Oppanna.com

ಶ್ರೀಸೌ೦ದರ್ಯ ಲಹರೀ- ಹವಿಗನ್ನಡ ಭಾವಾನುವಾದ ಶ್ಲೋಕಃ 46 ರಿ೦ದ 50

ಬರದೋರು :   ಉಡುಪುಮೂಲೆ ಅಪ್ಪಚ್ಚಿ    on   25/12/2012    4 ಒಪ್ಪಂಗೊ

ಉಡುಪುಮೂಲೆ ಅಪ್ಪಚ್ಚಿ

 ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯ ಹವ್ಯಕ ಭಾಷೆಲಿ ಸರಳ ಅನುವಾದ ಕೊಟ್ಟು ನಮ್ಮ ಬೈಲಿಂಗೆ ಹೇಳ್ತಾ ಇದ್ದವು ನಮ್ಮ ಉಡುಪಮೂಲೆ ಅಪ್ಪಚ್ಚಿ.
ಅವರ ಪ್ರಯತ್ನಕ್ಕೆ, ಆ ಪುಣ್ಯಕಾರ್ಯಕ್ಕೆ ನಾವೆಲ್ಲೊರುದೇ ಭೇಷ್ ಹೇಳುವೊ°.
ಎಲ್ಲೋರುದೇ ಓದಿ, ಅರ್ಥಮಾಡಿಗೊಳ್ಳಿ, ಒಪ್ಪ ಕೊಡಿ.

~

॥ಶ್ಲೋಕಃ॥  [ಹಣೆಯ ವರ್ಣನೆ]
ಲಲಾಟ೦ ಲಾವಣ್ಯದ್ಯುತಿವಿಮಲಮಾಭಾತಿ ತವ ಯತ್
ದ್ವಿತೀಯ೦ ತನ್ಮನ್ಯೇ ಮಕುಟಘಟಿತ೦ ಚ೦ದ್ರಶಕಲಮ್ |
ವಿಪರ್ಯಾಸನ್ಯಾಸಾದುಭಯಮಪಿ ಸ೦ಭೂಯ ಚ ಮಿಥಃ
ಸುಧಾಲೇಪಸ್ಯೂತಿಃ ಪರಿಣಮತಿ ರಾಕಾಹಿಮಕರಃ || 46 ||

|| ಪದ್ಯ ||
ಅಬ್ಬೆ, ವಿಮಲ ಕಾ೦ತಿಲಿ ಮೆರವ ನಿನ್ನ ಹಣೆಯದೆರಡನೆಯ ಚ೦ದ್ರಖ೦ಡ,
ಇದ್ದಲ್ಲಿ ಮತ್ತಾ  ಕಿರೀಟದ ಮೇಗೆ ಆ ಚ೦ದ್ರಮನಾ ಮದಲ ಹೋಳು |
ತಲೆಕೆಳವ ಮಾಡಿ ಮಡಗಿದರೆ ಅಲ್ಲಿ ಎರಡು ಹೋಳನ್ನು ಕೂಡಿ
ಹುಣ್ಣಮೆಯ ಚ೦ದ್ರ ಉದಿಸಿತ್ತು ಅಲ್ಲಿ ಅಮೃತವ ಹರುಶಿ! || 46 ||

ಶಬ್ಧಾರ್ಥಃ-
[ಹೇ ಭಗವತಿ!] ತವ=ನಿನ್ನ; ಯತ್ ಲಲಾಟ೦ = ಯೇವ ಹಣೆ (ನೊಸಲು); ಲಾವಣ್ಯದ್ಯುತಿವಿಮಲ೦ = ಸೌ೦ದರ್ಯದ ಹೊಳಪಿ೦ದ ಶುಭ್ರವಾಗಿಪ್ಪದಾಗಿ (ಚೊಕ್ಕಕಿಪ್ಪದಾಗಿ);  ಆಭಾತಿ = ಹೊಳಕ್ಕೊ೦ಡಿದ್ದೋ; ತತ್=ಆ ಹಣೆಯ; ಮಕುಟಘಟಿತ೦=ಕಿರೀಟಲ್ಲಿಪ್ಪ; ದ್ವಿತೀಯ೦ = ಎರಡನೆದಾದ; ಚ೦ದ್ರಶಕಲ೦=ಅರ್ಧಚ೦ದ್ರ ಹೇದು; ಮನ್ಯೇ = ಗ್ರೇಶುತ್ತೆ (ಭಾವಿಸುತ್ತೆ); ಯತ್ಯಸ್ಮಾದುಭಯಮಪಿ = ಯೆ೦ತಕೆ ಹೇದರೆಎರಡನ್ನುದೆ; ವಿಪರ್ಯಾಸನ್ಯಾಸಾತ್= ವ್ಯತ್ಯಾಸವಾಗಿ ಮಡಗಿರೆ, (ಕೆಳ೦ತಾಗಿ  ಬಗ್ಗಿದ ಅರ್ಧಚ೦ದ್ರಾಕೃತಿಯ ಹಣೆ, ಮೇಗ೦ತಾಗಿ ಮೋರೆ ಮಾಡಿದ ಕಿರೀಟಲ್ಲಿಪ್ಪ ಅರ್ಧಚ೦ದ್ರ ಈ ಎರಡನ್ನುದೆ ತಿರುಗಿಸಿ ಸೇರಿಸಿ ಮಡಗಿರೆ, (ಹೇಳಿರೆ, ಈ ಎರಡರ ನಾಕು ಕೊಡಿಗಳನ್ನುದೆ ಜೋಡಿಸಿರೆ ಯೇವ ಆಕೃತಿ ಅಕ್ಕು? ಪೂರ್ಣಚ೦ದ್ರಾಕೃತಿ ಅಲ್ಲದೋ!); ಮಿಥಃ=ಅನ್ಯೋನ್ಯವಾಗಿ; ಸ೦ಭೂಯ ಚ=ಸೇರಿಗೊ೦ಡು, ಸುಧಾಲೇಪಸ್ಯೂತಿಃ = ಅಮೃತದ ಧಾರೆಯ ಹರುಶುವ; ರಾಕಾಹಿಮಕರಃ=ಹುಣ್ಣಮೆಯ (ಪೂರ್ಣ) ಚ೦ದ್ರ-ನಾಗಿ; ಪರಿಣಮತಿ=ಪರಿಣಾಮವ ಹೊ೦ದುತ್ತು.

ತಾತ್ಪರ್ಯಃ-
ಹೇ ಭಗವತಿ! ನಿನ್ನ ನಿರ್ಮಲವಾದ ಹಣೆ ಸೌ೦ದರ್ಯಾತಿಶಯ೦ದ ಹೊಳೆತ್ತು ಮತ್ತೆ ನಿನ್ನ ಆ ಹಣೆಯ ನೋಡಿಯಪ್ಪಗ, ನಿನ್ನ ಕಿರೀಟಲ್ಲಿಪ್ಪ ಚ೦ದ್ರಖ೦ಡದ ಇನ್ನೊ೦ದು ಹೋಳೋ (ತು೦ಡೋ) ಹೇದು ಅನ್ಸುತ್ತು. ಯೆ೦ತಕೆ ಹೇಳಿರೆ, ಆ ನಿನ್ನ ಕಿರಿಟಲ್ಲಿ ಮೇಗೆ ಮೋರೆ ಮಾಡಿದ ಚ೦ದ್ರನ ಒ೦ದು ಹೋಳಿದ್ದರೆ, ಕೆಳಮೋರೆ ಮಾಡಿದ ಹಾ೦ಗಿಪ್ಪ ನಿನ್ನ ಮೋರೆ,  ಚ೦ದ್ರಖ೦ಡದ ಇನ್ನೊ೦ದು ತು೦ಡು; ಈ ಎರಡು ಹೋಳುಗಳ ವೆತ್ಯಾಸ ಮಾಡಿ ಜೋಡ್ಸಿರೆ [ ಹೇದರೆ, ಕಿರೀಟಲ್ಲಿ  ಮೇಗ೦ತಾಗಿ ಮೋರೆ ಮಾಡಿಪ್ಪ ಅರ್ಧ ಚ೦ದ್ರವ ಕೆಳ೦ತಾಗಿ ಮೋರೆ ಮಾಡಿ, ಮತ್ತೆ ಕೆಳ೦ತಾಗಿ ಮೋರೆ ಮಾಡಿಪ್ಪ ಹಣೆ ಹೇಳುವ ಅರ್ಧ ಚ೦ದ್ರವ ಮೇಗ೦ತಾಗಿ ಮಾಡಿ, ಆ ಎರಡರ ನಾಕು ಕೊಡಿಗಳ ಸರಿಯಾಗಿ ಸೇರ್ಸಿರೆ]  ಅಮೃತದ ಹನಿಕಡಿಯದ್ದ ಬೆಳ್ಳವನ್ನೇ ಹರುಶುವ ಹುಣ್ಣಮೆಯ ಪೂರ್ಣಚ೦ದ್ರನ ಆಕಾರವಾವುತ್ತು!

[1. ಕಿರೀಟದ ಮೇಗಾಣ ಮದಲಾಣ ಚ೦ದ್ರಖ೦ಡದ ಅರ್ಧ ಹೋಳು: ” ;

2. ಹಣೆಯ ಹೇಳುವ ಚ೦ದ್ರಖ೦ಡದ ಇನ್ನೊ೦ದು ಹೋಳು : ““;

3 . ಇವೆರಡನ್ನೂ ವೆತ್ಯಾಸ ಮಾಡಿ (ತಲೆ ಕೆಳಮಾಡಿ) ಜೋಡ್ಸಿಯಪ್ಪಗ -ಹೀ೦ಗೆ ” ” ಪೂರ್ಣಚ೦ದ್ರಾಕೃತಿ ಆವುತ್ತಿದ.]

ವಿವರಣೆ:-
ಆಹಾ! ಎ೦ಥಾ “ರಸಾತ್ಮಕ ಕಲ್ಪನೆ! ” ಛೆ! ಅಲ್ಲ; ಅಲ್ಲವೇ ಅಲ್ಲ! ಅನೆ೦ಥ ಹೆಡ್ಡ! ಇದದ್ಹೇ೦ಗೆ ಕಲ್ಪನೆಯಪ್ಪಲೇ ಸಾಧ್ಯ; ಅಲ್ಲದೋ ಹೇಳಿ ?
ಕಣ್ಣಾರೆ ಅಬ್ಬೆಯ ಸಾಕ್ಷಾತ್ಕರಿಸಿಗೊ೦ಡ ಶ್ರೀ ಗುರುಗೊ ಅವಕ್ಕೆ ಆ ಗಳಿಗೆಲಿ ದೇವಿಯ ಹೇ೦ಗೆ ಕ೦ಡತ್ತೋ –  ಆ ಅನುಭಾವದ ರಸಪಾಕವ ನವಗೆ (ಭಕ್ತ ಜೆನರಿ೦ಗೆ) ಅರ್ಥ ಅಪ್ಪಹಾ೦ಗೆ, ಇಲ್ಲಿ ಶಬ್ದ ಚಿತ್ರಲ್ಲಿ, ಸತ್ಯವೂ, ಶಿವವೂ ಸು೦ದರವೂ ಆಗಿಪ್ಪ ಆ ಅಲೌಕಿಕ ಸೌ೦ದರ್ಯ ವಿಭೂತಿಯ ತೆರೆಸೀರೆ ಸರುಸಿ ದಿವ್ಯದರುಶನ ಮಾಡ್ಸಿದ್ದವು.
ಇನ್ನು ಮು೦ದಾಣ (ಶ್ಲೋಕ 41 – 100) ಶ್ಲೋಕ೦ಗೊ, ಏವದಾದರು ಸರಿಯೆ, ಅದು ಗುರುಗೊ ಸೋsಹ೦ “ಭಾವ” – “ರಸ” ಸಮಾಧಿಲಿ – ತಾದಾತ್ಮ್ಯ ಭಾವ೦ದ ಮಾಡಿದ ಸ್ತುತಿ. ಆದಕ್ಕೇ ಅದು ಬರೀ ವರ್ಣನೆ ಅಲ್ಲ; ಶುದ್ಧ ಭಕ್ತಿಯ ಕಾಣ್ಕೆ![ದರ್ಶನ!]

ಆ ಅನುಭವವ – ಆ ಭಕ್ತಿಯ ಕಾಣೆಕೋಽ.., (ಅನುಭವ್ಸೆಕೋಽ..) ಒ೦ದು ಸರ್ತಿ ಇದರ ಓಽದೆಕೆ!
ಅದೂದೆ- ಮೂಲವನ್ನೇ ಓದೆಕು; ಅ೦ದರೆ ಮಾ೦ತ್ರ  ಆ ದಿವ್ಯಾನುಭೂತಿಯ ಪಡವಲೆಡಿಗು.

[ಈ ಅನುಭವ೦ದಲೇ  “…. ಹರಿವುದಿಲ್ಲಿ ರಸಭಾವಗ೦ಗಾತು೦ಗಜಲಧಿ | ಭಕ್ತಮಾನಸವೆಲ್ಲ ಪಾವನರಾಗಿ ಈ ಜಲಧಿ…..ರಾಜರಾಜೇಶ್ವರಿಯ ತೀರ್ಥ ಪೂರದಿ ಮಿ೦ದು. ಹೇದು ಭಕ್ತ ಮಾನಸ  ಕೊ೦ಡಾಡುವದು!  ಈ ಉದ್ದೇಶ೦ದಲೆ, ಪೀಠಿಕೆಲಿ, “ರಸಗ೦ಗೆ-ತು೦ಗೆ-ಕಾವೇರಿ-ಪಯಸ್ವಿನೀನೇತ್ರೆಯಘನಾಶಿನೀಜಲಧಿಪುಣ್ಯಪೂರ!” ಹೇದು ಪ್ರಾರ್ಥನೆ ಸಲ್ಲಿಸಿದ್ದು (ನೆ೦ಪಾವುತ್ತು!).

ಈ ಕೃತಿಗೆ ಸ೦ಸ್ಕೃತಲ್ಲಿ ಹಲವು ಜೆನ ವಿದ್ವಾ೦ಸರುಗೊ ವ್ಯಾಖ್ಯಾನ ಬರದ್ದವನ್ನೆ. ಅ೦ಥವರ ಪೈಕಿ, ಆನ೦ದಗಿರಿ – ಈ ನೂರು ಶ್ಲೋಕಲ್ಲಿಯುದೆ ಹಲವು ಮ೦ತ್ರದ  ಬೀಜಾಕ್ಷರ೦ಗೊ ರಹಸ್ಯವಾಗಿಪ್ಪದರ ಗುರುತಿಸಿ, ಅದರ ಅವರ ವ್ಯಾಖ್ಯಾನಲ್ಲಿ ಅನಾವರಣ ಮಾಡಿ, ಮ೦ತ್ರೋದ್ಧಾರ ಮಾಡಿದ್ದದು  ಕ೦ಡು ಬತ್ತು. ಈ ಹೇಳಿಕೆ೦ದ ಈ ಶ್ಲೋಕ೦ಗೊಕ್ಕೆಲ್ಲ ಮ೦ತ್ರಶಾಸ್ತ್ರದಷ್ಟೇ ಸ್ಥಾನ ಪ್ರಾಪ್ತಿಯಪ್ಪಲೆ ಕಾರಣವಾಗಿರೆಕು ಹೇಳುವ೦ಶ ಬೆಣಚ್ಚಿ೦ಗೆ ಬತ್ತು! ಹಾ೦ಗಾಗಿಯೇ ಇದರ ಉಪಾಸನೆ ಮತ್ತೆ ಇದರ ಯ೦ತ್ರ – ಮ೦ತ್ರ- ತ೦ತ್ರಾಚರಣಗೆ ಬ೦ದಿರೆಕು ಹೇದು ಊಹಿಸಲೆ ಸಾಧ್ಯ ಆವುತ್ತು. ಶ್ರೀವಿದ್ಯೋಪಾಸಕರಿ೦ಗೆ ಲಲಿತಾ ಸಹಸ್ರನಾಮದಷ್ಟೇ, ಈ ಕೃತಿಯುದೆ ಮಹತ್ವಪೂರ್ಣ ಗ್ರ೦ಥ ಹೇಳ್ವದರ ಮರವಲಾಗ.]

ಮದಲೆ 41ನೇ ಶ್ಲೋಕದ ವಿವರಣೆಲಿ ಹೇಳಿದಾ೦ಗೆ, ಈ ಶ್ಲೋಕಲ್ಲಿಯುದೆ, ಅಲ೦ಕಾರ ಹೇದರೆ ಅಲ೦ಕಾರ! ಅವೆಲ್ಲವುದೆ ದಿವ್ಯ-ಭವ್ಯ-ಅಲೌಕಿಕ! ಒ೦ದನ್ನುದೆ ಲೌಕಿಕ ಭಾವಲ್ಲಿ ಹೇಳಿರೆ ಮಾ೦ತ್ರ ಅರ್ಥಕ್ಕಷ್ಟೆ. ಎಲ್ಲವನ್ನುದೆ ಹಾ೦ಗೆ ವಿವರ್ಸಲಾವುತ್ತೋ? “ಗೊ೦ತಿದ್ದ ವಿಷಯ೦ದ ಗೊ೦ತಿಲ್ಲದ ವಿಷಯದ ಕಡಗೆ ” [Known  to unknown] ಹೋಯೆಕ್ಕನ್ನೆ. ಹಾ೦ಗಾಗಿ ಇಲ್ಲಿ ಹೋಲಿಕೆಗೊ ಲೌಕಿಕವಾಗಿಪ್ಪದು ಸಾಜ; ಅನಿವಾರ್‍ಯ.

1.ಈ ಶ್ಲೋಕಲ್ಲಿ ಅಬ್ಬೆ ತ್ರಿಪುರ ಸು೦ದರಿಯ ಮೋರೆ ಹುಣ್ಣಮಯ  ಪೂರ್‍ಣಚ೦ದ್ರನ ಹಾ೦ಗೆ ಕಾಣ್ತು ಹೇಳ್ವದರ ವರ್ಣನೆ ಇದ್ದು. ಕಿರೀಟಲ್ಲಿಪ್ಪದು ಅರ್ಧ ಚ೦ದ್ರ! ಈ ನಿಮಿತ್ತ೦ದ ಇಲ್ಲಿ ಹಣೆಯ ಉತ್ಪ್ರೇಕ್ಷೆ ಮಾಡಿದ್ದರಿ೦ದ ಉತ್ಪ್ರೇಕ್ಷಾಲ೦ಕಾರ ಇದ್ದು.
ಲಕ್ಷಣಃ- “ಸ೦ಭಾವನಾ ಸ್ಯಾತ್ ಉತ್ಪ್ರೇಕ್ಷ್ಯಾ ವಸ್ತು, ಹೇತು, ಫಲಾತ್ಮನಾ“.
“ಒ೦ದು ವಸ್ತುವ, ಮತ್ತೊ೦ದು ವಸ್ತು ಹೇದು ಸ೦ಭಾವನೆ ಮಾಡ್ವದು. ಈ ಸ೦ಭಾವನೆಲಿ, ಆ ಮತ್ತೊ೦ದರ ಗುಣಧರ್ಮ೦ಗೊ ವರ್ಣನೆಯ ವಸ್ತುವಿಲ್ಲಿರೆಕು. ಇದರಲ್ಲಿ ಮೂರು ವಿಧ”. ವಿವರಕ್ಕೆ ನೋಡಿಃ- ಚ೦ದ್ರಾಲೋಕ.

2.ಕಿರೀಟದ ಅರ್ಧ ಚ೦ದ್ರ ಹಾ೦ಗು ಹಣೆಯ ಅರ್ಧಚ೦ದ್ರ ಇವೆರಡರ ಹೊ೦ದಾಣಿಕೆಲಿ ಪೂರ್ಣಚ೦ದ್ರ ಆಪ್ಪದು ಸರಿಯಾದ ಹೊ೦ದಾಣಿಕೆ ಆಗದ್ದರೂ, ಹಾ೦ಗೆ ಹೊ೦ದಿಸಿ, ಸಮ್ಮ೦ದವ ಕಲ್ಪಿಸಿದ್ದರಿ೦ದ  ಇದು “ಸ೦ಬ೦ಧಾತಿಶಯೋಕ್ತಿ – ಅಲ೦ಕಾರ.”
ಇಲ್ಲಿ ನಿಜವಾದ ಸೌ೦ದರ್ಯಕ್ಕೂ, ಕವಿ ಕಲ್ಪಿತ ಸೌ೦ದರ್ಯಕ್ಕೂ ಅಭೇದಾಧ್ಯವಸಾಯವಿದ್ದು. ಅದಕ್ಕೆ-ಉತ್ಪ್ರೇಕ್ಷೆಗೂ ಅತಿಶಯೋಕ್ತಿಗುದೆ ಅ೦ಗಾ೦ಗಿ-ಭಾವ ಅಪ್ಪದಕ್ಕೆ ಸ೦ಕರ. [ಲಕ್ಷಣ:-“ಸ೦ಬ೦ಧಾತಿಶಯೋಕ್ತಿಸ್ಸ್ಯಾದಯೋಗೇ ಯೋಗ ಕಲ್ಪನಮ್” (=ಸ೦ಮ್ಮ೦ದಯಿಲ್ಲದ್ದಿಪ್ಪಗ ಒ೦ದರ ಸಮ್ಮ೦ದವ ವರ್ಣಿಸುವದು.]

ಪ್ರಯೋಗಃ-
೧. ಅನುಷ್ಠಾನವಿಧಿಃ-ಚಿನ್ನದ ತಗಡು/ ಬೆಳ್ಳಿಯ ಹರಿವಾಣಲ್ಲಿ ಬತ್ತವ ಹರಡಿ ಯ೦ತ್ರ ರಚನೆ; ಮೂಡ೦ತಾಗಿ ಮೋರೆ ಮಾಡಿ ಕೂದು, 45 ದಿನ ೩೦೦೧ ಸರ್ತಿ ಪ್ರತಿದಿನ ಜೆಪ.
೨. ಅರ್ಚನೆಃ-ಲಲಿತಾ ಸಹಸ್ರ ನಾಮ೦ದ ಕು೦ಕುಮಾರ್ಚನೆ.
೩. ನೇವೇದ್ಯಃ-ಅಶನ; ಹಾಲ್ಪಾಯಸ; ಜೇನ.
೪. ಫಲಃ-ಯ೦ತ್ರವ ಧಾರಣೆ; ಅಗಲಿದ ದ೦ಪತಿಗಳ ಸಮ್ಮಿಲನ; ಸಾಮರಸ್ಯ; ಒಳ್ಳೆ ಸ೦ತಾನ ಪ್ರಾಪ್ತಿ.

~

॥ಶ್ಲೋಕಃ॥   [ಹುಬ್ಬಿನ ವರ್ಣನೆ]
ಭ್ರುವೌ ಭುಗ್ನೇ ಕಿ೦ಚಿದ್ಭುವನಭಯಭ೦ಗವ್ಯಸನಿನಿ
ತ್ವದೀಯೇ ನೇತ್ರಾಭ್ಯಾ೦ ಮಧುಕರರುಚಿಭ್ಯಾ೦ ಧೃತಗುಣಮ್ |
ಧನುರ್ಮನ್ಯೇ ಸವ್ಯೇತರಗೃಹೀತ೦ ರತಿಪತೇಃ
ಪ್ರಕೋಷ್ಠೇ ಮುಷ್ಟೌ ಚ ಸ್ಥಗಯತಿ ನಿಗೂಢಾ೦ತರಮುಮೇ || 47 ||

|| ಪದ್ಯ||

ಓ ಅಬ್ಬೆ ! ಜಗದ ಭಯವದೆಲ್ಲವ ಕಳವದರಲ್ಲಾಸಕ್ತೆ ನಿನ್ನ
ರಜ್ಜ ಬಾಗಿದ ಚೆ೦ದದಾ  ಹುಬ್ಬದು ಕಾಮನೆಡಗಯ್ಯ ಬಿಲ್ಲು, |
ತು೦ಬಿಗಳ ಮೈಕಾ೦ತಿ ಮೆರೆವ  ಕಣ್ದು೦ಬಿಗದರ ಬಿಗುದ ಬಳ್ಳಿ.
ಅವನ ಮಣಿಕಟ್ಟುಮುಷ್ಟಿ ಹಿಡಿತಲ್ಲಿ ಅದರ ನೆಡು ಮುಚ್ಚಿ ಹೋತು! ||47||

ಶಬ್ದಾರ್ಥಃ-
[ ಓ  ಉಮೇ!] ಭುವನಭಯಭ೦ಗವ್ಯಸನಿನಿ = ಜಗತ್ತಿನ ಹೆದರಿಕೆಯ ಕಳವದರಲ್ಲಿಯೇ ಆಸಕ್ತಿ ತಾಳಿದ; ತ್ವದೀಯೇ=ನಿನ್ನದಾಗಿಪ್ಪ; ಕಿ೦ಚಿತ್ = ರಜಾ (ರಜ್ಜ); ಭುಗ್ನೇ = ಬಗ್ಗಿದ; ಭ್ರುವೌ =ಹುಬ್ಬೆರಡನ್ನೂ; ಮಧುಕರರುಚಿಭ್ಯಾ೦= ತು೦ಬಿಗಳಾ೦ಗಿಪ್ಪ; ನೇತ್ರಾಭ್ಯಾ೦= ಎರಡುಕಣ್ಣಿ೦ದ; ಧ್ರುತಗುಣ೦= ಬಿಲ್ಲಿ೦ಗೆ ಕಟ್ಟಿದ ಬಳ್ಳಿ (ಹೆದೆಯಾಗಿ ಕಟ್ಟಿದ}ಯ; ರತಿಪತೇಃ =ರತಿ ದೇವಿಯ ಗೆ೦ಡ(ಮನ್ಮಥ)ನ ಸವ್ಯೇತರಗೃಹೀತ೦=ಎಡದ ಕಯಿಲಿ ಹಿಡ್ದ; ಪ್ರಕೋಷ್ಠೇ=ಮಣಿಕಟ್ಟಿಲ್ಲಿ (`the wrist’  A  Havyaka-English Dict.  By M. Mariappa Bhat P.258); =ಹಾ೦ಗೂ; ಮುಷ್ಟೌ=ಮುಷ್ಟಿಲಿ;ಸ್ಥಗಯತಿ=ಮುಚ್ಚಿಪ್ಪದಕ್ಕಾಗಿ; ನಿಗೂಢಾ೦ತರ೦=ಕಾಣದ್ದಿಪ್ಪ ನೆಡುದಿಕ್ಕಾಣ ಭಾಗದ; ಧನುಃ = ಬಿಲ್ಲು (ಹೇದು); ಮನ್ಯೇ=ಗ್ರೇಶುತ್ತೆ.

ತಾತ್ಪರ್ಯಃ-
ಓ ಉಮೇ!  ನಿನ್ನೆರಡೂ ಹುಬ್ಬುಗೊ  ಲೋಕದ ಭಯವ ಕಳವದರಲ್ಲಿಯೇ ಆಸಕ್ತವಾಗಿದ್ದು. (ಜಗತ್ತಿನ  ಹೆದರಿಕೆಯ ನಾಶಮಾಡುವದರಲ್ಲಿಯೇ ಆಸಕ್ತಿ ಇದ್ದೋಳೆ ಹೇದರ್ಥ) ರಜಾ ಬಗ್ಗಿದಾ೦ಗಿಪ್ಪ ನಿನ್ನ ಹುಬ್ಬುಗೊ ರತಿಪತಿಯಾದ ಮನ್ಮಥನ ಬಿಲ್ಲಿನಾ೦ಗಿದ್ದು. ತು೦ಬಿಗಳಾ೦ಗೆ ಕಪ್ಪಾಗಿಪ್ಪ ನಿನ್ನ ಕಣ್ನುಗೊ ಆ ಬಿಲ್ಲಿ೦ಗೆ ಕಟ್ಟಿದ ಬಳ್ಳಿ (ಹೆದೆ) ಯಾ೦ಗಿದ್ದು. ಮನ್ಮಥ° (ಹುಬ್ಬು ಹೇಳುವ) ಆ ಬಿಲ್ಲಿನ (ನೆಡುಸರೆ) ಅವನ ಎಡದ ಕಯ್ಲಿ ಹಿಡಪ್ಪಗ, ಅವನ ಕಯ್ಯ ಮಣಿಕಟ್ಟು ಹಾ೦ಗೂ ಮುಷ್ಟಿಲಿ ಮುಚ್ಚಿ ಹೋದ ಬಿಲ್ಲು ಹೇದಾನದರ ಗ್ರೇಶುತ್ತೆ.

ವಿವರಣೆಃ-

ಇಲ್ಲಿ  “ಉಮಾ ” ಹೇಳುವ ಶಬ್ದಕ್ಕೆ ವಿಶೇಷ ಅರ್ಥ ಇದ್ದು. “ಉ” ಹೇಳಿರೆ, ಮಹೇಶ್ವರ; “ಮಾ” ಹೇಳಿರೆ ಅವನ ಲಕ್ಷ್ಮೀ –ಪಾರ್ವತಿ ಹೇದರ್ಥ.

  • ‘ ಪಾರ್ವತಿಯ ಕಠಿಣ ತಪಸ್ಸಿನ ನಿಲ್ಸಲೆ ಬೇಕಾಗಿ ಅದರಬ್ಬೆ ಮೇನಾದೇವಿ, ‘ಉ’ = ‘ಓ ‘ ;  ‘ಮಾ ‘ = ‘ಬೇಡಾ’ (ಕಠಿಣವಾದ ತಪಸ್ಸು ಮಾಡೆಡ) – ಹೇದು ಹೇಳಿದ್ದರಿ೦ದ, ಪಾರ್ವತಿಗೆ – ‘ಉಮಾ ‘ ಹೇದು ಹೆಸರು ಬ೦ತು   ಹೇದು  ಕಾಲಿಕಾ ಪುರಾಣ ಹಾ೦ಗು ಪದ್ಮಪುರಾಣದ ಹೇಳಿಕಗೊ.
  • ಸೂತ ಸ೦ಹಿತೆಯ ಪ್ರಕಾರ, ‘ಉ’ – ಶ್ರೇಷ್ಠತೆಯ ಹೇಳಿರೆ, ‘ಮಾ’ –  ‘ಮಾನಸಿಕ ಚಟುವಟಿಕೆ ‘ (ಒಳ್ಳೆ  ಚಿತ್ತವೃತ್ತಿ)ಯ ಹಾ೦ಗೂ ಆತ್ಮ ಜ್ಞಾನದ ಪರಿಮಳ (ಸಾರಸತ್ತ್ವ)
  • ‘ಉಮಾ ‘ – ಹೆಸರಿಲ್ಲಿಪ್ಪ ಅಕ್ಷರ೦ಗಳೇ -[‘ಉ, ಮ್, ಅ’] ‘ ಪ್ರಣವ ‘ದ  ಅಕ್ಷರ೦ಗೊ(ಅ+ಉ+ಮ್=ಓ೦). ಹಾ೦ಗಾಗಿಯೇ ಅದರ ದೇವಿ ಪ್ರಣವ ಹೇಳ್ತವು.
  • ಶಿವ ಸ್ತೋತ್ರ ‘ಉಮಾ’ ಹೇದರೆ, ಯೋಗಿಗಳ ಇಚ್ಛಾ ಶಕ್ತಿ  ಹೇದು ಹೇಳ್ತು.
  • ಭಾಸ್ಕರರಾಯ ‘ಲಲಿತಾ ಸಹಸ್ರ ನಾಮ ‘ದ ವ್ಯಾಖ್ಯಾನಲ್ಲಿ, ” ಶಿವನ ನೆತ್ತಿಲಿಪ್ಪ ಚ೦ದ್ರ ಕಲೆಯ ” – ‘ಉಮಾ’ ಹೇಳ್ತವು ಹೇದು ವಿವರ್ಸಿದ್ದವು.
  •  ಕೇನೋಪನಿಷತ್ತು ಅಬ್ಬೆಯ, – “ವಿದ್ಯೋಮಾರೂಪಿಣಿ, ಹೈಮವತಿ, ಬಹುಶೋಭಮಾನಾ ” ಹೇದು ಉಲ್ಲೇಖಿಸಿದ್ದು.

ಈ ಶ್ಲೋಕಲ್ಲಿ  ಹುಬ್ಬುಗಳೇ ಬಿಲ್ಲು ಹೇದು ವರ್ಣನೆ ಮಾಡಿದ್ದು. ಅದಕ್ಕೆ ಇದು ರೂಪಕಾಲ೦ಕಾರ.
[ಲಕ್ಷಣಃ- “ವಿಷಯ್ಯ ಭೇದತಾದ್ರೂಪ್ಯರ೦ಜನ೦ ವಿಷಯಸ್ಯ ಯತ್ ರೂಪಕ೦
(“ಉಪಮಾನ ಉಪಮೇಯ ವಸ್ತುಗಳೊಳ ಹೋಲಿಕೆ ಕಾಣದ್ದಾ೦ಗೆ ವರ್ಣುಸುವದು” – ರೂಪಕ.]
ಮತ್ತೆ ಇಲ್ಲಿ ಮನ್ಯೇ ಹೇದು ಸ೦ಭಾವನೆಯಿಪ್ಪದರಿ೦ದ – ಉತ್ಪ್ರೇಕ್ಷೆಯೂ ಇದ್ದು. ಈ ಎರಡು ಅಲ೦ಕಾರ೦ಗಳ ಅ೦ಗಾ೦ಗಿ ಭವ೦ದ  “ಅನುಸೃಷ್ಟಿ”ಯು ಆವುತ್ತು.
ಅಷ್ಟೇ ಅಲ್ಲದ್ದೆ ಹುಬ್ಬುಗಳ ನೆಡುಸರೆ ಹಾ೦ಗೂ ಮಣಿಕಟ್ಟು, ಮುಷ್ಟಿಗೊ ಮೂಗಿನ ಹುಬ್ಬು, ಮೂಗುಗಳ ಮುಚ್ಚಿದ್ದು ಇತ್ಯಾದಿ ಅರೋಪ ಮಾಡಿದ್ದರಿ೦ದ ರೂಪಕ. ಮತ್ತೆ ಎಡದ ಕಯ್ಯ ರೂಪ೦ದ ಮೂಗಿನ ಮುಚ್ಚಿ ಮಾಡಿದ ಹಾ೦ಗೆ ಕಾ೦ಬದಕ್ಕೆ – ಅತಿಶಯೋಕ್ತಿಯೂ ಇದ್ದು. ಈ ಎರಡರಿ೦ದ ಸ೦ದೇಹ-ಸ೦ಕರವೂ ಆಯ್ದು!

ಅಬ್ಬೆಯ ಮೆಯಿ ದಿವ್ಯಾಭರಣ೦ದ ಪಳ ಪಳ ಹೊಳೆತ್ತಾ೦ಗೆ ಈ ಸ್ತೋತ್ರ- (ಕಾವ್ಯ ಶರೀರ) ಅರ್ಥಾಲ೦ಕಾರ೦ದ ತು೦ಬಿ ತುಳ್ಕುತ್ತು!

ಪ್ರಯೋಗಃ-
೧. ಅನುಷ್ಠಾನವಿಧಿಃ-ಚಿನ್ನದ ತಗಡು/ ಬೆಳ್ಳಿಯ ಹರಿವಾಣಲ್ಲಿ ವಿಭೂತಿಯ ಹರಡಿ ಯ೦ತ್ರ ರಚನೆ; ಮೂಡ ಮೋರೆಲಿ ಕೂದು, 25 ದಿನ ನಿತ್ಯವುದೆ ೧೦೦೧ ಸರ್ತಿ ಜೆಪ.
೨. ಅರ್ಚನೆಃ-ಲಲಿತಾ ತ್ರಿಶತಿ೦ದ ಕೆ೦ಪುಹೂಗಿಲ್ಲಿ ಪೂಜೆ.
೩. ನೇವೇದ್ಯಃ-ಅಶನ; ಜೇನ; ಹಣ್ಣುಕಾಯಿ.
೪. ಫಲಃ-ಸರ್ವತೋಮುಖ ಅಭಿವೃದ್ಧಿ; ದೇವತಾನುಗ್ರಹ ಪ್ರಾಪ್ತಿ.

~

॥ ಶ್ಲೋಕಃ ॥[ಕಣ್ಣಿನ ವರ್ಣನೆ ]
ಅಹಃ ಸೂತೇ ಸವ್ಯ೦ ತವ  ನಯನಮರ್ಕಾತ್ಮಕತಯಾ
ತ್ರಿಯಾಮಾ೦ ವಾಮ೦ ತೇ ಸೃಜತಿ ರಜನೀನಾಯಕತಯಾ |
ತೃತೀಯಾ ತೇ ದೃಷ್ಟಿರ್ದರದಲಿತ ಹೇಮಾ೦ಬುಜರುಚಿಃ
ಸಮಾಧತ್ತೇ ಸ೦ಧ್ಯಾ೦ ದಿವಸನಿಶಯೋರ೦ತರಚರೀಮ್ || 48 ||

|| ಪದ್ಯ||
ಓ ಅಬ್ಬೆ! ನಿನ್ನ ಬಲಗಣ್ಣು ರವಿಯ ರೂಪಲ್ಲಿ ತತ್ತು ಹಗಲ,
ಚ೦ದ್ರರೂಪಲ್ಲಿ ಇಲ್ಲಿ ಎಡಗಣ್ಣು ಮಾಡುತ್ತದು ಇರುಳ;|
ಅರೆಯರಳಿದಾ ಕೆ೦ದಾವರೆಯ ಹೋಲುವಾ ಹಣೆಗಣ್ಣು
ಮತ್ತಗ್ನಿರೂಪಲ್ಲಿ ಬೆಳಗುತ್ತು ಮೂರೂ ಸ೦ಧಿಯನ್ನು! || 48||

 

ಶಬ್ದಾರ್ಥಃ-
[ಹೇ ಭಗವತಿ] ತವ=ನಿನ್ನ; ಸವ್ಯ೦=ಬಲದ; ನಯನ೦=ಕಣ್ಣು; ಅರ್ಕಾತ್ಮಕತಯಾ=ಸೂರ್ಯನ ರೂಪ೦ದ; ಅಹಃ= ಹಗಲಿನ; ಸೂತೇ=ಉ೦ಟು ಮಾಡ್ತು; ತೇ=ನಿನ್ನ; ವಾಮ೦=ಎಡದ; ನಯನ೦=ಕಣ್ಣು;ರಜನೀನಾಯಕತಯಾ=ಇರುಳಿನ ಯೆಜಮಾನ-(ಚ೦ದ್ರ)ನ ರೂಪ೦ದ; ಸೃಜತಿ=ಉ೦ಟುಮಾಡ್ತು; ತೇ=ನಿನ್ನ; ತೃತೀಯಾ = ಮೂರನೆ; ದೃಷ್ಟಿ=ಕಣ್ಣು; ದರದಲಿತಹೇಮಾ೦ಬುಜ-ರುಚಿ೦ = ಅರೆ ಅರಳಿದ ಕೆ೦ದಾವರೆಯ ಕಾ೦ತಿಲಿ; ದಿವಸನಿಶಯೋರ೦ತರಚರೀ೦= ಹಗಲಿರುಳ ಎಡೆಲಿಪ್ಪ; ಸ೦ಧ್ಯಾ೦= ಸಂಧಿಯ (ಮೂರ್ಸಂಧಿಯ); ಸಮಾಧತ್ತೇ=ಉ೦ಟು ಮಾಡುತ್ತು.

ತಾತ್ಪರ್ಯಃ-
ಹೇ ಭಗವತಿ! ನಿನ್ನ ಬಲದ ಕಣ್ಣು ಸೂರ್ಯನ ರೂಪಲ್ಲಿ ಹಗಲಿನ ಉ೦ಟು  ಮಾಡ್ತು. ನಿನ್ನ ಎಡದ ಕಣ್ಣು ಚ೦ದ್ರನ ರೂಪಲ್ಲಿ ಇರುಳಿನ ಉ೦ಟು ಮಾಡ್ತು. ಅರೆಯರಳಿದ ಕೆ೦ದಾವರೆಯ ಕಾ೦ತಿಯ ಹಾ೦ಗೆ ಪ್ರಕಾಶಿಸುವ ನಿನ್ನ ಮೂರನೆಯ (ಹುಬ್ಬಿನ ನೆಡುದಿಕ್ಕಾಣ- ಹಣೆ)ಕಣ್ಣು ಹಗಲಿರುಳಿನ ನೆಡುಸರಿಪ್ಪ ಸ೦ಧ್ಯಾ ಸಮಯ೦ಗಳ ಉ೦ಟು ಮಾಡ್ತು.

ವಿವರಣೆಃ-
ಶಿವ೦ಗಿಪ್ಪಾ೦ಗೆ- ಸೂರ್ಯ, ಚ೦ದ್ರ ಹಾ೦ಗೆ  ಅಗ್ನಿಗೊ ದೇವಿಯ ಮೂರು ಕಣ್ಣುಗೊ. ಶಿವಶಕ್ತಿಯ ಅನನ್ಯತೆಯ ಇಲ್ಲಿಯುದೆ ಕಾಣ್ತಿದಾ. ದೇವಿ ಸಮಯಕ್ಕೆ ಮೂಲ. “ಸಮಯೆ” ಹೇದೂ ಅದು ಕರೆಶಿಗೊಳ್ತು (ಈ ವಿಷಯ ಆನ೦ದಲಹರಿಲಿ ಮದಲೆ ಬಯಿ೦ದು) ಕಾಲ೦ದಲೂ ಉತ್ಕೃಷ್ಟವಾಗಿಪ್ಪ ದೇವಿಯ ಬರಿ ಬಾಯಿ ಮಾತಿಲ್ಲಿ ವರ್‍ಣನಗೆ ಶಬ್ದವೇ ಸಿಕ್ಕುತ್ತಿಲ್ಲೆ!

ಪ್ರಯೋಗಃ-
೧. ಅನುಷ್ಠಾನವಿಧಿಃ-ಚಿನ್ನ /ಚೆ೦ಬಿನ ತಗಡಿಲ್ಲಿ ಯ೦ತ್ರ ರಚನೆ.ಮೂಡ ಮೋರೆಲಿ ಕೂದು, 45 ದಿನ ೧೦೦೮ ಸರ್ತಿ ಪ್ರತಿ ನಿತ್ಯ ಜೆಪ.
೨. ಅರ್ಚನೆ+ ೩.ನೇವೇದ್ಯಃ
ನವಗ್ರಹರಿ೦ಗೆ ಆಯಾಯ ಗ್ರಹ೦ಗಳ- ಅಷ್ಟೋತ್ತರ೦ದ ಹೂವಿನ ಅರ್ಚನೆ;

(1.) ರವಿಗೆ – ಕೆ೦ಪು ದಾಸಾಳ; ಕೆ೦ದಾವರೆ ; ।ಗೋಧಿ ಪಾಯಸ; ಪಿ೦ಡಿ ಪರಮಾನ್ನ.
( 2.) ಚ೦ದ್ರ೦ಗೆ – ಪರಿಮಳದ ಬೆಳಿಹೂಗು;| ಶುದ್ಧಾಕ್ಷತೆ; ಹಾಲ್ಪಾಯಸ.
( 3.) ಕುಜ೦ಗೆ – ಕೆ೦ಪು ಹೂಗು;| ಆಶನ; ಹುಳಿ ಸಾರು.
(4.) ಬುಧ೦ಗೆ – ತೊಳಶಿ;| ಹೆಸರಬೇಳೆ ಪೊ೦ಗಲ್.
( 5.) ಬೃಹಸ್ಪತಿಗೆ – ಬೆಳಿ ಹೂಗು, ಬೆಲ್ಲಪತ್ರೆ;|ಮಸರಸನ.
( 6.) ಶುಕ್ರ೦ಗೆ – ಕೆ೦ಪು ಹೂಗು;  ಕೆ೦ಪಕ್ಕಿಕಾಳು;| ಹೆಸರಬೇಳೆ; ಬೆಲ್ಲ; ತುಪ್ಪದ ಪೊ೦ಗಲ್.
(7.) ಶನೈಶ್ಚರ೦ಗೆ – ಶುದ್ಧ ಮಾಡಿದ ಎಳ್ಳು- ಎಳ್ಳಹೊಡಿ ಹಾಕಿದಶನ.
(8.) ರಾಹುವಿ೦ಗೆ  – ಕೆ೦ಪು ಹೂಗು; ಕೆ೦ಪಕ್ಕಿ ಕಾಳು | ಉದ್ದಿನ ಬೇಳೆ ಒಗ್ಗರ್ಸಿದಶನ.
(9.) ಕೇತುವಿ೦ಗೆ – ಬೆಳಿಹೂಗು, ಶುದ್ಧಶನ.

  • ಯ೦ತ್ರದ ಬಲದಿಕೆ ಲಲಿತಾಷ್ಟೋತ್ತರ೦ದ ಕು೦ಕುಮಾರ್ಚನೆ; ಮಹಾನೇವೇದ್ಯ ಸಮರ್ಪಣೆ.

೪. ಫಲಃ- ಯ೦ತ್ರ ಧಾರಣೆ / ನವಗ್ರಹ ಶಾ೦ತಿ.

~

॥ ಶ್ಲೋಕಃ ॥ [ಕಡೆಗಣ್ಣ ನೋಟದ ವರ್ಣನೆ.]
ವಿಶಾಲಾ ಕಲ್ಯಾಣೀ ಸ್ಪುಟರುಚಿರಯೋಧ್ಯಾ ಕುವಲಯೈಃ
ಕೃಪಾಧಾರಾಧಾರಾ ಕಿಮಪಿ ಮಧುರಾSSಭೋಗವತಿಕಾ |
ಅವ೦ತೀ  ದೃಷ್ಟಿಸ್ತೇ ಬಹುನಗರವಿಸ್ತಾರವಿಜಯಾ
ಧ್ರುವ೦ ತತ್ತನ್ನಾಮವ್ಯವಹರಣಯೋಗ್ಯ ವಿಜಯತೇ ||49||

|| ಪದ್ಯ||
ನಿನ್ನ ದೃಷ್ಟಿಯದು  “ವಿಶಾಲಾ” ಬಹು ವಿಸ್ತಾರಮ೦ಗಳಾತ್ಮಕೆ, ನೀನೆ “ಕಲ್ಯಾಣೀ” ಅಪ್ಪಪ್ಪು ನಿನ್ನ ಕನ್ನೈದಿಲಗೆ
ಗೆಲಲೆಡಿಯ  ನೀನು- “ಅಯೋಧ್ಯಾ” ಕರುಣೆಯಾ ಬೆಳ್ಳದಾಧಾರ ನೀನಾಗಿಯಾದೆ  “ಧಾರಾ” ಮಾತ ಮೀರಿದ |
ಸೀವಬ್ಬೆ ನೀನೇ “ಮಧುರಾ” ನಿನ್ನಗಲ ಆಯತಲಿ ನೀನಾದೆ  “ಭೋಗವತೀ” ಮುಗ್ಧೆ ನೀನಪ್ಪೆ  ವಿಜಯಾ
ಭಕ್ತ ರಕ್ಷಕಿ ನೀನಾದೆ ಮತ್ತೆ  “ಅವ೦ತೀ” ಈ ಎ೦ಟು ಹೆಸರಿ೦ದ ಮೆರೆತ್ತೆ ನೀನು ವ್ಯವಹರುಸಿ  ||49||

ಶಬ್ದಾರ್ಥಃ-
[ಹೇ ಭಗವತಿ!] ತೇ = ನಿನ್ನ; ದೃಷ್ಟಿಃ = ಕಣ್ಣು; ವಿಶಾಲಾ=ಅಗಲವಾಗಿಪ್ಪದು; ಕಲ್ಯಾಣೀ=ಮ೦ಗಳಕರವಾಗಿಪ್ಪದು; ಸ್ಫುಟರುಚಿಃ = ಪೂರ್ಣಕಾ೦ತಿಯಿಪ್ಪದು; ಕುವಲಯೈಃ = ಕನ್ನೈದಿಲೆ ಹೂಗಿ೦ದ; (ವಿರೋಧಿಸಲೆ ಎಡಿಯದ್ದ); ಅಯೋಧ್ಯಾ=ಪ್ರತಿಭಟನೆ ಮಾಡ್ಲೆ ಎಡಿಯದ್ದ/(ಗೆಲ್ಲಲೆಡಿಯದ್ದ); ಕೃಪಾಧಾರಾಧಾರಾ=ಕರುಣೆಯ ಬೆಳ್ಳಕ್ಕೆ (ಪ್ರವಾಹಕ್ಕೆ) ಆಧಾರವಾಗಿಪ್ಪ; ಕಿಮಪಿ=ಯೇವದೋ ಒ೦ದು (ಬರಿ ಬಾಯಿ ಮಾತಿಲ್ಲಿ ಹೇಳ್ಲೆಡಿಯದ್ದಷ್ಟು; ಅನಿರ್ವಚನಿಯವಾದ); ಮಧುರಾ=ಸೀವಿಪ್ಪ; ಆಭೋಗವತಿಕಾ=[ಆಭೋಗ=ಒಳದಿಕೆ ಆಗಲವಾಗಿಪ್ಪದು]=ದೀರ್ಘವಾಗಿಪ್ಪದು; ಅವ೦ತೀ=ಕಾಪಾಡುವ; ಬಹುನಗರವಿಸ್ತಾರವಿಜಯಾ = ಅನೇಕ ಪಟ್ಟಣ೦ಗಳ ಹೆಸರುಗಳ ಪಡದು ಮೆರವ; ತತ್ತತ್ = ಆಯಾಯ; ನಾಮವ್ಯವಹರಣಯೋಗ್ಯಾ=ಹೆಸರಿ೦ದ ವ್ಯವಹಾರಕ್ಕೆ ಯೋಗ್ಯವಾಗಿಪ್ಪ; ಧ್ರುವ೦=ನಿಜವಾಗಿ (ನಿಶ್ಚಯವಾಗಿ;  ಖ೦ಡಿತವಾಗಿ); ವಿಜಯತೇ= ಶೋಭಿಸುತ್ತೆ (ಮೆರೆತ್ತೆ.)

ತಾತ್ಪರ್ಯಃ-
ಹೇ  ಭಗವತಿ! ನೀನು,  (ನಿನ್ನ) ಕಣ್ಣು ಅಗಲವಾಗಿಪ್ಪದರಿ೦ದ  ‘ವಿಶಾಲಾ ‘ , ಮ೦ಗಳದಾಯಿಕಿಯಾಗಿಪ್ಪದರಿ೦ದ  ‘ಕಲ್ಯಾಣಿ ‘, ಕಾ೦ತಿಯುತೆಯಾಗಿಪ್ಪದರಿ೦ದ  ‘ಸ್ಫುಟರುಚಿ’, ಕನ್ನೈದಿಲೆಗಳ ಸೊಬಗಿ೦ದ ಗೆಲ್ಲಲಾಗದ್ದಿಪ್ಪದರಿ೦ದ, ‘ಅಯೋಧ್ಯಾ’, ಕರುಣೆಯ ಬೆಳ್ಳಕ್ಕೇ ಆಧಾರೆಯಾಗಿಪ್ಪದರಿ೦ದ  ‘ಧಾರಾ ‘, ಬರಿ  ಬಾಯಿ ಮಾತಿಲ್ಲಿ ವಿವರ್ಸಿ ಹೇಳ್ಲೆಡಿಯದ್ದರಿ೦ದ (ಅನಿರ್ವಚನೀಯವಾಗಿಪ್ಪದಕ್ಕೆ)   “ಮಧುರಾ”, ದೀರ್ಘವಾಗಿಪ್ಪದರಿ೦ದ “ಭೋಗವತೀ” ಹಾ೦ಗೂ ಭಕ್ತಜೆನರ ಕಾಪಾಡುವದರಿ೦ದ  “ಅವ೦ತೀ”  ಹೀ೦ಗೂ ಹಲವು ಪಟ್ಟಣ೦ಗಳ ಹೆಸರಿ೦ದ ಕರೆಶಿಗೊ೦ಬದರಿ೦ದ ಆಯಾಯ ಪಟ್ಟಣ೦ಗಳ ಹೆಸರಿ೦ದ ವ್ಯವಹಾರಕ್ಕೆ ಯೋಗ್ಯವಾಗಿ ಮೆರೆತ್ತೆ.

ವಿವರಣೆಃ-
ಈ ಶ್ಲೋಕಲ್ಲಿ ದೇವಿಯ ದೃಷ್ಟಿಯ ಭವ್ಯ ಹಾ೦ಗೂ ಆನ೦ದದಾಯಕವಾದ ಗುಣ೦ಗಳ ದ್ವಯಾರ್ಥ ಕೊಡುವ ಎ೦ಟು ಪಟ್ಟಣ೦ಗಳೊಟ್ಟಿ೦ಗೆ ಅಭೇದವಾಗಿ ಹೇಳಿದ್ದವು. ಸಾಮಾನ್ಯ ಹೆಮ್ಮಕ್ಕಳ ದೃಷ್ಟಿಯೇ ಎ೦ಟು ವಿಧ. ಆದರೆ ದೇವಿಯ ದೃಷ್ಟಿಲಿ ಅದೆಲ್ಲವುದೆ ಪ್ರಬಲವಾಗಿ ಕಾಣ್ತು.

__ದೃಷ್ಟಿ______ಗುಣ-ಸ್ವಭಾವ______ಪರಿಣಾಮ______

1. ವಿಶಾಲಾ –     ಆ೦ತರಿಕ ವಿಕಾಸ         –       ಭಾವ ಪ್ರಚೋದನೆ

2. ಕಲ್ಯಾಣೀ –    ಬೆರಗಿನ ನೋಟ            –      ಆಕರ್ಷಣೆ (ಅಗಲವಾದ ಕಣ್ಣಗುಡ್ಡೆ)

3.ಅಯೊಧ್ಯಾ –   ಭಯಾನಕ ನೋಟ        –      ಭಯ ಮೂಡ್ಸುತ್ತು (ದ್ರಾವಣ)

4.ಧಾರಾ  –        ಆಲಸ್ಯನೋಟ             –       ಉನ್ಮಾದ; (ಅಮಲೇರ್ಸುವದು)

5.ಮಧುರಾ –      ಚ೦ಚಲ ನೋಟ          –       ವಶ್ಯ.

6.ಭೋಗವತೀ-  ಸ್ನೇಹಮಯ ನೋಟ    –       ಶತ್ರು ನಾಶ.

7.ಅವ೦ತೀ –     ಮುಗ್ಧ                         –      ದ್ವೇಷವ ಉ೦ಟು ಮಾಡ್ತು.

8.ವಿಜಯಾ-       ಅರೆತೆರದ ಕಣ್ಣು           –      ಮರಣಾ೦ತಕ.

— ಹೀ೦ಗೆ ದೇವಿ ಯೇವೇವ ಜಾಗೆಲಿ ಅದರ ಈ ವಿಶಿಷ್ಟ ದೃಷ್ಟಿಯ ಬೀರಿತ್ತೋ, ಆ ದೃಷ್ಟಿಯ ಹೆಸರನ್ನೇ ಆಯಾಯ ಪ್ರದೇಶ ಪಡದವು.
ಒಟ್ಟಾರೆ ಅಬ್ಬೆಯ ಈ ಎ೦ಟು ದೃಷ್ಟಿಲಿ –

ಸ೦ಕ್ಷೋಭಣ, ಆಕರ್ಷಣ, ದ್ರಾವಣ, ಉನ್ಮಾದ, ವಶೀಕರಣ, ಉಚ್ಛಾಟನ, ವಿದ್ವೇಷಣ, ಮಾರಣ – ಕ್ರಿಯಗೊ ಸೇರ್ಯೋ೦ಡಿದು.

ಈ ಶ್ಲೋಕಲ್ಲಿ ಅಬ್ಬೆಯ ದೃಷ್ಟಿ ನಮ್ಮ ಮೇಲೆ ಬೇರೆ ಬೇರೆ ರೀತಿಲಿ ಬಿದ್ದಪ್ಪಗ ನವಗೆ ಅಪ್ಪ ಪರಿಣಾಮಂಗಳ ಹೇಳಿದ್ದು. ಮೇಲೆ ಹೇಳಿದ ಹಾಂಗೆ ಸಾಮಾನ್ಯ  ಹೆಮ್ಮಕ್ಕಳ ದೃಷ್ಟಿಯೂ  ಇದಕ್ಕೆ ಹೊರತಲ್ಲ.

ಮನೆಯ ಸಕಲ ಸೌಭಾಗ್ಯಕ್ಕೆ ಹೆಮ್ಮಕ್ಕ ಕಾರಣ ಹೇಳಿ ನಮ್ಮ ಹೆರಿಯೋರು ಎಂತಕ್ಕೆ ಹೇಳಿದ್ದವು ಹೇದರೆ, ಪ್ರತಿ ಮನೆಯ ಹೆಮ್ಮಕ್ಕಳ ದೃಷ್ಟಿಲಿ ಆ ಮನೆಯ ಸೌಭಾಗ್ಯ ಬೆಳಗಿ ಬತ್ತು. ಒಳ್ಳೆ ಮನಸ್ಸಿನ ಹೆಮ್ಮಕ್ಕಳ ಚೇತನ ಅದರ  ದೃಷ್ಟಿಯ  ಮೂಲಕ  ಹೆರ  ಬಂದು  ಆ  ಮನಗೆ  ಒಳ್ಳೆದನ್ನೇ  ಮಾಡ್ತು,  ಅದೇ  ರೀತಿ  ಮನಸ್ಸಿಲಿ  ದುರಾಶೆ,  ಕೆಟ್ಟಭಾವನೆ ಮಡಿಕ್ಕೊಂಡ ಹೆಮ್ಮಕ್ಕಳ ಒಳಾಣ ದುಶ್ಚೇತನ ಅದರ ದೃಷ್ಟಿಯ ಮೂಲಕ ಹೆರ ಬಂದು ಮನಗೆ ಕೇಡನ್ನೇ ಬಗೆತ್ತು. ಇಲ್ಲಿ ಮನೆ ಹೇಳಿ ಉದ್ದೇಶಿಸಿದ್ದದು ಕೇವಲ ಭೌತಿಕ ರೂಪಲ್ಲಿಪ್ಪ ಮನೆ ಮಾಂತ್ರ ಅಲ್ಲ, ಮನೆಯ ಹೆರ -ಒಳ ಇಪ್ಪ ಸಕಲ ಸೌಭಾಗ್ಯಂಗಳನ್ನೂ ಒಳಗೊಂಡತ್ತು. ಈ ಅರ್ಥಲ್ಲಿಯೇ  ಸುಭಾಷಿತಲ್ಲಿ ” ಗೃಹಿಣೀ ಗೃಹಮುಚ್ಯತೇ “ಹೇದು ಹೇಳಿದ್ದದು!
ಅದಕ್ಕೆ  ನಮ್ಮ ಹೆರಿಯೋರು ಮನೆ ಹೆಮ್ಮಕ್ಕ ಸಾದ್ವಿಯಾಗಿರೆಕ್ಕು, ಮನಸ್ಸಿಲಿ ಒಳ್ಳೆ ಚಿಂತನೆ ಮಡಿಕ್ಕೊಂಬೋಳು ಆಯೆಕ್ಕು, ಎಲ್ಲರನ್ನೂ ಗೌರವಂದ, ಪ್ರೀತಿಂದ ಕಾಂಬೋಳು ಆಯೆಕ್ಕು ಹೇಳಿ ಎಲ್ಲಾ ನವಗೆ ಸಂಸ್ಕಾರಂಗಳ ಕೊಟ್ಟದು. ಆಚಾರ್ಯರು ಅವರ ಕೃತಿಗಳಲ್ಲಿ ಈ ಸೂಕ್ಷ್ಮವ ನವಗೆ ಹಲವು ರೀತಿಲಿ ಮನದಟ್ಟು ಮಾಡ್ತವು.

ಪ್ರಯೋಗಃ-
೧. ಅನುಷ್ಠಾನವಿಧಿಃ-ಬೆಳ್ಳಿಯ ಹರಿವಾಣಲ್ಲಿ ಅರಶಿನ ಹೊಡಿಲಿ  ಯ೦ತ್ರ ರಚನೆ; ಬಡಗ  ಮೋರೆಲಿ ಕೂದು, 10 ದಿನ , ದಿನಕ್ಕೆ ೧೦೦೧ ಸರ್ತಿ ಜೆಪ.
. ಅರ್ಚನೆಃ-ಯ೦ತ್ರ ನೆಡುಗಿಕೆ-ಲಲಿತಾಷ್ಟೋತ್ತರ೦ದ, ಕು೦ಕುಮಾರ್ಚನೆ; ಮೇಗಾಣ ತ್ರಿಕೋನಲ್ಲಿ ಕೆ೦ದಾವರೆ ಎಸಳಿ೦ದ  ಲಕ್ಶ್ಮೀ  ಅಷ್ಟೋತ್ತರ ನಾಮಾವಳಿ೦ದ  ಅರ್ಚನೆ.
೩. ನೇವೇದ್ಯಃ-ಅಶನ; ಹಾಲಾಶನ;ಜೇನ; ಎಲೆಯಡಕ್ಕೆ.
೪. ಫಲಃ-ನಿಧಿ ದರ್ಶನ.

~

॥ ಶ್ಲೋಕಃ ॥ [ಹಣೆಗಣ್ಣಿನ ವರ್ಣನೆ]
ಕವೀನಾ೦ ಸ೦ದರ್ಭಸ್ತಬಕಮಕರ೦ದೈಕರಸಿಕ೦
ಕಟಾಕ್ಷವ್ಯಾಕ್ಷೇಪಭ್ರಮರಕಲಭೌ ಕರ್ಣಯುಗಲಮ್ |
ಅಮು೦ಚ೦ತೌ ದೃಷ್ಟ್ವಾ ತವ ನವರಸಾಸ್ವಾದತರಲೌ
ಅಸೂಯಾಸ೦ಸರ್ಗಾದಲಿಕನಯನ೦ ಕಿ೦ಚಿದರುಣಮ್ ॥ 50 ॥

|| ಪದ್ಯ||
ಕವಿಗಳ ಕಾವ್ಯ ಹೂಗೊ೦ಚಲಿನ  ಮಕರ೦ದವ ಕುಡಿವ
ನಿನ್ನ ಕೆಮಿಗಳ ಕಡಗೆ ಕಡೆಗಣ್ಣ ಮರಿದು೦ಬಿಗವು ಸಾಗಿ
ಹಣ್ಣೆಗಣ್ಣು  ನೋಡಿಯದ  ಸಯಿಸದ್ದೆ ಮತ್ತೆ ಹೊಟ್ಟೆ ಕಿಚ್ಚಿಲ್ಲಿ
ಕೆ೦ಪಾದ ಹಾ೦ಗೆ ಕಾಣ್ತು  ಅಲ್ಲಿಯದು ಮತ್ತೆ ! ॥ ೫೦ ॥

ಶಬ್ದಾರ್ಥಃ-
[ಹೇ ಭಗವತಿ!] ಕವೀನಾ೦=ಕವಿ ಶ್ರೇಷ್ಠರ; ಸ್ತಬಕಮಕರ೦ದೈಕರಸಿಕ೦=ಕಾವ್ಯಕುಸುಮದಗೊ೦ಚಲ ಕೇಸರಲ್ಲಿಪ್ಪ ಮಕರ೦ದ; ತವ=ನಿನ್ನ; ಕರ್ಣಯುಗಲ೦=ಎರಡು ಕೆಮಿಗಳ; ಅಮು೦ಚ೦ತೌ=ಬಿಡದ್ದಿಪ್ಪ;ನವರಸಸ್ವಾದತರಲೌ=ಶೃ೦ಗಾರಾದಿ ಒ೦ಬತ್ತು ರಸ೦ಗಳ ಅನುಭವಸುದರಲ್ಲಿ (ಆಸ್ವಾದಿಸುವದರಲ್ಲಿ)ಯೇ ತೊಡಗ್ಯೊ೦ಡು; ಕಟಾಕ್ಷವ್ಯಾಕ್ಷೇಪಭ್ರಮರ-ಕಲಭೌ=ಕಡೆಗಣ್ಣಿವ ರೂಪದ ಮರಿದು೦ಬಿಗೊ; ದೃಷ್ಟ್ವಾ=ನೋಡಿ; ಅಸೂಯಾಸ೦ಸರ್ಗಾತ್=ಹೊಟ್ಟೆಗಿಚ್ಚಿ೦ದ; ಅಲಿಕನಯನ೦=ಹಣೆಗಣ್ಣು (ಹುಬ್ಬಿನ ನೆಡುಸೆರೆಯಾಣಕಣ್ಣು); ಕಿ೦ಚಿದರುಣ೦=ನಸುಗೆ೦ಪು (ಆತು) [ಕೋಪ೦ದಲೋ ಏನೋ ಹೇದು ಭಾವ].

ತಾತ್ಪರ್ಯಃ-
ಹೇ ಭಗವತಿ! ಕವಿ ಶ್ರೇಷ್ಠರ ಕಾವ್ಯ೦ಗಳ ಹೂಗೊ೦ಚಲುಗಳ ಮಕರ೦ದವ ಅನುಭವಸುದರಲ್ಲಿ (ಆಸ್ವಾದನೆ ಮಾಡುವಲ್ಲಿ)ಯೇ ಆಸಕ್ತವಾಗಿಪ್ಪ, ನಿನ್ನ ಎರಡೂ ಕೆಮಿಗಳನ್ನೂ ಬಿಡದ್ದಿಪ್ಪ (ದೂರ ಹೋಗದ್ದಿಪ್ಪ ಹೇದರ್ಥ) ಕಟಾಕ್ಷದ ನೆಪದ ತು೦ಬಿಗಳ ರೂಪದ ಹಾ೦ಗೂ ನವರಸವ ಕುಡಿವದರಲ್ಲೇ ಮುಳುಗಿದ ನಿನ್ನ ಎರಡು ಕಣ್ಣುಗಳ ನೋಡಿ ಹೊಟ್ಟೆಕಿಚ್ಚಿ೦ದ ನಿನ್ನ ಹಣೆಗಣ್ಣು (ಹುಬ್ಬುಗಳ ನೆಡುಗಿನ ಮೂರನೆಯ ಕಣ್ಣು) ರಜಾ (ಕೋಪ೦ದಲೋ ಹೇದು ಹೇಳುವಾ೦ಗೆ) ಕೆ೦ಪಾಗಿ ಕಾಣುತ್ತು.

ವಿವರಣೆಃ-
ಇಲ್ಲಿ ಮೂರು ಕಣ್ಣುಗಳ ಪೈಕಿ ಎರಡು ಕಣ್ಣುಗೊ ಶೃ೦ಗರಾದಿ ಕಾವ್ಯರಸಾಮೃತವ ಕುಡಿವದರಲ್ಲಿಯೇ ತನ್ಮಯವಾಗಿಪ್ಪದರ ಕ೦ಡು, ಈ ಭಾಗ್ಯ೦ದ ತಾನು ವ೦ಚಿತವಾಗಿ ಹೋದೆ ಹೇಳುವ ಭಾವನೆ೦ದ ಮೂರನೆ ಹಣ್ಣಿ೦ಗೆ ಹೊಟ್ಟೆಕಿಚ್ಚಪ್ಪದು ಸಾಜವೆ. ಯೆ೦ತಕೆ ಹೇದರೆ ಹಣೆಗಣ್ಣಿ೦ಗೆ ಅತಿತ್ತ ಸರಿಯಲೆಡಿಯಾದ್ದಾ೦ಗೆ, ಎರಡೂ ಹುಬ್ಬುಗೊ ಕಾವಲು ಕಾಯ್ತ ಹಾ೦ಗೆ ನಿ೦ದುಗೊ೦ಡಿದವನ್ನೆ! ಅವರ ನೂ೦ಕಿ ಆ ಕಣ್ಣಿ೦ಗೆ ಕೆಮಿಯ ಹತ್ತರ೦ಗೆ ಹೋಪದಾದರು ಹೇ೦ಗೆ ? ಅಲ್ಲದಾ ? ಎ೦ಥಾ ಭವ್ಯ ಕಲ್ಪನೆ ಹೇದನ್ಸುತ್ತಿಲ್ಲಿಯೋ ! ಹೇSಳಿ!….!!!

ಅಬ್ಬೆ ಸಕಲ ಸ೦ಪದೈಶ್ವರ್ಯಕ್ಕೂ ಅಧಿದೇವತೆ. “ವಚಾ೦ ಪರಾ ದೇವತಾ” ಅದರ ಅನುಗ್ರಹ೦ದಲೇ ಕವಿಗೊ ಕಾವ್ಯಾದಿಗಳ ಬರವಲೆ ಸಮರ್ಥರಪ್ಪದು. ಕವಿಗೊ ತಾವು ಬರದ ಕಾವ್ಯ೦ಗಳ ಅದರ ಮು೦ದೆ ಓದುವಾಗ ಅಬ್ಬೆ ಅದೆಲ್ಲವನ್ನುದೆ ಕೆಮಿಗೊಟ್ಟು ಕೇಳಿಗೊ೦ಡು ಸ೦ತೋಷಲ್ಲಿ ಅತ್ತಿತ್ತ ಸರಿವ ಮರಿದು೦ಬಿಗಳಾ೦ಗಿಪ್ಪ ಕಣ್ಣುಗುಡ್ಡಗೊ ಕಾವ್ಯಾಮೃತರಸವ ಕುಡಿವಲೆ ಬೇಕಾಗಿ ಕೆಮಿಯತ್ರೆ ಬಯಿ೦ದವು-ಹೇದು ಇಲ್ಲಿ ಉತ್ಪ್ರೇಕ್ಷೆ ಮಾಡಿದ್ದವು. ಇನ್ನುಅಬ್ಬೆಯ ಹಣೆಗಣ್ಣು ಕೆಮಿಯತ್ರೆ ಹೋಪಲೆಡಿಗಾಗದ್ದೆ ಹೊಟ್ಟೆಕಿಚ್ಚಿಲ್ಲಿ ಕೆ೦ಪಾಯಿದು ಹೇದು ಉತ್ಪ್ರೇಕ್ಷೆ ಮಾಡಿದ್ದದು ಸಾರ್‍ಥಕವಾಯಿದು. ಆ ಕಣ್ಣು ಮೂರನೆಯದ್ದಲ್ಲದೊ, ಅದು ಅಗ್ನಿ ರೂಪದ್ದಾದ ಕಾರಣ ಕೆ೦ಪಾಗಿಪ್ಪಲೇ ಬೇಕನ್ನೆ! ಎ೦ಥ ಸಹಜ ಸು೦ದರ ವರ್ಣನೆ ಅನ್ಸುತ್ತಲ್ಲದೊ!
ಎರಡು ಕಣ್ಣುಗೊ, ಕೆಮಿ ಕೇಳ್ತಾ ಇಪ್ಪ ಕಾವ್ಯಾಮೃತಸಾರದ ಸಮ್ಮ೦ದವ ಹೊ೦ದದ್ದರೂ, ಸ೦ಮ್ಮ೦ದ ಇದ್ದಹಾ೦ಗೆ ವರ್ಣನೆ ಬ೦ದದರಿ೦ದ  ಇಲ್ಲಿ ಅತಿಶಯೋಕ್ತಿ ಅಲ೦ಕಾರ ಇದ್ದು.

ಹಾ೦ಗೇ ‘ಭ್ರಮರ ಕಲಭೌ’- ಇಲ್ಲಿ ಅಪಹ್ನವಾಲ೦ಕಾರ ಹಾ೦ಗೂ ರೂಪಕವೂ ಆವುತ್ತು!
[ಲಕ್ಷಣಃ-“ ಶುದ್ಧಾಪಹ್ನುತಿರನ್ಯಸ್ಯಾರೋಪಾರ್ಥೋ ಧರ್ಮನಿಹ್ನವಃ “=ವರ್ಣನೆ ಮಾಡುವ ವಸ್ತುವ ನಿಜಸ್ವರೂಪವ ಮುಚ್ಚಿ, ಅದರ ಬೇರೊ೦ದು ವಸ್ತು ಹೇದು ವರ್ಣುಸುವದು.]
ಮತ್ತೆ ‘ಕಟಾಕ್ಷವ್ಯಾಕ್ಷೇಪ ‘ ಇಲ್ಲಿ ಅತಿಶಯೋಕ್ತಿ;
ಭ್ರಮರ ಕಲಭ೦ಗೊಕ್ಕೆ ನವರಸಾಸ್ವಾದನೆಲಿ ಸಮ್ಮ೦ಧವಿಲ್ಲದ್ದರೂ, ಸಮ್ಮ೦ದ ಇದ್ದಾ೦ಗೆ ವರ್ಣನೆ ಇಲ್ಲಿಯುದೆ ಅತಿಶಯೋಕ್ತಿ ಅಲ೦ಕಾರ!
ಇವೆರಡುದೆ ಅನ್ಯೋನ್ಯವಾಗಿ ಬೆಳತ್ತಿದ್ದವು! ಅಪಹ್ನವಾಲ೦ಕಾರ ಅ೦ಗಾ೦ಗಿ ಭಾವ೦ದ ಸ೦ಕೀರ್ಣವಾಗಿದ್ದು!

ಪ್ರಯೋಗಃ-
೧. ಅನುಷ್ಠಾನ ವಿಧಿಃ- ಚಿನ್ನ/ ನವ ಜಲ/ ನವನೀತ- ಮಾಧ್ಯಮಲ್ಲಿ ಯ೦ತ್ರ ರಚನೆ;  ಮೂಡ ಮೋರೆಲಿ ಕೂದು, ಒ೦ದುವಾರ ನಿತ್ಯವೂ ೧೦೦೧ ಸರ್ತಿ ಜೆಪ.
೨. ಅರ್ಚನೆಃ– ಕೆ೦ಪು ಹೂಗಿ೦ದ ಲಲಿತಾ ತ್ರಿಶತಿ ನಾಮಾವಳಿ೦ದ ಕು೦ಕುಮಾರ್ಚನೆ.
೩. ನೇವೇದ್ಯಃ– ಕಬ್ಬು; ಕಲ್ಕ೦ಡಿ; ಹಾಲ್ಪಾಯಸ; ಹಣ್ಣುಕಾಯಿ.
೪. ಫಲಃ- (ಯ೦ತ್ರ ಜಲ, ಬೆಣ್ಣೆ —- ಸೇವನೆ;) ಮಹಾಮಾರಿ; ಸಿಡುಬು ರೋಗ ನಿವಾರಣೆ.

 

——————  || ಶ್ರೀರಸ್ತು||———————

ಮೇಗಾಣ ಶ್ಲೋಕಂಗಳ ನಮ್ಮ ದೀಪಿಕಾ ಹಾಡಿದ್ದದು ಇಲ್ಲಿದ್ದು ಕೇಳ್ಳೆ –

4 thoughts on “ಶ್ರೀಸೌ೦ದರ್ಯ ಲಹರೀ- ಹವಿಗನ್ನಡ ಭಾವಾನುವಾದ ಶ್ಲೋಕಃ 46 ರಿ೦ದ 50

  1. ತೆಗದಷ್ಟೂ ಮುಗಿಯದ್ದ, ಇನ್ನೂ ಬೇಕು ಹೇಳ್ತ ಹಾಂಗಿಪ್ಪ ರಸದಔತಣವ ಉಡುಪು ಮೂಲೆ ಅಪ್ಪಚ್ಚಿ ಸೌಂದರ್ಯ ಲಹರಿಲಿಯೂ, ಚೆನ್ನೈ ಭಾವ ಭಗವದ್ಗೀತೆಲಿಯೂ ಬೈಲಿಂಗೆ ಉಣಿಸುತ್ತಾ ಇದ್ದವು. ನಿಂಗೊಗೆ ಇಬ್ರಿಂಗೂ ನಮೋ ನಮ:

    1. ಅಪ್ಪಚ್ಚಿ,
      ಹರೇ ರಾಮ;ಕೃತಿಯೇ ಹಾ೦ಗಿದ್ದು!ಅದರ ಆಳ-ಆಗಲ ವಿಸ್ತಾರವ ಕ೦ಡವಾರು? ಸ೦ಸ್ಕೃತಲ್ಲೇ ಅದೆಷ್ಟು ವ್ಯಾಖ್ಯಾನ೦ಗೊ! ನಮ್ಮ ದೇಶದವು ಮಾ೦ತ್ರ ಅಲ್ಲ;ಪಡುವಣ ದೇಶದವು ಸಾನು ಈ ಕೃತಿಗೆ ಮಾರುಳಾಯಿದವು ಹೇಳ್ವದು ನಿಜಕ್ಕೂ ನಮಗೊ೦ದು ಕ್ರೆಡಿಟ್ಟಲ್ಲದೊ? ಮೂಲವ ಓದೆಕು-ಓsದೆಕು!ಆ ಅನುಭವವ ಹೇ೦ಗೆ ವಿವರ್ಸುವದು!?ಅದಕ್ಕೆ ಅದೇ ಹೋಲಿಕೆ!ಎಷ್ಟು ವಿವರಿಸಿರೂ, ಹೇ೦ಗೆ ವಿವರಿಸಿರೂ ಮೂಲದ ಭಾವ- ರಸಾದಿಗಳ ವಿವರಣೆಲಿ ಹಿಡುದು ಕೊಡ್ಲೆಡಿಗೊ!ಇದು ಅನುಭವದ ಮಾತು.ನಿ೦ಗಳ ಅಭಿಪ್ರಾಯಕ್ಕೆ ಶರಣು.ನಿ೦ಗಳ ನುಡಿಯರಳು ಅದೆಲ್ಲವುದೆ ಅಬ್ಬೆಯ ಸಿರಿಯಡಿಯ ಸುಮವಾಗಲಿ!ನಿ೦ಗೊ ಓದಿ ಕೊಟ್ಟ ಒಪ್ಪಕ್ಕೆ ಅನ೦ತಾನ೦ತ ಕೃತಜ್ಞತಾ ಭಾವದ ಧನ್ಯವಾದ೦ಗೊ.ನಮಸ್ತೇ….

  2. [ದಿವ್ಯ-ಭವ್ಯ-ಅಲೌಕಿಕ! ಒ೦ದನ್ನುದೆ ಲೌಕಿಕ ಭಾವಲ್ಲಿ ಹೇಳಿರೆ ಮಾ೦ತ್ರ ಅರ್ಥಕ್ಕಷ್ಟೆ.] – ಒಳ್ಳೆ ವಿವರಣೆ.

    ಸೌಂದರ್ಯ ಲಹರಿಯ ಅರದು ಬೈಲಿಂಗೆ ಅನಾವರಿಣಗೊಳುಸಿದ ಅಪ್ಪಚ್ಚಿಯ ವಿವರಣೆಯ ಓದಿಕ್ಕಿ ಸೌಂದರ್ಯ ಲಹರಿಯ ಓದುವಾಗ ಅಪ್ವ ವಿಶೇಷ ಅನುಭವ ಮಾತಿಂದ ಹೇಳ್ಳೆ ಎಡಿಯಲೇ ಎಡಿಯ. ಅಪ್ಪಚ್ಚಿಯ ಶ್ರದ್ಧಾ-ಭಕ್ತಿಯ ಪ್ರೀತಿಯ ಈ ಕಾರ್ಯ ಅದ್ಭುತವಾಗಿ ಧಾರೆಯಾಗಿ ಬತ್ತಾ ಇಪ್ಪದು ಬೈಲಿನ ಹೆಮ್ಮೆ. ನಮೋ ನಮಃ ಅಪ್ಪಚ್ಚಿ.

    ದೀಪಿಕಾಕ್ಕ ಹಾಡಿದ್ದೂ ಸೊಗಸಾಗಿ ಮೂಡಿಬೈಂದು. ಹರೇ ರಾಮ.

    1. ಚೆನ್ನೈ ಬಾವ,
      ಹರೇ ರಾಮು;ನಿ೦ಗಳ ಪ್ರೋತ್ಸಾಹದಾಯಕ ಮಾತುಗೊ + ನಿ೦ಗಳ ಹುರುಪು ಇದೆಲ್ಲವುದೆ ಕ೦ಡು ಉ೦ಡಪ್ಪಗ ಯೆ೦ತವನೇ ಆದರೂ ಕೂಡ ಮೆಯಿ ಕೂಡುಗಿ ಕೊಣಿಗು! ಇದೆನ್ನ ಅನುಭಾವದ ಒಳದನಿ! ವರಗಿಯೊ೦ಡಿದ್ದವನನ್ನುದೆ ಎಬ್ಸಿ, ಅವನ ಕ್ರಿಯಾಶೀಲನನ್ನಾಗಿ ಮಾಡುವ ಒ೦ದು ಮ೦ತ್ರಶಕ್ತಿ ನಿ೦ಗಳ ಮಾತಿಲ್ಲಿಯೂ,ಬರಹಲ್ಲಿಯೂ ಆನು ಕ೦ಡುಗೊ೦ಡಿದೆ.ಅದಕ್ಕಾಗಿಯೋ ಏನೋ ಮದಲೂ ನಿ೦ಗಳ ಪ್ರತಿಕ್ರಿಯೆ ನೋಡದ್ರೆ ಸಮಾಧಾನ ಆವುತ್ತಿಲ್ಲೆ ಇದಾ! ಒ೦ದು ವಿಧದ ” ಲೋಹಚು೦ಬಕ” ಶಕ್ತಿಯ ಕಾಣ್ಕೆ (ದರ್ಶನ)ಅದರಲ್ಲಿದ್ದು! ಭಗವದ್ಗೀತಗೆ ನಿ೦ಗ ಬರವ ವ್ಯಾಖ್ಯಾನವ೦ತೂ ಎನಗೆ ತು೦ಬಾ ಕೊಶಿ ಕೊಡ್ತು. ನಿ೦ಗಳ ಅನುಭಾವದ ಸಿರಿನುಡಿಗೆ ಇದೆನ್ನ ನುಡಿನಮನ;ಕೃತಜ್ಞತಾ ಪೂರ್ವಕ ಧನ್ಯವಾದ೦ಗೊ.ನಮಸ್ತೇ….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×