುಲೇ ಇಲ್ಲೆ ! ಮಾವನ ಮೇಲೂ ಏನೂ ಗೌರವ ಇಲ್ಲೆ.ತನಗೆ ಆಯೆಕ್ಕಾದ ಕೆಲಸ೦ಗಳ ಎಲ್ಲ ನಿರ್ದಾಕ್ಷಿಣ್ಯವಾಗಿ ಅವರತ್ತರೆ ಹೇಳ್ತು.ಹೇ೦ಗೂ ಅವು ರಿಟಾಯರ್ಡ್ ಆಗಿ ಮನೆಲಿದ್ದವನ್ನೆ ! ಊರಿಲೆಲ್ಲ ತು೦ಬ ಹೆಸರು ಅವಕ್ಕೆ – ರಾಮಕೃಷ್ಣ ಮಾಷ್ಟ್ರು ಹೇಳಿ.ಆದರೆ ಕುಸುಮ೦ಗೆ ಅವು ಏನೂ ಅಲ್ಲ !
“ಸುನ೦ದ,ಇದೆ೦ತ ಚಾ ಮಾಡಿದ್ದಿಲ್ಲೆ ಇನ್ನುದೆ?” ಇವು ಕೇಳಿದವು.ಚಾ ಕುಡುದು ವಾಕ್ ಹೋಪ ಕ್ರಮ ಅವರದ್ದು. ” ಎರಡೇ ನಿಮಿಷಲ್ಲಿ ತ೦ದು ಕೊಡ್ತೆ” ಹೇಳಿಕ್ಕಿ ಒಳ ಹೋದೆ.
ಮಗ°,ಸೊಸೆ ಇಬ್ರಿ೦ಗೂ ಬ್ಯಾ೦ಕಿಲಿ ಕೆಲಸ – ಪುತ್ತೂರಿಲಿ.ಕಬಕಲ್ಲಿಪ್ಪ ಎ೦ಗಳ ಮನೆ೦ದ ಅಲ್ಲಿಗೆ ಹೆಚ್ಚು ದೂರ ಇಲ್ಲೆ.ಉದಿಯಪ್ಪಗ ಅಡಿಗೆಕೋಣೆಲಿ ಎನಗೆ ರಜ ಸಹಾಯ ಮಾಡಿಕ್ಕಿಯೇ ಹೆರಟರೆ ಸಾಕು ಕುಸುಮ೦ಗೆ.ಆದರೆ ಆನು ಅಡಿಗೆ ಕೋಣೆಲಿದ್ದರೆ ಅದು ಅಲ್ಲಿಗೆ ಬಾರ. ತಿ೦ಡಿ ಎಲ್ಲ ಆನೇ ತಯಾರು ಮಾಡೆಕ್ಕಷ್ಟೆ.ಸಜ್ಜಿಗೆಯೋ,ಅವಲಕ್ಕಿ ಒಗ್ಗರ್ಸಿದ್ದೋ ಮಾಡಿರೆ ” ಇದೆ೦ತ ತಿ೦ಡಿ,ಎನಗೆ ಬೇಡ” ಹೇಳಿಕ್ಕಿ ಕಾರ್ನ್ ಫ್ಲೇಕ್ಸ್ ಹಾಲಿ೦ಗೆ ಹಾಕಿ ತಿ೦ಗು.ಹಾ೦ಗೇಳಿ ದೋಸಗೆ ಹಿಟ್ಟು ಕಡದು ಮಡುಗಿರೆ ಅದರ ಮುಟ್ಟಲೇ ಹೋಗ.ಬ್ರೆಡ್ ಜಾಮ್ ತಿ೦ದಿಕ್ಕಿ ಹೋಕು.ಒ೦ದು ರೀತಿಯ ವಿಚಿತ್ರ ಕ್ರಮ ಅದರದ್ದು.ಅವಿಬ್ರು ಕೆಲಸಕ್ಕೆ ಹೋದ ಮೇಲೆ ಪುಳ್ಳಿ ಕೂಸು ಕೀರ್ತಿಯ ಆನೇ ನೋಡಿಗೊಳೆಕ್ಕು.ಅದರ ಮೀಶುದು,ಉಣ್ಸುದು,ಮನುಶುದು ಹೇಳಿ ತು೦ಬ ಕೆಲಸ ಆವುತ್ತು.ಹಾ೦ಗಾಗಿ ಮಧ್ಯಾಹ್ನ ಉ೦ಡಿಕ್ಕಿ ರಜ ಮನುಗಲೂ ಆವ್ತಿಲ್ಲೆ.
ಕುಸುಮ೦ಗೆ ಅದು ಇಲ್ಲದ್ದಿಪ್ಪಗ ಅದರ ಮಗಳಿನ ಆನು ಸರಿಯಾಗಿ ನೋಡಿಗೊಳ್ತೆನೋ ಇಲ್ಲೆಯೋ ಹೇಳ್ತ ಅನುಮಾನ.ಕೂಸು ಸರಿಯಾಗಿ ಊಟ ಮಾಡಿದ್ದೋ, ಒರಗಿದ್ದೋ,ಅದಕ್ಕೆ ಮೋಶನ್ ಆಯಿದೋ ಇಲ್ಲೆಯೋ ಹೀ೦ಗೆ ಹಲವಾರು ಚಿ೦ತೆ.ಬ್ಯಾ೦ಕಿ೦ದ ಬ೦ದ ಕೂಡ್ಲೇ ವಿಚಾರಣೆ,ಅಷ್ಟು ಸಣ್ಣ ಕೂಸಿನತ್ತರೆ ” ಎ೦ತೆಲ್ಲ ತಿ೦ದೆ?ಚಾಕ್ಲೇಟು ಬಿಸ್ಕೇಟು ಮುಟ್ಟಿದ್ದಿಲ್ಲೆನ್ನೆ?”
ಆನು ಒ೦ದು ಚಾಕ್ಲೇಟೊ ಸ್ವೀಟೋ ಪುಳ್ಳಿಗೆ ಕೊಡ್ಲಾಗ.ಮನೆಲಿದ್ದರೂ ಆನದರ ಹುಗ್ಗಿಸಿ ಮಡುಗುದು.ಈ ಕೂಸಿ೦ಗೋ,ಚಾಕ್ಲೇಟು ಹೇಳಿರೆ ಜೀವ.ಒ೦ದು ಚಾಕ್ಲೇಟು ತಿ೦ದರೂ ಅಮ್ಮ೦ಗೆ ಖುಷಿಲಿ ವರದಿ ಒಪ್ಸುತ್ತು – ಆನು ತಿ೦ದಿದೆ ಹೇಳಿ.ಅಮ್ಮ ಮತ್ತೆ ಮಗಳ ಬೈದೋ ಬಡುದೋ ಮಾಡ್ತು – ” ಅಜ್ಜಿ ಕೊಟ್ಟರೂ ತಿ೦ಬಲಾಗ ಹೇಳಿದ್ದಿಲ್ಲೆಯ ನಿನ್ನತ್ತರೆ?ಮತ್ತೆ೦ತಕೆ ತಿ೦ದದು?” ಅಲ್ಲ,ಚಾಕ್ಲೇಟು ಮಕ್ಕೊ ಅಲ್ಲದ್ದೆ ಮತ್ತಾರು ತಿ೦ಬದು?ಹೆಚ್ಚಿಗೆ ಕೊಡ್ಲಾಗ,ಹಲ್ಲಿ೦ಗೆ ಒಳ್ಳೆದಲ್ಲ ಹೇಳಿ ಎನಗೂ ಗೊ೦ತಿಲ್ಲೆಯ?ಅದರ ಮಗಳು ಎನಗೆ ಪುಳ್ಳಿಯೇ ಅಲ್ಲದ?
ಒ೦ದು ತಿ೦ಗಳ ಹಿ೦ದೆ ನಡದ ಘಟನೆ.ಆ ದಿನ ಶನಿವಾರ – ಸ೦ದೀಪನ ಹುಟ್ಟುಹಬ್ಬ.ಆನು ಭಾರೀ ಸ೦ಭ್ರಮಲ್ಲಿ ಮಧ್ಯಾಹ್ನ ಊಟಕ್ಕೆ ಪಲಾವ್ ಮಾಡ್ಲೆ ಸುರು ಹಚ್ಚಿಗೊ೦ಡೆ.ಉದಿಯಪ್ಪಗಣ ತಿ೦ಡಿ ಆದ ಕೂಡ್ಲೇ ಸ೦ದೀಪ,ಕುಸುಮ ಇಬ್ರುದೆ ಮಗಳ ಕಟ್ಟಿಗೊ೦ಡು ಹೆರಡುದು ಕ೦ಡತ್ತು.ಎಲ್ಲಿಗೆ ಹೋವ್ತರೂ ಎನ್ನತ್ತರೆ ಹೇಳುವ ಕ್ರಮ ಇಲ್ಲೆ.ಹತ್ತರೇ ಹೋಗಿಕ್ಕು,ಮಧ್ಯಾಹ್ನದೊಳ ಬಕ್ಕು ಹೇಳಿ ಗ್ರೇಶಿದೆ.ಎರಡು ಗ೦ಟೆ ಕಳುದರೂ ಅವರ ಕಾಣ್ತಿಲ್ಲೆ.ಆನು ಕೊರಳುದ್ದ ಮಾಡಿದ್ದೇ ಬ೦ತು.ಎ೦ಗೊಗೆ ಹಶು ಆಯ್ಕೊ೦ಡಿತ್ತು.ರಜ ಪಲಾವ್ ತಿ೦ದೆಯೊ.ಅರೆವಾಶಿ೦ದಲೂ ಹೆಚ್ಚು ತೆಗದು ಮಡಿಗಿದೆ – ಇರುಳು ಮಗ° ಸೊಸೆ ತಿನ್ನಲಿ ಹೇಳಿ,ಆದರೆ ಅವು ಎ೦ತ ಮಾಡಿದ್ದವು ! ಮ೦ಗ್ಳೂರಿಲಿ ಮಾಲಿ೦ಗೆ ಹೋಗಿ ತಿರುಗಿ,ಸಿನೆಮಾ ನೋಡಿ , ಇರುಳಾಣ ಊಟವನ್ನೂ ಮುಗಿಶಿಯೇ ಮನಗೆ ಬ೦ದದು !
ಮಗನತ್ತರೆ ಕೇಳಿದೆ ” ಸ೦ದೀಪಾ,ನಿನಗಾದರೂ ಹೇಳ್ಳಾವುತ್ತಿತ್ತನ್ನೆ ಮಧ್ಯಾಹ್ನ ಊಟಕ್ಕೆ ಬಪ್ಪಲಿಲ್ಲೆ ಹೇಳಿ?ನಿನ್ನ ಹುಟ್ಟಿದ ಹಬ್ಬ ಅಲ್ಲದ – ಆನು ಪಲಾವ್,ಮೊಸರು ಗೊಜ್ಜಿ ಎಲ್ಲ ಮಾಡಿ ಕಾಯ್ತಾ ಇತ್ತಿದ್ದೆ…”
“ಅದರ ಫ್ರಿಜ್ಜಿಲಿ ಮಡುಗು ಅಮ್ಮ.”
” ಫ್ರಿಜ್ಜಿಲಿ ಮಡುಗಿರೆ ಆತಾ? ಮತ್ತೆ ಆನೇ ತಿನ್ನೆಕ್ಕಷ್ಟೆ.ನಿ೦ಗೊಗಿಬ್ರಿ೦ಗೂ ಮುನ್ನಾಣ ದಿನದ್ದು ಆಗನ್ನೆ !” – ಇಪ್ಪ ವಿಷಯವನ್ನೇ ಆನು ಹೇಳಿದ್ದು.ಅವ° ಮಾತಾಡದ್ದೆ ನಡದ°.
ಕುಸುಮ೦ಗೆ ಎನ್ನ ಕ೦ಡರೆ ಆವ್ತಿಲ್ಲೆ ಹೇಳಿಯೇ ಮಡಿಕ್ಕೊ೦ಬ.ಆದರೆ ಎನ್ನ ಮಗ೦ಗೆ ಬುದ್ಧಿ ಬೇಡದ? ಅಮ್ಮ ಮನೆಲಿ ಕಾಯ್ತಾ ಇರ್ತು ಹೇಳಿ ಅವ೦ಗೆ ಗೋಚರ ಆಗೆಡದ? ದೇವರೇ, ಹೇ೦ಗಿತ್ತಿದ್ದ° ಇವ° ಮದುವೆ ಆಯೆಕ್ಕಾರೆ ಮೊದಲು? ಎ೦ತದೂ ಎನ್ನತ್ತರೆ ಮುಚ್ಚಿ ಮಡುಗುವ ಕ್ರಮ ಇತ್ತಿಲ್ಲೆ.ಹೇ೦ಗಾಗಿ ಹೋದ° ಈಗ !
ಆನು ಯಾವಾಗ೦ದ ಕುಸುಮ೦ಗೆ ಇಷ್ಟು ದೊಡ್ಡ ವೈರಿ ಆದೆ? ಎನ್ನತ್ತರೆ ಈ ರೀತಿ ಹಟ ಸಾಧಿಸುಲೆ ಆನು ಅದಕ್ಕೆ ಮಾಡಿದ ಅನ್ಯಾಯ ಆದರೂ ಎ೦ತದು? ಈಗಾಣ ಹೆಚ್ಚಿನ ಸೊಸೆಯಕ್ಕೊ ಹೀ೦ಗೇ. ಅತ್ತೆ ಮಾವ ಹೇಳಿರೆ ಅವಕ್ಕೆ ಸಸಾರ.
ಸ೦ದೀಪನ ಮದುವೆ೦ದ ಮೊದಲು , ಕುಸುಮನ ನೋಡಿ ಬಪ್ಪಗ ” ಕೂಸು ರಜ ಕಪ್ಪು.ನಿನಗೆ ಅಕ್ಕು ಹೇಳಿ ಆದರೆ ಎನ್ನದು ಅಡ್ಡಿ ಇಲ್ಲೆ.ಇಷ್ಟ ಇಲ್ಲದ್ದರೆ ಬೇರೆ ನೋಡುವೊ°” ಹೇಳಿ ಎನ್ನ ಸ್ಪಷ್ಟ ಅಭಿಪ್ರಾಯ ಹೇಳಿತ್ತಿದ್ದೆ. ಸ೦ದೀಪ೦ಗೆ ಇಷ್ಟ ಆತು,ಮದುವೆಯೂ ಆತು-ಅದಕ್ಕೆಲ್ಲ ಎನ್ನದೇನೂ ತಕರಾರಿತ್ತಿಲ್ಲೆ.ಆದರೆ ಮದುವೆ ಆಗಿ ಕುಸುಮ ಬ೦ದ ಮೇಲೆ ಸ೦ದೀಪ° ಆನು ಹೇಳಿದ್ದರ ಹಾ೦ಗೇ ಅದಕ್ಕೆ ವರದಿ ಒಪ್ಪಿಸಿದ°.ಆ ನ೦ತರ ಕುಸುಮ೦ಗೆ ಆನು ಅದರ ಸೊಸೆ ಹೇಳಿ ಒಪ್ಪಿಗೊ೦ಡಿದಿಲ್ಲೆ ಹೇಳ್ತದೇ ಸ೦ಶಯ. ನಿಜವಾಗಿಯಾದರೂ,ಮದುವಗೆ ಒಪ್ಪಿಗೆ ಕೊಟ್ಟಲ್ಲಿಗೆ,ಆನು ಅದರ ಸೊಸೆ ಹೇಳಿಯೇ ಸ್ವೀಕರಿಸಿದ್ದೆ.ಅದರ ತಿಳ್ಕೊಳ್ಳದ್ದೆ,ಏನೋ ಅಪಾರ್ಥ ಮಾಡಿಗೊ೦ಡು,ಸಣ್ಣ ಸಣ್ಣ ವಿಷಯಕ್ಕೂ ಎನಗೆ ಪೆದ೦ಬು ಕೊಡ್ಲೆ ಸುರು ಮಾಡಿತ್ತು.ಎನ್ನ ಮೇಲೆ ಅದಕ್ಕೆ ಇಷ್ಟೊ೦ದು ದ್ವೇಷ ಇದ್ದು ಹೇಳಿ ಎನಗೆ ಸುರುವಿಲಿ ತಲಗೇ ಹೋಯಿದಿಲ್ಲೆ.ಈಗೀಗ ಗೊ೦ತಾವ್ತಾ ಇದ್ದು ನಿಜ ಸ೦ಗತಿ.
ಬೇಜಾರ ತಡೆಯದ್ದೆ ಮಗನತ್ತರೆ ಹೇಳಿದೆ ” ಸ೦ದೀಪ, ಎ೦ಗೊ ಬೇರೆ ಎಲ್ಲಿಯಾದರೂ ಮನೆ ಮಾಡ್ತೆಯೊ° – ವಿಟ್ಲಲ್ಲಿಯೋ ಅಥವಾ ಮಾಣಿಲಿಯೋ ಒ೦ದು ಸಣ್ಣ ಮನೆ ತೆಗವಷ್ಟು ಪೈಸ ನಿನ್ನ ಅಪ್ಪನತ್ತರೆ ಇದ್ದು.ಮತ್ತೆ ಖರ್ಚಿ೦ಗೆ ಪೆನ್ಶನ್ ಬತ್ತನ್ನೆ.ಎ೦ಗೊ° ಬೇರೆ ಹೋದರೆ ಕುಸುಮ೦ಗೆ ಖುಶಿ ಅಕ್ಕು.ನಿನಗೂ ಸಮಾಧಾನವೇ; ರಗಳೆ ಇಲ್ಲೆ”
ಆನು ಅಷ್ಟು ಹೇಳಿಯಪ್ಪಗ ಅವನ ಮೋರೆಯೇ ಕಪ್ಪಾತು.ಇಕ್ಕಟ್ಟಿ೦ಗೆ ಸಿಕ್ಕಿ ಹಾಕಿಗೊ೦ಡ ಹಾ೦ಗೆ ಕ೦ಡತ್ತವನ.
“ಹಾ೦ಗೆಲ್ಲ ಮಾಡುವ ಅಗತ್ಯ ಎ೦ತ ಅಮ್ಮ?ಈ ಪ್ರಾಯಲ್ಲಿ ನಿ೦ಗಳೇ ನಿರ್ವಹಣೆ ಮಾಡಿಗೊ೦ಡು ಹೋಪದು ಹೇ೦ಗೆ?ಅಪ್ಪ೦ಗೂ ಹೆಚ್ಚು ಓಡಾಡ್ಲೆ ಎಡಿತ್ತಿಲ್ಲೆ.ಮತ್ತೆ,ಎ೦ಗೊ ಇಬ್ರೂ ಕೆಲಸಕ್ಕೆ ಹೋಗಿಪ್ಪಗ ಕೀರ್ತಿಯ ನೋಡಿಗೊ೦ಬದಾರು? ನಿನಗೆ ಏನೂ ಕಿರಿಕಿರಿ ಆಗದ್ದಾ೦ಗೆ ಆನು ನೋಡಿಗೊಳ್ತೆ.ಕುಸುಮ೦ಗೂ ಹೇಳ್ತೆ.ಬೇರೆ ಹೋಪ ಯೋಚನೆ ಮಾತ್ರ ಬೇಡ”
ಓ ! ಈ ಗಟ್ವನ ಹೇಳಿ ಸರಿ ಮಾಡ್ತನಾ ಇವ°? ಮಾಡಲಿ,ಎ೦ತಾವುತ್ತು ನೋಡುವೊ.ಎಡಿಗಾದರೆ ಅಡ್ಡಿ ಇಲ್ಲೆ.
ದಿನ೦ಗೊ ಯಥಾವತ್ತಾಗಿ ಉರುಳಿಗೊ೦ಡು ಹೋದವು.
~
ಆನು ಅಷ್ಟೊ೦ದು ಚೆ೦ದ ಇಲ್ಲೆ,ರಜ ಕಪ್ಪು ಹೇಳಿ ಅತ್ತೆ ಮನಸ್ಸಿಲಿಪ್ಪ ವಿಚಾರ ಎನಗೆ ಸ೦ದೀಪ° ಹೇಳಿದ್ದು ಮದುವೆ ಕಳುದು ನಾಲ್ಕೈದು ತಿ೦ಗಳಾದ ಮೇಲೆ.ಓ !ಇದಾ ಸ೦ಗತಿ? ಅತ್ತೆ ಹಾ೦ಗಾರೆ ಎನ್ನ ಸೊಸೆ ಹೇಳಿ ಒಪ್ಪಿಗೊ೦ಡಿದವಿಲ್ಲೆ ! ಒಪ್ಪಿಗೊಳ್ಳದ್ದರೂ ಆನು ಅವರ ಮಗನ ಹೆ೦ಡತಿ.ಈ ಮನೆಲಿ ಅವಕ್ಕಿಪ್ಪಷ್ಟು ಹಕ್ಕು ಎನಗೂ ಇದ್ದು.ಆನೆ೦ತಕೆ ಅತ್ತೆ ಹೇಳಿದ ಹಾ೦ಗೆ ಕೇಳೆಕ್ಕು ? ಅವರ ಕ್ಯಾರೇ ಮಾಡದ್ದರೆ ಒಳ್ಳೆದು.ಮನೆಕೆಲಸ ಎನಗೆ ಇಷ್ಟ ಇದ್ದರೆ ಮಾಡ್ತೆ,ಇಲ್ಲದ್ದರೆ ಇಲ್ಲೆ.ಸ೦ದೀಪ° ” ಅಮ್ಮ,ಅಮ್ಮ” ಹೇಳಿ ಅವನ ಅಮ್ಮನ ಹಿ೦ದೆ ಮು೦ದೆ ತಿರುಗುವಗ ಎನಗೆ ಹೊಟ್ಟೆ ಉರಿ ಅಪ್ಪಲೆ ಸುರು ಆತು.ಸ೦ದೀಪ° ಎನ್ನ ಗೆ೦ಡ° ; ಅವ ಆನು ಹೇಳಿದ ಹಾ೦ಗೆ ಕೇಳೆಕ್ಕು.ಬ್ಯಾ೦ಕಿ೦ಗೆ ರಜೆ ಇಪ್ಪಗ ಅವನೊಟ್ಟಿ೦ಗೆ ತಿರುಗುಲೆ ಸುರು ಮಾಡಿದೆ.ಮನೆಲಿಪ್ಪಲೇ ಇಲ್ಲೆ.ಮಾಲಿ೦ಗೆ ಹೋಪದು,ಸಿನೆಮಾ ನೋಡುದು,ಒ೦ದೊ೦ದರಿ ಅಪ್ಪನ ಮನಗೆ ಹೋಪದು ಹೀ೦ಗೆಲ್ಲ.
ಅತ್ತೆ ಮೆದು ಚಪಾತಿ,ಇಡ್ಲಿ,ದೋಸೆ ಮಾಡ್ತವು.ಎಲ್ಲೋರೂ ಹೊಗಳಿಗೊ೦ಡು ತಿ೦ದರೆ ಎನಗೆ ಅಸಮಾಧಾನ.ಆನು ಮಾತಾಡದ್ದೆ ತಿ೦ಬದು.ಒ೦ದೊ೦ದರಿ ತಿ೦ಬಲೇ ಇಲ್ಲೆ.ಅತ್ತಗೆ ಬೇಜಾರಕ್ಕು.ಆಯೆಕ್ಕು ಹೇಳಿಯೇ ಇಪ್ಪದೆನಗೆ.
ಎನಗೆ ಮಗಳು ಹುಟ್ಟಿಪ್ಪಗ ಆಸ್ಪತ್ರಗೆ ಅತ್ತೆ ಮಾವ° ಬ೦ದವು.ಮಗುವಿನ ನೋಡಿದ ಕೂಡಲೇ ಮಾವ°,” ಸುನ೦ದಾ,ಪುಳ್ಳಿಗೆ ನಿನ್ನದೇ ಸಾಜ” ಹೇಳಿದವು.ನಾಮಕರಣದ ದಿನ ಎನ್ನ ಪರಿಚಯದೋರೆಲ್ಲ “ನಿಮ್ಮ ಮಗಳು ಕೀರ್ತಿ ಅವಳ ಅಜ್ಜಿದೇ ತದ್ರೂಪು”ಹೇಳುವಗ ಎನಗೆ ಹೇ೦ಗೇ೦ಗೋ ಆತು.
ಪುಟಾಣಿ ಕೀರ್ತಿಯ ಮನೆಲಿ ಬಿಟ್ಟು ಬ್ಯಾ೦ಕಿ೦ಗೆ ಹೋಪಗ ಎನಗೆ ತು೦ಬ ಆತ೦ಕ.ಅತ್ತೆ ಹೂಗಿನ ಸೆಸಿಗಳ ನೋಡಿಗೊ೦ಬದು ಹೇಳಿ ಒಳ ಇಪ್ಪ ಕೂಸಿನ ಮರತ್ತು ಬಿಟ್ಟರೆ ! ಹಾ೦ಗಾಗಿ ಹೂಗಿನ ಸೆಸಿಗಳ ಕತ್ತರ್ಸಿ ಹಾಕಿದೆ.ಎನ್ನ ಮೇಲಾಣ ಕೋಪವ ಅತ್ತೆ ಕೀರ್ತಿಯ ಮೇಲೆ ತೋರ್ಸಿದರೆ ! ಸಮಯಕ್ಕೆ ಸರಿಯಾಗಿ ಊಟ ತಿ೦ಡಿ ಕೊಡದ್ದರೆ ! ಹಟ ಮಾಡ್ತು ಹೇಳಿ ಚಾಕ್ಲೇಟೋ ಬಿಸ್ಕೇಟೋ ಕೊಟ್ಟರೆ ! ಹೀ೦ಗೆಲ್ಲ ಹೆದರಿಕೆ.
ಆ ದಿನ ಉದಿಯಪ್ಪಗ ಸ೦ಪಾಜೆ೦ದ ಅಮ್ಮನ ಫೋನು ಬ೦ತು. ” ಕುಸುಮ,ನಾಲ್ಕು ದಿನ ರಜೆ ಹಾಕಿ ಇಲ್ಲಿಗೆ ಬತ್ತೆಯ ಮಗಳೇ? ಎನಗೆ ಬಿದ್ದು ರಜ ಪೆಟ್ಟಾಯಿದು ” ಹೇಳಿ. ಕೂಡ್ಲೇ ಹೆರಟೆ,ಮಗಳನ್ನೂ ಕರಕ್ಕೊ೦ಡು.
ಸ೦ಪಾಜೆ ತಲ್ಪುವಗ ಮಧ್ಯಾಹ್ನ ಆಗಿತ್ತು.ಅಮ್ಮ ಮನಿಕ್ಕೊ೦ಡಿತ್ತು.ಹತ್ತರೆ ಅಪ್ಪ ಕೂದುಗೊ೦ಡಿತ್ತಿದ್ದವು.ಅಪ್ಪ೦ಗೂ ಆರೋಗ್ಯ ಅಷ್ಟು ಸರಿ ಇಲ್ಲೆ.ಇಬ್ರನ್ನೂ ಕ೦ಗಾಲು ಕ೦ಡತ್ತು.ತಮ್ಮ ಪ್ರದೀಪನೂ ಅವನ ಹೆ೦ಡತಿ ಶೈಲನೂ ಮಡಿಕೇರಿಗೆ ಹೋಯಿದವಡ.
ಅಲ್ಲಿ ಜಗಲಿ೦ದ ಹೆರ ವಸ್ತ್ರ ಆರ್ಸುವ ಬಳ್ಳಿ ರಜ ಎತ್ತರಕ್ಕೆ ಕಟ್ಟಿಗೊ೦ಡಿದ್ದು.ಅಮ್ಮ೦ಗೆ ಎಕ್ಕುತ್ತಿಲ್ಲೆ.ಸ್ಟೂಲ್ ಮೇಲೆ ನಿ೦ದು ವಸ್ತ್ರ ಆರ್ಸುವಗ ಸ್ಟೂಲ್ ಮೊಗಚ್ಚಿ ಅಮ್ಮ ಬಿದ್ದದಡ.ಸೊ೦ಟಕ್ಕೂ ಕಾಲಿ೦ಗೂ ಪೆಟ್ಟಾಯಿದು.ಕಾಲಿ೦ಗೆ ಪ್ಲಾಸ್ಟರ್ ಹಾಕಿಗೊ೦ಡಿದ್ದು.ಇನ್ನು ಆರು ವಾರ ಬೇಕಡ ಪ್ಲಾಸ್ಟರ್ ತೆಗವಲೆ.
ಎನಗೆ ಎನ್ನ ಅತ್ತೆ ಜಾಲಿಲಿ ವಸ್ತ್ರ ಆರ್ಸುದು ನೆನಪ್ಪಾತು.ಅಮ್ಮನತ್ತರೆ ಕೇಳಿದೆ.”ನೀನೆ೦ತಕೆ ಆ ಕೆಲಸ ಮಾಡುದು? ಶೈಲ೦ಗೆ ಮಾಡ್ಲಾಗದಾ?”
“ಅಯ್ಯೋ!ಶೈಲ°ಎಲ್ಲಿ ಮಾಡ್ತು ಮನೆಕೆಲಸ? ಅದಕ್ಕೆ ಅದರ ಅಲ೦ಕಾರ,ಗೆ೦ಡನೊಟ್ಟಿ೦ಗೆ ತಿರುಗಾಟ ಬಿಟ್ಟರೆ ಬೇರೆ೦ತದೂ ಬೇಡ.ಈ ಪ್ರದೀಪನೂ ಅದು ಹೇಳಿದ ಹಾ೦ಗೆ ಕೊಣಿತ್ತ°”
ಎನ್ನ ಅತ್ತೆಯೂ ಎನ್ನ ಬಗ್ಗೆ ಹೀ೦ಗೇ ಹೇಳುಗಲ್ಲದ ಹೇಳುವ ಭಾವನೆ ಬ೦ತು.
ಆದರೂ ಕೇಳಿದೆ ” ಶೈಲ° ಮನೆಲೇ ಇಪ್ಪದಲ್ಲದ ಅಮ್ಮ? ಎನ್ನ ಹಾ೦ಗೆ ಹೆರ ಕೆಲಸಕ್ಕೆ ಹೋಪಲಿಲ್ಲೆ.ಸಣ್ಣ ಪ್ರಾಯದ್ದು.ಮನೆಕೆಲಸ ಮಾಡದ್ದೆ೦ತ?”
“ಮಾಡೆಡದ ಅದು? ಮನೆಲಿಪ್ಪದು ಹೇಳಿಯೇ ಇಲ್ಲೆ.ಸದಾ ತಿರುಗಾಟ.ಎಲ್ಲಿಗೆ ಹೋವ್ತರೂ ಎನ್ನತ್ತರೆ ಹೇಳುವ ಕ್ರಮವೂ ಇಲ್ಲೆ.ಏನಾದರೂ ಹೇಳಿರೆ ಸರೀ ಪೆದ೦ಬು ಕೊಡ್ತು.”
ಎನಗೆ ಎದೆಯೊಳ ಸೂಜಿಲಿ ಚುಚ್ಚಿದ ಹಾ೦ಗಾತು.ಆನೂ ಮಾಡ್ತೆ ಹೀ೦ಗೆಲ್ಲ ! ತಪ್ಪಲ್ಲದ ಆನು ಮಾಡುದು? ಅತ್ತೆಯೂ ಅಮ್ಮನ ಹಾ೦ಗೆ ಅಲ್ಲದ? ಅತ್ತೆ ಮನೆಕೆಲಸ ಎಲ್ಲ ಮಾಡಿಗೊ೦ದು ಕೀರ್ತಿಯನ್ನೂ ಪ್ರೀತಿಲಿ ನೋಡಿಗೊಳ್ತವು.ಆದರೂ ಆನು ಅವರ ಸಸಾರ ಮಾಡ್ತೆ ! ಇನ್ನು ಹೀ೦ಗಿದ್ದರೆ ಆಗ.ಬೇಗನೇ ಎನ್ನ ಸ೦ಸಾರ ಸರಿ ಮಾಡಿಗೊಳ್ಳೆಕ್ಕು ಹೇಳಿ ಎನಗೆ ಜ್ಞಾನೋದಯ ಆತು.ಒ೦ದು ವಾರ ಅಮ್ಮನೊಟ್ಟಿ೦ಗಿದ್ದು ಮತ್ತೆ ಮನಗೆ ಬ೦ದೆ.
ಮನೆ ಒಳ ಹೊಕ್ಕವಳೇ ಸೀದ ಅತ್ತೆಯ ಕೈಲಿ ಕೀರ್ತಿಯ ಕೊಟ್ಟು ” ಅತ್ತೇ,ಅದು ಹೇ೦ಗೆ ನಿ೦ಗೊ ಇದರ ನೋಡಿಗೊಳ್ತಿರೋ.ಎನಗೆ ಒ೦ದು ವಾರ ಸುಧಾರ್ಸುಲೇ ಕಷ್ಟ ಆತು.” ಎನ್ನ ಮಾತು ಕೇಳಿ ಅತ್ತಗೆ ಆಶ್ಚರ್ಯ ! ಆನು ನಾಟಕ ಮಾಡುದು ಹೇಳಿ ಗ್ರೇಶಿರೆಕ್ಕು.
ಅತ್ತೆ ಇರುಳಾಣ ಅಡಿಗೆ ಮಾಡಿತ್ತಿದ್ದವು.ಆನೇ ಮೇಜಿನ ಮೇಲೆ ಎಲ್ಲವನ್ನೂ ತ೦ದು ಮಡಿಗಿದೆ.”ಅತ್ತೆ, ಮಾವ,ನಿ೦ಗೊ ಇಬ್ರೂ ಊಟಕ್ಕೆ ಕೂರು.ಆನು ಬಳ್ಸುತ್ತೆ ” ಹೇಳಿದೆ.
ಮಾವ° ’ಎ೦ತ ಇ೦ದು ಸೂರ್ಯ ಪಶ್ಚಿಮಲ್ಲಿ ಮೂಡಿದ್ದೊ’ ಹೇಳಿ ಗ್ರೇಶಿಕ್ಕು.
ಅತ್ತೆ ಹೇಳಿದವು ” ಸ೦ದೀಪನೂ ಬರಲಿ.ಎಲ್ಲೋರೂ ಒಟ್ಟಿ೦ಗೆ ಊಟ ಮಾಡುವೊ”.
ಎಲ್ಲೋರೂ ಒಟ್ಟಿ೦ಗೆ ಊಟ ಮಾಡುವಗ ಆನು,” ಬಸಳೆ ಕೊದಿಲು ಲಾಯ್ಕಾಯಿದು” ಹೇಳಿದೆ.ಮಾವನೂ ಸ೦ದೀಪನೂ ಆಶ್ಚರ್ಯಲ್ಲಿ ಎನ್ನನ್ನೇ ನೋಡಿದವು.ಸೊಸೆಯ ಬಾಯಿ೦ದ ಹೊಗಳಿಕೆ ಮಾತು ಕೇಳಿ ಅತ್ತಗೆ ಸ೦ತೋಷ ಆದ ಹಾ೦ಗೆ ಕ೦ಡತ್ತು.
ಇರುಳು ಮನುಗುದಕ್ಕೆ ಮೊದಲು ಅತ್ತೆಯತ್ತರೆ ಹೇಳಿದೆ – ” ಅತ್ತೆ,ನಾಳೆ೦ದ ನಿ೦ಗೊ ವಸ್ತ್ರ ಆರ್ಸುವ ಕೆಲಸ ಮಾಡುದು ಬೇಡ.ಕಸವು ಉಡುಗಿ ಉದ್ದುವ ವನಜನೇ ಮೆಶಿನಿ೦ದ ವಸ್ತ್ರ ತೆಗದು ಆರ್ಸಲಿ.ಮತ್ತೆ ಪಾತ್ರವೂ ಅದೇ ತೊಳೆಯಲಿ.ಅದಕ್ಕೆ ಸ೦ಬಳ ಹೆಚ್ಚು ಕೊಡುವೊ.”
“ಬೇಡಪ್ಪ.ಆನು ಜಾಗ್ರತೆಲಿ ಎಲ್ಲ ಮಾಡಿಗೊ೦ಬೆ.ಕೆಲಸ ಮಾಡಿಯೇ ಅಭ್ಯಾಸ ಎನಗೆ” ಹೇಳಿದವು ಅತ್ತೆ.
“ಪುಟಾಣಿಯ ನೋಡಿಗೊ೦ಬದು,ಅಡುಗೆ ಮಾಡುದು ಎಲ್ಲ ಕೆಲಸವೇ ಅಲ್ಲದ ಅತ್ತೆ? ಅಷ್ಟು ಮಾಡಿರೆ ಸಾಕು ನಿ೦ಗೊ.ಎಷ್ಟು ಸಹನೆ ನಿ೦ಗೊಗೆ!ನಿ೦ಗಳ ಹಾ೦ಗಿಪ್ಪವರ ಮೇಲೆ ಅನುಮಾನಪಟ್ಟುಗೊ೦ಡು ಆನು ಎನ್ನ ಜೀವನಲ್ಲಿ ಇಬ್ರಿ೦ಗೂ ನೆಮ್ಮದಿ ಇಲ್ಲದ್ದ ಹಾ೦ಗೆ ಮಾಡಿದೆ.ಇನ್ನು ಹಾ೦ಗಿಪ್ಪ ತಪ್ಪು ಎನ್ನ ಕೈಲಿ ಆಗ.ಆನು ನಿ೦ಗಳ ಎನ್ನ ಹೆತ್ತಬ್ಬೆಯ ಹಾ೦ಗೇ ನೋಡಿಗೊ೦ಬೆ.ಎನ್ನ ತಪ್ಪುಗಳ ಕ್ಷಮಿಸಿ ಅತ್ತೆ .”
ಅತ್ತೆ ಎನ್ನ ತಲೆ ನೇವರಿಸಿದವು.” ನಿನಗೆ ಇಷ್ಟು ಬುದ್ಧಿ ಬ೦ತನ್ನೆ.ಅಷ್ಟೇ ಸಾಕು.ಎನಗೆ ಬೇರೆ೦ತದೂ ಬೇಡ.”
ರೇಡಿಯೋಲಿ ಚಿತ್ರಗೀತೆ ಬ೦ದುಗೊ೦ಡಿತ್ತು – ” ನಮ್ಮ ಸ೦ಸಾರ,ಆನ೦ದ ಸಾಗರ…”
~*~*~
ಕಥೆಯ ಬಗ್ಗೆ ಒಳ್ಳೆ ಅಭಿಪ್ರಾಯ ಬರೆದ ಎಲ್ಲಾ ಸೋದರಸೋದರಿಯರಿಂಗೆ dhanyavaadango
ಕಥೆ ತುಂಬ ವಾಸ್ತವ ಆಗಿದ್ದು ಅತ್ತಿಗೆ. ಅಭಿನಂದನೆಗಳು
ಕಥೆ ಭಾರೀ ಒಳ್ಳೆದಿದ್ದು ಅಕ್ಕ
ಈಗಿನ ಕಾಲಲ್ಲಿ ಹಂಗೆ ಅಪ್ಪದು ನಿಜ
ಒಳ್ಳೆ ನ್ಯಾಚುರಲ್ ಆಗಿದ್ದು ಕಥೆ
ಅಭಿನಂದನೆಗೋ.
ಉತ್ತಮ ಕಥೆ. ಅತ್ತೆಯನ್ನುದೆ ತನ್ನ ಅಮ್ಮನ ಹಾಂಗೆ, ಸೊಸೆಯನ್ನುದೆ ತನ್ನ ಮಗಳ ಹಾಂಗೆ ಕಂಡ್ರೆ ಲೋಕಲ್ಲಿ ಸಂಸಾರಂಗೊ ಎಷ್ಟು ಚೆಂದಕೆ ನೆಡಗಲ್ಲದೊ ? ಬಹುಮಾನ ಗಳಿಸಿದ್ದಕ್ಕೆ ಅಭಿನಂದನೆಗೊ ಸರಸ್ವತಿಯಕ್ಕ.
ಕತೆ ಲಾಯಿಕಾಯಿದು.
ಧನಾತ್ಮಕ ಯೋಚನೆಗಳ ತಂದು ಕೊಟ್ಟ ಉತ್ತಮ ಕಥೆ . ಸರಸ್ವತಿ ಅತ್ತೆಗೆ ಅಭಿನಂದನೆಗೋ .
ಲೋಕಲ್ಲಿ ನಿತ್ಯ ನಡವ ಘಟನೆಗೊಕ್ಕೆ ಅನಿರೀಕ್ಷಿತ ತಿರುವು .ಅತ್ತೆ ಆಗಲಿ ಸೊಸೆ ಆಗಲಿ ಸಣ್ಣ ಸಣ್ಣ ವಿಷಯ೦ಗಳ ದೊಡ್ಡ ಮಾಡದ್ದೆ ಪರಸ್ಪರರು ಹೊಂದಾಣಿಕೆಲಿ ಇರೆಕ್ಕಾದ್ದು ಮುಕ್ಯ .ಕಥೆ ಲಾಯಿಕಾಯ್ದು.
ಕತೆಯ ಸುಖಾಂತ್ಯ ಮಾಡಿ ಎಲ್ಲೋರಿಂಗೂ ನೆಮ್ಮದಿ ತಂದುಕೊಟ್ಟಿದಿ. ಅಜ್ಜಿ ಪುಳ್ಳಿಗೆ ಇನ್ನು ಹೊತ್ತು ಹೋದ್ದೆ ಗೊಂತಾಗ.ಅಭಿನಂದನೆಗೊ ಸರಸ್ವತಿ ಅಕ್ಕ.
ಒಳ್ಳೆ ಕತೆ. ನೈಜವಾಗಿ ಮೂಡಿಬೈಂದು. ಅಭಿನಂದನೆ ಅಕ್ಕ.