Oppanna.com

ಚೆಂದದ ಹಕ್ಕಿ ಛಂದ ಹುಡ್ಕಿ ಹಾರಿತ್ತು ..!

ಬರದೋರು :   ಒಪ್ಪಣ್ಣ    on   26/02/2016    4 ಒಪ್ಪಂಗೊ

ಮೊನ್ನೆ ಕೆಮ್ಕಲ್ಲಿ ಅಡಕ್ಕೆ ಕ್ರಯ ಕೇಳುಲೆ ಬದಿಯೆಡ್ಕಕ್ಕೆ ಹೋಗಿತ್ತಿದ್ದನೋ – ಬಪ್ಪಗ ಪಂಜಾಜೆ ಮಾವ° ಸಿಕ್ಕಿದವು.
ಅವು ಬದಿಯೆಡ್ಕಂದ ಕೊಡೆಯಾಲಕ್ಕೆ ಹೆರಟೋರು, ಮುಜುಂಗರೆ ಒರೆಂಗೆ ಒಪ್ಪಣ್ಣಂದೇ ಅವರ ಒಟ್ಟಿಂಗೆ ಬಂದ ಕಾರಣ ಒಪ್ಪಣ್ಣ ವಿಶೇಷವಾಗಿ ಬೇರೆ ಟಿಗೇಟು ತೆಗೇಕಾಗಿ ಬಯಿಂದಿಲ್ಲೆ.
ಬಪ್ಪ ದಾರಿಲಿಯೂ ಹಾಂಗೇ – ತುಂಬ ಸಂಗತಿಗಳ ಮಾತಾಡಿಗೊಂಡು ಬಂದ್ಸು. ಈಗಾಣ ರಾಜಕೀಯಂಗೊ, ಈಗಾಣ ಸಾಹಿತಿಗೊ, ಈಗಾಣ ವಿದ್ಯಾರ್ಥಿಗೊ, ಈಗಾಣ ಕಲಾವಿದರುಗೊ – ಹೀಂಗಿರ್ಸ ಹಲವು ಸಂಗತಿಗೊ ಅವಕ್ಕೆ ಸದಾ ಮಾಹಿತಿಪೂರ್ಣವಾಗಿ ಮಾತಾಡ್ಳೆ ಅರಡಿತ್ತು. ಈಗಾಣದ್ದು ಮಾಂತ್ರ ಅಲ್ಲ, ಹಳತ್ತರ ಒಟ್ಟಿಂಗೆ ತುಲನೆ ಮಾಡಿ ವಿಮರ್ಶೆ ಮಾಡುವ ತಿಳಿವಳಿಕೆಯೂ, ವಿವೇಚನೆಯೂ ಇಪ್ಪ ಕಾರಣ – ಸಮಾಜದ ಬದಲಾವಣೆಗಳ ಪ್ರತ್ಯಕ್ಷ ದರ್ಶನ ಅವರ ಹತ್ತರೆ ಮಾತಾಡಿರೆ ಗೊಂತಾವುತ್ತು.
ಅಂಗುಡಿ ಇಬ್ರಾಯಿಯ ಮಗ ಕೇಸರಿ ಬಾವುಟ ಹರಿವಲೆ ಹೋಗಿ ಸಿಕ್ಕಿ ಬಿದ್ದ ಸಂಗತಿ ಬಪ್ಪಗ – ಹಳೆ ಕಾಲದ ಮಹಾ ಧರ್ಮ ಸಹಿಷ್ಣು ಶೆರೋಳು ಸಾಹೇಬರ ನೆಂಪು ಮಾಡುಗು.
ಈಗಾಣ ಯಕ್ಷಗಾನ ಕಲಾವಿದರ ನಿಷ್ಠೆ ನಡವಳಿಕೆಗಳ ಹೇಳುವಗ ಹಳೆಕಾಲದ ಶೇಣಿ ಅಜ್ಜನ ನೆಂಪು ಮಾಡುಗು.
ಈಗಾಣ ಕಾಲದ ರಾಜಕಾರಣಿಗೊ ಪೈಶೆ ತಿಂಬದು ಕಾಂಬಗ ಹಳೆ ಕಾಲದ ಜನಸಂಘದ ನಿಷ್ಠೆಯ ನೆಂಪು ಮಾಡುಗು
– ಹೀಂಗೆ ಆಧುನಿಕ ಯೇವದಿದ್ದೋ, ಅದರಿಂದ ಚೆಂದದ್ದು, ಅದರಿಂದ ಹಳತ್ತು, ಚಿನ್ನದಾಂಗಿರ್ತ ಹಳತ್ತರ ನೋಡಿದ್ದವು ಅವು.
ಹಾಂಗಾಗಿ ಅವಕ್ಕೆ ಹೇಳುವ ಅಧಿಕಾರವೂ, ಜ್ಞಾನವೂ ಎರಡೂ ಇದ್ದು – ಹೇಳುಸ್ಸು ಒಪ್ಪಣ್ಣಂಗೂ ಅರಡಿಗು.

ಮುಜುಂಗರೆ ಒರೆಂಗೆ ಅವರಒಟ್ಟಿಂಗೆ ಬಂದ್ಸರಲ್ಲಿ ಎರಡು ಲಾಭ ಆತು – ಒಂದು ಒಪ್ಪಣ್ಣ ಟಿಗೇಟು ತೆಗವಲೆ ಕಿಸಗೆ ಕೈ ಹಾಕೆಕ್ಕಾಗಿ ಬಯಿಂದಿಲ್ಲೆ. ಇನ್ನೊಂದು – ಮುಳಿಯಬಾವನ ಪುಸ್ತಕ ಬಿಡುಗಡೆಯ ಬಗ್ಗೆ ಸವಿವರ ಶುದ್ದಿ ತಿಳುಶಿದ್ದು.

ಹೋ- ಅದಪ್ಪು, ಹೇಳಿದಾಂಗೆ ನಿಂಗೊಗೆ “ಹಾಡಾಯಿತು ಹಕ್ಕಿ” ಪುಸ್ತಕದ ವಿಷಯ ಗೊಂತಾಯಿದಲ್ದ?
~
ಪಂಜಾಜೆ ಮಾವನ ಪ್ರಕಾರ, ನಮ್ಮ ಮುಳಿಯ ಭಾವಂಗೆ ರಕ್ತಗತವಾಗಿ ಬಂದ್ಸು ಹೇದರೆ ಅದು ಎರಡು ಸಂಗತಿ ಅಡ.
ಒಂದು ಭಾವ, ಎರಡನೇದು ತಾಳ.
ಭಾವ – ಅಪ್ಪಾದ್ದದೆ, ಬೈಲಿಲಿ ಸುಮಾರು ಜೆನ ಬಾವಂದ್ರು ಇದ್ದವು ಅವಕ್ಕೆ ಹೇದೆ ತಮಾಶೆಗೆ.
ಹಾಂಗಲ್ಲದೋ – ಭಾವ ಹೇದರೆ ಆಂತರ್ಯದ ಭಾವ; ಭಾವನೆಗೊ. ವರ್ಣನೆ ಮಾಡ್ಲಿರ್ಸು – ಹೇದವು.
ಮತ್ತೆ ಇನ್ನೊಂದು? – ಇನ್ನೊಂದು ತಾಳಜ್ಞಾನ.
ಕಲಾಸಕ್ತಿಗೆ ತಾಳಜ್ಞಾನ ಮುಖ್ಯ. ಯಕ್ಷಗಾನ, ಮದ್ದಳೆ, ಛಂದಸ್ಸು – ಎಲ್ಲದಕ್ಕೂ ಮೂಲ ಆಗಿಪ್ಪ ಮಾತ್ರಾಕಾಲ – ತಾಳಜ್ಞಾನ ಅತ್ಯಂತ ಮುಖ್ಯ – ಇದೆರಡೂ ಅವಕ್ಕೆ ರಕ್ತಗತವಾದ ಕಲೆ – ಹೇದವು.
ಇದರಿಂದಾಗಿ ಅವಕ್ಕೆ ಪದ್ಯಂಗೊ ಬರವಲೆ ಎಡಿಗಾವುತ್ತು,
ಚೆಂದದ ಪದ್ಯಂಗಳಲ್ಲಿ ತಾಳವೂ ಬೇಕು, ಭಾವವೂ ಬೇಕು – ಹೇದು ಮತ್ತೊಂದರಿ ವಿವರುಸಿ ತೋರ್ಸಿದವು.
~

ನಮ್ಮ ಬೈಲಿಲಿ ತುಂಬ ಹಿಂದಂದಲೇ ಹಲವು ಪದ್ಯಂಗೊ ಮುಳಿಯಭಾವನಿಂದ ರಚಿತವಾಯಿದು.
ಹಾಂಗೆ ನೋಡ್ತಾರೆ ಮುಳಿಯ ಭಾವ ಬೈಲಿಂಗೆ ಹೊಗ್ಗಿದ್ದದೇ ಕವನಲ್ಲಿ ಹೇದು ಹೇಳುಲಕ್ಕು!
ಆ ಪದ್ಯಂಗಳ ಎಲ್ಲ ವಿಶೇಷ ಎಂತ್ಸರ ಹೇದರೆ – ಅದು ನಿರ್ದಿಷ್ಠ ಛಂದಸ್ಸಿಲಿ ನಿಬದ್ಧ ಆಗಿರ್ಸು.
ವೃತ್ತವೋ ಛಂದಸ್ಸೋ ಷಟ್ಪದಿಯೋ – ಯೇವದಾರು ನಿಖರತೆಲಿ ಸಾಗುತ್ತು ಅವರ ಬರವಣಿಗೆಗೊ.
ಬರೇ ಛಂದಸ್ಸು ಮಾಂತ್ರ ನೋಡಿರೆ ಸಾಕೋ? ಅಲ್ಲ.
ಆ ಛಂದಸ್ಸುಗೊ ಬರೇ ಪೂರಕವಾಗಿ ಇಪ್ಪದು ಅಷ್ಟೆ – ಯೇವದಕ್ಕೆ?
ಆ ಪದ್ಯಂಗೊ ತೋರ್ಸುವ ಅಭೂತಪೂರ್ವ ಭಾವಕ್ಕೆ.
ಭಾವ ಸೃಷ್ಟಿ ಆಯೇಕಾರೆ ಅಂತೆ ಆವುತ್ತಿಲ್ಲೆ – ಸಾಹಿತ್ಯ ಅರಡಿಯೇಕು.
ಚೆಂದದ ಸಾಹಿತ್ಯ ಓದಿರೆ ಮಾಂತ್ರ ಚೆಂದದ ಭಾವ ಹುಟ್ಟುಗು. ಕಾರ್ನಾಡಿನ ನಾಟಕ ಓದಿರೆ ಆರಿಂಗಾರು ಚೆಂದದ ಭಾವನೆಗೊ ಬಪ್ಪಲೆ ಸಾಧ್ಯವೋ – ಕೇಟವು.
ಅದೇ ಅದೇ – ಹೇದೆ.

ಚೆಂದದ ಪದ್ಯ ಬರವಲೆ ಬೇಕಾದ ಅರ್ಹತೆಗೊ – ಒಂದು ಚೆಂದದದ ಸಾಹಿತ್ಯ, ಅದರ್ಲಿಪ್ಪ ಚೆಂದದ ಭಾವ ಅದಕ್ಕೊಪ್ಪುವ ಲಯ. ಇದೆರಡೂ ಮುಳಿಯಭಾವನಲ್ಲಿ ರಕ್ತಗತವಾಗಿ ಮೇಳೈಸಿದ್ದು.
ಈ ಸಂಗತಿ ನಾವು ಬೈಲಿಲಿ ಅವು ಶುದ್ದಿ ಹೇಳುಲೆ ಸುರು ಮಾಡಿದ ಲಾಗಾಯ್ತಿಂದಲೇ ಕಾಣ್ತಾ ಇದ್ದು.

ಮೊನ್ನೆ ಒಂದು ಹೆಜ್ಜೆ ಮುಂದೆ ಹೋಗಿ ಒಂದು ಅಮೋಘ ಕಾರ್ಯ ಆತು.
ಅದೆಂತರ?
~

ಷಟ್ಪದಿ, ವೃತ್ತಂಗಳಲ್ಲಿ ಕನ್ನಡ ಪದ್ಯಂಗಳ ಬರದು ಪುಸ್ತಕ ಮಾಡಿ ಬಿಡುಗಡೆ ಮಾಡಿದ್ದದು.
ಎಷ್ಟೋ ಶತಮಾನದ ಹಿಂದಾಣ ಶುದ್ದಿ ಅಲ್ಲ – ಕಳುದ ವಾರದ್ದು.
ಕನ್ನಡ ಭಾಶೆಲಿ ಶುದ್ಧ ಚಂದಸ್ಸಿಲಿ ಕಾವ್ಯಂಗೊ ಬಂದುಗೊಂಡು ಇದ್ದದು ಯೇವ ಕಾಲದ ಸಂಗತಿ?
ಅಷ್ಟು ಸಮೆಯಂದ ಈಗ ಒರೆಂಗೆ ಆ ನಮುನೆ ಸಾಹಸ ಮಾಡಿದ್ದವೇ ಇಲ್ಲೆ.
ಈಗಾಣ ಕನ್ನಡ ಪದ್ಯಂಗೊ ಹೇದರೆ – ಅದರ್ಲಿ ಅರೆವಾಶಿ ಇಂಗ್ಳೀಶು ಶಬ್ದಂಗೊ. ಮತ್ತೆ ಅರೆವಾಶಿ ಡಿಶುಂ ಡಿಶುಂ ಶಬ್ದಂಗೊ. ಬರ್ಖತ್ತಿಂಗೆ ಮನೆಯೋರು ಎಲ್ಲೋರುದೇ ಒಟ್ಟಾಗಿ ಕೂದು ಕೇಳ್ತ ನಮುನೆ ಪದ್ಯಂಗೊ ಸದ್ಯ ಬಂದದು ಇಲ್ಲೆ.
ಆ ನಮುನೆ ಪದ್ಯಂಗೊ ಮತ್ತೆ ಪುನಾ ಬರೆಕ್ಕಾರೆ – ಭಾವವೂ, ತಾಳವೂ ಎರಡೂ ಅರಡಿತ್ತೋರು ಆಯೆಕ್ಕು.
ಅಷ್ಟು ಅರಡಿಯೆಕ್ಕಾರೆ ಸಾಹಿತ್ಯ ಜ್ಞಾನ ಬೇಕು.
ಆ ಪ್ರತಿಭೆಂದಾಗಿಯೇ – ಕನ್ನಡಲ್ಲಿ ಛಂದೋಬದ್ಧ ಕವನ ತೇಲಿ ಬಿಟ್ಟವು! ಪುಸ್ತಕ ರೂಪಲ್ಲಿ!
ಶಟ್ಪದಿಗಳ, ಚಂದಸ್ಸುಗಳ, ಮಾತ್ರೆಗಳ ನಿಬದ್ಧ ಮಾಡಿದ ಆ ಹೆರಿಯೋರಿಂಗೆ ಸಲ್ಲುಸಿದ ಗೌರವ ಅದು!
ಹೇಳಿದವು ಪಂಜಾಜೆ ಮಾವ°.
ಒಟ್ಟಿಂಗೆ ಇದ್ದಿದ್ದರೆ ಇನ್ನೂ ಹಲವು ವಿಚಾರಂಗೊ ಬತ್ತಿತು, ಆದರೆ ಮುಜುಂಗರೆ ಎತ್ತಿತ್ತು. ಈಗಳೇ ಇಳಿಯದ್ರೆ ಹಾಲಿನ ಡೈರಿಲಿ ಹಾಲು ಸಿಕ್ಕ ಇದಾ!
ಹಾಂಗೆ, ಇನ್ನೊಂದರಿ ಮಾತಾಡುವೊ° – ಹೇಳಿಕ್ಕಿ ಇಳುದೆ.
~

ಈ ಕಾರ್ಯ ನಮ್ಮ ಬೈಲಿಂದ ನೆಡತ್ತು ಹೇಳುಸ್ಸು ನಮ್ಮೆಲ್ಲರಿಂಗೆ ಹೆಮ್ಮೆಯ ವಿಷಯ.
ಮುಳಿಯ ಭಾವಾವನ ಸಾಹಿತ್ಯ ರಚನೆಗೆ ಬೈಲಿನ ಗೆದ್ದೆಗೊ ಜಾಗೆ ಆತು.
ಅಲ್ಲಿ ಹುಟ್ಟಿದ ಸಣ್ಣ ಗೆಡು – ಬೆಳದು ದೊಡ್ಡ ಮರ ಆತು.
ಆ ಮರಲ್ಲಿ ಸುಮಾರು ಹಕ್ಕಿಗೊ ಗೂಡು ಕಟ್ಟಿದವು.

ಈಗ ಸುರೂವಾಣ ಹಕ್ಕಿ ಹಾರಿತ್ತು – ದೂರ, ಎತ್ತರ ಹಾರಲಿ – ತುಂಬ ದೂರಂದಲೇ “ಮುಳಿಯಭಾವನ ಹಕ್ಕಿ” – ಹೇದು ಎಲ್ಲೋರುದೇ ಗುರ್ತ ಹಿಡುವ ಹಾಂಗಾಗಲಿ.
ಆ ಹಕ್ಕಿ ಬೈಲಿಲಿ ಬೆಳದ ಮರಂದ ಹೆರಟದು – ಹೇಳುಸ್ಸು ಎಲ್ಲೋರಿಂಗೂ ಗೊಂತಾಗಲಿ.
ಮುಳಿಯ ಬಾವನ ಬತ್ತಳಿಕೆಂದ ಇನ್ನೂ ಹಲವು ಹಕ್ಕಿಗೊ, ಬೇರೆಬೇರೆ ಹೊಡೆಂಗೆ ಹಾರಲಿ.

ಅವರ ಸಾಹಿತ್ಯ ಕೃಷಿ ವೃದ್ಧಿ ಆಗಲಿ.
ಬೈಲಿನ ಎಲ್ಲೋರ ಸಂಪೂರ್ಣ ಸಹಕಾರ ಅವಕ್ಕೆ ಸಿಕ್ಕಲಿ.
ಎಲ್ಲೋರು ಸೇರಿ ಮುಳಿಯ ಭಾವನ ಅಭಿನಂದನೆ ಹೇಳುವೊ° – ಹೇಳುಸ್ಸು ಬೈಲಿನ ಹಾರೈಕೆ.

~
ಒಂದೊಪ್ಪ: ಭಾವ-ತಾಳ ಸಹಿತ ರೆಕ್ಕೆ ಕಟ್ಟಿ ಹಾರಿದ ಹಕ್ಕಿ ರಾಗ ಹಿಡುದು ಹಾಡುವ ಹಾಂಗಾಗಲಿ.

4 thoughts on “ಚೆಂದದ ಹಕ್ಕಿ ಛಂದ ಹುಡ್ಕಿ ಹಾರಿತ್ತು ..!

  1. ಕಾರ್ಯಕ್ರಮ ಚೆ೦ದಕೆ ಆತು . ಕಬ್ಬಿನಾಲೆ , ಕೊರ್ಗಿ ಉಪಾಧ್ಯಾಯರ ವಿದ್ವತ್ಪೂರ್ಣ ಮಾತುಗೋ ಪ್ರೇಕ್ಷಕರ ಆಸಕ್ತಿ ಹೆಚ್ಚುಸಿತ್ತು . ಇನ್ನು ದೀಪಿಕಾನ ಹಾಡುಗಾರಿಕೆ ಅಮೋಘ , ಕವಿತೆಗಳ ಭಾವವ ಚೆ೦ದಕೆ ಅನುಭವಿಸಿ ಹಾಡಿದ್ದು ಕೊಶಿ ಕೊಟ್ಟತ್ತು.
    ಸದ್ಯ ಪ್ರತಿಗೊ ಬೆ೦ಗಳೂರು ಗಿರಿನಗರಲ್ಲಿ ಶ್ರೀ ಭಾರತೀ ಪ್ರಕಾಶನದ ಮಳಿಗೆ , ಜಯನಗರದ ಟೋಟಲ್ ಕನ್ನಡ ಮಳಿಗೆ , ಟೋಟಲ್ ಕನ್ನಡ ಅಂತರ್ಜಾಲ ತಾಣ ಲ್ಲಿ ಲಭ್ಯ . ಮ೦ಗ್ಳೂರಿ೦ಗೆ ಬಪ್ಪ ವಾರಾಂತ್ಯಲ್ಲಿ ಬಪ್ಪಗ ತೆಕ್ಕೊ೦ಡು ಬತ್ತೆ.
    ಎಲ್ಲಾ ಬೈಲಿನ ಬಂಧುಗೋ ಮಡಗಿದ ಪ್ರೀತಿಗೆ , ಕೊಡ್ತಾ ಇಪ್ಪ ಪ್ರೋತ್ಸಾಹಕ್ಕೆ ಧನ್ಯವಾದ .

  2. ಮುಳಿಯ ಭಾವಯ್ಯಂಗೆ ಅಭಿನಂದನೆಗೊ. ಹೀಂಗಿಪ್ಪ ಇನ್ನಷ್ಟು ಹಕ್ಕಿಗೊ ಸಾಹಿತ್ಯ ಕ್ಷೇತ್ರಕ್ಕೆ ಒದಗಿ ಬರಲಿ. ಈಗಾಣ ಕಾಲದ ನವ್ಯ ಕಾವ್ಯ ಬರದು ಪುಸ್ತಕ ಪ್ರಕಟ ಮಾಡುತ್ತವರ ಕಣ್ಣು ತೆರಸಲಿ ಈ ಸಂಕಲನ. ಮಂಗಳೂರಿಲ್ಲಿ ಈಗ ಈ ಪುಸ್ತಕ ಲಭ್ಯ ಇದ್ದೊ ಭಾವಯ್ಯ ?

  3. ಅಭಿನಂದನೆಗೊ ಮುಳಿಯ ಭಾವಂಗೆ… ಹಾಡು ಹಾರುತ ಬಾನ ಹರಹಿಲಿ ಹಕ್ಕಿಯಾಗಲಿ ಪುಸ್ತಕ….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×