Oppanna.com

ಕಾಮನೆಗೊ ಹುಟ್ಟುದು ಪ್ರಕೃತಿ; ಕಾಮನ ಹೊತ್ತುಸುದು ಸಂಸ್ಕೃತಿ…

ಬರದೋರು :   ಒಪ್ಪಣ್ಣ    on   27/02/2015    3 ಒಪ್ಪಂಗೊ

ನೆಲ್ಲಿಗುರಿ ಮದುವೆ ಗವುಜಿ ಓ ಮೊನ್ನೆ.
ಹದಾ ಕಾದ ಹೋಳಿಗೆಯ ನಾಲ್ಕು ಸಮಾ ಹೊಡದು, ಮಜ್ಜಿಗೆ ಅಶನ ಉಂಡು ಚೊಕ್ಕಕೆ ಬಿದ್ದು ಒರಗಿದ್ದ° ಬೋಚಬಾವ°.
ನೆಳವಿನ ಉಪದ್ರ ಬಿಡೆಕ್ಕೇ. ನವಗೆಲ್ಲ ಹತ್ತು ನೆಳವು ಕಚ್ಚುತ್ತರೆ ಬೋಚಬಾವಂಗೆ ಇಪ್ಪತ್ತೈದು ಕಚ್ಚುಗು ನಿಘಂಟು – ಏಕೇದರೆ, ಅವನ ಮೈಲಿ ತಿಂಬಲೆ ಧಾರಾಳ ಸಿಕ್ಕುತ್ತಿದಾ ನೆಳವಿಂಗೆ.
ಅದಿರಳಿ – ಹಾಂಗೆ ನೆಳವು ಕಚ್ಚಲೆ ಸುರು ಆತು ಅವಂಗೆ. ಒರಗಿದಲ್ಲಿಂದಲೇ ನೆಳವಿನ ಓಡುಸಲೆ ಅರೆ ಒರಕ್ಕಿಲಿ ಕೈ ಒಂದರಿ ಬೀಸಿದ°..
ಮತ್ತೊಂದರಿ ಬೀಸಿದ°…
ಇನ್ನೊಂದರಿ ಬೀಸಿದ° – ಏಯ್, ನೆಳವು ಅಲ್ಲೇ ಇದ್ದು. ಹೋಯಿದೇ ಇಲ್ಲೆ.
ಜೇನೊರಕ್ಕಿನ ಹಾಳು ಮಾಡ್ತ ನೆಳವಿನ ಮೇಗೆ ಇನ್ನಿಲ್ಲದ್ದ ಕೋಪ ಬಂತು ಅವಂಗೆ.
ಎಂತ ಮಾಡುಸ್ಸು?

ಪಿಸುರು ಬಂದರೆ ಎಲ್ಲೋರುದೇ ಎಂತ ಮಾಡುಗೋ, ಬೋಚಬಾವನೂ ಅದನ್ನೇ ಮಾಡಿದ° – ಒರಕ್ಕಿಂದ ಕೆಂಪುಗಣ್ಣಿಲಿ ಎದ್ದು ಒಂದರಿ ಶಾಲು ಬೀಸಿ ಬಡುದ°.
ಪಾಪ! ಇಷ್ಟು ಸಣ್ಣ ನೆಳವು – ಹಲ್ಲ ಸೆರೆಂದ ಸಂತೋಷಲ್ಲಿ ಹೋಳಿಗೆ ಎಸರು ಹೀರಿಗೊಂಡಿತ್ತು; ಒಂದರಿಯೇ ಗಡ ಗಡ ಆತು. ಎಂತಾತು ಅರಡಿವ ಮದಲೇ – ಮಣ್ಣು ಹಿಡ್ಕಟೆ ಶಾಲಿಲಿ ರಪಕ್ಕ ಬಿದ್ದತ್ತು ಎಲ್ಲಿಂದಲೋ! ನೆಳವು ಎಂತಕ್ಕು? ಸತ್ತೇ ಹೋತು.

ಮಳಿ ಭಾವಂದೇ ಆ ಮದುವೆಗೆ ಬಂದಿದ್ದವು. ಮೂರ್ನೇ ಹಂತಿ ಊಟ ಆಗಿ ಅವರತ್ರೆ ಪಟ್ಟಾಂಗ ಹಾಕುವಾಗ ಇಷ್ಟೆಲ್ಲ ನೆಡದ್ಸು ಕಂಡತ್ತು ಒಪ್ಪಣ್ಣಂಗೆ.  ಈ ಘಟನೆ ಕಾಂಬಗ ಒಪ್ಪಣ್ಣಂಗೆ ನೆಂಪಾದ್ಸು ಯೇವ ಸನ್ನಿವೇಶ ಗೊಂತಿದ್ದೋ –
ಅಂದೊಂದರಿ ಶಿವ° ತಪಸ್ಸಿಂಗೆ ಕೂದಿಪ್ಪಾಗ ಆರೋ ಹೀಂಗೇ ಲೂಟಿ ಮಾಡಿಗೊಂಡು ಇತ್ತಿದ್ದವಾಡ. ಸುಮಾರು ಹೊತ್ತು ಕಾದ ಶಿವ° ಒಂದರಿಯೇ ಕಣ್ಣು ಬಿಟ್ಟದಾಡ; ಅಲ್ಲದೋ?
ಅರಡಿಗೋ ನಿಂಗೊಗೆ ಆ ಕಥೆ?
~
ಲೋಕಲ್ಲಿ ತಾರಕಾಸುರ ಹೇಳ್ತ ರಕ್ಕಸನ ಉಪದ್ರ ಸುರು ಆತಾಡ. ಮನುಶ್ಯರಿಂಗೆ ಬಿಡಿ, ದೇವರಿಂಗೇ ಕೂಪಲೆಡಿಯ! ಅಷ್ಟೂ ಉಪದ್ರ. ಅವಂಗೆ ಸಾವಿಲ್ಲೆ. ಅವನ ಆರಿಂಗೂ ಕೊಲ್ಲಲೆಡಿಯ.
ಕೊಲ್ಲೇಕಾರೆ – ಆ ಒಂದು ನಿರ್ದಿಷ್ಟ ಜೆನ ಬರೆಕ್ಕು, ಆರು ಹೇದರೆ – ಶಿವನ ಮಗ°!!
ಶಿವ° ಎಲ್ಲಿದ್ದ°?
ಅವ° ಎಲ್ಲವನ್ನೂ ಬಿಟ್ಟು ವಿರಾಗಿಯಾಗಿ, ಸ್ಮಶಾನಲ್ಲಿ ತಪಸ್ಸು ಮಾಡಿಗೊಂಡು ಇದ್ದ°.  ನಾಗ ಸಾಧುಗಳ ಹಾಂಗಿಕ್ಕು ಸಾಮಾನ್ಯ.
ಅವನ ತಪಸ್ಸು ಮುಗಿವಲೆ ಯೇವಗಳೋ, ಅದಾಗಿ ಅವಂಗೆ ’ಒಂದು ಮದುವೆ ಅಪ್ಪೊ°’ ಹೇದು ಮನಸ್ಸು ಕಾಂಬದು ಯೇವಗಳೋ, ಅವಂಗೆ ಕೂಸು ಸಿಕ್ಕಿ ಬದ್ಧ ಅಪ್ಪದು ಯೇವಗಳೋ, ಅದಾಗಿ ಮದುವೆ ಅಪ್ಪದು ಯೇವಗಳೋ – ಹೋ! ಇಂದ್ರಂಗೆ ತಲೆಬೆಶಿ ಸುರು ಆತು.
ಒಂದಾರಿ ನಿಲ್ಲುಸು ನಿನ್ನ ತಪಸ್ಸು – ಹೇದು ಬಗೆತ್ತರಲ್ಲಿ ಹೇದು ನೋಡಿದ°; ಏಯ್, ಕೇಳಿದ್ದಿಲ್ಲೆ. ಮತ್ತೆಂತ ಮಾಡ್ಳೆಡಿಗು?
ಧೃಡ ಜಪಕ್ಕೆ ಕಾರಣ ಆ ಏಕಚಿತ್ತ, ಏಕಾಂತ.
ಸುಧೃಡ ಮನಸ್ಸಿನ ಚಂಚಲಗೊಳುಸೆಕ್ಕು.

ಮನಸ್ಸು ಚಂಚಲ ಆಯೇಕಾರೆ ಎಂತ ಮಾಡೇಕು – ಮನಸ್ಸಿಂಗೆ ಆಶೆಗೊ ಹುಟ್ಟುಸೇಕು. ಆಶೆಗೊ ಹೇದರೆ ಅದಾಯೇಕು, ಇದಾಯೇಕು ಹೇಳ್ತ ಕಾಮನೆಗೊ.
ಕಾಮನೆಗಳನ್ನೇ ಹುಟ್ಟುಸಲೆ ಒಬ್ಬ° ದೇವತೆ ಇದ್ದ° ನಮ್ಮ ಪುರಾಣಂಗಳಲ್ಲಿ. ಅವನೇ ಮನ್ಮಥ. ಆ ಮನ್ಮಥನ ಹತ್ತರೆ ಇಂದ್ರ ಹೇಳ್ತನಾಡ – ಇದಾ ಓ ಅಲ್ಲಿ ಹೀಂಗೀಂಗೆ, ಜೆಪಕ್ಕೆ ಕೂದ ಶಿವನ ಒಂದರಿ ಏಳುಸು – ಹೇದು.
ಸರಿ ಹೇದು ಮನ್ಮಥ ಅವನ ಬಿಲ್ಲನ್ನೂ, ಐದು ಬಾಣಂಗಳನ್ನೂ ತೆಕ್ಕೊಳ್ತ°. ಸೀತ ಬಂದ°, ಶಿವನ ಹತ್ರಂಗೆ.

ಸುರೂವಿಂಗೆ ಬಂದು ಸ್ಥಳ ಪರಿಶೀಲನೆ ಮಾಡಿದ°. ಜೆಪಕ್ಕೆ ಕೂದ ಜಾಗೆಗೆ ವಸಂತ ಋತು ತರುಸಿದನಾಡ ಮನ್ಮಥ.
ಹೇದರೆ, ವಸಂತಲ್ಲಿ ಇಡೀ ಲೋಕವೇ ಚೈತನ್ಯಪೂರ್ಣವಾಗಿ, ಮನಸ್ಸು ಸಂಘಜೀವಿಯಾವುತ್ತಾಡ.
ಏಯ್, ಶಿವಂಗೆ ಎಚ್ಚರಿಗೆಯೇ ಆಯಿದಿಲ್ಲೆ.
ಒಟ್ಟಿಂಗೆ ಇಪ್ಪ ನಂದಿನ ಧೇನು ದನುವಿನ ಬಲುಗಿ ಅಲ್ಲಿಂದ ಓಡುಸುತ್ತ°. ಅದಾಗಿ ಒಂದೊಂದೇ ಬಾಣ ಬಿಡ್ತ°.

ಅರವಿಂದ – ಸುರೂವಾಣ ಬಾಣ ಅದು – ಏಯ್, ಹಂದುತ್ತನಿಲ್ಲೆ ಶಿವ°.
ಅಶೋಕ – ಎರಡ್ಣೇ ಬಾಣ, ಅದುದೇ ನಾಟಿದ್ದಿಲ್ಲೆ..
ಚೂತ – ಉಹೂಂ, ಅದಕ್ಕೂ ಯೇವದೇ ಪ್ರತಿಕ್ರಿಯೆ ಇಲ್ಲೆ..
ನವಮಲ್ಲಿಕಾ – ಈ ನಾಲ್ಕನೇ ಬಾಣ ಬಿಟ್ರೂ ಶಿವನ ಯೇವದೇ ಪ್ರತಿಕ್ರಿಯೆ ಇಲ್ಲೆ.
ಇನ್ನು ಒಳುದ್ದೇ ಒಂದೇ ಬಾಣ.
ನೀಲೋತ್ಪಲ- ಅದನ್ನೂ ಬಿಟ್ಟಾತು. ಎಲ್ಲಾ ಐದು ಬಾಣವನ್ನೂ ಬಿಟ್ಟಾತು..
.
.
.

ಯೇಯ್.. ಹಂದಿದ್ದನೇ ಇಲ್ಲೆ ಶಿವ.

ಇಷ್ಟೆಲ್ಲ ಅಪ್ಪಗ – ಶಿವಂಗೆ ಜೆಪಂದ ಎಚ್ಚರಿಗೆ ಅಪ್ಪದು ಆತು. ಆದರೆ ಕಾಮನೆ ತುಂಬಿಗೊಂಡು ಅಲ್ಲ, ಪಿಸುರು ತುಂಬಿಗೊಂಡು.
ಅವನ ಹಣೆಲಿ ಮೂರು ಕಣ್ಣೂ ಇದಾ. ಎಡ-ಬಲದ ಹೊಡೆಲಿ ನಮ್ಮ ಹಾಂಗೇ – ಅತ್ತಿತ್ತೆ ನೋಡ್ಳೆ. ಆದರೆ ಹಣೆಲಿಪ್ಪ ಮೂರ್ನೇ ಕಣ್ಣು – ಅದು ಸರ್ವನಾಶದ್ದು. ಆ ಕಣ್ಣು ಮುಚ್ಚಿದ್ದರೇ ಲೋಕಕ್ಕೆ ಕ್ಷೇಮ, ಮುಚ್ಚಿಪ್ಪದು ತೆಗದರೆ ಮತ್ತೆ ಎದುರಿಪ್ಪದು ಭಸ್ಮ ಆಗಿ ಹೋವುತ್ತಾಡ. ಹಾಂಗೇ ಆತು.
ಜೆಪಂದ ಏಳುಸುಲೆ ಹೆರಟು ಹೂಗಿನ ಐದು ಬಾಣಂಗಳ ಬಿಟ್ಟ ಮನ್ಮಥ – ಸುಟ್ಟೇ ಹೋದ°.
ಅದರೊಟ್ಟಿಂಗೆ – ಅವನ ಅಹಂಭಾವವೂ.

ಲೋಕದ ಆರ ಬೇಕಾರೂ ಮಂಗ° ಮಾಡುವೆ, ಅವಕ್ಕೆ ಚಾಂಚಲ್ಯವ ಕೊಡುವೆ ಹೇಳ್ತ ಕೊಬ್ಬಿಲಿ ಇತ್ತಿದ್ದನಾಡ ಇದಾ!
ಶಿವ° ಒಂದರಿ ಕಣ್ಣು ತೆಗದು ಮನ್ಮಥನ ಸುಟ್ಟರೂ, ಮತ್ತೆ ಗಿರಿಜೆಯ ಪ್ರಾರ್ಥನೆಗೆ ಬೇಕಾಗಿ ಪುನಾ ಅವಂಗೆ ಜೀವ ಕೊಟ್ಟು, ದೇಹ ಇಲ್ಲದ್ದೆ (ಅನಂಗ)ಆಗಿ ಇಪ್ಪ ಹಾಂಗಾಗು – ಹೇಳ್ತದು ಮುಂದೆ ಕಥೆಲಿ ಬತ್ತು.
ಒಂದರಿ ಶಿವಂಗೆ ಕೋಪ ಬಂದರೂ, ನಿಧಾನಕ್ಕೆ ಆಲೋಚನೆ ಮಾಡುವಾಗ ಲೋಕಕಲ್ಯಾಣಕ್ಕೆ ಇಷ್ಟಾದ್ದು ಅಗತ್ಯ ಹೇದು ಕಂಡು ಮನ್ಮಥನ ಯೋಜನೆಯ ಹಾಂಗೆ ಶಿವ° ಗಿರಿಜೆಯ ಮದುವೆ ಆಗಿ ಮಗ° ಹುಟ್ಟಿ ತಾರಕಾಸುರನ ಕೊಂದೂ ಆವುತ್ತು ಕುಮಾರಂಗೆ.
ಅದಿರಳಿ.

~
ಮನ್ಮಥ ಹೇದರೆ ಆರು ಹಾಂಗಾರೆ? ಅವ° ಎಲ್ಲಿಪ್ಪದು?
ಸೃಷ್ಟಿಯ ಆರಂಭಲ್ಲಿ ತ್ರಿಮೂರ್ತಿಗೊ ಮಾಂತ್ರ ಇಪ್ಪಾಗ ಬ್ರಹ್ಮನ ಮನಸ್ಸಿಂದ ಹುಟ್ಟಿದ್ದಾಡ ಈ ಮನ್ಮಥ.
ಹೇದರೆ, “ಕಾಮನೆ ಹೇಳ್ತದು ಮನಸ್ಸಿಲೇ ಹುಟ್ಟುತ್ತದು” – ಹೇಳ್ತ ಚಿಂತನೆ ನಮ್ಮ ಪುರಾಣಂಗಳಲ್ಲಿ ಇದ್ದು. ಈಗ ಎಲ್ಲಿಪ್ಪದು?
ಶಿವ° ಅವನ ದೇಹವ ಸುಟ್ಟ ಮತ್ತೆ ಅವ° ಅನಂಗ° ಆಗಿ – ದೇಹ ಇಲ್ಲದ್ದ ಸ್ವರೂಪಲ್ಲಿ ಈಗ ಇದ್ದ° – ಹೇಳ್ತದು ನಮ್ಮ ಪರಿಕಲ್ಪನೆ.

ಅಂದರೆ, ಮನ್ಮಥಂಗೆ ದೇಹ ಇಲ್ಲೆ. ಅವ° ನಾವು ಇಪ್ಪಲ್ಲಿ ಎಲ್ಲಾ ಇದ್ದ°. ನಮ್ಮ ಮನಸ್ಸಿನೊಳ “ಕಾಮರೂಪಿಯಾಗಿ” ಆ ಮನ್ಮಥ ಇರ್ತ° – ಹೇಳ್ತದು ನಮ್ಮ ಹಳೆಕಾಲದ ನಂಬಿಕೆ.
ಕುಂಞಿ ಮಕ್ಕೊ ಇಪ್ಪಾಗಳೇ ಸುರು ಆವುತ್ತು ಮನೋಕಾಮನೆಗೊ – ಓ ಆ ಹಣ್ಣಿ ಬೇಕು, ಇಲ್ಲಿ ಕಾಂಬ ದೊಡ್ಡ ಚೆಂಡು ಬೇಕು – ಹೀಂಗೆ. ಇದೆಲ್ಲವೂ ಅವರ ಮನಸ್ಸಿಲಿ ಕೂದಿಪ್ಪ ಕಾಮನ ಕೆಲಸ.
ದೊಡ್ಡ ಆದ ಹಾಂಗೆ ಬಯಕೆಯೂ ಬೆಳೆತ್ತಾ ಹೋವುತ್ತು. ತರುಣಸ್ತಾವತ್ ತರುಣೀ ರಕ್ತಃ – ಹೇದು ಶಂಕರಾಚಾರ್ಯರು ಹೇಳಿದ ಹಾಂಗೆ.
ಮತ್ತೆ ಜೀವನ ಕಟ್ಟುವಾಗ ಪೈಶೆಯಾಶೆ. ನಿತ್ಯವೂ ಧನ ಮೋಹ, ಧನ ಕಾಮ!
ವೃದ್ಧಾಪ್ಯಲ್ಲಿ ಕುಟುಂಬದ ಮೋಹ. ಜೀವದ ಮೇಗೆ ಮೋಹ. ಈ ಮೋಹಂಗಳ ನಡುವೆಯೇ ಜೀವನ ಆದ ಕಾರಣ – ಆ ಭಾಗವನ್ನೇ “ಕಾಮನೆ” – ಹೇದು ನಮ್ಮ ಅಜ್ಜಂದ್ರು ಗುರುತಿಸಿದ್ದವು.

~
ಈ ಕಾಮನೆಗೊ ನಮ್ಮ ಮನಸ್ಸಿಲಿ ಬೇರೆ ರೂಪಲ್ಲಿ ಬಪ್ಪದು ಸಹಜ. ಅದುವೇ ಪ್ರಕೃತಿ ಸಹಜ. ಎಂತವಂಗೂ ಬಂದೇ ಬತ್ತು.
ಆದರೆ ಅದರೆಲ್ಲದರ ಮುಚ್ಚಿ ಮಡಗಿ, ಎಷ್ಟು ಬೇಕೋ ಆ ಪ್ರಮಾಣಲ್ಲಿ ಮಾಂತ್ರವೇ ಪ್ರಕಟಗೊಳುಸಿ, ಒಳುದ ಭಾಗವ ಹಿಡುದು ಮಡಿಕ್ಕೊಂಬ ಕ್ರಮವನ್ನೇ ಸಂಸ್ಕೃತಿ ಹೇಳುಸ್ಸು.
ಯೇವ ರೀತಿ ಮನೋಕಾಮನೆಗೊ ಮನುಷ್ಯಂಗೆ ಜಾಸ್ತಿಯೋ, ಅದೇ ನಮುನೆ ಇಂದ್ರಿಯ ನಿಗ್ರಹವೂ ಮನುಷ್ಯರಿಂಗೆ ವರ ಇದ್ದು!
ಒಳುದ ಪ್ರಾಣಿಗಳ ಹಾಂಗೆ ಪಾಶವೀ ಜೀವನಲ್ಲಿ ನಾವಿಲ್ಲೆ. ಹಾಂಗಾಗಿ, ಕಾಮನೆಗಳ ತೋರ್ಪಡುಸಿಗೊಂಬಗ ಸಂಸ್ಕೃತಿಯ ಸರಿಯಾಗಿ ತಿಳ್ಕೊಳ್ತು.
~
ಹೇಳಿದಾಂಗೆ, ಶಿವ° ಮನ್ಮಥನ ಹೊತ್ತುಸಿದ ದಿನದ ಸಂಕೇತವಾಗಿ, ಮನುಷ್ಯರು ಅವರ ಮನೋಕಾಮನೆಯ ತಡೆಹಿಡಿವ  ಸಾಮರ್ಥ್ಯದ ಸೂಚ್ಯವಾಗಿ – ಕಾಮದಹನ – ಹೇದು ಒಂದು ದಿನ ಆಚರಣೆ ಮಾಡ್ತವಾಡ.
ಬಡಗಲಾಗಿ ಅದರ “ಹೋಲೀ” ಹೇಳಿಯೂ ಹೇಳ್ತವಡ.
ಕುಂಬ್ಳೆಲಿಪ್ಪ ಹೋಲಿ ಪೇಮಿಲಿ ಅಲ್ಲ, ಇದು ಬರೇ ಹೋಲೀ.
ಇಡೀ ದಿನ ಬಣ್ಣ ಬಣ್ಣದ ಹೊಡಿಲಿ, ಬಣ್ಣ ಕರಡಿದ ನೀರಿಲಿ ಆಟಾಡಿ, ಇರುಳಾಣ ಶಿವ° ಪೂಜೆ ಆಗಿ “ಕಾಮನ ಪ್ರತಿಕೃತಿಯ ದಹನ” ಮಾಡುಸ್ಸು. ಅದರೊಟ್ಟಿಂಗೆ ನಮ್ಮ ಮನಸ್ಸಿಲಿ ಹುಟ್ಟುಲೆ ಸಾಧ್ಯತೆ ಇಪ್ಪ ಅಸಾಂಸ್ಕೃತಿಕ ಕಾಮನೆಗಳ ಹೊತ್ತುಸಿ, ಮನಸ್ಸು ಪರಿಶುದ್ಧ ಮಾಡ್ತದು – ಹೇದು ಲೆಕ್ಕ.
ನಾವು ಕಾಮನ ಕಪಿಮುಷ್ಟಿಲಿ ಇಪ್ಪದಲ್ಲ, ಮನಸ್ಸು ನಮ್ಮ ಭದ್ರಮುಷ್ಟಿಲಿ ಇರೆಕ್ಕು. ಅಲ್ಲದೋ?
ಆ ಸೂಚನೆ ಇಪ್ಪ ಹೋಲಿ ಎಲ್ಲೋರಿಂಗೂ ಹೋಳಿಗೆ ತಿಂಬ ಕೊಶಿ ಕೊಡಲಿ.
~
ಒಂದೊಪ್ಪ: ಪ್ರಕೃತಿ ಸಹಜ ಕಾಮನೆಯ ಹಿಡುದು ಮಡಗುವ ಸಂಸ್ಕೃತಿ ಇಲ್ಲದ್ದರೆ, ಅದುವೇ ಹಲವಾರು ವಿಕೃತಿಗೆ ಕಾರಣ ಆವುತ್ತು.

3 thoughts on “ಕಾಮನೆಗೊ ಹುಟ್ಟುದು ಪ್ರಕೃತಿ; ಕಾಮನ ಹೊತ್ತುಸುದು ಸಂಸ್ಕೃತಿ…

  1. ಹೋಲಿ ದಿನ ಹೋಳಿಗೆ ಮಾಡ್ಳೆ ಇದ್ದೋ ಕೇಟ° ಅಡಿಗೆ ಸತ್ಯಣ್ಣ°. – ಯಬೋ! ಕಂಡತ್ತೋ.. ಕಾಮನೆ ಅಟ್ಟು ಪಕ್ಕಕ್ಕೆ ಬಿಟ್ಟು ಹೋವುತ್ತಿಲ್ಲೆಪ್ಪೋ!

  2. ಬೋಚಭಾವ ಹೋಳಿಗೆ ತಿಂದು ಒರಗಿದ ಪೀಟಿಕೆಯೊಟ್ಟಿಂಗೆ ಸುರುವಾದ ಹೋಳಿಯ ಶುದ್ದಿ ಲಾಯಕಾತು. ಬೇಕು ಹೇಳುವ ಮನದ ಬಯಕೆಯ ನಿಗ್ರಹಣೆ ಮಾಡ್ಳೆಡಿಗಾದರೆ ಲೋಕಲ್ಲಿ ನೆಡೆತ್ತಾ ಇಪ್ಪ ಎಷ್ಟೋ ದುರಾಚಾರಂಗೊ ಖಂಡಿತ ನಿಂಗು. ಕಾಮದಹನದ
    ಸೂಚ್ಯಾರ್ಥ, ಕಡೇಣ ಒಂದೊಪ್ಪ ಎಲ್ಲವೂ ಅರ್ಥವತ್ತಾಗಿದ್ದು.

  3. ಒಂದೊಪ್ಪಕ್ಕೆ ಎನ್ನದೊಂದೊಪ್ಪ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×