Oppanna.com

ನವೋದಯ ಸಾಹಿತ್ಯದ ನಲ್ಮೆಯ ಕವಿ – ಕಡೆಂಗೋಡ್ಲು ಶಂಕರ ಭಟ್ಟ.

ಬರದೋರು :   ತೆಕ್ಕುಂಜ ಕುಮಾರ ಮಾವ°    on   30/05/2012    15 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

ನಮ್ಮ ಊರಿನ ಸಾಹಿತಿಗಳ ಪೈಕಿ ವಿಶೇಷವಾದ ಸೇವೆ ಮಾಡಿದ ಹಲವರ “ಪರಿಚಯ” ಲೇಖನ ಕಂತು ಕಂತಾಗಿ ಹರಿದು ಬಂತು ಬೈಲಿಲಿ.
ಸಂಗ್ರಹಿಸಿ ಕೊಟ್ಟ ತೆಕ್ಕುಂಜೆಮಾವಂಗೆ ಧನ್ಯವಾದಂಗೊ.
ಈ ಕಂತಿನ ಅಖೇರಿಯಾಣ ಶುದ್ದಿ, ಕಡೆಂಗೋಡ್ಳು ಅಜ್ಜನ ಬಗ್ಗೆ.  ಓದಿ, ಒಪ್ಪ ಕೊಡಿ..

ನವೋದಯ ಸಾಹಿತ್ಯದ  ನಲ್ಮೆಯ ಕವಿ  – ಕಡೆಂಗೋಡ್ಲು ಶಂಕರ ಭಟ್ಟ:

ಕಡೆಂಗೋಡ್ಲು ಶಂಕರ ಭಟ್ಟರು ಕವಿಯಾಗಿ, ಕಾದಂಬರಿಗಾರರಾಗಿ, ನಾಟಕಕಾರರಾಗಿ, ಪತ್ರಿಕೋದ್ಯಮಿಯಾಗಿ ತುಂಬ ಹೆಸರುವಾಸಿ.
1920 ರ ಸಮಯಲ್ಲಿ, ದೇಶ ಮಹಾತ್ಮನ ನೇತೃತ್ವಲ್ಲಿ ಅಸಹಾಕಾರ ಚಳುವಳಿಲಿ ತೊಡಗಿತ್ತಿದ್ದ ಸಮಯ.
ಆ ನವೋದಯ ಸಾಹಿತ್ಯದ ಕಾಲಘಟ್ಟಲ್ಲಿ, ನಮ್ಮ ನಾಡಿನ ಹಲವು ಸಾಹಿತ್ಯ ದಿಗ್ಗಜರುಗೊ ಸ್ವಾತಂತ್ರ್ಯಸಂಗ್ರಾಮಲ್ಲಿ ನೇರ ಭಾಗಿಯಾಗಿತ್ತವು. ತಮ್ಮ ಕಾವ್ಯ,ಕತೆ,ಲೇಖನಗಂಗಳ ಮೂಲಕ ಜನಜಾಗೃತಿ ಮೂಡುಸುವ ಕಾರ್ಯಲ್ಲಿ ತೊಡಗಿತ್ತಿದ್ದವು.
ಆದರ್ಶದ ಹಿಂದೆ ಬಿದ್ದು ನಾಡು-ನುಡಿಗೆ ಬೇಕಾಗಿ ಚಿಂತನೆ ನಡಶಿದವು. ಅಂಥವರಲ್ಲಿ ಕಡೆಂಗೋಡ್ಲು ಪ್ರಮುಖರಾಗಿ ಕಾಣ್ತವು.
‘ಬಾಲಕವಿ’ ಹೆಸರಿಲಿ ‘ಘೋಷಯಾತ್ರೆ’, ‘ವಸ್ತ್ರಾಪಹರಣ’, ಗಾಂಧಿ ಸಂದೇಶ’,’ಮಹಾತ್ಮಾ ಗಾಂಧಿ ವಿಜಯ’ ಮುಂತಾದ ಕವಿತೆಗಳ ಬರದು ಕೆಚ್ಚು ಮೆರೆದ ಕವಿ ಕಡೆಂಗೋಡ್ಲು.

ಘೋಷಯಾತ್ರೆ, ಮತ್ತೆ ವಸ್ತ್ರಾಪಹರಣ ಮಹಾಭಾರತದ ಕತೆಯಾಗಿ ಕಂಡರೂ, ಆಳರಸರಾಗಿತ್ತಿದ್ದ ಆಂಗ್ಲರ ವಿರೋಧಿಸಿ ಬರದ ಕವಿತೆಗೋ.
(“ವಸ್ತ್ರಾಪಹರಣ “ ದೇಶದ್ರೋಹದ ಆಪಾದನೆಗೊಳಪಟ್ಟು ಬಹಿಷ್ಕೃತವಾದ ಕಾವ್ಯ.!)
ಸಮಕಾಲೀನ ರಾಜಕೀಯ ಧ್ವನಿಯ ಪೌರಾಣಿಕ ವಿಷಯದ ಮೂಲಕ ಅಭಿವ್ಯಕ್ತಿ ಪಡುಸುವ ಪ್ರಯತ್ನ ಆ ಕಾಲಕ್ಕೆ ಹೊಸ ಪ್ರಯೋಗವಾಗಿತ್ತಿದ್ದಡ.
ಹದಿಹರೆಯಲ್ಲಿ ಬರದ ಈ ಕವಿತೆಗೊ ಬಾಲಕವಿಯ ಅಭ್ಯಾಸ ಕಾವ್ಯ ಹೇಳಿ ನಿರ್ಲಕ್ಶ್ಯ ಮಾಡುವ ಹಾಂಗೆ ಇತ್ತಿಲೆ ಹೇಳಿ ವಿಮರ್ಶಕರು ಅಭಿಪ್ರಾಯ ಪಟ್ಟಿದವು.! ಮುಂದೆ ಪ್ರಬುದ್ಧ ಸಾಹಿತಿಯಾಗಿ,ಪಂಡಿತ ಕವಿಯಾಗಿ ರೂಪುಗೊಂಡು,ಶಂಕರ ಭಟ್ಟರ ವ್ಯಕ್ತಿತ್ವ ನವೋದಯ ಕಾವ್ಯಮಾರ್ಗಲ್ಲಿ ಅರಳಿತ್ತು.!

ಶ್ರೀ ಕಡೆಂಗೋಡ್ಲು ಶಂಕರ ಭಟ್ಟರು

ಬಾಲ್ಯ – ಶಿಕ್ಷಣ:

ದಕ್ಶಿಣಕನ್ನಡ ಜಿಲ್ಲೆಯ ವಿಟ್ಲದ ಹತ್ತರಾಣ ಪೆರುವಾಯಿ ಒಂದು ಸಣ್ಣ ಊರು.
ಅಲ್ಲಿ ಕೃಷಿ ಮಾಡ್ಯೊಂಡು ಇತ್ತಿದ್ದ ಕಡೆಂಗೊಡ್ಲು ಮನೆತನದ ಈಶ್ವರ ಭಟ್ಟರ ಮಗನಾಗಿ ೧೯೦೪ ಆಗೋಸ್ತು ೯ ರ ದಿನ ಶಂಕರ ಭಟ್ಟರು ಜನ್ಮತಾಳಿದವು.
ಹತ್ತರಾಣ ಬಂಧು ಮುಳಿಯ ತಿಮ್ಮಪ್ಪಯ್ಯರು ಇವರ ವಿದ್ಯಭ್ಯಾಸಕ್ಕೆ ಪ್ರೋತ್ಸಾಹ ಕೊಟ್ಟದು ಮಾಂತ್ರ ಅಲ್ಲ ಕೊಡೆಯಾಲಲ್ಲಿ ಅವರ ಮನೆಲಿದ್ದುಗೊಂಡು ಕಲಿವಲೆ ಅವಕಾಶ ಮಾಡಿದವು.
ಹೈಸ್ಕೂಲು ಕಲಿವ ಸಮಯಲ್ಲಿ ಗಾಂಧೀಜಿಯ ಅಸಹಕಾರ ಚಳುವಳಿಯ ಪ್ರಭಾವಕ್ಕೆ ಒಳಪಟ್ಟು ಸ್ವದೇಶಿ ವೃತ ಕೈಗೊಂಡವು, ಖಾದಿ ತೊಟ್ಟವು.
ಹೋರಾಟದ ಸಮಯಲ್ಲಿಯೇ  ತಮ್ಮ ಪ್ರೌಢ ಶಿಕ್ಷಣವ ಮುಗುಶಿದವು. ಮುಂದೆ ಧಾರವಾಡದ ಶಿಕ್ಷಣ  ಸಮಿತಿಯ ‘ಸ್ನಾತಕ’ಪರೀಕ್ಷೆಯ ಉನ್ನತ ಶ್ರೇಣಿಯೊಟ್ಟಿಂಗೆ ಪಾಸು ಮಾಡಿಗೊಂಡವು.
ಆ ಸಮಯಲ್ಲಿ ಶಾಲೆ ಬಿಟ್ಟು ಸ್ವಾತಂತ್ರ್ಯ ಹೋರಾಟಲ್ಲಿ ಭಾಗವಹಿಸಿದ ಜವ್ವನಿಗರ ಅನುಕೂಲಕ್ಕಾಗಿ ಕಾರ್ನಾಡ ಸದಾಶಿವ ರಾಯರು ಪ್ರಾರಂಭಿಸಿದ ತಿಲಕ ವಿದ್ಯಾಲಯಲ್ಲಿ ಶಂಕರ ಭಟ್ಟರು ಅಧ್ಯಾಪನ ವೃತ್ತಿ ಪ್ರಾರಂಭ ಮಾಡಿದವು.
ಖಾಸಗಿಯಾಗಿ ಓದಿ ಕಲ್ತು ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿದ್ವಾನ್ ಪರೀಕ್ಷೆಯ ಸರ್ವ ಪ್ರಥಮರಾಗಿ ಪಾಸು ಮಾಡಿಗೊಂಡವು.

ವೃತ್ತಿ ಜೀವನ:

1926 ರಲ್ಲಿ ನವಯುಗಪತ್ರಿಕೆಯ ಉಪಸಂಪಾದಕರಾಗಿ ಸೇರಿದ ಕಡೆಂಗೊಡ್ಲು ಶಂಕರ ಭಟ್ಟರು 1928ರಲ್ಲಿ ರಾಷ್ಟ್ರಬಂಧುಪತ್ರಿಕೆಯ ಸಂಪಾದಕರಾಗಿ ನಿಯುಕ್ತರಾದವು.
ಪಂಜೆ ಮಂಗೇಶರಾಯರ ಪ್ರೋತ್ಸಾಹಂದ ಕೊಡೆಯಾಲಲ್ಲಿ ಸೈಂಟ್ ಆಗ್ನೆಸ್ ಕೊಲೇಜಿಲಿ 1929 ರಲ್ಲಿ  ಪ್ರಾಧ್ಯಾಪಕರಾಗಿ ಸೇರಿದವು.
ಅಧ್ಯಾಪನ ಮತ್ತೆ ಪತ್ರಿಕೋದ್ಯಮ ಎರಡನ್ನೂ ಸಮರ್ಥರಾಗಿ, ದೀರ್ಘ ಸಮಯದವರೆಗೆ ನಿಭಾಯಿಸಿದವು.

1929ರಲ್ಲಿಯೆ ಸಾಧ್ವಿಮಣಿ ಕಮಲಮ್ಮನೊಟ್ಟಿಂಗೆ ವಿವಾಹಿತರಾಗಿ ಸಂಸಾರದ ಜೆಬಾಬುದಾರಿಯನ್ನೂ ಹೊತ್ತವು.
1953ರಲ್ಲಿ ರಾಷ್ಟ್ರಬಂಧುವಿನ ಬೆಳ್ಳಿಹಬ್ಬದ ಸಂಚಿಕೆ ಬಿಡುಗಡೆ ಆದ ಮೇಲೆ,ಅಲ್ಲಿಂದ ಬಿಡುಗಡೆ ಹೊಂದಿ, ಅದೇ ವರ್ಷ ತಮ್ಮದೇ ಪತ್ರಿಕೆ ರಾಷ್ಟ್ರಮತವ ಸ್ಥಾಪಿಸಿ ತಮ್ಮ ಕೊನೆಗಾಲದವರೆಗೂ ನಡಶಿದವು.
1964 ರವರೆಗೆ ಕನ್ನಡ ಪ್ರಾಧ್ಯಾಪಕರಾಗಿ ದುಡುದು ಸಾವಿರಾರು ವಿದ್ಯಾರ್ಥಿಗೊಕ್ಕೆ ಕನ್ನಡದ ಒಲವು ಮೂಡುಸುವಲ್ಲಿ ಸಫಲರಾದವು.

ಕವಿತೆ – ಕಾವ್ಯ

ಆವ ಕಾಣ್ಕೆಯ ಕೊಡುವೆ ಕನ್ನಡದ ಮಾತೆ ನಿನ
ಗಾವ ಕಾಣ್ಕೆಯ ಕೊಡುವೆ ಮಮಜನ್ಮದಾತೆ ?

ಕನ್ನಡಮ್ಮಂಗೆ ಯೇವ ಕಾಣಿಕೆಯ ಕೊಡುದು ಹೇಳ್ತ ಆಗ್ರಹದೊಟ್ಟಿಂಗೆ ಶುರುವಪ್ಪ ಈ ಕವಿತೆ, ನವೋದಯ ಪರಂಪರೆ ಆಗಷ್ಟೆ ಪ್ರಾರಂಭ ಅದ ಕಾಲಲ್ಲಿ ಬರದು ಪ್ರಕಟಿಸಿದ ಕವನ ಸಂಕಲನ ಕಾಣಿಕೆಯ ಒಂದು ಕವನ(1927).
ಒಟ್ಟು ಹದಿನೆಂಟು ಕವನಂಗೊ ಇಪ್ಪ ಗುಚ್ಚ ಇದು. ಹೆಚ್ಚಿನ ಕವನಂಗೊ ಭಾವಗೀತೆಯ ಸ್ವರೂಪದವು. ಇದರಲ್ಲಿ ಇಪ್ಪ ಕವನಂಗೊ ಚೌಪದಿ, ಸೀಸ, ಉತ್ಸಾಹ ರಗಳೆ, ಷಡ್ಪದಿ ಛಂದೋಬಂಧಲ್ಲಿ ಇದ್ದು.

ಕವನಂಗಳ ರೂಪಕಾಲಂಕಾರ ಪ್ರಧಾನವಾಗಿ ಬರವದು ಕವಿ ಕಡೆಂಗೋಡ್ಲು ಅವರ ವಿಶೇಷತೆ.
ಆಗಳೇ ಪ್ರಸ್ತಾವ ಮಾಡಿದ ಹಾಂಗೆ, ಇದಕ್ಕೂ ಮದಲು ಬರದ ಕಾವ್ಯಂಗಳಿಂದಾಗಿ(1920-21) ಘೋಷಯಾತ್ರೆ“,”ಗಾಂಧಿ ಸಂದೇಶ“,”ವಸ್ತ್ರಾಪಹರಣ ಕಡೆಂಗೋಡ್ಲು ಒಬ್ಬ ಪ್ರಮುಖ ಕವಿಯಾಗಿ ಗುರುತಿಸಿಗೊಂಡವು.
ಘೋಷಯಾತ್ರೆಲಿಪ್ಪ ಒಟ್ಟು ಮೂರು ಸಂಧಿಗಳಲ್ಲಿ ಶುರುವಾಣದು ಚೌಪದಿಲಿಯೂ, ಎರಡ್ನೆದು ಕುಸುಮ ಷಡ್ಪದಿಲಿಯೂ, ಮೂರನೆದು ಮಂದಾನಿಲರಗಳೆಲಿಯೂ ಇದ್ದು.
ಗಾಂಧಿ ಸಂದೇಶವ ವಾರ್ಧಕ ಷಡ್ಪದಿಲಿ ಬರದರೆ, ವಸ್ತ್ರಾಪಹರಣದ ಛಂದೋಬಂಧ ಭಾಮಿನಿಲಿದ್ದು.

1933 ರಲ್ಲಿ ಪ್ರಕಟ ಆದ ಹಣ್ಣುಕಾಯಿ ಕಡೆಂಗೋಡ್ಲು ಅವರ ಎರಡನೆ ಕವನ ಸಂಕಲನ. ‘ಪಂಡಿತನ ಪಯಣ’ಹೆಸರಿನ ವಿಡಂಬನಾತ್ಮಕ ಕವಿತೆ ಇದರಲ್ಲಿಪ್ಪ ಒಂದು ಪ್ರಮುಖ ರಚನೆ.
ಇದು ಪ್ರಕಟ ಆದ ಕಾಲಲ್ಲಿ ಕೊಡೆಯಾಲದ ಪಂಡಿತ ವಲಯಲ್ಲಿ ಕೋಲಾಹಲ ಶುರುವಾಗಿತ್ತಿದ್ದಡ. ಆ ಕಾಲದ ಪಂಡಿತ ಪರಂಪರೆಯ ಇಲ್ಲಿ ವಿಡಂಬನೆ ಮಾಡಿದ್ದವು.

ತತ್ವವೊ ಶಾಸ್ತ್ರವೊ ಏನಿದೆ ತಲೆಯಲಿ?
ಧರ್ಮವೊ ಕರ್ಮವೊ ಏನಿದೆ ಭುಜದಲಿ
ಸಂಧಿ ಸಮಾಸದ ಭಾರವ ಹೊತ್ತು
ಬಂದುದೆ ನಿನಗೀ ತರದ ವಿಪತ್ತು ?

1965ರಲ್ಲಿ ಪ್ರಕಟ ಆದ “ಪತ್ರಪುಷ್ಪ ಕಡೆಂಗೋಡ್ಲು ಅವರ ಮೂರನೆ ಕವನ ಸಂಕಲನ.
ಪಾಂಡಿತ್ಯ-ಕವಿತ್ವಂಗಳ ಸುಂದರ ಹೊಂದಾಣಿಕೆ ಈ ಸಂಕಲನದ ಕವಿತೆಗಳಲ್ಲಿ ಕಾಣುತ್ತು ಹೇಳ್ವದು ವಿಮರ್ಶಕರ ಅಭಿಪ್ರಾಯ.ಇದರ ಒಂದು ಕವಿತೆ “ಮಿಂಚುಹುಳು” ಒಂದು ಮನೋಹರ ಭಾವಗೀತೆ.!

ಎಲೆಲೆ ಬೆಳಕಿನ ಬಿತ್ತೆ !ಇರುಳ ಮೂಗಿನ ನತ್ತೆ !
ಹುಳುವೆಂದು ಹೆಸರಿಟ್ಟು ಹಳಿಯುವರೆ ನಿನ್ನ ?
ಹುಳವಾಗಿ ಹುಟ್ಟಿ ಲೋಕವ ಬೆಳಗುತಿರಲಿಂತು
ಒಳಮೆಯ್ಯೊಳಾವ ಮಾಯದ ರೂಪೊ ನಿನಗೆ ?

ಚೌಪದಿಲಿಪ್ಪ ಈ ಕವನದ ಇನ್ನೊಂದು ಪದ್ಯ ಹೀಂಗಿದ್ದು –

ಧರೆಯ ನಿದ್ದೆಯ ಬಲೆಗೆ ಬಿದ್ದ ಮೀನೆಲೆ ನೀನು
ಇರುಳ ಕನಸಿನ ಸೀರೆನಿರಿಯ ಜರಿ ನೀನು
ಮರವೆ ಚೆಲ್ಲಿದ ತಿಳಿವಿನೊಂದು ತುಂತುರು ನೀನು
ಅರಿಕೆಯಲಿ ಹುಳು,ನಿಜದಿ ಮೇಲ್ನಾಡ ಹುರುಳು.

ಇದೇ ಸಂಕಲನದ ಇನ್ನೊಂದು ಮಹತ್ವದ ಕೃತಿ’ಮಂಗಲ ಗೀತ’ ನವರಾಜ್ಯೋದಯದ ಮಂಗಲ ಮುಹೂರ್ತಲ್ಲಿ ಹಾಡಿದ ಕವನ.
ಇದರಲ್ಲಿಪ್ಪ ಒಂದು ಪದ್ಯ-

ಕನ್ನಡದ ಕುಲವಿಲ್ಲಿ ಕುಲದ ದೇಗುಲವಿಲ್ಲಿ
ಪ್ರಾಣದೇವನ ಭವ್ಯ ಮೂರ್ತಿ ಪ್ರತಿಷ್ಟೆ
ಭಾರತವೆ ಸಾವಿತ್ರಿ ಕನ್ನಡವೆ ಗಾಯತ್ರಿ
ಇಲ್ಲಿಯೇ ಪೂಜಾಪುರಶ್ಚರಣ ನಿಷ್ಠೆ.!

ಕಡೆಂಗೋಡ್ಲು ಅವರ ಕಾವ್ಯಾಭಿವ್ಯಕ್ತಿಯ ಪ್ರಧಾನ ಮಾಧ್ಯಮ ಕಥನ – ಕವನ.
ನಲ್ಮೆ ಮೂರು ಕಥನ ಕಾವ್ಯಂಗಳ ಸಂಕಲನ. ಇದರಲ್ಲಿ ಇಪ್ಪ ಹೊನ್ನಿಯ ಮದುವೆ,ಮಾದ್ರಿಯ ಚಿತೆ,ಮುರಲೀನಾದ – ಇವುಗಳ ಅಭಿವ್ಯಕ್ತಿ ಕ್ರಮದಲ್ಲಿ ಅವರು ತೋರಿದ ಕೌಶಲ ಕನ್ನಡ ಕಾವ್ಯ ಪರಂಪರೆಗೆ ಅಪರೂಪವಾದುದು ಎನ್ನುವುದರಲ್ಲಿ ಅನುಮಾನವಿಲ್ಲ ಹೇಳಿ ವಿಮರ್ಶಕರು ಅಭಿಪ್ರಾಯ ಪಟ್ಟಿದವು.

ಮಾದ್ರಿಯ ಚಿತೆಯಂತೂ ಕನ್ನಡದ ಕಥನಕಾವ್ಯದ  ಉತ್ಕೃಷ್ಟತೆಗೆ ಒಂದು ಮಾದರಿ ಹೇಳಿ ಹೊಗಳುತ್ತವು.!
ಶ್ರೀಮಾನ್ ವೀ.ಸೀತಾರಾಮಯ್ಯರು

“…ಬರವಣಿಗೆಯ ಜಾಣ್ಮೆ,ಬಂಧದಲ್ಲಿ ತುಂಬಿರುವ ಗಾಂಭೀರ್ಯ ಇವುಗಳನ್ನು ನೋಡಿದರೆ ಮಾದ್ರಿಯ ಚಿತೆಯ ಮೊದಲೆರಡು ಭಾಗಗಳಿಗೆ ಶಕ್ತಿಯಲ್ಲಿ ಮೀರುವ ನೀಳ್ಗವನವೇ ಹೊಸಗನ್ನಡದಲ್ಲಿ ಇಲ್ಲವೆನ್ನಬಹುದು.”

ಹೇಳಿ ಬರದ್ದವು.

ಕಡೆಂಗೋಡ್ಲು  ಯೇವಗಳೋ ಬರದ, ಆದರೆ 1987ರಲ್ಲಿ ಮಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿದ ಕಡೆಂಗೋಡ್ಲು ಸಾಹಿತ್ಯ ಲ್ಲಿ ಬಂದ ಭೂತಾಳ ಪಾಂಡ್ಯ ಕಥನ ಕವನ ಮಹಾಕಾವ್ಯದ ಲಕ್ಷಣ ಇಪ್ಪ ಕೃತಿ.
1987 ಸಾಲುಗಳ ಈ ಕಾವ್ಯ ಕನ್ನಡ ಕಥನ – ಕವನ ಸಾಹಿತ್ಯಕ್ಕೆ ಕಡೆಂಗೋಡ್ಲು ಅವರ ವಿಶಿಷ್ಟ ಕೊಡುಗೆ.!

ಗದ್ಯ ಸಾಹಿತ್ಯ:

ಕಡೆಂಗೋಡ್ಲು ಅವರ ಪ್ರಕಟಿತ ಕಾದಂಬರಿಗೊ ಮೂರು – ಧೂಮಕೇತು“, ದೇವತಾ ಮನುಷ್ಯ“,”ಲೋಕದ ಕಣ್ಣು“.
ಧೂಮಕೇತುವಿನ ಬಗ್ಗೆ ಬರದ ವಿಮರ್ಶೆಲಿ ಪ್ರಾ.ಡಿ.ರಘುನಾಥ ರಾಯರು

– “ಭಾಷೆಯ ದೃಷ್ಟಿಯಿಂದ ಈ ಕಾದಂಬರಿಯ ಸಾಧನೆ ಗಮನಾರ್ಹವಾಗಿದೆ.ಸಂಸ್ಕೃತ ಕನ್ನಡಗಳ ಹದವಾದ ಬಳಕೆಯಿಂದ ಕೂಡಿದ ಒಳ್ಳೆಯ ಗದ್ಯವನ್ನು ಕಡೆಂಗೋಡ್ಲು ಅವರು ನಮಗೆ ಕೊಟ್ಟಿದ್ದಾರೆ….”

ಹೇಳಿದ್ದವು.

ದೇವತಾಮನುಷ್ಯವ ವಿಮರ್ಶಿಸಿಗೊಂಡು

“ದಕ್ಷಿಣ ಕನ್ನಡದ ದೇಸೀ ನುಡಿ ಹಾಗೂ ಹಳೆಗನ್ನಡದ ಗಾಢ ಸಂಸ್ಕಾರದಿಂದ ಏರ್ಪಟ್ಟ ಭಾಷಾರೂಪಗಳ ಬೆಸುಗೆಯಿಂದ ಕೂಡಿದ ಭಾಷೆಯನ್ನು ಈ ಕಾದಂಬರಿಯಲ್ಲಿ ಬಳಸಿದ್ದಾರೆ”

ಹೇಳಿ ಶ್ರೀ ಎ.ವಿ.ನಾವಡರು ಅಭಿಪ್ರಾಯ ಪಟ್ಟಿದವು. ಲೋಕದ ಕಣ್ಣು ಕಾದಂಬರಿಯ ಬಗ್ಗೆ ಬರಕ್ಕೊಂಡು

“ಸಮಕಾಲೀನ ವ್ಯವಸ್ತೆ,ರಾಜಕಿಯ ಧ್ವನಿ,ಸಾಮಾಜಿಕ ವ್ಯಂಗ ಕಾದಂಬರಿಯ ಉದ್ದಕ್ಕೂ ಮೂಡಿ ಬಂದಿದೆ. ಸ್ವತಃ ಪತ್ರಿಕೋದ್ಯಮಿಯಾದ ಕಡೆಂಗೋಡ್ಲು ಅವರು ತಮ್ಮ ಕ್ಷೇತ್ರದಲ್ಲಿನ ಪೊಳ್ಳುತನವನ್ನು ಬೆಳಕಿಗೊಡ್ಡುವ ಕೆಲಸ ಮಾಡಿದಂತಿದೆ”

ಹೇಳಿದ್ದವು.

ಸ್ವತಂತ್ರವಾಗಿ ಗ್ರಂಥರೂಪಲ್ಲಿ ಪ್ರಕಟ ಆಗದ್ದರೂ, “ಕಡೆಂಗೋಡ್ಲು ಸಾಹಿತ್ಯ”ಲ್ಲಿ ಅಚ್ಚಾದ ಪೀಳಿಗೆ ಕಾದಂಬರಿಲಿ ಭಾರತದ ಸ್ವಾತಂತ್ರ್ಯ ಚಳುವಳಿ ಸಾಂಪ್ರದಾಯಿಕ ಕುಟುಂಬಲ್ಲಿ ಯೇವ ರೀತಿಯ ಒಡಕ್ಕಿನ ತಯಿಂದು ಹೇಳ್ತ ಚಿತ್ರಣ ಇದ್ದಡ.

ಕಡೆಂಗೋಡ್ಲು ಅವರ ಜೀವಿತಾವಧಿಲಿ ಅವರ ಮೂರು ಕಥಾಸಂಕಲನಂಗೊ ಪ್ರಕಟ ಆಯಿದು – “ಹಿಂದಿನ ಕತೆಗಳು”,‘ಗಾಜಿನ ಬಳೆ’ ಮತ್ತೆ “ದುಡಿಯುವ ಮಕ್ಕಳು”.

ದೊಡ್ಡಣ್ಣ, ಅದ್ದಿಟ್ಟು, ಹೊಡೆಯುವ ಗಡಿಯಾರ ಇತ್ಯಾದಿ ಅವರ ಮದಲ ಸಂಕಲನದ ಗಮನಾರ್ಹ ಕೃತಿಗೊ.
” ಜೀವನದ ದಾರುಣತೆಯನ್ನು ನಿರೂಪಿಸುವ ಅವರ ಇತರ ಕತೆಗಳು ಓದುಗನ ಮನಸ್ಸಿನ ಒಳಮನೆಯನ್ನು ಸೇರುತ್ತವೆಯಾದರೆ ಪ್ರಕೃತ ಸಂಕಲನದ ಕತೆಗಳು ಮನಸ್ಸಿನ ಹೊರಚಾವಡಿಯಲ್ಲೇ ಸುಳಿದಾಡುತ್ತವೆ”
ಹೇಳ್ಯೊಂಡು ಶ್ರೀ ಅಮೃತ ಸೋಮೇಶ್ವರರು ಗಾಜಿನ ಬಳೆ ಬಗ್ಗೆ ಅಭಿಪ್ರಾಯ ಪಟ್ಟಿದವು.
ಮೂರನೆ ದುಡಿಯುವ ಮಕ್ಕಳು ಸಂಕಲನದ ಪ್ರಮುಖ ಕತೆಗೊ ‘ದುಡಿಯುವ ಮಕ್ಕಳು’, ‘ಚೂರಿಯ ಕತೆ’ ಸಮಕಾಲೀನ ಸಾಮಾಜಿಕ ಮೌಲ್ಯವ ಎತ್ತಿ ಹಿಡಿವ ಕೃತಿಗೊ.

ಕಡೆಂಗೋಡ್ಲು ನಾಟಕಂಗಳನ್ನೂ ರಚಿಸಿದ್ದವು.
“ಕಡೆಂಗೋಡ್ಲು ಸಾಹಿತ್ಯ”ಲ್ಲಿ ಅವರ  ಒಟ್ಟು ಒಂಬತ್ತು ನಾಟಕಂಗೊ ಇದ್ದಡ. ಅವುಗಳ ಪೈಕಿ “ಉಷೆ”, “ಹಿಡಿಂಬೆ”, “ಗುರುದಕ್ಷಿಣೆ” ಪ್ರಕಟಿತ ಕೃತಿಗೊ.

ವಿಮರ್ಶಕ:

ಕಡೆಂಗೋಡ್ಲು ನವೋದಯ ಕಾಲದ ಒಬ್ಬ ಗಮನಾರ್ಹ ವಿಮರ್ಶಕರಾಗಿತ್ತಿದ್ದವು. 1932 ರಿಂದಲೇ ಮೌಲಿಕವಾದ ಸಾಹಿತ್ಯ ವಿಮರ್ಶೆಗಳ ಬರಕ್ಕೊಂಡು ಬಯಿಂದವು.
ಅದೆಲ್ಲ ಒಟ್ಟಾಗಿ ಪ್ರಕಟ ಆದ್ದದು 1967ರಲ್ಲಿ. (ವಾಙ್ಮಯ ತಪಸ್ಸು) ಆದರೆ ಅವರ ವಿಮರ್ಶನ ಸಾಹಿತ್ಯವ ಯಾರೂ ಗುರುತಿಸಿದ್ದಾವಿಲ್ಲೆ,ಹಾಂಗಾಗಿ ಆಧುನಿಕ ಕಾಲದ ವಿಮರ್ಶನ ಸಾಹಿತ್ಯ ಚರಿತ್ರೆಲಿ ಕಡೆಂಗೋಡ್ಲು ಅವರ ಹೆಸರು ದಾಖಲಾಯ್ದಿಲೆ ಹೇಳ್ತವು.
1932 ರ ಮಡಿಕೇರಿ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಯ ಅಧ್ಯಕ್ಷ ಭಾಷಣ “ಕವಿ ಕಾವ್ಯ ಮೀಮಾಂಸೆ”,1964 ರಲ್ಲಿ ಕಾರವಾರಲ್ಲಿ ನಡದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ “ವಾಙ್ಮಯ ತಪಸ್ಸು” ಈ ಗ್ರಂಥದ ಪ್ರಮುಖ ಲೇಖನಂಗೊ.

ಶ್ರೀ ನಾವಡರು ಹೇಳಿದ ಪ್ರಕಾರ “ಕಡೆಂಗೋಡ್ಲು ಅವರ ಪಾಂಡಿತ್ಯ,ಸಂಶೋಧನಮತಿ ಜೊತೆಗೆ ಸತ್ಯವನ್ನು ಹುಡುಕುವ ವಿಕಿಚಿತ್ಸಕ ಬುದ್ಧಿಗೆ ಸಂಕೇತವಾಗಿ ನಿಲ್ಲತಕ್ಕ ಎರಡು ಬರವಣಿಗೆಗಳು “ವಸ್ತುಕ ವರ್ಣಕ” ಹಾಗೂ “ತತ್ಸಮ ತದ್ಭವ”.
ಭಾಷಾವಿಜ್ಞಾನಲ್ಲಿಯೂ ಕಡೆಂಗೋಡ್ಲು ಅವರ ಸಂಶೋಧನಾ ಪ್ರಬಂಧಂಗೊ ಗಮನ ಸೆಳೆವಂತದ್ದು. 1928 ರಂದ 1965 ರವರೆಗೆ ರಾಷ್ಟ್ರಬಂಧು,ರಾಷ್ಟ್ರಮತ ಸಾಪ್ತಾಹಿಕಲ್ಲಿ ಬರದ ಸಂಪಾದಕಿಯ ಲೇಖನಂಗಳ ಅಧ್ಯಯನ ನಡಸುತ್ತಿದ್ದರೆ, ಸುದೀರ್ಘಕಾಲದ ಸಾಮಾಜಿಕ, ರಾಜಕೀಯ, ಸಾಹಿತ್ತಿಕ ಘಟನಾವಳಿಗಳ ವಿಶ್ಲೇಷಣೆಗೆ ಅನುಕೂಲ ಇತ್ತು ಹೇಳಿ ನಾವಡರು ತಮ್ಮ “ಕಡೆಂಗೋಡ್ಲು ಶಂಕರ ಭಟ್ಟ” ಪುಸ್ತಕಲ್ಲಿ ಸೂಚಿಸಿದ್ದವು. ಈ ಪತ್ರಿಕೆಗಳಲ್ಲಿ  “ಅಲ್ಲಲ್ಲಿ ಇಷ್ಟಿಷ್ಟು” ಅಂಕಣಲ್ಲಿ ಬರಕ್ಕೊಂಡಿತ್ತಿದ್ದ ಸಾಮಾಜಿಕ ಘಟನೆಗಳ ವ್ಯಂಗರೂಪದ ಪ್ರತಿಕ್ರಿಯೆ ತುಂಬ ಅರ್ಥಪೂರ್ಣವಾಗಿತ್ತಿದ್ದಡ.

ಅಕೇರಿಯಾಣ ಪ್ರಯಾಣ:

ಕಡಲ ಕರೆಯ ಹೆರಿ ಕವಿ ಕಡೆಂಗೋಡ್ಲು ಶಂಕರ ಭಟ್ಟರು ಕನ್ನಡದ ಕಥನ ಕವನ ಪರಂಪರೆಗೆ ಸ್ಪಷ್ಟ ರೂಪ ಕೊಟ್ಟಿದವು.
ಪಂಡಿತ ವಾತಾವರಣಲ್ಲಿ ಇದ್ದುಗೊಂಡು ಸಾಹಿತ್ಯಕ್ಕೆ ದೇಶಿಯ ಮೆರಗು ತಂದು ಕೊಟ್ಟಿದವು. ಈ ಕಾರಣಂದಲಾಗಿಯೇ ಶ್ರೀ  ನಾವಡರು ಇವರ ಹಳತು ಹೊಸತುಗಳ ಸುಂದರ ಬೆಸುಗೆಯ ಸಂಕೇತ” ಹೇಳ್ತವು.

ಈ ಬಹುಮಖ ಸಾಧನೆಯ ಕವಿ 1968 ರ ಮೇ 17ರಂದು ತಮ್ಮ ಮನೆ ಕಡೆಂಗೋಡ್ಲಿಂದ  ಕೊಡೆಯಾಲಕ್ಕೆ ಹೆರಟು ಬಸ್ಸಿಲಿ ಕೂದವು, ಒಂದೆರಡು ಕಿ.ಮೀ.ಪ್ರಯಾಣಲ್ಲಿಯೇ ಹೃದಯಸ್ತಂಬನಂದ ಕೊನೆಯುಸಿರೆಳದವು.
ಅವರ ಸಾಧನೆಗಳ ನೆಂಪಿಲಿ ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರ  ಪ್ರತಿವರ್ಷ ಹಸ್ತಪ್ರತಿಯ ಕಾವ್ಯಕ್ಕೆ “ಕಡೆಂಗೋಡ್ಲು ಶಂಕರ ಭಟ್ಟ” ಸ್ಮಾರಕ ಪ್ರಶಸ್ತಿಯ ಕೊಡುತ್ತಾ ಬಯಿಂದು.

**~~^~~**

ಆಧಾರ:

  • ಕಡೆಂಗೋಡ್ಲು ಶಂಕರ ಭಟ್ಟ – ಸಾಹಿತ್ಯ ವಾಚಿಕೆ
  • ಲೇ: ಶ್ರೀ ಎ. ವಿ. ನಾವಡ
  • ಫಟ – ಅಂತರ್ಜಾಲಂದ

15 thoughts on “ನವೋದಯ ಸಾಹಿತ್ಯದ ನಲ್ಮೆಯ ಕವಿ – ಕಡೆಂಗೋಡ್ಲು ಶಂಕರ ಭಟ್ಟ.

  1. ಗೋಪಾಲಣ್ಣ ಹೇಳಿದ್ದು ಸಮ. ಪ್ರತ್ಯೇಕ ಶುದ್ದಿಯಾಗಿ ಬಂದರೆ ಪ್ರತ್ಯೇಕ ಸೊಗಸು.

  2. ಕವನ ಕಾದಂಬರಿ ಕಥೆ ನಾಟಕ ಪತ್ರಿಕೋದ್ಯಮ ಹೇಳಿ ಹಲವು ಸಾಹಿತ್ಯ ಪ್ರಾಕಾರಂಗಳಲ್ಲಿ ಹೆಸರು ಪಡದ ನಮ್ಮದೇ ಊರಿನ ಧೀಮಂತ ಕವಿ ಶಂಕರ ಭಟ್ಟರಿಂಗೆ ನಮನಂಗೊ. ಎಡೆ ಎಡೆಲಿ ಮುತ್ತಿನ ಹಾಂಗೆ ಅವು ಬರದ ಕವನಂಗಳನ್ನೂ ತೆಕ್ಕೊಂಡು ಕಡೆಂಗೋಡ್ಳು ಅವರ ಪರಿಚಯ ಮಾಡಿಕೊಟ್ಟದು ಲಾಯಕಾಯಿದು. ಉತ್ತಮ ಪರಿಚಯ ಲೇಖನ. ಒದಗುಸಿಕೊಟ್ಟ ಕುಮಾರಣ್ಣಂಗೆ ಧನ್ಯವಾದಂಗೊ.

    1. ಆನು ಕಲಿವಗ ಹೇಳಿದರೆ ೧೯೫೩ರಲ್ಲಿ ಅವು ಬರದ ಮಾದ್ರಿಯ ಚಿತೆ ಹೇಳುವ ಪದ್ಯದ ಒಂದು ಭಾಗ ಕಲಿವಲಿತ್ತು. ಅದರಲ್ಲಿ,ಈ ಕಾಡೆ ಸ್ವರ್ಗ ನಂದನವಲ್ಲವೇ ಹೇಳಿ ಕಾಡಿಲ್ಲಿದ್ದ ಪಾಂಡು ರಾಜನೇ ಕಾಡಿಲ್ಲಿ ಸ್ವರ್ಗ ನಂದನದ ಸುಖ ಸವಿಕ್ಕೊಂಡು ಇತ್ತಿದ್ದ ಹೇಳುವಲ್ಲಿ ಕಾಡಿನ ವರ್ಣನೇ ಭಾರೀ ಚೆಂದಕ್ಕೆ ಮೂಡಿ ಬಯಿಂದು.ಅದರಲ್ಲಿಯೂ ಬಿನ್ನಣವ ಮಾರಿ ಮುದಗೊಂಡ ಹರದ ಗಾನ ಹೇಳಿದ್ದಿ ಇಂದಿಂಗೆ ಸರಿ ತೋರುತ್ತು. sbalike@yahoo.com

      1. ನಿಂಗೊ ನೆಂಪು ಮಡಿಕ್ಕೊಂಡು ಆ ಶುದ್ದಿಯ ಬರದ್ದು ಕೊಶಿ ಆತು. ಧನ್ಯವಾದ. ಬಹುಶಃ ನಿಂಗೊ ಹೇಳ್ತಾ ಇಪ್ಪ ಪದ್ಯಂಗೊ ಇದಾದಿಕ್ಕು. ಃ
        ಈ ಕಾಡು ನಾಡಿನಿಂ ಹಲವುಪಡಿ ಮಿಗಿಲೆನಗೆ
        ಗುಳುಗುಳಿಪ ನಿರ್ಜರಿಪ ನನ್ನ ವಂಬಿ
        ಜೀವ ಭೇದವ ಹುಡುಕದೊಂದೆ ನೆಳಲಿನೊಳಿಡುವ
        ಎನ್ನ ಬೆಳ್ಗೊಡೆಯ ಆಗಸದ ಪರಿಧಿ.
        ಮಾಮರದ ಜನ್ಮದಲಿ ಕೆಂಪೇರುತಿಹ ಕೊನರೆ
        ಜಸವನುಗ್ಗಡಿಸುತಿಹ ವಿಜಯಕೇತು.
        ಆನಂದ ಸಾಮ್ರಾಜ್ಯ; ನನೋರ್ವನೇ ರಾಜ
        ಮೃಗಗಲೇ ಪಕ್ಷಿಗಲೆ ಎನ್ನ ಜನರು
        ಒಮ್ಮೊಮ್ಮೆ ಬಳ್ಳಿಮಾಡದೊಳೆ ಒಡ್ಡೋಲಗವು
        ಅಳಿಗಳಾ ಕೋಗಿಲೆಗಳ ಗೀತವೊಮ್ಮೆ
        ಮುಗುಳುಗಳ ಕುಸುಮಗಳ ಕಪ್ಪಕಾಣಿಕೆಯೊಮ್ಮೆ
        ಚಿಗುರುಗಳ ಕವಲುಗಳ ಕೇಲಿಯೊಮ್ಮೆ.
        ಒಮ್ಮೊಮ್ಮೆ ಮಧುರ ಮಾಸಗಳ ಮೃದುಲಾಸ್ಯಗಳು
        ಮಳೆಯ ಗಾಳಿಯ ತಾಂಡವಗಳೊಮ್ಮೆ
        ಆವುದಿದೆ ತಪ್ಪು? ಇನ್ನಾವ ಸಾವಿನ ಮುಪ್ಪು ?
        ಈ ಕಾಡೆ ಸ್ವರ್ಗನಂದನವಲ್ಲವೇ ?

        1. ಈಗಾಣ ಕಾವ್ಯಂಗಳಲ್ಲಿ ಆನು ತಿಳುಕ್ಕೊಂಡ ಹಾಂಗೆ ವರ್ಣನೆ ಇಷ್ಟು ಸಹಜವಾಗಿ ಸರಳವಾಗಿ ಕಾಣುತ್ತಿಲ್ಲೆಯೋ ಹೇಳಿ ಎನ್ನ ಅಭಿಪ್ರಾಯ. ಹಳೆ ಕಾಲದೋನಾದ ಕಾರಣವೋ ಎಂತದೋ? ಹೊನ್ನಿಯ ಮದುವೆ ವರ್ಣನೆ ಈಗಲೂ ಕಣ್ಣಿಂಗೆ ಕಟ್ಟಿದ ಹಾಂಗೆ ಸಹಜತೆ ಎದ್ದು ಕಾಣುತ್ತಲ್ಲದೋ?ಕಾಲ ಬದಲಾದ ಹಾಂಗೆ ಜನಂಗಳ ರುಚಿಯೂ ಬದಳಾಯಿದೋ ಹೇಳಿ ಕಾಣುತ್ತು. ಈಗಾಣ ಪಾಠ ಪುಸ್ತಕಂಗೊಕ್ಕೆ ಇದು ಸಿಕ್ಕುತ್ತಿಲ್ಲೆಯೋ ಹೇಂಗೆ?

          1. ಹಲಸಿನ ಹಣ್ಣು

            ರುಚಿ ರುಚಿಯಾದ ಹಲಸಿನ ಹಣ್ಣು
            ಮರದ ಮೇಲೆ ನಮ್ಮ ಕಣ್ಣು
            ಬೆಳದು ಹಣ್ಣಾದರೆ ಮಾತ್ರ
            ಅದರ ಪಾಯಸ ಉಣ್ಣು
            ಕೊಟ್ಟಿಗೆ ಮಾಡಿದರೆ ಮಾತ್ರ ಕೇಳೆಡ ಅದರ ರುಚಿ
            ಮುರುದು ತಿಂದಷ್ಟು ಸಾಲ ನಾಲಗ್ಗೆ ಅದರ ರುಚಿ
            ಗೆಣಸಲೆಯಾದರೆ ಕೊಟ್ಟಿಗೆ ಬೇಡ ಅದು ಮತ್ತೂ ರುಚಿ
            ಮೂಗಿನ ವರೆಗೆ ತಿಂದರೂ ಹೋಗ ಅದರ ರುಚಿ.
            ಹಲಸಿನ ದೋಸೆ ಜೇನು ಕೂಡಿ ತಿಂಬಲೆ ಆಸೆ
            ಹಸ್ಸಿ ಮಾಡ್ಯೊಂಡಿತ್ತು ಆಚೆ ಮನೆ ಕೂಸೆ
            ಕಾಯಿ ಮಾಂತ್ರ ಬೆಳೆದರೆ ಮಾಂತ್ರ ದೋಸೆ
            ರುಚಿ ರುಚಿಯಾಗಿ ತಿಂದು ಎಳವಲಕ್ಕು ಮೀಸೆ
            ಹಣ್ಣಿನ ತಿಂದು ತಿಂದು ಬೊಡುದು ಮಾಡಿದವಡೊ ಪೆರಟಿ
            ಪೆರಟಿ ಕಾಸುಲೆ ಬಕ್ಕೆ ತುಳುವ ಭೇದ ಇಲ್ಲೆಡೊ
            ಒಟ್ಟಿಂಗೆ ಕಾಸಿ ಮಡುಗಿದರೆ ಮಳೆಗಾಲಲ್ಲಿ ತಿಂಬಲಕ್ಕು
            ಪೆರಟಿ ಪಾಯಸ ಪೆರಟಿ ದೋಸೆ,ಪೆರಟಿ ಮುಳ್ಕ
            ಸಾಂತಾಣಿ ತಿಂಬಲೆ ಮಳೆಗಾಲ ಬರೆಕಡೊ
            ಬೇಳೇ ಹೋಳಿಗೆ ತಿಂಬಲೆ ರುಚಿರುಚಿ
            ಅದ್ದಿಟ್ಟಿಲ್ಲಿ ಹಾಕಿ ಬೇಶಿದರೆ ಕೂಡ ಸಾಕು
            ಬೇಳೆ ಸೌತೆ ಬೆಂದಿ ಮಳೆಗಾಲದ ಸುಲಭ ತರಕಾರಿ.
            ಉಪ್ಪಿಲ್ಲಿ ಹಾಕಿದ ಸೊಳೆ ತೆಗವದು ಮಳೆಗಾಲಲ್ಲಿ
            ಸೊಳೆ ಬೆಂದಿ ಉಪ್ಪು ಬಿಡುಸಿ ಮಾಡೆಕ್ಕು
            ಉಂಡ್ಳಕಾಳು ಮಾಡ್ಲೆ ಕಷ್ಟ ಇದ್ದರೂ
            ಕೂದು ತಿಂಬಲೆ ಎಲ್ಲೋರಿಂಗೂ ಖುಶಿ

          2. ಲಾಯ್ಕ ಪದ್ಯ ಮಾವಾ..ಬರೆತ್ತಾ ಇರಿ

          3. ಮಾವಾ,ಇಂತಾ ಪದ್ಯಂಗಳ ಒಪ್ಪಣ್ಣ.ಕಾಂ. ಲಿ ನಿಂಗಳ ಹೆಸರು ರಿಜಿಸ್ಟೆರ್ ಮಾಡಿ ಪ್ರತ್ಯೇಕ ಬರೆವದು ಉತ್ತಮ ಹೇಳಿ ಕಾಣುತ್ತು. ಬೇರೆ ಲೇಖನಕ್ಕೆಒಪ್ಪ ಕೊಡುವಾಗ ಬರೆದರೆ ,ಅದು ಸಂದರ್ಭಕ್ಕೆ ಹೊಂದುತ್ತಿಲ್ಲೇದಾ.

  3. ತೆಕ್ಕುಂಜ ಮಾವ° ಶುದ್ದಿ ಬರವ ಶೈಲಿಯೇ ಸೊಗಸಾಗಿ ಇರ್ತು. ಸಾಹಿತ್ಯ ಶ್ರೀಮಂತ ವ್ಯಕ್ತಿ ಕಡೆಂಗೋಡ್ಲು ಶಂಕರ ಭಟ್ಟರ ಪರಿಚಯ ಮತ್ತು ಅವರ ಸಾಹಿತ್ಯ ಸಾಧನೆಗಳ ಬೈಲಿಂಗೆ ಮನವರಿಕೆ ಮಾಡಿಕೊಟ್ಟದು ಲಾಯ್ಕ ಆಯ್ದು ಹೇಳಿ -‘ಚೆನ್ನೈವಾಣಿ’.

  4. ಶಂಕರ ಭಟ್ಟರ ಪದ್ಯ ಹೊನ್ನಿಯ ಮದುವೆಲಿ ಬಪ್ಪ ಮಳೆಗಾಲದ ವರ್ಣನೆಯ ಮರವಲೆ ಎಡಿಯ.
    ಆ ಪದ್ಯ ಕೇಳುವಾಗ ನಮ್ಮ ಹಳ್ಳಿ ಮನೆಯ ಮಳೆಗಾಲದ ಚಿತ್ರ ಕಣ್ಣಿಂಗೆ ಬತ್ತು.

    ಪಡುವಣ ತೀರದ
    ಕನ್ನಡ ನಾಡಿನ
    ಕಾರ್ಗಾಲದ ವೈಭವವೇನು?
    ಚೆಲ್ಲಿದರನಿತೂ
    ತೀರದ ನೀರಿನ
    ಜಡದೇಹದ ಕರ್ಮುಗಿಲೇನು?

    ಕನ್ನಡ ಸಾಹಿತ್ಯವ ಅಭ್ಯಾಸ ಮಾಡುವ ಪ್ರತಿಯೊಬ್ಬನೂ ನವೋದಯ ಸಾಹಿತ್ಯದ ಸೌಂದರ್ಯ ಎಂತದು ಹೇಳಿ ಅರ್ಥ ಮಾಡಿಕೊಂಬಲೆ ಈ ಪದ್ಯವ ಓದೆಕ್ಕು.

    ಶಂಕರ ಭಟ್ಟರ ಹೆಸರು ನಮ್ಮ ಖ್ಯಾತ ಕವಿಗಳ ಸಾಲಿಲಿ ಆ ಕಾಲಲ್ಲಿ ಇತ್ತು [ಆ ಕಾಲದ ಕೆಲವು ಪುಸ್ತಕಲ್ಲಿ ನೋಡಿದ್ದು]. ಅವು ಬೇಗ ತೀರಿಹೋದ ಕಾರಣ ಅವಕ್ಕೆ ಕೆಲವು ಪ್ರಶಸ್ತಿಗೊ ತಪ್ಪಿ ಹೋತು ಹೇಳಿ ತೋರುತ್ತು.
    ಬಹುಶಃ ಅವು ಬಹುಕಾಲ ಪತ್ರಿಕಾ ರಂಗಲ್ಲಿ ಇದ್ದದೂ ಕಾವ್ಯ ರಚನೆ ಕಮ್ಮಿ ಅಪ್ಪಲೆ ಕಾರಣ ಆದಿಕ್ಕೊ ಏನೋ?

    1. {ಅವು ಬೇಗ ತೀರಿಹೋದ ಕಾರಣ ಅವಕ್ಕೆ ಕೆಲವು ಪ್ರಶಸ್ತಿಗೊ ತಪ್ಪಿ ಹೋತು ಹೇಳಿ ತೋರುತ್ತು}
      ಎನಗೂ ಹಾಂಗೇ ತೋರುತ್ತು. ಅವರ ಕಥನ ಕಾವ್ಯಂಗಳಲ್ಲಿ ಅವು ಮಾಡಿದ ಪ್ರಯೋಗಂಗೊ ಅವರ ಕಾವ್ಯ ಪ್ರತಿಭೆಗೆ ಸಾಕ್ಷಿ. ನಿಂಗೊ ಮೇಲೆ ಹೇಳಿದ ಪದ್ಯ ಶರ ಷದ್ಪದಿಯ ಹಾಂಗೆ ಇದ್ದು, ಆದರೆ ದ್ವಿತೀಯಾಕ್ಷರ ಪ್ರಾಸವ ಬಿಟ್ಟು ಅಂತ್ಯ ಪ್ರಾಸವ ಹಾಕಿದ್ದು ಗಮನಾರ್ಹ, ಅಲ್ಲದೋ.? ಪೂರಕ ಮಾಹಿತಿಗೆ ಧನ್ಯವಾದ, ಗೋಪಾಲಣ್ಣ.

      1. ಅಪ್ಪು ಇದು ಶರ ಷಟ್ಪದಿ.ಹೊನ್ನಿಯ ಮದುವೆ ಕಥನ ಕವನ ಪೂರ್ತಿ ಶರ ಷಟ್ಪದಿಲೇ ಇದ್ದು.

      2. ಕುಮಾರ ಭಾವಯ್ಯ, ನಮಸ್ಕಾರ.
        ಎನಗೆ ನೆಂಪು ಇದ್ದಾಂಗೆ: [ಶಾಲೆ ಪುಸ್ತಕಲ್ಲಿ ಓದಿದ ನೆಂಪು]

        ಪಡುವಣ ಕಡಲಿನ
        ತೆಂಗಿನ ಮಡಲಿನ
        ಮರೆಯಲಿ ಮೆರೆವುದು ನಾಡೊಂದು

        1. ಸರಿ-ಅದು ಹೊನ್ನಿಯ ಮದುವೆ ಕಥನಕವನದ ಸುರುವಾಣ ಸಾಲುಗೊ…

          1. ಹೊನ್ನಿಯ ಮದುವೆ ಸಂಕಲನ ಆನು ಓದಿದ್ದಿಲೆ. ಎನಗೆ ಗೊಂತಿಲ್ಲದ್ದ ವಿಷಯ ( ಪದ್ಯದ ಧಾಟಿ ನೋಡಿ ಇದು ಕಡೆಂಗೋಡ್ಲು ರಚನೆ ಆದಿಕ್ಕು ಹೇಳಿ ಗ್ರೇಶಿದೆ)ಕ್ಕೆ ಸ್ಪಷ್ಟನೆ ಕೊಟ್ಟದು ಒಳ್ಳೆದಾತು. ಧನ್ಯವಾದ ಗೋಪಾಲಣ್ಣ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×