ಸುಮಂಗಲೆ ಅಕ್ಕನ ದನ – ಕಥೆಯ ಭಾಗ 2

ಕಳುದ ವಾರ ಬಂದ “ಸುಮಂಗಲೆ ಅಕ್ಕನ ದನ – ಕಥೆಯ ಭಾಗ 01 ರ ಮುಂದುವರುದ್ದು…

ಸುಮಂಗಲೆ ಅಕ್ಕನ ದನ – 2:

ನಾಕು ಜವ್ವನಿಗರ ಸಕಾಯಕ್ಕೆ ದಿನುಗೊಂಡೆ ಹೇಳಿ ಹೇಳಿತ್ತಿದ್ದೆ ಅಲ್ಲದೋ? ಕೊಟ್ಟೋಣ ಕೆಲಸಕ್ಕೆ ಹೋಪ ಮಕ್ಕೊ ಅವು.
ಕಲ್ಲು ತಿಂದ್ರೂ ಜೀಣಸಿಗೊಂಬ ತಾಕತ್ತು ಇಪ್ಪ ಪ್ರಾಯ. ಹಾಂಗಿಪ್ಪವಕ್ಕೆ ಸುಮಂಗಲೆಯಕ್ಕನ ಗೇಟಿನ ಬೀಗ ಯಾವ ಲೆಕ್ಕ? ಕ್ಷಣಲ್ಲಿ ಅದರ ಮುರುದು ತೆಗದವು.
ಗೇಟು ತೆಗವಲೆ ಪುರುಸೊತ್ತಿಲ್ಲೆ, ಎಲ್ಲರಿಂದ ಮುಂದೆ ಆ ದನ ಒಳಾಂಗೆ ನುಗ್ಗಿತ್ತದ. ಸೀತಾ ಸುಮಂಗಲೆಯಕ್ಕನತ್ರಂಗೆ ಹೋತು.
ಆ ದೃಶ್ಯ ಹೇಂಗಿತ್ತಿದ್ದು ಹೇಳಿರೆ ಕಂಜಿ ಹಾಕಿಯಪ್ಪದ್ದೆ ಕೆಳ ಬಿದ್ದ ಕಂಜಿಯ ನೋಡಿ ಅಬ್ಬೆ ದನ `ಹೂಂ…ಹೂಂ…’ ಹೇಳಿ ಹೂಂಕರ್ಸಿಗೊಂಡು ಅದಕ್ಕೆ ಸುತ್ತು ಸುತ್ತು ಹಾಕಿ ತನ್ನ ಕರುಳ ಕುಡಿಯ ಏಳ್ಸಲೆ ಪ್ರಯತ್ನ ಮಾಡುವದ್ರ ನಿಂಗೊ ನೋಡಿಪ್ಪಿರಲ್ದೋ? ಇದೂ ಅದರಿಂದ ಬೇರೆಯಾಗಿತ್ತಿದ್ದಿಲ್ಲೆ.
ಪ್ರಯತ್ನ ಸಫಲ ಆಗದ್ದಿಪ್ಪಗ ಬಹು ಮೆಲ್ಲಂಗೆ ಸುಮಂಗಲೆಯಕ್ಕನ ಮೋರೆಯ ಹತ್ರಂಗೆ ಬಗ್ಗಿತ್ತು. ಎಲ್ಲಿ ಬೇನೆ ಆಗಿ ಹೋಕೋ ಹೇಳುವ ಹಾಂಗೆ ನಾಲಗೆಯ ಕೊಡಿಲಿ ಅವರ ಕೆಪ್ಪಟೆಯ ಮೃದುವಾಗಿ ನಕ್ಕಿಕ್ಕಿ ಎನ್ನ ನೋಡಿತ್ತು. ಎನಗೆ ಸಂಕಟ ತಡಕ್ಕೊಂಬಲೆ ಎಡಿಯದ್ದೆ ಆಗಿ ಹೋತು.
ಆ ಹುಡುಗರು ಎಂತ ತಿಳ್ಕೊಂಗು ಹೇಳುವ ಗೋಚರವೇ ಇಲ್ಲದ್ದ ಹಾಂಗೆ ಬಿಕ್ಕಿ ಬಿಕ್ಕಿ ಕೂಗಿದೆ.

“ಅಕ್ಕ ಗಾಬರಿ ಇಲ್ಲೆ…, ಉಸಿರಾಡ್ತಾ ಇದ್ದವು” ಹೇಳಿ ಒಬ್ಬ ಹೇಳಿಯಪ್ಪಗ ದುಃಖ ರಜಾ ಹಿಡಿತಕ್ಕೆ ಬಂತು. ದನಕ್ಕೆ ಅದು ಗೊಂತಾತೋ ಹೇಳಿ ಎನಗೆ ಗೊಂತಾಯಿದಿಲ್ಲೆ. ಆದರೆ ಅದು ಅಲ್ಲಿ ಚೆಲ್ಲಿತ್ತಿದ್ದ ಹೆಜ್ಜೆಯ ಮುಟ್ಟಿದ್ದೂ ಇಲ್ಲೆ. ಅಲ್ಲಿಗೆ ಬಂದ ಕಾಕೆಗೋ ಕೂಡಾ ಅದರ ಮುಟ್ಟದ್ದ ಹಾಂಗೆ ತಲೆಯ ಝಾಡ್ಸುತ್ತದು, ಬೀಲ ಬೀಸುತ್ತದು, ಕಾಲು ಕುಡುಗುತ್ತದು…, ಎಲ್ಲ ಮಾಡಿಗೊಂಡೇ ಇತ್ತು. ಅಷ್ಟಪ್ಪಗ ಎನ್ನ ಗಂಡ ಕಾರು ತೆಕ್ಕೊಂಡು ಬಂದವು. ಎಲ್ಲರೂ ಒಟ್ಟು ಸೇರಿ ಸುಮಂಗಲೆಯಕ್ಕನ ಎತ್ತಿ ಕಾರಿನೊಳ ಮನುಗಿಸಿದವು.
ಅಲ್ಲಿಪ್ಪ ಹುಡುಗರಲ್ಲಿ ಒಬ್ಬ ಹೇಳಿದ, `ನಿಂಗೊ ಹೋಗಿ ಬನ್ನಿ, ಮನೆಯ ಬಾಗಿಲು ತೆಗಕ್ಕೊಂಡೇ ಇಪ್ಪ ಕಾರಣ ಆನು ಇಲ್ಲೇ ಇರ್ತೆ.’ ಈ ಅಕ್ಕನ ಜೀವದೆದುರು ಉಳಿದೆಲ್ಲವೂ ಗೌಣ ಹೇಳಿ ಕಂಡಕಾರಣ ಎಲ್ಲದಕ್ಕೂ ತಲೆಯಾಡ್ಸಿ ಕಾರು ಹತ್ತಿದೆ.
ಸುಮಂಗಲೆಯಕ್ಕನ ತಲೆಯ ಎನ್ನ ತೊಡೆಲಿ ಮಡುಗಿ ಮನುಶಿಯೊಂಡು ಆನು ಹಿಂದಾಣ ಸೀಟಿಲ್ಲಿ ಕೂದೆ.
ಇವು ಡ್ರೈವರ ಸೀಟಿಲ್ಲಿ. ಇವರ ಹತ್ರೆ ಇನ್ನೆರಡು ಹುಡುಗರು. ಸುಮಂಗಲೆಯಕ್ಕನ ಎತ್ತಿಗೊಂಬಾಗ ರಜ್ಜ ಹಿಂದಂಗೆ ನಿಂದ ದನ ಕಾರಿನ ಬಾಗಿಲು ಹಾಕಿಯಪ್ಪದ್ದೆ `ಉಂಬಾ’ ಹೇಳಿ ಒಂದಾರಿ ಅಟ್ಟಹಾಸ ಹಾಕಿತ್ತು. `ಇದಾ, ನಿನ್ನ ಅಬ್ಬೆಯ ಗುಣ ಮಾಡ್ಸಿಯೇ ಕರಕ್ಕೊಂಡು ಬತ್ತೆ, ಆತಬ್ಬೋ? ಕೂಗೇಡ ಮಿನಿಯಾ…? ಹೇಳಿ ಅದರ ಹತ್ರೆ ಹೇಳಿದೆ.
ಗೇಟಿನವರೆಗೂ ಬಂದು ಅದು ಎಂಗಳ ಬೀಳ್ಕೊಟ್ಟತ್ತು.

ಮುಂದೆ ಒಂದು ಘಂಟೆಲಿ ಸುಮಂಗಲೆಯಕ್ಕನ ದೊಡ್ಡಾಸ್ಪತ್ರೆಗೆ ಮುಟ್ಸಿದೆಯೊಂ. ತುರ್ತಾಗಿ ಶಸ್ತ್ರಚಿಕಿತ್ಸೆಯ ಅಗತ್ಯ ಇದ್ದು ಹೇಳಿ ತಜ್ಞ ಡಾಕ್ಟ್ರಕ್ಕೊ ಹೇಳಿದವು.
`ಅವರ ಮಕ್ಕೊ ಬರೇಕಷ್ಟೆ, ಪೈಸಗೆ ವ್ಯವಸ್ತೆ ಆಯೇಕಷ್ಟೆ…, ಹಾಂಗೆ.., ಹೀಂಗೆ…, ಮತ್ತೊಂದು…, ಮಣ್ಣು…,ಮಸಿ..,’ ಹೇಳಿ ಎಂಗೊ ನೆವನ ಹೇಳಿಗೊಂಡು ಹೊತ್ತು ಕಳದ್ದಿಲ್ಲೆ.
ಅವರ ಮಕ್ಕೊ ಇಲ್ಲಿ ಇದ್ದಿದ್ರೆ ಎಂತೆಲ್ಲ ಮಾಡ್ತಿತವೋ ಅದೆಲ್ಲವನ್ನೂ ಎಂಗೊ ಮಡಿದೆಯೊಂ. ಹೊತ್ತು ನೆತ್ತಿಗೇರಿಯಪ್ಪಗ ಅಕ್ಕನ ಆಪರೇಶನ್ ಸಕ್ಸಸ್ ಆತು ಹೇಳುವ ಶುದ್ಧಿ ಬಂತು.
ಮಧೂರು ಗಣಪಂಗೆ ಜೋಡು ಉದಯಾಸ್ತಮಾನ ಮಾಡ್ಸೇಕು ಹೇಳಿ ಇವರ ಹತ್ರೆ ಹೇಳಿದೆ. ಇನ್ನೀಗ ಮುಖ್ಯ ಆಯೇಕಾದ ಕೆಲಸ ಅವರ ಮಕ್ಕೊಗೆ ತಿಳ್ಸುತ್ತದು.
ಎನ್ನತ್ರೆ ಅವರಾರದ್ದೂ ಫೋನು ನಂಬ್ರ ಇತ್ತಿಲ್ಲೆ ಹೇಳಿ ಆಗಳೇ ಹೇಳಿತ್ತಿದ್ದೆ ಅಲ್ದೋ? ಸುಮಂಗಲೆಯಕ್ಕನ ಮೊಬೈಲೂ ಇಲ್ಲಿಲ್ಲೆ. ಇನ್ನೆಂತ ಮಾಡ್ತದಪ್ಪಾ..?
ಹೇಳಿದ ಹಾಂಗೆ ಅವರ ಹತ್ರಾಣ ನೆಂಟ ಒಬ್ಬನ ಮನೆ ಅಲ್ಲೇ ನಾಕೈದು ಮೈಲು ದೂರಲ್ಲಿ ಇಪ್ಪ ವಿಷಯ ಎನಗೆ ಗೊಂತಿತ್ತಿದ್ದು. ಇವು ಕಾರಿನ ಅಲ್ಲಿಗೆ ಓಡ್ಸಿದವು. ಅವರ ಮೂಲಕ ಮಕ್ಕೊಗೆ ತಿಳ್ಸಿ ಆತು. ಬೆಂಗ್ಳೂರಿಲ್ಲಿಪ್ಪವು ಕಸ್ತಲೆ ಆಯೇಕಾದ್ರೆ ಎತ್ತಿದವು. ಅಮೇರಿಕಲ್ಲಿಪ್ಪವು ಎರಡನೆ ದಿನ ಎತ್ತಿದವು. ಸುಮಂಗಲೆಯಕ್ಕಂಗೆ ಬೋದ ಬಂದು ಮಾತ್ನಾಡುವ ಹಾಂಗಾದ ಮೇಲೆ ಐ.ಸಿ.ಯು.ಯಿಂದ ರೂಮಿಂಗೆ ತಂದು ಮನುಶಿದವು. ಗಟ್ಟಿ ಮನಸ್ಸಿನ ಅಕ್ಕನ ಮೋರೆಲಿ ಅದೇ ಪ್ರಸನ್ನತೆ. ಅದೇ ಮೃದು ಮಾತು. `ಸುಮಾ, ಆ ದನ ಎಷ್ಟು ಅಸಬಡಿತ್ತೋ ಏನೋ..?‘ ಎನ್ನ ಕಂಡಪ್ಪಗ ಅವು ಹೇಳಿದ ಮದಾಲಾಣ ಮಾತಿದು! ಹಾಂಗಾರೆ ದೂರದ ಊರಿಂದ ಬಂದ ಮಕ್ಕಳ ಸಂಸಾರ, ಅವರ ಚಿಲಿಪಿಲಿ.., ಇದೆಲ್ಲ ಇವಕ್ಕೆ ಎಂತದೂ ಅಲ್ಲದೋ…??

ಸುಮಂಗಲೆಯಕ್ಕನ ಕುಟುಂಬ ಸದಸ್ಯರೆಲ್ಲೋರೂ ಸಂತೋಷಂದಲೇ ಅವರ ಆರೈಕೆಯ ಜವಾಬ್ದಾರಿ ಹೊತ್ತುಗೊಂಡಿದವನ್ನೆ? ಅವರೆಲ್ಲರ ಒಪ್ಪಿಗೆ ತೆಕ್ಕೊಂಡು ದನದ ಜವಾಬ್ದಾರಿ ಆನು ತೆಕ್ಕೊಂಬೆ ಹೇಳಿ ಸುಮಂಗಲೆಯಕ್ಕನ ಸಮಾಧಾನ ಪಡ್ಸಿ ಎಂಗೊ ಹೆರಟೆಯೊಂ. ಮುಂದೆ ಹತ್ತು ದಿನಂಗಳ ಕಾಲ ಮಕ್ಕೊ, ಸೊಸೆಯಕ್ಕೊ ಕಣ್ಣಿಲ್ಲಿ ಎಣ್ಣೆ ಹಾಕಿ ಹೇಳ್ತ ಹಾಂಗೆ ಸುಮಂಗಲೆಯಕ್ಕನ ನೋಡಿಗೊಂಡವು.
ಎಂಗೊ ವಾಪಾಸು ಬಪ್ಪಾಗ ಮದಾಲು ಸುಮಂಗಲೆಯಕ್ಕನ ಮನೆಗೇ ಹೋದೆಯೋಂ. ಕಾವಲಿಂಗೆ ನಿಂದ ಹುಡುಗ ಅಲ್ಲೇ ಇತ್ತಿದ್ದು. ಆ ದನವೂ! ಎನ್ನ ಕಂಡಪ್ಪದ್ದೆ ಧಿಗ್ಗನೆ ಎದ್ದತ್ತು.

ಅದರ ಕೆಮಿ ಕುತ್ತ ಆತು, ಕಣ್ಣು, ಮೂಗಿನ ಹೊಳ್ಳೆ ಅರಳಿತ್ತು, ಸೀದಾ ಎನ್ನ ಹತ್ರಂಗೆ ಬಂತು, ವಸ್ತ್ರವ ಎಲ್ಲ ಮೂಸಿ ನೋಡಿತ್ತು, ಕೈಯ್ಯ ನಕ್ಕಿತ್ತು. ಒಂದ್ಸರ್ತಿ ಹೂಂಕಸಿತ್ತು. ಮತ್ತೆ ಪುನಃ ಮೊದ್ಲಾಣ ಜಾಗೆಲೇ ಪ್ರತಿಷ್ಠಾಪನೆ ಆತು. ಪಾಪ ಆಸರ ಅವುತ್ತಾಯಿಕ್ಕು ಹೇಳಿಯೊಂಡು ಬಾಲ್ದಿಲಿ ನೀರು ತುಂಬ್ಸಿ ತಂದು ಮಡುಗಿದೆ. ಊಹೂಂ. ಅದರ ಹೊಡೆಂಗೇ ನೋಡಿದ್ದಿಲ್ಲೆ. ಅಷ್ಟಪ್ಪಗ ಆ ಹುಡುಗ ಹೇಳಿತ್ತು, `ಇಲ್ಲೆ ಅಕ್ಕಾ, ನಿನ್ನೆಂದ ಅದು ಎಂತ ಕೊಟ್ರೂ ತಿಂತಾ ಇಲ್ಲೆ..’ ಎಲ.., ಕಷ್ಟವೇ…, ಹೇಳಿ ತೋರಿತ್ತು ಎನಗೆ. ಇವು ಆ ಹುಡುಗಂಗೆ ರಜ್ಜ ಪೈಸೆ ಕೊಟ್ಟು ಕಳ್ಸಿದವು. ಎಂಗೊಗೂ ಮನೆಗೆ ಹೋಗದ್ದೆ ಗೊಂತಿಲ್ಲೆನ್ನೆ…? ಮಗಳಿನ ಹತ್ರಾಣ ಮನೆಲಿ ಬಿಟ್ಟಿಕ್ಕಿ ಹೋದ್ದದಲ್ಲದೋ? ಹೊಸ ಬೀಗ ತಂದು ಸುಮಂಗಲೆಯಕ್ಕನ ಮನೆಗೆ ಹಾಕಿಕ್ಕಿ ಎಂಗೊ ಹೋದೆಯೋಂ.

ಸುಮಂಗಲೆಯಕ್ಕ ಬಪ್ಪವರೆಗೂದೆ ದಿನಾಲೂ ಉದಿಯಪ್ಪಗ ವಾಕಿಂಗು ಹೋಪಗ ಒಂದು ಪಾತ್ರಲ್ಲಿ ತಣ್ಣನೆ ಹೆಜ್ಜೆ ಹಾಕಿ ತೆಕ್ಕೊಂಡು ಹೋಪಲೆ ಶುರು ಮಾಡಿದೆ. ದನದ ಜವಾಬ್ದಾರಿ ಆನು ತಕ್ಕೋಳ್ತೆ ಹೇಳಿ ಮಾತು ಕೊಟ್ಟಿಕ್ಕಿ ಬಯಿಂದೆನ್ನೇ? ದನ ಯಥಾಪ್ರಕಾರ ಅದೇ ಜಾಗೆಲಿ.., ಹೇಳಿದ್ರೆ ಸುಮಂಗಲೆಯಕ್ಕ ಬಿದ್ದ ಆ ಮೆಟ್ಲಿನ ಬುಡಲ್ಲಿ ಪ್ರತಿಮೆಯ ಹಾಂಗೆ ನಿಂದುಗೊಂಡೇ ಇತ್ತಿದ್ದಷ್ಟೇ ಹೊರತಾಗಿ ಆನು ಕೊಟ್ಟ ಹೆಜ್ಜೆ ತಿಂದಿದೂ ಇಲ್ಲೆ, ನೀರು ಕುಡಿದ್ದೂ ಇಲ್ಲೆ. ಆದರೆ ಅಲ್ಲೆಲ್ಲಿಯೂ ಸಗಣ, ಮೂತ್ರ ಮಾಡಿದ ಗುರ್ತ ಇತ್ತಿದ್ದಿಲ್ಲೆ. ಗೇಟು ತೆಗಕ್ಕೊಂಡೇ ಇತ್ತಿದ್ದ ಕಾರಣ ಕಸ್ತಲಪ್ಪಗ ಅದರ ಮನೆಗೆ ಹೋಗಿ ಉದಿಯಪ್ಪಗ ಬಪ್ಪದಾದಿಕ್ಕು ಹೇಳಿ ಜಾನ್ಸಿದೆ. ಹತ್ತು-ಹನ್ನೆರಡು ದಿನ ಕಳುದು ಸುಮಂಗಲೆಯಕ್ಕ ಸಂಸಾರ ಸಮೇತ ವಾಪಾಸು ಬಂದವು. ಅವು ಬಂದ ಆ ಕ್ಷಣಲ್ಲಿ ಆ ದನದ ಪ್ರತಿಕ್ರಿಯೆ, ಅದು ಅಕ್ಕನ ಕೊಂಗಾಟ ಮಾಡಿದ ರೀತಿ ಇತ್ಯಾದಿಗಳ ನೋಡುವ ಬಾಗ್ಯ ಎನಗೆ ಸಿಕ್ಕಿದ್ದಿಲ್ಲೆ. ಎಂತಕೆ ಹೇಳಿದ್ರೆ ಆನು ಒಂದು ಮದುವೆಗೆ ಹೋಗಿತ್ತಿದ್ದೆ.

ಮರುದಿನ ಅವರ ಮನೇಲಿ ಹಬ್ಬದ ಅಡಿಗೆ ಮಾಡಿದವು. ಎಂಗಳನ್ನೂ ದಿನುಗೋಂಡವು. ತುಂಬ ದಿನಂಗಳ ನಂತರ ಆ ಮನೆ ಜೇನುಗೂಡಾತು.
ಸುಮಂಗಲೆಯಕ್ಕಂಗೆ ಈಗ ಪಥ್ಯದ ಊಟ. ಉಪ್ಪು, ಸಕ್ಕರೆ, ಖಾರ ವಜ್ರ್ಯ. ಅಂದರೂ ಮೈಸೂರುಪಾಕು ಮಾಡಿತ್ತಿದ್ದವು. ಅಕ್ಕ ಹುಷಾರಾಗಿ ಬಂದ ಲೆಕ್ಕಲ್ಲಿ ದನಕ್ಕೆ ಸಿಹಿತಿಂಡಿ ಕೊಡದ್ರೆ ಹೇಂಗೆ?

ಸುಮಂಗಲೆಯಕ್ಕ ಈಗ ಪೂರ್ತಿ ವಿಶ್ರಾಂತಿಲಿಪ್ಪದಾದ್ರೂ ದನ ಬಪ್ಪ ಹೊತ್ತಿಂಗೆ ಹೆರ ಇರ್ತವು.
ಮರುದಿನ ಆನು ವಾಕಿಂಗು ಹೋಪಗ ಎಷ್ಟೋ ದಿನಂಗಳ ನಂತ್ರ ಮತ್ತದೇ ದೃಶ್ಯ ಕಂಡತ್ತು. ಆದರೆ ಒಂದೇ ವ್ಯತ್ಯಾಸ. ಮೊದಲೆಲ್ಲ ದನ ಗೇಟಿಂದ ಹೆರ, ಸುಮಂಗಲೆಯಕ್ಕ ಒಳ ನಿಂದುಗೊಂಡಿತ್ತಿದ್ದವು, ಇಂದು ಇಬ್ರೂ ಒಳ, ಅಕ್ಕ ಅದರ ಕೊರಳಪ್ಪಿ ಹಿಡ್ಕೊಂಡು ಎಂತದೋ ಮಾತ್ನಾಡುವ ಹಾಂಗೆ ಕಂಡತ್ತು.

“ಅಕ್ಕಾ, ಮಕ್ಕೊ ಎಲ್ಲ ಹೋದವಾ?” ಆನು ಕೇಳಿದೆ.

“ಹೂಂ..,ನಿನ್ನೆಯೇ ಎಲ್ಲರೂ ಹೋಗಿ ಆತು”

“ಅಕ್ಕಾ.., ಆನು ಅಧಿಕಪ್ರಸಂಗ ಮಾತ್ನಾಡ್ತೆ ಹೇಳಿ ಜಾನ್ಸೇಡಿ…,ಇನ್ನು ನಿಂಗೊ ಒಬ್ಬನೇ ಈ ಮನೇಲಿ ಇಪ್ಪದು ಡೇಂಜರು ಅಲ್ದಾ? ಬೆಂಗ್ಳೂರಿಲ್ಲಿಪ್ಪ ಮಗಂಗೆ ಇಲ್ಲಿ ಬಂದು ಇಪ್ಪಲಾವುತಿತು…, ಈಗ ಮಂಗ್ಳೂರಿಲ್ಲಿಯೂ ಸಾಫ್ಟ್ವೇರ್ ಕಂಪೆನಿಗೊ ಇದ್ದಲ್ದೋ? ನಿಂಗಳ ಸೊಸೆಗೂ ಇಲ್ಲಿ ಒಳ್ಳೆ ಕೆಲಸವೇ ಸಿಕ್ಕುಗು..”

“ಅಯ್ಯೋ.., ಸುಮಾ.., ನಾಳೆಯೋ ನಾಡಿದ್ದೋ ಬಿದ್ದು ಹೋಪ ಮರಲ್ಲಿ ಚಿಗುರುಗೊ ಎಷ್ಟು ದಿನ ನಳನಳಿಸುಗು ಹೇಳು? ಅವರ ಭವಿಷ್ಯ ಅವೂದೆ ನೋಡೇಕನ್ನೆ? ನವಗೆ ಬೇಕಾಗಿ ಅದರ ಕಾಲಿಲ್ಲಿ ತೊಳುದು ಬಾ ಹೇಳುವದು ಸರಿ ಅಲ್ಲ. ಎನ್ನ ಸಣ್ಣ ಸೊಸೆಯ ಅಪ್ಪನ ಮನೆ ಸೈಡಿಂದ ಒಂದು ಹೆಣ್ಣಿನ ಇಂದು ಕಸ್ತಲೆಗೆ ಅದರ ಅಪ್ಪ ಕರಕ್ಕೊಂಡು ಬಕ್ಕು. ಇನ್ನು ಖಾಯಂ ಆಗಿ ಅದು ಎನ್ನೊಟ್ಟಿಂಗೆ ಇಕ್ಕು.
ಮತ್ತೇ.., ಸೊಸೆಗೆ ನಾಕು ತಿಂಗಳಾತು. ಅಂದೇ ಅದು ಬರೇಕಿತ್ತು. ರಜೆಯೇ ಸಿಕ್ಕದ್ದೆ ಕೆಲಸ ಮುಂದುವರ್ಸಿಗೊಂಡೇ ಇತ್ತಿದ್ದು. ನಾಳೆಂದ ರಜೆ ಸಿಕ್ಕುಗಾಡ. ಹಾಂಗೆ ಅದೂ ಬತ್ತನ್ನೆ…? ನೋಡು ಸುಮಾ…, ಮೊನ್ನೆ ಅಷ್ಟೆಲ್ಲ ಬಂಙ ಆಗಿಯಪ್ಪಗ ಆರಿತ್ತಿದ್ದವು? ಈ ಲಕ್ಷ್ಮಿ(ಆಸ್ಪತ್ರೆಂದ ಬಂದ ಮೇಲೆ ಅವು ಆ ದನಕ್ಕೆ ಮಡುಗಿದ ಹೆಸರು) ಇತ್ತಿದ್ದು, ನೀನೂ ಇತ್ತಿದ್ದೆ…, ಎಲ್ಲವೂ ಸುಸೂತ್ರವಾಗಿ ನಡೆದು ಆನೀಗ ನಿನ್ನೆದುರು ನಿಂದುಗೊಂಡು ಪಟ್ಟಾಂಗ ಹೊಡೆತ್ತಾ ಇದ್ದೆ! ನಾವು ಧರ್ಮ ಪ್ರಕಾರ ನಡಕ್ಕೊಂಡ್ರೆ ಧರ್ಮವೂ ನಮ್ಮ ಕೈ ಬಿಡ್ತಿಲ್ಲೆ ಹೇಳುವದಕ್ಕೆ ಇದರಿಂದ ದೊಡ್ಡ ಸಾಕ್ಷಿ ಬೇಕೋ?

ಮತ್ತೇ…, `ಆನು, ಎನ್ನ ಮಕ್ಕೊ, ಎನಗೆ, ಎನ್ನ ಮಕ್ಕೋಗೆ ಬೇಕಾಗಿ..’ ಹೇಳ್ತೆಲ್ಲ ಇದ್ದನ್ನೇ? ಬರೀ ಮರುಳು. ತಿರುಳು ಇಪ್ಪದು ಗುರುಗಳ ನೆನವರಿಕೆಲಿ, ಶ್ರೀರಾಮನ ಕನವರಿಕೆಲಿ…,ಅಲ್ಲದ್ರೆ ನೋಡೀಗ… ಅಂಬಾಚುವಿನ ಈ ದನ ಅದಕ್ಕೆ ಬರೇ ಹಾಲು ಕೊಡುವ ಒಂದು ಜೀವಿ ಅಷ್ಟೆ. ಆದರೆ ಎನಗೆ…? ಜೀವದಾತೆ, ಆತ್ಮಸಖಿ, ಕೊಂಗಾಟದ ಪುತ್ಥಳಿ. ಎಂಗಳೊಳಾಣದ್ದು ಕರಾರೇ ಇಲ್ಲದ್ದ ಬರೀ ಪ್ರೀತಿ. ಎನಗೆ ಅದರ ಹಾಲು ಬೇಡ, ಗೊಬ್ಬರ ಬೇಡ. ಅದಕ್ಕೂದೆ ಹಾಂಗೆ. ಮೃಷ್ಟಾನ್ನ ಭೋಜನವನ್ನೋ ಹಸಿ ಹುಲ್ಲನ್ನೋ ಬಯಸಿ ಅದು ಇಲ್ಲಿಗೆ ಬಪ್ಪದಲ್ಲ. ಕೊಂಗಾಟ ಮಾಡಿ ಮೈ ಉದ್ದಿ ಎರಡು ಮಾತ್ನಾಡಿದ್ರೂ ಸಾಕು. ನಿನ್ನೆಯಾಣದ್ದೋ ಮೊನ್ನೆಯಾಣದ್ದೋ ಎಂತಾದ್ರೂ ಒಂದು ಮುಷ್ಟಿ ಕೊಟ್ರೆ ಕೊಟ್ಟೆ ಇಲ್ಲದ್ರೆ ಇಲ್ಲೆ. ನಿರೀಕ್ಷೆಯೇ ಇಲ್ಲದ್ದ ಈ ಕೊಡುಕೊಳ್ಳುವಿಕೆ ಇದ್ದನ್ನೇ? ಬಹಳ ಸುಖ ಇದ್ದು ಅದ್ರಲ್ಲಿ.
ಹಾಂಗಾಗಿ ಇಪ್ಪಷ್ಟು ಸಮಯ ಆರ ಕೊರೆತ್ತೆಯನ್ನೂ ಎತ್ತಿ ತೋರ್ಸದ್ದೆ ಸಂತೋಷಲ್ಲಿ ಎಲ್ಲೋರೊಟ್ಟಿಂಗೆ ಒಳ್ಳೇದ್ರಲ್ಲಿದ್ರಾತು. ಉಳಿದ್ದದೆಲ್ಲ ಗುರುಗಳು ನೋಡಿಗೋಳ್ತವು.’ ಹೇಳಿ ಸುಮಂಗಲೆಯಕ್ಕ ಹೇಳಿಯಪ್ಪಗ ಇವರ ಹತ್ರಂದ ಕಲಿವಲೆ ಸುಮಾರು ವಿಷಯ ಇದ್ದು ಹೇಳಿ ಎನಗೆ ಅನ್ಸಿತ್ತು.

ಲಕ್ಷ್ಮೀ ದನ ಅರೆಕಣ್ಣು ಮುಚ್ಚಿ ಬಾಯಾಡ್ಸಿಗೊಂಡು ಎಂಗಳ ಮಾತಿನ ಕೇಳಿತ್ತು. ಈಗ ದನಕ್ಕೆ ಉದಿಯಪ್ಪಗ ಗೋದಿ ದೋಸೆ ಅಥವಾ ಚಪಾತಿಯ ಸಮಾರಾಧನೆ. ಎಂತಕೆ ಹೇಳಿದ್ರೆ ಸುಮಂಗಲೆಯಕ್ಕ ಅದರನ್ನೇ ತಿಂಬದು. ಅಕ್ಕಿ ಉಪಯೋಗವ ಬಹಳ ಕಡಿಮೆ ಮಾಡಿದ್ದವು.
ಉದಿಯಪ್ಪಗ ತಿಂಡಿಗೆ ಗೋದಿ ದೋಸೆ, ಚಪಾತಿ ತಿಂದು ಬೊಡಿದಪ್ಪಗ ಅವು ಓಟ್ಸ್ ಮಾಡಿ ತಿಂಬದಾಡ.
ದನವೂ ಓಟ್ಸ್ ತಿಂಬಲೆ ಕಲ್ತತ್ತು! 🙂

~

ಈಗ ಎನ್ನ ಮಗಳು ಎಸ್.ಎಸ್.ಎಲ್.ಸಿ. ಆದ ಕಾರಣ ಸುಮಂಗಲೆಯಕ್ಕನೊಟ್ಟಿಂಗೆ ಹೆಚ್ಚು ಹೊತ್ತು ಕಳವಲೆ ಎಡಿತ್ತಿಲ್ಲೆ. ಅಕ್ಕನುದೆ ಹೇಳ್ತವು, `ಮಕ್ಕಳ ಭವಿಷ್ಯ ಮುಖ್ಯ…,ಅದರ ನೋಡಿಗೋ.., ಮಾತು ಯಾವಾಗ ಬೇಕಾದ್ರೂ ಆಡ್ಲಕ್ಕು’ ಹೇಳಿ. ಅವರ ಸೊಸೆಯೂ ಬಯಿಂದು ಹಾಂಗಾಗಿ ಅವಕ್ಕೂ ಹೊತ್ತು ಹೋವುತ್ತು.

ಆ ಸೊಸೆ ಕೂಸೂದೆ ಲಕ್ಷ್ಮಿಯ ತುಂಬಾ ಹಚ್ಚಿಗೊಂಡಿದು ಹೇಳಿ ಒಂದ್ಸರ್ತಿ ಸುಂಮಗಲೆಯಕ್ಕ ಹೇಳಿದವು. ಮುಂದೆ ಎನ್ನ ಮಗಳ ಪಬ್ಲಿಕ್ ಪರೀಕ್ಷೆ ಕಳುದು ಪಿ.ಯೂ.ಸಿ.ಗೆ ಮಂಗ್ಳೂರಿಂಗೆ ಸೇರ್ಸುವ ಗೌಜಿ ಆತು. ಅದಾದಿಕ್ಕಿ ಅದಕ್ಕೆ ಹಾಸ್ಟೆಲಿಲ್ಲಿ ಊಟ ಸೇರ್ತಿಲ್ಲೆ, ಅಲ್ಲೇ ಒಂದು ಸಣ್ಣ ಬಾಡಿಗೆ ಮನೆ ಮಾಡಿದೆಯೊಂ. ಮಗಳ ಪಿ.ಯು.ಸಿ. ಮುಗಿವನ್ನಾರ ಎನ್ನ ವಾಸ್ತವ್ಯ ಮಂಗ್ಳೂರಿಲ್ಲಿ ಹೇಳಿಯೂ ಇವು ವಾರಕ್ಕೊಂದಾರಿ ಅಲ್ಲಿಗೆ ಬಪ್ಪದು ಹೇಳಿಯೂ ತೀರ್ಮಾನ ಆತು. ಎನ್ನ ಮತ್ತೆ ಸುಮಂಗಲೆಯಕ್ಕನ ನೆಡುಕೆ ಈಗ ಬರೀ ವಾಟ್ಸಾಪ್ ಮಾತ್ರ. ಅದೂ ರಜ್ಜವೇ ಹೊತ್ತು.
ಎಂತಕೆ ಹೇಳಿದ್ರೆ ಆನು ಅದ್ರಲ್ಲಿ ಮುಳುಗಿದ್ರೆ ಮಗಳು ಪುಸ್ತಕ ಮಡ್ಸಿತ್ತು ಹೇಳಿಯೇ ಲೆಕ್ಕ. ಅದರ ಒಂದು ಸರಿಯಾದ ಕೋರ್ಸಿಂಗೆ ಸೇರ್ಸುವನ್ನಾರ ಎನಗೆ ತಲೆಬೆಶಿಯೇ.
ಇವು ಬಂದಿಪ್ಪಗ ಸುಮಂಗಲೆಯಕ್ಕನ ಸುದ್ದಿ ಹೇಳ್ತಾಇರ್ತವು. ಅಕ್ಕ ಅವರ ಸೊಸೆ ಹೆತ್ತ ಸಂಭ್ರಮವ ಎನ್ನೊಟ್ಟಿಂಗೆ ಹಂಚಿಗೊಂಡಿತ್ತಿದ್ದವು. ಮಗಳ ಓದಿಂಗೆ ಉಪದ್ರ ಅಪ್ಪದು ಬೇಡ ಹೇಳಿ ಅವೂದೆ ಹೆಚ್ಚು ಮಾತಾಡ್ತವಿಲ್ಲೆ. ಇವರತ್ರೆ ಎಂಗಳ ಶುದ್ಧಿಯೆಲ್ಲ ಕೇಳಿ ತೃಪ್ತಿ ಪಟ್ಟುಗೋಳ್ತವಾಡ. ಅಂತೂ ನೋಡ್ತಾ ನೋಡ್ತಾ ಎರಡು ವರ್ಷವೂ ಕಳುದತ್ತು. ಮಗಳಿಂಗೆ ಒಳ್ಳೆ ಮಾರ್ಕೂ ಬಂತು.

ಬಿಡಾರ ಬಿಟ್ಟು ಮನೆಗೂ ಬಂದೆಯೋಂ. ಇನ್ನು ಸುಮಂಗಲೆಯಕ್ಕನೊಟ್ಟಿಂಗೆ ಮನಸೋ ಇಚ್ಛೆ ಮತ್ನಾಡ್ಲಕ್ಕನ್ನೆ? ಹಳೆ ದಿನಚರಿ ಸುರುಮಾಡಿದೆ. ವಾಕಿಂಗು ಹೋವುತ್ತಾ ಸುಮಂಗಲೆಯಕ್ಕನ ಮನೆಯ ಹತ್ರಂಗೆ ಎತ್ತಿದೆ. ಎದುರಂದ ಲಕ್ಷ್ಮಿ ದನ ತಲೆಯಾಡ್ಸಿಗೊಂಡೇ ಬತ್ತಾ ಇದ್ದು. ಅದರ ಹಿಂದಂದಲೇ ಒಂದು ಕುಂಞ ಕಂಜಿಯೂ ಬತ್ತಾ ಇದ್ದು! ಹತ್ರಂಗೆ ಎತ್ತಿಯಪ್ಪಗ ಸರಿಯಾಗಿ ನೋಡಿದೆ. ಕಪಿಲೆ ಬಣ್ಣ, ಕಾಡಿಗೆ ಕಣ್ಣು, ಮುದ್ದು ಮೋರೆಲಿ ಅರ್ಧಚಂದ್ರಾಕಾರದ ಬೆಳಿಬೊಟ್ಟು….ಪುಟು…ಪುಟು…ನೆಡೆಯಾಣ. ಆಹಾ…ಎಂತಾ ಚೆಂದ…, ಇಂದು ರಜ್ಜ ಹೊತ್ತು ನಿಂದು ಈ ಕಂಜಿಯ ಪೆಜಕ್ಕಿಕ್ಕಿಯೇ ಹೋಪ ಹೇಳಿ ಜಾನ್ಸಿ ಸುಮಂಗಲೆಯಕ್ಕನ ಗೇಟಿನತ್ರೆ ನಿಂದೆ. ಸುಮಂಗಲೆಯಕ್ಕ ಅಂಬಗಳೇ ಅಲ್ಲಿ ನಿಂದಾಗಿತ್ತಿದ್ದು. ಆದರೆ ಅವು ಒಬ್ಬನೇ ಅಲ್ಲ. ಅವರ ಮೈಗೆ ಒರಗಿ ಒಂದು ಕುಂಞ ಮಾಣಿಯೂ ನಿಂದುಗೊಂಡಿತ್ತಿದ್ದ! ಬೆಣ್ಣೆ ಮುದ್ದೆಲೇ ಕೆತ್ತಿದ ಹಾಂಗಿಪ್ಪ ಆಕಾರ, ಬಾಯಿಲಿ ಎರಡೇ ಹಲ್ಲು, ಜೊಲ್ಲು ಸುರುದೂ ಸುರುದೂ ಹೊಟ್ಟೆಂದ ಕೆಳ ಎತ್ತಿದ್ದು. ಒಂದು ಕೈಲಿಪ್ಪ ಬೆಲ್ಲದ ತುಂಡಿನ ಅಂಬಗಂಬಗ ಚೀಪಿಗೊಂಡು ಇನ್ನೊಂದು ಕೈಲಿಪ್ಪ ದೊಡ್ಡ ಬೆಲ್ಲದ ತುಂಡಿನ ಲಕ್ಷ್ಮಿಗೆ ತೋರ್ಸಿಗೊಂಡು `ಬಾಚ್ಚೀ…( ಆ ಕುಂಞ ಕಂಜಿಗೆ ಸುಮಂಗಲೆಯಕ್ಕ ಭಾಗೀರಥಿ ಹೇಳಿ ಹೆಸರು ಮಡುಗಿದ್ದದು ಈ ಪುಟ್ಟನ ಬಾಯಿಲಿ ಬಾಚ್ಚಿ ಆದ್ದದಾಡ) ಬಾ…ಉಂಬೇ… ಬಾ…’ ಹೇಳಿಗೊಂಡಿಪ್ಪದ್ರ ನೋಡಿದ ಎನಗೆ ಛೆ, ಆನು ಮಂಗ್ಳೂರಿಂಗೆ ಹೋಗಿ ಸುಮಾರೆಲ್ಲ ಕಳಕ್ಕೊಂಡೆ ಹೇಳಿ ಅನ್ಸಿತ್ತು.

`ಅಕ್ಕಾ, ಇದಾರು ಈ ದೇವರ ಕುಂಞ?’ ಕೇಳಿದೆ.

`ಹೋ…ನೀನು ಪಟ್ಟಣವಾಸಿ ಆದಮತ್ತೆ ಎಂಗಳ ಎಲ್ಲ ಕಾಣ್ತೇ ಇಲ್ಲೆ ಮಾರಾಯ್ತಿ…’ ಹೇಳಿ ನೆಗೆಮಾಡಿಗೊಂಡೇ ವಿಷಯ ಎಲ್ಲ ಹೇಳಿದವು. ಅದು ಅವರ ಬೆಂಗ್ಳೂರಿಲ್ಲಿಪ್ಪ ಮಗನ ಮಗ ಆಡ. ಕಳೆದ ಸರ್ತಿ ಬೆಂಗ್ಳೂರಿನ ಸೊಸೆ ಇಲ್ಲಿಗೆ ಬಂದಿಪ್ಪಗ ಒಂದು ತಿಂಗಳು ನಿಂದಿತ್ತಿದ್ದಾಡ. ಅಷ್ಟೂ ದಿನವೂ ಈ ಪುಟ್ಟ ಮಾಣಿ ಅಜ್ಜಿಯೊಟ್ಟಿಂಗೆ ಲಕ್ಷ್ಮಿ ದನಕ್ಕೆ ತಿನ್ಸಿದ್ದೇ ತಿನ್ಸಿದ್ದು, ಪುಳ್ಳಿಯ ಅದರ ಬೆನ್ನಿಲ್ಲಿ ಕೂರ್ಸಿ ಆಟ ಆಡ್ಸುವದು ಹೇಳಿದ್ರೆ ಸುಮಂಗಲರಯಕ್ಕಂಗೆ ಬಹು ಪ್ರೀತಿ. ದನವೂ ಮಾಣಿಯ ಹಚ್ಚಿಗೊಂಡತ್ತು. ಮಧ್ಯಾಹ್ನದವರೆಗೂ ಇಲ್ಲೇ ಇಪ್ಪಲೆ ಶುರು ಮಾಡಿತ್ತು. ಕಡೆ ಕಡೆಂಗೆ ಎಂತಾತು ಹೇಳಿದ್ರೆ ಒರಕ್ಕಿಲ್ಲಿಯೂದೆ ಮಾಣಿ ಲಚ್ಚಿ…ಲಚ್ಚಿ ಹೇಳ್ಲೆ ಸುರುಮಾಡಿದ. ಅಬ್ಬೆ ಬೆಂಗ್ಳೂರಿಂಗೆ ಹೆರಡುವಾಗ ಮಾಣಿ ಸರ್ವತ್ಥಾರಿ ಹೆರಡ. ಉಪಾಯ ಮಾಡಿ, ಬಲವಂತ ಮಾಡಿ ಒರಗಿಸಿ ಕರಕ್ಕೊಂಡು ಹೋಗಿ ಆತು. ಅಲ್ಲಿಯೂ ಇವಂಗೆ ದನದ್ದೇ ಜೆಪ. ಊಟ ಉಣ್ಣೇಕಾರೆ ದನದ ಬೆನ್ನಿನ ಮೇಲೆ ಕೂರೇಕು ಹೇಳಿ ಹಟ…, ಪಾರ್ಕಿಂಗೆ ಆಡ್ಲೆ ಹೋಪಾ ಹೇಳಿದ್ರೆ, `ಬೇಲಾ..,ಎಂಗೆ ಲಚ್ಚಿ ಬೆನ್ನು ಬೇಕೂ..’ ಹೇಳಿ ರಾಗ. ರಜ್ಜ ದಿನ ಕಳಿವಾಗ ಅವಂಗೆ ಜ್ವರ ಬಪ್ಪಲೆ ಶುರುವಾತು. ಎಲ್ಲಾ ಟೆಸ್ಟುಗಳೂ ಮದ್ದುಗಳೂ ಆತು. ಊಹೂಂ. ಜ್ವರಕ್ಕೆ ಗಣ್ಯವೇ ಆಯಿದಿಲ್ಲೆ. ಇವಂದು ಒಂದೇ ತರ್ಕ…,ಅಜ್ಜಿ ಮನೆ ಹೋಪಾ…ಲಚ್ಚಿ ಬೇಕೂ…’ ಚಿಕಿತ್ಸೆ ಮಾಡಿ ಬೊಡುದ ಡಾಕ್ಟ್ರಕ್ಕೊ ಹೇಳಿದವು, `ಮಗುವಿನ ಮನಸ್ಸಿಗೆ ಆಘಾತವಾಗಿದೆ, ಯಾವುದೋ ವಿಷಯವನ್ನು ಅದು ತುಂಬಾ ಹಚ್ಚಿಕೊಂಡಿದೆ. ಇದು ಹೀಗೇ ಮುಂದುವರಿದರೆ ಬೆರೆಲ್ಲಾ ಸಮಸ್ಯೆಗಳು ಉದ್ಭವಿಸುತ್ತವೆ. ಅವನ ಭವಿಷ್ಯವನ್ನು ರೂಪಿಸಲಿಕ್ಕಾಗಿ ನೀವು ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ, ಅವನಿಗೆ ಯಾವುದರಲ್ಲಿ ಸಂತೋಷ ಇದೆಯೋ ಅದನ್ನು ಕೊಟ್ಟುಬಿಡಿ’ ಹೇಳಿ ಅವು ಟಾ…ಟಾ.. ಹೇಳಿದವು.

ಅಕ್ಕನ ಮಗಂಗೂ ಸೊಸೆಗೂ ಅಯ್ಯನ ಮಂಡೆ ಹೇಳಿ ಆತು. ವಂಶದ ಕುಡಿಗೆ ಬೇಕಾಗಿ ಕಠಿಣ ನಿರ್ಧಾರ ತೆಕ್ಕೊಂಬಲೇ ಬೇಕಾತು. ಸೊಸೆ ಬೆಂಗ್ಳೂರಿನ ಕೆಲಸ ಬಿಟ್ಟತ್ತು. ಊರಿನ ಕಾಲೇಜಿಲ್ಲಿ ಲೆಕ್ಚರರ್ ಆಗಿ ಸೇರಿತ್ತು. ಮಗ ಒಪ್ಪಿಗೊಂಡ ಪ್ರಾಜೆಕ್ಟ್ ವರ್ಕ್ ಮುಗಿಸಿ ಅಲ್ಲಿ ಕೆಲಸ ಬಿಟ್ಟು ಇಲ್ಲಿ ಸೇರುವದು ಹೇಳಿ ಆತು. ಸೊಸೆ ಕೆಲಸಕ್ಕೆ ಹೋಪಾಗ ಸುಮಂಗಲೆಯಕ್ಕ ಸಂತೋಷಂದ ಪುಳ್ಳಿಯ ಜವಾಬ್ದಾರಿ ಹೊತ್ತುಗೊಂಡವು. ಇಲ್ಲಿ ಬಂದ ಮತ್ತೆ ಪುಳ್ಳಿಯ ಮೈಲಿ ಜ್ವರದ ಎಡ್ರೆಸ್ಸೇ ಇಲ್ಲದ್ದೆ ಆತು.

ಈಗ ಸುಮಂಗಲೆಯಕ್ಕಂಗೆ ಎರಡೆರಡು ಪುಳ್ಳಿಯಕ್ಕೋ. ಒಂದು ಲಕ್ಷ್ಮಿಯ ಮಗಳು, ಇನ್ನೊಂದು ಅವರ ಮಗನ ಮಗ. ಸುಮಂಗಲೆಯಕ್ಕ ಈಗ ಅತ್ಯಂತ ಸುಖಿ.

 

~*~*~

ಅಂದರೂ ಎನಗೆ ಒಂದೊಂದ್ಸರ್ತಿ ಕಾಂಬದಿದ್ದು, ಯಬ್ಬಾ ಸ್ವಾರ್ಥ ಮನಸ್ಸೇ…,
ಅಂದು ಸುಮಂಗಲೆಯಕ್ಕಂಗೆ ಅಷ್ಟು ಸೀರಿಯಸ್ ಆಗಿಪ್ಪಾಗಳೂ ಮಕ್ಕಳಲ್ಲಿ ಒಬ್ಬಂಗೂದೆ ಅಬ್ಬೆಯೊಟ್ಟಿಂಗೆ ಬಂದು ನಿಂಬೊ ಹೇಳಿ ಕಂಡಿದಿಲ್ಲೆ.
ಅಂಬಗ ಇಲ್ಲಿ ಜೋಬಿಂಗೆ ಸ್ಕೋಪಿಲ್ಲೆ…, ಎಕ್ಸಪೋಷರ್ ಸಾಲ…, ಫ್ಲ್ಯಾಟು ಮಾರುವ ಹಾಂಗಿಲ್ಲೆ….,
ಹೀಂಗೆ ಒಟ್ಟೆ ಹಾನೆ, ಚಟ್ಟೆ ಹಸರು ಹೇಳಿ ಅವು ಹೇಳಿದ ಕಾರಣಂಗೊ ಹತ್ತಾರು.
ಆದರೆ ಈಗ..? ತನ್ನ ಮಗನ ವಿಷಯಲ್ಲಿ ಪೋಕುಮುಟ್ಟಿತ್ತು ಹೇಳಿಯಪ್ಪಗ ಕೆಲಸ ಬಿಡ್ಲೂ ತಯಾರು, ಮನೆ ಬಿಡ್ಲೂ ತಯಾರು, ಊರೇ ಬೇಡ ಹೇಳ್ಲೂ ತಯಾರು…
ಸುಮ್ಮನೆ ಅಲ್ಲ ಹಿರಿಯರು ಹೇಳಿದ್ದದು, `ಯಾರಿಗೆ ಯಾರುಂಟೋ ಎರವಿನ ಸಂಸಾರ…’ ಹೇಳಿ. ಅಲ್ಲದೋ?

~*~*~

 

ಶೀಲಾಲಕ್ಷ್ಮೀ ಕಾಸರಗೋಡು

   

You may also like...

23 Responses

 1. ಶೈಲಜಾ ಕೇಕಣಾಜೆ says:

  ಕಣ್ಣಿ೦ಗೆ ಕಟ್ಟುವ ಹಾ೦ಗೆ ವಿವರಿಸಿ ಬರದ ಕತೆ .. ಧನ್ಯವಾದ ಶೀಲಕ್ಕಾ…

 2. ರಘು ಮುಳಿಯ says:

  ಓದುಸಿಗೊ೦ಡು ಹೋಪ ಕಥೆ ,ಧನ್ಯವಾದ ಅಕ್ಕ . ಸಾಹಿತ್ಯ ಸೇವೆ ಮುಂದುವರಿಯಲಿ .

 3. sheelalakshmi says:

  ಪ್ರೋತ್ಸಾಹದ ಮತುಗೊಕ್ಕೆ ಕೃತಜ್ನತೆಗೋ ಮುಳಿಯದ ಅಣ್ಣ.

 4. krishnabhat valakunja says:

  ತುಂಬಾ ಒಳ್ಳೆಯ ಕಥೆ. ನಿರೀಕ್ಷೆಯೇ ಇಲ್ಲದ್ದ ಕೊಡು ಕೊಳ್ಳುವಿಕೆ. ಅತೀ ಸುಂದರ. ಕಥೆಗಾರ್ತಿಗೆ ಶುಭಾಶಯಂಗೊ .

 5. sheelalakshmi says:

  ಧನ್ಯವಾದಂಗೊ

 6. Shreedhara Ballullaya, Pune says:

  ಗ್ರೆತ್ತ್ Finish

 7. Shreedhara Ballullaya, Pune says:

  Great touch while finishing.

 8. sheelalakshmi says:

  ಸಂತೋಷ. ಬಳ್ಳುಳಾಯರೇ, ಧನ್ಯವಾದಂಗೊ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *