ಕೃಷ್ಣನ ದೇವಸ್ಥಾನಲ್ಲಿ ರಾಯಂದೇ ನೆಂಪು…!

ಕಣಿಯಾರಾಯನ ಕಳಾತು, ಗೌಜಿಲಿ!
ಮಕರ ಶೆಂಕ್ರಾಂತಿಗೆ ಕೊಡಿ ಏರಿ, ಐದು ದಿನಲ್ಲಿ ಸೇವೆ, ಕಾಣಿಕೆಗಳ ಸ್ವೀಕರುಸಿ, ಆರಾಟಿಲಿ ಮಿಂದು ದೇವರು ಒಳ ಆಗಿಯೂ ಆತು.
ಮರದಿನ ತೂಷ್ಣಿಲಿ ’ಪೇಟೆಬಾಬ್ತು’ ಗೌಜಿಯುದೇ ಮುಗಾತು! ಊರಿಲಿಡೀಕ ಗೌಜಿಯೋ ಗೌಜಿ!!

ಒಪ್ಪಣ್ಣನ ಬೈಲಿಂದಲೂ ಹೋಗಿತ್ತಿದ್ದವು-
ಎಲ್ಲೊರು ಎಲ್ಲಾ ದಿನ ಅಲ್ಲ, ಕೆಲವು ಜೆನ ಕೆಲವು ದಿನ! ಎಲ್ಲಾ ದಿನ ಹೋದೋರುದೇ ಇದ್ದವು – ಹೋಗದ್ದೇ ಕಂಜಿಹಾಕಿದೋರುದೇ ಇದ್ದವು!
ಮೊನ್ನೆ ಹೊತ್ತಪ್ಪಗ ಅಜ್ಜಕಾನಬಾವ° ತೋಟದ ಕರೆಲಿ ಸಿಕ್ಕಿ ’ಬೈಕ್ಕಿಲಿ ಆನೊಬ್ಬನೆ, ಬಾ ಹೋಪ°!’ ಹೇಳಿದ. ನಾವು ಹೆರಟತ್ತು ಅವನೊಟ್ಟಿಂಗೆ, ಇರುಳು ಉಂಡಿಕ್ಕಿ! ದೊಡ್ಡಬಾವಂದೇ, ಪುಟ್ಟಣ್ಣಬಾವಂದೇ ಇನ್ನೊಂದು ಬೈಕ್ಕಿಲಿ.
ಒಪ್ಪಕ್ಕಂಗೆ ’ನಾಳ್ತು ಪರೀಕ್ಷೆ’, ಯೇವತ್ತಿನಂತೆ!!
ಆಚಕರೆಮಾಣಿ ಕಾಸ್ರೋಡಿಂಗೆ ಹೋಯಿದನಡ, ಸಂಗೀತ ಕಚೇರಿಗೆ! ತಾಳ ಹಾಕುವೋರು ಒಟ್ಟಿಂಗೆ ಇದ್ದರೆ ಸಂಗೀತ ಕೇಳದ್ದೆ ಇಕ್ಕೊ! ಕಳ್ಳ°!!
ಚೆಂಬರ್ಪು ಅಣ್ಣನ ಕಾಣದ್ದೆ ಅವರ ಇಂಜಿನಿಯರು ಭಾವ° ಕಂಗಾಲಾಗಿತ್ತಿದ್ದವು! ಎಡಪ್ಪಾಡಿ ಬಾವಂಗೆ ಆ ದಿನ ಬೆಂಗ್ಳೂರು ಬಸ್ಸಡ, ಬದಿಯೆಡ್ಕಂದ..!

ಎಂಗೊ ಎತ್ತುವಗ ರಜ ತಡವಾಯಿದು.
ದೇವರು ಹೆರಟಿದವು, ಸುರುವಾಣ ಸುತ್ತು ಕಳುದ್ದು, ಮತ್ತಾಣ – ಪಳ್ಳತಡ್ಕ ಬಟ್ಟಮಾವಂದ್ರ ಮಂತ್ರಸುತ್ತು – ರೈಸಿಗೊಂಡು ಇತ್ತು!
ಅದಾದ ಮತ್ತೆ ಚೆಂಡೆ ಸುತ್ತು. ಕೇಳಿಗೊಂಡು ನಿಂದೆಯೊ°!
ಅದಾಗಿ ಓಲಗ – ಎರಡು ಮೂರು ಪ್ರತಿ.
ಈ ಬೇಂಡು- ಓಲಗದ ಸುತ್ತು ಹೇಳಿತ್ತುಕಂಡ್ರೆ ನವಗೆ ರಜಾ ಅಷ್ಟಕ್ಕಷ್ಟೆ, ಮದಲಿಂಗೇ ಹಾಂಗೆ!
ನೀರ್ಚಾಲುಸೇಟು ಕೊಟ್ಟಡಕ್ಕೆ ಬಿಕ್ಕಿದ ಹಾಂಗೆ ’ಪರಾ….’ ನೆ ಬಡಿವದು, ಲಯ ಇಲ್ಲೆ, ಇಂಪು ಇಲ್ಲೆ!
ಕೆಮಿ ಮೊದಲೇ ಬಿಡ್ಳೆಡಿತ್ತಿಲ್ಲೆ!! ಅದಕ್ಕಪ್ಪಗ ಸೀತ ದೇವಸ್ತಾನದ ಒಳ ಹೋದೆಯೊ°.
ಸಾರಡಿಪುಳ್ಯಕ್ಕೊ ಒಳ – ಗೋಪುರಲ್ಲಿ ಕೂದಂಡು ಪಟ್ಟಾಂಗ ಹೊಡಕ್ಕೋಂಡು ಇತ್ತಿದ್ದವು, ಅವರ ಬೊಬ್ಬೆ ಎಡಕ್ಕಿಲಿ ಆ ಬೇಂಡಿನ ಶಬ್ದ ಕೇಳಿದ್ದರೆ ಕೃಷ್ಣನ ಪುಣ್ಯ!
ದೊಡ್ಡಬಾವ, ಪುಟ್ಟಣ್ಣಬಾವ, ಅಜ್ಜಕಾನ ಬಾವ°, ಒಪ್ಪಣ್ಣ – ನಾಕು ಜೆನ ಇನ್ನೊಂದು ಗೋಪುರಲ್ಲಿ ಕೂದಂಡು ಲೋಕಪಂಚಾತಿಗೆ ಹಾಕಿದೆಯೊ°.
ನಮ್ಮ ಕೆದೂರು ಡಾಗುಟ್ರುದೇ ಬಂದು ಸೇರಿಗೊಂಡವು. ಅವು ಬಂದ ಕೂಡ್ಳೇ ಎಲ್ಲೊರಿಂಗುದೇ ಬೋದ ಬಂತು!!

ಲೋಕ ಪಂಚಾತಿಗೆ ಮುಂದುವರುದತ್ತು. ಒಂದು ಓಲಗ ಮುಗುದು ಇನ್ನೊಂದು ಸುರು ಆತು.
ದೊಡ್ಡಬಾವಂಗೆ ಬೆಂಗುಳೂರಿಂದ ಬಂದ ಆರೋ ಸಿಕ್ಕಿದವು, ನೀರ್ಚಾಲು ಶಾಲೆಯ ಬ್ಲೋಗಿನ ಬಗ್ಗೆ ಎಂತದೋ ಮಾತಾಡಿಗೊಂಡು ಕೂದವು, ಒಪ್ಪಣ್ಣಂದೇ ಅಜ್ಜಕಾನ ಬಾವಂದೇ – ಅಡಕ್ಕೆ ತೆಗವಲೆ ಬತ್ತೆ ಹೇಳಿ ಕೈ ಕೊಟ್ಟ ಕುಂಞನ ಬಗ್ಗೆ -ಮಾತಾಡಿದೆಯೊ°.
ಪುಟ್ಟಣ್ಣಬಾವ ಮೊದಲಿಂದಲೇ ಹಾಂಗೆ – ಮೌನಿ! ಆದರೆ..

ಕೆದೂರು ಡಾಗುಟ್ರು..?!  ಈ ಒಂದು ವಿಷಯವುದೇ ಅವಕ್ಕೆ ಸಂಬಂದ ಇಪ್ಪದಲ್ಲ ಇದಾ!
ಮೊದಲೇ ಬಚ್ಚಿದ್ದ ಅವಕ್ಕೆ ಅಲ್ಲಿಗೇ ಮನಿಕ್ಕೊಂಬ ಹಾಂಗಾದ್ದು ಅಜ್ಜಕಾನಬಾವಂಗೆ ಗೋಷ್ಟಿ ಆತು.
ಮೆಲ್ಲಂಗೆ ಏಳುಸಿ, ‘ಬೋದ ತಪ್ಪುಸುತ್ತ ಮದ್ದು ನಿಂಗಳೇ ಕುಡುದಿರೋ!?’ ಹೇಳಿ ನೆಗೆಮಾಡಿದ°! ಜೋರು ಒರಕ್ಕು ತೂಗುತ್ತರೆ ಒಂದರಿ ಹೆರ ಹೋಗಿ ಬಪ್ಪ° – ಹೇಳಿಗೊಂಡು ಹೆರಟೆಯೊ°. ಸಣ್ಣ ಒರಕ್ಕು ಬಿಡ್ಳೆ ಅಂಗಣದ ಒಳವೇ ಒಂದು ಸುತ್ತು ನೆಡದು, ಮತ್ತೆ ಹೆರ ಚಳಿಗೆ ಹೋವುತ್ತದು!

Kaniyara Sri Gopala Krishna

ಕಣಿಯಾರದ ಗೋಪಾಲಕೃಷ್ಣ ದೇವರು, ಸರ್ವಾಲಂಕೃತ!!

ಅಂಗಣಲ್ಲೇ ತಿರುಗಿಯೊಂಡು ಗರ್ಭಗುಡಿಯ ಎದುರೆ ಬಂದಪ್ಪಗ ಕೃಷ್ಣನ ಮೂರ್ತಿಯ ಹತ್ತರಂದ ಕಾಂಬಲೆ ಸಿಕ್ಕಿತ್ತು.!
ಏವತ್ತುದೇ ನವಗೆ ಕಾಣ್ತರುದೇ, ಇಷ್ಟೆಲ್ಲ ದೀಪ, ಅಲಂಕಾರ ಎಲ್ಲ ಇರ್ತಿಲ್ಲೆ ಇದಾ!
ಬೆಳ್ಳಿ ಕೂರುಸಿದ ದಾರಂದಂಗಳ ಒಳ, ಕಪ್ಪುಶಿಲೆಲಿ ಕೆತ್ತಿದ ಕೃಷ್ಣನ ಮೂರ್ತಿಗೆ ಚಿನ್ನ, ಬೆಳ್ಳಿ – ವಜ್ರ – ವೈಡೂರ್ಯದ ಆಭರಣಂಗಳ ಎಲ್ಲ ಅಲಂಕರುಸಿ, ಚೆಂದದ ಅವಲಕ್ಕಿ ಸರ, ಲಕ್ಷ್ಮೀ ಸರ, ಕವಚ, ಬಳೆ, ಕೇಯೂರ -ಚಿನ್ನದ್ದು – ಎಲ್ಲ ಹಾಕಿದ ಸರ್ವಾಲಂಕೃತ ಮೂರ್ತಿ.
ನೋಡಿರೆ ನೋಡೆಕ್ಕು ಹೇಳಿಯೇ ಕಂಡುಗೊಂಡು ಇತ್ತು!

ಅದರ ಚೆಂದವ, ವಿಶೇಷತೆಯ ವಿವರುಸುವಗ ದೊಡ್ಡಬಾವ° ಒಂದು ಶುದ್ದಿ ಹೇಳಿದ°,
‘ಇದೆಲ್ಲ ಹಳೆಕಾಲದ ಆಭರಣಂಗೊ, ರಾಜರ ಕಾಲದ್ದು! ಈ ಮೂರ್ತಿ ಅಡಿಲಿ ಇನ್ನುದೇ ಇದ್ದಡ!’ ಹೇಳಿ.
ರಾಜರ ಕಾಲದ್ದ? ಯಾವಗಾಣ? ಹೇಳಿ ಕಿದೂರು ಡಾಗುಟ್ರು ಕೇಳಿದವು – ಅವಕ್ಕೆ ಅಷ್ಟಪ್ಪಗ ಒರಕ್ಕು ಸರೀ ಬಿಟ್ಟಿತ್ತಿದ್ದು!
‘ರಾಜರ ಕಾಲ – ಬಹುಷಃ ವಿಜಯನಗರ; ಕೃಷ್ಣ ದೇವರಾಯನ ಕಾಲದ್ದಾಯಿಕ್ಕು!’ ಹೇಳಿದ° ದೊಡ್ಡಬಾವ°.
ಡಾಗುಟ್ರಿಂಗೆ ಶಾಲೆಲಿ ಕಲ್ತದು ನೆಂಪಾತು: ವಿಜಯನಗರದ ಕೃಷ್ಣದೇವರಾಯನ ಕಾಲಲ್ಲಿ ಸಮೃದ್ಧಿ ಇತ್ತು, ನೆಮ್ಮದಿ ಇತ್ತು. ದೇವಸ್ಥಾನಂಗೊ ಅಭಿವೃದ್ಧಿ ಆತು – ಇತ್ಯಾದಿ ವಿಷಯಂಗೊ. ‘ಅಂಬಗ ಹಾಂಗೆಡ ಅಲ್ದ?’ ಹೇಳಿ ಕೇಳಿದವು.
ಕರೆಲಿ ನಿಂದ ಅಜ್ಜಕಾನಬಾವಂಗೆ ಇನ್ನೊಂದು ವಿಶಯ ಗೊಂತಿತ್ತು. ಇದೇ ಕೃಷ್ಣದೇವರಾಯ ಪೀಠಕ್ಕೆ ಬಂದು 500 ಒರಿಷ ಆತಡ.
ಆ ನೆಂಪಿಂಗೆ ಕರ್ನಾಟಕ ಗೋರ್ಮೆಂಟು ಎಂತದೋ ಆಚರಣೆ ಮಾಡ್ತಡ, ಓ ಮೊನ್ನೆ ಗುಣಾಜೆಮಾಣಿ ಸಿಕ್ಕಿ ಹೇಳಿದ್ದನಡ!

’ಅಪ್ಪು’ ಹೇಳಿದ ದೊಡ್ಡಬಾವ ಒಂದು ಪ್ರಬಂಧಕ್ಕಪ್ಪಷ್ಟು ಶುದ್ದಿಯ ಹೇಳುಲೆ ಸುರುಮಾಡಿದ°.
ಕೆಲವೆಲ್ಲ ಅರ್ಥ ಆದರೂ ಅಲ್ಲಿದ್ದ ಗಲಾಟೆಲಿ ಸ್ಪಷ್ಟವಾಗಿ ತಲೆಲಿ ನಿಂದಿದಿಲ್ಲೆ. ಮತ್ತೆ ಬೈಲಿಂಗೆ ಬಂದು ಮಾಷ್ಟ್ರುಮಾವನತ್ರೆ ಕೇಳಿ ಕೆಲವೆಲ್ಲ ಮಾಹಿತಿಗೊ ತಿಳ್ಕೊಂಡಾತು.
ಎಲ್ಲ ಸೇರಿ ಒಂದು ಶುದ್ದಿಗಪ್ಪಷ್ಟು ವಿಷಯಂಗೊ ಸಿಕ್ಕಿತ್ತು. ನಿಂಗೊಗೂ ಹೇಳ್ತೆ, ಕೇಳಿ:

ಹದಿಮೂರನೇ ಶತಮಾನಲ್ಲಿ, ಉತ್ತರಲ್ಲಿ ಮೊಗಲಮಾಪಳೆಗಳ ಉಪದ್ರ ತಾರಕಕ್ಕೇರಿಪ್ಪಗ ಶಂಕರಾಚಾರ್ಯ ಪೀಠದ ವಿದ್ಯಾರಣ್ಯರು ‘ಹಿಂದೂಧರ್ಮಕ್ಕೆ ಚ್ಯುತಿ ಬಕ್ಕು’ ಹೇಳುದರ ಮನಗಂಡವಡ.
ಹೊಯ್ಸಳ ವೀರಬಲ್ಲಾಳ ಹೇಳ್ತ ರಾಜ ಮಧುರೆಲಿ ಒಂದು ಮಾಪಳೆ ರಾಜನೊಟ್ಟಿಂಗೆ ಪೆಟ್ಟುಮಾಡುವಗ ಸತ್ತ ಮತ್ತೆ ಪರಿಸ್ಥಿತಿ ಇನ್ನೂ ಗಂಭೀರ ಆತಡ!
ಆ ಸಮಯಕ್ಕೆ, ಭವನಸಂಗಮ ಹೇಳ್ತವನ ಮಕ್ಕೊ ಹಕ್ಕ, ಬುಕ್ಕ – ಹೇಳ್ತ ಇಬ್ರು ತುಂಡು ಆಳುಗಳ ಹಿಡುದು, ‘ನಿಂಗ ಪುಕ್ಕಂಗೊ ಆಗಿರೆಡಿ!’ ಹೇಳಿ ಆದೇಶ ಕೊಟ್ಟು ದೈಹಿಕವಾಗಿ, ಮಾನಸಿಕವಾಗಿ ಪಳಗುಸಿದವಡ.

ಗುರುಗಳ ಆದೇಶದ ಹಾಂಗೆ, (ಕ್ರಿ.ಶ 1336ರಲ್ಲಿ ಅಡ – ಮಾಷ್ಟ್ರುಮಾವ ಹೇಳಿದ್ದು) ತುಂಗಭದ್ರಾ ನದಿ ತೀರದ ವಿಜಯನಗರ – ಹಂಪೆ ಹೇಳ್ತಲ್ಲಿ ರಾಜ್ಯಾರಂಭ ಮಾಡಿದವಡ.
ಸ್ವಾಮಿಗೊ ಹೇಳಿತ್ತುಕಂಡ್ರೆ ಬರೇ ಇಂಜಿನಿಯರುಕೋಲೇಜು ಮಾಂತ್ರ ಮಾಡುದಲ್ಲ, ಈ ನಮುನೆ ಲೋಕೋದ್ಧಾರ ಕಾರ್ಯವನ್ನುದೇ ಮಾಡ್ತವು ಹೇಳಿ ಇತಿಹಾಸಲ್ಲಿ ಕಾಣ್ತು!
ರಾಜ ಹಕ್ಕನ “ಹರಿಹರರಾಯ” ಹೇಳುಲೆ ಸುರುಮಾಡಿದವು. (ಮೇಸ್ತ್ರಿ ಸಂಕುವಿನ ಸಂಕಪ್ಪಣ್ಣ ಹೇಳಿದ ಹಾಂಗೆ!). ಇಪ್ಪತ್ತು ಒರಿಷ ರಾಜ್ಯಭಾರ ಮಾಡಿದ°.
ಗುರುಗಳ ಸೂಚನೆಗಳ ಶಿರಸಾ ಪಾಲುಸಿಗೊಂಡು ಬಂದನಡ.
ಕರ್ನಾಟಕದ ದಕ್ಷಿಣ ಭಾಗ, ಕರಾವಳಿಂದ ಹಿಡುದು, ಅತ್ಲಾಗಿ ಆಂಧ್ರಲ್ಲಿದೇ ಕೆಲವು ಭಾಗಂಗಳ ಸೇರುಸಿ, ಮುಂದಿನ ಪೀಳಿಗೆಗೆ ಭದ್ರ ಅಡಿಪಾಯ ಹಾಕಿದನಡ. ಅವನಿಂದ ಮುಂದಕ್ಕೆ ಅವನ ತಮ್ಮ ‘ಬುಕ್ಕ ರಾಯ’ ಆಗಿ ಪೀಠ ಏರಿದ°. (ಬುಕ್ಕ ಬತ್ತಿ ಕಾರಣ ಬುಕ್ಕರಾಯ – ಹೇಳಿ ಅಜ್ಜಕಾನ ಬಾವನ ನೆಗೆ!)
ಅವ° ಇಪ್ಪತ್ತೊಂದು ಒರಿಷ ಕಾಲ ಗೌಜಿಲಿ ಆಳ್ವಿಕೆ ಆತಡ. ಅಣ್ಣನ ಹಾಂಗೆ, ತಮ್ಮನುದೇ! “ಸಂಗಮ ವಂಶ” ಹೇಳ್ತ ಛಾಪು ಒತ್ತಿಕ್ಕಿ ಹೋದವಡ!
ರಾಜ್ಯವ ವಿಸ್ತರುಸಿ ಇನ್ನೂ ಬೆಳೆಶಿಕ್ಕಿ ಹೋದನಡ. ಹೀಂಗೇ ಇವರ ಕೂಟದವು ಆ ಪೀಠಕ್ಕೆ ಒಂದು ಭದ್ರತೆ ಕೊಟ್ಟು, ವಿಜಯನಗರ ಹೇಳ್ತ ಒಂದು ಬಲವಾದ ಹಿಂದೂ ಪ್ರದೇಶವ ಮೂಡುಸಿದವಡ.
ನೋಡಿ ನಿಂಗೊ, ಇಡೀ ದೇಶಲ್ಲಿ ಮಾಪಳೆಗಳ ರಾಜ್ಯಭಾರದ ಅಲೆ ಇತ್ತು. ಮತ್ತೆ ಕೆಲವು ದಿಕೆ ಬೌದ್ಧ, ಜೈನ ಇತ್ಯಾದಿ ಅಹಿಂಸಾ ಧರ್ಮಂಗಳ ಅಲೆ ಇತ್ತು, ಇದೆಲ್ಲದರ ಎಡಕ್ಕಿಲಿ ಈ ಹಿಂದೂ ಸಾಮ್ರಾಜ್ಯ- ಹುಟ್ಟಿದ್ದೇ ದೊಡ್ಡ ಸಂಗತಿ, ಹುಟ್ಟಿ ಬೆಳೆಶೇಕಾರೆ ಎಷ್ಟು ತಾಕತ್ತು ಬೇಕು, ನಿಂಗಳೇ ಆಲೋಚನೆ ಮಾಡಿ!!
ಈ ರಾಜರುಗಳಿಂದಲೂ ಹೆಚ್ಚು, ಆ ಗುರುಗಳ ಮೆಚ್ಚಲೇಬೇಕು! “..ಯೋಜಕಸ್ತತ್ರ ದುರ್ಲಭಃ” ಹೇಳಿದವು ಮಾಷ್ಟ್ರುಮಾವ°.
ಗುರದೃಷ್ಟಿ – ಶಿಷ್ಯ ಸೃಷ್ಟಿ ಹೇಳಿ ನಮ್ಮ ಗುರುಗೊ ಹೇಳಿದ್ದು ಸರಿಯೇ!!

Vijayanagara-Samrajya

ವಿಜಯನಗರ ಸಾಮ್ರಾಜ್ಯ - ಉಛ್ರಾಯ ಕಾಲಲ್ಲಿ!

ಇದೇ ಕೂಡುಕಟ್ಟು 1485ರ ಒರೆಂಗೆ ಮುಂದುವರುದತ್ತು. ಪ್ರೌಡರಾಯ ಹೇಳ್ತ ರಾಜ ಅಧಿಕಾರಕ್ಕೆ ಬಂದಪ್ಪಗ – ಎಂತ ಮಾಡುಸ್ಸು, ಎಲ್ಲ ರಾಜರುದೇ ಒಂದೇ ನಮುನೆ ಶಕ್ತಿಶಾಲಿ ಇರ್ತವಿಲ್ಲೆ! – ರಾಜ್ಯ ರಜಾ ದುರ್ಬಲ ಆಗಿ – ದಂಗೆ, ದೊಂಬಿ ಇತ್ಯಾದಿಗೊ ಸುರು ಆತಡ. ವೆಗ್ತಿ ಮುಖ್ಯ ಅಲ್ಲ, ರಾಜ್ಯ ಮುಖ್ಯ ಹೇಳ್ತದು ಮನಗಂಡ ಸೇನಾಪತಿ ಸಾಳುವ ನರಸಿಂಹ ದೇವರಾಯ ರಾಜ್ಯಭಾರ ತೆಕ್ಕೊಂಡನಡ. ಮುಂದೆ ಇದು ’ಸಾಳ್ವ ವಂಶ’ ಆಗಿ ಮುಂದುವರಿವಲೆ ಕಾರಣ ಆತು. ಅದ್ವೈತ ಶಂಕರರ ಆದೇಶಲ್ಲಿ ರಾಜ್ಯಾರಂಭ ಆಗಿ, ಈಗ ಮಧ್ವ ದ್ವೈತದ ಶಿಷ್ಯ ಸಾಳುವ ವಂಶಂದಾಗಿ ಅದು ಮುಂದುವರುದತ್ತು. ಅವನ ಮಗ, ತಿಮ್ಮ ಭೂಪಾಲನ ಸೈನ್ಯದ ಒಬ್ಬ ಅಧಿಕಾರಿ ಕೊಂದಪ್ಪಗ, ನಂಬಿಕಸ್ತ ಸೇನಾಪತಿ “ನರಸನಾಯಕ” ಹೇಳ್ತವ ಕಾರ್ಬಾರು ನೋಡಿಗೊಂಡನಡ. ರಾಜ ಆಗಿ ದಸ್ಕತ್ತು ಒತ್ತಲೆ ಅವನ ಪುಳ್ಳಿ ಇದ್ದರುದೇ, ಒಯಿವಾಟು ಪೂರ ಈ ನಾಯ್ಕಂದೇ!

ನರಸ ನಾಯ್ಕನ ಕಾಲ ಆದ ಮತ್ತೆ ವೀರನರಸಿಂಹ ನಾಯ್ಕ ಬಂದ, ಅವನಿಂದ ಮುಂದಕ್ಕೆ ಬಂದದೇ ಈ “ಕೃಷ್ಣದೇವರಾಯ”. (1509, ಜುಲಾಯಿ 26) ಕೃಷ್ಣ ಜನ್ಮಾಷ್ಟಮಿಯ ದಿನ ಈ ಕೃಷ್ಣ ಪೀಠ ಏರಿ ಕೃಷ್ಣದೇವರಾಯ ಆದ. ಅಲ್ಲಿಂದ ಮತ್ತೆ ಇಪ್ಪತ್ತೊರಿಷದ ದೀರ್ಘ ಕಾಲದ ಆಳ್ವಿಕೆ ಅವನದ್ದಾತು.
ಈ ಇಪ್ಪತು ಒರಿಶಲ್ಲಿ ಅವ° ಮಾಡಿದ ಸಾಧನೆ ಮಾಂತ್ರ ಅತ್ಯದ್ಭುತ! ಆಂಧ್ರದ ಹೆಚ್ಚಿನ ಪಾಲು – ಕಳಿಂಗ ದೇಶದ ಒರೆಂಗೆ, ಕರ್ನಾಟಕದ ಕರಾವಳಿ, ಸಮಗ್ರ ಕೇರಳ, ಸಂಪೂರ್ಣ ತೆಮುಳುನಾಡು (ಅಜ್ಜಂದ್ರು ತಮಿಳುನಾಡಿಂಗೆ ಹಾಂಗೆ ಹೇಳಿಗೊಂಡು ಇದ್ದದು) – ಇಷ್ಟನ್ನೂ ಹಿಡುದು ರಾಜ್ಯವ ಬಹು ವಿಸ್ತಾರ ಮಾಡಿದ°. ಇವನ ಕಾಲಲ್ಲಿ ವಿಜಯನಗರ ಅತ್ಯಂತ ವಿಶಾಲವಾಗಿತ್ತು. ರಾಜ್ಯ ವಿಸ್ತಾರ ಆಗಿದ್ದದು ಮಾಂತ್ರ ಅಲ್ಲದ್ದೆ, ರಾಜನ ಮನಸ್ಸುದೇ ವಿಸ್ತಾರ ಆಗಿತ್ತು. ಅಷ್ಟಪ್ಪಗ ಆಗಲೇ ಪೋರ್ಚುಗೀಸರು ಗೋವಾಕ್ಕೆ ಬಂದು ಆಗಿತ್ತು. ಅವಕ್ಕೆ ಇತರ ಅತಿಥಿಗಳ ಹಾಂಗೆ – ನಮ್ಮ ಕ್ರಮಲ್ಲೇ – ಆತಿಥ್ಯ ಕೊಟ್ಟು, ಅವರ ಚೆಂದಕೆ ನೋಡಿಗೊಂಡು, ಸತ್ಕಾರ ಮಾಡಿಗೊಂಡು ಇತ್ತಿದ್ದ ಈ ರಾಜ. ಹತ್ತರೆಯೇ, ಇದ್ದಿದ್ದ ಮಾಪುಳೆ ರಾಜಂಗೊ ಇವನ ಮೊದಲಾಣೋರ ಕಾಲಲ್ಲಿ ಬೀಲ ನೆಗ್ಗಿರುದೇ, ಇವನ ಶಕ್ತಿ ಕಂಡು ತಳೀಯದ್ದೆ ಕೂಯಿದವು – ಮಾಪ್ಳೆ ಬುದ್ದಿ ಹೇಳಿರೆ ಹಾಂಗೇ ಅಲ್ಲದೋ?! ವಿಜಯನಗರದ ಆಸುಪಾಸಿಲಿ ಒಟ್ಟು ಐದು ಮಾಪ್ಳೆರಾಜರು ಇತ್ತಿದ್ದವಡ. ಮೊಗಲರ ಸಾಮಂತರಾಗಿದ್ದೋರು! ಮನಸ್ಸು ಮಾಡಿದ್ದರೆ ಒಂದು ದಿನದ ಕೆಲಸ ಇವಂಗೆ, ಪೂರ ಆಪೋಶನ ತೆಕ್ಕೊಂಬಲಾವುತಿತು! ಆದರೆ ರಾಜತಾಂತ್ರಿಕ ಸಂಬಂದಂಗೊ ಗಟ್ಟಿ ಒಳುಕ್ಕೊಂಬಲೆ ಅದರ ಮುಟ್ಳೆ ಹೋಯಿದಯಿಲ್ಲೆ. ಅದರ್ಲಿ ಒಂದು ರಾಜಂಗೆ ತಾಕತ್ತು ಕಮ್ಮಿ ಆದಕಾರಣ, ಅದರ ಕೈಂದ ರಾಜ್ಯ ಎಳಕ್ಕೊಂಡು – ಎಂತದೋ ತಟಪಟ ಆಗಿತ್ತಡ. ಈ ಕೃಷ್ಣದೇವರಾಯ ಅಲ್ಲಿಗೆ ಹೋಗಿ, ಅವಕ್ಕೆ ಮದ್ದು ಮಾಡಿ, ರಾಜ ಪುನಾ ಪಟ್ಟಕ್ಕೆ ಬಪ್ಪ ಹಾಂಗೆ ಮಾಡಿದನಡ. ಅದಕ್ಕೇ ಅವಂಗೆ ‘ಯವನರಾಜ್ಯ ಸಂಸ್ಥಾಪನಾಚಾರ್ಯ’ ಹೇಳಿ ಬಿರುದು ಕೊಟ್ಟವಡ. (ಯವನ = ಮಾಪ್ಳೆ/ಪುರ್ಬು) ನೋಡಿ! ಎಂತಾ ದೊಡ್ಡ ಮನಸ್ಸು!! ಹಿಂದುಗೊಕ್ಕೆ ಮಾಂತ್ರ ಬಕ್ಕಷ್ಟೆ ಹಾಂಗೆ! ಅಲ್ದೋ?

ತುಂಗಭದ್ರಾ ನದಿಯ ತಟಲ್ಲಿ ಇದ್ದಿದ್ದ ವಿಜಯನಗರದ ಜೀವನವ್ಯವಸ್ಥೆಗೆ ಆ ನದಿಂದ ನೀರು ಬಪ್ಪಲೆ ಕಲ್ಲಿಲೇ ಮಾಡಿದ ಕಾಲುವೆಗಳ ಮಡಗಿ, ಆ ನೀರು ಬಂದು ಊರ ನೆಡೂಕಾಣ ದೊಡ್ಡ ಒಂದು ಕೆರೆಲಿ ಎರ್ಕಿ, ಅಲ್ಲಿಂದ ಮತ್ತೆ ಸಣ್ಣ ಸಣ್ಣ ತೂಂಬುಗಳಲ್ಲಿ ಬೇಕಾದಲ್ಲಿಗೆ ಹೋಗಿ – ಎಲ್ಲ ಅಚ್ಚುಕಟ್ಟಾದ ನೀರಾವರಿ ವ್ಯವಸ್ಥೆ ಇತ್ತು. ಸೈನಿಕರಿಂಗೆ ಉಂಬಲೆ, ಮೀವಲೆ, ಸಾಮಾನ್ಯಜನರ ಸಾಮಾನ್ಯ ಉಪಯೋಗಂಗೊಕ್ಕೆ ಎಲ್ಲ ಅಲ್ಲಿಂದ ವ್ಯವಸ್ಥಿತವಾಗಿ ನೀರು ಹೋಗಿಯೋಂಡು ಇತ್ತು!

Krishnadevaraya

ಶ್ರೀ ಕೃಷ್ಣದೇವರಾಯ

ಇದೇ ರೀತಿ ಕೃಷಿಕರಿಂಗುದೇ ಒಳ್ಳೆಯ ಸೌಕರ್ಯಂಗೊ..!
ಕೃಷಿಕರು ಬೆಳಶಿದ ವಸ್ತುಗಳ ಪ್ರತಿ ದೇವಸ್ಥಾನಲ್ಲಿ ಖರೀದಿ ಮಾಡಿ, ಅಲ್ಲಿಂದ ಮುಖ್ಯ ಮಾರುಕಟ್ಟೆಗೆ ಸಾಗುಸಿ – ಎಲ್ಲಾ ವ್ಯಾಪಾರಿಗೊಕ್ಕೆ ಅನುಕೂಲ ಅಪ್ಪ ಹಾಂಗೆ ಕಟ್ಟಿದ ಸುರಕ್ಷಿತ, ಸುಸಜ್ಜಿತ ಮಾರುಕಟ್ಟೆ ಅದು.
ಅಲ್ಲಿ ದೊಡ್ಡ ದೊಡ್ಡ ವ್ಯಾಪಾರಿಗೊಕ್ಕೆ ಖರೀದಿಗೆ ಅವಕಾಶ ಅಪ್ಪ ಹಾಂಗೆ ಮಾಡಿ, ಹೆರಾಂದ ಬಂದ ವಸ್ತುಗಳ ಅಲ್ಲಿ ಮಾರುವ ಹಾಂಗೆ ಮಾಡಿ – ಈಗಾಣ ಆಧುನಿಕ ಪೇಟೆಗಳುದೇ ಸೋಲೆಕ್ಕು! ಅಷ್ಟು ಚೆಂದ ಅದು!!
ಚಿನ್ನವನ್ನುದೇ ಅದೇ ಮಾರುಕಟ್ಟೇಲಿ ಮಾರಿಗೊಂಡು ಇದ್ದಿದ್ದವಡ, ಅಂಬಗ ವ್ಯಾಪಾರಿಗೊಕ್ಕೆ ಎಷ್ಟು ಭದ್ರತೆ ಸಿಕ್ಕಿಗೊಂಡು ಇತ್ತು, ಯೋಚನೆ ಮಾಡಿ!!

ಸ್ವತಃ ಕವಿ, ಸಾಹಿತಿ ಆಗಿದ್ದಿದ್ದ ಆ ರಾಜ, ಯುದ್ಧಕಾಲಲ್ಲಿ ಕತ್ತಿ ಹಿಡಿಗು, ಶಾಂತಿ ಕಾಲಲ್ಲಿ ಕಂಟ(ಮೊದಲಾಣ ಕಾಲಲ್ಲಿ ಬರವಲೆ ಉಪಯೋಗಿಸಿಗೊಂಡು ಇದ್ದ ಸಾಧನ – ಪೆನ್ನಿನ ಹಾಂಗಿರ್ತದು. ಅದಾ, ಜೋಯಿಶಪ್ಪಚ್ಚಿಯ ಹತ್ರೆ ಇದ್ದು, ಆ ನಮುನೆದು) ಹಿಡಿಗು.
ರಾಜನೇ ಸ್ವತಃ ಒಂದು ತೆಲುಗು ಪುಸ್ತಕ (ಅಮುಕ್ತಮಾಲ್ಯದ )ಬರದ್ದನಡ!! ಆಸ್ಥಾನಲ್ಲಿ ‘ಅಷ್ಟದಿಗ್ಗಜರು’ ಹೇಳಿ ಇತ್ತಿದ್ದವಡ – ಎಂಟಾನೆ(ಎಂಟಾಣೆ ಅಲ್ಲ!) ಬಲದ ಎಂಟು ಜೆನ ಘನವಿಧ್ವಾಂಸರು.
ಒಬ್ಬರಿಂದ ಒಬ್ಬ ಪಂಡಿತ. ಅಲ್ಲಸಾನಿ ಪೆದ್ದಣ್ಣ, ನಂದಿ ತಿಮ್ಮಣ್ಣ, ಮದಯ್ಯಗರಿ ಮಲ್ಲಣ್ಣ.. ತೆನಾಲಿ ರಾಮಕೃಷ್ಣನೂ ಸೇರಿ – ಒಟ್ಟು ಎಂಟು ಜೆನ.
ಸಣ್ಣ ಇಪ್ಪಗ ಈ ತೆನಾಲಿರಾಮಕೃಷ್ಣನ ಬುದ್ಧಿವಂತಿಕೆಯ ಕತೆಗೊ ಕೇಳಿಪ್ಪಿ ನಿಂಗೊ – ಕೆಲವೆಲ್ಲ ಮಕ್ಕೊಗಪ್ಪ ಹಾಂಗೆ ತಿರುಚಿರೂ, ಮೂಲತಃ ಒಳ್ಳೆಯ ಚಿಂತಕ ಆಗಿದ್ದಿದ್ದನಡ ತೆನಾಲಿರಾಮಕೃಷ್ಣ.
ಇವಿಷ್ಟೇ ಅಲ್ಲದ್ದೇ, ಚಾಟುವಿಟಲನಾಥ, ತಿಮ್ಮಣ ಕವಿ, ವ್ಯಾಸತೀರ್ಥರು – ಇಂತಾ ಎಷ್ಟೋ ವಿದ್ವಾಂಸರ ಒಳುಶಿಗೊಂಡು, ಬೆಳೆಶಿಗೊಂಡು – ರಾಜ್ಯಲ್ಲಿ ಸಾಹಿತ್ಯಿಕ ಕೃಷಿಲಿದೇ ಒಳೆ ಪಸಲು ಬಪ್ಪ ಹಾಂಗೆ ನೋಡಿಗೊಂಡನಡ.
ಈಗಾಣ ಪರಿಸ್ಥಿತಿಲಿ, ತನ್ನ ಭಾಷಣವನ್ನೇ ಇನ್ನೊಬ್ಬ ಬರದ್ದರ ಓದುವ ರಾಜ-ರಾಣಿಗೊ ಇಪ್ಪ ಕಾಲಲ್ಲಿ, ಈ ಕೃಷ್ಣದೇವರಾಯನ ಗ್ರೇಶಿ ಹೆಮ್ಮೆ ಆವುತ್ತು, ಇಲ್ಲೆಯೋ!

ಕನ್ನಡ, ತೆಲುಗು, ತಮಿಳು, ಮಲೆಯಾಳ – ಎಲ್ಲಾ ಭಾಷೆಗಳನ್ನುದೇ ಒಟ್ಟಿಂಗೆ ಸಮತೂಗುಸಿಗೊಂಡು, ಒಟ್ಟಿಂಗೆ ಬೆಳೆಶಿ, ಆಡಳ್ತೆ ನಡೆಸಿಗೊಂಡು ಸಮೃದ್ಧಿಲಿ ಇತ್ತಿದ್ದು.
ಎಲ್ಲಾ ಭಾಷೆಗೊ ಒಂದಕ್ಕೊಂದು ಪೂರಕವಾಗಿ ನೆಡಕ್ಕೊಂಡು ಇತ್ತು. ವಿದೇಶೀ ಯಾತ್ರಿಕರ ಕೈಂದ ಅವರ ಭಾಷೆಯನ್ನುದೇ ಅಲ್ಯಾಣ ವಿಧ್ವಾಂಸರು ಅಭ್ಯಾಸ ಮಾಡುಗು.
ಈಗಾಣ ಹಾಂಗೆ ಭಾಷಾ ವಿವಾದ ಅಂಬಗ ಬಂದೇ ಇತ್ತಿಲ್ಲೆ. ಭಾಶೆ ಕೇವಲ ಆಡಳ್ತೆಗೆ ಮಾಂತ್ರ, ವಿಂಗಡಣೆಗೆ ಅಲ್ಲ ಇದಾ!
ಕೆಲಸ ಸಿಕ್ಕೆಕ್ಕಾರೆ ಬುದ್ಧಿಮತ್ತೆ ಮಾಂತ್ರ ಲೆಕ್ಕ, ಜಾತಿ, ಭಾಶೆ ಲೆಕ್ಕವೇ ಅಲ್ಲ. ನಮ್ಮ ಊರಿಲಿದೇ ಮದಲಿಂಗೆ ಎಷ್ಟೋ ತೆಮುಳರು, ತೆಲುಗರು ಇದ್ದಿದ್ದವಡ, ಬರವಣಿಗೆಲಿ.
ನಮ್ಮ ಅಜ್ಜಿಯಕ್ಕೊ ಮಾತಾಡುವಗ ಕೆಲವೆಲ್ಲ ತೆಲುಗು ಶಬ್ದಂಗೊ ಬಕ್ಕು ( ಲೇದು = ಇಲ್ಲೆ ಇತ್ಯಾದಿ), ಈ ತೆಲುಗು ಅಧಿಕಾರಿಗೊ ನಮ್ಮ ಊರಿಂಗೆ ಬಂದ ಕೊಡುಗೆ ಅದು!

ಮೊದಲಾಣೋರು ಮಾಡಿದ ರಾಜ್ಯಭಾರಂದಲುದೇ ಚೆಂದಕೆ ಆಳ್ವಿಕೆ ಮಾಡಿ, ಜನಂಗಳ ನೆಮ್ಮದಿ, ಸುಖ ಶಾಂತಿಯ ಬಗೆಗೆ ವಿಶೇಷ ಗಮನ ಕೊಟ್ಟೋಂಡಿತ್ತಿದ್ದ°.
ಕಾನೂನು, ರಕ್ಷಣೆ, ಶಾಂತಿ, ರಾಜ್ಯ-ರಾಜ್ಯಗಳ ನಡುವಿನ ರಾಜತಾಂತ್ರಿಕ ಸಂಬಂಧಂಗೊ, ವ್ಯಾಪಾರ, ಒಯಿವಾಟು – ಎಲ್ಲವನ್ನುದೇ!
ಧರ್ಮರಕ್ಷಣೆಗಾಗಿ ಎಷ್ಟೋ ದೇವಸ್ಥಾನದ ರಚನೆ, ಜೀರ್ಣೋದ್ಧಾರ ನೆಡದತ್ತಡ. ಮಠ ಮಂದಿರಂಗಳ ಸ್ಥಾಪನೆ, ಬೆಳವಣಿಗೆ ಆತಡ. ಸಮಾಜದ ರಕ್ಷಣೆಗಾಗಿ ಕೋಟೆ, ಸೇನಾಸ್ಥಳ ಕಟ್ಟಿದನಡ.

ಮುಖ್ಯವಾಗಿ ಅವರ ಆರಾಧ್ಯದೈವ ‘ವಿರೂಪಾಕ್ಷ’ ದೇವರಿಂಗಾಗಿ ಮಂಟಪ, ದೇವಸ್ಥಾನ ಎಲ್ಲ ತುಂಗಭದ್ರಾ ತೀರಲ್ಲಿ ಗೌಜಿಲಿ ಕಟ್ಟಿದನಡ! ಈಗಂಗೂ ಅದೊಂದು ಅದ್ಭುತವೇ ಸರಿ!
(ಪೋರೀನಿನ ಜೆನಂಗೊ ಬಂದು ‘ಹಂಪಿ! ಇದೊಂದು ವಿಶ್ವ ಶ್ರೇಣಿಯ ಊರು’ ಹೇಳುವನ್ನಾರವೂ ನವಗೆ ಅದೆಲ್ಲ ಗೊಂತೇ ಇಲ್ಲೆ! ‘ಹಾಳುಹಂಪೆ’ ಹೇಳಿಗೊಂಡು ಇದ್ದದು ನಾವು ಅದರ!!! ಚೆ!)

ಇಷ್ಟೆಲ್ಲ ಆಗಿ – ಅವ° ನಮ್ಮ ಊರಿನ ಪುಳ್ಳಿ ಅಡ!
ತುಳುವ ವಂಶ ಹೇಳಿರೆ, ಈಗಾಣ ಕರ್ನಾಟಕ ಕರಾವಳಿಂದ ಹೋದ ಒಂದು ಕೂಸಿನ ವಂಶಸ್ಥ – ಹೇಳಿ ಲೆಕ್ಕ ಅಡ.
ನಮ್ಮ ಊರುದೇ ಆ ಮಹಾಪುರುಶನ ಆಳ್ವಿಕೆಲಿ ಇತ್ತಿದ್ದು ಹೇಳ್ತದೇ ನಮ್ಮ ಸೌಭಾಗ್ಯ.
ಅದಾ, ಬೇಕಲಕೋಟೆ – ಅಲ್ಲಿ ಕೆಲವೆಲ್ಲ ಶಾಸನ ಇದ್ದಡ, ವಿಜಯನಗರದ ಕುರುಹು ಇಪ್ಪಂತಾದ್ದು!
ಎಂಗಳ ಬೈಲಿಂದ ಕೆಲವು ಜೆನ ಮೊನ್ನೆ ಹೋಗಿ ಸೊಕ್ಕಿಕ್ಕಿಬಯಿಂದವು, ಅವರತ್ರೆ ಕೇಳಿರೆ ‘ಎಂಗೊ ನೋಡಿದ್ದಿಲ್ಲೆ’ ಹೇಳಿದವು!!

ಎಲ್ಲ ಬಿಡಿ, ಈ ಒರಿಶ ಅವನ ಪಟ್ಟಾಭಿಷೇಕದ ಐನ್ನೂರನೇ ಒರಿಶ ಅಡ.
ಕರ್ನಾಟಕ ಸರಕಾರ ಅದರ ಸ್ಮರಣಾರ್ಥ ಒಂದು ದೊಡಾ ಕಾರ್ಯಯೋಜನೆ ಮಾಡಿದ್ದಡ. ಕಳುದ ನವೆಂಬ್ರ 1ನೇ ತಾರೀಕಿಂಗೆ ಸುರು ಆಗಿ,  ನಾಳ್ತು 29ರ ಒರೆಂಗೆ ಅದು ನಡೆತ್ತಡ.
ಇಪ್ಪತ್ತೊಂಬತ್ತಕ್ಕೆ ಒಂದು ದೊಡ್ಡ ಕಾರ್ಯಕ್ರಮ ಇದ್ದಡ, ಬೆಂಗುಳೂರಿಲಿ.
ಪೆರ್ಲದಣ್ಣ ಪೋನಿಲಿ ಹೇಳಿದನಡ, ಅದಕ್ಕೆ ಗುಣಾಜೆಮಾಣಿ ಹೋವುತ್ತನಡ – ಎಡಿಯೂರಪ್ಪನೂ ಬತ್ತಡ!
ಕೃಷ್ಣದೇವಾಯನ ಅಂದ್ರಾಣ ವೈಭವದ ಆಳ್ವಿಕೆಯ ಒಳ್ಳೆತನಂಗಳ ನೆಂಪುಮಾಡ್ಳೆ ಇಪ್ಪಂತಾ ಮತ್ತೊಂದು ಸಂದರ್ಭ. ಹಿಂದೂಪರ ಇತಿಹಾಸವ ಜೋರು ಮಾತಾಡ್ಳೂ ಹೆದರುವ ಈ ಕಾಲಲ್ಲಿ, ಇಂತಾ ಕಾರ್ಯ ಮಾಡ್ತ ಸರಕಾರವ ಮೆಚ್ಚೆಕ್ಕಾದ್ದೇ!!
ಎಡಿಗಾರೆ ಹೋಗಿ ಸೇರಿಗೊಳ್ಳಿ!

ಅದೇನೇ ಇರಳಿ,
ನಮ್ಮ ಊರುದೇ ಆ ಕೃಷ್ಣದೇವರಾಯನ ಆಡಳ್ತೆಲಿ ಇತ್ತಿದ್ದಲ್ದಾ?
ನಮ್ಮ ಊರಿನ ದೇವಸ್ಥಾನಂಗಳೂ ಆ ಪುಣ್ಯಪುರುಶನ ಆಳ್ವಿಕೆಲಿ ಗೌಜಿಲಿ ಇದ್ದಿಕ್ಕಲ್ದಾ?
ಕಣಿಯಾರದ ಕೃಷ್ಣನ ಮೂರ್ತಿಯ ಗೌಜಿಯ ಹಾಂಗೆ ಎಲ್ಲಾ ದೇವಸ್ಥಾನಂಗಳಲ್ಲಿ ಇದ್ದಿಕ್ಕಲ್ದಾ?
ಕೃಷ್ಣನ ನೋಡುವಗ ಅಂತೂ ಅದೇ ಯೋಚನೆ ಬಂದುಗೊಂಡು ಇತ್ತು!!!

~~~
ಅದಾಗಲೇ ಒರಕ್ಕು ಪೂರ ಬಿಟ್ಟಿದ್ದತ್ತು!
ಗೋಪುರಂದ ಹೆರಬಂದು ಚರುಂಬುರಿ ತಿಂಬಲೆ ಹೋದೆಯೊ°.
ದೊಡ್ಡಬಾವ “ಎನ ಬೇಡ, ಆನು ಅತ್ತೆ ಮನೆಲಿ ಪೋಡಿ ತಿಂದಿಕ್ಕಿ ಬಂದದು” ಹೇದ°.
ಎಂಗೊ ತಿಂದೆಯೊ°, ಡಾಗುಟ್ರು ಬಿಲ್ಲು ಕೊಟ್ಟವು (ಎಷ್ಟಾರೂ ಡಾಗುಟ್ರ ಬಿಲ್ಲಿನಷ್ಟ್ರು ಆಗಿರ!), ಒಪಾಸು ದೇವಸ್ಥಾನಕ್ಕೆ ಬಂದೆಯೊ°..!

ಮರದಿನ ಪೆರುಮುಕಪ್ಪಚ್ಚಿಯ ನೆರೆಕರೆಲಿ ಊಟಕ್ಕೆ ಹೋಗೆಡದೋ – ಅಜ್ಜಕಾನ ಬಾವಂಗೆ ಪುತ್ತೂರಿಂಗೆ ಬೇರೆ ಹೋಪಲಿತ್ತಡ!
ಸಂಭ್ರಮದ ಸುತ್ತುಗೊ ನೋಡಿದೆಯೊ°. ದರ್ಶನ ಬಲಿ ಆದ ಕೂಡ್ಳೇ ಎಂಗೊ ಹೆರಟೆಯೊ, ಅಂಬೆರ್ಪಿಲಿ.
ಯಬೊ! ಆ ಚಳಿಗೆ ನಡುಗಿಯೋಂಡು ಬೈಕ್ಕಿಲಿ ಕೂಪದುದೇ ಒಂದು “ದರ್ಶನ ಬಲಿಯೇ” ಆತಾ!!

ಬಂದು ಮನಗೆ ಎತ್ತಿದ ಮತ್ತೆ, ಈಗ ನಿಂಗೊಗೆ ಈ ಶುದ್ದಿ ಹೇಳುವನ್ನಾರವೂ ಕೃಷ್ಣದೇವರಾಯಂದೇ ತಲೆಲಿ ತಿರುಗಿಯೊಂಡು ಇದ್ದು!!

(ಸೂ: ಕೃಷ್ಣದೇವರಾಯನ ಜಾತಕಪಟ ಇಲ್ಲಿದ್ದು: http://en.wikipedia.org/wiki/Krishnadevaraya )

ಒಂದೊಪ್ಪ:
ಅಂದು ಹಿಂದೂಧರ್ಮಕ್ಕಾಗಿ ಶಂಕರಾಚಾರ್ಯ ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿದವು.
ಅದೇ ಪೀಠದ ಈಗಾಣ ಶಂಕರಾಚಾರ್ಯರು ಕನಿಷ್ಠ ‘ಹಿಂದೂ ಸಮಾಜೋತ್ಸವ’ಕ್ಕೂ ಬತ್ತವಿಲ್ಲೆ!
ಎಂತಾ ವಿಪರ್ಯಾಸ!!!

ಒಪ್ಪಣ್ಣ

   

You may also like...

13 Responses

 1. ಗುಣಾಜೆ ಮಹೇಶ says:

  ಒಪ್ಪಣ್ಣ, ನಿನ್ನ ಲೇಖನ ಒಪ್ಪ ಇದ್ದು. ಈ ಬ್ಲೋಗ್ ಬಗ್ಗೆ ಮೊನ್ನೆಯಷ್ಟೇ ಗೊಂತಾದ್ದು. ನಿನಗೆ ಧನ್ಯವಾದಂಗೊ.

 2. amma says:

  bhari laikaidu oppanno.anthu kaniyarayanada bagge joshili baradde kushi aatu.neenude hoide heli eega gontathu.dodda bava atte maneli podi tindadara
  oppanna kai katti nodigondu kooddadu mantrava chami kunhiya hange.
  hangare oppanna gattiga.avanu gammattu palavu hodadikku heli kanthu.entakku ava sikkire keluva.tumba kushili oppannanu jatre mugushi banda aduve ondu kushi.
  ajjakana bavanatre kelekku oppannanottinge jatrage hoideya keli…

 3. ಲಾಯ್ಕಾಯಿದು..ವಿಜಯ ನಗರ ಸಾಮ್ರಜ್ಯದ ಬಗ್ಗೆ ಶಾಲೆಲಿ ಪಾಟಲ್ಲಿ ಓದಿ ಮಾತ್ರ ಗೊಂರ್ತಿತ್ತಷ್ಟೆ ರಜ. ಈ ಶುದ್ದಿ ಓದಿ ಸುಮಾರು ವಿಷಯ ಗೊಂತಾತದ… 🙂

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *