ಬಟ್ಟಮಾವನ ದೇವತಾರಾಧನೆಯೂ, ಕೋಟಿಯ ದೈವಾರಾಧನೆಯೂ..

ಪತ್ತಜಾನೆ ಕಳುದರೆ ಮತ್ತೆ ಕೋಟಿಗೆ ಪುರುಸೊತ್ತೇ, ದೀಪಾವಳಿ ಹಬ್ಬ ವರೆಗೂ.
ಆರು ತಿಂಗಳು ಊರಿಡೀ ಬೂತಕಟ್ಟಿ, ನೇಮಸೇವೆಗಳ ದೈವಕ್ಕೆ ಎತ್ತುಸಿದ ಮತ್ತೆ ಈ ಮಳೆಗಾಲದ ರಜೆ. ಅದರ ಅಪ್ಪ – ಪುತ್ತ-ನ ಕಾಲಕ್ಕೆ ತರವಾಡುಮನೆಲಿ ಶಂಬಜ್ಜ ಇತ್ತಿದ್ದವು. ಅವು ಪರಸ್ಪರ ಭಾರೀ ಚೆಂಙಾಯಿಗೊ ಆಗಿದ್ದ ಸಂಗತಿಯ ಈಗಳೂ ಕೆಲವು ಹಳಬ್ಬರು ನೆಂಪಿಲಿ ಹೇಳುಗು. ಈಗ ಕೋಟಿಯ ಕಾಲಲ್ಲಿ ರಂಗಮಾವನೂ ಹಾಂಗೇ – ತುಂಬಾ ಆತ್ಮೀಯರು.

ಕೋಟಿಗೆ ರಜ್ಜ ಪುರುಸೊತ್ತಿದ್ದುಗೊಂಡು, ಪುಗೆರೆ ತಿಂಬ ಕೊದಿ ಆತು ಹೇದು ಆದರೆ ಸೀತ ಬಕ್ಕು ತರವಾಡುಮನೆಗೆ, ರಂಗಮಾವನ ಮನೆಗೆ. ಹಟ್ಟಿಬೈಪ್ಪಾಣೆಲಿ ತುರ್ಕಲ್ಲಿ ಕೂದುಗೊಂಡು ಮಣ್ಚಿಟ್ಟೆಲಿ ಕೂದ ರಂಗಮಾವನ ಹತ್ರೆ ಮಾತಾಡುಗು – ಇಡೀ ಬೈಲಿಂಗೆ ಕೇಳುವಷ್ಟು ದೊಡ್ಡ ಗುಟ್ಟಿಲಿ.

ಇಡೀ ಊರಿನ ಸಂಗತಿಗಳ ಅವಿಬ್ರೂ ಮಾತಾಡಿಗೊಂಗು. ಇಬ್ರುದೇ ಅವರವರ ದೃಷ್ಟಿಲಿ ಕಂಡ ನಮುನೆಲಿ ಹೇಳಿಗೊಂಗು – ಇದು ಇಬ್ರಿಂಗೂ ಹೊಸ ಸಂಗತಿಗಳ ಕೇಳಿದ ಹಾಂಗೇ ಆದ ಕಾರಣ ಆಸಕ್ತಿ ಒಳುದಿರ್ತು. ಪಾತಿಅತ್ತೆ ಕೊಡುವ ಮಜ್ಜಿಗೆನೀರು ಕುಡುದು, ರಂಗಮಾವನ ಕುಣಿಯ ಪುಗೆರೆಯ ತಿಂದು, ಒಂದರಿ ಎಲೆತುಪ್ಪಿ, ಮತ್ತೊಂದರಿ ಬಾಯಿಲಿ ತುಂಬುಸಿಕ್ಕಿ ನೆಡಕ್ಕೊಂಡು ಹೆರಡುಗು.

~

ನಿನ್ನೆಲ್ಲ-ಮೊನ್ನೆ ಹೀಂಗೇ ಪುರುಸೊತ್ತಿಲಿ ತರವಾಡುಮನೆಗೆ ಬಂದಿತ್ತು ಕೋಟಿ. ಪಾತಿಅತ್ತೆ ಅಳೆತ್ತನೀರು ಕೊಟ್ಟತ್ತು. ರಂಗಮಾವ ಆರತ್ರೋ ಒಳ ಮಾತಾಡಿಗೊಂಡು ಇತ್ತಿದ್ದವು. ಆರತ್ರೆ? ಕೋಟಿಗೂ ಅರಡಿಗಾಯಿದಿಲ್ಲೆ. ಇರಳಿ, ಬರ್ಸ ರಜಾ ಬಿರುದಿದ್ದ ಕಾರಣ ಶಾಂಬಾವ ಅಡಕ್ಕೆಮದ್ದು ಬಿಡ್ತ ಏರ್ಪಾಡಿಲಿ ಇತ್ತಿದ್ದ. ಅವನೊಟ್ಟಿಂಗೆ ಮಾತಾಡಿತ್ತು ರಜ, ಮದ್ದುಬಿಡ್ತ ಬಾಬುವಿನ ಕೈಲಿ ರಜಾ ಕುಶಾಲು ಮಾತಾಡಿತ್ತು. ಒಂದರಿ ತೋಟದ ತಲೇ ಕಟ್ಟಪುಣಿ ಒರೆಗೆ ಹೋಗಿ ಬಂತು. ಬಪ್ಪಗ ಕೈಗೆ ಸಿಕ್ಕಿದ ಕೂಂಬಾಳೆ ತಂದು ಹಟ್ಟಿಲಿಪ್ಪ ಪೆತ್ತಕ್ಕೆ ಕೊಟ್ಟತ್ತು. ಮಡಗಿದಲ್ಲೇ ಮಡಗಿ ಮಣ್ಣುಬಂದಿದ್ದ ಕತ್ತಿಯ – ಮಸದತ್ತು. ತೋಟಂದ ತಂದ ಎರಡು ಬಜ್ಜೈಯ ಕೆರಸಿಗೊಂಡು ಕೂದತ್ತು. ಇಷ್ಟೆಲ್ಲ ಅಪ್ಪಗ ರಂಗಮಾವಂಗೆ ಮಾತುಕತೆ ಒಂದರಿಯಾಣದ್ದು ಮುಗಾತು. ಜಾಲಿಲೇ ಅತ್ಲಾಗಿತ್ಲಾಗಿ ಹೋದ ಕೋಟಿಯ ಕಂಡತ್ತು – ಹೋ ಕೋಟಿ, ಬತ್ತಾನಾ? – ಹೇಳಿಂಡು ಒಳಾಂದ ಹೆರಬಂದವು. ಬಪ್ಪಗ ಒಟ್ಟಿಂಗೆ ಮಾತಾಡಿಂಡು ಇದ್ದಿದ್ದವರನ್ನೂ ಕರಕ್ಕೊಂಡು ಬಂದವು. ಹೋ, ಅವು ಬಟ್ಟಮಾವ ಅದಾ.

~

ಕೋಟಿಗೂ ಬಟ್ಟಮಾವನ ಧಾರಾಳ ಗುರ್ತ ಇದ್ದು – ಬೈಲಿಲಿ ಇಬ್ರಿಂಗೂ ಪರಸ್ಪರ ಕಂಡು ಧಾರಾಳ ಗೊಂತಿದ್ದು.
ತರವಾಡುಮನೆಲಿ ಜೆಂಬ್ರ ಇದ್ದರೆ ಪೌರೋಹಿತ್ಯದ ಬಟ್ಟಮಾವನ ಮಂತ್ರ ಕೇಳಿಯೇ ಗೊಂತಿದ್ದು ಕೋಟಿಗೆ. ತರವಾಡುಮನೆಯ ತೋಟದ ಕಟ್ಟಪುಣಿ ತಲೇಲಿ ಇಪ್ಪ ಬನಲ್ಲಿ ತಂಬಿಲ ಮಾಡ್ತರೆ ಬಟ್ಟಮಾವಂದೇ ಬತ್ತವು, ಬೊಂಡ ಕೊಯಿವಲೆ ಕೆತ್ತಲೆ ಕೋಟಿಯೂ ಬತ್ತು.

ಆದರೆ, ಅವು ಇಬ್ರೂ ಹತ್ತರೆ ಕೂದು ಪಟ್ಟಾಂಗ ಹೊಡವದು ರಜ ಅಪ್ರೂಪವೇ ಆಗಿಕ್ಕು!
ರಜ ಅಲ್ಲ, ತುಂಬ ತುಂಬ ಅಪ್ರೂಪವೇ ಆಗಿಕ್ಕು ತೋರ್ತು.

ಆ ಅಪುರೂಪದ ದಿನ ಮೊನ್ನೆ ಬಂದದು ನಿಜವೇ.

ಬಟ್ಟಮಾವನ ಹತ್ರಂದ ಹಲವು ವಿಷಯಂಗೊ ಇದ್ದು ಕೋಟಿಗೆ ತಿಳ್ಕೊಂಬಲೆ. ವೇದ ಮಂತ್ರಂಗಳ ಸಾರಂಗೊ, ಸೂಕ್ತಂಗೊ, ದೇವರ ಮೂಲಸ್ವರೂಪಂಗೊ – ಹೀಂಗಿರ್ಸ ಹಲವು ವಿಷಯಂಗೊ ಬಟ್ಟಮಾವ ಹೇಳುಗು. ರಂಗಮಾವನೂ ಕೋಟಿಯೂ ಕೇಳುದು. ಜುಮಾದಿ, ಲೆಕ್ಕೇಸಿರಿ, ಕಲ್ಲಾಳ್ತ ಗುಳಿಗ್ಗ – ಹೀಂಗಿರ್ಸರ ಪಾಡ್ದನಂಗಳ ಕೋಟಿ ಹೇಳಿ ಹಿನ್ನೆಲೆ ಹೇಳುದು, ರಂಗಮಾವನೂ ಬಟ್ಟಮಾವನೂ ಕೇಳುದು. ಕೋಟಿ ಎರಡು ಸರ್ತಿ ಎಲೆ ತಿಂದಾಗಿ, ಪಾತಿಅತ್ತೆ ’ಉಂಬಲಾತು’ ಹೇಳುವನ್ನಾರವೂ ಮಾತಾಡಿದ್ದೇ ಮಾತಾಡಿದ್ದು.

~

ಹಾಂಗೆ ಬಟ್ಟಮಾವ ಹೇಳಿದವಾಡ, ಕೋಟಿಯ ಕೆಲಸವೂ, ಎನ್ನ ಕೆಲಸವೂ – ತುಂಬಾ ಸಾಮ್ಯತೆದು. ಕೋಟಿಯ ಕೆಲಸಕ್ಕೂ, ಎಂಗೊ ಮಾಡ್ತ ಕೆಲಸಕ್ಕೂ ತುಂಬಾ ಹೊಂದಾಣಿಕೆ ಇದ್ದು – ಹೇದು. ಅಷ್ಟೂ ಮಾತುಕತೆಲಿ, ಕೋಟಿಗೆ ಈ ಮಾತು ತುಂಬಾ ಇಷ್ಟ ಆತಾಡ. ಮರದಿನ ಒಪ್ಪಣ್ಣ ಸಿಕ್ಕಿಪ್ಪಗಳೂ ಇದೇ ಮಾತಿನ ನೆಂಪುಮಡೂ..ಗಿ ಹೇಳೇಕಾರೆ!!
ಯೇವ ನಮುನೆ ಸಾಮ್ಯತೆ – ಹೇದು ಕೋಟಿಗೂ ಸುರುವಿಂಗೆ ಅರ್ಥ ಆಯಿದಿಲ್ಲೇಡ. ಬಟ್ಟಮಾವ ವಿವರವಾಗಿ ವಿವರ್ಸಿಅಪ್ಪನ್ನಾರ.

~

ಸಾಮ್ಯತೆ ಎಂತರ?
ಬಟ್ಟಮಾವ ಮಾಡುದು ಪೂಜೆ. ವೇದಾದಿ ದೇವತೆಗಳ ಮೂರ್ತಿಗೋ, ಕಲಶಕ್ಕೋ, ಮಂಡ್ಳಕ್ಕೋ, ಪ್ರತಿಮೆಗೋ ಆವಾಹನೆ ಮಾಡಿ ಅದರ ಮೂಲಕ ಸಾಯುಜ್ಯವ ಕಂಡು, ಅದಕ್ಕೆ ಧ್ಯಾನಾವಾಹನಾದಿ ಉಪಚಾರಂಗಳೂ, ನವಶಕ್ತಿ, ದ್ವಾದಶನಾಮ, ಪ್ರಸನ್ನ ಇತ್ಯಾದಿ ಪೂಜೆಗಳೂ ಮಾಡಿಗೊಂಡು, ನೈವೇದ್ಯ ಮಂಗ್ಳಾರ್ತಿ ಕೊಟ್ಟು ಕೊಶಿಕೊಡುಸುದು ಬಟ್ಟಮಾವನ ಕ್ರಮ. ಒಂದರಿ ಪೂಜೆಗೆ ಕೂದರೆ ಏಳುದು ಉಂಬಲಪ್ಪಗಳೇ ಹೇಳುವಿ ನಿಂಗೊ!

ಕೋಟಿ ಹಾಂಗಲ್ಲ, ಬೂತಸ್ಥಾನಲ್ಲಿಯೋ, ಬಂಡಾರಲ್ಲಿಯೋ, ಸ್ಥಾನಲ್ಲಿಯೋ, ಕಲ್ಲಿಲಿಯೋ ಇಪ್ಪ ಭೂತವ ಮೈಲಿ ಬರುಸಿ ಕೊಣಿವದು. ಕೊಣುದು ಕೊಣುದು ಕೊನೆಗೆ ತೃಪ್ತಿ ಅಪ್ಪಷ್ಟು ತೆಕ್ಕೊಂಡು ಬಿರಿವದು. ಒಂದರಿ ಭೂತ ಹಿಡಿವಗ ’ಲಕ್ಕುತು ಉಂತಿರೆ’ ಮತ್ತೆ ಬಿರುದ ಮತ್ತೆಯೇ ಕೂಪದು!
ಇದರ್ಲಿಯೂ ಎಂತರ ಸಾಮ್ಯತೆ?!

ಅದರ್ಲೇ ಬಟ್ಟಮಾವಂಗೆ ಕಂಡ ಸಾಮ್ಯತೆ!
ನಮ್ಮ ಆಂತರ್ಯಲ್ಲಿ ಇಪ್ಪ ದೈವೀಕ ಸಾಯುಜ್ಯವ ನಾವು ಮೂರ್ತಿಗೆ ಆವಾಹನೆ ಮಾಡಿ ಅದರ ಪೂಜೆ ಮಾಡಿ ಪುನಾ ಆಂತರ್ಯಕ್ಕೆ ಸೇರ್ಸುದು ಬಟ್ಟಮಾವನ ದೇವತಾರಾಧನೆಯ ಕ್ರಮ.
ಮೂರ್ತಿಲಿಪ್ಪ ದೈವತ್ವವ ತನ್ನ ದೇಹಕ್ಕೆ ಆವಾಹನೆ ಮಾಡಿಗೊಂಡು, ಅದಕ್ಕೆ ಪೂಜೆಪುನಸ್ಕಾರ ಮಾಡಿ, ಪುನಾ ಮೂರ್ತಿಗೆ ಸೇರ್ಸುದು ಕೋಟಿಯ ದೈವಾರಾಧನೆಯ ಕ್ರಮ.
ಇದು ಸಾಮ್ಯತೆಯೋ – ವಿತ್ಯಾಸವೋ ಹೇದು ವಿಮರ್ಶೆ ಅಲ್ಲ. ನಮ್ಮೊಳಾಣ ಆಂತರ್ಯ  & ಎದುರಿಪ್ಪ ಮೂರ್ತಿ – ಇದರ ಪರಸ್ಪರ ಅಗೋಚರ ಸಂಪರ್ಕದ ಕಲ್ಪನೆ ಇದ್ದಲ್ಲದೋ – ಇದು ಬಟ್ಟಮಾವನ ಪೂಜಾಕ್ರಮಕ್ಕೂ, ಕೋಟಿಯ ಪೂಜಾಕ್ರಮಕ್ಕೂ ಇಪ್ಪ ಸಾಮ್ಯತೆ!

ಮಜ್ಜಾನ ಅಳೆಕಜಿಪ್ಪು ಉಂಡಿಕ್ಕಿ, ಬೈಪ್ಪಾಣೆಲಿ ಒಂದು ಒರಕ್ಕಿಂಗೆ ಮನುಗಿರೂ – ಕೋಟಿಗೆ ಇದೇ ಸಂಗತಿ ತಲೆಲಿತ್ತಾಡ.

~

ಬಟ್ಟಮಾವ ಎಷ್ಟೂ ಚೆಂದಕೆ ಹೇಳಿದವು!
ಆತ್ಮಂದ ಹೆರ ತೆಗದು ಪರಮಾತ್ಮನ ಕಲ್ಪನೆ ಮಾಡಿ ಪೂಜೆ ಮಾಡುದು.
ಪರಮಾತ್ಮನ ಆತ್ಮಕ್ಕೆ ಕಲ್ಪಿಸಿ ದೈವಾರಾಧನೆ ಮಾಡುದು.
ಅಪ್ಪನ್ನೇ! ಗುಳಿಗ್ಗ, ಕಲ್ಲುರ್ಟಿ ಇತ್ಯಾದಿಗಳ ನರ್ತನ ಸೇವೆ ಮಾಡುವ ಮೊದಲು ಆಯಾ ಶೆಗ್ತಿಗಳ ಮೈಗೆ ಬರುಸಿಯೇ ಅಲ್ಲದೋ ಕೊಣಿಸ್ಸು.
ಬಟ್ಟಮಾವನೂ ಹಾಂಗೇ ಅಲ್ಲದೋ!
ಸತ್ಯನಾರ್ಣಪೂಜೆ ಹೇದರೆ, ಮೈಂದಲೇ ಆವಾಹಯಾಮಿ ಮಾಡಿ ಕಲಶಕ್ಕೆ ಕಲ್ಪುಸಿಗೊಂಡು ಪೂಜೆ ಮಾಡುಸ್ಸು. ಎಲ್ಲ ಆದ ಮತ್ತೆ ಪುನರಾಗಮನಾಯಚ ಹೇದು ಉದ್ವಾಸನೆ ಮಾಡಿಕ್ಕಿ ಏಳುಸ್ಸು.

~

ಎಲ್ಲಿ ಎಷ್ಟೂ ವಿತ್ಯಾಸ ಇದ್ದು ಹೇದು ನಾವು ಗ್ರೇಶಿರೂ, ಸನಾತನ ಧರ್ಮದ ಬೇರು ಒಂದೇ – ಹೇಳ್ತ ಸತ್ಯ ಇದರ್ಲಿ ಗೊಂತಾವುತ್ತು. ಅಲ್ದೋ?!

ದೇವರು ದೇವರೇ. ನಮ್ಮೊಳಾಣ ದೈವತ್ವವನ್ನೇ ನಾವು ಪೂಜೆ ಮಾಡುಸ್ಸು. ಅಥವಾ, ಹೆರ ಇಪ್ಪ ಬ್ರಹ್ಮನನ್ನೇ ನಾವು ಹೇದು ಕಲ್ಪುಸಿಗೊಂಬದು.
ಶಂಕರಾಚಾರ್ಯರ ಮೂಲತತ್ವವೂ ಇದನ್ನೇ ಹೇಳ್ತದು. ಆನೇ ಬ್ರಹ್ಮ, ಬ್ರಹ್ಮನೇ ಆನು. ಅಲ್ಲಿಪ್ಪದನ್ನೇ ನಿನ್ನೊಳ ಪೂಜೆ ಮಾಡುಸ್ಸು. ಅಲ್ಲಿ ಪೂಜೆ ಮಾಡುಸ್ಸೇ ನಿನ್ನೊಳ ಇಪ್ಪದು – ಹೇದು. ಬಟ್ಟಮಾವ ಅದರ ಅತೀ ಸರಳವಾಗಿ ವಿವರ್ಸಿದವು.

~

ಒಂದೊಪ್ಪ: ದೈವದೇವತೆಯ ಆರಾಧನೆ ಸರೀ ಸಲ್ಲೇಕಾರೆ, ನಮ್ಮ ಆಂತರ್ಯ ಶುದ್ಧ ಬೇಕು. ಅಲ್ದೋ?

ಒಪ್ಪಣ್ಣ

   

You may also like...

4 Responses

 1. ಚೆನ್ನೈ ಭಾವ° says:

  ಒಪ್ಪ ವಿವರಣೆ. ಬಟ್ಟಮಾವ° ಕೋಟಿಯ ಆ ಸನ್ನಿವೇಶ ಅಕ್ಷರ ರೂಪಲ್ಲಿ ಒಪ್ಪಕ್ಕೆ ಮೂಡಿಬಯಿಂದು. ಹರೇ ರಾಮ.

 2. S.K.Gopalakrishna Bhat says:

  ಒಳ್ಳೆ ವಿವರಣೆ ಒಪ್ಪಣ್ಣ.
  ಭೂತಕ್ಕೆ ಕಲಾಯ ಕೊಡುದು ಹೇಳಿ -ಪೈಸೆ ,ತೆಂಗಿನಕಾಯಿ , ಮಸಿ, ಅಕ್ಕಿ -ಇಂತಾ ವಸ್ತುಗಳ ಭೂತ ಕಟ್ಟುವವಕ್ಕೆ ಒಳುವಂತೆ ಕೊಡ್ತ ಕ್ರಮ ಇದ್ದನ್ನೇ. ಅಷ್ಟಪ್ಪಗ ಒಂದು ಭೂತ ಕಟ್ಟುವ ಮನುಷ್ಯ ಪ್ರಾರ್ಥನೆ ಮಾಡುದು ಕೇಳಿದ್ದೆ -ಮಿತ್ತುಟ್ ಇತ್ತಿನ ನಾರಾಯಣ ದೇಬೇರ್ ಗ್, ಕಿದೆಟ್ ಇತ್ತಿನ ಪಂತಿತ ಕಟ್ಟೋ ಗ್ ,ದಿಕ್ಕೆಲ್ ಡ್ ದಿಡ್ಡಿನ ಗಂಜಿತ ಕರೋಗ್ ,ಉಳಾಕ್ಲ್ ಮಲ್ಪುನ ಹೋಮೊಗ್ ,ಮಂತ್ರೋಗ್, ಪೂಜೆಗ್ ವಾ ಅಡ್ಡಿಲಾ ಇಜ್ಜಾಂದಿ ಲೆಕ್ಕೋ ಕಾಪಿನವು ಮಾಯೋಗ್ ಸೇರ್ತಿನವು ಪಂಡ್ ದ್ ದಿಡ್ಡಿ ಅಮೃತೋ …..-ನಾಕೇ ಮಾತಿಲಿ ಮನೆಯ ಜನ ,ಜಾನುವಾರುಗೊಕ್ಕೆ ಆರೋಗ್ಯ ಸಿಗಲಿ , ಬ್ರಾಹ್ಮಣರು ಮಾಡುವ ಪೂಜೆ ಪುನಸ್ಕಾರಂಗೋ ಚಂದಕೆ ನಡೆಯಲಿ ಹೇಳುದರ ಎಷ್ಟು ಚಂದಕೆ ಹೇಳ್ತವು -ಬಹಳ ಆಸಕ್ತಿದಾಯಕ ವಿಷಯ. [ಈ ಪ್ರಾರ್ಥನೆ ಕೇಳಿದ್ದು ಆನು ತುಂಬಾ ಹಿಂದೆ. ಕೆಲವು ವಾಕ್ಯ ಮರೆತ್ತುಹೋಯಿದು.ಕ್ಷಮಿಸಿ]

 3. ತೆಕ್ಕುಂಜ ಕುಮಾರ ಮಾವ° says:

  ತುಂಬ ಆಸಕ್ತಿದಾಯಕ ವಿಷಯ. ವಿವರಣೆಯೂ ಅಷ್ಟೇ ಆಸಕ್ತಿಪ್ರದವಾಗಿದ್ದು.
  ಒಪ್ಪ ಶುದ್ಧಿ.

 4. manjunatha prasad k says:

  ತುಂಭಾ ಒಳ್ಳೆ ಲೇಖನ. ವಿಷಯ ಮತ್ತು ಅದರ ನಿರೂಪಣೆ ವಿಶೇಷವಾಗಿ ಬಯಿಂದು. ಎರಡು ರೀತಿಯ ಆರಾಧನೆಗಳ ತುಲನೆ ಅನನ್ಯವಾಯಿದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *