Oppanna.com

ಕಾಡಿನ ಗೆಡು – ಚಟ್ಟಿಯ ಗೆಡು

ಬರದೋರು :   ಒಪ್ಪಣ್ಣ    on   24/01/2014    10 ಒಪ್ಪಂಗೊ

ಕುಂಬ್ಳೆಜ್ಜನ ಸದ್ಗತಿ ಕಾರ್ಯಂಗೊಕ್ಕೆ ನಾವು ಹೋಯಿದು.
ಬೈಲಿಂದ ಮಾಷ್ಟ್ರುಮಾವ°, ಸುಭಗಣ್ಣ, ಶ್ರೀಅಕ್ಕ°, ಗಣೇಶಮಾವ° – ಎಲ್ಲೋರುದೇ ಇತ್ತಿದ್ದವಲ್ಲದೋ, ಅವರೊಟ್ಟಿಂಗೆ ನಾವುದೇ ಸೇರಿಗೊಂಡದು. ಗಣೇಶಮಾವಂದೇ ಕಾರು ಆದ ಕಾರಣ ಉಪಾಯಲ್ಲಿ ಹೋಗಿ, ಸುಲಾಬಲ್ಲಿ ಬಪ್ಪಲಾವುತ್ತಿದಾ.
ಕಾರ್ಯಕ್ರಮ ಸಾಂಗವಾಗಿ ತೃಪ್ತಿದಾಯಕವಾಗಿ ನೆಡದ್ದು – ಹೇದು ಸೇರಿದ ಎಲ್ಲೋರುದೇ ಹೇಳಿದವು. ಅದಿರಳಿ.
~

ಕಾರಿಲಿ ಹೋದ್ದು ಹೇಳಿದೆ ಅಲ್ಲದೋ, ನವಗೆ ಹಿಂದಾಣ ಸೀಟಿಲಿ ಒರಗುತ್ತ ಕೆಲಸವೇ ಆಗಿಕ್ಕು, ಆದರೆ ಗಣೇಶಮಾವಂಗೆ ಕಾರು ಬಿಡ್ತ ಕೆಲಸವೂ ಇದ್ದತ್ತು. ಕೈಕ್ಕಾಲಿಲಿ ಕಾರುಬಿಟ್ಟೋಂಡೇ, ಬಾಯಿಲಿ ಮಾತಾಡ್ಳೆಡಿತ್ತು ಅವಕ್ಕೆ.
ಬೇಕುಬೇಕಾದಲ್ಲಿ ಗೇರು, ಹೋರ್ನು, ಬ್ರೇಕು ಎಲ್ಲ ಅಮರ್ಸಿಗೊಂಡು ಅದರೊಟ್ಟಿಂಗೆ ಮಾತುಕತೆ ಚೆಂದಕೆ ಮುಂದುವರುಸಲೆ ಅರಡಿತ್ತು; ಮಣಿ ಆಡ್ಸಿಗೊಂಡು ಮಂತ್ರ ಹೇಳಿದ ಹಾಂಗೆ.

ಮೊನ್ನೆಯೂ ಹಾಂಗೇ ಆತು; ಕುಂಬ್ಳೆಜ್ಜನ ಕಾರ್ಯಕ್ರಮ ಕಳುಶಿ ಬಪ್ಪಗ.
ಹೃದಯದೊಳ ಬೇಜಾರಿದ್ದರೂ, ಹೆಚ್ಚಿನ ಮಾತುಗ ಅವರ ಸುತ್ತವೇ ನೆಡದರೂ ರಜ ಲೌಕಿಕ ವಿಶಯಂಗಳ ಬಗ್ಗೆ ಮಾತುಗೊ ಬಂದುಗೊಂಡಿತ್ತು.

~

ಗಣೇಶಮಾವ° ಕಳುದವಾರ ಬೆಂಗ್ಳೂರಿಂಗೆ ಹೋಗಿ ಬಂದವಾಡ.
ಗಿರಿನಗರದ ಹೊಡೆಲಿ ಆರೋ ಸಮ್ಮಂದಿಕರ ಮನೆಲಿ ಎಂತದೋ ಕಾರ್ಯಕ್ರಮ ಇದ್ದತ್ತಾಡ. ಹೋಪಗ ಮೈಸೂರಾಗಿಯೂ , ಬಪ್ಪಗ ಹಾಸನ ಆಗಿಯೂ ಬಂದದಡ. ಎಲ್ಲೆ ಹೋದರೂ ಎಲ್ಲೆ ಬಂದರೂ – ಒಪ್ಪಣ್ಣಂಗೆ ವಿಶೇಷ ವಿತ್ಯಾಸ ಅರಡಿಯ. ಅದಿರಳಿ.

ಈ ಸರ್ತಿ ಹೋದ್ಸರಲ್ಲಿ ಒಂದು ವಿಶೇಷ ಸಂಗತಿ ಗಣೇಶಮಾವನ ಗಮನಕ್ಕೆ ಬಂದ್ಸರ ಮೊನ್ನೆ ಹೇಳಿಗೊಂಡಿತ್ತವು.

~

ಬೆಂಗ್ಳೂರಿಲಿ ಪಾರ್ಕುಗೊ ದಾರಾಳ ಅಡ. ಮೈಸೂರು ಪಾಕು ಬೇರೆ, ಬೆಂಗ್ಳೂರು ಪಾರ್ಕು ಬೇರೆ.
ಗಣೇಶಮಾವ° ಹೋದ ಆ ನೆಂಟ್ರ ಮನೆ ಕರೆಲಿಯೂ ಒಂದು ಹೊಸಾ ಪಾರ್ಕು ಆಯಿದಾಡ. ಹೊತ್ತೋಪಗ ಗಾಳಿ ತಿಂಬಲೆ ಹೇದು ಅಲ್ಲಲ್ಲಿ ಮಾಡಿದ್ದವಾಡ ಈ ಪಾರ್ಕು. ತರಹೇವಾರಿ ಗೆಡುಗಳ ಸಾಲಾಗಿ ಚಟ್ಟಿಲಿ ಮಡಗಿ, ಅದರ ಕರೆಲಿ ಸಿಮೆಂಟಿನ ನಾಲ್ಕು ಬೆಂಚುದೇ, ಕಬ್ಬಿಣದ ಎರಡು ಉಯ್ಯಾಲೆಯೂ ತೂಗಿದ್ದವಾಡ.  ಸೀತಾ ನೆಡವಲೆ ಹೇದು ಕೋಂಗ್ರೀಟಿನ ದಾರಿ. ಅದುವೇ ಪಾರ್ಕು.

ಚಟ್ಟಿ ಗೆಡುಗೊ ಸಣ್ಣ ಆಗಿಯೋ, ಸಿಮೆಂಟಿನ ರಾಶಿ ದೊಡ್ಡ ಆಗಿಯೋ ಏನೋ, ಆ ಪಾರ್ಕಿಲಿ ಮದ್ಯಾಂತಿರುಗಿ ಹೋಪಲೆಡಿತ್ತಿಲ್ಲೇಡ, ಸೆಖೆಲಿ. ಹೋ..ಹು!!
ಮನುಷ್ಯರು ಬಿಡಿ ಯೇವ ಜೀವಂಗಳೂ ಅಲ್ಲಿ ಇಪ್ಪಲೆ ಎಡಿತ್ತಿಲ್ಲೆಡ! ಗೆಡುಗೊಕ್ಕೆ ಕಾಲಿದ್ದಿದ್ದರೆ ಅಲ್ಲಿಂದ ತಂಪಿಪ್ಪಲ್ಲಿಯಂಗೆ ಹೋವುತ್ತಿತವೋ ಏನೋ! ಉಮ್ಮಪ್ಪ!

~

ಪಾರ್ಕಿಂಗೆ ಆ ಜಾಗೆ ಹೊಸತ್ತಾಯಿಕ್ಕು, ಆದರೆ ಗಣೇಶಮಾವಂಗೆ ಹೊಸತ್ತೋ? ಅಲ್ಲ.
ಗಣೇಶಮಾವ° ಹೇಳುವ ಪ್ರಕಾರ, ಅಲ್ಲಿ ಈ ಪಾರ್ಕು ಬಪ್ಪ ಮದಲೇ ವೃಕ್ಷೋದ್ಯಾನ ಇದ್ದತ್ತಾಡ. ಜೆನಂಗಳ ಓಡಾಟ ಇಲ್ಲದ್ದ ನಮುನೆ ತುಕ್ಕುಗಬ್ಬಿಣ ಬೇಲಿಯ ಒಂದು ದೊಡಾ ಜಾಗೆ. ಮನುಷ್ಯ ಸಂಚಾರ ಕಮ್ಮಿ ಆದ ಕಾರಣ ಅಲ್ಲಿ ಹಲವೂ ನಮುನೆ ಗೆಡುಗೊ, ಮರಂಗೊ, ಬಳ್ಳಿಗೊ ಬೆಳದು ಅದೊಂದು ಕಾಡು ಆಗಿತ್ತಾಡ. ದಿನದ ಯೇವ ಹೊತ್ತಿಲಿ ಹೋದರೂ ಜಾಗೆ ತಂಪಾಗಿಯೇ ಇತ್ತಡ.  ಆ ಕಾಡಿನ ಕರೆಲಿಯೇ ಗಣೇಶಮಾವನ ನೆಂಟ್ರ ಮನೆ ಇದ್ದದು.  ಆ ಕಾಡಿನ ಕರೆಲಿಯೇ ಗಣೇಶಮಾವನ ನೆಂಟ್ರ ಮನೆ ಇದ್ದದು.

ಕಾಡಿಪ್ಪಾಗ ಅವರ ಮನೆಯೂ ತಂಪು ತಂಪಾಗಿ ಇತ್ತಾಡ. ಈಗ ಕಾಡು ಹೋಗಿ ಪಾರ್ಕು ಬಂತಲ್ಲದೋ – ಅದಾದ ಮತ್ತೆ ತಂಪೆಲ್ಲ ಹೋಗಿ ವಿಪರೀತ ಶೆಖೆ ಸುರು ಆಯಿದಾಡ ಆ ಮನೆಲಿ. ಆ ಹೊಡೆಂದ ಬೀಸುತ್ತ ಗಾಳಿಯೂ ಬೆಂಕಿಯನ್ನೇ ತತ್ತ ನಮುನೆ.

~

ಇಷ್ಟು ವಿವರ್ಸೇಕಾರೆ ಕಾಸ್ರೋಡು ದಾಂಟಿ ವಿದ್ಯಾನಗರ ಎತ್ತಿತ್ತು. ಕಲೆಕ್ಟ್ರೇಟಿನ ಎದುರು ರಜಾ ಗೌಜಿ ಇದ್ದ ಕಾರಣ ಮಾತು ಒಂದರಿಂಗೆ ನಿಂದತ್ತು.

ಸೀತಾಂಗೋಳಿಯ ಮಾರ್ಗ ತಿರುಗಿದ ಮತ್ತೆಯೇ ಪುನಾ ಮಾತು ಸುರು ಆದ್ಸು. ಆದರೆ, ಅಷ್ಟಪ್ಪಗ ಮಾಷ್ಟ್ರುಮಾವಂಗೆ ಎಲೆತುಪ್ಪಿ ಮಾತು ಸುರು ಮಾಡಿಯೂ ಆಯಿದು. ಮಾಷ್ಟ್ರುಮಾವ° ಮಾತಾಡಿದ್ದು ಗಣೇಶಮಾವ° ನಿಲ್ಲುಸಿದಲ್ಲಿಂದ ಮುಂದುವರುಸಿ, ಲೌಕಿಕವಾಗಿ.

~

ಒಂದು ಸೆಸಿಯ ಬಿತ್ತು ಎಲ್ಲಿ ಬಿದ್ದತ್ತೋ, ಅದಕ್ಕೆ ಅನುಸರ್ಸಿಗೊಂಡು ಆ ಸೆಸಿಯ ಬೆಳವಣಿಗೆ ಇಪ್ಪದಾಡ. ಈಟುನೀರು ಒಳ್ಳೆತ ಇಪ್ಪಲ್ಲಿ ಇದ್ದರೆ ದಷ್ಟಪುಷ್ಟವಾಗಿ ಬೆಳಗು, ಅದೇವದೂ ಇಲ್ಲದ್ದಲ್ಲಿ ಬಿದ್ದರೆ ಚೀಂಪುಳುವಿನ ಹಾಂಗೆ ಬೆಳಗು. ಹಾಂಗಾಗಿ, ಗೆಡು ಎಲ್ಲಿದ್ದು ಹೇಳುದು ಅದು ಹೇಂಗೆ ಬೆಳಗು ಹೇಳ್ತರ ನಿರ್ಧಾರ ಮಾಡ್ತು – ಹೇಳಿದವು.

ಮಾಷ್ಟ್ರುಮಾವ° ಎರಡು ನಮುನೆಯ ಗೆಡುಗಳ ಉದಾಹರಣೆಗೆ ತೆಕ್ಕೊಂಡವು.
ಒಂದ್ನೇದು, ಕಾಡಿಲಿ ಹುಟ್ಟಿ ಕಾಡಿಲೇ ಬೆಳದ ಕಾಡಿನ ಗೆಡು. ಎರಡ್ಣೇದು – ಚಟ್ಟಿಲಿ ಬೆಳದು ಚಟ್ಟಿಲೇ ಜೀವಿಸುವ ಚಟ್ಟಿಯ ಗೆಡು.

ಕಾಡಿನ ಗೆಡು:
ಕಾಡಿಲಿ ಒಂದು ಸೆಸಿ ಹುಟ್ಟಿತ್ತು ಹೇದರೆ ಅದಕ್ಕೆ ವಿಶೇಷ ಆರೈಕೆ ಆರೂ ಮಾಡ್ತವಿಲ್ಲೆ.
ಎಲ್ಲ ಮರಂಗೊಕ್ಕೆ ಯೇವ ನಮುನೆ ಆರೈಕೆ ಇದ್ದೋ – ಅದೇ ನಮುನೆ ಆರೈಕೆ ಈ ಗೆಡುವಿಂಗೂ ಮಾಡ್ತ ದೇವರು.ಮಾಷ್ಟ್ರುಮಾವನಲ್ಲಿ ಸ್ವತಂತ್ರವಾಗಿ ಬೆಳವಲೆ ತಂದು ಮಡಗಿದ ಗೆಡುಗ!!
ಅದಷ್ಟರಲ್ಲೇ ನೆಮ್ಮದಿಲಿ ಬೆಳೆತ್ತು ಆ ಗೆಡು. ಮಳೆಗಾಲದ ನೀರು ಪ್ರವಾಹ, ಬೇಸಗೆಯ ಬೆಶಿಲಿನ ಧಗೆ – ಎಲ್ಲವನ್ನುದೇ ತಿಂದುಗೊಂಡು, ನೈಸರ್ಗಿಕ ಪೆಟ್ಟುಗಳ ತಿಂಬಲೆಡಿಗಾದ ಶಕ್ತನಾಗಿ ಬೆಳೆತ್ತು. ಆಹಾರ ಸಿಕ್ಕಿ ಅಪ್ಪಗ ಜೋರು ಬೆಳಗು, ಕಮ್ಮಿ ಅಪ್ಪಗ ನಿಧಾನ ಅಕ್ಕು. ಮನಸಿದ್ದರೆ ಬೇಕಾದಷ್ಟು ಎಲೆ ಚಿಗುರುಸುಗು, ಬೇಡದ್ದರೆ ಬೇಡ – ಅಂತೇ ನಿಂದುಗೊಂಗು. ಹಾರಿ  ಬಪ್ಪ  ಹಕ್ಕಿಗೊಕ್ಕೆ  ಆಸರೆ  ಅಕ್ಕು,  ಹರವ – ಹತ್ತುವ ಪ್ರಾಣಿಗಳ ಕೊಶೀಲಿ ನೋಡಿಗೊಂಗು. ನಿಗಂಟಿನ ಸಮೆಯಲ್ಲಿ ಹೂಗು-ಹಣ್ಣು-ಕಾಯಿ ಬಿಟ್ಟು ಕೊಶೀಲಿ ಇಕ್ಕು. ಈ ಸ್ವಾತಂತ್ರ್ಯ ಕಾಡಿನ ಗೆಡುಗೊಕ್ಕೆ ಇದ್ದು.

ಚಟ್ಟಿಯ ಗೆಡು:

ಅಲಂಕಾರಕ್ಕೆ ಚಟ್ಟಿಲಿ ಸೆಸಿಗಳ ಮಾಡ್ತವು. ಬೆಂಗ್ಳೂರಿನ ಪಾರ್ಕುಗಳಿಂದ ಹಿಡುದು, ನಮ್ಮ ಸೀತಂಗೋಳಿ ಬಾಯಮ್ಮನ ಮನೆ ಎದುರಾಣ ಹೂತೋಟ ಒರೆಂಗೆ ಎಲ್ಲ ದಿಕ್ಕೆಯೂ ಈ ಚಟ್ಟಿಗೆಡುಗೊ ಇರ್ತು.
ಬೇಕಾದಾಂಗೆ ಬೆಳವಲೆ ಗೊಂತಿದ್ದೋ? – ಇಲ್ಲೆ. ಮನೆಯೋರಿಂಗೆ ಬೇಕಾದಷ್ಟೇ ಬೆಳೇಕು. ಅವಕ್ಕೆ ಬೇಕಾದಾಂಗೇ ಬೆಳೇಕು. ಅವಕ್ಕೆ ಬೇಕಪ್ಪಗಳೇ ಬೆಳೇಕು. ಸ್ವಂತಿಕೆಯ ಸಂಪೂರ್ಣ ಬಿಟ್ಟು ಬೆಳೆಸ್ಸು ಈ ಚಟ್ಟಿಯ ಗೆಡುವಿನ ಕರ್ಮ. ಇವೆಲ್ಲ ಇಪ್ಪದೆಂತಕೆ? ಅಲಂಕಾರಕ್ಕೆ; ಮಾಂತ್ರ.
ಗೆಡುವಿನ ನೆಡ್ತವು, ಬೇಕಾದಷ್ಟು ಈಟು – ನೀರು ಕೊಡ್ತವು. ಹಾಂಗಾಗಿ ಆ ಸೆಸಿಗೆ ಊಟ ತಿಂಡಿಯ ಹೆದರಿಕೆ ಇಲ್ಲೆ.
ಹೆದರಿಕೆ ಎಂತರ? ಆ ಊಟ ತಿಂಡಿಯ ತಿಂದು ಬೇಕಾಬಿಟ್ಟಿ ಬೆಳದಿಕ್ಕಲೆ ಗೊಂತಿಲ್ಲೆ. ಒಂದು ಎಲೆ ಹೆಚ್ಚಿಗೆ ಬಂದರೆ ಕೂಡ್ಳೇ ಕತ್ತರುಸುಗು. ಒಂದು ಹೂಗು ಬಿಟ್ರೆ ಅದು ಬಾಡ್ಳೆ ಪುರುಸೊತ್ತಿಲ್ಲೆ, ಚೂಂಟಿ ಇಡ್ಕುಗು. ವಾರಕ್ಕೊಂದರಿಯೋ, ತಿಂಗಳಿಂಗೊಂದರಿಯೋ – ಕತ್ತರಿ ತೆಕ್ಕೊಂಡು ಪೂರ್ತಿ ತುಂಡುಸುಗು, ಬಂಡಾರಿಯ ನಮುನೆಲಿ.
ಸೆಸಿಯ ಜೀವನಕ್ಕೆ ಬೇಕಾದ್ದರಿಂದ ಹೆಚ್ಚೇ ಈಟುನೀರು ಕೊಡುಗು, ಆದರೆ – ಅದಕ್ಕೊಂದು ಸ್ವಂತಿಕೆಲಿ ಸೆಸಿಯಾಗಿ ಬದ್ಕಲೆ ಅವಕಾಶವೇ ಇಲ್ಲೆ, ಅಲ್ಲದೋ?

ಸಮಾಜಕ್ಕೆ ಹೇಂಗೆ ಬೇಕೋ, ಹಾಂಗೆ ಬದ್ಕೇಕು.

~

ಇಲ್ಲೇ ಇಪ್ಪದಿದಾ ತುಲನೆ.
ಕಾಡಿನ ಗೆಡು ಇಪ್ಪದು ಬಂಙಲ್ಲೇ ಆಗಿಕ್ಕು, ಆದರೆ ಅದಕ್ಕೆ ನೆಮ್ಮದಿ ಇದ್ದು. ಹೊಟ್ಟಗೆ ರಜ ಹೆಚ್ಚುಕಮ್ಮಿ ಅಕ್ಕು, ಆದರೆ ತನ್ನ ಇಷ್ಟದಂತೆ ಸ್ವಾತಂತ್ರ್ಯದಂತೆ ಬದ್ಕಲೆ ಅಕ್ಕಿದಾ.
ಒಂದು ಗೆಲ್ಲು ಬಿಡೆಕ್ಕಾರೂ, ಒಂದು ಹೂಗು ಬಿಡೆಕ್ಕಾರೂ – ಆರತ್ರೂ ಕೇಳಿ ಆಗೆಡ. ಗೆಡುಗ ಎಷ್ಟುದೇ ಕೂಡಾ ಒತ್ತಕ್ಕೆ ಬೆಳವಲಕ್ಕು. ಒಂದರೊಳ ಒಂದು ಹೆಣಕ್ಕೊಂಡು ಬೆಳಗು. ಅನ್ಯೋನ್ಯತೆಲಿ ಇಕ್ಕು.

ಚಟ್ಟಿಗೆಡುವಿಂಗೆ ಹೊಟ್ಟೆಗೆ ಏನೂ ದರಿದ್ರ ಇಲ್ಲೆ. ಬೇಕಾದಷ್ಟು ತಿಂಬಲಾವುತ್ತು. ಕಾಲಕಾಲಕ್ಕೆ ಗೊಬ್ಬರ, ಕೀಟನಾಶಕ, ಮಣ್ಣು ಮಸಿ – ಎಲ್ಲವುದೇ ಹಾಕಿ ಕೊಬ್ಬುಸುತ್ತವು. ಆದರೆ, ಅದರ ಎಲ್ಲವನ್ನೂ ತಿಂದು, ಬೆಳೆಶುತ್ತೋನ ಮರ್ಜಿಗೆ, ಮುಲಾಜಿಂಗೆ ಬೆಳೇಕಷ್ಟೇ ವಿನಃ ಸ್ವಾತಂತ್ರ್ಯಲ್ಲಿ ಬೆಳವಲೆ ಅವಕಾಶವೇ ಇಲ್ಲೆ ಇದಾ. ಒಂದು ಹೂಗು ಬಿಡೆಕ್ಕಾರೂ, ಒಂದು ಗೆಲ್ಲು ಬಿಡೆಕ್ಕಾರೂ, ಒಂದು ಎಲೆ ಚಿಗುರುಸೇಕಾರೂ – ಅದರ ನೋಡಿಗೊಂಬೋನ ಮರ್ಜಿಯ ಮೇಲೆ ಅವಲಂಬಿತ. ಶಾಲೆಯ ಮಕ್ಕೊ ಶಿಸ್ತಿಲಿ ನಿಂದ ಹಾಂಗೆ ಒತ್ತೆ  ನಿಲ್ಲೆಕ್ಕಟ್ಟೆ – ಹೇಳಿದವು ಮಾಷ್ಟ್ರುಮಾವ°.

ಸೂರಂಬೈಲು ಹತ್ತರತ್ತರೆ ಎತ್ತಿತ್ತು.
~

ಮನುಷ್ಯರೂ ಹಾಂಗೇಡ. ಮಕ್ಕೊಗೆ ಒಳ್ಳೆಯ ವಾತಾವರಣ ಕೊಟ್ರೆ ಸಾಕು, ನೋಡಿಗೊಂಡು ಅವ್ವೇ ಬೆಳೆತ್ತವು. ಇಪ್ಪ ಸಂಪತ್ತಿಲಿ ನೆಮ್ಮದಿಯಾಗಿ ಬದ್ಕುತ್ತ ಬಗೆ ಅವು ಕಲ್ತುಗೊಳ್ತವು. ಅದಲ್ಲದ್ದೇ, ಬೇಕಾಬಿಟ್ಟಿ ಪೈಶೆ, ಅನುಕ್ಕೂಲ ಎಲ್ಲವನ್ನೂ ಒದಗುಸಿದ ಮತ್ತೆ- ಹಾಂಗೆ ಮಾಡೆಡ, ಹೀಂಗೆ ಮಾಡೆಡ – ಹೇದು ಜೋರು ಮಾಡಿರೆ ಅಕ್ಕೋ? – ಕೇಳಿದವು ಮಾಷ್ಟ್ರುಮಾವ°.
~
ಕಾಡಿಲಿ ಗೆಡುಗೊ ಸ್ವಾತಂತ್ರ್ಯಕ್ಕಾಗಿ ಬದ್ಕುದು.
ಚಟ್ಟಿಯ ಗೆಡುಗೊ ಅಲಂಕಾರಕ್ಕಾಗಿ ಬದ್ಕುದು. ಅಲ್ಲದೋ?

~
ಒಂದೊಪ್ಪ: ಸ್ವಾತಂತ್ರ್ಯವೇ ಜೀವನದ ಬಹುದೊಡ್ಡ ಅಲಂಕಾರ; ಅಲ್ಲದೋ?

10 thoughts on “ಕಾಡಿನ ಗೆಡು – ಚಟ್ಟಿಯ ಗೆಡು

  1. ಸ್ವಾತಂತ್ರ್ಯ ಇಲ್ಲದ್ದೆ ಬೆಳವ ಪೇಟೆಯ ಚಟ್ಟಿಯ ಗೆಡುವ (ಮಕ್ಕಳ) ಕಾಡಿನ ಗೆಡುವಿಂಗೆ(ಹಳ್ಳಿಯ ಮಕ್ಕೊಗೆ) ಹೋಲುಸಿದ ಒಪ್ಪಣ್ಣನ ಶುದ್ದಿ ಲಾಯಕಿತ್ತು. ತಮಾಷೆ ಇಪ್ಪ ಉದಾಹರಣೆಗಳ ಸಮೇತ ವಿವರಣೆ ಕೊಡುವ ಶೈಲಿ ಒಪ್ಪಣ್ಣನ ಶುದ್ದಿ ಎಲ್ಲೋರ ಮನಸ್ಸನ್ನುದೆ ಗೆಲ್ಲುತ್ತು. ಕಾರು ಓಡುಸುವಗ ಮಾಡುವ ಗೇರು/ಬ್ರೇಕು/ಹಾರ್ನು/ಕ್ಲಚ್ಚುಗಳ ಪ್ರಯೋಗವ, ಮಣಿ/ಆರತಿಗೆ ಹೋಲುಸಿದ್ದರ ನೋಡಿರೆ ಎಂಥವಂಗು ಅರ್ಥ ಆಗದ್ದೆ ಇರ. ಒಂದು ನವಿರಾದ ವಿಷಯವ ಇಷ್ಟು ಚೆಂದಕೆ ಅರ್ಥ ಆವ್ತ ಹಾಂಗೆ ವಿವರುಸಿದ ಒಪ್ಪಣ್ಣನ ಬೆನ್ನು ತಟ್ಟುತ್ತಾ ಇದ್ದೆ. ಕೊಶಿ ಕೊಶಿಯಾಗಿ.

  2. ಹರೇರಾಮ, ಇದೀಗ ಎರಡು ರೀತಿಲಿ ಚಿಂತನಗೆ ಹಚ್ಹುವ ಶುದ್ದಿ ೧ ಆಧುನಿಕತೆಯ ಮಾರಕ, ಇನ್ನೊಂದು ಸ್ವಾತಂತ್ರ್ಯದ ಉಪಯೋಗವೂ ದುರುಪಯೋಗವೂ

  3. ಸ್ವಾತಂತ್ರ್ಯ ಇಲ್ಲದ್ದರೆ ಎಲ್ಲಿಯಾದರೂ ರಜ ಅವಕಾಶ ಸಿಕ್ಕಿರೆ ಉಪಯೋಗಿಸಿ ತಮ್ಮ ಅಭಿಲಾಷೆ ಪೂರೈಸಿಕೊಂಬ ಪ್ರಯತ್ನ ಮನುಷ್ಯ ಮಾಡುತ್ತ.ಮಲಾಲಾ ಹೇಳಿ ಪಾಕಿಸ್ತಾನದ ಹುಡುಗಿ ಮಾಡಿದ ಹಾಂಗೆ! ಮನೆಲಿ ಕಾಡು ಮಾಡುವ ಅವಕಾಶ ಇಲ್ಲದ್ದವು ಚೆಟ್ಟಿಲಾದರೂ ಗೆಡು ಬೆಳೆಶಲಿ!

  4. ಕಾಡಿನ ಗೆಡುಃ ಕೇಜ್ರೀವಾಲ್ 🙂
    ಚಟ್ಟಿಯ ಗೆಡುಃ ಮನಮೋಹನ್ ಸಿಂಗ್ 😀

    ಸುಮ್ನೆ ತಮಾಷೆಗೆ ಒಂದು ಉದಾಹರಣೆ ಕೊಟ್ಟದು.

    ಒಪ್ಪಂಗೊ 🙂

    1. (ಕಾಡಿನ ಗೆಡುಃ ಕೇಜ್ರೀವಾಲ್) ಅಪ್ಪಪ್ಪು… ಅದೇ ಕಮ್ಮಿನಿಷ್ಟೆಯ ಬಲ್ಲೆ ಹೇಳ್ತವಲ್ಲ.. ಅದು… 😀 😀 😀

  5. ನಮ್ಮ ಊರ ನಾಯಿಯೂ, ಪೊಮೇರಿಯನ್ ನಾಯಿಯೂ ಇದ್ದಾಂಗೆ….

  6. “ಮಕ್ಕಳನ್ನು ಹೊಡೆದು(ತಿದ್ದಿ) ಬೆಳೆಸು, ಗಿಡವನ್ನು ಕಡಿದು(ಚೆಂದಕ್ಕೆ ಕಾಂಬಲೆ)ಬೆಳೆಸು” ಹೇಳಿ ಗಾದೆ. ಸ್ವಾತಂತ್ರ್ಯ ಜಾಸ್ತಿಯಾದರೂ ಕಷ್ಟವೇ. ಶಿಸ್ತಿದ್ದರೇ ಜೀವನ ಚೆಂದ. ಹರೇ ರಾಮ.

  7. ಹರೇರಾಮ, ಪರೋಕ್ಶವಾಗಿ ಚಿಂತನಗೆ ಹಚ್ಹುವ ಬರಹ ಒಳ್ಲೆ ಶುದ್ದಿ ಒಪ್ಪಣ್ಣ.

  8. ಕಾಡು-ನಾಡಿನ ನೆಡೂಕಾಣ ಹೋಲಿಕೆಯ ತೆಕ್ಕೊ೦ಡು ಜೀವನಮೌಲ್ಯದ ಚಿ೦ತನೆ.
    ನಿಜ,ಪೂರಕ ವಾತಾವರಣವ ಒದಗುಸಿಕೊಟ್ಟರೆ ಸಾಕು,ಚಟ್ಟಿ,ಕಬ್ಬಿಣದ ಬೇಲಿಯ ಬ೦ಧನದ ಅಗತ್ಯವೇ ಬಾರ.
    ಮನಸ್ಸಿ೦ಗೆ ತಟ್ಟುವ ಬರಹ ಒಪ್ಪಣ್ಣಾ.

  9. ಸ್ವಂತಿಕೆಯ ಬದುಕು ಪರಾತಂತ್ರತೆಯ ಬದುಕಿನ ಸ್ವರೂಪ ಚಿತ್ರಣ ಅದ್ಭುತ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×