Oppanna.com

ಒಲುಮೆಯ ಸಿರಿದೀಪ

Prasanna Chekkemane

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   22/10/2021    2 ಒಪ್ಪಂಗೊ

” ಭಾವಾ° ನಿಂಗೊ ನಿಜ ಹೇಳಿ, ಎನಗೆ ಸಿಕ್ಕಿದ ಈ ಅವಕಾಶ ಬೇರೆ ಆರಿಂಗೆ ಸಿಕ್ಕಿದ್ದು ನಮ್ಮ ಊರಿಲ್ಲಿ?  ಎಲ್ಲೋರಿಂಗು ಸುಲಭಲ್ಲಿ ಸಿಕ್ಕುಗ ಇದು? ಅದಕ್ಕೆ ಯೋಗ ಬೇಕು,ಭಾಗ್ಯ ಬೇಕು…..” ತೋಟಂದ ಅಡಕ್ಕೆ ತಂದು ಜಾಲಿಲ್ಲಿ ಹರಗಿ ಅದರಿಂದ ಕೊಟ್ಟಡಕ್ಕೆ ,ಹಣ್ಣಡಕ್ಕೆ ಬೇರೆ ಬೇರೆ ಮಾಡಿ ಹಾಕುವ ಪ್ರದೀಪ° ಸೋದರಮಾವನ ಮಗಳು ಸರೋಜನ ಮಾತು ಕೇಳಿ ಒಂದರಿ ಅದರ ತಲೆನೆಗ್ಗಿ ನೋಡಿದ°.

”  ಹಿರಿಯರು ಎಂತೋ ಹೇಳಿದ್ದವು ಹೇಳಿ ನಾವು ಅದರನ್ನೇ ಗಟ್ಟಿ ಮಾಡಿ ಕೂಬಲಾಗ, ಈಗಾಣ ಕಾಲಲ್ಲಿ ಪೈಸೆಗೆ ಬೆಲೆ ಇಪ್ಪದು, ಪೈಸೆ ಇಲ್ಲದ್ದವನ ಆರೂ ಮೂಸುತ್ತವಿಲ್ಲೇಳಿ ನಿನಗೂ ಗೊಂತಿದ್ದು, ಹಾಂಗಿಪ್ಪಗ ನೀನೇ ಒಂದರಿ ಎನ್ನ ಅಬ್ಬೆ ಅಪ್ಪನತ್ರೆ ಹೇಳಿರೆ ಒಳ್ಳೆದಲ್ದ ಭಾವಾ°”

” ಅಂಬಗ ನೀನದರ ಗಟ್ಟಿ ಮಾಡಿದ್ದದೆಯಾ? ಸಿನೆಮಾ ನಟ ಹೇಳುಗ ಅವರ ಗುಣ ಸ್ವಭಾವ ಹೇಂಗೇಳಿ ತಿಳಿವಲೆ ಬಂಙವೇ.ಈ ವಿಷಯಲ್ಲಿ ಇನ್ನೊಂದರಿ ಆಲೋಚನೆ ಮಾಡುದೊಳ್ಳೆದು ”

” ಇದಾ…..ಈಗ ನಿನಗೂ ಎನ್ನತ್ರೆ ಹುಳುಕ್ಕಪ್ಪಲೆ ಸುರುವಾತ ? ಈಗಾಣ ಕಾಲಲ್ಲಿ ಹಣಕ್ಕಿಪ್ಪ ಬೆಲೆ ಗುಣಕ್ಕಿಲ್ಲೇಳಿ ನಿನಗೆ ಗೊಂತಿದ್ದನ್ನೇ, ಪೈಸೆ ಇದ್ದರೆ ಮೆರವಲೆಡಿಗು, ಗುಣವ ಕಟ್ಟಿಂಡು ಎಂತ ಮಾಡುದು ಹೇಳು? ಸಕ್ಕರೆ ಹಾಕಿ ತಿಂಬಲಾವ್ತಾ?  ಹರ್ಕಟೆ ಕಂಬಾಯಿ ಸುತ್ತಿಂಡು ಹಟ್ಟಿಂದ ಸಗಣ ಬಾಚಿ ತಲೆಲಿ ಹೊತ್ತೊಂಡು ಹೋಗಿ ತೋಟಕ್ಕೆ ಹಾಕುವ ನೀನೆಲ್ಲಿ, ಬಣ್ಣ ಬಣ್ಣದ ಡ್ರೆಸ್ ಹಾಕಿ ಝುಮ್ ಹೇಳಿ ಕಾರಿಲ್ಲಿ ಹೋಪ ದೀಪಕ್ ಎಲ್ಲಿ? ಅವಕ್ಕೆ ಬೆಂಗಳೂರಿಲ್ಲಿ ಎರಡು, ಹೈದರಾಬಾದ್, ಚೆನೈಲಿ ಎಲ್ಲ ಒಂದೊಂದು ಮನೆಯೂ ಇದ್ದು. ಕಾಂಬಲೆ ಹೇಂಗಿದ್ದ° ಹೇಳಿ ನಿನಗೆ ಗೊಂತಿದ್ದನ್ನೇ ”

” ನಮ್ಮ ಮದುವೆ ಕಳುದ ಮತ್ತೆ ದೀಪಕ್ ನಿನ್ನ ಕೇಳಿದ್ದರೆ ನೀನೆಂತ ಮಾಡ್ತಿತೆ?” ಪ್ರದೀಪಂಗೆ ಅದರ ಮನಸ್ಸು ಸರಿಯಾಗಿ ತಿಳಿವಲೆ ಕುತೂಹಲ ಆತು.

” ದೀಪಕ್ ನೊಟ್ಟಿಂಗೆ ಬದ್ಕುವ ಅವಕಾಶ ಸಿಕ್ಕಿರೆ ಆನು ಮದುವೆ ಕಳುದ ಮತ್ತೆಯೂ ಹೋವ್ತಿತೆ ಭಾವಾ°. ಚತುರ್ಭಾಷಾ ನಟ, ಕಾಂಬಲೆ ಎಷ್ಟು ಚಂದ, ಈಗ ಸಿಕ್ಕಿದ ಅವಕಾಶ ಎನಗೆ ಪೂರ್ವ ಜನ್ಮದ ಪುಣ್ಯಂದ ಸಿಕ್ಕಿದ್ದು…”

ಪ್ರದೀಪಂಗೆ ಎಂತ ಹೇಳೆಕೂಳಿ ಅಂದಾಜಾಯಿದಿಲ್ಲೆ. ಸಣ್ಣಾದಿಪ್ಪಗಳೇ ಸೋದರ ಮಾವನ ಮಗಳು ಸರೋಜ ನಿನಗಿಪ್ಪದು ‘ ಹೇಳುವ ಮಾತು ಕೇಳಿಂಡೇ ಬೆಳದ ಕಾರಣ ಅವನ ಕನಸಿನ ಕನ್ಯೆಯಾಗಿ ಮನಸ್ಸಿಲ್ಲಿ ಮೂಡಿ ಬಪ್ಪ ರೂಪ ಅದರದ್ದೇ. ಈಗ ಅದರ ಬಾಯಿಂದ ಈ ಮಾತು ಬಂದದು. ಗುಣಕ್ಕಿಂತ ಪ್ರಾಮುಖ್ಯತೆ ಹಣಕ್ಕೆ ಹೇಳಿ ಅದರ ಬಾಯಿಂದಲೇ ಬಂದ ಮತ್ತೆ ಇನ್ನೂ ಅದರತ್ರೆ ಮಾತಾಡಿ ಪ್ರಯೋಜನ ಇಲ್ಲೆ. ಅದಕ್ಕೆ ಇಷ್ಟಯಿಲ್ಲದ್ದ ಮದುವೆಗೆ ಅಂತೇ ಒತ್ತಾಯ ಮಾಡಿ ಇಬ್ರ ಬದ್ಕೂ ಹಾಳಪ್ಪದು ಬೇಡ….!!

.ಎ. , ಬಿ.ಎಡ್  ಕಲ್ತವಂಗೆ ಪೇಟೆಲಿ ಒಂದು ಖಾಸಗಿ ಶಾಲೆಲಿ ಕೆಲಸ ಸಿಕ್ಕಿರೂ ಲಂಚ ಕೊಡ್ಲೆ ಪೈಸೆ ಇಲ್ಲದ್ದೆ ಆ ಕೆಲಸ ಖಾಯಂ ಆಯಿದಿಲ್ಲೆ. ಅದೇ ಸಮಯಕ್ಕೆ ಅಪ್ಪನ ಅಕಾಲದ ಅಗಲಿಕೆಂದಾಗಿ ತೋಟ ಹಡಿಲು ಹಾಕಲೆ ಮನಸ್ಸು ಬಾರದ್ದೆ ಕೆಲಸ ಬಿಟ್ಟು ಹಳ್ಳಿಗೆ ಬಂದದು ಪ್ರದೀಪ°. ಅಪ್ಪ° ಓಡಾಡಿದ ಭೂಮಿ ಹೇಳಿ ಅಬ್ಬೆಗೂ ಈ ಜಾಗೆಯ ಮೇಲೆ ವಿಪರೀತ ಮೋಹ, ಹಾಂಗಾದ ಕಾರಣ ಹೆಚ್ಚು ಆಸ್ತಿ ತೋಟ ಇಲ್ಲದ್ರೂ ಕೃಷಿಯನ್ನೇ ನಂಬಿಕೊಂಡು ಕೂದ್ದು. ಒಟ್ಟಿಂಗೆ ಹೈನುಗಾರಿಕೆ, ಜೇನು ಕೃಷಿ,ತರಕಾರಿ, ಹಣ್ಣು ಹಂಪಲು ಹೇಳಿ ಎಲ್ಲಾ ರೀತಿಯ ವೈವಿಧ್ಯಮಯ ಪ್ರಯೋಗ ಅವನದ್ದು. ಕೆಲಸ ತುಂಬಾ ಶ್ರದ್ಧೆಲಿ ಮಾಡುವ ಪ್ರದೀಪನ ಆ ಊರಿನ ಎಲ್ಲೋರಿಂಗೂ ಇಷ್ಟವೇ.

ಹಳ್ಳಿಯ ಜನಂಗಳ ಅಭಿವೃದ್ಧಿ ಅವನ ಗುರಿ, ಇಲ್ಯಾಣ ಸರಕಾರಿ ಶಾಲೆಗೆ ಸರಿಯಾಗಿ ಅಧ್ಯಾಪಕರು ಬಾರದ್ದಿಪ್ಪಗ ಮೇಲಧಿಕಾರಿಗಳ ಗಮನಕ್ಕೆ ಈ ವಿಚಾರ ತಂದು ಶಾಲಗೆ ಬೇಕಾದ ವ್ಯವಸ್ಥೆ ಮಾಡಿದ°, ಈಗ ಊರಿಂಗೊಂದು ಆಸ್ಪತ್ರೆ ಆಯೆಕೂಳಿ ಜನರ ಎಲ್ಲ ಸೇರ್ಸಿಂಡು ಸರಕಾರಕ್ಕೆ ಅರ್ಜಿ ಕೊಡ್ಲೆ ಹೆರಟಿದ°. ಹೀಂಗೆ ಮನೆ ಕೆಲಸ,ಊರಿನ ಕೆಲಸ ಹೇಳಿ ಅವ° ಎಷ್ಟೊತ್ತಿಂಗೂ ಏನಾರು ಕೆಲಸಲ್ಲಿ ಇಪ್ಪ ಕಾರಣ ಮಾವನ ಮಗಳತ್ರೆ ಹೆಚ್ಚು ಮಾತಾಡ್ಲೆ,ಒಟ್ಟಿಂಗೆ ತಿರುಗಾಡ್ಲೆ ಸಮಯ ಸಿಕ್ಕಿಂಡಿತ್ತಿಲ್ಲೆ.

ಪ್ರದೀಪನತ್ರೆ ಸರೋಜಂಗೆ ಸಲಿಗೆ ಇತ್ತಿದ್ದರೂ ಅವನ ಮನೆ,ಆಸ್ತಿ ನೋಡಿಂಡು ಹಳ್ಳಿಲಿ ಕೂಬಲೆ ಅದಕ್ಕೆ ಇಷ್ಟ ಇತ್ತಿದ್ದಿಲ್ಲೆ. ಆದರೆ ಅದರ ಹೆರ ಹೇಳಿ ಅವನ ನಿರಾಕರಿಸಿರೆ ಅಬ್ಬೆ ಅಪ್ಪ ಬೈಗು ಹೇಳುವ ಹೆದರಿಕೆಯೂ ಇದ್ದು. ಅದಕ್ಕೆ ಸರಿಯಾಗಿ ಅದರ ಕೋಲೇಜಿನ ಒಂದು ಫ್ರೆಂಡಿನ ಬರ್ತ್ ಡೇ ಪಾರ್ಟಿಗೆ ಹೋದಿಪ್ಪಗ ಜನಪ್ರಿಯ ಸಿನೆಮಾ ನಟ ದೀಪಕ್ ಇದರ ಚಂದಕ್ಕೆ ಮನಸೋತು ಮದುವೆ ಅಪ್ಪಲೆ ಒಪ್ಪಿಗೆ ಕೇಳಿದ°. ಸ್ವರ್ಗವೇ ಧರೆಗಿಳಿದ ಸಂಭ್ರಮ ಅದಕ್ಕೆ. ‌ಅಷ್ಟು ಚಂದದ, ಶ್ರೀಮಂತ, ಜನಪ್ರಿಯ ನಟ ಮದುವೆ ಆವ್ತೆ ಹೇಳುಗ ಯಾವ ಕೂಸಾದರೂ ನಿರಾಕರಿಸುಗೋ?

ಆದರೆ ಅದರ ಅಪ್ಪ° ಶಾಮಣ್ಣ ಇದಕ್ಕೆ ಒಪ್ಪಿದ್ದವಿಲ್ಲೆ.

” ನಮ್ಮ ಪ್ರದೀಪನ ರೋಮದ ಬೆಲೆ ಇಲ್ಲೆ ಆ ಸಿನೆಮಾ ನಟಂಗೆ. ‘ ಬೆಳಿ ಕಂಡದೆಲ್ಲ ಹಾಲಲ್ಲ,  ಪ್ರದೀಪ° ಪೈಸೆಲಿ ರಜ ಬಡವ° ಆದಿಕ್ಕು, ಆದರೆ ತಕ್ಕಮಟ್ಟಿಂಗೆ ಕಳಿವಲೆ ಯಾವುದೇ ತೊಂದರೆಯೂ ಇಲ್ಲೆ. ಇನ್ನಷ್ಟು ಕೃಷಿ ಮಾಡ್ಲೆ ಹೆರಟಿದ°, ಎಲ್ಲಾ ಬೆಳೆಯೂ ಕೈಗೆ ಬಪ್ಪಗ ಅವನೂ ಶ್ರೀಮಂತರ ಸಾಲಿಂಗೆ ಸೇರುಗು ” ಹೇಳಿ ಮಗಳಿಂಗೆ ಬುದ್ದಿ ಹೇಳಿದವು. ಆದರೆ ಅದಕ್ಕೆ ಅದು ಇಷ್ಟ ಆಯಿದಿಲ್ಲೆ. ಹಾಂಗಾಗಿ ಸೀದಾ ಪ್ರದೀಪನ ಮನಗೆ ಬಂದು ಅವನ ಮೂಲಕವೇ ಅಪ್ಪಂಗೆ ಹೇಳ್ಸುವ ಆಲೋಚನೆ ಮಾಡಿತ್ತದು.

ಸರೋಜಾ ಅಷ್ಟು ಹೇಳಿದ ಮತ್ತೆ ಪ್ರದೀಪ° ಹೆಚ್ಚು ಆಲೋಚನೆ ಮಾಡಿದ್ದಾಯಿಲ್ಲೆ. ಸೀದಾ ಮಾವನ ಮನಗೆ ಹೋಗಿ ಸರೋಜನ ದೀಪಕ್ ಗೆ ಕೊಡುವ ವಿಚಾರಲ್ಲಿ ಮುಂದುವರಿಯಲೆ ಹೇಳಿದ°..!

ಅವನೇ ಹೇಳಿದ ಮತ್ತೆ ಶಾಮಣ್ಣ ಬೇರೆ ನಿವೃತ್ತಿ ಇಲ್ಲದ್ದೆ ಸರೋಜನ ದೀಪಕ್ ಗೆ ಮದುವೆ ಮಾಡಿ ಕೊಟ್ಟವು. ಅದರ ಮದುವೆಯ ಎಲ್ಲಾ ಜವಾಬ್ದಾರಿಯನ್ನು ಮಾವನೊಟ್ಟಿಂಗೆ ಸೇರಿ ನಿರ್ವಹಿಸಿದ ಪ್ರದೀಪನ ಬಗ್ಗೆ ಮಾತ್ರ ಅದಕ್ಕೆ ತಾತ್ಸಾರ ಭಾವನೆ ಮೂಡಿತ್ತು. ದೀಪಕ್ ನ ಶ್ರೀಮಂತಿಕೆ, ಆಡಂಬರದ ಜೀವನದ ಮುಂದೆ ಇವನದ್ದು ಏನೂ ಅಲ್ಲ ಹೇಳಿ ಗೊಂತಪ್ಪದೂದೆ ಎಲ್ಲೋರ ಎದುರಂದಲೇ ಅವನ ತಮಾಷೆ ಮಾಡಿತ್ತು.

” ಈಗಾಣ ಕಾಲಲ್ಲಿ ಹಳ್ಳಿ ಮಾಣಿಯಂಗಳ ಆರು ಮದುವೆ ಆವ್ತವೂಳಿಲ್ಯಾ? ಬೇರೆ ಜಾತಿಯವೋ, ಎರಡ್ನೇ ಮದುವೆಯವೋ ಆಯೆಕಷ್ಟೆ. ಪ್ರದೀಪ
ಭಾವಂಗೆ ಮದುವೆ ಆಯೆಕೂಳಿದ್ದರೆ  ಈಗಲೇ ಹಾಂಗಿದ್ದವರನ್ನಾದರು ಹುಡ್ಕೆಕು, ಇಲ್ಲದ್ರೆ ಯೇವದೂ ಇಲ್ಲೇಳಿ ಅಕ್ಕು ಪುಟ್ಟತ್ತೇ….” ಹೇಳಿ ಅವನ ಅಬ್ಬೆಯತ್ರೆ ಹತ್ತು ಜನರ ಎದುರಂದ ಹೇಳಿಯಪ್ಪಗ ಪ್ರದೀಪಂಗೆ ಒಂದರಿ ಚಪ್ಪೆ ಆದರೂ ಅಬ್ಬೆಗೆ ಬೇಜಾರಕ್ಕೂಳಿ ಸರೋಜಂಗೆ ಉತ್ತರ ಕೊಡದ್ದೆ ಅಬ್ಬೆಯ ಕೈ ಹಿಡ್ಕೊಂಡು ಅಲ್ಲಿಂದ ಹೆರ ಹೋದ°.

” ಎನ್ನ ಮಾತು ಅವಕ್ಕೆ ಪಥ್ಯ ಆಯಿದಿಲ್ಲೆ  , ಇವನ ಮದುವೆ ಆಗಿದ್ದರೆ ಆನಿಲ್ಲಿ ಹಾಲು ಕರಕ್ಕೊಂಡು, ಸಗಣ ಬಾಚಿಂಡು ಇರೆಕಾವ್ತಿತು. ಈಗ ನೋಡಿ ಅನು ಹೈದರಾಬಾದ್, ಚೆನ್ನೈ,ಬೆಂಗಳೂರು ಹೇಳಿ ವಿಮಾನಲ್ಲೇ ಹಾರುದು, ಕಾರಿಲ್ಲೇ ಓಡಾಡುದು, ಮನೆಲಿ ಕೈಗೆ, ಕಾಲಿಂಗೆ ಜನ, ಸೀರೆ, ಒಡವೆ ಲೆಕ್ಕಕ್ಕೇ ಇಲ್ಲೆ ಅಷ್ಟಿದ್ದು…..” ಹೇಳಿ ತನ್ನ ವೈಭವೋಪೇತ ಜೀವನದ ವರ್ಣನೆ ಮಾಡುಗ ಶಾಮಣ್ಣಂಗೆ ಮಾತ್ರ  ಮಗಳ ಮಾತುಗೊ ಇಷ್ಟಾಯಿದಿಲ್ಲೆ. ಅಂದರೂ ಬಾಯಿಗೆ ಅಕ್ಕಿಕಾಳು ಹಾಕಿದವರ ಹಾಂಗೆ ತಳಿಯದ್ದೆ ಕೂದವು.

ದೀಪಕ್ ನ ಮನೆಯವು ಮದುವೆಗಪ್ಪಗ ಪೈಸೆ, ಚಿನ್ನ, ಸೀರೆ ಉಡುಗೊರೆ ಹೇಳಿ ಬೇರೆಬೇರೆ ರೀತಿಲಿ ಪೈಸೆ ಹಿಂಡಿಯಪ್ಪಗ ಒಂದಟ್ಟಿ ಪೈಸೆ ತಂದು ಅವರ ಕಿಸೆಲಿ ಹಾಕಿದವ° ಪ್ರದೀಪನೇ..! ಆದರೆ ಅದರ ಆರ ಮುಂದೆಯೂ ಹೇಳ್ಲಾಗ ಹೇಳಿ ಮಾತು ತೆಕ್ಕೊಂಡಿದ° ಅವ°. ಹಾಂಗಾಗಿ ಈಗ ಮಗಳ ಬಾಯಿಂದ ಹೀಂಗೆಲ್ಲ ಕೇಳಿರೂ ಚಕಾರ ಎತ್ತದ್ದೆ ಸುಮ್ಮನೆ ನಿಂದವು . ಸಿನೆಮಾ ನಟ ದೀಪಕ್ ನ ಹಣದ ಮುಂದೆ ಪ್ರದೀಪನ ಗುಣಕ್ಕೆ ಎಲ್ಲಿ ಬೆಲೆ ‘ ಹೇಳಿ ಅವರ ಮನಸ್ಸು ಹೇಳ್ತಾಯಿದ್ದತ್ತು.
**

ನಾಲ್ಕು ವರ್ಷಗಳ ನಂತರ ಗಂಡನ ವಿಕೃತ ಕಿರುಕುಳ, ಕುಡಿತ, ಪರ ಸ್ತ್ರೀ ಸಂಗಂದಾಗಿ ಬೇಸತ್ತ ಸರೋಜ ಆತ್ಮಹತ್ಯೆಗೆ ಪ್ರಯತ್ನಿಸಿರೂ ಅದು ವಿಫಲವಾಗಿ ಆಸ್ಪತ್ರೆಗೆ ಅಡ್ಮಿಟ್ ಆತು. ಸಿನೆಮಾ ನಟನ ಹೆಂಡತಿ ಆದ ಕಾರಣ ಹೆಚ್ಚು ಪ್ರಚಾರ ಆದರೆ ಅವನ ಇಮೇಜಿಂಗೆ ಧಕ್ಕೆ ಬತ್ತೂಳಿ ದೀಪಕ್ ನ ಮನೆಯವು ಅದರ ಶಾಮಣ್ಣನೊಟ್ಟಿಂಗೆ ಊರಿಂಗೆ  ಕಳ್ಸಿದವು.

ಊರಿನ ಸುಸಜ್ಜಿತ ಆಸ್ಪತ್ರೆಯ ಮಂಚಲ್ಲಿ ಮನುಗಿಂಡಿಪ್ಪ ಸರೋಜನ ಹತ್ತರಂಗೆ ನೆಗೆ ಮೋರೆಯ ಡಾಕ್ಟರ್ ದೀಪಶ್ರೀ ಬಂದು ಆರೋಗ್ಯ ವಿಚಾರ್ಸಿತ್ತು. ಕಳೆದ ಒಂದು ವಾರಂದ ಡಾಕ್ಟರ್ ದೀಪಶ್ರೀ ಸರೋಜನ ತುಂಬಾ ಲಾಯ್ಕಲ್ಲಿ ನೋಡ್ತಾಯಿಪ್ಪ ಕಾರಣ ಸರೋಜಂಗೂ ಅದರತ್ರೆ ತುಂಬಾ ಗೌರವ, ಪ್ರೀತಿ ಇದ್ದತ್ತು.

” ಎನ್ನ ಇಂದ್ರಾಣ ಡ್ಯೂಟಿ ಮುಗುದತ್ತು, ಮನಗೆ ಹೆರಡ್ತೆ  ಸರೋಜ° ” ಹೇಳಿಯಪ್ಪಗ ಡಾಕ್ಟರ್ ಗೆ ಒಂದು ಪೋನ್ ಬಂದ ಕಾರಣ ಅದು ರೂಮಿಂದ ಹೆರ ಹೋತು. ಅಷ್ಟಪ್ಪಗ ಅಲ್ಲಿಗೆ ಬಂದ ಪ್ರದೀಪನ ಕಂಡು ಒಂದರಿ ಆಶ್ಚರ್ಯ ಆದರೂ ಹುಟ್ಟು ಗುಣ ಘಟ್ಟ ಹತ್ತಿರೂ ಹೋಗ’ ಹೇಳುವ ಹಾಂಗೆ ಸರೋಜಂಗೆ ಅವನ ತಾತ್ಸಾರ ಮಾಡುವ ಬುದ್ದಿ ಹೋಯಿದೇಯಿಲ್ಲೆ.

” ಎಂತ ಭಾವಾ° ಈ ಆಸ್ಪತ್ರೆಗೆ ಬಂದದು? ಎನ್ನ ನೋಡ್ಲೆ ಬೇಕಾಗಿ ಬಂದದಾ?”  ಸರೋಜನ ಮಾತಿನ ಧಾಟಿಲಿ ಅದರ ಗುಣ ಗುರುತಿಸಿದ ಪ್ರದೀಪಂಗೆ ಅದು ಇನ್ನೂ ಬದಲಾಯಿದಿಲ್ಲೇಳಿ ಗೊಂತಾತು.

” ಎನ್ನ ಹೆಂಡತಿಯ ಕರಕ್ಕೊಂಡು ಹೋಪಲೆ ಬಂದದಾನು, ಹೆರ ಮಾವ° ಸಿಕ್ಕಿದವು , ವಿಷಯ ಗೊಂತಾತು, ಬದುಕಿನ ಧೈರ್ಯಲ್ಲಿ ಎದರ್ಸೆಕು, ಯಾವ ಸಮಸ್ಯೆ ಬಂದರೂ ಪಲಾಯನ ಮಾಡ್ಲಾಗ, ಈಗ ಹೇಂಗಿದ್ದೆ ?” ಕೇಳಿದ°.

” ಹೋ ಸಾಕು ನಿನ್ನ ಬುದ್ದಿವಾದ..!!ನಿನಗೆ ಮದುವೆಯಾತ ? ಹಟ್ಟಿಂದ ಸಗಣ ಬಾಚುವ ನಿನಗೆ ಹೇಂಗಿದ್ದ ಹೆಂಡತಿ ಸಿಕ್ಕಿತ್ತೂಳಿ ಗೊಂತಾಯೆಕಾತನ್ನೇ? ಎಲ್ಲಿದ್ದು ನಿನ್ನ ಹೆಂಡತಿ, ಎನಗೊಂದರಿ  ತೋರ್ಸು..” ಅದು ಅಷ್ಟು ಹೇಳಿ ನಿಲ್ಸಿಯಪ್ಪಗ ಪೋನ್ ಬಂದು ಹೆರ ಹೋದ ಡಾಕ್ಟರ್ ದೀಪಶ್ರೀ ಒಳ ಬಂತು.

” ನಿಂಗೊ ಇಂದು ಎನ್ನ ಕರಕೊಂಡು ಹೋಪಲೆ ಬೇಗ ಬಂದಿರಾ?” ಹೇಳಿ ಪ್ರದೀಪನ ಮೋರೆ ನೋಡಿ ಪ್ರೀತಿಲಿ ಕೇಳುವ ಡಾಕ್ಟರ್ ನ ಕಂಡು ಒಂದರಿಂಗೆ ಉಸಿಲು ನಿಂಬಷ್ಟು ಆಶ್ಚರ್ಯ ಆತು ಸರೋಜಂಗೆ.

” ಇವ°….ಇವ° ನಿಂಗಳ …..ಡ್ರೈವರ್…. ” ಅಷ್ಟು ಹೇಳಿಕ್ಕಿ ಅರ್ಧಲ್ಲಿ ಮಾತು ನಿಲ್ಸಿದ ಸರೋಜನ ಹತ್ತರಂಗೆ ಬಂದ ದೀಪ° ಸರೋಜನ ಕೈ ಹಿಡುದು ಸಣ್ಣಕೆ ನೆಗೆ ಮಾಡಿತ್ತು

” ಅಪ್ಪು, ಇವು ಎನ್ನ ಡ್ರೈವರ್ ಮಾತ್ರ ಅಲ್ಲ , ಎನ್ನ ಜೀವನ ಸಂಗಾತಿ, ಎನ್ನ ಒಲುಮೆಯ ಸಿರಿದೀಪ..” ಸರೋಜಂಗೆ ಒಂದಕ್ಷರ ಮಾತಾಡ್ಲೆ ಎಡಿಗಾಯಿದಿಲ್ಲೆ.

” ನಿಂಗಳ ಅತ್ತೆಯ ಮಗ° ಅಲ್ಲದಾ? ಮದುವೆ ಹೇಳಿಕೆ ಕಳ್ಸಿತ್ತಿದ್ದೆಯ°, ನಿಂಗೊ ಬಹುಶಃ ಸಿಂಗಾಪುರ್ ಟೂರ್ ಹೋಗಿತ್ತಿದ್ದಿ ಕಾಣ್ತು. ಎಂಗಳ ಮದುವೆಯಾಗಿ ಒಂದು ವರ್ಷಾತು. ಇವು ಈಗ ಇಲ್ಯಾಣ ಹೈಯರ್ ಸೆಕೆಂಡರಿ ಶಾಲೆಲಿ +೨ ( ಪಿಯುಸಿ) ಮಾಷ್ಟ್ರು”

” ಹ್ಹೇಂ….ಅಂಬಗ ಸರಕಾರಿ ಕೆಲಸ ಸಿಕ್ಕಿತ್ತೊ?” ಸರೋಜಂಗೆ ನಂಬಿಕೆ ಬಯಿಂದಿಲ್ಲೆ.

” ಅಪ್ಪು ಮಗಳೂ, ಅವು ಈಗ ಹೊಸ ಮನೆ ಕಟ್ಟಿದ್ದವು, ಕಾರುದೆ ಇದ್ದು, ಅಂದು ನಿನ್ನ ಅಪ್ಪಂಗೆ ಹಾರ್ಟ್ ಆಪರೇಷನ್ ಆದಿಪ್ಪಗ ಮಾಡಿದ ಸಾಲ ಕೊಡ್ಲೆಡಿಯದ್ದೆ ನಮ್ಮ ಮನೆ,ಜಾಗೆ ಮಾರೆಕಾಗಿ ಬಂತು. ಅಂಬಗ ಪ್ರದೀಪನೇ ಎಂಗಳ ಅವನ ಹಳೇಮನೆಲಿ ನಿಂಬಲೆ ವ್ಯವಸ್ಥೆ ಮಾಡಿಕೊಟ್ಟದು. ಇಲ್ಲಿಂದ ಡಿಸ್ ಚಾರ್ಜ್ ಆದರೆ ನಿನ್ನನ್ನು ಕರಕೊಂಡು ಹೋಪದು ಅದೇ ಮನಗೆ, ನಮಗೆ ಬೇರೆ ಮನೆಯಿಲ್ಲೆ ಮಗಳೂ..” ಸರೋಜನೊಟ್ಟಿಂಗೆ ಅಲ್ಲಿತ್ತಿದ್ದ ಅದರ ಅಬ್ಬೆ ಮಗಳಿಂಗೆ ಎಲ್ಲಾ ವಿಷಯವನ್ನೂ ಸ್ಪಷ್ಟವಾಗಿ ಹೇಳಿಯಪ್ಪಗ ಅದರ ತಲಗೆ ಬಡುದ ಹಾಂಗಾತು.

‘ ಗುಣಕ್ಕಿಂತ ಹಣಕ್ಕೆ ಬೆಲೆ ಹೇಳಿ ಹಿಂದೆಮುಂದೆ ನೋಡದ್ದೆ ಸಿನೆಮಾ ನಟನ ಮದುವೆಯಾಗಿ ಹೋಗಿಕ್ಕಿ, ಅವ° ಹೂಸ ಹೂಗು ಕಾಂಬಗ ಹಾರುವ ದುಂಬಿಯ ಹಾಂಗೇಳಿ ಗೊಂತಪ್ಪಗಳೇ ಅರ್ಧ ಧೈರ್ಯ ಹೋಯಿದು, ಸಾಲದ್ದಕ್ಕೆ ಬೇರೆ ಕೆಟ್ಟ ಅಭ್ಯಾಸಂಗಳೂ ಒಟ್ಟಿಂಗೆ ಇದ್ದೂಳಿ ಗೊಂತಪ್ಪಗ ತಿದ್ದಲೆ ಎಷ್ಟು ಪ್ರಯತ್ನ ಪಟ್ಟರೂ ಸೋತು ಹೋದ್ದು, ಮಕ್ಕೊ ಬೇಕು ಹೇಳಿದ್ದಕ್ಕೆ ಅದನ್ನೂ ನಿರಾಕರಿಸಿಯಪ್ಪಗ ಬದುಕೇ ಬೇಡ ಹೇಳಿ ತೀರ್ಮಾನ ಮಾಡಿದ್ದದು , ಆದರೆ ….!

ಜೀವನ ಸರಿಯಾದ ಪಾಠ ಕಲಿಶಿತ್ತು. ಇನ್ನು ದೀಪಕ್ ಬಂದು ಕರಕ್ಕೊಂಡು ಹೋಪಲೂ ಸಾಕು, ಆದರೆ ಪರಸ್ಪರ ಪ್ರೀತಿ, ನಂಬಿಕೆ, ವಿಶ್ವಾಸ ಇಲ್ಲದ್ದ ಆ ಬದುಕು ಎಂತಕಿಪ್ಪದು….?, ಅಪ್ಪನ ಮಾತು ಕೇಳಿ ಪ್ರದೀಪ ಭಾವನ ಮದುವೆ ಆಗಿದ್ದರೇ….!!!! ಅಮೇರಿಕಾ ,ಸಿಂಗಾಪುರ ಹೋಪಲೆ ಎಡಿಯದ್ರೂ ಗಂಡನ ಪ್ರೀತಿಲಿ ಆರಿಂಗೂ ಪಾಲು ಕೊಡೆಕಾಗಿತ್ತಿದ್ದಿಲ್ಲೆ….!’ ಹೀಂಗಿದ್ದ ಆಲೋಚನೆಗೊ ತಲೆಯ ಹಾಳು ಮಾಡುಗ ಹಾಸಿಗೆಂದ ಎದ್ದು ಕಿಟಕಿಯ ಹತ್ತರೆ ಹೋಗಿ ಹೆರ ನೋಡಿತ್ತು ಸರೋಜ°. ಅಲ್ಲಿ ನಿಲ್ಸಿದ ಕಾರಿನ ಹತ್ತರೆ ಜೋಡಿ ಹಕ್ಕಿಗಳ ಹಾಂಗೆ ನಿಂದೊಂಡು ಯಾವುದೋ ಕುಶಾಲಿಂಗೆ ಇಬ್ರೂ ಒಟ್ಟಿಂಗೆ ನೆಗೆ ಮಾಡುವ ಪ್ರದೀಪನನ್ನೂ,ಅವಂಗೆ ಅಂಟಿ ನಿಂದ ಡಾಕ್ಟರ್ ದೀಪಶ್ರಿಯನ್ನೂ ಕಾಂಬಗ ರಜಾ ಮದಲು ಡಾಕ್ಟರ್ ಹೇಳಿದ ‘ ಒಲುಮೆಯ ಸಿರಿದೀಪ’ ಹೇಳುವ ಮಾತು ನೆಂಪಾಗಿ ಅದರ ಕಣ್ಣಂಚಿಂದ ಒಂದು ಹನಿ ಗೊಂತಾಗದ್ದ ಹಾಂಗೆ ಕೆಳ ಜಾರಿತ್ತು.

 

~*~*~

ಪ್ರಸನ್ನಾ ಚೆಕ್ಕೆಮನೆ

2 thoughts on “ಒಲುಮೆಯ ಸಿರಿದೀಪ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×