ಸಣ್ಣ ಸಂಗತಿ

ಶಂಭಣ್ಣನ ಮಗಳಿಂಗೆ ಮದುವೆ ಅಡ..ಊರಿಲಿ ಸುದ್ದಿ.
ಅವನ ಹತ್ತರೆ ಎಂತ ಇದ್ದು?ಹಣವೊ? ಜಾಗೆಯೊ?ವಿದ್ಯೆಯೊ? ಎಂತದೂ ಇಲ್ಲೆ.
ಜಾಗೆ ಮುಕ್ಕಾಲೆಕ್ರೆ ತೋಟ.ವಿದ್ಯೆ ಕಮ್ಮಿ.ಮಂತ್ರ ಕಲಿವಲೆ ಹೋದರೂ ಬಾಯಿಪಾಠ ಬಾರ.ಮತ್ತೆ ಪರಿಕರ್ಮಿ ಆಗಿ ಕೆಲಸ ಮಾಡಿದ.ಹಾಂಗೆ ಹೇಳಿ ಅವ ಬೋದಾಳ ಅಲ್ಲ.ಅವನ ಕೆಲಸಲ್ಲಿ ಚುರುಕಿತ್ತಿದ್ದ.ಮದುವೆ ಆತು,ಹಳೆ ಕಾಲ.ಆರು ಮಕ್ಕೊ ಆದವು.ಮೂರು ಜನ ಮಾಣ್ಯಂಗೊ.ಮೂರು ಕೂಸುಗೊ.
ಮಕ್ಕಳ ಪೈಕಿ ಹಿರಿಯ ಇಬ್ಬರು ಕೂಸುಗೊ.ಅವರ ಮದುವೆ ಹತ್ತರೆ ಇಪ್ಪ ಊರಿಂಗೆ ಆತು. ತಕ್ಕ ಮಟ್ಟಿನ ಜಾಗೆ ಇಪ್ಪವರೇ..ತೊಂದರೆ ಇಲ್ಲೆ.ಮಾಣಿಯಂಗೊ ಪೇಟೆಲಿ ಅಂಗಡಿಲಿ ಕೆಲಸ ಮಾಡುತ್ತವು. ಮೂರನೇ ಕೂಸು ಕಾಮಾಕ್ಷಿಯ ಬೊಂಬಾಯಿ ಮಾಣಿ ಮದುವೆ ಆವುತ್ತ.ಎಂಜಿನೀಯರು,ಪ್ರಾಯ ಮೂವತ್ತೆರಡಾತು.ಹತ್ತು ವರ್ಷ ವ್ಯತ್ಯಾಸ,ಸಾರ ಇಲ್ಲೆ ಹೇಳಿದ ಶಂಭಣ್ಣ. ಕಾಮಾಕ್ಷಿ ಪಿಯುಸಿ ಕಲ್ತಿದಷ್ಟೆ.
ಅದರ ಭಾಗ್ಯ ಹೇಳಿ ಎಲ್ಲರೂ ಹೇಳಿದವು.ಅಕ್ಕಂದಿರು,ಅಣ್ಣಂದಿರು ತುಂಬಾ ಸಡಗರ ಪಟ್ಟವು.ಮದುವೆ ಚೆಂದಲ್ಲಿ ಕಳ್ತು.ಕಾಮಾಕ್ಷಿ ಗಿರೀಶನ ಕೈ ಹಿಡಿದು ಪಟ್ಟಣವಾಸಕ್ಕೆ ಹೋದಮೇಲೆ ಒಂದು ವರ್ಷ ಬಯಿಂದಿಲ್ಲೆ.ಮತ್ತೆ ಹದಿನೈದು ದಿನ ಪುರುಸೊತ್ತು ಮಾಡಿಕೊಂಡು ಗಿರೀಶನೂ ಕಾಮಾಕ್ಷಿಯೂ ಬಂದವು.
ಒಂದು ವಾರ ಗಿರೀಶನ ಮನೆ,ಶಂಭಣ್ಣನ ಮನೆ,ನೆಂಟರ ಮನೆ- ಎಲ್ಲ ಹೋಗಿ ರಾಜೋಪಚಾರ ಆತು.
ಮತ್ತೊಂದು ದಿನ ಶಂಭಣ್ಣನ ಮನೆಗೆ ಒಬ್ಬ ಶ್ರೀಮಂತ ಹೆಮ್ಮಕ್ಕಳ ಆಗಮನ.
ಶಂಭಣ್ಣನ ಕುಟುಂಬದ ದೊಡ್ಡ ಅನುಕೂಲಸ್ಥ ಗೋವಿಂದಣ್ಣನ ಹೆಂಡತಿ ಪದ್ಮಮ್ಮ ಆ ಸಿರಿವಂತೆ.
ಶಂಭಣ್ಣನ ಮನೆಗೆ ಮಿಂಚು ಹೊಡೆದ ಹಾಂಗೆ ಆತು.
“ಎಂತ ಅತ್ತಿಗೆ? ಬನ್ನಿ,ಬನ್ನಿ” ಶಂಭಣ್ಣ ಗಡಿಬಿಡಿ ಮಾಡಿದ.
ದೇವಕಿ,ಅವನ ಅರ್ಧಾಂಗಿ ಓಡಿ ಬಂತು,ಹಸೆಯ ಕುಡುಗಿತ್ತು, ತಂದು ಹಾಕಿತ್ತು..ಬನ್ನಿ ಅಕ್ಕ,ಕೂರಿ,ಆಸರಿಂಗೆ ಬೇಕೊ?-ಹೇಳಿ ಕೇಳಿತ್ತು.ಕಾಮಾಕ್ಷಿ ಅಷ್ಟು ಹೊತ್ತಿಂಗೆ ನೀರು,ಬೆಲ್ಲ ತಂದು ಮಡುಗಿ ಆಯಿದು.
ಕೈಲಿಪ್ಪ ಹತ್ತು ಚಿನ್ನದ ಬಳೆಗಳ ಅಲ್ಲಾಡಿಸಿತ್ತು ಪದ್ಮಮ್ಮ.ಆಸರಿಗೇನೂ ಬೇಡ ಹೇಳಿಕೊಂಡು ಕೂದತ್ತು.
ಹೀಂಗೆ ಬಂದೆ,ಕಾಮಾಕ್ಷಿ ಬಯಿಂದಡ..ನೋಡಿ ಹೋಪೊ ಹೇಳಿ ಬಂದೆ,ಹೇಳಿತ್ತು.
ಎಲ್ಲರ ಸುಖ ದುಃಖ ವಿಚಾರ್ಸಿ,ಗಿರೀಶನ ಹತ್ತರೆ,”ಆನು ಇದರ ದೊಡ್ಡಮ್ಮ.ಎಂಗಳ ಮನೆ ಇಲ್ಲೇ ಹತ್ತರೆ.ನಾಳೆ ನೀನೂ ಕಾಮಾಕ್ಷಿಯೂ ಊಟಕ್ಕೆ ಬನ್ನಿ..ನಿಂಗೊ ಮದುವೆ ಕಳುದ ಮೇಲೆ ಬಯಿಂದೇ ಇಲ್ಲೆನ್ನೆ-ಉದಾಸನ ಮಾಡೆಡಿ” ಹೇಳಿತ್ತು.
ಅಷ್ಟು ಆತ್ಮೀಯವಾಗಿ ದೊಡ್ಡ ಹೆಮ್ಮಕ್ಕೊ ದಿನುಗೋಳುವಾಗ, ಗಿರೀಶ ತಲೆ ಆಡಿಸಿ ’ಆತು ಅತ್ತೆ ’ಹೇಳಿದ.
ಶಂಭಣ್ಣ -ಆತು ಅತ್ತಿಗೆ,ಅವು ಬಕ್ಕು..ಚಾಯ ಕುಡಿಯಿರಿ-ಹೇಳಿ ಹೆಂಡತ್ತಿಯ ಕೈಲಿ ಚಾಯ ಮಾಡಿಸಿದ.ಚಾಯ, ಬಾಳೆಹಣ್ಣು ಕೊಟ್ಟು ಗೌರವಂದ ಬೀಳ್ಕೊಂಡ.

ದೊಡ್ಡಮ್ಮ ಹೋದ ಕೂಡಲೇ ಕಾಮಾಕ್ಷಿ ಒಳ ಹೋಗಿ ಅಬ್ಬೆಯ ಹತ್ತರೆ ,”ಎಂತಗೆ ಅಬ್ಬೇ ದೊಡ್ಡಮ್ಮ ಎಂಗಳ ದಿನುಗೋಳುದು? ಮದುವೆಗೂ ಬಯಿಂದವಿಲ್ಲೆ..ಈಗ ಬಂದು ದೊಡ್ಡ ಹಿತವಾರಿಕೆ ತೋರುಸುತ್ತವು..ಸಣ್ಣ ಇಪ್ಪಾಗ ಎನ್ನ ಕಳ್ಳಿ ಹೇಳಿ ಮಾಡಿದ್ದವು..”ಹೇಳಿ ಮೋರೆ ಊದಿಸಿಕೊಂಡತ್ತು.
ದೇವಕಿಗೆ ಆ ವಿಷಯ ಸಣ್ಣ ಸಂಗತಿ..ನೆಂಪಾತು.
*********
ಅಂದು ಗೋವಿಂದಣ್ಣನ ಅಪ್ಪನ ಶಪುಂಡಿ[ಸಪಿಂಡೀಕರಣ].ಸುಮಾರು ಐನೂರು ಜನಕ್ಕೆ ಅಟ್ಟಣೆ.ಪರಿಕರ್ಮಿ ಶಂಭಣ್ಣನೆ.ಅವ ಕುಟುಂಬದವ ಆದಕಾರಣ ಅವಂಗೆ ದಕ್ಷಿಣೆ ಸಿಕ್ಕ.ಆದರೆ,ಹೋಪಾಗ ಗೋವಿಂದಣ್ಣ ಅವನ ಕೈಗೆ ರಜಾ ಪೈಸೆ ಹಾಕದ್ದೆ ಇರ.
ಶಾಲೆಗೆ ರಜೆ.ಶಂಭಣ್ಣನ ಮೂರು ಮಾಣ್ಯಂಗೊ,ಸಣ್ಣ ಕೂಸು ಕಾಮಾಕ್ಷಿ ಬಯಿಂದವು.
ಕಾಮಾಕ್ಷಿ ಅಷ್ಟಪ್ಪಗ ಒಂದನೇ ಕ್ಲಾಸು.
ಒಂದನೇ ಹಂತಿಲಿ ಮಕ್ಕೊ ಊಟಕ್ಕೆ ಕೂದವು.
ಕ್ರಮಪ್ರಕಾರ ತಾಳುಗೊ,ಅವಿಲು,ಸಾರು,ಕೊದಿಲು…ಹೀಂಗೆ ಬಂತು.
ಮಕ್ಕೊಗೆ ಸಾರು ಹಪ್ಪಳ ತಿಂಬಾಗ ಹೊಟ್ಟೆ ತುಂಬಿತ್ತು.
ಪಾಯಸವ ರಜಾ ಉಂಡವು.
ಮತ್ತೆ ವಡೆ,ಸುಟ್ಟವು,ಸುಕ್ರುಂಡೆ,ಲಾಡು,ಹೋಳಿಗೆ,ಪೋಡಿ..
ಹೇಂಗೆ ತಿಂಬದು?
ಅಣ್ಣಂದಿರು ಎಡದ ಕೈ ಒಡ್ಡಿದವು,ಕಾಮಾಕ್ಷಿಯೂ.
ಎಲ್ಲ ಒಂದು ಖಾಲಿ ಬಾಳೆಲಿ ಮಡುಗಿದವು.ನಾಲ್ಕು ಜನರ ಪಾಲೂ ತುಂಬಿ ಅಪ್ಪಗ ತುಂಬಾ ಆತು.ಮನೆಗೆ ಹೋಗಿ ಅಕ್ಕಂದಿರಿಂಗೆ ಕೊಡುವೆ ಹೇಳಿ ಕಾಮಾಕ್ಷಿಯ ಯೋಚನೆ.ಅವು ದೊಡ್ಡ ಕೂಸುಗೊ ಹೇಳಿ ಅಬ್ಬೆ ಬಪ್ಪಲೆ ಬಿಟ್ಟಿದಿಲ್ಲೆ.ಅವಕ್ಕೂ ತಿಂಬಲೆ ಆಸೆ ಇಕ್ಕನ್ನೆ?
ಕೈ ತೊಳೆದ ಕೂಡಲೇ ಕಾಮಾಕ್ಷಿ ತಿಂಡಿಗಳ ತೆಕ್ಕೊಂಡು ಜಗಲಿಯ ಮರೆಲಿ ಮಡುಗಿತ್ತು.
ಹಳೆಯ ಪೇಪರಿಲಿ ಸುಂದಿತ್ತು.ಚೀಲ ಇಲ್ಲೆ.
ಅಣ್ಣಂದಿರು ಸುಭಗರು..ಅವಕ್ಕೆ ಈ ಕೂಸು ಹೇಂಗೆ ಮನೆಗೆ ಇದರ ಕೊಂಡೋಕು ಹೇಳುವ ಯೋಚನೆ ಇಲ್ಲೆ.ಕೊಂಡೋದರೆ ,ಅರ್ಧಕ್ಕರ್ಧ ಅವೇ ಸ್ವಾಹಾ ಮಾಡುಗು.
ಎಲ್ಲರ ಊಟ,ಮಂತ್ರಾಕ್ಷತೆ ಆತು.ಮಕ್ಕೊ ಆಡಿಕೊಂಡಿದ್ದವು.ಅವರ ಅಪ್ಪನೂ ಮನೆಗೆ ಹೋದ.
ಮೆಲ್ಲಾಂಗೆ ಬನ್ನಿ,ತಂಗೆಯ ಕರಕ್ಕೊಂಡು ಬನ್ನಿ -ಹೇಳಿ ದೊಡ್ಡವಂಗೆ ಹೇಳಿದ.
ಸುಮಾರು ಐದು ಗಂಟೆ.ಮಕ್ಕಳೂ ಹೆರಟವು.
ಕಾಮಾಕ್ಷಿ ಒಳ ಹೋಗಿ,ತಿಂಡಿ ಕಟ್ಟ ತೆಕ್ಕೊಂಡು ಬಂತು.
ಅದು ದೊಡ್ಡಮ್ಮ ಪದ್ಮಮ್ಮಂಗೆ ಕಂಡತ್ತು.
“ಏ..ಕೂಸೆ,ಎಂತರ ಅದು?”
ಕಾಮಾಕ್ಷಿ “ಲಾಡು,ಸುಟ್ಟವೊಡೆ..”ಹೇಳಿತ್ತು.
“ಆರು ಕೊಟ್ಟದು?ಕೇಳದ್ದೆ ತೆಕ್ಕೊಂಡು ಹೋವ್ತಿಯಾ?”
“ಎಂಗೊ ಉಂಬಾಗ ತೆಕ್ಕೊಂಡದು..”ಕಾಮಾಕ್ಷಿಯ ಕಣ್ಣಿಲಿ ನೀರು ಬಂತು.
“ಚೀ..ಚೀ..ಕಳ್ಳಿ,ನೀನು ಕೇಳಿದ್ದರೆ ಆನು ಕೊಡ್ತಿತ್ತೆನ್ನೆ? ಲೊಟ್ಟೆ ಹೇಳುತ್ತೆಯಾ? ಹುಗ್ಗಿಸಿ ಕೊಂಡೋಪಲೆ ನಾಚಿಕೆ ಆವ್ತಿಲ್ಲೆಯಾ?” ಹೆದರಿಸಿತ್ತು ಪದ್ಮಮ್ಮ.
“ಇಲ್ಲೆ ದೊಡ್ಡಮ್ಮಾ..ಆನು ಕದ್ದದಲ್ಲ..”ಬೆರೇನೆ ರಾಗ ಎಳದತ್ತು ಕಾಮಾಕ್ಷಿ.
ಅದರ ಅಣ್ಣಂದಿರು,ದೊಡ್ಡ ಸುಭಗರು ಅಲ್ಲಿಂದ ಅಷ್ಟು ಹೊತ್ತಿಂಗೆ ಓಡಿದ್ದವು..ಪಾಪದ ತಂಗೆಯ ಸಕಾಯಕ್ಕೆ ಅವು ಇಲ್ಲೆ.ಅವೂ ಸಣ್ಣವೇ ಆದಕಾರಣ ಅವಕ್ಕೆ ಎಂತ ಮಾಡಲೂ ಅರಡಿಯ.
“ಆತು..ಆತು..ಕೂಗೆಡ..ನಿನ್ನ ಅಪ್ಪ ಎನ್ನ ಬೈಗು..ಕೊಂಡೋಗು..” ಹೇಳಿತ್ತು ಪದ್ಮಮ್ಮ.
ಕೂಗಿಕೊಂಡೇ ಕಾಮಾಕ್ಷಿ -“ಎನಗೆ ಬೇಡ..ಆನು ಕಳ್ಳಿ ಅಲ್ಲಾ…”ಹೇಳಿ ಕಟ್ಟವ ಚಿಟ್ಟೆಲಿ ಮಡುಗಿತ್ತು..ಕಣ್ಣೀರಿನ ಉದ್ದಿಕೊಂಡು ಅಣ್ಣಂದಿರ ಹಿಂದೆ ಮನೆಗೆ ಓಡಿತ್ತು.
ಮನೆಗೆ ಎತ್ತಿದ ಮೇಲೆ ಅಣ್ಣಂದಿರು ಉಷಾರು.ಅಬ್ಬೆಗೆ ವರದಿ ಒಪ್ಪಿಸಿದವು.
ಶಂಭಣ್ಣನೂ ಮಕ್ಕಳ ಗಲಾಟೆ ಕೇಳಿ ಅಲ್ಲಿಗೆ ಬಂದ.ಕೊಂಡಾಟದ ಮಗಳು ಕೂಗುದರ ಕಂಡು ಅವಂಗೆ ತನ್ನ ಬಡತನದ ಬಗ್ಗೆ ನಾಚಿಕೆ ಆತು.ಮಗಳ ಬುದ್ಧಿವಂತಿಕೆ,ಸ್ವಾಭಿಮಾನ ಕಂಡು ಹೆಮ್ಮೆಯೂ ಆತು.
“ಕೂಗೆಡ ಮಗಳೋ,ನೀನು ಇನ್ನು ಆ ದೊಡ್ಡಮ್ಮನ ಮನೆಗೆ ಊಟಕ್ಕೆ ಹೋಗೆಡ.ಆ ಲಾಡು ಅವೇ ತಿನ್ನಲಿ,ನಿನಗೆ ನಾಳೆ ಆನು ಪೇಟೆಂದ ಲಾಡು,ಬಿಸ್ಕೆಟು ತಂದು ಕೊಡುವೆ”-ಹೇಳಿ ಹೇಳಿ,ಸಮಾಧಾನ ಮಾಡಿದ.
*******
ದೇವಕಿ ” ಓ ಆ ವಿಷಯವಾ?ಅದು ಸಣ್ಣ ಸಂಗತಿ.ನೀನು ಮತ್ತೆ ಅಲ್ಲಿಗೆ ಹೋಯಿದೇ ಇಲ್ಲೆ ಅಲ್ಲದಾ?ಈಗ ಅದರ ನೆಂಪು ಮಾಡಿ ಕೋಪ ಮಾಡುದರಲ್ಲಿ ಅರ್ಥ ಇಲ್ಲೆ..ಗಿರೀಶಂಗೆ ಗೊಂತಾದರೆ,ಅವ ನಿನ್ನ ಬಗ್ಗೆ ಎಂತ ತಿಳ್ಕೊಂಗು?” ಹೇಳಿ ಹೇಳಿತ್ತು.
“ನಿನ್ನ ಅಳಿಯ ಇದರ ಕೇಳಿರೆ,ಖಂಡಿತ ಅಲ್ಲಿಗೆ ಹೋಪಲೆ ಒಪ್ಪವು..ಅವಕ್ಕೆ ಎನ್ನ ಮೇಲೆ ಅಭಿಮಾನ.”
“ಸಾಕು ಮಾರಾಯ್ತಿ,ಅದು ಸಣ್ಣ ವಿಷಯ.ಆರಿಂಗೂ ಅದು ನೆಂಪಿರ.ಈಗ ಎಂತಗೆ ಅದು?”
“ಈಗ ಇವು ದೊಡ್ಡ ಎಂಜಿನೀಯರು ಹೇಳಿ ದೊಡ್ಡಮ್ಮ ಭಾರೀ ಪ್ರೀತಿ ತೋರುಸುತ್ತವು.ಹೋಗೆ ಆನು ಅಲ್ಲಿಗೆ”
“ಸಾಕು,ಸಾಕು..ಹೋಗಿ ಬಾ ಅಲ್ಲಿಗೆ.ಅವಕ್ಕೂ ಮತ್ತೆ ಬೇಜಾರ ಆದಿಕ್ಕು.ದೊಡ್ಡ ಮನುಷ್ಯರು ಅವರದ್ದೇ ತಪ್ಪಿದ್ದರೆ ಹೆರ ಒಪ್ಪುತ್ತವೋ?ಸಾರ ಇಲ್ಲೆ,ಹೋಗಿ ಬಾ..”
ಅಬ್ಬೆಯ ಮಾತಿನ ಧಿಕ್ಕರಿಸಲೆ ಆಗದ್ದೆ ಸ್ವಾಭಿಮಾನಿ ಕಾಮಾಕ್ಷಿ ಗಿರೀಶನೊಟ್ಟಿಂಗೆ ಹೋಗಿ ಸಮ್ಮಾನದ ಊಟ ಉಂಡು ಬಂತು.

ಗೋಪಾಲಣ್ಣ

   

You may also like...

1 Response

  1. ಉಂಡಿಕ್ಕಿ ಕೈ ತೊಳದದ ಮೇಲೆ ಆ ಶ್ರೀಮಂತ ಹೆಮ್ಮಕ್ಕೊ ಕಾಮಾಕ್ಷಿಗೆ ಮಾಡಿದ ಅಪಮಾನ\aapadneya ನೆಂಪು ಮಾಡೆಕ್ಕಾತು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *