Oppanna.com

ರೂವಿ-ಮುಕ್ಕಾಲು-ಆಣೆ: ಪೈಶೆಲೆಕ್ಕ ಕಾಣೆ, ದೇವರಾಣೆ..!

ಬರದೋರು :   ಒಪ್ಪಣ್ಣ    on   18/11/2011    15 ಒಪ್ಪಂಗೊ

ಮೊನ್ನೆ ಕೊಳಚ್ಚಿಪ್ಪು ಭಾವನ ಮದುವೆ ಕಳಾತೋ – ಅದೇ ದಿನ ಕುಕ್ಕುಜೆಲಿ ಸಟ್ಟುಮುಡಿ.
ನವಗೆಲ್ಲ ಎರಡೆರಡರನ್ನೇ ಒಟ್ಟೊಟ್ಟಿಂಗೆ ಸುದರ್ಸಿಕ್ಕಲೆ ಎಡಿತ್ತಿಲ್ಲೆ, ಈ ಮಾಪ್ಳೆಗೊ ನಾಕರ ಹೇಂಗೆ ಸುದಾರುಸುತ್ತವಪ್ಪಾ – ಹೇಳಿ ಸುಭಗಣ್ಣ ಮೀಸೆಡೆಲಿ ನೆಗೆಮಾಡಿದ್ದು ಸತ್ಯ!
ಕೊಳಚ್ಚಿಪ್ಪು ಮದುವೆಗೆ ಬಂದ ಅಡ್ಕತ್ತಿಮಾರುಮಾವ, ಸುರುವಾಣ ಹಂತಿಲಿ ಕೂದು ಎರಡೇ ಹೋಳಿಗೆ ಸಾಕು ಹೇಳಿದ್ದೂ ಸತ್ಯ.
ಅವರ ಎದುರೇ ಕೂದ ಗುಣಾಜೆಮಾಣಿ ನಾಕೂವರೆ ಹೋಳಿಗೆ ತಿಂದದೂ ಸತ್ಯ.
ಆಚಕರೆಮಾಣಿ ಬಳುಸುತ್ತ ಲೆಕ್ಕಲ್ಲಿ ಅಡಿಗೆಕೋಣೆಲಿ ಪೋಡಿ ಅಗುದ್ದೂ ಸತ್ಯ!
ಅಜ್ಜಕಾನಬಾವ° ಬಳುಸುಲೆ ಹೆರಟಪ್ಪಗ ಪೋನು ಬಂದು ಹೋಳಿಗೆ ಕೆರಿಶಿ ತಪ್ಪಿದ್ದೂ ಸತ್ಯ.
ಪುತ್ತೂರುಬಾವ° ಪಟ ತೆಗವಲೆ ಹೆರಟು ಮೂರ್ತಕ್ಕಪ್ಪಗ ಬೆಟ್ರಿ ಕಾಲಿ ಆದ್ದೂ ಸತ್ಯ!
– ಮೇಗೆ ಹೇಳಿದ್ದೆಲ್ಲವೂ ಸತ್ಯ, ಸತ್ಯ ಸತ್ಯ; ರುಪಾಯಿಗೆ ಹದಿನಾರಾಣೆ ಸತ್ಯ!


ಅದೇ ಮದುವೆಲಿ ಒಂದು ಕರೇಲಿ ಕೂದುಗೊಂಡು ನೆಕ್ರಾಜೆ ಅಪ್ಪಚ್ಚಿಯೂ – ಚೂರಿಬೈಲು ಡಾಗುಟ್ರೂ ಮಾತಾಡಿಗೊಂಡು ಇತ್ತಿದ್ದವು.
ಅವಕ್ಕೆ ಮಾತಾಡೇಕಾರೆ – ಇಬ್ರಿಂಗೂ ಹೊಂದುತ್ತ ವಿಷಯ ಹೇಳಿರೆ – ಕೃಷಿಯುದೇ ಅಪ್ಪು!
ಅಡಕ್ಕಗೆ ಒಳ್ಳೆತ ಕ್ರಯ ಇಪ್ಪ ಸಂಗತಿ, ಗೆಣಮೆಣಸಿಂಗೆ ರೋಗ ಬಂದ ಸಂಗತಿ, ರಬ್ಬರಿಂಗೆ ರೇಟು ಇಳುದ ಸಂಗತಿ – ಎಲ್ಲವುದೇ.
ಈ ಸರ್ತಿ ಅಡಕ್ಕಗೆ ರೋಗ ಹೇದರೆ ವಿಪರೀತ. ಕಿಲೆ ಕಾಲಿಕಾಲಿ ನೇಲ್ತು – ಹೆಚ್ಚಿನ ತೋಟಂಗಳಲ್ಲಿ, ಪಾಪ!
ಚೆನ್ನೈಬಾವ° ಆಗಿದ್ದರೆ ‘ಬಪ್ಪೊರಿಶತೊಟ್ಟುಮುರುದು ಮೇಣ ನಕ್ಕುತ್ಸೋ’ ಹೇದು ಬೇಜಾರ ಮಾಡಿಗೊಳ್ತಿತವು.
ನೆಕ್ರಾಜೆ ಅಪ್ಪಚ್ಚಿ ಅದೇ ಆರ್ತಲ್ಲಿ ಡಾಗುಟ್ರುಬಾವನ ಹತ್ರೆ ಹೇಳಿದವು ’ಹೀಂಗೇ ಅಡಕ್ಕೆ ಕಾಲಿ ಆದರೆ ಬಪ್ಪೊರಿಶ ಮುಕ್ಕಾಲಿಂಗೆ ತಿಕಾಣಿ ಇರ’ ಹೇಳಿಗೊಂಡು.
ಡಾಗುಟ್ರುಬಾವ° ಅಪ್ಪಪ್ಪು ಹೇಳಿ ಬೇಜಾರ ತೋರುಸಿದವು.

ಕೊಳಚ್ಚಿಪ್ಪುಬಾವನ ಮದುವೆಗೆ ಮಾಷ್ಟ್ರುಮಾವನ ಮನೆಂದ ಎಲ್ಲೋರುದೇ ಬಯಿಂದವು; ಅಮೇರಿಕಲ್ಲಿಪ್ಪ ಅವರ ಮಗನ ಬಿಟ್ಟು.
ಮದುವೆಗೆ ಒಂದು ಗಳಿಗೆ ಬಂದಿಕ್ಕಲಾವುತಿತು, ಅಪ್ಪೋ!
ಅಮೇರಿಕಂದ ಹೋಗಿಬಂದು ಮಾಡುಸ್ಸು ಸುಲಬವೋ – ಅದೊಂದು ಮದುವೆತೆಗದಷ್ಟೇ ಕರ್ಚು ಬೀಳುಗು – ಹೇಳಿದವು ಗಣೇಶಮಾವ°.
ಅಪ್ಪು, ಈ ವಿಮಾನಕ್ಕೆ ಕೊಡೆಡದೋ, ಅವು ಹೇಳಿದಷ್ಟು. ಎಷ್ಟೋ – ಉಮ್ಮಪ್ಪ!
ವಿಮಾನ ಮಾಂತ್ರ ಅಲ್ಲ; ಅದು ತಂದು ಬೆಂಗುಳೂರಿಲಿ ಬಿಡುದು, ಅಲ್ಲಿಂದ ಬಸ್ಸು ಹತ್ತಿಗೊಂಡು ಊರಿಂಗೆ ಬರೇಕು!
ಒಟ್ಟಾಗಿ – ಸುಮಾರು ಪೈಶೆ ಮುಗಿಗು, ಅಪ್ಪೋಲ್ಲದೋ!
ಅದೆಲ್ಲ ಇರಳಿ.
~

ಓ, ಆಣೆ-ಮುಕ್ಕಾಲು-ಪೈಶೆ ಹೇಳಿರೆ ಈಗೀಗ ಆರಿಂಗೆ ಅರಡಿಗು ಬೇಕೇ!
ಮದಲಾಣೋರಿಂಗೆ ಅದೆಲ್ಲ ಚಾಲ್ತಿ ಮಾಡಿ ಅಭ್ಯಾಸ ಇದ್ದು ಹೇಳುವೊ, ಈಗ ಹಾಂಗಿರ್ತದರ ಕಂಡೂ ಗೊಂತಿಲ್ಲೆ ಹೆಚ್ಚಿನೋರಿಂಗೆ. ಅದೆಲ್ಲ ಹಳಬ್ಬರ ಲೆಕ್ಕಾಚಾರ.
ಹಳಬ್ಬರು – ಹೇದರೆ ಶಂಬಜ್ಜನಷ್ಟೂ ಹಳಬ್ಬರಾಗಿರೇಕು ಹೇಳಿ ಇಲ್ಲೆ; ಮಾಷ್ಟ್ರುಮಾವ°, ಅಡ್ಕತ್ತಿಮಾರುಮಾವನ ಜವ್ವನ ಒರೆಂಗೂ ಇದ್ದತ್ತು ಈ ಆಣೆ – ಮುಕ್ಕಾಲುಗೊ.
ಮತ್ತೆ ಈ ಹೊಸ ನಮುನೆ ಪೈಶೆಲೆಕ್ಕ ಬಂದು, ಹಳತ್ತು ಬಿಟ್ಟೇ ಹೋತು.
ಹಳಬ್ಬರಿಂಗೆ ಹತ್ತರೆ ಆಗಿದ್ದು, ಕಾಲ ಕ್ರಮೇಣ ಬಿಟ್ಟು ಹೋವುತ್ತದರ ನಾವು ಬೈಲಿಲಿ ಹುಡ್ಕಿಹುಡ್ಕಿ ಮಾತಾಡಿಗೊಂಬದು, ಅಲ್ದೋ!
ಹಾಂಗಪ್ಪಗ ಈ ಆಣೆ-ಪೈಶೆ ಲೆಕ್ಕವನ್ನೂ ಮಾತಾಡಿರೆ ಹೇಂಗಕ್ಕು? ಆಗದೋ?! 😉
~
ಎಲ್ಲ ತರವಾಡುಮನೆಗಳ ಹಾಂಗೇ – ರಂಗಮಾವನಲ್ಲಿ ಒರಿಶಂಪ್ರತಿ ವಿಷುಕಣಿ ಆಚರಣೆ ಇದ್ದು.
ಪ್ರತಿ ವಿಷುವಿಂಗೂ ಒಂದರಿ ಕಣಿಮಡಗುತ್ಸು ಕ್ರಮ. ವಿಶೇಷ ಹಣ್ಣುಹಂಪಲುಗೊ, ತರಕಾರಿ ಫಲವಸ್ತುಗೊ, ಮಂಗಳ ದ್ರವ್ಯಂಗೊ, ಚಿನ್ನಕಾಜಿಗೊ – ಇದೆಲ್ಲ ಮಡಗುದು ತಲೆಮಾರಿಂದ ನೆಡಕ್ಕೊಂಡು ಬಂದದು.
ಇದೆಲ್ಲದರ ಒಟ್ಟಿಂಗೇ, ಬೆಳೀ ಪೈಸೆಕರಡಿಗೆಂದ ವಿಶೇಷ ಪಾವಲಿಗಳ ತೆಗದು ಹರಗಲಿದ್ದು, ವಿಷುಕಣಿಯ ನೆಡೂಕಂಗೆ.
ಆ ಕರಡಿಗೆ ಆ ದಿನ ಮಾಂತ್ರ ತೆಗವದು; ವಿಷುಕಣಿಲಿ ಹರಗುದು, ಇರುಳಪ್ಪಗ ಒಪಾಸು ತುಂಬುಸಿ ಹಾಂಗೇ ಒಳ ಮಡಗುದು; ಈ ಒರಿಶದ ನಾಕು ಪಾವಲಿ ಸೇರುಸಿಗೊಂಡು.
ಒಂದು ಲೆಕ್ಕಲ್ಲಿ ಹೇಳ್ತರೆ, ಅದು ರಂಗಮಾವನ ಪಾವೆಲಿ ಸಂಗ್ರಹ- ಹೇಳಿಯೂ ಹೇಳುಲಕ್ಕು. ಎಷ್ಟೋ ಒರಿಶಂದ ಅದು ನೆಡಕ್ಕೊಂಡು ಬಯಿಂದು; ಶಂಬಜ್ಜನ ಕಾಲಂದಲೂ!
~

ಹಾಲು ಮುಂಡಿಗೆಂಡೆ ಮೊನ್ನೆ ಒಕ್ಕಿದ್ದರಲ್ಲಿ ದೊಡ್ಡ ಗೆಂಡೆ ಇದ್ದತ್ತು ಭಾವ.
ಹಾಂಗೆ, ಪಾತಿಅತ್ತೆಗೆ ಕೊಟ್ಟು ಬಪ್ಪೊ° ಹೇದು ತರವಾಡುಮನೆಗೆ ಹೋಗಿತ್ತಿದ್ದೆ.
ಅಪುರೂಪದ ಜೆನ, ಬೇಂಕಿನ ಪ್ರಸಾದಣ್ಣ ಜೆಗಿಲಿಲಿ ಚಕ್ಕನ ಕಟ್ಟಿ ಕೂದ್ದದು ಕಂಡತ್ತು, ಕರೆಲಿ ರಂಗಮಾವಂದೇ ಇದ್ದಿದ್ದವು.
ಮುಂಡಿ ಮೆಟ್ಳಬುಡಲ್ಲಿ ಮಡಗಿದ್ದೇ, ಸೀತ ಒಳ ಹೋದೆ. ಹೊಸಾ ಹತ್ರುಪಾಯಿ ಪಾವಲಿ ನಾಕು ಸಿಕ್ಕಿದ್ದತ್ತು. ಹಾಂಗೆ, ಒಂದರ ರಂಗಮಾವಂಗೆ ತಂದು ಕೊಡ್ಳೆ ಬಂದದು – ಹೇದ.
ಆ ಹೊಸಾ ಪಾವೆಲಿಯ ಮನೆಯೋರೆಲ್ಲ ನೋಡಿ ಆದ ಮತ್ತೆ, ರಂಗಮಾವ° ಅದರ ಈ ’ಅಪುರೂಪದ ಪೈಶೆ’ ಕರಡಿಗೆ ಒಳಂಗೆ ತುಂಬುಸಲೆ ಹೇದು ಹೆರ ತೆಗದಿತ್ತಿದ್ದವು.
ಹಾಂಗೆ, ಈ ಸರ್ತಿ ವಿಷು ಮಾಂತ್ರ ಅಲ್ಲದ್ದೆ, ಮೊನ್ನೆ ಒಂದರಿ ಕರಡಿಗೆ ಬೆಣಚ್ಚು ಕಂಡತ್ತು!
ಬೇಂಕಿನ ಪ್ರಸಾದಂಗೆ ಹೊಸ ಪಾವೆಲಿಗಳ ರಾಶಿರಾಶಿ ನೋಡಿ ಗೊಂತಿಕ್ಕು, ಆದರೆ ಹಳೆ ಪಾವೆಲಿಗಳನ್ನೋ?!
ಒರಿಶಕ್ಕೂ ಆ ಪಾವೆಲಿಗಳ ನೋಡ್ತದು ವಿಷುಕಣಿಲಿ ಅಲ್ಲದೋ – ದೂರಲ್ಲಿ ಕಣಿಲಿ ಇಪ್ಪದರ ನೋಡಿದ ಹಾಂಗೆ ಆವುತ್ತಷ್ಟೆ. ಇದು, ಈಗ ಒಂದೊಂದನ್ನೇ ಕೈಲಿ ಹಿಡ್ಕೊಂಡೇ ನೋಡ್ಳಾವುತ್ತಿದಾ.
ಹಾಂಗೆ, ಕೂಲಂಕಷ ನೋಡ್ಳೆ ಹೇಳಿಗೊಂಡೇ, ರಂಗಮಾವಂದೇ ಬೇಂಕಿನ ಪ್ರಸಾದಣ್ಣಂದೇ ಜೆಗಿಲಿಲಿ ಕೂದುಗೊಂಡು, ಪಾವೆಲಿಗಳ ಒಂದು ಕೆರಿಶಿಲಿ ಹರಗಿತ್ತಿದ್ದವು.
~

ಹಳೇಕಾಲದ ಕೆಲಾವು ಪಾವಲಿಗೊ

ಈಗಾಣ ನಮುನೆ ಕಬ್ಬಿಣದ ತುಂಡುಗೊ ಅಲ್ಲ, ಹಳೆಕಾಲದ ಪಾವೆಲಿಗೊ ಹೇಳಿರೆ.
ಚೆಂಬಿನ ಬಿಲ್ಲೆಗೊ! ಹಿತ್ತಾಳಿ, ಕಂಚಿನ ತುಂಡುಗೊ! ಬೆಳ್ಳಿಯ ಪಾವೆಲಿಗೊ! ಹು!!
ಚೆಂಬಿನ ಪಾವೆಲಿಗೊ ಕೆಲವು ಹಳತ್ತಾದ ಲೆಕ್ಕಲ್ಲಿ ರಜಾ ಕಪ್ಪಟೆ ಆಗಿ, ಕರೆಕರೆಂಗೆ ಮೈಲುತೂತು ಉದ್ದಿದ ಹಾಂಗೆ ಕಾಣ್ತು. ಆದರೆ ಒಳುದ್ದಕ್ಕೆ ಎಂತದೂ ಆಯಿದಿಲ್ಲೆ!
ರಂಗಮಾವ° ಆ ಪಾವೆಲಿಗಳ ಒಂದೊಂದಾಗಿ ತೋರುಸಿಗೊಂಡು, ಅದು ಯೇವದು, ಎಲ್ಲಿಯಾಣದ್ದು, ಎಂತ ಕತೆ, ಅದರ ಬೆಲೆ ಎಷ್ಟಿತ್ತು – ಹೇಳ್ತದರ ಒಂದೊಂದಾಗಿ ವಿವರಣೆಲಿ ಹೇಳಿಗೊಂಡು ಹೋದವು.
ಬೇಂಕಿನ ಪ್ರಸಾದಣ್ಣ ಇದ್ದ ಕಾರಣವೇ ರಂಗಮಾವ° ಹಳಬ್ಬರ ಲೆಕ್ಕಾಚಾರ ಸುರುಮಾಡಿದ್ದು ಹೇಳ್ತದು ಗೊಂತಾಗಿದ್ದತ್ತು ಒಪ್ಪಣ್ಣಂಗೆ.
~
ಈ ಎಲ್ಲ ವಿವರಣೆ ಮುಗುದ ಮತ್ತೆ, ಹಳೇ ಕಾಲದ ಪೈಶೆ ಲೆಕ್ಕಾಚಾರದ ಬಗ್ಗೆಯೇ ಹೇಳಿದವು ರಂಗಮಾವ°.
ಹೇದರೆ, ಈಗಾಣ ರುಪಾಯಿ-ಪೈಸೆ ಲೆಕ್ಕಾಚಾರ ಬತ್ತ ಮದಲು ಹೇಂಗಿತ್ತು – ಹೇಳ್ತರ ವಿವರುಸಿಗೊಂಡು ಹೋದವು.
ಈಗಾಣದ್ದಲ್ಲ, ಹಳೆಕಾಲದ್ದು. ಒಂದೊಂದು ಮೌಲ್ಯದ ಬೆಲೆ ಎಷ್ಟಿದ್ದತ್ತು – ಹೇಳ್ತ ಅಂದಾಜು ವಿವರವುದೇ ಸೇರುಸಿಗೊಂಡು ಚೆಂದಕೆ ಹೇಳಿಗೊಂಡು ಹೋದವು.
ಒಂದೊಂದರ ಗ್ರೇಶುವಗಳೂ – ಯಬ್ಬಾ, ಮದಲು ಈ ಪೈಶೆ ಇಷ್ಟೆಲ್ಲ ಆಟ ಆಡಿದ್ದಲ್ಲದೋ – ಹೇಳಿ ಕಾಂಗು ನವಗೆ.
ರಂಗಮಾವ° ಹೇಳಿದ ಲೆಕ್ಕಾಚಾರ ಪೂರ್ತಿ ನೆಂಪಿಲ್ಲದ್ದರೂ – ಅರ್ದಂಬರ್ದ ನೆಂಪಿದ್ದು ಒಪ್ಪಣ್ಣಂಗೆ.
ಹಾಂಗೆ, ಈ ವಾರಕ್ಕೆ ಅದನ್ನೇ ಶುದ್ದಿ ಮಾತಾಡಿರೆ ಹೇಂಗೆ?! ನೆಂಪಾದಷ್ಟು ಹೇಳ್ತೆ, ಮತ್ತೆ – ನಿಂಗೊ ನೆಂಪುಮಾಡಿಕ್ಕಿ. ಆತೋ? 🙂
~
ರುಪಾಯಿ:
ಧಾನ್ಯಂಗಳನ್ನೇ ಮೌಲ್ಯ ಹಿಡುದು ಊರೊಳ ಒಯಿವಾಟು ಮಾಡಿರೂ, ದೇಶಾಂತರ ವ್ಯಾಪಾರ ಮಾಡುವಗ ನಿರ್ದಿಷ್ಟ ಮೌಲ್ಯ ಬೇಕಾಗಿಂಡಿದ್ದತ್ತು.
ಹಾಂಗಾಗಿ, ಅಮೂಲ್ಯ ಲೋಹಂಗಳ – ಚಿನ್ನ ಅತವಾ ಬೆಳ್ಳಿ – ತಟ್ಟಿ, ಅದರ ಮೇಗೆ ಆಯಾ ರಾಜನ ಮುದ್ರೆಯ ಟಂಕುಸಿ, ಇನ್ನೊಂದು ಹೊಡೆಲಿ ದೇವರ ಚಿತ್ರವನ್ನೂ ಒತ್ತಿ – “ರುಪಾಯಿ” ಹೇಳಿಗೊಂಡು ಇತ್ತಿದ್ದವು.
ಸಂಸ್ಕೃತಲ್ಲಿ ರೂಪ್ಯಕಮ್ – ಹೇಳಿರೆ ರೂಪ ಕೊಟ್ಟಂತದ್ದು – ಹೇಳ್ತ ಅರ್ತ ಅಡ.
ವಿಶೇಷವಾದ ರೂಪವ ಹೊಂದಿದ ಈ ಲೋಹದ ಬಿಲ್ಲೆಗೆ ರೂಪ್ಯಕಂ – ಹೇಳ್ತ ಹೆಸರು ಆಗಿ, ಕಾಲಕ್ರಮೇಣ ಅದುವೇ ಪರಿಭಾಷೆಲಿ ’ರೂಪ್ಯ’, ರುಪಿಯಾ, ರುಪೀ, ರುಪಾಯಿ – ಹೇಳ್ತ ಶೆಬ್ದ ಆಗಿ ಬಯಿಂದು – ಹೇಳ್ತದು ರಂಗಮಾವನ ಅಭಿಪ್ರಾಯ.
ಆಯಿಪ್ಪಲೂ ಸಾಕು, ಇತಿಹಾಸದ ಯೇವದೋ ನಾಗರೀಕತೆ ಕಾಲಲ್ಲಿ ಅದು ಸೇರಿಗೊಂಡದು, ನಮ್ಮೊಳಂಗೆ.
ಅಂತೂ- ಪ್ರಾಚೀನ ಕಾಲಂದಲೇ ರುಪಾಯಿ ಇದ್ದು ಭಾರತಲ್ಲಿ.
ಇದೇ ಲೆಕ್ಕಾಚಾರವ ಬ್ರಿಟಿಷರುದೇ ಉಪಯೋಗುಸಿಗೊಂಡವು, ಮುಂದುವರುಸಿಗೊಂಡವು.
(ನಮ್ಮ ಪೈಶೆಲೆಕ್ಕಕ್ಕೆ ತೀರಾ ಪ್ರಾಚೀನಕ್ಕೆ ಹೋಪದು ಬೇಡ, ನಮ್ಮ ಸ್ವಾತಂತ್ರ್ಯ ಸಮೆಯ ನೋಡುವೊ, ಆಗದೋ?)
ನೂರೊರಿಶ ಮದಲಿಂಗೆ ಒರೆಂಗೂ ಬೆಳ್ಳಿಯ ಪಾವೆಲಿಯೇ ಇದ್ದದಡ ನಮ್ಮ ಸಮಾಜಲ್ಲಿ.
ಆದರೆ, ರುಪಾಯಿಯ ಬಳಕೆ ತುಂಬಾ ಏರಿದ ಹಾಂಗೆ, ಚಿನ್ನ, ಬೆಳ್ಳಿಗಳ ಲೋಹದ ಅಗತ್ಯತೆಯೂ ಏರಿತ್ತಾಡ. ಕಾಲಕ್ರಮೇಣ – ಬೆಳ್ಳಿಯ ಕ್ರಯವೇ ಪಾವೆಲಿಯ ಒಂದು ರುಪಾಯಿಂದ ಹೆಚ್ಚಾತು!
ಹಾ! ಇನ್ನೆಂತರ ಮಾಡ್ತದು. ಮತ್ತೆ ಬೆಳ್ಳಿಯ ಬಿಟ್ಟು, ಬೇರೆ ಎಡಿಗಪ್ಪ ನಮುನೆಯ ಪಾವೆಲಿಗಳ ಮಾಡ್ಳೆ ಸುರುಮಾಡಿದವಡ.
ಅಷ್ಟರ ಒರೆಂಗೂ, ರುಪಾಯಿ ಹೇದರೆ ಬೆಳ್ಳಿಪಾವಲಿಯೇ ಇದ್ದತ್ತು – ಹೇಳುಗು ರಂಗಮಾವ°.
ಎಷ್ಟೋ ತಲೆಮಾರು ಮದಲೆ, ಚಿನ್ನದ ರುಪಾಯಿ ಬೆಳ್ಳಿಗೆ ಇಳಿವಗಳೂ ಇದೇ ನಮುನೆ ಬೇಡಿಕೆ- ಏರಿಕೆ ಬಂದಿಕ್ಕೂದು ಬೇಂಕಿನ ಪ್ರಸಾದಣ್ಣನ ಅಭಿಪ್ರಾಯ.
ಉಮ್ಮ, ನವಗದೆಲ್ಲ ಅರಡಿಯ.

ಅದೇನೇ ಇರಳಿ, ಸಾವಿರದ ಒಂಭೈನೂರ ನಲುವತ್ತೈದಕ್ಕೆ, ಹದ್ನೈದು ರುಪಾಯಿ ಕೊಟ್ಟು, ಕೊಡೆಯಾಲಂದ ಪಂಜಕ್ಕೆ ಜೀಪು ಮಾಡಿಗೊಂಡು ಬಯಿಂದವಡ ಆರೋ! – ಹಾಂಗೆ ರಂಗಮಾವ° ರುಪಾಯಿಯ ಬೆಲೆ ದೊಡ್ಡಕಣ್ಣು ಮಾಡಿ ಹೇಳಿದವು.
ಒಂದು ರುಪಾಯಿ ಕೊಟ್ರೆ ಅಂಬಗಾಣ ಶಂಕರವಿಟಲ ಬಸ್ಸಿಲಿ ಪುತ್ತೂರಿಂದ ಸುಬ್ರಮಣ್ಯಕ್ಕೆ ಎತ್ತುಗು! ಈಗಾಣ ರುಪಾಯಿ ಮುನ್ನೂರು ಕೊಟ್ಟ ಹಾಂಗೆ – ಹೇಳಿದವು ನೆಗೆಮಾಡಿಗೊಂಡು.

ಆಣೆ:
ಎಷ್ಟಾದರೂ ರುಪಾಯಿ ರುಪಾಯಿಯೇ.
ಅಷ್ಟು ದೊಡ್ಡ ಮೊತ್ತ ಜನಸಾಮಾನ್ಯರಿಂಗೆ ಖಂಡಿತಾ ಬೇಕಾಗ.
ಅದರಿಂದ ಸಣ್ಣ ಮೌಲ್ಯದ ಒಯಿವಾಟು ಮಾಂತ್ರ ಇಪ್ಪವಕ್ಕೆ ರುಪಾಯಿ ಎಂತ್ಸಕೆ, ಅಲ್ಲದೋ?!
ಸ್ವಾತಂತ್ರ ಸಮೆಯಕ್ಕಪ್ಪಗ ಅರ್ದ ರುಪಾಯಿ, ಕಾಲುರುಪಾಯಿ – ಹೇದು ಕೆಲವು ಪಾವೆಲಿಗೊ ಬಂದುಗೊಂಡಿದ್ದರೂ, ಸಣ್ಣ ಅಳತೆಗೆ ಬೇರೆಯೇ ಒಂದು ಹೆಸರಿದ್ದು.
ಅದೆಂತರ?!

ಒಂದು ರುಪಾಯಿಯ ಸರಿಯಾಗಿ ಹದಿನಾರು ತುಂಡು ಮಾಡಿ – ಒಂದು ತುಂಡಿಂಗೆ ಒಂದು “ಆಣೆ” ಹೇಳಿ ಹೆಸರು ಮಡಗಿದವು  ಮದಲಿಂಗೆ.
ಅಂಬಗ, ಒಂದು ಆಣೆ ಹೇದರೆ ಹದಿನಾರನೇ ಒಂದು ರುಪಾಯಿಯೂ; ನಾಲ್ಕು ಆಣೆಗೆ ಕಾಲು ರುಪಾಯಿಯೂ, ಎಂಟು ಆಣೆಗೆ ಅರ್ದ ರುಪಾಯಿಯೂ ಆಗಿ ಬಂತು.
ರಂಗಮಾವ° ಈಗಳೂ ನಾಕಾಣೆ ಪಾವಲಿ, ಎಂಟಾಣೆ ಪಾವಲಿ ಹೇಳಿಯೇ ಹೇಳುದು – ಈಗಾಣ ಕಾಲು, ಅರ್ದ ರುಪಾಯಿ ಕೋಯಿನುಗೊಕ್ಕೆ!
(ನಾಕಾಣೆ ಮೊನ್ನೆಂದ ನಾಕಾಣೆ ಆಯಿದಡ, ಎಂಟಾಣೆ ಇನ್ನು ಎಷ್ಟು ಸಮೆಯ ಅಂಟಿಗೊಂಡಿರ್ತೋ!)

ಅಂಬಗ, ಈ ಪ್ರಮಾಣ ಮಾಡುವಗ ಹೇಳ್ತವಲ್ಲದೋ – ದೇವರಾಣೆ ಹೇಳಿಗೊಂಡು, ಅದುದೇ ಇದೇ ಆಣೆಯೋದು ಕೇಳಿದೆ.
ಆಯಿಪ್ಪಲೂ ಸಾಕು, ದೇವರಿಂಗೆ ಹೇದು ಒಂದಾಣೆ ತಪ್ಪುಕಾಣಿಕೆ ಮಡಗಿ, ಮತ್ತೆ ಹರಕ್ಕೆ ಹೇಳಿಗೊಂಡು ಇತ್ತಿದ್ದವೋ ಏನೋ – ಹೇಳಿದವು ರಂಗಮಾವ°.
ರುಪಾಯಿಗೆ ಹದಿನಾರಾಣೆ – ಹೇಳಿರೆ ಈಗಾಣ ಕಾಲಲ್ಲಿ ನೂರಕ್ಕೆ ನೂರು – ಹೇಳಿದ ಅದೇ ಭಾವಾರ್ಥ.
ಅದು ಆಣೆಯ ಲೆಕ್ಕಾಚಾರ.

ರೂವಿ: (/ ಪೈಶೆ / ಕಾಸು)
ರೂವಿ ಹೇಳಿತ್ತುಕಂಡ್ರೆ ಮದಲಾಣ ವೆವಸ್ತೆಲಿ ಅತ್ಯಂತ ಸಣ್ಣ ಮೌಲ್ಯ.
ಸಾಮಾನ್ಯ ಜೆನಜೀವನಕ್ಕೆ ಆಣೆಯುದೇ ದೊಡ್ಡ ಮೊತ್ತ ಆಗಿದ್ದ ಸಮೆಯಲ್ಲಿ, ಅದರಿಂದಲೂ ಸಣ್ಣ ಈ ಮೌಲ್ಯ ಬಳಕೆಲಿ ಇದ್ದತ್ತಾಡ.

ಒಂದು ಆಣೆಯ ಹನ್ನೆರಡು ತುಂಡು ಮಾಡಿರೆ, ಒಂದು ತುಂಡಿಂಗೆ ರೂವಿ ಹೇಳ್ತ ಹೆಸರು.
ಒಂದೊಂದು ಊರಿಲಿ ಇದಕ್ಕೆ ಒಂದೊಂದು ಉಪಹೆಸರುದೇ ಇದ್ದತ್ತಾಡ. ಗಟ್ಟದ ಮೇಗೆ ಇದನ್ನೇ ಕಾಸು ಹೇಳಿರೆ, ನಮ್ಮೋರು ಇದರ ರೂವಿ ಹೇಳಿಗೊಂಡು ಇತ್ತಿದ್ದವಡ.
ಆಪೀಸು ಲೆಕ್ಕಾಚಾರಲ್ಲಿ, ಬರವಣಿಗೆಲಿ ಇದರ ’ಪೈಸೆ’ ಹೇಳಿಗೊಂಡು ಇದ್ದಿದ್ದವಡ.
ಅಪ್ಪಲೆ ಈಗಾಣದ್ದುದೇ ಪೈಸೆಯೇ ಆದರೂ, ಮದಲಿಂಗೆ ಇದ್ದ ಪೈಸೆಯ ವರ್ಗೀಕರಣ ಬೇರೆಯೇ ನಮುನೆ. ಹಾಂಗಾಗಿ, ಈಗಾಣ ಪೈಸೆಯೂ, ಈ ರೂವಿ ಪೈಸೆಯೂ ಬೇರೆಬೇರೆ ಹೇಳ್ತದು ರಂಗಮಾವನ ಅಭಿಪ್ರಾಯ.

ಪುಸ್ತಕದ್ದೋ, ಒಸ್ತ್ರದ್ದೋ, ಎಂತಾರು ಕ್ರಯ ಬರೆತ್ತರೆ ಮದಲಿಂಗೆ ರೂ-ಆ-ಪೈ ಹೇಳಿ ಮೂರು ಕಲಮು ಇದ್ದತ್ತಾಡ.
ರುಪಾಯಿ, ಆಣೆ, ಪೈಶೆ ಹೇಳಿ ಮೂರು ವಿಭಾಗ.
ರುಪಾಯಿ, ಹದಿನಾರನೇ ಒಂದು ರುಪಾಯಿ – ಆಣೆ, ಹನ್ನೆರಡನೇ ಒಂದು ಆಣೆ – ಪೈಶೆ.
ಒಂದು ರುಪಾಯಿಗೆ ಹದಿನಾರು ಆಣೆ. ಒಂದು ಆಣೆಗೆ ಹನ್ನೆರಡು ರೂವಿ (ಪೈಶೆ).
ಒಂದು ರುಪಾಯಿಗೆ ನೂರಾತೊಂಬತ್ತ ಎರಡು ರೂವಿ!!
– ಹೀಂಗೆ ಮದಲಾಣೋರ ಲೆಕ್ಕಾಚಾರ.
~

ಮೌಲ್ಯಂಗಳ ಮೂಲ ವರ್ಗೀಕರಣ ಹೀಂಗೇ ಇರಳಿ, ಆದರೆ ಚಾಲ್ತಿಗೆ, ದಿನಬಳಕೆಗೆ ಬೇರೆ ಮುಖಬೆಲೆಯ ಪಾವಲಿಗಳೂ ಬಳಕೆ ಇದ್ದತ್ತಾಡ.
ಅದರನ್ನೂ ರಂಗಮಾವ° ವಿವರುಸಿಗೊಂಡು ಹೋದವು.

ದುಡ್ಡು (ದುಗ್ಗಾಣೆ / ವೀಸೆ):
ಕಾಸು ಹೇದರೆ ಎಷ್ಟು ಹೇದು ನವಗೆ ಈಗ ಗೊಂತಾತು, ಅಪ್ಪೋ! ಒಂದು ರುಪಾಯಿಯ ನೂರಾ ತೊಂಭತ್ತ ಎರಡನೇ ಭಾಗಕ್ಕೆ ಕಾಸು ಹೇಳ್ತದು.
ಈಗ, ಕಾಸಿಂದ ದೊಡ್ಡದು, ಆಣೆಂದ ಸಣ್ಣದು – ಈ ನಮುನೆಯ ಒಂದು ಬಳಕೆ ಇದ್ದತ್ತಾಡ.
ಅದುವೇ ’ದುಡ್ಡು’.
ನಾಲ್ಕು ರೂವಿ ಸೇರಿರೆ ಒಂದು ದುಡ್ಡು ಅಪ್ಪದು. ಇದಕ್ಕೇ ದುಗ್ಗಾಣೆ, ಅತವಾ ವೀಸೆ ಹೇಳಿಯೂ ಹೇಳ್ತವು.
ನಾಕು ಕಾಸಿಂಗೆ ದುಡ್ಡು ಹೇಳುದು – ಹೇಳಿ ರಂಗಮಾವ ಮತ್ತೊಂದರಿ ವಿವರುಸುವಗ, ಹೊಸತ್ತೊಂದು ವಿಚಾರ ತಲಗೆ ಬಂದ ಹಾಂಗೆ ಆತು.
ಮದಲಿಂಗೆ ದುಡ್ಡು-ಕಾಸು ಹೇಳಿ ಗಟ್ಟದ ಮೇಗೆ ಹೇಳಿಗೊಂಡು ಇದ್ದದು ಎಂತ್ಸರ ಹೇಳಿ ಸ್ಪಷ್ಟ ಆತು!
ಅದಿರಳಿ.

ಮುಕ್ಕಾಲು:
ನಾಲ್ಕು ರೂವಿಗೆ ಒಂದು ದುಡ್ಡು ಆದರೂ, ಚಲಾವಣೆಲಿ ಬಳಕೆಗೆ ಹೆಚ್ಚು ಬಂದದು ಮುಕ್ಕಾಲು ದುಡ್ಡು!
ಅಪ್ಪು, ಇದರ ಹೆಸರೇ ಹೇಳ್ತ ಹಾಂಗೆ ಇದು ದುಡ್ಡಿನ ಮುಕ್ಕಾಲುವಾಶಿ. ಹೇಳಿತ್ತುಕಂಡ್ರೆ, ಮೂರು ರೂವಿ.
ಇದಕ್ಕೆ ಒಂದು ಪಾವಲಿ ಇದ್ದತ್ತಲ್ಲದೋ – ಅದಕ್ಕೂ ಮುಕ್ಕಾಲು ಹೇಳಿಯೇ ಹೆಸರು.
ನಾಲ್ಕು ಮುಕ್ಕಾಲು ಸೇರಿರೆ (ಹನ್ನೆರಡು ರೂವಿ) ಒಂದು ಆಣೆ ಆತು ಇದಾ. ಹಾಂಗಾಗಿ, ಮುಕ್ಕಾಲು ಹೇಳಿರೆ ಆಣೆಯ ಕಾಲ್ವಾಶಿಯೂ ಅಪ್ಪು.
~
ಅಂಬಗ ಮದಲಿಂಗೆ ಪಾವಲಿಗೊ ಇದ್ದದು ಯೇವದೆಲ್ಲ?
ರಂಗಮಾವನ ಸಂಗ್ರಹಲ್ಲಿ ನೋಡಿರೆ ಸರೀ ಅರಡಿಗು.
ರೂವಿ, ತಾರ ,ಮುಕ್ಕಾಲು, ಅರ್ದ ಆಣೆ, ಒಂದು ಆಣೆ, ಎರಡಾಣೆ, ಕಾಲು ರುಪಾಯಿ, ಅರ್ದ ರುಪಾಯಿ, ಒಂದು ರುಪಾಯಿ!
ಇಷ್ಟರದ್ದು ಪಾವಲಿ ಇದ್ದತ್ತು – ಒಂದೊಂದು ಕಾಲಲ್ಲಿ.

ಒಂದೊಂದನ್ನೇ ತೆಗದು ತೆಗದು ರಂಗಮಾವ° ತೋರುಸಿಗೊಂಡು ಹೋದವು: ಪಾವಲಿಗಳ ಹೇಳುವಗ, ಒಟ್ಟೊಟ್ಟಿಂಗೆ ಅದರ ’ಅಂದಾಜು ಮೌಲ್ಯವುದೇ’ ಹೇಳಿಗೊಂಡು ಹೋದವು.
ಎಲ್ಲಾ ಪಾವೆಲಿಲಿಯೂ ಎಡ್ವರ್ಡಂದೋ, ಜೋರ್ಜಂದೋ ಮಣ್ಣ ಮೋರೆ ಟಂಕುಸಿ, ಭಾರತದ ಚಕ್ರವರ್ತಿ (King Edward VI (ಅತವಾ George VI )- Emperor Of India) – ಹೇದು ಪ್ರಿಂಟು ಆಗಿಂಡು ಇದ್ದತ್ತು – ಹೇಳಿದವು.

~
ರೂವಿ: (ಪೈಶೆ / ಕಾಸು)

ಒಂದು ರೂವಿಗೆ ಹೇಳಿರೆ ಒಂದು ತಾಮ್ರದ ಸಣ್ಣ ಪಾವೆಲಿ.

ಸುಮಾರು ಸಮೆಯ ಕಳುದು ಬಂದ ಪೈಸೆಂದಲೂ ದೊಡ್ಡದು!
ತಾಮ್ರದ ಉರೂಟು ಪಾವೆಲಿಲಿ ಒಂದು ಹೇಳಿ ಬರದ್ದಲ್ಲದ್ದೆ, ಆಚ ಹೊಡೆಲಿ ಎಡ್ವರ್ಡು ರಾಜನ ಮೋರೆ ಟಂಕುಸಿ ಇದ್ದತ್ತು.
ಶಾಲೆಮಕ್ಕೊಗೆ ಬಳದ ಕಲ್ಲಿಲಿ ಬರವಲೆ ಒಂದು ಕಡ್ಡಿಗೆ ಬದಿಯೆಡ್ಕಲ್ಲಿ ಒಂದು ರೂವಿ ಇದ್ದತ್ತಾಡ, ಸ್ವಾತಂತ್ರದ ಮದಲು.
ಒಂದು ಪೈಸೆ ಎಷ್ಟಾದರೂ ಒಂದು ಪೈಸೆ ಅಲ್ಲದೋ – ಪೈಸೆಗೆ ಬೆಲೆಯೇ ಇಲ್ಲೆ ಹೇದು – 1940-50ರ ಆಸುಪಾಸಿಲೇ ಆಯಿದಾಡ!

ತಾರ:
ಎರಡು ರೂವಿಯ ಮೌಲ್ಯದ ಪಾವಲಿ ಇದು.
ಉರುಟಿಂದು, ರೂವಿಂದ ದೊಡ್ಡ, ಗಾತ್ರಲ್ಲಿಯೂ, ಅಗಲಲ್ಲಿಯೂ.
ಎರಡು -ಹೇಳಿ ಬರಕ್ಕೊಂಡು ಇದ್ದದಾಡ; ಎಡ್ವರ್ಡನ ಮೋರೆಯೂ ಇದ್ದತ್ತು.
ಈ ಪಾವೆಲಿ ಅಷ್ಟು ಪ್ರಚಲಿತಲ್ಲಿ ಇದ್ದದಲ್ಲ, ತುಂಬಾ ಮದಲು ಬಂದಿದ್ದದಡ, ರಜ್ಜ ಸಮೆಯಕ್ಕೆ.
ರಂಗಮಾವನ ಹತ್ತರೆ ಈ ಪಾವೆಲಿ ಇಲ್ಲೆ! ಎಲ್ಲಿಯಾರು ಸಿಕ್ಕುತ್ತೋ – ಹೇದು ಸುಮಾರು ಸಮೆಯ ಹುಡ್ಕಿದವಡ.

ಮುಕ್ಕಾಲು
ತಾಮ್ರದ ರಜ ದೊಡ್ಡ ಪಾವೆಲಿ. ಜನಸಾಮಾನ್ಯರ ಬಳಕೆಲಿ ಸುಲಾಬಲ್ಲಿ ಚಲಾವಣೆಲಿ ಇದ್ದಿದ್ದ ಪಾವೆಲಿ ಅಡ ಇದು.
ಹಾಂಗಾಗಿ, ಹಳಬ್ಬರಿಂಗೆ ಯೇವ ಪಾವಲಿ ಮರದರೂ ಈ ಪಾವಲಿ ಮರಗೋ!

ಸುರುವಿಂಗೆ ಒಂದು ದೊಡ್ಡ ಪಾವೆಲಿ ಬಂದುಗೊಂಡಿದ್ದರೂ, ಮತ್ತೆ ಒಂದು ಉರೂಟಿನ ತಾಮ್ರದ ಪಾವಲಿಯ ಮಧ್ಯೆ ಒಂದು ಒಟ್ಟೆ!
ತಾಮ್ರ ಒಳಿಶಲೆ ಬೇಕಾಗಿ ಆ ಒಟ್ಟೆ ತೆಗದ್ದೋ, ಅಲ್ಲ ಬೇಗ ಗುರ್ತಕ್ಕೆ ಆ ನಮುನೆ ಮಾಡಿದ್ದೋ – ದೇವರಿಂಗೇ ಗೊಂತು.
ಆದರೆ ಈ ಒಟ್ಟೆ ಇಪ್ಪ ಪಾವಲಿಗೆ ಒಟ್ಟೆ ಮುಕ್ಕಾಲು ಹೇಳಿಯೇ ದಿನಿಗೆಳಿಗೊಂಡು ಇದ್ದದು ಅಜ್ಜಂದ್ರು.
ಹಳೆಪಾವಲಿಗಳ ಬಳಕೆ ಪೂರ ನಿಂದ ಮೇಗುದೇ, ಗೇಸುಲೈಟಿನ ಓಚರು (ವಾಶರು) ಎಲ್ಲ ಆಗಿಂಡು ಈ ಒಟ್ಟೆಮುಕ್ಕಾಲು ಕೆಲಸಮಾಡಿಗೊಂಡು ಇದ್ದತ್ತು.
ಅದಿರಳಿ.

ಸಾವಿರದೊಂಬೈನೂರ ಐವತ್ತಕ್ಕೆ – ನೆಲಕಡ್ಳೆ ಒಂದು ಮುಷ್ಟಿ ಸಿಕ್ಕೇಕಾರೆ ಒಂದು ಮುಕ್ಕಾಲು ಕೊಡೆಕು – ಹೇಳಿದವು ನೆಗೆಮಾಡಿಗೊಂಡು.
ಮುಕ್ಕಾಲಿಂಗೆ ಮೂರು ಬೀಡಿ ಸಿಕ್ಕುಗು – ಒಂದು ದಿನಕ್ಕಪ್ಪಷ್ಟು!
ಅದಲ್ಲದ್ದೆ, ಬೇರ್ಸು ಬ್ರೇಂಡಿನ (Bears) ಸಿಗ್ರೇಟು ಹೇದು ಒಂದು ಬಂದುಗೊಂಡಿತ್ತಲ್ಲದೋ – ಅದಕ್ಕೆ ಒಂದಕ್ಕೆ ಒಂದು ಮುಕ್ಕಾಲಡ.
ಸಿಗ್ರೇಟು ಬಲುಗುತ್ತವ ತುಂಬ ದೊಡ್ಡೋನು ಹೇದು ಲೆಕ್ಕ!

ಅರ್ದ ಆಣೆ (ಎರಡು ಮುಕ್ಕಾಲು):
ಚೌಕಾಕಾರದ ನಿಕ್ಕೆಲಿನ ಪಾವಲಿ. ಅದರ್ಲಿ ಅರ್ದ ಆಣೆ ಹೇಳಿಗೊಂಡು ಇಂಗ್ಳೀಶಿಲಿ ಬರಕ್ಕೊಂಡು ಇಕ್ಕಾಡ.

ಸಾವಿರದ ಒಂಬೈನೂರ ಐವತ್ತಕ್ಕೆ ಬರ್ಕೆಲಿ ಸಿಗ್ರೇಟಿಂಗೆ ಎರಡು ಮುಕ್ಕಾಲು!
(ಇದೇ ಮುಖಬೆಲೆದು ಗಟ್ಟಿಮುಕ್ಕಾಲು ಹೇಳಿ ತಾಮ್ರದ್ದು ಪಾವೆಲಿ ಬಂದುಗೊಂಡಿತ್ತು)


ಒಂದು ಆಣೆ
ನಿಂಗೊ ಸಣ್ಣ ಇಪ್ಪಗ ಕೀಜಿಯ ಹತ್ತುಪೈಸೆ ಪಾವಲಿ ಕಂಡ ನೆಂಪಿದ್ದೋ, ದೊಡ್ಡದು ತುಕ್ಕುಡಿ ನಮುನೆ ಕರೆ ಇದ್ದದು – ಅದೇ ನಮುನೆಯ ನಿಕ್ಕೆಲಿನ ಪಾವಲಿ.

ಎರಡು ಜಾತಿ ಲೋಹಲ್ಲಿ ಇದ್ದತ್ತು ಹೇಳ್ತದು ರಂಗಮಾವನ ನೆಂಪು – ಒಂದು ಬೆಳೀದು, ಒಂದು ರಜಾ ಅರುಶಿನದ್ದು.
ಐವತ್ತರ ಆಸುಪಾಸಿಲಿ ಬದಿಯೆಡ್ಕ ಹೋಟ್ಳಿಲಿ ಕಾಪಿಯೋ, ಚಾಯವೋ ಮಣ್ಣ ಕುಡಿಯೇಕಾರೆ ಒಂದು ಆಣೆ.

ಎರಡು ಆಣೆ
ಕಾಂಬಲೆ ಅರ್ದ ಆಣೆಯ ಹಾಂಗೇ ಆಗಿದ್ದರೂ, ಗಾತ್ರಲ್ಲಿ ದೊಡ್ಡ.
ಇಂಗ್ಳೀಶಿಲಿ ಎರಡು ಆಣೆ ಹೇದು ಬರಕ್ಕೊಂಡು ಇದ್ದತ್ತು.
ಆ ಕಾಲಲ್ಲಿ ಬದಿಯೆಡ್ಕಲ್ಲಿ ಒಂದು ಕಾಪಿ-ತಿಂಡಿ – ಎರಡುದೇ ಒಟ್ಟಪ್ಪಗ ಎರಡಾಣೆ ಕೊಟ್ರೆ ಮುಗಾತು!

ಕಾಲು ರುಪಾಯಿ
ಇಪ್ಪತ್ತೈದು ಪೈಸೆ ಪಾವಲಿ ಇದ್ದತ್ತಲ್ಲದೋ – ಅದೇ ಭಾಶೆಯ ಪಾವಲಿ.
ಇಪ್ಪತ್ತೈದು ಹೇಳಿ ಬರವ ಬದಲು ಒಂದು ಭಾಗಿಸು ನಾಲ್ಕು – ಹೇದು ಬರಕ್ಕೊಂಡು ಇದ್ದತ್ತು. ಅಷ್ಟೇ ವಿತ್ಯಾಸ.

ನಾಲ್ಕು ಆಣೆಗೆ ಕಾಲು ರುಪಾಯಿ, ಆದರೆ ಒಂದು ಸೇರು ಅಕ್ಕಿಗೆ ಆರು ಆಣೆ ಇದ್ದತ್ತು – ಹೇಳ್ತದು ರಂಗಮಾವನ ಬಾಲ್ಯದ ನೆಂಪು.

ಅರ್ದ ರುಪಾಯಿ
ಐವತ್ತು ಪೈಸೆಯ ಪಾವಲಿಯ ಭಾಶೆಲಿ ಇದ್ದಿದ್ದ ಈ ಪಾವಲಿಯ ಮೇಗೆ ಒಂದು – ಭಾಗಿಸು – ಎರಡು ಹೇದು ಬರಕ್ಕೊಂಡು ಇದ್ದತ್ತು.
ಹಳೆಯ ಅರ್ದ ರುಪಾಯಿಯ ಮೌಲ್ಯದ ಈ ಪಾವೆಲಿ, ಅಂಬಗಾಣ ಎಂಟಾಣೆಗೆ ಸಮ.
ಇದರ ಎಂಟಾಣೆ ಪಾವಲಿ ಹೇಳಿಗೊಂಡೂ ಇತ್ತಿದ್ದವು.

ಆಳುಗೊ ಒಂದಿನ ಇಡೀ ಕೆಲಸ ಮಾಡಿರೆ ಎಂಟಾಣೆ ಕೊಡುಗು; ಉಸ್ಸಪ್ಪ!
ಪುತ್ತೂರಿನ ದೇವಣ್ಣಕಿಣಿ ಅಂಗುಡಿಂದ – ಗೂಡ್ಸಿಲಿ ಒಂದು ಅಕ್ಕಿ ಗೋಣಿ ಬೂದಿಪ್ಪಳ್ಳದ ಪೇಪೆಅಣ್ಣನಲ್ಲಿಗೆ ಎತ್ತುವಗ -ಕೂಲಿ ಮಜೂರಿ ಎಲ್ಲ ಸೇರಿ- ಒಂದು ಕಿಲಕ್ಕೆ ಎಂಟಾಣೆ ಬಿದ್ದುಗೊಂಡಿತ್ತಡ, ಅರುವತ್ತಮೂರರಲ್ಲಿ!

ಒಂದು ರುಪಾಯಿ:
ಮದಲಿಂಗೆ, ಬೆಳ್ಳಿಯ ಪಾವಲಿ ಇದ್ದತ್ತು, ಈ ಒಂದು ರುಪಾಯಿಗೆ.
ಅಂಬಗ ಯೋಚನೆ ಮಾಡಿ, ಎಷ್ಟು ಇದ್ದಿಕ್ಕು ಇದರ ಬೆಲೆ ಹೇದು!

ಬದಿಯೆಡ್ಕಕ್ಕೆ ಒಂದುರುಪಾಯಿ ಹಿಡ್ಕೊಂಡು ಹೋದರೆ ಮನಗೆ ಬೇಕಾದ ಸಾಮಾನು – ಚಾಯದೊಡಿ ಶೆಕ್ಕರೆ ಅದು ಇದು ಎಲ್ಲವನ್ನೂ ತೆಕ್ಕೊಂಡು ಬಪ್ಪಲೆ ಎಡಿಗು..!!

ಒಂದು ರುಪಾಯಿ ಹೇದರೆ ಅಬ್ಬಾ – ಅಷ್ಟು ದೊಡ್ಡದೋ!!
ಒಂದು ರುಪಾಯಿಯ ನೋಟುದೇ ಬಂದುಗೊಂಡಿತ್ತು; ತುಂಬ ದೊಡ್ಡೋರ ಕೈಲಿ ಇದ್ದತ್ತು ಅದು.
ತೆಕ್ಕೊಂಡು ಹೋಪಲೆ ಸುಲಬ – ಹೇಳ್ತ ಲೆಕ್ಕಲ್ಲಿ ಒಂದು ರುಪಾಯಿಯ ನೋಟಿನ ಕಟ್ಟ ಎಲ್ಲ ಇಕ್ಕು ಮದಲಿಂಗೆ!!
ರಂಗಮಾವ° ದೊಡ್ಡ ಹುಬ್ಬು ಮಾಡಿ ಹೇಳುವಗ ನೆಗೆ ಬಂತು ಒಪ್ಪಣ್ಣಂಗೆ!
ಈಗ ಬೇಂಕಿನ ಪ್ರಸಾದಣ್ಣ ಒಂದು ಗಳಿಗೆಲಿ ಎಷ್ಟೋ ಸಾವಿರ ರುಪಾಯಿ ಲೆಕ್ಕ ಮಾಡಿ ಮಡಗ್ಗು ಬೇಕಾರೆ, ಮದಲಿಂಗೆ ಹಾಂಗಿತ್ತೋ!?
~

ಮುಂದೆ, ಸಾವಿರದ ಒಂಬೈನೂರ ಐವತ್ತೇಳರಲ್ಲಿ – ಬೌಶ್ಷ ಪಾತಿಅತ್ತೆ ಹುಟ್ಟಿದ ಸಮೆಯ ಆಗಿಕ್ಕು – ಹೇಳಿಗೊಂಡವು; ಆ ಸಮೆಯಲ್ಲಿ ಭಾರತ ಸರಕಾರ ಈ ಹಳೆ ಲೆಕ್ಕಾಚಾರದ ಪೈಶೆ ಪದ್ಧತಿ ಬೇಡ ಹೇಳಿಗೊಂಡು ಹೊಸ ನಮುನೆದರ ಹಿಡ್ಕೊಂಡತ್ತಡ.
ಹಾಂಗೆ ಹೊಸತ್ತರ ತಪ್ಪಗ, ಹಳತ್ತರನ್ನೂ ಪರಿಗಣನೆಗೆ ತೆಕ್ಕೊಂಡು, ಅದೇ ಹೆಸರುಗೊ ಒಳಿವ ಹಾಂಗೆ ನೋಡಿಗೊಂಡತ್ತಡ.
ಮೂಲ ಮೌಲ್ಯ ಆಗಿ ಒಂದು ರುಪಾಯಿಯೂ, ಆ ಒಂದು ರುಪಾಯಿಯ ನೂರು ತುಂಡು ಮಾಡಿ, ಆ ಒಂದು ತುಂಡಿಂಗೆ ಪೈಸೆಹೇಳಿಯೂ – ಹೆಸರು ಮಡಗಿತ್ತಡ.

ಮದಲಾಣ ರುಪಾಯಿಗೆ ಮದಲಾಣ ನೂರ ತೊಂಬತ್ತೆರಡು ಪೈಸೆ.
ಹೊಸ ರುಪಾಯಿಗೆ ಹೊಸ ನೂರೇ ಪೈಸೆ!

ಅದ, ನೋಡಿಗೊಂಡಿದ್ದ ಹಾಂಗೇ ಪೈಸೆಯ ಬೆಲೆ ಏರಿತ್ತದಾ!! – ಹೇಳಿದ ಬೇಂಕಿನ ಪ್ರಸಾದಣ್ಣ.  ನವಗೆ ಅದೆಲ್ಲ ತಲಗೆ ಹೋಗ ಪಕ್ಕನೆ.
ಮದಲಾಣ ರುಪಾಯಿಯ ಅರ್ದಕ್ಕೆ ಈಗ ಐವತ್ತು ಪೈಸೆ; ಮದಲಾಣ ಕಾಲು ರುಪಾಯಿ – ನಾಲ್ಕು ಆಣೆಗೆ ಈಗ ಇಪ್ಪತ್ತೈದು ಪೈಸೆ.
ಮದಲಾಣ ಪೈಶೆಗೆ ಈಗ ಒಂದು ಪೈಸೆ!!
ಈ ಹೊಸ ಪೈಸೆಗೆ ನಯಾ-ಪೈಸೆ (ಹಿಂದಿಲಿ ಹೊಸ ಪೈಸೆ ಹೇದು ಅರ್ತ) ಹೇಳಿ ದಿನಿಗೆಳಿದವಡ.
ಆ ಸಮೆಯಲ್ಲಿ ಇದರ ಬೇರೆ ಗುರ್ತ ಹಿಡಿವಲೆ ನಯಾಪೈಸೆ ಹೇಳಿಗೊಂಡೇ ಇದ್ದಿದ್ದವಡ ಹಳಬ್ಬರು.
~

ಹಳೆ ಸಂಗ್ರಹಂಗಳ ನೋಡಿಗೊಂಡು ಕೊಶೀಲಿ ಮನೆಗೆ ಎತ್ತಿದೆ.
ಅಂಬಗ ಈ ಒಂದು ಕುತ್ತಿ ಮುಂಡಿಗೆ ಸಾವಿರದ ಒಂಬೈನೂರ ಐವತ್ತರಲ್ಲಿ ಎಷ್ಟಿದ್ದಿಕ್ಕಪ್ಪಾ ? ಆರತ್ರೆ ಕೇಳುದು, ರಂಗಮಾವನ ಹತ್ರೆ ಹಾಂಗೆಲ್ಲ ಬೆಗುಡು ಮಾತಾಡಿರೆ ಮೈಗಿಡೀ ಮುಂಡಿ ಉದ್ದಿರೆ ಕಷ್ಟ!

ಒಂದೊಂದು ಪಾವೆಲಿಗೂ ಒಂದೊಂದು ಕತೆ. ಒಂದೊಂದು ಕಾಲಘಟ್ಟಲ್ಲಿ ಬಳಕೆಗೆ ಬಂದದು.
ಒಂದೊಂದು ಸಮೆಯಲ್ಲಿ ಚಾಲ್ತಿಗೆ ನೆಡದ್ದು.
ಈಗ, ಎಲ್ಲವೂ ಕಾಲಗರ್ಭಲ್ಲಿ ಬೆಲೆಯೇ ಇಲ್ಲದ್ದೆ, ಯೇವಯೇವದೋ ಕರಡಿಗೆ ಒಳ ಹೋಗಿ ಕೂಯಿದವು.
ಎಂತಾ ಅವಸ್ಥೆ ಅಲ್ಲದೊ!

ಒಂದೊಪ್ಪ: ‘ಪೈಸೆ’ಗೆ ಬೆಲೆ ಇಲ್ಲದ್ದೆ ಆಯಿಕ್ಕು; ಆದರೂ ಪೈಸೆ ಪೈಸೆಯೇ. ಅಲ್ಲದೋ? ದೇವರಾಣೆಗೂ!

ಸೂ: ಪಟ ಇಲ್ಲಿಂದ.

15 thoughts on “ರೂವಿ-ಮುಕ್ಕಾಲು-ಆಣೆ: ಪೈಶೆಲೆಕ್ಕ ಕಾಣೆ, ದೇವರಾಣೆ..!

  1. ಒಪ್ಪಣ್ಣಾ ಉತ್ತಮ ಮಾಹಿತಿಯುಕ್ತ, ಸಂಗ್ರಹಯೋಗ್ಯ ಬರಹ
    ಒಂದೊಪ್ಪ ಕೊಶಿ ಆತು..:)

  2. ಆಣೆ ಪೈ ಗಳ ಬಗೆಲಿ ಬೆಣಂಚು ಹಿಡುದ ಲೇಖನ ಲಾಯಕಿತ್ತು. ನಯಾ ಪೈಸೆ ಹೇಳ್ತ ಶಬ್ದ ಹೇಂಗೆ ಬಂತು ಹೇಳಿ ಕೇಳಿ ನೆಗೆ ಬಂತು. ಖಂಡಿತಾ ಆಯಿಕ್ಕದು. ಎಂಟಾಣೆ ಕೊಟ್ಟು ಹೋಟ್ಳಿಲ್ಲಿ ಉಂಡ ನೆಂಪು ಎನಗಿದ್ದು. ಒಂದು ಪೈಸೆಯ ಚಾಕ್ಲೆಟ್ಟು ಮೀಟಾಯಿ ತಿಂದದುದೆ ನೆಂಪಿದ್ದು. ಬೆಲೆ ಕಳಕ್ಕೊಂಡ ಒಟ್ಟೆ ಮುಕ್ಕಾಲು ಬೇರೆ ಬೇರೆ ರೀತಿ ಬಳಕೆ ಆಗಿಯೊಂಡಿದ್ದದು ಎನಗೆ ನೆಂಪಿದ್ದು. ಹಿತ್ತಾಳೆ ಇಪ್ಪತ್ತು ಪೈಸೆಯ ಕರಗುಸಿ, ಉಂಗಿಲು ಮಾಡಿ ಹಾಕ್ಯೆಂಡವು ಆ ಕಾಲಲ್ಲಿ ತುಂಬಾ ಜೆನ ಇದ್ದಿದ್ದವು. ಏವತ್ರಾಣ ಹಾಂಗೆ ಒಪ್ಪಣ್ಣನ ಲೇಖನ ಉತ್ತಮ ಮಾಹಿತಿ ಕೊಟ್ಟತ್ತು.

    ಪೈಸೆಯ ಒಟ್ಟಿಂಗೆ ಮನುಷ್ಯನ ಬೆಲೆಯುದೆ ಕಡಮ್ಮೆ ಕಡಮ್ಮೆ ಆವ್ತಾ ಇದ್ದದು ಬೇಜಾರಾವ್ತ ವಿಷಯ.

  3. {..‘ಪೈಸೆ’ಗೆ ಬೆಲೆ ಇಲ್ಲದ್ದೆ ಆಯಿಕ್ಕು; ಆದರೂ ಪೈಸೆ ಪೈಸೆಯೇ.}

    ಈ ಗೆರೆ, ಎಷ್ಟು ಸತ್ಯ ಹೇಳಿ ಕಾಣ್ತು ಅಲ್ಲದೊ…!?!
    ಇ೦ದು ಒ೦ದು ಸಣ್ಣ ಕೆಲಸ ಆಯೆಕಾರು ಪೈಸೆ ಇಲ್ಲದ್ದೆ ಕಳಿಯ ಭಾವ.. ಪೇಟೆಲಿ ಒ೦ದು ವಾಡಿಕೆಯೇ ಇದ್ದು..
    “Time is Money” ಹೇಳಿ.. ಅಲ್ಲದೋ? , ಹಾ೦ಗೆ ಹೇಳಿ ಪುರುಸೊತ್ತು ಆರಿಗೂ ಇಲ್ಲೆ ಇದಾ..!! 🙁

    ಅದು ಇರಳಿ, ಈ ಪೈಸೆಯ- “ನಾಣ್ಯ ರೂಪಲ್ಲಿ” ಮದಲಿ೦ಗೆ ಸೂಮಾರು 1 BC ಲಿ, ಇ೦ಡೋ-ಗ್ರೀಕ ನಡುವೆ ವ್ಯಾಪಾರಕ್ಕೇ ಹೇಳಿ ಸುರುವಾದ್ದು ಹೇಳಿ ಈ ಸ೦ಕೋಲೆಲಿ ಕೊಟ್ಟಿದವ್ವು – http://en.wikipedia.org/wiki/Indian_coinage
    ಮತ್ತೆ ಮೌರ್ಯಾರ ಆಸ್ಥಾನಲ್ಲಿ ಬೆಳದ್ದು…

    ಮೊದಲಿ೦ಗೆ – “ಬಾರ್ಟಾರ್ “(barter system) ಹೇಳಿ ಇದತ್ತು. ಅ೦ಬಗ ಪೈಸೆ ಇಲ್ಲೆ, ಪೇಟೆಗೆ ಹೋದರೆ ನವಗೆ ಏನಾರು ಬೇಕುಳಿ ಕ೦ಡರೆ, ಅದೇ ಮೌಲ್ಯಕ್ಕೆ ತಕ್ಕ ನಾದ ವಸ್ತು/ನಾವು ಬೇಳದ ಅಕ್ಕಿ, ಗೋಧಿ ಕೊಟ್ಟು ತೆಕ್ಕೊ೦ಡು ಹೋವುಸ್ಸು..

    ಒಳ್ಳೆ ಲೇಖನ ಭಾವ.. ಕೋಶಿಯಾತು ಓದು.. 🙂

  4. ಹಳೆ ನಾಣ್ಯಂಗಳ ನೆಂಪು ಮಾಡಿದ್ದು ಲಾಯ್ಕ ಆಯಿದು.ಅವು ಚಲಾವಣೆಲಿ ಇಲ್ಲದ್ದರೂ ಅಂತಾ ನಾಣ್ಯಂಗಳ ಆನು ನೋಡಿದ್ದೆ.೧೮೪೦ರ ನಾಕಾಣೆ ಈಸ್ಟ್ ಇಂಡಿಯಾ ಕಂಪೆನಿದು ,ಬೆಳ್ಳಿದೇ ಇತ್ತು-ಊರಿಲಿ.ಎಂಗಳ ಮನೆಲಿ. ಈಗ ಅದು ಇಲ್ಲೆ.ಮತ್ತೊಂದು೧೭೯೧ ರ ತಾಮ್ರದ ನಾಣ್ಯ ಕಂಡಿದೆ,ಅದೂ ಈಗ ನಮ್ಮಲ್ಲಿ ಇಲ್ಲೆ ಹೇಳುದು ಬೇಜಾರದ ವಿಷಯ.ಇದ್ದಿದ್ದರೆ ಅದರ ಪಟ ಹಾಕಲಾವ್ತಿತ್ತು.

  5. ರುಪಾಯಿಗೆ ನೂರು ಹೇಳ್ತ ಪೈಸೆಗೆ ಈಗ ಬೆಲೆ ಇಲ್ಲದ್ದರೂ, ಪೈಸೆ ಶಬ್ದಕ್ಕೆ ಅಷ್ಟೇ ಬೆಲೆ ಇದ್ದು. ಇದಕ್ಕಾಗಿ ಹಲವಾರು ಹಗರಣಂಗಳೂ ಆತು.
    ಇದರಲ್ಲಿ ಬಂದ ಎಷ್ಟೋ ನಾಣ್ಯಂಗಳ ಈಗ ಕಾಣೆಕ್ಕಾರೆ ಬಹುಷಃ ವಸ್ತು ಸಂಗ್ರಹಾಲಯಕ್ಕೆ ಹೋಯೆಕ್ಕಷ್ಟೆ.
    ಸಣ್ಣ ಇಪ್ಪಗ ತಾಮ್ರದ ಒಂದು ಪೈಸೆ, ನಿಕ್ಕೆಲ್ ಲೋಹದ ಐದು ಪೈಸೆ ಎಲ್ಲಾ ನೋಡಿದ ನೆಂಪು ಇದ್ದು. ಒಟ್ಟೆ ಮುಕ್ಕಾಲಿನ ವಾಶರ್ ಆಗಿ ಉಪಯೋಗ ಜಾಸ್ತಿ ಕಂಡಿದೆ. ಬಾಗಿಲಿಂಗೆ ಸಂಕೋಲೆ ಸಿಕ್ಕುಸುವ ಕೊಂಡಿಯ, ಮರಲ್ಲಿ ಕೂರುಸುವಲ್ಲಿ ಒಂದು ಒಟ್ಟೆಮುಕ್ಕಾಲು.
    ಆರಾರೂ ತುಂಬಾ ಚೊರೆ ಮಾಡಿರೆ, “ಅವ ಎನ್ನ ತಲೆ ಹನ್ನೆರಡಾಣೆ” ಮಾಡಿದ ಹೇಳಿ ಹೇಳ್ತ ಕ್ರಮವೂ ಇದ್ದು.
    ತುಂಬಾ ಮಾಹಿತಿ ಕೊಟ್ಟ ಸಂಗ್ರಹ ಯೋಗ್ಯ ಲೇಖನ

  6. ಇದು ಭಾರೀ ಲಾಯ್ಕಾಯ್ದು..ಸುಮಾರು ವಿಶಯ೦ಗ ಗೊ೦ತಾತು..ಧನ್ಯವಾದ೦ಗೊ

  7. ಅಬ್ಬಬ್ಬ… ಒಪ್ಪಣ್ಣನ ಭಂಡಾರಲ್ಲಿ ಇಲ್ಲದ್ದ ಪೈಸೇಗೋ(ಸುದ್ದಿಗೋ) ಇಲ್ಲೇ…

  8. ಹರೇ ರಾಮ ।

    ಎಲ್ಲ ಅಲ್ಲದ್ದರೂ ಕೆಲವಾರು ಎಂಗಳ ಸಂಗ್ರಹ ಲ್ಲಿದ್ದು ….ಒಪ್ಪಣ್ಣನ ವಿವರವಾದ ದಾಕಲಾತಿಗರ್ಹ ಮಾಹಿಗೆ ವಿಶೇಷ ಧನ್ಯವಾದಂಗೊ

  9. ರೂಪಾಯಾಣೆ. ಹಳೇ ಕಾಲದ ಆಣೆ, ಪೈಸೆ, ತಾರ, ರೂವಿ ಎಲ್ಲ ಒ೦ದರಿ೦ಗೆ ನೆಂಪು ಮಾಡುವ ಹಾಂಗೆ ಮಾಡಿತ್ತು ಈ ಲೇಖನ.

  10. ಬಹಳ ಲಾಯ್ಕಾಯಿದು ಒಪ್ಪಣ್ಣಾ.. ಧನ್ಯವಾದ೦ಗೊ

  11. ಪೈಸೆ’ಗೆ ಬೆಲೆ ಇಲ್ಲದ್ದೆ ಆಯಿಕ್ಕು; ಆದರೂ ಪೈಸೆ ಪೈಸೆಯೇ. ಅಲ್ಲದೋ? ದೇವರಾಣೆಗೂ

  12. ಒಪ್ಪಣ್ಣನ ಒಪ್ಪದ ಲೇಖನಕ್ಕೆ ಧನ್ಯವಾದಂಗೊ.

  13. ನಾಕಾಣೆ ನಾಕಾಣೆ ….ನಾನು ಕಾಣೆ….

    ಶುದ್ದಿ ಒಪ್ಪ ಆಯಿದು……..

  14. “ಚಾರಾಣೆಕಾ ಮುರ್ಗಿ – ಬಾರಾಣೆಕಾ ಮಸಾಲ” – ಇದು ಉತ್ತರಭಾರತಲ್ಲಿ ಸಾಮಾನ್ಯವಾಗಿ ಚಾಲ್ತಿಲಿಪ್ಪ ಮಾತು.
    ಈ ಶುದ್ದಿ ದೇವರಾಣೆಯಾಗಿಯೂ ಹೀಂಗಲ್ಲ ಒಪ್ಪಣ್ಣ. ನಮ್ಮ ನಂತ್ರದವಕ್ಕೆ “ರೂಪಾಯಿ-ಆಣೆ, ದುಗ್ಗಾಣಿ – ಕಾಸು ” ಬಗ್ಗೆ ಹೇಳಿ ಕೊಡ್ಲೂ ನವಗೆ ಅರಡಿಯದ್ದೆ ಅಕ್ಕು. ಈ ಕಷ್ಟ ಪರಿಹಾರಕ್ಕೆ ಪೂರಕವಾಗಿದ್ದು ಶುದ್ದಿ – ಇದು ರೂಪಾಯಿಗೆ ಹದಿನಾರಾಣೆಯೂ ಸತ್ಯ.

  15. ಪೈಸೆ ಪೈಗೂ ಬೇಕು , ಪೈಸಾರಿ ಬಾವಂಗೂ ಬೇಕು., ಅಪ್ಪು. ಪೈಸಗೆ ಇಷ್ಟಾರು ಬೆಲೆ ಇಲ್ಲದಿರ್ತ್ತಿದ್ರೆ ಶಂಕರ ಪೈಗೂ ಬೆಲೆ ಇರ್ತಿತ್ತಿಲ್ಲೆ., ಶಂಕರ ಭಟ್ಟಂಗೂ ಬೆಲೆ ಇರ್ತಿತ್ತಿಲ್ಲೆ ಅಪ್ಪೋ. ಒಂದು ರುಪಾಯಿ ಪೈಸೆಯ ಅಷ್ಟು ತುಂಡು ಮಾಡಿ ಕಾಣೆಯಾದ್ದರ ಆಣೆ ಮಾಡಿ ತೋರ್ಸಿದಿ ಅಪ್ಪಾ.. ಭಾರೀ ಲಾಯಕ ಆಯ್ದು ಅಪ್ಪಪ್ಪ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×