Oppanna.com

ಅಬ್ಬೇ, ಎನಗೆ ಅರುಂಧತಿಯ ಕಂಡಿದೇ ಇಲ್ಲೆ…. ಭಾಗ-3

ಬರದೋರು :   ಶೀಲಾಲಕ್ಷ್ಮೀ ಕಾಸರಗೋಡು    on   19/07/2016    4 ಒಪ್ಪಂಗೊ

..ಅರುಂಧತಿ.. ಕತೆಯ : ಭಾಗ-1
..ಅರುಂಧತಿ.. : ಭಾಗ 2

ಎಸ್.ಎಸ್.ಎಲ್.ಸಿ. ಯ ಫಲಿತಾಂಶ ಬಂತು. ಸುರಭಿ ಅಲ್ಲಿಂದಲ್ಲಿಗೆ ಪಾಸು. ಅಂದ್ರೆ ಹರಿಣಿ, ಮೋಹನಂಗೆ ಮಗಳ ಹತ್ತನೇ ಕ್ಲಾಸಿನ ಫಲಿತಾಂಶಂದಲೂ ಹೆಚ್ಚು ನಿರೀಕ್ಷೆ ಇತ್ತಿದ್ದದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಒಕ್ಟೋಬರಿಲ್ಲಿ ಮಾಡ್ತ ಭರತನಾಟ್ಯ ಸೀನಿಯರ್ ಪರೀಕ್ಷೆಲಿ. ಜೂನಿಯರ್ ಪರೀಕ್ಷೆ ಕಳುದು ಎರಡೇ ವರ್ಷಲ್ಲಿ ಸುರಭಿ ಸೀನಿಯರ್ ಪರೀಕ್ಷೆ ಎದುರುಸುವಷ್ಟ್ರ ಮಟ್ಟಿಂಗೆ ತಯಾರಾಯಿದು ಹೇಳಿ ಅದರ ಟೀಚರು ಹೇಳಿತ್ತು. ಹಾಂಗಾಗಿ ಆ ಪರೀಕ್ಷೆಯ ತಯಾರಿಗೇ ಸುರಭಿ ಹೆಚ್ಚು ಪ್ರಾಮುಖ್ಯತೆ ಕೊಟ್ಟದು. ಶಾಲೆ ಪರೀಕ್ಷೆಯ ಫಲಿತಾಂಶಂದ ಮದಲೇ ಅದು ಬಂದಿದ್ದತ್ತು. ಅದರಲ್ಲಿ ಸುರಭಿ ಅತ್ತ್ಯುತ್ತಮ ಸಾಧನೆ ಮಾಡಿ ಪಷ್ಟು ಬಂದಿದ್ದತ್ತು. ಅಂದು ಜೂನಿಯರ್ ಪರೀಕ್ಷೆಲಿಯೂ ಇದೇ ರೀತಿ ಫಲಿತಾಂಶ ಬಂದಿತ್ತಿದ್ದು. ಒಂದು ವರ್ಷ ಕಳುದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಕೊಡ್ತ ವಿದ್ಯಾರ್ಥಿ ವೇತನಕ್ಕೂ ಅದು ಅರ್ಹತೆ ಪಡಕ್ಕೊಂಡತ್ತು. ಆ ವರ್ಷದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಲಿ ಹದಿನಾರು ವರ್ಷದ ಒಳಾಣ ವಿಭಾಗದ ಭರತನಾಟ್ಯ ಸ್ಪರ್ಧೆಲಿ ರಾಜ್ಯ ಮಟ್ಟಲ್ಲಿ ಪ್ರಥಮ ಸ್ಥಾನ ಗಳ್ಸಿದ್ದದು ಅದರ ಕಿರೀಟಲ್ಲಿ ಮೂಡಿದ ಇನ್ನೊಂದು ರೆಂಕೆ. ಈ ಎಲ್ಲ ಸಂತೋಷದೆಡೆಲಿ ಅವಕ್ಕೆ ಒಪ್ಪಕ್ಕ ಹತ್ತನೇಲಿ ಅಲ್ಲಿಂದಲ್ಲಿಗೆ ಪಾಸಾದ್ದದಷ್ಟೆ ಹೇಳ್ತದು ದೊಡ್ಡ ವಿಷಯ ಹೇಳಿ ಕಂಡಿದೇ ಇಲ್ಲೆ. ಸುರಭಿಯಂತೂ ಒಂದಾರಿ ಹತ್ತನೆ ಕ್ಲಾಸು ಮುಗಿದತ್ತನ್ನೇ ಹೇಳಿ ನಿಟ್ಟುಸಿರು ಬಿಟ್ಟತ್ತು. ಪೈಸೆ ಕೊಟ್ಟಾದ್ರೂ ಸೈ…, ಮುಂದಾಣ ಕಲಿವಿಕೆಗೆ ಒಳ್ಳೆ ಕೋಲೇಜಿಲ್ಲಿ ವಿಜ್ಞಾನ ವಿಭಾಗಕ್ಕೇ ಅದರ ಸೇರ್ಸುವೊ ಹೇಳಿ ಹರಿಣಿಯ ಅಭಿಪ್ರಾಯ. ಅಂಬಗ ಸುರಭಿ ಖಡಾಖಡಿ ಹೇಳಿತ್ತು,

“ಅಪ್ಪಾ°…, ಅಬ್ಬೆ ಹೇಳಿತ್ತು ಹೇಳಿ ಆನಂತೂ ಸೈನ್ಸು ತೆಕ್ಕೋಳ್ತಿಲ್ಲೆ. ಎನಗೆ ಅದರಲ್ಲಿ ಇಷ್ಟವೂ ಇಲ್ಲೆ. ಅಷ್ಟು ತುಂಬ ಎಲ್ಲ ಓದ್ಲೆ ಎನಗೆ ಎಡಿಯಲೂ ಎಡಿಯ…, ಎಂತ ಆದ್ರೂ ಸಮ…,ಆನು ನೃತ್ಯಲ್ಲೇ ಮುಂದುವರಿತ್ತೋಳು…, ಹಾಂಗಾಗಿ ಅದಕ್ಕೇ ಹೆಚ್ಚು ಸಮಯ ಮಡುಗಿಯೋಳೇಕು ಹೇಳಿಯಾದ್ರೆ ಕಲಾ ವಿಭಾಗವೇ ತೆಕ್ಕೋಳೇಕಷ್ಟೆ…, ಆನು ಅದ್ರನ್ನೇ ತೆಕ್ಕೋಂಬದು ಹೇಳಿ ಜಾನ್ಸಿದ್ದೆ, ಅಬ್ಬೆಗೆ ಸೈನ್ಸು ಅಷ್ಟು ಇಷ್ಟ ಇದ್ರೆ ಅಬ್ಬೆಯೇ ಕೋಲೇಜಿಂಗೆ ಹೋಗಲಿ…, ಆನು ಹೋವುತ್ತೇ ಇಲ್ಲೆ…”

ಬಾಗಿಲ ಚೀಪಿಂಗೆ ಸೊಂಟು (ಮೊಣಕೈ) ಹೆಟ್ಟೀರೆ ಒಂದಾರಿ ಝಿಮ್ಕ್ ಹೇಳಿ ತಲೆವರೆಂಗೆ ಎರುಗುತ್ತಿಲ್ಲ್ಯೋ? ಮಗಳ ಮಾತು ಕೇಳಿಯಪ್ಪಗ ಹರಿಣಿಗೂ ಹಾಂಗೇ ಆತು. ಇಷ್ಟನ್ನಾರವೂ ಅದರ ಕನಸುಗಳ ಸಾಕಾರ ರೂಪವೇ ಆಗಿತ್ತಿದ್ದ ಸುರಭಿ ಈಗ ರಿವರ್ಸ್ ಹೊಡದ್ದದು ಹೇಳಿದ್ರೆಂತ ಸಣ್ಣ ಸಂಗತಿಯೋ? ಮೋಹನಂಗೆ ಹೆಂಡತ್ತಿಯ ಒಳಾಣ ಬೇಂಕೆ ಅರ್ಥ ಆಗದ್ದಿಕ್ಕೋ…?
ಹರಿಣಿಗೆ ಕಣ್ಣಿಲ್ಲಿಯೇ ಸುಮ್ಮನೆ ಕೂಬಲೆ ಹೇಳಿದ°.

“ಒಪ್ಪೀ (ಮಗಳ ಮೇಲಾಣ ಪ್ರೇಮಾತಿಶಯಂದ ಅಂವ ಒಪ್ಪಕ್ಕನ `ಒಪ್ಪೀ’ ಹೇಳಿಯೂ ದಿನುಗೋಂಬ ಕ್ರಮ ಇದ್ದು. ಒಪ್ಪಿ ಹೇಳಿರೆ ಬಾಲ ಭಾಷೆಲಿ `ಆಭರಣ’ ಹೇಳುವ ಅರ್ಥವೂ ಇದ್ದನ್ನೇ? ಸುರಭಿ ಅವರ ಬಾಳಿನ ಒಪ್ಪಿಯೇ ಅಪ್ಪನ್ನೇ?)…,ನೀನು ಸಮಾಜಲ್ಲಿ ಒಳ್ಳೆ ಸ್ಥಾನಕ್ಕೆ ಎತ್ತೇಕಪ್ಪದು ಮುಖ್ಯ ಮಗಳೇ, ಕೂಸುಗೋ ಹೇಳಿದ್ರೆ ಮೊಹನನ ಮಗಳ ಹಾಂಗಿರೇಕು ಹೇಳ್ತ ಹಾಂಗೆ ಆಯೇಕು ನೀನು, ನಿನಗೆ ಸೈನ್ಸು ಬೇಡದ್ರೆ ಕಲಾವಿಭಾಗವೇ ತೆಕ್ಕೋ. ಯಾವ ಅಡ್ಡಿಯೂ ಇಲ್ಲೆ. ಅಂದ್ರೆ ಅದರ ಹೇಳುವಾಗ ರಜಾ ಚೆಂದಕೆ ಹೇಳ್ಲಕ್ಕನ್ನೇ ಮಗಳೋ….?”

“ಚೆಂದದ ಮತುಗೋ, ಪಾಪದ ಮಾತುಗೋ ಎಲ್ಲ ಅಬ್ಬೆಯತ್ರೆ ನೆಡೆಯ ಅಪ್ಪಾ, ಎನ್ನ ಮಂಕಾಡ್ಸಿ, ಕೊರಳೊತ್ತಿ ಬಾಯಿ ಒಡಶುತ್ತದೇ ಅದರ ಕೆಲಸ. ಇದರಿಂದ ಮೊದಲು ತುಂಬ ವಿಷಯಲ್ಲಿ ಅಬ್ಬೆ ಮಾಡಿದ್ದು ಹಾಂಗೇ…,ನಿಂಗೊ ದೂರ ಇಪ್ಪದಲ್ದೋ…?ನಿಂಗೊಗೆ ಇದೆಲ್ಲ ಗೊಂತಾವುತ್ತಿಲ್ಲೆ….,ನಿಂಗೊ ಬಾಪ್ಪಾಗೆಲ್ಲಾ ಎಂತೆಂತಾರು ದುಬಾರಿ ಗಿಫ್ಟುಗಳ ತಂದು ಎನ್ನ ಮುಂದೆ ಸೊರುಗೀರೆ ಮುಗಾತು…, ಮತ್ತೆ ಎನ್ನ ಮನಸ್ಸಿಲ್ಲಿಪ್ಪದೆಂತರ ಹೇಳಿ ತಿಳಿವ ಪ್ರಯತ್ನ ಒಂದಾರಿಯಾರೂ ಮಾಡಿದ್ದಿರಾ? ಅಬ್ಬೆ ಹೇಳಿದ್ದದೇ ಸರ್ವಸ್ವ ನಿಂಗೋಗೆ…, ಎನ್ನ ಆನ್ ಲೈನ್ ಫ್ರೆಂಡ್ಸುಗೊಕ್ಕೆಲ್ಲ ಅಭಿಪ್ರಾಯ ಹಂಚಿಗೋಂಬಲೆ ಬೇಕಾಷ್ಟು ಜೆನ ಇದ್ದವು. ಎನಗೆ ಮಾಂತ್ರ ಆರೂ ಇಲ್ಲೆ….ಇಡೀ ದಿನ ಅಬ್ಬೆ ಹೇಳಿದ್ದರನ್ನೇ ಕೇಳಿ ಕೇಳಿ ಆನು ಏತಕ್ಕೂ ಬೇಡದ್ದೆ ಆಗಿ ಹೋದೆ….” ಹೇಳಿಯೊಂಡಿದ್ದ ಹಾಂಗೇ ಸುರಭಿಯ ಸ್ವರ ನೆಡುಗಿತ್ತು…ಕಣ್ಣು ತುಂಬಿತ್ತು….ಧಿರೀ…ನೆ ಕಣ್ಣೀರು ಹಾಕಿಯೋಂಡು ಕಾಲು ಅಪ್ಪಳ್ಸಿಯೊಂಡು ಕೋಣೆಗೆ ಓಡಿ ಹೋತು. ಪುಣ್ಯಕ್ಕೆ ಅದು ಕೋಣೆಯ ಬಾಗಿಲು ಹಾಕಿಯೋಳೇಕಾರೆ ಮೊದಲೇ ಅಬ್ಬೆ, ಅಪ್ಪನೂ ಅದರೊಳಾಂಗೆ ಎತ್ತಿಯೋಂಡವು. ಮಗಳ ಅಪ್ಪಿ ಹಿಡ್ಕೊಂಡ ಅವರಿಬ್ರ ಕಣ್ಣೀರೂ ಅದರದ್ದರೊಟ್ಟಿಂಗೆ ಸೇರಿ ಅಲ್ಲಿಯೊಂದು ಕಣ್ಣನೀರಿನ ಕೆರೆಯೇ ನಿರ್ಮಾಣ ಆತು ಹೇಳ್ಲಕ್ಕು.
ಅಂತೂ ಸುರಭಿಯ ಬ್ರಹ್ಮಾಸ್ತ್ರದೆದುರು ಅಬ್ಬೆ ಅಪ್ಪ ಶರಣಾಗದ್ದೆ ಉಪಾಯ ಇದ್ದೋ ಹೇಳಿ?

ಸುರಭಿ ಈಗ ನಗರದ ಅತಿ ಪ್ರತಿಷ್ಟಿತ ಕಲಾ ಕೋಲೇಜಿನ ಅತಿ ಚೆಂದದ ವಿದ್ಯಾರ್ಥಿನಿ. ಅಲ್ಲಿ ವಸ್ತ್ರ ಸಂಹಿತೆಯ ರಗಳೇ ಇಲ್ಲೆ. ಶಾಲೆಗೆ ಹೋಪಾಗ ಇದ್ದ ಹಾಂಗೆ ತಲೆಗೆ ಎಣ್ಣೆ ಹಾಕಿ ಬಾಚಿ ಎರಡು ಜಿಡೆ ನೇಯ್ದು ಮೇಲಂಗೆ ಮಡ್ಸಿಕಟ್ಟಿ ಕೆಂಪು ರಿಬ್ಬನು ಹಾಕೇಕು ಹೇದು ಇಲ್ಲೆ. ಸಮವಸ್ತ್ರದ ಸಲ್ವಾರು ಕಮೀಝ್ ಬೇಡ. ಶಾಲಿನ ಎದೆಗೆ ಹೊದ್ದು ಪಿನ್ನು ಹಾಕುವ ಕಿರಿ ಕಿರಿ ಇಲ್ಲೆ. ಬೆನ್ನಿಂಗೆ ಚೀಲ ನೇಲ್ಸಿಗೋಂಬ ಪಂಚಾಯ್ತಿಗೇ ಇಲ್ಲೆ. ಅಂತೂ ಈಗ ಸುರಭಿ ಗೂಡಿಂದ ಬಿಟ್ಟ ಹಕ್ಕಿ. ಕೋಲೇಜಿಂಗೆ ಹೋಪಲೆ ಸುರುಮಾಡಿದ ಒಂದೇ ವಾರಲ್ಲಿ ಸುರಭಿಗೆ ಎಂಟ್ಹತ್ತು ಸ್ನೇಹಿತೆಗೊ ಸಿಕ್ಕಿದವು. ಅವೆಲ್ಲೋರೂ ಅವರವರಷ್ಟಕೆ ಬಸ್ಸಿಲ್ಲಿ ಬಪ್ಪವು.

ಒಂದು ದಿನ ಸುರಭಿ ಅಬ್ಬೆಗೆ ತಾಕೀತು ಮಾಡಿತ್ತು, “ಇದಾ ಅಬ್ಬೇ, ಇನ್ನೂ ಆನು ಸಣ್ಣ ಬಾಬೆ ಹೇಳಿ ಜಾನ್ಸಿಯೋ ನೀನೆನ್ನ ಹೀಂಗೆ ದಿನಾಗ್ಳೂ ಕಾರಿಲ್ಲಿ ಕೋಲೆಜಿಂಗೆ ಬಿಡ್ತದೂದೆ ಕರಕ್ಕೊಂಡು ಬತ್ತದೂದೆ? ನಾಳೇಂದ ಆನು ಎನ್ನಷ್ಟಕೇ ಬಸ್ಸಿಲ್ಲಿ ಹೋಪದು, ಮಧ್ಯಾನ್ನ ಕ್ಯಾಂಟೀನಿಲ್ಲಿ ತಿಂಬದು.., ನಿನ್ನ ಬುತ್ತಿ ಗಿತ್ತಿ ಎಲ್ಲ ಎನ್ನಂದೆಡಿಯ ತೆಕ್ಕೊಂಡೋಪಲೆ…”

“ಅಯ್ಯೋ ಮಗಳೇ, ಆ ಬಸ್ಸುಗೊ ಹೋವುತ್ತ ರಭಸ ನೋಡುವಾಗಳೇ ಅಬ್ರು ಹಾರ್ತು…ಒಳ್ಳೆ ಯಮ ಧರ್ಮರಾಯನ ಹಾಂಗೆ ಬತ್ತವು….. ನಾವು ಬಸ್ಸಿನ ಮೆಟ್ಳಿಲ್ಲಿ ಕಾಲು ಮಡುಗೇಕಾರೆ ಮದಲೇ ಬಿಗಿಲು ಊದಿ ಬಿಡ್ತವು… ನಿನಗೆ ಅಭ್ಯಾಸವೂ ಇಲ್ಲೆ….” ಹರಿಣಿ ಇನ್ನೂ ಎಂತೆದೋ ಹೇಳ್ಲೆ ಬಾಕಿ ಇಪ್ಪಾಗಳೇ ಸುರಭಿ ಮಧ್ಯಲ್ಲೇ ಬಾಯಿ ಹಾಕಿ ಹೇಳಿತ್ತು,

“ಅಬ್ಬೇ, ನಿನಗೆ ಲೋಕ ಹೇಳಿದ್ರೆ ಎಂತರ ಹೇಳಿಯೇ ಗೊಂತಿಲ್ಲೆ….,ಇಡೀ ದಿನ ಬರೀ ಮಗಳು, ಗೆಂಡ ಹೇಳಿ ಈ ನಾಕು ಗೋಡೆಯೊಳವೇ ಇದ್ದು ಜೀವನಲ್ಲಿ ರಜ್ಜ ಅತ್ತಿತ್ತೆ ಆದ್ರೂ ಲೋಕವೇ ಮುಳುಗಿತ್ತು ಹೇಳ್ತ ಹಾಂಗೆ ಮಾಡ್ತೆ ನೀನು. ಆನೂ ನಿನ್ನ ಹಾಂಗೆ ಆಯೇಕು ಹೇಳಿ ಜಾನ್ಸೀರೆ ಅದಾಗ ಗೊಂತಾತಾ…,ಅಂಬಗ ಊರಿಲ್ಲಿ ಇಷ್ಟೆಲ್ಲಾ ಮಕ್ಕೊ ಬಸ್ಸಿಲ್ಲಿ ಶಾಲೆ, ಕೋಲೇಜಿಂಗೆ ಹೋವುತ್ತವು…ಅವೆಲ್ಲಾ ಬಸ್ಸಿನಡಿಂಗೆ ಬಿದ್ದು ಸತ್ತಿದವಾ…?”

“ರಾಮ…ರಾಮಾ…ಹೀಂಗಿಪ್ಪ ಅಪಶಕುನ ಎಂತಕೆ ಮಗಳೇ ಮಾತಾಡ್ತೆ…ನಿನಗೆ ಬಸ್ಸಿಲ್ಲೇ ಹೋಯೇಕಾದರೆ ಹಾಂಗೇ ಹೋಗಪ್ಪ….ಅದಕ್ಕೆ ಇಷ್ಟು ಬೇಡಂಕೆಟ್ಟದೆಲ್ಲ ಎಂತಕೆ ಮಾತಾಡ್ತೆ…?”

ಅಬ್ಬೆಯ ಮಾತಿನ ಪೂರಾ ಕೇಳ್ಲೆ ಅದು ಅಲ್ಲಿ ಇತ್ತಿದ್ದರಲ್ದೋ….?ಮೊಬೈಲಿನ ಕೆಮಿಗೆ ಮಡುಗಿಯೊಂಡು ಮಾರ್ಗಕ್ಕೆ ಇಳಿದಾಗಿತ್ತಿದ್ದು.

ಮಗಳಿಂಗೆ ಅಬ್ಬೆಯತ್ರೆ ಎಷ್ಠೇ ಭಿನ್ನಾಭಿಪ್ರಾಯ ಬಂದರೂ ಅದರ ಪ್ರತಿಯೊಂದು ವಿಷಯಕ್ಕೂ ಅಬ್ಬೆ ಬೇಕೇ ಬೇಕು. ಅದು ಎಂತದೇ ಮಾಡ್ತರೂ “ಅಬ್ಬೆ ಇದು ಚೆಂದ ಆಯಿದೋ…?” ಕೇಳುಗು. ಅಬ್ಬೆ, “ಓ..,ಭಾರೀ ಚೆಂದ ಆಯಿದು…” ಹೇಳೇಕು. ಅಷ್ಟಾದ್ರೆ ಇಬ್ರಿಂಗೂ ಸಮಾಧಾನ. ವಾರಕ್ಕೊಂದಾರಿಯಾದ್ರೂ ಅಬ್ಬೆಯೂ ಮಗಳೂ ಬಿಗ್ ಬಜಾರಿಂಗೋ ಸೆಂಟರ್ ಮಾಲಿಂಗೋ ಹೋಗಿ ಕಣ್ಣಿಂಗೆ ಚೆಂದ ಕಂಡ ಅಂಗಿಗಳನ್ನೋ ಮೇಚಿಂಗು ಬೇಗು, ಮೆಟ್ಟು, ಮೇಕಪ್ಪು ಕಿಟ್ಟು….ಇತ್ಯಾದಿ ಇತ್ಯಾದಿಗಳ ತೆಕ್ಕೋಂಬಲಿದ್ದು. ಅದರ ನೃತ್ಯಕ್ಕೆ ಸಂಬಂಧಪಟ್ಟ ವೇಷಭೂಷಣದ ವಿನ್ಯಾಸಂಗಳ ಹರಿಣಿಯೇ ಆಂಬಗಂಬಗ ಬದಲಾಯಿಸಲಿದ್ದು. ಅದೆಲ್ಲ ಆನ್ ಲೈನ್ ಮೂಲಕ ನಡೆಕ್ಕೊಂಡೇ ಇರ್ತು. ಕೋಲೇಜಿಂಗೆ ಹೋಪಾಗ ಮಗಳು ಹಾಕುತ್ತ ಅತ್ಯಾಧುನಿಕ ವಸ್ತ್ರ ಶೈಲಿ, ಕೇಶಾಲಂಕಾರ, ಮೋರೆಗೆ ಮಾಡ್ತ ಆಯತ…ಇದ್ರೆಲ್ಲ ನೋಡ್ತಾ ನೋಡ್ತಾ ಹರಿಣಿ ಹೆಮ್ಮೇಂದ ಬೀಗಲಿದ್ದು. (ಎನಗೆ ಸಿಕ್ಕದ್ದೆಲ್ಲ ಮಗಳಿಂಗೆ ಸಿಕ್ಕುವ ಹಾಂಗಾತನ್ನೇ…) ಕೋಲೇಜಿನ ಪ್ರತಿಯೊಂದು ಸಾಂಸ್ಕೃತಿಕ ಕಾರ್ಯಕ್ರಮಲ್ಲಿಯೂ ಸುರಭಿಯ ನೃತ್ಯ ಇಲ್ಲದ್ರೆ ಬರೀ ಚೆಪ್ಪೆ ಹೇಳುವಷ್ಟರ ಮಟ್ಟಿಂಗೆ ಕೋಲೇಜಿನ ಆಡಳಿತ ವರ್ಗ ಅದರ ನೃತ್ಯದ ಮೋಡಿಗೆ ಮರುಳಾತು. ನಿಧಾನಕೆ ಸುರಭಿ ಅದರ ನೃತ್ಯ ಕಾರ್ಯಕ್ರಮಂಗಳ ಆಯೋಜನೆ ಮಾಡುವ ಕ್ರಮ, ಹಿಮ್ಮೇಳದವರ ಹೊಂದಿಸಿಗೋಂಬ ರೀತಿ, ಸಂದರ್ಭಕ್ಕೆ ತಕ್ಕ ಮೇಕಪ್ ಮಾಡಿಯೋಳೇಕಾದ ಚಾಕಚಕ್ಯತೆ, ಕಾರ್ಯಕ್ರಮ ಕೊಡೇಕಾದ ವೇದಿಕೆಯ ಅಟ್ಟಣೆ ಮಾಡ್ತದು…,ಹೀಂಗೆ ನೃತ್ಯದ ಒಳ,ಹೆರ, ಎಲ್ಲವನ್ನೂ ಕಲ್ತುಗೋಂಬಲೆ ಸುರು ಮಾಡಿತ್ತು. ಈಗೀಗ ಅದಕ್ಕೆ ಬೇರೆ ಬೇರೆ ಊರುಗೊಕ್ಕೂ ಹೋಗಿ ಕಾರ್ಯಕ್ರಮಂಗಳ ಕೊಡೇಕಾದ ಸಂದರ್ಭ ಬತ್ತು. ಕೋಲೇಜಿನ ಪ್ರಿನ್ಸಿಪಾಲನೂ ಅದಕ್ಕೆ ಒಪ್ಪಿಗೆ ಕೊಟ್ಟು ರಜೆಯ ಸೌಕರ್ಯ ಸಿಕ್ಕುವ ಹಾಂಗೆ ನೋಡಿಗೋಂಡ. ಅಂಬಗೆಲ್ಲ ಅವರ ಗುಂಪಿನೊಟ್ಟಿಂಗೆ ಹರಿಣಿಯೂ ಹೋವುತ್ತು.

ಮೋಹನಂಗೆ ನಿವೃತ್ತಿ ಅಪ್ಪಲೆ ಇನ್ನು ಬರೇ ಐದು ವರ್ಷ ಬಾಕಿ ಇಪ್ಪದು. ಕಡೇಂಗೂ ಅವಂಗೆ ಸ್ವಂತ ಊರಿಂಗೆ ವರ್ಗ ಸಿಕ್ಕಿತ್ತು. ಅಂದರೆ ಇಷ್ಟು ವರ್ಷ ಸ್ವಂತ ಕೈ ಅಡಿಗೆ ಮಾಡಿ ಹಸಿಯೋ, ಬೆಶಿಯೋ, ಅರೆ ಬೆಂದದ್ರ ತಿಂದೋ ಅಥವಾ ಹೋಟ್ಲಿಂದ ತಿಂದದ್ರಿಂದಾಗಿಯೊ ಗೊಂತಿಲ್ಲೆ ಆರೋಗ್ಯ ತುಂಬಾ ನಾಜೂಕು ಹೇಳುವ ಹಾಂಗಾತು.

ಹರಿಣಿಗೂ ಒಂದು ಮೊಳಪ್ಪು ಬೇನೆ ಅಂಬಗಂಬಗ ಉಪದ್ರ ಕೊಡ್ತು. ಹಳೇ ಸೊಂಟ ಬೇನೆ ಹೇಂಗೂ ಇದ್ದು. ಅಂದ್ರೆ ಈಗ ಗೆಂಡ ಹೆಂಡತ್ತಿ ಒಟ್ಟಿಂಗೇ ಇಪ್ಪ ಕಾರಣ ಒಬ್ಬಂಗೊಬ್ಬ ಆಧಾರವಾಗಿದ್ದವನ್ನೇ ಹೇಳ್ತದೇ ಸಮಾಧಾನದ ವಿಷಯ.

ಸುರಭಿಯ ಸ್ನೇಹಿತೆಗೊ ಅಂಬಗಂಬಗ ಮನೆಗೂ ಬಪ್ಪ ಕ್ರಮ ಇದ್ದು. ಅಬ್ಬೆ ಅಪ್ಪಂಗೂ ಅದು ಸಂತೋಷದ ವಿಷಯವೇ ಹೇಳುವೋ°. ಹವ್ಯಕರ ಉಂಡ್ಳಕಾಳು, ಸೋಂಟೆ, ಅಕ್ಕಿ ರೊಟ್ಟಿ ಇದ್ರೆಲ್ಲ ತಿಂಬದು ಹೇಳಿರೆ ಅವಕ್ಕೆ ಭಾರೀ ಪ್ರೀತಿ. ಮಾಡಿ ಕೊಡ್ಲೆ ಹರಿಣಿಗೂ ಕೈ ನಾಲ್ಕಾವುತ್ತು. ಒಂದು ದಿನ ಅವೆಲ್ಲ ಬಂದಿಕ್ಕಿ ಹೋದ ಮೇಗೆ ಸುರಭಿ ಒಳ ಬಂದು ಅವರೊಟ್ಟಿಂಗೆ ಕೂದತ್ತು. ಸುಮಾರು ಹೊತ್ತು ಮೂರೂ ಜೆನವೂ ಪಟ್ಟಾಂಗ ಹೊಡದವು. ಅಷ್ಟಪ್ಪಗ ಸುರಭಿ ಮೆಲ್ಲಂಗೆ ಒಂದು ವಿಷಯ ತೆಗದತ್ತು,

ಇದಾ, ಇನ್ನು ನಿಂಗೋ ಎನ್ನ ಒಪ್ಪಕ್ಕ…ಕೆಪ್ಪಕ್ಕ…ಹೇಳಿಯೆಲ್ಲ ದಿನುಗೋಂಬಲಾಗ ಗೊಂತಾತಾ…? ಎನ್ನ ಫ್ರೆಂಡ್ಸುಗೊಕ್ಕೆಲ್ಲ ಎಷ್ಟೆಷ್ಟು ಚೆಂದದ ಪೆಟ್ ನೇಮ್ ಇದ್ದು…ಎನಗೆ ಮಾಂತ್ರ ಹಳೆ ಕೂಕೆ ಅಡ್ಡ ಹೆಸರು….ಅದರ ಕೇಳಿ ಅವೆಲ್ಲ ನೆಗೆ ಮಾಡ್ತವು ಗೊಂತಿದ್ದಾ…? ಇನ್ನು ನಿಂಗೊ ಇಬ್ರೂ ಎನ್ನ ಸ್ಟೈಲಾಗಿ “ಸುರೀ…” ಹೇಳಿ ದಿನುಗೋಳೇಕು…

ಮೋಹನಂಗೆ ನೆಗೆ ಬಂದು ತಡೆಯ. ನೆಗೆ ಮಾಡಿಯೊಂಡೇ ಹೇಳಿದ,

“ಒಪ್ಪೀ…, ಸುರಭಿ ಹೇಳುವ ಅಷ್ಟೊಳ್ಳೆ ಹೆಸರಿನ “ಸುರಿ” ಹೇಳಿ ಮಾಡ್ಲೆ ನೀನೆಂತ ಬಟ್ಲಿಲ್ಲಿ ಹಾಕಿ ಸುರಿತ್ತ ಪಾಯಸವೋ…ಅಥವಾ ಸೂಜಿ ನೂಲಿಲ್ಲಿ ಸುರಿತ್ತ ಹೂಗೋ…? ಸುರಭಿ ಹೆಸರಿನ ಮಹತ್ವ ಅಂದೇ ಆನು ಹೇಳಿತ್ತಿದ್ದೆ ಅಲ್ದೋ ಮಗಳೇ….ಆ ಹೆಸರಿನ ಆಯ್ಕೆ ಮಾಡೇಕಾದ್ರೆ ಎಂಗೊ ಎಷ್ಟು ಹುಡ್ಕಿದ್ದ್ಯೊಂ ಗೊಂತಿದ್ದೋ…?”

“ಅದೆಲ್ಲ ಎನಗೆ ಗೊಂತಿಲ್ಲೆ…, ಇನ್ನು ನಿಂಗೊ ಒಪ್ಪಕ್ಕ ಹೇಳಿ ದಿನುಗೋಂಡ್ರೆ ಆನು ಮಾತೇ ಆಡೆ…” ಹೇಳಿ ಹೇಳಿಕ್ಕಿ ಅದರ ಕೋಣೆಗೆ ಹೋತು.

“ಮಗಳಿಂಗೆ ಇನ್ನೂ ಬುದ್ಧಿ ಬೆಳದ್ದಿಲ್ಲೆ…ರಜಾ ದೊಡ್ಡಪ್ಪಗ ಸರಿ ಅಕ್ಕು…ಈಗ ಮಕ್ಕಳಾಟಿಕೆ ಅಷ್ಟೇ…” ಹೆಂಡತ್ತಿಗೂ ಆತು ತನ್ನ ಮಸ್ಸಿಂಗೂ ಆತು ಹೇಳಿ ಮೋಹನ ಗಟ್ಟಿಯಾಗಿಯೇ ಹೇಳಿಯೋಂಡ.

(ಇನ್ನೂ ಇದ್ದು)

 

4 thoughts on “ಅಬ್ಬೇ, ಎನಗೆ ಅರುಂಧತಿಯ ಕಂಡಿದೇ ಇಲ್ಲೆ…. ಭಾಗ-3

  1. ಇಬ್ರೂ ಅಣ್ಣಂದ್ರೇ ಮತ್ತೆ ವಿಜಯಕ್ಕಾ, ನಿಂಗಳ ಒಪ್ಪದೊಟ್ಟಿಗೆ ಇಲ್ಲಿ ಒಪ್ಪ ಕೊಡದ್ರೂ ಕಾತರಲ್ಲಿ ಕಾದುಗೊಂಡಿಪ್ಪ ಬೈಲಿನ ನೆಂಟ್ರುಗಳ ಹಾರೈಕೆ `ಸುರಿ’ ಯ ಬೆನ್ನಿಂಗಿರಲಿ. ನಾಡಿದ್ದು ಮಂಗಳವಾರ ನೋಡುವ ಎಂತ ಆವುತ್ತು ಹೇಳಿ…

  2. “ಸುರಿ” ಗೆ ಸರಿಯಾದ ಬುದ್ದಿ ಬರಳಿ , ಬೇಡಂಕೆಟ್ಟದ್ದು ಮಾಡದ್ದೆ ಇರಳಿ ಹೇಳಿ ಆಶಿಸುತ್ತೆ. ಸೊಂಟಿಂಗೆ ಹೆಟ್ಟಿಯಪ್ಪಗ ಜುಂಮ್ ಆದ್ದದು ಪ್ರಯೋಗ ಲಾಯಕಾಯಿದು. ಅಕ್ಕಂಬಗ ಮುಂದಾಣ ವಾರ ಕಾಂಬೊ.

  3. ನಮ್ಮದೆಲ್ಲಾ ಒಳ್ಳೆದಿಲ್ಲೆ ಹೇಳಿ ಹೇಳುವ ಮಕ್ಕೊ ಇದ್ದವು..ಕತೆ ಸುದೀರ್ಘವಾಗಿ ಮುಂದುವರಿಯಲಿ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×