Oppanna.com

ಪೇಟೆಕೂಸು ನೂಡುಲ್ಸು ಬಿಟ್ಟು ಸೇಮಗೆ ತಿಂಬಲೆ ಸುರುಮಾಡಿತ್ತಡ!

ಬರದೋರು :   ಒಪ್ಪಣ್ಣ    on   09/12/2011    48 ಒಪ್ಪಂಗೊ

ಸುಮಾರು ಸಮಯ ಆತು ಬೀಸ್ರೋಡುಮಾಣಿಯ ಶುದ್ದಿ ಇಲ್ಲದ್ದೆ,
ಮದುವೆ ಕಳುದಿಕ್ಕಿ ಅತ್ಲಾಗಿ ಹೋದೋನು ಎಲ್ಲಿದ್ದ° ಹೇಳ್ತದೂ ಗೊಂತಾಯಿದಿಲ್ಲೆ ಬೈಲಿಂಗೆ.
ಕತೆ ಎಂತ್ಸರ ಹೇದು ನೋಡಿಕ್ಕಿ, ಮಾತಾಡಿದಾಂಗೂ ಆತು – ಹೇಳಿಗೊಂಡು ಹೆರಟೆ ಓ ಮೊನ್ನೆ.
ಮದುವೆ ಆದ ಮತ್ತೆ ರಜ ಬಚ್ಚಿದ್ದನೋ, ಗೆನ ಆಯಿದನೋ, ಅಲ್ಲ ಬಗೆಬಗೆ ಪಾಕ ತಿಂದು ಬಾಯಿ ಮಾಂತ್ರ ಬಚ್ಚಿದ್ದು – ಹೊಟ್ಟೆ ಗೆನಾ ಆಯಿದೋ – ಹಾಂಗಿರ್ತದೆಲ್ಲ ಕಂಡಕೂಡ್ಳೇ ಹೇಳೇಕಾರೆ ಅಜ್ಜಕಾನಬಾವ° ಆಯೇಕು! ನವಗೆ ಅರಡಿಯ. ಅದಿರಳಿ.
ಎಂತ ಮಾರಾಯಾ, ಕಾಂಬಲೇ ಇಲ್ಲೆ ಬೈಲಿಲಿ – ಕೇಳಿದೆ.
ಶುದ್ದಿ ಹೇಳುವಷ್ಟು ಪುರುಸೊತ್ತು ಸಿಕ್ಕುತ್ತಿಲ್ಲೆ ಈಗ ಮದುವೆ ಆದ ಮತ್ತೆ – ಹೇದು ಸಣ್ಣಕೇ ನೆಗೆಮಾಡಿದ°.
ಹತ್ತರೆ ಅವನ ಎಜಮಾಂತಿ ಇದ್ದ ಕಾರಣ ಜೋರು ನೆಗೆಯೂ ಬಯಿಂದಿಲ್ಲೆ ಅವಂಗೆ! ಪಾಪ!! ಬಾಯಿ ಬಚ್ಚಿದ್ದು ಅಪ್ಪು – ಹೇಳಿ ನಿಗಂಟಾತು. 😉
ಅವರವರ ಕಷ್ಟ ಅವಕ್ಕವಕ್ಕೆ, ನಾವು ಬೈಲಿಲಿ ಕೂದೊಂಡು ನೆಗೆಮಾಡ್ತದು. 🙁
ಅಂತೇ ಲೋಕಾಭಿರಾಮ ಮಾತಾಡಿ, ಒಂದು ಪಟ್ಟಾಂಗಚಾಯ ಕುಡುದು ಹೆರಟದು.
ತೆಕ್ಕುಂಜೆಮಾವಂದೇ, ಚೆನ್ನಬೆಟ್ಟಣ್ಣಂದೇ ಅದೇ ಗೆದ್ದೆಯ ಆಚೊಡೇಣ ಕಟ್ಟಪುಣಿಲಿ ಇದ್ದರೂ, ನವಗೆ ಅಂಬೆರ್ಪಿಲಿ ಹೋತಿಕ್ಕಲಾತಿಲ್ಲೆ.
ಹೇಳಿರಲ್ಲದೋ ತಲೆಬೆಶಿ – ಅಲ್ಲಿಗೆ ಬಂದಿತ್ತಿದ್ದೆ ಹೇಳಿದ್ದೇ ಇಲ್ಲೆ ಇವರ ಹತ್ತರೆ! ಹು ಹು!
ಅಭಾವಂಗೆ ಗೊಂತಾದರೆ ಅವ° ಹೇಳಿ ಸಿಕ್ಕುಸಿ ಹಾಕುಗು, ಹಾಂಗೆ ಅವಂಗೂ ಹೇಳಿದ್ದಿಲ್ಲೆ;
ನಿಂಗಳೂ ಹೇಳಿಕ್ಕೆಡಿ; ಆತೋ ಏ°?

~

ಚಾಯ ಕುಡುದಾದ ಮತ್ತೆ ಬಂದ ಶುದ್ದಿಲಿ ಒಂದರ ಬೈಲಿಂಗೆ ಹೇಳುವ° ಹೇಳಿ ಕಂಡತ್ತು.
ಒಂದು ನಮೂನೆ ಹೊಸ ಶುದ್ದಿಯೇ! ಪೇಟೆ ಒಳದಿಕೆ ನೆಡೆತ್ತ ಹಲವಾರು ಶುದ್ದಿಲಿ ಇದೂ ಒಂದು!
ಎಂತ್ಸರ?
ಬೀಸ್ರೋಡುಮಾಣಿಯ ಕ್ಲಾಸಿಲಿ ಕುಂದಾಪುರದ ಮಾಣಿ ಒಬ್ಬ° ಇದ್ದಿದ್ದನಾಡ; ಇದ್ದಿದ್ದ° – ಹೇದರೆ, ಈಗಳೂ ಇದ್ದ° ಅವ ಗಟ್ಟಿಮುಟ್ಟಾಗಿ.
ಪ್ರಶಾಂತ° ಹೇದು ಹೆಸರಡ.
ಕ್ಳಾಸಿಲಿ ಕಲಿಯಲೆ ರೇಂಕುಬಾರದ್ದರೂ ಪೈಲು ಆಯಿದನಿಲ್ಲೆ – ಅಷ್ಟು ಸಾಕನ್ನೆ! ತಕ್ಕಮಟ್ಟಿಂಗೆ ಉಶಾರಿಯೇ.
ಕಲಿಯಲೆ ಹದಾಕೆ ಆದರೂ ಮಾತಾಡ್ತರಲ್ಲಿ ಬಾರೀ ಉಶಾರಿ ಆಡ. ಇಪ್ಪದರ-ಇಲ್ಲದ್ದರ ಎಲ್ಲ ಸೇರುಸಿಗೊಂಡು – ರಂಗುಮಾಡಿ ಮಾತಾಡ್ಳೆ ಉಶಾರಿ ಮಾಣಿ ಅಡ.
ಕಲಿಯಲೆ ಅಲ್ಲದ್ದರೂ – ಮಾತಾಡ್ಸರಲ್ಲಿ ರೇಂಕು ನಿಗಂಟು ಬಕ್ಕಾಡ.

ಕೊಡೆಯಾಲಲ್ಲಿ ಕಲ್ತಾದ ಮತ್ತೆ ಬೆಂಗುಳೂರಿಂಗೆ ಹೋದ°.
ಮಾತು ಬಲ್ಲವಂಗೆ ಕೆಲಸಕ್ಕೆ ತೊಂದರೆ ಇದ್ದೋ – ಒಂದು ಕಂಪೆನಿಲಿ ಕೆಲಸ ಸಿಕ್ಕಿತ್ತುದೇ.
ಕೋಣೆ ಒಳದಿಕೆ ಕೂದುಗೊಂಡು ದೊಡ್ಡದೊಡ್ಡ ಒಯಿವಾಟುಗಾರಂಗಳ ಕಂಪೆನಿ ಪರವಾಗಿ ಸಂಪರ್ಕ ಮಾಡಿ ಮಾತಾಡ್ಳೆ ಅಡ. ಎಂತ್ಸದೋ – ಮಾರ್ಕೆಟಿಂಗು ಮಾಡ್ತ ಕೆಲಸ ಅಡ, ಮಾತಾಡ್ಳೆ ಉಶಾರಿ ಮಾಣಿಗೆ ಮಾತಾಡ್ತ ಕೆಲಸವೇ ಸಿಕ್ಕಿತ್ತತ್ತೆ.

ಕಂಪೆನಿ ಕೆಲಸ ಮಾಡಿಗೊಂಡೇ, ಕೂಸು ಹುಡ್ಕಿ ಮದುವೆ ಆದಿಕ್ಕಿದ°.
ಮಾತಾಡ್ತರಲ್ಲಿ ಕೂಸು ಹುಡ್ಕಲೆ ಜಾಸ್ತಿ ಪುರುಸೊತ್ತು ಸಿಕ್ಕದ್ದಕ್ಕೋ ಏನೋ – ಅವನ ಕಂಪೆನಿಲಿ ಕೆಲಸ ಮಾಡಿಗೊಂಡಿದ್ದ ಕೂಸನ್ನೇ ಮದುವೆ ಆದನಾಡ.
ಕೂಸಿನ ಮೂಲ ಊರು ತುಮಕೂರೋ- ಶಿವಮೊಗ್ಗವೋ; ಎಲ್ಲಿಯೋ ಹೇಳಿದ° ಬೀಸ್ರೋಡುಮಾಣಿ; ಎನಗೆ ಮರದತ್ತತ್ತೆ! 🙁
~

ಪ್ರಶಾಂತ° ಮದುವೆ ಆದ ಕೂಸು ಪೇಟೆಲಿಯೇ ಬೆಳದ್ದಟ್ಟೇ ವಿನಃ, ಕುಂದಾಪುರದ ಹಾಂಗಿರ್ತ ಹಳ್ಳಿಲಿ ಅಲ್ಲ!
ಕೂಸಿನ ಅಪ್ಪಮ್ಮಂಗೆ ಬೆಂಗುಳೂರಿಲೇ ಕೆಲಸ ಆದ ಕಾರಣ ಅವು ಬೆಂಗುಳೂರಿಲೇ ಬಿಡಾರ ಮಾಡಿಗೊಂಡು ಇದ್ದಿದ್ದವು –ಹಾಂಗಾಗಿ ಬೆಂಗುಳೂರು ಬಿಟ್ಟು ಬೇರೆ ಊರಿನ ನೀರು ಕುಡುದೇ ಅರಡಿಯ ಅದಕ್ಕೆ!

ಕೊಂಡಾಟದ ಮಗಳಾದರೆ ಮತ್ತೆ ಕೇಳೇಕೋ – ಸಣ್ಣ ಇಪ್ಪಾಗಳೇ ಬೂಡ್ಸು ಹಾಕಿ, ಐಸ್ಕ್ರೀಮು ತಿಂದು, ವೀಡ್ಯಗೇಮು ಆಡಿ ಬೆಳದ್ದಾಡ. ಬೆಳಿಅಂಗಿ ಹಾಕಿಂಡು ದೊಡ್ಡ ಶಾಲಗೇ ಹೋದ್ಸಡ; ಹಾಂಗಾಗಿ ಇಂಗ್ಳೀಶು ಭಾರೀ ಲಾಯಿಕಂಗೆ ಬತ್ತು.
ಬಪ್ಪ ಎರಡು ಭಾಷೆಗಳಲ್ಲಿ ಕನ್ನಡಂದಲೂ ಇಂಗ್ಳೀಶೇ ಲಾಯಿಕಾಡ – ಕನ್ನಡ ಮಾತಾಡುವಗ ಎಡೆಡೆಲಿ ಕಟ್ಟುತ್ತಡ, ಬೀಸ್ರೋಡುಮಾಣಿಗೆ ಕೇಳಿ ಗೊಂತಿದ್ದನ್ನೇ!
ಉದಿಯಾದರೆ ಮೋರಗೆ ಬೆಳಿಬಣ್ಣ, ಕಣ್ಣಕರೆಂಗೆ ಕಪ್ಪು ಬಣ್ಣ, ತಲಗೆ ಕಂದುಬಣ್ಣ, ತೊಡಿಗೆ ಕೆಂಪುಬಣ್ಣ!
ವಾರಕ್ಕೊಂದರಿ ಸಿನೆಮ ನೋಡೇಕು, ಹತ್ತು ದಿನಕ್ಕೊಂದರಿ ಜವುಳಿ ತೆಗೇಕು.
ಒಂದು ಹೊತ್ತು ಹೋಟ್ಳುತಿಂಡಿ ಆಯೇಕು, ಅಡಿಗೆ ಮಾಡ್ಳೆ ಜೆನ ಬರೆಕು!
ಕಾಪಿಗೆ ನೂಲು ನೂಲಿನಾಂಗಿರ್ತ ನೂಡುಲ್ಸು ಆಯೇಕು!
ಇದೆಲ್ಲ ಮದಲೇ ಅರಡಿಯದ್ದೆ ಏನಲ್ಲ; ಆದರೆ ಚೆಂದ ಕಂಡು ಮದುವೆ ಆದ ಮಾಣಿಗೆ ಇದೆಲ್ಲ ಅಡ್ಡಬಕ್ಕೋ! ಚೆಚೆ.
ಮದುವೆ ಆಗಿಯೇ ಬಿಟ್ಟ°; ತಾಳಿ ಕಟ್ಟಿಯೇ ಬಿಟ್ಟ° ಪ್ರಶಾಂತವಾಗಿ.
ಸಂಸಾರ ಸುರು ಆತು.
~

ಹೆಂಡತ್ತಿ ಲೆಕ್ಕಲ್ಲಿ ರಜ ಜಾಸ್ತಿಯೇ ಕರ್ಚು ಇದ್ದನ್ನೇ – ಹಾಂಗಾಗಿ ಕೆಲಸವುದೇ ಲಾಯಿಕಂಗೆ ಮಾಡಿ, ಒಳ್ಳೆ ಸಂಪಾದನೆಯೂ ಮಾಡಿಗೊಂಡಿತ್ತಿದ್ದ° ಪ್ರಶಾಂತ°. ಕಂಪೆನಿಲಿಯೂ ಹಾಂಗೆ – ಕೆಲಸಲ್ಲಿ ಇವನ ಕೊಶಿ ಆಗಿ ಪ್ರೊಮೋಶನು ಕೊಟ್ಟವಾಡ ದೊಡ್ಡ ಕುರ್ಶಿಗೆ!
ಇವಂಗಪ್ಪಟ್ಟು ದೊಡ್ಡ ಕುರ್ಶಿ ಬೆಂಗುಳೂರಿಲಿ ಇಲ್ಲದ್ದಕ್ಕೆ ಸೀತ ಅಮೇರಿಕಕ್ಕೆ ಕಳುಗಿದವಡ; ಈ ಕಂಪೆನಿಯ ಹೆಡ್ಡಾಪೀಸಿಲಿ ಕೆಲಸ ಮಾಡ್ಳೆ.
ಆತು, ಬೆಂಗುಳೂರು ಬಿಟ್ಟು ಇನ್ನು ಅಮೇರಿಕಕ್ಕೆ ಹೋಪದು.
ಆ ಪೇಟೆಕೂಸು ಹೆಂಡತ್ತಿಗೆ ಬದ್ಕಲೆ ಬಂಙ ಆಗ ಹೇಂಗಾರೂ! ಇಬ್ರುದೇ ಕೊಶಿಲಿ ಹೆರಟೇ ಹೆರಟವು – ಅಮೇರಿಕಕ್ಕೆ.
~

ಅಮೇರಿಕಕ್ಕೆ ಎತ್ತಿ ನಾಕು ತಿಂಗಳಾಯಿದಿಲ್ಲೆ..
ಅಲ್ಲಿಗೆ ಎತ್ತಿದ ಶುದ್ದಿಯ ಇನ್ನೂ ಸಮಗಟ್ಟು ಊರೋರಿಂಗೆ ತಿಳುಶಿ ಆಯಿದಿಲ್ಲೆ..
ತೆಕ್ಕೊಂಡು ಹೋದ ಸಾಮಾನುಕಟ್ಟ ಪೂರ್ತಿ ಬಿಚ್ಚಿ ಆಯಿದಿಲ್ಲೆ..
ಆ ಊರು ಹೇಂಗಿದ್ದು ಹೇದು ನೋಡಿ ಆಯಿದಿಲ್ಲೆ..
ಒಪಾಸು ಭಾರತಕ್ಕೆ ಬರೆಕ್ಕಾಗಿ ಬಂತಾಡ!
ಎಂತಾತು?
~
ಆದ್ದೆಂತರ – ಅವ° ಕೆಲಸ ಮಾಡಿಗೊಂಡಿದ್ದ ಕಂಪೆನಿ ಮುಳುಂಗಿತ್ತಾಡ! ಪಾಪ.
ಪೈಶೆ ಇಪ್ಪಷ್ಟು ಸಮೆಯ ಕಂಪೆನಿ, ಪೈಸೆ ಕಾಲಿ ಆದ ಮತ್ತೆ ದುಡುದೋರ ಎಂತಕೆ ಸಾಂಕುತ್ತವು – ಅಲ್ಲದೋ?!
ಮೇಗೆ ಹೋಪಗ ಎಲ್ಲೋರುದೇ ಇರ್ತವು; ಕೆಳ ಇಳಿವಗ ಆರೂ ಇಲ್ಲೆ!
ನೆಮ್ಮದಿಯ ಜೀವನಕ್ಕೆ ಬೇಕಾದ ದೊಡ್ಡ ಸಂಬಳದ ದೊಡ್ಡ ಕೆಲಸ ಕೈಂದ ಹೋತು! ಕಂಪೆನಿಯ ಕೆಲಸ ಹೋತು, ಕಂಪೆನಿಯೇ ಹೋತು.
ಪುಣ್ಯ, ಟಿಗೇಟಿಂಗೆ ದಕ್ಕಿತ ಪೈಶೆ ಒಳುದಿತ್ತು ಆ ನಾಕು ತಿಂಗಳಿಲಿ, ಹಾಂಗಾಗಿ ಮತ್ತಾಣ ಒಂದು ವಿಮಾನ ಹಿಡುದು ಊರಿಂಗೆ ಬಂದಿಕ್ಕಿದವು.
~
ಅಂಬಗ, ಅದೆಂತಗೆ ಕಂಪೆನಿ ಮುಚ್ಚಿದ್ದದ್ದು ಹಾಂಗೆಲ್ಲ ಪಕ್ಕನೆ – ಕೇಳಿದೆ ಬೀಸ್ರೋಡುಮಾಣಿಯ ಕೈಲಿ.
ಅಮೇರಿಕಲ್ಲಿ ಈಗ ಆರತ್ರೂ ಪೈಶೆ ಇಲ್ಲೇಡ. ಎಲ್ಲವೂ ಸಾಲಲ್ಲೇ ಇಪ್ಪದಾಡ – ಹೇಳಿದ°,
ಅಂಬಗ ಹಳತ್ತು ಪ್ರಿಂಟು ಮಾಡಿದ ನೋಟುಗೊ ಎಲ್ಲ ಎಲ್ಲಿ ಹೋತು – ಹೇಳಿ ಅಂದೊಂದರಿ ಕೇಳಿತ್ತಿದ್ದೆ ಬೈಲಿಲಿ.
ವಿವರವಾದ ಉತ್ತರ ಸಿಕ್ಕೇಕಾರೆ ಸರ್ಪಮಲೆ ಮಾವನ ಹತ್ತರೇ ಕೇಳೇಕಟ್ಟೆ. ಅದಿರಳಿ;
ಅಂತೂ ಇಡೀ ಲೋಕಲ್ಲೇ ಪೈಶೆ ಇಲ್ಲೆ.

ಬಿರುಗಾಳಿಲಿ ದೊಡ್ಡ ಮರಂಗೊ ಮದಾಲು ಬೀಳುದಡ, ಸಣ್ಣ ಗೆಡುಗೊಕ್ಕೆ ಅಪಾಯ ಕಮ್ಮಿ ಆಡ.
ಹಾಂಗೆಯೇ, ದೊಡ್ಡ ದೊಡ್ಡ ಹೆಮ್ಮರ ಆಗಿ ಬೆಳದ ಕಂಪೆನಿಗೊ ಪೈಶೆಇಲ್ಲದ್ದೆ ಅಪ್ಪ ಬಿರುಗಾಳಿಗೆ ಮದಾಲು ಕವುಂಚಿ ಬೀಳ್ತವಡ.
ಒಂದು ಕಂಪೆನಿ ಕವುಂಚಿ ಬಿದ್ದಪ್ಪದ್ದೇ, ಆ ಕಂಪೆನಿಯ ಒಟ್ಟಿಂಗೆ ಒಯಿವಾಟು ಮಾಡಿಗೊಂಡಿದ್ದ ಎರಡು ಕಂಪೆನಿಗೂ ಪೆಟ್ಟು ಬೀಳ್ತಡ.
ಇಸ್ಪೇಟುಪಿಡಿಯ ಮನೆಕಟ್ಟಿಕ್ಕಿ – ಒಂದರ ಊಪಿ ಸಾಲೋಸಾಲು ಬೀಳುಸುತ್ತವಿಲ್ಲೆಯೋ ಮಕ್ಕೊ – ಅದೇ ನಮುನೆ,
ಒಂದಕ್ಕೊಂದು ಹೊಂದಿಗೊಂಡಿಪ್ಪ ಎಲ್ಲಾ ಕಂಪೆನಿಗಳೂ ಒಟ್ಟಿಂಗೇ ಮುಳುಂಗುತ್ತವಾಡ.
ಹಾಂಗೆ, ಪ್ರಶಾಂತ° ಕೆಲಸ ಮಾಡಿಗೊಂಡಿದ್ದ ಕಂಪೆನಿಯೂ ಒಂದು ಇಸ್ಪೇಟುಪಿಡಿ ಆಗಿತ್ತಾಡ.
ನಿನ್ನೆ ಒರೆಂಗೆ ಇದ್ದ ಸಂಪಾದನೆ ಇಂದಿಂದ ಇಲ್ಲೆ. ಆ ಸಂಪಾದನೆಯ ಗ್ರೇಶಿಗೊಂಡು, ಅದರ ನಂಬಿಕೆಲಿ ಎಷ್ಟೋ ಏರ್ಪಾಡಿಂಗೆ ಹೆರಟಿಕ್ಕು, ಅದೆಲ್ಲ ಈಗ ಬಾಕಿ! ಛೆ, ಬೈಲಿಲಿ ಆರಿಂಗೂ ಹೀಂಗೆ ಅಪ್ಪಲಾಗಪ್ಪ!
ಪಾಪ!
~

ಒಪಾಸು ಊರಿಂಗೆ ಬಂದ ಮಾಣಿಗೆ ಅಷ್ಟು ಪಕ್ಕಕ್ಕೆ ಎಂತ ಮಾಡುದು ಹೇಳಿಯೂ ಅರಡಿಯ ಆಡ.
ಅವಂಗೆ ಅರಡಿತ್ತ ಕೆಲಸ ಕಾಲಿ ಇಲ್ಲೆ; ಕಾಲಿ ಇಪ್ಪ ಕೆಲಸ ಅವಂಗೆ ಅರಡಿತ್ತಿಲ್ಲೆ.
ಕೆಲಸ ಮಾಡದ್ದರೆ ಸಂಸಾರದ ಮರಿಯಾದಿ! ಅಂತೂ ಹುಡ್ಕಿ-ಹುಡ್ಕಿ ಒಂದು ಸಿಕ್ಕಿತ್ತು.

ಸಿಕ್ಕಿದ್ದದು ಮದಲಾಣಷ್ಟು ಗವುಜಿಯ ಕೆಲಸ ಅಲ್ಲಾಡ; ಆದರೆ ತಕ್ಕಮಟ್ಟಿಂಗೆ ಬದ್ಕಲೆ ಸಾಕು.
ಮದಲಾಣ ಹಾಂಗೆ ಕೂದಲ್ಲೇ ಕೂರೇಕಾದ ಕೆಲಸ ಅಲ್ಲಾಡ, ಅತ್ಲಾಗಿತ್ಲಾಗಿ ಓಡಾಡಿಗೊಂಡು ಇರೇಕಾದ ಕೆಲಸ ಅಡ.
ಉದ್ಯೋಗಂ ಪುರುಷ ಲಕ್ಷಣಂ ಹೇಳಿದ ಹಾಂಗೆ, ಕೆಲಸ ಒಂದಾತನ್ನೇ! ಅಷ್ಟು ಸಾಕು! – ಹೇಳ್ತದೇ ಅವಂಗೆ ಸಮಾದಾನ.

~

ಬೀಸ್ರೋಡುಮಾಣಿ ಕತೆ ನಿಲ್ಲುಸಿದ°. ಈ ಕತೆಯೇ ಇಂದ್ರಾಣ ಶುದ್ದಿಯೋ – ಅಲ್ಲ.
ಇಷ್ಟು ಕತೆ ಕೇಳಿದ ಒಪ್ಪಣ್ಣಂಗೆ – ಅಂಬಗ ಅವನ ಹೆಂಡತ್ತಿಯ ಅವಸ್ತೆ ಹೇಂಗಾದಿಕ್ಕು – ಹೇಳಿ ಆಶ್ಚರ್ಯ ಆತು.
ಪೇಟೆ ಬದ್ಕಾಣಲ್ಲೇ ಬೆಳದ ಆ ಕೂಸಿಂಗೆ ಗೆಂಡನ ಈ ಸಣ್ಣ ಕೆಲಸಲ್ಲೇ ಜೀವನ ಮಾಡು ಹೇಳಿರೆ ಎಡಿಗೋ?
ಬಾಲ್ಯಲ್ಲಿ ಕೇಳಿದ್ದರ ತೆಗದು ಕೊಟ್ಟುಗೊಂಡಿದ್ದ ಅಪ್ಪಮ್ಮ,
ಮುಂದೆ – ಬೇಕಾದ್ದರ ತೆಗಕ್ಕೊಂಬ ಕೈತುಂಬಾ ಸಂಪಾದನೆ,
ದೊಡ್ಡ ಪೈಶೆಯ ಮನೆಗೆ ತಪ್ಪ ಗೆಂಡನೊಟ್ಟಿಂಗೆ ದಾಂಪತ್ಯ – ಅಲ್ಲಿ ಒರೆಂಗೂ ಅದಕ್ಕೆ ಪೈಶೆಬೆಶಿ ಹೇಳ್ತದೇ ಅರಡಿಯ!
ಮೇಕಪ್ಪು – ಕಣ್ಣುಕಪ್ಪು ಎಲ್ಲ ಮಾಡಿಗೊಂಡು, ಸಿನೆಮ-ಜವುಳಿ ಹೇಳಿಗೊಂಡು ಆರಾಮಲ್ಲಿ ಬದ್ಕಿದ ಆ ಜೀವನಶೈಲಿಗೆ ಇದೊಂದು ಗ್ರೇಶಲೆಡಿಯದ್ದ ಆಘಾತವೇ ಅಲ್ಲದೋ!
ಈಗ ಎಂತ್ಸರ ಮಾಡಿಗೊಂಡಿಕ್ಕು – ಹೇದು ಕೇಳಿದೆ ಬೀಸ್ರೋಡುಮಾಣಿಯ ಕೈಲಿ.
~

ಇಲ್ಲೆ ಒಪ್ಪಣ್ಣಾ, ಈಗ ಆ ಹೆಮ್ಮಕ್ಕಳ ನೋಡಿರೆ – ಮದಲು ಹಾಂಗೆಲ್ಲ ಇದ್ದತ್ತು ಹೇಳಿ ಅಂದಾಜಿಯೇ ಆವುತ್ತಿಲ್ಲೆ.
ಗೆಂಡನ ಆರ್ಥಿಕ ವೆವಸ್ತೆಗೆ ತೀರಾ ಹೊಂದಿಗೊಂಡು, ಆದರ್ಶವಾಗಿ ಬದ್ಕುತ್ತಾ ಇದ್ದು – ಹೇಳಿದ°.
ಗೆಂಡನ ಕೆಲಸ ಹೋದ ಸಮೆಯಲ್ಲಿ ಮೋರೆಲಿ ರಜ್ಜ ಬೇಜಾರ ಇದ್ದತ್ತು; ಆದರೆ ಮುಂದೆ ಅದು ಮನಸ್ಸುಗಟ್ಟಿ ಮಾಡಿಗೊಂಡತ್ತಡ.
ಏನಾದರಾಗಲಿ, ಗೆಂಡನ ಅನುರೂಪವಾಗಿ ಬದ್ಕುತ್ತದು ನಿಘಂಟು ಹೇಳಿಗೊಂಡು ಹೆಗಲಿಂಗೆ ಹೆಗಲು ಕೊಟ್ಟು ಜೀವನ ನೆಡೆಶುಲೆ ಸೇರಿತ್ತಾಡ.
ಬೆಂಗುಳೂರಿನ ಗೂಡಿನೊಳ ಅಂತೇ ಕೂಪದರ ಒಟ್ಟಿಂಗೆ, ಕುಂದಾಪುರಲ್ಲಿ ಅವಕ್ಕೆ ಇದ್ದಿದ್ದ ಹಡಿಲುಬಿದ್ದ ತೋಟದ ಮೇಲುಸ್ತುವಾರಿ ನೋಡಿಗೊಂಡತ್ತಡ. ಮೈ ಬಗ್ಗುಸಿ ರಜ ದುಡಿವಲೆ ಸುರುಮಾಡಿತ್ತಡ.
ಅನಗತ್ಯ ಮೇಕಪ್ಪು-ಮೈಕಪ್ಪುಗೊ ಪೂರ ಬಿಟ್ಟತ್ತಡ.
ಅಷ್ಟಲ್ಲದ್ದೆ, ಪಿಜ್ಜ, ನೂಡುಲ್ಸು ಹೇಳಿಗೊಂಡು ಮದಲು ಹೊತ್ತುದೇ- ಪೈಶೆಯುದೇ ಹಾಳುಮಾಡಿಗೊಂಡಿದ್ದದರ ನಿಲ್ಲುಸಿ, ಈಗ ಸಂಪೂರ್ಣ ಪ್ರಕೃತಿಸಹಜವಾದ ಜೀವನ ಆರಂಭ ಮಾಡಿತ್ತಡ.
ಆರೋಗ್ಯಕ್ಕೂ ಒಳ್ಳೆದು, ಪೈಶಕ್ಕೂ ಒಳ್ಳೆದು ಹೇಳಿಗೊಂಡು.
ಪ್ರಶಾಂತಂಗೆ ಕೆಲಸದ ಅಂಬೆರ್ಪು ಇಪ್ಪಗ ಈ ಹೆಮ್ಮಕ್ಕೊಗೆ ತೋಟದ ಅಂಬೆರ್ಪು ಇದ್ದಡ.
ಅರೆ!
ಹೇಂಗಿದ್ದ ಹೆಮ್ಮಕ್ಕೊ ಹೇಂಗೆ ಬದಲಾಗಿ ಬಿಟ್ಟತ್ತು!?
ಹಳ್ಳಿಯ ಸಂಪರ್ಕವೇ ಇಲ್ಲದ್ದ ಬಾಲ್ಯಂದ ಬಂದ ಆ ಕೂಸು, ಈಗ ಹೆಮ್ಮಕ್ಕೊ ಆದ ಮತ್ತೆ, ಜೀವನದ ಕಷ್ಟ ನಷ್ಟಂಗೊ ಅರ್ತು ಹಳ್ಳಿಹೆಮ್ಮಕ್ಕೊ ಆಗಿ ಬಿಟ್ಟತ್ತು!

ಈ ಪೇಟೆಯ ಸಣ್ಣ ಗೂಡಿಲಿ ಕೂದಂಡು ನಿಂಗೊ ದುಡಿತ್ತದು ಬೇಡ, ನಾವು ಊರಿಂಗೆ ಹೋಪೊ°-ಹೇಳುಲೆ ಸುರುಮಾಡಿದ್ದಡ ಅವನ ಹೆಂಡತ್ತಿ. ಇನ್ನು ಎಂತಾವುತ್ತು ನೋಡೇಕು – ಹೇಳಿದ ಬೀಸ್ರೋಡುಮಾಣಿ!

~

ಪೇಟೆ ನೂಡುಲ್ಸಕ್ಕೋ? ಹಳ್ಳಿ ಸೇಮಗೆಯೋ?

ಎಷ್ಟೇ ದೂರಿದರೂ, ಎಷ್ಟೇ ಬೈದರೂ – ನಮ್ಮ ಸಮಾಜ ಇಂದಿಂಗೂ ಪೂರ್ತಿ ಹಾಳಾಯಿದಿಲ್ಲೆ.
ಪಾತಿಅತ್ತೆಯ ಹಾಂಗೆ ಸಂಸಾರರಥವ ಹೊಂದುಸಿ ನೆಡೆತ್ತ ಮನಸ್ಥಿತಿಯ ಹೆಮ್ಮಕ್ಕೊ / ಕೂಸುಗೊ ಇದ್ದೇ ಇದ್ದವು.
ಹಾಂಗಿಪ್ಪ ಸುಮಾರು ಜೆನರ ಹತ್ತರಂದ ಕಂಡೂ ಗೊಂತಿದ್ದು ಒಪ್ಪಣ್ಣಂಗೆ.
ಆ ಪಟ್ಟಿಲಿ ಈ ಪ್ರಶಾಂತನ ಹೆಂಡತ್ತಿಯೂ ಸೇರಿತ್ತು. ಆ ಲೆಕ್ಕಲ್ಲಿ ಕೊಶೀ ಆತು.
~
ಅಕ್ಕಿ ಉಂಡೆಯ ಒತ್ತಿದ ಸೇಮಗೆ ಓ ಮೊನ್ನೆ ಮಾಡಿತ್ತಿದ್ದವಡ, ಬೀಸ್ರೋಡುಮಾಣಿ ಹೋಗಿಪ್ಪಗ.
ಅವರದ್ದೇ ಗೆದ್ದೆಲಿ ಆದ ಅಕ್ಕಿ ಅಡ.
ಮದಲಾಣ ನೂಡುಲ್ಸು ನಿಂದು ಈಗ ಅಕ್ಕಿಸೇಮಗೆಗೆ ತಿರುಗಿತ್ತು ಒಪಾಸು – ಹೇಳಿದ°.
~

ಒಂದರಿ ಕೆಲಸ ಹೋಗಿ, ಎತ್ತರಂದ ಕೆಳಂಗೆ ಬಿದ್ದಪ್ಪಗಳೇ – ಊರಿನ ಕೃಷಿಜೀವನದ ಬೆಲೆ ಗೊಂತಾದ್ದು ಅವಕ್ಕೆ.
ಆ ಲೆಕ್ಕಲ್ಲಿ ನೋಡಿರೆ ಕೆಲಸ ಹೋದ್ದು ಒಳ್ಳೆದಾತು – ಹೇಳಿಯೇ ಕಾಣ್ತು ಒಪ್ಪಣ್ಣಂಗೆ.
ಈಗಳೂ, ನಮ್ಮೋರ ಸುಮಾರು ಮಕ್ಕೊ ಬೆಂಗುಳೂರಿಲಿ ದುಡಿತ್ತವು, ಅವಕ್ಕೆ ಊರಿಲಿ ದಾರಾಳ ಜಾಗೆ-ತೋಟ-ಕೃಷಿ ಇತ್ಯಾದಿ ಇದ್ದು. ಅವರ ಹೆಂಡತ್ತಿಗೂ ಇದೇ ನಮುನೆ ಜ್ಞಾನೋದಯ ಆಗಿದ್ದರೆ!
ಎಂತ ಹೇಳ್ತಿ?
ಕೆಟ್ಟ ಮೇಗೆ ಬುದ್ಧಿ ಬತ್ತ ಬದಲು ಕೆಡುವ ಮೊದಲೇ ಬಂದರೆ ಎಷ್ಟು ಒಳ್ಳೆದಕ್ಕು ಅಲ್ಲದೋ?

ಒಂದೊಪ್ಪ: ಪೇಟೆ ನೂಡುಲ್ಸು ತಿಂದರೆ ಹಶು ನಿಂಗು; ಆದರೆ ನಮ್ಮದೇ ಗೆದ್ದೆಯ ಅಕ್ಕಿಯ ಸೇಮಗೆ ತಿಂದರೆ – ಹೊಟ್ಟೆತುಂಬುಗು!
ಅಲ್ಲದೋ?

48 thoughts on “ಪೇಟೆಕೂಸು ನೂಡುಲ್ಸು ಬಿಟ್ಟು ಸೇಮಗೆ ತಿಂಬಲೆ ಸುರುಮಾಡಿತ್ತಡ!

  1. ಎಲ್ಲಾ ಕಾಲಕ್ಕೆ ತಕ್ಕ ಹಾಗೆ ಕೊಲ ಹೆಳ್ತವಲ್ಲ ಹಾಂಗೆ.

    ಆದರೆ ಇಲ್ಲಿ ಈಗ ಕೊಲವೆ ಹೆಚ್ಹಾಯಿದು.

    ಎಲ್ಲಿ ಹೊದರೂ ಸಂಸ್ಕ್ರರ ಬಿಟ್ಟು ಹೊಪಲಾಗ.

    ಪೇಟಗೆ ಅನಿವಾರ್ಯತೆ, ಅವಕಾಶಕ್ಕೆ ಹೊಪದು ಸರಿ. ಇಲ್ಲದ್ದರೆ ಇಂದ್ರಾಣ ಕಾಲಲ್ಲಿ ನಮ್ಮ ಸಮಾಜ ಹಿಂದೆ ನಿಲ್ಲುಗು.

    ಆದರೆ ಊರಿಲಿ ೧೦ ಎಕ್ರೆ ತೊಟ ಇದ್ದ ಮಾಣಿಯ ಬಿಟ್ತು ಪೇಟೆಲಿ ೧೦ ಸಾವಿರ ಸಂಬಳ ಇಪ್ಪ ಮಾಣಿಯೆ ಅಕ್ಕು ಹೇಳ್ತ ಮನಸ್ಠಿತಿ ಸಮಾಜದ ವಿಪರ್ಯಾಸ.

    ಕಾಲ ಚಕ್ರ ತಿರುಗುಗು. ಅಷ್ತಪ್ಪಗ ಎಲ್ಲರೂ ಊರಿನ ಹುಡುಕ್ಕಿಯೊಂಡು ಬಕ್ಕು.

    1. ನಂದಣ್ಣನ ಒಪ್ಪ ಕಂಡು ಕೊಶೀ ಆತು.
      ಊರಿಲಿದ್ದೋನಿಂಗೆ ಮಾಣಿ ಸಿಕ್ಕದ್ದು ಬೇಜಾರವೇ ಆದರೂ – ಊರಿಲಿ ಬಂದು ಕೂರೇಕಾರೆ ಒಬ್ಬ ಪೇಟೆಲಿ ಇಪ್ಪತ್ತೊರಿಶ ದುಡಿಯೇಕಕ್ಕು. ಅಲ್ಲದೋ?

      ಕಾಲಚಕ್ರ ತಿರುಗ್ಗು, ಊರಿನ ಹುಡ್ಕಿಯೊಂಡು ಬಕ್ಕು. ಆದರೆ ಅಷ್ಟಪ್ಪಗ ಊರು ಹೇಂಗಿಕ್ಕು?!!!

  2. ಒಪ್ಪಣ್ಣೋ..,

    ಮನಸ್ಸು ತುಂಬಿದ ಲಾಯಕ ಶುದ್ದಿ. ಪ್ರಶಾಂತನ ಹೆಂಡತ್ತಿ ಊರಿನ ಪ್ರಶಾಂತ ಜಾಗೆಯೇ ಅಕ್ಕು ಹೇಳಿ ತೀರ್ಮಾನ ಮಾಡಿದ್ದು ಪ್ರಶಸ್ತ ಆಯಿದು.

    ಸಂದರ್ಭಕ್ಕೆ ಹೊಂದಿಗೊಂಡು ಬದುಕ್ಕುಲೆ ಅರಡಿವದು ಗೊಂತಾದರೆ ಎಲ್ಲಿಯೂ ಬದುಕ್ಕುಲೆ ಎಡಿಗು. ನಮ್ಮ ಹಿರಿಯರಿಂದ ಬಂದ ಜಾಗೆ ಅಥವಾ ಯಾವುದೇ ಜಾಗೆ ನಮ್ಮ ಕೈ ಯಾವತ್ತಿಂಗೂ ಬಿಡ್ತಿಲ್ಲೆ. ನಾವು ಗೌರವಿಸಿ, ಪ್ರೀತಿಲಿ ನೋಡಿಗೊಂಡರೆ ಮಣ್ಣಿನ ರೂಪದ ಅಬ್ಬೆ ನಮ್ಮ ತಾಂಗಿಯೇ ತಾಂಗುತ್ತು. ಎಲ್ಲರಿಂಗೂ ಜನ ಇಲ್ಲೆ ಕೆಲಸಕ್ಕೆ, ಜಾನುವಾರು ಸಾಂಕುಲೇ ಕಷ್ಟ ಹೇಳಿ ಆವುತ್ತು. ಆ ಹೊತ್ತಿಂಗೆ ಕೆಲವೇ ಸಮಯದ ಕಷ್ಟಕ್ಕೆ ನಾವು ನಮ್ಮ ಪುಣ್ಯ ಭೂಮಿಯ ಮಾರಿ ಪೇಟೆಗೆ ಹೋದರೆ ನಾಳೆ ನಮ್ಮ ಅಸ್ತಿತ್ವಕ್ಕೆ ಬೆಲೆ ಇಕ್ಕೋ? ಪ್ರಶಾಂತಂಗೆ ಹೆರ ದೇಶದ ಕಂಪೆನಿ ಮುಳುಗಿ ಅಪ್ಪಗ ಬಂದು ಕೂಪಲೆ ಊರಿಲಿ ಹಡಿಲು ಬಿದ್ದ ಜಾಗೆ ಆದರೂ ಇತ್ತು. ಊರಿನ ಅಡಿಪಾಯದ ಜಾಗೆ ಬಿಟ್ಟು ಪೇಟೆಲಿ ಕೂದರೆ ನಾಳೆ ಎಂತಾದರೂ ಹೆಚ್ಚು ಕಡಮ್ಮೆ ಆಗಿ ಆ ಭೂಮಿ ನಷ್ಟ ಆದರೆ ಎಲ್ಲಿಗೆ ಹೋಪದು? ರಜ್ಜ ಸಮಯ ಹಾಳು ಬಿದ್ದ ತೋಟವ ನೋಡಿಗೊಂಬಲೆ ಪೇಟೆಲೇ ಬೆಳದ ಕೂಸಿಂಗೆ ಎಡಿಗಾದರೆ, ಹಳ್ಳಿಯ ವಾತಾವರಣಲ್ಲಿ ಬೆಳದು ಈಗ ಪೇಟೆಲಿ ಇಪ್ಪ ನಮ್ಮ ಕೂಸುಗೊಕ್ಕೆ ಎಡಿಯದ? ಹಳ್ಳಿಯ ಜಾಗೆಗೆ ಒಂದು ವ್ಯವಸ್ತೆ ಮಾಡಿ, ಪೇಟೆಲಿ ಕಲಿಯುವಿಕೆಗೆ ತಕ್ಕ ದುಡಿಯಲಿ. ಆದರೆ ರಜ್ಜ ಸಮಯ ಕಳುದು ಅಪ್ಪಗ ವಾಪಾಸು ನಾವು ಹುಟ್ಟಿದ ಮಣ್ಣಿಂಗೆ ಬಪ್ಪಲಕ್ಕಲ್ಲದ?

    ಒಪ್ಪಣ್ಣ, ಶುದ್ದಿಯ ಸಾರ ತುಂಬಾ ಲಾಯಕ ಆಯಿದು. ನೀನು ಬರದ ಹಾಂಗೆ ನಮ್ಮ ಎಲ್ಲಾ ಕೂಸುಗೊಕ್ಕೆ, ಮಾಣಿಯಂಗೊಕ್ಕೆ ಅವರವರ ಮಣ್ಣಿನ ಮೇಲೆ ಪ್ರೀತಿ ಬರಲಿ. ನಮ್ಮ ಹಿರಿಯರಿಂದ ಬಂದ ಜಾಗೆ ಬೇರೆ ಸಮುದಾಯಕ್ಕೆ ಹೋಗದ್ದೆ ಅವಕ್ಕವಕ್ಕೆ ಅನುಭವಿಸುಲೆ ಸಿಕ್ಕುವ ಹಾಂಗೆ ಆಗಲಿ. ಇಂದು ನಾವು ಕೆಲವು ಲಕ್ಷಕ್ಕೆ ಮಾರಿದ ಜಾಗೆ ನಾಳೆ ಕೋಟಿ ಕೋಟಿ ಕೊಟ್ಟರೂ ಸಿಕ್ಕ.
    ಬದುಕಿನ ಸತ್ಯ ಇದು… ಎಲ್ಲರಿಂಗೂ ಒಳ್ಳೆಯ ಪ್ರಶಾಂತ ಬದುಕು ಸಿಕ್ಕಲಿ.

    ಒಂದೊಪ್ಪ ಲಾಯ್ಕಾಯಿದು. ಎಲ್ಲೋರೂ ಹಶು ತಣಿಶುವ ಓಟಲ್ಲಿ ಇದ್ದವು. ಆದರೆ ಮನಸ್ಸು, ಹೊಟ್ಟೆ ಎರಡೂ ತಣಿಶುವ ಹಾಂಗೆ ಇಪ್ಪದನ್ನೇ ಮರದ್ದವು.

    1. ಅಕ್ಕಾ,
      ಚೆಂದದ ಒಪ್ಪ ಬರದ್ದಿ. ಶುದ್ದಿಸಾರ ಇಡೀ ಈ ಒಪ್ಪಲ್ಲಿ ಇದ್ದು.
      ಇದನ್ನೇ ಒಂದು ಶುದ್ದಿ ಆಗಿ ಹಾಕಲಕ್ಕನ್ನೇ ಹೇದು ಕಾಂಬದು ಒಪ್ಪಣ್ಣಂಗೆ.
      { ಹಶು ತಣಿಶುವ ಓಟಲ್ಲಿ ಮನಸ್ಸು, ಹೊಟ್ಟೆ ಎರಡೂ ತಣಿಶುವ.. ಮರದ್ದವು } – ಈ ಗೆರೆ ತುಂಬಾ ಲಾಯಿಕಾಯಿದು ಅಕ್ಕ.

  3. ಗೃಹಿಣೀ ಗೃಹಮುಚ್ಯತೆ… ಮನೆಯ ಗೃಹಿಣಿ ಮನಸ್ಸು ಮಾಡಿದರೆ ಅಸಾಧ್ಯವಾದ್ದು ಯಾವುದೂ ಇಲ್ಲೇ. ಪ್ರಶಾಂತನ ಹೆಂಡತಿಯ ಹಾಂಗೆ ನಾವುದೇ ನಮ್ಮ ಧರ್ಮ,ಸಂಸ್ಕೃತಿಯ ಒಳಿಶಿಗೊಂಡು ನಮ್ಮತನಕ್ಕೆ ಮರಳುವ…

    1. ಮದಲು ಇಂಜಿನಿಯರು ಆಗಿಂಡು ಇದ್ದು, ಮುಂದೆ ಸಂಸಾರಲ್ಲಿ ಸಂಸ್ಕಾರದ ಕೃಷಿಮಾಡ್ತದು ನಿಂಗಳೇ ಅಲ್ಲದೋ.
      ಸಾಧ್ಯ ಇಪ್ಪ ಎಲ್ಲ ಹೆಮ್ಮಕ್ಕಳೂ ಹಾಂಗೇ ಆದರೆ – ಊರೂ ಒಳಿಗು, ಮನೆಯೂ ಒಳಿಗು.

  4. ಎಲ್ಲವೂ ಒಂದು ಚಕ್ರದ ಹಾಂಗೆ ಅಲ್ಲದಾ ಒಪ್ಪಣ್ಣಾ? ಪೇಟೆಯ ಆಡಂಬರದ ಬದುಕು ಆಗ, ಕೃಷಿಯೂ ಬೇಕು ಹೇಳಿ ಬೇಗನೆ ಅಪ್ಪಲಿದ್ದು. ಅದಕ್ಕೆ ಹೊಂದಿಗೊಂಬಲೆ ಎವರೆಡಿ ಆಗಿದ್ದರೆ ಆತು. ಆದರೆ ಆ ಸಮಯಕ್ಕಪ್ಪಗ ನಮ್ಮ ಊರಿಲಿಪ್ಪ ಜಾಗೆಂಗಳಲ್ಲಿ ಎಲ್ಲ ಚೇಟಂಗಳೇ ತುಂಬಿ ಹೋಕ್ಕೋ ಹೇಳಿ ಸಣ್ಣ ಹೆದರಿಕೆ!

    1. { ಊರಿಲಿಪ್ಪ ಜಾಗೆಂಗಳಲ್ಲಿ ಎಲ್ಲ ಚೇಟಂಗಳೇ ತುಂಬಿ ಹೋಕ್ಕೋ }
      ಚಿಂತೆ ಮಾಡೇಕಾದ ವಿಚಾರ ರಾಜಮಾವಾ°…

    1. ಏ ಭಾವಯ್ಯ ,
      (ಸೇಮಗೆ ಹಳ್ಲಿಯ ನೈಜ ಶುದ್ದತೆಯ ಪ್ರತೀಕ ವಾದರೆ….)
      ಈಗ ನಮ್ಮ ಅಕ್ಕಿ ಸೇಮಗೆಯೂ ಒಣಗುಸಿ ಲಕೋಟೆಲಿ ಹಾಕಿ ಮಾರ್ತವನ್ನೆ , ಅದೂ ದೊಡ್ಡ ದೊಡ್ಡ ಕಂಪೆನಿಗೊ ಇದಕ್ಕೆಂತ ಹೇಳ್ತಿ….?

      1. ಪಕಳಕುಂಜ ಮಾವನ ಒಪ್ಪಕ್ಕೆ ಒಂದೊಪ್ಪ.

        ಪ್ರಸಾದಭಾವಾ..
        ಅದು ಹಾಂಕಾರದ ಸಂಕೇತ!! ಅಲ್ಲದೋ? 😉

  5. ಈಗಾಣ ಜವ್ವನಿಗರಿಂಗೆ ಒಳ್ಳೆ ಸಂದೇಶ ಕೊಟ್ಟತ್ತು ಒಪ್ಪಣ್ಣನ ನೂಡಲ್ಸ್ / ಸೇಮಗೆ ಕಥೆ. ಪೇಟೆಯ ಮರ್ಜಿಲಿ ಬೆಳದ ಕೂಸು ಪೋಕುಮುಟ್ಟುವಗ ಹಳ್ಳಿಯ ಜೀವನಕ್ಕೆ ಹೊಂದಿ ಕೊಂಡದು ಮೆಚ್ಚತಕ್ಕುದಾದ ವಿಚಾರ.

    ಉದಿಯಾದರೆ ಮೋರಗೆ ಬೆಳಿಬಣ್ಣ, ಕಣ್ಣಕರೆಂಗೆ ಕಪ್ಪು ಬಣ್ಣ, ತಲಗೆ ಕಂದುಬಣ್ಣ, ತೊಡಿಗೆ ಕೆಂಪುಬಣ್ಣ! ಪಟ್ಟಣದ ವರ್ಣ ರಂಜಿತ ವರ್ಣನೆ ಒಪ್ಪಣ್ಣನ ಶೈಲಿಲಿ ಚೆಂದ ಆಯಿದು.
    ಕೂಸು ಹುಡ್ಕಲೆ ಜಾಸ್ತಿ ಪುರುಸೊತ್ತು ಸಿಕ್ಕದ್ದಕ್ಕೋ ಏನೋ – ಅವನ ಕಂಪೆನಿಲಿ ಕೆಲಸ ಮಾಡಿಗೊಂಡಿದ್ದ ಕೂಸನ್ನೇ ಮದುವೆ ಆದನಾಡ. ಆರಿಂಗು ಬಾರದ್ದ ಕಲ್ಪನೆ, ಭಾರೀ ಶೋಕು ಆಯಿದದ.
    ಇವಂಗಪ್ಪಟ್ಟು ದೊಡ್ಡ ಕುರ್ಶಿ ಬೆಂಗುಳೂರಿಲಿ ಇಲ್ಲದ್ದಕ್ಕೆ ಸೀತ ಅಮೇರಿಕಕ್ಕೆ ಕಳುಗಿದವಡ; ಇದುದೆ ಹಾಂಗೆ ಅದ್ಭುತ.
    ಕಂಪೆನಿಗಳ ಇಸ್ಪೇಟುಪಿಡಿಗೆ ಹೋಲುಸಿದ್ದದು ಎಲ್ಲವುದೆ ಸೂಪರ್ ಆಯಿದು.
    ಮಕ್ಕೊಗೆಲ್ಲ ಪೇಟೆಯ ನೂಡಲ್ಸಿಂದ ಮನೆಲಿ ಮಾಡಿದ ಸೇಮಗೆ ರುಚಿಯಾಗಲಿ ಹೇಳಿ ಹಾರೈಸುವೊ ಅಲ್ಲದೊ ?

    1. ಬೊಳುಂಬುಮಾವಂಗೆ ಕೊಶಿ ಆದ ಸಾಲುಗೊ ಕಂಡು ಸಂತೋಷ ಆತು.
      ಹಾಂಗೆ ಹೇಳಿರೆ ಆರಾರು ಬೈದಿಕ್ಕುಗೋ ಹೇಳಿ ಅನುಸಿತ್ತಿದ್ದು ಒಪ್ಪಣ್ಣಂಗೆ. 😉

  6. [ಏನಾದರಾಗಲಿ, ಗೆಂಡನ ಅನುರೂಪವಾಗಿ ಬದ್ಕುತ್ತದು ನಿಘಂಟು ಹೇಳಿಗೊಂಡು ಹೆಗಲಿಂಗೆ ಹೆಗಲು ಕೊಟ್ಟು ಜೀವನ ನೆಡೆಶುಲೆ ಸೇರಿತ್ತಾಡ.]-ಎಲ್ಲರಿಂಗೂ ಮಾದರಿ ಆಗಿ ನೆಡಕ್ಕೊಂಡದು ಸಂತೋಷದ ವಿಶಯ.ಹೆಮ್ಮಕ್ಕೊ ಎರಡು ಪರಿಸ್ಥಿತಿಯ ಹೇಂಗೆ ನಿಭಾಯಿಸಿತ್ತು ಹೇಳಿ ಚೆಂದಕೆ ನಿರೂಪಣೆ ಆಯಿದು
    ಪರಿಸ್ಥಿತಿಗೆ ಹೊಂದಿಗೊಂಡು ಸಹ ಬಾಳ್ವೆ ನೆಡೆಶಕ್ಕಾದು ಯಾವ ಕಾಲಕ್ಕೆ ಆದರೂ ಅಗತ್ಯವೇ ಸರಿ.
    ಅದಕ್ಕೇ ಆರಕ್ಕೆ ಏರಲಾಗ ಮೂರಕ್ಕೆ ಇಳಿವಲಾಗ ಹೇಳುವದು.
    ಒಂದೊಪ್ಪ ಲಾಯಿಕ ಆಯಿದು.
    ಅವವು ನೆಟ್ಟು ಬೆಳೆಶಿದ್ದರಲ್ಲಿ ಫಲ ಬಪ್ಪಗ ಅಪ್ಪ ಕೊಶಿ, ಮತ್ತ್ತೆ ಅದರ ಬಳಕೆಲಿ ಸಿಕ್ಕುವ ಸಂತೃಪ್ತಿ ಬೇರೆ ಎಲ್ಲಿಯೂ ಸಿಕ್ಕ ಅಲ್ಲದಾ

    1. ಅಪ್ಪಚ್ಚೀ..
      ಚೆಂದದ ಒಪ್ಪ ಬರದ್ದಿ.

      { ಅವವು ನೆಟ್ಟು ಬೆಳೆಶಿದ್ದರಲ್ಲಿ ಫಲ ಬಪ್ಪಗ ಅಪ್ಪ ಕೊಶಿ }
      – ಓ ಅಲ್ಲಿ, ನಿಂಗಳ ಮನೆಕರೇಲಿ – ಒಸ್ತ್ರ ಒಗೆತ್ತಲ್ಲಿ ಬಲತ್ತಿಂಗೆ ಇರ್ತ ಬಾಳೆಗೊನೆ ಬೆಳದತ್ತೋ?
      ಪಟತೆಗದು ಬೈಲಿಂಗೆ ಕೊಟ್ಟು ಕಳುಸಲೆ ಮರೇಡಿ, ಹಾಂ! 😉

  7. ತುಂಬ ಒಳ್ಲೆ ನಿರೂಪಣೆ. ಚಂದಕೆ ಬರದ್ದಿ. ಎನ್ನದೂ ಒಂದು ಒಪ್ಪ.

  8. ತುಂಬಾ ಲಾಯಿಕದ ಶುದ್ಧಿಯ ಯಾವಾಗಲಿನ ಹಾಂಗೆ ಬರದ್ದೂ ತುಂಬ ಲಾಯಿಕ ಆಯಿದು.
    ಹೊಂದಿಗೊಂಬ ಗುಣ ಎಲ್ಲರಲ್ಲು ಇರೆಕು ಅಂಬಗ ಎಲ್ಲರಿಂಗೂ ಒಳಿತೆ ಅಲ್ಲದಾ?
    ಲಾಯಿಕಾಯಿದು ಒಪ್ಪಣ್ಣ,
    ~ಸುಮನಕ್ಕ

    1. ಸುಮನಕ್ಕಾ,
      ಎಷ್ಟೋ ಜೆನ ಸಣ್ಣಸಣ್ಣ ಕಾರಣಲ್ಲಿ ದೂರ ಆವುತ್ತವು; ರಜ ಹೊಂದಾಣಿಕೆ ಇದ್ದೊಂಡು ಸೇಮಗೆ ತಿಂಬಲೆ ಕಲ್ತರೆ ಎಲ್ಲವೂ ಸುಸೂತ್ರ ಆಗಿ ನೆಡಗು.
      ಅಲ್ಲದೋ? 🙂

  9. {ಪೇಟೆ ನೂಡುಲ್ಸು ತಿಂದರೆ ಹಶು ನಿಂಗು; ಆದರೆ ನಮ್ಮದೇ ಗೆದ್ದೆಯ ಅಕ್ಕಿಯ ಸೇಮಗೆ ತಿಂದರೆ – ಹೊಟ್ಟೆತುಂಬುಗು!
    ಅಲ್ಲದೋ? } ಬಾರಿ…ಲಾಯಿಕಾಯಿದು….

  10. ಸೇಮಗೆ ತಿ೦ದಷ್ಟೇ ಖುಷಿ ಆತು ಒಪ್ಪಣ್ಣಾ……………

    ಪರೀಕ್ಷೆ ಆವ್ತಾ ಇದ್ದು……..
    ಬೈಲಿ೦ಗೆ ಬಾರದ್ದೆ ಸುಮಾರು ಸಮಯವೇ ಆತು………

    ಒಪ್ಪಣ್ಣಾ, ಗುರಿಕ್ಕಾರಣ್ಣಾ….ಎನ್ನ ಕಾಣೆಯಾದವರ ಪಟ್ಟಿಗೆ ಸೇರಿಸೆಡಿ…..ಆಗದಾ??????? ಎನ್ನ ಅಮ್ಮನತ್ತರೆ ಹೇಳಿ ನಿ೦ಗೊಗೆ ಸೇಮಗೆ-ಕಾಯಿಹಾಲು ಮಾಡಿ ಕೊಡ್ಸುತ್ತೆ….
    ರಜ್ಜ ಸಮಯ ಕಳುದು ಲೇಖನ ಬರೆತ್ತೆ……….

    1. ಅಕ್ಕೋ, ಇದಾ ಹೀಂಗೆಲ್ಲಾ ಹೇಳಿ ಮಂಕಾಡುತ್ಸು ಬೇಡ ಆತೋ. ಈಗ ಸೇಮಗೆ-ಕಾಯಿಹಾಲು ತಿಂಬಲೆ ಆರಿಂಗುದೇ ಕೊದಿ ಇಲ್ಲೆ ಆತೋ, ಎಂತಕೆ ಹೇಳಿರೆ ಈಗ ಈ ಸೇಮಗೆ-ಕಾಯಿಹಾಲು ಮಾಡುಲೆ ಮೊದಲಾಣ ಹಾಂಗೆ ಕಷ್ಟ ಎಂತ ಮಣ್ಣೂ ಇಲ್ಲೆ ಫಟಾ ಫಟ್ ಕಾಲುಗಂಟೆಳಿ ಮಾಡುಲೆ ಆವುತ್ತಿದಾ ಹಾಂಗಾಗಿ. ಈ ಕೆಟ್ಟುಂಕೆಣಿ ನಮ್ಮತ್ರೆ ನಡೆಯ ಆತೋ……….

      1. ಹರೇ ರಾಮ ಪ್ರಸಾದಣ್ಣ……….
        ಎನಗ೦ತೂ ಒಪ್ಪಣ್ಣನ ಲೆಖನ ಓದಿ ಸೇಮಗೆ ತಿ೦ಬ ಕೊದಿ ಆತಪ್ಪ………..
        ಬೈಲಿ೦ಗೆ ಲೇಖನ ಬರವಲೆದೆ ಕೊದಿ ಆವ್ತಾ ಇದ್ದು ಪ್ರಸಾದಣ್ಣ……….
        ಕೆಟ್ಟುಂಕೆಣಿ ಎಲ್ಲ ಎ೦ತವ್ದೆ ಇಲ್ಲೆ ಪ್ರಸಾದಣ್ಣ…….. ಸುಮ್ಮನೆ ಕುಶಾಲಿ೦ಗೆ ಹೇಳಿದ್ದು………
        ಬೈಲಿಲಿ ಕುಶಾಲುದೆ ಬೇಕಲ್ಲದಾ????
        ನಮ್ಮ ‘ಒಪ್ಪಣ್ಣ’ ಬೈಲು ಹೇಳಿದರೆ ಹಾ೦ಗೆಯೆ…….ಅದರಲ್ಲಿ ನಿಜವಾದ ವಿಷಯ೦ಗಳೂ ಇದ್ದು, ಕುಶಾಲೂದೆ ಇದ್ದು, ಹಾಸ್ಯ ಚಟಾಕಿ೦ಗದೆ ಇರ್ತು ಎಲ್ಲವುದೆ ಇರ್ತು………… ಹಾ೦ಗಿದ್ದರೇ ಚೆ೦ದ ಅಲ್ಲದಾ ಪ್ರಸಾದಣ್ಣಾ????????

        1. ಪುಟ್ಟಕ್ಕೋ, ನಮ್ಮವ್ದೆ ಅಂತೇ ಕುಚಾಲಿಂಗೆ…………, ಈ ೧೨ ಕೊಕ್ಕೆ ನೇಲುಸಿದ್ದು ಯಾರ ಕೆಮಿಗೆ ಸಿಕ್ಕುಸಿ ಯೆಳವಲೆ ಹೇಳಿ ಗೊಂತಾತಿಲ್ಲೆನ್ನೇ

          1. ಪುಟ್ಟಕ್ಕೋ..
            { ಸೇಮಗೆ-ಕಾಯಿಹಾಲು ಮಾಡಿ ಕೊಡ್ಸುತ್ತೆ } – ಎಂತ, ನೂಕಡ್ಯೆ ಮಾಡುಸುತ್ತ ಅಂದಾಜು?!
            ಎಂತಾರು ಗವುಜಿ ಗಮ್ಮತ್ತಿನ ಲೆಕ್ಕದ್ದೋ?

            ಒಂದರಿ ಬೈಲಿಂಗಿಳುದರೆ ಮತ್ತೆ ನೂಕಡ್ಯೆ ಮಾಡಿರೂ ಹೋವುತ್ತಿಲ್ಲೆ ಎಂಗೊ!
            ಆಗಲಿ, ನಿಂಗೊಗೆ ಕೊಶಿಯಾದ ಶುದ್ದಿ ಒಪ್ಪಣ್ಣಂಗೂ ಕೊಶಿಯೇ!

            ರಸಾಯನ ಯೇವತ್ತು? 😉

        1. ಪುಟ್ಟಕ್ಕೋ..
          ಶುದ್ದಿಗೊ ಬೇಗ ಬರಳಿ.

          ಅಲ್ಲದ್ದರೆ ಪುತ್ತೂರು ಪೋಲೀಷ್ಟೇಶನಿಲಿ ಪಳ್ಳತ್ತಡ್ಕ ದೊಡ್ಡಪ್ಪನ ಮಗನೇ ಇಪ್ಪದು ಈಗ, ಪೋನು ಮಾಡಿ ಹುಡ್ಕುಸುವೆಯೊ ಎಂಗೊ!!

    2. ಪುಟ್ಟಕ್ಕನ ನೋಡಿ ಸೇಮಗೆ ಕಾಯಿ ಹಾಲು ತಿಂದಷ್ಟೇ ಖುಷಿ ಆತು… ಪುಟ್ಟಕ್ಕ ಹರೇ ರಾಮಲ್ಲಿ ಬರದ ಲೇಖನ ಓದಿ “ಛೆ! ಆನೆಂತ ಗುರುಭಕ್ತೆ… ಇನ್ನುದೆ ಐಸ್ಕ್ರೀಂ, ಚಾಕಲೇಟ್ ತಿನ್ನುತ್ತಾ ಇದ್ದೆನ್ನೇ…” ಹೇಳಿ ಅನ್ನಿಸಿತ್ತು. ಅದರ ನಂತರ ಐಸ್ಕ್ರೀಂ, ಚಾಕಲೇಟ್ ತಿಮ್ಬದರ ಬಿಟ್ಟೆ… ಈಗ ಐಸ್ಕ್ರೀಂ, ಚಾಕಲೇಟ್ ಕಾಮ್ಬಗ ಎಲ್ಲ ಪುಟ್ಟಕ್ಕನ ನೆನಪಾವುತ್ತು… ಬೇಜಾರಿಲ್ಲಿ ಅಲ್ಲ… ಸೇಮಗೆ ಕಾಯಿ ಹಾಲು ತಿಂದಷ್ಟು ಖುಷಿಲಿ…

      ಪುಟ್ಟಕ್ಕನ ಲೇಖನಂಗಳ ನಿರೀಕ್ಷೆಲ್ಲಿ ಇದ್ದೆಯ…

      1. ಆದಷ್ಟು ಬೇಗ ಬರವಲೆ ಪ್ರಯತ್ನುಸುತ್ತೆ………… ಧನ್ಯವಾದ೦ಗೊ…….
        ಓಹೋ ಎನ್ನ ಲೆಖನ೦ದಾಗಿ ಒಬ್ಬರಾದರೂ ಐಸ್ಕ್ರೀಂ, ಚಾಕಲೇಟ್ ತಿ೦ಬದು ಬಿಟ್ಟದು ಗೊ೦ತಾಗಿ ಭಾರಿ ಕೊಶಿ ಆತು ಜಯಕ್ಕ………

  11. ಒಪ್ಪಣ್ಣಾ…
    ಒಳ್ಳೆ ಶುದ್ದಿ ಕೇಳಿ ಕೊಶಿ ಆತು.
    ಒಂದು ಕಾಲಲ್ಲಿ ಇದ್ದ ಬ್ರಾಹ್ಮರ ಎಕ್ರೆ ಗಟ್ಳೆ ಆಸ್ತಿ ಹಡ್ಳು ಬಿದ್ದು,
    ಈಗಾಣ ಕೊಚ್ಚಿ ಕ್ರಿಸ್ತಂಗಳ ಕೈಗೆ ಬದಲ್ತಾ ಇರ್ಸು ನೋಡುವಗ ಬೇಜಾರಾವ್ತು.

    1. ಇದೊಂದು ವಿವರವಾಗಿ ಮಾತಾಡೇಕಾದ ವಿಚಾರ ದೊಡ್ಡಬಾವ.
      ನಿಧಾನಕ್ಕೆ ಬೈಲಿಲಿ ಹೇಳುವೊ. ಆಗದೋ?

  12. ಒಪ್ಪಣ್ಣೋ ಒೞೆ ಶುದ್ದಿ…..ಎಲ್ಲ ಕಡೆ ಹೀಂಗೆ ಆದರೆ ಎಷ್ಟು ಒೞೆದು. ಹೀಂಗೆ ಹೇಳಿರೆ ಕಂಪೆನಿ ಮುಚ್ಚೆಕ್ಕು ಹೇಳಿ ಅಲ್ಲ.ಪರಿಸ್ಥಿತಿಗೆ ಹೊಂದಿಗೊಂಬದು ಹೇಳಿ……

    ಆದರೆ ಇತ್ತೀಚೆಗೆ ತುಂಬ ಕಡೆಂದ ಡೈವೋರ್ಸಿನ ಸುದ್ದಿ ಕೇಳ್ತಾ ಇದ್ದು. ಕೇಳುಗ ಬೇಜಾರಾವುತ್ತು.

    ನಮ್ಮ ಊರಿನ ಮಾಣಿಯಂಗೊಕ್ಕೆ ಕೂಸು ಸಿಕ್ಕುತ್ತಿಲ್ಲೆ ಹೇಳುದು ಒಂದು ಬೇಜಾರಾದರೆ , ಮದುವೆ ಆಗಿ ವರ್ಷದೊಳ ಡೈವೋರ್ಸ್ ಅಪ್ಪದು ಇನ್ನೊಂದು ಬೇಜಾರಿನ ವಿಷಯ.ಒಂದು ಸಂಸಾರ ಹೇಳಿರೆ ಎಲ್ಲರೂ ಹೊಂದಿಗೊೞೆಕ್ಕು.ಎರಡು ಕೈ ಸೇರಿದರೆ ಚಪ್ಪಾಳೆ.ಗಂಡ ಹೆಂಡತಿ ಹೊಂದಿಗೊಂಡರೆ ಸಂಸಾರ….

    1. ಅನುಪಮಕ್ಕಾ,
      ಸ್ವತಃ ಕೋಲೇಜು ಕಲ್ತ ನಿಂಗೊ ಊರಿಲಿ ನೆಲೆಯಾಗಿ ನಿಂದು ಕೃಷಿಕಾರ್ಯವ ಯಶಸ್ವಿಯಾಗಿ ನೆಡೆಶಿಂಡು ಬತ್ತದು ಹೆಮ್ಮೆಯ ವಿಚಾರವೇ.
      ಮುಂದಾಣ ಎಷ್ಟೋ ಹೆಮ್ಮಕ್ಕೊಗೆ ಆದರ್ಶರಾಗಿ.

      ಹರೇರಾಮ.

  13. ಒಳ್ಳೆ ಶುದ್ದಿ, ಒಪ್ಪ ಸಂದೇಶ.

  14. ಒಪ್ಪಣ್ಣಾ , ಒಪ್ಪ ಲಾಯಿಕಯಿದು ಹೇಳಿ ಒಂದೊಪ್ಪ,
    “ಆಳಾಗಬಲ್ಲವನು ಅರಸನಾಗಬಲ್ಲ” ಹೇಳ್ತ ಗಾದೆಯ ತಿರುಗುಸೆಕ್ಕಾವುತ್ತೋ ಹೇಂಗೆ?

    1. ತಿರುಗುಸುತ್ತರೆ ಎನ್ನದೇನೂ ಆಕ್ಷೇಪ ಇಲ್ಲೆ, ಆದರೆ ರಾಮಜ್ಜನಕೋಲೇಜಿಲಿ ಲೆಗುಚ್ಚರು ಆಗಿಪ್ಪ ಮಾನಡ್ಕ ಅಕ್ಕನ ಕೈಲಿ ಕೇಳಿಗೊಂಬಲಕ್ಕು ಒಂದರಿ! 😉

  15. ಶುದ್ದಿಯ ನಿರೂಪಣೆ ಲಾಯಕ ಆಯ್ದು ಭಾವ. ಓದಿಗೊಂಡು ಹೋವ್ತಾ ಇದ್ದಾಂಗೆ ಎದೆ ಡಬಡಬ ಬಡಿವದು ಕೆಮಿಗೆ ಕೇಳ್ಳೂ ಸುರುವಾತು ಮುಂದೆ ಎಂತಾತೋ ಹೇಳಿ. ಆಗಲಿ, ಈ ಅಕ್ಕ° ಸಿನೇಮಾ ಕತೆಲಿ ಬಪ್ಪ ಹಾಂಗೆ ಕತಗೆ ಹಲವು ತಿರುವುಗಳ (!) ಉಂಟುಮಾಡದ್ದೆ ಪರಿಸ್ಥಿತಿಯ ಅರ್ಥಮಾಡಿಗೊಂಡು ತನ್ನ ತಾನು ಬದಲಿಸಿಗೊಂಡದು ಅನುಕರಣೀಯ. ಪೇಟೆಉದ್ಯೋಗ ಕನಸು ಕಾಂಬ ಪ್ರತಿಯೊಬ್ಬನೂ ಚಿಂತಿಸೆಕ್ಕಾದ್ದೆ. ನೋವು ನಲಿವಿನ ಸಮರ್ಥವಾಗಿ ನಿರೂಪಿಸಿದ್ದು ಶುದ್ದಿ ಹೇಳಿ ಇತ್ಲಾಗಿಂದ -‘ಚೆನ್ನೈವಾಣಿ’

    1. ಅಬ್ಬ! ನಿಂಗಳ ಒಪ್ಪ ಕಾಂಬಗ ಎನಗೊ ಎದೆ ಡಬಡಬ ಹೇಳಿತ್ತು – ಎಲ್ಲಿ ತಿರುಗಾಸು ಸಿಕ್ಕುತ್ತೋ ಹೇಳಿಗೊಂಡು.
      ಚೆಂದಲ್ಲಿ ಸುರೂವಾಣ ಒಪ್ಪಕೊಟ್ಟದಕ್ಕೊಂದೊಪ್ಪ!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×