- ಮಹಾನಗರದ ಮಹಾನ್ ಸಾಧಕಿ – ಡಾ.ಸುನಂದ ನಾರಾಯಣ ಭಟ್. - May 18, 2015
- ರಾಮಾಯಣ ಅಲ್ಲ ಪಿಟ್ಕಾಯನ - April 4, 2015
- ಪಾರುವ ಸ್ವಗತ - June 23, 2014
ಹೆಂಡತ್ತಿ ಚೊಚ್ಚಲ ಬಸರಿ, ಗೆಂಡನೋ ಮಹಾ ರಸಿಕ ಅಲ್ಲದ್ದೆ ಕವಿ ಬೇರೆ. ಆಟಿ ತಿಂಗಳ ಬಿಡದ್ದೆ ಬತ್ತ ಜಿಟಿ ಜಿಟಿ ಮಳೆ, ಗುಡುಗು ಸೆಡ್ಲಿನ ಆರ್ಭಟಕ್ಕೆ ಹೆದರಿ ಗೆಂಡನ ಆಸರೆಗೆ ಬಂದ ಮನೋ ರಮಣೆ ಕಸ್ತಲೆ ಕಟ್ಟಿ ಬತ್ತ ಮಳೆಗೆ ಅಸಕ್ಕ ಆಗದ್ದ ಹಾಂಗೆ ಕತೆ ಹೇಳುಲೆ ಕೇಳಿಗೊಳ್ತು. ಇಷ್ಟಪಟ್ಟು ಕತೆ ಕೇಳುವವು ಇಪ್ಪಗ ಕತೆ ಹೇಳುಲೆ ಇದೇ ಒಳ್ಳೆ ಸಮಯ ಹೇಳಿ ಗ್ರೇಶಿಗೊಂಡು ಕವಿ ಸಂತೋಷಲ್ಲಿ ಒಪ್ಪಿಗೊಳ್ತ. ಎಂತ ಕತೆ, ಹೇಂಗಿರ್ಸ ಕತೆ ಇತ್ಯಾದಿಯಾಗಿ ಮಾತಾಡಿಗೊಂಡು ಹೇಳೆಕ್ಕಪ್ಪ ಕತೆಯ ನಿಘಂಟು ಮಾಡಿಯಾತು. “ಸರಿ. ಆನು ಮುದ್ದಣ,ನೀನು ಮನೋರಮೆ.ಕತೆ ಹೇಳ್ತಾ ಇಪ್ಪ ಹಾಂಗೆ ನಿನ್ನ ಸಂಶಯಕ್ಕೆ ಪರಿಹಾರವನ್ನೂ ಕೊಟ್ಟುಗೊಂಡು ಹೋವುತ್ತೆ”
ಈ ಸಂದರ್ಭ – ಸಲ್ಲಾಪವ ತಾನು ಬರವಲೆ ನಿಘಂಟು ಮಾಡಿದ ಹೊಸ ಗ್ರಂಥಲ್ಲಿ ಕಥಾ ನಿರೂಪಣೆಗೆ ಬಳಸಿಗೊಂಡರೆ ಅದು ಹೊಸ ತಂತ್ರಗಾರಿಕೆ ಅಕ್ಕು ಹೇಳ್ತ ಯೋಚನೆ ಕವಿಯ ತಲೆಲಿ ಸುಳಿತ್ತು
ಮಳೆಗಾಲದ ವರ್ಣನೆಂದಲೆ ಕತೆಯ ಶುರು ಮಾಡ್ತ.
ಓವೋ..ಕಾಲಪುರುಷಂಗೆ ಗುಣಮಣಮಿಲ್ಲಂ ಗಡ…
ನಿಸ್ತೇಜಂ ಗಡ ಜಡಂ ಗಡ..ಒಡಲೊಳ್
ಗುಡುಗುಟ್ಟುಗಂ ಗಡ..ಏನರಮನೆವಾಗಿಲಂ
ಮುಗಿಲ್ದೆರೆಯಿಂ ಬಾಸಣಿಸಿರ್ಪರ್…
ಇದು ಮುದ್ದಣ ರಚಿತ “ಶ್ರೀ ರಾಮಾಶ್ವಮೇಧಂ” ಗ್ರಂಥದ ಆರಂಭದ ಸಾಲುಗೊ. ಗ್ರಂಥ ರಚನೆಯ ಹಿನ್ನೆಲೆಯ ಕವಿಯ ಸಾಂಸಾರಿಕ ಬದುಕಿನೊಟ್ಟಿಂಗೆ ಕೂಡುಸಿ ಹೀಂಗೊಂದು ರಮಣೀಯವಾದ ವಿವರಣೆಯ ಶ್ರೀ ಬೇಲೂರು ರಾಮಮೂರ್ತಿ ತಮ್ಮ “ಮಹಾಕವಿ ಮುದ್ದಣ” ಕಾದಂಬರಿಲಿ ಕೊಟ್ಟಿದವು. ಮುಂದೆ ಮುದ್ದಣ ಮನೋರಮೆಯರ ಈ ಸಲ್ಲಾಪ ಗ್ರಂಥದ ಮುಖ್ಯ ಭಾಗವೇ ಆಗಿ ಪ್ರಸಿದ್ದಿ ಪಡೆತ್ತು. ನವರಸ ತುಂಬಿಗೊಂಡಿಪ್ಪ ರಾಮಾಶ್ವಮೇಧದ ಕತೆಯ ಹೃದ್ಯವಾದ ಗದ್ಯಲ್ಲಿಯೇ ಹೇಳೆಕ್ಕಪ್ಪದು ಮನೋರಮೆಯ ಮನೋಗತ.
ಮುದ್ದಣ : ಆದೊಡಾಲಿಸು…ಸ್ವಸ್ತಿ ಶ್ರೀ ಮತ್ಸುರಾಸುರೇಂದ್ರ ನರೇಂದ್ರ ಮುನೀಂದ್ರ ಫಣೀಂದ್ರ ಮಣಿಮುಕುಟ ತಟಘಟಿತ..
ಮನೋರಮೆ : ಓಓ..! ತಡೆ! ತಡೆ! ..ವಸುಧೆಗೊಡೆಯನಪ್ಪ ರಾಮಚಂದ್ರನ ಕಥೆಯಂ ಪೇಳೆನೆ ಬಸದಿಗೊಡೆಯರಪ್ಪ ಸುರೇಂದ್ರರ ಚರಿತೆಯಂ ಪೇಳ್ಪುದೇಂ ? ಸಾಲ್ಗುಂ..ಸಾಲ್ಗುಂ…ಇಂತೆರ್ದೆಗೊಳ್ಬ ಕತೆಗೆಂತುಡುಗೊರೆಗೆಯ್ಬೆನೋ ?
ಮುದ್ದಣ: ನಲ್ನುಡಿಯಿದು ರಮಣಿ! ಅಲ್ತು…ಬಸದಿಯಿಂದ್ರರ ಕತೆಯಲ್ತು…ರಾಮಚಂದ್ರನ ಕತೆಯನೆ ಪೊಗಳ್ದು ಪೇಳ್ವುದಿದು ಸಕ್ಕದದೊಂದು ಸೊಗಸು..ಚೆಲ್ವು
ಮನೋರಮೆ : ಲೇಸು..ಲೇಸು..ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು. ಕನ್ನಡದ ಸೊಗಸನರಿಯಲಾರ್ತೆನಿಲ್ಲೆನಗೆ ಸಕ್ಕದದ ಸೊಗಸಂ ಪೇಳ್ವುದು ಗಡ
ಮುದ್ದಣ : ಅಪ್ಪಡಿನ್ನೆಂತೋ ಒರೆವೆಂ
ಮನೋರಮೆ : ತಿರುಳ್ಗನ್ನಡದ ಬೆಳ್ನುಡಿಯೊಳ್ ಪುರುಳೊಂದೇ ಪೇಳ್ವುದು ಕನ್ನಡಂ ಕತ್ತೂರಿಯಲ್ತೆ
ಮುದ್ದಣ : ಅಪ್ಪುದಪ್ಪುದು…ಆದೊಡಂ ಸಕ್ಕದವೊಂದೇ ರನ್ನವಣಿಯಂ ಪೊನ್ನಿಂ ಬಿಗಿದೆಂತೆಸೆಗುಂ.ಅದರಂ ಕರ್ಮಣಿಸರದೊಳ್ ಚೆಂಬವಳಮ್ ಕೋದಂತಿರೆ, ರಸವೊಸರೆ ಲಕ್ಕಣಂ ಮಿಕ್ಕಿರೆ,ಎಡೆಎಡೆಯೋಳ್ ಸಕ್ಕದದ ನಲ್ನುಡಿ ಮೆರೆಯೆ ತಿರುಳ್ಗನ್ನಡದೊಳ್ ಕಥೆಯನುಸಿರ್ವೆಂ.
ಅಪ್ಪು, ಆನು ಈಗ ಬರವಲೆ ಹೆರಟದು ಒಂದು ಪುಸ್ತಕದ ಪರಿಚಯವೆ. ಆದರೂ, ಇದು ಬರೇ ಪುಸ್ತಕ ಪರಿಚಯ ಮಾಂತ್ರ ಅಲ್ಲ, ನಮ್ಮ ಕರಾವಳಿ ಪ್ರದೇಶದ ಮಹಾನ್ ಕವಿ, ನವೋದಯ ಕಾವ್ಯದ ‘ಮುಂಗೋಳಿ’, ಕನ್ನಡ ಸಾರಸ್ವತ ಲೋಕದ ‘ಹೆರಿಯಣ್ಣ’ ಮುದ್ದಣನ ಜೀವನ ವೃತ್ತಾಂತವೂ ಅಪ್ಪು. ಕವಿ ಮುದ್ದಣನ ಜೀವನ ವೃತ್ತಾಂತವನ್ನೆಲ್ಲ ಅಧ್ಯಯನ ಮಾಡಿ,ಅದಕ್ಕೆ ತನ್ನ ಕಲ್ಪನೆಯ ಚಿತ್ರಣವನ್ನೂ ಸೇರಿಸಿ ಬರದ ಈ ಕೃತಿಲಿ ಕಾದಂಬರಿಕಾರ ಶ್ರೀ ಬೇಲೂರು ರಾಮಮೂರ್ತಿ “ಕವಿಯ ಬದುಕು-ಬರಹ ಯಾವುದಕ್ಕೂ ಅಪಚಾರವಾಗದ ಹಾಗೆ ಈ ಮಹಾಕವಿ ಮುದ್ದಣ ಕೃತಿಯನ್ನು ರಚಿಸಿದ್ದೇನೆ” ಹೇಳಿಗೊಂಡು ಈ ಚಾರಿತ್ರಿಕ ಕಾದಂಬರಿಯ ಬರದ್ದವು. ಹೆರಿ ವಿದ್ವಾಂಸ, ಶ್ರೀ ಟಿ. ಕೇಶವ ಭಟ್ರು ಇದಕ್ಕೆ ವಿಮರ್ಶಾತ್ಮಕವಾದ ಮುನ್ನುಡಿ ಬರದು ಪ್ರೋತ್ಸಾಹಿಸಿದ್ದವು. ಕಾದಂಬರಿಲಿ ಬಪ್ಪ ಎಲ್ಲ ಪಾತ್ರಂಗೊ ಆ ಕಾಲಲ್ಲಿ ಬಾಳಿ ಬದುಕಿದವೇ, ಘಟನಾವಳಿಗೊ ಮುದ್ದಣನ ಬಗ್ಗೆ ಸಿಕ್ಕಿದ ದಾಖಲೆ, ನಡಸಿದ ಪತ್ರ ವೆವಹಾರಂಗಳ ಅಧಾರಲ್ಲಿ ಪೋಣಿಸಿದ್ದು. ಸಂಭಾಷಣೆಗೊ ಕಾಲ್ಪನಿಕವಾದರೂ ಕವಿಯ ಜೀವನ ಚಿತ್ರಣಕ್ಕೆ ಪೂರಕವಾಗಿ ಸೇರ್ಸಿಗೊಂಡು ಕತೆಗೆ ನೈಜತೆಯ ತೋರ್ಸುವಲ್ಲಿ ಕಾದಂಬರಿಕಾರ ಯಶಸ್ವಿ ಆಯಿದವು. ಮುದ್ದಣನ ಬದುಕು-ಬರಹಂಗಳ ಬಗ್ಗೆ ತಿಳ್ಕೊಂಬಲೆ ಈ ಕಾದಂಬರಿ ಖಂಡಿತಾ ಸಹಾಯಕಾರಿ.
ನಂದಳಿಕೆ ಹೇಳ್ತ ಗ್ರಾಮದ ತಿಮ್ಮಪ್ಪಯ್ಯ(ತಮ್ಮಯ್ಯ) – ಮಹಾಲಕ್ಷ್ಮಿ ದಂಪತಿಗೊಕ್ಕೆ 24-1-1870 ರಲ್ಲಿ ಹೆರಿ ಮಗನಾಗಿ ಹುಟ್ಟಿದವ ಲಕ್ಷ್ಮಿನಾರಾಯಣ. ಮುದ್ದು ಮುದ್ದಾಗಿ ತ್ತಿದ್ದ ಮಾಣಿಯ ಕೊಂಡಾಟಲ್ಲಿ “ಮುದ್ದಣ” ಹೆಸರಿಲಿ ಮನೆಯೋರು ದೆನಿಗೇಳಿಗೊಂಡಿತ್ತಿದ್ದವು. ನಾಕನೇ ಕ್ಲಾಸಿನವರೆಗೆ ನಂದಳಿಕೆಲಿ ಕಲ್ತ ಲಕ್ಷ್ಮಿನಾರಾಯಣಂಗೆ ಮುಂದೆ ಕಲಿವ ಆಸೆ. ಬಡತನವ ಗಣ್ಯ ಮಾಡದ್ದೆ ತಮ್ಮಯ್ಯ ಉಡುಪಿಲಿ ಇಂಗ್ಲೀಷ್ ಶಾಲೆಗೆ ಸೇರ್ಸುತ್ತ. ಎರಡು ವರ್ಷ ಹೇಂಗೋ ಕಲುಸುತ್ತ. ಮುಂದಂಗೆ ಕಲುಸುಲೆ ಸಾಧ್ಯ ಆಗ ಹೇಳಿಯಪ್ಪದ್ದೆ, ಲಕ್ಷ್ಮಿನಾರಾಯಣ ತಾನೇ ಕಲ್ತುಗೊಂಬ ನಿರ್ಧಾರ ಮಾಡಿ ಮತ್ತೆ ಉಡುಪಿಗೆ ಬಂದು ಕನ್ನಡ ಟೀಚರ್ ಟ್ರೈನಿಂಗ್ ಶಾಲೆಗೆ ಸೇರುತ್ತ. ಅಲ್ಲಿ ವ್ಯಾಯಾಮ ಶಾಲೆಗೂ ಹೋಗಿ ದೇಹದಾರ್ಢ್ಯವನ್ನೂ ಬೆಳೆಶುತ್ತ. ಮುಂದೆ ಮದ್ರಾಸಿಂಗೆ ಹೋಗಿ ದೈಹಿಕ ಶಿಕ್ಷಣ ತರಬೇತಿಯನ್ನೂ ಗಳಿಸುತ್ತ. ಉಡುಪಿಯ ಬೋರ್ಡ್ ಶಾಲೆಲಿ ದೈಹಿಕ ತಬೇತಿ ಶಿಕ್ಷಕನ ಕೆಲಸ ಸಿಕ್ಕುತ್ತು. ಸಣ್ಣಾದಿಪ್ಪಗಂದಲೆ ದೇವಸ್ತಾನಲ್ಲಿ ನೋಡಿದ ಯಕ್ಷಗಾನದ ಪ್ರಭಾವಂದಲಾಗಿಯೊ ಏನೋ, ಸಾಹಿತ್ಯ ಗ್ರಂಥಂಗಳ ಓದುವ, ಅಭ್ಯಾಸ ಮಾಡುವ ಹವ್ಯಾಸ ಬೆಳೆತ್ತು. ಶಾಲೆಯ ಲೈಬ್ರೆರಿ ಮತ್ತೆ ಕನ್ನಡ ಮಾಸ್ಟ್ರ ಮಳಲಿ ಸುಬ್ಬರಾಯರ ಸಂಪರ್ಕಂದಲಾಗಿ ಕನ್ನಡ ಸಾಹಿತ್ಯ, ಕಾವ್ಯಂಗಳ ಬಗ್ಗೆ ಆಸಕ್ತಿ ಹೆಚ್ಚುತ್ತು. ” ರತ್ನಾವತಿ ಕಲ್ಯಾಣ” , “ಕುಮಾರವಿಜಯ” ಹೇಳ್ತ ಎರಡು ಪ್ರಸಂಗವ ಬರದು, ಸ್ವಂತ ಖರ್ಚಿಲಿ ಅಚ್ಚು ಮಾಡ್ಸುತ್ತ. ಆದರೆ ಅವೆರಡೂ ಮಾರಾಟ ಆಗದ್ದೆ ನಷ್ಟ ಅನುಭವಿಸೆಕ್ಕಾಗಿ ಬತ್ತು.
ಇದು, ಮುದ್ದಣನ ಬಗ್ಗೆ ಇಪ್ಪ ದಾಖಲೆಗಳ ಮಾಹಿತಿಂದ ಸಿಕ್ಕುವ ಜೀವನ ಚಿತ್ರಣ ಆತು. ನಂದಳಿಕೆ,ಅಲ್ಯಾಣ ಪರಿಸರ,ದೇವಸ್ತಾನ,ಒಡನಾಡಿಗೊ,ಕಲ್ತ ಶಾಲೆಯ ಮಾಸ್ಟ್ರಕ್ಕೊ ಇವರೆಲ್ಲ ಸೇರ್ಸಿಗೊಂಡು,ಆ ಕಾಲಲ್ಲಿ ನಡದಿಕ್ಕು ಹೇಳ್ತ ಕಲ್ಪನೆಲಿ, ನಾವು ಕಾಣದ್ದ ಅಥವಾ ನಮ್ಮ ಗೊಂತಿಂಗೆ ಬಾರದ್ದ ದೈನಂದಿನ ಚಿತ್ರಣವ, ರಸವತ್ತಾದ ಸಂಭಾಷಣೆಗಳೊಟ್ಟಿಂಗೆ ಪೋಣಿಸಿ ಒಂದು ಸುಂದರ ಕತೆಯಾಗಿ ನಿರೂಪಿಸಿದ್ದಲ್ಲಿ ಕಾದಂಬರಿಕಾರನ ಜಾಣ್ಮೆ ಎದ್ದು ಕಾಣುತ್ತು. “ಅಪ್ಪು, ಇದು ಹೀಂಗೇ ಆದ್ದದಾದಿಕ್ಕು” ಹೇಳ್ತ ಭಾವನೆ ಓದುಗನ ಮನಸ್ಸಿಂಗೆ ಬತ್ತು. ಇದೊಂದು ಸಾಮಾಜಿಕ ಕಾದಂಬರಿಯ ಹಾಂಗೆಯೂ ಅನುಸುತ್ತು.
ಉಡುಪಿಯ ಬೋರ್ಡ್ ಶಾಲೆಲಿ ಸುಬ್ಬರಾಯರ ಸಂಪರ್ಕಕ್ಕೆ ಬಂದ ನಂತ್ರ, ಅವರ ತನ್ನ ಕಾವ್ಯ ಗುರುವಾಗಿ ತಿಳ್ಕೊತ್ತ. ಅವರೊಳಗಿನ ಸಂಬಂಧದ ವರ್ಣನೆ ತುಂಬ ಚೆಂದಕ್ಕೆ ಬಯಿಂದು. ಸುಬ್ಬರಾಯರಿಂಗೆ ಕುಂದಾಪುರದ ಶಾಲೆಗೆ ವರ್ಗ ಆದಪ್ಪಗ,ಲಕ್ಷ್ಮಿನಾರಾಯಣ ಒಂಟಿತನವ ಅನುಭವಿಸುದು,ತನ್ನ ಕಾವ್ಯಾಭ್ಯಾಸ, ಬರವಣಿಗೆ ಹೇಂಗೆ ಮುಂದುವರುಸುದು ಹೇಳ್ತ ಚಿಂತೆ ಕಾಡುದು, ಮತ್ತೆ ತಾನೂ ಅದೇ ಶಾಲೆಗೆ ವರ್ಗ ಆಗಿ ಹೋಪದ್ದೆ ಅಪ್ಪ ಸಮಾಧಾನ – ಎಲ್ಲವೂ ಒಬ್ಬ ಶಾಲಾ ಮಾಸ್ಟ್ರನ ಸಾಮಾನ್ಯ ಜೀವನ ಚಿತ್ರಣದ ಹಾಂಗೆ ಇದ್ದು.
ಆದರೂ, ಸಿಕ್ಕಿದ ಸಮಯವ ಸದುಪಯೋಗ ಮಾಡ್ಯೊಂದು ಕೇಶೀರಾಜನ ‘ಶಬ್ಧಮಣಿ ದರ್ಪಣ’,ರೆವರೆಂಡ್ ಕಿಟ್ಟೆಲರ ಶಬ್ಧಾರ್ಥ ಕೋಶಂಗಳ ಅಭ್ಯಾಸ ಮಾಡಿ ಶಬ್ಧ ಭಂಢಾರವ ಹೆಚ್ಚಿಸಿಗೊಳ್ತ. ಹಳೆಗನ್ನಡ ಶೈಲಿಲಿ “ಅದ್ಭುತ ರಾಮಾಯಣ”ವ ಗದ್ಯ ರೂಪಲ್ಲಿ ಬರದು ಮುಗುಶುತ್ತ.ಸುಬ್ಬರಾಯರಿಂದ ಸಿಕ್ಕಿದ ಸದಭಿಪ್ರಾಯಂದ ಲಕ್ಷ್ಮಿನಾರಾಯಣಂಗೆ ಉತ್ತೇಜನ ಸಿಕ್ಕುತ್ತು. ಮದಲೆರಡು ಪುಸ್ತಕಂಗಳ ಛಾಪಿಸಿದ ಹಿಂದು ಪ್ರೆಸ್ಸಿನವು ಇದರ ಛಾಪುಸುಲೆ ಒಪ್ಪದ್ದೆ ಇಪ್ಪಗ, ಬೇರೆ ಯಾರೂ ಛಾಪುಸುಲೆ ತಯಾರಗದ್ದ ಕಾರಣ ದೊಡ್ಡ ಚಿಂತೆ ಕಾಡುತ್ತು. ಈಗಾಗಳೆ ಚಂದಾದಾರನಾಗಿ ತರ್ಸಿಗೊಂಡಿತ್ತಿದ್ದ ಮೈಸೂರಿನ ಮಾಸ ಪತ್ರಿಕೆ “ಕಾವ್ಯ ಮಂಜರಿ”ಲಿ ಪ್ರಕಟಣೆಗೆ ಕಳುಸುವ ಯೋಚನೆ ಬತ್ತು. ಒಬ್ಬ ಸಾಮಾನ್ಯ ವ್ಯಾಯಾಮ ಶಿಕ್ಷಕಂಗೆ ‘ಅದ್ಭುತ ರಾಮಾಯಣ’ದ ಹಾಂಗಿರ್ತ ಕಾವ್ಯ ರಚನೆ ಹೇಂಗೆ ಸಾಧ್ಯ? ಸಾಧ್ಯ ಆತು ಹೇಳಿ ಆದರೂ, ಕಾವ್ಯ ಮಂಜರಿ ಹಾಂಗಿರ್ತ ಉಚ್ಚ ದರ್ಜೆಯ ಮಾಸ ಪತ್ರಿಕೆಲಿ ಪ್ರಕಟಣೆಗೆ ಹೇಂಗೆ ಯೋಗ್ಯ ಹೇಳ್ತ ಕೀಳರಿಮೆ ಬತ್ತು. ಅಕೇರಿಗೆ ತನ್ನ ಹೆಸರು ಹಾಕದ್ದೆ ಕಳುಸುತ್ತ. ಕಾವ್ಯ ಮಂಜರಿಲಿ ಪ್ರಕಟವೂ ಆವುತ್ತು, ಒಳ್ಳೆ ಅಭಿಪ್ರಾಯವೂ ಸಿಕ್ಕುತ್ತು. ನಿರಾಸೆಯೊಟ್ಟಿಂಗೆ ಸಂತೋಷವೂ ಆವುತ್ತು.! ಒಟ್ಟೊಟ್ಟಿಂಗೆ “ಶ್ರೀ ರಾಮಪಟ್ಟಾಭಿಷೇಕಂ” ಕಾವ್ಯ ರಚನೆಗೂ ತೊಡಗುತ್ತ.ಇದನ್ನೂ ಕಾವ್ಯಮಂಜರಿಗೆ “ಮಹಾಲಕ್ಷ್ಮಿ ಎಂಬಾಕೆಯಿಂದ ರಚಿತವಾಗಿರುವ ಶ್ರೀ ರಾಮಪಟ್ಟಾಭಿಷೇಕ ಎನ್ನುವ ಗ್ರಂಥ ಸಿಕ್ಕಿದೆ.ವಾರ್ಧಕ ಷಡ್ಪದಿಯಲ್ಲಿ ರಚಿತವಾಗಿರುವ ಗ್ರಂಥವು ಪ್ರಕಟಣೆಗೆ ಯೋಗ್ಯ ಅನಿಸಿದೆ.ಅದಕ್ಕೇ ಕಳಿಸುತ್ತಿದ್ದೇನೆ” ಹೇಳಿ ಬರದು ಕಳಿಸುತ್ತ. ಗ್ರಂಥಕರ್ತನ ವಿಷಯಲ್ಲಿ ಕಾವ್ಯಮಂಜರಿಗೂ ಲಕ್ಷ್ಮಿನಾರಾಯಣಂಗೂ ಪತ್ರ ವೆವಹಾರ ನಡೆತ್ತು. ಆದರೂ ತಾನೇ ಈ ಎರಡರ ಕರ್ತೃ ಹೇಳುದರ ಗೋಪ್ಯವಾಗಿಯೇ ಮಡುಗುತ್ತ. “ನನಗೆ ಸಿಕ್ಕ ಕೃತಿಯನ್ನು ಯಥಾವತ್ತಾಗಿ ನಕಲು ಮಾಡಿದ್ದೇನೆ.ಇನ್ನು ಕವಿಯ ವಿಚಾರವಾಗಿ ನನಗೇನೂ ತಿಳಿಯದು”ಹೇಳಿ ಬರದು ಪತ್ರವೆವಹಾರವ ಮುಗುಶುತ್ತ. ಇದಾಗಿ ಕೆಲವೆ ಸಮಯಲ್ಲಿ “ಕಾವ್ಯಮಂಜರಿ”ಯ ಸಂಪಾದಕರಾದ ಶ್ರೀ ರಾಮಾನುಜ ಅಯ್ಯಂಗಾರ್ಯರೆ ಬರದ ಕಾಗದ ಬತ್ತು.- “…..ಅದ್ಭುತ ರಾಮಾಯಣ ಹಾಗೂ ಮಹಾಲಕ್ಷ್ಮಿ ಎಂಬಾಕೆ ಬರೆದಿದ್ದೆಂದು ಹೇಳಿ ನೀವೇ ಕಳಿಸಿದ್ದ ಶ್ರೀ ರಾಮಪಟ್ಟಾಭಿಷೇಕ ಗ್ರಂಥಗಳೆರಡೂ ಮದರಾಸು ವಿಶ್ವವಿದ್ಯಾನಿಲಯದ ಎಫ್.ಎ.ಪರೀಕ್ಷೆಗೆ ಆಯ್ಕೆಯಾಗಿವೆ.ಇವೆರಡನ್ನೂಪಠ್ಯಪುಸ್ತಕಗಳನ್ನಾಗಿ ನಿಯಮಿಸಿದ್ದಾರೆ….ಲೇಖಕರು ಯಾರು ಎಂದು ಗೊತ್ತಾಗಿದ್ದರೆ ಅವರಿಗೂ ಇದರಿಂದ ಹೆಸರು ಬರುತ್ತಿತ್ತು, ಗೌರವ ಧನವೂ ಬರುತ್ತಿತ್ತು…” ಹೆತ್ತಬ್ಬೆಗೆ ತಾನು ಹೆತ್ತ ಮಗನ ಸಾಧನೆ ಕಂಡು, ತಾನೇ ಮಗನ ಅಬ್ಬೆ ಹೇಳಿ ಒಪ್ಪಿಗೊಂಬಲೆ ಅಸಾಧ್ಯ ಆದ ಸ್ಥಿತಿ ಲಕ್ಷ್ಮಿನಾರಾಯಣಂಗೆ.! ತನ್ನ ಕೀಳರಿಮೆಗೆ ಸಂಕಟ ಆಗಿ ಕಣ್ಣೀರು ಹರಿಸಿ ಕೂಗಿದ್ದು ಮಾಂತ್ರ.!!
ಉಡುಪಿಲಿ ಕ್ರಿಶ್ಛಿಯನ್ ಹೈಸ್ಕೂಲ್ ಶುರು ಆದ ಮತ್ತೆ ಲಕ್ಶ್ಮಿನಾರಾಯಣಂಗೆ ಅಲ್ಲಿ ಕೆಲಸ ಸಿಕ್ಕುತ್ತು. ಹುರುಳಿ ಭೀಮರಾಯರ ಸಂಪರ್ಕಂದಲಾಗಿ ಪರಸ್ಪರ ಕುಟುಂಬ ಸ್ನೇಹವೂ ಬೆಳೆತ್ತು. ಕೊಡೆಯಾಲದ ಗೌರ್ನಮೆಂಟ್ ಕೊಲೇಜಿಲಿ ಕನ್ನಡ ಅಧ್ಯಾಪಕನ ಸ್ಥಾನ ಕಾಲಿ ಇಪ್ಪದು ಗೊಂತಾಗಿ ಅದಕ್ಕೆ ಅರ್ಜಿ ಹಾಕಿದ್ದಕ್ಕೆ ಸಂದರ್ಶನಕ್ಕೆ ಬಪ್ಪಲೆ ದೆನಿಗೇಳ್ತವು.ಅಲ್ಲಿ ಲಕ್ಷ್ಮಿನಾರಾಯಣಂಗೆ ವ್ಯಾಯಾಮ ಶಿಕ್ಷಕನಾದ ಕಾರಣಂದಲೂ, ಇಂಗ್ಲೀಶ್ ಜ್ಞಾನ ಇಲ್ಲದ್ದರಿಂದಾಗಿಯೂ,ಇನ್ನೊಬ್ಬ ಅಭ್ಯರ್ಥಿ ಪಂಜೆ ಮಂಗೇಶ ರಾಯರಿಂಗೆ ಆ ಕೆಲಸ ಸಿಕ್ಕುತ್ತು.ಕೆಲಸ ಸಿಕ್ಕದ್ದರೂ ಪಂಜೆಯವರ ಪರಿಚಯದ ಲಾಭ ಲಕ್ಷ್ಮಿನಾರಾಯಣಂಗೆ ಸಿಕ್ಕುತ್ತು.! ಕಾಗದ ಬರದು ಅಭಿನಂದನೆ ತಿಳಿಸಿದ್ದಕ್ಕೆ ಪ್ರತಿಯಾಗಿ ಶ್ರೀ ಪಂಜೆ ಉತ್ತರ ಬರತ್ತವು – ಭತ್ತದ ಸಿಪ್ಪೆಯನ್ನು ಕುಟ್ಟುವ ಒನಕೆಯನ್ನು ಕನ್ನಡ ಕಲಿಸಲು ತಂದರು.ಆದರೆ ಚಿತ್ರಬಿಡಿಸುವ ಬಣ್ಣದ ಗರಿಯನ್ನು ಕಿವಿ ತೊಳೆಯುವ ಕುಗ್ಗೆ ಕಡ್ಡಿಯನ್ನಾಗಿ ಉಳಿಸಿದರು
ತಾನು ಬರವಲೆ ನಿಘಂಟು ಮಾಡಿದ ರಾಮಾಶ್ವಮೇಧ ಪ್ರಸಂಗಕ್ಕೆ ಬೇಕಾದ ತಯಾರಿ ಮುಂದುವರಿತ್ತು.ಅದೇ ಸಮಯಲ್ಲಿ ಪಂಜೆ ಮಂಗೇಶರಾಯರಿಂದ “….ಅದ್ಭುತ ರಾಮಾಯಣ, ಶ್ರೀ ರಾಮ ಪಟ್ಟಾಭಿಷೇಕ ಎಂಬೆರಡು ಕಾವ್ಯಗಳನ್ನು ಕಾಲೇಜಿನಲ್ಲಿ ಕಲಿಸುವ ಕೆಲಸ ನನಗೆ ಬಿದ್ದಿದೆ.ಈ ಎರಡರ ಪೈಕಿ ಶ್ರೀ ರಾಮಪಟ್ಟಾಭಿಷೇಕದ ಒಂದು ಚರಣಕ್ಕೆ ಅರ್ಥ ಸಿಕ್ಕಿಲ್ಲ. ಇನ್ನೊಂದು ಚರಣ ಅಪೂರ್ಣವಾಗಿದೆ” ಹೇಳಿ ಅರ್ಥ ವಿವರಣೆ ಕೇಳಿಗೊಂಡು ಕಾಗದವೂ ಬತ್ತು.! ಅದಕ್ಕೆ ಪ್ರತಿಯಾಗಿ ಪರಿಹಾರ ಬರದು ಕಳುಗುತ್ತ. ಇನ್ನು ಮುಂದಾಣ ರಚನೆಗೊಕ್ಕೆ ಕಾವ್ಯನಾಮವ ಬಳಸಿಗೊಂಬ ಆಲೋಚನೆ ಮಾಡ್ತ. ಮನೆಲಿ ಅಬ್ಬೆ-ಅಪ್ಪ ದೆನಿಗೇಳಿಗೊಂಡಿತ್ತಿದ್ದ ‘ಮುದ್ದಣ‘ಹೆಸರಿಲಿ “ರಾಮಾಶ್ವಮೇಧಂ”ಬರವ ನಿರ್ಧಾರಕ್ಕೆ ಬತ್ತ. ಪತಿ-ಪತ್ನಿಯರ ಸಂವಾದಲ್ಲಿ ಕತೆಯ ಬೆಳೆಶಿಗೊಂಡು ಗದ್ಯ ರೂಪಲ್ಲಿ ಕಾವ್ಯ ರಚನೆಗೆ ತೊಡಗುತ್ತ. ಅದಕ್ಕಾಗಿ ‘ಮನೊರಮೆ’ಯ ಪಾತ್ರವ ಸೃಷ್ಟಿಸಿ ನಿತ್ಯ ನೂತನವಾಗಿಪ್ಪ ಸರಸ ಸಂಭಾಷಣೆಗಳೊಟ್ಟಿಂಗೆ ಅದ್ಭುತ ಕಾವ್ಯವನ್ನೆ ಬರೆತ್ತ. ‘ಮುದ್ದಣ’ ಹೆಸರಿಲಿ ಕಾವ್ಯಮಂಜರಿಗೆ ಪ್ರಕಟಣೆಗೆ ಬರದು ಕಳುಸುತ್ತ.
ಇದರೆಡೆಲಿ ಲಕ್ಷ್ಮಿನಾರಾಯಣಂಗೆ ಸಂಸಾರ ಸುಖದ ಅನುಭವವೂ ಸಿಕ್ಕುತ್ತು. ‘ಮುದ್ದಣ-ಮನೋರಮೆ‘ಯರಿಂಗೆ ಮಗ ‘ರಾಧಾಕೃಷ್ಣ‘ ಮನೆ, ಮನಸ್ಸಿನ ತುಂಬುತ್ತ. ಸಂಸಾರದ ಜವಾಬ್ದಾರಿಯೊಟ್ಟಿಂಗೆ ಸಾಹಿತ್ತಿಕ ಅಭ್ಯಾಸ, ಸಂಸ್ಕೃತ ಕಲಿಕೆ, ಬರವಣಿಗೆ, ಶಾಲೆ ಕೆಲಸ ಹೇಳ್ಯೊಂಡು ಪುರುಸೊತ್ತಿಲ್ಲದ್ದೆ ಕೆಲಸ ಮಾಡ್ತ. “ಚಕ್ರಧಾರಿ” ಹೆಸರಿಲಿ ಬರದ ವಿದ್ವತ್ಪೂರ್ಣ ಲೇಖನಂಗೊ ಪತ್ರಿಕೆಗಳಲ್ಲಿ ಪ್ರಕಟ ಆವುತ್ತು. ಬೆನಗಲ್ ರಾಮರಾಯ ಹೇಳ್ತ ಸಜ್ಜನರ ಪರಿಚಯ ಆಗಿ ಸ್ನೇಹ ಬೆಳೆತ್ತು.ಕಾವ್ಯಮಂಜರಿಲಿ ಪ್ರಕಟ ಆದ ಕಾವ್ಯಂಗಳ ತಾನೇ ಬರದ್ದು ಹೇಳುದರ ಅವರೆದುರು ಒಪ್ಪಿಗೊಳ್ತ.!
ಬಿಡುವೇ ಇಲ್ಲದ್ದ ದುಡಿಮೆಂದಾಗಿ ಲಕ್ಷ್ಮಿನಾರಾಯಣನ ಆರೋಗ್ಯ ದಿನಂದ ದಿನಕ್ಕೆ ಕ್ಷೀಣ ಆವುತ್ತು. ಸೆಮ್ಮಿ-ಸೆಮ್ಮಿ ದೇಹ ಜೀರ್ಣ ಆವುತ್ತು. ವೈದ್ಯರ ಪ್ರಕಾರ ಅದು “ಕ್ಷಯ”ರೋಗ ಹೇಳಿ ಗೊಂತಪ್ಪದ್ದೆ ಲಕ್ಷ್ಮಿನಾರಾಯಣಂಗೆ ಆಘಾತ ಆವುತ್ತು.! ಹೆಂಡತ್ತಿಗೆ ಗೊಂತಾದರೆ ಗಾಬರಿ ಬೀಳುಗು ಹೇಳ್ತ ಉದ್ದೇಶಂದ,ಸಾಂಕ್ರಾಮಿಕವಾದ ಈ ರೋಗ ಮಡದಿ-ಮಗಂಗೆ ಪಗರುಲಾಗ ಹೇಳ್ತ ಉದ್ದೇಶಂದ, ಉಪಾಯಲ್ಲಿ ಅವರ ಅಪ್ಪನ ಮನೆಗೆ ಕಳುಗುತ್ತ. ಕಾದಂಬರಿಕಾರ ಈ ಸನ್ನಿವೇಶವ ಚಿತ್ರಿಸಿದ ರೀತಿ ಮನಕಲಕುವ ಹಾಂಗಿದ್ದು.! –
” ಈಗ ಕಮಲೆಯೂ,ಮಗುವೂ ಹೊರಟುಬಿಟ್ಟರೆ ಅದೇ ನನಗೆ ಅವರ ಅಂತಿಮ ದರ್ಶನ,ಅವರಿಗೂ ಅಂತಿಮ ದರ್ಶನವೇ. ಆದರೆ,ಈ ವಿಷಯ ನನಗೆ ತಿಳಿದಿದೆ.ಅವರಿಗೆ ತಿಳಿದಿಲ್ಲ ಅನ್ನುವುದೇ ಹೃದಯ ಹಿಂಡುವಂಥದು. ಪಾಪ..ಹಸುಳೆ ರಾಧಾಕೃಷ್ಣ.”
ಯಾರಿಗೂ ತಿಳಿಯದ ಹಾಗೆ ಕಣ್ಣೀರು ಒರೆಸಿಕೊಂಡ. ತಾತನ ಹೆಗಲೇರಿದ್ದ ರಾಧಾಕೃಷ್ಣ ತಂದೆ ಕರೆದರೂ ಬರಲಿಲ್ಲ.
ಆದರೆ, ಮುದ್ದಣನಿಗೆ ಮಗನನ್ನು ಒಂದು ಸಾರಿ ಎತ್ತಿಕೊಂಡು ಮುದ್ದಿಸಬೇಕು ಅನ್ನುವ ಆಸೆ ಇತ್ತು.ಆಸೆಯ ಹಿಂದೆಯೇ ಹೆದರಿಕೆ ಕೂಡಾ.ಮಾವನನ್ನು ಅಪ್ಪಿ ಭುಜದ ಮೇಲೆ ಮಲಗಿದ ಮಗನ ಬೆನ್ನು ಸವರಿದ. ಕಮಲೆ ಗಂಡನ ಕಾಲಿಗೆರದಳು.
ಹೀಂಗೆ ಮುಂದುವರಿಸಿ ಮುದ್ದಣನ ಅಂತ್ಯವನ್ನೂ ಚಿತ್ರಿಸಿ ಕಾದಂಬರಿಕಾರ ಮಹಾಕವಿ ಮುದ್ದಣನ ಬದುಕು-ಬರಹಂಗಳ ವಿಚಾರವಾಗಿ ಬರದ ಈ ಕಾದಂಬರಿ ಮುದ್ದಣನ ಅಭಿಮಾನಿಗೊಕ್ಕೆ ಒಳ್ಳೆದೊಂದು ಕೊಡುಗೆ. ಶ್ರೀ ಟಿ.ಕೇಶವ ಭಟ್ರು ಮುನ್ನುಡಿಲಿ ಬರದ ಕೆಲವು ವಾಕ್ಯಂಗೊ ಇಲ್ಲಿ ಉಲ್ಲೇಖನೀಯ – “………ಎಲ್ಲ ಕಥಾನಾಯಕ ಗುಣಗಳೊಂದಿಗೆ ಮುದ್ದಣನಿಗೆ ಅತಿಬಾಧಕಗಳಾಗಿದ್ದ ದಾರಿದ್ರ್ಯ,ರೋಗಪೀಡೆ,ಅಲ್ಪಾಯುಶ್ಯತೆ,ಭೌತಿಕ ವಿಪತ್ತುಗಳು,ಸಹೃದಯರ ಮರ್ಮಭೇದಕಗಳಾಗಿವೆ. ‘ಅಯ್ಯೋ ಇಂಥವನಿಗೆ ಹೀಗಾಯಿತಲ್ಲ..ಹೀಗಾಗಬಾರದಿತ್ತು‘ ಎನಿಸುತ್ತದೆ. ಮುದ್ದಣ ಕವಿಗೆ ಆಯುಷ್ಯ ನೀಡದ ವಿಧಿ ನಿಂದನೀಯವಾಗುವಂತಿದೆ.ಕಾಲಪುರುಷಂಗೆ ಗುಣಮಣಮಿಲ್ಲಂಗಡ ಎಂಬ ಕವಿವಾಣಿಯನ್ನು ನಾವು ಪುನರುಚ್ಚರಿಸುವಂತಾಗಿದೆ.”
ಮುದ್ದಣಂಗೆ ಒಂದೊಪ್ಪ: “ಕುಮಾರವಿಜಯ ಬಿಟ್ಟರೆ ಪ್ರಸಂಗವಿಲ್ಲ ನಂದಳಿಕೆಯವರನ್ನು ಬಿಟ್ಟರೆ ಕವಿಯಿಲ್ಲ” ಶ್ರೀ ಪಂಜೆಯರ ಈ ಮಾತಿಲಿ ಯೇವುದೇ ಅತಿಶಯೋಕ್ತಿ ಕಾಣ್ತಿಲ್ಲೆ. ಬಡತನಲ್ಲಿಯೇ ಬದುಕಿದ ಮುದ್ದಣ ಮೂವತ್ತೊಂದರ ಸಣ್ಣ ಪ್ರಾಯಲ್ಲಿ ಫೆಬ್ರುವರಿ 15 ,1901 ರಲ್ಲಿ ಕಣ್ಮುಚ್ಚಿದವು.ಮರಣಾನಂತರ, 1929 ರಲ್ಲಿ ಬೆಂಗಳೂರು ಸೆಂಟ್ರಲ್ ಕೋಲೇಜಿನ ಕರ್ಣಾಟಕ ಸಂಘದವು ಮುದ್ದಣ ಸ್ಮರಣ ಸಂಚಿಕೆಯ ಪ್ರಕಟ ಮಾಡ್ಲಪ್ಪಗ, ಅವರ ಸಹವರ್ತಿಗೊ ಮಳಲಿ ಸುಬ್ಬರಾಯರು,ಹುರುಳಿ ಭೀಮರಾಯರು, ಪಂಜೆ ಮಂಗೇಶ ರಾಯರು,ಬೆನಗಲ್ ರಾಮರಾಯರು – ಇವೆಲ್ಲೋರು ಸೇರಿ ಮುದ್ದಣನೊಟ್ಟಿಂಗೆ ಇತ್ತಿದ್ದ ಒಡನಾಟಂಗಳ ವಿವರಿಸಿ ಅದ್ಭುತ ರಾಮಾಯಣ, ಶ್ರೀ ರಾಮ ಪಟ್ಟಾಭಿಷೇಕ,ಶ್ರೀ ರಾಮಾಶ್ವಮೇಧ ಕೃತಿಗಳ ಮುದ್ದಣನೇ ಬರದ್ದದು ಹೇಳಿ ಪ್ರತಿಪಾದಿಸಿದವು.ಮುದ್ದಣನ ಹೆಸರಿನೊಟ್ಟಿಂಗೆ ಅವನ ಹುಟ್ಟೂರು ನಂದಳಿಕೆಯೂ ಪ್ರಖ್ಯಾತಿ ಪಡತ್ತು. ಪ್ರತಿ ವರ್ಷ ನಂದಳಿಕೆಲಿ ‘ಮುದ್ದಣ ಜಯಂತಿ‘ಯ ಆಚರುಸುತ್ತವು. ನಂದಳಿಕೆ ಶ್ರೀ ಬಾಲಚಂದ್ರ ರಾಯರ ನೇತ್ರತ್ವಲ್ಲಿ ಕವಿ ಮುದ್ದಣ ಸ್ಮಾರಕ ಮಿತ್ರ ಮಂಡಳಿ 1979 ರಲ್ಲಿ ಅಸ್ತಿತ್ವಕ್ಕೆ ಬಂತು. 1987 ರಲ್ಲಿ ಮುದ್ದಣ ಸ್ಮಾರಕ ಭವನ ದ ನಿರ್ಮಾಣವೂ ಆಯಿದು. ಕಾಂತಾವರ ಕನ್ನಡ ಸಂಘದವು ಪ್ರತಿವರ್ಷ ಕನ್ನಡದ ಅತ್ಯುತ್ತಮ ಹಸ್ತಪ್ರತಿಯ ಕಾವ್ಯಕ್ಕೆ ಮುದ್ದಣ ಕಾವ್ಯ ಪ್ರಶಸ್ತಿ ಸಮ್ಮಾನವ ಕೊಡ್ತಾ ಬಯಿಂದವು.
~****<>***~
ಒಪ್ಪಣ್ಣನ ಬೈಲಿಲ್ಲಿ ಮುದ್ದಣನ ಪರಿಚಯ ಲೇಖನ ನೋಡಿ ಕೊಶಿ ಆತು. “ಮುದ್ದಣ”ನ ಜೀವನ ಚರಿತ್ರೆ ಓದಿ ಅಪ್ಪಗ ಬಾಲಣ್ಣ ಹೇಳಿದ ಹಾಂಗೆ ತುಂಬಾ ಬೇಜಾರುದೆ ಆತು. ಅಷ್ಟು ಸಣ್ಣ ಪ್ರಾಯಲ್ಲೇ ಅವು ತೀರಿ ಕೊಳ್ಳದೆ ಇದ್ದಿದ್ದರೆ, ಕನ್ನಡ ಸಾಹಿತ್ಯ ಲೋಕಕ್ಕೆ ಇನ್ನೂ ಅದ್ಭುತ ಕೊಡುಗೆಗೊ ಅವರಿಂದ ಖಂಡಿತಾ ಬತ್ತಿತು. ತಾನು ಬರದ ಕೃತಿಗೆ ಮನ್ನಣೆ ಸಿಕ್ಕುವಗ ತಾನೇ ಬರದ್ದದು ಹೇಳಲಾಗದ್ದ ಪರಿಸ್ಥಿತಿ ಕೇಳಿ ಬೇಜಾರಾತು. ಕೊನೆ ಸಮೆಲಿ ಹೆಂಡತಿಯನ್ನೂ, ಮಗನನ್ನೂ ಅಪ್ಪನ ಮನಗೆ ಕಳುಸಿಕೊಟ್ಟ ಪ್ರಸಂಗ ಮನಸ್ಸಿಂಗೆ ತುಂಬಾ ತಟ್ಟಿತ್ತು.
ನಂದಳಿಕೆಲಿ ಅವರ ಹೆಸರಿಲ್ಲಿ ಹಲವು ಕಾರ್ಯಂಗೊ ನೆಡತ್ತು ಹೇಳುವದು ಸಂತೋಷದ ವಿಷಯ. ಕವಿ ಮುದ್ದಣಂಗೆ ಹೃತ್ಪೂರ್ವಕ ನಮನಂಗೊ. ಪರಿಚಯ ಮಾಡಿಕೊಟ್ಟ ಕುಮಾರಣ್ಣಂಗೆ ಅಭಿನಂದನೆಗೊ.
ಮುದ್ದಣ ಕವಿ ,ಮತ್ತೆ ಶ್ರೀನಿವಾಸ ರಾಮಾನುಜನ್ ಅವರ ಜೀವನವ ನೆನೆಸಿರೆ ದುಃಖ ಆವುತ್ತು.ಎಂತಾ ಪ್ರತಿಭೆಗೊ ರೋಗಬಾಧೆಂದ ಮುರುಟಿಹೋದವು!
ಒಬ್ಬಬ್ಬನದ್ದು ಒಂದೊಂದು ವಿಷಯಲ್ಲಿ ಎತ್ತಿದ ಕೈ . ಪುಸ್ತಕ ಪರಿಚಯದೊಟ್ಟಿಂಗೆ ಸಾಹಿತಿಗಳ ಪರಿಚಯ ಮಾಡುವುದರಲ್ಲಿ ತೆ.ಕು.ಮಾವ ಎತ್ತಿದ ಕೈ. ಹರೇ ರಾಮ ಮಾವ°. ಒಳ್ಳೆ ಲಾಯಕ ಆಯ್ದು.
ತನ್ನ ಕೃತಿಯ ತನ್ನದೇ ಹೆಸರಿಲ್ಲಿ ಪ್ರಕಟ ಮಾಡ್ಲೆ ಸಂಕೋಚ ಪಟ್ಟು ಬೇರೆಯವರ ಹೆಸರಿಲ್ಲಿ ಪ್ರಕಟ ಮಾಡುವದು, ತನಗೆ ಆರೋಗ್ಯ ಸರಿ ಇಲ್ಲೆ ಹೇಳ್ತ ವಿಶಯವ ತನ್ನ ಹೆಂಡತಿಗೆ ಗೊಂತಾಗಿ ಅದಕ್ಕೆ ಬೇಜಾರಪ್ಪಲಾಗ ಹೇಳಿ ತಿಳುಶದ್ದೆ ಕೂಬದು, ಇದೆಲ್ಲಾ ಮುದ್ದಣನ ಮುಗ್ಧ ಹೃದಯವ ಪರಿಚಯ ಮಾಡಿ ಕೊಡ್ತು.
ಕುಮಾರಣ್ಣ ಬರದ ಈ ಕೃತಿ ಪರಿಚಯ ಓದಿ ಅಕೇರಿಗೆ ಎತ್ತುವಾಗ ಕಣ್ಣಿಲ್ಲಿ ನೀರ ಹನಿ ನಿಂದದಂತೂ ಸತ್ಯ. ಇನ್ನು ಬೇಲೂರು ರಾಮ ಮೂರ್ತಿಯವರ ಕಾದಂಬರಿಯನ್ನೇ ಓದಿದರೆ ಹೇಂಗಕ್ಕು.
ಒಬ್ಬ ಮಹಾಕವಿಯ ಜೀವನವ ಪುಸ್ತಕ ರೂಪಲ್ಲಿ ಪ್ರಕಟ ಮಾಡಿದ ಬೇಲೂರು ರಾಮ ಮೂರ್ತಿಗೂ, ಇಲ್ಲಿ ಪರಿಚಯಿಸಿಕೊಟ್ಟ ಕುಮಾರಣ್ಣಂಗೂ ಧನ್ಯವಾದಂಗೊ
ಬಾಲಣ್ಣ ಹೇಳಿದ್ದು ಸರಿ ಇದ್ದು.”ಕನ್ನಡ ಕೋಗಿಲೆ ಮುದ್ದಣ” ಹೇಳ್ತ ಕಾದಂಬರಿಯ ಸುರತ್ಕಲ್ಲಿನ ಪದ್ಭನಾಭ ಆಚಾರ್ಯ ಹೇಳ್ತವು ೧೯೭೪ ರಲ್ಲಿ ಬರದ್ದವಡ. ಈ ಬಗ್ಗೆ ಪ್ರಸ್ತುತ ಕಾದಂಬರಿಯ ಮುನ್ನುಡಿಲಿ ಪ್ರಸ್ತಾಪ ಬಯಿಂದು.
ಅಪ್ಪು, ಅಕ್ಷರ ತಪ್ಪುಗ ಒಳುದು ಹೋಯಿದು. ಈಗ ತಿದ್ದಿದೆ. ತೋರ್ಸಿದ್ದಕ್ಕೆ ಧನ್ಯವಾದ ಬಾಲಣ್ಣ.
ಕುಮಾರಮಾವ ಬರದ, ಪುಸ್ತಕ ಪರಿಚಯ ಓದಿದೆ.ಎನಗೆ ಗೊಂತಾಗದ್ದೆ ಎರಡು ಹನಿ ಕಣ್ಣಿಂದ ಬಿದ್ದತ್ತು.ಮುದ್ದಣನ ಹಾಂಗಿಪ್ಪ ಮಹಾ ಕವಿಗೆ ಅವರ ಜೀವಿತ ಕಾಲಲ್ಲಿ ಸರಿಯಾದ ಮನ್ನಣೆ ಸಿಕ್ಕೆಕಾತು,ಪಂಜೆಯವರ ಮಾತು ಕೂಡಾ ಎಷ್ತು ಅರ್ಥ ಪೂರ್ಣ! ಲೇಖನ ತುಂಬಾ ಒಳ್ಲೆದಾಯಿದು .ಧನ್ಯವಾದಂಗೊ
“ಕನ್ನಡ ಕೋಗಿಲೆ ಮುದ್ದಣ ” ಹೇಳಿ ಒಂದು ಕಾದಂಬರಿ ಬೈಂದು ಬಹುಶಃ ಪದ್ಮನಾಭ ಸೋಮಯಾಜಿ ಹೇಳ್ತವು ಬರದ್ದು ಹೇಳಿ ಕಾಣ್ತು ಲಾಯಕಿದ್ದತ್ತು.
*’ಒಡಲೊಳ್’…೨ನೆ ಸಾಲು
*’ಮುಗಿಲ್ದೆರೆಯಿಂ’೪ನೆ ಸಾಲು ಹೇಳಿ ಆಯೆಕ್ಕಲ್ಲದೊ
ಮುದ್ದಣನ ಚಿತ್ರ ಬರದ್ದದು ಚಂದ್ರನಾಥ ಆಚಾರ್ಯಾ, ಅಂದು ಸುಧಾ ಪತ್ರಿಕೆಲಿ ಕಲಾವಿದ ಆಗಿತ್ತಿದ್ದವು