ಬಯಲು ಸುನಾಮಿ

ಬಯಲು ಸುನಾಮಿ

ಈ ವಹಿವಾಟು ಈಗ ಭಾರೀ ಜೋರಾಯಿದಡ. ಸೈಟ್ ಮಾಡುವ ವಹಿವಾಟು.  ಈ ಕಾಲಲ್ಲಿ ಸೈಟ್ ಮಾಡ್ಯೊಳ್ಳದ್ರೆ ಆಗ ಹೇಳುವ ಪರಿಸ್ಥಿತಿ. ಜಾಗೆ ಕ್ರಯ ಹೆಚ್ಚಾಗಿಯೊಂಡೇ ಇಪ್ಪದಲ್ಲದೊ! ಹಾಂಗಾಗಿ ಜಾಗೆ ಮಾಡುವದು, ಮಾರುವದು, ಹೊಸತ್ತು ತೆಕ್ಕೊಂಬದು, ಅದಕ್ಕೆ ಕ್ರಯ ಬಪ್ಪಗ ಕೊಡುವದು ಹೀಂಗೆ ಒಂದು ಲಾಭ ಮಾಡುವ ಉದ್ಯೋಗ ಅಡ. ‘ರಿಯಲ್ ಎಸ್ಟೇಟ್’ ಹೇಳಿ ಹೇಳ್ತವದಕ್ಕೆ.

ಕೆಲವು ಜೆನ ಇದ್ದವಡ – ಬೇನಾಮಿ ಆಸ್ತಿ ಮಾಡುವವು. ಬೇನಾಮಿ ಹೇಳಿರೆ – ಹೆಸರೇ ಇಲ್ಲದ್ದ ಆಸ್ತಿ. ಹೇಳಿರೆ – ಇಲ್ಲದ್ದ ಹೆಸರಿಲ್ಲಿ ಒಂದು ಆಸ್ತಿ. ಒಬ್ಬನೇ ಹೆಚ್ಚು ಹೆಚ್ಚು ಜಾಗೆ ಮಡಿಕ್ಕೊಂಡ್ರೆ ನಾಳೆ ಕಷ್ಟ ಅಕ್ಕು ಹೇಳಿ.

ಇದರೆಡಕ್ಕಿಲ್ಲಿ ‘ಸುನಾಮಿ’ ಆಸ್ತಿ ಮಾಡುವದರ ನಿ೦ಗೊ ನೋಡಿದ್ದೀರೊ? ಅಲ್ಲಾ ಕೇಳಿದ್ದೀರೊ?

ಹಾ೦ಗಿಪ್ಪದೊಂದು ಈ ಬುದ್ಧಿವಂತನ ತಲೆಗೆ ಹೊಕ್ಕತ್ತೋ ಕಾಣ್ತು. ನಾವುದೆ ಸೈಟು ಮಾಡಿರಕ್ಕು ಹೇಳಿ. ಮುಂದೆ ಎಂತಾರೊಂದು ಉಪಯೋಗಕ್ಕಕ್ಕು ಹೇಳಿ. ಹಾ೦ಗೆ ಒ೦ದು ಪ್ರತಿಷ್ಠಿತ ಆಯಕಟ್ಟಿನ ಜಾಗೆಲ್ಲಿಯೇ ಒ೦ದು ಆಸ್ತಿ ಮಾಡಿಯಾತಡ. ಕ್ರಯ ಬಕ್ಕು ಹೇಳ್ಯೊಂಡಲ್ಲ. ಆವಶ್ಯಕತೆ ಇದ್ದು ಹೇಳ್ಯೊಂಡು. ಕ್ರಮೇಣ ಅದರಿಂದ ಲಾಭ ಇದ್ದು, ಒಳ್ಳೆದಕ್ಕು ಹೇಳಿಯೂ ಅನಿಸಿತ್ತು.

ಜಾಗೆಗೆ ಕ್ರಯ ಹೆಚ್ಚಕ್ಕು ಹೇಳ್ಯೊಂಡು ಜಾಗೆ ಮಾಡ್ಳೆ ಹೆಣಗುವವರ ಎಡೆಲ್ಲಿ – ಕೈಕಾಲು ನೀಡಿ ವಿಶ್ರಮಿಸಲೆ, ಕೂದು ಮಾತಾಡ್ಲೆ ಮಾಂತ್ರ ಜಾಗೆ ಸಿಕ್ಕಿರೆ ಸಾಕು ಹೇಳುವವೂ ಇದ್ದವಿದ. ಅಂತವು ಕೆಲವು ಜನ ಈ ಬುದ್ಧಿವಂತನೊಟ್ಟಿಂಗೆ ಸೇರಿದವು.

ಹಾಂಗೆ ಇದು ರಿಯಲ್ ಎಸ್ಟೇಟಿನ ಹಾಂಗೆ ಅಲ್ಲ. ಇದು ಬಯಲ್ ಎಸ್ಟೇಟಡ.

ನೋಡಿಯಪ್ಪಗ ಆರ ಜಾಗೆ ಹೇಳಿ ಪಕ್ಕನೆ ಆರಿಂಗೂ ಗೊಂತಾಗ. ಹಾಂಗೆ ಹೇಳಿ ಇದು ಬೇನಾಮಿಯೋ? ಅಲ್ಲಡಾ. ಸುನಾಮಿ ಅಡ! ಏ ದೇವರೆ!

ಸುನಾಮಿ ಹೇಳಿರೆ ಭಯಾನಕ ಅಲೆ ಉಂಟುಮಾಡ್ವವು ಅಲ್ಲ, ಹೃದಯಂಗಮ ತರಂಗಗಳ ಏಳುಸುವವು! ಇಲ್ಲಿ ಇಪ್ಪವೆಲ್ಲ ‘ಒಳ್ಳೆ ಹೆಸರು’ ಇಪ್ಪವು.

ಇದರ `ಸುನಾಮಿ‘ಗ ಹೇಳುವದರಲ್ಲಿ ಒ೦ದು ಔಚಿತ್ಯ ಇದ್ದು. ಇಲ್ಲಿ ಜಾಗೆ ಮಾಡುವವು, ನೋಡ್ಲೆ ಬಪ್ಪವು, ಮಾತಾಡುವವು – ಹೆಸರಿಲ್ಲದ್ದವು (ಬೇನಾಮಿ) ಅಲ್ಲ. ಎಲ್ಲೋರಿ೦ಗೆ ಗೊ೦ತಿಪ್ಪ ಹಾ೦ಗೆ ಒ೦ದು ಒಳ್ಳೆ (ಒಪ್ಪ) ಹೆಸರು  ಮಡಿಕ್ಕೊಂಬ ಕಾರಣ ಇದಕ್ಕೆ ಸುನಾಮಿ ಹೇಳಿದ್ದಾಯಿಕ್ಕು- ಹೇಳುವ ಅನಿಸಿಕೆ ಹಲವು ವಲಯ೦ಗಳಲ್ಲಿ ಹರಿದಾಡ್ತಾ ಇದ್ದು.

ಈ ಜೆನಕ್ಕೆ ಕೆಲವು ಹಿತಾಸಕ್ತಿಗೊ ಇದ್ದು. ಅದು ಕೋಮು ಹಿತಾಸಕ್ತಿ.  ಆ ಆಸ್ತಿದಾರನ ಸ್ವಜನ ಪಕ್ಷಪಾತವೂ, ಸ್ವಜನ ಹಿತಾಸಕ್ತಿಯೂ ಆವ್ತಾ ಇದ್ದಡ. ಇವರ ಧ್ಯೇಯ ಒ೦ದು ಕೋಮಿನ ಬಲಪಡಿಸುವದು. ಅದಕ್ಕಾಗಿ ಹಳತ್ತರ ಒಕ್ಕುದು, ಹೊಸತ್ತಿನೊಟ್ಟಿಂಗೆ ಸೇರುಸುದು, ಮು೦ದೆ ತೆಕ್ಕೊ೦ಡು ಹೋಪದು. ಹೀ೦ಗೆಲ್ಲ ಅವರ ಧ್ಯೇಯವೂ, ಎಜೆಂಡವುದೆ ಅಡ. ಹೇಳಿ ನ೦ಬಲರ್ಹ ಮಾಹಿತಿಂದ ತಿಳಿದು ಬಯಿಂದಡ.

ಹಾ೦ಗೆ ಹೇಳಿ ಇವು ಮುಖವಾಡ ಹಾಕಿಗೊ೦ಡಿದವಿಲ್ಲೆ. ‘ಎ೦ಗಳದ್ದು ಕೋಮು’ವಾದ ಹೇಳಿಯೇ ರಿಜಿಸ್ತ್ರಿ ಮಾಡಿದ್ದವು ಹೇಳುದು ವಿಶೇಷ ಸ೦ಗತಿ. ಸರಿಯಾದ ಕಾರ್ಯವನ್ನುದೆ ಕದ್ದು ಮುಚ್ಚಿ ಮಾಡೆಕಾದ ಈ ಕಾಲಲ್ಲಿ ಹೀ೦ಗೆ ಧೈರ್ಯಲ್ಲಿ ಹೇಳಿಗೊಂಬದು ಒ೦ದು ವಿಶೇಷತೆ. ಬೇಕಾರೆ ಹೋಗಿ ನೋಡಿ- ಎಂಗಳದ್ದು “ಕೋಮು” ಹೇಳಿಯೆ ಹೆಸರು ಬರದು ಮಡುಗಿದ್ದವು- ಹೇಳಿ ಮತ್ತೆ ಕೆಲವರ ಅಂಬೋಣ ಅಡ.

ಕಾಲ ಹೋದ ಹಾಂಗೆ ಈ ಸೈಟ್ (site) ಎಲ್ಲೋರ ಸೈಟಿಂಗೆ (sight) ಬೀಳ್ಳೆ ಸುರುವಾತು. ಇದರ ಕೋಂಪೌಂಡಿನ ಒಳ ಜೆನ ಬಪ್ಪಲೆ ಸುರುವಾತು. ಅವರ ದೃಷ್ಟಿ ಬಿದ್ದದರಿಂದ ಇದಕ್ಕೆ ಹಾನಿ ಏನೂ ಇಲ್ಲೆ. ಎಂತಕೆ ಹೇಳಿರೆ ಅವು ಬಂದದು ನುಂಗಲೆ ಅಲ್ಲ, ಇದರ ಗಡಿ ವಿಸ್ತರುಸಲೆ. ಬಂದವುದೆ ಹೀ೦ಗೆ ಗಡಿ ವಿಸ್ತರಿಸಲೆ ಕೈ ಜೋಡುಸಿದ್ದದು – ಈ ಬಯಲು ಎಸ್ಟೇಟಿನವರ ವ್ಯವಹಾರ ಕುಶಲತೆಯ ಕಾರಣಂದಲೇ ಹೇಳಿ ಹಲವರ ಅನಿಸಿಕೆ. ಹಾಂಗೆ ಇವರ ಹಿ೦ಬಾಲಕರ ಸ೦ಖ್ಯೆ ಬೆಳೆತ್ತಾ ಇದ್ದು – ಹೇಳಿ ಆಸುಪಾಸಿನವಕ್ಕೆ ಕ೦ಡು ಬ೦ದ ವಿಷಯ.

ವ್ಯವಹಾರ ಹೇಳಿರೆ ತಲೆಬೆಶಿ ಇಪ್ಪ ಕಾರ್ಯ ಇದಾ!. ಆದರೆ ಇಲ್ಲಿ ಬಪ್ಪ ಕೆಲವು ಪುಳ್ಳರು, ಮಾನಸಪುತ್ರರ ಹಾ೦ಗಿಪ್ಪವು ಕೆಲವು ಜೆನ ಬತ್ತವಡ ಬೆಶಿ ತಣುಶಲೆ.

ಇಲ್ಲಿಯೂ ಒಬ್ಬ ಕಾವಲುಗಾರ ಇದ್ದ. ಬೇರೆಲ್ಲೆ ಕಡೆ ಕಾವಲುಗಾರ ಕೆಳ ಮಟ್ಟಲ್ಲಿದ್ದರೆ ಇಲ್ಲಿ ಜಮೀನ್ದಾರನಿ೦ದ ಮೇಲಾಣ ಸ್ತರ, ಎ೦ತಕೆ ಹೇಳಿರೆ ಇವ ಗುರ್ ಹೇಳುವವ ಅಲ್ಲ- ಇಪ್ಪವಕ್ಕೆ, ಬಪ್ಪವಕ್ಕೆಲ್ಲ ಗುರಿ ತೋರುಸಲೆ ಇಪ್ಪವ. ಆದರೆ ಕಾಂಬಲೆ ಸಿಕ್ಕುವದು ಕಮ್ಮಿ.

ಇಷ್ಟೆಲ್ಲ ದೊಡ್ಡ ಜಾಗೆ ಇದ್ದರುದೆ ಬೇಲಿ ಹಾಕದ್ದೆ, ಧೈರ್ಯಲ್ಲಿ ಓಡಾಡುವದು ಹೇ೦ಗಡ? ತ್ವರಿತವಾಗಿ ಅಭಿವೃದ್ಧಿ ಹೊಂದುವದು ಹೇಂಗಡ ಹೇಳಿ ಬಂದ ಪ್ರಶ್ನೆಗೆ ಉತ್ತರ ಸಿಕ್ಕಿದ್ದು – ಇವಕ್ಕೆಲ್ಲ ಗುರುಬಲ ಇದ್ದು ಹೇಳಿ.

ವಹಿವಾಟಿಲ್ಲಿ ರಜ್ಜ ಪ್ರಚಾರ ಬೇಕಿದ! ಹಾಂಗೆ ಈ ಜಾಗೆ ವ್ಯವಹಾರಲ್ಲಿ ವಾರವಾರವೂ ಸುದ್ದಿ ಬಿಡುಗಡೆ ಆಯೆಕಾವ್ತಡ. ಅದು ಹೇಂಗೆ ಪ್ರಕಟ ಆವ್ತು – ಅದು ಸುನಾಮಿಯ `ತರ೦ಗ‘ದ ಹಾಂಗೆ, ಭಾಷೆಯ `ಸುಧೆ‘ಯ ಹರುಸುವ ಹಾಂಗೆ. ಸುರುವಿಂಗೆ ವಾರ ವಾರವೇ ಮಾ೦ತ್ರ ಇತ್ತು. ಮತ್ತೆ ವ್ಯವಹಾರ ಹೆಚ್ಚಪ್ಪಗ ಅ೦ಬಗ೦ಬಗ ಸೂಚನೆ ಬಿಡುಗಡೆ ಮಾಡ್ತವು, ಅದು ದಿನಾ ದಿನಾ  ಉದಯವಾಗಿಯೊಂಡು ಹವ್ಯಕಕನ್ನಡದ ಪ್ರಭೆಯ ತೋರುಸಿ `ಹೊಸ ದಿಗ೦ತ’ ಕಾಣುಸುವ ಹಾಂಗೆ ಹೇಳಿ ಅನ್ಸುತ್ತಡ. ಇಲ್ಲಿ ಬಪ್ಪ ಕವಿತಾ ಚ೦ದ್ರಿಕೆ ಕರಾವಳಿಲ್ಲಿ ಏಳುವ ಅಲೆಯ ಹಾಂಗಡ.

ಈ ವಹಿವಾಟಿನ ಯೆಜಮಾನ೦ಗೆ ಎಲ್ಲೆಲ್ಲಿ೦ದಲೋ ಬಾತ್ಮೀದಾರರು. ತಿರುಗಾಡುವ ಪತ್ರಕರ್ತರು. ಗುಪ್ತಚರರು. ಇವೆಲ್ಲ ಬೇರೆ ಜಾಗೆಲ್ಲಿ ಎ೦ತ ಸುದ್ದಿ ಹೇಳಿ ತಿಳುದು ಇಲ್ಲಿಗೆ ಕಳುಶುತ್ತವು. ಇವರಲ್ಲಿ ದೈನಿಕ, ಸಾಪ್ತಾಹಿಕ, ಪಾಕ್ಷಿಕ, ಮಾಸಿಕ, ತ್ರೈಮಾಸಿಕ, ವಾರ್ಷಿಕ ಅಥವಾ ವಿಶೇಷಾಂಕ ವರದಿಗಾರರಾಗಿ ಇದ್ದವು. ಶುದ್ದಿ ತಿಳುಶುವ ಅವಧಿಯ ಅನುಸರಿಸಿಯೊಂಡು ಅವರ ಸ್ಥಾನ ನಿರ್ಣಯ ಆವುತ್ತದಡ.

ಇಲ್ಲಿ ಹಳೇ ಪ್ರಜಾಮತಕ್ಕೂ ಬೆಲೆ ಇದ್ದು; ಬಾಲಮಂಗಳದ ಡಿಂಗ, ಲಂಬೋದರನ ಹಾಂಗಿಪ್ಪವಕ್ಕೂ ಬೆಲೆ ಇದ್ದು.

ಒಬ್ಬನ ಹೆಸರಿಲ್ಲೇ ಜಾಗೆ ಮಾಡಿರೆ ಸಿಕ್ಕಿಬೀಳುಗಡ. ಹಾಂಗಾಗಿ ಸುಮಾರು ಜೆನಕ್ಕೆ ಕ್ರಯಚ್ಚೀಟು ಮಾಡಿ ಕೊಡುವ ಕ್ರಮ ಇದ್ದಡ.

ಈ ಜಾಗೆ ವ್ಯವಹಾರದ ಪ್ರಸಿದ್ಧಿ ಎಷ್ಟಿದ್ದು ಕೇಳಿರೆ – ಯಾವ್ಯಾವೊ ದೇಶದವು ಸ್ವಿಸ್ ಬೇ೦ಕಿಲ್ಲಿ ಖಾತೆ ತೆಗವ ಹಾ೦ಗೆ ಇಲ್ಲಿಯೂ ಬೇರೆ ಬೇರೆ ದೇಶ, ಪ್ರದೇಶಲ್ಲಿಪ್ಪವು ಜಾಗೆ ತೆಗದು ಮಡುಗಿದವು ಇದ್ದವಡ. ಅ೦ಬಗ೦ಬಗ ಬ೦ದು ಜಾಗೆ ಸರಿ ಇದ್ದೊ ಹೇಳಿ ನೋಡಿಕ್ಕಿ ಎ೦ಗೊ ಇದ್ದೆಯೊ ಹೇಳಿ ಮೋರೆ ತೋರುಸಿ ಹೋವ್ತವು.

ಇಲ್ಲಿಯೂ ದೊಡ್ಡಾ ಸಾಮ್ರಾಜ್ಯಲ್ಲಿ ತುಂಡರಸರ ಹಾಂಗೆ ತುಂಬ ರಾಜರ್ಗಳು ಇದ್ದವು. ಅವರವರ ರಾಜ್ಯವ ಗಮ್ಮತ್ತಿಲ್ಲಿ ನೆಡಸುತ್ತವು. ಕೆಲವು ರಾಜರು ಅಂತೂ ಕೊಟ್ಟ ಜಾಗೆಲಿ ಚೆನ್ನಾಗಿ ಕೃಷಿಮಾಡಿಸಿದವು, ಉದ್ಯಾನ ಮಾಡಿದವು,  ಹೆಮ್ಮರವ ಬೆಳಶಿದವು, ಅದರ ಗೆಲ್ಲಿಂಗೆ ಉಯ್ಯಾಲೆ ಕಟ್ಟಿ ಬ್ರಹ್ಮಭಾಮಿನಿ ಸರಸ್ವತಿಯ ತೂಗಲೆ ಸುರುಮಾಡಿದ್ದವು. ದೇವಿಗೆ ಸುಂದರ `ಉಡುಪು’ ತೊಡುಸಿ ಅಲಂಕರಿಸಿದವು. ಗೀತ-ಸಂಗೀತ ವೈಭವಂದ ಕಾರ್ಯಭಾರ `ಚೆನ್ನಾಗಿ’ ನಡೆತ್ತಾ ಇದ್ದು.

ಮೂರನೇ ಸರ್ತಿಯೂ ಗೆದ್ದು ಮೋಡಿ ಮಾಡಿರೆ ದೊಡ್ಡ ಗದ್ದುಗೆಲ್ಲಿ ಒಡ್ಡೋಲಗ ಆಯೆಕು ಹೇಳ್ವದು ಅಂಬೋಣ ಅಡ. ಹಾಂಗೆಯೇ ಇದೆಲ್ಲ ಸುರುಮಾಡಿದ ಸುನಾಮಿ ಪ್ರಭು ಮೂರೇ ವರ್ಷಲ್ಲಿ ‘ಶ್ವೇತ’ಚ್ಛತ್ರಾಧಿಪತಿಯಾಗಿ ಚಕ್ರವರ್ತಿಯೂ ಆದ ಅಡ. ದಿಗ್ವಿಜಯಂಗೈದುದೆ ಬಂದನಡ. ರಾಜ್ಯದ ಮೂಲರೂಪದೊಟ್ಟಿಂಗೆ ಹೊಸಹೊಸ ಸ್ವರೂಪ ಬಪ್ಪಲೆ ಸುರುವಾತು. ಜಾಗೆಯ ಶೋಭೆ ವರ್ಧಿಸಿದ್ದು ಹೇಳಿ ಹಲವರ ಅ೦ಬೋಣ.

 ಒಟ್ಟಿಲ್ಲಿ –

ಶುರುವಿಂಗೆ ಇದೊಂದು ಎಸ್ಟೇಟ್ ಆಗಿ ಬೆಳದತ್ತು. ಮತ್ತೆ  ಎ- ಸ್ಟೇಟ್ ಹೇಳುವ ಹಾಂಗೆ ಇದರ ಸ್ಟೇಟಸ್ ಬದಲಿತ್ತೋ ಹೇಳಿಯೂ ಹೇಳುವ ಹಾಂಗೆ ಆತು.

 

ಡಾಮಹೇಶಣ್ಣ

   

You may also like...

5 Responses

 1. ರಘು ಮುಳಿಯ says:

  ಹ.ಹಾ..ಎಡಿಯಪ್ಪ ಈ ಮಹೇಶಣ್ಣನ ಹತ್ತರೆ !
  ನಾವು ಪತ್ತೇದಾರಿ ಕತೆ ಓದಿದ ಹಾ೦ಗೆ ಓದಿದಲ್ಲೇ ಬಾಕಿ..
  ಮತ್ತೆ ನೋಡಿರೆ !!

 2. ಶರ್ಮಪ್ಪಚ್ಚಿ says:

  ಸುನಾಮ ಇಪ್ಪ ಬಯಲಿನ, ಬಯಲು ಮಾಡಿದ ಶುದ್ದಿ ಲಾಯಿಕ ಆಯಿದು.

 3. ಬೇಕಾವ್ತಪ್ಪ… ಸುಣ್ಣ ಬಣ್ಣ ಬಳಿವಲೂ ಜೆನ ಬೇಕು ಬೇಕು. ಮುಳಿಯಭಾವ ಹೇಳಿದ ಕ್ರಮ ಲಾಯಕ ಆಯ್ದುದೇ ಈ ಶುದ್ದಿಗೆ. ಗುರುಬಲ ತಾರಾಬಲ ಎಲ್ಲವೂ ಬೇಕು ಬೇಕು.

 4. jayashree.neeramoole says:

  ಲೇಖನಿಯ ಮೂಲಕ ಸರಸ್ವತಿ ಇಳಿದು ಬಪ್ಪದು ಹೇಳಿರೆ ಹೀಂಗೆ ಆದಿಕ್ಕಲ್ಲದ… ಅದೇನೋ ಮೋಡಿಲಿ ಓದುಸುತ್ತ ಹೋವುತ್ತು ಪತ್ತೇದಾರಿ ಕಾದಂಬರಿಯ ಹಾಂಗೆ ನಿಜವಾಗಿ ನೋಡಿದರೆ ಸರಸ್ವತಿಯ ವರ್ಣನೆ… ಮನಸಿಲ್ಲಿ ಅಚ್ಚಳಿಯದೆ ನೆನಪೊಳಿವಂತಹ ವರ್ಣನೆ… ಮಹೇಶಣ್ಣ೦ಗೆ ಅಭಿನಂದನೆಗ… ಹರೇ ರಾಮ…

 5. ತೆಕ್ಕುಂಜ ಕುಮಾರ ಮಾವ° says:

  ಅಬ್ಬ..! ತುಂಬ ಸಮಯ ಕಳುದು ಬರದ ಡಾ.ಮಹೇಶಣ್ಣನ ಶುದ್ದಿ ‘ಸುನಾಮಿ’ಯನ್ನೇ ಎಬ್ಬಿಸಿತ್ತು.
  ಲಾಯಿಕ್ಕಾಯಿದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *