Oppanna.com

ಎಲ್ಲವೂ ಜಯವೇ ಆದರೆ ಒಂದು ಸೋಲು…!

ಬರದೋರು :   ಒಪ್ಪಣ್ಣ    on   09/12/2016    8 ಒಪ್ಪಂಗೊ

ಚೆನ್ನೈಬಾವ° ಮೊನ್ನೆ ಕಾವೇರಿಕ್ಕಾನ ಮದುವೆಗೆ ಬಪ್ಪದು ಹೇದು ನಿಗಂಟಾಗಿತ್ತು. ಬೇಗು ತುಂಬುಸಿಗೊಂಡು ರೈಲು ಹಿಡಿಯಲೆ ಹೇದು ರಿಕ್ಷಕ್ಕೆ ಹೇಳುವಗ ಸುದ್ದಿ ಬಂತು – ಸುಮಾರು ಎರಡು ತಿಂಗಳಿಂದಲೂ ಹೆಚ್ಚು ಆಸುಪತ್ರೆಲಿ ಮನುಗಿದ್ದಿದ್ದ ಜಯಲಲಿತ ಇನ್ನಿಲ್ಲೆ – ಹೇದು.
ಇನ್ನು ಹೇಂಗಿದ್ದರೂ ರಾಜ್ಯ ಇಡೀ ಸೂತಕದ ಹಾಂಗಿಕ್ಕು, ಇನ್ನು ಹೆರಟ್ರೆ ಸಂಗತಿ ಕೆಣಿಗು – ಹೇದು ಅಂದಾಜಿ ಆದ ಚೆನ್ನೈಭಾವ° ಮತ್ತೆ ರಿಕ್ಷದ ಜೆನಕ್ಕೆ ಹೇಳಿದವಾಡ, ಬತ್ತಿಲ್ಲೇದು. ಕಾವೇರಿಕಾನದ ಮಾಣಿಗೆ ಮುಂದೆ ಯೇವತ್ತಾರು ಸಿಕ್ಕಿಪ್ಪಾಗ ಕವರು ಕೊಡುವೊ° – ಹೇದು ನಿಜ ಮಾಡಿದವಾಡ.
ಅದಿರಳಿ.
~
ಜಯಲಲಿತ ಹೋದ್ಸು ದೊಡ್ಡ ಸುದ್ದಿಯೇ ಅಪ್ಪೋ. ಎಲ್ಲೋರುದೇ ಅದರ ಕೊಂಡಾಡುವೋರೇ.
ಅದು ಮೈಸೂರಿನ ಮಗಳು – ಹೇದು ಹಲವು ಜೆನ. ಅದು ಬೆಂಗ್ಳೂರಿಲಿ ಓದಿದ್ಸು ಹೇದು ಮತ್ತೆ ಕೆಲವು ಜೆನ. ಅದು ಸನ್ನೈ ಲಿ ಬೆಳಗಿದ್ದು ಹೇದು ಮತ್ತೆ ಹಲವು ಜೆನ. ಅದು ಬಟ್ಟೆತ್ತಿ ಹೇದು ಮತ್ತೆ ಕೆಲವು ಜೆನ. ಅದು ಸಿನೆಮಲ್ಲಿ ಇದ್ಸು ಹೇದು ಮತ್ತೆ ಹಲವಾರು ಜೆನ – ಹೀಂಗೆ, ಎಲ್ಲೋರುದೇ ಅವರವರ ಭಾವನೆಗಳಲ್ಲಿ ಹತ್ತರೆ ಮಾಡಿಗೊಂಡೋರೇ.

ಮೇಲುಕೋಟೆಯ ಜಯರಾಮ- ಸಂಧ್ಯಾ ದಂಪತಿಗೆ ೧೯೪೮ ರಲ್ಲಿ ಒಂದು ಕೂಸು ಹುಟ್ಟಿತ್ತು. ಕೋಮಲವಲ್ಲಿ ಹೇದು ಹೆಸರು ಮಡಗಿದವು. ಹೊಸ ನಮುನೆ ಹೆಸರು ಆಯೇಕು ಹೇದು ಜಯಲಲಿತಾ – ಹೇದು ಇನ್ನೊಂದು ಹೆಸರು ಮಡಗಿ, ಅದುವೇ ದೊಡ್ಡ ಆತು ಮತ್ತೆ. ಮೈಸೂರಿನ ಲಲಿತ ಮಹಲಿಂಗೂ, ಇದರ ಹೆಸರಿಂಗೂ ಸಮ್ಮಂದ ಇದ್ದು ಹೇಳ್ತವು ಕೆಲವು ಜೆನಂಗೊ, ಕೆಲವು ಜನ ಅವಕ್ಕಿದ್ದ ಎರಡು ಮನೆಗಳ ಹೆಸರು ಹೇಳಿಯೂ ಹೇಳ್ತವು, ಒಪ್ಪಣ್ಣಂಗರಡಿಯ.
ಬೆಂಗ್ಳೂರಿನ ಬಿಷಪ್ ಕೋಟನ್ ಹೇಳ್ತ ಪುರ್ಬು ಶಾಲೆಲಿ ವಿದ್ಯಾರಂಭ ಮಾಡಿಕ್ಕಿ, ಮತ್ತೆ ಚೆನ್ನೈ ಗೆ ವಲಸೆ ಹೋವುತ್ತವಾಡ. ಅದರ ಅಮ್ಮಂಗೇ ಸಿನೆಮಲ್ಲಿ ನಟನೆ ಮಾಡುವ ಆಸಕ್ತಿ. ತಾಯಿಯಂತೆ ಮಗಳು – ಇದಕ್ಕೂ, ಇದರ ಚಿಕ್ಕಮ್ಮಂಗೂ ಸಿನೆಮ ಸಂಪರ್ಕ ಇತ್ತು ಮದಲೇ! ಡೇನ್ಸುದೇ ಕಲ್ತಿದ್ದ ಕಾರಣ ಹದಿನಾಲ್ಕನೇ ಒರಿಸಲ್ಲೇ ಸಿನೆಮ ಜೀವನ ಸುರು ಆತು.
೧೯೬೪ ರಲ್ಲಿ ಚಿನ್ನದಗೊಂಬೆ – ಹೇಳ್ತ ಕನ್ನಡ ಸಿನೆಮಲ್ಲಿ ಮೊದಲು ನಟಿಯಾಗಿದ್ದ ಜಯಲಲಿತ, ಮತ್ತೆ ಸಾಲು ಸಾಲು ತೆಮುಳು ಸಿನೆಮಲ್ಲಿ ಕೊಣುದತ್ತು. ಒಟ್ಟು ನಟನೆ ಮಾಡಿದ ೧೪೦ ಸಿನೆಮಲ್ಲಿ ೧೨೦ದೇ ರೈಸಿದ್ದಾಡ.
ಹಲವು ಊರಿನ ನೀರು ಕುಡುದ ಕಾರಣ ಕನ್ನಡ, ತೆಮುಳು, ತೆಲುಗು, ಇಂಗ್ಳೀಶು, ಹಿಂದಿ – ಹೀಂಗಿರ್ಸ ಹಲವು ಭಾಶೆಲಿ ಮಾತಾಡ್ಳೆ ಎಡಿಗಾಗಿಂಡು ಇತ್ತಾಡ.

ತೆಮುಳು ನಾಯಕನಟ ಆಗಿದ್ದ ಮಲೆಯಾಳಿ ಎಂ.ಜಿ.ಆರ್ ಗೆ ಈ ಕನ್ನಡತಿ ಫ್ರೆಂಡು ಆತು. ಎಂ.ಜಿ.ಆರ್ ನ ಒಟ್ಟಿಂಗೆ ರಾಜಕೀಯವೂ ಪ್ರವೇಶ ಮಾಡಿತ್ತು. ರಾಜ್ಯಸಭಾ ಸದಸ್ಯೆ ಆಗಿ ಡೆಲ್ಲಿಗೂ ಹೋತು.
ಎಂ.ಜಿ. ಆರ್ ತೀರಿದ ಮತ್ತೆ ಅದರ ಪ್ರಭಾವಳಿಯ ಆರಾಮಲ್ಲಿ ಬಳಸಿಗೊಂಡು, ಅದರ ಪಕ್ಷದ ಚುಕ್ಕಾಣಿ ಹಿಡುದತ್ತು. ಅಲ್ಲಿಂದ ಮುಂದೆ ನೆಡದ್ದು ದೊಡಾ ರಾಜಕೀಯ ಇತಿಹಾಸ.
೧೯೮೯ ರಲ್ಲಿಯೋ ಏನೋ, ಒಂದರಿ ಇದು ಶಾಸಕಿ ಆಗಿದ್ದ ಸಮೆಯಲ್ಲಿ ಅದರ ಮಾನ ಎಳವಲೆ ಬಂದಿತ್ತವಾಡ, ಕರುಣಾನಿಧಿಯ ಪಕ್ಷದ ಶಾಸಕರು. ಅದರಿಂದ ಮತ್ತೆ ಇದು ಸೀರೆಯ ಮೇಗೆ ಒಂದು ಅಂಗಿ ಸುರ್ಕೊಂಡು ಬಂತಾಡ. ಹಾಂಗೇ – ದ್ರೌಪದಿಯ ಹಾಂಗೆ ಶಪಥವೂ ಮಾಡಿತ್ತಾಡ – ಇನ್ನು ಬತ್ತರೆ ಆನು ಮುಖ್ಯಮಂತ್ರಿ ಆಗಿಯೇ ಬಪ್ಪದು – ಹೇದು.
ಹಾಂಗೇ ಆತುದೇ! ೧೯೯೧ ರಲ್ಲಿ ಜಯಲಲಿತ ಮತ್ತೆ ಶಾಸನಸಭೆ ಗೆ ಬಂತು, ಅದೂ ಮುಖ್ಯ ಮಂತ್ರಿ ಆಗಿ.
ಅಲ್ಲಿಂದ ನಿನ್ನೆಲ್ಲ ಮೊನ್ನೆ ಒರೆಂಗೂ – ರಜ ರಜ ಎಡೆ ಬಿಟ್ಟು – ಮುಖ್ಯಮಂತ್ರಿ ಆಗಿದ್ದತ್ತು.

ಒಂದೊಂದರಿ ಬೀಜೆಪಿ ಒಟ್ಟಿಂಗೆ, ಒಂದೊಂದರಿ ಸೋನಿಯನ ಒಟ್ಟಿಂಗೆ, ಒಂದೊಂದರಿ ಎಡತ್ತಿಂಗೆ, ಒಂದೊಂದರಿ ಬಲತ್ತಿಂಗೆ – ಅಂತೂ ಇಂತೂ ಅದಕ್ಕೆ, ಅದರ ರಾಜ್ಯಕ್ಕೆ ಯೇವದು ಅನುಕೂಲವೋ, ಅದರ ಮಾಡಿಗೊಂಡು ಇದ್ದತ್ತು.
ಭಯಂಕರ ನಿಷ್ಟುರದ ಹೆಮ್ಮಕ್ಕೊ ಆಡ. ಹಠ ಹಿಡುದರೆ ಮಾಡಿಯೇ ಮಾಡುಗಾಡ.
ರಾಜ್ಯ ಇಡೀ “ಅಮ್ಮ” ಹೇಳ್ತ ಒಂದು ಬ್ರೇಂಡು ಮಾಡಿ ಎಲ್ಲವನ್ನೂ ಅದರಲ್ಲಿ ಸೇರುಸಿಗೊಂಡು ಪ್ರಚಾರ ಮಾಡಿಗೊಂಡು ಬಂತಾಡ.
ಎಲ್ಲದರ್ಲಿಯೂ ಉಷಾರಡ. ಇಡೀ ರಾಜ್ಯಕ್ಕೆ ಅಮ್ಮ ಅಡ.
ತೆಮುಳು ರಾಜ್ಯಕ್ಕೆ ಬೇಕಾದ ಹಲವಾರು ಕೆಲಸಂಗಳ ಮಾಡಿಗೊಂಡು ಬಂತಾಡ.
~
ಒಪ್ಪಣ್ಣಂಗೆ ಮುಖ್ಯವಾಗಿ ನೆಂಪು ಬಪ್ಪದು ಎರಡು ಘಟನೆಗೊ.
ಒಂದು – ಓಜುಪೇಯಿ ಅಜ್ಜನ ಸರ್ಕಾರವ ದಢಲ್ಲನೆ ಉದುರಿಸಿ ಹಾಕಿದ ಸಂಗತಿ. ಅಪ್ಪು, ಓಜುಪೇಯಿ ಅಜ್ಜ° ಒಂದರಿ ಎಲ್ಲಾ ಅವಿಲು ಕಲಸಿಗೊಂಡು ಒಂದು ಸರ್ಕಾರ ಮಾಡಿತ್ತಿದ್ದವು ಅಪ್ಪೋ. ಅಲ್ಲಿ ಅನಗತ್ಯವಾಗಿ ಎಂತದೋ ಕಾರಣ ಹಿಡುದು ಈ ಜಯಲಲಿತ ಒಂದರಿಯೇ ಬೆಂಬಲ ಹಿಂದೆ ತೆಗದತ್ತು. ಅಜ್ಜಂಗೆ ನಿಂಬಲೆ ಬಲ ಸಾಲದ್ದೆ ಸರ್ಕಾರ ಬಿದ್ದತ್ತು. ರಾಜ್ಯಹಿತ, ಸ್ವಹಿತಕ್ಕಾಗಿ ದೇಶಹಿತವನ್ನೇ ಮರದತ್ತೋ – ಹೇದು ಅಷ್ಟಪ್ಪಗ ಹಲವೂ ಜೆನ ಹೇಳಿಗೊಂಡವು ಈ ಜಯಲಲಿತನ.
~
ಅದು ಹೋಗಲಿ, ಎಂತ ಬೇಕಾರೂ ಆಗಲಿ. ಆದರೆ, ಇನ್ನಾಣದ್ದು ಅದರಿಂದಲೂ ಬೇಜಾರದ್ದು.
ಇನ್ನೊಂದು – ಕಂಚಿ ಶಂಕರಾಚಾರ್ಯರ ಬಂಧನದ ಸಂಗತಿ.
ಕಂಚಿ ಮಠಲ್ಲಿ ಆರೋ ಪಾರುಪತ್ಯಗಾರ ಎಂತದೋ ಒಯಿವಾಟಿಲಿ ಸೇರಿ, ಅಕೇರಿಗೆ ಕೊಲೆ ಆಗಿ ಹೋದ°. ಆ ಹತ್ಯೆಯ ಬಗ್ಗೆ ವಿಸಾರಣೈ ನಡಕ್ಕೊಂಡು ಇಪ್ಪಗಾಳೇ, ಅದರ ಕಂಚಿ ಗುರುಗಳೇ ಮಾಡಿದ್ದು – ಹೇದು ಕೆಮಿ ತಿಂದವು ಆರೋ.
ಇರುಳಿಂದ ಇರುಳೇ ಸೀತಾ ಬಂತು ಕಂಚಿ ಗುರುಗಳನ್ನೇ ಎರೆಷ್ಟು ಮಾಡುಸಿತ್ತಾಡ.
ಗೌರವಲ್ಲಿ ಕರಕ್ಕೊಂಡು ಹೋದರೆ ಬೇಜಾರಿತ್ತಿಲ್ಲೆ. ಆ ಹಿರಿತನದ ಗುರುಗಳ ಅವಮಾನ ಅಪ್ಪ ಹಾಂಗೆ ನೆಡೆಶಿಗೊಂಡು ಎಳಕ್ಕೊಂಡು ತೆಕ್ಕೊಂಡು ಹೋದ್ದದು ನಮ್ಮ ಸನಾತನ ಸಂಸ್ಕೃತಿಗೇ ಆದ ಅವಮಾನ.
~
ಒಪ್ಪಣ್ಣ ಸಣ್ಣಾಗಿಪ್ಪಾಗ ಈ ಸಂಗತಿ ನಮ್ಮ ನೆರೆಕರೆಲಿ ತುಂಬ ಮಾತಾಡಿಗೊಂಡು ಇತ್ತಿದ್ದವು.
ಒಂದು ಶಂಕರಾಚಾರ್ಯ ಪೀಠವ ಜೈಲಿಲಿ ಕೂರ್ಸುವಷ್ಟು ಆಯಿದೋ ಆ ಮುಖ್ಯಮಂತ್ರಿ?
ಸರ್ವತಂತ್ರ ಸ್ವತಂತ್ರ ಆಗಿ ಈ ಭರತ ದೇಶಲ್ಲಿ ಇರೆಕ್ಕಾದ ಪೀಠವ, ಬಂಧನ ಮಾಡಿ ಒಳ ಕಟ್ಟಿ ಮಡುಗುವ ಪಾಪಕರ್ಮವ ಮಾಡ್ಳೆ ಹೆರಟತ್ತೋ ಜಯಲಲಿತ!
ಆ ಗುರುಗಳ ಅನುಷ್ಠಾನ, ನಿತ್ಯಾಚರಣೆಗೊ, ಶ್ರದ್ಧೆಗೊ – ಎಲ್ಲದಕ್ಕುದೇ ಎಷ್ಟೂ ಸಮಸ್ಯೆ ಆಗಿಕ್ಕು.
ಅದೂ, ಹಿರಿಯ ಪ್ರಾಯದ ಜೀವಕ್ಕೆ!
ಛೇ!
~
ಪ್ರತಿ ಸರ್ತಿ ಒಪ್ಪಣ್ಣಂಗೆ ಜಯಲಲಿತನ ಹೆಸರು ನೆಂಪಪ್ಪಗ ಈ ಸಂಗತಿಯೂ ನೆಂಪಾಗಿಂಡು ಇದ್ದತ್ತು.
ಮೊನ್ನೆಯೂ ನೆಂಪಾತು.
~
ಕಂಚಿ ಶಂಕರ ಪೀಠವ ಒಳ ಹಾಕಿದ ಜಯಲಲಿತ ತೀರಿಗೊಂಡತ್ತು.
ಆದರೆ, ಕಂಚಿ ಶಂಕರ ಪೀಠ ಇನ್ನೂ ಇದ್ದು, ಆ ಪೀಠಾಧಿಪತಿಗಳೂ ಇನ್ನೂ ಇದ್ದವು.
ಹಿಂದಂದಲೂ ಹಲವು ಆಕ್ರಮಣಲ್ಲಿ ನೊಂದರೂ ಬೆಳಗಿ ಬಂದ ಸನಾತನ ಪೀಠ ಇಂದಿಂಗೂ ಬೆಳಗುತ್ತಾ ಇದ್ದು; ಮುಂದೆಯೂ ಬೆಳಗುತ್ತು.
ಜಯಲಲಿತನ ಪಕ್ಷ ಇಂದು ಇದ್ದು-ನಾಳೆ ಇಕ್ಕೋ, ಇರದೋ ಹೇದು ಗೊಂತಿಲ್ಲೆ.
~
ಲೋಕಕ್ಕೆ ಎಷ್ಟೇ ಒಳ್ಳೆ ಕೆಲಸಂಗೊ ಮಾಡಿರಳಿ; ಆದರೆ ಈ ಒಂದು ಪಾಪ ಕೆಲಸ ಅದರ ಜನ್ಮಾಂತರಕ್ಕೆ ಸಾಕು. ಅಲ್ದೋ?
~
ಒಂದೊಪ್ಪ: ಜಯ ಒಂದೇ ಇದ್ದರೆ ಸಾಲ, ಜೀವನಲ್ಲಿ ಲಾಲಿತ್ಯವೂ ಬೇಕು; ವಿನಯವೂ ಬೇಕು.

8 thoughts on “ಎಲ್ಲವೂ ಜಯವೇ ಆದರೆ ಒಂದು ಸೋಲು…!

  1. ಮೋದಿ ಅಜ್ಜನ entry ಯಿಂದಾಗಿ ಆ ನರಿ ನಾಯಿಗೊಕ್ಕೂ ಅದು ದಕ್ಕುತ್ತದು ಸಂಶಯವೇ…

  2. ಎಷ್ಟೆ ಜಯಗಳುಸಿದರೂ ಸಂಸಾರ, ಬಂಧು ಬಳಗ ಹೇಳ್ತ ವಿಷಯಲ್ಲಿ ಸೋತತ್ತದು. ಅಂತೂ ಕೊನೆಗಾಲಲ್ಲಿ ಕ್ರಮವ ಬಿಟ್ಟು ಮಣ್ಣಿಲ್ಲಿ ಹುಗುಸೆಂಡತ್ತು. ಕಟ್ಟಿ ಮಡಗಿದ ಆಸ್ತಿ ನರಿ ನಾಯಿಗೊ ತಿಂಬ ಹಾಂಗಾತು.

  3. ಮೊನ್ನೆ ಗೆದ್ದಿಪ್ಪಗ ,
    ಮದಲು ಮಾಡಿದ್ದು ,ಒ೦ದನೇ ನ೦ಬ್ರಲ್ಲಿ
    ಕೇ೦ದ್ರಕ್ಕೆ ಹೋಗಿ ಕೇಳಿದ್ದು
    ಇಲ್ಲದ್ದ ನೀರಿನ ಗೆದ್ದೆಗೆ ಬಿಡಿ ಹೇಳಿ.
    ಕೆರೆಪೂರ (ಕೆಆರ್ಎಸ್.)ಆರಿಸಿ.

    –ಅವರ ದನಕ್ಕು ,ಜನಕ್ಕೂ ಕುಡಿವಲೆ ಬೇಡ.

  4. ಹೂಂ. ಅಪ್ಪು. ಆದರೆ ಅದರ ಜೀವನವ ಸೂಕ್ಷ್ಮವಾಗಿ ಗಮನಿಸಿರೆ ಅದರ ಬಾಲ್ಯಕಾಲಂದಲೇ ಜೀವನ ಹಳಿತಪ್ಪಿ ಹೋತೋ ಹೇಳಿ ತೋರ್ತು. ಮುಖ್ಯವಾಗಿ ಮಕ್ಕೊಗೆ ಅಬ್ಬೆಕ್ಕಳ ಸಾಂಗತ್ಯ, ಮಾರ್ಗದರ್ಶನ ಸರಿ ಇಲ್ಲದ್ರೆ ಎಂತಾವುತ್ತು ಹೇಳ್ತದಕ್ಕೆ ಈ ಹೆಮ್ಮಕ್ಕಳೇ ಒಂದು ಉತ್ತಮ ಉದಾಹರಣೆ ಹೇಳಿ ಕಾಣ್ತು. ಅದುವೇ ಹೇಳಿಯೊಂಡ ಹಾಂಗೆ ಜೀವನದ ನಾಲ್ಕನೇ ಎರಡು ಭಾಗ ಅದರ ಅಮ್ಮನ ಕೊಶಿ ಪ್ರಕಾರ ನೆಡದತ್ತಾಡ. ಮತ್ತೊಂದು ಬಾಗ ಎಂ. ಜಿ. ಆರ್. ಆಳಿತ್ತಾಡ. ಈಗ ಒಳುದ ಒಂದು ಭಾಗವ ಎನಗೆ ಸರಿ ಕಂಡ ಹಾಂಗೆ ಜೀವಿಸುತ್ತೆ ಹೇಳಿ ಹೇಳಿತ್ತಲ್ದಾ ….ಆ ಮಾತಿಲ್ಲಿ ಅದರ frustration ಎದ್ದು ಕಾಣ್ತು ಅಪ್ಪೋ ….ಮದಲಾಣ ಅಡಿಗಟ್ಟು ನೇರ್ಪ ಇರ್ತಿದ್ರೆ ಮುಂದೆ ಎಂತದೇ ಆಗಿದ್ರು ಅದರ ವ್ಯಕ್ತಿತ್ವಲ್ಲಿ ಮಾರ್ಪಾಡು ಬತ್ತಿತ್ತಿಲ್ಲೆ ಹೇಳಿ ಅಪ್ಪದು ಎನಗೆ. ಒಟ್ಟಿಲ್ಲಿ ಮನಶಾಸ್ತ್ರಜ್ಞರಿಂಗೂ ಸಿನೆಮಾ ನಿರ್ಮಾಪಕರಿಂಗು, ಕಥೆಗಾರರಿಂಗು ಅದರ ಜೀವನ ಒಂದು ಅದ್ಭುತ ವಸ್ತುವೇ ಅಕ್ಕು ಅಲ್ದೊ ?

  5. ಸತ್ತ ಎಮ್ಮೆಗೆ ಕುತ್ತಿ ಹಾಲು
    ಸತ್ತೋರ ಬೈವಲಾಗ ಹೇಳಿ ಅಂತ ಇಲ್ಲದ್ದೆ ಜಯಲಲಿತನ ಹೊಗಳಿದ್ದು ಅಷ್ಟೆ
    ವೀರವನಿತೆಯೂ ಇಲ್ಲೆ ಎಂತ ಬೊಜ್ಜವೂ ಇಲ್ಲೆಎಷ್ಟು ಪೈಸೆ ಮಾಡಿರೆಂತ
    ಹೋಪಗ ಎಲ್ಲ ಬಿಟ್ಟಿಕ್ಕಿ ಹೋತನ್ನೆ

  6. ಜನಿವಾರ ಧರುಸಲೆ ಬಿಡುಸಿ ಕಟ್ಟುವಾಗ ಅರಡಿಯದ್ದೆ ಹಲವು ಗೆಂಟುಗೊ ಬಿದ್ದು ಮತ್ತಾ ಗೆಂಟು ಬಿಡುಸಲೆ ಹಲವು ಸರ್ಕಸ್ಸು ಮಾಡ್ತಾಂಗೆ ಇದರ ಜೀವನವುದೇ ಗೆಂಟುಪುಡ್ಕಾಯಿ, ಅಂತ್ಯಲ್ಲಿಯೂ ಒಳಂದೊಳ ಗೆಂಟುಪುಡ್ಕಾಯಿಗೊ ಅಲ್ಪ ಇದ್ದು ಹೇಳ್ಸು ನಿಜ. ಎಂತ ಪುರಚ್ಚಿಯೋ, ಎಂತ ಗೆಟ್ಟಿಗಾರ್ತಿಯೋ , ಎಂತ ವೀರವನಿತೆ ಹೇದು ಕೆಲವುಜೆನ ಸ್ತುತಿಮಾಡಿರೂ ಅದೊಂದು ಮಹಾಗೆಂಟುಪುಡ್ಕಾಯಿ ಹೇಳ್ಸು ನಿಜ.

    ಆದರೆ ಅಕೇರಿಗೊಂದು ನಿರೀಕ್ಷಿತ ಅಗ್ನಿಕಾಂಡ ಅನಿರೀಕ್ಷಿತವಾಗಿ ಹೋತನ್ನೇದು ಹೇಳ್ಸು ನಿಜಕ್ಕು ಆಶ್ಚರ್ಯವೇ

  7. ಯಬ್ಬಾ…ಆ ಕೋಮಲವಲ್ಲಿಯ ಕಠಿಣತೆಯೇ…
    ಒಪ್ಪಣ್ಣ ಬರದ ಈ ಸಂಪಾದಕೀಯ ಓದಿಯಾದ ಮೇಲೆ ಜೆ.ಜೆ. ಯೊಟ್ಟಿಂಗೆ ಬಿ.ಬಿ.ಸಿ. ಯವು ಮಾಡಿದ ಒಂದು ಸಂದರ್ಶನ ನೋಡಿತ್ತಿದ್ದೆ. ಸಂದರ್ಶನದ ಕಡೆಂಗೆ ಸಂದರ್ಶನಕಾರ ಹೇಳ್ತ, `ಇಷ್ಟೊತ್ತು ನಿಂಗಳೊಟ್ಟಿಂಗೆ ಮಾತಾಡಿದ್ದಕ್ಕೆ ಎನಗೆ ಸಂತೋಷ ಇದ್ದು…’ ಹೇಳಿ. ಅಷ್ಟಪ್ಪಗ ಇದರ ಉತ್ತರ ಎಂತಾಗಿತ್ತಿದ್ದು ಗೊಂತಿದ್ದೋ?
    ‘ಇಲ್ಲೇ, ಎನಗೆ ನಿಂಗಳೊಟ್ಟಿಂಗೆ ಕಳೆದ ಈ ಸಮಯ ಯಾವ ಸಂತೋಷವನ್ನೂ ಕೊಟ್ಟಿದಿಲ್ಲೆ…’

  8. ಮಾಡೇಕ್ಕಾದ್ದರ ಮಾಡಿರೆ, ಆಯೆಕ್ಕಾದ್ದು ಅಪ್ಪದು. ಮಾಡ್ಳಾಗದ್ದರ ಮಾಡೀರೆ ಆಗೆಡದ್ದದೇ ಅಪ್ಪದು. ಇದು ಶ್ರೀಗುರುಗೊ ಸಮಾಜಕ್ಕೆ ಹೇಳಿಕೊಟ್ಟ ಸಂದೇಶ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×