ಅಂತರಿಕ್ಷ -05: ಎರಡನೇ ಸುತ್ತಿನ ವಿಶ್ವ ಪರ್ಯಟನೆ

ಎರಡನೇ ಸುತ್ತಿನ ವಿಶ್ವ ಪರ್ಯಟನೆ

ಈ ವಿಶ್ವ ಹೇಳಿದರೆ – ಎಲ್ಲಾ ಗೆಲಾಕ್ಸಿಗಳ, ಅವುಗಳ ಮಧ್ಯೆ ಇಪ್ಪ ಅನಿಲ ಮತ್ತು ಧೂಳು, ಈ ಗೆಲಾಕ್ಸಿಗಳ ಒಳ ಹುಟ್ಟುತ್ತಾ ಇಪ್ಪ, ಸಾಯುತ್ತಾ ಇಪ್ಪ, ಯೌವನಾವಸ್ಥೆಲಿಪ್ಪ ನಕ್ಶತ್ರಂಗ, ಅವುಗಳ ಗ್ರಹ, ಉಪಗ್ರಹ, ಧೂಮ ಕೇತು, ಕ್ಷುದ್ರ ಗ್ರಹ, ಕುಬ್ಜ ಗ್ರಹ ಇತ್ಯಾದಿಗಳ ಕುಟುಂಬ,  ಹೀಂಗೆ ಎಲ್ಲ ಗೋಚರ ಮತ್ತು ಅಗೋಚರ ದ್ರವ್ಯಂಗಳ ತನ್ನೊಳಗೆ ಹುದುಗಿಸಿಪ್ಪ ಒಂದು ವ್ಯವಸ್ಥೆ. ಅದರ ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲ ಹೇಂಗಿಕ್ಕು ಹೇಳುದರ ಬಗ್ಗೆ ವಿಜ್ಞಾನಿಗ ಎಂತ ಹೇಳ್ತವು ಹೇಳಿ ಈಗ ಮಾತಾಡುವ

ಜೊತೆ ಜೊತೆಗೇ, ಈ ಬಗ್ಗೆ ನಮ್ಮ ವೇದ, ವೇದಾಂತಂಗಳಲ್ಲಿ, ಉಪನಿಷತ್ತುಗಳಲ್ಲಿ, ಗೀತೆಲಿ, ಋಷಿಗಳ, ಮಹಾತ್ಮರ ಅಭಿಪ್ರಾಯ ಎಂತ ಹೇಳುದರ ನೋಡುತ್ತಾ ನಮ್ಮ ಈ ಪ್ರಯಾಣವ, ವಿಶ್ವ ದರ್ಶನವ ಕೊನೆಗೊಳಿಸುವ.

ನಾವು ಈಗ ಕಾಣುವ ವಿಶ್ವದ ಉಗಮ

ಹೆಚ್ಚಿನ ಖಗೋಳ ವಿಜ್ಞಾನಿಗಳ ಅಭಿಪ್ರಾಯದ ಪ್ರಕಾರ ಈ ವಿಶ್ವದ ಆರಂಭ ಸುಮಾರು 13.7 ಬಿಲಿಯ ವರ್ಷಂಗಳ ಹಿಂದೆ ಆತು. ಆ ಹೊತ್ತಿಂಗೆ ಅದು ಒಂದು ಮಹಾ ಸ್ಫೋಟದ ಮೂಲಕ ಶುರು ಆತು.  ಈ ಸಿದ್ಧಾಂತಕ್ಕೆ ಮಹಾ ಸ್ಫೋಟ ಸಿದ್ಧಾಂತ (Big Bang Theory) ಹೇಳಿ ಹೆಸರು ಕೊಟ್ಟಿದವು. ಇದರ ಗಣಿತದ ಲೆಕ್ಖಾಚಾರ – ಭೌತ ಶಾಸ್ತ್ರದ ಸಿದ್ಧಾಂತಂಗಳ ಮೂಲಕ ಸಿದ್ಧ ಪಡಿಸಿದ್ದವು.  ಬೇರೆ ಬೇರೆ ಪ್ರಾಯೋಗಿಕ ವೀಕ್ಷಣೆಗ ಕೂಡಾ ಇದಕ್ಕೆ ಅನುಗುಣವಾಗಿಯೇ  ಕಂಡು ಬೈಂದು.

ವೈಜ್ಞಾನಿಕ ಉಪಕರಣಂಗಳ ಸಹಾಯಂದ  ಯಾವದೇ ಕಾಲಲ್ಲೂ ನಾವು ಪರಿಶೀಲನೆ ಮಾಡುಲೆ ಎಡಿಗಾದ ವಿಶ್ವದ ಗಾತ್ರ ಸುಮಾರು 93 ಬಿಲಿಯ ಜ್ಯೋತಿರ್ವರ್ಷದಷ್ಟು ದೊಡ್ಡ ವ್ಯಾಸದ ಒಂದು ಗೋಲಾಕಾರ. ಈಗ ಸಿದ್ಧವಾಗಿಪ್ಪ ಶಾಸ್ತ್ರ ಸಿದ್ಧಾಂತ,  ತತ್ವ, ಸೂತ್ರಂಗಳ ಪ್ರಕಾರ – ಯಾವದೇ ಸಂದರ್ಭಲ್ಲೂ ಮಾನವರಿಂಗೆ ಅರಿತುಗೊಂಬಲೆ (ಬೇರೆ ಬೇರೆ ವೈಜ್ಞಾನಿಕ ಉಪಕರಣಂಗಳ ಉಪಯೋಗ ಮಾಡಿಯೂ ಕೂಡ ಅಳವಲೆ, ವೀಕ್ಷಣೆ ಮಾಡುಲೆ, ಅನುಭವಕ್ಕೆ ತೆಕ್ಕೊಂಬಲೆ) ಎಡಿಗಪ್ಪ 93 ಬಿಲಿಯ ಜ್ಯೋತಿರ್ವರ್ಷದಷ್ಟು ದೊಡ್ಡ ವ್ಯಾಸದ  ಈ ವಿಶ್ವವೇ ಅನುಭವ ಗಮ್ಯ ವಿಶ್ವ (observable universe).  ನಮ್ಮ ವೀಕ್ಷಣೆಯ ಪ್ರಕಾರ ಈ ವಿಶ್ವ ತನ್ನ ಹುಟ್ಟು ಮತ್ತು ಇಲ್ಲಿಯ ವರೆಗಿನ ಚರಿತ್ರೆಲಿ ಅದೇ ಭೌತ ಸೂತ್ರ ಮತ್ತು ಸ್ಥಿರಾಂಕ (physical laws and constants)ಗಳ ಪ್ರಕಾರವೇ  ನಡಕ್ಕೊಂಡು ಬೈಂದು. ಹಾಂಗಾಗಿ ಈ ಅನುಭವ ಗಮ್ಯ ವಿಶ್ವ ಗೋಲದ ಅಂದಾಜು ಗಾತ್ರ ಗಮನಾರ್ಹವಾಗಿ ಬದಲಪ್ಪ ಸಾಧ್ಯತೆ ತೀರಾ ಕಡಮ್ಮೆ.

ಎಂದೆಂದಿಂಗೂ ಇದರಂದ ‘ಹೆರ’ ಎಂತ ಇದ್ದು ಹೇಳುದರ ನವಗೆ ವೀಕ್ಷಿಸುಲೆ ಅಸಾಧ್ಯ – ಅದರಂದ ಹೊರ ಭಾಗಲ್ಲಿ ಎಂತ ಇದ್ದು ಹೇಳಿಯೂ, ಇದ್ದರೂ ಅದರ ಹೇಂಗೆ ಪರಿಶೀಲನೆ ಮಾಡುಲೆಡಿಗು ಹೇಳುವದು ಪ್ರಶ್ನಾರ್ಹ. ವಾಸ್ತವಿಕ ಜ್ಞಾನದ ತಳಹದಿಯ ಮೇಲೆ ಹೇಳುದಾದರೆ  ಇಲ್ಲೆ ಹೇಳಿಯೇ. ಯಾವದರ (ಒಂದು ವೇಳೆ ಅದು ಇದ್ದರೂ) ‘ನೋಡುಲೆ’ ಎಂದೆಂದಿಂಗೂ ಸಾಧ್ಯ ಇಲ್ಲೆಯೋ, ಅದು ಇಲ್ಲೆ ಹೇಳುದೂ ಕೂಡಾ ಅದೇ ಅರ್ಥವ ಕೊಡುತ್ತು.

ಸ್ಟೀಫನ್ ಹಾಕಿಂಗ್  ‘The Theory of Everything: The Origin and Fate of the Universe’ ಹೇಳ್ತ  ತನ್ನ ಪುಸ್ತಕಲ್ಲಿ ( http://www.nobeliefs.com/Hawking.htm ) ಇದರ ಒಂದು ಅದ್ಭುತವಾದ ವಿವರಣೆ ಕೊಟ್ಟಿದ.

ಈ ವಿಶ್ವಲ್ಲಿ ನಮ್ಮ ಸ್ಥಾನ

ನಾಲ್ಕೂವರೆ ಬಿಲಿಯ ವರ್ಷ ಮದಲು ಈ ಭೂಮಿಯ ಉತ್ಪತ್ತಿ ಆತು. ಒಂದು ಬಿಲಿಯ ವರ್ಷಂದ ಈ ಭೂಮಿಲಿ ಜೀವಿಗ ಇಪ್ಪದು. ಇನ್ನು 500 ಮಿಲಿಯ ವರ್ಷಂದ ಎರಡೂವರೆ ಬಿಲಿಯ ವರ್ಷದ ವರೆಗೆ ಈ ಭೂಮಿ ಜೀವಿಗಳ ವಾಸಕ್ಕೆ ಯೊಗ್ಯವಾಗಿಕ್ಕು ಹೇಳಿ ಅಂದಾಜು.

ಭೂಮಿಯ ಸುತ್ತಳತೆ ಸುಮಾರು 40 ಸಾವಿರ ಕಿಲೋ ಮೀಟರ್.

ಚಿತ್ರ – 1: ಅಪೋಲೋ 8 ತೆಗದ ಭೂಮಿಯ ಚಿತ್ರ. (*)

ಚಿತ್ರ – 1: ಅಪೋಲೋ 8 ತೆಗದ ಭೂಮಿಯ ಚಿತ್ರ. (*)

ಸೌರ ವ್ಯೂಹಲ್ಲಿ ಭೂಮಿಯ ಸ್ಥಾನ – ಅಷ್ಟು ದೊಡ್ಡ ಭೂಮಿ ಇತರ ಗ್ರಹಂಗಳ ಒಟ್ಟಿಂಗೆ ಹೋಲಿಸಿದರೆ – ಒಂದು ಚುಕ್ಕೆಯಷ್ಟು.

ಈ ಕೆಳ ಕೊಟ್ಟ ಚಿತ್ರಲ್ಲಿ ಸೂರ್ಯಂದ (ಎಡಂದ) ಮೂರನೇ ಗ್ರಹ ಭೂಮಿ (Earth)

ಚಿತ್ರ -2: ಸೌರ ವ್ಯೂಹದ ಗ್ರಹಂಗ. (*)

ಚಿತ್ರ -2: ಸೌರ ವ್ಯೂಹದ ಗ್ರಹಂಗ. (*)

ಸೂರ್ಯಂದ ಭೂಮಿಗಿಪ್ಪ ದೂರದ 100-200 ಪಾಲು ದೂರದ ವರೆಗೆ ವ್ಯಾಪಿಸಿಪ್ಪ ಸೌರ ವ್ಯೂಹವ ಒಳಗೊಂಡ ನಮ್ಮ ಗೆಲಾಕ್ಸಿ (ಕ್ಷೀರ ಪಥ – milky way) ಸುಮಾರು ಇನ್ನೂರು ಬಿಲಿಯ ನಕ್ಷತ್ರಂಗಳ ಹೊಂದಿದ್ದು ಒಂದು ಲಕ್ಷ ಜ್ಯೋತಿರ್ವರ್ಷ ವ್ಯಾಸದ ಒಂದು ತಟ್ಟೆ. (ಬೆಳಕಂಗೆ ಈ ಗೆಲಾಕ್ಸಿಯ ಒಂದು ಕೊನೆಂದ ಇನ್ನೊಂದು ಕೊನೆಗೆ ಹೋಪಲೆ ಒಂದು ಲಕ್ಷ ವರ್ಷ ಬೇಕು)

ಚಿತ್ರ -3: ನಮ್ಮ ಸೌರ ವ್ಯೂಹ ಇಪ್ಪ ಗೆಲಾಕ್ಸಿಯ ಒಂದು ನೋಟ. (*)

ಚಿತ್ರ -3: ನಮ್ಮ ಸೌರ ವ್ಯೂಹ ಇಪ್ಪ ಗೆಲಾಕ್ಸಿಯ ಒಂದು ನೋಟ. (*)

ಇನ್ನೂರು ಬಿಲಿಯ ಗೆಲಾಕ್ಸಿಗ ನಾವು ನೋಡುಲೆ ಸಾಧ್ಯ ಅಪ್ಪ ವಿಶ್ವಲ್ಲಿದ್ದು ಹೇಳಿ ಅಂದಾಜು.

ಚಿತ್ರ -4: ಈ ಚಿತ್ರಲ್ಲಿ ಕಾಂಬ ಒಂದೊಂದು ಚುಕ್ಕೆಯಾಕಾರವೂ ನಮ್ಮ ಗೆಲಾಕ್ಸಿಯ ಹಾಂಗಿಪ್ಪ ಗೆಲಾಕ್ಸಿಗ. (*)

ಚಿತ್ರ -4: ಈ ಚಿತ್ರಲ್ಲಿ ಕಾಂಬ ಒಂದೊಂದು ಚುಕ್ಕೆಯಾಕಾರವೂ ನಮ್ಮ ಗೆಲಾಕ್ಸಿಯ ಹಾಂಗಿಪ್ಪ ಗೆಲಾಕ್ಸಿಗ. (*)

ಕೆಲವು ವಿಜ್ಞಾನಿಗ ಹೀಂಗಿಪ್ಪ ಅನೇಕ ವಿಶ್ವಂಗ (multi-verse) ಇಕ್ಕು ಹೇಳಿಯೂ, ಆ ವಿಶ್ವಂಗಳಲ್ಲಿ ನಮ್ಮದಕ್ಕಿಂತ ಬೇರೆಯೇ ಆದ ಭೌತ ಶಾಸ್ತ್ರ ಸಿದ್ಧಾಂತಂಗಳೂ, ಭೌತಿಕ ಸ್ಥಿರಾಂಕಂಗಳೂ ಅನ್ವಯ ಆವ್ತು ಹೇಳಿಯೂ ವಾದ  ಮಾಡಿದರೂ, ಅದರ ಸಮರ್ಥಿಸಿಗೊಂಬಲೆ ಸದ್ಯಕ್ಕೆ ಯಾವದೇ ಪ್ರಾಯೋಗಿಕ ಪುರಾವೆ ಸಿಕ್ಕಿದ್ದಿಲ್ಲೆ. ಇದೊಂದು ಸುಂದರ ಕಲ್ಪನೆ ಹೇಳಿ ಮಾತ್ರ ಹೇಳುಲಕ್ಕು ಸದ್ಯಕ್ಕೆ. ನವಗೆ ನಮ್ಮ ವಿಶ್ವವೇ ಸಂಪೂರ್ಣ ಅನುಭವ ಗಮ್ಯ ಆಗಿಲ್ಲೆ.  ಬೆಳಕಿನ ವೇಗಲ್ಲೇ ಪ್ರಯಾಣ ಮಾಡಿದರೂ ಈ ವಿಶ್ವ ಪರ್ಯಟನೆಗೆ 93 ಬಿಲಿಯ ವರ್ಷ ಬೇಕು. ಅಲ್ಲಿ ವರೆಗೆ ನಮ್ಮ ಸೌರ ವ್ಯೂಹವೇ ಇರ್ತಿಲ್ಲೆ, ಜೀವಿಗ ಅಂತೂ ಭೂಮಿಲಿ ಅದಕ್ಕೂ ಎಷ್ಟೋ ಮದಲೇ ಇರ್ತವಿಲ್ಲೆ.  ಇನ್ನು ಅನೇಕ ವಿಶ್ವಂಗಳ ಬಗ್ಗೆ ಈಗ ಚಿಂತೆ ಎಂತಕೆ ಅಲ್ಲದಾ?

ಚಿತ್ರ -5: ಹುಟ್ಟಿಂದ ಇಲ್ಲಿ ವರೆಗೆ ವಿಶ್ವದ ಚರಿತ್ರೆಯ ಸಂಕ್ಷಿಪ್ತ ಚಿತ್ರಣ. (*)

ಚಿತ್ರ -5: ಹುಟ್ಟಿಂದ ಇಲ್ಲಿ ವರೆಗೆ ವಿಶ್ವದ ಚರಿತ್ರೆಯ ಸಂಕ್ಷಿಪ್ತ ಚಿತ್ರಣ. (*)

(*) ಎಲ್ಲಾ ಚಿತ್ರಂಗಳ ಕೃಪೆ – wikipedia

ಇಲ್ಲಿ ವರೆಗೆ ವಿಶ್ವ ನಡೆದು ಬಂದ ದಾರಿ

ಈಗ ಗೆಲಾ‍ಕ್ಸಿಗ ಪರಸ್ಪರಂದ ದೂರ ಹೋಪದರ ನೋಡಿದರೆ ವಿಶ್ವ ಹಿಗ್ಗುತ್ತಾ ಇದ್ದು ಮತ್ತು ಈ ವೇಗದ ಪ್ರಕಾರ ಹಿಂದಕ್ಕೆ ಲೆಕ್ಖ ಹಾಕಿದರೆ ಆ ಹಿಗ್ಗುವಿಕೆ ಯಾವಗ ಶುರು ಆಗಿಕ್ಕು ಹೇಳಿ ಗೊಂತು ಮಾಡುಲಾವ್ತು. ಒಂದು ಸಣ್ಣ ಪರಿಮಿತ (ಬಿಂದು ರೂಪದ್ದು ಹೇಳಿ ಹೇಳುಲಾವ್ತಿಲ್ಲೆ) ಗಾತ್ರಲ್ಲಿದ್ದು,  ಆಗ ಉಂಟಾದ ಶೀಘ್ರ ಸ್ಫೋಟಂದಾಗಿ  ವಿಶ್ವ ಈಗಿನ ರೂಪ ಪಡಕ್ಕೊಂಡತ್ತು ಹೇಳಿ ನಿರ್ಧಾರಕ್ಕೆ ಬಪ್ಪಲಾವ್ತು. ಆ ಮಹಾ ಸ್ಫೋಟ 13.7 ಬಿಲಿಯ ವರ್ಷ ಹಿಂದೆ ಆಗಿದ್ದದು ಹೇಳುದು ಎಲ್ಲ ಸೂತ್ರಕ್ಕೂ, ವೀಕ್ಷಣೆಗೂ ಬಹುತೇಕ ತಾಳೆ ಆವ್ತು. ಆ ಸೀಮಿತ ಗಾತ್ರದ ಮುದ್ದೆ ಅತ್ಯಂತ ಹೆಚ್ಚು ಬಿಸಿ ಮತ್ತು ಅಗಾಧ ದ್ರವ್ಯ ರಾಶಿಯ ಆ ಸಣ್ಣ ಗಾತ್ರಲ್ಲಿ ಹುದುಗಿಸಿಗೊಂಡಿತ್ತು. ಹೀಂಗೆ ಒಂದು ಅತೀ ಸಣ್ಣ ಕಾಲ ಪ್ರಮಾಣಲ್ಲಿ (ಒಂದು ಸೆಕೆಂಡಿನ ಸಣ್ಣ ತುಣುಕು – ಒಂದು ಸೆಕೆಂಡಿನ ಒಂದು ಬರದು ಅದರ ಮುಂದೆ ಮೂವತ್ತೆರಡು ಸೊನ್ನೆ ಹಾಕಿದ ದೊಡ್ಡ ಸಂಖ್ಯೆಯಷ್ಟು ಸಣ್ಣ ಸಣ್ಣ ತುಣುಕುಗಳಾಗಿ ವಿಭಜಿಸಿ ಅದಲ್ಲಿ ಒಂದು ತುಣುಕಿನಷ್ಟು ಕಾಲ, 10 -32 second) ಉಂಟಾದ ಶೀಘ್ರ ಸ್ಫೋಟದ ನಂತರ ವಿಶ್ವ ಈಗಿನ ರೂಪಕ್ಕೆ (ಗಾತ್ರಕ್ಕೆ ಅಲ್ಲ) ಹಿಗ್ಗಿತ್ತು.  ಈಗಳೂ  ಈ ವಿಶ್ವ ಹೀಂಗೆ ಹಿಗ್ಗುತ್ತಾ ಇದ್ದು.

ಹುಟ್ಟಿ 380,000 ವರ್ಷ ವರೆಗೆ ಈ ವಿಶ್ವಲ್ಲಿ ದ್ರವ್ಯ ಮತ್ತು ಬೆಳಕು ಒಂದರಂದ ಒಂದು ಬೇರ್ಪಡದ್ದ ರೀತಿಲಿ ಇತ್ತು. ಎಷ್ಟು ಹೆಚ್ಚು ಬಿಸಿ ಆಗಿತ್ತು ಶುರುವಿಲಿ ಹೇಳಿದರೆ ನಾವು ಈಗ ನೋಡುವ ಅಣು-ಪರಮಾಣುಗಳೂ ಇತ್ತಿದ್ದವಿಲ್ಲೆ. ಅದಕ್ಕಿಂತಲೂ ಮೂಲ ರೂಪಲ್ಲಿಪ್ಪ ಎಲೆಕ್ಟ್ರೋನ್, ಪ್ರೋಟೋನ್, ನ್ಯೂಟ್ರಾನ್ ಗಳ ರೂಪಲ್ಲೂ ಅಲ್ಲ ಅದಕ್ಕಿಂತಲೂ ಮೂಲ (ಅಣೋರಣೀಯನ…) ರೂಪವಾದ ‘ಬೆಳಕು’ (ವಿಕಿರಣ) ಆಗಿ ಇತ್ತು.

ಹೀಂಗೆ 13.7 ಬಿಲಿಯ ವರ್ಷದಷ್ಟು ಹಿಂದೆ ಕಾಲ ಮತ್ತು ದೇಶ (time and space) ಎರಡೂ ಶುರು ಆತು. ಮತ್ತು ನಮ್ಮ ಎಲ್ಲಾ ಪ್ರಾಯೋಗಿಕ ಉದ್ದೇಶಕ್ಕೆ ‘ಅದಕ್ಕಿಂತಲೂ ಮೊದಲು’ ಹೇಳುವ ಅಸ್ತಿತ್ವ  ಕಾಲಕ್ಕೂ ಇತ್ತಿಲ್ಲೆ, ದೇಶಕ್ಕೂ ಇತ್ತಿಲ್ಲೆ ಹೇಳಿಯೇ ತಿಳ್ಕೊಳ್ಳೆಕ್ಕು. ಒಂದು ವೇಳೆ ಇದ್ದರೂ ಅದರಂದ ನಮ್ಮ ವಿಶ್ವದ ಈಗಿನ ಸ್ಥಿತಿ, ಅದರ ಮುಂದಿನ ಗತಿಗೆ ಯಾವದೇ ಪ್ರಭಾವ ಇಲ್ಲೆ. ಕಾಲ ಮತ್ತು ದೇಶವ (time and space) ಒಂದಕ್ಕೊಂದು ಬೇರ್ಪಡಿಸುಲೆ ಸಾಧ್ಯವೇ ಇಲ್ಲೆ. ಈ ಬಗ್ಗೆ ವಿವರವಾಗಿ ಮುಂದೆ ಎಂದಾದರೂ ಮಾತಾಡುವೊ.

ವಿಶ್ವ ಹುಟ್ಟೊಗ ಇದ್ದ ಅದೇ ದ್ರವ್ಯ ರಾಶಿ ಹಿಗ್ಗುತ್ತಾ ಹಿಗ್ಗುತ್ತಾ ಈಗಿನ ಗಾತ್ರವ ಹೊಂದಿದ್ದು. ಹುಟ್ಟಿದ ಕೂಡಲೇ ಅಗಾಧ ವೇಗಲ್ಲಿ ವಿಸ್ತರಿಸಿದ ವಿಶ್ವ ವಿಸ್ತರಿಸುತ್ತಾ ಹೋದರೂ, ಆ ವಿಸ್ತರಿಸುವ ವೇಗ ಕಡಮ್ಮೆ ಆವ್ತಾ  ಹೋತು – ಐದು ಬಿಲಿಯ ವರ್ಷಂಗಳ ವರೆಗೆ.  ಅಲ್ಲಿಂದಿತ್ತಲಾಗಿ ಪುನ: ವಿಸ್ತರಿಸುವ ವೇಗ ಹೆಚ್ಚುತ್ತಾ ಇದ್ದಡ.

ಐದು ಬಿಲಿಯ ವರ್ಷದ ವರೆಗಾಣ ಘಟನೆಗಳ ಸಮ್ಮತ ಅಪ್ಪ ಹಾಂಗೆ ವಿವರಿಸುಲೆ ನಮ್ಮ ಅವಗಾಹನೆಗೆ ಬಾರದ್ದ ಹೆಚ್ಚಿನ ದ್ರವ್ಯ ರಾಶಿ ಇದ್ದು ಹೇಳಿ ಗಣನೆಗೆ ತೆಕ್ಕೊಂದರೆ ಮಾತ್ರ ಸಾಧ್ಯ. ಅದಕ್ಕೆ  ‘ಕೃಷ್ಣ ದ್ರವ್ಯ’ (dark matter) ಹೇಳಿ ಹೆಸರು ಕೊಟ್ಟವು  ವಿಜ್ಞಾನಿಗೊ. ಅಲ್ಲಿಂದ ನಂತರ ಹೆಚ್ಚುತ್ತಾ ಹೋದ ಬೃಹತ್ ಗಾತ್ರದ (ಮಹತೋ ಮಹೀಯನ)  ವಿಶ್ವದ  ಈ ವೇಗೋತ್ಕರ್ಷಕ್ಕೆ ಕಾರಣವಾಗಿ ಅಗಾಧ ಶಕ್ತಿಯ ಮೂಲ ಇರೆಲೇ ಬೇಕು ಹೇಳಿ ವಿಜ್ಞಾನಿಗ ನಿರ್ಧರಿಸಿದವು. ಒಂದರ ಒಂದು ಆಕರ್ಷಿಸುವ ಗುರುತ್ವಾಕರ್ಷಣೆಯ ಮೀರಿ ಈ ರೀತಿ ಪರಸ್ಪರರಿಂದ ಗೆಲಾಕ್ಸಿಗ ದೂರ ದೂರ ಹೋಗೆಕ್ಕಾದರೆ ಅವಕ್ಕೆ ಸಾಕಷ್ಟು ಶಕ್ತಿಯ ಪೂರೈಕೆ ಆಗೆಕ್ಕು. ಅದರ dark energy ಹೇಳಿ ಹೆಸರಿಸಿದ್ದವು. ಅದಕ್ಕಾಗಿ ಕೃಷ್ಣ ಚೈತನ್ಯ (dark energy) ಹೇಳಿ ಒಂದು ಇದ್ದು – ಅದು ಈ ವಿದ್ಯಮಾನಕ್ಕೆ ಕಾರಣ ಹೇಳಿ ಅಂದಾಜಿ ಮಾಡಿದವು. ಈ ಕೃಷ್ಣ ಚೈತನ್ಯದ ನಿಜ ಸ್ವರೂಪದ (ಅಪ್ರಮೇಯನ) ಬಗ್ಗೆ ಇನ್ನೂ ಹೆಚ್ಚು ತಿಳಿವಲಾಯಿದಿಲ್ಲೆ.

ಒಟ್ಟಾರೆ ಹೇಳುದಾದರೆ ಈ ವಿಶ್ವದ ತೋರ ಮಟ್ಟಿನ ಪರಿಚಯ ಆಗೆಕ್ಕಾದರೂ (ಪೂರ್ಣ ಪರಿಚಯದ ಮಾತು ಆ ಮೇಲೆ) ಕೃಷ್ಣ ರಂಧ್ರ (black hole), ಕೃಷ್ಣ ದ್ರವ್ಯ (dark matter) ಮತ್ತು ಕೃಷ್ಣ ಚೈತನ್ಯ (dark energy) ಹೇಳುವ ಅಮೂರ್ತ ಕಲ್ಪನೆಗಳ ಆಸರೆ ಬೇಕಾವ್ತು. ಈ ಮೂರೂ ಕಲ್ಪನೆಗಳ ಕುರಿತಾಗಿ ಒಂದು ಸ್ಪಷ್ಟ, ವೈಜ್ಞಾನಿಕ ವಿವರಣೆ ಕೊಡುಲೆ ವಿಜ್ಞಾನಿಗೊಕ್ಕೆ ಇನ್ನೂ ಸಾಧ್ಯ ಆಯಿದಿಲ್ಲೆ. ಇದರ ಒಟ್ಟಾಗಿ ಕೃಷ್ಣ ತತ್ವ ಹೇಳಿ ನಾವು ಹೆಸರಿಸಿದರೆ, ಈ ಕೃಷ್ಣ ತತ್ವ ನಮ್ಮ ಬುದ್ಧಿಗೆ, ಪ್ರಯೋಗಕ್ಕೆ, ತಿಳುವಳಿಕೆಗೆ ಮೀರಿದ್ದು (ನಿಗಮಕೆ ಸಿಲುಕದ), ಅಪರಿಮಿತವಾದ್ದು (ಅಗಣಿತ ಮಹಿಮನ). ಹಾಂಗಿಪ್ಪ ಕೃಷ್ಣನನ್ನೇ ಅಬ್ಬೆ ಯಶೋದೆ ಆಡಿಸಿ ತೂಗಿದ್ದದು. ಹಾಂಗಾಗಿಯೇ ಯಶೋದೆಗೆ ಕೃಷ್ಣ ತನ್ನ ಬಾಯಿಲಿ ಇಡೀ ವಿಶ್ವವನ್ನೇ (ಅದುವೇ ತಾನು ಹೇಳುವ ಸತ್ಯವ) ತೋರಿದ – ಇದು ಸಾಂಕೇತಿಕ ವಿವರಣೆ.

ಹೀಂಗೆ ಇಡಿಯ ವಿಶ್ವಲ್ಲಿ ಎಲ್ಲೆಲ್ಲಿಯೂ ಈ ಕೃಷ್ಣ ತತ್ವ ಪಸರಿಸಿದ್ದು. ‘ಮಯಿ ಸರ್ವಮಿದಂ ಪ್ರೋತಂ, ಸೂತ್ರೇ ಮಣಿ ಗಣಾ ಇವ’. ಅಸಂಖ್ಯ-ಅನಂತ ರಹಸ್ಯಂಗಳ ತನ್ನಲ್ಲಿ ಹುದುಗಿಸಿಪ್ಪ ಇಡಿಯ ವಿಶ್ವವೇ ಭಗವಂತ ನವಗೆ ಪ್ರಕಟ ಅಪ್ಪ ರೂಪ.  ಆ ಭಗವಂತನ ವಿಶ್ವ ರೂಪ ದರ್ಶನವ ಚೆನ್ನೈ ಭಾವ ಅತ್ಯಂತ ಸುಂದರವಾಗಿ, ಸವಿವರವಾಗಿ ಮತ್ತು ಸಮರ್ಥವಾಗಿ ನಿರೂಪಿಸುತ್ತಾ ಇದ್ದವು.

ಐನ್ ಸ್ಟೀನನ ‘ಜನರಲ್ ರಿಲೇಟಿವಿಟಿ’ ಸಿದ್ಧಾಂತದ ಪ್ರಕಾರ ಆಕಾಶ (space)ವು ಬೆಳಕಿನ ವೇಗಕ್ಕಿಂತಲೂ ಹೆಚ್ಚಿನ ವೇಗಲ್ಲಿ ಹಿಗ್ಗುವ ಸಾಮರ್ಥ್ಯ ಹೊಂದಿಪ್ಪ ಕಾರಣ, ಬೆಳಕಿನ ವೇಗಲ್ಲಿ ಹೋದರೂ ನವಗೆ ಹಿಗ್ಗುತ್ತಾ ಇಪ್ಪ ವಿಶ್ವದ ಅಂಚಿನ ತಲುಪುಲೆ ಅಸಾಧ್ಯ. ಹಾಂಗಾಗಿ ನವಗೆ ಲಭ್ಯ ಇಪ್ಪ ಯಾವದೇ ಉಪಕರಣಂದಲೂ, ಮಾಧ್ಯಮಂದಲೂ (ಬೆಳಕು, ವಿದ್ಯುತ್ ಕಾಂತೀಯ ತರಂಗ …) ಈ ವಿಶ್ವದ ಕೊನೆಯ ತಲುಪುವ ವ್ಯವಸ್ಥೆ ಇಲ್ಲೆ. ಆದ ಕಾರಣ ಈ ವಿಶ್ವ ‘ಸಾಂತ’ವಾ ಅಲ್ಲ ‘ಅನಂತ’ವಾ ಹೇಳಿ ನಿಸ್ಸಂದೇಹವಾಗಿ ಹೇಳುಲೆ  ಸಾಧ್ಯ ಇಲ್ಲೆ.

ಇನ್ನು ವಿಶ್ವ ಮುಂದೆ ಎಂತ ಅಕ್ಕು ಹೇಳಿ ಅಂದಾಜಿ ಮಾಡಿದ ವಿಜ್ಞಾನಿಗ ಕೆಲವು ಸಾಧ್ಯತೆಗಳ ಪಟ್ಟಿ ಮಾಡಿದ್ದವು –

1. ವಿಶ್ವ ಅನವರತವಾಗಿ ಹಿಗ್ಗುತ್ತಾ ಹೋವ್ತು. ಹಾಂಗೆ ಆದರೆ, ಹಿಗ್ಗುತ್ತಾ ಹಿಗ್ಗುತ್ತಾ ಕೊನೆ ಕೊನೆಗೆ ಬರೇ ಕೃಷ್ಣ ರಂಧ್ರ (black hole)ಗಳೇ  ಇರ್ತವು. ಅವು ಕೂಡ ಕಾಲ ಕ್ರಮೇಣ ನಾಶ ಆಗಿ, ಅತೀ ತೆಳುವಾದ ಫೋಟೋನ್ ಮತ್ತು ಲೆಪ್ಟೋನ್ ಹೇಳುವ ಅನಿಲದ ರಾಶಿ ಆಗಿ ವಿಶ್ವ ಕೊನೆಗೊಳ್ಳುತ್ತು.

2. ಯಾವದೋ ಕಾರಣಂದ ಹಿಗ್ಗುವಿಕೆ ಕಡಮ್ಮೆ ಆಗಿ ಪುನ: ಕುಗ್ಗುವಿಕೆ ಪ್ರಾರಂಭ ಆದರೆ, ‘ಮಹಾ ಸಂಕೋಚ ಕ್ರಿಯೆ’ ಆವ್ತಾ ಆವ್ತಾ, ಮತ್ತೊಂದು ‘ಮಹಾ ಸ್ಫೋಟ’ದ ಹಾಂಗಿಪ್ಪ ಸ್ಥಿತಿಗೆ ನಾಂದಿ ಅಕ್ಕು.

3. ಈ ಎರಡೂ ಅಲ್ಲದ್ದ ಇನ್ಯಾವದೋ ಒಂದು ಅವಸ್ಥೆ ಅಪ್ಪ ಸಾಧ್ಯತೆಯೂ ಇದ್ದು – ಮುಂದಿನ ಗತಿಗಳ ಬಗ್ಗೆ ನಾವು ಮಾಡಿದ ಅಂದಾಜಿನ ಹಾಂಗೆ ನಡೆಯದ್ದೆ, ಅನಿರೀಕ್ಷಿತವಾಗಿ ಬದಲಾದ ವರ್ತನೆಯ ಈ ವಿಶ್ವ ತೋರಿದರೆ. ಅದು ನಮ್ಮ ಊಹೆಗೂ ಮೀರಿದ ವಿಷಯ.

ಈ ವಿಶ್ವ ಅನೇಕ ರಹಸ್ಯಂಗಳ ತನ್ನ ಗರ್ಭಲ್ಲಿ ಅಡಗಿಸಿಗೊಂಡಿದು. ಒಂದು ರಹಸ್ಯವ ಕಂಡು ಹಿಡಿದೆ ಹೇಳಿ ಅನಿಸುವಷ್ಟರಲ್ಲಿ ಇನ್ನೊಂದು ರಹಸ್ಯ ಪ್ರಕಟ ಆವ್ತು. ಮತ್ತೆ ನಾವು ಹಾಕಿಗೊಂಡ ಸೂತ್ರ, ಮಾದರಿಗಳ ಬದಲಾವಣೆ.

ಅರಿಸ್ಟಾಟಲ್ ಹೇಳಿದ ಎಷ್ಟೋ ತತ್ವಂಗ ಮುಂದೆ ಸರಿ ಅಲ್ಲ ಹೇಳಿ ಆತು.

ನ್ಯೂಟನ್ ಮಹಾ ಮೇಧಾವಿ ಹೇಳಿ ನೂರಿನ್ನೂರು ವರ್ಷ ಭಾವಿಸಿದವು. ಅವನ ತತ್ವಂಗ ಪ್ರಾಯೋಗಿಕವಾಗಿ ಸರಿ ಹೇಳಿ ಕಂಡತ್ತು ಕೂಡಾ.

ಅವನ ನಂತ್ರ ಬಂದ ಐನ್ ಸ್ಟೀನ್ ಕೆಲವು ವಿಶೇಷ ಸಂದರ್ಭಂಗಳಲ್ಲಿ ನ್ಯೂಟನ್ ನ ತತ್ವ ಸರಿ ಆವ್ತಿಲ್ಲೆ ಹೇಳಿ ಹೊಸದಾಗಿ ಸ್ಪೆಷಲ್ ರಿಲೇಟಿವಿಟಿ ಮತ್ತು ಜನರಲ್ ರಿಲೇಟಿವಿಟಿ ಸಿದ್ಧಾಂತಂಗಳ ಪ್ರತಿಪಾದಿಸಿದ.

ಇನ್ನು ಇನ್ನೊಬ್ಬ ಮೇಧಾವಿ ಬಕ್ಕು ಅದರ ಇನ್ನೂ ಪರಿಷ್ಕಾರ ಮಾಡುಲೆ. ಹಾಂಗಾದರೆ ಯಾವದು ನಿಜವಾದ ವ್ಯಾಖ್ಯಾನ? ಯಾವದು ತ್ರಿಕಾಲಾಬಾಧಿತ ಸತ್ಯ?

ಎಲ್ಲವೂ ಆಯಾ ಕಾಲದ ಲಭ್ಯ ಇಪ್ಪ ಉಪಕರಣಂಗಳ ಪ್ರಕಾರ, ಮಾಹಿತಿಗಳ ಪ್ರಕಾರ, ಅವಗಾಹನೆಯ ಪ್ರಕಾರ ಸರಿಯೇ. ಯಾವದೂ ತಪ್ಪಲ್ಲ. ಅದು ನಾವು ಗ್ರಹಿಸುವ ಮತ್ತು ಅರ್ಥ ಮಾಡಿಗೊಂಬ ನೆಲೆಲಿ ಸತ್ಯ ಆಗಿರ್ತು. ಹಾಂಗೇಳಿ ತಾನು ಕಂಡದು ಮಾತ್ರ ಸತ್ಯ, ಬೇರೆ ಎಲ್ಲ ಸುಳ್ಳು ಹೇಳಿ ಪ್ರತಿಪಾದಿಸುದು ತಪ್ಪು. ಅದನ್ನೇ ಹೇಳ್ತವು – ಏಕಂ ಸತ್, ವಿಪ್ರಾಃ ಬಹುಧಾ ವದಂತಿ.

ಅಂಬಗ ಪರಮ ಸತ್ಯದ ಜ್ಞಾನವ ನವಗೆ ಪಡವಲೇ ಸಾಧ್ಯ ಇಲ್ಲೆಯೋ? ಹಾಂಗಾದರೆ ಇದೆಲ್ಲ ವ್ಯರ್ಥ ಪ್ರಯತ್ನವೋ?, ಇದೆಲ್ಲ ಎಂತಕೆ ಬೇಕು? ಹೇಳುವ ಪ್ರಶ್ನೆ ನಮ್ಮಲ್ಲಿ ಬಪ್ಪದು ಸಹಜ. ಸತ್ಯ ದರ್ಶನದ ಬಗ್ಗೆ ಕೈಗೊಂಡ ಯಾವ ಪ್ರಯತ್ನವೂ ವ್ಯರ್ಥ ಅಲ್ಲ – ಅದು ನಮ್ಮಲ್ಲಿ ವಿನೀತ ಭಾವವ, ಸಜ್ಜನಿಕೆಯ, ಸಾತ್ವಿಕತೆಯ ಉಂಟಪ್ಪ ಹಾಂಗೆ ಮಾಡಿದರೆ ಅದು ಸಾರ್ಥಕ. ನಮ್ಮ ಅವಿರತ ಪ್ರಯತ್ನ ಮುಖ್ಯ. ಆ ಪ್ರಯತ್ನಲ್ಲಿ ನಾವು ಜಯ ಗಳಿಸಲೇ ಬೇಕು ಹೇಳಿ ಇಲ್ಲೆ. ಡಿ.ವಿ.ಜಿ. ಹೇಳುವ ಹಾಂಗೆ –

ಜಟ್ಟಿ ಕಾಳಗದಿ ಗೆಲ್ಲದೊಡೆ ಗರಡಿಯ ಸಾಮು  |

ಪಟ್ಟು ವರಸೆಗಳೆಲ್ಲ ವಿಫಲವೆನ್ನುವೆಯೇಂ? ||

ಮುಟ್ಟಿ ನೋಡವನ ಮೈಕಟ್ಟು ಕಬ್ಬಿಣ ಗಟ್ಟಿ |

ಗಟ್ಟಿ ತನ ಗರಡಿ ಫಲ – ಮಂಕು ತಿಮ್ಮ.||

ಕಾಳಗಲ್ಲಿ ಗೆಲ್ಲದ್ದ ಮಾತ್ರಕ್ಕೆ ಜಟ್ಟಿಯ ಗರಡಿಯ ವ್ಯಾಯಾಮ, ಅವ ಕಲ್ತ ಪಟ್ಟುಗ ಎಲ್ಲ ವೇಷ್ಟು ಹೇಳುಲಾಗ. ಅವನ ಪ್ರಯತ್ನಂದಾಗಿ ಏನಿಲ್ಲೆ ಹೇಳಿದರೂ ಅವನ ಮೈ ಗಟ್ಟಿ ಆತು. ಅವ ಸದೃಢನಾದ. ಅದು ಅವಂಗಪ್ಪ ಲಾಭ. ಹೀಂಗೇ ನಾವು ಮಾಡುವ ಪ್ರಯತ್ನಲ್ಲಿ ನಾವು ಜಯ ಗಳಿಸದ್ದೇ ಇದ್ದರೂ, ನಾವು ಸಮಾಜಲ್ಲಿ ಇನ್ನೂ ಉತ್ತಮ ಪ್ರಜೆ ಆದರೆ ನಮ್ಮ ಪ್ರಯತ್ನ ಸಫಲ ಆತು ಹೇಳಿಯೇ ಲೆಕ್ಖ.

ಇಲ್ಲಿ ವರೆಗೆ ಆನು ಹೇಳಿದ ವಿಷಯಂಗಳಲ್ಲಿ ಎಲ್ಲಾದರೂ ತಪ್ಪುಗೊ ಎನ್ನ ಅಜ್ಞಾನಂದಾಗಿ ನುಸುಳಿದ್ದರೆ ಸಹೃದಯವಂತರಾದ ಬಾಂಧವರು, ವಿದ್ವಜ್ಜನರು ಮನ್ನಿಸೆಕ್ಕಾಗಿ ಬೇಡಿಗೊಳ್ತೆ.

ಯೋ ವೇದಾದೌ ಸ್ವರ: ಪ್ರೋಕ್ತೋ, ವೇದಾಂತೇಚ ಪ್ರತಿಷ್ಠಿತ:

ತಸ್ಯ ಪ್ರಕೃತಿ ಲೀನಸ್ಯ, ಯ: ಪರ: ಸ: ಮಹೇಶ್ವರ:

ವೇದದ ಶುರುವಿಂಗೂ, ವೇದದ ಅಕೇರಿಗೂ ಸ್ಥಾಪಿತವಾದ, ಪರಮ ರಹಸ್ಯವಾದ, ಪ್ರಕೃತಿಲಿ ಲೀನವಾಗಿಪ್ಪ  ಪರಬ್ರಹ್ಮ ಸ್ವರೂಪೀ ಪ್ರಣವಕ್ಕೆ ವಂದಿಸುತ್ತಾ  ಎನ್ನ ಮಾತುಗಳ ಸಮಾಜ ಬಾಂಧವರಿಂಗೆ ಸಮರ್ಪಿಸುತ್ತೆ.

|| ಹರಿ: ಓಂ ||

ಪಟಿಕಲ್ಲಪ್ಪಚ್ಚಿ

   

You may also like...

11 Responses

 1. ಚೆನ್ನೈ ಭಾವ° says:

  ವಿಶ್ವರೂಪ ದರ್ಶನದ ಹಾಂಗೆ ಈ ವಿಶ್ವದರ್ಶನವೂ ರೋಚಕವೂ ವಿಸ್ಮಯವೂ ಆಗಿದ್ದು. ಸರಳ ಶೈಲಿ ಲಾಯಕ ಓದಿಸಿಗೊಂಡು ಹೋವ್ತು. ಅಕೇರಿಗೆ ಜಟ್ಟಿಕಾಳಗ ಪದ್ಯ ಈ ಶುದ್ದಿಲಿ ರೈಸಿತ್ತು.

  ಅಪ್ಪಚ್ಚಿಯ ಹೀಂಗಿರ್ತ ಇನ್ನೂ ಶುದ್ದಿಗೊ ಬೈಲಿಂಗೆ ಬೇಕು. ಹರೇ ರಾಮ ಅಪ್ಪಚ್ಚಿ. ನಮೋ ನಮಃ ನಿಂಗಳ ಆತ್ಮೀಯ ಬರವಣಿಗೆಗೆ.

  • ಪಟಿಕ್ಕಲ್ಲಪ್ಪಚ್ಚಿ says:

   ಚೆನ್ನೈ ಭಾವ, ನಿಂಗೊಗೆ ನಮೋ ನಮ:, ನಿಂಗಳ ಮೆಚ್ಚುಗೆಗೆ ಧನ್ಯವಾದಂಗ.

   ಇನ್ನೊಂದರಿ ಬೇರೆ ವಿಷಯದ ಬಗ್ಗೆ (ರಜ್ಜ ತಯಾರಿ ಮಾಡುತ್ತಾ ಇದ್ದೆ) ಮಾತಾಡುವೊ – ಕೆಲವು ದಿನಂಗಳ ನಂತರ.

 2. ಯ೦. ಕೆ. says:

  ಎರಡನೆ ನಡಿಗೆ ,ಪರಶುರಾಮರನ್ನು ಮೀರಿಸಿತ್ತು.

  ಈ ನಡಿಗೆ ಬೈಲಿನ ಒಳ ಸುನಾಮಿ ಎಬ್ಬಿಸುಲೆ ಹೊರಟಾ೦ಗೆ ಭಾಸ ಆವುತ್ತಾ ಇದ್ದು.

  ಕಳೆದ ದಶ೦ಬರ೨೧ ಕ್ಕೆ ಆಯೆಕ್ಕಾದು,

  ೫ಚಿತ್ರದ ಒಳ ಬಪ್ಪ ಒ೦ದನೆ ಚಿತ್ರದ ಬಿ೦ದುವಿಲಿ ಮಾತ್ರ ಹೇಳುವುದು ಗಮನೀಯ.

  93 ಬಿಲಿಯ ಜ್ಯೋತಿರ್ವರ್ಷದಷ್ಟು ದೊಡ್ಡ ವ್ಯಾಸದ ಒಂದು ಗೋಲಾಕಾರ.— ಅ೦ತು ಇಲ್ಲಿಯೂ ನರ್ವಸ್ ನೈ೦ಟಿ ಮಹಿಮೆಯೋ

  ಅಲ್ಲ ,ಬರಹದ ವಾಮನ ಅವತಾರವೋ ಹೇಳುತ್ತದು ರೋಮಾ೦ಚಕವೆ.

  ಕಳೆದ ಸ೦ಚಿಕೆಗಳಲಿ , ಲವ-ಕುಶ ವಾಯೇಜರುಗ ಸೌರ (ಚಕ್ರ) ವ್ಯೂಹದ ಅ೦ಚಿನ ತಲುಪಿದ ಬಗ್ಗೆ ಬ೦ದಿತ್ತು.

  ಆದರೂ , ಅಲ್ಲಿಗೆ ತಲುಪೆಕ್ಕಾದರೆ ,ಆ೦ಜನೇಯನ ನು೦ಗಲೆ ಬಾಯಿ ತೆರೆದು ಕೂದ ಹಾ೦ಗೆ ಇಪ್ಪ , ರಂಧ್ರ ೦ಗಳೋ-ಸುರ೦ಗ ೦ಗಳೋ ,, ಉಳಿದ ಗಣಿ-ತ ಪರಿವಾರ೦ಗ ಇಪ್ಪಗ ,ಇವು ಅಲ್ಲಿಗೆ ೩೫ ವರುಶ ಮಾರ್ಗ ಮಾಡಿದ ಬಗ್ಗೆ ಮತ್ತೆ ಮತ್ತೆ ಕಾಡುತ್ತಾ ಇದ್ದು.

  ನ್ಯೂಟ್ರಲ್ ರಹದಾರಿ -ಗುರುತು- ವೇಗ , ಎಲ್ಲಾ,ನಿಭಾಯಿಸುವ ಬಗೆ ,ಊಹೆಗೂ ನಿಲುಕದ್ದು.

  ಅ೦ತು ಎ೦ಗೋಗೆ ,

  ಬೈಲ ಗರಡಿಯ
  ಮ೦ಕುಮ೦ಕು ತಮ್ಮ೦ದಿರ ಪಟ್ಟಿಲಿ
  ಹಿ೦ದಾಣ ಸಾಲೇ ಗತಿ
  ಹೇಳೋದು ಗಟ್ತಿ ಆತು!

  • ಪಟಿಕ್ಕಲ್ಲಪ್ಪಚ್ಚಿ says:

   ನಿಂಗಳ ಪ್ರೋತ್ಸಾಹದ ಮಾತುಗೊಕ್ಕೆ ಧನ್ಯವಾದಂಗ.
   ಮತ್ತೆ ಇನ್ನೊಂದರಿ ಮಾತಾಡುವ.
   ನಿಂಗಳ ಪಟಿಕ್ಕಲ್ಲಪ್ಪಚ್ಚಿ

 3. ರಘು ಮುಳಿಯ says:

  ಅಪ್ಪಚ್ಚಿ,
  ಕೆಲವು ಸಮಯ ಮದಲು ಸ್ಟೀಫನ್ ಹಾಕಿಂಗ್ ನ “ಬ್ರೀಫ್ ಹಿಸ್ತರಿ ಆಫ್ ಟೈಮ್” ಓದುಲೆ ಹೆರಟು ತಲೆಬುಡ ಅರ್ಥ ಆಗದ್ದೆ ಪುಸ್ತಕ ಮುಚ್ಚಿ ಮಡಗಿತ್ತಿದ್ದೆ.ಇ೦ಗ್ಲಿಷಿಲಿ ಓದೊಗ ಕಬ್ಬಿಣದ ಕಡಲೆ ಅನ್ಸುವ ವಿಶ್ವದ ವಿಷಯ೦ಗಳ ನಮ್ಮ ಭಾಷೆಲಿ ಓದೊಗ ಸರಳವಾಗಿ ಅರ್ಥ ಆತು.
  ನಿ೦ಗೊ ಸಮಾಜಕ್ಕೆ ಹ೦ಚುತ್ತಾ ಇಪ್ಪ ಮಾಹಿತಿಗೊ ವಿದ್ಯಾರ್ಥಿಗೊಕ್ಕೆ ಭಾರೀ ಅನುಕೂಲ ಅಕ್ಕು.
  ಹೀ೦ಗಿಪ್ಪ ಅದ್ಭುತ ಲೇಖನ೦ಗೊ ಇನ್ನೂ ಬರಳಿ ಹೇಳಿ ಕೋರಿಕೆ.

 4. ಪಟಿಕ್ಕಲ್ಲಪ್ಪಚ್ಚಿ says:

  ರಘು ಮುಳಿಯ,
  ನಿಂಗೊ ಮೆಚ್ಚಿ ಕೊಟ್ಟ ಒಪ್ಪಕ್ಕೆ ಧನ್ಯವಾದಂಗ.

  ನಿಂಗಳ ಎಲ್ಲೋರ ಪ್ರೋತ್ಸಾಹದ ಮಾತುಗೊ ಎನಗೆ ಇನ್ನಷ್ಟು ಪ್ರಯತ್ನಕ್ಕೆ ಪ್ರೇರಣೆ ಆವ್ತು.
  ಆದಷ್ಟೂ ಬೇಗ ಇನ್ನೊಂದು ಸುದ್ದಿಯ ಬಗ್ಗೆ ಮಾತಾಡುವ.

  ನಿಂಗಳ ಪಟಿಕ್ಕಲ್ಲಪ್ಪಚ್ಚಿ

 5. ಮಾನೀರ್ ಮಾಣಿ says:

  ಅದ್ಭುತ ವಿವರಣೆ.

  ಒ೦ದು ಡೌಟು ಇದ್ದು “ಈ ವಿಶ್ವ ಯಾವುದಾದರೂ ವ್ಯವಸ್ಥಿತ ಆಕಾರದಲ್ಲಿ ಹಿಗ್ಗುತ್ತಾ ಇಪ್ಪದಾ? ವ್ರತ್ತಾಕಾರವಾಗಿಯೋ ಅಥವಾ Spiral ಆಗಿಯೋ ಅಥವಾ ಒ೦ದು ಕಡೆ ಹಿಗ್ಗಿ ಇನ್ನೊ೦ದು ಕಡೆ ಸಪೂರ ಆವ್ತಾ ಇದ್ದಾ? Spring ನ ಹಿಗ್ಗಿಸಿದರೆ ಆವ್ತಲ್ಲದಾ ಹ೦ಗೆ ಎ೦ತಾರೂ ಆವ್ತಾ ಇದ್ದಾ? ” ಇದರ ಬಗ್ಗೆ ಯಾವುದಾದರೂ ಥಿಯರಿಗೋ ಇದ್ದವಾ ಅಪ್ಪಚ್ಚಿ?

  ಮಾಹಿತಿಗೆ ಅನ೦ತ ಧನ್ಯವಾದ. ಸರಳವಾಗಿ ವಿವರಿಸುವ ಅಪ್ಪಚ್ಚಿಯ ಶೈಲಿ ಹಿಡುಸ್ತು 🙂
  ಅದಕ್ಕೇ ಅಲ್ಲದೋ ಡೌಟು ಕೇಳಿದ್ದು 😉 . ಈ ಬೊಡ್ಡು ತಲೆಗೆ ಅಪ್ಪಚ್ಚಿಯ ವಿವರಣೆಯೇ ಆಯೆಕ್ಕು ಕಾಣ್ತು..

 6. ಪಟಿಕ್ಕಲ್ಲಪ್ಪಚ್ಚಿ says:

  ತುಂಬ ಅರ್ಥ ಪೂರ್ಣ ಪ್ರಶ್ನೆ ಮಾಡಿದ್ದಿ.
  ನಿಂಗಳ ಪ್ರಶ್ನೆಗೊಕ್ಕೆ ಉತ್ತರಂಗ (ಒಂದಕ್ಕಿಂತ ಹೆಚ್ಚು ಸಾಧ್ಯತೆಗ ಇದ್ದು) ಕೇವಲ ಸಾಧ್ಯತೆಗ ಮಾತ್ರ. ಹೀಂಗೇ ಹೇಳಿ ಇನ್ನೂ ಖಡಾ ಖಂಡಿತ ನಿರ್ಧಾರ ಆಯಿದಿಲ್ಲೆ. ಒಂದು ಗೋಳಾಕಾರ ಆಗಿಕ್ಕು, ಕಾಗದದ ಶೀಟಿನ ಹಾಂಗೆ ಸಮತಲ (plane) ಆಗಿಕ್ಕು ಅಥವಾ ಕುದುರೆಯ ಮೇಲೆ ಹಾಸುವ ಕವರಿನ ಆಕಾರಲ್ಲಿಕ್ಕು.
  ಈ URL ನೋಡಿ –
  http://abyss.uoregon.edu/~js/cosmo/lectures/lec15.html

  ಆದರೆ ಒಂದು ಅಮೂರ್ತ ಕಲ್ಪನೆ ಮಾಡಿಗೊಳ್ಳೆಕ್ಕು – big bang ಅಪ್ಪಗ ದೇಶ (space) ಇನ್ಯಾವದೋ ಅವಕಾಶದ ‘ಒಳ’ದಿಕ್ಕಂಗೆ ಹಿಗ್ಗಿದ್ದಲ್ಲ. ತಾನೇ ತನ್ನೊಳಗೇ ಹಿಗ್ಗಿತ್ತು. ಯಾವದಕ್ಕೆ ಪರಿಧಿ (boundary) ಹೇಳಿ ಇದ್ದು ಅದರ shape ನ ನಾವು ಕಲ್ಪಿಸಿಗೊಂಬಲೆ ಆವ್ತು. ಬೌಂಡರಿಯೇ ಇಲ್ಲದ್ದರೆ? ಅದಕ್ಕೊಂದು ಆಕಾರ ಹೇಳ್ತದರ ಅದರಂದ ಹೆರಂದ ನೋಡಿ ನಿರ್ಧಾರ ಮಾಡುಲೆ ಆವ್ತಿಲ್ಲೆ. ಯಾವದು ಎಲ್ಲವನ್ನೂ ತನ್ನೊಳಗೇ ಹೊಂದಿದ್ದು ಅದಕ್ಕೆ ಪರಿಧಿ ಹೇಳಿ ಇಲ್ಲೆನ್ನೆ. ಹಾಂಗಾಗಿ ಅದಕ್ಕೆ ನಿರ್ದಿಷ್ಟ ಆಕಾರ ಹೇಳುವ ಕಲ್ಪನೆ ಮಾಡಿಗೊಂಬಲೆ ಆವ್ತಿಲ್ಲೆ. ಮೇಲೆ ಹೇಳಿದ ಸಂಕೋಲೆಲಿ ಕೆಲವೊಂದು ಸಂಭಾವ್ಯ ಉತ್ತರಂಗ ಚಿತ್ರ ಸಹಿತ ಕೊಟ್ಟಿದವು.

  • ಮಾನೀರ್ ಮಾಣಿ says:

   ಅನ೦ತ ಧನ್ಯವಾದಗಳು ಅಪ್ಪಚ್ಚಿ … 🙂
   ಹೀಗೆಯೇ ಸುದ್ದಿ ಬತ್ತಾ ಇರಲಿ ಹೇಳುವ ಕೋರಿಕೆ..

 7. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಲಾಯ್ಕ ಆಯಿದು.

 8. ಒಳ್ಳೆ ಮಾಹಿತಿ ಅಪ್ಪಚ್ಚೀ, ಹೀಂಗೆ ಮುಂದುವರಿಯಲಿ.. ಧನ್ಯವಾದಂಗೊ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *