ಧ್ವನ್ಯಾರ್ಥ ಇಲ್ಲದ್ದರೂ, ಭಾವಾರ್ಥ ಇಪ್ಪ ‘ಪರಿಭಾಶೆಯ’ ಪದಾರ್ಥಂಗೊ…

September 9, 2011 ರ 12:00 amಗೆ ನಮ್ಮ ಬರದ್ದು, ಇದುವರೆಗೆ 70 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶಂಬಜ್ಜ° ಮಾತಾಡುವಗ ಧಾರಾಳ ಪಳಮ್ಮೆಗಳ ಸೇರುಸುಗು.
ಅವು ಸೇರುಸುಗು ಹೇಳ್ತರಿಂದಲೂ, ಅವು ಮಾತಾಡುವಗ ಸೇರಿ ಹೋವುತ್ತು.
ಆಯಾ ಸಂದರ್ಭಕ್ಕೆ ಹೊಂದುತ್ತ ನಮುನೆ, ವೆಗ್ತಿತ್ವಂಗಳ ಭಾವನೆಯ ಅಭಿವ್ಯಕ್ತಿ ಮಾಡ್ತ ನಮುನೆಯ – ಅನುಭವಪೂರಿತ ಗಾದೆಗಳ ಹೇಳಿರೆ, ಎದುರು ಇಪ್ಪೋನಿಂಗೆ ವಿಶಯ, ವಿಚಾರಂಗೊ ಬೇಗ ತಲಗೆ ಇಳಿತ್ತು.
ಈ ನಮುನೆ ಗಾದೆಗಳಲ್ಲಿ ನೆಗೆಯೂ ಬಕ್ಕು, ವಿಶಯವೂ ಅರ್ತ ಅಕ್ಕು – ಅದೂ ಅಲ್ಲದ್ದೆ, ಹತ್ತು ವಾಕ್ಯದ ವಿವರಣೆ ಕೇವಲ ಒಂದೇ ವಾಕ್ಯದ ಗಾದೆಲಿ ನಿಮುರ್ತಿ ಅಕ್ಕು!
ಹಾಂಗಾಗಿಯೇ, ಎಷ್ಟೋ ಅಜ್ಜಂದ್ರ ಬಾಯಿಲಿ ಇದ್ದತ್ತು – ಶಂಬಜ್ಜನ ಬಾಯಿಲಿಯೂ ಇದ್ದತ್ತು!

ಈಗ ರಂಗಮಾವಂದೇ ಹಾಂಗೇ – ಎಂತಾರು ಮಾತಾಡುವಗ ಅಪುರೂಪಲ್ಲಿ ಪಳಮ್ಮೆಗಳ ಹೇಳ್ತದೂ ಇದ್ದು.
ಹಳೇ ಪಳಮ್ಮೆಗೊ ರಜ ಕಮ್ಮಿಯೇ ಆದರೂ, ಹಳೆ ಪರಿಭಾಶೆಗೊ ಬಂದೇ ಬಕ್ಕು.

ಇದೆಂತರ ಈ ಪರಿಭಾಶೆ?
ಭಾಶೆಲಿ ಬೆರಕ್ಕೆ ಆಗಿ ಇಪ್ಪ ಹಾಸ್ಯವನ್ನೂ ಒಳಗೊಂಡಿಪ್ಪ ಶಬ್ದಂಗೊ..
ಯೇವದಾರು ವಿಶಯ ವರ್ಣನೆ ಮಾಡುವಗ ಎಡೆಲಿ ಬಳಸುತ್ತ ಒಂದೊಂದು ಪದಗುಚ್ಛ.
ಇಡೀ ಭಾವನೆಯ ಒಂದೇ ಶಬ್ದಲ್ಲಿ ಹೇಳ್ಳಕ್ಕಾದ ಶೆಬ್ದಗುಚ್ಛ!
ಇಡೀ ಮಾತಿಂಗೆ ಅರ್ಥ, ರುಚಿ ಕೊಡ್ತ; ಸ್ವತಃ ಅರ್ಥವೇ ಇಲ್ಲದ್ದ ಬೆಂದಿ-ಪದಾರ್ಥ!

ಹೇಂಗಿರ್ತದು ಹೇಳಿ ಅಂದಾಜಿ ಆತೋ?
ಉದಾಹರಣೆಗೆ ಹೇಳ್ತರೆ, ಈ ಸರ್ತಿ ಮಳೆ ಜಾ..ಸ್ತಿ, ಎಲ್ಲೋರಿಂಗೂ ಗೊಂತಿಪ್ಪದೇ.
ನಿತ್ಯವೂ ಮಳೆ, ದಿನ ಹೋದಾಂಗೇ ಅಡಕ್ಕೆಗೆ ಕೊಳೆರೋಗದ ಸಾಧ್ಯತೆ ಜಾಸ್ತಿಯೇ ಆಗಿ ಹೋವುತ್ತು.
ಈ ನಮುನೆ ಮಳೆ ಬಂದರೆ ಮೂರ್ನೇ ಸರ್ತಿ ಮದ್ದು ಬಿಡದ್ದೆ ಕಳೀಯ – ಹೇಳ್ತದು ರಂಗಮಾವನ ಅಭಿಪ್ರಾಯ.
ಆದರೆ, ಮದ್ದು ಬಿಡೇಕಾರೆ ಮಳೆ ಬಿಡ್ಳೇ ಬೇಕಲ್ಲದೋ?! – ಈಗ ನಾಕು ದಿನಂದ ಬಿಡದ್ದೇ ಮಳೆ.
ನಾಕು ದಿನಂದ ಮದಲು ಒಂದು ದಿನ ಒಳ್ಳೆತ ಬೆಳಿಕ್ಕಿರಿ (ಬೆಶಿಲು) ಇದ್ದತ್ತು.
ಚೆ, ಆ ದಿನ ಮದ್ದು ಬಿಟ್ಟಿಕ್ಕಲಾವುತಿತ್ತು
ಹೇಳಿ ಅನುಸಿದ ರಂಗಮಾವಂಗೆ “ಅಯ್ಯನಮಂಡೆ” – ಹೇಳಿ ಆವುತ್ತಾ ಇದ್ದು!!

ಅದಾ ಗಮನುಸಿದಿರೋ – ಅಯ್ಯನಮಂಡೆ ಹೇಳಿರೆ, ಅದಕ್ಕೆ ಸ್ವತಃ ಬೇರೆ ಎಂತೂ ಅರ್ತ ಇರ, ಪಶ್ಚಾತ್ತಾಪ ಸೂಚಕ ತಮಾಶೆ ಶಬ್ದ ಅದು.
ಅದರ ಕೇಳಿದ ಒಪ್ಪಣ್ಣಂಗೆ ರಜ ನೆಗೆ ಬಂದೇ ಬಕ್ಕು; ಆದರೆ ನೆಗೆಮಾಡಿರೆ ರಂಗಮಾವಂಗೆ ಪಿಸುರು ಜೋರೇ ಆಗಿ ಹೋಕಿದಾ! 😉
~

ಅಂದೊಂದರಿ ಬೈಲಿಲಿ ಕೊಂಡಾಟಲ್ಲಿ ದೆನಿಗೆಳುತ್ತ ಕೊಂಞೆಶಬ್ದಂಗಳ ನಾವು ಪಟ್ಟಿ ಮಾಡಿದ್ದು ಬೈಲಿಲಿ. (ಸಂಕೊಲೆ)
ಅದಾದ ಮತ್ತೆ ನಮ್ಮ ಬೈಲಿಲೇ ಕೇಳ್ತ ನಮುನೆಯ ‘ಬೈಗಳುಗಳ’ ಶೆಬ್ದಂಗಳನ್ನೂ ಜೆಮೆ ಮಾಡಿಗೊಂಡು ಹೋಯಿದು (ಸಂಕೊಲೆ).
ಹಾಂಗೇ, ಈಗ ಈ ನಮುನೆ ಮಾತಿನೆಡೆಯ ಪರಿಭಾಶೆಗಳ ಏಕೆ ಸೇರುಸಿಗೊಂಡು ಹೋಪಲಾಗ – ಹೇಳಿ ಕಂಡತ್ತು!
ಹೇಂಗೆ  – ಪಟ್ಟಿ ಮಾಡುವನೋ?
ಒಪ್ಪಣ್ಣ ಒಬ್ಬನೇ ಮಾಡಿರೆ ಪೂರ್ತಿ ಆಗ, ಬೈಲಿನೋರು ಎಲ್ಲೋರುದೇ ಸೇರಿರೆ ಸಮಗಟ್ಟು ಅಕ್ಕಿದಾ!
ಪ್ರತಿ ಶೆಬ್ದ ಆದ ಮತ್ತೆಯೂ ಅದರ ಉಪಯೋಗ ಹೇಂಗೆ – ಹೇಳ್ತ ಉದಾಹರಣೆಯನ್ನೂ ಮಾತಾಡಿಗೊಂಬೊ° – ಅಷ್ಟಪ್ಪಗ ಬಳಕೆ ಮಾಡ್ತೋನಿಂಗೆ ಸುಲಾಬ ಅಕ್ಕಿದಾ! :-)

~
ಸೂ: ಪಟ್ಟಿಮಾಡುವಗ ‘ಆದಿಕ್ಷಾಂತ’ ಕ್ರಮಲ್ಲೇ ಮಾಡಿರೆ ಜೋಡುಸಲೆ ಕೊಶೀ. ಅಲ್ಲದೋ?

ಅ:
ಅಯ್ಯನ ಮಂಡೆ:
ಪಶ್ಚಾತ್ತಾಪ ಸೂಚಕ ಶೆಬ್ದ!
ಮಾಡಿದ ತಪ್ಪಿನ ಬಗ್ಗೆ ಪಶ್ಚಾತ್ತಾಪ ಪಟ್ಟುಗೊಂಡು ಈ ಮಾತಿನ ಹೇಳುಗು.
ಯೇವದೋ ಒಂದು ಕಾರ್ಯ ಮಾಡೇಕಾತು – ಆದರೆ ಅಂಬಗ ಮಾಡಿದ್ದಿಲ್ಲೆ / ಮಾಡ್ಳಾವುತಿತಿಲ್ಲೆ – ಹೇಳ್ತ ಸಂದರ್ಭವ ವಿವರುಸುವಗ ಈ ಮಾತಿನ ಹೇಳ್ತವು ರಂಗಮಾವ°. ಒಂದು ಉದಾಹರಣೆ ಆಗಳೇ ಮಾತಾಡಿದ್ದು.
ಇನ್ನೊಂದು ಬೇಕಾರೆ,
ಇದಾ, ನಮ್ಮ ನೆಕ್ರಾಜೆಅಪ್ಪಚ್ಚಿಯ ತಮ್ಮ ಇದ್ದವಲ್ಲದೋ – ನೆಕ್ರಾಜೆಯ ಅವರ ಚಿನ್ನದ ಹಾಂಗಿರ್ತ ಜಾಗೆಯ ಮೂರುಕಾಸಿಂಗೆ ಮಾರಿಕ್ಕಿ, ಪೇಟೆಲಿ ಮನೆ ಮಾಡಿದವು – ಹತ್ತೊರಿಶ ಮದಲು. ಈಗಾಣ ರಬ್ಬರಿನ ಕ್ರಯಕ್ಕೆ ಜಾಗೆಯ ಮಡಿಕ್ಕೊಂಬಲಾವುತಿತು – ಹೇಳಿ ಕಾಂಬಗ ಅವಕ್ಕೆ “ಅಯ್ಯನಮಂಡೆ” ಆವುತ್ತು!

ಅಜ್ಜಸುರಿಯ:
ಅರೆ! / ಅಯ್ಯೊ! – ಹೇಳಿದ ಹಾಂಗೇ, ಇನ್ನೊಂದು ಶಬ್ದ.
ಇದು ನಮ್ಮ ಹಳಬ್ಬರ ಬಾಯಿಲಿ ಬಿಟ್ರೆ ಬೇರೆ ಎಲ್ಲಿಯೂ ಕೇಳಿದ ಹಾಂಗೆ ಆವುತ್ತಿಲ್ಲೆ ಇದಾ!
ಇದರ ವ್ಯಾಪ್ತಿ ಅರೆ! – ಹೇಳಿದ್ದರಿಂದಲೂ ಜಾಸ್ತಿ ಇದ್ದು; ಕೇವಲ ಆಶ್ಚರ್ಯಕ್ಕೆ ಮಾಂತ್ರ ಅಲ್ಲ, ಬಚ್ಚಿ ಅಪ್ಪಗಳೂ ಹೇಳುಗು, ಎಂತಾರು ಗಮ್ಮತ್ತಿಂದು ಕಂಡ್ರೂ ಹೇಳುಗು, ಯೇವದಾರು ಗವುಜಿಯ ವಿವರುಸುವಗಳೂ ಉದ್ಗಾರ ತೆಗಗು!

ಒಪ್ಪಣ್ಣನೇ ಹಲವು ಶುದ್ದಿಗಳಲ್ಲಿ ಈ ಶಬ್ದ ಉಪಯೋಗುಸಿದ ನೆಂಪಿದ್ದು. (ನಿಂಗೊಗೆ ನೆಂಪಿದ್ದೋ?)

ಅಜ್ಜಸುರಿಯ! ಅಡಕ್ಕಗೆ ಇನ್ನೂರಕ್ಕೆ ಹತ್ತರೆ ಎತ್ತಿತ್ತದಾ – ಹೇಳಿಗೊಂಡು ಎಡಪ್ಪಾಡಿಬಾವ° ದೊಡ್ಡಬಾವನ ಕೈಲಿ ಪೋನಿಲಿ ಹೇಳಿದನಾಡ..
ಅಜ್ಜಸುರಿಯ, ಈ ಹಾಳು ಮಾರ್ಗಲ್ಲಿ ಬದಿಯಡ್ಕಂದ ಸೂರಂಬೈಲಿಂಗೆ ಎತ್ತಲೆ ಮುಕ್ಕಾಲುಗಂಟೆ ಬೇಕಾವುತ್ತು – ಹೇಳ್ತದು ಬಸ್ಸಿಳುದ ಕೂಡ್ಳೇ ಪಾರೆ ಮಗುಮಾವ° ಹೇಳ್ತ ಮಾತು.

ಅಸ ಬಡಿ:

ಬಂಙ / ಕಷ್ಟ ಬಪ್ಪದಕ್ಕೆ ಪಾರಿಭಾಷಿಕ ಶೆಬ್ದ ಇದು. ಹಾಂಗೆ ಹೇಳಿಗೊಂಡು ಎಂತರನ್ನೂ ಬಡಿಯಲಿಲ್ಲೆ ಇದಾ :-)
ಆಚಕರೆಲಿ ಪುಟ್ಟತ್ತೆ ಈಗಳೂ ಬಾವಿಂದ ನೀರೆಳದು ಅಸಬಡಿತ್ತವು; ಪುಟ್ಟಬಾವ° ಒಂದು ಪಂಪು ಹಾಕುಸಿದ್ದರೆ ಅತ್ತಗೆ ರಜ ಸುಲಾಬ ಆವುತಿತು. ಅವ° ಮಾಡುಸೆಕ್ಕೇ?!

ಅಲ ಫಲ:

ಕೃಷಿ ಉದುಪ್ಪತ್ತಿಗೆ ಪರಿಭಾಶೆಯ ಪದ. ತೋಟಂದ ಸಿಕ್ಕುತ್ತ ಸಮಗ್ರ ಇಳುವರಿಗೆ ಸೂಚ್ಯವಾಗಿ ಹೀಂಗೆ ಹೇಳುಗು.
ಮಾಟೆಡ್ಕ ಮಾವ°° ಬೆಂಗುಳೂರಿಲಿ ಇಪ್ಪದಾದರೂ ಅವಕ್ಕೆ ಪಾಲು ಆಯಿದಿಲ್ಲೆ. ಹಾಂಗಾಗಿ, ಊರಿನ ಅವರ ತೋಟದ ಅಲಫಲ ಪೂರ ಅವರ ತಮ್ಮನೇ ನೋಡಿಗೊಳ್ತವು.

ಅಂಬೆರ್ಪು

ಕನ್ನಡದ ಗಡಿಬಿಡಿ / ಇಂಗ್ಳೀಶಿನ ಅರ್ಜೆಂಟಿನ ತಿಳುಸುತ್ತ ಪಾರಿಭಾಶಿಕ ಶೆಬ್ದ.
ಒಟ್ಟು ಗಡಿಬಿಡಿಗಡಿಬಿಡಿ ಮಾಡಿಗೊಂಡು ವರ್ತನೆ ಮಾಡಿರೆ ಹಳಬ್ಬರು ಈ ಶಬ್ದವ ಬಳಸಿಯೇ ಬಳಸುಗು.
ಈಗ ಇಂಗ್ಳೀಶಿನ ಪ್ರಭಾವಂದಾಗಿ ಈ ಶಬ್ದ ಅಪುರೂಪ ಆದ್ಸು ಬೇಜಾರದ ಸಂಗತಿ.

ಮೊನ್ನೆ ಚೆನ್ನೈಬಾವ°° ಪೋನು ಮಾಡಿತ್ತಿದ್ದವು. ಏನು-ಒಳ್ಳೆದು ಮಾತಾಡುವ ಮದಲೇ ಮಡಗಿದವು. ಎಂತದೋ ಅಂಬೆರ್ಪಿಲಿ ಇದ್ದಿರೇಕು; ಅಲ್ಲದ್ದರೆ ಹಾಂಗೆಲ್ಲ ಬೇಗ ಮಾತಾಡಿ ಮುಗಿತ್ತ ಜೆನ ಅಲ್ಲ ಅವು!

ಅರ್ಗೆಂಟು:

ಹಠ ಮಾಡ್ತದಕ್ಕೆ ಇನ್ನೊಂದು ಪರ್ಯಾಯ. ಕೆಲವು ಸರ್ತಿ “ಗೆಂಟು” ಹೇಳಿಯೂ ಹೇಳ್ತವು.
ನಮ್ಮ ಬೈಲಿಲೇ ಒಬ್ಬ° ಅರ್ಗೆಂಟು ಮಾಣಿ ಇದ್ದ ಕಾರಣ – ಎಲ್ಲೋರಿಂಗೂ ಬೇಗ ಅಂದಾಜಿ ಅಕ್ಕಿದಾ! 😉
ನೆಗೆಮಾಣಿ ಒಂದರಿ `ಎನಗೆ ಮೇಲಾರ ಬೇಕೂ’ ಹೇಳಿ ಅರ್ಗೆಂಟು ಮಾಡಿದ್ದಕ್ಕೆ ಬಂಡಾಡಿ ಅಜ್ಜಿ ಕೈಕ್ಕೆಯ ಹಾಗಲಕಾಯಿ ಮೇಲಾರ ಮಾಡಿ ಬಳುಸಿದವಡ. :-)

ಒರೆಂಜು:

ಪದೇ ಪದೇ ಒಂದೇ ವಿಷಯವ ಕೇಳಿಗೊಂಬದು.
ಆರಿಂಗಾರು ಎಂತದೋ ಕಾರ್ಯ ಆಯೇಕಾದರೆ, ಅದರ ನಿಂಗಳ ಹತ್ತರೆ ಪುನಾ ಪುನಾ ಹೇಳಿದವೋ – ಅಂಬಗ ಹಾಂಗೆ ಹೇಳುಲಕ್ಕು.

ಬೋಚಬಾವಂಗೆ ವಾರಕ್ಕೊಂದರಿ ಮೀಯದ್ರೂ ಬೇಜಾರಿಲ್ಲೆ, ವಾರಕ್ಕೊಂದರಿ ಚೋಕುಲೇಟು ತಿನ್ನದ್ದರೆ ಸಮ ಆವುತ್ತಿಲ್ಲೆ.
ಆರಾರು ಪೇಟಗೆ ಹೋಗಿ ಬಂದೋರಿದ್ದರೆ ಮದಾಲು ಹೋಗಿ ’ಚೋಕಿಳೇಟು ಇದ್ದೋ..’ ಹೇಳಿ ಒರೆಂಜುತ್ತ°.

ಬೈಲಿಂಗೊಂದು ಶುದ್ದಿ ಹೇಳಿ – ಹೇಳಿಗೊಂಡು ಒಪ್ಪಣ್ಣ ನಾಕೈದು ಸರ್ತಿ ಹೇಳಿಅಪ್ಪಗ ಬಟ್ಟಮಾವಂಗೆ ಇದೇ ಶಬ್ದ ನೆಂಪಾವುತ್ತೋ ಏನೋ!! 😉

ಆದೌಚ:

ಆದಾಯ-ವೆಚ್ಚ ಒಳಗೊಂಡ ದುಡ್ಡಿನ ಸಮಗ್ರ ನಿರ್ವಹಣೆಯ ಹೇಳ್ತಂತಹಾ ಶಬ್ದ.
(ಚೆನ್ನೈಭಾವಂಗೆ ಇದೊಂದು ಸಂಸ್ಕೃತಶಬ್ದದ ಹಾಂಗೆ ಕೇಳಿದ್ದಕ್ಕೆ ಡಾಮಹೇಶಣ್ಣನ ಕೈಲಿ ಕೇಳಿದವಡ! ;-))
ತರವಾಡುಮನೆ ಶಂಬಜ್ಜ ಅವಕ್ಕೆ ಮೈಕೈಲಿ ಇನ್ನೂ ತ್ರಾಣ ಇದ್ದು – ಹೇಳ್ತ ಕಾಲಕ್ಕೇ ಮನೆಯ ಆದೌಚ ರಂಗಮಾವಂಗೆ ಬಿಟ್ಟುಕೊಟ್ಟಿದವಡ.  ಮಗ° ಸರಿ ಮಾಡ್ತನೋ ನೋಡಿಕ್ಕಿ, ತಪ್ಪಿರೆ ತಿದ್ದುಲಾದರೂ ಮೈಗೆ ತ್ರಾಣ ಬೇಕನ್ನೇ – ಹೇಳ್ತ ಉದ್ದೇಶಂದ ಮದಲೇ ಕೊಟ್ಟಿಕ್ಕಿದ್ದದು.

ಎತ್ತಾ ಬತ್ತಾ:

ಬೇಡಿಕೆ-ಪೂರೈಕೆಗೊ ಅಲ್ಲಿಂದಲ್ಲಿಗೆ ಸರಿಆದರೆ ಈ ಶಬ್ದಲ್ಲಿ ಗುರುತುಸುತ್ತವು.
ಅಗತ್ಯತೆಗೆ ತಕ್ಕ ತಯಾರಿಕೆ ಮಾಡಿರೆ, ಮಾಡಿದ್ದು ಪೂರ್ತ ಮುಗುದಿಕ್ಕಿದರೆ ಹೀಂಗೆ ಹೇಳುಗು ಮದಲಿಂಗೆ.
ಕಳುದೊರಿಶ ಬೆಂಗುಳೂರಿಲಿ ಶುಬತ್ತೆ ಮನೆಲಿ ಒರಿಶಾವಧಿ ಪೂಜೆ ಮಾಡಿದ್ದಾಡ.
ಊಟಕ್ಕೆ – ಹೋಟ್ಳಿನವರ ಅಡಿಗೆ, ಪಾತ್ರಂಗಳಲ್ಲಿ ತಂದು ಬಳುಸಿದ್ದು.
ಅಂದಾಜಿ ಸಾಲದ್ದೆ ಮಾಡಿದ ಪಾಕಂಗೊ ಎಲ್ಲ ಎತ್ತಾಬತ್ತಾ ಆಯಿದಾಡ, ಗೊಂತಿದ್ದೋ! ಚೆ, ಆರಿಂಗೂ ಹಾಂಗಪ್ಪಲಾಗಪ್ಪಾ!

ಎಂಜಲು ಕೈಲಿ ಕಾಕೆ ಓಡುಸುದು:

ಧಾರಾಳತನ ಇಲ್ಲದ್ದ, ಜಿಪುಣತನದ ವೆಗ್ತಿತ್ವಂಗಳ ತಿಳುಶುವಗ ಈ ಮಾತಿಲಿ ಹೇಳುಗು.
ನಿಜವಾಗಿಯೂ ಎಂಜಲು ಕೈಯೂ ಇರ್ತಿಲ್ಲೆ, ಕಾಕೆಯನ್ನೂ ಓಡುಸುತ್ತವಿಲ್ಲೆ. ಆದರೆ, ಅವ ಎಷ್ಟು ಕುರೆ ಹೇಳಿತ್ತುಕಂಡ್ರೆ, ಎಂಜಲು ಕೈಲಿ ಕಾಕೆಯ ಓಡುಸಿರೆ, ಕೈಲಿ ಇಪ್ಪ ಅಶನದ ಅವುಳುಗೊ ರಟ್ಟಿರೆ ನಷ್ಟ ಅಕ್ಕು ಹೇಳಿ ಗ್ರೇಶುಗು – ಹೇಳ್ತ ಪರಿಭಾಶೆ.
ಅಷ್ಟು ಪೈಸೆ ಇದ್ದನ್ನೇ, ರೆಡ್ಡಿಯ ಹತ್ತರೆ; ಆದರೆ ಮಹಾ ಪಿಟ್ಟಾಸು ಅಡ; ಎಂಜಲು ಕೈಲಿ ಅದು ಕಾಕೆಯನ್ನೂ ಓಡುಸಿಗೊಂಡಿತ್ತಿಲ್ಲೇಡ. ಈಗ ಅದು ಜೈಲಿ ಇದ್ದಡ ಅಲ್ಲದೋ!?

ಉಗುರು ಮುರುದು ನೀರಿಂಗೆ ಹಾಕುದು:

ಸೋಮಾರಿತನದ ಪರಮಾವಧಿ ತಿಳಿಶುವಗ ಈ ಮಾತಿನ ಹೇಳುಗು ಅಜ್ಜಂದ್ರು.
ಎಂತದೂ ಕೆಲಸ ಮಾಡ° – ಹೇಳುದರ ಸೂಚಿಸಲೆ ಉಗುರು ಮುರುದು ನೀರಿಂಗೆ ಹಾಕ°- ಹೇಳುಗು. ಅಜ್ಜಂದ್ರ ಪ್ರಕಾರ ಅದು ಅತ್ಯಂತ ಸುಲಾಬದ ಕೆಲಸ. ಅದನ್ನೂ ಮಾಡದ್ದೋನು ಅತ್ಯಂತ ಸೋಮಾರಿ ಹೇಳಿ ಅರ್ತ!

ಪೆಂಗಣ್ಣ ಊರಿಡೀ ಶುದ್ದಿ ತೆಕ್ಕೊಂಡು ಬಕ್ಕು, ಒಂದೊಂದರಿ.
ಆದರೆ, ಒಂದೊಂದರಿ ಮನಸ್ಸು ತಿರುಗಿರೆ ಮನೆಲೇ ಕೂದುಗೊಂಗು. ರೆಡ್ಡಿ ಒಳ ಹೋದ್ಸೂ ಗೊಂತಾಗ, ರಾಮಕಥೆ ಮುಗುದ್ದೂ ಗೊಂತಾಗ. ಮನೆಲೇ ಇದ್ದರೆ ಉಗುರು ಮುರುದು ನೀರಿಂಗೂ ಹಾಕ° ಅವ°, ಅಷ್ಟೂ ಬಡ್ಡ! 😉

ಉಪ್ಪುಂಟಾ ಉಪ್ಪಿನ ಕಲ್ಲುಂಟಾ:
ಮಾತುಕತೆ ಇಲ್ಲದ್ದೆ ಅಪ್ಪ ಪರಿಸ್ಥಿತಿಯ ವಿವರುಸುವಗ ಈ ಮಾತಿನ ಹೇಳ್ತವು.
ಆರಾರು ನಿಂಗಳ ಗುರ್ತದೋನು ಸಿಕ್ಕಿದ° ಹೇಳಿ ಆದರೆ, ಅವ° ನಿಂಗಳ ಕಂಡುದೇ ಮಾತಾಡಿದನಿಲ್ಲೆ ಹೇಳಿ ಆದರೆ, ’ಅವ° ಉಪ್ಪುಂಟಾ ಉಪ್ಪಿನ ಕಲ್ಲುಂಟಾ’ ಹೇಳಿ ಕೇಳಿದ್ದನಿಲ್ಲೆ – ಹೇಳ್ತದು ಕ್ರಮ.
ಮದಲಿಂಗೆ ಸುಖದುಃಖ ಮಾತಾಡುವಗ ಉಪ್ಪಿನ ಬಗ್ಗೆ ವಿಚಾರುಸಿಗೊಂಡು ಇತ್ತಿದ್ದವೋ ಏನೋ – ಹೇಳ್ತದು ಮಾಷ್ಟ್ರುಮಾವನ ಅನುಮಾನ.

ತರವಾಡುಮನೆಲಿ ಪಾತಿಅತ್ತೆದು ಎಷ್ಟು ನೆಗೆಮೋರೆಯೋ, ಸೊಸೆ ವಿದ್ಯಕ್ಕಂದು ಅಷ್ಟೇ ಮವುನ.
ನೆರೆಕರೆಯೋರೇ –  ನಿತ್ಯವೂ ಮೋರೆ ನೋಡ್ತೋರು ಅಲ್ಲಿಗೆ ಹೋದರೆ ಅದು ಉಪ್ಪುಂಟಾ ಉಪ್ಪಿನ ಕಲ್ಲುಂಟಾ – ಹೇಳಿಯೂ ಮಾತಾಡುಸುತ್ತಿಲ್ಲೆ! ಶ್ರೀಅಕ್ಕಂಗೆ ಒಂದೊಂದರಿ ಪಿಸುರೇ ಬಪ್ಪದು ಅದರ ಮೇಲೆ! 😉

ಒಲೆಯ ಕೋಳಿ ಒಕ್ಕುತ್ತು:

ಬಡತನದ ಪರಮಾವಧಿಯ ಹೇಳುಲೆ ಈ ಪರಿಭಾಶೆಯ ಉಪಯೋಗುಸುತ್ತವು.
ನಿಜವಾಗಿ ಒಲೆಯ ಕೋಳಿ ಒಕ್ಕದ್ದರೂ, ಒಲೆಲಿ ಕಿಚ್ಚು ಹೊತ್ತುಸದ್ದೆ, ಕೆಂಡ ಎಲ್ಲ ನಂದಿ, ಬೂದಿ ಆಗಿ, ಕೋಳಿ ಒಕ್ಕುವಷ್ಟೂ ಹಳತ್ತಾಯಿದು – ಹೇಳ್ತದು ಅಲ್ಯಾಣ ತತ್ವಾರ್ಥ.

ಮದಲಿಂಗೆ ತುಂಬ ಬಂಙ. ಬೈಲಿನ ಎಷ್ಟೋ ಮನೆಗಳಲ್ಲಿ ಒಲೆಯ ಕೋಳಿ ಒಕ್ಕಿಂಡು ಇದ್ದತ್ತು. ಮತ್ತೆ ಮಕ್ಕೊ ಎಲ್ಲ ಕಲ್ತು, ಒಳ್ಳೊಳ್ಳೆ ಕೆಲಸಲ್ಲಿ ದೂರ ದೂರ ಹೋಗಿ, ಉಶಾರಿ ಆದವು.


ಕೊಕ್ಕರೆ ಕೋ ಹೇಳ್ತು:

ಪುಷ್ಟಿ ಇಲ್ಲದ್ದೆ ಅಪ್ಪ ಪರಿಸ್ಥಿತಿ.
ಯೇವದಾರು ಒಂದು ಜೀವಿ / ಮರ / ಗೆಡು / ಬಳ್ಳಿ – ದಷ್ಟಪುಷ್ಟವಾಗಿ ಗೆನಾ ಆಯೇಕಾದ್ದು, ಸಪೂರ ಆಗಿ ಬೆಳದರೆ ಈ ಪರಿಭಾಶೆ ಬಳಸುತ್ತವು.
ಪ್ರತಿ ಒರಿಶದ ಹಾಂಗೆ ಮಾಷ್ಟ್ರುಮನೆಅತ್ತೆ ಈ ಸರ್ತಿಯೂ ನೆಟ್ಟಿಬಿತ್ತು ಹಾಕಿದ್ದವು; ಸೆಸಿಗೊ ಹುಟ್ಟಿ ಮೇಗೆಬಂದಪ್ಪಾಗ ಗೊಬ್ಬರವೂ ಹಾಕಿದ್ದವು. ಆದರೆ, ವಿಪರೀತ ಮಳೆಂದಾಗಿ ಸೆಸಿಗೊ ಬರ್ಕತ್ತು ಆಯಿದಿಲ್ಲೆ, ಗೊಬ್ಬರದ ಸತ್ವ ಪೂರ ತೊಳದು ಹೋತೋ ಏನೋ!
ಚೆಕ್ಕರ್ಪೆ ಬಳ್ಳಿಗೊ ಅಂತೂ ಕೊಡೆಕಡ್ಡಿಯ ಹಾಂಗೆ ಸಪೂರ ಆಯಿದು!
“ನೆಟ್ಟಿಕಾಯಿ ಆತೋ ಅತ್ತೆ?” –ಅವರ ಕೈಲಿ ಕೇಳಿರೆ, “ಈ ಒರಿಶ ನೆಟ್ಟಿ ಲಾಯ್ಕಾಯಿದಿಲ್ಲೆ; ಬಳ್ಳಿಗೊ ಕೊಕ್ಕರೆ ಕೋ ಹೇಳ್ತು” ಹೇಳುಗು.
ನಿಜವಾಗಿ ಬಳ್ಳಿಗೊ ಹಾಂಗೆ ಹೇಳ್ತವಿಲ್ಲೆ, ಆದರೆ ಹಾಂಗೆ ಹೇಳ್ತ ಕೋಳಿಯ ಕಾಲಿನ ಹಾಂಗೆ ಸಪೂರ ಇದ್ದು – ಹೇಳ್ತದಕ್ಕೆ ಈ ಪರಿಭಾಷೆ!

ಕುತ್ತ ಕೂರು:
ಎಂತದೂ ಕೆಲಸ ಮಾಡದ್ದೆ ಸೋಮಾರಿತನಲ್ಲಿ ಇಪ್ಪ ಸನ್ನಿವೇಶ.
ವಹಿಸಿದ ಕೆಲಸವ ಮಾಡದ್ದೆ ಖಾಲಿಯಾಗಿ ಅಂತೇ ಕೂದುಗೊಂಡು ಹೊತ್ತು ಕಳೆತ್ತಾ ಇದ್ದಿರೋ – ಹಾಂಗಾರೆ ನಿಂಗೊ ’ಕುತ್ತ ಕೂದುಗೊಂಬದು’ ಹೇಳಿ ಹೇಳುಲಕ್ಕು.
ಕುತ್ತವೇ ಕೂರೇಕು ಹೇಳಿ ಏನಿಲ್ಲೆ; ಮನಿಕ್ಕೊಂಬಲೂ ಅಕ್ಕು, ಲಾಗ ಹಾಕಲೂ ಅಕ್ಕು, ಒರಗಲೂ ಅಕ್ಕು – ಹೇಳುದು ಮಾಂತ್ರ ಕುತ್ತ ಕೂದುಗೊಂಬದು – ಹೇಳಿಗೊಂಡು.
ಇಷ್ಟೆಲ್ಲ ಶುದ್ದಿ ನಮ್ಮೆದುರೇ ನೆಡೆತ್ತರೂ, ಪೆಂಗಣ್ಣ ಇದರ ಯೇವದರನ್ನೂ ಬೈಲಿಂಗೆ ಹೇಳದ್ದೆ ಕುತ್ತ ಕೂದುಗೊಂಡಿದ°.

ಕಾಲು ನೀಡಿ ಕೂರು:
ವಿಶ್ರಾಂತಿ ತೆಕ್ಕೊಂಬದಕ್ಕೆ ಅಜ್ಜಿಯಕ್ಕೊ ಹೀಂಗೆ ಹೇಳ್ತವು.
ಮದಲಿಂಗೆ ಕುರ್ಶಿ ಬೆಂಚುಗೊ ಈಗಾಣಷ್ಟು ಧಾರಾಳ ಇದ್ದತ್ತಿಲ್ಲೆ; ಹಳಬ್ಬರಿಂಗೆ ಕೂಬಲೆ ನೆಲವೇ ಹೆಚ್ಚು ಆರಾಮ.
ಹಾಂಗಾಗಿ, ಬಚ್ಚಲು ತಣಿವಲೆ ನೆಲಕ್ಕಲ್ಲೇ ಕೂದುಗೊಂಗು, ಗೋಡಗೆ ಒರಗಿಂಡು, ಕಾಲು ನೀಡಿಗೊಂಡು.
ಈಗಾಣೋರಿಂಗೆ ಕಾಲು ನೀಡಿರೇ, ಅಭ್ಯಾಸ ಇಲ್ಲದ್ದೆ ಬೇನೆ ಸುರು ಅಕ್ಕೋ ಏನೋ, ಅದು ಬೇರೆ! 😉
ಶಂಬಜ್ಜ ಒರಿಶ ಇಡೀ ಕೆಲಸ ಮಾಡಿರೂ, ಆಟಿಲಿ ಕಾಲುನೀಡಿ ಕೂದುಗೊಂಗು ಮನೆಯೊಳವೇ.

ಕುಮೇರಿ ಕಡಿವದು ( / ಗುಡ್ಡೆ ಗರ್ಪುದು):
ಪ್ರಾಮುಖ್ಯತೆಯೇ ಇಲ್ಲದ್ದ ಕೆಲಸ ಮಾಡುದರ ರೂಪಕ ಈ ಪರಿಭಾಶೆ.
ಕುಮೇರಿ ಹೇಳಿತ್ತುಕಂಡ್ರೆ, ಅಗಳಿನ ನಮುನೆ – ಗಂಡಿಯ ದೊಡ್ಡ ರೂಪ. ಮದಲಿಂಗೆ ಜಾಗೆಯ ರಕ್ಷಣೆಗೆ ಕರೇಲಿ ಇದರ ಮಾಡಿಗೊಂಡು ಇದ್ದಿದ್ದವು. ಈಗ ಅದು ಮುಖ್ಯವೇ ಅಲ್ಲದ್ದ ಕೆಲಸ ಹೇಳ್ತ ಪರಿಭಾಶೆ ಬಯಿಂದು.
ಉದಿಯಪ್ಪಗ ಆರಾರು ನೆಂಟ್ರು ತರವಾಡು ಮನಗೆ ಬಂದು, ಹೊತ್ತಪ್ಪಗಳೇ ಹೆರಡ್ತೆ – ಹೇಳಿರೆ ರಂಗಮಾವ° ನಿಂಬಲೊತ್ತಾಯ ಮಾಡುವಗ ಕೇಳುಗು “ನಿನಗೆಂತ ಕುಮೇರಿ ಕಡಿವಲಿದ್ದೋ ಇನ್ನು ಹೋಗಿ?” ಹೇಳಿಗೊಂಡು.
ಮೂಡ್ಳಾಗಿ ಇದರ ಗುಡ್ಡೆ ಗರ್ಪುದು ಹೇಳಿಯೂ ಹೇಳ್ತವಡ. ಎಲ್ಲಿ – ಹೇಂಗೆ ಹೇಳಿರೂ, ಅರ್ಥ ಒಂದೇ!

ಕೂದಲ್ಲೇ:
ಅನಾರೋಗ್ಯ ಜಾಸ್ತಿ ಆಗಿ ಅತ್ತಿತ್ತೆ ಓಡಾಡ್ಳೆ ಕಷ್ಟ ಆದರೆ ಹೀಂಗೆ ಹೇಳ್ತವು ಮದಲಿಂಗೆ.
ಅನಾರೋಗ್ಯವೇ ಆಯೇಕು ಹೇಳಿ ಇಲ್ಲೆ, ಪ್ರಾಯ ಆಗಿಯೋ ಮಣ್ಣ ಆದರೂ ಹಾಂಗೇ ಹೇಳ್ತವು.
ಹತ್ಯಡ್ಕ ಅಜ್ಜ° ತೆಂಗಿನ ಮರದ ಕೊಬೆಂದ ಆಯ ತಪ್ಪಿ ಬಿದ್ದದು ನಿಂಗೊಗೆ ಹೇಳುದುಕೇಳಿ ಗೊಂತಿದ್ದೋ ಏನೋ – ಹತ್ತೈವತ್ತು ಒರಿಶ ಹಿಂದೆ. ನೆಡುಪ್ರಾಯಂದ ಕೊನೆ ಒರೆಂಗೂ ಅವು ಕೂದಲ್ಲೇ ಆಗಿತ್ತಿದ್ದವು ಮತ್ತೆ; ಸೊಂಟಕ್ಕೆ ಪೆಟ್ಟಾಗಿ ಎದ್ದು ನೆಡವಲೆಡಿಯ – ಹೇಳ್ತ ಹಾಂಗೆ.
(ಇದರಿಂದಲೂ ಚಿಂತಾಜನಕ / ದೈಹಿಕ ದೌರ್ಬಲ್ಯ ಆದರೆ ’ಮನುಗಿದಲ್ಲೇ’ ಹೇಳಿ ಹೇಳ್ತವು. ಇಂಗ್ಳೀಶಿಲಿ ಅದನ್ನೇ Bed-ridden ಹೇಳ್ತವಡ, ಮಾಷ್ಟ್ರುಮಾವ° ಹೇಳಿದವು.)

ಕುಂಬ್ಳಕಾಯಿ:
ಅಪ್ರಾಮುಖ್ಯ ವಸ್ತುವಿನ ದೊಡ್ಡ ಸಂಗತಿ ಮಾಡ್ಳೆ ಹೆರಟ್ರೆ ಈ ಪದಪ್ರಯೋಗ ಮಾಡುಗು ಮದಲಿಂಗೆ.

ಇದೆಂತ, ದೊಡ್ಡ ಕುಂಬ್ಳಕಾಯಿಯೋ - ಕೇಳುವಿ ನಿಂಗೊ!!

ಕುಂಬ್ಳಕಾಯಿ ಕಾಂಬಲೆ ದೊಡ್ಡ ಇರ್ತು, ಆದರೆ ಅಷ್ಟೆಂತ ಪ್ರಾಮುಖ್ಯವಾದ್ಸು ಅಲ್ಲ – ಹಾಂಗಾಗಿ ಈ ಉಪಮೆ ಬಂದದೋ ಏನೋ!
ಕುಂಬ್ಳಕಾಯಿಯ ಉಪಮೆ ಒಬ್ಬ ವೆಗ್ತಿ ಮೇಗೆಯೇ ಆಗಿಕ್ಕು, ಕಾರ್ಯದ ಮೇಗೆ ಆಯಿಕ್ಕು, ವಸ್ತುವಿನ ಮೇಗೆಯೇ ಆಗಿಕ್ಕು – ಒಟ್ಟಿಲಿ, ಅದೊಂದು ಕುಂಬ್ಳಕಾಯಿ – ಹೇಳಿರೆ ಅದು ದೊಡ್ಡ ವಿಷಯವೇ ಅಲ್ಲ- ಹೇಳ್ತ ಅರ್ತ.
ಎಷ್ಟೋ ಶ್ರೀಮಂತಿಕೆ ಇರ್ತ ರೆಡ್ಡಿಯ ಬಲುಗಿ ಜೈಲಿಲಿ ಮಡಗಿದ್ದವಡ ಮನ್ನೆ – ಹೇಳಿದ° ಕೆಪ್ಪಣ್ಣ. ಅಷ್ಟಪ್ಪಗ ಪೆಂಗಣ್ಣ ಹೇಳಿದ°, ರೆಡ್ಡಿ ಎಂತ ದೊಡ್ಡ ಕುಂಬ್ಳಕಾಯಿಯೋ? ಕಾನೂನಿನ ಮುಂದೆ ಎಲ್ಲೋರುದೇ ಒಂದೇ – ಹೇಳಿಗೊಂಡು.

ಗಾಳಿ ಹಾಕುದು:
ಕೆಟ್ಟ ವಿಷಯಕ್ಕೆ ಪ್ರೋತ್ಸಾಹ ಮಾಡುದಕ್ಕೆ ಈ ಪರಿಭಾಶೆ ಬಳಸುತ್ತವು.
ಸಾಮಾನ್ಯವಾಗಿ, ಇಬ್ರ ಒಳದಿಕೆ ಜಗಳ ನೆಡೆತ್ತಾ ಇಪ್ಪಗ, ಮೂರ್ನೇ ವೆಗ್ತಿ ಒಬ್ಬಂಗೆ ಪ್ರೋತ್ಸಾಹ ಕೊಟ್ಟು, ಜಗಳವ ಇನ್ನುದೇ ಹೆಚ್ಚು ಮಾಡ್ತ ಸನ್ನಿವೇಶ ಬಂದರೆ ಈ ಮಾತಿಲಿ ಹೇಳುಲಕ್ಕು.
ಮದಲಿಂಗೆ ಜಾಗೆ, ನೀರಿನ ವಿಶಯಲ್ಲಿ ಸುಮಾರು ನಂಬ್ರಂಗೊ ಇದ್ದತ್ತಲ್ಲದೋ – ನಮ್ಮೋರ ಒಳದಿಕೆ; ಅದು ಬೇಗ ಇತ್ಯರ್ಥ ಆಗದ್ದೆ ಇಪ್ಪಲೆ ನೆರೆಕರೆಯೋರು ಗಾಳಿಹಾಕಿಂಡು ಇದ್ದದೇ ಕಾರಣ – ಹೇಳಿ ಒಂದು ಅಭಿಪ್ರಾಯ.


ಜಾತಕ ಹೇಳು:
ಒಬ್ಬ ವೆಗ್ತಿಯ ಸಮಗ್ರ ಇತಿಹಾಸವ ತಿಳಿಶುದಕ್ಕೆ ಹೀಂಗೆ ಹೇಳ್ತವು.
ಸಾಮಾನ್ಯವಾಗಿ ಜಾತಕ ಹೇಳುದು ಜೋಯಿಶಪ್ಪಚ್ಚಿ ಆದರೂ, ಈ ಪರಿಭಾಶೆಯ ಜಾತಕ ಹೇಳುಲೆ ಎಲ್ಲೋರಿಂಗೂ ಅರಡಿಗು!
ಬಾರೀ ಸತ್ಯಾದಿಗನ ಹಾಂಗೆ ಮರದ ಇಬ್ರಾಯಿ ಮಾತಾಡ್ತಲ್ಲದೋ – ದೊಡ್ಡಬಾವಂಗೆ ಅದರ ಜಾತಕ ಪೂರ ಅರಡಿಗು; ಮದಲಿಂಗೆ ಮರ ಕಳ್ಳಿಯೇ ಇಷ್ಟು ದೊಡ್ಡ ಆದ್ಸು ಹೇಳ್ತದು ಅವಂಗೆ ಅರಡಿಗು. ಪುರುಸೋತಿಲಿ ಮಾತಿಂಗೆ ಸಿಕ್ಕಿರೆ ಅದರ ಜಾತಕ ಪೂರ ಹೇಳುಗು ಅವ°.

~

ಟ್ಟೆ ಟ್ಟೆ ಟ್ಟೆ:

ಉತ್ತರ ಇಲ್ಲದ್ದೆ ಅಪ್ಪ ಪರಿಸ್ಥಿತಿ.
ಆರಾರು ಎಂತಾರು ಕೇಳಿರೆ, ಎದುರು ಮಾತಾಡ್ಳೇ ಉತ್ತರ ಇಲ್ಲದ್ದೆ ಅಪ್ಪ ಸನ್ನಿವೇಶಂಗಳ ವಿವರುಸುಲೆ ಈ ಪರಿಭಾಶೆಯ ಬಳಸುತ್ತವು.
ಬೋಚಬಾವ° ಸಿಕ್ಕಿರೆ ’ನಿನ್ನ ಹೆಸರೆಂತ?’  ಕೇಳಿ – “ಬೋಚ°” ಹೇಳುಗು.
ನಿನಗೆ ಬೇರೆ ಹೆಸರಿಲ್ಲೆಯೋ – ಅದೆಂತಕೆ ಹಾಂಗೆ ಹೇಳುದು ಎಲ್ಲೋರುದೇ – ಕೇಳಿರೆ ಅವ° ಟ್ಟೆಟ್ಟೆಟ್ಟೆ!  (ಅವನ ಹತ್ತರೆ ಉತ್ತರ ಇಲ್ಲೆ!)


ಟುಂ ಟುಂ ಟುಂ:

ಸರಿಯಾದ ಉತ್ತರ ಕೊಡ್ಳೆ ಎಡಿಯದ್ದೆ ಹಾರಿಕೆಯ ಉತ್ತರ ಕೊಡುದಕ್ಕೆ ಹೀಂಗೆ ಹೇಳ್ತವು.
ಉದಾಹರಣೆಗೆ, ನೆಗೆಮಾಣಿ ಇಂಗ್ಳೀಶು ಕಲ್ತುಗೊಂಡಿತ್ತಿದ್ದ°, ಇನ್ನೂ ಕಲ್ತಾಯಿದಿಲ್ಲೆ.
ಆದರೆ ಅದೊಂದು ಒಯಿವಾಟು ಬಿಟ್ಟು ಬೇರೆ ಎಲ್ಲಾ ಕಾರ್ಯವೂ ಮಾಡುಗು.
ಕೈಗೆ ಸಿಕ್ಕಿಯಪ್ಪಗ “ಎಂತಗೆ ಕಲ್ತಾಯಿದಿಲ್ಲೆ?” – ಕೇಳಿರೆ ಮಳೆ ಇತ್ತು, ಮೌಢ್ಯ ಇತ್ತು, ಸ್ಲೇಟು ಇತ್ತಿಲ್ಲೆ – ಹೇಳಿ ಏನಾರು ಟುಂಟುಂಟು ಹೇಳುಗು!

ತ:

ದವಡೆ ಹಲ್ಲು ತುಪ್ಪುಸು:

ಶಿಕ್ಷೆಕೊಡುದಕ್ಕೆ ಪರಿಭಾಶೆಯಾಗಿ ಹೀಂಗೆ ಹೇಳ್ತವು.
ಉಪದ್ರ ಮಾಡಿದ ಆರಿಂಗಾರು ಸಮಾ ಬಡಿಯೇಕು – ಹೇಳ್ತ ಭಾವನೆ ಬಂದರೆ ’ಅವನ ದವಡೆ ಹಲ್ಲು ತುಪ್ಪುಸೇಕು’ ಹೇಳಿ ಪರಂಚುಗು ಅಜ್ಜಂದ್ರು. ನಿಜವಾಗಿ ಅವನ ದವಡೆಯೂ, ಹಲ್ಲೂ- ಎರಡೂ ಗಟ್ಟಿ ಇರ್ತು, ಆದರೆ ಇವ ಬಡುದ್ದರ್ಲಿ ಅದು ತುಂಡಾಗಿ, ತುಪ್ಪುಸಿ ಕೆಳ ಬೀಳುವ ಹಾಂಗೆ ಮಾಡೇಕು – ಹೇಳಿ ಇದರ ಭಾವಾರ್ಥ.

ಗುಜಿರಿ ಅದ್ದುಲ್ಲ° ಯೇವಗಳೂ ಬೈಲಿಂಗೆ ಬಕ್ಕು, ಎಂತಾರು ಗುಜಿರಿ ಇದ್ದರೆ ತೆಕ್ಕೊಂಡೂ ಹೋಪಲೆ.
ಅಂದೊಂದರಿ ಬಂದದು, ತರವಾಡುಮನೆಲಿ ಗುಜಿರಿ ಸಾಮಾನು ತುಂಬುಸಿ, ಹೆರಡ್ಳಪ್ಪಗ ನಾಕು ತೆಂಗಿನಕಾಯಿಯೂ, ರಜ ಅಡಕ್ಕೆಯನ್ನೂ ತುಂಬುಸಿತ್ತಡ ಗೋಣಿ ಒಳದಿಕ್ಕಂಗೆ. ರಂಗಮಾವಂಗೆ ಅದು ಗೊಂತಾಗಿ ಗೋಣಿಬಿಡುಸಿ ನೋಡುಸಿದವು. ಸಿಕ್ಕಿಬಿದ್ದತ್ತು..
ಇನ್ನೊಂದರಿ ಇತ್ಲಾಗಿ ಕಾಲು ಹಾಕಿರೆ ನಿನ್ನ ದೌಡೆಹಲ್ಲು ತುಪ್ಪುಸುವೆ – ಹೇಳಿ ಸಮಾಕೆ ಜೋರು ಮಾಡಿ ಕಳುಗಿದವು. ಅದು ಅಕೇರಿ, ಮತ್ತೆ ಅವರಲ್ಲಿಂದ ಕಳ್ಳತನ ಆಯಿದಿಲ್ಲೇಡ! :-)

ನೀಟಂಪ ಮನುಗು:
ದೊಡ್ಡ ವಿಶ್ರಾಂತಿ ತೆಕ್ಕೊಂಬದರ ಸೂಚ್ಯ.
ಆಗ ಕಾಲುನೀಡಿ ಕೂಪದು ಹೇಳಿ ಮಾತಾಡಿದ್ದಲ್ಲದೋ – ಇದು ಅದರಿಂದಲೂ ಒಂದು ಹಂತ ಜಾಸ್ತಿ.
ಮನುಗುದು ಅಡ್ಡವೇ ಆಗಲಿ, ನೀಟವೇ ಆಗಲಿ – ಹೇಳುದು ಮಾಂತ್ರ ನೀಟಂಪ ಮನುಗುದು.

ಶಾಂಬಾವಂಗೆ ರಜೆ ಇದ್ದರೆ ತೋಟಕ್ಕೆ ಹೋಕೋ – ಹೋಗ°.
ಹಗಲಿಡೀ ನೀಟಂಪ ಮನಿಕ್ಕೊಂಗು, ಇರುಳು ಬಿದ್ದು ಒರಗ್ಗು! 😉

ಪ:

ಪಿಟ್ಕಾಯಣ:
ಗಂಭೀರ ವಿಚಾರ ಮಾತುಕತೆ ಮಾಡುವಗ ಪ್ರಾಮುಖ್ಯ ಅಲ್ಲದ್ದ ವಿಚಾರವ ತಂದರೆ ಹೀಂಗೆ ಹೇಳುಗು.
ಸಾಮಾನ್ಯವಾಗಿ ರಾಮಾಯಣದ ಒಳ ಪಿಟ್ಕಾಯಣ – ಹೇಳಿ ಪೂರ್ಣಪಾಠವ ಹೇಳ್ತವು, ಬರೇ ಪಿಟ್ಕಾಯಣ ಹೇಳಿರೂ ಸಾಕಕ್ಕು!

ಬೈಲಿಲಿ ನಾವು ಕಂಡಿದನ್ನೇ – ನಾವೆಲ್ಲ ಎಂತಾರು ಮಾತಾಡಿಗೊಂಡಿಪ್ಪಗ ನೆಗೆಮಾಣಿ, ಅರ್ಗೆಂಟುಮಾಣಿ, ಬೋಚಬಾವ – ಆರಾರು ಬಂದು ಒಂದು ಪಿಟ್ಕಾಯಣ ಬಿಡ್ತವು! ನೆಗೆಯೂ ಬತ್ತು, ಪಿಸುರುದೇ ಬತ್ತು ನವಗೆ. ಅಲ್ಲದೋ?! 😉

ಪೋಲಾ-ಬಲ್ಲಾ

ಆಸಕ್ತಿ ಇಲ್ಲದ್ದೆ ಕೆಲಸ ಮಾಡ್ತದರ ಸೂಚ್ಯವಾಗಿ ಹೀಂಗೆ ಹೇಳ್ತವು.
ಕೆಲಸ ಮಾಡಿದ್ದೆ ಹೇಳಿ ಆಯೆಕ್ಕು – ಹೇಳುವ ಅಸಡ್ಡೆಲಿ ಮಾಡಿರೆ ಅಜ್ಜಂದ್ರು ’ಅವ ಅಂತೇ ಪೋಲಬಲ್ಲ ಮಾಡ್ತ’ ಹೇಳುಗು.

ಮದಲಿಂಗೆ ಜೆಂಬ್ರಲ್ಲಿ ಬಳುಸುವೋರು ಶ್ರದ್ಧೆಲಿ ಬಳುಸುಗು, ಈಗ ಬಪೆ ಅಲ್ದೋ ಬಾವ, ಅವಕ್ಕೆ ಸಂಬಳ.
ಅಂತೇ- ಪೋಲ ಬಲ್ಲ ಮಾಡ್ತವು, ನೇರ್ಪಕ್ಕೆ ಬಳುಸುತ್ತವೂ ಇಲ್ಲೆ – ಹೇಳ್ತದು ಗುರಿಕ್ಕಾರ್‍ರ ಬೇಜಾರು!
(ಆಜ್ಞೆಗಳ ಕೊಟ್ಟು ದರ್ಬಾರು ಮಾಡುದಕ್ಕೆ ಪೋಲಯ-ಬಲಯ ಮಾಡುದು ಹೇಳಿಯೂ ಹೇಳ್ತವು. ಈಗ ಹಾಂಗೆ ಮಾಡ್ಳೆ ಆಳುಗಳೇ ಸಿಕ್ಕುತ್ತವಿಲ್ಲೆ!)

ಬಾಯಿಗೆ ಕೋಲು ಹಾಕು:

ಆರನ್ನಾರು ಅನಗತ್ಯವಾಗಿ ಎಳಗುಸುತ್ತರೆ ಈ ಪರಿಭಾಶೆಲಿ ಸೂಚ್ಯವಾಗಿ ಹೇಳ್ತವು.
ನಿಜವಾಗಿ ಬಾಯಿಯ ಒಳಂಗೆ ಕೋಲು ಹಾಕಲಿಲ್ಲೆ, ಆದರೆ ಹೇಳುದು ಹಾಂಗೆ, ಅಷ್ಟೇ. ಆರಾರು ತನ್ನಷ್ಟಕ್ಕೇ ಕೂದುಗೊಂಡು ಇದ್ದರೂ, ಎಳಗುಸುಲೆ ಹೋದರೆ ಹೀಂಗೆ ಹೇಳ್ತವು.
ಸುರುಸುರುವಿಂಗೆ ತರವಾಡುಮನೆ ಕಪ್ಪುನಾಯಿ ದಾಸುವಿನ ಕಂಡಪ್ಪಗ ಅಜ್ಜಕಾನಬಾವ° ಬಾಯಿಗೆ ಕೋಲು ಹಾಕಿಂಡು ಇತ್ತಿದ್ದ°.
ಹಾಂಗಾಗಿ, ಈಗ ಅದಕ್ಕೆ ಅವನ ಕಂಡ್ರೆ ಪಿಸುರು, ಕೊರಪ್ಪಿ ಓಡುಸಿಗೊಂಡೇ ಬತ್ತು..! 😉

ಬೇಳೆ ಚೋಲಿ ಚೊಲ್ಲುದು:

ಅನಗತ್ಯ ಹರಟೆಲಿ ಹೊತ್ತು ಕಳವದಕ್ಕೆ ಸೂಚ್ಯ ಪದ.
ಹಲಸಿನಕಾಯಿಯ ಒಣಗಿದ ಬೇಳೆಲಿ ಚೋಲಿ ಬಂದಿರ್ತು, ಅಲ್ಲದೋ . ಅದರ ಸೊಲಿತ್ತದು ಹೇಳಿರೆ ಅನಗತ್ಯ ಕಾಲಹರಣದ ಕಾರ್ಯ. ಆರಾರು ಆಚೀಚ ಮನಗೋ ಮಣ್ಣ ಹೋಗಿ ಅನಗತ್ಯವಾಗಿ ಹೊತ್ತು ಕಳೆತ್ತರೆ ಈ ಶಬ್ದಲ್ಲಿ ಹೇಳ್ತವು.
ದರ್ಖಾಸು ಗೆಡ್ಡದಮಾವ° ಅವರ ಜೆವ್ವನವ ಅಂತೇ ಕೊಂಕಣಿ ಅಂಗುಡಿಲಿ ಬೇಳೆಚೋಲಿ ಚೊಲ್ಲಿಗೊಂಡು ಕಾಲ ಕಳದವು. ಅವರ ಜಾಗೆಲಿ ರಜ ಅಡಕ್ಕೆಯೋ ಎಂತಾರು ಹಾಕಿದ್ದರೆ ಈಗ ಮೂರೊತ್ತು ಕೂದು ಉಂಬದಕ್ಕೆ ತೊಂದರೆ ಇರ್ತಿತಿಲ್ಲೆ – ಹೇಳಿ ಪಾರೆ ಮಗುಮಾವ° ಬೇಜಾರು ಮಾಡಿಗೊಳ್ತವು.

ಬೇಕೋ ಬೇಡದೋ
ಉದಾಸೀನತೆಲಿ ಎಂತಾರು ಕಾರ್ಯ ಮಾಡ್ತರೆ ಹೀಂಗೆ ಹೇಳ್ತವು.
ಆರಿಂಗಾರು ಏಪುಸಿದ ಕೆಲಸವ ಅವು ಮಾಮೂಲಿನ ಆಸಕ್ತಿ ಇಲ್ಲದ್ದೆ, ಕಡಮ್ಮೆ ಪ್ರಾಮುಖ್ಯತೆಲಿ ಮಾಡಿಗೊಂಡಿದ್ದರೆ ಹೀಂಗೆ ಹೇಳುಗು.

ನೆಕ್ರಾಜೆ ಅಪ್ಪಚ್ಚಿಯಲ್ಲಿಗೆ ಕೆಲಸಕ್ಕೆ ಜೆನ ಇದ್ದವು – ಧಾರುವಾಡದವು. ಆದರೆ, ಅವರ ಕೆಲಸ  ಊರವರ ಕೆಲಸದ ಹಾಂಗೆ ಮನಾರ ಇಲ್ಲೆ; ಬೇಕೋ ಬೇಡದೋ – ಹೇಳಿ ಮಾಡ್ತವು ಹೇಳಿ ನೆಕ್ರಾಜೆ ಅಪ್ಪಚ್ಚಿಗೆ ಪಿಸುರು ಬಪ್ಪದು.

ಬೆಂಬಲ್ಪು

ಯೇವದಾರು ಕಾರ್ಯ ಮಾಡ್ಳೆ ಇಪ್ಪ ಅಧೈರ್ಯ.
ಮಾಷ್ಟ್ರುಮಾವ° ಆದರೆ ಸಮಾಸ ಬಿಡುಸಿ ಹೇಳುಗು; ಬೆನ್ನು – ಬಲ್ಪು (ಎಳೆತ) ಹೇಳಿಗೊಂಡು.

ಎಂತಾರು ಕೆಲಸ ಮಾಡೇಕಾಯಿದು, ಆದರೆ ಅದರ ಮಾಡ್ಳೆ ಹಿಂಜರಿತ ಇದ್ದು ಹೇಳಿ ಆದರೆ ಅಜ್ಜಂದ್ರು ಹೀಂಗೆ ಹೇಳುಗು. ಈಗಂತೂ ಈ ಶಬ್ದ ಕಾಂಬಲೇ ಇಲ್ಲೆ ಹೇಳ್ತದು ಬೇಜಾರದ ಸಂಗತಿ.

ಮಾಷ್ಟ್ರುಮಾವನ ಮನೆಗೆ ಕೆಲಸಕ್ಕೆ ಬತ್ತ ಆಣು – ಸುಕುಮಾರ ಇದ್ದಲ್ಲದೋ; ಅದಕ್ಕೆ ಸಂಬಳ ಸಾಲ ಹೇಳಿ ಮನಸ್ಸಿಲಿ ಇದ್ದು.
ಆದರೆ ಬಾಯಿಬಿಟ್ಟೂ ಕೇಳಲೆ ರಜಾ ಬೆಂಬಲ್ಪು.. :-)

ಬ್ಬೆ ಬ್ಬೆ ಬ್ಬೆ:

ಮಾಡ್ಳೆ ಹೇಳಿದ ಯೇವದಾರು ಕೆಲಸಕಾರ್ಯ ಗೊಂತಿಲ್ಲದ್ದೆ ಅಪ್ಪಗ ಬತ್ತ ಪ್ರತಿಕ್ರಿಯೆಗೆ ಹೀಂಗೆ ಹೇಳುಗು ಅಜ್ಜಂದ್ರು.
ಪಕ್ಕನೆ ಆರತ್ರಾರು ಎಂತಾರು ಕೇಳಿರೆ / ಎಂತಾರು ಮಾಡ್ಳೆ ಹೇಳಿರೆ, ಅದು ಗೊಂತಿಲ್ಲದ್ದರೆ – ಅವರ ಉತ್ತರದ ಭಾವನೆ ಹೀಂಗಿರ್ತು – ಹೇಳ್ತದು ತಾತ್ಪರ್ಯ.
ಶಿಕ್ಷಕರ ದಿನಾಚರಣೆ ಕಳಾತಲ್ಲದೋ – ಓ ಮೊನ್ನೆ.
ವಿನುವಿನ ಶಾಲೆಲಿ ಆಚರಣೆ ಇದ್ದತ್ತಾಡ. ಕಾರ್ಯಕ್ರಮಕ್ಕೆ ನೋಡ್ಳೆ ಹೋದ ಶಾಂಬಾವನ ಹತ್ತರೆ ’ಸಭೆಯ ಉದ್ದೇಶಿಸಿ ಎರಡು ಮಾತಾಡೇಕು’ ಹೇಳಿದವಡ, ಶಾಲೆಯೋರು. ಪಕ್ಕನೆ ದಿನಿಗೆಳಿದ್ದಕ್ಕೆ ಎಂತರ ಮಾತಾಡುಸ್ಸು ಹೇಳಿ ಅರಡಿಯದ್ದೆ ಒಂದರಿ ಬೆಬ್ಬೆಬ್ಬೆ ಆದನಾಡ!

ಮದ್ದರವದು:

ತಪ್ಪು ಮಾಡಿದ ವೈರಿಗೆ ಬುದ್ಧಿ ಕಲಿಶುದು.
ಆರಾರು ನವಗೆ ಉಪದ್ರ ಮಾಡಿರೆ, ಅವಂಗೆ ತಕ್ಕ ಶಾಸ್ತಿ ಮಾಡ್ತೆ – ಹೇಳಿ ಗ್ರೇಶುವಗ ಈ ಪದಪ್ರಯೋಗ ಮಾಡ್ತವು.
ಮದಲಿಂಗೆ ಆಯುರ್ವೇದ / ನಾಟಿ ಔಷಧಿಯ ಕಾಲಲ್ಲಿ ಹಲವಾರು ಗಿಡಮೂಲಿಕೆಗಳ, ಮರ್ಮಾಣಿ ಮಾತ್ರೆಗಳ ಅರದೇ ಮದ್ದಿನ ಪಾಕ ಮಾಡಿ, ಕಿಟ್ಟಿ ರೋಗ ಗುಣಮಾಡಿಗೊಂಡು ಇದ್ದದು ಅಲ್ಲದೋ- ಹಾಂಗಾಗಿ ಈ ಬಳಕೆ ಬಂದದಾಯಿಕ್ಕು – ಹೇಳಿ ಚೌಕ್ಕಾರು ಮಾವ° ಗ್ರೇಶುಗು.

ಮೋಹನ ಬಂಟ ಅದರ ಜಾಗಗೆ ಬೇಲಿ ಹಾಕಲಿಲ್ಲೆ.  ಬೈಲಿನೋರ ದನ ಯೇವದಾರು ಮೇದೋಂಡು ಅದರ ಜಾಗೆಯ ಒಳಂಗೆ ಹೋದರೆ ಪೋನು ಮಾಡಿ ಅವಕ್ಕೆ ಬೈಗು. ಎಂತಾರು ಮಾಡಿ ಮದ್ದರೇಕು – ಹೇಳಿ ಆಚಕರೆಮಾವ° ಗ್ರೇಶಿಗೊಂಡಿದ್ದವು. ನೋಡೊ°, ಒಂದು ದಿನ ಅದಕ್ಕೂ ಕೂಡಿಬಕ್ಕನ್ನೇ!?

ಮುಕ್ಕಾಲಿಂಗೆ ತಿಕಾಣಿ:

ಬಡತನದ ದರ್ಶನ ಮಾಡ್ತ ಈ ಪದಗುಚ್ಛ, ತನ್ನ ಹತ್ತರೆ ಎಂತದೂ ಧನಸಂಗ್ರಹ ಇಲ್ಲೆ – ಹೇಳ್ತರ ತೋರುಸುತ್ತು.
ಮುಕ್ಕಾಲು – ಹೇಳಿರೆ (ಈಗ ರುಪಾಯಿ / ಪೈಸೆ) ಹೇಳಿದ ಹಾಂಗೆ ಹಣದ ಅಳತೆ. ತನ್ನ ಹತ್ತರೆ ಒಂದು ಪೈಸೆಯೂ ಇಲ್ಲೆ –ಹೇಳುದರ ಮದಲಿಂಗೆ ಹೀಂಗೆ ಹೇಳಿಗೊಂಡು ಇತ್ತಿದ್ದವು.

ಜೋಯಿಷಪ್ಪಚ್ಚಿ ಒಂದೊಂದರಿ ತಮಾಶೆ ಎಳಗ್ಗು. ಇಸ್ಪೇಟು ಕಳಲ್ಲಿ ಕೂದರೆ ಅಂತೂ ಕೇಳುದೇ ಬೇಡ.
ಹಾಂಗೆ, ಇಪ್ಪತ್ತೆಂಟು ಆಡುವಗ ಕೆಲವು ಸರ್ತಿ ಪಿಡಿ ಏನೂ ಒಳ್ಳೆದು ಬಾರದ್ದರೆ “ಚೆ, ಈ ಆಟಲ್ಲಿ ಮುಕ್ಕಾಲಿಂಗೆ ತಿಕಾಣಿ ಇಲ್ಲೆ ಭಾವಾ” ಹೇಳುಗು ನೆಗೆಮಾಡಿಗೊಂಡು.

ಮೂಗಿಲಿ ಮಸಿ:

ತನ್ನ ವಿಮರ್ಶೆ ಮಾಡಿದವರ ಮೇಗೆ ಬಯಂಕರ ಕೋಪ ಬಪ್ಪ ವೆಗ್ತಿತ್ವವ ವಿವರುಸುವಗ ಈ ಶಬ್ದವ ಉಪಯೋಗ ಮಾಡ್ತವು.
ನಿಜವಾಗಿ ಆರ ಮೂಗಿಲಿ ಮಸಿ ಇಲ್ಲದ್ದರೂ, “ಅವಂಗೆ ಅವನ ಮೂಗಿಲಿ ಮಸಿ ಇದ್ದು – ಹೇಳಿ ತೋರುಸಿರೆ ಸಾಕು, ಬಯಂಕರ ಕೋಪ ಬತ್ತು” ಹೇಳುವ ಅರ್ತಲ್ಲಿ ಈ ಮಾತು ಬಂದದಾಯಿಕ್ಕು.
ಮುಳಿಯಬಾವಂಗೆ ಮದಲಿಂಗೆ ವಿಪರೀತ ಕೋಪ ಅಡ; ಮೂಗಿಲಿಮಸಿ ಹೇಳುಲೂ ಗೊಂತಿಲ್ಲೆ ಅಡ – ಮುಳಿಯದಕ್ಕ ಹೇಳಿತ್ತಿದ್ದವು.
ಈಗ ತುಂಬ ಸಮದಾನಿ ಆಯಿದವು ಇದಾ! 😉

ಮನೆಮಟ್ಟಿಂಗೆ:

ಲೌಕಿಕ ವ್ಯವಹಾರಂಗಳಿಂದ ವಿಮುಖರಾಗಿ, ಕೇವಲ ನಿತ್ಯ ನೈಮಿತ್ಯಿಕಕ್ಕೆ ಮಾಂತ್ರ ಸೀಮಿತ ಆಗಿ ಇದ್ದರೆ ಹೀಂಗೆ ಹೇಳ್ತವು. ಸಾಮಾನ್ಯವಾಗಿ ಹೆರಿಯೋರು ತೀರಾ ಪ್ರಾಯ ಆಗಿ ವ್ಯವಹಾರ ಎಲ್ಲವನ್ನೂ ಮಕ್ಕೊಗೆ ಬಿಟ್ಟು ಕೊಟ್ರೆ, ಆ ಸನ್ನಿವೇಶವ ಹೀಂಗೆ ಹೇಳ್ತವು.
ಓಜುಪೇಯಿ ಅಜ್ಜ° ಈಗ ಯೇವ ಒಯಿವಾಟಿಲಿಯೂ ಇಲ್ಲೆ; ಎಲ್ಲವನ್ನೂ ಮತ್ತಾಣೋರಿಂಗೆ ಬಿಟ್ಟು, ಅವು ಮನೆಮಟ್ಟಿಂಗೆ ಇದ್ದವು ಅಷ್ಟೇ.

ಯ:

ಸುತ್ತ ಬಪ್ಪದು:
ಅಲ್ಲಿಂದಲ್ಲಿಗೆ ದೈಹಿಕ ಚಟುವಟಿಗೆ ಇಪ್ಪ ವೆಗ್ತಿಗೊ, ಜಾಸ್ತಿ ಓಡಾಟ ಇಲ್ಲದ್ದೆ ಮನೆಯೊಳವೇ ಇಪ್ಪದರ ಹೀಂಗೆ ಹೇಳ್ತವು.
ಆರುದೇ, ಯೇವದಕ್ಕೂ ಸುತ್ತ ಬತ್ತವಿಲ್ಲೆ, ಆದರೆ ಈ ಶೆಬ್ದ ಹಾಂಗೆ; ಅಷ್ಟೆ. ಪ್ರಾಯ ಆಗಿ, ಮುಪ್ಪು ಅಡರಿ ದೇಹಾಲಸ್ಯ ಬಂದು ಸಾಮಾನ್ಯ ಕಾರ್ಯಕ್ಷೇತ್ರವ ಮನೆಯೊಳ ಮಾಂತ್ರ ಸೀಮಿತ ಮಡಗುತ್ತವಲ್ಲದೋ – ಅವಕ್ಕೆ ಹಾಂಗೆ ಹೇಳುದು.
ಇದುದೇ ಒಂದು ರಜಾ, ಮನೆಮಟ್ಟಿಂಗೆ ಇಪ್ಪ ಸನ್ನಿವೇಶವ ಹೋಲ್ತು.
ಹಾಂಗೆ ನೋಡಿರೆ, “ಮನೆಮಟ್ಟಿಂಗೆ” ಹೇಳಿರೆ ವ್ಯಾವಹಾರಿಕ ವಾನಪ್ರಸ್ಥ; “ಸುತ್ತಬಪ್ಪದು” ಹೇಳಿರೆ ದೈಹಿಕ ವಾನಪ್ರಸ್ಥ.
ಒಂದು ಕಾಲಲ್ಲಿ ಮಹಾ ಕಾರ್ಬಾರು ಮಾಡಿದ ಆಲೆಕ್ಕಾಡಿ ಅಜ್ಜ, ಈಗ ಮನೆಲೇ ಸುತ್ತ ಬತ್ತವು; ಅಷ್ಟೇ.

ಹಲ್ಲು ಕಿಸಿವದು:

ನಮ್ಮ ಮನಸ್ಸಿಂಗೆ ಹಿತ ಇಲ್ಲದ್ದೋರು ಅನಪೇಕ್ಷಿತ ನೆಗೆ ಮಾಡ್ತದಕ್ಕೆ ಹೀಂಗೆ ಹೇಳ್ತವು.
ತೂಷ್ಣಿಲಿ ಇದರ ಕಿಸಿವದು ಹೇಳಿಯೂ ಹೇಳ್ತವು.
ಅಕ್ಕಾದೋರು ನೆಗೆಮಾಡಿರೆ “ಮುಗುಳ್ನಗೆ”, ಆಗದ್ದೋರು ನೆಗೆಮಾಡಿರೆ ಕಿಸಿವದು – ಹೇಳ್ತದು! 😉
ಉದಾಹರಣೆಗೆ,
ರಂಗಮಾವ° ಅಡಕ್ಕೆ ಸೇಂಪುಲು ಚೀಲಲ್ಲಿ ನೇಲುಸಿ ತೆಕ್ಕೊಂಡು ಹೋಪಗ ಅಡಕ್ಕೆ ಸೇಟು ಮೋರೆನೋಡಿ ಕಿಸಿತ್ತಡ.
ಓಯ್, ಇನ್ನೊಂದು ಗುಟ್ಟು: ಕೂಸುಗೊ ಮಾಣಿಯಂಗಳ ನೋಡಿ ಮುಗುಳ್ನಗೆ ಕೊಡ್ತವು; ಮಾಣಿಯಂಗೊ ಕೂಸುಗಳ ಮೋರೆ ನೋಡಿ ಕಿಸಿತ್ತವು! 😉

~

ಪಳಮ್ಮೆ(ಗಾದೆ) ಹೇಳಿರೆ ಸ್ವಾನುಭವಂದಲೇ ಎದ್ದು ಬಂದ ವಾಕ್ಯಂಗೊ. ಆದರೆ ಈ ಪರಿಭಾಶೆಗೊ ಹಾಂಗಲ್ಲ, ಒಂದು ಭಾವನೆಯ ಅಭಿವ್ಯಕ್ತಿ ಮಾಡ್ಳೆ ಬಳಸುತ್ತ ನಮುನೆ ಪದಗುಚ್ಛಂಗೊ.
ಇದಕ್ಕೆ ವಿಶೇಷವಾಗಿ ಶಬ್ದಾರ್ಥಂಗೊ ಇರ. ಇದ್ದರೂ ಅದರ ವಾಕ್ಯಾರ್ಥಕ್ಕೆ ಹೊಂದ. ಆದರೆ, ಆ ಪದಗುಚ್ಛಂಗಳ “ಭಾವಾರ್ಥ”ವ ಮಾಂತ್ರ ತೆಕ್ಕೊಂಡರೆ ಮಾತು ರಂಜಿಸುಗು.
ಹಾಂಗಾಗಿ, ಸ್ವತಃ ಏನೂ ಅರ್ಥ ಇಲ್ಲದ್ದ – ಸ್ವಾರ್ಥ ಇಲ್ಲದ್ದ, ಶಬ್ದಾರ್ಥವೂ ಇಲ್ಲದ್ದ, ಇಂತಹ ಪದಾರ್ಥಂಗಳ ಬಳಸಿಗೊಂಡ್ರೆ ಮಾತು – ಹೇಳ್ತ ಭೋಜನ ನವರಸ ಭರಿತ ಆಗಿ ರುಚಿಕರ ಆವುತ್ತು – ಹೇಳ್ತರಲ್ಲಿ ಸಂಶಯ ಇಲ್ಲೆ.

~

ಈ ಪರಿಭಾಶೆಗೊ ಜೆನಜೀವನಲ್ಲಿ ಸೇರಿಗೊಂಡು ಬಂದದು. ಪ್ರತಿಯೊಂದು ಸಂಸ್ಕೃತಿಗೂ ಒಂದೊಂದು ಈ ನಮುನೆ ಗಾದೆಗೊ, ಪದಗುಚ್ಛಂಗೊ ಇರ್ತು; ಆಯಾ ಜೆನಜೀವನದ ಸಂಪರ್ಕ ಇದ್ದೋರು ಮಾಂತ್ರ ಆಯಾ ಶಬ್ದಂಗಳ ಬಳಸುತ್ತದು ಕಾಂಗು – ಹೇಳ್ತದು ಮಾಷ್ಟ್ರುಮಾವನ ಅಭಿಪ್ರಾಯ.
ಹಾಂಗಿಪ್ಪ ಶಬ್ದ ಕೆಲವು ಸೇರುಸಿರೇ ಆ ಮಾತಿಂಗೆ “ಹಳಬ್ಬರ” ಛಾಪು ಬಪ್ಪದು – ಹೇಳ್ತದು ರಂಗಮಾವನ ಭಾವನೆ.

ಏನೇ ಆಗಲಿ, ಮಾತಿನ ಎಡಕ್ಕಿಲಿ ಹೀಂಗಿರ್ತ  ಪರಿಭಾಶೆಯ ಸೇರುಸಿ ಮಾತಾಡ್ಳೆ / ಕೇಳುಲೆ ಗಮ್ಮತ್ತಾವುತ್ತು ಬಾವ..
ಒಪ್ಪಣ್ಣಂಗೂ ಹಾಂಗೇ!
ನಿಂಗೊಗೆ?

ಒಂದೊಪ್ಪ:  ಪರಿಭಾಶೆಗಳ ಬಳಕೆ ಬಿಟ್ಟು ಹೋದರೆ ಮುಂದಕ್ಕೆ ನವಗೇ ಅಯ್ಯನಮಂಡೆ ಅಕ್ಕು. ಅಲ್ಲದೋ?

ವಿ.ಸೂ:

 1. ಈ ಪಟ್ಟಿ ಹುಟ್ಟಿ, ಬೆಳವಲೆ ಮೂಲ ಕಾರಣ ಆದ ಬೈಲಿನ ಮಾಷ್ಟ್ರುಮಾವಂಗೆ ಒಪ್ಪಣ್ಣನ ವಿಶೇಷ ಪ್ರಣಾಮಂಗೊ ಸಲ್ಲುತ್ತು.
 2. ಒಪ್ಪಣ್ಣನ ಪಟ್ಟಿಲೇ ಇನ್ನೂ ಸುಮಾರು ಪರಿಭಾಶೆಗೊ ಇದ್ದು, ಶುದ್ದಿ ಉದ್ದ ಆತು ಹೇಳಿಗೊಂಡು ಇನ್ನೊಂದರಿಂಗೆ ಹೇಮಾರುಸಿ ಮಡಗಿದ್ದು. ಪುರುಸೋತಿಲಿ ಮಾತಾಡುವೊ°, ಆಗದೋ? 😉
 3. ಬಿಟ್ಟು ಹೋದ ಪ್ರಯೋಗವ ನಿಂಗಳೂ ಒಪ್ಪಲ್ಲಿ ನೆಂಪುಮಾಡಿ. ಬೈಲಿಂದ ಒಲಿಪ್ಪೆ ಪಡಕ್ಕೊಳಿ! :-)
ಧ್ವನ್ಯಾರ್ಥ ಇಲ್ಲದ್ದರೂ, ಭಾವಾರ್ಥ ಇಪ್ಪ ‘ಪರಿಭಾಶೆಯ’ ಪದಾರ್ಥಂಗೊ…, 5.0 out of 10 based on 2 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 70 ಒಪ್ಪಂಗೊ

 1. ಸುಭಗ

  ನೀರು ಕುಡುಶುದು, ಬೆಣ್ಣೆ ಹಾಕುದು, ಬಿತ್ತು ಹಾಕುದು, ಹಿಡುಶುದು, ಬೋಳುಸುದು ಹೀಂಗಿರ್ತ ಹಲವಾರು ಪರಿಭಾಶೆಗಳ ಬಳಕೆ ನಾವು ಧಾರಾಳವಾಗಿ ಮಾಡ್ತಾ ಇರ್ತು.
  ‘ಕೆಮಿ ಹೂಗು ಅರಳಿತ್ತು’
  ‘ಕಣ್ಣಿಲ್ಲಿ ಶುಕ್ರ ಮೂಡಿದ್ದೋ?’
  ‘ಎಮ್ಮೆ ಕಣ್ಣು ಒಕ್ಕಿದ್ದನೋ?’
  ‘ಒಂದೋ ಆರು ಮೊಳ, ಅಲ್ಲದ್ರೆ ಮೂರು ಮೊಳ’
  ‘ಬೆಲ್ಲಲ್ಲಿ ಕಡೆ ಕೊಡಿ ಇಲ್ಲೆ’

  …… ಒಕ್ಕಿದಷ್ಟೂ ಹುಡ್ಕಿದಷ್ಟೂ ಹೀಂಗಿದ್ದ ಅಮೂಲ್ಯ ಪದನಿಧಿಗೊ ಸಿಕ್ಕುತ್ತಾ ಇಕ್ಕು..

  [Reply]

  VN:F [1.9.22_1171]
  Rating: +1 (from 1 vote)
 2. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಒಪ್ಪಣ್ಣಾ ಹೇಳಿದರೆ ಬೈಲಿನ ಕಣ್ಣು. ಅವ ಬರದ್ದದೆಲ್ಲವೂ ಒಳ್ಲೇ ಮಹತ್ವಪೂರ್ಣವಾಗಿಯೇ ಇರುತ್ತು.ತುಂಬಾ ಗುಢಾರ್ಥಂಗಳನ್ನೂ ,ಅಮೂಲ್ಯ ಮಾಹಿತಿಗಳನ್ನು ಹೊಂದಿರುತ್ತು. ಅದರ ಓದುವುದೇ ಒಂದು ಖುಷಿಯ ಕೆಲಸ. ಹವ್ಯಕ ಭಾಷೆಯ ಉಳಿಸಿ ಬೆಳೆಶುತ್ತಾ ಇಪ್ಪ ಒಪ್ಪಣ್ಣಂಗೆ ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)
 3. ಭಾಗ್ಯಲಕ್ಶ್ಮಿ

  ಆಧುನಿಕ ತಂತ್ರಜ್ನಾನವ ಉಪಯೋಗಿಸಿ ಹವ್ಯಕರ ರೀತಿ ರಿವಾಜುಗಳ ನೆನಪಿಸಿ ಕೊಡುವ ಒಪ್ಪಣ್ಣನ ಸುದ್ದಿಗಳ ಓದುವಾಗ ಹಳೆ ಮರಲ್ಲಿ ಹೊಸ ಚಿಗುರು ಬಂದ ಹಾಂಗೆ ಕಾಣ್ತು. .

  * ಹತ್ತರ ಒಟ್ಟಿ೦ಗೆ ಹನ್ನೊಂದು
  * ಕೈ ಕುಂಟು ಮಾಡುದು
  * ಹಸಿ ಮಡಲ ಸೂಟೆ ಕಟ್ಟಿ ಹುಡುಕುದು
  * ಕುಳಿoಪನ ಹಾಂಗೆ ಓಡುದು ( ತುಂಬಾ ಚಟುವಟಿಕೆಲಿ ಇಪ್ಪ ಹರವ / ನಡವ ಮಕ್ಕೊಗೆ ಹೇಳುದು )
  * ತಲೆ ಬುಡ ಗೊಂತಾವುತಿಲ್ಲೆ
  * ಬೇಳಗೆ ಮಣ್ಣು ಉದ್ದಿದಷ್ಟು ಗೆನ ಅಪ್ಪದು
  * ಕಾನೂನು ಕಾಯಿದೆ ಬಿಕ್ಕುದು (ಮಕ್ಕೋ ಸುಮ್ಮನೆ ಹೆರಿಯೋರತ್ತರೆ ವಾದ ಮಾಡಿಗೊಂದ್ದಿದ್ದರೆ ಹಿರೆಯೋರು ಅವರ ಅಸಮಾಧಾನವ ತ್ಹೊರುಸುವಗ ಈ ರೀತಿ ಹೇಳುಗು )
  * ಮರ ಬಿಟ್ಟ ಮಂಗನ ಹಾಂಗೆ ಅಪ್ಪದು ( ಮಾಣಿ ಹೊಸ್ಟೇಲಿಂಗೆ ಸೇರಿ ಒಂದು ವಾರ ಮರ ಬಿಟ್ಟ ಮಂಗನ ಹಾಂಗೆ ಇತ್ತಿದ್ದ )
  * ತಲೆ ಕಡುದ ಹಾಂಗೆ ಅಪ್ಪದು
  * ಕೊಲೆ ಕೊಂಡಾಟ ಮಾಡಿದ ಹಾಂಗೆ
  * ಮೋರೆಲಿ ಚೋಲಿ ಇಲ್ಲದ್ದ ಜಾತಿ

  [Reply]

  VA:F [1.9.22_1171]
  Rating: 0 (from 0 votes)
 4. Moorthy Deraje

  ಓ ದೇವರೆ…!! ಆನು ಇಂದು ನೋಡಿದ್ದಷ್ಟೆ… ಬಾರೀ ಲಾಯಿಕ ಇದ್ದು…ಒಪ್ಪ..ಕೊಡದ್ದೆ ಹೇಂಗಿಪ್ಪದಪ್ಪಾ…!! ಆದರೆ ರೆಜಾ ಜಾಗ್ರಂತೆ..!! ಎನ್ನ ಹಲ್ಲು ರೆಜಾ ಮುಂದೆ……!!ಮತ್ತೆ ಒಂದು ನೆನಪ್ಪಾತು…ಈ ’ಮಿಂದ’ ಹೇಳುವ ಶಬ್ದ..”ಅಟ್ಟುಂಬಳ’ ಹೇಳುದು ಈಗ ಆರಾದರೂ ಹೇಳ್ತವೋ…!!….ಬಾವಂದ್ರಿಂಗೆ ಗೊಂತಿರ..!! ಮಾವನೋ.. ಅಪ್ಪಚ್ಚಿಯೋ’ಮಣ್ಣೊ’ ಹೇಳುಗು…

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ನಮಸ್ತೇ ಮೂರ್ತಿ ಅಣ್ಣ,

  ಪ್ರೀತಿಯ ಸ್ವಾಗತ ನಿಂಗೊಗೆ ಬೈಲಿಂಗೆ!! ಬೈಲಿಲಿ ನಿಂಗಳ ಕಂಡು ಕೊಶೀ ಆತು. :-)

  ಬೈಲಿನೋರಿಂಗೆ ನಿಂಗಳ, ನಿಂಗಳ ಕಾರ್ಯಕ್ಷೇತ್ರದ ಪರಿಚಯ ಇದ್ದು. :-) :-)
  ನಿಂಗಳ ಒಪ್ಪದ ಒಪ್ಪ ನೋಡಿ ಸಂತೋಷ ಆತು..

  ಬತ್ತಾ ಇರಿ ಬೈಲಿಂಗೆ!! ನಿಂಗಳ ಅನುಭವವೂ ಬತ್ತಾ ಇರಲಿ…

  [Reply]

  Moorthy Deraje Reply:

  ಓ!! ಶ್ರೀಅಕ್ಕ…!! ನೀನಿದ್ದೆ ಅಪ್ಪೋ ಇಲ್ಲಿ…!! ನಿನಗೆ ನೆನಪ್ಪಿದ್ದೋ ’ಮಿಂದ’ ಹೇಳುವ ಶಬ್ಧ…’ ಈಗ ನೀನು ಪಂಜ ಸೀಮೆ ಆದರೂ, ಮೊದಲು…ಇತ್ಲಾಗಿ ಅಲ್ಲದೋ..!! ಆನು ಸಣ್ಣಾಗಿಪ್ಪಾಗ ಎನ್ನ ಅಜ್ಜನ ಮನೆಲಿ …ಈ ’ಮಿಂದ’ ಹೇಳುವ ಶಬ್ಧ ಉಪಯೋಗಲ್ಲಿ ಇತ್ತು….’ ರೆಜ’ (ಸ್ವಲ್ಪ) ಹೇಳುವ ಅರ್ಥ…ಆನು ಸಣ್ಣಾಗಿಪ್ಪಾಗ…ಬೆಳ್ಳಾರೆಲಿ..ಎನ್ನ ಒಬ್ಬ ಮಾವ ಡೋಂಗಿ ಮಾಡುಗು…’ಹೌದೋ…ಮೂರ್ತಿ!! ನಿನ್ನ ಪಡ್ಲಾಗಿಯವು…’ಮಿಂದನೀರು’ ಕುಡಿವವು ಅಲ್ವೋ…!!ಹೇಳಿ….ಆನು ಮೂಡ್ಲಾಗಿಯಾಣವ ಆದರೂ…ಎನ್ನ ಅಜ್ಜನ ಮನೆ ಪಡ್ಲಾಗಿಯಾದ ಕಾರಣ ಎನಗೆ ಕೋಪ ಬಂದು ಕೊಂಡಿತ್ತು…..ಈಗ ಮಾವ ಇದ್ದಿದ್ದರೆ ಡೋಂಗಿ ಮಾಡ್ಲೆ ಅವುತಿತ್ತಿಲ್ಲೆ…ಅರುದೇ ’ಮಿಂದ’ ನೀರು ತಾ…ಹೇಳ್ತವಿಲ್ಲೆ..ಅಲ್ಲದೋ…!!

  [Reply]

  VA:F [1.9.22_1171]
  Rating: +1 (from 1 vote)
  ಮುಳಿಯ ಭಾವ

  ರಘು ಮುಳಿಯ Reply:

  ‘ಅಟ್ಟು೦ಬಳ’ವೂ ಮಾಯ, ‘ಹೊಗೆಯಟ್ಟ’ವೂ ಮಾಯ ಅಲ್ಲದೋ ಮೂರ್ತಿ ಮಾವಾ°?
  ‘ ಮಿ೦ದ’ ದ ಒಟ್ಟಿ೦ಗೆ ಇಪ್ಪ ‘ದಣಿಯ’ ಶಬ್ದದ ಬಳಕೆಯೂ ಕಮ್ಮಿ ಆದ್ದದೋ ಅಲ್ಲ ಆನು’ಕೆಬಿರ°’ಆದ್ದದೋ,ಉಮ್ಮಪ್ಪ.!!

  [Reply]

  VA:F [1.9.22_1171]
  Rating: +2 (from 2 votes)
 5. ಮುಳಿಯ ಭಾವ
  ರಘು ಮುಳಿಯ

  ಹೋ,ಒಪ್ಪಣ್ಣಾ.
  ಆನು ಕಡೇ೦ದ ಕೊಡೀ ವರೆಗೆ ಕೊಡೀ೦ದ ಕಡೇವರೆಗೆ ಓದಿದಲ್ಲಿಯೇ ಬಾಕಿ.ಸ೦ಗ್ರಹಯೋಗ್ಯ ಲೇಖನವೂ,ಒಪ್ಪ೦ಗಳೂ. ಸ೦ಗತಿ ಗೊ೦ತಿಲ್ಲದ್ದರೆ ‘ಉಸ್ಕು ದಮ್ಮಿಲ್ಲದ್ದೆ’ ಕೂರೆಕ್ಕಷ್ಟೆ. ಹು..

  [Reply]

  VA:F [1.9.22_1171]
  Rating: 0 (from 0 votes)
 6. ಸರ್ಪಮಲೆ ಮಾವ°
  ಸರ್ಪಮಲೆ ಮಾವ

  ನಮ್ಮ ಕೆಲಸಲ್ಲಿ, ಮಾತಿಲ್ಲಿ, ಕೈಕರಣಲ್ಲಿ, ಮೋರೆಯ ಹಾವ ಭಾವಲ್ಲಿ ಪ್ರತಿಯೊಂದರಲ್ಲಿಯೂ, ತಮಾಶೆ, ಹಾಸ್ಯ ಬೇಕಾದಷ್ಟಿದ್ದರೂ, ಹೆಚ್ಚಿನವರ ಗಮನಕ್ಕೆ ಬತ್ತಿಲ್ಲೆ. ನಮ್ಮ ಒಪ್ಪಣ್ಣ ಸೂಕ್ಷ್ಮಗ್ರಾಹಿ! ಅವನ ತಮಾಶೆ, ಹಾಸ್ಯ ಎಲ್ಲವೂ ನಾವು ಮಾತಾಡುವ ರೀತಿ, ಭಾಷೆ, ಆಚಾರವಿಚಾರಂಗಳಲ್ಲಿ ಇಪ್ಪದೆ. ಆದ ಕಾರಣವೇ ಅವನ ಬರಹಂಗೊ ನವಗೆ ಮೆಚ್ಚಿಗೆಯಾವುತ್ತು. ಅದಲ್ಲಿಪ್ಪ ಹಾಸ್ಯ ಕೊಂಕಿಲ್ಲದ್ದ, ನಿಷ್ಕಲ್ಮಶ ತಮಾಶೆ. ಇದು ಆರೋಗ್ಯಕ್ಕೆ ಹಿತವಾದ ಹಾಸ್ಯ.

  ನಾವು ಮಾತಾಡುವಾಗ ಎಷ್ಟೋ ಅಗತ್ಯ(ತೆ?- ಬೇಡ) ಇಲ್ಲದ್ದ, ಅರ್ಥ ಇಲ್ಲದ್ದ ಶಬ್ದಂಗಳ, ವಾಕ್ಯಂಗಳ ಉಪಯೋಗುಸುತ್ತು. ಕೆಲವು ಶಬ್ದಂಗೊ ಸಂದರ್ಭಕ್ಕೆ ಸರಿಯಾಗಿ ಬೇರೆಯೇ ಅರ್ಥ ಕೊಡುತ್ತು. ಒಪ್ಪಣ್ಣನ ಸಂಗ್ರಹವೇ ಸಾಕಷ್ಟಿದ್ದು. ಅದಕ್ಕೆ ಸೇರುಸಲೆ, ಮೇಗೆ ಕಾಂಬ ಹಾಂಗೆ, ಬೈಲಿನವು ದೊಡ್ಡ ಪಟ್ಟಿಯೇ ಕೊಟ್ಟಿದವು.

  ಹೀಂಗೇ ಇಪ್ಪ ಹಾಸ್ಯದ ಒಂದೆರಡು ವೀಡ್ಯೊಂಗಳ ನೋಡಿಃ

  http://www.youtube.com/watch?v=1WchuF_EgOg&feature=colike

  http://www.youtube.com/watch?v=5XL_745CmrI&f

  ನಿನ್ನೆ ಬಚ್ಚಿ ಬಂದು ಮನಿಗಿದವಂಗೆ ‘ಬಡುದು ಹಾಕಿದಾಂಗೆ ಒರಕ್ಕು’

  [Reply]

  VA:F [1.9.22_1171]
  Rating: +1 (from 1 vote)
 7. ಅನು ಉಡುಪುಮೂಲೆ
  ಅನುಪಮ

  ಇಲ್ಲಿ ಎಲ್ಲರು ಭಾರಿ ಲಾಯ್ಕಲ್ಲಿ ಬರದ್ದವು ಇದರ “ನೆಲಕ್ಕಲಿ ಮಡುಗಿರೆ ಎರುಗು ಕಚ್ಯೊ೦ಡು ಹೋಕು,ಮೇಲೆ ಮಡುಗಿರೆ ಕಾಗೆ ಕಚ್ಯೊ೦ಡು ಹೋಕು .” ಹಾ೦ಗಾಗಿ ಹೊಗೆ ಅಟ್ತಲ್ಲಿ ಕಟ್ತಿ ಮಡುಗೆಕ್ಕು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗೋಪಾಲಣ್ಣರಾಜಣ್ಣಶುದ್ದಿಕ್ಕಾರ°ಅನು ಉಡುಪುಮೂಲೆವಸಂತರಾಜ್ ಹಳೆಮನೆಡೈಮಂಡು ಭಾವಶೀಲಾಲಕ್ಷ್ಮೀ ಕಾಸರಗೋಡುವಿದ್ವಾನಣ್ಣಕಜೆವಸಂತ°ಜಯಶ್ರೀ ನೀರಮೂಲೆಎರುಂಬು ಅಪ್ಪಚ್ಚಿಬೊಳುಂಬು ಮಾವ°ಶ್ರೀಅಕ್ಕ°ಅನುಶ್ರೀ ಬಂಡಾಡಿಪ್ರಕಾಶಪ್ಪಚ್ಚಿಪೆರ್ಲದಣ್ಣಪುಟ್ಟಬಾವ°ಕೇಜಿಮಾವ°ವಾಣಿ ಚಿಕ್ಕಮ್ಮಪುತ್ತೂರುಬಾವವೇಣೂರಣ್ಣವೆಂಕಟ್ ಕೋಟೂರುಚುಬ್ಬಣ್ಣಬೋಸ ಬಾವದೊಡ್ಮನೆ ಭಾವಅಡ್ಕತ್ತಿಮಾರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ