ಆಶುಕವಿ ವಾಸುದೇವ ಭಟ್ಟರಿಂಗೆ ಸಪ್ತತಿ ಸಂಭ್ರಮ

Vasudeva Bhat29.5.16೧೯೬೩ರ ಒಂದು ದಿನ. ಕುಂಬಳೆ ಸರಕಾರಿ ಪ್ರೌಢಶಾಲೆಲಿ ಕನ್ನಡ ಪಂಡಿತ ನೆಕ್ರಾಜೆ ಜಗನ್ನಾಥ ಶೆಟ್ಟಿ ಪಾಠಮಾಡಿಕೊಂಡಿತ್ತಿದ್ದವು. ಮಕ್ಕೊ ಆವಾಗ ಸಹಪಾಠಿಗಳಲ್ಲಿ ಒಬ್ಬ ಬರೆದ ಒಂದು ವಾರ್ಧಕ ಷಟ್ಪದಿಯ ಪದ್ಯವ ಪಂಡಿತರಿಂಗೆ ತೋರಿಸಿದವು.ಅವು ಅದರ ಓದಿ, ತರಗತಿಲಿ ಓದಿ ಹೇಳಿ, “ಈ ಹುಡುಗ ಮುಂದೆ ಕವಿಯಾಗುತ್ತಾನೆ” ಹೇಳಿ ಹೇಳಿದವು.ಅವರ ಭವಿಷ್ಯವಾಣಿ ಲೊಟ್ಟೆ ಅಕ್ಕೊ? ಗುರುವಾಕ್ಯ ಅಲ್ಲದೊ?ಆ ಮಾಣಿ ಬೆಳೆದು ಭಾಗವತ ಆಗಿ, ಪ್ರಸಂಗಕರ್ತ ಆಗಿ ಹೆಸರು ಗಳಿಸಿದ.
ಅವು ಬೇರೆ ಆರೂ ಅಲ್ಲ. ಯಕ್ಷಗಾನದ ತೌರೂರು ಆದ ಕುಂಬಳೆಯ ಶೇಡಿಗುಮ್ಮೆ ವಾಸುದೇವ ಭಟ್ಟರು.
ವಾಸುದೇವ ಭಟ್ಟರು ಶೇಡಿಗುಮ್ಮೆಯ ನಾರಾಯಣ ಭಟ್ಟ ಮತ್ತೆ ಸರಸ್ವತಿ ಅಮ್ಮನವರ ನಾಲ್ಕನೇ ಮಗ ಆಗಿ ೧೩-೭-೧೯೪೬ರಲ್ಲಿ ಹುಟ್ಟಿದವು.ಅವರ ವಿದ್ಯಾಭ್ಯಾಸ ಕುಂಬಳೆಯ ಹೋಲಿ ಫ್ಯಾಮಿಲಿ ಶಾಲೆ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತೆ ಸರಕಾರಿ ಪ್ರೌಢಶಾಲೆಲಿ ಆತು. ೧೦ನೆ ತರಗತಿಲಿ ವಿದ್ಯಾಭ್ಯಾಸ ನಿಲ್ಲಿಸಿದರೂ ಅವು ಕನ್ನಡ ಭಾಷೆಲಿ ಅಪಾರ ಹಿಡಿತ ಹೊಂದಿದವು.ಯಕ್ಷಗಾನ ಹೇಳಿದರೆ ಅವಕ್ಕೆ ಪ್ರಾಣ.ಅವರ ಅಪ್ಪ ನಾರಾಯಣ ಭಟ್ರು ಆ ಕಲೆಯ ಅಭಿಮಾನಿ. ಅಣ್ಣ ಶೇಡಿಗುಮ್ಮೆ ಕೃಷ್ಣ ಭಟ್ರು ಆ ಪರಿಸರಲ್ಲಿ ಹೆಸರು ಹೊಂದಿದ ಭಾಗವತರು.ಅಣ್ಣನ ಒಡನಾಟಂದ ವಾಸುದೇವ ಭಟ್ಟರು ಭಾಗವತಿಕೆ ಅಭ್ಯಾಸ ಮಾಡಿದವು.ಯಾವಾಗಲೂ ಅಣ್ಣ-ತಮ್ಮ ಮನೆಲಿ ಯಕ್ಷಗಾನದ ವಿಷಯವೇ ಮಾತಾಡುದು.ಇಬ್ಬರೂ ಒಟ್ಟಿಂಗೆ ಆಟ ತಾಳಮದ್ದಳೆಗೆ ಹೋಪದು !
ಕೃಷ್ಣ ಭಟ್ಟರ ಹಾಂಗೆ ಇವರದ್ದೂ ತೆಂಕುತಿಟ್ಟಿನ ಸಾಂಪ್ರದಾಯಿಕ ಶೈಲಿ. ಬಲಿಪ ನಾರಾಯಣ ಭಾಗವತರ ಅಭಿಮಾನಿ ಅವು.ಯಕ್ಷಗಾನ ಮೇಳಕ್ಕೆ ಅವು ಹೋಯಿದವಿಲ್ಲೆ.ಒಳ್ಳೆ ಕೃಷಿಕರಾದ ಅವು ಸ್ವತಃ ದುಡಿವದರಲ್ಲೂ ನಿಪುಣರು.
೧೯೭೩ ರಿಂದ ೧೯೮೩ ರ ವರೆಗೆ ನಾರಾಯಣಮಂಗಲ ವಿಘ್ನೇಶ್ವರ ಯಕ್ಷಗಾನ ಸಂಘ ,೧೯೮೦-೮೨ ರಲ್ಲಿ ಕುಂಬಳೆಯ ನಿತ್ಯಾನಂದ ಮಠಲ್ಲಿದ್ದ ವಿದ್ಯಾವರ್ಧಕ ಸಂಘ,೧೯೯೬ ರಿಂದ ೨೦೧೦ ವರೆಗೆ ಶೇಡಿಕಾವಿನ ಪಾರ್ತಿಸುಬ್ಬ ಯಕ್ಷಗಾನ ಸಂಘ -ಇದರ ಭಾಗವತರಾಗಿತ್ತಿದ್ದವು.ಅವು ಹತ್ತರಾಣ ಊರುಗಳಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವತಿಕೆ ಮಾಡಿದ್ದವು.ಈಗ ಕಳೆದ ಆರು ವರ್ಷಂದ ಅವು ಭಾಗವತಿಕೆ ಮಾಡುದು ಕಮ್ಮಿ.
ಅವಕ್ಕೆ ತುಂಬಾ ಕುಶಿ ಕೊಟ್ಟ ಕಾರ್ಯಕ್ರಮ-ಶೇಣಿಯವರ ಅರ್ಥಕ್ಕೆ ಪದ್ಯ ಹೇಳಿ ಧ್ವನಿಮುದ್ರಣ ಮಾಡಿದ್ದು. ಉತ್ತರ ಕನ್ನಡದ ಒಬ್ಬ ಅಭಿಮಾನಿ ಶೇಣಿಯವರ ಹಲವು ಅರ್ಥಂಗಳ ಸಂಗ್ರಹಿಸಿದ್ದರೂ ಅವರ ಹತ್ತರೆ ಶೇಣಿಯವರ ಚೂಡಾಮಣಿ ಪ್ರಸಂಗದ ಹನುಮಂತನ ಅರ್ಥ ಇತ್ತಿದ್ದಿಲ್ಲೆ.ಹಾಂಗಾಗಿ ಶೇಣಿ ಗೋಪಾಲಕೃಷ್ಣ ಭಟ್ಟರ ಮನೆಲಿ ಒಂದು ವಿಶೇಷ ಕಾರ್ಯಕ್ರಮ ಮಾಡಿ,ವಾಸುದೇವ ಭಟ್ಟರ ಭಾಗವತಿಕೆಲಿ ಅದರ ಧ್ವನಿಮುದ್ರಣ ಮಾಡಿಸಿದ್ದವು.
ಯಕ್ಷಗಾನ ಸಾಹಿತ್ಯ ವಾಸುದೇವ ಭಟ್ಟರ ಸೆಳೆದತ್ತು.೧೯ ನೆ ಪ್ರಾಯಲ್ಲಿ, ೧೯೬೪-೬೫ರಲ್ಲಿ ಅವು ’ಸುಂದೋಪಸುಂದರ ಕಾಳಗ’ ಪ್ರಸಂಗ ಬರದವು.ಮತ್ತೆ ಅವು ಬರೆದ್ದು ಭ್ರಮರವೇಣಿ ಸ್ವಯಂವರ-ಇದು ಶ್ರೀಕೃಷ್ಣಬೋಧಾಮೃತಸಾರದ ನಡುವೆ ಬಪ್ಪ ಕತೆ.ಅದರ ಧರ್ಮಸ್ಥಳ ಮೇಳದವು ೧೯೭೪-೭೫ರಲ್ಲಿ ಪ್ರದರ್ಶನ ಮಾಡಿ ಅದು ಜಯಭೇರಿ ಬಾರಿಸಿತ್ತು! ಶ್ರೀ ವೀರೇಂದ್ರ ಹೆಗ್ಗಡೆಯವರೇ ಅವಕ್ಕೆ ಸನ್ಮಾನ ಮಾಡಿದವು.
ಅದೇ ೧೯೭೫ ಡಿಸೆಂಬರಲ್ಲಿ ವಾಸುದೇವ ಭಟ್ಟರು -ಪದ್ಯಾಣ ಮನೆತನದ ರೂಪಾಯಿಮೂಲೆ ಪರಮೇಶ್ವರ ಭಟ್ಟರ ಮಗಳು ಲೀಲಾವತಿಯವರ ಕೈಹಿಡಿದವು, ಅವಕ್ಕೆ ಇಬ್ಬರು ಮಾಣಿಯಂಗೊ.
ಆ ಬಳಿಕ ಅವರಿಂದ ಅನೇಕ ಪ್ರಸಂಗ ರಚನೆ ಆತು.ರಾಮಾಯಣದ ಒಂದು ಆಖ್ಯಾನ ’ವಾಲಿಜನ್ಮ’೧೯೭೬ರಲ್ಲಿ ರಚನೆ ಆತು.ಮತ್ತೆ ಕಾಲ್ಪನಿಕ ಕತೆ ಆಧಾರಿತ ಪ್ರಸಂಗ ’ವೀರಕೇಸರಿ ವಿಜಯ’ ವ ಬರೆದು ೧೯೭೯ ರಲ್ಲಿ ಪ್ರಕಟ ಮಾಡಿದವು.ಶ್ರೀ ಬಲಿಪ ನಾರಾಯಣ ಭಾಗವತರೇ ಅದಕ್ಕೆ ಮುನ್ನುಡಿ ಬರೆದವು.ಪೆರ್ಲ ಪಂಡಿತ ಕೃಷ್ಣ ಭಟ್ರು[ಕೃ.ಭ.ಪೆರ್ಲ] ಅವರ ಗುರುಕುಲ ಮುದ್ರಣಾಲಯಲ್ಲಿ ಅದರ ಅಚ್ಚು ಹಾಕಿಸಿ ಶುಭಾಶಯ ಬರೆದವು.
ವಾಸುದೇವ ಭಟ್ಟರು ಕಾಲ್ಪನಿಕ ಕತೆಗಳ ಆಧರಿಸಿ ರಾಣಿ ಸುಲೋಚನಾ[೧೯೭೯ರಲ್ಲಿ],ಗಂಗಾಭವಾನಿ[೧೯೮೧ರಲ್ಲಿ],ಮಧುರ ಶೈಲೇಂದ್ರಿ[೧೯೯೩ರಲ್ಲಿ]ಬರೆದವು. ಶ್ರೀಮದ್ಭಾಗವತ ಮಹಾಪುರಾಣ ಆಧರಿತ”ಪ್ರದ್ಯುಮ್ನ ಚರಿತ್ರೆ ’೧೯೮೧ರಲ್ಲಿ,’ಪೃಥುರಾಜವಿಜಯ” ೧೯೯೧ರಲ್ಲಿ’,ಭಕ್ತ ಮುಚುಕುಂದ’ ೧೯೯೧ರಲ್ಲಿ ಬರೆದವು.ಇತರ ಪೌರಾಣಿಕ ಪ್ರಸಂಗ ’ವಿಜಯಖಡ್ಗ ಮಹಾತ್ಮೆ’ ೧೯೯೭ ರಲ್ಲಿ, ’ದುರಂತಮಾನಸಿ ಶೂರ್ಪನಖಾ’ ೨೦೧೫ರಲ್ಲಿ ರಚಿಸಿದವು. ಅಲ್ಲದೆ ಅವರ ಸುಂದರ ಶೈಲಿಲಿ ಮೂಡಿದ ಸ್ಥಳಪುರಾಣಗಳ ಆಧರಿತ ಪ್ರಸಂಗಂಗೊ-ಶಿಶಿಲೇಶ ವೈಭವ’ ೧೯೯೧ರಲ್ಲಿ, ತೊಡಿಕಾನ ಕ್ಷೇತ್ರ ಮಹಾತ್ಮೆ’ ೧೯೯೧ರಲ್ಲಿಯೆ,ಕಾವೇರಿ ಮಹಾತ್ಮೆ ೧೯೯೨ರಲ್ಲಿ”ಆದಿಚುಂಚನಗಿರಿ ಮಹಾತ್ಮೆ’೨೦೦೬ರಲ್ಲಿ, ಮತ್ತೆ ’ವೈಷ್ಣೋದೇವಿ ಮಹಾತ್ಮೆ ’೨೦೦೬ ರಲ್ಲಿ ರಚನೆ ಆದವು!
ಕ್ರಿಕೆಟ್ ವೀಕ್ಷಣೆ ಮಾಡಿ ತೆಂಡುಲ್ಕರ್ ಅಭಿಮಾನಿ ಆದ ವಾಸುದೇವ ಭಟ್ಟರು ’ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ’ ಪ್ರಸಂಗ ಬರೆದವು. ಅದು ಮುದ್ರಣವೂ ಆಯಿದು!
ಅವು ತಮಿಳಿನ ಸಿಲಪ್ಪದಿಕಾರಮ್ [ಕಣ್ಣಕಿಯ ಕಾಲಕಡಗದ ಕತೆ ಎಲ್ಲರಿಂಗೂ ಗೊಂತಿಪ್ಪದು] ಆಧರಿತ ’ಸತ್ಯದರ್ಶನ’ ಪ್ರಸಂಗವ ೧೯೯೬ ರಲ್ಲಿ ಗುಲೇಬಕಾವಲಿ ಕತೆ ಆಧರಿತ ’ಮಂದಾರವತಿ ಪರಿಣಯ’ ಹೇಳುವ ಪ್ರಸಂಗವ ೧೯೯೭ರಲ್ಲಿ ಬರೆದ್ದು ಅವರ ಅಪಾರವಾದ ಪ್ರತಿಭೆಗೆ ಸಾಕ್ಷಿ.
ಆರೇ ಕೇಳಲಿ,ಆಯಾ ಸಮಯಕ್ಕೆ ಸರಿಯಾಗಿ ಪ್ರಸಂಗ ರಚನೆ ಮಾಡುದು ಅವರ ಸಾಮರ್ಥ್ಯ. ೧೯೯೭ ರಲ್ಲಿ ಸ್ವಾತಂತ್ರ್ಯದ ಚಿನ್ನದ ಹಬ್ಬಕ್ಕೆ ಸರಿಯಾಗಿ ’ಸ್ವಾತಂತ್ರ್ಯ ಸಂಗ್ರಾಮ’,ಸಾಕ್ಷರತೆ ಬಗ್ಗೆ ೧೯೯೭ರಲ್ಲೇ ’ಅಕ್ಷರಾಂಬಿಕಾ ಮಹಾತ್ಮೆ’,ಕಾರ್ಗಿಲ್ ಸಮರದ ಬಗ್ಗೆ ೨೦೦೫ ರಲ್ಲಿ’ಕಾರ್ಗಿಲ್ ವಿಜಯ’,ವನಸಂರಕ್ಷಣೆ ಬಗ್ಗೆ ೨೦೧೧ರಲ್ಲಿ ’ಅಪ್ಪಿಕೋ ಚಳವಳಿ’-ಹೀಂಗೆ ಸಮಕಾಲೀನ ವಿಷಯಂಗಳ ಬಗ್ಗೆ ಅವು ಪ್ರಸಂಗ ಬರೆದು ಗೆಳೆಯರಿಂಗೆ ಕೊಟ್ಟಿದವು.ಆ ಪ್ರಸಂಗಂಗೊ ಒಂದೆರಡು ಬಾರಿ ಪ್ರದರ್ಶನವೂ ಆಯಿದು.
ಪುರಾಣ ಪ್ರವಚನಕ್ಕಾಗಿ ಅವು ಭಾಮಿನಿಷಟ್ಪದಿಲಿ ಧ್ರುವ ಚರಿತ್ರೆ,ಅಜಾಮಿಳೋಪಾಖ್ಯಾನ,ಗಿರಿಜಾಕಲ್ಯಾಣ, ಪ್ರಹ್ಲಾದ ಚರಿತ್ರೆ ಗಳ ಬರೆದ್ದವು;ಮಿತ್ರರಿಂಗೆ ಕೊಟ್ಟಿದವು.
ಮಕ್ಕೊಗೆ ಬೇಕಾಗಿ ಸಣ್ಣಸಣ್ಣ ಯಕ್ಷಗಾನ ಪ್ರಸಂಗಂಗಳನ್ನೂ ಅವು ಬರೆದ್ದವು.
ಇವರ ಮೂಲಕ ಪ್ರಸಂಗ ಬರೆಸಿದವು,ಓದಲೆ ತೆಕ್ಕೊಂಡು ಹೋದವರು- ಕೆಲವು ಹಸ್ತಪ್ರತಿಗಳ ಅವವೇ ಮಡಿಕ್ಕೊಂಡವು. ಹಾಂಗಾಗಿ,ಇವರ ಹತ್ತರೆ ಆ ಹಸ್ತಪ್ರತಿಗೊ[ಸುಮಾರು ಏಳೆಂಟು ಪ್ರಸಂಗಂಗಳದ್ದು] ಈಗ ಇಲ್ಲೆ.ಅದರ ಅವೇ ಇನ್ನು ನೆಂಪು ಮಾಡಿ ಬರೆಯೆಕ್ಕಷ್ಟೆ.
ದುರಂತಮಾನಸಿ ಶೂರ್ಪನಖಾ ಈ ವರ್ಷ ೧೫-೧-೧೬ ರಲ್ಲಿ ಮುಳಿಯಾರಿಲಿ ಕಲಾವಿದ ಶ್ರೀ ಪೆರಡಂಜಿ ಗೋಪಾಲಕೃಷ್ಣ ಭಟ್ಟರಿಂದ [ಅವು ಈ ಕತೆಯ ವಾಸುದೇವ ಭಟ್ಟರಿಂಗೆ ಸಂಯೋಜಿಸಿ ಕೊಟ್ಟವರು]ನಿರ್ದೇಶಿತವಾಗಿ ಸುರುವಾಣ ಪ್ರದರ್ಶನ ಆಯಿದು.
ಅವರ ಬಗ್ಗೆ ಗೊಂತಿಪ್ಪ ಕೆಲವರು ಅವರ ಪ್ರತಿಭೆಯ ಗುರುತಿಸಿ ಸನ್ಮಾನ ಮಾಡಿದ್ದವು.ಕುಂಬಳೆಯ ಶಾಸ್ತಾ ಯಕ್ಷಗಾನ ಸಂಘ, ಭವ್ಯ ಕಲಾ ಸಂಗಮ,ಪಾರ್ತಿಸುಬ್ಬ ಯಕ್ಷಗಾನ ಸಂಘ,ಬೆಳ್ಮಣ್ಣು ಸೂಡದ ಯಕ್ಷಗಾನ ಸಂಘದವು ಅವರ ಗೌರವಿಸಿದ್ದವು.೨೦೦೩ ರಲ್ಲಿನೀರ್ಚಾಲಿನ ಪರಮೇಶ್ವರ ಆಚಾರ್ಯ ಸ್ಮಾರಕ ಪ್ರಶಸ್ತಿ ಅವಕ್ಕೆ ಸಿಕ್ಕಿದ್ದು.೨೦೦೪ ರಲ್ಲಿ ಬೆಂಗಳೂರಿಲಿ ಯಕ್ಷಗಾನ ಸಮ್ಮೇಳನಲ್ಲಿ ಅವರ ಸನ್ಮಾನಿಸಿದ್ದವು.
ಮನೆಲಿ ವಿನೋದವಾಗಿ ಮಾತಾಡುವಾಗ ಆಶುಕವಿಯಾದ ಅವರ ಬಾಯಿಂದ ಯಕ್ಷಗಾನ ಪದ್ಯಂಗೊ ತಾನಾಗಿ ರಚನೆ ಆಗಿ ಬತ್ತು. ಅವರ ಅಣ್ಣನ ಮಗನಾದ ಆನು ಅಂತಾ ಸುಮಾರು ಪದ್ಯಂಗಳ ಕೇಳಿ ನೆನಪು ಮಡುಗಿದ್ದೆ.ಆನು ಸಣ್ನ ಇಪ್ಪಾಗ ಬರೆದ ಪದ್ಯಂಗಳ ನೋಡಿ,ತಿದ್ದಿ ಅವು ಪ್ರೋತ್ಸಾಹ ಕೊಟ್ಟಿದವು.ಅವರ ಬರವಣಿಗೆ ಎನ್ನ ಮೇಲೆ ತುಂಬಾ ಪ್ರಭಾವ ಬೀರಿದ್ದು.
ಹಲವು ಪುಸ್ತಕ ಓದಿದ್ದರೂ ಅವಕ್ಕೆ ಗದ್ಯ ಬರವಣಿಗೆಲಿ ಆಸಕ್ತಿ ಕಮ್ಮಿ .ಇತ್ತೀಚೆಗೆ ಕುಂಬಳೆಯ ಕಣಿಪುರ ಯಕ್ಷಗಾನ ಪತ್ರಿಕೆಯವು ಕೇಳಿದ್ದಕ್ಕೆ ಅವು ಹಲವು ಲೇಖನ ಬರೆದ್ದವು.
ನವ್ಯ ಕವಿತೆ,ಪತ್ರಿಕಾ ಬರವಣಿಗೆಂದಲೂ ಅವು ದೂರ .ಸಣ್ಣ ಪ್ರಾಯಲ್ಲಿ” ನವಭಾರತ’ಕ್ಕೆ ಕೆಲವು ಪದ್ಯ ಬರೆದ್ದವು.
ಹೀಂಗಾಗಿ,ವಾಸುದೇವ ಭಟ್ಟರು ನಿಜವಾಗಿ ಎಲೆಮರೆಯ ಕಾಯಿ. ತುಂಬಾ ಸಂಕೋಚ ಪ್ರವೃತ್ತಿಯವು.ಇವರಷ್ಟು[ಹೇಳಿದರೆ ೨೫ಕ್ಕೂ ಹೆಚ್ಚಿಗೆ ಪ್ರಸಂಗ] ಬರೆದ ಇನ್ನು ಆರೇ ಆದರೂ ಭಾರೀ ದೊಡ್ಡ ಪ್ರಚಾರ ಗಿಟ್ಟಿಸುತ್ತಿತ್ತವು.ಆದರೆ ಅವು ಬರೆದ್ದದರಲ್ಲಿ ಎರಡು ಪ್ರಸಂಗ ಬಿಟ್ಟರೆ, ಒಳುದ್ದದು ಮುದ್ರಣವೇ ಆಯಿದಿಲ್ಲೆ!ಈಗ ಅವಕ್ಕೆ ಎಪ್ಪತ್ತು ತುಂಬುವ ಸಂತೋಷದ ಮಧ್ಯೆ,ಅವು ಬರೆದ ನಾಲ್ಕು ಪ್ರಸಂಗಂಗೊ-ಭ್ರಮರವೇಣಿ ಸ್ವಯಂವರ, ವಾಲಿಜನ್ಮ, ಸುಂದೋಪಸುಂದರ ಕಾಳಗ,ದುರಂತಮಾನಸಿ ಶೂರ್ಪನಖಾ-ಇವಿಷ್ಟು ’ಯಕ್ಷಕುಸುಮ’ ಹೇಳುವ ಹೆಸರಿನ ಸಂಪುಟದ ರೂಪಲ್ಲಿ ’ಗಾಯತ್ರಿ ಪ್ರಕಾಶನ,ಕಿನ್ನಿಗೋಳಿ’ ಮೂಲಕ ಪ್ರಕಟ ಆವುತ್ತಾ ಇದ್ದು. ೨೯ ಮೇ ೨೦೧೬ ರಲ್ಲಿ ೧೦.೩೦ಕ್ಕೆಕುಂಬಳೆಯ ಶೇಡಿಕಾವಿಲಿ ಆ ಪ್ರಸಂಗಂಗಳ ಬಿಡುಗಡೆ,ಕಣಿಪುರ ಪತ್ರಿಕೆಯ ಸಾರಥ್ಯಲ್ಲಿ ಆವುತ್ತಾ ಇದ್ದು.ಅವು ಬರೆದ ಪ್ರಸಂಗಂಗಳ ಅವಲೋಕನ,ಪದಂಗಳ ಗಾಯನ ಎಲ್ಲಾ ಇದ್ದು.ಎಲ್ಲರಿಂಗೂ ಆದರಪೂರ್ವಕ ಆಹ್ವಾನ.
ವಾಸಪ್ಪಚ್ಚಿ ಬರೆದ ಎಲ್ಲಾ ಪ್ರಸಂಗಂಗೊ ಬೇಗನೆ ಮುದ್ರಣ ಆಗಲಿ,ಅವಕ್ಕೆ ಮನ್ನಣೆ ಸಲ್ಲಲಿ ಹೇಳಿ ಅವರ ಬಂಧುಮಿತ್ರರ ಹಾರೈಕೆ.

ಗೋಪಾಲಣ್ಣ

   

You may also like...

7 Responses

 1. ಚೆನ್ನೈ ಭಾವ says:

  ಹರೇ ರಾಮ. ನಮೋ ನಮಃ

 2. ಶರ್ಮಪ್ಪಚ್ಚಿ says:

  ಎಲೆಮರೆ ಕಾಯಿ ಹೇಳುವದು ಇವಕ್ಕೆ ಸೂಕ್ತ ಪರ್ಯಾಯ ಶಬ್ದ. ಯಾವುದೇ ಪ್ರಚಾರ ಬಯಸದ್ದವು.
  ಕಾರ್ಯಕ್ರಮಕ್ಕೆ ಶುಭ ಹಾರೈಕೆಗೊ.

 3. ರಘು ಮುಳಿಯ says:

  ಗೋಪಾಲಣ್ಣಾ ,
  ಶುದ್ದಿ ಕೊಶಿ ಕೊಟ್ಟತ್ತು. ಪ೦ಜಾಜೆ ಮಾವ , ಹೇಳಿದರೆ ಶೇಡಿಗುಮ್ಮೆ ವಾಸುದೇವ ಭಟ್ಟರ ಸೋದರಳಿಯ , ೨೦೦೪ ರಲ್ಲಿ ಬೆಂಗಳೂರಿಲಿ ಆಯೋಜನೆ ಮಾಡಿದ ಯಕ್ಷಗಾನ ಸಾಹಿತ್ಯ ಸಮ್ಮೇಳನಲ್ಲಿ ಇವರ ಪುರಸ್ಕಾರ ಮಾಡಿದ್ದು , ಸಂಬಂಧದ ಕಾರಣಂದ ಅಲ್ಲ , ಇವರ ಪ್ರತಿಭೆಗೆ ಸಿಕ್ಕೆಕ್ಕಾದ ಪುರಸ್ಕಾರವೇ ಆಗಿತ್ತು . ಇವು ” ಆದಿ ಚುಂಚನಗಿರಿ ಕ್ಷೇತ್ರ ಮಹಾತ್ಮೆಯ ” ಬಹುಷಃ ಒಂದೆರಡು ದಿನದ ಅವಧಿಲಿ ಬರದು ಕೊಟ್ಟದು ಹೇಳಿ ಎನ್ನ ನೆನಪ್ಪು . ಭಾರೀ ಉತ್ತಮ ಸಾಹಿತ್ಯ , ಪ್ರಸಂಗ ನಡೆಯ ಆ ಪ್ರಸಂಗಲ್ಲಿ ಆನು ಒಂದರಿ ವೇಷ ಹಾಕಿದ್ದೆ ಹೇಳಿ ಒಂದು ಧನ್ಯತೆ ಮೂಡಿತ್ತು .

  • S.K.Gopalakrishna Bhat says:

   ಮುಳಿಯ ಭಾವನ ಮಾತು ಸರಿ. ಅವು ದುರಂತಮಾನಸಿ ಶೂರ್ಪನಖಾ ವ ಒಂದೆ ವಾರಲ್ಲಿ ರಚಿಸಿದ್ದವು.[೨೦೧೫ ನವೆಂಬರಿಲಿ].ಈಗ ಮೊನ್ನೆ ಫೆಬ್ರವರಿಲಿ ಒಂದು ಜನ ಬಂದು ನಾಗನಂದಿನಿ ಹೇಳುವ ತುಳು ಪ್ರಸಂಗ ಕೊಟ್ಟು,ಭಟ್ರೇ ,ಇದರ ಕನ್ನಡಲ್ಲಿ ಬರೆದು ಕೊಡಿ ಹೇಳಿದ್ದಕ್ಕೆ ನಾಲ್ಕೇ ದಿನಲ್ಲಿ,ಅದರ ಕನ್ನಡ ಪ್ರಸಂಗ ಮಾಡಿ ಕೊಟ್ಟಿದವು-ಈ ಪ್ರಾಯಲ್ಲೂ ಪ್ರಸಂಗ ಬರೆವಾಗ ಅವರದ್ದು ಏಕಾಗ್ರತೆ ಕಿರಿಯರು ನೋಡಿ ಕಲಿಯೇಕ್ಕಾದ್ದು.

 4. ಅದಿತಿ says:

  ವಾಹ್ ! ಎಂಥಾ ಪ್ರತಿಭೆ! ಅವರ ಬಗ್ಗೆ ಓದಿ ತುಂಬಾ ಕುಶಿಯಾತು.

 5. ಗೋಪಾಲನ ಶುದ್ದಿ ನೋಡಿ ವಾಸುದೇವಭಾವಂಗೆ ಸಪ್ತತಿ ಹೇಳಿ ಗೊಂತಾತು . ಇವು ಎಂಗಳ ಕುಟುಂಬದೊವು. ಅರ್ಥಾತ್ ಎನ್ನ ಎಜಮಾನ್ರ ತಮ್ಮ. sEDiyamme kRuShNa bhAvana oTTiMge ivara tALa maddLeye ella kELidde. nODidde. naarAyaNamMgalalli. bahu cokka AgeMDittiddu. avar ಸಪ್ತತಿ kAryakramakke manatuMbida Subha hAraike. ಇವು elemareya kAyi appu. {kShamisi, Internet balbu hOpadu, bappadu Agi monneMda ಎನ್ನ boDiSuttu}

 6. ಗೋಪಾಲ ಬೊಳುಂಬು says:

  ಶುದ್ದಿ ಕೇಳಿ ತುಂಬಾ ಹೆಮ್ಮೆ ಆತು. ನಿಜವಾಗಿಯೂ ಪ್ರಸಂಗಕರ್ತ ಶೇಡಿಗುಮ್ಮೆ ವಾಸುದೇವ ಮಾವಂಗೆ ಮನ್ನಣೆ ಸಿಕ್ಕೆಕು. ಸಿಕ್ಕಲಿ. ಅವು ಬರದ ಪ್ರಸಂಗಂಗೊ ಮುದ್ರಣ ಗೊಳ್ಳಲಿ. ಕಾರ್ಯಕ್ರಮಕ್ಕೆ ಯಶಸ್ಸು ಕೋರ್ತಾ ಇದ್ದೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *