Oppanna.com

ಕಾಡು ಒಳುತ್ತು, ಆದರೆ ಮರಂಗೊ ಒಳುದ್ದಿಲ್ಲೆ…!

ಬರದೋರು :   ಒಪ್ಪಣ್ಣ    on   03/06/2011    44 ಒಪ್ಪಂಗೊ

ಪತ್ನಾಜೆ ಕಳುದರೂ ಜೆಂಬ್ರಂಗೊ ಮುಗುದ್ದಿಲ್ಲೆ ಇದಾ; ಅಪುರೂಪಕ್ಕೆ ಅಲ್ಲೊಂದು ಇಲ್ಲೊಂದು ಹೇಳಿಕೆಗೊ ಕಾಣ್ತು.
ಮೊನ್ನೆ ಕುಮ್ಚಿನಡ್ಕ ನಾರಾಯಣ ಭಟ್ರಲ್ಲಿ ಒರಿಶಾವಧಿ ಪೂಜೆ.

ಅವರ ಗುರ್ತ ಇದ್ದಲ್ಲದೋ ನಿಂಗೊಗೆ?
ಬೈಲಕರೆಯ ಡಾಮರು ಮಾರ್ಗಲ್ಲಿ ಇಳುದು ಬಲತ್ತಿಂಗೆ ಸುಮಾರು ಒಂದೂವರೆ ಮೈಲು ನೆಡದರೆ ಸಿಕ್ಕುತ್ತು ಎರಡು ಸಿಮೆಂಟಿನ ಕಂಬಲ್ಲಿ ನಿಲ್ಲುಸಿದ ಕಬ್ಬಿಣದ ಗೇಟು.
ಡಾನಾರಾಯಣ ಭಟ್ಟ° ಹೇಳಿ ಬರಕ್ಕೊಂಡಿದ್ದು ಗೇಟಿನ ಕರೆಲಿ ಅಂಟುಸಿದ ಕರಿಕಲ್ಲಿಲಿ. ಅವು ಬೈಲಕರೆಲಿ ಮದ್ದು ಕೊಡ್ತ ಡಾಗುಟ್ರು ಇದಾ!
ಆ ಗೇಟಿನ ತೆಗದು ಒಳ ಒಂದು ಪರ್ಲಾಂಗು ಹೋಪಲಿದ್ದು, ಮನೆ ಜಾಲು ಸಿಕ್ಕೆಕಾದರೆ. ಡಾಗುಟ್ರ ಮನೆ ಹೇಳಿ ನೋಡಿರೇ ಗೊಂತಾವುತ್ತ ನಮುನೆಯ ಟಯರೀಸು ಮನೆ.
ಮನೆಯ ಹಾಂಗೆ ಮನಸ್ಸೂ ದೊಡ್ಡವೇ.
ಅದಿರಳಿ, ಒರಿಶಾವದಿ ಪೂಜಗೆ ಒಂತಿಂಗಳು ಮದಲೇ ಹೇಳಿಕೆ ಮಾಡಿದ್ದವು, ಹೋಗದ್ರಕ್ಕೋ?
ಹಾಂಗೆ, ಮೊನ್ನೆ ಹೆರಟಿದ್ದತ್ತು ನಾವು.
~

ನೆಡಕ್ಕೊಂಡೇ ಹೋವುತ್ತ ದಾರಿ ಆದ ಕಾರಣ ವಾಹನ ವೆವಸ್ತೆ ಮಾಡೇಕು ಹೇಳಿ ಏನಿಲ್ಲೆ ಇದಾ.
ಗುಣಾಜೆಕುಂಞಿ ಆದರೆ ಒಂದೊಂದರಿ ಹೇಳುಗು – ಕಾಗತ ಕೊಟ್ರೆ ಸಾಲ, ವಾಹನ ವೆವಸ್ತೆಯೂ ಮಾಡೇಕು, ಅಲ್ಲದ್ದರೆ ಹೋವುತ್ತಬತ್ತ ಬಸ್ಸುಟಿಗೇಟಿನ ಬಾಬುತ್ತು ಕೊಡೇಕು – ಹೇಳಿಗೊಂಡು.
ಆದರೆ ಮೊನ್ನೆ ಹೋದೋರ ಪೈಕಿ ಹಾಂಗೆ ಹೇಳ್ತೋರುದೇ ಆರು ಇದ್ದವಿಲ್ಲೆ, ಹೇಳೇಕಾದ ಅಗತ್ಯವೂ ಇಲ್ಲೆ ಇದಾ..
– ಬೈಲಕರೆಲೇ ಆದ ಕಾರಣ ನೆಡಕ್ಕೊಂಡು ಹೋವುತ್ತ ದಾರಿ ಅಲ್ಲದೋ ಹೇದು..
ಅದೂ ಅಲ್ಲದ್ದೆ, ಒರಿಶಾವದಿ ಪೂಜೆ ಆದ ಕಾರಣ ಬೈಲಿನೋರು ಹೆರಡ್ತ ಹೊತ್ತುಗೊತ್ತುಗಳೂ ಒರಿಶಾವಧಿ ಒಂದೇ ನಮುನೆ ಇರ್ತು! 🙂
ಬೈಲಕರೆ ಗಣೇಶಮಾವ, ಮಾಷ್ಟ್ರುಮಾವ°, ಹತ್ಯಡ್ಕ ಬಾಲಮಾವ, ಪಳ್ಳತಡ್ಕ ದೊಡ್ಡಪ್ಪ, ಆಚಮನೆದೊಡ್ಡಪ್ಪ –  ಎಲ್ಲೊರುದೇ ಒಂದೇ ಹೊತ್ತಿಂಗೆ ಹೆರಡುವೋರು.

ಈ ಒರಿಶ ಪಾರೆ ಮಗುಮಾವನೂ ಇದ್ದಿದ್ದವು ಇದಾ ಒಟ್ಟಿಂಗೆ – ಹಾಂಗಾಗಿ ಬಚ್ಚಲು ಗೊಂತಾಯಿದಿಲ್ಲೆ.
ಅಪ್ಪಲೆ ಒಂದು ಸ್ಕೂಟರು ಇದ್ದು ಅವರ ಹತ್ರೆ.
ಆದರೆ ಹೀಂಗೆ ನೆರೆಕರೆಲಿ ಹೋಪಗ ಅದರ ಮೇಗಾಣ ಟಾರ್ಪಲು ತೆಗೆಯವು – ಹೇಳಿ ಸುಬಗಣ್ಣ ಹೇಳುಗು!
ನಾಕು ಜೆನ ಒಟ್ಟಿಂಗೆ ಸಿಕ್ಕುತ್ತನ್ನೇ ಹೇಳಿಗೊಂಡು ಸ್ಕೂಟರಿಲಿ ಹೋಗದ್ದೆ ಇಪ್ಪದವು. ಆದರೂ – ಬಿಂಗಿಪುಟ್ಟ ಒಂದೊಂದರಿ ಅವರ ನೆಗೆಮಾಡ್ಳಿದ್ದು – “ಈಗಾಣ ಪೆಟ್ರೋಲುಕ್ರಯಲ್ಲಿ ಮಗುಮಾವ ಸ್ಕೂಟರು ಸಿಕ್ಕಲ್ಲಿ ಕಟ್ಟಿ ನೇಲುಸಿದ್ದವು” ಅವ್ವೆಂತೂ ಮಾತಾಡವು! 😉
ಮಗುಮಾವಂಗೆ ತಮಾಶೆ ರಜ ಜಾಸ್ತಿ.
~
ಮೊನ್ನೆಯೂ ಹಾಂಗೇ ಆತು. ಅವರ ಹತ್ತರೆ ಮಾತಾಡಿಗೊಂಡು ಹೋಪಗ ಒಳುದೋರಿಂಗೂ ದಾರಿ ಬಚ್ಚಲು ಗೊಂತಾಯಿದಿಲ್ಲೆ.
ಒಂದು ವಿಷಯ ಎತ್ತಿಕೊಟ್ರೆ ಅದಕ್ಕೆ ಗೊಂತಿಪ್ಪ ಸುಮಾರು ಸಂಗತಿಗಳ ಹೇಳಿ, ಮತ್ತಾಣ ವಿಶಯ ಎತ್ತಿಕೊಡುಗು.
ಪ್ರತಿ ವಿಷಯ ಹೇಳುವಗಳೂ ಅವರದ್ದೇ ಆದ ರೀತಿಯ ತಮಾಶೆಗೊ ಬಕ್ಕು, ಹಾಂಗಾಗಿ ಆಸಗ್ತಿ ಒಳಿಗು.
ಹಳೆತಲಗೊ – ಆಚಮನೆದೊಡ್ಡಪ್ಪ, ಕಂಡಿಗೆದೊಡ್ಡಪ್ಪ ಎಲ್ಲ ಇದ್ದವನ್ನೇ, ಮುಂದುವರುಸುಲೆ?!

ಪ್ರತಿಸರ್ತಿ ಇವೆಲ್ಲ ಸೇರಿಯಪ್ಪಗ ಬಂದಹಾಂಗೆ ಈ ಸರ್ತಿಯೂ ಹಲವಾರು ಶುದ್ದಿಗೊ ಬಯಿಂದು.
ಈ ಸರ್ತಿ ಇದರೆಡಕ್ಕಿಲಿ ನಮ್ಮ ಊರಿಲಿ ನೆಡೆತ್ತ ಒಂದು ಶುದ್ದಿಯ ಮಾತಾಡಿಗೊಂಡು ಹೋದ್ದದು! ಅದೆಂತರ…?
~

ಕುಮ್ಚಿನಡ್ಕಕ್ಕೆ ಎತ್ತುವ ಮದಲು ಎರಡು ಮೈಲು ನೆಡವಲೆ ಇದ್ದು ಹೇಳಿದೆ ಅಲ್ದೋ – ಸದ್ಯ ಆ ಎರಡುಮೈಲುದೇ ಮಾರ್ಗ ಆಯಿದು.
ಈಗ ಇಷ್ಟು ಧೈರ್ಯಲ್ಲಿ ಹೇಳ್ತ ಒಪ್ಪಣ್ಣ, ಆದರೆ ಒರಿಶಾನುಗಟ್ಳೆ ಮದಲಿಂಗೆ ಅಲ್ಲಾಗಿ ನೆಡಕ್ಕೊಂಡು ಹೋಪದು ಹೇಳಿರೆ ಹೆದರಿಕೆಯ ಜೆಂಬಾರ!
ಮಾರ್ಗಕ್ಕೆ ಆಚೊರಿಶ ಕರಿಡಾಮರು ಹಾಕಿರೂ, ಅದರಿಂದ ಮದಲಿಂಗೆ ಅಲ್ಲಿ ಮಣ್ಣಿನ ಮಾರ್ಗವೇ ಗೆತಿ.
ಹೊತ್ತೋಪಗ ಕಳುದರೆ ಆರಿಂಗೂ ಹೋತಿಕ್ಕಲೆಡಿಯ, ಅಷ್ಟು ಕಾರ್ಗಾಣ ಕತ್ತಲೆ!  – ಮಾರ್ಗದ ಎರಡೂ ಹೊಡೆಲಿ ಆ ನಮುನೆ ಕಾಡು!
ಅದೇ ಕಾಡು ಮತ್ತೆ ಮುಂದೆ ಬೆಳದು ಅರ್ತಿಯಡ್ಕ ಆಗಿಂಡು, ಬೈಲಮೂಲೆ ಕಳುದು ಸುಬ್ರಮಣ್ಯ ಒರೆಂಗೆ ಎತ್ತುತ್ತಡ, ಮಾಷ್ಟ್ರುಮಾವ ಹೇಳಿತ್ತಿದ್ದವು.
– ಹಾಂಗಾಗಿ, ಇದೊಂದು ಸುಬ್ರಮಣ್ಯದ ಕಾಡಿನ ತುಂಡೇ ಇದಾ!
ಸುಬ್ರಮಣ್ಯದ ಕಾಡಿಲಿ ಕಾಟಿ ಇಪ್ಪದು ವಿಶೇಷ ಅಲ್ಲ, ಇಲ್ಲಿಯೂ ಇದ್ದತ್ತು.
ಪಂಜಿ, ಎಲಿಪ್ಪಂಜಿಯ ನಮುನೆ ನಾನಾ ಜೀವಿಗೊ ಇದ್ದಿದ್ದವು; ಮದಲಿಂಗೆ ಹುಲಿ-ಜಿಂಕೆಯೂ ಇದ್ದತ್ತು ಹೇಳ್ತದು ಪ್ರತೀತಿ.
ಉಮ್ಮಪ್ಪ, ನವಗರಡಿಯ, ಕಂಡನೆಂಪಿಲ್ಲೆ! 😉

ಒಟ್ಟಿಲಿ, ಮದಲಿಂಗೆ ಆ ಎರಡುಮೈಲು ನೆಡದು ಕುಮ್ಚಿನಡ್ಕಕ್ಕೆ ಎತ್ತಿರೆ ಅವ ಗಟ್ಟಿಗನೇ ಸರಿ.
ಒಂದೊಂದರಿ ಕಾಂಬಲಿದ್ದು, ಈ ಕುಮ್ಚಿನಡ್ಕ ಮನೆಯೋರು ಯೇವನಮುನೆಲಿ ಬದ್ಕುತ್ತವೋ – ಹೇಳಿಗೊಂಡು.
ಅವಕ್ಕೆ ಅದೆಲ್ಲ ಹೆದರಿಕೆಯೇ ಇಲ್ಲೆ, ಅದೇ ನಿತ್ಯಜೀವನ ಆದ ಕಾರಣ.
~

ಆ ಕಾಡುದೇ ಹಾಂಗೆ – ನೂರಾರು ವೈವಿಧ್ಯದ ಮರಂಗಳ ಆಶ್ರಯತಾಣ ಆಗಿತ್ತು. ನಮ್ಮ ಬೈಲಿಲಿ ಕಾಣ್ತ ಎಲ್ಲ ಜಾತಿಯ ಗೆಡುಮರಬಳ್ಳಿಗಳುದೇ ಆ ಕಾಡಿಲಿ ಧಾರಾಳ ಇದ್ದತ್ತು.
ಮೊನ್ನೆ ನೆಡಕ್ಕೊಂಡು ಹೋಪಗ ಎಲ್ಲೋರುದೇ ಒಂದೊಂದು ಜಾತಿ ಮರವ ನೆಂಪುಮಾಡಿದವು.

ಬೈಲಕರೆಯ ಕಾಡಿನ ಒಂದು ಹೊಡೆ - ನೂರಾರು ನಮುನೆ ಮರಬಳ್ಳಿಗೊ ಇದ್ದು.
  1. ಅಶ್ವತ್ಥದ ಮರ ಗಾಂಭೀರ್ಯಲ್ಲಿ ನಿಂದಿದ್ದ ಕಾರಣ ಎಲೆ, ಸಮಿತ್ತು, ಕೆತ್ತೆ ಬೇಕಾದ ಬಾವಯ್ಯಂದ್ರು ಒಂದರಿ ಕತ್ತಿ ಹಿಡ್ಕೊಂಡು ಧೈರ್ಯಲ್ಲಿ ಕಾಡೊಳ ಹೋದರಾತು, ಅಷ್ಟೆ.
  2. ಎಂತಾರು ಹೋಮ ಮಾಡ್ತರೆ ಬಟ್ಟಮಾವ ಅತ್ತಿಸಮಿತ್ತು ತಪ್ಪಲೆ ಹೇಳವೋ – ಆ ಅತ್ತಿ ಮರವುದೇ ಅಲ್ಲಲ್ಲಿ ಇತ್ತು.
  3. ಗೋಳಿಮರದಡಿಯಲ್ಲಿ ಸಂತೆ ಹೇಳಿ ಮೂಗುಮುಚ್ಚಿ ಹೇಳುದು ಮಕ್ಕಳ ಒಂದು ಆಟ.
    ಒಪ್ಪಣ್ಣಂಗೆ ಆ ಆಟ ಆಡುವಗ ಈ ಕಾಡಿಲಿ ಕಂಡ ಗೋಳಿಮರವೇ ನೆಂಪಕ್ಕು. ಅದರ ಬಳ್ಳಿಲಿ ಆಡದ್ದ ಬೈಲಿನ ಮಕ್ಕೊ ಆರಿಕ್ಕು!
  4. ಬೈಲಿಲಿ ಅಪುರೂಪ ಹೇಳುಸಿದ ಪಾಲಾಶವೂ ಇದ್ದತ್ತು.
    ಎಷ್ಟು ಮನೆಗೆ ಉಪ್ನಾನದ ಮಾಣಿಗೆ ದಂಟು ಈ ಕಾಡಿಂದ ಕೊಂಡೋಯಿದವೋ ಏನೊ! ಕಡ್ತಲೆ ನಮುನೆಯ ಅದರ ಹೂಗಿಲಿ ಆಡುದು ಮಕ್ಕೊಗೆ ಗವುಜಿ.
  5. ಕಾಡನೆಡುಕೆ ಹಲಸಿನ ಮರ ಇದ್ದತ್ತಿದಾ, ಹಾಂಗಾಗಿ ಮಂಗಂಗಳೋ, ಕರಡಿಗಳೋ ಹಶುಅಪ್ಪಗ, ಬೇಕಪ್ಪಗ ಹಣ್ಣು ತಿಂದುಗೊಂಗು ಸಂತೋಷಲ್ಲಿ.
    ಒಳ್ಳೆ ತಿರುಳು ಬಂದ ಮರ ಆದರೆ ಆಚಾರಿಗೆ ಕೊಶೀ ಅಕ್ಕು. ಗಿಳಿಕೊಕ್ಕಿಂದ ಹಿಡುದು ದೇವರಗೂಡಿನ ಒರೆಂಗೆ ಎಲ್ಲಾ ನಮುನೆದಕ್ಕೆ ಪ್ರಶಸ್ತ – ಹಲಸು.
  6. ಕಾಟುಮಾವಿನ ಮರ ಅಂತೂ ಈಗ ಕಾಂಬಲೇ ಇಲ್ಲೆ; ಆದರೆ ಈ ಕಾಡಿಲಿ ಧಾರಾಳ ಇದ್ದತ್ತು. ಈಗೀಗ ಒರಿಶ ಬಿಟ್ಟು ಒರಿಶ ಅಪ್ಪದಾದರೂ ಈ ಕಾಡಿಲಿ ಪ್ರತಿ ಒರಿಶವೂ ಒಂದಲ್ಲ ಒಂದು ಮರಲ್ಲಿ ಸಿಕ್ಕುಗು.
  7. ಸಾಗುವಾನಿ ಮರಂಗೊ ಅಂತೂ ಸರ್ತ – ನೂಲು ಹಿಡುದ ಹಾಂಗಿಕ್ಕು.
    ಮರಮುಟ್ಟಿಂಗೆ (ಪೀಠೋಪಕರಣಕ್ಕೆ) ಅದು ಹೇಳಿಮಾಡುಸಿದ ನಮುನೆದು!
  8. ರೀಪು ಪಕ್ಕಾಸಿಂಗೆ, ಅಡ್ಡ ಉತ್ತರಕ್ಕೆ, ಅಕ್ಕಾದ ಗಟ್ಟಿಯ ಚಿರ್ಪಿನ ಮರ (ಉರಿಪ್ಪು / ಕಿರಾಲುಬೋಗಿ) ಇಲ್ಲಿ ಧಾರಾಳ ಇಕ್ಕು.
    ಕಾಡಿನ ಆಚ ಹೊಡೆಲಿ ಇರ್ತ ತೋಡಿಲಿ ತೆಳೂ ಬಿತ್ತು ಬಂದು ಹುಟ್ಟುದಡ.
  9. ಹಟ್ಟಿಗೆ, ತೋಟಕ್ಕೆ ಸೊಪ್ಪಿಂಗಕ್ಕಾದ ಮರುವದ ಮರವೂ ಇದ್ದದರಿಂದ, ಮಳೆಗಾಲ ಸೊಪ್ಪಿಂಗೆ ಇಲ್ಲಿಗೇ ಬಕ್ಕು, ಬೈಲಕರೆಯೋರು.
  10. ಮರುವದ ಹಾಂಗೇ ಇನ್ನೊಂದು ಕೊಯಮರುವ ಹೇಳಿ ಇದ್ದು. ಮಳೆಗಾಲದ ಸೊಪ್ಪಿಂಗೆ ಇದುದೇ ಪಷ್ಟಾವುತ್ತಿದಾ!
  11. ಅಲ್ಲಲ್ಲಿ ನೆಲ್ಲಿಕಾಯಿ ಇರದೋ?
    ಅಪ್ಪ ಕಾಲಲ್ಲಿ ಶಾಲಗೆ ಹೋವುತ್ತ ಮಕ್ಕೊ ರಾಶಿರಾಶಿ ಕೊಯಿದು ಮುಗುಶುಗು. ಬೈಲಿನ ಅತ್ತೆಕ್ಕೊ ಉಪ್ಪಿನಕಾಯಿ ಹಾಕಲೆ ಗ್ರೇಶುವಗ ಮರ ಕಾಲಿ ಆಗಿಕ್ಕಿದಾ!
  12. ಪೆರಿಯ ಜೇನು ನಿಂದೊಂಡಿದ್ದ ಎತ್ತರದ ಶಾಂತಿಮರ ಇತ್ತಿಲ್ಲೆಯೋ, ಓ ಅಲ್ಲಿ, ಮಾರ್ಗದಕರೇಲಿ!
    ಬೇಸಗೆಲಿ ಒಂದೊಂದೇ ಕಾಯಿ ಹೆರ್ಕಿ, ಕಲ್ಲಿಲಿ ಕುಟ್ಟಿ, ಕೈಕ್ಕೆ ಶಾಂತಿಕಾಯಿ ಒಡದು ಚೀಪೆ ಶಾಂತಿಬೊಂಡು ತಿಂಬದು ಯೇವ ಮಕ್ಕೊಗೆ ಮರದಿಕ್ಕು?
    ಅಷ್ಟು ರುಚಿದರ ನಾಕು ತಿಂದಪ್ಪಗಳೇ ಹೆರಿಯೋರು ಬೈಗು – ಪಿತ್ತ ಅದು, ಹಾಂಗೆ ತಿನ್ನೆಡ, ತಲೆತಿರುಗ್ಗು! ಹೇಳಿಗೊಂಡು.  ಎಷ್ಟು ತಿಂದರೂ ಒಪ್ಪಣ್ಣಂಗೆ ತಲೆತಿರುಗಿದ್ದೋ – ಉಮ್ಮ, ನೆಂಪಿಲ್ಲೆ!! 😉
  13. ಈ ಶಾಂತಿಕಾಯಿಯ ಅಣ್ಣ ಇನ್ನೊಂದಿದ್ದು, ಅಣಿಲೆಕಾಯಿ.
    ಹ್ಮ್, ಕಾಂಬಲೆ ಶಾಂತಿಮರದ ಹಾಂಗೇ ಇದ್ದರೂ ಕಾಯಿ ರಜ ದೊಡ್ಡ.
    ಶಾಂತಿ, ಅಣಿಲೆ, ನೆಲ್ಲಿ – ಮೂರುದೇ ಮದ್ದಿಂಗೆ ಬೇಕಪ್ಪ ಕಾಯಿಗೊ.   ಮೂರರ ಚೋಲಿಯನ್ನುದೇ ಹೊಡಿಮಾಡಿರೆ ’ತ್ರಿಫಲಾ ಚೂರ್ಣ’ ಅಕ್ಕಿದಾ!
    ಮಕ್ಕೊ ಸಣ್ಣ ಇಪ್ಪಗ ಈ ತ್ರಿಫಲದ ಹೆಸರಿನ ಓಂತಿ, ಅರಣೆ, ಹಲ್ಲಿ – ಹೇಳುವಗ ಅಣಿಲೆ ಡಾಗುಟ್ರಿಂಗೆ ಕೋಪ ಬಂದುಗೊಂಡಿತ್ತದಿದಾ..!
  14. ಉಶಾರಿಯೋನ ಕ್ಲಾಸಿಲಿ ದಡ್ಡ ಇದ್ದ ನಮುನೆಲಿ, ಆಲದ ಮರ ಇದ್ದ ಕಾಡಿಲಿ ದಡ್ಡಾಲವೂ ಇತ್ತು. ದೊಡ್ಡದೊಡ್ಡ ಎಲೆಗೊ ಇಪ್ಪ ಈ ಮರಂಗೊ ಅಡಕ್ಕೆ ತೆಂಗಿಂಗೆ ಸೊಪ್ಪಿಂಗೆ ಪಷ್ಟಕ್ಕು.
  15. ಅದೇ ಕ್ಲಾಸಿಲಿ ಇನ್ನೆರಡು – ಸಣ್ಣಗೋಳಿ (ಕಿನ್ನಿಗೋಳಿ) ಹೇಳಿಯೂ ಬಜಗೋಳಿ ಹೇಳಿಯೂ ಮರಂಗೊ ಇದ್ದತ್ತು. ಪ್ರಬೇಧಂಗೊ ಬೇರೆಬೇರೆ ಆದರೂ, ಜಾತಿ ಒಂದೇ!
  16. ಬಸರುಗೋಳಿ – ಹೇಳಿ ಒಂದಿದ್ದಡ. ಗೋಳಿಯ ನಮುನೆಯೋ ಏನೋ ಇದರ ಮರವುದೇ. ಆದರೆ ಇದರ ಎಲೆ ತಿಂದರೆ ಚನೆ (ಗಬ್ಬ) ಇಪ್ಪ ದನಗೊ ತಿಂಬಲಾಗಡ, ತಿಂದರೆ ಕಂಜಿಯ ಪ್ರಾಣಕ್ಕೆ ಅಪಾಯ ಇದ್ದು -ಹೇಳ್ತದು ಅಂದೇ ಮಾತಾಡಿಗೊಂಡಿತ್ತಿದ್ದವು.
  17. ಅಪುರೂಪಲ್ಲಿ ಅಲ್ಲೊಂದು ಇಲ್ಲೊಂದು ಗಂಧದ ಸೆಸಿ ಇತ್ತಿದಾ! ಬಟ್ಟಮಾವಂಗೆ ಪೂಜಗೆ ಕೂಪಮದಲು ತಳವಲೆ ಇದೇ ಆಗೆಡದೋ?
    ಹೇಳಿದಾಂಗೆ, ಅಲ್ಲಲ್ಲಿ ಕೃಷ್ಣ ಚಂದನವುದೇ ಇತ್ತಡ. ಎರಡನ್ನೂ ಬಂಡಾಡಿಅಜ್ಜಿಗೆ ಕೊಟ್ರೆ ’ಮದ್ದಿಂಗೆ ಬೇಕು’ ಹೇಳಿ ತೆಗದು ಮಡಗ್ಗಿದಾ!
  18. ಕದಿರಾರಿಷ್ಟ ಹೇಳಿ ಗೊಂತಿದ್ದಲ್ಲದೋ – ರಕ್ತಶುದ್ಧಿಗೆ ಚೌಕ್ಕಾರುಮಾವ ಹೇಳುಗು – ಆ ಕದಿರೆ (ಕಾಚಿ) ಮರ ಇಕ್ಕು ಅಲ್ಲಲ್ಲಿ.
  19. ಕದಿರೆ ಇದ್ದಹಾಂಗೇ ಶಮಿಯೂ ಇದ್ದತ್ತು. ಕಾಂಬಲೆ ಕದಿರೆಯ ಹಾಂಗೇ – ಸಪುರ ನಮುನೆ ಎಲೆ ಇದ್ದರೂ – ಮುಳ್ಳಿಲ್ಲೆ.
    ವೈದ್ಯಕ್ಕೂ ಬೇಕು, ಬಟ್ಟಮಾವಂಗೂ ಬೇಕು- ಎರಡುದೇ.
  20. ಹಲಸು ಇದ್ದ ಹಾಂಗೇ ಇನ್ನೊಂದು ಹೆಬ್ಬಲಸು ಇದ್ದಿದಾ. ಹಿರಿದು ಹಲಸು ಹೆಬ್ಬಲಸು – ಹೇಳಿ ಕನ್ನಡ ಎಮ್ಮೆಕಟ್ಟಿದ ಶ್ರೀಧರಪ್ಪಚ್ಚಿ ಹೇಳುಗು, ಆದರೆ ಈ ಹಲಸಿನ ಕಾಯಿ ಹಿರಿದಲ್ಲ, ಆದರೆ ಮರವೇ ಹಿರಿದು.
    ಅಪ್ಪು, ಹಲಸಿನ ಮರಂದ ದೊಡ್ಡದಾಗಿ ಬೆಳೆತ್ತು ಹೆಬ್ಬಲಸಿನ ಮರ. ಹಲಸಿನ ಹಾಂಗೇ ಮರಮಟ್ಟಿಂಗೆ ಉಪಯೋಗಕ್ಕಾವುತ್ತಡ ಇದು.
  21. ಮರಂಗಳ ಬಗ್ಗೆ ಆಶೆ, ಆಸಗ್ತಿ ಇದ್ದೋರಿಂಗೆ ಕಪ್ಪು ಬಣ್ಣದ ಬೀಟಿಯ ಗುರ್ತ ಇಲ್ಲದ್ದೆ ಇಕ್ಕೋ? ಸಾರಡಿ ಅಪ್ಪಚ್ಚಿಯ ಹೊಸಜಾಗೆಲಿ ಪತ್ತಕ್ಕೆ ಸಿಕ್ಕದ್ದ ಬೀಟಿಮರಂಗೊ ಇದ್ದಾಡ, ಮೊನ್ನೆ ಆಶೆಬರುಸಿತ್ತಿದ್ದವು.
    ಕುರ್ಶಿಯೋ ಷ್ಟೂಲೋ ಮತ್ತೊ ಮಾಡಿರೆ ಮೂರ್ನಾಕು ತಲೆಮಾರು ಒಳಿಗು, ಕಲ್ಲಿನ ತುಂಡಿನ ಹಾಂಗೆ!
    ಆದರೆ ಇದು ’ಅಸುರ ಅಂಶ’ ಇಪ್ಪ ಮರ ಆದ ಕಾರಣಕ್ಕೆ, ದೇವಕಾರ್ಯಕ್ಕೆ ಉಪಯೋಗ ಮಾಡವು. ಮನೆಲಿಯೂ ಹಾಂಗೆ, ಅಡ್ಡ-ಪಕ್ಕಾಸು ಎಲ್ಲ ಮಾಡಿ ಎತ್ತರಲ್ಲಿ ಮಡುಗವು.
  22. ಚಿರುವೆ ಹೇಳಿ ಇನ್ನೊಂದು ಮರ ಇದ್ದು. ಕಾಂಬಲೆ ಬೀಟಿಯ ಹಾಂಗೇ ಕಾಣ್ತು. ಆದರೆ ಬೀಟಿಯಷ್ಟು ಗಟ್ಟಿ ಇಲ್ಲೆ!
  23. ಪುಳಿಬಾಜಿ ಹೇಳಿ ಅರಡಿಗೋ? ಸಣ್ಣ ಸಣ್ಣ ಎಲೆಗೊ, ದೊಡ್ಡ ಮರ. ಇದರ ಪಕ್ಕಾಸು ಎಲ್ಲ ಹಾಕಿರೆ ಒರಿಶಾನುಗಟ್ಳಗೆ ಎಂತದೂ ಆಗ.
  24. ಬಾಗೆಮರ ಹೇಳಿ ಇನ್ನೊಂದಿದ್ದು, ಅದುದೇ ಹಾಂಗೆ – ಮರಮಟ್ಟಿಂಗೆ ಹೇಳಿಮಾಡುಸಿದ ನಮುನೆದು.
  25. ಅಣವು ಹೇಳಿರೆ ಮತ್ತೊಂದು ನಮ್ಮ ಊರಿನ ಜವ್ವನಿಗ! ಒಳ್ಳೆ ಬೆಳಾದ ಮರ ಸಿಕ್ಕಿರೆ ಆಚಾರಿಗೆ ಕೊಶಿಯೋ ಕೊಶಿ.
  26. ಅಣವುದೇ ಬಣ್ಪುದೇ ಭೀಮ-ದುರ್ಯೋಧನ ಇದ್ದ ಹಾಂಗೆ ಹೇಳುಗು ವಿಟಲಾಚಾರಿ. ಅಪ್ಪು, ಮರಮಟ್ಟಿಂಗೆ ಬಣ್ಪುದೇ ಉಶಾರಿಯೇ.
  27. ಬೇಂಗದ ಮರ ರಜ ಮೂಡ್ಳಾಗಿ ಜಾಸ್ತಿ. ಮರಮಟ್ಟಿಂಗೆ ಗವುಜಿ ಆವುತ್ತಡ. ಮುಳ್ಳೇರಿಯ ಹೊಡೆಲಿ ಬೇಂಗತ್ತಡ್ಕ ಹೇಳಿ ಇದ್ದಾಡ, ಚುಬ್ಬಣ್ಣ ಹೇಳಿತ್ತಿದ್ದ. ಮದಲಿಂಗೆ ಅಲ್ಲಿ ಬೇಂಗದ ಮರ ಇದ್ದತ್ತೋ ಏನೋ.
  28. ಮೈರೊಳು ಹೇಳ್ತ ಜಾತಿಯ ಮರವುದೇ ಪೀಠೋಪಕರಣಕ್ಕೆ ಭಾರೀ ಒಳ್ಳೆದಡ. ದೇವಸ್ಥಾನ, ಭೂತಸ್ಥಾನಂಗಳಲ್ಲಿ ಮೈರೋಳಿಂಗೇ ಹೆಚ್ಚಿನ ಪ್ರಾಶಸ್ತ್ಯ ಅಡ!
  29. ಮಾಗುವಾನಿ ಹೆಸರು ಕೇಳಿರೆ ಸಾಗುವಾನಿಯ ದಶರಾತ್ರಿ ಕುಟುಂಬ ಹೇಳಿ ಗ್ರೇಶೇಕು. ಆದರೆ ಅಲ್ಲ, ಇದು ಬೇರೆಯೇ. ಆದರೂ ಮರಮಟ್ಟಿಂಗೆ ಒಳ್ಳೆದಾವುತ್ತಾಡ.
  30. ಹೊನ್ನೆ ಮರ ಗುರ್ತ ಇಪ್ಪಲೂ ಸಾಕು. ಜಾಸ್ತಿ ದೊಡ್ಡ ಆಗ – ನೆರಳಿಂಗಕ್ಕಷ್ಟೆ. ಹೊನ್ನೆಕಾಯಿ ಅರಡಿಗಲ್ಲದೋ? ಹೊನ್ನೆಣ್ಣೆ (/ ಹೊಂಗೆ ಎಣ್ಣೆ) ಹೇಳಿರೆ ಈಗಾಣ ಕಾಲಲ್ಲಿ ಡೀಸಿಲಿನ ಬದಲಿಂಗೆ ಉಪಯೋಗುಸಲಕ್ಕು ಹೇಳ್ತದರ ವಿಜ್ಞಾನಿಗೊ ಕಂಡುಹಿಡುದ್ದವಡ. ನಮ್ಮ ಅಜ್ಜಂದ್ರು ಅಂದೇ ಹೇಳಿಗೊಂಡಿತ್ತಿದ್ದವು.
  31. ಬೊಳ್ಪಾಲೆ ಹೇಳಿತ್ತುಕಂಡ್ರೆ ದೊಡ್ಡದೊಡ್ಡ ಎಲೆಗಳ ಮರ. ಈ ಮರದ ಅಡಿಲಿ ಬಜಕ್ಕರೆ ಮಾಡ್ಳೆ ಹೇಳಿರೆ ಸುಂದರಿಗೆ ಕೊಶೀ ಅಕ್ಕು – ಒಂದೇ ಸರ್ತಿಲಿ ಒಂದು ಬಜಕ್ಕರೆತೊಟ್ಟೆ ತುಂಬುಗಿದಾ!
  32. ಚೇರೆ ಮರದ ಗುರ್ತ ಹೇಳೇಕು ಹೇಳಿ ಇಲ್ಲೆ ಅಲ್ಲದೋ? ಮಂಗಂಗೊ ಇದರ ಮೇಣ ನಕ್ಕುಗಿದಾ! ಅದರ ಹಣ್ಣನ್ನೂ ತಿಂಗು. ಮಕ್ಕೊ ಇದರ ಮುಟ್ಟಿರೆ ಮತ್ತೆ ಹುಣ್ಣೇ ಅಕ್ಕಷ್ಟೆ.
    ಇದರ ಬುಡಲ್ಲಿ ಬತ್ತ ಬೀಣೆಲೇ ಅರ್ತ್ಯಡ್ಕಪ್ಪಚ್ಚಿ ಎಶಿಮುಚ್ಚಲು ಮಾಡ್ತದು. ಇದರ ಮರ ಮೆತ್ತಂಗೆ ಆದ ಕಾರಣ ಆಚಾರಿಗೆ ಕೊಶಿ ಆಗ.
  33. ಹಾಲೆ ಮರ ಅರಡಿಗಲ್ಲದೋ? ಒಂದು ಗೆಂಟಿಲಿ ನಾಕು ಎಗೆ ಹೋಗಿ ಸರೂತಕ್ಕೆ ಇಪ್ಪ ಮರ –  ಅದಾ, ಆಳುಗೊ ಬಲೀಂದ್ರ ನೆಡುದು ಇದರ್ಲೇ ಇದಾ! ಕಾಂಬಲೆ ಚೇರೆಯ ಜಾತಿಯ ಹಾಂಗೇ ಕಾಣ್ತು.
    ಇದರ ಕೆತ್ತೆಯ ಹಸೀ ಎಸರು – ಹಾಲೆಹಾಲು- ತೆಗದು ಆಟಿಲಿ ಒಂದು ದಿನ ಕುಡಿಗಡ ಮದಲಿಂಗೆ, ಬಟ್ಯಂಗೆ ನೆಂಪಿದ್ದು!
  34. ಬದನೆಯೊಟ್ಟಿಂಗೆ ಕೊದಿಲು ಮಾಡ್ಳೆ ನುಗ್ಗೆ ಬೇಡದೋ – ಆ ನುಗ್ಗೆಮರ ಮದಲಿಂಗೆ ಕಾಡಿಲಿ ಆವುತ್ತ ನಮುನೆದು ಇದಾ!
  35. ಉಪ್ಪಳಿಗೆಯ ದೊಡ್ಡದೊಡ್ಡ ಎಲೆಲೇ ಗುರ್ತ ಹಿಡಿವಲಕ್ಕು. ಬೆದುರಿನ ನಮುನೆಯ ನೆಡೂಕೆ ಗೋಂದು ಇರ್ತ ಓಟೆ. ಹಸಿ ಇಪ್ಪಗ ಹಳ್ಳಿಮಕ್ಕೊಗೆ ಕ್ರಿಗೇಟಿಂಗೆ ವಿಕೇಟು ಅಕ್ಕು, ಒಣಗಿದ ಮತ್ತೆ ಪಾತಿಅತ್ತೆಯ ಒಲಗೆ ಸವುದಿ ಅಕ್ಕು. ಬೇರೆಂತಕೂ ಆಗ.
  36. ಹಾಸಿಗೆಹತ್ತಿ ಆವುತ್ತಿದಾ – ಸಂಸ್ಕೃತಲ್ಲಿ ಬೂರುಗದ ಮರ ಹೇಳ್ತವು, ನಮ್ಮದರ್ಲಿ – ಲಾವದ ಮರ ಹೇಳುದು. ಅಪ್ಪಲೆ ಹತ್ತಿಯ ಹಾಂಗೇ ಮೆಸ್ತಂಗೆ. ಕ್ರಿಕೇಟು ಆಟಕ್ಕೆ ಬೇಟುಮಾಡ್ಳೆ ಎಡಿಗಷ್ಟೆ.
    ಈಗ ಕೋಂಗ್ರೇಟುಮಾಡ್ತ ದ್ವಾರಕದಣ್ಣ ಸಿಮೆಂಟು ಎರವ ಮದಲು ಮರದ ಪೆಟ್ಟಿಗೆಮಾಡ್ಳೆ ಉಪಯೋಗಮಾಡ್ತನಡ.
  37. ಧೂಪದ ಮರ ಗೊಂತಿದ್ದಲ್ಲದೋ? ಇದರ್ಲಿಯೂ ಒಂದು ನಮುನೆ ಮೇಣ ಬತ್ತು. ಬಟ್ಟಮಾವ – ವನಸ್ಪತಿರಸೋತ್ಪನ್ನೋ – ಹೇಳಿಗೊಂಡು ಮದಲಿಂಗೆ ಆ ಮೇಣವನ್ನೇ ಪರಿಮ್ಮಳದ ’ಧೂಪ’ ಆಗಿಂಡು ಉಪಯೋಗುಸಿಗೊಂಡಿದ್ದದಾಡ.
  38. ಹಳೇ ಮನೆಗಳಲ್ಲಿ ಚೆನ್ನೆಮಣೆ ಆಡುಗಲ್ಲದೋ? ಆ ಕೆಂಪುಕೆಂಪು ಮಾತ್ರೆ ನಮುನೆ ಕಾಯಿ ಸಿಕ್ಕುತ್ತದು ಚೆನ್ನೆಮರಲ್ಲಿ. ಸಣ್ಣಸಣ್ಣ ಎಲೆಯ ಸಣ್ಣ ಮರ.
  39. ಚೆನ್ನೆಮರ ಹೇಳಿರೆ ಒಪ್ಪಣ್ಣಂಗೆ ಕೂಡ್ಳೇ ಹೊಂಗಾರೆ ನೆಂಪಕ್ಕು. ಎರಡೂ ಒಂದೇ ಕಾಲಲ್ಲಿ ಆಡಿಗೊಂಡಿದ್ದದಿದಾ!
    ದಪ್ಪ ಓಡಿನ ದೊಡ್ಡ ಕೆಂಪು ಬಿತ್ತು. ಸಿಮೆಂಟಿನ ನೆಲಕ್ಕೆ ರಪರಪನೆ ತಿಕ್ಕಿ, ಆಗದ್ದೋರ ಬೆನ್ನಿಂಗೆ ಬೆಶಿಕಾಸಿದ್ದು ನೆಂಪಾತಾ? ಹೊಂಗಾರೆ ಮರ ಸಣ್ಣ ಜಾತಿದು, ಗಟ್ಟಿಗಾಗ!
  40. ಪೂರ್ಲಿ (ಪೂರುಲಿ) ಜಾತಿಯ ಗಟ್ಟಿ ಮರ ಒಂದಿದ್ದಾಡ, ಒಪ್ಪಣ್ಣಂಗೆ ಕಂಡರಡಿಯ!
  41. ಎರ್ಬೆ ಸೆಸಿ ಗೊಂತಿಲ್ಲೆಯೋ? ಅದಾ, ಪಾತಿಅತ್ತೆ ತಲಗೆ ಮೀವಗ ಗೊಂಪು ಮಾಡುಗು ಒಂದು ಎಲೆಂದ! ಅಜ್ಯಕ್ಕಳ ತಲೆಕಸವು ಗಟ್ಟಿನಿಂಬಲೆ ಕಾರಣವೇ ಈ ಗೊಂಪಿನ ಎಲೆಯ ಗೊಂಪು.
  42. ಬೆಳ್ಳಂಟೆ ಹೇಳಿ ಇನ್ನೊಂದಿದ್ದು. ಇದುದೇ ಗೊಂಪೇ, ತಲಗೆ ಹಾಕುಗು. ಇದರ ಸೊಪ್ಪಿನ ದನಗಳೂ ತಿಂತವಾಡ.
  43. ಮುಜದ ಸೊಪ್ಪು ಹೇಳಿ ಇನ್ನೊಂದು ಪರಿಮ್ಮಳದ್ದಿದ್ದಡ, ಮಾಷ್ಟ್ರಮನೆ ಅತ್ತೆ ಹೇಳಿದವು. ಪರಿಮ್ಮಳದ ಗೊಂಪು ತಲಗೆ ಹಾಕಿರೆ ಯೇವ ಶೇಂಪುದೇ ಬೇಡ- ಹೇಳಿ ಅವರ ಅಭಿಪ್ರಾಯ.
  44. ರೆಂಜೆಮರಲ್ಲಿ ಆವುತ್ತ ರೆಂಜೆಹೂಗಿನ ಗ್ರೇಶಿರೆ ಅರೆವಾಶಿ ಹೆಮ್ಮಕ್ಕೊಗೆ ಕೊಶಿ ಅಕ್ಕು, ಇನ್ನರೆವಾಶಿಗೆ ತಲೆಸೆಳಿವಲೆ ಸುರು ಅಕ್ಕು.
    ಅಪ್ಪು, ಕುತ್ತುತ್ತ ನಮುನೆಯ ಪರಿಮ್ಮಳ ಅದರದ್ದು! 🙂
  45. ಕೊಂದೆ ಹೇಳಿ ಒಂದು ಮರ ಇದ್ದು. ಅದೇ – ವಿಷುವಿಂಗೆ ಮಲೆಯಾಳಿಗೊ ಮಡಗುತ್ತವಲ್ಲದೋ- ಕೊನ್ನಪೂ – ಅರೂಶಿನ ಹೂಗಿಂದು, ಅದುವೇ!
  46. ಪರಂಟು ಹೇಳಿ ಒಂದು ಮುಳ್ಳಿನ ಪೊದೆಲು ಬಳ್ಳಿ ಅಡ. ಇದು ದನಗೊಕ್ಕೆ ಹಸಿಯಾಗಿ ಹಾಕಿರೆ ಭಾರೀ ಲಾಯಿಕಾವುತ್ತಡ. ಹಾಲಿಂಗೊಳ್ಳೆದಾಡ, ಪಾತಿಅತ್ತೆ ಹೇಳುಗು.
  47. ಸೀಗೆ ಬಳ್ಳಿ ಗೊಂತಿದ್ದಲ್ಲದೋ? ಸೀಗೆಕಾಯಿಯ ಹೊಡಿ ಹಾಕಿ ಕಾಂಬುಅಜ್ಜಿ ತಲಗೆ ಮಿಂದುಗೊಂಡಿತ್ತು, ಗೊಂಪಿನೊಟ್ಟಿಂಗೆ!
  48. ಅಂಡಿಪುನರು – ಹೇಳಿ ಅರಡಿಗೋ? ಸರ್ತ ಸರ್ತ ಗೆಲ್ಲಿಂದು. ಇದರ ಸೊಪ್ಪು ತೆಂಗಿನ ಕೃಷಿಗೆ ಭಾರೀ ಲಾಯಿಕಾವುತ್ತಡ, ಆಚಮನೆ ದೊಡ್ಡಪ್ಪ ಹೇಳಿದವು.
  49. ಅಂಡಿಪುನರಿನ ಕಿರಿಯಬ್ಬೆಮಗ ಪುನರ್ಪುಳಿ. ’ಪುನರು’ ಜಾತಿಲೇ ಇದ್ದು. ಕಾಂಬಲೂ ಹಾಂಗೇ ಇದ್ದು ಇದಾ!
    ಬೈಲಿನ ಅತ್ತೆಕ್ಕೊಗೆ ಸಿಕ್ಕಿರೆ ಬಿಡವು. ಒಡದು, ಓಡುಮಾಡಿ, ರಜ ಸಕ್ಕರೆ ಹಾಕಿ, ಒಣಗುಸಿರೆ ’ಬಿರಿಂಡ ಜೂಸು’ ಹೆರಡುಗಡ, ಮಧುಭಾವ ಹೇಳಿತ್ತಿದ್ದವು!
  50. ಕೊರಜ್ಜಿ ಮರವ ಗುರ್ತ ಸಿಕ್ಕಲೆ ಕಷ್ಟ ಇಲ್ಲೆ, ಕಾಂಬಲೆ ಅಂಡಿಪುನರಿನ ಹಾಂಗೇ! ಅಷ್ಟು ದೊಡ್ಡ ಆಗ.
    ಕೆತ್ತೆಯ ಕೊದುಶಿ ಬಾಯಿಮುಕ್ಕುಳಿಸಿರೆ ನಿದಿ ಗಟ್ಟಿಅಕ್ಕಡ, ಬಂಡಾಡಿಅಜ್ಜಿ ಹಲ್ಲಾಡ್ತ ಮಕ್ಕಳ ಅಬ್ಬೆಕ್ಕಳ ಕೈಲಿ ಹೇಳುಗು!
  51. ಪೀನಾರು ಹೇಳ್ತದು ಅತಿವಿಚಿತ್ರ ಮರ. ಇದರ ವಿವರುಸುವಗ ಬಟ್ಯಂಗೇ ನಾಚಿಗೆಲಿ ನೆಗೆಬಕ್ಕು.
    ತುಳುವಿನ ಅರ್ತದ (ಪೀ – ನಾರ್) ಹಾಂಗೇ, ಇದರ ಹೊತ್ತುಸಿರೆ ನಾರ್ತಡ.
  52. ಕಾಸರ್ಕನ ಮರ ಗೊಂತಿಪ್ಪಲೇ ಬೇಕು. ಅದರ ರುಚಿ ಒಂದರಿ ಕಂಡವ ಮರವಲಿಲ್ಲೆ! ಅಷ್ಟೂ ಕೈಕ್ಕೆ.
    ನೊಗ (ನೇಗಿಲು) ,ಕತ್ತಿ ಮೊಸೆತ್ತ ಕೊದಂಟಿ – ಹೀಂಗಿರ್ತ ಗಟ್ಟಿ ಜಾಗಗೆ ಕಾಸರ್ಕನೇ ಆಯೇಕ್ಕಷ್ಟೆ.
  53. ಬೆಲ್ಲಂತೊಟ್ಟು (ತುಳು – ಇಜಿನ್) ಗುರ್ತ ಇದ್ದೋ? ಹಳ್ಳಿ ಹೆಸರು ಹೇಳಿರೆ ಗೊಂತಾಗ, ದಾಲ್ಚಿನಿ ಹೇಳಿರೆ ಗೊಂತಕ್ಕಲ್ಲದೋ?
    ಕಾಂಬಲೆ ಕಾಸರ್ಕನ ಹಾಂಗೇ ಎಲೆ. ಆದರೆ ಕಾಸರ್ಕ ಕೈಕ್ಕೆ, ಇದು ಚೀಪೆ. ಸಣ್ಣ ಇಪ್ಪಗ ಕಲ್ಲಿಡ್ಕಿ ಕೊಯಿದು, ಎಲೆ ತಿಂದದು ಒಪ್ಪಣ್ಣಂಗೆ ಈಗಳೂ ನೆಂಪಿದ್ದು.
  54. ಸರಳಿ ಮರವ ಗೊಂತಿದ್ದಲ್ಲದೋ? ಎಲೆಯ ಕೊರದುಕೊರದು ಮಡ್ಡಿಮಡಗ್ಗು ಪಾತಿಅತ್ತೆ.
    ಹುಳಿಚೀಪೆಯ ಸರಳಿಹಣ್ಣಿನ ತಿಂಬದು ಮಕ್ಕೊಗೊಂದು ಗಮ್ಮತ್ತೇ ಇದಾ!
  55. ಬೊಳ್ಸರೊಳಿ ಹೇಳಿ ಒಂದಿದ್ದಡ, ಬಟ್ಯ ಹೇಳಿತ್ತಿದ್ದು. ಒಪ್ಪಣ್ಣಂಗೆ ಕಂಡು ಗೊಂತಿಲ್ಲೆ. ಸರಳಿದೇ ಜಾತಿ, ಆದರೆ ಬೌಷ್ಷ ಎಲೆ ಬೆಳ್ಚಟೆ ಆಗಿರೇಕು.
    ಕಾಯಿ ತಿಂಬಲೆ ಆವುತ್ತಿಲ್ಲೇಡ. ಗೂಂಟಕ್ಕೆ ಎಲ್ಲ ಭಾರೀ ಪಷ್ಟಾವುತ್ತಡ!
  56. ಅಂಬಟೆಮರ ಆರಿಂಗರಡಿಯ? ಉಪ್ಪಿನಕಾಯಿಯೋ, ಹುಳಿಸಾರೋ ಎಂತಾರು ಮಾಡುವಗ ಅಂಬಟೆಗೂ ಒಂದು ಕೈ ಇದ್ದೇ ಇದ್ದು!
    ಮಾವಿನ ಮರದ ಜಾತಿಯೇ ಅಡ, ಪ್ರಬೇಧ ಬೇರೆ ಹೇಳಿಗೊಂಡು ಚೂರಿಬೈಲು ಡಾಗುಟ್ರು ಹೇಳಿತ್ತಿದ್ದವು.
  57. ನಾಣಿಲು ಹೇಳಿ ಮರ ಗುರ್ತ ಇದ್ದೋ? ಹೊಳೆಕರೆಲಿ ಧಾರಾಳ ಇಕ್ಕು. ಸಪುರ ಸಪುರ ಎಲೆಯ ದೊಡ್ಡ ಮರ. ಅಷ್ಟೇ ಸಪುರದ ಚೀಪೆ ಹಣ್ಣು!!
    ಹೊಳೆಲಿ ಆಡ್ತ ಮಕ್ಕೊಗೆ ತಿಂಬಲೆ ಒಳ್ಳೆದಾವುತ್ತಿದಾ!
  58. ಕುಂಟಲ (ಕುಂಟಾಂಗಿಲ) ಮರ ಹೇಳಿ ಒಂದಿದ್ದಲ್ಲದೋ – ಶಾಲೆಂದಬಪ್ಪಗ ನೇರಳೆ ಬಣ್ಣದ ಹಣ್ಣಿನ ಬಾಯಿತುಂಬ ತಿಂದು, ಮನಗೆ ಬಂದು ತಿಂದಿದೇ ಇಲ್ಲೆ ಹೇಳಿ ಲೊಟ್ಟೆಹೇಳಿ ಸಿಕ್ಕಿಬಿದ್ದೊಂಡು ಇತ್ತಿಲ್ಲೆಯೋ?
    ಇದರ ಎಲೆಯ ಸುರುಟಿರೂ ಉರುಟು ನಿಲ್ಲುತ್ತು. ಹಾಂಗಾಗಿ ಬಿಂಗಿಮಕ್ಕೊ ಇದರ್ಲೇ ಪೀಪಿ ಮಾಡುಗು!
  59. ಕುಂಟಾಂಗಿಲ ನೆಂಪಾದರೆ ನೇರಳೆಯೂ ನೆಂಪಕ್ಕು. ನೇರಳೆ ಮರಲ್ಲಿ ನೇರಳೆ ಹಣ್ಣಪ್ಪದು. ಹಣ್ಣಿಂಗೆ ಬಣ್ಣಂದ ಹೆಸರು ಬಂದದೋ, ಬಣ್ಣಂದ ಹಣ್ಣಿಂಗೆ ಹೆಸರು ಬಂದದೋ – ಒಪ್ಪಣ್ಣಂಗರಡಿಯ!
  60. ನೇರಳೆಯ ಪೈಕಿಯ ಇನ್ನೊಂದು ಪನ್ನೇರಳೆ. ಇದು ಸಣ್ಣ ಸೆಸಿಲಿ ಅಕ್ಕು. ರೇಷ್ಮೆ ಹುಳುಗೊ ಹುಡ್ಕಿಹುಡ್ಕಿ ಈ ಮರಲ್ಲಿ ಗೂಡುಕಟ್ಟುಗಡ.
  61. ಪನ್ನೇರಳೆ ಎಲ್ಲೋರಿಂಗೂ ಗೊಂತಿಕ್ಕು ಹೇಳುಲೆಡಿಯ, ಆದರೆ ಪೇರಳೆ ಗುರ್ತ ಇದ್ದೇ ಇಕ್ಕು, ಅಲ್ಲದ?
    ಈಗೀಗ ಕೆಂಪುತಿರುಳಿನ ಕಶಿಪೇರಳೆ ಇದ್ದರೂ, ಬೆಳಿತಿರುಳಿನ ಕಾಟುಪೇರಳೆ ಕಾಡಿಲಿ ಧಾರಾಳ ಇಕ್ಕು. ಗಿರಿಗೆದ್ದಗೆ ಹತ್ತಿರೆ ಪೇರಳೆ ದಾರಾಳ ಇದ್ದು – ಹೇಳಿದವು ಬೈಲಕರೆ ಗಣೇಶಮಾವ.
  62. ತಿಂತ ಹಣ್ಣುಗಳ ಸಾಲಿಲೇ ಇನ್ನೊಂದು ಅಬ್ಳುಕ. ಶಾಲೆಂದ ಬಪ್ಪಗ ತಿಂದು ಗೊಂತಿದ್ದಲ್ಲದೋ ಈ ಹಣ್ಣಿನ? ಚೆ, ಈಗಾಣ ಮಕ್ಕೊಗೆ ಇದರ ಹೆಸರ ಹೇಳುಲೇ ಎಡಿತ್ತೋ ಇಲ್ಲೆಯೋ – ಹೇಳಿ ಕನುಪ್ಯೂಸು ಬಯಿಂದು ಒಪ್ಪಣ್ಣಂಗೆ.
  63. ಮಡಕ್ಕೆ ಹಣ್ಣು ಹೇಳಿ ಇನ್ನೊಂದು ಇದ್ದು. ಸಣ್ಣ ಸಣ್ಣ ಹಣ್ಣುಗೊ, ಮಣ್ಣಿನ ಮಡಕ್ಕೆಯ ಆಕಾರಲ್ಲೇ ಇರ್ತು. ಈಗ ಮಡಕ್ಕೆಯೂ ಇಲ್ಲೆ, ಮಡಕ್ಕೆ ಹಣ್ಣಿನ ಗುರ್ತವೂ ಇಲ್ಲೆ!
  64. ಚಾಕೊಟೆ ಮರ ಗೊಂತಿಲ್ಲೆಯೋ? ಯೇವ ಬರಡು ಗುಡ್ಡೆಲಿಯೂ, ಆರಿಲ್ಲದ್ದರೂ ಒತ್ತೆ ಆಗಿ ನಿಂಗು.
    ಮಕ್ಕೊಗೆ ಕಲ್ಲಿಡ್ಕಿದಷ್ಟೂ ಚಾಕೊಟೆ ಹಣ್ಣನ್ನೇ ಕೊಡುಗು. ಚೋಲಿ ಬಿಡುಸಿ ಒಳಾಣ ಹಣ್ಣು ತಿಂಬ ಕೊಶಿಯೇ ಬೇರೆ.
  65. ಜಾಲಕರೆಲಿ ಸೀತಾಪಲ ಇದ್ದೋ? ಮದಲಿಂಗೆ ಇದು ಕಾಡಿಲೇ ಆಗಿಂಡಿತ್ತು. ಗೋಟುಕಾಯಿಯಷ್ಟಕೆ ಇಪ್ಪ ಹಣ್ಣಿಡೀಕ ಬಿತ್ತುಬಿತ್ತು.
    ಅಂಬೆರ್ಪಿಲಿ ತಿಂತರೆ ಒಂದೇ ನಿಮಿಷ, ಪುರುಸೋತಿಲಿ ತಿಂತರೆ ಅರ್ದ ಗಂಟೆ ಕೆಲಸ!
  66. ಸೀತಾಪಲದ ಹಾಂಗೇ ಇನ್ನೊಂದಿದ್ದು – ರಾಮಫಲ. ಸೀತಾಪಲದಷ್ಟು ದೊಡ್ಡ ಆಗದ್ರೂ, ಹಣ್ಣು ಇನ್ನುದೇ ರುಚಿ.
  67. ಚೂರಿಹಣ್ಣು ಆರಿಂಗರಡಿಯ? ಅಪ್ಪಲೆ ಬರೇ ಮುಳ್ಳಿನ ಗೆಂಟು ಗೆಡು. ಆದರೆ ಬಂಙ ಬಂದು ಕಾಯಿ ಕೊಯಿದರೆ ಹುಳಿನಮುನೆ ಸೀವಿನ ಪರಿಮ್ಮಳವೇ ಬೇರೆ!
    ಚೂರಿಹಣ್ಣು ಕೊಯಿದು ಮೈ ಗೀರುಸಿಂಡು ಮನೆಲಿ ಬೈಗಳು ತಿಂದ ಮಕ್ಕೊ ಎಷ್ಟಿದ್ದವೋ ಏನೊ!
  68. ಕಲ್ಲುಬಾಳೆ ಹೇಳಿರೆ ಬಾಳೆಲೇ ಒಂದು ಜಾತಿ. ಅಪ್ಪಲೆ ಇಷ್ಟು ಸಣ್ಣ ಬಾಳೆಕಾಯಿ ಆದರೂ, ಅದರ ಇಡೀಕ ಬಿತ್ತುಗಳೇ. ತಿಂದಿಕ್ಕಲೆಡಿಯ.
    ಆದರೂ ಬಂಙ ಬಂದು ಮಂಗಂಗೊ- ಮುಜುಗೊ ತಿಂತವು, ಹೊಟ್ಟೆ ಹಶುವಿಂಗೆ.
  69. ಅಡ್ಕಬಾಳೆ ಇನ್ನೊಂದು ನಮುನೆ ಸೆಸಿ. ಬಾಳೆಯ ಪ್ರಬೇಧವೇ ಅಡ ಇದು. ಕಾಯಿ ಎಂತೂ ಆಗದ್ರೂ, ಮಂಗಂಗೊ ಮುರುದು ದಂಡು ತಿಂಬಲೆ ದಕ್ಕಿತ ಸಿಕ್ಕುತ್ತು!
  70. ಪೇಟೆಲಿ ಮುಸುಂಬಿ ಸಿಕ್ಕುತ್ತಲ್ಲದೋ? ಅದೇ ನಮುನೆ ಒಂದು ಕಾಟುಮುಸುಂಬಿ ನಮ್ಮ ಊರಿನ ಕಾಡುಗಳಲ್ಲಿ ಇದ್ದು. ನಾಯಿಮುಸುಂಬಿ ಹೇಳಿಯೂ ಹೇಳ್ತವದರ.
    ಶರ್ಬತ್ತು ಮಾಡ್ತವಡ. ಆದರೆ ’ನಾಯಿಮುಸುಂಬಿ ಶರ್ಬತ್ತು’ ಹೇಳಿಗೊಂಡು ಜೆಂಬ್ರಲ್ಲಿ ಕೇಳಿರೆ, ಎಷ್ಟೇ ಚೆಂದ ಆದರೂ ಆರುದೇ ಕುಡಿಯವು – ಹೇಳಿ ಮಾಷ್ಟ್ರುಮಾವ ಅಪುರೂಪದ ನೆಗೆ ಹೊಟ್ಟುಸಿದವು.
  71. ನಿಂಬೆ ಹುಳಿ ಹೇಳಿರೆ ನಾಯಿಮುಸುಂಬಿಂದಲೇ ತಮ್ಮ. ಶರ್ಬತ್ತಿಂದ ತೊಡಗಿ ನಾನಾ ವಿಧದ ಕಾರ್ಯಕ್ಕೆ ಇದು ಬೇಕಾವುತ್ತು.
    ಔಷಧೀಯ ಗುಣ ಇಪ್ಪ ಈ ಸೆಸಿ ಸಾವಿರಾರು ನಮುನೆ ಆಯುರ್ವೇದ ವೈದ್ಯಕ್ಕೆ ಬೇಕಾವುತ್ತಾಡ. ಚೌಕ್ಕಾರುಮಾವ, ಚೂರಿಬೈಲು ಡಾಗುಟ್ರಿಂಗೆ ಹೆಸರು ಸಹಿತ ಗೊಂತಕ್ಕು.
  72. ಉಂಡೆಹುಳಿ ಹೇಳಿರೆ ಇದೇ ಪ್ರಭೇದದ ಇನ್ನೊಂದು ಹಣ್ಣು. ಪಕ್ಕನೆ ಪಾತಿಅತ್ತೆಗೆ ಸಿಕ್ಕಿರೆ ಉಪ್ಪಿನಕಾಯಿ ಹಾಕಿ ಬಿಡುಗಿದರ.
    ಮದ್ದಿಂಗೂ ಆವುತ್ತಡ, ಬಂಡಾಡಿಅಜ್ಜಿ ಹೇಳಿತ್ತಿದ್ದವು.
  73. ಈಂದು (ಈಚಲು) ಮರ ಗುರ್ತ ಇದ್ದಲ್ಲದೋ? ತೆಂಗಿನ ಮರದ ನಮುನೆಯೇ ಒಂದು ಕಂಬದ ನಮುನೆಯ ಕಾಂಡ. ಅದರಿಂದ ಬಂದ ಸೋಗೆ.
    ಆನೆಗೊಕ್ಕೆ ಇದರ ಸೋಗೆ ಭಾರೀ ರುಚಿ ಆಡ. ಸುಬ್ರಮಣ್ಯಕ್ಕೋ, ಧರ್ಮಸ್ಥಳಕ್ಕೋ ಮತ್ತೊ ಹೋದರೆ ಈಗಳೂ ಕಾಂಗು.
    ಹೇಳಿದಾಂಗೆ, ಈಂದಿನ ಗೊನೆಲಿ ಉದ್ದ ಉದ್ದ ನಾರುಬಳ್ಳಿಯ ನಮುನೆ ’ಕಣೆಗೊ’ ಬತ್ತಲ್ಲದೋ? ಅದರ ಚೆಪ್ಪರಕ್ಕೋ ಇತ್ಯಾದಿ ಎಳದ್ದು ಕಟ್ಟುತ್ತಲ್ಲಿ ಉಪಯೋಗುಸುತ್ತವಾಡ.
    ಮದಲಿಂಗೆ ಅಡಕ್ಕೆ ಇಲ್ಲದ್ದ ಅಭಾವ ಬಂದರೆ ಈಂದಿನ ಕಾಯಿಯನ್ನೇ ಅಡಕ್ಕೆ ಬದಲಿಂಗೆ ತಿಂದುಗೊಂಡಿತ್ತಿದ್ದವಾಡ – ಮಾಷ್ಟ್ರುಮಾವ ಹೇಳಿದವು.
  74. ತಾಳೆಮರ ಈಂದಿನ ಮರದ ಜಾತಿಲೇ, ದೊಡ್ಡದು.
    ತ್ರಿಶಂಕುವಿಂಗೆ ವಿಶ್ವಾಮಿತ್ರ ಪ್ರತಿಸ್ವರ್ಗ ಸೃಷ್ಟಿಮಾಡಿ ಕೊಟ್ಟನಲ್ಲದೋ, ಹಾಂಗೆ ತೆಂಗಿನಮರದ ಬದಲಿಂಗೆ ಮಾಡಿಕೊಟ್ಟದಾಡ ಇದರ.
    ಏನೇ ಆಗಲಿ, ಕೋಟಿಪೂಜಾರಿಮಾಂತ್ರ ಲಾಯಿಕಂಗೆ ಕಳ್ಳು ಇಳಿಶಿ ಕುಡಿಗು. ಪೈಸೆ ಕೊಟ್ರೆ ಕೊಡುಗುದೇ! 😉
  75. ಪನೆ ಗುರ್ತ ಇದ್ದೋ? – ಪನೆ ಒಲಿ ಹೇಳಿರೆ ಮದಲಿಂಗೆ ಕಿಡಿಂಜೆಲೋ, ಎಲ್ಲ ಮಾಡಿಗೊಂಡಿತ್ತಿದ್ದವು.
    ಆಟಿಕಳಂಜನ ಕೊಡೆ ಕಂಡ ನೆಂಪಿದ್ದೋ – ಅದರ್ಲೇ ಮಾಡ್ತದು. ಇದರ ಕಾಂಡವ ಕಡದು ಮಣ್ಣಿ ಮಾಡಿ ಮಕ್ಕೊಗೆ ಕೊಟ್ರೆ ದೇಹ ಪುಷ್ಟಿ ಆವುತ್ತು ಹೇಳ್ತದು ಕಾಂಬುಅಜ್ಜಿಯ ನಂಬಿಕೆ.
  76. ಮುಂಡಾಂಗಿ ಹೇಳಿ ಗೊಂತಿದ್ದೋ? ಅದಾ, ಮದಲಿಂಗೆ ಹಸೆ ಇದ್ದತ್ತು ಅಲ್ಲದೋ – ಆ ಸೆಸಿ!
    ಈಗ ಎಲ್ಲ ಪ್ಲೇಷ್ಟಿಗು ಹಸೆ ಬಂದ ಕಾರಣ ಇದೆಲ್ಲ ಬಳಕೆಲೇ ಇಲ್ಲೆ.
  77. ನೀರ್ಮಾವು ಹೇಳಿ ಒಂದು ಸೆಸಿ ಇದ್ದಾಡ. ನೀರಿಲಿ ಹಾಕಿದ ಮಾವಿಂಗೂ ಇದಕ್ಕೂ ಎಂತದೂ ಸಮ್ಮಂದ ಇಲ್ಲದ್ದರೂ, ನೀರಕರೆಲಿ ಆವುತ್ತ ಕಾಯಿಗೊಕ್ಕೆ ’ನೀರ್ಮಾವು’ ಹೇಳ್ತವು.
  78. ನೀರ್ಕುಜುವೆ ಹೇಳಿ ಒಂದು ಸೆಸಿ ಇದ್ದಾಡ. ತೋಡಕರೆಲಿ ಇದ್ದೊಂಡು ಸಣ್ಣಸಣ್ಣ ಕುಜುವೆಗಳ ಹಾಂಗಿರ್ತದರ ಬಿಡ್ತಡ.
  79. ಚೆಂಡೆಮುಳ್ಳು ಹೇಳಿರೆ ಚೂರಿಮುಳ್ಳಿನ ಹಾಂಗೇ ಇಪ್ಪ ಇನ್ನೊಂದು ಮುಳ್ಳಬಲ್ಲೆ.’ಚೆಂಡೆಮುಳ್ಳಿನ ಬಿದ್ದ ಹಾಂಗೆ’ – ಹೇಳಿ ಮಾಷ್ಟ್ರಮನೆ ಅತ್ತೆಯ ಗಾದೆ ಒಂದಿದ್ದು. ತುಂಬ ಕಷ್ಟದ ಘಟನೆಗೆ ಸಿಕ್ಕಿ ಹಾಕಿಂಡ ಸಂದರ್ಭಲ್ಲಿ ಹೇಳಿಯೇ ಹೇಳುಗು!
  80. ನೊರೆಕ್ಕಾಯಿ ಗೊಂತಿದ್ದಲ್ಲದೋ?
    ಒಂದು ನಮುನೆ ಸಾಬೊನು ಸಾಬೊನು ವಾಸನೆ. ಅಪ್ಪು, ಒಸ್ತ್ರ ಒಗವಲೆ ಸಾಬೊನಿನ ಬದಲು  ಇದನ್ನೇ ಬಳಸಿಗೊಂಡು ಇದ್ದದು ಕಾಂಬುಅಜ್ಜಿ.
  81. ಮಾಳಿಗೆ ಸೊಪ್ಪು ಹೇಳಿ ಒಂದಿದ್ದು, ಗೊಂತಿದ್ದೋ?
    ತುಂಬ ಸಮಯ ಆದರೂ ಆ ಎಲೆ ಕೊಳೆತ್ತಿಲ್ಲೆ – ಕುಂಬಾವುತ್ತಿಲ್ಲೆ – ಗಟ್ಟಿ ಒಳಿತ್ತು. ಹಾಂಗಾಗಿ ಮದಲಾಣ ಕಾಲಲ್ಲಿ ಉಪ್ಪರಿಗೆ ಮಾಡಿ ಮಣ್ಣನೆಲ ಮಾಡುವ ಮೊದಲು ಈ ಸೊಪ್ಪಿನ ಹಾಕಿಂಡಿದ್ದಿದ್ದವಡ.
    ಈಗಾಣ ಅಕೇಶ್ಯ ಅಕ್ಕೋ ಏನೋ. ಉಪ್ಪರಿಗೆಯೂ ಇಲ್ಲೆ, ಮಣ್ಣನೆಲವೂ ಇಲ್ಲೆ!
  82. ನರೆ ಹೇಳಿರೆ ಸಣ್ಣ ಒಂದು ಗೆಂಟು ಬಳ್ಳಿ. ಅದರ ಬಳ್ಳಿಸೆಸಿ ಸಪೂರ ಆದರೂ, ಗೆಂಡೆ ದಪ್ಪ ದಪ್ಪ ಅಕ್ಕು.
    ಕೆಂಪುನಮುನೆ ಗೆಂಡೆಯ ಒಕ್ಕಿ ಬೇಶಿ ತಿಂಗು ಮದಲಿಂಗೆ – ಉದಿಯಪ್ಪಗಾಣ ಉಪಾಹಾರಕ್ಕೆಲ್ಲ!
    ಗೆಂಡೆಯ ಬಣ್ಣ ಕೆಂಪಟೆ (Pink) ಇದ್ದ ಕಾರಣ ಅದೇ ಬಣ್ಣದ ದನಗೊಕ್ಕೆ “ನರೆಚ್ಚಿ” ಹೇಳಿಯೂ ಹೇಳ್ತವು.
  83. ಚೆನ್ನಾರಬಳ್ಳಿ ಕಂಡ್ರೆ ಗುರ್ತ ಸಿಕ್ಕದೋ? ಗುಡ್ಡೆಲಿ ನೆಡವಗ ಒಂದರಿ ತಾಗಿದ್ದರೆ ಮತ್ತೆ ಗುರ್ತ ಮರೆಯ. ಕಾಸರ್ಕನ ನಮುನೆ ಎಲೆ ಇದ್ದೊಂಡು ಮುಳ್ಳುಗೊ ಇಪ್ಪ ಗಟ್ಟಿ ಬಳ್ಳಿ.
    ಆಳುಗಳಲ್ಲಿ ಮನೆಒಕ್ಕಂಗೆ ಈ ಚೆನ್ನಾರಬಳ್ಳಿಯ ಗೆಣವತಿಹೋಮಕ್ಕೆ ಹಿಡುದು, ಬೆಳೀನೂಲಿನೊಟ್ಟಿಂಗೆ ಮನೆಗೆ ಸುತ್ತ ಕಟ್ಟುಗು. ಬಟ್ಯನ ಹೊಸಮನೆಲಿ ಕಂಡ ನೆಂಪಾತೋ?
  84. ಗುಲುಗುಂಜಿ ಹೇಳಿರೆ ಇನ್ನೊಂದು ಬಳ್ಳಿ. ಅದರ ಬಳ್ಳಿ ಬಯಂಕರ ಚೀಪೆ ಇದಾ.
    ಜೇನಿನ ಎರಡುಪಾಲು ಚೀಪೆ ಹೇಳಿಗೊಂಡು ಇದಕ್ಕೆ ಎರಟಿಮಧುರ ಹೇಳಿಯೂ ಹೇಳ್ತವು. (ಎರಟಿ = Double)
    ಇದರ ಬಿತ್ತುಗೊ ಒಂದೇ ಗಾತ್ರ, ಒಂದೇ ತೂಕ ಇಪ್ಪ ಕಾರಣ ಸೂಕ್ಷ್ಮ ಅಳತೆಗೂ ಉಪಯೋಗುಸಿಗೊಂಡಿತ್ತಿದ್ದವು ಹೇಳಿದವು ಆಚಮನೆ ದೊಡ್ಡಪ್ಪ.
  85. ಮಧುನಾಶಿನೀ ಹೇಳಿರೆ ಇನ್ನೊಂದು ಪೊದೆಲು ಬಳ್ಳಿ.
    ಈ ಸೆಸಿಯ ವಿಶೇಷ ಎಂತರ ಹೇಳಿತ್ತುಕಂಡ್ರೆ, ಎರಡು ಎಲೆಯ ಅಗುದು ತುಪ್ಪಿತ್ತುಕಂಡ್ರೆ, ಮತ್ತೆ ಅರ್ದಗಂಟೆಗೆ ಯೇವದೇ ಚೀಪೆ ಗೊಂತಾಗ ಬಾಯಿಗೆ. (ಮಧು-ಚೀಪೆ, ನಾಶಿನೀ – ನಾಶಮಾಡ್ತು)
    ಬೆಲ್ಲ ತಿಂದರೆ ಮಣ್ಣಂಗಟ್ಟಿ ಅಗುದ ಹಾಂಗಾವುತ್ತಿದಾ! 😉
  86. ಪಲ್ಲೆಕಾಯಿ ಗೊಂತಿದ್ದಲ್ಲದೋ? ಅಕ್ರೋಟಿನ ಆಕಾರದ ದೊಡ್ಡ ಉರುಟು ಕಾಯಿಗೊ. ಮದಲಿಂಗೆ ಪಲ್ಲೆ ಆಟಕ್ಕೆ ಉಪಯೋಗ ಆಯ್ಕೊಂಡಿತ್ತು.
    ಈ ಕಾಯಿಯ ಮದ್ಯಲ್ಲಿ ಒಟ್ಟೆ ಮಾಡಿಂಡು, ಚಕ್ರಮಾಡಿ ಗಾಡಿ ಆಡಿದ ನೆಂಪು ಇದ್ದು ಒಪ್ಪಣ್ಣಂಗೆ!
  87. ಇಂಜಿರ (ಎಂಜಿರ್- ತುಳು) ಬಳ್ಳಿ ಗೊಂತಿಲ್ಲೆಯೋ?
    ಯೇವದಾರು ದೊಡ್ಡ ಮರದ ಬುಡಲ್ಲೇ ಇಕ್ಕು. ಸಪೂರ ಕಡ್ಡಿಯ ನಮುನೆ ಇದ್ದರೂ ಭಾರೀ ಗಟ್ಟಿ. ಲೂಟಿಕಿಟ್ಟಂಗೆ ಎರಡೆರಡು ಕಾಸಿಂಡು ಇದ್ದದು ಇದರ್ಲೇ!
  88. ಮಾದರಿ ಬಳ್ಳಿ ಹೇಳಿರೆ ಇನ್ನೊಂದು ಬಳ್ಳಿ.  ಅದಾ, ಸುಂದರಿ ಸೊಪ್ಪಿನ ಕಟ್ಟ ತಪ್ಪಗ ಕಟ್ಟುತ್ತಲ್ಲದೋ –ಅದು ಇದುವೇ.
    ಸಣ್ಣ ಪೊದೆಲಿಂದ ಬೆಳದು ಬಲಿಷ್ಟ ಬಳ್ಳಿ ಆಗಿ ಬಪ್ಪ ಈ ಬಳ್ಳಿ ನಮ್ಮ ಜೀವನಕ್ಕೇ ’ಮಾದರಿ’ ಹೇಳುಗು ಮಾಷ್ಟ್ರುಮಾವ.
  89. ಕರಿಮಾದೆರಿ ಹೇಳಿರೆ ಇದರ್ಲೇ ಇನ್ನೊಂದು ಜಾತಿ.
    ದೊಡ್ಡದೊಡ್ಡ ಶಾಂತಿಮರಂಗೊಕ್ಕೆ ಹೆಬ್ಬಾವಿನಾಂಗೆ ಬಳ್ಳಿ ನೇತೊಂಡು ಕಂಡಿದಿರೋ? ಇದುವೇ.
    ಕೊರಗ್ಗುಗೊ ಇದರನ್ನೇ ಸಿಗುದು ಹೆಡಗೆ ಮಾಡುಗು. ಮಣ್ಣೆಡಗೆ, ಗೊಬ್ಬರದ ಹೆಡಗೆ – ಎಲ್ಲ ಅಪ್ಪದು ಇದೇ ಬಳ್ಳಿಲಿ ಇದಾ!
  90. ಕಾಣಕಜೆ ಹೇಳಿ ಒಂದು ಗೆಡು ಇದ್ದಾಡ. ಇದರ್ಲಿ ಅಪ್ಪ ಹೂಗಿನ ಪೇಟಗೆ ಕೊಂಡೋಗಿ ಮಾರ್ತವಡ, ಮಾಷ್ಟ್ರಮನೆ ಅತ್ತೆ ಹೇಳಿತ್ತಿದ್ದವು.
    ಕೇಜಿಗೆ ನೂರಿನ್ನೂರು ರುಪಾಯಿಯ ನಮುನೆ ಇರ್ತಾಡ.
  91. ಹಾಡೆ ಸೊಪ್ಪು ಗೊಂತಿಕ್ಕಲ್ಲದೋ? ಸಣ್ಣ ಸೆಸಿಗಳ ಮೇಗೆ ಹಬ್ಬಿಂಡು, ಅದರಷ್ಟಕೇ ಇರ್ತು.
    ಇದರ ಒಂದು ಗಿಣ್ಣಲು ನೀರಿಲಿ ಪುರುಂಚಿರೆ ಇಡ್ಳಿಯ ಹಾಂಗೆ ಅಕ್ಕು. ಇದು ಕಣ್ಣಿಂಗೆ ಒಳ್ಳೆ ಔಷಧಿ ಅಡ, ಬಂಡಾಡಿಅಜ್ಜಿಗೆ ಗೊಂತಿದ್ದು.
  92. ಬೆದುರು ಅಂತೂ ಸರ್ವತ್ರ. ತೋಡಕರೆಂದ ಹಿಡುದು, ಒಣಕ್ಕುಗುಡ್ಡೆಯ ನಮುನೆ ಎಲ್ಲಿ ಹೋದರೂ ಇದ್ದು.
    ಅಪುರೂಪದ ಅರುವತ್ತೊರಿಷಕ್ಕೊಂದರಿ ಇದರ್ಲಿ ಹೂಗು ಹೋಗಿ ಬತ್ತ ಆವುತ್ತಾಡ. ದೊಡ್ಡಜ್ಜನ ಮನೆ ಹೊಡೆಲಿ ಈ ಒರಿಶ ಹೋಯಿದು ಇದಾ!
  93. ಕರಂಡೆ ಬಳ್ಳಿ ಲಿ ಅಪ್ಪ ಕಾಯಿ ಗೊಂತಿದ್ದಲ್ಲದೋ? ಅದೇ – ಉಪ್ಪಿನಕಾಯಿ ಹಾಕುತ್ತು, ಅದುವೇ.
    ಕಾಡಿಲಿ ಇದು ಧಾರಾಳ ಸಿಕ್ಕುಗು.
  94. ಕಾನಕಲ್ಲಟೆ ಹೇಳಿರೆ ಇನ್ನೊಂದು ಬಳ್ಳಿ. ಸೊಲುದ ಅಡಕ್ಕೆಯಷ್ಟಕೆ ಅಪ್ಪ ಬೆಳೀ ಕಾಯಿಗೊ.
    ಮಂದ ಅರಪ್ಪು ಕಡದು ಮೇಲಾರ ಮಾಡಿರೆ ಉಂಬಲೇ ಒಂದು ಕೊದಿ! ಈಗೀಗ ಪುನಾ ಇದಕ್ಕೆ ಬೇಡಿಕೆ ಬಯಿಂದಡ, ಪೇಟೆಲಿ ಮಾರ್ತವಾಡ, ಕೇಜಿಮಾವ ಮೊನ್ನೆ ಹೇಳಿತ್ತಿದ್ದವು.
  95. ಕಾಡುಪೀರೆಯ ಗೊಂತಿದ್ದೋ? ಅದಾ, ಅಡ್ಕತ್ತಿಮಾರುಮಾವ ಅಂದು ಬೈಲಿಲಿ ಒಂದು ಶುದ್ದಿ ಹಾಕಿದ್ದವಲ್ಲದೋ? – ಅದು.
    ಹಾಗಲಕಾಯಿಯ ಪೈಕಿ ತಮ್ಮನ ಹಾಂಗೇ ಕಾಣ್ತು ದೂರಂದ ಕಾಂಬಲೆ. ಬೆಂದಿಗೆ ಬಾರೀ ಕೊಶಿ ಆವುತ್ತು.
    ಬಳ್ಳಿಗೆ ಒಂದರಿ ಕಬ್ಬಿಣ ಮುಟ್ಟಿರೆ ಮತ್ತೆ ಆವುತ್ತಿಲ್ಲೇಡ ಅದರ್ಲಿ!
  96. ಐತ್ತಬಳ್ಳಿ ಹೇಳಿ ಇನ್ನೊಂದು ಜಾತಿ ಬಳ್ಳಿ. ಸಣ್ಣ ಮಕ್ಕೊಗೆ ಇದರ ಕಷಾಯ ಮಾಡಿ ಮೀಶುಗಡ. ಚರ್ಮಕ್ಕೆ ಒಳ್ಳೆದಡ.
    ಐತ್ತಬಳ್ಳಿಗೆ ಐತ್ತನ ಹೆಸರೆಂತಕೆ ಬಂತು, ಒಪ್ಪಣ್ಣಂಗರಡಿಯ.
  97. ಕೂರಂಬೆಲು ಹೆಸರು ಕೇಳಿರೆ ಗುರ್ತ ಸಿಕ್ಕದೋ ಏನೋ! ತೊಂಡೆಚೆಪ್ಪರ ಮಾಡಿರೆ ಕೂರಂಬೆಲು ಅಡರು ಬೇಕೇಬೇಕಲ್ಲದೋ?
    ತೊಂಡೆಗೆ ಅದೇ ಆಯೆಕ್ಕುದೇ. ಕಂದುಬಣ್ಣದ ಕಣೆಕಣೆ ಅಡರಿನ ಸೆಸಿ.
  98. ಜವ್ವನಿಕೆ ಬಳ್ಳಿಯ ಮರವಲಿದ್ದೋ. ಮರಂಗಳ ಮೇಲೆ ಹಬ್ಬಿಂಡು ಇಪ್ಪದು.
    ತುಳುವಿಲಿ ಇದರ ಅರಿತ್ತ ಬಳ್ಳ್ (ಅಕ್ಕಿ ಬಳ್ಳಿ) ಹೇಳಿಯೂ ಹೇಳ್ತವು. ಕಬ್ಬಿಣ ಮುಟ್ಟುಸದ್ದೆ ಕೈಲೇ ಎಳದ್ದಾದರೆ ದನಗೊಕ್ಕೆ ಕೊಡ್ಳಕ್ಕು – ಹೇಳ್ತವು.
    ಒಪ್ಪಣ್ಣಂಗೆ ದನಗಳ ಮೇಗೆ ಪ್ರೀತಿ ಇದ್ದ ಕಾರಣ ಕತ್ತಿಲಿ ಕಡುದು ಕೊಟ್ಟು ನೋಡಿದ್ದಿಲ್ಲೆ, ವಿಷ ಅಡ. ಉಮ್ಮಪ್ಪ!
  99. ಬಾಜಿಲ – ಹೆಸರು ಕೇಳಿ ಗೊಂತಿದ್ದೋ? ದೊಡ್ಡ ದೊಡ್ಡ ದೊರಗು ಎಲೆಯ ಸಣ್ಣ ಸೆಸಿಗೊ!
    ಜೆಂಬ್ರದ ಮರದಿನ ಬಾಜಿಲದ ಎಲೆ – ಮಣೆ ತೊಳವಲೆ ಬೇಕೇ ಬೇಕು. ನೆಂಪಾತೋ?
  100. ನರಿಕ್ಕಬ್ಬು ಹೇಳಿರೆ ಸುರುಳಿ ಸೆಸಿಯ ನಮುನೆ ಬೆಳೆತ್ತ ಸಣ್ಣ ಸೆಸಿ.’ಇದುವೇ ಕಬ್ಬು’ ಹೇಳಿ ಕುದುಕ್ಕ ಎಲ್ಲೋರನ್ನೂ ನಂಬುಸಿದ್ದೋ ಏನೋ, ಉಮ್ಮ!
    ಇದರ ಸುಟ್ಟಾಕಿ ಕಣ್ಣಿಂಗೆ ಮಡಗಿರೆ ಒಳ್ಳೆದು- ಹೇಳಿ ಬಂಡಾಡಿಅಜ್ಜಿ ಹೇಳಿತ್ತಿದ್ದವು.
  101. ಉತ್ತರಣೆ ಹೇಳಿರೆ ಇನ್ನೊಂದು ನಮುನೆ ಸಮಿತ್ತಿನ ಗೆಡು. ಬಟ್ಟಮಾವಂಗೆ ಕೆಲವು ಹೋಮ ಮಾಡ್ಳೆ ಇದು ಬೇಕಾವುತ್ತು.
  102. ಕೊಡಗಸನ ಹೇಳಿ ಕೇಳಿದ್ದಿರೋ? ಕೊಡಗಿಂಗೂ ಇದಕ್ಕೂ ಸಮ್ಮಂದ ಇಲ್ಲೆ. ಬಲ್ಲೆ ಎಡಕ್ಕಿಲಿ ಆವುತ್ತ ಇದರ ಕೊಡಿ ಪಾತಿಅತ್ತೆಗೆ ಸಿಕ್ಕಿರೆ ತಂಬುಳಿ ಮಾಡಿಯೇ ಮಾಡುಗು.
  103. ಎಕ್ಕ ಹೇಳಿ ಒಂದು ಸೆಸಿ ಇದ್ದು. ಗೊಂತಿದ್ದಲ್ಲದೋ? ಬೆಳಿಬೆಳಿ ಉಂಡೆಯ ಹಾಂಗಿರ್ತ ಇದರ ಕಾಯಿಯ ಪಟಪಟ ಹೊಟ್ಟುಸುದು ಶಾಲಗೋವುತ್ತ ಮಕ್ಕೊಗೆ ಗವುಜಿ!
    ರಂಗಮಾವಂಗೆ ಎಕ್ಕ ಹೇಳುವಗ ಇಸ್ಪೇಟೇ ನೆಂಪಪ್ಪದು! 😉
  104. ಕಾಟುಕೆಸವು ಹೇಂಗೂ ಇದ್ದೇ ಇರ್ತನ್ನೇ ಕಾಡುಗಳಲ್ಲಿ. ಮರಕೆಸವು ಸಿಕ್ಕಿರೆ, ಅದರೊಟ್ಟಿಂಗೆ ಒಂದೊಂದು ಸೇರುಸಿ ಪಷ್ಟ್ಳಾಸು ಪತ್ರೊಡೆ ಮಾಡುಗು ಬೈಲಿನ ಹೆಮ್ಮಕ್ಕೊ.
  105. ಈಶ್ವರ ಬಳ್ಳಿ ಹೇಳಿ ಒಂದಿದ್ದು, ರಕ್ತಶುದ್ಧಿಂದ ತೊಡಗಿ ಸುಮಾರು ಮದ್ದಿಂಗಾವುತು, ಗೊಂತಿದ್ದನ್ನೇ?
  106. ಅಮೃತಬಳ್ಳಿಯುದೇ ಕಾಡಿಲಿ ಧಾರಾಳ. ಎತ್ತರದ ಮರದ ಕೊಡೀವರೆಗೆ ಹೋಗಿ, ಅಲ್ಲಿಂದ ಸೀತ ನೆಲಕ್ಕಂಗೆ ಬೀಣೆ ಬಿಟ್ಟೊಂಡು, ಬಳ್ಳಿಬಳ್ಳಿ ಆಗಿ ಇಕ್ಕು.
    ಕೈಕ್ಕೆ ರುಚಿಯ ಈ ಬಳ್ಳಿ ಮದ್ದಿಂಗೆ ಬೇಕಾವುತ್ತಾಡ.

ಕಾರ್ಗಾಣ ಕಸ್ತಲೆಯ ಕಾಡು ನೋಡಿದಿರೋ?

ಅಬ್ಬ ಹೇಳಿಗೊಂಡು ಹೇಳಿಗೊಂಡು ನೂರ-ಆರು ಆತು. ಆದರೂ ಮುಗುದ್ದಿಲ್ಲೆ!
ಹೇಳಿಗೊಂಡು ಹೋದರೆ ಇನ್ನೂ ನೂರಾರು, ಸಾವಿರಾರು, ಅಲ್ಲ ಇನ್ನೂ ಜಾಸ್ತಿ ಇದ್ದಪ್ಪಾ!!
ಒಪ್ಪಣ್ಣಂಗೆ ಇಷ್ಟು ಹೇಳುವಗಳೇ ಉಸ್ಸಪ್ಪ ಆತು! (ನಿಂಗೊಗೆ ನೆಂಪಾದ್ದಿದ್ದರೆ ಹೇಳಿಕ್ಕಿ, ಆತೋ?)
~
ನಾಗರೀಕತೆ ಬೆಳದ್ದೇ ಕಾಡಿನ ಅವಲಂಬನೆಲಿ.  ಬೈಲಿಲಿಯೂ ಹಾಂಗೆ, ಈ ಕಾಡಿನ ಹತ್ತರಾಣ ಸಂಪರ್ಕ ಇದ್ದೊಂಡೇ ಇಲ್ಯಾಣ ಜೆನಂಗೊ ಬೆಳದ್ದದು.
ಕುಮ್ಚಿನಡ್ಕದೋರಿಂಗೆ ಅಡಕ್ಕೆ ತೋಟ ಇದಾ.
ಅದಕ್ಕೆ ಬೇಕಾದ ಸೊಪ್ಪು ಇದೇ ಕಾಡಿಂದ ತಕ್ಕು. ಮಳೆಗಾಲಕ್ಕೆ ಬೇಕಾದ ಸೌದಿಯೂ ಬೇಸಗೆಲಿ ಇಲ್ಲಿಂದಲೇ ಸಿಕ್ಕುಗು.
ಉಂಡೆಗೆ ಕೂಡಿ ತಿಂಬಲೆ ಇಪ್ಪ ಜೇನುದೇ ಇದೇ ಕಾಡಿಂದ! ಕೋಲುಜೀನುಗೊ ಮಾಟೆಮಾಟೆಗಳಲ್ಲಿ ಇಕ್ಕು. ಎತ್ತರದ ಶಾಂತಿಮರಂಗಳಲ್ಲಿ ಪೆರಿಯ ಇದ್ದ ಕಾರಣ ಒಂದೊಂದರಿ ಅವಕ್ಕೆ ಡಬ್ಬಿಗಟ್ಳೆ ಜೇನು ಸಿಕ್ಕಿದ್ದದೂ ಇದ್ದು.
ಹಾಂಗೆ ಅವಕ್ಕೆ ಧಾರಾಳ ಸಿಕ್ಕಿದ ಒರಿಶ ಒಪ್ಪಣ್ಣನಲ್ಲಿಯೂ ಉಂಡೆಗೆ ಕೂಡ್ಳೆ ಜೇನೇ ಇದಾ! J
ಈ ಮರಂಗ ಇದ್ದಲ್ಲಿ ನೀರುದೇ ಜಾಸ್ತಿಯೇ. ಹಾಂಗಾಗಿ, ಈ ಕಾಡಿನ ಅಡಿಂದ ಒಂದು ನಿತ್ಯಒರತ್ತೆಯ ಸೊರಂಗ ಇದ್ದತ್ತು.
ಕುಮ್ಚಿನಡ್ಕ ಜಾಲಕರೆಲಿ ಪಾತ್ರ ತೊಳೆತ್ತ ಜಾಗೆಗೆ ದಂಬೆಲಿ ಬಂದು ಬೀಳುಗು. ಮೇಷತಿಂಗಳು ಆಗಲಿ ಮೇ ತಿಂಗಳು ಆಗಲಿ, ನೀರು ಆರ ಅದರ್ಲಿ. ಹೆಬ್ಬೆರಳ ಗಾತ್ರದ ಧಾರೆ ಯೇವತ್ತಿಂಗೂ ಇದ್ದತ್ತು.
ಒಂದೋ – ಎರಡೋ.
ನೂರಾರು ನಮುನೆ ಮರಂಗೊ ಇದ್ದ ಕಾಡಿನ ಉಪಯೋಗ ಸಾವಿರಾರು ಇರ್ತು!
~
ಇದೆಲ್ಲ ಎಂತಕೆ ನೆಂಪಾತು ಹೇಳಿತ್ತುಕಂಡ್ರೆ – ಕಳುದೊರಿಶ ಗೋರ್ಮೆಂಟು – ಆ ಕುಮ್ಚಿನಡ್ಕ ಇಡೀ ಕಾಡಿನ ತೆಗದು, ಅಲ್ಲಿ ರಬ್ಬರು ಹಾಕುಸಿತ್ತಾಡ.
ಒಂದು ಇಬ್ರಾಯಿಗೆ ಇಡೀ ಕಾಡಿನ ಕಡಿವಲೆ ಪರ್ಮೀಟು ಕೊಟ್ಟವಡ. ಕೊಶೀಲಿ ಕಡುದು ಮರಮಾರಿ ಪೈಸೆಮಾಡಿತ್ತದು.
ಇನ್ನೊಂದಕ್ಕೆ ತರಿತರಿ ಗುಂಡಿ ತೆಗವಲೆ ಪರ್ಮೀಟು. ಅದೂ ಆತು.
ಮತ್ತೊಂದಕ್ಕೆ ಸೆಸಿ ನೆಡ್ಳೆ ಪರ್ಮೀಟು, ಅದೂ ನೆಟ್ಟತ್ತು.
ಈಗ ಎರಡೊರಿಷದ ಸೆಸಿಗೊ ನೆಗೆನೆಗೆಮಾಡಿಗೊಂಡು ಇದ್ದು, ಕೊಶೀಲಿ.

ಒಣಕ್ಕು ನೆಲಲ್ಲಿ ಹಸುರು ರಬ್ಬರು! ಬೇರೆಂತೂ ಇಲ್ಲೆ.

ಆ ಇಡೀ ಕಾಡಿನ ಜಾಗೆಲಿ ಈಗ ಇಪ್ಪದು ಒಂದೇ ಜಾತಿಯ ಮರ:

  1. ರಬ್ಬರು, ರಬ್ಬರು, ರಬ್ಬರು…!

ಅಪ್ಪು, ರಬ್ಬರು ಮಾಂತ್ರ! 🙁
ಒಪ್ಪಣ್ಣಂಗೆ ಪಕ್ಕನೆ ಗುರ್ತವೇ ಸಿಕ್ಕಿದ್ದಿಲ್ಲೆ ಆ ಊರಿನ.~

ಮೊನ್ನೆ ನೆಡಕ್ಕೋಂಡೇ ಎತ್ತಿದೆಯೊ, ಜಾಲಿಂಗೆ.
ಅಂದ್ರಾಣ ಭವ್ಯ ನೆರಳಿನ ಕಾಡಿನ ಗ್ರೇಶಿಂಡು, ಈಗಾಣ ಒಣಕ್ಕು ಗುಡ್ಡೆಲಿ ಒತ್ತೆಜಾತಿ ರಬ್ಬರು ಸೆಸಿಗಳ ಕಂಡು ಬೇಜಾರಾತು.
ಎಷ್ಟು ಹೊತ್ತಾದರೂ ಯೋಚನೆ ಇದರಿಂದ ಹೆರ ಬಯಿಂದೇ ಇಲ್ಲೆ, ರಬ್ಬರುಬೇಂಡಿನ ಹಾಂಗೆ ಅದೇ ವಿಷಯವ ಎಳಕ್ಕೊಂಡಿತ್ತು.

ರಜ ಸಮೆಯ ಕಳುದರೆ ಇದುದೇ ದೊಡಾ ಕಾಡಕ್ಕು, ರಬ್ಬರು ಕಾಡು!
ಆದರೆ ಅಂದ್ರಾಣ ವೈವಿಧ್ಯತೆ ಇರ್ತೋ? ಇಲ್ಲೆ. ತಲೆಂದ ತಲಗೆ ಒಂದೇ ಜಾತಿ. ಒಂದೇ ನಮುನೆ.
ಒಂದರ ಎಲೆ ಉದುರಿರೆ ಸರ್ವತ್ರ ಎಲೆ ಉದುರುತ್ತು. ಒಂದು ಚಿಗುರಿರೆ ಎಲ್ಲವೂ ಚಿಗುರುತ್ತು.
ಅದರ ಮೇಗಂದ ಮಳೆಗಾಲ ಬಪ್ಪಗ ವಿಷದ ಹೆಲಿಕಾಪ್ಟರು ಬಂದು ಮದ್ದು ಬಿಡ್ತದು ಬೇರೆ! ಅಷ್ಟಪ್ಪಗ ಅದರ ಕರೆಲಿ ಇದ್ದ ತೋಡುದೇ ಹಾಳಾತು.
ಮದಲಿಂಗೆ ಬೈಲಿನ ದನಗಳೂ ಬಂದು ಹೊಟ್ಟೆ ತುಂಬ ಮೇದು ಹೋಕು. ಹುಲ್ಲು ಕೊಟ್ಟ ಕಾಡಿಂಗೆ ಸಗಣ ಕೊಟ್ಟು ಕೃತಜ್ಞತೆಯೂ ಕೊಡುಗು.
ಈಗ ತಿಂಬಲೆಡಿಯದ್ದ ರಬ್ಬರು ಎಲೆ ಮಾಂತ್ರ,. ಹತ್ತರೆಯೂ ಹೋಗದ್ದ ನಮುನೆ ಬೇಲಿ ಇಕ್ಕು, ಒಂದು ವೇಳೆ ತಿಂದೇ ಬಿಟ್ರೆ ದನಗೊ ಸಾವದು ನಿಘಂಟೇ!

ಪೂಜೆ ಕಳುದು ಕೂದೊಂಡು ಮಾತಾಡುವಗ “ಇನ್ನು ನಿನಗೆ ಯೇವ ಇರುಳುದೇ ಧೈರ್ಯಲ್ಲಿ ಬಪ್ಪಲಕ್ಕು ಒಪ್ಪಣ್ಣಾ..” – ಹೇಳಿದವು ಮಾಲಿಂಗಮಾವ; ಬೇಜಾರಲ್ಲಿ ನೆಗೆಮಾಡಿಂಡು.
ಅವು ಹಾಂಗೆ ಹೇಳಿದ್ದರ್ಲಿ ಎಲ್ಲೋರಿಂಗೂ ಬೇಜಾರಾತು. ಒಪ್ಪಣ್ಣಂಗೂ.
ನಿಂಗೊಗೆ?

~

ಗೋರ್ಮೆಂಟಿನವು ಮಾಂತ್ರ ಅಲ್ಲ, ಬೈಲಿನ ಕೆಲವು ದಿಕ್ಕೆಯೂ ಈ ನಮುನೆ ಹಳೆಕಾಡುಗಳ ಕಡುದು ರಬ್ಬರು ನೆಡ್ತವು.
ಆದರೆ ಆರ್ಥಿಕ ಶೆಗ್ತಿಯ ದೃಷ್ಟಿಂದ ಅದು ಅಗತ್ಯ ಇಕ್ಕು, ಒಪ್ಪುವೊ. ಆದರೆ ರಜ್ಜ ಜಾಗೆಲಿ ಆದರೂ ಈ ಸ್ವಾಭಾವಿಕ ಕಾಡಿನ ಮಡಿಕ್ಕೊಂಬೊ.

ಅಂತೂ ಪರಿಸರ ಮಹೋತ್ಸವ ಹೇಳಿಗೊಂಡು ಅಕೇಶಿಯಾ, ಗಾಳಿ – ಹೀಂಗಿರ್ತ ಯೇವದೇವದೋ ನಮುನೆ ಮರಂಗಳ ನೆಡ್ತವು.
ನೆಟ್ರೆ ಸಾಕೋ – ಬೇಲಿ ಹಾಕಿ, ಈಟು ಹಾಕಿ ಸಾಂಕುತ್ತವು;ದನ ತಿನ್ನದ್ದ ಹಾಂಗೆ ಕಿಡಿಂಜೆಲು ಕಟ್ಟುತ್ತವು.
ಇದೆಲ್ಲ ಒಂದು ನಮುನೆ ನಮ್ಮ ಸಂಸ್ಕಾರಂಗಳ ಮರದು ಪೊರ್ಬುಗಳದ್ದರ ತೆಕ್ಕೊಂಡ ಹಾಂಗಾತಿಲ್ಲೆಯೋ?
ಹೀಂಗೆ ಮಾಡಿರೆ ನಮ್ಮ ಕೊರಜ್ಜಿ, ನಾಣಿಲು ಸೆಸಿಗೊ ಬಲ್ಲೆ ಬೆಳದರೂ ಗುರ್ತ ಸಿಕ್ಕದ್ದ ಕಾಲ ಬಾರದೋ?
ನಮ್ಮದೇ ಬೈಲಿಲಿ ಬೆಳೆತ್ತ ನಮ್ಮ ಊರಿನ ಮರಂಗಳ ನೋಡ್ಳೆ ಆರಿದ್ದವು?
~

ಜೂನ್ 05 ನೇ ತಾರೀಕಿನ ಲೋಕಲ್ಲಿಡೀ ಪರಿಸರ ದಿನ ಹೇಳಿ ಆಚರಣೆ ಮಾಡ್ತವಡ.
ಯೇವದೋ ಊರಿನ ಯೇವದೋ ಕಾಟು ಸೆಸಿ ನೆಡುವ ಬದಲು ನಮ್ಮಲ್ಲಿಯೇ ಇದ್ದಿದ್ದ, ಈಗ ಕಾಂಬಲೇ ಸಿಕ್ಕದ್ದ ಅಪುರೂಪದ ಕೆಲವು ’ಕಾಟು ಸೆಸಿ’ಗಳ ನೆಡುವೊ.
ಈ ಕಾಟು ಸೆಸಿಗೊ ಮುಂದೆ ಎಂತಾರು ಮದ್ದಿಂಗಾರೂ ಅಕ್ಕು, ಅಲ್ಲದ್ದರೆ ನೆರಳಿಂಗಾರೂ ಅಕ್ಕು.
ಎಂತ ಹೇಳ್ತಿ?

ಒಂದೊಪ್ಪ: ಈಗಾಣ ಮರಂಗಳ ನಾವು ಒಳಿಶಿರೆ, ಅವರ ಮಕ್ಕೊ ನಮ್ಮ ಮಕ್ಕಳ ಒಳಿಶುಗು. ಅಲ್ಲದೋ?

ಸೂ:

  • ಇನ್ನೂ ಸಾವಿರಾರು ವೈವಿಧ್ಯದ ಸೆಸಿಗೊ ಶಾಂತತ್ತೆಗೆ ಅರಡಿಗು. ಪುರುಸೊತ್ತಾದರೆ ಅವ್ವೇ ಹೇಳುಗು.
    ಅಲ್ಲದ್ದರೆ ಅವರ ಕೈಲೇ ಕೇಳಿ ನಿಂಗಳೇ.
  • ನಮ್ಮ ಊರಿಲಿ ಇಪ್ಪ ಮರಂಗೊ ’ಮಾನ್ಸೂನ್ ವೃಕ್ಷಗಳು’ ಹೇಳ್ತ ವರ್ಗಲ್ಲಿ ಬತ್ತಡ, ಮಾಷ್ಟ್ರುಮಾವ ಹೇಳಿದವು.
  • ಪಟಂಗೊ: ಇಂಟರ್ನೆಟ್ಟಿಂದ

44 thoughts on “ಕಾಡು ಒಳುತ್ತು, ಆದರೆ ಮರಂಗೊ ಒಳುದ್ದಿಲ್ಲೆ…!

  1. ಒಪ್ಪಣ್ಣ,

    ತುಂಬಾ ಚೆಂದಲ್ಲಿ ವಿವರ್ಸಿದ್ದೆ. ಪ್ರತಿಯೊಂದರ ಚರ್ಯೆ,ಉಪಯೋಗ ಎಲ್ಲವನ್ನೂ ಕೊಟ್ಟಿದೆ. ಇದು ಒಪ್ಪಣ್ಣನ ಬೈಲಿನ ಒಂದು ಆಸ್ತಿಯೇ ಆತು.

    ನಮ್ಮ ಹಿರಿಯೋರು ನವಗೆ ಬೇಕಾಗಿ ಕಾಡುಗಳ ಒಳಿಶಿ ಬೆಳೆಶಿದವು. ಕಾಡು ನಾಶ ಆಗದ್ದ ರೀತಿಲಿಯೇ ಅದರ ಉಪಯೋಗಿಸಿಗೊಂಡು ಬೆಳೆಶಿದವು. ನಮ್ಮ ತಲೆಮಾರಿಂಗೆ ಅಪ್ಪಗ, ಈಗ ಭೂಮಿಗೆ ಒಂದು ದಿನ, ಭೂಮಿಯ ಲೆಕ್ಕಲ್ಲಿ ಒಂದು ಗಂಟೆ, ಪರಿಸರಕ್ಕೊಂದು ದಿನ, ನೀರಿಂಗೊಂದು ದಿನ ಹೀಂಗಿರ್ತದರ ಎಲ್ಲ ಮಾಡೆಕ್ಕಾವುತ್ತು. ಮುಂದೆ ಶುದ್ಧ ಗಾಳಿಗೆ ಒಂದು ದಿನ ಹೇಳಿದೇ ಬಕ್ಕೋ ಎನೋ ಹೀಂಗೆ ಕಾಡು ನಾಶ ಆದರೆ!!!? ನಮ್ಮ ಹಿರಿಯೋರು ಪ್ರತಿ ದಿನವನ್ನೂ ಭೂಮಿಯ, ಪರಿಸರವ ಕಾಳಜಿ ಮಾಡಿ ಸಂರಕ್ಷಣೆ ಮಾಡಿದವು. ಅವರಿಂದಾದಷ್ಟು ಹಸುರು ನೆಟ್ಟವು. ಆ ಮೂಲಕ ಜಲ ಒಳಿಶಿದವು. ಈಗಳೇ ನಾವು ಎಲ್ಲದಕ್ಕೂ ಕಷ್ಟ ಬತ್ತಾ ಇದ್ದು. ಈಗಳೂ ನಾವು ಎಚ್ಚೆತ್ತುಗೊಳ್ಳದ್ದರೆ ನಮ್ಮ ನಂತ್ರಾಣೋರಿಂಗೆ ನೆಲ, ಜಲ, ಗಾಳಿ ಯಾವುದೂ ಒಳಿಯ!

    ಬಂಡಾಡಿ ಅಜ್ಜಿಗೆ ಸುಮಾರು ಮದ್ದು ಗೊಂತಿಪ್ಪದು ಒಳ್ಳೆದಾತು. ನವಗೆ ಅಗತ್ಯ ಇಪ್ಪಗ ಕೇಳಿಗೊಂಬಲೆ ಅಕ್ಕನ್ನೆ?
    ಪುರುಸೋತ್ತಿಲಿ ಶಾಂತತ್ತೆಯ ಹತ್ತರೆ ಗೆಡುಗಳ ಬಗ್ಗೆ ಕೇಳೆಕ್ಕು.

    ಒಪ್ಪಣ್ಣ, ನೀನು ಒಂದೊಪ್ಪಲ್ಲಿ ಹೇಳಿದ ಹಾಂಗೆ ಈಗಾಣ ಮರಂಗಳ ನಾವು ಒಳಿಶಿದರೆ ಅವರ ಮಕ್ಕೊ ನಮ್ಮ ಮಕ್ಕಳ ಒಳಿಶುಗು ಹೇಳುದು ಮನಸ್ಸಿಂಗೆ ಮುಟ್ಟುತ್ತ ಮಾತು.

    1. ಅಕ್ಕಾ,
      {ಶುದ್ಧ ಗಾಳಿಗೆ ಒಂದು ದಿನ ಹೇಳಿದೇ ಬಕ್ಕೋ ಎನೋ }
      ಹ ಹ! ಪಷ್ಟಾಯಿದು ವಿಮರ್ಶೆ.
      ಅಲ್ಲದ್ದರುದೇ – ಈಗಾಣ ’ದಿನಾಚರಣೆ’ಗಳ ಕಾಂಬಗ ಬೇಜಾರಾವುತ್ತು.
      ಒರಿಶದ ಆ ಒಂದಿನ ಮಾಂತ್ರ ಅದರ ನೆಂಪು. ಮತ್ತೇವಗಳೂ ಇಲ್ಲೆ ಇದಾ!

      ಅಜ್ಜಂದ್ರಿಂಗೆ ಯೇವತ್ತೂ ಪರಿಸರ ದಿನವೇ ಆದ ಕಾರಣ ಎಲ್ಲವೂ ಒಳ್ಕೊಂಡು ಬಂತು.
      ಎಂತ ಹೇಳ್ತಿ?

  2. ನಿಜಕ್ಕೂ ತುಂಬಾ ಒಳ್ಳೆ ಲೇಖನ.
    ಅಪ್ಪು, ಮತ್ತೆ, ಇಷ್ಟು ವೈವಿಧ್ಯದ ಮರ – ಗಿಡಗಳೆಡೆಲಿ, ಸೊಪ್ಪು-ಬೇರು-ಬಜಕ್ಕರೆ’ಯೊಳ ಕದ್ದು ಮುಚ್ಚಿ , ಆದರೂ ಆರಾಮವಾಗಿ ಓಡಾಡಿಕೊಂಡಿಪ್ಪ
    ಹಾವು – ಓಂತಿ – ಮೊಲ – ಮುಂಗುಸಿ ಇನ್ನೂ ಅನೇಕ ಪ್ರಾಣಿ-ಪಕ್ಷಿಗಳ ನೆಮ್ಮದಿ’ಯ ಎಲ್ಲಿಂದ ತಪ್ಪದು?
    ರಬ್ಬರು ಮರಗಳೆಡೆಲಿ ಹಾಂಗೆ ಓಡಾಡಲೆಡಿಗಾ?

    ಅಂದ ಹಾಂಗೆ ನೀನು ಬರೆದ ‘ಸರೋಳಿ’ ಮರ ಹೇಳಿದರೆ, ಊರಿಲಿ ಅಮ್ಮನ್ದ್ರು ಅದರ ಸೊಪ್ಪಿನ ನೀರಿಲಿ ಕಿವುಚಿ ‘ಗೊಂಪು’ ಮಾಡಿ ಮಕ್ಕಳ ತಲೆಗೆ ತಿಕ್ಕಿ ಮೀಶುತ್ತವನ್ನೇ, ಅದುವೇಯಾ…
    ತಲೆಕೂದಲಿನ್ಗೆ ಒಳ್ಳೆ ‘ಕಂಡಿಶನರ್ ‘ ಆಗಿ ಕೆಲಸ ಮಾಡ್ತದು! 🙂

    1. ಪ್ರೇಮಕ್ಕಾ..
      ಬೈಲಿಂಗೆ ಆತ್ಮೀಯ ಸ್ವಾಗತಮ್!

      {ಹಾವು – ಓಂತಿ – ಮೊಲ – ಮುಂಗುಸಿ ಇನ್ನೂ ಅನೇಕ ಪ್ರಾಣಿ-ಪಕ್ಷಿಗಳ}
      ಓಹ್, ಬರೇ ಮರಂಗಳ ಪಟ್ಟಿಮಾಡಿಂಡು ಹೋಪಗ ಇದೆಲ್ಲ ಶುದ್ದಿಯೇ ಬಯಿಂದಿಲ್ಲೆ.
      ಬೈಲಿಲಿ ಹೊಸ ಆಯಾಮದ ಚಿಂತನೆ ಕೊಟ್ಟಿ ನಿಂಗೊ.
      ಮರ ಪೂರ ಕಡುದಪ್ಪಗ ಇವಕ್ಕೆಲ್ಲ ಎಲ್ಲಿದ್ದು ಜಾಗೆ? 🙁

      ಸರೊಳಿ ಸೊಪ್ಪಿನ ಗೊಂಪಿನ ಶುದ್ದಿ ಕೇಳಿ ಕೊಶಿ ಆತು.
      ಈಗಾಣೋರು ಕಂಡೀಶನರು ಸಿಕ್ಕೇಕಾರೆ ಪೇಟೆಂದ ಹತ್ತುನೂರೈವತ್ತು ರುಪಾಯಿ ಕೊಟ್ಟು ಮದ್ದಿನ ಕುಪ್ಪಿನಮುನೆದರ ತರೇಕು. ಅಲ್ದೋ? 😉

  3. ಸುಮಾರು ಸಮಯಂದ ಮತ್ತೆ ಇಂದು ಬೈಲಿಂಗೆ ಬಪ್ಪಲೆ ಎಡಿಗಾತು… 🙂 ಈ ಲೇಖನವ ಓದಿಯಪ್ಪಗ ಮನಸ್ಸು ಹಸಿರಾತು 🙂 ಆದರೆ ಇನ್ನೂ ನೂರರಷ್ಟು ಶುದ್ದಿಗಳ ಓದುಲೆ ಬಾಕಿ ಇದ್ದು ಹೇಳಿ ಗ್ರೇಶಿ ತಲೆಬೆಶಿ ಆವ್ತು !!
    ಇಲ್ಲಿ ಒಪ್ಪಣ್ಣ ಹೇಳಿದ ಒಂದೊಂದೂ ಮರದ ಬಗ್ಗೆ ಓದಿಯಪ್ಪಗ ಎನಗೆ ಮರಂಗಳ ಬಗ್ಗೆ ಇಪ್ಪ ಜ್ಞಾನ ಎಷ್ಟು ಕಮ್ಮಿ ಹೇಳಿ ಅರ್ಥ ಆತು….. ಈ ಲೇಖನ ತುಂಬಾ ಉಪಯುಕ್ತ ಮಾಹಿತಿ ಕೊಡ್ತು, ಒಪ್ಪಣ್ಣನ ಶುದ್ದಿಗಳೇ ಹಾಂಗೆ…

    1. ಸುವರ್ಣಿನಿಅಕ್ಕಂಗೆ ಆತ್ಮೀಯ ನಮಸ್ಕಾರಂಗೊ.
      ಅಬ್ಬ, ಸುಮಾರು ಸಮೆಯ ದೂರ ಇದ್ದು ಪುನಾ ಬೈಲಿಂಗೆ ಬಂದಿ. ಕೊಶೀ ಆತು.
      ಇನ್ನು ಇಷ್ಟು ಅಪುರೂಪ ಆಗೆಡಿ ಅಕ್ಕಾ, ಆತೋ?
      ಹೇಂಗೆ, ಒಂದರಿಯಾಣ ಅಂಬೆರ್ಪು ಮುಗಾತನ್ನೇ? 🙂

      ಮರದ ಶುದ್ದಿ ಓದಿ ಮರಂಗಳ ಬಗ್ಗೆ ಮರದ ವಿಶಯ ನೆಂಪುಮಾಡಿ ಒಪ್ಪಕೊಟ್ಟದು ಕೊಶೀ ಆತು.
      ಹರೇರಾಮ

  4. ಅಬ್ಬಾ…! ಲೇಖನ ಓದಿಯಪ್ಪಗ ದಂಡಕಾರಣ್ಯ ಹೊಕ್ಕು ಬಂದ ಹಾಂಗೆ ಆತು. ತುಂಬಾ ತುಂಬಾ ಒಪ್ಪ ಆಯಿದು.
    ವಿವಿಧ ರೀತಿಯ ಮರಂಗಳ ವಿವರಣೆ/ಉಪಯೋಗ ತಿಳಿಸಿದ್ದು ಲಾಯ್ಕ ಆಯಿದು… 🙂
    {ಈಗಾಣ ಒಣಕ್ಕು ಗುಡ್ಡೆಲಿ ಒತ್ತೆಜಾತಿ ರಬ್ಬರು ಸೆಸಿಗಳ ಕಂಡು…}
    ಈ ವಿಶಯ ಓದಿಯಪ್ಪಗ ತುಂಬಾ ಬೇಜಾರುದೇ ಆವ್ತು. 🙁
    ಹೀಂಗೇ ಹೋದರೆ ಮುಂದೊಂದು ದಿನ ಎಲ್ಲರುದೇ ರಬ್ಬರನ್ನೇ ತಿನ್ನೆಕ್ಕಾಗಿ ಬಕ್ಕು…

    1. ಓ! ಮಣ್ಚಿಕಾನಲ್ಲಿ ಧಾರಾಳ ಇರ್ತ ಗಾಂಧಾರಿ ಮೆಣಸಿನ ಗೆಡು ಹೇಳುಲೆ ಬಿಟ್ಟೋತಿದಾ! 😉
      ರಬ್ಬರು ಹಾಕಿರೆ ಬೇಜಾರಿಲ್ಲೆ, ಆದರೆ ರಬ್ಬರಿಂಗಾಗಿ ಒಳುದ್ದರ ನಾಶಮಾಡ್ತವನ್ನೇ – ಅಷ್ಟಪ್ಪಗ ಹೊಟ್ಟಗೆ ಪೀಶತ್ತಿ ಹಾಕಿದ ಹಾಂಗೆ ಆವುತ್ತು. 🙁
      ಅಲ್ಲದೋ?

  5. ಒಪ್ಪಣ್ಣಾ,,,ಶುದ್ಧಿ ಲಾಯಿಕ ಆಯಿದು…ಹೀಂಗಿಪ್ಪ ಎಷ್ಟೋ ಮದ್ದಿನ ಮರಂಗಳ ಮೂಲಕ ಪರಿಸರ ರಕ್ಷಣೆ ಆವ್ತಾ ಇದ್ದದು ಈ ರಬ್ಬರು ಬಂದರೆ ಎಡಿಯ…ಕೆಲವು ನಿರ್ದಿಷ್ಟ ಮರದ ಮೂಲಕ ಬೀಜ ಪ್ರಸಾರ ಆಗಿ ಆಯಾಯ ಕಾಲಕ್ಕೆ ಆ ವೃಕ್ಷಂಗ ಫಲ ಕೊಟ್ಟುಗೊಂಡು ಇರ್ತಿತು..ನಮ್ಮ ಹೆರಿಯೋರು ನವಗೆ ಒಳಿಶಿದ ಹೀಂಗಿಪ್ಪ ಭೂಮಿಯ ನಮ್ಮವು ಕೊಚ್ಚಿ ಪುರ್ಬುಗೊಕ್ಕೆ ಮಾರಿದು ಈಗ ವಾಸ್ತವ ವಿಷಯ..ಇನ್ನು ಅವರ ಕೈಂದ ನವಗೆ ತೆಗವಲೆ ಖಂಡಿತಾ ಎಡಿಯ..ನಮ್ಮ ಇಪ್ಪ ಜಾಗೆಲಿ ಹೀಂಗಿಪ್ಪ ಮದ್ದಿನ ಗೆಡುಗಳ ನವಗೆ ಎಡಿಗಪ್ಪ ಹಾಂಗೆ ಬೆಳೆಶಿ ಆ ಮೂಲಕ ನಮ್ಮ ಹೆರಿಯೋರ ಸಂಸ್ಕೃತಿಯ ಒಳಿಶಿಗೊಂಬ..ಮದ್ದಿನ ಗೆಡುಗಳ ವಿವರಣೆ ಕೊಟ್ಟದಕ್ಕೆ ಧನ್ಯವಾದಂಗೋ!!!

    1. ನಮ್ಮ ಜಾಗೆಯ ’ಮೇವಾಡ’ದವರ ಹಾಂಗಿರ್ತ ಕೊಚ್ಚಿಗೊ ಬಂದು, ಶುಂಟಿ-ರಬ್ಬರು ಮಾಡಿ ಫಲವತ್ತತೆ ಪೂರ ಹಾಳುಮಾಡ್ತವಲ್ಲದೋ? ನಿಜವಾಗಿ ಅದರ ನೋಡುವಗ ಬೇಜಾರಾವುತ್ತು. ಅಲ್ಲದೋ ಮಾವ?

      ಮರಂಗೊ ಯೇವದಾರು ಬಿಟ್ಟು ಹೋತೋ ಹೇಂಗೆ?

    1. ಎಂತಾತು ಮಾಣೀ, ಅಬ್ಬಾ ಹೇಳುಲೆ? 🙂
      ಕುಮಾರಪರುವತ ಹತ್ತುವಗ ಇದರಿಂದ ಜಾಸ್ತಿ ಕಂಡಿದಿಲ್ಲೆಯೋ? ಏ°?

      ಪುರುಸೊತ್ತಾದರೆ ಒಂದು ಶುದ್ದಿ ಹೇಳಿಕ್ಕು, ಬೈಲಿಂಗೆ. ಆತೋ? 🙂

  6. ಒಪ್ಪಣ್ಣ!!!! ಅದ್ಭುತ ಲೇಖನ…

    ಎಲ್ಲಿ ನೋಡಿರೂ ರಬ್ಬರು… ನಮ್ಮ ಮಕ್ಕ ಮುಂದೆ ರಬ್ಬರಿನ ಯಾವುದಾದರೂ ರಾಸಾಯನಿಕ ಕ್ರಿಯೆಗೆ ಒಳ ಪಡಿಸಿ ತಯಾರಿಸಿದ ಅಹಾರವ ತಿನ್ನೆಕ್ಕಾದ ಪರಿಸ್ಥಿತಿ ಬಕ್ಕೋ… ಹೇಳಿ ಹೆದರಿಕೆ ಆವುತ್ತು…

    1. ನೀರಮೂಲೆ ಜಯಕ್ಕಂಗೆ ನಮಸ್ಕಾರಂಗೊ.
      { ರಬ್ಬರಿನ ಯಾವುದಾದರೂ ರಾಸಾಯನಿಕ ಕ್ರಿಯೆಗೆ ಒಳ ಪಡಿಸಿ ತಯಾರಿಸಿದ ಅಹಾರವ ತಿನ್ನೆಕ್ಕಾದ ಪರಿಸ್ಥಿತಿ ಬಕ್ಕೋ }
      ತುಂಬ ಲಾಯಿಕಲ್ಲಿ ಹೇಳಿದಿ. ಅಲ್ಲದ್ದರೂ, ಆಹಾರದ, ಪರ್ಯಾಯ ಆಹಾರದ ಭಾಗಂಗಳ ನಾಶಮಾಡ್ತದು ಕಾಂಬಗ ಒಂದೊಂದರಿ ಈ ಹೆದರಿಕೆ ಆವುತ್ತು.

      ಬೈಲಿಂಗೆ ಶುದ್ದಿ ಹೇಳ್ತಿರೋ?

  7. ಸೂ…..ಪರ್ ಒಪ್ಪಣ್ಣಾ.ಅದ್ಭುತ ಲೇಖನ.ಸುಮಾರು ಮರ೦ಗಳ ಬಗ್ಗೆ ಗೊ೦ತಾದ ಹಾ೦ಗೆ ಆತು.ಧನ್ಯವಾದ೦ಗೊ.

    1. ಡೀಕೇಶಾಂಬಾವಾ..
      ಒಪ್ಪಒಪ್ಪಕ್ಕೆ ಒಪ್ಪಂಗೊ.
      ಬೈಲಿಂಗೆ ಶುದ್ದಿ ಯೇವಗ ಹೇಳುಲೆ ಸುರುಮಾಡ್ತಿ,? ಬನ್ನಿ ಬೇಗ 🙂

  8. ಮಾನವನ ಸ೦ಕ್ಯ ಬೆಳದಾ೦ಗೆ, ನಾಡು ಬೆಳೆತ್ತು.. ಕಾಡು ಕಮ್ಮಿಯಾವುತ್ತು..!! ಇ೦ದರ ನಾವು ಒಪ್ಪಿಗೊಳೆಕಾದ ವಿಚಾರ..
    ಕಾಡು ಕಡುದು ತೋಟ ಹೇಳಿಯೊ೦ಡು ರಬ್ಬರು ಬೆಳೆಶುತ್ತವು..!!
    ಕೃಷಿ ಮಾಡುವ ಕಷ್ಟ ಬೇಡ ಹೇಳಿ ಈಗ ಎಲ್ಲಾರು ರಬ್ಬರು ಹಾಕುಸುತ್ತವು…
    ಇದು ಇ೦ದ್ರಾಣ ಕೃಷಿ ಪರಿಸ್ತಿತಿಯ ಒ೦ದು ಲೆಕ್ಕನೋಡಿರೆ ತಪ್ಪಲ್ಲಾ..!! ಒ೦ದು ರೀತಿ ಅನಿವಾರ್ಯ ಕಾಣ್ತು..
    ರಬ್ಬರು ಒ೦ದಾರಿ ಹಾಕಿಬಿಟ್ಟರೆ ಆತು ಹೆಚ್ಚು ಆರೈಕೆ ಇಲ್ಲೆ ಇದಾ..!! ಅಪ್ಪೋ..

    ಆದರೂ..!! ಒಪ್ಪಣ್ಣ ಭಾವ ಹೇಳಿದ ಮಾತು ೧೦೦ ರಕ್ಕೆ ೧೦೦ ಸತ್ಯ..!!
    ಮದ್ದಿನ ಮರ೦ಗೊ ಕಡುದು ರಬ್ಬರು ಹಾಕುದು ಸರಿ ಅಲ್ಲಾ…
    ಬೋಳು ಗುಡ್ಡೆಲಿ ಆದರೂ ಒ೦ದು ಪಕ್ಷ ಅಕ್ಕ… ಕಾಡಿನ ಕಡುದು ಅಲ್ಲ..
    ರಬ್ಬರು ಬೆಳಶುದು ಒ೦ದು ಕಡೆ, ರಬ್ಬರು ಹಾಲಿನ ಪ್ರೋಸೆಸು ಮಾಡ್ಲೆ ಉಪಯೋಗ ಮಾಡುವ ರಾಸಾಯನಿಕ ವಸ್ತುಗಳ ಸರಿಯಾದ ರೀತಿಲೆ ಪ್ರೋಸೆಸು ಮಾಡಿ ಬಿಡುಗಡೆ ಮಾಡೆಕು.. ಅಲ್ಲದ್ರೆ ಅದು ಕುಡಿಯುವ ನೀರಿ೦ಗೆ ಸೇರ್ಲಾಗ..
    ಈಗ ಕೆಲವು ಜೆನ ಅದರ ಒ೦ದು ಹೊ೦ಡ ತೋಡಿ ತೊಟ್ಟಿಲಿ ಹಾಕಿ ಮುಚ್ಚುತ್ತವು… ಇದರಿ೦ದ ಈ ರಾಸಾಯನಿಕ೦ಗೊ ಮಣ್ಣಿನೊಳ ಶಾಶ್ವತವಾಗಿ ಇರ್ತು… ಇದು ಏಷ್ಟು ಸರೀ ಹೇಳಿ ನಾವು ಆಲೋಚನೆ ಮಾಡೆಕು..

    ರಬ್ಬರು ಎಷ್ಟೇ ಆದರು ಪ್ಲೇಶ್ಟಿಕಿ೦ದ ೧೦೦ರ ಪಾಲು ಮೇಲು ಹೇಳಿ ಕಾಣ್ತು..!!
    ಆದರು, ಇಪ್ಪ ಕಾಡಿಸ ಹಾಳುಮಾಡದ್ದೆ, ರಬ್ಬರು ಬೆಳಶಿರ ಅಕ್ಕು ಹೇಳಿ ಕಾಣ್ತು..

    1. ರಬ್ಬರು ಮೇಣವ ಸಂಸ್ಕಾರ ಮಾಡುವಗ ಅಪ್ಪ ಪರಿಸರ ಹಾನಿಯ ಚೆಂದಕೆ ವಿವರುಸಿದ್ದೆ ಚುಬ್ಬಣ್ಣಾ.. ಕೊಶಿ ಆತು.
      ಈಗ ಇಪ್ಪ ಕಾಡಿನ ಒಳಶಿಗೊಂಡು, ರಬ್ಬರಿನ ಬೆಳೆಶುತ್ತರೆ ವಿವಿಧ್ಯತೆಯ ಒಟ್ಟಿಂಗೆ ಆರ್ಥಿಕತೆ ಕೊಡ್ಳೆ ಒಳ್ಳದೋ – ಕಾಣ್ತು.
      ಅಲ್ಲದೋ? 🙂

  9. ಸಾಮಾಜಿಕ ಕಳಕಳಿ ಇಪ್ಪ ಈ ಲೇಖನಲ್ಲಿ,ಇಷ್ಟೊಂದು ಮರಂಗಳ ಹೆಸರು ಕೊಟ್ಟು, ಅದರ ಪರಿಚಯ ಕೊಟ್ಟು, ಉಪಯೋಗ ಕೊಟ್ಟು ಒಳ್ಳೆ ಸಂಗ್ರಹ ಯೋಗ್ಯವಾಗಿ ಮಾಡಿದ್ದೆ. ಕೆಲವು ಮರಂಗಳ ಹೆಸರು ಕೇಳಿ ಕೂಡಾ ಗೊಂತಿಲ್ಲದ್ದು ಇದ್ದು, ಇನ್ನಿ ಕೆಲವು ಕೇಳಿ ಗೊಂತಿದ್ದು, ಪರಿಚಯ ಇಲ್ಲೆ.
    ಕಾಡು ಹೇಳಿರೆ ಅಲ್ಲಿ ವೈವಿಧ್ಯತೆ ಇತ್ತಿದ್ದು. ಮದ್ದಿನ ಮೂಲಿಕೆಗಳ ಭಂಡಾರವೇ ಆಗಿತ್ತು. ಇದರ ನಾಶ ಅಪ್ಪಲೆ ಬಿಡ್ಲಾಗ
    ಮೇವಲೆ ಹೋದ ಜಾನುವಾರುಗಳ ಹಾಲಿಲ್ಲಿ ಎಲ್ಲಾ ಸಸ್ಯಂಗಳ ಮದ್ದಿನ ಗುಣ ಇತ್ತಿದ್ದು.
    ಬರೇ ನೆಡು ತೋಪು ಮಾಡಿ ಅದರ ಕಾಡು ಹೇಳಿರೆ ಇದೆಲ್ಲಾ ಎಲ್ಲಿ ಸಿಕ್ಕುತ್ತು ಅಲ್ಲದಾ.
    ಒಂದು ಮರ ಕಡಿವಾಗ ಎರಡು ಸೆಸಿ ನೆಡುವ ಸಂಕಲ್ಪ ಮಾಡೆಕ್ಕು. ಇಲ್ಲದ್ರೆ ಮುಂದಾಣಾವಕ್ಕೆ ಕಾಡು ಹೇಳಿರೆ ಎಂತರ ಹೇಳಿ ಪಟಂಗಳಲ್ಲಿ ತೋರುಸೆಕ್ಕಕ್ಕು. ಆಯುರ್ವೇದದ ಮೂಲಕ್ಕೇ ಪೆಟ್ಟು ಬೀಳುಗು
    ಒಂದೊಪ್ಪ ಲಾಯಿಕ ಆಯಿದು.

    1. ಅಪ್ಪಚ್ಚೀ..
      ಮೇವಲೆ ಹೋದ ಜಾನುವಾರಿನ ಹಾಲಿಲಿ ಎಲ್ಲಾ ಗುಣಂಗೊ ಇದ್ದೊಂಡು ಔಷಧೀಯ ಅಂಶ ಇಪ್ಪ ಸ್ವಾಭಾವಿಕ ಹಾಲು ಕೊಡ್ತಲ್ಲದೋ? ಈಗಾಣ ಮಿಲ್ಮ / ನಂದಿನಿ ಪೆಕೆಟಿಲಿ ಇಕ್ಕೋ ಅದು?
      ಒಂದೊಂದರಿ ನಾವು ಕಳಕ್ಕೊಂಬ ಪ್ರಮಾಣ ಕಂಡ್ರೆ ಬೇಜಾರಾವುತ್ತು, ಅಲ್ಲದೋ ಅಪ್ಪಚ್ಚಿ?

  10. ಪಟ್ಟಿಲಿ ಇಪ್ಪ ಮರಗಳಲ್ಲಿ ಎನಗೆ ಗೊಂತಿಲ್ಲದ್ದ ಸುಮಾರು ಮರಂಗೊ ಇದ್ದು. ಹೆಸರು ಕೇಳಿ ನೋಡದ್ದ ಮರಗಳ ಸಂಖ್ಯೆಯೇ ಹೆಚ್ಚು. ಅಬ್ಳುಕ, ಮಡಕೆ ಹಣ್ಣು, ಚೂರಿಕಾಯಿ, ಕುಂಟಲ, ನೆರಳೆ, ಅಂಬಟೆ, ನೆಲ್ಲಿ ಹೆಸರು ಕೆಳ್ತಾ ಇದ್ದ ಹಾಂಗೆ ಬಾಯಿಲಿ ನೀರು ಅರಿವಲೆ ಸುರು ಆತು. ಓೞೆ ಸಂಗ್ರಹ ಯೋಗ್ಯ ಲೇಖನ..

    1. ಕಿಟ್ಟಣ್ಣಾ..
      ಓಣಿಯಡ್ಕಲ್ಲಿ ಇದ್ದೋ, ಎನಿಗೆ ಸರೀ ಗೊತ್ತಿಲ್ಲೆ! ಪಾಜೆಪಳ್ಳದತ್ರೆ ಕಾಡಿಲಿ ಈ ಮರ ಇಲ್ಯೇನ? ಇಕ್ಕಲ್ದ? 😉
      ಈ ಸರ್ತಿ ಮನೆಲಿ ಅಂಬಟೆ ಉಪ್ಪಿನಕಾಯಿ ಹಾಕಿದ್ದವೋ?
      ಹಾಕಿದ್ದರೆ ಹೇಳಿ, ಬೈಲಿಂದ ಒಂದು ಕಾಲಿಬರಣಿ ಕಳುಸುತ್ತೆಯೊ°, ಅಕ್ಕಲ್ಲದಾ? 😉

  11. ಇಷ್ಟೆಲ್ಲಾ ಮರಂಗಳ ಹೆಸರು ಹೇಳಿ, ಅದರ ಗುಣಾವಗುಣಂಗಳ ವಿಮರ್ಶೆ ಮಾಡಿದ ಒಪ್ಪಣ್ಣಂಗೆ ಖಂಡಿತಾ ಡಾಕ್ಟರೇಟ್ ಕೊಡೆಕು. ಆನವನ ಡಾ.ಒಪ್ಪಣ್ಣ ಹೇಳಿ ದಿನೆಗೇಳುತ್ತಾ ಇದ್ದೆ. ಎಂತಾ ಸಂಗ್ರಹ ಮಾರಾಯ ನಿನ್ನದು. ಒಂದೇ ಸರ್ತಿಲಿ ಪೂರ್ತಿ ಲೇಖನ ಓದಿಕ್ಕಲೆಡಿಗಾತಿಲ್ಲೆ. ಕ್ಷಮಿಸು. ಇನ್ನರ್ಧವ ಓದೆಕಷ್ಟೆ. ಆರಾಮಲ್ಲಿ, ಓದೆಕಾದ ಲೇಖನ ಇದು. ಕೆಲವು ಮರಂಗೊ, ಹಳೆಯ ಮಧುರ ನೆನಪುಗಳ ಮತ್ತೆ ಕೆಣಕಿತ್ತು.

    1. ಬೊಳುಂಬುಮಾವಾ..
      ಒಪ್ಪಣ್ಣನ ಒಪ್ಪಣ್ಣ ಹೇಳಿರೆ ಸಾಕು, ಹಾಂಗೆಲ್ಲ (ಬೇ)ಡಾ!
      ಬೈಲಿನ ಶುದ್ದಿಗಳನ್ನೇ ಆರಾರು “ಪ್ರಗತಿಪರ ಚಿಂತಕರು” ನೋಡಿರೆ, ರಜ ಮೇಲೆಕೆಳ ಸೇರುಸಿರೆ “ಮಹಾಪ್ರಬಂಧ”ಕ್ಕೆ ಅಪ್ಪಷ್ಟು ಮಾಹಿತಿಗೊ ಸಿಕ್ಕುಗು. ಹಾಂಗಿರ್ತ ಸುಮಾರು ಶುದ್ದಿಗೊ ಇದ್ದು.
      “ಬಂಡಾಯ” ಸಾಹಿತಿಗಳೋ, “ಪ್ರಗತಿಪರ”, “ಜಾತ್ಯತೀತ”, “ಪರಿಸರವಾದಿ” ಜೆನಂಗಳೋ ಮತ್ತೊ ಈ ಪಟ್ಟಿನೋಡಿದ್ದರೆ ಇನ್ನಾಣ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕುಗಡ, ಗುಣಾಜೆಕುಂಞಿ ಅಂಗಿಕೋಲರು ಕಚ್ಚಿಗೊಂಡು ಹೇಳಿದ°!

  12. ಅಬ್ಬ,ಈ ಪಟ್ಟಿ ಮುಗಿವದೆಲ್ಲಿ೦ದ !!.
    ದಾರೆಪ್ಪುಳಿ ಮರಲ್ಲಿ ಅಪ್ಪ ಹುಳಿಮಿಶ್ತಿತ ಹಣ್ಣಿ೦ದ ತೆಗವ ಎಣ್ಣೆ ಗಾಯ್೦ಗೊಕ್ಕೆ ಮದ್ದಡ.
    ಬೀ೦ಪುಳಿ ಕ೦ಡರೆ ಗುರ್ತದ ಕೊ೦ಕಣಿಗೊ ಓಡಿಗೊ೦ಡು ಬಕ್ಕು,ಉಪ್ಪಿನಕಾಯಿಗೆ ಭಾರೀ ರುಚಿ.
    ಸ೦ಪಗೆ,ಕೇದಗೆ ಹೂಗಿನ ಪರಿಮ್ಮಳ ಅದ್ಭುತ ಅಲ್ಲದೋ?ಬೀಜದ ಮರಕ್ಕೆ ಕಲ್ಲು ಇಡ್ಕಿದರೇ ನೆಮ್ಮದಿ ಅಪ್ಪದಲ್ಲದೊ?ಕಮಿನಿಷ್ಟು ಸೆಸಿಯ ಗುಣಲಕ್ಷಣ ಎ೦ತರ ಹೇಳಿ ಬೋಸನತ್ತರೆ ಕೇಳೆಕ್ಕಟ್ಟೆ.
    ಗುಜರಾತಿನ ಮರುಭೂಮಿಯ ಹಸುರು ಮಾಡುಲೆ ಅರುವತ್ತನೆ ದಶಕಲ್ಲಿ, ನೆಹರುವೋ ಅಲ್ಲ ಅವನ ಮಗಳೋ ಗೊ೦ತಿಲ್ಲೆ,ಒ೦ದು ಮುಳ್ಳಿನ ಸೆಸಿಯ ತ೦ದು ನೆಟ್ಟತ್ತು.ಅದಕ್ಕೆ ‘ಬಾವಡ್’ ಹೇಳ್ತವು ಅಲ್ಲ್ಯಾಣ ಜೆನ೦ಗೊ.ಈಗ ನೋಡೊಗ ಅದೂ ಕಮಿನಿಷ್ಟಿನ ಬಲ್ಲೆಯ ಇನ್ನೊ೦ದು ಅವತಾರ.ರಕ್ತಬೀಜಾಸುರನ ಹಾ೦ಗೆ ಹುಟ್ಟಿಗೊ೦ಬ ಈ ಮರ೦ಗಳ ನಾಶ ಮಾಡೊದು ಹೇ೦ಗೆ ಹೇಳಿ ಗೊ೦ತಾಗದ್ದೆ ಸಮಸ್ಯೆಲಿದ್ದವು ಈಗ.
    ರಬ್ಬರ್ ನ ಕಾಡು ಕು೦ಬಳೆ ಹೊಡೆಲಿ ಹವ್ಯಕರ ಸ೦ಖ್ಯೆಯೇ ಕಮ್ಮಿ ಅಪ್ಪಲೆ ಕಾರಣ ಆತೋ?

    1. {..ಕಮಿನಿಷ್ಟು ಸೆಸಿಯ ಗುಣಲಕ್ಷಣ ಎ೦ತರ}..
      ಅಪ್ಪಪ್ಪು.. ಎ೦ತರ?? 🙂
      ಅರದಕೆಳ ಕೂದೊ೦ಡರೆ, ನಿಷ್ಟುಲಿ ಕವಿ ಮಣ್ಣೊ ಆದರೂ ಅಕ್ಕು ಹೇಳಿಯೋ.. ಅಪ್ಪೋ?? 😉

      1. ಮುಳಿಯಭಾವಾ..
        ನೆಹರು ಇಡೀ ದೇಶದ ಜೆನರ ತಲೆಯೊಳ ಬಲ್ಲೆಬೆಳೆಶಿದ್ದು ಸಾಲದ್ದೆ, ಮರುಬೂಮಿಲಿಯೂ ಬಲ್ಲೆ ಬೆಳೆಶಿದನೋ? 🙁
        ಆ ಬಾವಡ್ ನ ಹಾಂಗೇ ನಮ್ಮ ಊರಿನ ಅಕೇಶಿಯಾ ಆತನ್ನೇ ಭಾವಾ?

        {ರಬ್ಬರ್ ಹವ್ಯಕರ ಸ೦ಖ್ಯೆಯೇ ಕಮ್ಮಿ ಅಪ್ಪಲೆ ಕಾರಣ ಆತೋ?}
        ಮಾರ್ಮಿಕವಾದ ಈ ಪ್ರಶ್ನೆ ಒಪ್ಪಣ್ಣನ ಮನಸ್ಸಿಂಗೆ ತಟ್ಟಿತ್ತು.

        ಬೋಚಬಾವಾ,
        ಹಾಂಗೆಲ್ಲ ಮಾತಾಡ್ಳಾಗ- ದೊಡ್ಡವು ಮಾತಾಡುವಗ. ಹಾಂ.

  13. ಯಬ್ಭ!!! ಭಾರೀ ಲಾಯ್ಕಾಯಿದು..ಇದರ ಓದಿ ಸುಮಾರು ಹೊಸ ಹೆಸರುಗ ಮತ್ತೆ ಸುಮಾರು ವಿಷಯ೦ಗ ಗೊ೦ತಾತುಃ-)

    1. ದೀಪಕ್ಕೋ…
      ನಿಂಗಳ ಮೋರೆಕಾಣದ್ರೆ ಗುರ್ತ ಸಿಕ್ಕನ್ನೇಪಾ..

      ನಿಂಗೊ ಶುದ್ದಿ ಹೇಳುಲೆ ಯೇವಗ ಸುರು ಮಾಡ್ತದು? ಉಮ್ಮ!
      ವಿನಯಲ್ಲಿ ಕೇಳಿಗೊಳ್ತಾ ಇದ್ದೆ.
      ಹರೇರಾಮ :-)(

  14. ಯಬ್ಬ ಓದಿ ಅಪ್ಪಗ ಬಚ್ಹಿತ್ತು ಒಪ್ಪಣ್ಣೋ….ಎಷ್ಟು ಮರಂಗ, ವಿಧ ವಿಧದ ಹೆಸರುಗ ?
    ಇದರಲ್ಲಿ ಕೆಲವು ಈಗ ಕಾಂಬಲೇ ಇಲ್ಲೆ ಹೇಳುವಲ್ಲಿಗೆ ಎತ್ತಿದ್ದು.. ಇದರಲ್ಲಿ ಎಡಿಗಾದ ಕೆಲವನ್ನಾದರೂ ಒಳಿಶುವ ಪ್ರಯತ್ನ ನಾವ್ ಮಾಡೆಡದಾ ??

    ಇನ್ನು ಕೆಲವು ಎನಗೆ ನೆಂಪಾದ ಮರ ಬಳ್ಳಿಗಳ ಹೆಸರು ತಿಳಿಶುತ್ತೆ. ಕೆಲವದರ ಪಟ ಎನ್ನ ಹತ್ತರೆ ಇದ್ದು ಎಡಿಗಾರೆ ಬೈಲಿಂಗೆ ತೋರ್ಸುವ ಪ್ರಯತ್ನ ಮಾಡುತ್ತೆ..

    1.ಹೊಂಗಾರೆ.
    2.ಮುಳ್ಳು ಹೊಂಗಾರೆ – ಇದು 2 ಕೂಡಾ ವಿನಾಶದ ಅಂಚಿಲಿ ಇಪ್ಪ ಮರಂಗ.
    3 ಬುಡಲೆ ಇದು ಸೌದಿಗೆ ಅಪ್ಪ ಮರ..
    4.ನೊಗ ಮರ (ಕುಂಬುಳೂ)ಹಗೂರದ ಮರ ನೊಗ ಮಾಡುಲೆ ಹೇಳಿಯೇ ಇಪ್ಪದು
    5.ಆರ್ಲಿ – ಮೋಪಿಂಗೆ ಆವುತ್ತು ಮದ್ದಿಂಗೆ ಕೂಡಾ ಉಪಯೋಗಿಸುತ್ತವು.
    6.ಕಾಮಟೆ: ಇದರ ಮುಳ್ಳಿಂದ rubber stamp ಮಾಡಿಗೊಂಡಿತ್ತೆಯ..ಅದರ ಬಿತ್ತು ಮಸಾಲೆ ಆಗಿ ಉಪಯೋಗಿಸುತ್ತವು
    7. ಕರಿಮರ (ಕಲ್ಮರ) ಬಾರೀ ಒಳ್ಳೆ ಸೌದಿ.
    8. ಪಿಲಿಂಗೂರು
    9. ಆನೆಮುಂಗು ಇದರ ಕೆತ್ತೆ, ಕೊಡಿ ಸಿಕ್ಕಿದರೆ ಬಂಡಾಡಿ ಅಜ್ಜಿ ದಿನಾ ತಂಬ್ಳಿ ಮಾಡುಗು!
    10. ಕನಪ್ಪಾಟಿ

    1. ಒಪ್ಪಣ್ಣನ ಪಟ್ಟಿಲಿ ೧೦೬ ಹೆಸರು ಓದಿ ಮುಗುಶುವಗ ಶುರುವಾಣದು ಮರದತ್ತು, ನಿಂಗೊ ಮತ್ತೆ ೧೦ ರ ಹೆಸರು ಹುಡುಕಿದ್ದು ಸಾಕು.
      ಈ ಲೇಖನಕ್ಕೆ ಒಪ್ಪಣ್ಣಂಗೆ ಹೇಂಗೂ ಒಪ್ಪ ಇದ್ದು, ಒಟ್ಟಿಂಗೆ ನಿಂಗೊಗುದೇ ಒಪ್ಪ.

    2. ಅಡ್ಕತ್ತಿಮಾರು ಮಾವ°,

      ನಿಂಗೊ ಬರದ್ದದರಲ್ಲಿ ಆರ್ಲಿ ಹೇಳಿ ಬರದ್ದದು, ತುಳು ಶಬ್ಧ ಅಲ್ಲದಾ? ಅದು ಕನ್ನಡಲ್ಲಿ ಕಾಡುಮಂದಾರ ಹೇಳ್ತ ಮರ ಅಲ್ಲದಾ? ಅದಕ್ಕೆ ಸಂಸ್ಕೃತಲ್ಲಿ ಕಾಂಚನಾರ ಹೇಳ್ತವಡ್ಡ. ಇದರಲ್ಲಿ ಕೆಂಪು ಮತ್ತೆ ಬೆಳಿ ಹೂಗಪ್ಪ ವಿಧ ಇದ್ದು ಕೆಲವು ಕಡೆ ಅಲಂಕಾರಕ್ಕಾಗಿಯೂ ಬೆಳೆಸುತ್ತವಡ್ಡ. ಇದರ ಚೋಲಿ, ಬೇರು, ಎಲೆ, ಹೂಗು ಎಲ್ಲವೂ ಮದ್ದಿಂಗೆ ಉಪಯೋಗ ಆವುತ್ತಡ್ಡ. ಟಿ.ಬಿ ಗೆ, ಥೈರಾಯ್ಡಿಂಗೆ, ಹೊಟ್ಟೆಯ ಹುಣ್ಣುಗೊಕ್ಕೆ, ಬಾವು ನಿವಾರಣೆಗೆ, ಚರ್ಮದ ಕಾಯಿಲೆಗೊಕ್ಕೆ ಆವುತ್ತು ಹೇಳಿ ಪುತ್ತೂರಿನ ಉರಗತಜ್ಞ ರವೀಂದ್ರನಾಥ ಐತಾಳರು ಹೇಳುತ್ತವು. ಎಂಗಳ ಊರಿನ ಒಂದು ಜಾಗೆ ಆರೇಲ್ತಡಿ ಹೇಳ್ತ ಜಾಗೆಗೆ ಆ ಹೆಸರು ಎಂತಕ್ಕೆ ಬಂತು ಹೇಳಿ ಹುಡುಕ್ಕಿ ಅಪ್ಪಗ ಆ ಊರಿನ ಪರವ ಹೇಳಿತ್ತು, ಮದಲಿಂಗೆ ಆರ್ಲಿ ಮರ ತುಂಬಾ ಇತ್ತಡ್ಡ ಅಲ್ಲಿ, ಆ ಮರದ ಅಡಿಲಿ ಇಪ್ಪ ಬೂತಂದಾಗಿ ಆರ್ಲಿ ಮರತ್ತಡಿ ಬೂತ ಆಗಿ, ಮತ್ತೆ ಆರೇಲ್ತಡಿ ಆದ್ದು ಹೇಳಿ!!! ಒಂದು ಹೆಸರಿಂದಾಗಿ ಎಂಗೊಗೆ ಸುಮಾರು ವಿಷಯ ಗೊಂತಾತು!!

      ನಮ್ಮ ಹಿರಿಯರು ನೆಟ್ಟ ಅಥವಾ ಪ್ರಕೃತಿ ಕೊಟ್ಟ ಮರಂಗಳ ರಕ್ಷಣೆ ಮಾಡಿದ್ದರಿಂದಾಗಿ ಎಷ್ಟು ಊರುಗೊ ಬೆಳದವೋ ಏನೋ? ನಮ್ಮ ನಂತ್ರಾಣೋರಿಂಗೆ ನಾವೆಂತರ ಕೊಡ್ತು ಹೇಳಿ ಆವುತ್ತಲ್ಲದಾ?

      1. ಅಪ್ಪು ಶ್ರೀ..ನೀನು ಹೇಳಿದ ವಿಶಯ ಅಪ್ಪಾದ್ದೆ ….ಪ್ರಾಯಸ್ತ್ತರಿಂಗೆ ಕಾಲಿಲಿ ನೀರು ಬಂದರೆ ಆರ್ಲಿ ಕೆತ್ತೆ ಕಶಾಯಲ್ಲಿ ಮಿಂದರೆ ಕೆಲವೇ ದಿನಲ್ಲಿ ನೀರು ಬಂದದು ಕಮ್ಮಿ ಆವುತ್ತು..ಮರ ಬಾರೀ ಗಟ್ಟಿ ಕೂಡ ದಾರಂದ, ಕಿಟಿಕಿ ಮಾಡುಲೆ ಕೂಡಾ ಇದರ ಉಪಯೋಗಿಸುತ್ತವು.

        1. ಅಡ್ಕತ್ತಿಮಾರುಮಾವಾ..
          ಒಪ್ಪಣ್ಣನ ನೂರಾರು ಮರಂಗೊ ಸಾಲದ್ದೆ, ನಿಂಗಳ ಹತ್ತಾರು ಮರದ ಹೆಸರುಗೊ ಬಂದು, ಬೈಲಿಲಿ ಕಾಟುಮರಂಗಳ ಸಾಲುಸಾಲು ಬೆಳದತ್ತಿದಾ..

          ಆರ್ಲಿಯ ವಿಶೇಷತೆ ವಿಮರ್ಶೆಆದ್ದದು ಕಂಡು ಕೊಶಿ ಆತು. ಕಾಡುಮರದ ವಿಶೇಶತೆ ಆ ಪರವನಿಂದಾಗಿ ಬೈಲಿನೋರಿಂಗೂ ಗೊಂತಪ್ಪಲಾತು. ಅಲ್ಲದಾ ಶ್ರೀಅಕ್ಕ?

          1. ಒಪ್ಪಣ್ಣ, ಖಂಡಿತಾ!!

            ಆ ಪರವನ ಹಾಂಗಿರ್ತ ‘ವನಸಾಕ್ಷರ’ರಿಂದಾಗಿ ನಮ್ಮ ಕಾಡುಗೋ ರಜ್ಜ ಮಟ್ಟಿಂಗೆ ಉಳುದ್ದುದೇ, ನವಗೆ ಗುರ್ತ ಸಿಕ್ಕುದುದೇ!!!! ಈಗ ಎಂಗೊಗುದೇ ದಾರಿ ಕರೆಲಿ ಪೂರಾ ಆ ಮರ ಕಾಣ್ತದಾ!!! 😉 ಅಷ್ಟು ಉಪಕಾರ ಆತು. ಮತ್ತೆ ಅದು ಬೂತಸ್ಥಾನದ ಹತ್ತರೆ ಇಪ್ಪ ಮರ ಆ ಊರಿಲಿ ಹೇಳಿಯೋ ಏನೋ ಆ ಮರ ಕಾಂಬಗ ದೈವತ್ವ ನೆಂಪಾವುತ್ತು.

  15. ಅಬ್ಬಬ್ಬ… ಎಷ್ಟು ವಿವರ ಇದ್ದು ಈ ಲೇಖನಲ್ಲಿ…
    ಉತ್ತರಣೆ ತಂಬುಳಿಗೆ ಆವುತ್ತು.
    ಗುಲಗಂಜಿ ಮತ್ತೆ ಎರಟಿಮಧುರ ಹೇಳಿರೆ ಒಂದೆಯೊ?

    1. ಎರಟಿಮಧುರಕ್ಕೆ ಯಷ್ಟಿಮಧು ಹೇಳಿ ಹೆಸರು. ಇದು ಈಗ ವಿದೇಶಂದ ಬಪ್ಪದು.

      1. ಎರಟಿಮಧುರಲ್ಲಿ ಕೆಂಪು ಬಿತ್ತಿಂದುದೇ – ಬೆಳಿಬಿತ್ತಿಂದುದೇ – ಎರಡು ಜಾತಿ ಇದ್ದಾಡ.
        ಬೆಳಿಜಾತಿದರನ್ನೇ “ಗುಲುಗುಂಜಿ” ಹೇಳ್ತದಾಡ.
        ಬೆಳಿಬಿತ್ತಿನ ಜಾತಿಯ ವಿಶೇಷತೆ ಎಂತ್ಸರ ಹೇಳಿತ್ತುಕಂಡ್ರೆ, ಎಲ್ಲಾ ಬಿತ್ತುಗಳೂ ಹೆಚ್ಚುಕಮ್ಮಿ ಒಂದೇ ತೂಕ ಇರ್ತಾಡ. ಹಾಂಗಾಗಿ, ಇದರ ಅಳತೆಮಾನ ಆಗಿಯೂ ಉಪಯೋಗುಸಿಗೊಂಡಿತ್ತವಾಡ, ಮದಲಿಂಗೆ.

        ಮಾಷ್ಟ್ರುಮಾವನತ್ರೆ ಕೇಳಿರೆ ಇನ್ನುದೇ ಸುಮಾರು ವಿಶಯ ಹೇಳುಗು. 🙂

  16. ವ್ಹಾರೆವ್ಹಾ.. ಒಪ್ಪಣ್ಣ .. ಸೂಪರ್ ಆಯಿದು ಈ ಲೇಖನ. ಆನು ಸಣ್ಣ ಆಗಿಪ್ಪಗ ಇದರಲ್ಲಿ ಇಪ್ಪ ಐದಾರು ಹೆಸರು ಬಿಟ್ಟು ಬಾಕಿ ಎಲ್ಲ ಕೇಳಿದ್ದೆ / ನೋಡಿದ್ದೆ. ಕಾನಕಲ್ಲಟೆ, ಕರ೦ಡೆಕಾಯಿ, ಕೊಡಗಸನ, ಕಾಡುಪೀರೆ, ಮಡಕ್ಕೆಹಣ್ಣಿನ ಬಳ್ಳಿ ಇದೆಲ್ಲ ಈಗ ಭಾರೀ ಅಪರೂಪ ಅಲ್ಲದೊ? ಎ೦ಗಳ ತೋಟದ ಕರೇಲಿ ಆನು ಸಣ್ಣಾಗಿಪ್ಪಗ ಒ೦ದು ಮಡಕ್ಕೆಹಣ್ಣಿನ ಬಳ್ಳಿ ಇದ್ದತ್ತು. ಕೊಡಗಸನ ಹೂಗಿನ ತುಪ್ಪಲ್ಲಿ ಹೊರುದು ಉ೦ಬಲುದೆ ಲಾಯಿಕ ಆವ್ತು. ಹಾಡೆ ಸೊಪ್ಪಿನ ಕಡದು ಪುರು೦ಚಿ ಕಣ್ಣಿ೦ಗೆ ಹಾಕಿರೆ ಉಷ್ಣ ಎಲ್ಲ ಕಣ್ಣೀರಾಗಿ ಹೋಗಿ ಕಣ್ಣು ತ೦ಪುತ೦ಪಕ್ಕು. ಹಾಡೆ ಬೇರಿನ ತೆ೦ಗಿನೆಣ್ಣೆಲಿ ಕಾಸಿರೆ ಹಳೇ ಹುಣ್ಣು, ಕಜ್ಜಿಗೊಕ್ಕೆ ಎಲ್ಲ ಒಳ್ಳೇ ಮದ್ದು. ಗುಲುಗು೦ಜಿ / ಗುರುಗು೦ಜಿ ಎಲ್ಲ ಈಗ ಕಾ೦ಬಲೇ ಇಲ್ಲೆ. ಹಾ೦ಗೆ ಕಾಡುಮಲ್ಲಿಗೆ ಹೇಳಿ ಒ೦ದು ಬಳ್ಳಿ ನಮುನೆದು ಇದ್ದು, ಗೊ೦ತಿದ್ದೊ? ಅದರ ತು೦ಡು ಕಡುದು ಬೀಸಿರೆ ನೀರು ರಟ್ಟುಗು. ಚೂರಿ ಹಣ್ಣು, ಕು೦ಟಾ೦ಗಿಲ ಹಣ್ಣು, ಜೇಡೆ ಹಣ್ಣು ಎಲ್ಲ ಶಾಲೆ೦ದ ಬಪ್ಪಗ ತಿ೦ದ೦ಡು ಬ೦ದ೦ಡಿತ್ತಿದ್ದದು ಎಲ್ಲ ನೆ೦ಪಾತು ಒಪ್ಪಣ್ಣ.
    ಇಲ್ಲಿ ದುಬಾಯಿ ಮರುಭೂಮಿ. ಆದರುದೆ ಇಲ್ಲಿ ಹತ್ತು ಹಲವು ನಮುನೆಲಿ ಹಸಿರು ಬೆಳೆಸುತ್ತಾ ಇದ್ದವು. ಮರ ಕಡುದಿಕ್ಕಲೆಡಿಯ. ಕಡುದ್ದದು ಗೊ೦ತಾದರೆ ಘೋರಶಿಕ್ಷೆ. ಒ೦ದುವೇಳೆ ಮರ ಡೆವೆಲಪ್ ಮೆ೦ಟಿ೦ಗೆ ಉಪದ್ರ ಆವ್ತು ಹೇಳಿ ಆದರೆ ಅದರ ಬೇರು ಸಮೇತ ಬೇನೆ ಆಗದ್ದ ಹಾ೦ಗೆ ಸಾಗಿಸಿ ಬೇರೆ ದಿಕ್ಕೆ ನೆಟ್ಟು ಪೋಷಿಸುಗಷ್ಟೇ ಹೊರತು ಕಡಿಯವು. ಅದುವೇ ನಮ್ಮ ಊರಿಲ್ಲಿ!!??
    ಕಣ್ಣು ಇಪ್ಪಗ ಕಣ್ಣಿನ ಬೆಲೆ ಗೊ೦ತಾಗಾಡ, ಕಣ್ಣು ಹೋದರೆ ಮತ್ತೆ ಸಿಕ್ಕುಗೊ? ಸಿಕ್ಕೆಕಾರೆ ಎಷ್ಟು ಕಷ್ಟ ಇದ್ದು? ಅಲ್ಲದೊ?

    1. ಪೆರುವದಣ್ಣಾ,
      ಮರಕಡುದೋರಿಂಗೆ ಸರಕಾರ ಘೋರಶಿಕ್ಷೆ ಕೊಡ್ತ ಶುದ್ದಿ ಕೇಳಿ ಆಶ್ಚರ್ಯ ಆತು.
      ಹೀಂಗುದೇ ಇರ್ತೋ ಅಂಬಗ – ಹೇಳಿ ಕಂಡತ್ತು.

      ಮರ ಕಡುದೋರಿಂಗೆ ಮರವೇ ಘೋರಶಿಕ್ಷೆ ಕೊಡ್ತು, ಆದರೆ ಈಗ ಅಲ್ಲ,ಕಾಲಕ್ರಮೇಣ. ಅಲ್ಲದೋ?
      ಒಪ್ಪ ಒಪ್ಪಕ್ಕೆ ಒಪ್ಪಂಗೊ. 🙂

  17. ಉಸ್ಸಪ್ಪ!..

    ಛೆ ಒಂದು ಬಪ್ಪಂಗಾಯಿ ಮರ ಅಲ್ಲಿ ಆರೋಬ್ಬನೂ ನಟ್ಟಿದವಿಲ್ಲೇ!, ಅಲ್ಲಾ , ಆನೆ ಬಂದು ಲಗಾಡಿ ಕೊಟ್ಟತ್ತೋ!! . ಬೋಸ ಭಾವಂಗೆ ಕುದನೆ ಸಾರು ಇದ್ದರೆ ಮತ್ತೆ ಬೇರೆಂತೂ ಬೇಡಡ . ನಿಮಿಗೆ ತಿಂಡಿಗೇನಾದಿತು ಭಟ್ರೇ ಹೇಳಿ ದೊಡ್ಡ ಹೋಟೆಲು ಮಾಣಿ ಕೇಳ್ವದರಿಂದಲೂ ಬಲ ಇದ್ದನ್ನೇ ಒಪ್ಪಣ್ಣ ಭಾವನ ಪಟ್ಟಿ. ಪ್ರತ್ಯೇಕ ಕೂದು ಕಂಪ್ಯೂಟರ್ಲಿ ಎಕ್ಷೆಲ ಶೀಟಿಲಿ ಹುಡ್ಕೆಕಷ್ಟೇ ಎಂತ ಬಿಟ್ಟು ಹೋಯಿದು ಹೇಳಿ.

    ಭಾವ , ಹಲವು ದಿಕ್ಕೆ , ಹಣದ ಅಡಚಣೆ ಅಪ್ಪಗ ಕಾಡಿಲಿಪ್ಪ ಮರಂಗಳ ಕಡುದು ಮಾರುತ್ತವು. ಅನಿವಾರ್ಯ. ಒಪ್ಪಿಗೊಂಬೊ. ಅದೆಷ್ಟು ವರ್ಷಂದ ಅದರ ಬೆಳೆಸಿ ಉಳುಸಿದ್ದೋ. ಆದರೆ ಕಡುದ ಮತ್ತೆ ಬಚಾವಾದೆ ಈಗಂಗೆ ಹೇಳಿ ಗ್ರೇಶುತ್ತವಷ್ಟೇ ಇನ್ನೊಂದು ಹಾಂಗಿರ್ಪ ಮರ ನಡುವೋ ಹೇಳಿ ಗ್ರೇಶುತ್ತವಿಲ್ಲೆ ಹೇಳಿ ಖೇದ. ಒಂದು ಮರ ಕಡುದರೆ ಎರಡು ಮರ ನಡುವೋ ಹೇಳಿ ನಮ್ಮವಕ್ಕೆ ಬರಲಿ ಹೇಳಿ ಈ ಮೂಲಕ ಹಾರೈಸುವೋ ಹೇಳಿ ನಮ್ಮ ಒಪ್ಪ.

    1. ಚೆನ್ನೈಭಾವಾ..
      ಒಪ್ಪಣ್ಣನ ಶುದ್ದಿಗೆ ಒಪ್ಪಕೆ ಸುರೂವಾಣ ಒಪ್ಪ ಕೊಡ್ತದು ಕಂಡ್ರೆ ಬಪ್ಪಂಗಾಯಿ ಹಣ್ಣು ತಿಂದಾಂಗೆ ಅಪ್ಪದು.
      ಓ, ಬಪ್ಪಂಗಾಯಿ ಮರದತ್ತಪ್ಪೋ – ಮಂಗಂಗೊ ಅದರ ಎಲೆಯ ತೊಟ್ಟುಮುರುದು ಮೇಣನಕ್ಕುತ್ತದು ಶುದ್ದಿ ಹೇಳುವಗ ನೆಂಪೇ ಆಯಿದಿಲ್ಲೆ! 🙁
      ಇರಳೀ, ನಿಂಗೊ ಹೇಳಿದಿರನ್ನೇ?

      ಒಂದು ಮರ ಕಡುದರೆ ಮರ ನೆಡುಗು, ಆದರೆ ಹೀಂಗಿರ್ತ ’ಕಾಡು ಮರಂಗಳನ್ನೇ’ ನೆಡುವ ಯೋಚನೆ ಬೈಲಿನೋರಿಂಗೆ ಬರಳಿ ಹೇಳ್ತದು ಬೈಲಿನೋರ ಹಾರಯಿಕೆ ಇದಾ! 🙂

      ಒಪ್ಪ ಕಂಡು ಕೊಶಿ ಆತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×