ಭೋಜನಕಾಲೇ, ನಮಃ ಪಾರ್ವತೀಪತೇ ಹರಹರಾ…!!

ಮಾದೇಏಏಏಏಏಏಏಏಏಏಏಏಏಏಏಏಏಏಏಏಏಏಏಏಏಏಏವಾ!

~
ಅಬ್ಬ, ಈ ಜೆಂಬ್ರಂಗೊಕ್ಕೆ ಹೋಗಿ ಹೋಗಿ ಒರಕ್ಕಿಲಿದೇ ಇದೇ ಬತ್ತಿದಾ! 🙂
ಅಪ್ಪೂಳಿ, ಹತ್ತರಾಣ ಜೆಂಬ್ರಂಗೊ, ಹೋಗದ್ದೆ ನಿಮುರ್ತಿ ಇಲ್ಲೆ, ಪ್ರೀತಿಲಿ ಕಾಗತ ಪೋಷ್ಟು ಮಾಡಿರ್ತವು, ನವಗೇ ಹೇಳಿ ಒಂದು ಬಾಳೆ ಕಟ್ಟಿರ್ತವು, ಎರಡು ಹೋಳಿಗೆ ಮಡುಸಿರ್ತವು; ಮುಗುಶದ್ರೆ ಆವುತ್ತಾ; ಚೆ ಚೆ!?
ಸರ್ಪಮಲೆ ಮಾವ° ಪರಂಚುತ್ತವು, ಹಾಂಗೆ ತಾರಾಮಾರಾ ಜೆಂಬ್ರಂಗೊಕ್ಕೆ ಹೋಗೆಡ ಮಿನಿಯಾ, ಹೊಟ್ಟೆಹಾಳಕ್ಕೂ – ಮನೆಲಿ ಅತ್ತೆ ಕೊಟ್ಟಿಗೆಮಾಡಿದ್ದು, ಪುರುಸೋತು ಮಾಡಿ ಬಾ, ತಿನ್ನು – ಹೇಳಿ.
ಕಳೆಯತ್ತೋಡಿ ಅತ್ತೆ ತಂದ ಹಲಸಿನಣ್ಣಿಂದಡ! ಜೇನಬರಿಕ್ಕ°. ಕೊಟ್ಟಿಗೆ ಇರುಳಿಂಗೂ ತಿಂಬಲಕ್ಕು, ಜೆಂಬ್ರದೂಟ ಮದ್ಯಾನ್ನಕ್ಕೇ ಆಗೆಡದೋ – ಹೇಳಿಗೊಂಡು ಒಪ್ಪಣ್ಣಂಗೆ ಕನುಪ್ಯೂಸು ಬಪ್ಪದಿದಾ..!!
ಹಾಂಗೇಳಿಗೊಂಡು ಅವುದೇ ಜೆಂಬ್ರಕ್ಕೆ ಹೋಗದ್ದೆ ಕೂರವು!
ಅವಕ್ಕುದೇ ಇನ್ನು ನಾಲ್ಕು ದಿನ ಬಿಡದ್ದೆ ಹೋಪಲೆ ಇದ್ದು. ಮದುವೆ, ಸಟ್ಟುಮುಡಿ, ಬದ್ಧ, ತಿಥಿ, ನಾಗ ಪ್ರತಿಷ್ಟೆ, ಬ್ರಮ್ಮ ಕಲಶ, ಹೀಂಗೆ.
ಈ ಮಳಗೆ ಎಲ್ಲಿಗೂ ಹೋಯೆಕು ಹೇಳಿ ಕಾಣುತ್ತಿಲ್ಲೆ. ಹೋಗದ್ದೆ ಆವುತ್ತೂ ಇಲ್ಲೆ – ಹೇಳಿದವು.
ಅತ್ತೆಗೆ ಪರಂಚಿ ಪರಂಚಿ ಸೊರವೇ ಬಿದ್ದು ಹೋಯಿದು!!
– ರಜ್ಜ ಗೆಣಮೆಣಸು ತೆಕ್ಕೊಂಬಲೆ ಹೇಳಿದ್ದವು ಕಳೆಯತ್ತೋಡಿ ಅತ್ತೆ – ಇನ್ನು ಎಲ್ಲ ಸರಿ ಅಕ್ಕು!
~

ಓ – ಅದಿರಳಿ, ಎಂತದೊ ಮಾತಾಡ್ಳೆ ಹೆರಟು ಎಲ್ಲಿಯೋ ಬಾಕಿ ಆದ ಈ ಒಪ್ಪಣ್ಣ. 🙁
ಈಗ ಜೆಂಬ್ರಂಗೊ ಇದಾ! ಜೆಂಬ್ರದ ಶುದ್ದಿಯನ್ನೇ ಇನ್ನೊಂದರಿ ಮಾತಾಡುವೊ ಹೇಳಿ ಕಂಡತ್ತು.
ಓ ಮೊನ್ನೆ ನೆರಿಯದೊಡ್ಡಪ್ಪನಲ್ಲಿ ಒರಿಶಾವಧಿ ಪೂಜೆ. ಯೇವತ್ರಾಣ ಹಾಂಗೆ ಶಿವಪೂಜೆ-ಸತ್ನಾರಣ ಪೂಜೆ. ಜೆನ ಹದಾ ಮಟ್ಟಿಂಗೆ ಅಕ್ಕು, ಆಪ್ತೇಷ್ಟರು, ನೆಂಟ್ರು-ನೆರೆಕರೆ. ದೊಡಾ ಗವುಜಿ ಏನಲ್ಲ ಇದಾ! ಸೇರಿದವೆಲ್ಲೊರುದೇ ಹತ್ತರಾಣೋರೇ.
ಒಂದೋ ಮನೆ ಹತ್ತರೆ, ಅಲ್ಲದ್ರೆ ಮನಸ್ಸು ಹತ್ತರೆ..
ಆಚಮನೆ ದೊಡ್ಡಣ್ಣನ ಮೇಲುಸ್ತುವಾರಿ! ಆದಿಕ್ಷಾಂತ (A to Z)!

ಹತ್ತರಾಣೋರು ತಡವಾಗಿ ಹೋಪದಡ, ಅಪ್ಪೋ..
ಹಾಂಗೇ ಆಯಿದು ಇಲ್ಲಿಯುದೇ. ಎಂಗೊ ನೆರೆಕರೆಂದ ಎತ್ತುವಗ ಅಲ್ಲಿಗೆ ನೆಂಟ್ರುಗೊ ಅದಾಗಲೇ ಎತ್ತಿ ಆಯಿದು.
ಇಷ್ಟು ಹತ್ತರೆ ಮನೆ ಇದ್ದುಗೊಂಡು ಇದೆಂತಪ್ಪಾ ಇಷ್ಟು ತಡವಾಗಿ ಬತ್ತವಿವು – ಹೇಳಿ ಬೈತ್ತಡ್ಕ ಪುಳ್ಳಿ – ಅಲ್ಲಿಗೆ ಬಂದಿದ್ದೋನು ಪಿಳಿಪಿಳಿ ನೋಡಿದ! ಅವಂಗೆಂತ ಗೊಂತು, ನವಗೆ ಒಯಿವಾಟುಗೊ ಸುಮಾರಿದ್ದು – ಹೇಳಿ.
ಅಂತೂ ಕೇಳ್ತ ಕ್ರಮಕ್ಕೆ ನಮ್ಮ ಅಜ್ಜಕಾನಬಾವನತ್ರೆ ಕೇಳಿದೆ, ಎಂತ ಬಾವ -ಜೆಂಬ್ರಂಗೊಕ್ಕೆ ಇಷ್ಟು ತಡವಾಗಿ ಬಪ್ಪದಾ – ಹೇಳಿ.
ಮುನ್ನಾದಿನ ಗುರುವಾಯನಕೆರೆಲಿ ಮಿತ್ತೂರಿನ ಜೆಂಬ್ರ ಕಳಿಶಿಗೊಂಡು ಬಂದದಡ ಅವ°!
ಒಬ್ಬೊಬ್ಬಂದು ಒಂದೊಂದು ತಾಪತ್ರೆ!
~

ಒಳ ಶಿವಪೂಜೆಯ ರುದ್ರಾಭಿಶೇಕ ಮುಗಾತು, ಬಡಕ್ಕೋಡಿ ಗೋಪಣ್ಣ ಒಂದರಿ ಬಂದು ಮಾತಾಡುಸಿಕ್ಕಿ ಹೋದವು.
ಇನ್ನು ಪುರುಷಸೂಕ್ತ ಅಭಿಶೇಕ ಇದ್ದಡ, ಅದಾದರೆ ಮಂಗ್ಳಾರತಿ!
ಅದಿರಳಿ, ಬೈಲಿನೋರು ಎಲ್ಲ ಒಟ್ಟಾದ ಮತ್ತೆ ಎಲೆಡಕ್ಕೆ ತಿಂದೊಂಡು ಮಾತಾಡಿಗೊಂಡು ಕೂದ್ದದು!
ಮಾಷ್ಟ್ರುಮಾವನ ಎಲೆಮರಿಗೆ ಇದ್ದನ್ನೆ, ಈಗಾಣೋರ ಕೈಲಿ ಮೊಬಯಿಲು ಇಪ್ಪ ಹಾಂಗೆ! ಗೆನಾ ಕುಣಿಯ ಇರ್ತು ಯೇವತ್ತೂ.

ಅಜ್ಜಕಾನಬಾವಂಗೆ ಸೊರ ಹೋಗಿತ್ತು! – ಸರ್ಪಮಲೆಅತ್ತೆಯ ಹಾಂಗೆ.
ಆದರೆ ಇವಂಗೆ ಪರಂಚಿ ಹೋದ್ದಲ್ಲ, ಮುನ್ನಾಣ ದಿನ ಚೂರ್ಣಿಕೆ ಹೇಳಿ. ಚೆಂಙಾಯಿಗೊ ಪೂರ ಸೇರಿ ಅಪ್ಪಗ ಬೊಬ್ಬೆಯೇ ಬೊಬ್ಬೆ ಅಡ.
ಇಂದು ಕೇಳಿದ್ದಕ್ಕೆ ಪೂರ ಹೇಂ, ಹೇಂ ಹೇಳ್ತ°, ಸೊರ ಹೆರಡದ್ದೆ. ಎಂಗಳ ಲೊಟ್ಟೆಪಂಚಾತಿಗೆಗೆ ಇದೇ ಒಂದು ಕಾರಣ ಆತು!

ಅದು ಎಂತರ ಹೇಳಿತ್ತುಕಂಡ್ರೆ –

~
ನಮ್ಮೋರ ಜೆಂಬ್ರಂಗಳಲ್ಲಿ ಪಾಯಸ ಹೆರಟಕೂಡ್ಳೇ ಎಲ್ಲಿಂದಾರು ಒಂದು ಸೊರ ಸುರು ಆವುತ್ತು –
ಭ್ಹೋಜನಕಾಲೇ, ನಮಫ್‌ಪಾರ್ವತೀಪತಯೇ ಹ್ಹರಹರಾ…. ಹೇಳಿಗೊಂಡು.

ಪೇಂಟಿನ ಮಾಣಿ ಚೂರ್ಣಿಕೆ ಹೇಳುದು! ಒಳುದವೆಲ್ಲ ಕೊಶೀಲಿ ಉಂಬದು!!

ಪಾಯಸ ಕಂಡ ಕೊಶಿಯೋ, ಜೆಂಬ್ರದ ಗೌಜಿಲಿ ಸೇರುವ ಉತ್ಸಾಹವೋ, ಹಳಬ್ಬರ ಕ್ರಮ ಮುಂದರುಶುವ ಮನಸ್ಸೋ – ಎಲ್ಲವೂ ಒಟ್ಟಾಗಿ ಇದು ಬಪ್ಪದು.
ಒಬ್ಬ° ಗಟ್ಟಿಸೊರಲ್ಲಿ ಹೀಂಗೆ ಹೇಳಿದ ಕೂಡ್ಳೇ ಒಳುದವೆಲ್ಲ ಬಾಯಿಲಿ ಪಾಯಸ ತುಂಬಿದ್ದರೂ ಅಂಬೆರುಪು ಅಂಬೆರ್ಪಿಲಿ ನುಂಗೆಂಡು – ಮಾದೇವ, ಹೇಳುಗು..
ಅದು ಆರಂಭ.
ಅದರ ಹಿನ್ನೆಲೆ ಎಂತಾದಿಕ್ಕು? ಎಂತಕೆ ಅದು ಬಂದಿಕ್ಕು?! ಹೇಳಿ ಮಾಷ್ಟ್ರುಮಾವ° ವಿವರುಸುಲೆ ಸುರು ಮಾಡಿದವು.

~
ಒಗ್ಗಟ್ಟಿಲಿ ಕೆಲಸಮಾಡೆಕ್ಕಾದ ಪರಿಸ್ಥಿತಿಲಿ ಹುರುಪು, ಉತ್ಸಾಹ ಬಪ್ಪಲೆ ಬೇಕಾಗಿ ಒಟ್ಟಾಗಿ ಒಂದು ಜೈಕಾರ ಹೇಳುಗಡ.
ಬಚ್ಚಲು ದೂರ ಮಾಡಿ, ಮನಸ್ಸಿಂಗೆ ಧೈರ್ಯ ತುಂಬಲೆ ಇಂತಾ ಜೈಕಾರಂಗೊ ಉಪಕಾರ ಮಾಡ್ತಡ.
ನಮ್ಮ ಆಳುಗೊ ಹತ್ತು ಜೆನ ಸೇರಿ ದೊಡ್ಡಮರ ಎಳವಗ “ಒಬೇಲೆ”, “ಒಯಿ..ಸ್ಸ!” ಹೇಳುದು ಕೆಮಿಲಿ ಅಜನೆ ಅಪ್ಪಲೆ ಸುರು ಆತು..!
ನೆರಿಯದಜ್ಜಂಗೆ ಬೆಶಿ ಆದರೆ “ಅಜ್ಜಸುರಿಯ” ಹೇಳುದುದೇ ಅನುಸಿ ಹೋತು..!

ಇತಿಹಾಸಲ್ಲೇ ಹಾಂಗೆ ಇತ್ತಡ, ಮಾಷ್ಟ್ರುಮಾವ ಹೇಳಿದವು..
ಗೂರ್ಕರ ಸೈನ್ಯ “ಅಘೋರ್..ಕಾಲೀ”… ಹೇಳುಗಡ. (ಅದಕ್ಕೇ ಅವರ ಗೋರ್ಕಂಗೊ ಹೇಳುದಡ)
ಮೊಘಲರ ಸೈನ್ಯ “ಅಲಾಹೋ… ಅಕುಬರ್..” ಹೇಳಿಗೊಂಡು ಇತ್ತಡ, ಅದರ ಸಂತಾನ ಈಗಳೂ ಹೇಳ್ತು, ಮಾರ್ಗದಕರೆಂಗೆ ಹೋದರೆ ಕೆಮಿ ಬಿಡ್ಳೆಡಿಯ!
ಶಿವಾಜಿಯ ಸೇನೆಯವು “ಹರಹರ- ಮಹದೇವ್!” ಹೇಳಿಗೊಂಡು ಇದ್ದದಡ
(ಸೊತಂತ್ರ ಕಾಲದವು “ವಂದೇ ಮಾತರಂ..” ಹೇಳುದಿದಾ – ಇದು ದೇಶದ ಜನರ ಹುರುಪಿನ ನೂರ್ಮಡಿ ಮಾಡಿದ್ದು ಗೊಂತೇ ಇದ್ದು ನಿಂಗೊಗೆ!)
ಅಂಬಗ ಇದಕ್ಕೆಲ್ಲ ದೈವಭಕ್ತಿ ಮಾಂತ್ರವೇ ಕಾರಣ ಅಲ್ಲದ್ದೆ, ಜೀವದ ಮೇಗೆ ಇದ್ದ ಅಭದ್ರತೆಯೂ ಕಾರಣ ಆಗಿತ್ತಡ..

ಅದಿರಳಿ!
~
ನಮ್ಮ ಅಜ್ಜಂದ್ರು ಎಂತ ಮಾಡ್ತರೂ ದೇವರ ನೆಂಪು ಮಾಡಿಗೊಂಗು. ಉಂಬಗಳುದೇ! ಉಂಬದು ಹೇಳಿತ್ತು ಕಂಡ್ರೆ, ಅದು ಕೃಷ್ಣಪರಮಾತ್ಮ ಉಂಬದು ಹೇಳಿ ಲೆಕ್ಕ ಇದ್ದಡ.
ಅಹಂ ವೈಶ್ವಾನರೋ ಭೂತ್ವಾ – ಪ್ರಾಣಿನಾಂ ದೇಹಮಾಶ್ರಿತಃ – ಹೇಳಿದ್ದನಡ, ಕೃಷ್ಣ, ಭಗವದ್ಗೀತೆಲಿ, ಮಾಷ್ಟ್ರುಮಾವ ಹೇಳಿದವು!ಹಾಂಗೆ, ಉಂಬಗಳೂ ಅದು ಕೃಷ್ಣನೇ ಉಂಬದು ಹೇಳ್ತ ಕಲ್ಪನೆ ನಮ್ಮೋರದ್ದು!
ಅದರಿಂದಾಗಿ, ಉಂಡೊಂಡುದೇ ದೇವರ ಸ್ಮರಣೆ ಮಾಡ್ತದು ನಮ್ಮ ಕ್ರಮ ಆಗಿ  ಹರಹರ – ಮಹದೇವಾ! ಹೇಳುದು ಒಂದು ಕ್ರಮ ಆಗಿ ಬಿಟ್ಟತ್ತು ನವಗೆ.

~
ಶಿವಾಜಿಯ ಮರಾಟ ರಾಷ್ಟ್ರ ಹೇಳಿತ್ತು ಕಂಡ್ರೆ ನವಗೆಂತ ಬಾರೀ ದೂರ ಅಲ್ಲಪ್ಪ!
ನಮ್ಮ ನೆರೆಯೇ ಅಲ್ಲದೋ? – ಸಾಗರದ ಸತ್ಯಮಾವಂಗೆ ಎರಡುಗಂಟೆ ದಾರಿ!
ಹಾಂಗಾಗಿ, ನಮ್ಮ ಜೆನಜೀವನಲ್ಲಿ ಮರಾಟಿ ಜೀವನಶೈಲಿ ತುಂಬ ಪ್ರಭಾವ ಬೀರಿದ್ದಡ.

ನಾವು ಗೋಕರ್ಣ ಹೊಡೆಂದ ಕೊಡೆಯಾಲ ಹೋಬಳಿಗೆ ಬಂದು ಉಡುಗೆ ತೊಡುಗೆ, ಊಟಲ್ಲಿ ರಜರಜ ತುಳು-ಮಲೆಯಾಳ ಸಂಸ್ಕೃತಿ ಇದ್ದರೂ, ಕೆಲವೆಲ್ಲ ನಮ್ಮ ಹಳೇ ಪ್ರಭಾವಂಗೊ ಹಾಂಗೇ ಒಳುದ್ದಿದಾ – ಅದರ್ಲಿ ಇದುದೇ ಒಂದು; ಹೇಳಿ ಹೇಳಿಕ್ಕಿ ಮಾಷ್ಟ್ರುಮಾವ ಬಾಯಿಮುಕ್ಕುಳುಸುಲೆ ಹೋದವು. ಉಂಬಲಾತಿದಾ! 😉

~
ಸಾಗರದ ಹೊಡೆಲಿ “ಗ್ರಂಥ” ಹೇಳುದು, ನಾವು “ಚೂರ್ಣಿಕೆ” ಹೇಳುದು. ಎರಡೂ ಒಂದೇ!ಚೂರ್ಣ ಹೇಳಿರೆ ’ಸಣ್ಣ’ದು ಹೇಳಿ ಅರ್ತ ಅಡ! ಚೌಕ್ಕಾರು ಮಾವಂಗೆ ಇದರ ಬಗ್ಗೆ ಹೆಚ್ಚು ಅರಡಿಗು, ನವಗೆ ಗೊಂತು ಸಾಲ! ಅವು ಈಗ ಮನೆ ಹೆರಡುದು ಕಮ್ಮಿ!
ಓ ಮೊನ್ನೆ ಡಾಗುಟ್ರಕ್ಕನತ್ರೆ ಅಪ್ಪೋ ಕೇಳಿದೆ, ಎನಗೆ ಪರೀಕ್ಷೆ ಜೋರಿದ್ದು – ಹೇಳಿಕ್ಕಿ ಮೋರೆ ತರುಗಿಸಿತ್ತು! 🙁
ಹ್ಮ್, ಅದಿರಳಿ, ಚೂರ್ಣ ಹೇಳಿರೆ ಸಣ್ಣದು ಹೇಳಿ ಅರ್ತ. ಚೂರ್ಣಿಕಾ – ಹೇಳಿರೆ ಸಣ್ಣದೇ! ಚೂರ್ಣಿಕೆ ಇಡೀ ವೇದ, ಶ್ಳೋಕ, ಪುರಾಣ ಹೇಳ್ತವಿಲ್ಲೆ..
ಹೆರ್ಕಿದ ಒಂದೊಂದು ಭಾಗಂಗಳ ಹೇಳುದಿದಾ!
~

ನರಿಯ ದೊಡ್ಡಪ್ಪ ನೀರುಮಡಗಿದವು – ಊಟಕ್ಕೆ ಆತು, ಹೇಳ್ತ ಲೆಕ್ಕಲ್ಲಿ.
ಹೇಂಗೂ ಬಳುಸುಲೆ ಜೆನ ದಾರಾಳ! ಒಪ್ಪಣ್ಣಂಗೆಂತ ಕೆಲಸ – ಉಂಬದೊಂದೇ!
ಎಂಗೊ ಎಲ್ಲ ಒಟ್ಟಿಂಗೆ ಉಂಬಲೆ ಕೂದೂ ಆತು.

~
ನಮ್ಮ ಈ ಚೂರ್ಣಿಕೆಯ ಕ್ರಮ ತುಂಬಾ ವೈವಿಧ್ಯವೇ. ಉಂಬಲೆ ಕೂದು, ಹತ್ತರೆ ಇಪ್ಪವನ ಗುರ್ತ ಇಲ್ಲದ್ರೆ ಗುರ್ತ ಮಾಡಿ, ಏನು-ಒಳ್ಳೆದು-ಅಡಕ್ಕೆ ಕ್ರಯ, ಮಳೆಯ ಶುದ್ದಿ ಎಲ್ಲ ಮಾತಾಡಿ ಆಗಿರ್ತು..
ಇನ್ನೇನು ಲೊಟ್ಟೆಪಂಚಾತಿಗೆ ಸುರು ಆವುತ್ತು – ಹೇಳುವಗ ಓ ಮೂಲೆಲಿ ಕೂದ ದಪ್ಪ ಶಾಲಿನವು ಸುರು ಮಾಡ್ತವು – “ಭೋಜನಕಾಲೇ…”
ಎಲ್ಲೊರದೇ “ಮಾದೇ…ವ” ಹೇಳ್ತವು.ಪಂಚಾತಿಗೆಗೊ ಎಲ್ಲ ಒಂದರಿ ಸ್ತಬ್ದ! ಗಲಗಲದ ಗದ್ದಲದ ಊಟದ ಮನೆಲಿ ಈಗ ಸಂಪೂರ್ಣ ಮವುನ! ಎಂತ ಇದ್ದರೂ ಪಾಯಸ ಎಳವದು ಮಾಂತ್ರ ಶೆಬ್ದ ಇದಾ. 😉
ಸೇಮಗೆ ಸೀವು ಇದಾ – ಬಾರೀ ಲಾಯಿಕ ಆಯಿದು. ಸಕಲೇಶಪುರಲ್ಲಿಪ್ಪ ಅವರ ಅಳಿಯ ಏಲಕ್ಕಿ ತಯಿಂದನೋ ತೋರುತ್ತು!

ಬಟ್ಟಮಾವ ಒಂದು ಶ್ಳೋಕ ಸುರು ಮಾಡಿದವು.
ನಿತ್ಯಾನಂದಕರೀ ವರಾಭಯಕರೀ…” – ಹೇಳಿ ಬಟ್ಟಮಾವಂದೇ ಶೈಲಿಲಿ!
ಎಡೆಡೆಲಿ ಮಾತಾಡಿಗಂಡು ಇದ್ದಿದ್ದ ಕೆಲವು ಜೆನವುದೇ ಮವುನ ಆದವು. ನಾಕು ಗೆರೆಯ ಶ್ಳೋಕ ಮುಗುದ ಕೂಡ್ಳೇ ಆಚಮನೆದೊಡ್ಡಣ್ಣ “ಭೋಜನಕಾಲೇ…” ಹೇಳಿದ, ಎಲ್ಲೊರುದೇ ಮಾದೇವ ಹೇಳಿ ಸೊರ ಸೇರುಸಿದವು.

ಬಟ್ಟಮಾವನ ಶ್ಳೋಕ ಆದ ಮತ್ತೆ ಆರು?
ಬಡೆಕ್ಕೋಡಿ ಗೋಪಣ್ಣ! ಅವುದೇ ನಮ್ಮ ಆಚಮನೆ ದೊಡ್ಡಣ್ಣಂದೇ ಒಟ್ಟಿಂಗೇ ಕಲ್ತದಡ. ಹಾಂಗಾಗಿ ಒಳ್ಳೆ ಚೆಂಙಾಯಿಗೊ ಇದಾ.
ಅವಿಬ್ರುದೇ ಒಟ್ಟಿಂಗೆ “ಗೋಪಾಲಮ್- ಭೂ -ಲೀಲಾ…” ಚೂರ್ಣಿಕೆ ಹೇಳ್ತದು ಸಣ್ಣ ಕಾಲಂದಲೇ ಪೇಮಸ್ಸು!
ಹಾಂಗೆ ಅವಿಬ್ರು ಸುರು ಮಾಡಿದವು, ಎಂತದೋ  – ಉದ್ದ ಇದ್ದು, ಒಪ್ಪಣ್ಣಂಗರಡಿಯ. ಲಾಯಿಕಿತ್ತು ಮಾಂತ್ರ!
ಪರಕ್ಕಜೆ ಅಣ್ಣ ಇದ್ದಿದ್ದರೆ ಒಂದು ಗದ್ಯ ಬಿಡ್ತಿತವು – ಹೇಳಿ ಅನುಸಿ ಹೋತು!
ಅಪ್ಪು, ಅವು ಎಲ್ಲಿ ಹೋದರೂ ಚೂರ್ಣಿಕೆ ಕ್ರಮ ತಪ್ಪುಸುತ್ತವಿಲ್ಲೆ, ಆರಿಂಗೂ ಗೊಂತಿಲ್ಲದ್ರೂ ಸಮ, ಅವು ಯೇವದಾರು ಒಂದು ಗದ್ಯವ ಇಂಪಾಗಿ ಹೇಳಿಯೇ ಹೇಳುಗು.

ಅಂತೂ, ಒಂದು ಚೂರ್ಣಿಕೆ ಆದ ಕೂಡ್ಳೇ, ಭೋಜನ ಮಾಡುವ ಕಾಲಲ್ಲಿ, ಪಾರ್ವತಿ ಪತಿ ಶಿವನ ನೆಂಪು ಮಾಡ್ತೆಯೊ – ಹೇಳಿ ಒಂದರಿ ಮಹದೇವನಾಮ ಸ್ಮರಣೆ ಮಾಡುದು. ನಾವು ಉಂಬದೆಲ್ಲವೂ ಅಕೇರಿಗೆ ಭಸ್ಮವೇ ಆಯೆಕ್ಕಾದ್ದು, ಅಲ್ಲದೋ..
ಒಬ್ಬ: ಭೋಜನಕಾಲೇ, ನಮಃ ಪಾರ್ವತೀ ಪತಯೇ – ಹರಹರಾ…
ಜೆನಂಗೊ:
ಮಾದೇವ! (ಮಹದೇವ..)
~
ಮತ್ತಾಣದ್ದು ಆರು-ಆರು – ಹೇಳಿ ಒಂದರಿ ಗಡಿಬಿಡಿ ಆತು.
ಅದೂ ಒಂದು ಕೊಶಿಯೇ ಅಲ್ಲದೋ – ದೊಡ್ಡ ಸೊರಲ್ಲಿ – ಹಾಂ, ಈಗ ಅಜ್ಜಕಾನಬಾವನ ಚೂರ್ಣಿಕೆ – ಹೇಳಿಬಿಡುದು.
ಪಾಪ, ಗೊಂತಿಲ್ಲದ್ದೆ ಸಬೆಲಿ ನಮ್ಮ ಹೆಸರು ದಿನಿಗೆಳುವಗ ಗೋಣನ ಮೇಗಂಗೆ ಪಕ್ಕನೆ ಬೆಳುಲುಸೂಡಿ ಬಿದ್ದಾಂಗೆ – ಗಾಬೆರಿ ಆವುತ್ತು!
ಆ ಗಾಬೆರಿಯ ನೋಡಿಗೊಂಡೇ ಉಂಬದು, ಕೊಶಿಕೊಶೀಲಿ.
ಈ ಸರ್ತಿ ಅವಂಗೆ ಸೊರವೇ ಇತ್ತಿಲ್ಲೆ, ಬಿಡಿ!

ಅಂತೂ ಅವನೋ – ಇವನೋ – ಆ ಹೆಮ್ಮಕ್ಕಳೋ – ಈ ಕೂಸೋ – ಆಚಮನೆ ದೊಡ್ಡಣ್ಣಂಗೆ ಪುರುಸೊತ್ತೇ ಇಲ್ಲೆ!
ಕಂಡವಕ್ಕೆಲ್ಲ ಗಾಳ ಹಾಕಿದ, ನೆಗೆನೆಗೆಮೋರೆಲಿ. “ಅಪ್ಪಚ್ಚಿ, ಒಂದು ಬರಳಿ”, “ಅಕ್ಕಾ, ಚೆ ಚೆ – ಒಂದು ಸಂಗೀತ..!” – ಹೀಂಗೆ!

ದೊಡ್ಡಣ್ಣ ಹೀಂಗೆ ವೆವಸ್ತೆ ಮಾಡಿಗೊಂಡು ಇಪ್ಪಗಳೇ, ಕಂಪದ ಕೂಸು ಮೆಲ್ಲಂಗೆ ಎದ್ದು ನಿಂದತ್ತು.
ಶಾಲೆಲಿ ಕಲುಶಿದ ಯೇವದೋ ಶ್ಳೋಕ – ಪರ್ತಾಯ ಪ್ರತಿಬೋಧಿತಾಮ್ ಆಗಿರೇಕು- ಅದರ ರಾಗಲ್ಲಿ ಹೇಳುಲೆ ಸುರು ಮಾಡಿತ್ತು.
ಶಾಲೆಲಿ ಎದ್ದುನಿಂದು ಹೇಳೆಕ್ಕಿದಾ, ಚೂರ್ಣಿಕೆಯನ್ನುದೇ ಹಾಂಗೇ ಹೇಳಿ ಕೂದತ್ತು.
ಚೆಂದಕ್ಕೆ ಎಲ್ಲೊರುದೇ ಮಾದೇವ – ಹೇಳುವಗ ಆ ಕೂಚಿಂಗೆ ಕುಚಿಯೋ ಕುಚಿ! ಚೆ ಚೆ!! 🙂
~

ನಮ್ಮ ಹಳಬ್ಬರು ಎಲ್ಲೊರುದೇ ಪ್ರತಿಭಾವಂತರೇ ಆಗಿದ್ದಿದ್ದವು.
ಅವರವರತ್ರೆ ಇಪ್ಪ ಪ್ರತಿಭೆಯ ಹೆರ ಹಾಕಲೆ ಇದ್ದ ಸುಸಮಯ – ಜೆಂಬ್ರದ್ದಿನ.

ಮಂತ್ರ ಕಲ್ತೋರಿಂಗೆ ಹಳೇ ಶ್ಳೋಕಂಗೊ ಮರದು ಹೋಗದ್ದ ಹಾಂಗೆ, ಸಂಗೀತ ಕಲ್ತ ಹೆಮ್ಮಕ್ಕೊಗೆ ಆಲಾಪನೆ ಮರೆಯದ್ದ ಹಾಂಗೆ, ಗಮಕ ಕಲ್ತ ಮಾವಂಗೆ ಪದ್ಯಂಗೊ ಮರೆಯದ್ದ ಹಾಂಗೆ, ಬಾಗೊತಿಕೆ ಕಲ್ತು ಮನೆಲೇ ಇದ್ದವಂಗೆ ಹಳೆಮರಪ್ಪು ಬಾರದ್ದಾಂಗೆ..
ಎಲ್ಲದಕ್ಕೂ ಅವಕಾಶ ಈ ಚೂರ್ಣಿಕೆಯೇ..
ಅಂತೇ ನಿತ್ಯ ಬಳಕ್ಕೆಲಿ, ತೋಟಲ್ಲಿ ಅಡಕ್ಕೆ ಹೆರ್ಕುವಗ, ಮನೆಕೆಲಸಲ್ಲಿ ಅಂಬೆರ್ಪು ಇಪ್ಪಗ – ಈ ಶ್ಳೋಕಂಗೊ, ಮಂತ್ರಂಗೊ, ಸಂಗೀತಂಗೊ ನೆಂಪೊಳಿಗೋ – ಇಲ್ಲೆಪ್ಪ.ನಮ್ಮ ಸಭಾಕಂಪನ ಹೋಗುಸುಲೆ ಮೊದಲನೇ ಜಾಗೆಯುದೇ ಇದೇ ಜೆಂಬ್ರದ್ದಿನದ ಚೂರ್ಣಿಕೆ.
ಒಬ್ಬ ಚೂರ್ಣಿಕೆ ಸುರುಮಾಡುವಗ ಹಂತಿಲಿ ಕೂದವು, ಕರೆಲಿ ಕೂದವು, ನಿಂದವು, ಬಳುಸುವವು – ಅವು ಇವು – ಎಲ್ಲೊರುದೇ ನೋಡ್ಳೆ ಸುರು ಮಾಡ್ತವು, ಅದಾರು, ಅದಾರು – ಹೇಳಿ. ಎಲ್ಲೊರ ಕಣ್ಣುದೇ ಅವನ ಹೊಡೇಂಗೇ!! ಬೆಳಿಬೆಳಿ – ಪಿಳಿಪಿಳಿ ಕಣ್ಣುಗೊ!!

ಹೊಸಬ್ಬಂಗೆ ಅಂತೂ ದಬ್ಬಣದ ಸಾಲಿನ ಹಾಂಗೆ ಕಾಂಗು! ದಬ್ಬಣ ಮಾಲೆಲಿ ಕುತ್ತಿದ ಹಾಂಗೆ ಅಕ್ಕು!

ಆ ದಬ್ಬಣಂಗಳ ಹೂಗಿನ ಮಾಲೆ ಮಾಡುದೇ ಅವ ಪಡಕ್ಕೊಂಬ ಅನುಭವ!
ಚೂರ್ಣಿಕೆ ಹೇಳಿ ಹೇಳಿ ಅನುಭವ ಆದ ಹಾಂಗೆ, ಎಲ್ಲೊರುದೇ ನೋಡಿರೆ – ಆ ಕಣ್ಣುಗೊ ಹೂಗಿನ ಮಾಲೆಯ ಹಾಂಗೆ ಕಾಂಗು!
ಅಲ್ಲದೋ?
ಅದಕ್ಕೇ ಈ ಜೆಂಬ್ರದ್ದಿನದ ಚೂರ್ಣಿಕೆಯ ಎಲ್ಲೊರುದೇ ಇಷ್ಟಪಡ್ತವು.
~
ಓ ಮೊನ್ನೆ ಬೈಲಕರೆಯ ಉಪ್ನಾನಕ್ಕೆ, ಬೆಂಗುಳೂರಿನ ಮಕ್ಕೊ ಬಂದಿತ್ತಿದ್ದವು. ಹಂತಿಲಿ ಕೂದು ಚೂರ್ಣಿಕೆ ಹೇಳುವ ಉತ್ಸಾಹ ಕಂಡು, ಅತ್ತಿಬೆಲೆ ಮಾಣಿ, ಅವನ ಅತ್ತಿಗೆಯ ಒಟ್ಟಿಂಗೆ ಕಲ್ತ ಜಾನಪದ ಪದ್ಯ ಒಂದರ ಹಾಡಿದ, ಭಾರೀ ಲಾಯಿಕಾಯಿದು!
ಮೂಗುತಿ..ಮುತ್ತು – ಹೇಳಿದ, ಉಂಬಗ ಎಂತಪ್ಪಾ – ನೋಡಿರೆ ಅದೊಂದು ದಾಸರ ಕೀರ್ತನೆ! – ನವಗೆ ಚೂರ್ಣಿಕೆ!!
ಮತ್ತೊಂದು ಕೂಸು “ವೇಂಕಟ ರಮಣನೆ ಬಾರೋ..” ಹೇಳಿ ಸುರು ಮಾಡಿತ್ತು!  ಇನ್ನೊಂದು ಕೂಸು ಸಾಯಿ ಭಜನ್, ಶ್ರೀ ಶ್ರೀ ಭಜನ್ – ನ ಹಾಡಿತ್ತು, ಸುಶ್ರಾವ್ಯವಾಗಿ. ಬೈಲಿನ ಕೆಲವು ಜೆನಕ್ಕೆ ಅಮೇಯಿ ಅತ್ತೆಯ ಸಂಗೀತ ನೆಂಪಾತು!
ಎಂಗೊಗೆಲ್ಲ ಮಾದೇವ ಹೇಳುದೇ ಮರವಷ್ಟು ಚೆಂದಕೆ..!
~ಚೂರ್ಣಿಕೆ ಹೇಳಿರೆ ಗದ್ಯ, ಮಂತ್ರ, ಸಂಗೀತ – ಇದುವೇ ಆಯೆಕ್ಕೂಳಿ ಏನಿಲ್ಲೆ.
ಕೆಲವು ಕುಶಾಲಿನ ಜೆನಂಗೊ ಇರ್ತವು – ಪಾರೆ ಮಗುಮಾವನ ಹಾಂಗಿಪ್ಪವು – ಅವು ಎಂತೆಲ್ಲ ಚೋದ್ಯಂಗಳ ಪದ ಕಟ್ಟಿದ್ದರ ಹಾಡುಗು..
ಕುಡ್ಪಲ್ತಡ್ಕ ಬಾವ ಬಲಿಪ್ಪಜ್ಜನ ಸೊರಲ್ಲಿ ಚೂರ್ಣಿಕೆ ಹೇಳಿರಂತೂ – ಒಂದರಿ ತಿರುಗಿ ನೋಡುಗು ಎಲ್ಲೊರುದೇ!
ಅರ್ತ್ಯಡ್ಕ ಮಾಣಿಗೆ ಅವನ ದೊಡ್ಡಪ್ಪ ಬರದುಕೊಟ್ಟ ಒಂದು ಹವ್ಯಕ ಶ್ಲೋಕ ಇದ್ದು, ಒಪ್ಪಣ್ಣಂಗೆ ಸರೀ ಬತ್ತಿಲ್ಲೆ – ಮಾಣಿ ಇಲ್ಲಿ ಒಪ್ಪ ಬರೆತ್ತನೋ ಏನೋ!

ಇನ್ನೊಂದು ವಿಶಯ, ಗುಟ್ಟಿಲಿ ಹೇಳ್ತೆ; ಕೆಲವು ಪೆರಟ್ಟು ಶ್ಲೋಕಂಗಳುದೇ ಇರ್ತದಾ..
ಕುಶಾಲಿನ ಚೆಂಙಾಯಿಗೊ ಒಟ್ಟಿಂಗೆ ಸಿಕ್ಕಿರೆ ಕೆಲಾವು ಸರ್ತಿ ನಮ್ಮ ಪಾರೆ ಮಗುಮಾವಂಗೆ ಎಳಗುಲಿದ್ದು!
ಒಂದೇ ಸರ್ತಿಗೆ ಮೂರು ಲಾಡು ಜಡಿದಂ..
(ಮೂಲಪಾಟ: ವಂದೇ ಶಂಭುಮುಮಾಪತಿಂ ಸುರಗುರುಂ )
ಹೇಳಿ ಒಂದು ಲೊಟ್ಟೆಚೂರ್ಣಿಕೆ ಸುರು ಮಾಡಿರೆ, ಹೇಳ್ತ ಗಾಂಭೀರ್ಯತೆ ನೋಡಿ ಕೆಮಿ ಕೇಳದ್ದವಂಗೂ ನೆಗೆಬಕ್ಕು!
ಆಚಮನೆ ದೊಡ್ಡಣ್ಣ ಇದ್ದರೆ ನೆಗೆಮಾಡಿಗೊಂಡು ಇದಕ್ಕೂ ಸೊರ ಸೇರುಸುಗು!
~

ಚೂರ್ಣಿಕೆ ಆದಕೂಡ್ಳೇ ಮಾದೇವ ಹೇಳಿಯೇ ಹೇಳುಗಿದಾ! ಬಿಂಗಿ ಮಕ್ಕೊ ಅಲ್ಲಿಯೂ ಬಿಡವು.
ಮಾದೇ…………………… ಹೇಳುದು, ಏ ಕಾರ ಒಬ್ಬಂಗೆ ಬಚ್ಚುವಗ ಇನ್ನೊಬ್ಬ ಸುರು ಮಾಡುದು.
ಅಕೇರಿಗೆ ಎಲ್ಲೊರಿಂಗೂ ಬಚ್ಚುವಗ ….ಏವಾ! ಹೇಳುದು. 😉
ಹಾಂಗೊಂದು ಪೆರಟ್ಟು, ಕೆಲವು ಮಕ್ಕಳದ್ದು!!
(ಅಜ್ಜಕಾನ ಬಾವಂಗೆ ಸೊರ ಹೋದ್ದುದೇ ಹಾಂಗೇ ಇದಾ! 😉 )
~

ಮಹದೇವನ ಸ್ಮರಣೆಲೇ ಉಂಡೊಂಡು, ದೇವರ ನೆಂಪಿನೊಟ್ಟಿಂಗೇ ಆಹಾರ ತೆಕ್ಕೊಂಡು, ಅಕೇರಿಗೆ ಶ್ರೀಕೃಷ್ಣನ ನೆಂಪು ಮಾಡಿಗೊಂಡು ಏಳುದು. ಮಜ್ಜಿಗೆ ಹೆರಟಪ್ಪಗ ಆಚಮನೆ ದೊಡ್ಡಣ್ಣನ ಇನ್ನೊಂದು ಚೂರ್ಣಿಕೆ ಹೆರಟತ್ತು..
ಮಜ್ಜಿಗೆಯವ ಕೊಡಿಂಗೆ ಎತ್ತುದು ಮಾಂತ್ರ ಅಲ್ಲದ್ದೆ, ಎಲ್ಲೊರುದೇ ಉಂಡು, ಕೈನ್ನೀರು ತೆಗದು, ಉಪ್ಪು-ಮೆಣಸು-ಬೇನುಸೊಪ್ಪಿನ ಬಾಳೆನೆಡುಕಂಗೆ ತಂದಾಯಿದು. ಅಷ್ಟು ಹೊತ್ತಿನ ಊದ್ದದ ಚೂರ್ಣಿಕೆ ಅದು!

ಚೂರ್ಣಿಕೆ ಮುಗಿವಗ ಎಲ್ಲೋರ ಊಟವೂ ಆಯಿದಿದಾ –
ಒಬ್ಬ: ಭೋಜನಾಂತೇ, ಶ್ರೀ ವೇಣುಗೋಪಲ ಸ್ಮರಣ; ಗೋವಿಂದಾ..
ಎಲ್ಲೊರು: ಗೋವಿಂದಾ..
ಹೇಳಿಗೊಂಡು ಕೈ ಬೆರಳ ಎಡೆಲಿ ಒಳುದ್ದರ ರುಚಿ ನೋಡಿಗೊಂಡು ಎದ್ದವು.
~

ಹೆದರಿ ಹೆದರಿ ಕೂದಿದ್ದ ಮಕ್ಕಳ ಎದುರು ತಂದು, ಅವರ ಕೈಲಿ ಹೇಳುಸಿದ್ದು!! ಅಕೇರಿಗೆ ಇಡೀ ಹಂತಿಯೇ ಅವರದ್ದು!!
ಎಂಗೊ ಎಲ್ಲ ನೋಡಿಯೇ, ಕಾದೇ ಬಾಕಿ.
ಆಚಮನೆ ದೊಡ್ಡಣ್ಣನ ಆ ವಿಶಯಲ್ಲಿ ಮೆಚ್ಚಲೇ ಬೇಕು!
ನೆರಿಯ ದೊಡ್ಡಪ್ಪನಲ್ಲಿ ಒಪ್ಪಣ್ಣಂಗೆ ಚೂರ್ಣಿಕೆ ಹೇಳುಲೆ ಕಾಲವೇ ಸಿಕ್ಕಿದ್ದಿಲ್ಲೆ, ಇದ್ದಾ ಹೊಡಿ ಮಕ್ಕಳದ್ದೇ ಕಾರ್ಬಾರು.
ಕೋಳಿಕ್ಕಜೆ ಪುಳ್ಳಿಗಂತೂ ಕಲಿಶಿದ ಶ್ಲೋಕ ಪೂರ ಪುನಾ ನೆಂಪಾಗಿಕ್ಕು.

ತೊಂದರಿಲ್ಲೆ, ನಾಳ್ತು ಒಂದೇ ದಿನ ಬೈಲಿಲಿ ಎರಡೆರಡು ಮದುವೆ ಇದ್ದು. ಒಪ್ಪಣ್ಣಂಗೆ ಎರಡು ಚೂರ್ಣಿಕೆ ಬಾಯಿಪಾಟ ಮಾಡಿ ಆತು!
ಕೆದೂರಿನ ಮದುವೆಲಿ ಒಂದು, ಚೆನ್ನಬೆಟ್ಟಿನ ಸಟ್ಟುಮುಡಿಲಿ ಇನ್ನೊಂದು – ಈ ಸರ್ತಿ ಸೊರ ಹೋದರೂ ತೊಂದರಿಲ್ಲೆ! 🙂
ಚೌಕ್ಕಾರುಮಾವನತ್ರೆ ತಾಲೀಸಾದಿ ಚೂರ್ಣ ಇಕ್ಕು!
~

ಹಳಬ್ಬರ ಕ್ರಮಂಗಳಲ್ಲಿ ಎಂದೆಂದಿಂಗೂ ಪ್ರಸ್ತುತ ಆಗಿಪ್ಪ ಆಚರಣೆಗಳಲ್ಲಿ ಚೂರ್ಣಿಕೆಯೂ ಒಂದು.
ಬೇರೆದಿಕ್ಕಾಣ ಪ್ರಶ್ನೆ ಬಿಡಿ, ನಮ್ಮ ಜೆಂಬ್ರಂಗಳಲ್ಲಿ ಆ ಚೂರ್ಣಿಕೆಯ ಮದಾಲು ಒಳುಶುವ. ನಮ್ಮಲ್ಲಿಗೆ ಬಂದೋರ ಕೈಲಿ ಹೇಳುಸುವ, ಅವರಲ್ಲಿಪ್ಪ ಪ್ರತಿಭೆಯ ಒಟ್ಟಿಂಗೆ ಚೂರ್ಣಿಕೆಯನ್ನೂ ಬೆಳೆಶುವ. ಎಂತ ಹೇಳ್ತಿ?

ದೊಡ್ಡೋರ ಕೈಲಿ ಚೂರ್ಣಿಕೆ ಹೇಳುಸಿ, ಸಣ್ಣೋರು ಅವ್ವಾಗಿಯೇ ಹೇಳ್ತವು! 🙂

ಏ°?
ಒಂದೊಪ್ಪ: ಕೂದೊಂಡು ಉಂಬ ಹಂತಿಲಿ ಇದೆಲ್ಲ ಇದ್ದು. ಇನ್ನಾಣ ಓಡಿಗೊಂಡು ಉಂಬ ಕಾಲಲ್ಲಿ ಈ ಚೂರ್ಣಿಕೆಗೊ ಎಂತಕ್ಕೋ ಏನೋ!
ಗೋವಿಂದಾ..!

ಒಪ್ಪಣ್ಣ

   

You may also like...

23 Responses

  1. Ramesh Bhat B says:

    Writing in Good style.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *