Oppanna.com

ಧೃತಿಯೊಂದಿದ್ದರೆ

ಬರದೋರು :   ಶರ್ಮಪ್ಪಚ್ಚಿ    on   03/05/2017    7 ಒಪ್ಪಂಗೊ

ಶ್ರೀಮತಿ ಸರಸ್ವತಿ ಬಡೆಕ್ಕಿಲ, ಇವು ದಿವಂಗತ ಡಾ| ಬಡೆಕ್ಕಿಲ ಕೃಷ್ಣ ಭಟ್ಟರ ಧರ್ಮಪತ್ನಿ.

ಸೇಡಿಯಾಪು ಕೃಷ್ಣ ಭಟ್ಟರು ಹೇಳಿದರೆ ಗೊಂತಿಲ್ಲದ್ದವು ಆರೂ ಇರವು. ಕನ್ನಡ ಸಾಹಿತ್ಯ ಕ್ಷೇತ್ರಲ್ಲಿ ಛ೦ದಸ್ಸಿನ ಆಳ ಅಧ್ಯಯನ ಮಾಡಿದ ಹೆಸರಾಂತ ವಿದ್ವಾಂಸರು. ಅವರ ಮಗಳು ಈ ಬಡೆಕ್ಕಿಲ ಅತ್ತೆ. ಪ್ರಾಯ ೮೬ ಕ್ಕೆ ಹತ್ತರೆ ಹೇಳುವ ಅವು, ಬರವಣಿಗೆಯ ಹವ್ಯಾಸ ಮಾಡಿಗೊಂಡಿದವು. ಇವರ ಲೇಖನಂಗೊ, ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟ ಆಯಿದು.

ಈ ಹಿಂದೆ ನಮ್ಮ ಬೈಲಿಲ್ಲಿ ಶಿಲ್ಪಿ ಬಡೆಕ್ಕಿಲ ಶ್ಯಾಮಣ್ಣನ ಪರಿಚಯ ಮಾಡಿದ್ದು ನಿಂಗೊಗೆ ನೆಂಪಿಕ್ಕು. ಅವು ಈ ಅತ್ತೆಯ ಮಗ°.

ಬೈಲಿಂಗೆ ಸುರು ಬತ್ತಾ ಇಪ್ಪ ಇವರ ನಾವು ಸ್ವಾಗತಿಸುವೊ°. ಇವರಿಂದ ಇನ್ನೂ ಹಲವಾರು ಲೇಖನ ಕತೆಯ ನಿರೀಕ್ಷೆಲಿ ಇಪ್ಪೊ°

-ಶರ್ಮಪ್ಪಚ್ಚಿ

ಧೃತಿಯೊಂದಿದ್ದರೆಬಡೆಕ್ಕಿಲ ಸರಸ್ವತಿ

ಅಬ್ಬಬ್ಬಾ ! ಭಯಂಕರ ಬೆಶಿಲು…

ಮನುಷ್ಯರು ಮಾತ್ರ ಅಲ್ಲ ನಾಯಿ ಪುಚ್ಚಗೊ, ಹಕ್ಕಿಪಕ್ಕಿಗೊ ಕೂಡ ಸುಟ್ಟು ಕರಂಚಿಹೋಕು ಅಂಥಾ ಉರಿ ಬೆಶಿಲು ! ಬೆಗರಿ ಬೆಗರಿ ಹಣ್ಣುಗಾಯಿ ನೀರುಗಾಯಿ ಆದ ಮನೆಜೆನ ಇರುಳಾಣ ತಂಪುಗಾಳಿಗೆ ಬೋಧ ಇಲ್ಲದ್ದ ಹಾಂಗೆ ಒರಗಿದ್ದವು. ಜಾಲಿಲ್ಲಿ ಕಟ್ಟಿಹಾಕಿದ ನಾಯಿಗಳ ಕೊರವ ಶಬ್ದಕ್ಕೂ ಆರಿಂಗೂ ಎಚ್ಚರಿಕೆಯೇ ಇಲ್ಲೆ. ನಡಿರುಳು ಕಳುದಿಕ್ಕು. ಢಮ್ಮನೆ ಪರಮತ್ತೆಗೆ ಎಚ್ಚರಿಕೆ ಆತು. ಝಗ್ಗನೆ ಕಣ್ಣಿಂಗೆ ಮಿಂಚು ಹೊಕ್ಕ ಹಾಂಗಾತು. ಕಣ್ಣು ಬಿಟ್ಟು ನೋಡ್ತ°, ನೆತ್ತಿಯ ಮೇಲಾಣ ಸೋಗೆ ಮಾಡು ಧಗಧಗನೆ ಹೊತ್ತುತ್ತಾ ಇದ್ದು. ಸೋಗೆ ಮಾಡಿನ ಕೊಟ್ಟಗೆಯ ಅಟ್ಟಲ್ಲಿ ಅಖೇರಿಯಾಣ ಮಗಳು ಕಮಲನೂ ಪರಮತ್ತೆಯೂ ಮನುಗಿತಿದ್ದವು.

ಅಯ್ಯೋ ಕಿಚ್ಚು ! ಕಿಚ್ಚು! ಮಗಳೋ ಕಮಲೋ ಏಳು ಏಳು! ಹೇಳಿಗೊಂಡು ಬೊಬ್ಬೆ ಹೊಡಕ್ಕೊಂಡು, ಹತ್ತು ವರ್ಷದ ಮಗಳ ಕೈಹಿಡುದು ಎಳಕ್ಕೊಂಡೇ, ಅಟ್ಟಕ್ಕೆ ನಿಲ್ಸಿದ ಬೆದುರ ಏಣಿಲಿ ದಡದಡನೆ ಇಳುದು ಕೆಳಾಣ ಮಣ್ಣ ನೆಲಲ್ಲಿ ಮುಂಡೆರಗಿ ಹಸೆಲಿ ಮನುಗಿದ ಮಗ ಸೊಸೆ ಪುಳ್ಳಿಯಕ್ಕಳ, ಈಚ್ಹೊಡೆಲಿ ಮಂಚಲ್ಲಿ ಮನುಗಿದ ಗೆಂಡನ, ಎಲ್ಲೋರನ್ನೂ ಬೊಬ್ಬೆ ಹಾಕಿ ಏಳ್ಸಿ, ಹೋ ಕಿಚ್ಚು, ಕಿಚ್ಚು!ಹೇಳಿಗೊಂಡೇ ಕೊಟ್ಟಗೆಯ ಮಡಲ ತಟ್ಟಿಯ ಬಾಗಿಲ ಪಡಿಯ ನೂಕಿಗೊಂಡೇ ಮಗಳನ್ನೂ ಎಳಕ್ಕೊಂಡು ಹೆರ ಓಡಿದ° ಪರಮತ್ತೆ. ನಾಯಿಗೊ ಕೊರದರೂ ಎಚ್ಚರಿಕೆ ಆಗದ್ದೊರು “ಗಡಿಬಿಡಿ ಗಲಾಟೆ ಎಂತದು” ಹೇಳಿ ಕಣ್ಣೊಡದೋರಿಂಗೆ ಕಂಡದು ಮಾಡ ಕೊಬಳಿಂದ ಕಿಚ್ಚು ಹಿಡುದು ಹೊಟ್ಟಿಗೊಂಡು ಬೀಳುವ ಸೋಗೆಯ ಕೊಳ್ಳಿಗೊ. ಆ ಕ್ಷಣವೇ ಕೊಟ್ಟಗೆಯ ಒಳ ಪೂರ್ತಿ ಹೊಗೆ ತುಂಬಿ ಕಣ್ಣು ಕುರುಡಾದ ಹಾಂಗಾತು ಎಲ್ಲೋರಿಂಗೂ. ಮನುಗುವಾಗ ಸಣ್ಣಕ್ಕೆ ಹೊತ್ಸಿ ಮಡುಗಿದ ಲಾಟಾನಿನ ಬೆಣ್ಚಿ ಮಸ್ಕಾಗಿ ಕಂಡುಗೊಂಡಿತ್ತು.

ಧಿಗ್ಗನೇ ಎದ್ದ ರಾಮಣ್ಣ ಎಲ್ಲೋರನ್ನೂ ಎಳಕ್ಕೊಂಡು ತಳ್ಳಿಗೊಂಡು ಜಾಲಿಂಗೆ ಹಾರಿದ°. ಮನೆ ಮಕ್ಕೊ ಎಲ್ಲ ಇದ್ದವೋ ಇಲ್ಲೆ ಎಲ್ಯಾರೂ ಒಳ ಒಳುದ್ದವೋ ಹೇಳಿ ನೋಡಿಗೊಂಡು ಆ ದೇವರಿಂಗೆ ಕೈಮುಗುದ°. ಆಚಕೋಡಿಯ ಮಾಳಲಿಪ್ಪ ಆಳುಗಳ ಅಲ್ಲಿಂದಲೇ ಕೂಕ್ಳುಹಾಕಿ, ಬೊಬ್ಬೆ ಹೊಡದು ಎಬ್ಬುಸಿದ°. ಕಟ್ಟಿಹಾಕಿದ ನಾಯಿಗೊ ಕೊರಳ ಸಂಕೋಲೆಯ ಎಳಕ್ಕೊಂಡು ಬಿಡ್ಸಿಗೊಂಬಲೆ ಹಾರಿಕೊಣಿವದು, ಗುಡ್ಡೆಯ ಹೊಡೆಂಗೆ ನೋಡಿಗೊಂಡು ಕೊರವದು ಎಲ್ಲ ನೋಡುವಾಗ ರಾಮಣ್ಣಂಗೆ ದಿಗ್ಭ್ರಮೆ ಆತು. ಈಚ್ಹೊಡೆಲಿ ಅಷ್ಟು ದೊಡ್ಡ ಕೊಟ್ಟಗೆ ಹೊತ್ತುತ್ತಾ ಇದ್ದು, ಅದರ ಜ್ವಾಲೆ, ಹೊಗೆ, ಅಡಕ್ಕೆ ಮರದಷ್ಟೆತ್ತರಕ್ಕೆ ಹಾರಿಗೊಂಡಿತ್ತು. ಮನೆಜೆನ ಎಲ್ಲೋರ ರೋದನ ಅರೆಬ್ಬಾಯಿ ಭೂಮಿ ಆಕಾಶ ಒಂದೂ ಕಾಣದ್ದ ಹಾಂಗೆ ಅವನ ಎದೆ ಒಡವ ಹಾಂಗಾವುತ್ತಾ ಇತ್ತು. ರಾಮಣ್ಣ ಒಂದು ಕ್ಷಣ ನಡುಗಿ ಹೋದ°. ಮತ್ತೆ ಮನಸ್ಸಿಲ್ಲಿ ತನ್ನ ತಾನೇ ತಾಂಗಿಗೊಂಡು ಮುಂದೆ ಎಂತ ಮಾಡ್ಳಕು? ದಾರಿ ಯಾವುದು? ಆಕಾಶ ನೋಡಿಗೊಂಡು ದೈರ್ಯ ತಂದುಗೊಂಬಲೆ ಪ್ರಯತ್ನ ಮಾಡ್ತಾ ಹೋದ°. ಹೆಂಡತಿ ಮಕ್ಕೊ ಕೂಗಿ ಕೂಗಿ ಜಾಲ್ಲಿ ಬಿದ್ದೇ ಹೋಗಿತ್ತಿದ್ದವು. ಕೊಟ್ಟಗೆಯ ಸೋಗೆ ಸಲಕ್ಕೆಗೊ ಎಲ್ಲವೂ ಇನ್ನುದೇ ಧಗಧಗನೆ ಹೊತ್ತಿಗೊಂಡೇ ಇತ್ತು. ನಂದುಸುವ ದಾರಿ ಯಾವದೂ ಇಲ್ಲೆ, ನೋಡಿಗೊಂಡೇ ದೂರಲ್ಲಿರೆಕಷ್ಟೆ. ಹೆರಾಣ ಕಿಚ್ಚಿಂದಲೂ ಭಯಂಕರವಾದ ಕಿಚ್ಚು ಎಲ್ಲೋರ ಹೊಟ್ಟೆಯ ಸುಡುತ್ತಾ ಇತ್ತು.

***

(ಈ ಸತ್ಯ ಕಥೆಗೆ ಇಂದಿಂದ ಎಪ್ಪತ್ತೆರಡು ವರ್ಷ ಹಿಂದಂಗೆ ಹೋಯೆಕ್ಕು)

ರಾಮಣ್ಣ ಮಾವಂಗೆ ಹೆರಿಯೋರ ಆಸ್ತಿ ಪಾಲಪ್ಪಗ ಸಿಕ್ಕಿದ್ದು ಎಲ್ಲೋರು ಒಟ್ಟಿಂಗಿಪ್ಪಾಗ ಇದ್ದ ನೂರೈವತ್ತು ವರ್ಷ ಹಿಂದಾಣ ಹಳೆಮನೆ, ಸೋಗೆ ಮಾಡಿಂದು.ಮತ್ತೆ ಅದಕ್ಕೆ ಸೇರಿಗೊಂಡಿಪ್ಪ ಮೂರು ಎಕ್ರೆ ಅಡಕ್ಕೆ ತೋಟ, ಒಂದು ರಜ ಬೆಟ್ಟುಗದ್ದೆ. ಆದರೆ ರಾಮಣ್ಣ ಮಾವ ಕಟ್ಟುನಿಟ್ಟಿನ ಕೃಷಿಕ. ಯಾವ್ಯಾವ ಸಮಯಕ್ಕೆ ಎಂತೆಂಥ ಕೆಲಸ ಆಯೆಕ್ಕೋ ಅದರ ಕ್ರಮ ಪ್ರಕಾರ ಮಾಡುವ ಮನುಷ್ಯ°. ನಾಳೆ ಮಾಡಿದರಾತು ಹೇಳುವ ಸ್ವಭಾವವೇ ಅವಂದಲ್ಲ. ಆಳುಗೊ ಬಾರದ್ದರೆ ತಾನೇ ಸ್ವತಃ ಕೆಲಸ ಮಾಡುತ್ತ°. ಹತ್ತು ಹದಿನೆಂಟು ವರ್ಷ ಒಳ್ಳೆ ಬಂಙ ಬಂದು ಸಂಪಾದನೆ ಮಾಡಿತ್ತಿದ್ದ°. ತನ್ನ ಐದಾರು ಮಕ್ಕೊ ಸೊಸೆಯಕ್ಕೊ ಪುಳ್ಳಿಯಕ್ಕೊ ಹೇಳಿ ಸಂಸಾರ ವೃದ್ಧಿ ಆವುತ್ತಾ ಇಪ್ಪಾಗ ಈ ಹಳೇ ಸೋಗೆಮನೆಲಿ ಇಪ್ಪದು ಹೇಂಗೆ? “ಏನೇ ಆದರೂ ಒಂದು ಚೆಂದದ ಮನೆ ಕಟ್ಟೆಕ್ಕು” ಹೀಂಗೆ ಮನಸ್ಸಿಲಿಯೇ ಯೋಚನೆ ಮಾಡಿಗೊಂಡಿತ್ತಿದ್ದ°. ಅದೊಂದು ದಿನ ಅವನ ಯೋಚನೆಗೆ ಬಲ ಬಪ್ಪ ಹಾಂಗೆ ಒಂದು ಪೀಠಿಕೆ ತಾನಾಗಿಯೇ ಬಂತು. ಅದು ಅದೃಷ್ಟವೋ ದುರಾದೃಷ್ಟವೋ ಗೊಂತಿಲ್ಲೆ ಅವಂಗೆ. ಮನೆ ಹಿಂದೆ ತೋಟದ ಕರೆಲಿಪ್ಪ ಸೋಗೆಮಾಡಿನ ಅಬ್ಬಿಕೊಟ್ಟಗೆಗೆ ಕಿಚ್ಚು ಹಿಡುದು ಭಸ್ಮ ಆಗಿ ಹೋತು. ಅದು ಕೂಡ ಕಿಚ್ಚು ಹಿಡುದ್ದು ನಟ ಮಧ್ಯಾಹ್ನ ಅಪ್ಪಗ. ಹೇಂಗೆ ಹೇಳಿಯೂ ಗೊಂತಾಯಿದಿಲ್ಲೆ. ಹೀಂಗಿಪ್ಪಾಗ ಇನ್ನು ಮೇಲೆ ಈ ಸೋಗೆ ಮನೆಲಿಪ್ಪಲಾಗ ಹೇಳಿ ನಿಶ್ಚಯ ಮಾಡಿಗೊಂಡ ರಾಮಣ್ಣ ಮಾವ°. ತನ್ನದೇ   ಆಸ್ತಿಯ ಕಾಪಿಕಾಡು, ತೋಟದ ಹೆರಸುತ್ತಿಲಿದ್ದ ಹಳೆ ಬೆಳದ ಹಲಸು, ತೆಕ್ಕು, ಕಲ್ಬಾಜೆ, ಬೀಟಿ ಮರಂಗಳ ಕಡಿಶಿ ಆಚಾರಿಗಳ ಬಪ್ಪಲೆ ಹೇಳಿ ಮನೆಗೆ ಬೇಕಾದ ಎಲ್ಲಾ ಮರದ ಸಾಮಾನುಗೊ, ಪಕಾಸು, ರೀಪು, ಬಾಜಿರ ಕಂಬ ಇತ್ಯಾದಿ ಎಲ್ಲವನ್ನೂ ಅಣಿಮಾಡಿಗೊಂಡು ಅವು ಬೆಶಿಲು ಬಿದ್ದು ಬಿರುಕು ಬೀಳದ್ದ ಹಾಂಗೆ ದೊಡ್ಡಮಟ್ಟಿನ ಕೊಟ್ಟಗೆ ಕಟ್ಟಿಸಿದ°. ಒಂದು ಹೊಡೆಲಿ ಮನೆಯೋರಿಂಗೆಲ್ಲ ಇಪ್ಪಲೆ, ಮನುಗಲೆ ಜಾಗೆ ಸಿಕ್ಕುವ ಹಾಂಗೆ ಅಡಕ್ಕೆ ಸಲಕ್ಕೆಗಳ ಸೇರಿಸಿ ಅಟ್ಟವನ್ನೂ ಕಟ್ಟಿದ. ಅಡಿಗೆ ಮಾಡುಲೆ ಮದಲಾಣದ್ದೇ ಕೊಟ್ಟಗೆ ಇತ್ತು-ದೊಡ್ಡ ಅಡಿಗೆಗೆ ಹೇಳಿ ಮಾಡಿ ಮಡಿಕ್ಕೊಂಡಿದ್ದಂಥದ್ದು. ಹೀಂಗೆ ಎಲ್ಲ ಅಟ್ಟಣೆ ಮಾಡಿಗೊಂಡು ಮನೆಯ ಬಿಚ್ಚಿಸಿ ಅದೇ ಜಾಗೆಲಿ ಭಧ್ರವಾದ ಪಂಚಾಂಗಕ್ಕೆ ಪಾಯ ತೋಡಿ ಕಡ್ಪಕಲ್ಲಿಲ್ಲಿ ಕಟ್ಟಿ, ಗೋಡೆಯ ಮುರ ಕಲ್ಲಿಲಿ ಕಟ್ಟುವ ಏರ್ಪಾಡು ಮಾಡಿದ°. ಇನ್ನೂ ಮುಂದೆ ಹೋಗಿ ಶಿಲೆ ಕಲ್ಲಿನ ಕಂಬದ ಮುಖಮಂಟಪ ಮಾಡೆಕ್ಕು ಹೇಳಿ ಕಂಬಂಗಳ ಕೆತ್ತಿಸಿಯೂ ಆಗಿತ್ತು. ನಾಳೆ ಗೋಡೆ ಸುರು ಮಾಡುದು ಹೇಳಿ ಗಾರೆಕೆಲಸದೋರ ಬಪ್ಪಲೆ ಹೇಳಿಯೂ ಆಗಿತ್ತು.  ರಾಮಣ್ಣನ ಮನಸ್ಸಿಲಿ ತಿರುಗುತ್ತಾ ಇದ್ದ ವಿಷಯ ಒಂದೇ. ಮುಂದಾಣ ದಾರಿ ಯಾವದು? ಹೇಂಗೆ?. ಇದೇ ಯೋಚನೆ ಮಾಡ್ತಾ ಮಾಡ್ತಾ ಮೂಡ ಬಾನ ಕೆಂಪಾತು. ಸೂರ್ಯ ಮೂಡಿಗೊಂಡು ಬಂದ ಹಾಂಗೆ ರಾಮಣ್ಣ ಮಾವನ ಮನಸ್ಸಿಂಗೆ ಕವಿದ ಕಸ್ತಲೆ ಹೋಗಿ ಬೆಣ್ಚಿ ಆತು. ಇದು ದೇವರು ಎನಗೆ ಕೊಟ್ಟ ಪಂಥಾಹ್ವಾನ! ಸಂಶಯವೇ ಇಲ್ಲೆ. ಇದರಲ್ಲಿ ಆನು ಗೆಲ್ಲಲೇ ಬೇಕು. ಕೂಗಿ ಕೂಗಿ ಕಕ್ಕುಬೆಕ್ಕಾಗಿ ಕೂದುಗೊಂಡ ಮಕ್ಕಳ ಹತ್ತರಂಗೆ ಹೋಗಿ ಹೆಂಡತಿಯನ್ನೂ ದಿನಿಗೇಳಿದ°. ಸೊಸೆ ಪುಳ್ಳಿಯಕ್ಕಳನ್ನೂ ಹತ್ತರೆ ಕೂರ್ಸಿಗೊಂಡ°. “ಮಕ್ಕಳೇ ನಾವೆಲ್ಲರೂ ಬದ್ಕಿ ಒಳುದ್ದೇ ನಮ್ಮ ಪುಣ್ಯ. ಇನ್ನು ಮನೆ ಕಟ್ಟುವ ಮರದ ಸಾಮಾನುಗೊ ಮಾಂತ್ರ ಹೊತ್ತಿ ಹೋದ್ದಲ್ಲದಾ? ತೋಟ ಹೊತ್ತಿದ್ದಾ? ಹಾಂಗೆಲ್ಯಾರೂ ಆವುತ್ತಿದ್ದರೆ ಅನು ಸೋಲುತ್ತಿದ್ದೆ. ಇಂದು ಕಳಕ್ಕೊಂಡದರ ಎಲ್ಲಾ ಇನ್ನೊಂದರಿ ಸಂಪಾದ್ಸುವ°, ನಿಂಗೊ ಆರೂ ಹೆದರುವದು ಬೇಡ” ಹೀಂಗೆ ಇಲ್ಲೋರನ್ನೂ ಸಮಾಧಾನ ಮಾಡಿಕ್ಕಿ- “ಹೋಗಿ ನಿಂಗಳ ನಿಂಗಳ ನಿತ್ಯಾಣ ಕೆಲಸ ಮಾಡಿ. ಊಟ ತಿಂಡಿ ಎಲ್ಲಾ ಯಥಾಪ್ರಕಾರ ಆಗಲಿ. ಅಲ್ಲಿ ಹಳೆ ಅಡಿಗೆ ಕೊಟ್ಟಗೆಲಿ ಅಳಗೆಗೊ ಎಲ್ಲ ಇಕ್ಕು” ಹೇಳಿದ°. ಆಳುಗೊಕ್ಕೂ ಆಯೆಕ್ಕಾದ ಕೆಲಸಕ್ಕೆ ಬಪ್ಪಲೆ ಹೇಳಿದ°. “ಏನೂ ಆಯಿದಿಲ್ಲೆ” ಹೇಳುವ ಹಾಂಗೆ.

ಕೊಟ್ಟಗೆಯ ಕಿಚ್ಚು ಸಾಮಾನ್ಯದ್ದೇ? ಅಂಥಾ ಘೋರ ಅಗ್ನಿಕಾಂಡವ ನೋಡಿದೊರ ಪಾಡೆಂಥದು? ಬರೀ ಕೊಟ್ಟಗೆ ಸುಟ್ಟದಾಗಿದ್ದರೆ ಅದೊಂದು ದೊಡ್ಡ ವಿಷಯವೇ ಅಲ್ಲ. ಸುಮಾರು ಮೂವತ್ತು ನಲುವತ್ತು ಟನ್ನಿನಷ್ಟು ಜಾತಿವಾರು ಮರದ ಎಲ್ಲ ಪರಿಕರಂಗೊ, ಮಾಡಿನ ಪಕ್ಕಾಸು, ರೀಪು, ಅಡ್ಡ ಎಲ್ಲವೂ ಸುಟ್ಟು ಬೂದಿಯಾದ್ದು ಮಾಂತ್ರ ಅಲ್ಲ, ಆ ಮಹಾ ಅಗ್ನಿಯ ರವಿ ತಾಗಿ ಮುಖಮಂಟಪಕ್ಕೆ ಹೇಳಿ ಕೆತ್ತಿಸಿ ಮಡಿಗಿದ ಕಲ್ಲಿನ ಕಂಬಂಗೊ ಕೂಡಾ ಒಳುದ್ದಿಲ್ಲೆ. ನಾಲ್ಕು ಕಂಬಂಗೊ ಲಠಲಠನೆ ಹೊಟ್ಟಿ ಸೆಡುದು ತುಂಡಾಗಿ ಬಿದ್ದು ಹೋದವು. ಇಂಥ ಅನಾಹುತಲ್ಲಿಯೂ ಶಾಂತವಾಗಿ ಯೋಚನೆ ಮಾಡುವ, ಮುಂದಾಣ ಕೆಲಸಕ್ಕೆ ಹೆಗಲುಗೊಡುವ ಧೈರ್ಯ ಸ್ಥೈರ್ಯ ಎಷ್ಟು ಜನಕ್ಕೆ ಇಕ್ಕು? ಹದಿನೆಂಟು ವರ್ಷದ ಅವನ ಕಷ್ಟಾರ್ಜಿತ ಕಣ್ಣೆದುರೇ ಹೋಮ ಆಗಿ ಹೋಗಿಪ್ಪಾಗ?

ರಾಮಣ್ಣ ಹುಟ್ಟಿಂದಲೇ ಸಾಹಸಿ. ಹಾಂಗೇ ಶರೀರ ಬಲವೂ, ಆರಡಿಯ ಒಡ್ಡಾರದ ದೇಹಕ್ಕೆ ಸರಿಯಾದ ಆಜಾನುಬಾಹು, ಎತ್ತರಕ್ಕೆ ಸರಿಯಾದ ಅಗಲ ತೆಗಲೆ, ದೊಡ್ಡ ಮೋರೆ. ಆದರೆ ಯಾವಗಲೂ ಮಂದಹಾಸ. ಅರಶಿನ ಬೆಳಿ ಮೈ ಬಣ್ಣ. ನೋಡಿದರೇ ಗೌರವ ಹುಟ್ಟುವಂಥಾ ವ್ಯಕ್ತಿತ್ವ, ಹಿಡುದ ಕೆಲಸವ ಎಂದಿಂಗೂ ಪೂರ್ಣ ಆಗದ್ದೆ ನಿಲ್ಸದ್ದ ಹಠಯೋಗ.

ಕಿಚ್ಚು ತಣ್ಕೊಂಡು ಬಪ್ಪಗ ಅಡಕ್ಕೆ ಮರದ ಸಲಕ್ಕೆ ಹಾಕಿ ಒಕ್ಕಿ ಒಕ್ಕಿ ನೋಡುವಾಗ, ಅರ್ಧಕರಗಿದ ಕರಜನ, ಅದರೊಳ ಚಿನ್ನಾಭರಣಂಗೊ, ಕರಗಿ “ಞಕ್ಕುಞಕ್ಕಾದ ಪಾತ್ರಂಗೊ,ಕಠಾರ, ಸುಳಿಮರಿಗೆ, ಕವಂಗಂಗೊ, ಎಲ್ಲವನ್ನೂ ಹೆರ ತೆಗದ°. ಕರಗಿ ಹೋದರೂ ಚಿನ್ನಕ್ಕೆ ಕ್ರಯ ಇದ್ದನ್ನೆ? ಅದನ್ನೇ ಭಂಡವಾಳ ಮಾಡಿ, ಹೊಸ ಮೋಪು ಖರೀದಿ ಮಾಡಿ ತೆಕ್ಕೊಂಡು ಬಂದೂ ಆತು. ಆಚಾರಿಗಳ ಕರೆಶಿ ಬೇಕಾದ್ದರೆಲ್ಲ ಮದಲಾಣ ಹಾಂಗೆ ಮಾಡುಲೆ ಹೇಳಿಯೂ ಆತು. ಒಂದು ವರ್ಷಂದೊಳ ಮನೆ ಕಟ್ಟಿ ಒಕ್ಕಲು ಕೂಡ ಮಾಡ್ಸಿ ಬಿಟ್ಟ°. ಮುಖಮಂಟಪ ಮಾಂತ್ರ ಇಲ್ಲೆ. ಮನೆಯ ಜಾಲಕರೆಲಿ ತುಂಡಾಗಿ ಬಿದ್ದ ಕಲ್ಲಿನ ಕಂಬಂಗೊ ನಡದು ಹೋದ ಅಗ್ನಿದುರಂತಕ್ಕೆ ಸಾಕ್ಷಿಹೇಳುವ ಹಾಂಗೆ ಕಂಡುಗೊಂಡಿತ್ತು! ಮಂಟಪದ ಕನಸು ಕನಸಾಗಿಯೇ ಒಳುದು ಹೋತು.

ಈ ದುರಂತ ಮಾವನ ಧೈರ್ಯ ಸಾಹಸಕ್ಕೆ ಒರೆಗಲ್ಲಿನ ಹಾಂಗಾತು. ಅವನ ಪಾಲಿಂಗೆ ಬಂದ ಅಡಕ್ಕೆ ತೋಟಕ್ಕೆ ಬೇಸಗೆಲಿ ಪ್ರತಿವರ್ಷವೂ ನೀರಿಂಗೆ ತತ್ವಾರ. ಇದಕ್ಕೆಂತ ಪರಿಹಾರ ಹೇಳಿ ತಲೆಕೆಡುಸಿಗೊಂಡಿಪ್ಪಾಗ ಒಂದು ಒಳ್ಳೆ ಸುದ್ದಿ ಸಿಕ್ಕಿತ್ತು. ಮಂಜೇಶ್ವರ, ಕುರ್ಚಿಪಳ್ಳದ ಹೊಡೆಲಿ ಗುಡ್ಡಗೆ ಸುರಂಗ ಕೊರದು ತಗ್ಗಿಲ್ಲಿಪ್ಪ ತೋಟ ಗೆದ್ದೆಗೊಕ್ಕೆ ನೀರು ಹರಿಶುತ್ತಾ ಇದ್ದವು. ಏಕೆ ನಾವೂ ಹಾಂಗೆ ಮಾಡ್ಲಾಗ? ಇದು ಹೊಸ ವಿಶಯ ಆದ ಕಾರಣ ಆ ಊರಿಂದಲೇ ಸುರಂಗ ಕೊರವವರ ಕರೆಶಿ ಅವನ ತೋಟದ ತೆಂಕ, ಪಡುವ ದಿಕ್ಕುಗಳಲ್ಲಿಪ್ಪ ಗುಡ್ಡಗೊಕ್ಕೆ ಸುರಂಗ ಹಾಕಿಸಿದ°. ಒಂದು ಸುರಂಗ ಮನೆಯ ಕುರುಬಾಗಿಲ ಹೊಡೆಲಿದ್ದ ಕಾರಣ ಮನೆಯ ನಿತ್ಯಾಣ ಖರ್ಚಿಂಗೆ, ಪಾತ್ರ, ಮೀಯಾಣ ಇತ್ಯಾದಿಗೊಕ್ಕೆ ಸರಾಗ ನೀರು ಹರುದು ಬಪ್ಪ ಹಾಂಗಾತು. ಹೆಚ್ಚಾದ ನೀರಿಲ್ಲಿ ಬೆಟ್ಟುಗೆದ್ದೆಗಳಲ್ಲಿ ಎರಡು ಬೆಳೆ ತೆಗವಲೂ ನೀರು ಸಿಕ್ಕಿತ್ತು. ತೋಟದ ಹೊಡೆಲಿಪ್ಪ ಎರಡು ಸುರಂಗಂಗಳ ನೀರಿಲಿ ತೋಟದ ಓಳಿ ಓಳಿಗೊಕ್ಕೆ ನೀರು ಹರುದು ಬಂತು. ಹೆಚ್ಚಾದ ನೀರಿನ ಅಡಕ್ಕೆ ಮರದ ದಂಬೆ ಮಡುಗಿ ಕೆರೆಗೆ ಒಡ್ಡುವ ಹಾಂಗೆ ಮಾಡಿದ°. ಕೆರೆಯನ್ನೂ ದೊಡ್ಡ ಮಾಡ್ಸಿ ತೋಟಕ್ಕೆ ನೀರಿನ ಸಮೃಧ್ಧಿ ಆತು. ಆ ಮೇಲೆ ನೋಡೆಕ್ಕಾ? ಬೊಂಡ, ತೆಂಗಿನಕಾಯಿ, ಅಡಕ್ಕೆ, ಮಾವು, ಹಲಸು, ದೀವುಗುಜ್ಜೆ, ಪೇರಳೆ, ಎಲ್ಲವೂ ಎಕ್ಕಸಕ್ಕ ಅಪ್ಪಲೆ ಸುರು ಆತು. ಹೀಂಗೆ ತೋಟದ ಉತ್ಪತ್ತಿ ಇಮ್ಮಡಿ ಆತು. ನಾಲ್ಕು ಕಾಸೂ ಕೈಸೇರುತ್ತಾ ಬಂತು.

***

ಲೋಕಲ್ಲಿ ಒಬ್ಬ ಒಳ್ಳೆತ ಏಳಿಗೆ ಆದರೆ ಆಚೀಚಾಣೋರಿಂಗೆ ಕಣ್ಣು ಕೆಂಪಪ್ಪದಿದ್ದು. ರಾಮಣ್ಣನ ಮನೆ ಕಟ್ಟುವ ಸನ್ನಾಯಂಗಳ ನೋಡಿ ಅಂತೂ ಹೊಟ್ಟೆ ಉರುಕ್ಕೊಂಡೊರು ಕೆಲವು ಜೆನ. ಹೀಂಗಿಪ್ಪಾಗ ಮಾಡ ಕೊಬಳಿಂಗೇ ಹೇಂಗೆ ಕಿಚ್ಚು ಹಿಡ್ತು? ಇದು ಮನೆಯೋರೆಲ್ಲೋರ ಹೊಟ್ಟೆ ಒಳಂದವೇ ಹೆರಟ ಪ್ರಶ್ನೆ. ಕೊಟ್ಟಗೆ ಅಡಕ್ಕೆ ಜಾಲ ಕರೆಲಿ ಕಟ್ಟಿದ್ದರೂ, ಅದರ ಹಿಂದಾಣ ಹೊಡೆಲಿಪ್ಪದು ಮನೆಂದ ಎತ್ತರದ ಮುಳಿಗುಡ್ಡೆ. ನಾಲ್ಕು ಬೀಜದ ಮರಂಗೊ. ಒಂದು ಕಾಲ್ದಾರಿಯೂ ಇದ್ದು. ಊರೋರಿಂಗೆಲ್ಲಾ ಅತ್ತಿತ್ತೆ ಹೋಪಲಿಪ್ಪ ದಾರಿ. ನಡಿರುಳು ಆ ದಾರಿಲಿ ಹೋಯೆಕ್ಕಾಗಿ ಬಂದ ಪ್ರಸಂಗ ಎಂತದಾದಿಕ್ಕು? ನಾಯಿಗೊ ಆಚೊಂಡೆಗೆ ನೋಡಿಗೊಂಡು ಕೊರದ್ದೆಂತಗೆ? ಬೀಡಿ ಎಳವಲೆ ಕಡ್ಡಿ ಗೀರಿ ಆರಾದರೂ ಗೊಂತಿಲ್ಲದ್ದೆ ಪರಮೋಶಲ್ಲಿ ಕೊಟ್ಟಗೆಯ ಹೊಡೆಂಗೆ ಇಡ್ಕಿಕ್ಕಾ? ಅಥವಾ ಹೊತ್ತಿ ಮುಗುದ ಸೂಟೆಯ ಇಡ್ಕಿದವೋ? ಬೇಸಗೆಲಿ ಮುಳಿಗುಡ್ಡಗೆ ಬೇಕು ಹೇಳಿಯೇ ಕಿಚ್ಚು ಕೊಡುವ ಕ್ರಮ ಇದ್ದು ಕೆಲವರಿಂಗೆ. ಆದರೆ ಈ ಮುಳಿಗುಡ್ಡಗೆ ಯಾವ ಮಾರಿಯೂ ಬಡ್ದಿಲ್ಲೆ. ಹೀಂಗಿಪ್ಪಗ ಇದು ಆರಿಂದೋ ಕಾರಸ್ಥಾನವೋ….? ಹೀಂಗೆ ಏನೇನೋ ಆಲೋಚನೆ, ಸಂಶಯ ಬಪ್ಪದರಲ್ಲಿ ಆಶ್ಚರ್ಯ ಇಲ್ಲೆ ಅಲ್ಲದಾ? ಆದರೆ “ಹೀಂಗೆ ಮನಸ್ಸಿನ ನೆಮ್ಮದಿ ಕೆಡಿಸಿಗೊಂಬ ಸಂಶಯದ ಸುಳಿಗುಂಡಿಗೆ ನಾವೆಂತಕೆ ಬೀಳೆಕ್ಕು? ಕಳುದು ಹೋದ್ದು ವಾಪಾಸು ಬತ್ತೋ? ಅವನೇ ಕೊಟ್ಟ ಅವನೇ ತೆಕ್ಕೊಂಡ, ಎಲ್ಲಾ ಅವನಿಚ್ಛೆ” ಹೇಳಿ ಗ್ರೆಶಿಗೊಂಡು ಅತ್ತೆ ಮಾವ ಕೆಲಸವೇ ಮುಖ್ಯ ಹೇಳಿಗೊಂಡಿತ್ತಿದ್ದವು. ಅವು ನಂಬಿದ ತೋಟವೇ ಅವರ ಎಲ್ಲಾ ಕಷ್ಟ ನಷ್ಟಂಗಳ ಹೂಗೆತ್ತಿದ ಹಾಂಗೆ ಹಗುರ ಮಾಡಿ ಬಿಟ್ಟತ್ತು. ನೆಂಟ್ರಿಷ್ಟ್ರು ಮನೆಗೆ ಬಪ್ಪದು ಹೋಪದು ಇದ್ದೇ ಇರ್ತು. ಅವರೆಲ್ಲೊರಿಂಗೆ ತಕ್ಕ ಊಟೋಪಚಾರ ಮರ್ಯಾದೆ ಮಾಡಿ ಕಳ್ಸುದು. ಮಕ್ಕಳ ಮದುವೆ, ಉಪನಯನ ಎಲ್ಲವನ್ನುದೆ ಒಂದಿಷ್ಟು ಕೊರತೆ ಆಗದ್ದ ಹಾಂಗೆ –ಆದರೆ ದುಂದುಗಾರಿಕೆ ಮಾಡದ್ದೆ – ನಡೆಶಿಗೊಂಡು ಬಂದ. ಮನೆದೇವರಿಂಗೆ ಎರಡು ಹೊತ್ತು ಪೂಜೆ, ನೈವೇದ್ಯ, ಅಮ್ಮನೋರ ಪೂಜೆ, ಶುಕ್ರವಾರ ಇರುಳು ಕಿಸ್ಕಾರದ ಮಂತ್ರ ಪುಷ್ಪಾರ್ಚನೆ, ಹಾಲು ಪರಮಾನ್ನದ ನೈವೇದ್ಯ ಇವನ್ನೆಲ್ಲಾ ಶ್ರದ್ಧಾ ಭಕ್ತಿಲಿ ಕಡೆವರೆಗೂ ಮಾಡಿಗೊಂಡು ಬಯಿಂದ. ಕೂಸುಗಳನ್ನೂ ಮಾಣಿಯಂಗಳನ್ನೂ ಒಂದೇ ತರ ಪ್ರೀತಿಲಿ ನೋಡಿಗೊಂಡೊರು ಅತ್ತೆ ಮಾವ°.

ರಾಮಣ್ಣ ಮಾವ –ಈಗಾಣೊರ ಭಾಷೆಲಿ ಹೇಳ್ತರೆ- ಕ್ರೀಡಾ ಮನೋಭಾವ ಇಪ್ಪೊನು. ಶಕ್ತಿ, ಸಾಹಸಪ್ರದರ್ಶನ ಇವಂಗೆ ಕುಶಿಕೊಡುವ ಸಾಧನಂಗೊ. ಅವರ ಮಗಳಕ್ಕಳೂ ಮಗಂದ್ರೂ ಅದೇ ಅಭ್ಯಾಸದೊರು. ನಮ್ಮ ದಕ್ಷಿಣ ಕನ್ನಡಲ್ಲಿ ಎಲ್ಲೆಲ್ಲಿವುದೇ ಗುಡ್ಡೆ, ಗಂಡಿ, ಗಣ್ವೆ (ಕಣಿವೆ) ಎಲ್ಲಿಗೆ ಹೋಯೆಕ್ಕಾದರೂ ಹತ್ತಿ ಇಳುದು, ಹತ್ತಿ ಇಳುದೇ ಹೋಯೆಕ್ಕಷ್ಟೆ. ಮದಲಿಂಗೆ ಬಸ್ಸು ಹೋಪ ಒಂದೇ ಒಂದು ಮಾರ್ಗ ಬಿಟ್ಟರೆ ಮತ್ತೆಲ್ಲಾ ಹೀಂಗಿಪ್ಪ ಕಾಲ್ದಾರಿಗಳೇ. ಮತ್ತೆ ಕೃಷಿಕರಿಂಗೆ “ ಇಳುದು ಹತ್ತಿ ಮಾಡದ್ದೆ ಯಾವ ಕೆಲಸವೂ ಆಗ. ಹೀಂಗಿಪ್ಪ ಊರಿನ ಜೆನಂಗಳ ನಡುಗೆ ಮಾವನ ಹಾಂಗಿಪ್ಪೋರು ಬೆರಳಿಲಿ ಎಣಿಸುವಷ್ಟೂ ಸಿಕ್ಕವು.

ನಿಂಗೊ ಎಲ್ಲಾ ಅಕ್ಕಿಮುಡಿಯ, ಅಕ್ಕಿ ಮುಡಿ ಕಟ್ಟುದರ ಎಲ್ಲಾ ನೋಡಿದ್ದಿರೋ ಇಲ್ಲೆಯೋ? ಈಗಾಣೋರಂತೂ ಖಂಡಿತಾ ನೋಡಿರವು. ನಲುವತ್ತೆರಡು ಸೇರು ಅಥವಾ ನಲುವತ್ತೈದು ಸೇರೇ ಇಪ್ಪಂಥ ಅಕ್ಕಿಮುಡಿಯ  ಹೊರಳಿಸಿಗೊಂಡು ಉಗ್ರಾಣಂದ ಚಾವಡಿ ಬಾಗಿಲಿಂಗೆ ತಂದು ಮಡುಗಿದ°. ಎರಡು ಮೆಟ್ಳು ಕೆಳ ಇಳುದು ಮುಡಿಯ ಹಲ್ಲಿಲಿ ಕಚ್ಚಿ ನೆಗ್ಗಿದ°. ಎರಡೂ ಕೈಯ ಹಿಂದಂಗೆ ಕಟ್ಟಿಗೊಂಡು ಹತ್ತು ಅಂಕಣದ ಮನಗೆ ಹಲ್ಲಿಲಿ ಕಚ್ಚಿಗೊಂಡೇ ಒಂದು ಸುತ್ತು ಬಂದು ಪುನಃ ಅದೇ ಜಾಗೆಲಿ ಮಡುಗಿದ° ಹೊಸ್ತಿಲಿನ ಮೇಲೆ. ಅದರ ನೋಡಿಗೊಂಡಿದ್ದ ಅವನ ಅಬ್ಬೆ “ ಏ ಪರಮೇಶ್ವರೀ, ನೋಡಿಲ್ಲಿ, ನೋಡು ನಿನ್ನ ಗೆಂಡನ ಉಪ್ರಾಳಿ ಅವತಾರವ!. ಎಷ್ಟು ಸರ್ತಿ ಹೇಳಿ ಆತೆನಗೆ ಇವ° ಒಂದು ದಿನ ಹಲ್ಲು ಮುರ್ಕೊಂಬಲಿದ್ದು” (ಆದರೆ ಸಾವನ್ನಾರ ಮಾವಂಗೆ ಒಂದು ಹಲ್ಲೂ ಉದುರಿದ್ದಿಲ್ಲೆ) ಮತ್ತೊಂದು ದಿನ ಇಡೀ ತೆಂಗಿನಕಾಯಿಯ ಹಲ್ಲಿಲಿ ಕಚ್ಚಿ ಕಚ್ಚಿ ಸೊಲುದ°. ಅಬ್ಬೆ ಬೊಬ್ಬೆ ಹೊಡವಗ ನೆಗೆ ಮಾಡಿಗೊಂಡು ಆಚ ಹೊಡೆಂಗೆ ಹೋವ್ತಾ ಇರ್ತ°. ಇವನ ಮಗನೂ ಚಿಲ್ಲರೆ ಅಲ್ಲ. ಇದೇ ಆಟಂಗಳ ಆಡ್ತಾ ಇರ್ತ°. ಇಂಥಾ ಮಾವಂಗೆ ಅರುವತ್ತನೇ ವರ್ಷಲ್ಲಿ ಒಂದರಿ ಜ್ವರ ಬಂತೊಡ್ಡೊ. ಮಗ ಪಂಡಿತರಲ್ಲಿಗೆ ಹೋಗಿ ದಶಮೂಲಾರಿಷ್ಟ ತಂದನೊಡೊ. ಮಾವ ಎನಗೆಂತಕೆ ಮದ್ದು? ಹೇಳಿ ಗಲಾಟೆ ಮಾಡಿದ°. ಕಡೆಂಗೆ ಮಗನ ಒತ್ತಾಯಕ್ಕೆ ಒಂದು ’ಡೋಜ್” ಮದ್ದು ಕುಡುದ°. ಮರುದಿನ ಎಲ್ಲೋರು ಏಳೆಕ್ಕಾರೆ ಮದಲೆ ಉದೀಯಪ್ಪಗಳೇ ಎದ್ದಿಕ್ಕಿ ಜಾಲ ಕೋಡಿಲಿಪ್ಪ ತೆಂಗಿನ ಮರದ ಬುಡಕ್ಕೆ ಮದ್ದಿನ ಕುಪ್ಪಿಯ ಕವುಂಚಿಕ್ಕಿ ಖಾಲಿ ಕುಪ್ಪಿ ಹಿಡ್ಕೊಂಡು ಬಂದು ಅಲ್ಲಿ ಮಡುಗಿ ಕಣ್ಣು ಮುಚ್ಚಿ ಮನುಕ್ಕೊಂಡ°. ಇದರ ಎನಗೆ ಅವನ ಪುಳ್ಳಿಯೇ ಹೇಳಿದ್ದು.ಇಂಥ ಶೂರ ವೀರ ಸರದಾರ ಅಗ್ನಿಕಾಂಡವ ಒಂದು ಪಂಥ! ನೋಡಿಯೇ ಬಿಡುವೊ ಹೇಳಿ ಗ್ರೇಶಿದ್ದರಲ್ಲಿ ಆಶ್ಚರ್ಯ ಇದ್ದಾ? ಅವನ ಸಾಜವೇ ಹಾಂಗೆ.

ಯಾವುದಕ್ಕೂ ಹೆದರದ್ದ ಈ ಬಲಭೀಮಂಗೆ ಊಟವೂ ಹಾಂಗೇ ಇರೆಕ್ಕಲದಾ? ಹಲಸಿನ ಹಣ್ಣಿನ ಸಮಯಲ್ಲಿ ಸುಟ್ಟವು ಮಾಡಿ ತಿನ್ನದ್ದರೆ ಕಳಿಗಾ? ಒಂದು ಸಿಬ್ಲು ಕುರುವೆ ತುಂಬಾ ಮಾವನ ಬಾಳಗೆ ಸೊರುಗೆಕ್ಕು. ಹತ್ರಾಣ ಕಾಡಿಂದ ಸಂಗ್ರಹಿಸಿದ ಜೇನುತುಪ್ಪದ ಕುಪ್ಪಿಯ ಮಾವನ ಕೈಯ ಹತ್ತರೆ ಮಡುಗೆಕ್ಕು. ಸುಟ್ಟವಿನ ರಾಶಿಗೆ ಒಂದರ್ಧ ಕುಪ್ಪಿ ಜೇನು ಎರಕ್ಕೊಂಡರೆ ಸಾಕಕ್ಕು! ಇನ್ನು ಪೂಜೆ ಪುಣ್ಯಾಯಂಗಳಲ್ಲಿ ನೆಂಟ್ರಿಷ್ಟ್ರು ಬಂದಿಪ್ಪಾಗೆಲ್ಲ ಪರಮಾನ್ನ ಮಾಡದ್ದಿಪ್ಪ ಕ್ರಮ ಇದ್ದೊ? ಪರಮತ್ತೆ ಮಾವನ ರುಚಿ ಶುಚಿ ಎಲ್ಲ ತಿಳುದೊಳಲ್ಲದಾ? ಮಾವ ಉಂಬಲೆ ಕೂಪಗಳೇ ಒಂದು ಕೈಮರಿಗೆ ತುಂಬಾ ಅವನ ಕೈ ಹತ್ತರೇ ಮಡುಗುತ್ತ°. ನಿತ್ಯ ಕ್ರಮದ ತಾಳ್ಳು  ಸಾರು ಕೊದಿಲು ಮೇಲಾರ ಎಲ್ಲ ಇದ್ದೇ ಇರುತ್ತು. ಅದರ ಮೇಲೂ ಸಾಲದ್ದರೆ ಇರುವಾರ ಕೇಳಿಗೊಂಡು ಬಪ್ಪಗ ಇನ್ನೊಂದಷ್ಟು. ಇಷ್ಟೆಲ್ಲ ಉಂಡಿಕ್ಕಿ ಆರೇ ಆದರೂ ಗಡದ್ದಿಲಿ ಒಂದು ಒರಕ್ಕು ಒರಗದ್ದೇ ಇರ್ತವಾ? ಮಾವನ ಮರ್ಜಿ ಬೇರೆಯೇ. ಒಂದರೆಗಳಿಗೆ ಆರಾಮಕುರ್ಚಿಲಿ ಅಥವಾ ಸುಖಾಸನಲ್ಲಿ ಕೂದುಗೊಳ್ತ°. ಅತ್ತೆ ಅಲ್ಲಿಯೇ ಕೆಂಪು ಸಾರಣೆಯ ನೆಲಲ್ಲಿ ಕೂದುಗೊಂಡು ಎಲೆತಟ್ಟೆ ಮಡಿಕ್ಕೊಂಡು ಎಲಗೆ ಸುಣ್ಣ ಉದ್ದಿ ಅದರೊಳ ಅಡಕ್ಕೆ ಹೋಳು ಮಡುಗಿ ಕೊಡ್ತ°. ಅದರ ಬಾಯಿಗೆ ಹಾಯಿಕೊಳ್ತ°. ಮಗಳಕ್ಕಳಲ್ಲಿ ಆರಾರೊಬ್ಬ ಬಂದಿದ್ದರೆ ಅವರ ಹತ್ತರೆ, ಪುಳ್ಳಿಯಕ್ಕೊ ಇದ್ದರೆ ಅವರ ಹತ್ತರೆ ಎರಡು ಕೊಂಡಾಟದ ಮಾತಾಡಿಕ್ಕಿ ಕುರುಶಿಂದ ಏಳ್ತ°. ಮತ್ತೆ ಜೆಗುಲಿಗೆ ಇಳುದು ಆಳುಗೊ ಬಂದಾತೊ ನೋಡ್ತ°. ಅವಕ್ಕೂ ಎಲೆ ಅಡಕ್ಕೆ ಕೊಡ್ತ°. ಇಂಥಿಂಥಾ ಕೆಲಸಕ್ಕೆ ಹೋಪಲೆ ಹೇಳಿಕ್ಕಿ ಜಾಲಿಂಗೆ ಇಳುದರೆ ಮತ್ತೆ ಮನಬೆ ಬಪ್ಪದು ಹೊತ್ತು ಕಂತುಲಪ್ಪಗ.

ತೋಟಲ್ಲಿ ಸುರಂಗದ ನೀರು ಹೇಂಗೆ ಬತ್ತಾ ಇದ್ದು, ಎಲ್ಲ ಓಳಿಗೊಕ್ಕೂ ಹರುಕೊಂಡು ಹೋವುತ್ತಾ ಇದ್ದೋ? ಹೋಗದ್ದರೆ ಬಾಳೆಸರಂಬಿನ ಕಟ್ಟ ಮಡುಗಿ ತಡೆ ಹಾಕೆಕ್ಕು. ಅಷ್ಟಪ್ಪಗ ಮುಂದಾಣ ಓಳಿಗೆ ನೀರು ಹೋವುತ್ತು. ಕಣಿ ಹಾಳಾಗಿದ್ದರೆ ಕೊಟ್ಟು ಹಿಡ್ಕೊಂಡು ಕಣಿ ಕೆರಸೆಕ್ಕು. ಆಳುಗಳನ್ನೇ ಬಿಟ್ಟರೆ ಸರಿಯಾಗ. ಒಟ್ಟಿಂಗೆ ಇದ್ದರೆ ಮನಸ್ಸಿಂಗೆ ಸಮಾಧಾನ. ತೋಟದ ಕರೆಲಿಪ್ಪ ಮಾವಿನ ಮರಲ್ಲಿ ಮೆಡಿ ಕೊಯ್ವಲಾತೋ, ಇನ್ನೊಂದು ಮರ ಇಡಿಕ್ಕಾಯಿಗಪ್ಪಂಥಾದ್ದು ಅದು ಬೆಳವಲೆ ಇನ್ನೆರಡು ತಿಂಗಳು ಬೇಕಕ್ಕು. ಅಷ್ಟಪ್ಪಗ ಹೊಳೆಮಾವು ಕೊಯ್ವಲಾವುತ್ತು. ಎಲ್ಲ ನೋಡಿಗೊಂಡು ಬಂದರೆ ಈಚ ಹೊಡೆಲಿ ಇನ್ನೊಂದು ಸುರಂಗದ ನೀರು ಹೇಂಗೆ ಬತ್ತಾ ಇದ್ದು? ಅಡಕ್ಕೆ ಮರದ ದಂಬೆ ಕೆರೆಗೆ ಒಡ್ಡಿದ್ದು ಸರಿಯಾಗಿ ಇದ್ದೊ? ಅತ್ತಿತ್ತೆ ಎಲ್ಲೆಲ್ಯಾರು ನೀರು ಹರುದು ಹೋಪಲಾಗನ್ನೆ! ಇವೆಲ್ಲಾ ಮಾವನ ದಿನನಿತ್ಯದ ಕೆಲಸಂಗೊ. ಆಳುಗೊ ಕಮ್ಮಿ ಇದ್ದರೆ ತಾನೇ ಮಾಡುದು. ಕೊಟ್ಟು ಪಿಕ್ಕಾಸಿನ ಕೆಲಸ ಮಾವಂಗೆ ನೀರು ಕುಡುದ ಹಾಂಗೆ. ಇನ್ನು ಸೆಸಿ ಮರಂಗೊಕ್ಕೆ ಏನಾರೂ ತೋಗ ಬಯಿಂದೋ, ಅಂಬಟೆ ಹೂಗು ಹೋಯಿದೋ? ಮಕ್ಕಳನ್ನೂ ಒಟ್ಟಿಂಗೆ ಕರಕ್ಕೊಂಡು ಅವಕ್ಕೆ ಕೃಷಿಕೆಲಸದ ಅನುಭವಂಗಳ ಕಲಿಶಿಕೊಡುದು, ಮರಕ್ಕೆ ಹತ್ತುಸುದು, ಮಾವಿನ ಕಾಯಿ ಹಲಸಿನಕಾಯಿ ಕೊಯಿದು ಅದಕ್ಕೆ ಬಳ್ಳಿ ಕಟ್ಟಿ ಇಳುಶುದು,ಹೀಂಗೆ ಒದಲ್ಲದ್ದರೆ ಇನ್ನೊಂದು ಇದ್ದೇ ಇರ್ತು.

ಮನಗೆ ಬೇಕಾದ ಹಾಲು ಮಜ್ಜಿಗಗೆ ದನಕರುಗೊ ಬೇಕಲ್ಲದಾ? ಮತ್ತೆ ತೋಟಕ್ಕೆ, ಗೆದ್ದಗೆ ಬೇಕಪ್ಪ ಗೊಬ್ಬರಕ್ಕೆ ದನಗೊ ಎಷ್ಟಿದ್ದರೂ ಸಾಲ. ಹೀಂಗಿಪ್ಪಾಗ ದನಗಳ ಸಂಖ್ಯಾಭಿವೃಧ್ಧಿ ಮಾಡುವ ಕ್ರಮವೂ ಗೆದ್ದೆ ತೋಟ ಇಪ್ಪೊರೆಲ್ಲ ಕಲಿಯೆಕ್ಕಾದ ವಿಷಯ. ಕೆದೆಲಿ ಹಾಲು ಕರವ ದನ, ಕಂಜಿಗೊ, ತನೆಯಾದ ದನಗೊ, ಕೆಲವು ಕಂಜಿ ಹಾಕಲಾದೊವು, ಗಡಸುಗೊ, ಹೋರಿಗೊ, ಇವಲ್ಲದ್ದೆ ಮನೆಲಿಯೇ ಸಾಂಕಿ ಎಂಟುಹತ್ತು ಕಂಜಿಗಳನ್ನೂಹಾಕಿ ಬೇಕಾಷ್ಟು ಹಾಲು ಕೊಟ್ಟು ಬತ್ತಿಹೋಗಿ ಮುದಿಯಾದ ದನಗೊ ಇರ್ತವು. ಅವು ಮನೆಯ ಮುದಿಅಜ್ಜಿಗಳ ಹಾಂಗಲ್ಲದಾ? ಹಲ್ಲು ಬಿದ್ದು ಹೋಗಿ ಮೆಯ್ಯ ರೋಮ ಉದುರಿ ಹೋಗಿರ್ತು. ಅವಕ್ಕೆ ಪ್ರತ್ಯೇಕ ಸಣ್ಣ ಅಂಕಣದ ಕೆದೆ, ಹುಲ್ಲು ಅಗಿವಲೆಡಿಯದ್ದೊವು ಹಾಂಗಿಪ್ಪೊವಕ್ಕೆ ಬತ್ತ ಕಡಿಅಕ್ಕಿ, ಸರಳಿಸೊಪ್ಪು ಇವುಗಳ ಮಡ್ಡಿ ಕೊಡುಲಿದ್ದು. ಮುದಿ ಆದವನ್ನೇ ಹೇಳಿ ಮಾರುಲಿಲ್ಲೆ. ಹೂಡುವ ಎತ್ತುಗೊ ಮುದಿಯಾಗಿ ನಡವಲೆಡಿಯದ್ದೊವೂ ಕೆದೆಲಿರ್ತವು. ಅವಕ್ಕೂದೆ ಇದೇ ಕ್ರಮದ ಸಾಂಕಾಣ. ಆದರೆ ಎಮ್ಮೆಗಳ ಸಾಂಕುದು ಕಡಮ್ಮೆ. ದನಗಳ ಹಾಲು ಶ್ರೇಷ್ಠ, ಅವುಗಳ ಎಲ್ಲ ಉತ್ಪತ್ತಿಯೂ ಶ್ರೇಷ್ಠವೇ. ನೈವೇದ್ಯಕ್ಕೆ ಹಾಲು, ಹೋಮಕ್ಕೆ ತುಪ್ಪ ದನಗಳದ್ದೇ ಆಯೆಕ್ಕಲ್ಲದಾ? ಮತ್ತೆ ಎಮ್ಮೆ ಸಗಣದ ಗೊಬ್ಬರಂದ ದನದ ಸಗಣ ಗೊಬ್ಬರಂಗಳಲ್ಲಿ ಸತ್ವ ಜಾಸ್ತಿ ಹೇಳಿ ಮಾವ ತನ್ನ ಅನುಭವಲ್ಲಿ ಹೇಳ್ತ°. ಯಾವದೇ ಶಾಲಗೆ ಹೋಗದ್ದೆ ಇದ್ದರೂ, ದನ ಹೋರಿಗಳ ಹೇಂಗೆ ಸಾಂಕೆಕ್ಕು, ಇತ್ಯಾದಿ ಎಲ್ಲ ವಿಷಯಂಗಳ ಸ್ವಂತ ಆಲೋಚನೆ, ಅನುಭವದ ಆಧಾರಲ್ಲಿ ಯಾವ ಗೋಡಾಕ್ಟ್ರಂಗೂ ಕಡಮ್ಮೆ ಇಲ್ಲದ್ದ ಹಾಂಗೆ ದನಗಳ ಸಾಂಕುವ ಚೆಂದವ ನೋಡಿಯೇ ತಿಳಿಯೆಕ್ಕಷ್ಟೆ

[ಕೊಟ್ಟಗೆ ಹೊತ್ತಿಪ್ಪಾಗ ಗಾಳಿ ಬೀಸಿದರೆ ಕೆದೆಯೂ ಹೊತ್ತಿ ಹೋಕು ಹೇಳಿ ಮದಾಲು ಮಾಡಿದ ಕೆಲಸ ಎಂತ ಹೇಳಿದರೆ ಕೆದೆಲಿಪ್ಪ ಎಲ್ಲಾ ಜಾನುವಾರುಗಳನ್ನೂ ಕೊರಳಬಳ್ಳಿ ಪೀಂಕ್ಸಿ ಬೇಕಾದಲ್ಲಿಗೆ ಹೋಯ್ಕೊಳಲಿ, ತೋಟಕ್ಕಾದರೂ ಹೋಗಲಿ ಹೇಳಿ ಹೆರ ಬಿಟ್ಟದು. ಈ ಕೆಲಸಕ್ಕೆ ರೆಜ ನಿಧಾನ ಮಾಡಿದ್ದರೂ ಎಲ್ಲವೂ ಅಗ್ನಿಗೆ ಆಹುತಿ ಆವುತ್ತಿದ್ದವು. ಇನ್ನು ಅದರಿಂದ ದೊಡ್ಡ ಅನರ್ಥ ಯಾವದು? ಆ ಸ್ಥಿತಿಯ ಕಲ್ಪನೆ ಮಾಡಿದರೂ ಮೆಯ್ ನಡುಗಿ ಹೋಕು]

ಅತ್ತೆ ಮಾವನ ದನಗಳ ಮೇಲಾಣ ಪ್ರೀತಿಯ ನೋಡಿ. ಕೆದೆಲಿ ಎಲ್ಲಿಯೂ ಸಗಣ ಕಾಂಬಲಾಗ. ಸೊಪ್ಪಿನ ಕಟ್ಟಕಟ್ಟ ತಂದು ಹರಗೆಕ್ಕು. ವೈಶಾಖಲ್ಲಿ ಸೊಪ್ಪು ಕಮ್ಮಿ. ಅವಗ ಗುಡ್ಡೆಂದ ಮುಳಿ ಹೆರೆಶಿ ತಂದು ಬಿಕ್ಕುದು. ಹಾಂಗಾಗಿ ದನಗಳ ಮೈ ಯಾವಾಗಲೂ ಸ್ವಚ್ಛ. ಗುಡ್ಡಗೆ ಮೇವಲೆ ಹೋಗಿ ಬಪ್ಪ ದನಗೊಕ್ಕೆ ಇರುಳು ಮನುಗಿ ಒರಗಲೆ ಮೆಸ್ತಂಗಿಪ್ಪ ಹಾಸಿಗೆ. ಕೆಸರು ಸಗಣ ಮೆಯ್ಗೆ ಹಿಡಿವ ಹಾಂಗೇ ಇಲ್ಲೆ. ನೆಂತರಿಷ್ಟರಿಂಗೆ ಹೇಂಗೆ ಧಾರಾಳ ಉಪಚಾರವೋ ಅದೇ ರೀತಿ ದನಗೊಕ್ಕೂ ಕೂಡ. ಅವು ಸಂತೋಷಲ್ಲಿರೆಕ್ಕು. ದನಗೊ ಕಂಜಿ ಹಾಕಿದರೆ ಸುರುವಿಲಿ ಒಂದು ಒಂದೂವರೆ ತಿಂಗಳು ಒಂದೇ ಮಲೆ ಕರವದು. ಕಂಜಿ ರಜ ಹುಲ್ಲು ಕಚ್ಚಲೆ ಸುರುಮಾಡಿದ ಮೇಲೆ ಎರಡು ಮಲೆ, ಮೂರು ತಿಂಗಳು ಕಳಿವಾಗ ಮೂರುಮಲೆ ಕರೆತ್ತಾ ಹೋಪದು. ಮತ್ತೆ ದನ ಬತ್ತುವನ್ನಾರವೂ ಒಂದು ಮಲೆಯ ಹಾಲು ಕಂಜಿಗೇ. ಬತ್ತುಲಪ್ಪಗ ಎಲ್ಲಾ ಹಾಲೂ ಕಂಜಿಗೇ. ಕಂಜಿ ಹೋರಿಯಾಗಲಿ, ಗಡಸಾಗಲಿ ಕ್ರಮ ಒಂದೇ ತರ. ಹಾಲು ಕುಡಿಯದ್ದ ಹೋರಿಗೆ ಗೆದ್ದೆ ಹೂಡಲೆ ಶಕ್ತಿ ಬಪ್ಪದು ಹೇಂಗೆ? ಕಂಜಿ ಗಡಸಾಗಿದ್ದರೆ ಮುಂದೆ ಅದು ದಣಿಯ ಹಾಲು ಕೊಡುವ ದನ ಆಗೆಡದಾ?

ದೀಪಾವಳಿಗೆ ಎಲ್ಲೋರ ಮನೆಲಿ ಗೋಪೂಜೆ ಇರ್ತಲ್ಲದಾ? ರಾಮಣ್ಣಂಗೆ ಅಂಥ ವರ್ಷಕ್ಕೊಂದರಿ ಮಾಡುವ ಪೂಜೆಲಿ ಆಸಕ್ತಿ ಇಲ್ಲೆ. ವರ್ಷಪೂರ್ತಿ ದನಗಳ ಲಾಯಕಲ್ಲಿ ಸಾಂಕದ್ದೆ, ದೀಪಾವಳಿ ದಿನ ಮಾಂತ್ರ ಪಾಯ್ಸ ಕೊಟ್ಟಿಗೆ ಆರತಿ ಎಲ್ಲ ಮಾಡುದು ಯಾವ ಪುರುಷಾರ್ಥಕ್ಕೆ? ಮಾವನ ಪ್ರಶ್ನೆ. ಆದರೆ ಪರಮತ್ತೆಗೆ ಹಬ್ಬ ಮಾಡದ್ದೆ ಮನಸ್ಸು ಒಪ್ಪುಗೇ? ಹಸುಗಳ ಎಲ್ಲ ಸೇರ್ಸಿಗೊಂಡು ಮುಳ್ಳುಸೌತೆ ಕೊಟ್ಟಿಗೆ, ಹಸರ ಸೀವು ಬಾಳೆಹಣ್ಣು ಎಲ್ಲ ತಯಾರ್ ಮಾಡಿ, ಕೆದೆಲಿ ದೀಪ ಮಡುಗಿ ದನಗಳ ನೆತ್ತಿಗೆ ಕುಂಕುಮ ಮೆತ್ತಿ, ಕೊರಳಿಂಗೆ ಹೂಮಾಲೆ ಕಟ್ಟಿ, ಆರತಿ ಎತ್ತಿ, ಹಬ್ಬಕ್ಕೆ ಹೇಳಿ ಗೆಂಡನ ಮನೆಂದ ಬಂದ ಮಕ್ಕಳನ್ನೂ ಕರಕ್ಕೊಂಡು ಒಟ್ಟಿಂಗೆ, ದನಗಳ ಬಾಯಿಗೇ ಕೊಟ್ಟಿಗೆ ತಿನ್ಸಿ ಕೊಂಡಾಟ್ ಮಾಡಿ ಸಂತೋಷಪಡದ್ದರೆ ಹೇಂಗೆ?

ಮೇವಲೆ ಹೋದ ದನಗೊ ದಿನಾಗುಳುದೇ ಹೊತ್ತು ಕಂತಲಪ್ಪಗ ಕೆದಗೆ ಬಂದು ಅದರದರ ಜಾಗೆಲಿ ನಿಂದುಗೊಳ್ತವು. ಆಮೇಲೆ ಕಂಜಿಗಳ ಬಿಟ್ಟು ಹಾಲು ಕರೆತ್ತವು. ಈ ಮದಲೇ ಹೇಳಿದ ಹಾಂಗೆ ಹೊಟ್ಟೆ ತುಂಬಾ ಹಾಲು ಕುಡುದ ಕಂಜಿಗಳ ಕೊರಳ ಬಳ್ಳಿಯ ಬಿಚ್ಚಿ ಅಡಕ್ಕೆ ಜಾಲಿಲ್ಲಿ ಓಡಲೆ ಬಿಡ್ಳಿದ್ದು. ಮಾವನೂ ಕೆಲಸ ಎಲ್ಲ ಮುಗುಶಿಕ್ಕಿ ಮನೆ ಮುಂದಾಣ ಜೆಗುಲಿಲಿಯೋ, ಮಂಚಲ್ಲಿಯೋ ಕೂದುಗೊಂಡು ಹಾಲು ಕುಡುದ ಕಂಜಿಗೊ ಹಾರಿ ಕೊಣುದು ಮಿಂಚಿನ ಹಾಂಗೆ ಓಡುದರ ನೋಡುಲಿದ್ದು. ಆ ಮೇಲೆ ಸಣ್ಣ ಮಕ್ಕಳ ಹತ್ತರೆ “ಹೋಗು ಕಂಜಿಯ ಹಿಡುದು ಕಟ್ಟು” ಹೇಳುದು. ಮಕ್ಕಳೂ ಕಂಜಿಗಳೊಟ್ಟಿಂಗೆ ಓಡಿ ಹಾರಿ ಕೊಣುದು ಮಾಡೆಕ್ಕು. ಕಂಜಿಗೊ ಅವಕ್ಕೆ ಸಿಕ್ಕದ್ದ ಹಾಂಗೆ ಓಡಿ ಅಬ್ಬೆಯ ಕೆಚ್ಚಲಿಂಗೆ ಮತ್ತೊಂದರಿ ಬಾಯಿ ಹಾಕಿ, ಗುದ್ದಿ ಗುದ್ದಿ ಮಲೆ ಚೀಪೆಕ್ಕು. ಅಲ್ಲಿಂದ ಪುನಃ ಜಾಲಿಂಗೇ ಬೀಲ ಕುತ್ತ ಮಾಡಿಗೊಂಡು ಕೆಮಿ ಅರಳ್ಸಿಗೊಂಡು ಓಡುತ್ತವು. ಇದರ ಚೆಂದವ ಅತ್ತೆ ಮಾವ ಎರಡೂ ಜನ ಕೂದುಗೊಂದು ನೋಡೆಕ್ಕು.

ಇವರ ಪ್ರೀತಿ ಕುಶಾಲುಗಳ ಒಂದು ಗುಟ್ಟಿನ ಸಂಗತಿಯ ಬರೆಯದ್ದೆ ಮನಸ್ಸು ಕೇಳುತ್ತಿಲ್ಲೆ. ಒಂದು ದಿನ ರಾಮಣ್ಣ ಮಾವ ಮಧ್ಯಾಹ್ನದ ಊಟ ಆದಿಕ್ಕಿ ’ಈಸಿಚೇರಿ’ಲಿ ಕೂದುಗೊಂಡು ಎಲೆ ಅಡಕ್ಕೆ ತಿಂತಾ ಇತ್ತಿದ್ದ°. ಅಲ್ಲಿಗೆ ಬಂದ ಅತ್ತೆ ಕೆಂಪುಸಾರಣೆಯ ನೆಲಲ್ಲಿ ಕಾಲ್ನೀಡಿ ಕೂದು ಎಲೆತಟ್ಟೆಯ ಹತ್ತರಂಗೆ ಎಳಕೊಂಡು ಎಲೆಯ ಉದ್ದುಲೆ ಸುರುಮಾಡಿದ°. ಅಷ್ಟಪ್ಪಗ ಮಾವ “ಬಾ! ಇತ್ತೆ ಬಾ. ನಿನ್ನ ಕೈಯ ಒಂದರಿ ನೋಡ್ತೆ ಹೇಳಿದ° ಬಾಯಿಲಿ ಎಲೆ ಅಡಕ್ಕೆ ತುಂಬಿಸಿಗೊಂಡೇ. ಅತ್ತೆ ಗ್ರೇಶಿದ್ದು ಕೈಗೆ ಹಾಯ್ಕೊಂಡ ಹೊಸ ಕೆಂಪು ಪಚ್ಚೆ ಕಾಜುಗಳ ನೋಡ್ಲೆ ಕೇಳಿದ್ದು” ಹೇಳಿ. ಹಾಂಗೆ ಕೈ ಒಡ್ಡಿದ°.  ಮಾವ ಅತ್ತೆಯ ಕೈಯ ಒಂದುಕೈಲಿ ಹಿಡ್ಕೊಂಡು ಬಲಗೈಯ ಎರಡು ಬೆರಳಿನ ಅವನ ಬಾಯಿಗೆ ಮಡುಗಿ ಕೆಂಪು ನೀರಿನ ಪುಚ್ಕನೆ ತುಪ್ಪಿದ್ದೇ! ಅತ್ತೆ “ಪಿಸ್” ಹೇಳಿ ಸರ್ರನೆ ಕೈ ಎಳಕ್ಕೊಂಡ°. ಮಾವನ ಬೆಳಿ ಮುಂಡು ಕೆಂಪು ನಕ್ಷತ್ರ ಬರದ ಹಾಂಗಾತು. ಎರಡೂ ಜೆನವೂ ನೆಗೆ ಮಾಡಿದ್ದೇ ಮಾಡಿದ್ದು! ನೆಗೆ ಮಾಡಿದ್ದೇ ಮಾಡಿದ್ದು! ಇದು ಅತ್ತೆ ಮಾವ ಮುದ್ಕ ಮುದ್ಕಿ ಆದ ಮೇಲಾಣ ಕಥೆ. ಹೀಂಗಿತ್ತು ಅತ್ತೆ ಮಾವನ ದಾಂಪತ್ಯದ ಎರಕ! (ಈ ಸಂಗತಿಯ ಅತ್ತೆಯೇ ಎನ್ನ ಹತ್ತರೆ ನಾಚಿಗೊಂಡು ನೆಗೆಮಾಡಿಗೊಂಡು ಗುಟ್ಟಾಗಿ ಹೇಳಿದ್ದ. ನಿಂಗಳುದೇ ಆರಹತ್ತರಾದರೂ ಹೇಳ್ತರೆ ಗುಟ್ಟಾಗಿಯೇ ಹೇಳಿ……)

~~***~~

ಸರಸ್ವತಿ ಬಡೆಕ್ಕಿಲ
ಚಾಲುಕ್ಯ ಶಿಲ್ಪ
ರೂಪಾನಗರ
ಮೈಸೂರು

9019274678

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

7 thoughts on “ಧೃತಿಯೊಂದಿದ್ದರೆ

  1. ಆನುದೆ ಕರಿಯಾಲಕ್ಕೆ ರೆಗ್ಯುಲರ್ ವಿಸಿಟರ್.ಆ ಅಜ್ಜ ನ ಆನು ನೋಡಿ ದ್ದೆ. ಕಥೆ/ ನಿಜ ಸಂಗತಿ ಅತ್ತೆ ಚೆಂದಕೆ ಬರದ್ದವು. ಈ ಘಟನೆ ಎನಗೆ ಗೊಂತಿತ್ತಿಲ್ಲೆ.

  2. ಕಷ್ಟಂಗೊ ಬಂದಪ್ಪಗ ಹೇಡಿಯಾಂಗಿರದ್ದೆ ಅದರ ಧೈರ್ಯಲ್ಲಿ ಎದುರುಸಿಗೊಂಡು ಹೋದರೆ ಮುಂದೆ ಏಳಿಗೆಯ ದಾರಿ ಕಾಂಗು ಹೇಳುವ ಧೈರ್ಯವ ಕೊಡುವ ಉತ್ತಮ ಕಥೆ.

  3. ಕಣ್ಣಿಂಗೆ ದೃಶ್ಯ ಕಟ್ಟುತ್ತಾಂಗೆ ಕಥೆ ಓದಿಸಿತ್ತು. ಪ್ರಬುದ್ಧ ಕತೆಗೊಂದೊಪ್ಪ

  4. ಕತೆಯ ಮೊದಲ ಭಾಗಲ್ಲಿ, ಹೊತ್ತಿದ ಮನೆ,ಅದಕ್ಕೆ ಜೋಡಿಸಿದ ಪರಿಕರ ಎಲ್ಲಾ ಸುಟ್ಟು ಭಸ್ಮ ಆದರೂ ಧೃತಿಗೆಡದ್ದೆ, ಪುನಃ ನಿರ್ಮಾಣ ಮಾಡುವ ಛಲ, ಎದೆಗಾರಿಕೆ ಇದರ ವಿವರಣೆ ಕಣ್ಣಿಂಗೆ ಕಟ್ಟುವ ಹಾಂಗೆ ನಿರೂಪಣೆ ಆಯಿದು.
    ಮುಂದಾಣ ಭಾಗಲ್ಲಿ ಒಂದು ಹಳ್ಳಿ ಮನೆ, ಅದರ ಯಜಮಾನ, ಅವು ಅವರ ಕುಟುಂಬದವರೊಟ್ಟಿಂಗೆ ದನ ಕರುಗಳನ್ನೂ ನೋಡಿಗೊಂಬದು, ಯಜಮಾನನ ಸಂಘಜೀವನದ ಪರಿಕಲ್ಪನೆ ಇದೆಲ್ಲವೂ ಸೊಗಸಾಗಿ ಚಿತ್ರಣ ಆಯಿದು.
    ಅಕೇರಿಗೆ ದಂಪತಿಗಳ ಅನ್ಯೋನ್ಯತೆಯ ಚಿತ್ರಣ.
    ಎಲ್ಲವೋ ಒಟ್ಟಾಗಿ ಪರಿಪೂರ್ಣ ಕತೆಯಾಗಿ ನಿರೂಪಣೆ ಆಯಿದು.

  5. ಕತೆ ಲಾಯ್ಕ ಇದ್ದು.ನಾವಿಂದು ಮರದು ಹೋವ್ತಾಯಿಪ್ಪ ಎಷ್ಟೋ ಹವ್ಯಕ ಶಬ್ದಂಗೊ ಈ ಕತೆಲಿದ್ದು.ಮನೆಗೆ ಕಿಚ್ಚು ಹಿಡುದ್ದರ ವರ್ಣನೆ ಎಷ್ಟು ಸಹಜವಾಗಿ ಬಯಿಂದು ಹೇಳಿರೆ ಎನ್ನ ಕಣ್ಣೆದುರೇ ಆ ಘಟನೆ ನಡದಾಂಗಾಗಿ ಕಣ್ತುಂಬಿ ಬಯಿಂದು. ಹೀಂಗಿದ್ದ ಹಿರಿಯರ ಬರಹಂಗಳೇ ಹೊಸತ್ತಾಗಿ ಬರವವಕ್ಕೆ ದಾರಿದೀಪ..

  6. ಬಡೆಕ್ಕಿಲ ಅತ್ತೆ ಬರದ ಕತೆ, ಒಪ್ಪಣ್ಣ ಬೈಲಿಂಗೆ ಹೇಳಿ ಮಾಡುಸಿದ ಹಾಂಗಿದ್ದು. ಹವ್ಯಕ ಭಾಷೆ, ಅದರಲ್ಲಿಪ್ಪ ಶಬ್ದ ಬಂಡಾರ ಎಲ್ಲವುದೆ ಇಲ್ಲಿದ್ದು. ರಾಮಜ್ಜನ ಸ್ಥೈರ್ಯ, ಮನಸ್ಸು ನಿಜವಾಗಿಯೂ ಮೆಚ್ಚೆಕಾದ್ದೇ. ರಾಮಜ್ಜ ಹೇಂಗಿದ್ದಿಕ್ಕು ಹೇಳಿ ಮನಸ್ಸಿಂಗೆ ಸರಿಯಾಗಿ ತಟ್ಟಿತ್ತು. ಶುದ್ದಿಯ ಕಡೆಂಗೆ ಅಜ್ಜ ಅಜ್ಜಿಯರ ಸರಸ ಸಲ್ಲಾಪ ಓದಿ ನೆಗೆ ಬಂದು ತಡೆಯ. ಇದು ಶುದ್ದಿಗೆ ಕಡೆಂಗೆ ಒಂದೊಪ್ಪ ಕೊಟ್ಟ ಹಾಂಗೆ ಆತು.
    ಬಡೆಕ್ಕಿಲ ಅತ್ತೆಯ ಶುದ್ದಿಗೊ ಕತೆಗೊ ಬೈಲಿಂಗೆ ಬತ್ತಾ ಇರಳಿ.
    (ಈ ಶುದ್ದಿ ಓದಿಯಪ್ಪಗ, ನಲುವತ್ತೈದು ವರ್ಷ ಹಿಂದೆ ಎಂಗಳ ಬೊಳುಂಬಿನ ಮುಳಿ ಮನೆಗೆ ಕಿಚ್ಚು ಹಿಡುದು ಎಂಗಳ ಕಣ್ಣ ಎದುರೇ ಭಸ್ಮ ಆದ್ದದು ನೆಂಪಾಗಿ ಬೇಜಾರಾತು. ಆ ನೆಡುವಿರುಳು ಆರು ಎಷ್ಟು ನೀರು ತೋಕಿರೂ ಮನೆಯ ಒಳುಶಲಾಯಿದಿಲ್ಲೆ. ಎನ್ನ ತೀರ್ಥರೂಪರನ್ನೂ “ರಾಮಜ್ಜ”ನ ಸ್ಥಾನಲ್ಲೇ ಕಂಡೆ ಆನು)

  7. ಬಡೆಕ್ಕಿಲ ಸರಸ್ವತಿ ಅಕ್ಕಾ, ಆತ್ಮೀಯ ನಮನಂಗೊ. ನಿಂಗಳ ಕವನ ಸಂಕಲನ ಎನ ಕಳುಗಿ ಕೊಟ್ಟಿದಿ ಅಲ್ಲೋ?. ನೆಂಪಾತೊ.., ಆನು ವಿಜಯಾಸುಬ್ರಹ್ಮಣ್ಯ.ನಾವು ಕೋಣಮ್ಮೆಲಿ ಬೇಟಿ ಆದ್ದು.ನಿಂಗೊ ಕೊಡಗಿನ ಗೌರಮ್ಮ ಕಥಾಸ್ಪರ್ಧಗೆ ಒಂದು ಸಾಮಾಜಿಕ ಕತೆ ಬರೆಯಿ ಅಕಾ, ಇದೇ ತಿಂಗಳ ೧೨ನೇ ತಾರೀಕಿನ ಒಳ ಕಳುಸಿರೆ ಒಳ್ಳೆದಿತ್ತು. ಈ ಒಪ್ಪಣ್ಣ ಬಯಲಿಲ್ಲಿ ಕತಾ ಆಹ್ವಾನ ಹಾಕಿದ್ದೆ, ೨ವಾರ ಹಿಂದೆ.ಅದಲ್ಲಿ ನಿಯಮ, ಎನ್ನ ವಿಳಾಸ ಇದ್ದಕ್ಕೊ, ಇತೀ ತಂಗೆ ವಿಜಯಾ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×