ರಾಷ್ಟ್ರಕವಿ – ಮಂಜೇಶ್ವರ ಗೋವಿಂದ ಪೈ.

ಪ್ರಾಸ ಭಂಜಕ, ಸಂಶೋಧಕ, ಮನೋರಂಜಕ – ಶ್ರೀ ಸೇಡಿಯಾಪು ಕೃಷ್ಣ ಭಟ್ಟರು ಈ ಮೂರು ಗುಣ ವಿಶೇಷಣಂಗಳ ಉಪಯೋಗಿಸಿದ್ದು ಆರ ಬಗ್ಗೆ ಹೇಳ್ತದರ ಪ್ರತ್ಯೆಕವಾಗಿ ವಿವರುಸುದು ಅಗತ್ಯ ಬಾರ ! ಕನ್ನಡದ ಮೊಟ್ಟಮೊದಲ ರಾಷ್ಟ್ರಕವಿ,ಇಪ್ಪತ್ತೆರಡು ಭಾಷೆಗಳ ಕಲ್ತ ಏಕೈಕ ಕನ್ನಡಿಗ°, ಗ್ರೀಕ್-ಕನ್ನಡ ಸಂಬಂಧವ ಮೊಟ್ಟಮೊದಲ ಬಾರಿ ತೋರ್ಸಿ ಕೊಟ್ಟ ಅಗ್ರಗಣ್ಯ ಸಂಶೋಧಕ°, ಜಪಾನಿ ಭಾಷೆಯ’ನೋ’ನಾಟಕ ಪ್ರಕಾರವ ಕನ್ನಡಕ್ಕೆ ಪರಿಚಯ ಮಾಡಿ ಕೊಟ್ಟ ಏಕೈಕ ನಾಟಕಕಾರ°, ದ್ವಿತ್ತೀಯಾಕ್ಷರ ಪ್ರಾಸವ ತ್ಯಜಿಸಿ ಹೊಸರೀತಿಯ ಕಾವ್ಯರಚನೆ ಶುರುಮಾಡಿದ ಸ್ವಂತಿಕೆಯ ಕವಿ, ಸಮ್ಮಾನ-ಬಹುಮಾನಂಗಳ ದೂರ ಮಡಗಿ ಬರೇ “ಸ್ವಾಂತ ಸುಖಾಯ:”ಕ್ಕಾಗಿ ಮಾಂತ್ರ ಕೆಲಸ ಮಾಡಿದ ಕೀರ್ತಿ ನಿರಪೇಕ್ಷಿ, ಅಖಂಡ ಅರುವತ್ತೆರಡು ವರ್ಷಗಳ ಪರ್ಯಂತ  ನಾಡು-ನುಡಿಯ ಸೇವೆಯ ಸಾಹಿತ್ಯ-ಸಂಶೋಧನೆ ಮೂಲಕ ಮಾಡಿದ ಮೊಟ್ಟಮೊದಲ ಕನ್ನಡ ಸಾಹಿತಿ, ಉಮರ್ ಖಯಾಮನ ಕಾವ್ಯವ  ಮೂಲ ಪರ್ಷಿಯನ್ ಭಾಷೆಂದ ಕನ್ನಡಕ್ಕೆ ಅನುವಾದಿಸಿದ ಏಕೈಕ ಕನ್ನಡ ಕವಿ, ಸಾಹಿತ್ಯ – ಸಂಶೋಧನೆಗಳೆರಡರಲ್ಲಿಯೂ ಅದ್ಭುತ ಕೆಲಸ ಮಾಡಿ ಸಾಧನೆ ಗೈದ  ಕಾವ್ಯರ್ಷಿ, ನಮ್ಮ ಅವಿಭಜಿತ ಕನ್ನಡ ಜಿಲ್ಲೆಯ ಆಶ್ಚರ್ಯಂಗಳಲ್ಲೊಂದು ಹೇಳಿ ಹೆಸರುವಾಸಿಯಾದ ಅದ್ಭುತ ವೆಗ್ತಿಯೇ – ಮಂಜೇಶ್ವರದ  ಗೋವಿಂದ ಪೈಗಳು.

ಮಂಜೇಶ್ವರ ಗೋವಿಂದ ಪೈಗಳು

ಹುಟ್ಟು-ಬಾಲ್ಯ-ವಿದ್ಯಾಭ್ಯಾಸ.

ಪಿತ್ರಾರ್ಜಿತವಾಗಿ ಬಂದ ಮನೆ ಮಂಗಳೂರಿಲಿದ್ದರೂ ಗೋವಿಂದ ಪೈಗಳು ಹುಟ್ಟಿದ್ದು,ಬೆಳದ್ದು,ಬದುಕಿದ್ದು ಎಲ್ಲ ಮಂಜೇಶ್ವರಲ್ಲಿ. ಹಾಂಗಾಗಿಯೇ – ಪಂಪಂಗೆ ಬನವಾಸಿ,ಬೇಂದ್ರೆಗೆ ಧಾರವಾಡ ಇಪ್ಪ ಹಾಂಗೆ ಗೋವಿಂದ ಪೈಗಳಿಂಗೆ ಮಂಜೇಶ್ವರ, ಅದು ಅವರ ಹೆಸರಿನ ಒಂದು ಭಾಗವೇ ಆತು,ಅವರ ತಪೊಭೂಮಿ ಆತು,ಕನ್ನಡಿಗರಿಂಗೆ ಒಂದು ಯಾತ್ರಾಸ್ಥಳ ಆತು ! ಮಂಗಳೂರಿನ ಪ್ರಖ್ಯಾತ ‘ಬಾಬಾ ಪೈ’ ಮನೆತನದ, ಸಾಹುಕಾರ ತಿಮ್ಮ ಪೈ – ದೇವಕಿ ದಂಪತಿಗಳ ಹೆರಿ ಮಗನಾಗಿ 1883 ಮಾರ್ಚಿ 23 ರಂದು ಜನ್ಮ ತಾಳಿದವು. ಪ್ರಾಥಮಿಕ ವಿದ್ಯಾಭ್ಯಾಸವ  ಮಂಗಳೂರಿಲಿ ಮಾಡಿದವು. ಮಂಗಳೂರಿಲಿ ಕಲ್ತುಗೊಂಡಿಪ್ಪಗ ಪಂಜೆ ಮಂಗೇಶ ರಾಯರು ಇವರ ಕನ್ನಡದ ಗುರುಗೊ ಆಗಿತ್ತಿದ್ದವಡ. ಆ ಸಮಯಲ್ಲಿ “ಹಳೆಗನ್ನಡ ವ್ಯಾಕರಣ ಸೂತ್ರಗಳು” ಪುಸ್ತಕವ ಓದಿ ಮನನ ಮಾಡಿ ಛಂದೊಲಕ್ಷಣಂಗಳ ಅರ್ಥ ಮಾಡಿಗೊಂಡವು. ಜೈಮಿನಿ ಭಾರತ,ಗದುಗಿನ ಭಾರತ,ಶಬರ ಶಂಕರ ವಿಲಾಸ ಮುಂತಾದ ಕಾವ್ಯಂಗಳ ಓದಿ ಅರ್ಥೈಸಿದ್ದು ಮಾಂತ್ರ ಅಲ್ಲ,ಅವುಗಳ ಛಂದೋ ಲಕ್ಷಣಂಗಳ ತಿಳ್ಕೊಂಡವು,ಅದೂ ತನ್ನ ಹದಿನೈದನೆಯ ತರುಣ ಪ್ರಾಯಲ್ಲಿ !.

ಮೆಟ್ರಿಕ್  ಪರೀಕ್ಷೆ ಪಾಸು ಮಾಡಿ ಕಾಲೆಜು ವಿದ್ಯಾಭ್ಯಾಸಕ್ಕೆ ಮದ್ರಾಸಿಂಗೆ ಹೋದವು. ಅಲ್ಲಿ ಕ್ರಿಶ್ಚಿಯನ್ ಕಾಲೇಜಿಲಿ ಡಾ.ರಾಧಾಕೃಷ್ಣನ್ ಇವರ ಸಹಪಾಠಿಯಾಗಿತ್ತಿದ್ದವು.ವ್ಯಾಸಂಗದೊಟ್ಟಿಂಗೆ  ಬೇರೆ ಬೇರೆ ಭಾಷೆಗಳನ್ನೂ ಕಲ್ತವು. ಪ್ರಥಮ ವರ್ಷದ ಬಿ.ಎ.ಪರೀಕ್ಷೆಲಿ ಸುವರ್ಣ ಪದಕವ ಗಿಟ್ಟಿಸಿಗೊಂಡವು.ಆದರೆ,ಚಿನ್ನದ ಪದಕವ ಸ್ವೀಕರಿಸಿದ್ದವಿಲ್ಲೆ,- ಪ್ರಕಟಣೆಯೊಂದೆ ಸಾಕು,ಪದಕ ಬೇರೆ ಯಾಕೆ ?” ಹೇಳ್ತ ನಿರ್ಲಿಪ್ತತೆ,ನಿರ್ಮೋಹ  – ಸಣ್ಣ ಪ್ರಾಯಲ್ಲಿಯೇ  ಈ ಗುಣ ಅವರಲ್ಲಿ ಸಹಜವಾಗಿ ಇದ್ದತ್ತು ! ಇಂಥಾ ಪ್ರತಿಭಾವಂತಂಗೆ ಬಿ.ಎ.ಪದವಿ ಪೂರ್ಣ ಮಾಡ್ಲೆ ಎಡಿಗಾಯ್ದಿಲ್ಲೆ.ಅಪ್ಪನ ಅನಾರೋಗ್ಯದ ಶುದ್ದಿ ಗೊಂತಪ್ಪದ್ದೆ,ಕೋಲೇಜಿನ ವಿದ್ಯಾಭ್ಯಾಸವ ನಿಲ್ಲುಸಿ ಮಂಗಳೂರಿಂಗೆ ವಾಪಾಸಾದವು.

ಸರಳ ಜೀವನ – ಉದಾತ್ತ ಚಿಂತನ

ಮದ್ರಾಸಿಂದ ವಾಪಾಸಪ್ಪದ್ದೆ ಪೈಗಳ ಮದುವೆ ಸೌಭಾಗ್ಯವತಿ ಲಕ್ಷ್ಮಿದೇವಿ(ಕೃಷ್ಣೆ ಹೇಳ್ತ ಹೆಸರೂ ಇದ್ದತ್ತು)ಯೊಟ್ಟಿಂಗೆ ಕೂಡಿಬಂತು. ನಿತ್ಯ ಜೀವನಕ್ಕೆ ಬೇಕಪ್ಪಷ್ಟು ಹೆರಿಯೋರ ಆಸ್ತಿ ಇದ್ದತ್ತು.ಅದರಲ್ಲಿಯೇ ತೃಪ್ತಿ ಹೊಂದಿ ಸರಳವಾದ ಜೀವನವ ಶುರು ಮಾಡಿದವು.ತಮ್ಮ ಸಮಯವ ಉದಾತ್ತ ಚಿಂತನೆ,ಸಾಹಿತ್ಯ ರಚನೆ,ಸತತಾಧ್ಯಯನ,ಸಂಶೊಧನೆಗಳಲ್ಲಿ ತೊಡಗಿಸಿಗೊಂಡವು.ಅವರ ಬಹುಭಾಷಾ ಅಧ್ಯಯನ ಇಷ್ಟರಲ್ಲಿಯೇ ಮುಂದುವರುದು ಬೆಂಗಾಲಿ ಮತ್ತೆ ಪಾಲಿ ಭಾಷೆಗಳಲ್ಲಿ ಪ್ರಭುತ್ವ ಪಡದವು.ಪೈಗಳಿಂಗೆ ಇಡೀ ವಿಶ್ವ ಸಾಹಿತ್ಯ ಸಾಗರವನ್ನೇ ಆಪೋಶನ ಮಾಡಿಗೊಂಬ ತವಕ.ಮನೆ ತುಂಬ ಹಲವು ಭಾಷೆಗಳ ನಿಘಂಟು,ಪುಸ್ತಕಂಗೊ ತುಂಬಿಸಿಗೊಂಡು ಅವರ ಪುಸ್ತಕ ಭಂಡಾರ ಅಗಾಧವಾಗಿ ಬೆಳದತ್ತು. ಗ್ರೀಕ್,ಪರ್ಷಿಯನ್,ಇಟಾಲಿಯನ್,ಫೆಂಚ್,ಜಪಾನೀ ಭಾಷೆಗಳಲ್ಲಿ ಸಾಕಷ್ಟು ಜ್ಞಾನ ಗಳಿಸಿಗೊಂಡವು.ತಮಿಳು,ತೆಲುಗು,ಗುಜರಾತಿ,ತುಳು,ಕೊಂಕಣಿ,ಮಳಯಾಳ ಮುಂತಾದ ಭಾಷೆಗಳಲ್ಲಿ ವೆವಹರುಸುವಷ್ಟು ಅಭ್ಯಾಸ ಮಾಡಿಗೊಂಡವು.

ಬಹುಭಾಷಾ ಪಂಡಿತ ಪೈಗಳದ್ದು ಸಾದಾ ಉಡುಗೆ,ತೊಡುಗೆ – ಶುರೂ ನೋಡ್ತವಕ್ಕೆ ಕಾಂಬಗ ಗೆದ್ದೆ ಕೆಲಸದವನ ಹಾಂಗೆ ಕಾಂಗಡ. ಒಂದು ಮುಂಡು,ಅರ್ಧ ಕೈ ಅಂಗಿ ಅದೂ ಖದ್ದರಿರಿನದ್ದು ಅವರ ನಿತ್ಯದ ಡ್ರೆಸ್ಸು.ಉದೆಗಾಲಕ್ಕೆ ಎದ್ದು ತಣ್ಣೀರಿಲಿ ಮೀಯಾಣ, ಸಾಬೂನು ಉಪಯೋಗುಸುತ್ತ ಕ್ರಮವೇ ಇಲ್ಲೆ.ನಿತ್ಯ ಎರಡೂ ಹೊತ್ತು ಸ್ತೋತ್ರ ಜೆಪ ,ಇರುಳು ಮನುಗೆಕ್ಕಾರೆ ವಿಷ್ಣುಸಹಸ್ರನಾಮ, ರಾಮಾಯಣ ಪಠಣ. ಕೊನೆಯುಸುರಿನವರೆಗೂ ಇದೇ ರೀತಿಯ ಸರಳ ಜೀವನ ಪೈಗಳದ್ದು.

ವಿದ್ಯಾ ದದಾತಿ ವಿನಯಂ !

ಪೈಗಳ ಸಾಂಸಾರಿಕ ಜೀವನ ಅಷ್ಟೇನೂ ಸುಖಕರ ಆಗಿತ್ತಿಲ್ಲೆ.೪೪ ರ ಸಣ್ಣ ಪ್ರಾಯಲ್ಲಿ ಪ್ರೀತಿಯ ಪತ್ನಿ ಅನಾರೋಗ್ಯಂದ ತೀರಿ ಹೋದವು. ಹುಟ್ಟಿದ ಒಂದು ಕೂಸುದೇ ತೀರಿಹೋಗಿ ಪೈಗಳಿಂಗೆ ‘ಅಪ್ಪ’ಹೇದು ಕರಸಿಗೊಂಬ ಯೋಗವೇ ಕೂಡಿಬಯಿಂದಿಲೆ. ಅದರೂ, ತಮ್ಮಂದ್ರ, ಹತ್ತರಾಣ ಬಂಧುಗಳ,ಮನೆ ಕೆಲಸದವರ ಮಕ್ಕಳ ತುಂಬ ಹಚ್ಚಿಗೊಂಡವು. ಸಣ್ಣ ಮಕ್ಕೊಗೆ ಇವು ‘ಅಜ್ಜ’ ಆದರೆ , ರಜ್ಜ ದೊಡ್ಡವಕ್ಕೆ ‘ಗೋಂಯ್ದ ಮಾಮ’! ಪ್ರತಿದಿನದ ಚಟುವಟಿಕೆಲಿ ಎರಡು ಘಂಟೆ ಹೊತ್ತು ನೆರೆಕರೆಯವತ್ತರೆ,ಮಕ್ಕಳೊಟ್ಟಿಂಗೆ ಪಂಚಾತಿಕೆ,ಹರಟೆ  ಇವರ ದಿನಚರಿಯ ಪ್ರೀತಿಯ ಒಂದು ಭಾಗವೇ ಆಗಿದ್ದತ್ತು ! ತಮ್ಮ ದು:ಖ – ಬೇನೆಗಳ ಮಕ್ಕಳ ಒಡನಾಟಲ್ಲಿ ಮರದವು.ಕತೆ ಹೇಳುಲೆ ಪೀಡಿಸಿಯಪ್ಪಗ ಬೆಳ್ಳಿ ಮೀಸೆಯ ಗೋಂಯ್ದ ಮಾಮ ಮಕ್ಕಳೇ ಆಗ್ಯೊಂಡಿತ್ತವು. ಆ ತಾದಾತ್ಮ್ಯ ಎಷ್ಟು ಇತ್ತು ಹೇಳಿರೆ, ಪೈಗಳ ಮರಣಶೈಯೆಲಿ ಬಂಧು ಬಾಂಧವರ ಆಕ್ರಂದನಕ್ಕೆ ಸ್ಪಂದಿಸದ್ದವು, ‘ಅಜ್ಜ – ಗೋಂಯ್ದ ಮಾಮ’ ಈ ಎರಡು ಶಬ್ದಂಗೊಕ್ಕೆ ಸ್ಪಂದಿಸಿದವಡ !

ಅಭಿಮಾನಿಗೊ,ಮಿತ್ರರಿಂದ ಬಂದ ಪತ್ರಕ್ಕೆ ಕ್ಲುಪ್ತ ಸಮಯಲ್ಲಿ ಉತ್ತರುಸುವ ಪರಿಪಾಠ ಪೈಗಳು ಅಕೇರಿವರೆಗೂ ಪಾಲಿಸಿಗೊಂಡು ಬಯಿಂದವಡ. ಪ್ರತ್ಯುತ್ತರ ಬರವಲೆ ತಡವಾದರೆ, ತಡವಾದ ತಪ್ಪಿಂಗೆ ಕ್ಷಮೆ ಯಾಚಿಸಿಗೊಂಡು ಬರದ ನಿದರ್ಶನ ಹಲವು ಇದ್ದಡ. ಮುಂಬಯಿಲಿ ನಡದ 34 ನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವೇದಿಕೆಗೆ ಬಪ್ಪಲೆ ಆಹ್ವಾನ ಕೊಟ್ಟಪ್ಪಗ, ಮದಲೇ ಅಲ್ಲಿ ಆಸೀನರಾಗಿತ್ತಿದ್ದ, ಪೈಗಳಿಂದ ಹೆರಿಯರಾದ ಆಲೂರು ವೆಂಕಟ ರಾಯರ ಕಾಲು ಮುಟ್ಟಿ ನಮಸ್ಕರಿಸಿದ್ದವಡ! ಈ ಹೃದಯಸ್ಪರ್ಷಿ ಘಟನೆಯ ಪ್ರತ್ಯಕ್ಷದರ್ಶಿಗಳಲ್ಲಿ ಒಬ್ಬ° ಶ್ರೀ ಕಯ್ಯಾರರು ಇದರ ಹೃದಯಂಗಮವಾಗಿ ವಿವರಿಸಿದ್ದವು. “…….. ಸಂಪ್ರದಾಯದಂತೆ ಅಧ್ಯಕ್ಷ ಸ್ಥಾನಕ್ಕೆ ಗೊವಿಂದ ಪೈಗಳ ಹೆಸರು ಕ್ರಮಬದ್ಧವಾಗಿ ಸೂಚಿಸಲ್ಪಟ್ಟು ಅನುಮೋದಿತವಾಯಿತು.ಪೈಗಳು ತಾವು ಕುಳಿತಿದ್ದ ಸ್ಥಳದಿಂದ ನಿರಾಡಂಬರವಾಗಿ ಎದ್ದು ವೇದಿಕೆಯನ್ನು ಏರಿದರು. ಮೇಲೆ ಆಸೀನರಾಗಿದ್ದ ಹಿರಿಯರಲ್ಲಿ ಕನ್ನಡ ಕುಲ ಪುರೋಹಿತ ಆಲೂರು ವೆಂಕಟ ರಾಯರೂ ಒಬ್ಬರು. ಪೈಗಳು ವೇದಿಕೆಯನ್ನೇರಿದವರೇ ಅಧ್ಯಕ್ಷ ಪೀಠವನ್ನು ಸ್ವೀಕರಿಸುವ ಮುನ್ನ ಆಲೂರು ವೆಂಕಟ ರಾಯರ ಕಾಲುಮುಟ್ಟಿ ನಮಸ್ಕರಿಸಿದರು. ಸಭೆ ಒಮ್ಮೆ ಸ್ಥಂಭೀಭೂತವಾಯಿತು ! ಆಲೂರರ ನಯನಗಳಿಂದ ಗಳಗಳನೆ ಆನಂದಭಾಷ್ಪ ಸುರಿಯುತಿತ್ತು”

ಪೈಗಳ ಔನ್ನತ್ಯದ ಪ್ರತೀಕ ಅವರ ವಿನಯ !

ಯೇವುದೇ ಪ್ರಶಸ್ತಿ,ಸಮ್ಮಾನಂಗಳ ನಿರಾಕರಿಸಿಗೊಂಡಿತ್ತಿದ್ದ ಪೈಗಳ ಮನೋವೃತ್ತಿಗೆ ಹತ್ತಾರು ಉದಾಹರಣೆಗೊ,ಅವರ ಬಗ್ಗೆ ಶ್ರೀ ಹಂಪನಾ ಬರದ”ಬದುಕು -ಬರಹ” ಪುಸ್ತಕಲ್ಲಿ  ಸಿಕ್ಕುತ್ತು.

ಪೈಗಳದ್ದು  ಶ್ರೀರಾಮನ ಆದರ್ಶ.ಅದು ಮನ:ಪೂರ್ವಕವಾಗಿ ತಿಳ್ಕೊಂಡು ತಮ್ಮಲ್ಲಿ ಬೆಳೆಶಿಗೊಂಡದಲ್ಲ,ಸಹಜವಾಗಿ  ಬೆಳದು ಬಂದದು !ಅವರ ಬಗ್ಗೆ ಶ್ರೀ ಮಾಸ್ತಿ ಹೇಳುವ ಮಾತುಗೊ ಉತ್ಪ್ರೇಕ್ಷೆಯೇನಲ್ಲ – “ಕಾವ್ಯವನ್ನುಬಾಳುವುದು,ಕಾವ್ಯವನ್ನು ಹಾಡುವುದು,ಹೊರಗಿನ ಇತಿಹಾಸ ಆತ್ಮದ ಇತಿಹಾಸಲ್ಲಿ ಅನ್ವೇಷಣೆ ಮಾಡುವುದು,ಎಲ್ಲದರಿಂದಲೂ ತಣಿಯುವುದು,ತೂಗಿಸುವುದು —ಇದು ಇವರ ಜೀವನದ ಕಾರ್ಯಕ್ರಮ.ಇದರ ಅಂದವನ್ನು ಯಾರು ಬೇಕಾದರೂ ಮಂಜೇಶ್ವರಕ್ಕೆ ಹೋಗಿ ನೋಡಬಹುದು. ತಪಸ್ಸು ಎಂದರೆ ಏನು ಎಂದು ತಿಳಿಯಬಹುದು.”

ತಲೆಮಾರಿನಲ್ಲಿ ಭರತವರ್ಷದ ಬಸಿರು ಹಲವಾರು ಬಹು ಹಿರಿಯ ಮಕ್ಕಳನ್ನು ಪಡೆಯಿತು.ಅವರಲ್ಲಿ ಕೆಲವರು ಕನ್ನಡ ಭೂಮಿಯಲ್ಲಿ ಕಂಡರು.ಅವರಲ್ಲಿ ಒಬ್ಬರು ಗೋವಿಂದ ಪೈಗಳು.”

ವಸುಧೈವ ಕುಟುಂಬಕಮ್” ಎಂದವರು ಹಿಂದೂ,ಇಂದೂ,ಎಂದೆಂದೂ ಬಹಳವೇ! ಪೈಯವರು ಹಾಗೆ ಹೇಳಲಿಲ್ಲ.ಹಾಗೆ ಬಾಳಿದರು !

ಸಾರಸ್ವತ ತಪಸ್ವಿ.

ಗೋವಿಂದ ಪೈಗಳು ಹೆಸರಿಲಿ ಮಾಂತ್ರವೇ ಪೈ”. ಕನ್ನಡ ಸಾಹಿತ್ಯದ ದೃಷ್ಟಿಂದ ಅವು ಬಂಗಾರದ ನಾಣ್ಯ.

ಅವರ ಸಾಹಿತ್ಯದ ಕೃಷಿ ದೊಡ್ಡದು. ಸುಮಾರು 144 ಕವನಂಗೊ,ಹತ್ತು-ಹದಿನೈದು ಗ್ರಂಥ,ತತ್ವಜ್ಞಾನ-ಧರ್ಮಕ್ಕೆ ಸಂಬಂಧ ಪಟ್ಟದು ಹನ್ನೆರಡು,ಹಳೆಗನ್ನಡಕ್ಕೆ ಸಂಬಂಧ ಪಟ್ಟದು ಹದಿನೆಂಟು,ವಿವಿಧ ವಿಷಯಂಗಳ ಬಗ್ಗೆ ನೂರಕ್ಕೆ ಮೇಲ್ಪಟ್ಟು ಪ್ರಬಂಧಂಗಳ ರಚಿಸಿದ್ದವು. ಮೂರು ಸ್ವತಂತ್ರ ನಾಟಕಂಗೊ ಮಾಂತ್ರ ಅಲ್ಲದ್ದೆ, ಜಪಾನೀ ಭಾಷೆಂದ ಎಂಟು “ನೋ” ನಾಟಕಂಗಳ ಕನ್ನಡಕ್ಕೆ ಅನುವಾದಿಸಿದ್ದವು.ಸುಮಾರು ಎಂಟು ಗ್ರಂಥಂಗೊಕ್ಕೆ ಮುನ್ನುಡಿಯನ್ನೂ,ಒಂಬತ್ತು ಗ್ರಂಥಂಗೊಕ್ಕೆ ವಿಮರ್ಶೆಯನ್ನೂ ಬರದ್ದವು. ಹೀಂಗೆ,ಪೈಗಳ ಸಾಹಿತ್ಯ ಸೃಷ್ಟಿ ಮೂರುವರೆ ಸಾವಿರ ಮುದ್ರಿತ ಪುಟಗಳಷ್ಟಿದ್ದು ! ಅವು ಒಬ್ಬ ನಿಷ್ಟಾವಂತ ಸಾರಸ್ವತ ತಪಸ್ವಿ,ಮಹಾನ್ ಕಾವ್ಯರ್ಷಿ !

1903 ರಲ್ಲಿ ಪೈಗಳು ಬರದ ಮದಲ ಕವನ ಪ್ರಕಟಣೆ ಆತು ,ಅದೂಅವರ ಹದಿನೇಳನೆ ಪ್ರಾಯಲ್ಲಿ.ಮಂಗಳೂರಿನ ‘ಸುವಾಸಿನಿ’ ಪತ್ರಿಕೆಯವು ಏರ್ಪಡಿಸಿದ್ದ ಕವನ ಸ್ಪರ್ಧೆಗೆ,ಪತ್ರಿಕೆಯ ಹೊಗಳಿ ಮೂರು ಕಂದ ಪದ್ಯಂಗಳ ಬರದು ಪ್ರಥಮ ಬಹುಮಾನ ಗಿಟ್ಟಿಸಿಗೊಂಡವು.ಇಂಗ್ಲೀಷ್ ಸಾಹಿತ್ಯವ ಆಳವಾಗಿ ಅಭ್ಯಾಸ ಮಾಡಿದ ಪರಿಣಾಮವೋ ಏನೋ,ಅವಕ್ಕೆ ಕನ್ನಡಲ್ಲಿಯೂ ಹೊಸ ಪ್ರಯೋಗಂಗಳ ಪ್ರಾರಂಭ ಮಾಡ್ಲೆ ಸ್ಪೂರ್ತಿ ಸಿಕ್ಕಿದ್ದಾಗಿಕ್ಕು.1910 ವರೆಗೆ ಪ್ರಾಸಬದ್ಧವಾಗಿ,ಕಂದ,ಷಡ್ಪದಿಗಳಲ್ಲಿ ಕಾವ್ಯ ರಚಿಸಿಗೊಂಡಿದ್ದವು, 1911 ರ ನಂತರ ದ್ವಿತೀಯಾಕ್ಷರ ಪ್ರಾಸ ರಹಿತವಾಗಿ ಕಾವ್ಯ ರಚಿಸುಲೆ ಪ್ರಾರಂಭಿಸಿದವು.ಅ ಕಾಲಲ್ಲಿ ತುಂಬ ಜನಪ್ರಿಯ ಆಗಿತ್ತಿದ್ದ ರವೀಂದ್ರನಾಥ ಠಾಗೋರರ ಕವನ”ಅಯಿ ಭುವನ ಮನ ಮೋಹಿನಿ” ಯ  ಕನ್ನಡಕ್ಕೆ  “ಭಾರತ ಲಕ್ಷ್ಮಿ”ಹೆಸರಿಲಿ ಅನುವಾದಿಸಿದವು.ಅದು ಪ್ರಕಟವೂ ಆತು.ವಿರೋಧವೂ ಬಂತು.ಕಟು ಟೀಕೆಯೊಟ್ಟಿಂಗೆ ದೊಡ್ಡ ಗದ್ದಲವೇ ಆಗಿದ್ದತ್ತು.ಪೈಗಳ ನಿರ್ಧಾರ ಅಚಲವಾಗಿದ್ದತ್ತು –“ಕನ್ನಡಕ್ಕೆ ಪ್ರಾಸವೇನೂ ವೇದವಾಕ್ಯವಲ್ಲ,ಶಾಶ್ವತವೂ ಅಲ್ಲ.ಅದನ್ನು ಬೇಕಾದಂತೆ ಬೇಕಾದಾಗ ಬಿಟ್ಟುಬಿಡಬಹುದು.ಕಾಲಕ್ಕೆ ತಕ್ಕಂತೆ ಪ್ರಾಸವನ್ನೇ ಅಲ್ಲ,ಛಂದಸ್ಸನ್ನೂ,ವ್ಯಾಕರಣಗಳನ್ನೂ ಸಹ ತನಗೆ ಬೇಕಾದಂತೆ ಮಾರ್ಪಡಿಸಿಕೊಳ್ಳಲು ಕವಿಗೆ ಅಧಿಕಾರವಿದೆ.ಬೇಕಾದವರು ಹೊಸ ಹಾದಿಯನ್ನು ಹಿಡಿಯಲಿ,ಬೇಡಾದವರು ಹಳೆಯ ಹಾದಿಯಲ್ಲೇ ನಡೆಯಲಿ;ಮತ್ತು ಇಂದು ಒಬ್ಬನೇ ನಡೆವ ಮೇಕೆ ಹಾದಿಯೆ ಮುಂದೆ ತೇರನ್ನೆಳೆಯುವ ಹೆದ್ದಾರಿಯಾಗುತ್ತದೆ”

ಮುಂದೆ, 1917 ರ ನಂತ್ರ ಇಂಗ್ಲೀಶಿನ ಹಲವು ಸಾನೆಟ್ಟುಗಳ ಕನ್ನಡಕ್ಕೆ ಅನುವಾದಿಸಿ ಹೊಸ ರೀತಿಯ “ಚತುರ್ದಶ ಪದಿ”ಗಳ ಪ್ರಾರಂಭಿಸಿದವು.

ಗೊಮ್ಮಟ ಜಿನಸ್ತುತಿ, ನಂದಾದೀಪ, ಸೈರಂಧ್ರಿ, ಗಿಳಿವಿಂಡು, ಗೋಲ್ಗೋಥಾ(ಏಸುವಿನ ಕಡೆಯ ದಿನ),ವೈಶಾಖಿ(ಬುದ್ಧನ ಕೊನೆಯ ದಿನ),ಪ್ರಭಾಸ(ಕೃಷ್ಣನ ಕೊನೆಯ ದಿನ)- ಇವು ಪೈಗಳ ಪ್ರಮುಖ ಕಾವ್ಯಂಗೊ. ದೆಹಲಿ ಅಥವಾ ಮಹಾತ್ಮನ ಕಡೆಯ ದಿನ – ಇದು ಗಾಂಧೀಜಿಯ ಬಗ್ಗೆ ಬರದ ಅಪೂರ್ಣ ಕಾವ್ಯ.

ಗಿಳಿವಿಂಡಿಲಿ ಸುಮಾರು ಐವತ್ತು ಪದ್ಯಂಗೊ ಉಮರ್ ಖಯಾಮನ ಕವಿತೆಗಳ ಅನುವಾದ, ಮತ್ತೆ ಕೆಲವು ಪದ್ಯಂಗೊ ಅವರ ನೆಚ್ಚಿನ ಮಡದಿಯ ಬಗ್ಗೆ ಇದ್ದು –

ನನಗೆ ಏನಾದರೆನು? ನೀನಲ್ಲಿ ನೆಮ್ಮದಿಯಿಂದಿರಬೇಕು.

ಬದುಕಿನ ಅವಧಿ ತೀರಿದೊದನೆ ನಾ ನಿನ್ನ ಬಂದು ಸೇರಿಯೇನು”

ಪೈಗಳ ಕಾವ್ಯದ ಪರಿಚಯಕ್ಕಾಗಿ ಮಾಂತ್ರ ಒಂದೆರಡರ ಇಲ್ಲಿ ಹಾಕುತ್ತ ಇದ್ದೆ -“ಪಭಾಸ”ಲ್ಲಿ ಕೆರಳಿದ ಸಮುದ್ರವ ನೋಡಿ ಹಡಗಿನ ಪಡೆಯವು ಹೇಳುವ ಮಾತುಗೋ

ನೀ ನೀರ ಸಾಗರವೋ ? ನಿರ್ಘೋಷದಾಗರವೋ ?

ಮಂದರಂ ನಿನ್ನ ಕಡೆದುದಕೆ ನರಳುವೆಯೋ ? ಹದಿ

ನಾಲ್ಕು ರತ್ನವ ಸುರರು ಕಸಿದುದಕೆ ಮರಳುವಿಯೋ ?

ಎನಿತು ಯುಗದಿಂದೆನಿತು ಕಲ್ಪದಿಂ ನೀನಿಂತು

ಹೊರಳುತಿಹೆ ? ಕೆರಳುತಿಹೆ ?”

 

ಗೋಲ್ಗೋಥಾ ಲ್ಲಿ ಏಸುವ ಶಿಲುಬೆಗೆ ಏರಿಸಿದ ಮೇಲೆ ಶಾಂತನಾಗಿಪ್ಪ ಅವನ ವರ್ಣನೆ –

“……..ಹದ್ದು ಬಿಗಿ

ವಿಡಿದ ಲಾವಿಗೆಯಂತೆ,ಪಡುವಣದಿ ಬಿಳಿಯ ಬಿದಿ

ಗೆಯ ತಿಂಗಳಿನಂತೆ,ಬಿಲ್ಲಿಗೆ ತೊಟ್ಟ ಸರಳಂತೆ,

ಮರಣ ವೃಕ್ಷದೊಳಮೃತಫಲದಂತೆ “

ಗಿಳಿವಿಂಡಿನ ಮತ್ತೊಂದು ಕವಿತೆ –

ಬಲ್ಲುದೆ ಲತೆ ಫಲಂ ತನ್ನ

ಸಿಹಿಯೋ ಕಹಿಯೋ ಎಂಬುದನ್ನ ?

ಬಗೆದಂತೊದಗಿಸಲು ಬನ್ನ

ಮೇನೋ ? ಬಳ್ಳಿಯಾ

ಹಲವೊ ಕೆಲವೊ ಸವಿದು ಹಣ್ಣ,

ಸಿಹಿಯಾದೊಡೆ ಕೊಳವುದಣ್ಣ,

ಕಹಿಯಾದೊಡೆ ಕಳೆವುದಣ್ಣ

ಲತೆಯಾ ತಳ್ಳಿಯಾ”

ಪೈಗಳು ಬರದ ಮೂರು ನಾಟಕಂಗೊ – ತಾಯಿ,ಏಕಲವ್ಯ , ಚಿತ್ರಭಾನು.  ಜಪಾನಿನ ಜಾನಪದ ಶೈಲಿಯ “ನೊ” ನಾಟಕಂಗಳ ಕನ್ನಡಕ್ಕೆ ಪರಿಚಯಿಸಿದ್ದು ಅವರ ಒಂದು ಮಹತ್ಕಾರ್ಯ.

ಧೀಮಂತ ಸಂಶೊಧಕ

ಕವಿತೆ ಪೈಗಳಿಂಗೆ  ಎಷ್ಟು ಸಹಜವಾಗಿದ್ದತ್ತೋ,ಸಂಶೋಧನಾ ಆಸಕ್ತಿಯೂ ಅಷ್ಟೇ ಸಹಜವಾಗಿದ್ದತ್ತು.ಕಳುದ ಶತಮಾನಂದಿತ್ಲಾಗಿ ಆಗಿ ಹೋದ ಸಾಹಿತಗಳ ಪೈಕಿ ಕಾವ್ಯರಚನೆ ಮತ್ತೆ ಮೌಲಿಕ ಸಂಶೋಧನೆಗಳ ಹಾಂಗಿಪ್ಪ ಎರಡು ವಿಭಿನ್ನ ಕ್ಷೇತ್ರಂಗಳಲ್ಲಿ ಬೆಲೆಬಾಳುವ ಕೆಲಸ ಮಾಡಿ,ಮತ್ತಾಣ ಪೀಳಿಗೆಯ ಸಾಹಿತಿಗೊಕ್ಕೆ , ಸಂಶೋಧಕರಿಂಗೆ ದೊಡ್ಡ ಪ್ರಮಾಣಲ್ಲಿ ಪ್ರಭಾವ ಬೀರಿದ ಏಕೈಕ ಬರಹಗಾರ ಪೈಗಳು.

ಇವರ ಸಂಶೋಧನಾ ಪ್ರಬಂಧಂಗಳ ವ್ಯಾಪ್ತಿ ತುಂಬ ದೊಡ್ಡದಿದ್ದು. ಅವುಗಳ ಸ್ತೂಲವಾಗಿ  ಹೀಂಗೆ ವಿಂಗಡಿಸಿದ್ದವು:

1. ಐತಿಹಾಸಿಕ ಸಂಶೋಧನೆ –

a)      ತುಳುನಾಡು

b)      ಕರ್ನಾಟಕ

c)       ಭಾರತ

d)      ಧಾರ್ಮಿಕ

e)      ಭಾಷೆ

2. ಕನ್ನಡ ಸಾಹಿತ್ಯ ಸಂಶೋಧನೆ –

a)      ಹಳೆಗನ್ನಡ ಕವಿಕಾವ್ಯ

b)      ಹೊಸಗನ್ನಡ

ಪೈಗಳ ಇತಿಹಾಸ ಸಂಶೋಧನೆಯ ಕಾರ್ಯ ಶುರುವಾದ ಬಗ್ಗೆಯೂ ಹಿನ್ನೆಲೆ ಇದ್ದು. ಸತಃ ಸಾರಸ್ವತ ಪಂಗಡದವರಾಗಿ, ಅವರ ಹಿಂದಾಣ ತಲೆಮಾರಿನವು ಮದಲು ಗೋವೆಲಿತ್ತಿದ್ದವು, ಪೋರ್ಚುಗೀಸರ ಹಾವಳಿ ತಡೆಯದ್ದೆ ಕರ್ನಾಟಕ ಕರಾವಳಿಗೆ ವಲಸೆ ಬಂದ ಚರಿತ್ರೆಯ ತಿಳ್ಕೊಂಡು,ಅದರ ಬಗ್ಗೆ ಮೂಲ ಶೋಧನೆ ಮಾಡುವ ಉದ್ದೇಶಂದ ಗೋವೆಗೆ ಹೋಗಿ,ಅಲ್ಲಿ ಪೊರ್ಚುಗಿಸರ ಭಾಷೆಯ ಕಲ್ತು ಸಂಶೋಧನೆಗೆ  ತೊಡಗಿದವಡ.ಸಾರಸ್ವತರ ಬಗ್ಗೆ ಕನ್ನಡಲ್ಲಿ ಆದ ಪ್ರಪ್ರಥಮ ಸಂಶೋಧನೆ ಇದು ಹೇಳ್ತವು !.ಈ ವಿಷಯದ ಬಗ್ಗೆ ಪೈಗಳು ಕಂಡುಹಿಡುದ ಮೂಲೇತಿಹಾಸವೇ ಈಗಳೂ ಪರಮ ಪ್ರಮಾಣ ಹೇಳಿ ಒಪ್ಪುತ್ತವು.

ಕರ್ಮಣ್ಯೆ ವಾಧಿಕಾರಸ್ತೆ,ಮಾಫಲೇಶು ಕದಾಚನ”

ಸುದೀರ್ಘವಾಗಿ 62 ವರ್ಷ ಪರ್ಯಂತ ಕನ್ನಡ ನಾಡು ನುಡಿಯ ಕೈಂಕರ್ಯ ಮಾಡಿದ ಪೈಗಳು, ಗೀತೆಯ ಸಂದೇಶವ ಅಕ್ಷರಶಃ ಪಾಲಿಸಿದ ವೆಗ್ತಿ.  ಅವರ ಅಕೇರಿಯಾಣ ದಿನ ಸುಖಕರವಾಗಿತ್ತಿಲೆ.ಬಿಡದ್ದೆ ಬಪ್ಪ ಜ್ವರದ ತಾಪಲ್ಲಿ ಬಳಲಿದವು. 1963ರ ಸೆಪ್ಟೆಂಬರ್ ಆರನೆಯ ದಿನ ಕನ್ನಡ ದೇಗುಲಲ್ಲಿ ಹೊತ್ತುಸಿದ ‘ನಂದಾದೀಪ’ ನಂದಿಹೋತು.  ಕನ್ನಡ ‘ಸೋನೆಟ್ಟು’ಗಳ ಬರದು ಇಂಪಾಗಿ ಹಾಡಿದ ‘ಗಿಳಿ’, ಹಿಂಡುಗಳೊಟ್ಟಿಂಗೆ ಮೇಲೆ ಹಾರಿಹೋತು. ಅವರ ತಪೊಭೂಮಿ ಮಂಜೇಶ್ವರ ಬಡವಾತು. ಅವರ ನೆಂಪು ಮಾಂತ್ರವೇ ಶಾಶ್ವತವಾತು !

ನಿನ್ನಡಿಯ ಮಣ್ಣಿಂದು ಯೆನ್ನ ಹಿಡಿಯೊಳದಿಕಿ

ಲ್ಲೆನ್ನೆ ಅದು ಹೇಂಗೆ ಪೂಜಿಸುದು ನಿನಗಾನು ?

ಹೊನ್ನ ಹೃದಯದ ಬೆಳಿ ಮೀಸೆಯಿಪ್ಪೆನ್ನಜ್ಜ

ನಿನ್ನ ನೆಂಪೇ ಸಾಕೊ ? ಗೋಂಯ್ದ ಮಾಮ !

~~*~*~~

ಆಧಾರ ಗ್ರಂಥ : ಗೋವಿಂದ ಪೈ ಬದುಕು – ಬರಹ

ಲೇ: ಹಂಪನಾ ಮತ್ತು ಕಾವ್ಯಜೀವಿ

(ಫಟ – ಅಂತರ್ಜಾಲಂದ)

ತೆಕ್ಕುಂಜ ಕುಮಾರ ಮಾವ°

   

You may also like...

6 Responses

 1. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಗೋವಿಂದ ಪೈ ಬರೆದ ಲೇಖನ ಓದಿರೆ,ಅವು ಎಷ್ಟೆಲ್ಲ ಸಂಗತಿ ಗಮನಿಸುತ್ತವು ಹೇಳಿ ಗೊಂತಾವುತ್ತು.ಅವು ಕಾಕಾ ಕಾಲೇಲ್ ಕರಿಂಗೆ ಒಂದು ಕೋಲು ಕೊಟ್ಟಿತ್ತಿದ್ದವಡ.ಕಾಲೇಲ್ ಕರ್ ಅದರ ಗಾಂಧೀಜಿಗೆ ಕೊಟ್ಟವು.ಆ ಕೋಲನ್ನೇ ಗಾಂಧೀಜಿ ದಂಡಿ ಯಾತ್ರೆಲಿ ಉಪಯೋಗಿಸಿದವು.ಗಾಂಧಿ ಹೇಳಿದರೆ ಪೈಗಳಿಂಗೆ ಭಾರೀ ಭಕ್ತಿ.
  ಪೈಗಳ ಪುಸ್ತಕ ಸಂಗ್ರಹ ಈಗ ಉಡುಪಿಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರಲ್ಲಿ ಇದ್ದು ಹೇಳಿ ಕಾಣುತ್ತು.ಆ ಕಾಲಲ್ಲಿ ಅವರ ಸಾಧನೆ ಅತ್ಯಾಶ್ಚರ್ಯವಾಗಿ ಕಾಣುತ್ತು.ಅವಕ್ಕೆ ನಮೋನಮಃ

 2. ಚೆನ್ನೈ ಭಾವ says:

  62 ವರ್ಷ ಪರ್ಯಂತ ಕನ್ನಡ ನಾಡು ನುಡಿಯ ಕೈಂಕರ್ಯ ಮಾಡಿದ ಪೈಗಳ ಬಗ್ಗೆ ಪೂರ್ಣ ಮನಸ್ಸಿಂದ ಕುಮಾರ ಮಾವ ಒಂದಷ್ಟು ಬರದು ನೆನಪಿಸಿದ್ದು ಭಾರೀ ಲಾಯಕ ಆಯ್ದು. ಮಾವನ ಸಾಹಿತ್ಯ ಅಭಿಮಾನ ಬೈಲಿಂಗೆ ಉತ್ತಮ ಕೊಡುಗೆ ಮತ್ತು ಇತರರಿಂಗೆ ಉತ್ತೇಜಕ ಆವ್ತಾ ಇದ್ದು ಹೇಳಿ – ಚೆನ್ನೈವಾಣಿ’.

 3. ಬೊಳುಂಬು ಗೋಪಾಲ says:

  ಮಂಜೇಶ್ವರ ಗೋಂಯ್ದ ಮಾಮನ ಬಗ್ಗೆ ಎನಗೆ ಗೊಂತಿಲ್ಲದ್ದ ತುಂಬಾ ಹೊಸ ವಿಷಯಂಗೊ, ಕುಮಾರ ಮಾವನ ಮುಖಾಂತರ ಗೊಂತಾತು. ಲೇಖನದ ಸುರೂವಿಂಗೇ ಪೈಗಳ ಬಗ್ಗೆ ಕೊಟ್ಟ ಚಿತ್ರಣ ಅವರ ಧೀಮಂತ ವ್ಯಕ್ತಿತ್ವವ ಪರಿಚಯಿಸಿತ್ತು. ಅವರ ವಿನಯ, ಸರಳ ಜೀವನ, ಸಾಹಿತ್ಯದ ಬಗ್ಗೆ ಇದ್ದ ಪ್ರೀತಿ ಎಲ್ಲವುದೆ ಅನುಕರಣೀಯ. ಅವು ಪೈ ಅಲ್ಲ ಚಿನ್ನದ ನಾಣ್ಯ ಹೇಳ್ತದು ಸರಿಯಾದ ಮಾತು. ಅವರ ಸಾಂಸಾರಿಕ ಜೀವನದ ವಿಷಯ ತಿಳುದು ತುಂಬಾ ಬೇಜಾರು ಆತು. ಸಾಹಿತ್ಯಲ್ಲಿ ತುಂಬಾ ಕೊಡುಗೆ ಕೊಟ್ಟು ನಮ್ಮ ನಾಡಿಂಗೆ ಖ್ಯಾತಿ ತಂದು ಕೊಟ್ಟ ಪೈ ಗಳಿಂಗೆ ನಮೋ ನಮಃ. ಆನು ಕಾಸರಗೋಡು ಸರಕಾರೀ ಕಾಲೇಜಿಲ್ಲಿ ಕಲ್ತೊಂಡಿಪ್ಪಗ ಆನು ಮಾಡಿದ ಗೋವಿಂದ ಪೈಗಳ ಜಲವರ್ಣ ಚಿತ್ರಕ್ಕೆ ಫ್ರೇಮು ಹಾಕಿ ಅಲ್ಯಾಣ ಕನ್ನಡ ವಿಭಾಗದವು ಮಡಗೆಂಡದು ಎನ್ನ ಮಧುರ ನೆಂಪುಗಳಲ್ಲಿ ಒಂದು ಹೇಳ್ಲೆ ಹೆಮ್ಮೆ ಪಡ್ತಾ ಇದ್ದೆ.

 4. jayashree.neeramoole says:

  “ಕನ್ನಡಕ್ಕೆ ಪ್ರಾಸವೇನೂ ವೇದವಾಕ್ಯವಲ್ಲ,ಶಾಶ್ವತವೂ ಅಲ್ಲ.ಅದನ್ನು ಬೇಕಾದಂತೆ ಬೇಕಾದಾಗ ಬಿಟ್ಟುಬಿಡಬಹುದು.ಕಾಲಕ್ಕೆ ತಕ್ಕಂತೆ ಪ್ರಾಸವನ್ನೇ ಅಲ್ಲ,ಛಂದಸ್ಸನ್ನೂ,ವ್ಯಾಕರಣಗಳನ್ನೂ ಸಹ ತನಗೆ ಬೇಕಾದಂತೆ ಮಾರ್ಪಡಿಸಿಕೊಳ್ಳಲು ಕವಿಗೆ ಅಧಿಕಾರವಿದೆ.ಬೇಕಾದವರು ಈ ಹೊಸ ಹಾದಿಯನ್ನು ಹಿಡಿಯಲಿ,ಬೇಡಾದವರು ಹಳೆಯ ಹಾದಿಯಲ್ಲೇ ನಡೆಯಲಿ;ಮತ್ತು ಇಂದು ಒಬ್ಬನೇ ನಡೆವ ಮೇಕೆ ಹಾದಿಯೆ ಮುಂದೆ ತೇರನ್ನೆಳೆಯುವ ಹೆದ್ದಾರಿಯಾಗುತ್ತದೆ”

  ಈ ತರಲ್ಲಿ ಪ್ರತಿಯೊಂದು ವಿಷಯಲ್ಲೂ ನಾವು ಆಲೋಚನೆ ಮಾಡೆಕ್ಕು,ಸಂಶೋಧನೆ ಮಾಡೆಕ್ಕು… ಎಲ್ಲೋರಿಂಗೂ ಒಳಿತಪ್ಪಂತಹ ಎಂತಾರೂ ವಿಚಾರ ಇದ್ದರೆ ಅದರ ನಾವು ಧೈರ್ಯಲ್ಲಿ ಅಳವಡಿಸಿ ಜಗತ್ತಿಂಗೆ ತೋರುಸೆಕ್ಕು… ದಾರಿ ಮಾಡಿಗೊಂಡು ಮುಂದಂದ ಹೋಪವಂಗೆ ಯಾವತ್ತೂ ಕಷ್ಟವೇ… ಆದರೂ ಆ ಹೆದ್ದಾರಿ ಮುಂದೆ ಅದೆಷ್ಟು ಜೆನಕ್ಕೆ ಉಪಯೋಗ ಅಕ್ಕು ಹೇಳಿ ಕಲ್ಪಿಸಿ ನಾವು ಮುನ್ನಡೆಕು…

 5. ರಘು ಮುಳಿಯ says:

  ಛ೦ದಸ್ಸಿನ ನಡೆ೦ದ ಭಿನ್ನವಾಗಿ ಆದರೆ ಭಾವಪೂರ್ಣವಾಗಿ,ಅದ್ಭುತ ಅಕ್ಷರಜೋಡಣೆಗಳೊಟ್ಟಿ೦ಗೆ ಸಾಹಿತ್ಯ ಸೃಷ್ಟಿಮಾಡಿ ನವೋದಯ ಸಾಹಿತ್ಯವ ಬೆಳೆಸಿದ ಕವಿ ಗೋವಿ೦ದ ಪೈಗಳ ಪರಿಚಯ ಶುದ್ದಿ ಲಾಯ್ಕ ಆಯಿದು ಮಾವ.ಧನ್ಯವಾದ.

 6. ಡಾ. ಕೋ.ವೆಂ. ರಾಮಕೃಷ್ಣೇಗೌಡ says:

  ಲೇಖನ ತುಂಬಾ ಮಾಹಿತಿಪೂರ್ಣವಾಗಿದೆ. ಅಭಿನಂದನೆಗಳು. ಗೋವಿಂದಪೈ ಅವರು ನಿಜದ ಅರ್ಥದಲ್ಲಿ ಜಾತ್ಯತೀತರು, ಧರ್ಮಾತೀತರು, ದೇಶಾತೀತರು. ಒಂದೇ ಮಾತಿನಲ್ಲಿ ಹೇಳಬೇಕಾದರೆ ಗೋವಿಂದಪೈ ಅವರು ವಿಶ್ವಮಾನವರು. ಸಂಪರ್ಕ ಸಾಧನಗಳ ಕೊರತೆ ಇದ್ದ ಆ ಕಾಲಕಲ್ಲೇ ಅಷ್ಟು ಸಾಧನೆಗೈದ ಅವರ ಪರಿಶ್ರಮಕ್ಕೆ ಬೆಲೆಕಟ್ಟಲಾಗದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *