- ಉದ್ದಿನ ಗೊಜ್ಜಿ - December 4, 2013
- ಕೆಸವಿನೆಲೆ ಚಟ್ನಿ - November 23, 2013
- ಕಣ್ಣಿಲಿ ಕುರು ಅಪ್ಪದಕ್ಕೆಮದ್ದು - November 11, 2013
ಪರಮಾತ್ಮಾ… ಎಂತಾ ಬೆಶಿಲಪ್ಪಾ ಈಗ. ನಟಮದ್ಯಾನ್ನ ಅಂತೂ ಕೇಳುದೇ ಬೇಡ. ಜಾಲಿಂಗೆ ಕಾಲು ಮಡುಗಲೆಡಿಯಪ್ಪ. ಹೀಂಗೆ ಬೆಶಿಲಿಪ್ಪಗ ಅಂತೆ ಕೂಪಲೆ ಮನಸ್ಸು ಕೇಳೆಕ್ಕೆ. ಅಷ್ಟು ಬೆಶಿಲು ಹಾಳು ಮಾಡುದೆಂತಕೆ…. ಸೆಂಡಗೆ ಮಾಡುವೊ ಹೇಳಿ ಗ್ರೇಶಿದೆ. ಹಾಂಗೆ ಮಾಡಿದೆ ರೆಜ. ಈ ಸರ್ತಿ ಅದನ್ನೇ ಹೇಳುವಾಳಿ ಕಂಡತ್ತು.
ಸೆಂಡಗೆಲಿ ಸುಮಾರು ಬಗೆ ಇದ್ದು. ಸಾಗು ಸೆಂಡಗೆ, ಮೈದ ಸೆಂಡಗೆ, ಅಕ್ಕಿ ಸೆಂಡಗೆ, ನೀರುಳ್ಳಿ ಸೆಂಡಗೆ, ಕೂವೆ ಸೆಂಡಗೆ ಇತ್ಯಾದಿ ಇತ್ಯಾದಿ.
ಮಾಡ್ಳೆ ಅಂತಾ ಕಷ್ಟ ಏನೂ ಇಲ್ಲೆ. ಸುಲಾಬ. ಮತ್ತೆ ಅದು ಇದ್ದರೆ ಊಟಕ್ಕೊಂದು ರುಚಿಯೇ ಬೇರೆ. ಎನಗೆ ಎಣ್ಣೆಪಸೆ ಎಲ್ಲ ಜಾಸ್ತಿ ತಿಂಬಲಾಗ ಹೇಳಿದ್ದವು ಡಾಕ್ಟ್ರು. ಆದರೆ ಕೊದಿ ಆವುತ್ತಿದ ಒಂದೊಂದರಿ. ನಾಕು ತಿಂದರೆ ಎಂತಾಗಾಳಿ ತಿಂಬದು ಮೆಲ್ಲಂಗೆ. ಪುಳ್ಯಕ್ಕೊಗೆಲ್ಲ ಸೆಂಡಗೆ ಇದ್ದರೆ ಮತ್ತೆಂತೂ ಬೇಡ. ಸಾರೊ ಮಣ್ಣ ಮಾಡಿರೆ ಭಾರೀ ಕುಷಿ. ಅದರ್ಲೇ ಉಂಗು ನಾಕೈದು ಸರ್ತಿ ಹಾಯ್ಕೊಂಡು. ಮಕ್ಕೊ ಚೆಂದಕ್ಕೆ ಉಂಡ್ರೆ ಅಷ್ಟೇ ಸಾಕಲ್ದೊ…
ಹ್ಮ್.. ಆನು ಮೊನ್ನೆ ಮೈದ ಸೆಂಡಗೆ ಮಾಡಿದ್ದು. ದೋಸಗೇಳಿ ತಂದ ಮೈದ ಒಳುದಿತ್ತು. ತುಂಬ ದಿನ ಮಡುಗಿರೆ ಅದರ ಪರಿಮ್ಮಳ ಹೋವುತ್ತಿದ ಮತ್ತೆ. ಹಾಂಗೆ ಅದರ ಮುಗಿಶಿದ ಹಾಂಗುದೇ ಆತೂಳಿ ಸೆಂಡಗೆ ಮಾಡ್ಳೆ ಹೆರಟದು. ಮೈದ ಹೊಡಿಗೆ ನೀರು ಹಾಕಿ ಲಾಯ್ಕ ಕರಡ್ಸುದು. ಅದಕ್ಕೆ ಮೆಣಸಿನ ಹೊಡಿ(ಕಾರ ಆಯೆಕ್ಕಾರೆ), ಒಂದ್ರಜ್ಜ ಉಪ್ಪು ಹಾಕುದು. ಯಾವುದೇ ಸೆಂಡಗೆಗೆ ಉಪ್ಪು ದಣಿಯ ಹಾಕುಲಾಗ. ಜಾಸ್ತಿ ಹಾಕಿರೆ ಹೊರಿವಗ ವಿಪರೀತ ಉಪ್ಪುಪ್ಪಾವುತ್ತದು. ಮತ್ತೆ ಜೀರಿಗೆಯೋ ಅತವ ಓಮವೋ ಮಣ್ಣ ಹಾಕುಲಕ್ಕು ಪರಿಮ್ಮಳಕ್ಕೆ. ಎರಡುದೇ ಒಟ್ಟಿಂಗೆ ಬೇಡ, ಏವದಾರು ಒಂದು. ಕರಡ್ಸಿದ್ದರ ಒಂದ್ರಜ ಕಾಸೆಕ್ಕು, ಚಂಚಲ್ಲಿ ಎರವಲೆ ಬಪ್ಪಷ್ಟಕ್ಕೆ. ಜಾಸ್ತಿ ಕಾದತ್ತೂಳಿ ಆದರೆ ಒಂದ್ರಜ ನೀರು ಹಾಕಿ ಪುನಾ ಕಾಸುಲಕ್ಕು. ಅದರ ಇಳುಗಿದ ಕೂಡ್ಳೆ, ದೊಡಾ ಮುಂಡಿ ಎಲೆಯ ಕವುಂಚಿ ಹಾಕಿ ಅದರಲ್ಲಿ ಮಡುಗೆಕ್ಕು ಚಂಚಲ್ಲಿ ತೆಗದು ತೆಗದು. ಈಗ ಮಾಂತ್ರ ಮುಂಡಿ ಎಲೆ ಸಿಕ್ಕುದು ಅಪ್ರೂಪ. ಎಲ್ಲ ಕಡೆಲಿ ಇರ್ತಿಲ್ಲೆ. ಬಾಳೆ ಎಲೆಲೂ ಹಾಕಲಕ್ಕು. ಅದೂ ಇಲ್ಲದ್ರೆ ಹಸೆಯ ಮೇಲೆ ಪ್ಲೇಸ್ಟಿಕು ಮಡುಗಿ ಅದರಲ್ಲಿ ಎರೆತ್ತವು. ಕೊಡೆಯಾಲಲ್ಲೆಲ್ಲ ಹಾಂಗೇ ಮಾಡುದಡ, ಬೊಳುಂಬು ಅಕ್ಕ ಹೇಳುಗು. ಎನಗೆ ಮದಲಿಂದಲೂ ಮುಂಡಿ ಎಲೆಲೇ ಮಾಡಿ ಅಬ್ಯಾಸ. ಅದುವೆ ಲಾಯ್ಕಪ್ಪದು. ಹೀಂಗೆ ಎರದ್ದದರ ಬೆಶಿಲಿಲಿ ಮಡುಗಿತ್ತು ಒಣಗಲೆ. ಒಳ್ಳೆ ಬೆಶಿಲಾದರೆ ಐದಾರು ಬೆಶಿಲಿಲಿ ಲಾಯ್ಕ ಒಣಗುತ್ತು. ಮತ್ತೆ ಹೊತ್ತೊಪ್ಪಾಗ ಒಂದೊಂದೇ ಸೆಂಡಗೆಯ ಎಳಕ್ಕುಸಿ ಕವುಂಚಿ ಹಾಕೆಕು. ಇಲ್ಲದ್ರೆ ಒಂದೇ ಹೊಡೆ ಒಣಗುದಲ್ದೊ.
ಅಕ್ಕಿ ಹೊಡಿ ಸೆಂಡಗೆಯುದೇ ಹೀಂಗೇ ಮಾಡೊದು. ಅಕ್ಕಿ ಹೊಡಿ ಮಾತ್ರ ಆದರೆ ಅಕ್ಕಿ ಸೆಂಡಗೆ ಆವುತ್ತು. ಕೊದಿಶೊಗ ನೀರುಳ್ಳಿ ಕೊಚ್ಚಿ ಹಾಕಿರೆ ನೀರುಳ್ಳಿ ಸೆಂಡಗೆ ಆವುತ್ತು. ಕಾರ ಒಳ್ಳೆತ ಬೇಕಾರೆ ಮೆಣಸಿನ ಹೊಡಿ ಹೆಚ್ಚು ಹಾಕಿತ್ತು. ಬೇಡದ್ರೆ ಹಾಕದ್ರೂ ನಡೆತ್ತು.
ಸಾಗು(ಸಾಬಕ್ಕಿ) ಸೆಂಡಗೆದೇ ಹೀಂಗೆಯೇ. ಆದರೆ ಅದರ ಮದಲೇ ಬೇಶಿಯೊಂಡ್ರೆ ಒಳ್ಳೆದು. ಆ ಸಿಳ್ಳು ಹಾಕುತ್ತ ಪಾತ್ರಲ್ಲಿ ಗಳಿಗ್ಗೆಲಿ ಬೇಯ್ತೂಳಿ! ಒಪ್ಪಕ್ಕ ಬೇಶಿ ಕೊಡ್ತು. ಅದಕ್ಕೆ ಮತ್ತೆ ಪುನಾ ನೀರು ಹಾಕಿ ತೆಳ್ಳಂಗೆ ಮಾಡುದು. ಪುನಾ ರಜ ಕಾಸುದು ಉಪ್ಪು, ಮೆಣಸಿನ ಹೊಡಿ, ಜೀರಿಗೆ ಎಲ್ಲ ಹಾಕಿ. ಎರವಲೆ ಬಪ್ಪಾಂಗಪ್ಪಾಗ ಇಳುಗಿ ಎಲೆಲಿ ಮಡುಗಿತ್ತು ಒಂದೊಂದೆ ಸೆಂಡಗೆಯ. ಬೆಶಿ ಬೆಶಿ ಇಪ್ಪಾಗಳೇ ಮಡುಗೆಕ್ಕಾತೊ. ತಣುದರೆ ಮತ್ತೆ ಗಟ್ಟಿ ಆವುತ್ತು. ಎರವಲೆ ಬಾರ. ಮೆಣಸಿನ ಹೊಡಿ ಹಾಕದ್ರೆ ಇದು ಒಳ್ಳೆ ಬೆಳೀ ಸೆಂಡಗೆ ಆವುತ್ತು. ಮಕ್ಕೊಗೆಲ್ಲ ಬಾರೀ ಪ್ರೀತಿ ‘ಬೆಳಿ ಸೆಂಡಗೆ’ ಹೇಳಿರೆ.
ಇನ್ನು ಕೂವೆ ಸೆಂಡಗೆ. ಕೂವೆ ಹೊಡಿ ಗೊಂತಿದ್ದನ್ನೆ. ಈಗ ಕೂವೆ ಗೆಂಡೆ ಕಾಂಬಲೆ ಸಿಕ್ಕುದು ಬಾರೀ ಕಮ್ಮಿ . ಕೊಡೆಯಾಲಲ್ಲಿ ಅದೆಂತದೋ ಆರಾರ್ರೋಟು ಹೇಳಿ ಸಿಕ್ಕುತ್ತಡ, ಅಜ್ಜಕಾನ ರಾಮ ಹೇಳ್ಯೊಂಡಿತ್ತ. ಅದುವೇ ಇದು. ಕೂವೆ ಶುಂಟಿಯ ಹಾಂಗೆಯೇ ಬೆಳೀ ಗೆಂಡೆ. ಅದರ ಒಕ್ಕಿ, ಲಾಯ್ಕಲ್ಲಿ ತೊಳವದು. ಮತ್ತೆ ಸಣ್ಣಕ್ಕೆ ತೆಳೂವಿಂಗೆ ಕೊರವದು. ಹ್ಞಾ.. ರಾಮ ತಂದುಕೊಟ್ಟ ಮೆಟ್ಟುಕತ್ತಿ ಬಾರೀ ಲಾಯ್ಕಿದ್ದಾತ. ಎನಗೆ ಅವನತ್ತರೆ ಹೇಳ್ಳೆ ಮರದ್ದು. ನಿಂಗೊಗೆ ಕಾಂಬಲೆ ಸಿಕ್ಕಿರೆ ಹೇಳಿಕ್ಕಿ ಆತೊ. ಹೀಂಗೆ ತೆಳ್ಳಂಗೆ ಕೊರದ್ದರ ನೊಂಪಿಂಗೆ ಕಡೆಯೆಕ್ಕು, ನೀರಾಕದ್ದೆ. ಮತ್ತೆ ಒಂದು ದೊಡ್ಡ ಪಾತ್ರಕ್ಕೆ, ಪಾಯ್ಸಕ್ಕೆ ಕಾಯಾಲು ಅರಿಶುತ್ತಾಂಗಿಪ್ಪ ಬೆಳೀ ವಸ್ತ್ರವ ಕಟ್ಟೆಕು. ಕಾಯಾಲು ಅರಿಶುವ ವಸ್ತ್ರ ಹೇಳೊಗ ನೆಂಪಾತು. ಅಂದು ಇಲ್ಲಿ ಒಂದು ಪೂಜೆ ಸಮಯಲ್ಲಿ, ಕೆಲವು ಜೆನ ಎಲ್ಲ ಹಿಂದಾಣ ದಿನವೇ ಬಂದಿತ್ತಿದವು. ಆವ್ಗ… ಆರಪ್ಪಾ… ಉಮ್ಮ ಆರೂಳಿ ನೆಂಪು ಬತ್ತಿಲ್ಲೆ.. ಆರೋ.. ಎನ್ನ ಕಾಯಾಲಿನ ವಸ್ತ್ರವ ಚೆಂಡ್ಯರ್ಕೂಳಿ ಗ್ರೇಶಿ ಮೈ ಉದ್ದುಲೆ ತೆಕ್ಕೊಂಡೋದ್ದಲ್ದ! ಅದು ನೋಡ್ಳೆ ಹಾಂಗೇ ಇರ್ತಲ್ಲದಾ… ಅಬ್ಬಾ ಎನಗೆ ಒಂದು ಪಿಸುರಾದರೂ ಬಯಿಂದು. ಮದಾಲಿಂದ ಅದರಲ್ಲೇ ಅರಿಶಿಯೊಂಡಿದ್ದದು. ಒಳ್ಳೆ ಗಟ್ಟಿ ವಸ್ತ್ರವುದೇ. ಎಂತರ ಮಾಡುದು, ಆನು ಪರಂಚಿಯೇ ಬಾಕಿ. ಪುಳ್ಯಕ್ಕೊಗೆಲ್ಲ ತಮಾಷೆ. ನೆಗೆ ಮಾಡ್ಯೊಂಡಿತ್ತಿದವು. ಮತ್ತೆ ಒಪ್ಪಣ್ಣ ಹೋಗಿ ಬೇರೆ ಹೊಸತ್ತು ಅರಿಶುವ ವಸ್ತ್ರ ತಂದ ಮತ್ತೆಯೇ ಎನ್ನ ಕೋಪ ಇಳುದ್ದದು. ಹಾಂಗೆಲ್ಲ ಕತೆ ಈ ಅಜ್ಜಿದು. ಹ್ಮ್.. ಈಗ ಪಾತ್ರಕ್ಕೆ ವಸ್ತ್ರ ಕಟ್ಟಿದ್ದಿಯನ್ನೆ… ಅದರ ಮೇಲಂಗೆ ಕಡದ ಹಿಟ್ಟಿನ ಹಾಕೆಕ್ಕು. ಮತ್ತೆ ರಜ ರಜವೇ ನೀರು ಹಾಕಿ ಹಾಕಿ ತೊಳಸೆಕು. ಅದು ಪಾತ್ರಕ್ಕೆ ಇಳಿತ್ತು ಲಾಯ್ಕಲ್ಲಿ. ರಜ ಹೊತ್ತಪ್ಪಾಗ ಪಾತ್ರಲ್ಲಿ ಮೇಲಂದ ನೀರು ನಿಂದಿರ್ತು. ಅದರ ಮೆಲ್ಲಂಗೆ ಮೇಲಂದ ಅರಿಶೆಕು. ಹೀಂಗೆ ಸುಮಾರು ಸರ್ತಿ ನೀರು ತೆಗದು ತೆಗದು ಅಪ್ಪಾಗ ಕೂವೆ ಹೊಡಿ ಅಡೀಲಿ ಒಂದಿರ್ತು. ಅದರ ಮತ್ತೆ ತೆಳೂವಿಂಗೆ, ಹಾಳೆಲೋ ಬಟ್ಳಿಲೋ ಹಾಕಿ ಒಣಗುಸುದು. ಬೆಳಿ ವಸ್ತ್ರಲ್ಲಿ ಹರಗಿ ತಡ್ಪೆಲೊ ಮಣ್ಣ ಮಡುಗಿ ಒಣಗ್ಸಿರೂ ಅಕ್ಕು. ಒಳ್ಳೆತ ಬೆಶಿಲಿದ್ದರೆ ಐದಾರು ದಿನ ಒಣಗುಸಿರೆ ಸಾಕು. ಅಂತೂ ಒಳ್ಳೆ ಒಣಗೆಕ್ಕದು. ಇಲ್ಲದ್ರೆ ಹುಳಿ ಬತ್ತು. ಇದು ಒಂದು ಮೂರ್ನಾಕು ವರ್ಷಕ್ಕೆಲ್ಲ ಏನಾವುತ್ತಿಲ್ಲೆ. ಮಕ್ಕೊಗೆ ಮಣ್ಣಿ ಮಾಡ್ಳೂ ಆವುತ್ತು. ಮತ್ತೆ ಹೊಟ್ಟೆಂದೋಪ ಸಮಸ್ಯೆ ಇದ್ದರೆ ಇದರ ಮಣ್ಣಿ ತಿಂದರೆ ಲಾಯ್ಕಾವುತ್ತು. ಆರೋಗ್ಯಕ್ಕೂ ಒಳ್ಳೆದು. ಬಂಡಾಡಿಲಿ ಕೂವೆ ಸೆಸಿ ಇದ್ದು. ಆದರೆ ಹೆಗ್ಣ ಮಡುಗುತ್ತಿಲ್ಲೆ ಗೆಂಡೆಯ. ದಣಿಯ ಸಿಕ್ಕುತ್ತಿಲ್ಲೆ. ಅಂದು ಮಾಡಿ ಮಡಗಿದ ಹೊಡಿ ಇದ್ದು ಬೇಕಾರೆ.
ಈ ಕೂವೆ ಹೊಡಿಯ ಸೆಂಡಗೆದೇ ಒಳುದ ಸೆಂಡಗೆಗಳ ಹಾಂಗೆಯೇ ಮಾಡುದು. ಈ ಹೊಡಿ ರಜ್ಜವೇ ಸಾಕವುತ್ತು. ಅದಕ್ಕೆ ನೀರಾಕಿ ತುಂಬಾ ತೆಳುವಿಂಗೆ ಕರಡ್ಸೆಕ್ಕು. ಒಂಚೂರು ಉಪ್ಪು, ಮೆಣಸಿನ ಹೊಡಿ, ಜೀರಿಗೆ ಹಾಕಿ ಕಾಸಿ ಎರದತ್ತು. ಸಣ್ಣ ಸಣ್ಣಕ್ಕೆ ಎರದರೆ ಸಾಕು. ಹೊರಿವಾಗ ದೊಡ್ಡ ಆವುತ್ತದು. ಸಾಬಕ್ಕಿ ಸೆಂಡಗೆಯೂ ಹಾಂಗೆಯೇ. ಹೊರಿವಾಗ ದೊಡ್ಡ ಆವುತ್ತು. ಅದರೆ ಮೈದ ಸೆಂಡಗೆ ಹಾಂಗೆ ದೊಡ್ಡ ಆವುತ್ತಿಲ್ಲೆ.
ಅವಲಕ್ಕಿ ಸೆಂಡಗೆಯುದೇ ಮಾಡ್ಳಾವುತ್ತು. ಹಿಂದಾಣ ಇರುಳು, ಅವಲಕ್ಕಿಗೆ ನೀರು, ಉಪ್ಪು, ಮೆಣಸಿನ ಹೊಡಿ, ಪರಿಮ್ಮಳಕ್ಕೆ ಬೇಕಾರೆ ಇಂಗು ಎಲ್ಲ ಹಾಕಿ ಗಟ್ಟಿ ಕಲಸಿ ಮಡುಗೇಕು. ಮರದಿನ ಅದರ ಚಕ್ಕುಲಿ ಮುಟ್ಟಿಲಿ ಒತ್ತಿಯೋ, ಇಲ್ಲದ್ರೆ ಕೈಲಿತಟ್ಟಿಯೋ ಒಣಗುಲೆ ಮಡುಗಿತ್ತು. ಚಕ್ಕುಲಿ ಮುಟ್ಟಿಲಿ ಎಂತ ಚಕ್ಕುಲಿಯಾಂಗೆ ಮಾಡ್ಳೆ ಬತ್ತಿಲ್ಲೆ ಅದು. ಗಟ್ಟಿ ಇರ್ತಲ್ಲದಾ… ತುಂಡು ತುಂಡಾವುತ್ತು. ಎನಗೆ ಈ ಕೈ ಬೇನೆ ಇದಾ. ಆ ಮರದ ಚಕ್ಕುಲಿ ಮುಟ್ಟಿಲಿ ಒತ್ತುಲೆ ಬಾರೀ ಕಷ್ಟ ಆವುತ್ತು. ಅಲ್ಲ, ಅದರ ಮಾಡುದೇ ಅಪ್ರೂಪ. ಒಪ್ಪಣ್ಣನೋ ಮಣ್ಣ ಇತ್ಲಾಗಿ ಬಪ್ಪೋನಿದ್ದರೆ ಮಾಡ್ಳೆ ಹೆರಡುದು. ಅವನತ್ತರೆ ಮಾಡ್ಳೇಳ್ಳಕ್ಕನ್ನೆ.
ಹೀಂಗೆ ಬೇರೆ ಬೇರೆ ರೀತಿಯ ಸೆಂಡಗೆಗಳ ಮಾಡ್ಳಾವುತ್ತು. ಉಮ್ಮ ಈಗ ಕೊಡೆಯಾಲಲ್ಲಿ ಅದುದೇ ಸಿಕ್ಕುತ್ತಡ ಕ್ರಯಕ್ಕೆ. ಎಂತ ಆದರೂ ನಾವು ಮನೆಲೇ ಮಾಡಿದಾಂಗೆ ಆಗ ಅಲ್ಲದೋ…
sendagego baari layka iddu heli kanuttu. ajji helida hange igana makko peteli sikkudaranne timbadu. matte avu henge gatti ipppadu.
ಅಪ್ಪು ಸೆಂಡಗೆ ರುಚಿ ನೋಡ್ರೆ ಬಿಡ್ಳಿಲ್ಲೆ ಮತ್ತೆ ಅಜ್ಜಕಾನ ರಾಮನಾಂಗೆ…. ಅಬ್ಬೆ ಪರಂಚಿದ ಮತ್ತೆಯೇ ತಿಂಬದರ ನಿಲ್ಸುದು.
ಎಂತರ ಮಾಡುದು…ಪುರುಸೊತ್ತಿಲ್ಲೆ ಪುರುಸೊತ್ತಿಲ್ಲೆ ಹೇಳ್ಯೊಂಡು ಮಕ್ಕಳ ಆರೋಗ್ಯವನ್ನೇ ಹಾಳುಮಾಡ್ತವು….
ಅಪ್ಪಜ್ಜಿ.ಆದರೆ ಮಾಡುದಕ್ಕಿಂತ ನಿಂಗೊಳಂತ ದೊಡ್ಡವು ಮಾಡಿ ಮಡುಗಿದ್ದರ ತಿಂಬಾಗಳೇ ಹೆಚ್ಚು ಕುಶಿ ಅಪ್ಪದು.:-)
ಏ°… ಆರಿದು… ಎಲ್ಲಿಯೋ ಕಂಡಿದೆ. ನೆಂಪಾವುತ್ತಿಲ್ಲೆ…. ಅದೆಂತಪ್ಪ ಮಾಡ್ಳೆ ಉದಾಸನ ಆವುತ್ತೋ…
ಹುಂ..:-) ಅಜ್ಜಿಯ ಕೈಲಿ ಮಾಡ್ಶಿಗೊಂಡು ತಿಂದರೇ ಹೆಚ್ಚು ರುಚಿ.
ಅಜ್ಜಿಯ ಸೆಂಡಿಗೆ ಸುದ್ದಿ ಕೇಳಿ ಬಾಯಿಲಿ … ಆದ್ರೆ ಕರೆ ಬೈಂದಿಲ್ಲೆ ಹೇಳಿ ಬೇಜಾರಾತು.. ಒಪ್ಪಣ್ಣಂಗೆ ಬಂಡಾಡಿಗೆ ಹೋಗಿಪ್ಪಗ ಸೀದಾ ಅಟ್ಟೊಂಬಳಕ್ಕೆ ಹೋಗಿ ತಪ್ಪಲೆ ಹೇಳಿದ್ದೆ ಇಲ್ಲದ್ರೆ ಸಿಕ್ಕುತ್ತಿಲ್ಲೆ ಇದಾ ಏವಾಗ್ಲೂ ಮರೆವು ಇದಾ ಅಜ್ಜಿಗೆ.
ಮರವದಪ್ಪು…. ಆದರೆ ನೆಂಪು ಮಾಡಿ ಕೇಳಿರೆ ಕೊಡ್ತಿಲ್ಯೋ….
ಈ ಸಂಡಿಗೆ ತಯರಿಸುವ ವಿಧಾನ ಚನ್ನಗಿ ವಿವರಿಸಿದ್ದಿರಿ ಅಜ್ಜಿ.. ಆದರೆ ಇವತ್ತು ಇವುಗಳನ್ನ ತಯಾರಿಸಲು ಅನೇಕರಿಗೆ ಸಮಯವೇ ಇಲ್ಲದಾಗಿದೆ. ಇವತ್ತು ಎಲ್ಲವೂ Ready made ಜಗತ್ತು, ಹಾಗಾಗಿ ಇವುಗಳನ್ನು ಮಾಡುವ ಗೋಜಿಗೆ ಯಾರು ಹೋಗುತ್ತಿಲ್ಲ. ಆದರೆ ಅಜ್ಜಿ ಹೇಳಿದ ಹಾಗೆ ಮನೆಯಲ್ಲಿ ಮಾಡಿದ ರುಚಿಯೇ ಬೇರೆ.
ಕೊಡೆಯಾಲಲ್ಲಿರ್ತವಕ್ಕೆಲ್ಲ ಪುರುಸೊತ್ತಿಲ್ಲದ್ದ ಕಾರಣವೇ ಅಜ್ಯಕ್ಕೊ ಮಾಡಿ ಕಳುಸುದಲ್ದೊ… ಬೈಲಿನ ಆರೇ ಬಂದು ಕೇಳಿರೂ ಬಂಡಾಡಿ ಅಜ್ಜಿ ಇಲ್ಲೆ ಹೇಳಿ ಹೇಳ. ದಾರಾಳ ಮಾಡಿಕೊಡ್ಳಕ್ಕಪ್ಪ.