Oppanna.com

ಕಾರ್ಯಯಶಸ್ಸಿಂಗೆ ತ್ರಿಮೂರ್ತಿಗೊ – ಬದ್ಧತೆ, ಬುದ್ಧತೆ, ಸಿದ್ಧತೆ..!

ಬರದೋರು :   ಒಪ್ಪಣ್ಣ    on   14/11/2014    2 ಒಪ್ಪಂಗೊ

ಮಾಷ್ಟ್ರುಮಾವನ ದೊಡ್ಡಮಗ° ಅಮೇರಿಕಲ್ಲಿಪ್ಪದು ಹೇಳ್ತ ಸಂಗತಿ ಗೊಂತಿಕ್ಕು ನಿಂಗೊಗೆ.
ಅಮೇರಿಕಲ್ಲಿ ಇಪ್ಪದು ಹೇದರೆ, ಅಮೇರಿಕಲ್ಲಿ ಮಾಂತ್ರ ಇಪ್ಪದೋ? ಅಲ್ಲ. ಒರಿಶಕ್ಕೊಂದರಿ ಆದರೂ ಬಂದು ಮಾಷ್ಟ್ರುಮಾವನ ಕಂಡಿಕ್ಕಿ ಹೋಗದ್ದೆ ಇರ°. ಒಂದೆರಡು ವಾರದ ಪುರುಸೊತ್ತಿಂಗೆ ಹೇದು ಇಲ್ಲಿಗೆ ಬಪ್ಪದಾದರೂ, ವಾರದ ಪ್ರತೀ ದಿನವೂ ಅಪ್ಪನ ಮನೆ ಮಾವನ ಮನೆ – ಹೇದು ತಿರುಗಾಟಲ್ಲಿ ಪುರುಸೊತ್ತು ಇಂತಿಷ್ಟೇ ಹೇದು ಇದ್ದು. ಆ ಸಮೆಯ ಇಡೀಕ ಮಾಷ್ಟ್ರುಮಾವಂಗೆ ಹಬ್ಬವೇ! ಶೇಕುಸ್ಪಿಯರಿಂದ ಹಿಡುದು ಶೇಕು ಅದ್ದುಲ್ಲನ ಒರೆಂಗೆ, ಮೋದಿಂದ ಮಾಂದಿಯ ಒರೆಂಗೆ ಎಲ್ಲೋರ ಸಂಗತಿಯೂ ಮಾತಾಡ್ಳೆ ಇದ್ದು! ಅಪೂರ್ವಲ್ಲಿ ಅದೇ ಹೊತ್ತಿಂಗೆ ನಾವು ಅಲ್ಲಿಗೆ ಹೋಗಿದ್ದರೆ ಒಂದೊಂದು ಮಾತುಕತೆಗೊ ನವಗೆ ಕೇಳುದೂ ಇದ್ದು. ಅದಾ – ಅಂದೊಂದರಿ ಭೈರಪ್ಪಜ್ಜನ ಪುಸ್ತಕಂಗಳ ಬಗ್ಗೆ ಒಪ್ಪಣ್ಣಂಗೆ ಗೊಂತಾದ್ಸು. ( ಸಂಕೋಲೆ )

ಅದಿರಳಿ.
~

ನಿನ್ನೆ ದೊಡ್ಡಭಾವನ ಮನೆಲಿ ಗವುಜಿ. ದೊಡ್ಡಳಿಯಂಗೆ ಅಪ್ಪನ ಹುಟ್ಟಿದದಿನದ ಗವುಜಿ. ಹಾಂಗೆ ತಾನೇ ಉಸ್ತುವಾರಿ ತೆಗದು – ಹಸರ ಬೇಳೆ ತಂದು ಕೊಟ್ಟು – ಇದಾ ಅಮ್ಮ, ಪಾಚಮಾಡುವೊ° – ಹೇದು ಹೇಳಿದನಾಡ. ಆ ಪ್ರಕಾರ ನಿನ್ನೆ ಅಲ್ಲಿ ಹಸರ ಪಾಚ. ಯೇವತ್ರಾಣಂತೆ ಹಾಲಿನ ಡಿಪ್ಪೊಂದ ಕೆಳ ಇಳುದು ಬಪ್ಪಗ ಅವರ ಜಾಲಕರೆಂಗೆ ಎತ್ತುವಾಗ ಜೋರು ದಿನಿಗೆಳಿದ° ದೊಡ್ಡಳಿಯ° – ಹಸರಪಾಚ ಕುಡಿಯಲೆ. ಹಾಂಗೆ ಹೋಗಿ ಕಾಲುನೀಡಿ ಪಾಚಕುಡುದಿಕ್ಕಿ ಬಂದ್ಸು. ದೊಡ್ಡಕ್ಕನ ಪಾಕ ಮತ್ತೆ ಕೇಳೇಕೋ – ಒಳ್ಳೆ ರೈಸಿದ್ದು. ಒತ್ತಾಯ ಮಾಡ್ಸಿ ಎರಡೂವರೆ ಗ್ಲಾಸು ಕುಡುದೆ. ಕಾಲುನೀಡಿ ಕೂದೆ, ಹೊಟ್ಟೆಗಿಳಿವನ್ನಾರ. ರಜ ಹೊತ್ತಪ್ಪಗ ಮೆಲ್ಲಂಗೆ ಹೆರಟೆ. ಅರ್ಧದಾರಿಗೆ ಎತ್ತುವಾಗ ನೆಂಪಾತು, ಹುಟ್ಟಿದ ದಿನದ ಲೆಕ್ಕದ ಶುಭಾಶಯ ಹೇಳುಲೆ ಮರದ್ಸು – ಹೇದು. ಛೇ, ತೊಂದರಿಲ್ಲೆ – ಪಾಚ ಇನ್ನೂ ಇದ್ದ ನೆಂಪು. ನಾಳಂಗೆ ಒಳುದಿಕ್ಕು. ಹಾಂಗೆ ನಾಳೆ ಹೋದರೆ ಸಾಕು – ಹೇದು ಸಮಾದಾನ ಮಾಡಿಗೊಂಡು ಮುಂದುವರುದೆ.

ಚೀಪೆ ತಿಂದದು ರಜಾ ಕರಗೇಕು.
ಕರಗೇಕಾರೆ ಎಂತ ಮಾಡೇಕು? ರಜ ನೆಡೇಕು. ಹೇಂಗೂ ದಾರಿಲೇ ಇದ್ದೆ – ಹಾಂಗೇ ಮುಂದೆ ನೆಡದರೆ ಎಂತ ಹೇದು ಕಂಡತ್ತು!
ಟ್ರಾನ್ಸುವಾರು ಮರದತ್ತರೆ ಮನೆಗೆ ಎಡತ್ತು ತೆಕ್ಕೊಳ್ತ ಬದಲು ಬಲತ್ತಿಂಗೆ ತೆಕ್ಕೊಂಡೆ. ಅಲ್ಲೇ ಮುಂದೆ ಹೋದರೆ ಮಾಷ್ಟ್ರುಮಾವನ ಮನೆ, ಆಚಮನೆ ದೊಡ್ಡಪ್ಪನ ಮನೆ, ಈಚಕರೆ ಪುಟ್ಟನ ಮನೆ ಎಲ್ಲವುದೇ ಸಿಕ್ಕುತ್ತಿದಾ. ಅದರ್ಲೇ ಮುಂದೆ ನೆಡದು ಎತ್ತಿದ್ದು ಮಾಂತ್ರ ಮಾಷ್ಟ್ರುಮಾವನ ಮನೆಗೆ. ಅಮೇರಿಕಲ್ಲಿಪ್ಪ ಮಗ° ಮನೆಗೆ ಬಂದಿದ್ದ ಕಾರಣವೋ ಏನೋ ಮಾಷ್ಟ್ರುಮಾವ° ಎಲೆ ತಿನ್ನದ್ದೇ ಮಾತಾಡಿಗೊಂಡಿತ್ತಿದ್ದವು. ಅಪೂರ್ವಕ್ಕೊಂದೊಂದರಿ ಕಾಣ್ತ ಮೋರೆಗೆ ನಮಸ್ಕಾರದ ನೆಗೆಮಾಡಿಂಡು ಕರೇಲಿ ಕೂದುಗೊಂಡು ಕೇಳಿದೆ.

~

ಮನುಷ್ಯನ ಕಾರ್ಯಯಶಸ್ಸಿಂಗೆ ಇಪ್ಪ ತ್ರಿಮೂರ್ತಿಗೊ ಯೇವದೆಲ್ಲ – ಹೇಳ್ತರ ಬಗ್ಗೆ ವಿಶೇಷವಾದ ಉದಾಹರಣೆ ಸಹಿತ ವಿಮರ್ಶೆ ಆಗಿಂಡಿದ್ದತ್ತು. ಮಾಷ್ಟ್ರುಮಾವ° ಕೋಲೇಜಿಲಿ ಕಲಿತ್ತ ಕಾಲಲ್ಲಿ ಅವಕ್ಕೆ ಮಾಷ್ಟ್ರ° ಆಗಿದ್ದ ಅರ್ತಿಕಜೆ ಅಜ್ಜ° ಹೇಳಿದ ಸಂಗತಿ ಆಡ. ಅರ್ತಿಕಜೆ ಅಜ್ಜ° ಹೇಳಿದ ಕತೆಗೆ ದೊಡ್ಡಜ್ಜನ ಅಪ್ಪ° ತೋಟ ಮಾಡಿದ ಸನ್ನಿವೇಶವ ಜೋಡುಸಿಗೊಂಡು ಶ್ರದ್ಧೆಲಿ ಮೊನ್ನೆ ವಿವರ್ಸಿಗೊಂಡು ಇತ್ತಿದ್ದವು.

~

ಕೆಲಸ ಸುರುಮಾಡ್ಳೆ ಎಲ್ಲೋರುದೇ ಮಾಡ್ತವಾಡ. ಆದರೆ ಅದರ ಕೊಡಿ ಎತ್ತುಸುದು ಕೆಲವೇ ಕೆಲವು ಜೆನಂಗೊ. ಕೆಲವು ಜೆನಕ್ಕೆ ಆರಂಭಶೂರತ್ವ ಇಕ್ಕು. ಮತ್ತೆ ಕೆಲವು ಜೆನಕ್ಕೆ ಅನುಭವ ಕೊರತೆ ಇಕ್ಕು. ಮತ್ತೆ ಕೆಲವು ಜೆನಕ್ಕೆ ಹಲವಾರು ಅಡೆತಡೆಗೊ ಇಕ್ಕು. ಆದರೆ, ಇದೆಲ್ಲವನ್ನೂ ಮೆಟ್ಟಿ ನಿಂದು ಮೀರಿ ನೆಡವಲೆ ಬೇಕಾದ್ಸು ಮೂರು ಸಂಗತಿಗೊ – ಹೇದು ವಿವರ್ಸಿದವು.

ನಮ್ಮ ಹೆರಿಯೋರಲ್ಲಿ “ಯಶಸ್ವೀ” ಹೇದು ಅನುಸಿದ ಕೆಲವು ಹೆರಿಯೋರು ಇದ್ದವು. ಅದರ್ಲಿ ಒಬ್ಬರ ಸಂಗತಿ ಮಾಂತ್ರ ಇಂದು ಉದಾಹರಣೆಗೆ ಸಿಕ್ಕಿದ್ದು. ಹೀಂಗೇ ಸಫಲರಾದವು ಇನ್ನೂ ಸಾವಿರಾರು ಅಜ್ಜಂದ್ರು ಇಕ್ಕು. ಆದರೆ, ಮಾಷ್ಟ್ರುಮಾವ° ಅವರ ಮಗಂಗೆ ಉದಾಹರಣೆ ಹೇಳಿದ್ದು ಇದೊಂದೇ.

~

ಬದ್ಧತೆ:
ಯೇವದೇ ಕೆಲಸ ಕಾರ್ಯ ಆದರೂ ಅದರ ಹಿಂದೆ ಒಂದು ಬದ್ಧತೆ ಇರೆಕ್ಕಾವುತ್ತು. ಆ ಕೆಲಸ ತನ್ನದು, ಅದು ಕೊಡಿ ಎತ್ತುವನ್ನಾರವೂ ಅದರ ಉತ್ತರದಾಯಿತ್ವ, ಅದರ ಯಜಮಾನಿಕೆ ತನ್ನದು – ಹೇಳ್ತ ಭಾವನೆ ನವಗೆ ಇರೆಕ್ಕು. ಆ ಕೆಲಸ ತನ್ನ ಕನಸಿನ ಕೂಸು. ಹಾಂಗಾಗಿ ಆ ಹಿಳ್ಳೆಯ ನೋಡಿಗೊಳೇಕಾದ ಕೆಲಸ ಎನ್ನದೇ – ಹೇಳ್ತ ವಿಚಾರ ನಮ್ಮ ತಲೆಲಿ ಇರೆಕ್ಕು. ಅದನ್ನೇ ಬದ್ಧತೆ ಹೇಳ್ಸು. ಅದರ ಹಿಡುದ್ದರ ಬಿಡದ್ದ ನಮುನೆಲಿ ಗಟ್ಟಿಗೆ ವಹಿಸಿಗೊಂಬದೇ ಬದ್ಧತೆ – ಹೇದವು.
ದೊಡ್ಡಜ್ಜನ ಅಪ್ಪ° ಅವು ಇಪ್ಪ ಆ ಜಾಗೆಗೆ ಬಪ್ಪಗ ಅದು ಬೋಳುಗುಡ್ಡೆ ಆಡ. ಅಲ್ಲಿ ಎಂತದೂ- ಹೇದರೆ ಎಂತದೂ ಇದ್ದತ್ತಿಲ್ಲೆ. ಅಲ್ಲಿ ತೋಟ ಮಾಡೇಕು. ಆದರೆ ಸುಲಭವೋ? ಮುರ ಕಲ್ಲಿನ ಪಣೆಯ ಹಾಂಗಿಪ್ಪ ಜಾಗೆ ಅದು. ಕೊಟ್ಟು ಪಿಕ್ಕಾಸು ಮುಟ್ಟದ್ದ ಜಾಗೆ. ಚೆರ್ಪು ಜೋಡು ಇಲ್ಲದ್ದೆ ನೆಡವಲೂ ಎಡಿಯ ಮುಳ್ಳಾಣಿಯ ನಮುನೆ ಕಲ್ಲುಗೊ. ಆದರೆ, ಇದೆಲ್ಲ ಸಂಗತಿಗಳ ಮೀರ್ಸಿ ಈಗ ಅಲ್ಲಿ ಅತ್ಯಂತ ಸುಂದರವಾದ ತೋಟವೂ, ಅದರ್ಲಿ ಖಂಡಿಗಟ್ಳೆ ಅಡಕ್ಕೆಯೂ ಬತ್ತು ಹೇದರೆ, ಅದರ ಹಿಂದಾಣ ಸತತ ಪರಿಶ್ರಮ, ಆ ಬದ್ಧತೆ ನವಗೆ ಕಾಂಗು- ಹೇದು ಮಾಷ್ಟ್ರುಮಾವ° ಹೇಳಿದವು. ಹಿಡುದ ಕೆಲಸ ಎಷ್ಟೇ ಕಷ್ಟ ಆಗಿರಲಿ, ಕೊನೆ ಒರೆಂಗೂ ಬಿಡದ್ದೆ ಮುಂದುವರುಸುತ್ತ ಧೈರ್ಯ, ಎದೆಗಾರಿಕೆ, ಸ್ವಂತಿಕೆ ಇಪ್ಪದೇ ಬದ್ಧತೆ.

ಅದಕ್ಕೇ ಆಯಿಕ್ಕು, ಮದುವೆ ನಿಶ್ಚಯಕ್ಕೂ ಬದ್ಧ – ಹೇಳುಸ್ಸು ನಮ್ಮ ಅಜ್ಜಂದ್ರು. ಅಲ್ಲೂ ಹಾಂಗೇ, ಹಿಡುದರೆ ಬಿಡ್ಳಿಲ್ಲೆ. ಬಿಡೇಕು ಹೇದರೂ ಬಿಡ್ಳೆ ಗೊಂತಿಲ್ಲೆ, ಅದು ಬೇರೆ! 😉

ಬುದ್ಧತೆ:
ಕೆಲಸ ಮಾಡ್ತೇನೆ – ಹೇಳ್ತ ಬದ್ಧತೆ ಇದ್ದರೆ ಸಾಕೋ? ಎಂತ್ಸರ ಮಾಡುಸ್ಸು, ಹೇಂಗೆ ಮಾಡುಸ್ಸು ಹೇಳುಸ್ಸು ಅರಡಿಯೇಡದೋ? ಗುಡ್ಡೆಯ ಇಡೀ ಒಂದೇ ತಟ್ಟು ಮಾಡಿ ತೋಟ ಮಾಡ್ತೆ ಹೇಳಿದ್ದರೆ ನಾಲ್ಕು ತಲೆಮಾರು ಆಗಿದ್ದರೂ ಮುಗಿತ್ತಿತಿಲ್ಲೆ. ಅದಕ್ಕೇ ಅದರ ಸಣ್ಣಸಣ್ಣ ಜಾಲುಗಳ ನಮುನೆ ತಟ್ಟು ಮಾಡಿ, ಚಾರೆಯ ಗರ್ಪಿ ಸಿಕ್ಕಿದ ಮಣ್ಣಿಲಿ ಚಿಟ್ಟೆ ಕಟ್ಟಿ, ಆ ಜಾಲಿಂಗೆ ಸರಿಯಾದ ಕಟ್ಟಪುಣಿಯ ನಮುನೆ ಮಾಡಿ, ಮಧ್ಯಲ್ಲಿ ಗೆಡು ಮಡಗಿ, ನಾಲ್ಕೈದು ಸಾಲಿಂಗೆ ಸರಿಯಾಗಿ ಒಂದೊಂದು ಕಣಿ ಮಾಡಿ, ನೀರು ಹರುದು ಬಪ್ಪ ವೆವಸ್ತೆ ಮಾಡಿ ಮಡಗಿದ್ದವು. ಒಂದೊಂದು ಜಾಲಿಂಗೆ ಒಂದೊಂದು ತಿಂಗಳು ಹಿಡುದರೂ, ಒಂದು ಒರಿಶಲ್ಲಿ ಹನ್ನೆರಡು ವಿಶಾಲ ತೋಟಂಗೊ ಅಪ್ಪಷ್ಟೂ ಕೆಲಸ ಸಾಗಿದ್ದತ್ತು. ಮತ್ತೆ, ತೆಂಕುಕಟ್ಟಿಂಗೆ ಮರ ನೆಡೇಕು, ಬೆಟ್ಟೊರತ್ತೆ ಹೋಪಲೆ ಕಣಿ ಬೇಕು, ಕೆರೆ ನೀರಿನ ವಿಭಾಗ ಮಾಡಿ ಕೆಳಾಣ ತಟ್ಟಿನ ವರೆಂಗೆ ಎತ್ತುಸುಲೆ ಯೇವ ನಮುನೆ ತಂತ್ರಜ್ಞಾನ ಬೇಕು – ಇದೆಲ್ಲವನ್ನೂ ಚಿಂತನೆ ಮಾಡಿ ಕೆಲಸ ಮಾಡ್ಳೆ ಬೇಕಾದ್ಸು ಪ್ರಬುದ್ಧತೆ. ತಿಳಿವಳಿಕೆ. ಇದನ್ನೇ ಬುದ್ಧತೆ ಹೇಳುಸ್ಸು.

ಸಿದ್ಧತೆ:
ಗುಡ್ಡೆ ಕಡುದು ತಟ್ಟು ಮಾಡ್ಳೆ ಬದ್ಧತೆ ಇದ್ದು ಮಡಿಕ್ಕೊಂಬೊ°. ಅದಕ್ಕೆ ಬೇಕಾದ ಜ್ಞಾನವೂ ಇದ್ದು ಮಡಿಕ್ಕೊಂಬೊ°. ಆದರೆ ಸಮಗಟ್ಟು ಪೂರ್ವತಯಾರಿ ಇಲ್ಲದ್ದರೆ ಹೇಂಗಕ್ಕು? ಕೆಲಸ ಸಾಗುಗೋ? ಸಾಕಷ್ಟು ಕೆಲಸಗಾರರು, ಮುರಮಣ್ಣಿನ ಗರ್ಪಲೆ ಬೇಕಾದ ಸಬ್ಬಲು, ಪಿಕ್ಕಾಸುಗೊ, ಆ ಪಿಕ್ಕಾಸುಗೊ ಉದಿಯಾಂದ ಹೊತ್ತೋಪಗ ವರೆಗೆ ಅಪ್ಪಗ ಅದರ ಹರಿತ್ತ ಪೂರ ಹೋಗಿ ಬಡ್ಡು ಅಪ್ಪ ಕಾರಣ ಮತ್ತೆ ದಳಿಶಿ ಹರಿತ್ತ ಮಾಡೇಕಾವುತ್ತು. ಇದು ಒಂದೆರಡು ದಿನ ಅಲ್ಲ, ನಿರಂತರ ಆಯೇಕಾವುತ್ತು. ಹೀಂಗೆ ನಿರತವಾಗಿ ಮಾಡೇಕಾರೆ ಅದಕ್ಕೆ ಸರಿಯಾದ ವೆವಸ್ಥೆ ಆಯೇಕು – ಹೊತ್ತೋಪಗ ಕೆಲಸ ಮುಗುದ ಮತ್ತೆ ಕಬ್ಬಿಣದ ಆಚಾರಿಯ ಹತ್ತರೆ ಕೊಡುಸ್ಸು, ಮರದಿನ ಕೆಲಸಕ್ಕಪ್ಪಗ ಸಿಕ್ಕುತ್ತ ನಮುನೆಯೋ, ಅಥವಾ ಆಚಾರಿಯನ್ನೇ ಮನೆಗೆ ಬರುಸಿ ವೆವಸ್ಥೆ ಮಾಡುಸ್ಸೋ – ಹೀಂಗೆಂತಾರು.

ತೋಟದ ರಚನಾ ಕೆಲಸ ಒಂದೆರಡು ಒರಿಶ ಸಾಗುತ್ತರೆ ಅದಕ್ಕೆ ಇಪ್ಪ ಧನಮೂಲ, ಕೆಲಸಗಾರರಿಂಗೆ ಕೊಡ್ಳಿಪ್ಪ ಸಂಬಳ, ಅಷ್ಟು ಸಮೆಯ ಮನೆಯೋರ ಸಾಂಕೆಕ್ಕಾರೆ ಬೇಕಪ್ಪ ಅಕ್ಕಿ, ಬೆಲಸ, ಉಪ್ಪು, ಮೆಣಸು ಇತ್ಯಾದಿಗೊ – ಇದೆಲ್ಲವೂ ಸಿದ್ಧತೆಯ ಅಂಗಂಗೊ.

ಕೆಲಸಕ್ಕೆ ಬೇಕಾದ ಸಿದ್ಧತೆಗೊ ಇದ್ದರೆ ಮಾಂತ್ರ ಹಿಡುದ ಕೆಲಸ ಕೊಡಿ ಎತ್ತುಸಲೆ ಎಡಿಗು – ಹೇದು ತಾತ್ಪರ್ಯ.

~

ಬದ್ಧತೆ – ಬುದ್ಧತೆ – ಸಿದ್ಧತೆ ನಮ್ಮ ಜೀವನದ ಸಫಲತೆಗೆ ಇಪ್ಪ ಮೂರು ಅಗತ್ಯ ಅಂಶಂಗೊ. ಯಶಸ್ಸಿದ್ಧಿಗಿಪ್ಪ ತ್ರಿಮೂರ್ತಿಗೊ – ಹೇದರೂ ತಪ್ಪಲ್ಲ.ಯಶಸ್ಸು ಸಿದ್ಧಿ ಆಯೇಕಾರೆ ಈ ಮೂರು ಮೂರ್ತಿಗಳ ಆರಾಧನೆಯೂ ಆಯೇಕು. ಈ ಮೂರು ದೇವರುಗಳ ಆಶೀರ್ವಾದವೂ ಸಿಕ್ಕೇಕು. ಹೊಟ್ಟೆಲಿಪ್ಪ ಸೀವು ರಜಾ ಕೆಳ ಇಳುದಪ್ಪದ್ದೇ, ನಿಧಾನಕ್ಕೆ ಅಲ್ಲಿಂದ ಹೆರಟು ಬೈಲಿಲೇ ನೆಡಕ್ಕೊಂಡು ಬಂದೆ.

ನಮ್ಮ ಗುರುಗಳೂ ಹಾಂಗೇ ಅಲ್ಲದೋ, ಒಂದು ಕೆಲಸಕ್ಕೆ ಸರಿಯಾದ ಪೂರ್ವತಯಾರಿ, ಸೂಕ್ತ ಜ್ಞಾನ, ಮತ್ತೆ ಅಷ್ಟೇ ಪರಿಶ್ರಮವ ತೊಡಗುಸಿಗೊಂಡು ಆ ಕಾರ್ಯ ಸಾಫಲ್ಯಕ್ಕಾಗಿ ಹೋರಾಡ್ತವು. ಹಾಂಗಾಗಿ ಅವು ಸಂಕಲ್ಪಿಸಿದ ಕೆಲಸಂಗೊ ಎಲ್ಲವುದೇ ಯಶಸ್ವಿ ಅಪ್ಪದು – ಹೇದು ಅನುಸಿತ್ತು ಒಪ್ಪಣ್ಣಂಗೆ.

~

ಒಂದೊಪ್ಪ: ಯಶಸ್ಸಿಂಗೆ ತ್ರಿಮೂರ್ತಿಗೊ ಇದ್ದರೂ, ವಿಫಲತೆಗೆ ಮೂವತ್ಮೂರು ಕೋಟಿ ದೇವತೆಗೊ ಇಕ್ಕು. ಜಾಗ್ರತೆ ಇರೆಕ್ಕು!!

2 thoughts on “ಕಾರ್ಯಯಶಸ್ಸಿಂಗೆ ತ್ರಿಮೂರ್ತಿಗೊ – ಬದ್ಧತೆ, ಬುದ್ಧತೆ, ಸಿದ್ಧತೆ..!

  1. ಹರೇರಾಮ, ’ಬದ್ದತೆ’ , ’ಬುದ್ದತೆ’ ’ಸಿದ್ಧತೆ’ ಒಳ್ಳೆ ಚಿಂತನೀಯ ವಿಷಯ. ಅಂತೂ ಕೆಲವು ವಿಷಯಂಗಳಲ್ಲಿ ಮೂರಕ್ಕೆ ಪ್ರಾಮುಖ್ಯತೆ !. ಕಾಯಾ, ವಾಚಾ, ಮನಸಾ, ತ್ರಿಕರಣ ಪೂರ್ವಕ ಹಾಂಗೇ ತ್ರಿಮೂರ್ತಿ ದೇವರಕ್ಕೊ, ತ್ರಿದೋಷಂಗೊ. ತ್ರಿಕಾಲಂಗೊ ಹೀಂಗೆಲ್ಲ ಕಾಣುತ್ತಲ್ಲೋ

  2. ‘ಬದ್ಧತೆ – ಬುದ್ಧತೆ – ಸಿದ್ಧತೆ ನಮ್ಮ ಜೀವನದ ಸಫಲತೆಗೆ ಇಪ್ಪ ಮೂರು ಅಗತ್ಯ ಅಂಶಂಗೊ’…..ವಾಹ್ ……
    ಜೀವನ ಸುರು ಮಾಡಿ ನಡೆಶಿ ಕೋಡಿ ಎತ್ಸುಲೆ ಈ ಮೂರು ವಿಷಯಂಗೊ
    ಕ್ಲಾಸ್ …
    ಹರೇರಾಮ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×