Oppanna.com

ಧರ್ಮಕ್ಕಾಗಿ ಬಂದವಾದರೂ, ದರ್ಮಕ್ಕೇ ಬದ್ಕುವವಲ್ಲ..!

ಬರದೋರು :   ಒಪ್ಪಣ್ಣ    on   24/02/2012    21 ಒಪ್ಪಂಗೊ

ಧರ್ಮಕ್ಕೇ ಸಿಕ್ಕಿರೆ ಒಪ್ಪಣ್ಣಂಗೂ ಪುಸ್ತಕ ಓದುತ್ತ ಹವ್ಯಾಸ ಇದ್ದು! 🙂
ಮಾಷ್ಟ್ರುಮಾವನ ದೊಡ್ಡಮಗನ ಹಾಂಗೆ ದೊಡ್ಡಪೈಶೆ ಕೊಟ್ಟು ಪುಸ್ತಕಂಗಳ ತಂದು ಐದುನಿಮಿಶಲ್ಲಿ ಓದಿಮುಗುಶುತ್ತ ಹಾಂಗಲ್ಲ!
ಬೈಲಿಲೇ ಆರದ್ದಾರು ಕೈಯಾನ ಕೈ ಸಿಕ್ಕಿದ್ಸರ ಪುರುಸೋತಿಲಿ; ಒಂದುವಾರ-ಒಂತಿಂಗಳು ಮಡಗಿ – ಓದಿ ಕೊಟ್ಟೋನಿಂಗೇ ಒಪಾಸು ಮಾಡುದು; ಅಲ್ಲದ್ದರೆ ಇನ್ನಾಣೋನಿಂಗೆ ಪಾಸು ಮಾಡುದು.
ಮದಲೆಲ್ಲ ದೊಡ್ಡದೊಡ್ಡ ಅಕ್ಷರದ್ದು, ಚಿತ್ರ ಇಪ್ಪದೆಲ್ಲ ಸರೀ ಅರ್ತ ಆಗಿಂಡಿತ್ತು, ಈಗ ಸಣ್ಣ ಅಕ್ಷರದ್ದೂ, ಚಿತ್ರ ಇಲ್ಲದ್ದದೂ ರಜ ಅರ್ತ ಅಪ್ಪಲೆ ಸುರು ಆಯಿದು! 😉
ಅರ್ತ ಆದರೂ, ಆಗದ್ದರೂ – ಓಪಾಸು ಕೊಡುವಗ ಹೇಳೇಕು ಹೇದು ಏನಿಲ್ಲೆ. ಹೇಳಿರೆ ಮತ್ತಾಣಸರ್ತಿ ಕೊಡುವಗ ಆಲೋಚನೆ ಮಾಡಿಕ್ಕುಗು – ಹೇಳ್ತದು ಒಪ್ಪಣ್ಣಂಗೂ ಅರಡಿಗು ಇದಾ!
~
ಮೊನ್ನೆ ಮಾಣಿಲಲ್ಲಿ ನಾಗಮಂಡಲ ನೆಡದ ಶುದ್ದಿ ಬೈಲಿಲೇ ಮಾತಾಡಿಗೊಂಡಿತ್ತವು.
ದರ್ಶನ ಪಾತ್ರಿಯ ಮೂಲಕ ಸರ್ಪನ ಪೂಜೆ ಮಾಡ್ತ ವಿಶೇಷ ಕ್ರಮ ಅಡ.
ದೊಡ್ಡಭಾವನೂ, ಯೇನಂಕೂಡ್ಳಣ್ಣನೂ ಚೆಂಙಾಯಿಗಳ ಕಟ್ಟಿಂಡು ಹೋಗಿ ಪಟ ತೋರುಸಿದ್ದವು ಬೈಲಿಂಗೆ (ಸಂಕೊಲೆ).
ಮೊನ್ನೆ ಅಜ್ಜಕಾನಬಾವನೊಟ್ಟಿಂಗೆ ಈ ಶುದ್ದಿ ಮಾತಾಡಿಂಡೇ – ಸರ್ಪನ ಬಗ್ಗೆ ಮಾತು ಬಂದಪ್ಪಗ ಸರ್ಪಮಲೆಮಾವನನ್ನೂ ನೆಂಪಾತು.
ಸರ್ಪಮಲೆಮಾವ ಯೇವಗಳೋ ಅಂದೊಂದರಿ ಸಿಕ್ಕಿ ಹೇಳಿತ್ತಿದ್ದವು – ಒಂದರಿ ಬಾ ಮನಗೆ ಹೇದು. ಮಾವ° ಹಾಂಗೆ ಹೇಳಿದ್ದು ಜೋರು ನೆಂಪಾತು!!
ಹೋಪನೋ ಕೇಳಿದೆ – ಅಜ್ಜಕಾನ ಬಾವ° ನಮ್ಮಂದ ಮದಲೇ ತೆಯಾರಲ್ಲದೋ!
ಹೋಪನ್ನ ಮದಲು ಪೋನು ಮಾಡಿಕ್ಕಿ ಮತ್ತೆ ಹೋಪೊ°; ಅಲ್ಲದ್ದರೆ – ಅವು ಮನೆಲಿಲ್ಲದ್ದರೆ ಕೈಬೀಸಿಂಡು ಒಪಾಸು ಬರೆಕ್ಕಟ್ಟೆ ಹೇಳಿದ° ಅಭಾವ°.
ಹೀಂಗಿರ್ಸರಲ್ಲಿ ಅವನ ಬುದ್ದಿವಂತಿಗೆ ಬಯಂಕರದ್ದು. ಅಭಾವನೇ ಮೊಬಿಳಿ ತೆಗದು ಪೋನು ಮಾಡುವಗ “ಡ್ರೈವಿಂಗಿಲಿದ್ದೆ ಅಳಿಯೋ, ಮತ್ತೆ ಮಾಡ್ತೆ” ಹೇಳಿಕ್ಕಿ ಮಡಗಿದವು.
ಮಡಗಿದ ಮತ್ತೆ “ಆತುಮಾವ°” ಹೇಳಿದ° ಇವ°!

ಮತ್ತೆ ಸರಿಸುಮಾರು ಒಂದೂವರೆ ಗಳಿಗೆ ಕಳುದಿಕ್ಕಿ ಇತ್ಲಾಗಿ ಮಾಡಿದವು. ಹೇಂಗೂ ಮರದಿನ ಕೊಡೆಯಾಲಕ್ಕೆ ಹೋಪೋನು ಇದ್ದಿದ್ದ ಅಜ್ಜಕಾನಬಾವ° – ಉಪಾಯಲ್ಲಿ ‘ನಾಳೆಬತ್ತೆಯೊ° ಮಾವ°’ ಹೇಳಿಕ್ಕಿ ಪೋನು ಮಡಗಿ ಆತು!
ಮರದಿನ ಉದಿಯಪ್ಪಗ ಹೆರಟು – ಹೆರಡುವಗ ಕಾಲಿಕೈಲಿ ಹೋವುತ್ಸೆಂತಕೆ ಹೇದು ಒಂದು ಗುಜ್ಜೆ ತೆಕ್ಕೊಂಡು – ಹತ್ತುಗಂಟೆ ಹೊತ್ತಿಂಗೆ ಎತ್ತಿತ್ತು.
~
ರಿಠೇರ್ಡು ಆದ ಮತ್ತೆ ಅವು ಮನೆ ಬಿಟ್ಟು ಹೆರಡುದೇ ಅಪುರೂಪ.
ಇಷ್ಟೊರಿಶವೂ ಅತ್ತೆಯ ಬಿಟ್ಟು ಆಪೀಸಿಲಿ ಕೂದ ಅಸಕ್ಕ ಬಿರುಸಲೆ ಈಗ ಮನೆಲೇ ಕೂರ್ತವು – ಹೇಳುಗು ಅಜ್ಜಕಾನಬಾವ°.
ಮೊನ್ನೆಯೂ ಹಾಂಗೇ ಆತು; ಎಂಗೊ ಎತ್ತುವಗ ಮಾವ° ಮನೆಲೇ ಇದ್ದವು!
ಮನೆ ಹಿಂದಾಣ ಕೈತೋಟಲ್ಲಿ ನೆಟ್ಟ ತೆಂಗಿನಸೆಸಿಲಿ ಹೊಸ ಮಡ್ಳು ಬಿಟ್ಟಿದೋ – ನೋಡ್ಳೆ ಹಿತ್ತಿಲಿಂಗೆ ಹೋಗಿತ್ತವು.
ಕೊಂಡೋದ ಗುಜ್ಜೆಯ ಸೌದಿಕೊಟ್ಟಗೆಲಿ ಮಡಗಿಕ್ಕಿ ಬಂದು ಎಂಗೊ ಚಾವಡಿಲಿ ಕೂದಪ್ಪದ್ದೇ ಹೇಳಿದವು, ‘ಅತ್ತೆ ಮದ್ಯಾನಕ್ಕೆ ಗುಜ್ಜೆಬೆಂದಿ ಮಾಡಿಕ್ಕಿಯೇ ಅಪ್ಪನ ಮನೆಗೆ ಹೋದ್ಸು’ – ಹೇಳಿಗೊಂಡು.
ಹೋ! ಅತ್ತೆ ಇತ್ತಿದ್ದವೇ ಇಲ್ಲೆ – ಅಪ್ಪನ ಮನೆ ಅಸಕ್ಕ ಬಂದಿತ್ತಡ!!

ಎಂಗಳಿಬ್ರ ಪೇನಿನ ಅಡಿಲಿ ಕೂರ್ಸಿಕ್ಕಿ, ಮಾವನೇ ಒಂದು ಆಸರಿಂಗೆ ಮಾಡಿ ತಂದುಕೊಟ್ಟವು.
ಪಷ್ಟ್ಳಾಸು ಛಾಯ, ಮೂರಿ ಇಲ್ಲದ್ದ ಮಾರಿ ಬಿಸ್ಕೇಟು ಅದ್ದಿ ತಿಂಬಲೆ.
ಆಸರಿಂಗೆ ಕುಡುದಪ್ಪದ್ದೇ ಒಂದರಿ ಹಿತ್ತಿಲಿಂಗೆ ಕರಕ್ಕೊಂಡು – ಬಾಳೆತೆಂಗು ಇತ್ಯಾದಿ ಅಲಫಲಂಗಳನ್ನೂ, ದಾರ್ಳೆಹಾಗಲ ಇತ್ಯಾದಿ ನೆಟ್ಟಿಕಾಯಿಗಳನ್ನೂ ನೋಡುಸಿದವು.
ಅವರ ಜಾಗೆ ಪೇಟೆಲಿದ್ದರೂ ಬೈಲಿನ ತುಂಡು ಒಂದು ರಚನೆ ಆದ್ಸರ ಕಂಡು ಕೊಶೀ ಆತು.
ಸೂರ್ಯ ನೆತ್ತಿಗೆ ಬಪ್ಪನ್ನಾರವೂ ಒಳ ಬಯಿಂದಿಲ್ಲೆ.
ಬೆಶಿಲೇರಿದ ಮತ್ತೆ ಮನೆಒಳ ಕೂದುಗೊಂಡೇ ಲೋಕಾಭಿರಾಮ ಮಾತಾದ್ಸು; ಬಂದದೇ ಅದಕ್ಕಲ್ಲದೋ!
ಬೈಲಿಲಿ ಕಳುದ ವಾರ ಬಂದ ಜಾಗೆಮಾರುದು – ಜಾಗೆಕೊಡುದು ಈ ಶುದ್ದಿಯ ಬಗ್ಗೆ ತುಂಬಾ ಚೆಂದಲ್ಲಿ ಮಾತಾಡಿದವು ಮಾವ°.
ಹಳ್ಳಿಂದ ಜಾಗೆಕೊಟ್ಟು ಪೇಟಗೆ ಹೋಗಿ ಕೂಪದು – ಹಳ್ಳಿಲಿ ಬದ್ಕಿದ ಅಜ್ಜಂದ್ರಿಂಗೆ ಪೇಟೆ ಹಿಡಿಯದ್ದೆ ಅಪ್ಪದು – ಅಲ್ಲಿ ಜೀವನಲ್ಲಿ ಒಂಟಿತನ ಬಪ್ಪದು – ಓಪಾಸು ಊರಿಂಗೆ ಬಪ್ಪಲೆ ಎಡಿಯದ್ದೆ ಅಪ್ಪದು – ಇದೆಲ್ಲವನ್ನೂ ಮಾವನ ಸಮಕಾಲೀನರು ಅನುಭವಿಸಿದ್ದವಡ.
ಹೀಂಗಿರ್ತ ಎಷ್ಟೋ ಘಟನೆಗೊ ನಮ್ಮ ಬೈಲಿಲೇ ಆಯಿದು – ಹೇಳ್ತದು ಅವರ ಅಭಿಪ್ರಾಯ.
ಕೊಂಕಣಿಗಳ ಹಾಂಗೆ ಅನಿವಾರ್ಯ ಪರಿಸ್ಥಿತಿ ಆದರೆ ಸಮ; ಅನಿವಾರ್ಯ ಅಲ್ಲದ್ದರೂ ಹೀಂಗೆಲ್ಲ ವಲಸೆ ಹೋಪಲಾಗ; ಇನ್ನಾರೂ ನಾವು ಎಚ್ಚರಿಗೆ ಆಯೇಕು – ಹೇಳಿದವು.

ಸರ್ಪಮಲೆ ಮಾವ° ತೋರುಸಿದ ಪುಸ್ತಕ

~
ಕೊಂಕಣಿಗೊ? ಅವು ಎಲ್ಲಿಂದ ವಲಸೆ ಹೋದ್ಸು – ಕೇಳಿದ ಅಜ್ಜಕಾನ ಬಾವ°.
ಸರ್ಪಮಲೆಮಾವ° ಓ ಮೊನ್ನೆ ಕನ್ನಡಲ್ಲಿ ಹೇಳಿದ್ದು ಅಜ್ಜಕಾನಬಾವಂಗೆ ಮಂಡಗೆ ಹೊಕ್ಕಿದ್ದಿಲ್ಲೆಯೋ ಏನೋ!
ಮೆಲ್ಲಂಗೇ ಎದ್ದು – ಮೇಜಿನಮೇಗೆ ಇದ್ದ ಅಟ್ಟಿಲಿ ಮೇ..ಗಾಣ ಪುಸ್ತಕವ ತೆಗದು ಎದುರಂಗೆ ನೂಕಿ ಹೇಳಿದವು – “ಇದಾ, ಇದರ್ಲಿ ಕೊಂಕಣಿಗಳ ವಲಸೆಯ ಬಗ್ಗೆಯೇ ಇದ್ದಿದಾ..” ಹೇದು.
ಅಜ್ಜಕಾನಬಾವ° ಹಿಡ್ಕೊಂಡು ಚೋಲಿಪುಟ ಓದಲೆ ಸುರುಮಾಡಿದ° – ಗೋಪಾಲಕೃಷ್ಣ ಪೈ ಬರದ ಸ್ವಪ್ನ ಸಾರಸ್ವತ ಕಾದಂಬರಿ ಇದು. ಎಕಾಡೆಮಿ ಪ್ರೈಸು ಬಯಿಂದು ಇದಕ್ಕೆ! – ಹೇಳಿಗೊಂಡು.
ಪ್ರೈಸು ಬಂದರೂ, ಬಾರದ್ರೂ – ಒಳ್ಳೆ ಕತೆ. ಪುಸ್ತಕ ಓದಲಕ್ಕಾದ್ಸು – ಹೇಳಿದವು ಮಾವ°, ಸಮದಾನಲ್ಲಿ..
ಮಾವ° ಮಾಷ್ಟ್ರ° ಆಗಿದ್ದ ಕಾರಣವೋ ಏನೋ, ತುಂಬಾ ಸಮದಾನಿ; ಈಗಳೂ ಸಮದಾನಲ್ಲೇ ಇದ್ದಿದ್ದವು.
~

ಆಗಲೇ ಹೇಳಿದಾಂಗೆ, ದರ್ಮಕ್ಕೆ ಸಿಕ್ಕಿರೆ ಓದಲೆ ನವಗೆಂತಾಯೇಕು ಅಲ್ಲದೋ! ಓದಲೆ ಇದೊಂದು ಸಿಕ್ಕಿತ್ತು – ಹೇಳಿಗೊಂಡು ಕೊಶಿ ಆತು ಒಪ್ಪಣ್ಣಂಗೆ.
ಆದರೆ ಇದು ಚಿತ್ರಕತೆ ಅಲ್ಲ, ಓ ಆ ಜೆನ ಓದುತ್ತ ಚಂದಮಾಮ ಅಲ್ಲ – ಹತ್ತು ಐನ್ನೂರು ಪುಟ ಇದ್ದು.
ಓದುಲೆ ಕೂದರೆ ಒಂದೇ ದಿನಲ್ಲಿ ಮುಗಿಯ. ಬಿಟ್ಟುಬಿಟ್ಟು ಓದುವಗ – ಎರಡ್ಣೇ ದಿನ ಓದುವಗ ಸುರುವಾಣದ್ದು ಮರದರೆ? ಮರೆಯದ್ದರೂ – ಅರ್ತ ಆಗದ್ದರೇ! – ಹೇದು ಹೆದರಿಕೆ ಆತು.
ಮಾವನ ಸಮದಾನ ನೋಡಿಗೊಂಡು – ಮಾವ°, ಓದುದು ಓದುತ್ತೆ. ನಿಂಗೊಗೆ ಓದಿ ಆಗಿದ್ದರೆ ಒಂದರಿ ಕತೆ ಹೇಳಿಕ್ಕಿ – ಹೇಳಿದೆ.

ನೀನು ಓದು, ಅರ್ತ ಅಕ್ಕು – ಹೇಳಿದವು ಸಮದಾನಲ್ಲಿ!
ಮೇಗಂದಮೇಗೆ ನಿಂಗೊ ಕತೆ ಎಂತರ ಹೇದರೆ ಎಂಗೊಗೆ ಓದಲೆ ಸುಲಬ ಅಕ್ಕು – ಅಜ್ಜಕಾನಬಾವನೂ ಸೊರ ಸೇರುಸಿದ°.
ನೆಗೆಮಾಡಿಂಡೇ ಎದ್ದುನಿಂದು, ಮುಂಡು ಮೇಗೆಕಟ್ಟಿಂಡು – ಈಗ ಬಂದೆ- ಹೇದು ಸೀತ ಅಟ್ಟುಂಬೊಳಂಗೆ ನೆಡದವು.
ಎಂಗೊ ಬಪ್ಪದು ಮದಲೇ ಗೊಂತಿದ್ದ ಕಾರಣ ಅತ್ತೆಯೇ ಹೆರಡುವನ್ನ ಮದಲು ಅಡಿಗೆ ಮಾಡಿ ಮಡಗಿತ್ತವು – ಮಾವಂಗೆ ಬಂಙ ಅಪ್ಪದು ಬೇಡ ಹೇಳಿಯೋ ಏನೋ,
ಮಾವ° ಅಡಿಗೆ ಮಾಡ್ಳೆ ಹೆರಟು ಎಲ್ಲದಕ್ಕೂ ಹಿಡುಶಿ ಹಾಕುತ್ಸು ಬೇಡ ಹೇಳಿಗೊಂಡು ಆಯಿಕ್ಕು – ಹೇದು ಅಜ್ಜಕಾನಬಾವ° ಗ್ರೇಶುಗು; ಒಪ್ಪಣ್ಣ ಹಾಂಗೆಲ್ಲ ಗ್ರೇಶ°!
ಅದಿರಳಿ.
ಗುಜ್ಜೆಬೆಂದಿಯ ಒಲೆಲಿ ಮಡಗಿ ಬೆಶಿ ಮಾಡಿಕ್ಕಿ, ಅಶನ ಮೂರು ಜೆನಕ್ಕಪ್ಪಷ್ಟಿದ್ದನ್ನೇ – ಹೇದು ಧೃಡಮಾಡಿಕ್ಕಿ, ಒಂದು ಚೆಂಬು ಬೆಶಿನೀರು ಹಿಡ್ಕೊಂಡು ಹೆರ ಬಂದು ಕೂದವು.
ಎರಡು ಗ್ಳಾಸು ನೀರು ಬಗ್ಗುಸಿ ಕುಡುದು ಪುಸ್ತಕದ ಕತೆ ಹೇಳುಲೆ ಸುರುಮಾಡಿದವು.
~

ಗೋಕರ್ಣಂದಲೂ ಬಡಗಕ್ಕಿಪ್ಪ ಗೋವೆ ರಾಜ್ಯಲ್ಲಿ ಪೋರ್ಚುಗೀಸರು ಆಳ್ವಿಕೆ ಆರಂಭ ಮಾಡಿದವಡ, ಹದ್ನಾರನೇ ಶತಮಾನಲ್ಲಿ.
ನಮ್ಮವರ ಒಳಾಣ ಬೆಂಬಲಂದಲೇ ಅವು ಬಪ್ಪಲೆ ಕಾರಣ ಆದ್ಸಡ.
ಬಂದೋರು ರಾಜತಾಂತ್ರಿಕ ಆಳ್ವಿಕೆ ಮಾಂತ್ರ ಅಲ್ಲದ್ದೆ – ದಬ್ಬಾಳಿಕೆಯೂ ಸುರುಮಾಡಿದವಡ.
ಕೇವಲ ವ್ಯಾಪಾರ ಉದ್ದೇಶ ಮಾಂತ್ರ ಅಲ್ಲ – ಅವರ ಪೊರ್ಬುಧರ್ಮವನ್ನೂ ವಿಸ್ತಾರಮಾಡ್ಳೆ ಹೆರಟವಡ.
ಇದಕ್ಕೋಸ್ಕರ ಅಲ್ಲಿಪ್ಪ ಜೆನಂಗಳ ಧರ್ಮಾಂತರ ಮಾಡ್ಳೆ ಸುರುಮಾಡಿದವಡ.
ಧರ್ಮಾಭಿಮಾನಿಗೊ ಆದ, ಪರಧರ್ಮ ಸಹಿಷ್ಣುಗೊ ಆದ ನಮ್ಮ ಜೆನಂಗೊಕ್ಕೆ ಇದು ಅಸಹನೀಯವೂ, ವಿಚಿತ್ರವೂ ಕಂಡು – ವಿರೋಧುಸಿದವಡ. ವಿರೋಧ ಕೊಟ್ಟ ಸಹಸ್ರಾರು ಜೆನಂಗಳ ಭೀಕರವಾಗಿ ಕೊಂದವಡ.
ಲಕ್ಷಾಂತರ ಸನಾತನಿಗೊ ಈ ಪೆಟ್ಟು ತಡವಲೆಡಿಯದ್ದೆ – ಜೀವ ಒಳುದರೆ ಸಾಕು – ಹೇಳಿಗೊಂಡು ಅನಿವಾರ್ಯವಾಗಿ ಪೊರ್ಬುಗೊ ಆದವಡ!

ನಿನ್ನೆ ಒರೆಗಾಣ ಧರ್ಮ ಇಂದಿಲ್ಲೆ, ನಿನ್ನೆ ಒರೆಗಾಣ ದೇವರುಗೊ ನಾಳೆಂದ ಇಲ್ಲೆ! ಪೂರ್ತಿ ಧರ್ಮಾಂತರ.
ಸಾವಿರಾರು ಮೈಲು ದೂರದ ಯೇವದೋ ಧರ್ಮ ಒಂದರ ಪೆಟ್ಟಿನ ಬೆಶಿಗೆ ಹಿಡ್ಕೊಂಡತ್ತು. ಜೀವವೇ ಮುಖ್ಯ ಹೇಳ್ತೋರಿಂಗೆ ಅದು ಅನಿವಾರ್ಯದ ವಿಷಯ.
ಆದರೆ, ಜೀವಂದಲೂ ಹೆಚ್ಚಾಗಿ, ನಮ್ಮ ಧರ್ಮ ಮುಖ್ಯ, ನಮ್ಮ ಸನಾತನತೆ ಮುಖ್ಯ, ನಮ್ಮ ಹೆತ್ತಬ್ಬೆ ನೆಡಕ್ಕೊಂಡ ದೇವರುಗೊ ಮುಖ್ಯ, ನಮ್ಮ ಆಚಾರ-ವಿಚಾರಂಗೊ ಮುಖ್ಯ – ಹೇದು ಆಲೋಚನೆ ಮಾಡಿದ ಒಂದಷ್ಟು ಜೆನಂಗೊ ಎಂತ ಮಾಡೇಕು?
ಅಲ್ಲಿ ನಿಂದರೆ ಬದ್ಕ – ಹೇಳ್ತದು ನಿಘಂಟು. ಬದ್ಕದ್ದ ಮತ್ತೆ ಈ ಧರ್ಮವೂ ಆಚರಣೆ ಮಾಡ್ಳೆಡಿಯ, ಈ ದೇವರುಗೊಕ್ಕೆ ನೈವೇದ್ಯ ಮಾಡ್ಳೂ ಆರೂ ಒಳಿಯ!
ಹಾಂಗಾಗಿ, ನೂರಾರು-ಸಾವಿರಾರು ಜೆನಂಗೊ ಅಲ್ಲಿಂದ ಊರುಬಿಟ್ಟು ಹೆರಟವಡ!
ನಮ್ಮ ಭಾಶೆ, ನೀತಿ, ಧರ್ಮವೇ ಮುಖ್ಯ – ಹೇಳಿಗೊಂಡು ಅವರ ಅಭಿಮಾನ ಹೆಚ್ಚುಮಾಡಿದ “ನಗ್ನ ಬೇತಾಳ” ಹೇಳ್ತ ಕಲ್ಪನೆಯೇ ಆ ಊರು ಬಿಟ್ಟು ಹೆರಡ್ಳೆ ಪ್ರೇರಣೆ ಆತಡ.

ಅಂತೇ ಹೆರಟಿದವಿಲ್ಲೆ, ಹೆರಡುವಗ ಅವರ ಮನೆದೇವರು, ಕುಲದೇವರು, ಇಷ್ಟದೇವರು, ಗ್ರಾಮದೇವರು, ಊರ ದೇವಸ್ಥಾನದ ಗುಂಡದೊಳಾಣ ದೇವರು – ಇವರೆಲ್ಲರ ಕರಕ್ಕೊಂಡೇ ಹೆರಟವು.
ದೊಡ್ಡದೊಡ್ಡ ಶ್ರೀಮಂತಿಕೆಯ ಸುತ್ತಿನ ಮನೆ ಇದ್ದೋರುದೇ ಹೆರಟದೇ – ಬರಿಗೈಲಿ! ನಿನ್ನೆ ಒರೆಂಗೆ ಶ್ರೀಮಂತರು, ನಾಳೆಂದ ಏನಿಲ್ಲೆ.
ಅವರ ದೇವರುಗಳೂ ಹಾಂಗೇ – ಶ್ರೀಮಂತ ದೇವಸ್ಥಾನಲ್ಲಿ ನೈವೇದ್ಯ ತೆಕ್ಕೊಂಡಿದ್ದ ದೇವರ ದೇವಸ್ಥಾನವ ಒಡದು ಇಂಗ್ರೋಜಿ ಮಾಡಿದವು. ದೇವರು ಉಪವಾಸ; ದೇವರ ಪರಿಚಾರಕರೂ ಉಪವಾಸವೇ.
ಧರ್ಮಾಂಧರ ಕೈ ತಪ್ಪುಸಿ ತೆಂಕ್ಲಾಗಿ ಓಡಿ ಬಂದವಡ! ತೆಂಕ್ಲಾಗಿ, ತೆಂಕಕ್ಕೆ, ತೀರಾ ತೀರಾ ತೆಂಕಕ್ಕೆ, ಸಮುದ್ರ ತೀರಲ್ಲೇ – ಇನ್ನೂ ತೆಂಕಕ್ಕೆ.
ಭೂಪಟ ಹಿಡುದು ನೋಡಿರೆ ಮೇಗಂದ ಕೆಳಾಂತಾಗಿ ವಲಸೆ!
ಮಾವ° ಮೇಜಿಲೇ ಬಾರತದ ಶಂಕು ಬರದು ಮೇಗಂದ ಕೆಳಾಂತಾಗಿ ಗೆರೆ ಎಳದವು ಒಂದರಿ.

ಅದು ಬರೇ ಭೂಪಟಲ್ಲಿ ಮಾಂತ್ರ ಅಲ್ಲ, ಅವರ ಸಾಮಾಜಿಕ, ಆರ್ಥಿಕ, ಕೌಟುಂಬಿಕ, ಮಾನಸಿಕ ನೆಮ್ಮದಿಲಿಯೂ – ಮೇಗಂದ ಕೆಳಾಂಗೇ ಇಳುದವು ಹೇಳಿದವು.
–  ಆ ವಲಸೆ ಬಂದೋರಲ್ಲಿ ಅಲ್ಯಾಣ ಸಾರಸ್ವತ ಬ್ರಾಹ್ಮಣರೂ ಮುಖ್ಯವಾಗಿ ಇದ್ದವಡ – ಹೇಳಿದವು ಮಾವ°.
ದೂ..ರದ ಕೊಚ್ಚಿಲಿ ರಾಜಾಶ್ರಯಲ್ಲಿ ಕೆಲವು ಜೆನ ಅವರ ಪೈಕಿಯೋರು ಇದ್ದವು ಹೇಳ್ತ ಆಶೆಲಿ, ಅವರ ಒಟ್ಟಿಂಗೆ ಬದ್ಕಿರೆ ರಜ ನೆಮ್ಮದಿ ಸಿಕ್ಕುಗೋ ಹೇಳ್ತ ಆಶೆಲಿ ಅಲ್ಲಿಂದ ಹೆರಟವಡ
.

ಇಂದುದೇ ಸಾರಸ್ವತ ಬ್ರಾಹ್ಮಣ ಸಂಸ್ಕಾರಂಗೊ ಒಳುದಿದ್ದರೆ ಅದಕ್ಕೆ ಈ ಬೇತಾಳನೇ ಕಾರಣ - ಹೇಳಿದವು ಸರ್ಪಮಲೆ ಮಾವ°

~
ಗೋವೆಂದ ಹಿಡುದು ಕೆಳಂತಾಗಿ ಬಂದು ಹೊನ್ನಾವರ – ಬಾರ್ಕೂರು – ಕುಂದಾಪುರ – ಉಡುಪಿ – ಮೂಲ್ಕಿ – ಕೊಡೆಯಾಲ – ಉಳ್ಳಾಲ – ಮಂಜೇಶ್ವರ – ಸಿರಿಯ – ಆಗಿ ನಮ್ಮ ಕುಂಬಳೆ ಒರೆಂಗೂ ಬಂದ ಕತೆಯ ಈ ಕತೆಪುಸ್ತಕಲ್ಲಿ ಬರದ್ದವಡ.
ಪ್ರತಿ ಊರು ಬಪ್ಪಗಳೂ ಕೆಲವು ಕುಟುಂಬಂಗೊ ಮುಂದೆಬಾರದ್ದೆ ಒಳ್ಕೊಂಡಿದು.
ಈಗ ಅದು ಒಂದು ಬಸ್ಸಿಲಿ ಹೋದರೆ ಅರ್ದ ದಿನದ ದಾರಿ. ಆದರೆ ಆ ಕಾಲಲ್ಲಿ ಅಷ್ಟು ಎತ್ತೇಕಾರೆ ಎಷ್ಟೋ ಇರುಳುಗಳ ಕಳದ್ದವು.
ಈಗ ನೋಡಿರೆ ನಮ್ಮ ಬೈಲಿನ ಎಲ್ಲಾ ಊರುಗಳಲ್ಲಿಯೂ ಸಾರಸ್ವತ ಬ್ರಾಹ್ಮಣರ ಮನೆಗೊ ಕಾಂಬಲೆ ಸಿಕ್ಕುದು ಇದೇ ಕಾರಣಂದ – ಹೇಳಿದವು ಸರ್ಪಮಲೆ ಮಾವ°.
~
ಬಂದವುದೇ ಹಾಂಗೇ, ಆಯಾ ಊರಿಲಿ ಆಯಾ ಊರಿನವೇ ಆಗಿ, ಊರಿನ ಪ್ರಗತಿಲಿ ಬಹುಮುಖ್ಯ ಪಾತ್ರವ ವಹಿಸಿಗೊಂಡವು.
ಯೇವ ಊರಿಲೇ ಆದರೂ ಅವು ಧರ್ಮಕ್ಕೇ ಬದ್ಕಿಗೊಂಡಿಲ್ಲೆ.
ವ್ಯಾಪಾರ, ವ್ಯವಹಾರ, ದೇವಸ್ಥಾನ, ಕೃಷಿ, ಸಮಾಜದ ಸಹಬಾಳ್ವೆ – ಎಲ್ಲದರ್ಲಿಯೂ ಮುಂದೆ ನಿಂದುಗೊಂಡು, ಒರ್ಮೈಸಿಗೊಂಡು ಹೋವುತ್ತಾ ಇದ್ದವು.
ನಿಜವಾಗಿ ಬೇರೆ ಊರಿಂದ ಬಂದವು ಆದರೂ, ನಮ್ಮವೇ ಆಗಿ ಹೋಯಿದವು. ಅವರ ವಿಶೇಷದ್ದರ ನವಗೆ ಕಲಿಶಿ, ನಮ್ಮ ವಿಶೇಷದ್ದರ ಅವು ಕಲ್ತುಗೊಂಡು, ನಮ್ಮ ಒಳಾಣ ಒಂದು ಪಂಗಡ ಆಗಿಯೇ ಹೋಯಿದವು.
ಯೇವ ಧರ್ಮಕ್ಕೆ ಬೇಕಾಗಿ ಅವು ಊರು-ಸೂರು ಬಿಟ್ಟವೋ – ನಂಬಿದ ಆ ಧರ್ಮವ ಒಳಿಶಿಗೊಂಡು, ಅದರ್ಲೇ ನೆಡೆತ್ತಾ ಇದ್ದವು ಇಂದಿನ ಒರೆಂಗೂ.
ಅವರ ವಿಶೇಷ ಆಚಾರ-ವಿಚಾರಂಗೊ, ಕಟ್ಟುಪಾಡುಗೊ-ರೀತಿ ರಿವಾಜುಗೊ, ಮುಖ್ಯವಾಗಿ ಅವರ ಭಾಶೆಗೊ – ಎಲ್ಲವುದೇ ಪರಿಪೂರ್ಣವಾಗಿ ಇಂದಿನ ಒರೆಂಗೂ ಒಳ್ಕೊಂಡು ಬಯಿಂದಾಡ.
ಅಂತೂ, ಅವು ಇಪ್ಪಲ್ಲೆಲ್ಲ ಅವರ ಅಭಿಮಾನದ “ಗೋವೆ ಬೈಲಿನ” ಕಟ್ಟಿ ಬೆಳೆಶಿಗೊಂಡು ಇದ್ದವಡ.
ತಲೆಮಾರು ಕಳುದು ಹೋದರೂ ಇವುಗಳ ಬಗ್ಗೆ ಅಭಿಮಾನ ಗಟ್ಟಿ ಇದ್ದರೆ ಮಾಂತ್ರ ಹೀಂಗೆ ಒರಿಶಾನುಗಟ್ಳೆ ಒಳಿಗಷ್ಟೆ – ಹೇಳ್ತದು ಮಾವನ ಅಭಿಪ್ರಾಯ.
~
ಉಂಬ ಹೊತ್ತಾತು.
ಎತ್ತುವಗ ಹೊತ್ತು ಹನ್ನೊಂದು ಆದ ಕಾರಣ ಇನ್ನು ಉಂಡಿಕ್ಕಿಯೇ ಹೆರಡುದು ಹೇಳ್ತ ಸಂಗತಿ ಒತ್ತಾಯ ಇಲ್ಲದ್ದರೂ ಗೊಂತಿಪ್ಪ ಸತ್ಯವೇ. ಮಾವ° ಹಾಂಗೆ ಹೇಳಿಯೇ ಹೇಳ್ತವು.
ಹೇಳದ್ದರೆ ಅಜ್ಜಕಾನಬಾವಂಗೆ ತಾಜುಮಹಲೇ ಗೆತಿ ಆವುತ್ತಿತು. ಆದರೆ ಇಂದು ಹಾಂಗಾಯಿದಿಲ್ಲೆ; ಸರ್ಪಮಲೆ ಅತ್ತೆಯ ಕೈಅಡಿಗೆಯೇ ಸಿಕ್ಕಿದ್ದು!
ಪಾಕಂಗಳ ಎದುರೇ ಮಡಗಿ ಮೂರೂ ಜೆನ ಆಂತೊಂಡು ಉಂಡಾತು.
ಹೊತ್ತಪ್ಪಗ ಅತ್ತೆ ಬಂದು ಎಷ್ಟು ಜೆನ ಬಂದಿತ್ತವು ಇಂದು – ಹೇಳುವಗ ಮಾವ° “ಆನೂ ಸೇರಿ ಮೂರೇ” ಹೇದರೆ ಅತ್ತೆಗೆ ನಂಬಿಕೆಯೇ ಬಾರ!
ಎಂತಗೆ? – ಇರುಳಿಂಗೂ ಸಾಕಕ್ಕು ಹೇದು ಮಾಡಿದ ಗುಜ್ಜೆಬೆಂದಿ ಅಜ್ಜಕಾನಬಾವನ ಒಂದೇ ಪೆಟ್ಟಿಲಿ ಕಾಲಿ! ಪಾಕವುದೇ ಹಾಂಗೆ, ಪಷ್ಟ್ಳಾಸಾಯಿದು! – ಗುಜ್ಜೆಗಸಿಯ ಪರಿಮ್ಮಳ ಕೈಂದ ಇನ್ನೂ ಹೋಯಿದಿಲ್ಲೆ ಇದಾ!!
ಬೆಶಿಲಿಂಗೆ ಮನುಗಿ, ಒಂದರಿ ಆಸರಿಂಗೆ ಕುಡುದು ಹೆರಟೂ ಆತು. ಬಪ್ಪಗ ಅಂತೇ ಬಯಿಂದಿಲ್ಲೆ – ಆ ಪುಸ್ತಕ ಹಿಡ್ಕೊಂಡೇ ಬಯಿಂದು ನಾವು.
ಇನ್ನು ಕೂದಂಡು ಅದರ ಓದೇಕು. ಅರ್ತ ಆಗದ್ದರ ಮಾಷ್ಟ್ರುಮಾವನ ಕೈಲಿ ಕೇಳಿ ಆದರೂ ಓದೇಕು.
~
ಕುಂಬ್ಳೆಗೆ ಬಂದು ನೆಲೆ ಆದೋರು ಕಣಿಪುರ ದೇವಸ್ಥಾನಲ್ಲಿಯೂ ಸೇರಿಗೊಂಡು, ದೇವರ ಗವುಜಿಗಳ ನೆಡೆಶುವಲ್ಲಿ ಚೆಂದಲ್ಲಿ ಸೇರಿಗೊಳ್ತವಡ.
ಧರ್ಮಕ್ಕಾಗಿ ಊರು ಬಿಟ್ಟು ಬಂದರೂ,  ಈ ಹೊಸ ಊರಿಲಿ ದೇವರು ಮೆಚ್ಚುವ ರೀತಿಲೇ ಅವು ಒಂದಾಗಿ ಬಯಿಂದವು.
ಕಾಸ್ರೋಡಿಲಿ ತುಂಬಿದೋರ ಹಾಂಗೆ ಆರಾರ ಮನಗೆ ಬೋಂಬುಮಡಗಿ, ಆರಾರ ಲಗಾಡಿ ತೆಗದು, ಕಳ್ಳನೋಟು ಮಾಡಿ – ಆರಾರ ತಲೆಒಡದು ಜೀವನ ಮಾಡಿದ್ದವಿಲ್ಲೆ ಅಪ್ಪೋ!
ಒಂದೊಂದು ವ್ಯಾಪ್ತಿ ಹುಡ್ಕಿ ಅವರವರ ಅಶನವ ಅವರ ದಾರಿಲೇ ಕಂಡುಗೊಂಡಿದವು; ಸ್ವಾಭಿಮಾನಲ್ಲಿ ಕುಟುಂಬ ಕಟ್ಟಿ ಬೆಳೆಶಿದ್ದವು
– ಹೇಳಿ ಅಭಿಮಾನಲ್ಲಿ ಸರ್ಪಮಲೆ ಮಾವ° ಹೇಳಿದ್ದು ಅಲ್ಲಿಂದ ಹೆರಟು ಮನಗೆತ್ತುವನ್ನಾರವೂ ತಲೆಲಿ ತಿರುಗೆಂಡಿದ್ದತ್ತು.

ಎಂತಕೂ, ಮದಾಲು ಪುಸ್ತಕ ಓದೇಕು.
ನಮ್ಮ ಅಜ್ಜಂದ್ರೂ ಗೋಕರ್ಣಂದ ಹೆರಟು ಬೈಲಿಂಗೆ ಎತ್ತಲೆ ಎಂತಾರು ಕಾರಣ ಇದ್ದಿಕ್ಕಲ್ಲದೋ?
ಹೀಂಗೇ ಏನಾರು ವೇದನೆಗೊ, ಪ್ರಯಾಣದ ಸನ್ನಿವೇಶಂಗೊ, ಭಾವನೆಗೊ ಇಕ್ಕಲ್ಲದೋ?
ಅದನ್ನೂ ಆರಾರು ಶುದ್ದಿ ಹೇಳಿದ್ದರೆ ಒಳ್ಳೆದಿತ್ತು – ಹೇದು ಕಂಡತ್ತು ಒಂದರಿ.
ಅದೇನೇ ಇರಳಿ, ಒಪ್ಪಣ್ಣಂಗೆ ಈ ಪುಸ್ತಕ ಓದಿ ಆದ ಮತ್ತೆ ಪಾಸು ಮಾಡೇಕೋ? ಒಪಾಸು ಮಾಡೇಕೋ?
~
ಒಂದೊಪ್ಪ:
ಧರ್ಮಕ್ಕಾಗಿ ಬದ್ಕಿರೆ ಸಮಾಜಕ್ಕೆ ಆಸ್ತಿ ಆವುತ್ತವು; ಧರ್ಮದಂಡಕ್ಕೆ ಬದ್ಕಿರೆ ಸಮಾಜಕ್ಕೆ ಪೀಡೆ ಆವುತ್ತವು.

ಸೂ:

  • ಸರ್ಪಮಲೆ ಮಾವ° “ಸ್ವಪ್ನ ಸಾರಸ್ವತ” ಕಾದಂಬರಿಯ ಬಗ್ಗೆ ಸಿರಿಗನ್ನಡಲ್ಲಿ ಹೇಳಿದ ಶುದ್ದಿ: (ಸಂಕೊಲೆ)
  • ನಾಗ್ಡೋ ಬೇತಾಳನ ಪಟ ಕೃಪೆ: http://www.flickr.com/photos/fn-goa/123921850/
  • ಆಕೃತಿ ಪುಸ್ತಕದ ಬೈಲಿಲಿ ‘ಸ್ವಪ್ನ ಸಾರಸ್ವತ’ವ ಕ್ರಯ ಕೊಟ್ಟು ತೆಕ್ಕೊಂಬಲಕ್ಕು : ಸಂಕೊಲೆ

21 thoughts on “ಧರ್ಮಕ್ಕಾಗಿ ಬಂದವಾದರೂ, ದರ್ಮಕ್ಕೇ ಬದ್ಕುವವಲ್ಲ..!

  1. ಲೇಖನ ಲಾಯಿಕಾಯಿದು ಒಪ್ಪಣ್ಣ.

  2. ಸರ್ಪಮಲೆ ಮಾವನಲ್ಲಿಗೆ ಹೋಗಿ, ಕೊಂಕಣಿಗೊ ಮೇಗಂದ ಕೆಳಾಂತಾಗಿ ಎಂತಕ್ಕೆ ಬಂದವು ಹೇಳಿ ಲಾಯಿಕ್ಕಕ್ಕೆ ವಿವರಿಸಿದ್ದೆ. ಧನ್ಯವಾದ. ಹಾಂಗೆಯೇ ನಮ್ಮವು ಹೇಂಗೆ ಬಂದವು, ಏನೆಲ್ಲ ಕಷ್ಟ ಅನುಭವಿಸೆಕ್ಕಾಗಿ ಬಂತು ಹೇಳಿ ತಿಳಿವಲೆ ಕುತೂಹಲಂದ ಕಾಯುತ್ತಾ ಇದ್ದೆ.

  3. ಬರದ್ದು ಲಾಯಿಕಾಯಿದು ಹೇಳುತ್ತೆ ಒಪ್ಪಣ್ಣೊ, ಸಾಕಲ್ಲದೊ ? ಈ “ಲಾಯಿಕು” ಹೇಳುವ ಶಬ್ದ ಈ ಪುಟಲ್ಲಿ ಅತಿ ಹೆಚ್ಚು ಉಪಯೋಗ ಆವ್ತಾ ಇದ್ದು – ಊಟ ಲಾಯಿಕಾಯಿದು, ನಾಟಕ ಲಾಯಿಕಾಯಿದು, ಮಾತಾಡಿದ್ದು ಲಾಯಿಕಾಯಿದು, ಹಾಡಿದ್ದು ಲಾಯಿಕಾಯಿದು, ಪಟಂಗೊ ಲಾಯಿಕಿದ್ದು, … ಹೀಂಗೆ ಎಲ್ಲವೂ ಲಾಯಿಕೆ! ಬೇರೆ ಸರಿಯಾದ ಶಬ್ದಂಗೊ ಬೇಗನೆ ನೆಂಪಾವುತ್ತಿಲ್ಲೆ, ಅಲ್ಲದೊ? ಇರಳಿ, ಲಾಯಿಕಾಯಿದು ಹೇಳಿರೆ ಎಲ್ಲ ರೀತಿಲಿಯೂ ಲಾಯಿಕಾಯಿದು ಹೇಳಿ ತಿಳ್ಕೊಳೆಕು.

  4. ಒಪ್ಪಣ್ಣ ಲಾಯ್ಕ ಆಯಿದು….
    ಎನಗೂ ಆ ಪುಸ್ತಕದ ಬಗ್ಗೆ ಮಾಹಿತಿ ಸಿಕ್ಕಿತ್ತು..
    ಶೀಘ್ರಲ್ಲಿ ಓದೆಕ್ಕು… ಕೊಶಿ ಆತು….

  5. ಮೊನ್ನೆ ಆರೋ ಕೊಟ್ಟವು ಇದಾ ಬೋದಾಳ ಓದು ಹೇದು… ಅದರ ಮೋರೆ ಪುಟ ಚೆಂದ ಕಂಡತ್ತಿಲ್ಲೇ ಹಾಂಗಾಗಿ ಆನು ಬೇಡ ಹೇದೆ. ಈಗ ಒಪ್ಪಣ್ಣ ಹೇದ ಹೇದು ಓದುಲೇ ಹೆರಟರೆ ಅರ್ತವೆ ಆವುತ್ತಿಲ್ಲೇ…. ಎಂಥ ಮಾಡುದು ? ಮಾಷ್ಟ್ರ ಮಾವಂಗೆ ಪುರ್ಸೋತ್ತಿಕ್ಕಾ ???

    1. ಓಯಿ ನೀನು ಮಾಷ್ಟ್ರು ಮಾವನಲ್ಲಿಗೆ ಹೋಪಲಕ್ಕು ಏನೂ ತೊಂದರೆ ಇಲ್ಲೆ.. ಅವು ಪುರುಸೋತ್ತಿಲ್ಲಿದ್ದವು..
      ಹೋಪಗ ಒಂದು ಆನೆಯನ್ನು ಕೊಂಡೋಗು ಮಿನಿಯಾ.. ತೋಟದ ಕರೇಲಿಪ್ಪ ಹಲಸಿನ ಮರ ಉದುರಿದ್ದರ ಎಳದು ಜಾಲಕರೇಂಗೆ ಹಾಕೆಕ್ಕಡ.. ಆತೋ..!

    2. ಮಾಷ್ಟ್ರು ಮಾವ° ಎಂತಕೆ? ಪೆಟ್ಟು ತಿನ್ನೆಕು ಹೇಳಿ ಅಷ್ಟು ಆಶೆಯೋ? 😉 ಹುಳಿ ಅಡರೂ ಹಿಡ್ಕೊಂಡೇ ಹೋಗು.. ಸುಲಾಬ ಅಕ್ಕು ಮಾವಂಗೆ 😉 ಸರೀ ಅರ್ಥ ಮಾಡುಸುಗು..

  6. ಆನುದೇ ಆರೋ ಕೊಟ್ಟವು ಹೇಳಿ ‘ಸ್ವಪ್ನ ಸಾರಸ್ವತ’ ಓದಿದೆ.ಲಾಯಕಾ ಆಯಿದು ಬರದ್ದು.ಜೇಮ್ಸ್ ಮಿಶ್ನರ್ ಹೇಳ್ತವ° ಬರದ ಪುಸ್ತಕಂಗಳಿಂದ ರಜ ಸ್ಪೂರ್ತಿ ಸಿಕ್ಕಿದ ಹಾಂಗೆ ಕಂಡತ್ತು,ಆ ಮಟ್ಟಕ್ಕೆ ಬಾರದ್ರೂ.

  7. {ಅಭಾವ°.
    ಹೀಂಗಿರ್ಸರಲ್ಲಿ ಅವನ ಬುದ್ದಿವಂತಿಗೆ ಬಯಂಕರದ್ದು. ಅಭಾವನೇ ಮೊಬಿಳಿ ತೆಗದು ಪೋನು ಮಾಡುವಗ “ಡ್ರೈವಿಂಗಿಲಿದ್ದೆ ಅಳಿಯೋ, ಮತ್ತೆ ಮಾಡ್ತೆ” ಹೇಳಿಕ್ಕಿ ಮಡಗಿದವು.
    ಮಡಗಿದ ಮತ್ತೆ “ಆತುಮಾವ°” ಹೇಳಿದ° ಇವ°!}
    🙂
    ಸೂಪರ್ ಆಯಿದು ಇದು… 😉

  8. ಒಪ್ಪಣ್ಣಾ,
    ಒಳ್ಳೆ ಲೇಖನ.
    ಕೊಂಕಣಿಗೊ ಪೋರ್ಚುಗೀಸರ ದಬ್ಬಾಳಿಕೆ ಸಹಿಸಲೆ ಎಡಿಯದ್ದೆ, ಅವರ ಊರು ಬಿಡೆಕಾಗಿ ಬಂದದಾದರೂ, ಅವು ನೆಲಿಸಿದ ಊರಿಲ್ಲಿ, ಎಲ್ಲರೊಟ್ಟಿಂಗೆ ಒಂದಾಗಿ ಬಾಳಿ ಬೆಳಗಿದವು. ಎಲ್ಲಾ ಕ್ಷೇತ್ರಂಗಳಲ್ಲಿಯೂ ಹೆಸರು ತೆಕ್ಕೊಂಡವು. ದೈವ ಭಕ್ತರೂ ದೇಶ ಭಕ್ತರೂ ಆದ ಇವರ ನಮ್ಮವು ಕೂಡಾ ಬೇರೆ ಆಗಿ ತಿಳ್ಕೊಳ್ಳದ್ದೆ ನಮ್ಮಲ್ಲಿ ಒಬ್ಬರ ಹಾಂಗೆ ಅವರನ್ನೂ ನೋಡಿಗೊಂಡವು.
    ವರ್ಷಕ್ಕೊಂದರಿ ಗೋವಾಲ್ಲಿ ಇಪ್ಪ “ಮಹಾಲಸ ನಾರಾಯಣಿ ದೇವಸ್ಥಾನ” ಮತ್ತೆ “ಮಂಗೇಶ” ದೇವಸ್ಥಾನಕ್ಕೆ ಹೋಗಿ ಬತ್ತವು.
    ಹವ್ಯಕರು ಕೂಡಾ ಇದೇ ರೀತಿ ಬೇರೆ ಕಡೆಂದ ಬಂದದು ಹೇಳಿ ನವಗೆ ಗೊಂತಿದ್ದು. ಅದರ ವಿವರ ಆರಾದರೂ ತಿಳುದರೆ ನಮ್ಮ ಮೂಲ ಗೊಂತಕ್ಕು.

  9. ಕೊಂಕಣಿಗೋ ಗೋವ ಬಿಟ್ಟು ಬಂದರೂ, ಅವರ ಪ್ರತೀ ಕುಟುಂಬದವು ವರ್ಷಕ್ಕೊಂದರಿ ಗೋವಲ್ಲಿಪ್ಪ ದೇವಸ್ತಾನಕ್ಕೆ ಹೋಗಿ ಅವರ ಮನೆದೇವರಿಂಗೆ ಕಾಣಿಕೆ ಕೊಡ್ತ ಕ್ರಮವ ಈಗಳೂ ಮಡಿಕ್ಕೊಂಡುದವು ಹೇಳಿ ಆನು ಕೇಳಿದ್ದೆ.
    “ಸ್ವಪ್ನ ಸಾರಸ್ವತ” ದ ಇನ್ನೊಂದು ಸ್ವಾರಸ್ಯ, ಎನಗೆ ಕಂಡದು – ಲೇಖಕ ಈ ಪುಸ್ತಕದ ಶುರುವಿಲಿ “ದೇಯಿ” ಹೇಳ್ತ ಒಬ್ಬ ಸೂಲಗಿತ್ತಿ ಹೆಣ್ಣಿನ ಕತೆಯ ಪ್ರಸ್ತಾಪ ಮಾಡಿ ಈ ಪುಸ್ತಕವ ದೇಯಿ ಹಾಂಗಿಪ್ಪ ಹೆಮ್ಮಕ್ಕೊಗೆ “ಅರ್ಪಣೆ” ಮಾಡಿದ್ದು. ಹಳ್ಳಿಗಳಲ್ಲಿ ಮಾಂತ್ರ ಕಾಂಬಲೆ ಸಿಕ್ಕುಗಷ್ಟೆ ದೇಯಿಯ ಹಾಂಗಿಪ್ಪ ಅಜ್ಯಕ್ಕೊ.

  10. [ಆಸರಿಂಗೆ ಕುಡುದಪ್ಪದ್ದೇ ಒಂದರಿ ಹಿತ್ತಿಲಿಂಗೆ ಕರಕ್ಕೊಂಡು – ಬಾಳೆತೆಂಗು ಇತ್ಯಾದಿ ಅಲಫಲಂಗಳನ್ನೂ, ದಾರ್ಳೆಹಾಗಲ ಇತ್ಯಾದಿ ನೆಟ್ಟಿಕಾಯಿಗಳನ್ನೂ ನೋಡುಸಿದವು. ಅವರ ಜಾಗೆ ಪೇಟೆಲಿದ್ದರೂ ಬೈಲಿನ ತುಂಡು ಒಂದು ರಚನೆ ಆದ್ಸರ ಕಂಡು ಕೊಶೀ ಆತು.]
    ಒಪಣ್ಣನ ಜೊತೆ ಎಂಗೊಗೂ ಖುಷಿ ಆತು…

    [ಹಳ್ಳಿಂದ ಜಾಗೆಕೊಟ್ಟು ಪೇಟಗೆ ಹೋಗಿ ಕೂಪದು – ಹಳ್ಳಿಲಿ ಬದ್ಕಿದ ಅಜ್ಜಂದ್ರಿಂಗೆ ಪೇಟೆ ಹಿಡಿಯದ್ದೆ ಅಪ್ಪದು – ಅಲ್ಲಿ ಜೀವನಲ್ಲಿ ಒಂಟಿತನ ಬಪ್ಪದು – ಒಪಾಸು ಊರಿಂಗೆ ಬಪ್ಪಲೆ ಎಡಿಯದ್ದೆ ಅಪ್ಪದು – ಇದೆಲ್ಲವನ್ನೂ ಮಾವನ ಸಮಕಾಲೀನರು ಅನುಭವಿಸಿದ್ದವಡ.
    ಹೀಂಗಿರ್ತ ಎಷ್ಟೋ ಘಟನೆಗೊ ನಮ್ಮ ಬೈಲಿಲೇ ಆಯಿದು – ಹೇಳ್ತದು ಅವರ ಅಭಿಪ್ರಾಯ.
    ಕೊಂಕಣಿಗಳ ಹಾಂಗೆ ಅನಿವಾರ್ಯ ಪರಿಸ್ಥಿತಿ ಆದರೆ ಸಮ; ಅನಿವಾರ್ಯ ಅಲ್ಲದ್ದರೂ ಹೀಂಗೆಲ್ಲ ವಲಸೆ ಹೋಪಲಾಗ; ಇನ್ನಾರೂ ನಾವು ಎಚ್ಚರಿಗೆ ಆಯೇಕು – ಹೇಳಿದವು.]

    ಜಯಕ್ಕ ಹೇಳಿದ್ದು – ಹಳ್ಳಿ ಜೀವನ ಒಳ್ಳೆದು ಹೇಳಿಗೊಂಡು ಆರಾದರೂ ಪೇಟೆಂದ ಕಣ್ಣುಮುಚ್ಚಿ ಹಳ್ಳಿಗೆ ಬಂದರೂ ಹೀಂಗೆ ಅಕ್ಕನ್ನೇ ಹೇಳಿ ಅನ್ನಿಸಿತ್ತು…
    ಪೇಟೆಂದ ಹಳ್ಳಿಗೆ ಬರೆಕ್ಕಾರೆ ಮೊದಲು
    ೧) ಹಳ್ಳಿ ಜೀವನ ಯಾವ ತರಲ್ಲಿ ಎಲ್ಲ ಒಳ್ಳೆದು ಹೇಳಿ ರಜ ದೂರದೃಷ್ಟಿಲ್ಲಿ ಆಲೋಚನೆ ಮಾಡೆಕ್ಕು…
    (ವಿಜ್ಹಾನದ ಬೆಳವಣಿಗೆಯ ತುತ್ತ ತುದಿಯ ಪರಿಣಾಮವಾಗಿ global heat ಮತ್ತು pollution ಮೊದಲಾದ ಸಮಸ್ಯೆಗಳಿಂದಾಗಿ ಒಂದೋ ಭೂಮಿಯೇ ನಾಶ ಆಗಿ ಹೊಸ ಯುಗ ಪ್ರಾರಂಭ ಆಯೆಕ್ಕು… ಇಲ್ಲದ್ದರೆ ಒಂದೊಂದೇ ಗುಂಪು ಪ್ರಕೃತಿಗೆ ಹಿಂತಿರುಗುವ ಮೂಲಕ ಹೊಸ ಯುಗ ಪ್ರಾರಂಭ ಆಯೆಕ್ಕು… ಹೇಳುದನ್ನೂ ಸೇರುಸಿ ಆಲೋಚನೆ ಮಾಡುಲಕ್ಕು)
    ೨) ಖಂಡಿತವಾಗಿಯೂ ಒಳ್ಳೆದು ಹೇಳುವ ನಿರ್ಧಾರ ಮನಸ್ಸಿಂಗೆ ಬಂದರೆ ಹಳ್ಳಿ ಜೀವನದ ಬಗ್ಗೆ ಅತಿಯಾದ ಪ್ರೀತಿ ಬೆಳೆಸಿಗೊಲ್ಳೆಕ್ಕು… (ನಮ್ಮ ನೀರ್ಕಜೆ ಮಹೇಶಣ್ಣ೦ಗೆ ಇದ್ದು ಅಲ್ಲದ… ಹಾಂಗೆ)
    ೩) ಭೌತಿಕವಾಗಿ ಹಳ್ಳಿ ಜೀವನಕ್ಕೆ ಬಪ್ಪ ಮೊದಲು ಮಾನಸಿಕವಾಗಿ ಹಳ್ಳಿಲ್ಲಿ ವಾಸಿಸೆಕ್ಕು…
    ಹೀಂಗೆ ಸಿದ್ದತೆ ಮಾಡಿಗೊಂಡು ಬಂದರೆ ಮಾಂತ್ರ ಹಳ್ಳಿ ಜೀವನ ಯಶಸ್ವಿ ಅಕ್ಕಷ್ಟೇ…

    “ಧರ್ಮಕ್ಕಾಗಿ ಬದ್ಕಿರೆ ಸಮಾಜಕ್ಕೆ ಆಸ್ತಿ ಆವುತ್ತವು; ಧರ್ಮದಂಡಕ್ಕೆ ಬದ್ಕಿರೆ ಸಮಾಜಕ್ಕೆ ಪೀಡೆ ಆವುತ್ತವು.” … ಒಪ್ಪ ಇಷ್ಟ ಆತು…

  11. ದೇವಸ್ಥಾನದ ಹಾಂಗಿಪ್ಪ ಕೆಲವು ಇಗರ್ಜಿಗಳ ಗೋವಾಲ್ಲಿ ಕಾಂಬಲೆ ಸಿಕ್ಕುತ್ತು. ನಮ್ಮೂರಿನ ಕೊಂಕಣಿಗೊ ಎಲ್ಲ ಎಂಗಳ ಮೂಲ ದೇವಸ್ಥಾನ ಹೇಳಿ ಗೋವಾಲ್ಲಿಪ್ಪ ಹಲವಾರು ದೇವಸ್ಥಾನಂಗೊವಕ್ಕೆ ಭೇಟಿ ಕೊಡ್ತಾ ಇಪ್ಪದುದೆ ಗೊಂತಿದ್ದು. ಒಪ್ಪಣ್ಣ ಹೇಳಿದ ಮತ್ತೆ, ಗೋಪಾಲಕೃಷ್ಣ ಪೈ ಬರದ ಸ್ವಪ್ನ ಸಾರಸ್ವತ ಕಾದಂಬರಿಯ ಓದಲೇ ಬೇಕು ಹೇಳ್ತ ಆಶೆ ಬತ್ತಾ ಇದ್ದು.

    ಧರ್ಮದಂಡಕ್ಕೆ ಬದ್ಕುವ ಬದಲು ಧರ್ಮ ಮಾಡೆಂಡು ಬದುಕುವ ಸಂದೇಶ ಒಪ್ಪ ಇದ್ದು. ಸರ್ಪಮಲೆ ಮಾವನ ಪುಸ್ತಕ ಬೈಲಿಲ್ಲಿ ಎಲ್ಲಾ ಸುತ್ತಾಡಿಕ್ಕಿ ಕಡೇಂಗೆ ಅಪ್ಪಗಾದರೂ ಅವಕ್ಕೆ ಹಿಂದೆ ಸಿಕ್ಕಲಿ.

  12. ಒಪ್ಪಣ್ಣೋ..
    ಮೆಚ್ಚೆಕಾದ್ದೇ ನಿನ್ನ..

    { ಕಾಲಿಕೈಲಿ ಹೋವುತ್ಸೆಂತಕೆ ಹೇದು ಒಂದು ಗುಜ್ಜೆ ತೆಕ್ಕೊಂಡು} – ತುಂಬ ಖುಶಿಯಾದ್ದು..
    {ಮೇಗಂದಮೇಗೆ ನಿಂಗೊ ಕತೆ ಎಂತರ ಹೇದರೆ ಎಂಗೊಗೆ ಓದಲೆ ಸುಲಬ ಅಕ್ಕು} – ಅದಪ್ಪು ೫೦೦ ಪುಟ ಹೇಳಿರೆ ಓದಿ ಅಪ್ಪದಿದ್ದೋ? ಕತೆ ಕೇಳಿಯೊಂಡು ಇದ್ದರೆ ಸುಲಬ ಇದಾ.. 😉

    ಎಂತಕೂ, ಮದಾಲು ಪುಸ್ತಕ ಓದೇಕು.
    ಇದು ಸರಿ.
    ಹೀಂಗಿಪ್ಪ ಪುಸ್ತಕವ ಆನೂ ಒಂದು ಓದಿದ್ದೆ. Saraswathi’s Children ಹೇಳಿ, ಆರೋ ಒಬ್ಬ Machadoಹೇಳಿಪ್ಪವ° ಬರದ್ದು.
    ಕೊಂಕಣಿಗಳ ಮೂಲಂದಲೇ ಬರದ್ದು ಅದರಲ್ಲಿ. 🙂
    ಅವ್ವುಬಂದ ಮಾರ್ಗ – ಅವರ ಚರಿತ್ರೆ ಎರಡೂ ಇದ್ದು..

    ಆ ಪುಸ್ತಕವ ಎನಗೆ ಕೊಟ್ಟದೂ ಒಬ್ಬ ಪೊರ್ಬುವೇ. Joyson Noel Fernandes ಹೇಳಿ.
    ಬೇರೆ ದೇಶದವ° ಅವ° …
    “ಮೂಲ ಎಲ್ಲಿ ಹೇಳಿ ತಿಳಿಯೆಕು” ಹೇಳಿ ಅವನ ಹುಟ್ಟಿದ ದೇಶ ಬಿಟ್ಟು ಓದುವ ನೆಪ ಮಾಡಿ ಕೊಡೆಯಾಲಕ್ಕೆ ಬಂದವ°..
    ಮಾಣಿಯ ಮೂರು ವರ್ಷದ ದೋಸ್ತಿ..

    ಸುಮಾರೆಲ್ಲ ಅನ್ವೇಶಣೆ ಮಾಡಿ ಕೊನೆಗೆ 8 ತಲೆಮಾರು ಹಿಂದಾಣ ವರೆಗೆ ತಲುಪಿದ ಮೂರು ವರ್ಷಲ್ಲಿ..
    ಸಮಯ ಮುಗುತ್ತಿದಾ, ಹೆಚ್ಚು ಒಕ್ಕುಲೆ ಆಯಿದಿಲ್ಲೆ ಹೇಳಿದ°..
    ಅಷ್ಟೇ ಅಲ್ಲ,
    ಅವನ ಹೆಸರಿನ Joyson Noel Prabhu ಹೇಳಿ ಈಗ ಬದಲಾಯಿಸಿಯೊಂಡಿದ°.. 🙂

    1. ಈಸರ್ತಿಯಾಣ ವಿಷಯ ತುಂಬ ಒಳ್ಳೇದಿದ್ದು ಒಪ್ಪಣ್ಣ.
      ವಿವರಣೆಯೂ ಲಾಯಿಕಾಯಿದು.
      🙂

      ನಮ್ಮ ಅಜ್ಜಂದ್ರೂ ಗೋಕರ್ಣಂದ ಹೆರಟು ಬೈಲಿಂಗೆ ಎತ್ತಲೆ ಎಂತಾರು ಕಾರಣ ಇದ್ದಿಕ್ಕಲ್ಲದೋ? – 500 ವರ್ಶ ಹಿಂದೆ ಅಲ್ಲಿಂದ ಇಲ್ಲಿ ಬಂದದಡಪ್ಪ, ಎಂತ ಆದಿಕ್ಕು???

      ಒಪ್ಪಣ್ಣಂಗೆ ಈ ಪುಸ್ತಕ ಓದಿ ಆದ ಮತ್ತೆ ಪಾಸು ಮಾಡೇಕೋ? ಒಪಾಸು ಮಾಡೇಕೋ? – ಅಜ್ಜಕಾನ ಭಾವಂಗೆ ಪಾಸು ಮಾಡಿರೆ, ಅವ° ಎನಗೂ ಪಾಸು ಮಾಡುಗಿದಾ… 😉

      {ಬೈಲಿಲೇ ಆರದ್ದಾರು ಕೈಯಾನ ಕೈ ಸಿಕ್ಕಿದ್ಸರ ಪುರುಸೋತಿಲಿ; ಒಂದುವಾರ-ಒಂತಿಂಗಳು ಮಡಗಿ – ಓದಿ ಕೊಟ್ಟೋನಿಂಗೇ ಒಪಾಸು ಮಾಡುದು; ಅಲ್ಲದ್ದರೆ ಇನ್ನಾಣೋನಿಂಗೆ ಪಾಸು ಮಾಡುದು.} – ನಾವುದೇ ಹಾಂಗೇ… !
      ಒಂದೇ ತಾರೀಕಿಲ್ಲಿ ಹುಟ್ಟಿದೋರು ಹೆಚ್ಚೂ ಕಮ್ಮೀ ಒಂದೇ ಜಾತಿ ಹೇಳ್ತವು ಪೊರ್ಬುಗಳ ಜೋಯಿಶಕ್ಕೋ.. ಅಪ್ಪೋ?

  13. ಪಾರ್ಸಿಗೊ,ಯಹೂದಿಗೊ ದೇಶ ಬಿಟ್ಟು ಬಂದಪ್ಪಾಗ ಭಾರತ ಆಶ್ರಯ ಕೊಟ್ಟಿದು.ಪೋರ್ತುಗೀಸರು ಗೋವೆ ಮಾತ್ರ ಹೊಡದ ಕಾರಣ ಸಾರಸ್ವತರು ದೇಶದ ಬಾಕಿ ದಿಕ್ಕೆ ಆಶ್ರಯ ಕಂಡೊಂಡವು.ನಮ್ಮ ದೇಶ,ಧರ್ಮ ಎಲ್ಲರನ್ನೂ ಆದರಿಸುವಂತದ್ದು.ಲಾಯ್ಕ ಆಯಿದು.ಸ್ವಪ್ನ ಸಾರಸ್ವತ ಓದೆಕ್ಕು.ಅದೇ ರೀತಿ ಕೆಂಡಸಂಪಿಗೆ ಬ್ಲಾಗಿಲಿ ಶಕುಂತಲಾ ಕಿಣಿ ಬರೆದ ಬಳ್ಳಂಬೆಟ್ಟಿನ ಬಾಲ್ಯಕಾಲ ಸರಣಿಲಿ ಅವರ ಆಚಾರ ವಿಚಾರ ಸರೀ ಬರದ್ದವು.ಅಲ್ಲಿ ಒಬ್ಬ ಅಜ್ಜಿ-“ಕಾಗೆ ಮಾವಾ,ನೀನು ಗೋವೆಗೆ ಹೋಯಿದಿಯಾ?ನಮ್ಮ ಹುಡುಗಂಗೆ ಅಲ್ಲಿ ಹುಡುಗಿ ನೋಡಿದ್ದೀಯಾ?’ ಹೇಳಿ ಸಣ್ಣ ಮಕ್ಕಳ ಮಂಕಾಡಿಸುವ ವಿಷಯ ಇದ್ದು. ಅವು ಹಿಂದೆ ಗೋವಂದ ಬಂದ ನೆನಪು ಈ ರೀತಿಯ ಮಾತಿಂದ ತಲೆತಲಾಂತರಂದ ಬಂತು!

  14. [ಮಡಗಿದ ಮತ್ತೆ “ಆತುಮಾವ” ಹೇಳಿದ° ಇವ°!] – ಆವ್ತು ಭಾವ, ಬೇಕಾವ್ತು ಭಾವ ಕೆಲವು ಸರ್ತಿ ಸ್ವಂತ ಸಮಾಧಾನಕ್ಕೆ!!

    [ಹೆರಡುವಗ ಕಾಲಿಕೈಲಿ ಹೋವುತ್ಸೆಂತಕೆ ಹೇದು ಒಂದು ಗುಜ್ಜೆ ತೆಕ್ಕೊಂಡು ]- ಮನುಷ್ಯರ ಬಾಂಧವ್ಯದ ಹಿರಿಮೆ ಇದು ಅಪ್ಪೋ!

    [ಕೊಂಡೋದ ಗುಜ್ಜೆಯ ಸೌದಿಕೊಟ್ಟಗೆಲಿ ಮಡಗಿಕ್ಕಿ] – ಅಜ್ಜಕಾನ ಭಾವ ಒಟ್ಟಿಂಗೆ ಇತ್ತಿದ್ದ ಕಾರಣ ಹೊತ್ತದಾರು ಹೇಳಿ ಪ್ರತ್ಯೇಕ ಕೇಳೆಕು ಇಲ್ಲೆ ಅಪ್ಪೋ!

    [ಅನಿವಾರ್ಯ ಪರಿಸ್ಥಿತಿ ಆದರೆ ಸಮ; ಅನಿವಾರ್ಯ ಅಲ್ಲದ್ದರೂ ಹೀಂಗೆಲ್ಲ ವಲಸೆ ಹೋಪಲಾಗ] – ಕಳುದವಾರದ ಶುದ್ದಿಗೆ ಕೆಲವರ ಸಂದೇಹಕ್ಕೆ ಉತ್ತರ ಇದುವೇ ಅಪ್ಪೊ!

    [ಮಾವ° ಮಾಷ್ಟ್ರ° ಆಗಿದ್ದ ಕಾರಣವೋ ಏನೋ, ತುಂಬಾ ಸಮದಾನಿ]- ಮಾಷ್ಟ್ರ ಆಗಿದ್ದ ಕಾರಣ ಸಮದಾನಿ ಆದ್ದೋ., ಸಮದಾನಿ ಆದ ಕಾರಣ ಮಾಷ್ಟ್ರ ಆದ್ದೋ, ಉಮ್ಮಪ್ಪ., ಅಂತೂ ಮನುಷ್ಯ ಸಮದಾನಿ ಆಗಿದ್ದರೇ ಉತ್ತಮ ಹೇಳಿ ಗೊಂತಾತು.

    [ಅಜ್ಜಕಾನಬಾವನ ಒಂದೇ ಪೆಟ್ಟಿಲಿ ಕಾಲಿ!….. ಗುಜ್ಜೆಗಸಿಯ ಪರಿಮ್ಮಳ ಕೈಂದ ಇನ್ನೂ ಹೋಯಿದಿಲ್ಲೆ ಇದಾ!!] – ಹ್ಮ್ಮ್ ಮ್ಮ್ಮ್ಮ್… ಬಾರ್ ಬಲ್ಲಾಳಗ್ ದೂರು ಕುಂಡೆಚ್ಚಗ್!!

    ಏನೇ ಆಗಲಿ, ಗುಜ್ಜೆ ಹೊತ್ತೊಂಡು ಹೆಜ್ಜೆ ಹಾಕಿ ಗುಜ್ಜೆ -ಗಂಜಿ ಉಂಡಿಕ್ಕಿ ಕೈ ಪರಿಮ್ಮಳ ಬಿಡೆಕ್ಕಾರೆ ಮದಲೇ ಕೊಂಕಣಿ ಇತಿಹಾಸ ಬೈಲಿಂಗೆ ಪರಿಚಯಿಸಿದ್ದು ಲಾಯಕ ಆಯ್ದು ಹೇಳಿತ್ತು – ‘ಚೆನ್ನೈವಾಣಿ’

    [ಪುಸ್ತಕ ಓದಿ ಆದ ಮತ್ತೆ ಪಾಸು ಮಾಡೇಕೋ? ಒಪಾಸು ಮಾಡೇಕೋ?] – ಅಂಬಗ ಪುಸ್ತಕ ಈಗ ಆರತ್ರೆ ಇದ್ದು ಹೇಳಿ ವಿಷಯ ಸರ್ಪಮಲೆ ಮಾವನ ಕೆಮಿಗೂ ಬಿದ್ದತ್ತು. ಭಾವೋ° ವಾಪಾಸು ಮಾಡದ್ರೆ ಇನ್ನೊಂದರಿ ಗುಜ್ಜೆ ಹೊರ್ಲೋ ಮಾವಿನಣ್ಣು ಹೊರ್ಲೋ ಅಜ್ಜಕಾನ ಬಾವ ಬಾರೆ ಹೇಳಿರೂ ಬೋಸ ಬಾವ ಸಿಕ್ಕುಗು ಹೇಳಿ ಗ್ರೇಶಿದಿರೋ ಹೇಂಗೆ!! ಪಾಪ, ಅಜ್ಜಕಾನ ಭಾವಂಗೆ ಇನ್ನೀಗ ಬೈಲಿಲಿ ನಡಕ್ಕೊಂಡು ಹೋವ್ತ್ಸೇಂಗೇದು ಚಿಂತೆ ಸುರುವಾಗದ್ರೆ ಸರಿ!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×