Oppanna.com

’ಶ್ರೀ’ರಾಗವಂ, ಶ್ರೀ ‘ರಾಘವಂ’…!

ಬರದೋರು :   ಒಪ್ಪಣ್ಣ    on   13/01/2012    30 ಒಪ್ಪಂಗೊ

ಕುಡ್ಪಲ್ತಡ್ಕ ಭಾವ° ಹೇಳಿರೆ ಸಂಗೀತ, ಸಂಗೀತ ಹೇಳಿರೆ ಕುಡ್ಪಲ್ತಡ್ಕ ಭಾವನ ನೆಂಪಪ್ಪದು ಒಪ್ಪಣ್ಣಂಗೆ.
ಸಣ್ಣ ಇಪ್ಪಾಗಳೇ ಸಂಗೀತಕ್ಕೋಸ್ಕರ ಶಾಲೆ ಬಿಟ್ಟು, ಮತ್ತೆ ಸಂಗೀತವನ್ನೇ ಕಲ್ತು, ಸಂಗೀತ ಗುರುಗೊ ಆಗಿ, ಸಣ್ಣ ಪ್ರಾಯಲ್ಲೇ ದೊಡ್ಡ ಶಿಷ್ಯವರ್ಗವ ಹೊಂದಿಗೊಂಡ ಭಾವಯ್ಯ° ಅಲ್ಲದೋ!
ಒಂದು ಮಟ್ಟಿನ ಒರೆಂಗೆ ಊರಿಲೇ ಕಲ್ತು, ಇನ್ನೂ ಹೆಚ್ಚಿಂದು ಕಲ್ತುಗೊಂಬೊ° – ಹೇಳಿಗೊಂಡು ಶೃಂಗೇರಿಯ ಶೃಂಗಲ್ಲಿ ಕೂದುಗೊಂಡಿದ°.
ಅಂತೂ ಊರಿನ ಮಾಣಿ ಊರಿಂಗೇ ಅಪುರೂಪ ಆಗಿಬಿಟ್ಟಿದ° ಈಗ!
ಮನ್ನೆ ಹರಿಯೊಲ್ಮೆ ಮದುವೆ ಕಳಾತಲ್ಲದೋ – ಅದರ ಮರದಿನ ಮಾಷ್ಟ್ರುಮಾವನಲ್ಲಿ ಪೂಜೆ; ಎರಡೂ ಜೆಂಬ್ರಕ್ಕೂ ಆತು – ಹೇಳಿಗೊಂಡು ಊರಿಂಗೆ ಬಂದಿತ್ತಿದ್ದ°.
ಹರಿಯೊಲ್ಮೆ ಮದುವೆಂದ ಉಂಡಿಕ್ಕಿ ಹೆರಡುವಗ ಒಪ್ಪಣ್ಣಂದೇ ಒಟ್ಟಿಂಗೇ ಹೆರಟು – ಬೈಲಕರೆ ಒರೆಂಗೆ ಕಜೆಕುಮಾರಣ್ಣನ ಜೀಪಿಲಿ ಬಂದು, ಅಲ್ಲಿಂದ ಬೈಲಿನ ಒರೆಂಗೆ ನೆಡಕ್ಕೊಂಡು ಮಾತಾಡಿಂಡೇ ಬಂದದು.

~

ಗುಣಾಜೆಕುಂಞಿಯ ಹತ್ತರೆ ರಾಜಕೀಯ ಅಲ್ಲದ್ದೆ ಬೇರೆಂತ ಮಾತಾಡ್ಳೆ ಸಾಧ್ಯ?
ಅದೇ ರೀತಿ, ಕುಡ್ಪಲ್ತಡ್ಕ ಭಾವನ ಹತ್ತರೆ ಸಂಗೀತ ಅಲ್ಲದ್ದೆ ಬೇರೆಂತರ ಮಾತಾಡುಗು ಒಪ್ಪಣ್ಣ?
ಯೇವತ್ತೂ ಹಾಂಗೇ; ಮೊನ್ನೆಯೂ ಹಾಂಗೇ ಆತು; ಬೈಲಕರೆ ಕರಿಮಾರ್ಗಂದ, ಬೈಲಿಂಗೆತ್ತುವನ್ನಾರವೂ – ನೆಡಕ್ಕೊಂಡು ಹೋಪಗ.

ಅವ° ಒಟ್ಟಿಂಗೆ ಇದ್ದರೆ ಸಾಕು; ಮಾತಾಡೇಕು ಹೇದು ಏನಿಲ್ಲೆ.
ಮಾತಾಡಿರೇ ಒಂದು ಕುಶಿ; ಮಾತಾಡುಸದ್ದರೆ ಇನ್ನೊಂದು ಕೊಶಿ.
ಮಾತಾಡಿರೆ? – ಚೆಂದಲ್ಲಿ, ತಮಾಶೆಲಿ, ನೆಗೆನೆಗೆಲಿ ಮಾತಾಡುಗು. ಎಡೆಡೆಲಿ ತುಳು ಕುಶಾಲುಗಳನ್ನೋ ಮತ್ತೊ ಸೇರುಸಿ ಬಾಕಿದ್ದೋನುದೇ ನೆಗೆಮಾಡ್ತ ಹಾಂಗೆ ಮಾತಾಡುಗು.
ಮಾತಾಡುಸದ್ದರೆ? – ಒಬ್ಬನೇ ಆದರೆ ಸಾಕು – ಸಂಗೀತದ ಆಲಾಪನೆ ಸುರುಮಾಡ್ತ°.
ಒಂದು ರಾಗ ತಲಗೆ ಹಿಡುದರೆ ಮತ್ತೆ ಸುಮಾರು ಹೊತ್ತು ಅದುವೇ ಇರ್ತು – ಹೇಳ್ತ°, ಕೇಳಿರೆ.
ಹ್ಮ್… ಹುಂ-ಹುಂ..ಹೂಂ… ಹ್ಮ್‍ಹ್ಮ್‍ಹ್ಮ್-ಹುಂ-ಹೂಂ | – ಹೀಂಗೆ ಬಾಯಿಲಿ ಎಲೆಮಡಿಕ್ಕೊಂಡು ಆಲಾಪನೆ ಸುರು ಆಗಿ, ಅದೇ ಗುಂಗಿಲಿ ಸುಮಾರು ಹೊತ್ತು ಇಕ್ಕು ಅವನ ತಲೆ.
ಆ ರಾಗದ ಹ್ಮ್-ಹ್ಮ್ ಗೊ ಎಲ್ಲ ಸುಮಾರು ಹೊತ್ತು ಮಾಡಿಗೊಂಡು, ಎಲೆ ತುಪ್ಪಿ ಅಪ್ಪದ್ದೇ “ಸ…ರೀ…..” – ಹೇದು ಮುಂದುವರುಸುಗು.
ಅದರ ಕೇಳುದುದೇ ಒಂದು ಕುಶಿ ಈಚವಂಗೆ.
ಸರಿ..ಸರಿ; ಅದಿರಳಿ! 😉

~

ಬೈಲಕರೆ ಕೃಷ್ಣಪ್ಪುಗೂಡಂಗುಡಿಂದ ಒಂದು ಬೀಡ ಬಾಯಿಗೆ ಹಾಕಿಂಡ ಕುಡ್ಪಲ್ತಡ್ಕ ಭಾವ°.
ಅಲ್ಲಿಂದ ಅವಂಗೆ ನೆಡಕ್ಕೊಂಡು ಹೋಯೇಕಿದ ಸುಮಾರು; ರಜ ದೂರ ಒರೆಂಗೆ ನಾವುದೇ ಇದ್ದು ಒಟ್ಟಿಂಗೆ.
ಮಾರ್ಗದ ಹರಟೆ ಮುಗುದಪ್ಪದ್ದೇ, ಯೇವದೋ ರಾಗದ ಗುಂಗು ಹಿಡುದತ್ತು; ಆಲಾಪನೆ ಸುರುಆತು.
ಆಲಾಪನೆ ಕೇಳಿಯೇ ಕೀರ್ತನೆ ಗುರ್ತ ಹಿಡಿಯಲೆ ನಾವು ಮಾಷ್ಟ್ರುಮಾವನೋ?  ಕೀರ್ತನೆಯ ಸುರೂವಾಣ ಸಾಲು ಕೇಳಿಅಪ್ಪದ್ದೇ, ‘ಇದು ಇಂತಾದ್ದು’ – ಹೇಳುಗು ನಾವು.. 😉
– ಅದರ ನಮ್ಮ ಬೋಚಬಾವಂದೇ ಹೇಳುಗು ಬೇಕಾರೆ!

~

ಕೀರ್ತನೆಂದ ಮದಲು ಆಲಾಪನೆ. ಕೀರ್ತನೆ ಕಳುದಿಕ್ಕಿ ಆವರ್ತನೆ.
ಆಲಾಪನೆ-ಆವರ್ತನೆಗಳ ನಡುವಿಲಿ ದೇವರ ಸಂಕೀರ್ತನೆ – ಇದುವೇ ಅಲ್ಲದೋ ಕರ್ನಾಟಕ ಸಂಗೀತದ ಸೂತ್ರ?
ಕೀರ್ತನೆಗೊ ಯೇವ ರಾಗಕ್ಕೆ ನಿಬದ್ಧವಾಗಿದ್ದೋ, ಆ ರಾಗದ ಸ್ವರಂಗಳ ಏರಿಳಿತಂಗಳ – ಮನಸ್ಸಿಂಗೆ ಇಳುಶಿಗೊಂಬಲೆ ಇಪ್ಪ ಅಡಿಪಾಯವೇ ಆಲಾಪನೆ.
ಆಲಾಪನೆ ಮುಗುದಪ್ಪದ್ದೇ, ಮನಸ್ಸು ಆ ರಾಗದ ಸ್ವರಂಗೊಕ್ಕೆ ಹೊಂದಿಗೊಂಡಿರ್ತು; ರಾಗದ ಭಾವ ಮನಸ್ಸಿಲಿ ಮೂಡಿರ್ತು.
ಅಂತಾ-ಅ-ಅ-ಆ-ಆ-ಆಲಾಪನೆಗೊ ಕೇಳಿ ಧಾರಾಳ ಅರಡಿಗು ಒಪ್ಪಣ್ಣಂಗೆ.
~

ತ್ಯಾಗ-ರಾಜ-ಯೋಗ-ವೈಭವಂ-ಓಂ!

ಕುಡ್ಪಲ್ತಡಭಾವ° ತೆಗದ ಆಲಾಪನೆ ಕೇಳುವಗ – ಚೆಲ, ಎಲ್ಲಿಯೋ ಕೇಳಿದಾಂಗಿದ್ದನ್ನೇಪ್ಪಾ – ಹೇದು ಆಗಿಂಡಿತ್ತು.
ಹ್ಮ್-ಹ್ಮ್ ಗೊ ಎಲ್ಲವುದೇ – ನಾವು ಕೇಳಿದ ಒಂದು ಹತ್ತರಾಣ ಕೀರ್ತನೆಯ ಸುರುಮಾಡುವ ಗುಂಗನ್ನೇ ಹಿಡುಸಿತ್ತು.
– ಕೀರ್ತನೆ ಹೇಳ್ತ ಉದ್ದೇಶ ಇದ್ದರಲ್ಲದೋ ಸುರುಮಾಡ್ತದು; ಇದು ಆಲಾಪನೆಯ ಉದ್ದೇಶಲ್ಲೇ ಸುರುಮಾಡಿದ ಆಲಾಪನೆ;
ಹಾಂಗಾಗಿ; ಎರಡು ಗುಡ್ಡೆ ಹತ್ತಿಳುದರೂ ಆಲಾಪನೆ ಮುಗುದ್ದಿಲ್ಲೆ!
ಒಪ್ಪಣ್ಣಂಗೆ ಕಾದುಕಾದು ಕರಂಚಿತ್ತು; ಇನ್ನು ಕಾದ‘ರಾಗ’ ಹೇಳಿಗೊಂಡು – ಇದೇವ ‘ರಾಗ’? – ಕೇಳಿಯೇ ಬಿಟ್ಟೆ.
ಒಂದರಿ ಹಿಂದೆತಿರುಗಿ ನಮ್ಮ ನೋಡಿಂಡು – “ಹ್ಮ್- ಎಂದರ್ರೋ-ಮಹ್ಹಾ-ನುಬಾವುಲ್ಲೂ..” ಹೇಳಿದ° ಆಲಾಪನೆ ಹಾಳಾಗದ್ದ ಹಾಂಗೆ!
“ಎಲ್ಲಿಯೋ ಕೇಳಿದ ಹಾಂಗಿತ್ತು; ಆದರೆ ಯೇವದು ಹೇಳಿಗೊಂಡು ಪಕ್ಕನೆ ಶೋಕು ಆತಿಲ್ಲೆ ಇದಾ” – ಹೇಳಿತ್ತು ನಾವು!
ಅವನತ್ರೆ ಮರಿಯಾದಿ ಹೋಪಲೆಂತ ಇದ್ದು ನವಗೆ! 😉
~
ಆಲಾಪನೆ ಎಡೆಲಿ ಒಂದರಿ ವಿರಾಮ ಕೊಟ್ಟು ಮಾತಾಡ್ಳೆ ಸುರುಮಾಡಿದ, ಭಾವ°.

ಶಾಸ್ತ್ರೀಯ ಸಂಗೀತದ ಸಾವಿರಾರು ರಾಗಂಗಳಲ್ಲಿ ಒಂದೊಂದು ರಾಗಕ್ಕೆ ಅದರದರದ್ದೇ ವೈಶಿಷ್ಟ್ಯತೆ.
ಕೆಲವು ನೆಮ್ಮದಿ ಕೊಡುವ ರಾಗಂಗೊ, ಕೆಲವು ಕೊಶಿ ಕೊಡುವ ರಾಗಂಗೊ, ಕೆಲವು ತೃಪ್ತಿಕೊಡುವ ರಾಗಂಗೊ; ಹಾಂಗೇ ಕೆಲವು ಅಮಲೇರುಸುವ ರಾಗಂಗೊ ಇದ್ದಾಡ.
ಅಮಲೇರುಸುದೋ? ಅಪ್ಪು!
ಒಂದರಿ ತಲಗೆ ಹತ್ತಿರೆ – ಕಳ್ಳುಕುಡುದ ಸಂಕುವಿನ ಹಾಂಗೆ – ತಲೆಲಿ ಅದೇ ತಿರುಗಿಂಡು, ಮತ್ತೆ ಮತ್ತೆ ಸುತ್ತುಸ್ಸು; ಆರತ್ರೆ ಎಂತ ಮಾತಾಡ್ತರೂ, ತಲೆಯ ಹಿಂದಾಣ ಹೊಡೆಲಿ ಅದೇ ರಾಗ ಮತ್ತೆ ಮತ್ತೆ ಎಳಗುಸುಸ್ಸು!
ಅಂತಾ ಅಮಲಿನ ರಾಗಂಗಳಲ್ಲಿ ಶ್ರೀರಾಗವೂ ಒಂದು ಅಡ.
ತ್ಯಾಗರಾಜನ ಎಂದರೋ ಮಹಾನುಭಾವುಲು ಇದೇ ಶ್ರೀರಾಗಲ್ಲೇ ಇಪ್ಪದು – ಹೇಳಿದ°.

~

ಒಪ್ಪಣ್ಣಂಗೆ ಸಂಗೀತದ ಬಗ್ಗೆ, ರಾಗಂಗಳ ಬಗ್ಗೆ ಹೆಚ್ಚೇನೂ ಅರಡಿಯ. ಆದರೂ, ಕೆಲವು ಸರ್ತಿ ಎಡೆಡೇಲಿ ಮಾತಾಡುದು ಇದ್ದು ನಾವು; ದೊಡಾ ಗೊಂತಿಪ್ಪೋರ ಹಾಂಗೆ! 🙁
ಅಂದೊಂದರಿ ಉತ್ಸಾಹಪೂರ್ಣ-ಶಾಂತಿ ಕೊಡ್ತ ಮೋಹನ ರಾಗದ ಬಗ್ಗೆ ನಾವು ಬೈಲಿಲಿ ಮಾತಾಡಿಗೊಂಡಿದು. (ನೆಂಪಿದ್ದೋ? ಸಂಕೊಲೆ)
ಮೋಹನ ರಾಗ ಹೇಂಗೆ ಹೇಳ್ತದು ನವಗೆ ಅಂದೇ ಗೊಂತಾಯಿದು; ತೂಷ್ಣಿಲಿ ಹೇಳ್ತರೆ – ಷಡ್ಜ-ಋಷಭ-ಗಾಂಧಾರ-ಪಂಚಮ-ದೈವತ – ಇಷ್ಟಿದ್ದರೆ ಮೋಹನ ಆತಲ್ಲಿಗೆ!
ಷಡ್ಜಂದ ಏರುವಗಳೂ ಅದೇ ಐದು ಸ್ವರಂಗೊ; ಇಳಿವಗಳೂ ಅದೇ ಐದು. ಆರೋಹ-ಅವರೋಹ ಒಂದೇ ನಮುನೆ – ಹೇಳುಗು ಕುಡ್ಪಲ್ತಡ್ಕ ಭಾವ°.
ಜೀವನದ ಐದು ಘಟ್ಟಂಗೊಕ್ಕೆ ಆ ರಾಗದ ಐದು ಸ್ವರವ ಹೋಲುಸಿಗೊಂಡು ನಾವು ಶುದ್ದಿ ಮಾತಾಡಿದ್ದು. ನೆಂಪಿದ್ದೋ?

~

ಆದರೆ ಶ್ರೀರಾಗ ಹಾಂಗಲ್ಲಡ; ಹೋಪಗ ಸೀತ ಹತ್ತಿಗೊಂಡು ಹೋಪದು(ಸ-ರಿ-ಮ-ಪ-ನಿ-ಸ); ಇಳಿವಗ ಒಂದೆರಡು ಸರ್ತಿ ನಿಂದುಗೊಂಡು ಬಪ್ಪದು(ಸ-ನಿ-ಪ-ದ-ನಿ-ಪ-ಮ-ರಿ-ಗ-ರಿ-ಸ) ಹೇಳಿ ವಿವರಣೆ ಕೊಟ್ಟ°.
ವಿವರಣೆ ಕೊಟ್ಟದು ಸಮದಾನ ಆಗದ್ದೆ, ಕೈಕರಣ ಮಾಡಿ – ಸ್ವರ ಸೇರುಸಿ ಏರಿಳಿಸಿ ವಿವರುಸಿ ಹೇಳಿದ. ಒಂದರಿಯೇ ಹೇಳಿದ್ದು ತಲಗೆ ಹೋವುತ್ತರೆ ಒಪ್ಪಣ್ಣ ಹೀಂಗಿರ್ತಿತನೋ?
ಪುನಾ ಪುನಾ – ಆರೋಹ-ಅವರೋಹವ ತೋರುಸುವಗ ಕೈ ಒಂದರಿ ಶಾಂತಿಗುಡ್ಡೆಯಷ್ಟು ಮೇಗೆ ಹೋಗಿ, ಸಾರಡಿತೋಡಿನಷ್ಟು ಕೆಳ ಬಂತು!
ರಾಗಾಆಲಾಪನೆ ಮುಂದುವರುತ್ತು.. ಸರಿ-ಸರಿ.. 🙂

~

ಆಲಾಪನೆ ನಿಂದದು ಸಾರಡಿತೋಡು ಎತ್ತಿಅಪ್ಪಗಳೇ.
ಒಸ್ತ್ರ ಒಗವಲೆ ಬಂದ ಸುಂದರಿಯ ಅಲ್ಲಿ ಕಂಡಪ್ಪಗ ‘ಇನ್ನು ಪದ್ಯ ಹೇಳಿ’ರಾಗ” – ಹೇದು ಕಂಡತ್ತೋ ಏನೋ; ಆಲಾಪನೆ ನಿಲ್ಲುಸಿದ ಮಾತಾಡ್ಳೆ ಸುರುಮಾಡಿದ°.
ಸಂಗೀತದ ವಿಶಯ ಬಿಟ್ಟು ಬೇರೆಂತರ ಮಾತಾಡುಗು ಅವ°?

~

ಕರ್ನಾಟಕ ಶಾಸ್ತ್ರೀಯ ಸಂಗೀತದ ಕ್ಷೇತ್ರಲ್ಲಿ ತ್ರಿಮೂರ್ತಿಗೊ ಬಂದು ಬೆಳಗಿದ್ದವು.
ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಾ ಶಾಸ್ತ್ರಿಗೊ, ಮತ್ತೆ – ತ್ಯಾಗರಾಜರು – ಈ ಮೂರು ಜೆನರೇ ತ್ರಿಮೂರ್ತಿಗೊ – ಹೇಳಿದ°.
ಸಂಗೀತದ ಸ್ವರಂಗಳನ್ನೇ ದಿನನಿತ್ಯ ಸೇವಿಸಿ, ಸಂಗೀತವನ್ನೇ ಜೀವಿಸಿದ ಈ ಮೂರುಜೆನಂಗೊ ಸಂಗೀತ ಜಗತ್ತಿನ ಆರಾಧ್ಯ ದೈವಂಗೊ ಅಡ.
ಇವು ಸಾವಿರಾರು ಕೃತಿಗಳ – ಕೃತಿಗಳ ಬರದ್ದವಡ. ಒಂದೊಂದು ದೇವರನಾಮ- ಕೀರ್ತನೆಗಳೂ ಈಗ ಸಂಗೀತಕ್ಷೇತ್ರಲ್ಲಿ ಅತ್ಯಂತ ಪ್ರಾಮುಖ್ಯ ಅಡ.

ಒಪ್ಪಣ್ಣಂಗೆ ಬೈಲಿನ ತ್ರಿಮೂರ್ತಿಗಳ ಗೊಂತಿತ್ತು; ಇವರನ್ನೂ ತ್ರಿಮೂರ್ತಿಗೊ ಹೇಳ್ತವು ಹೇದು ಗೊಂತಿತ್ತಿಲ್ಲೆ! 😉
ಅದಿರಳಿ.
ಎಂದರೋಮಹಾನುಭಾವುಲು ತಲೆಲಿ ತಿರುಗೆಂಡಿದ್ದ ಕಾರಣವೋ ಏನೋ – ತ್ರಿಮೂರ್ತಿಗ ತ್ಯಾಗರಾಜರ ಬಗ್ಗೆಯೇ ವಿವರಣೆ ಮುಂದುವರುದತ್ತು,.
~

ತ್ಯಾಗರಾಜ ಸ್ವಾಮಿಗೊ:
ತ್ಯಾಗರಾಜ ಶ್ರೀರಾಮನ ದೊಡ್ಡ ಭಕ್ತನಡ.
ಜೀವಮಾನದ ಮುಕ್ಕಾಲುವಾಶಿ ಕಾಲವೂ ಕೋಟಿಗಟ್ಳೆ ರಾಮಜೆಪ ಮಾಡಿಗೊಂಡು ಧರ್ಮದಾರಿಲಿ ನೆಡದೋನಡ.
ಅವಂಗೆ ಶ್ರೀರಾಮ ಹೇಂಗೆ ಆರಾಧ್ಯ ದೈವವೋ, ಸಂಗೀತ ಕಲಿತ್ತೋರಿಂಗೆ ಅವನೂ ಹಾಂಗೇ ಅಡ – ಹೇಳಿದ°.
ಕುಡ್ಪಲ್ತಡ್ಕ ಭಾವ ತ್ಯಾಗರಾಜರ “ಸ್ವಾಮಿ”ಗೊ ಹೇಳಿಯೇ ಸಂಬೋಧನೆ ಮಾಡುದು. ಸಂಗೀತ ಕಲಿತ್ತೋರಿಂಗೆ-ಕಲ್ತೋರಿಂಗೆ ಅವನೇ ಅಲ್ಲದೋ ಗುರುಗೊ!
ಕಳುದೊರಿಶ ನಮ್ಮ ಬೈಲಿಲಿ ತ್ಯಾಗರಾಜನ ಬಗ್ಗೆ ಶ್ರೀಅಕ್ಕ ಹೇಳಿದ್ದು ಒಪ್ಪಣ್ಣಂಗೆ ನೆಂಪಾತು.(ನಿಂಗೊಗೆ ನೆಂಪಾತೋ?)
ನಿರತವೂ ರಾಮ ಸ್ಮರಣೆ; ನಿತ್ಯವೂ ರಾಮಧ್ಯಾನದ ಅಮಲಿಲೇ ಇದ್ದಿದ್ದವಡ.
ಉದಿಯಾದರೆ ರಾಮನಾಮ ಜಪ- ಸ್ಮರಣೆ. ರಾಮನೇ ಊಟ, ರಾಮನೇ ಆಹಾರ!
ದೈವಭಕ್ತರಿಂಗೆ ಯೇವಗಳೂ ಮರಿಯಾದಿ ಇದ್ದು.
ಅಂದ್ರಾಣ ಸಾಮಾಜಿಕ ಜೀವನಲ್ಲಿ ತ್ಯಾಗರಾಜರು ಹೇಳಿರೆ “ನಡೆದಾಡುವ ದೇವರೇ” ಆಗಿ ಬಿಟ್ಟವಡ.
ಅವು ಹೇಳಿದ ಮಾತುಗೊ ದೇವವಾಕ್ಯ ಅತು; ಅವು ರಚನೆ ಮಾಡಿದ ಪದ್ಯಂಗೊ “ಕೀರ್ತನೆ”ಗೊ ಆಗಿಬಿಟ್ಟತ್ತು.

ಜಪ ಮಾಡ್ತರ ಎಡಕ್ಕಿಲಿ ಪದ್ಯಂಗಳ ರಚನೆ!
ಸ್ವತಃ ರಚನೆ ಮಾಡಿದ ಪದ್ಯಂಗೊಕ್ಕೆ ಯೇವದಾರು ಶಾಸ್ತ್ರೀಯ ರಾಗವ ಹೊಂದುಸಿ ಸಂಕೀರ್ತನೆ!

ಪದ್ಯಂಗೊ ಎಂತದು?
ತನ್ನ ಆರಾಧ್ಯ ದೈವ ಶ್ರೀರಾಮನ ವರ್ಣನೆ; ಶ್ರೀ ರಾಘವನ ಸ್ಮರಣೆ; ರಘುಕುಲ ಸೂರ್ಯನ ಪ್ರಭಾರ್ಚನೆ, ಕುಲೋತ್ತಮ ಶ್ರೀ ರಾಘವೇಶ್ವರನ ಪಾದಸ್ಮರಣೆ, ಸೀತಾರಾಮಚಂದ್ರನ ಗುಣಗಾನ; ದಶರಥ ನಂದನ ವಂದನೆ!
ಅವನ ಉದಾತ್ತ ಹೃದಯವ, ಅವನ ಜೀವನ ನೀತಿಗಳ, ಅವನ ವೆಗ್ತಿತ್ವವ ನಿರೂಪಣೆ ಮಾಡ್ತ ಪದಂಗೊ.
ತೆಲುಗು ಭಾಶೆಲಿಪ್ಪ ಈ ಎಲ್ಲ ಪದ್ಯಂಗಳಲ್ಲಿಯೂ ಅವನ ಕಾವ್ಯನಾಮದ ಹಾಂಗೆ “ತ್ಯಾಗರಾಜ ಪೂಜೆ ಮಾಡ್ತೋನು” ಹೇಳಿ ಬತ್ತಾಡ.
ಹೀಂಗೆ ಜೀವಮಾನಪೂರ್ತಿ ಕಟ್ಟಿ- ಹಾಡಿದ ಪದ್ಯಂಗಳೇ ಸಾವಿರಾರು ಆಗಿ ಬೆಳದತ್ತಡ.
~

ಅವರ ಕೀರ್ತನೆಗಳಲ್ಲಿ ಐದು ಅತ್ಯಂತ ಶ್ರೇಷ್ಠ ಹೇಳಿ ಪರಿಗಣನೆ ಆವುತ್ತಾಡ – ಆದಿ ತಾಳದ ಎಡಕ್ಕಿಲಿ ಐದು ತೋರುಸಿಗೊಂಡು ಹೇಳಿದ°.
ಅದಕ್ಕೇ ಪಂಚರತ್ನಕೃತಿಗೊ ಹೇಳುಸ್ಸಡ. ಇದರ ಬಗ್ಗೆ ಕೇಳಿ ಅರಡಿಗು ಒಪ್ಪಣ್ಣಂಗೆ. ಆದರೆ ಪ್ರತಿಯೊಂದೂ ಸ್ವರಸಹಿತ ವಿವರುಸಲೆ ಅರಡಿಗೋ?!
ಪಂಚರತ್ನ ಕೃತಿಗೊ ಯೇವದಲ್ಲ ಹೇಳ್ತರ ಒಂದೊಂದೇ ಹೇಳಿಗೊಂಡು ಹೋದ.

ಹೇಳಿದ್ದೂ ಅಂಬೆರ್ಪಿಲಿ, ಕೇಳಿದ್ದೂ ಅಂಬೆರ್ಪಿಲಿ, ಮೇಗಂದಮೇಗೆ ಇಷ್ಟು ನೆಂಪೊಳುದ್ದು:

  1. ಜಗದಾನಂದ ಕಾರಕ – ಹೇಳ್ತ ಕೃತಿ ನಾಟ ರಾಗಲ್ಲಿ ನಿಬದ್ಧವಾಗಿಪ್ಪದು
  2. ದುಡುಕು ಗಲ – ಹೇಳ್ತದು ಎರಡ್ಣೇ ಕೃತಿ, ಗೌಳ ರಾಗಲ್ಲಿಪ್ಪದು
  3. ಸಾಧಿಂಚೆನೇ ಓ ಮನಸಾ –  ಹೇಳ್ತ ಸುಂದರ ಕೃತಿ, ಆರಭಿ ರಾಗಲ್ಲಿ
  4. ಕನಕನ ರುಚೀರ – ಹೇಳ್ತ ಕೀರ್ತನೆ, ವರಾಳಿ ರಾಗದ್ದು
  5. ಎಂದರೋ ಮಹಾನುಭಾವುಲು – ಲೋಕಪ್ರಸಿದ್ಧಿ ಕೀರ್ತನೆ ’ಶ್ರೀರಾಗಲ್ಲಿಪ್ಪದು

ಒಂದರಿ ಆ ಐದೂ ಕೃತಿಗಳ ಹಾಡುಸಿ ಬೈಲಿಂಗೆ ಕೇಳುಸೆಕ್ಕು ಹೇದು ಇದ್ದು ನವಗೆ.
ಮೊನ್ನೆ ಆತಿಲ್ಲೆ; ಅವ° ಅಂಬೆರ್ಪಿಲಿ ಇತ್ತಿದ್ದ. ನಿಂಗಳ ಸಂಗ್ರಹಲ್ಲಿ / ನಿಂಗೊ ಹೇಳಿದ್ದಿದ್ದರೆ ಇದ್ದರೆ ಕೊಟ್ಟಿಕ್ಕಿ. ಎಲ್ಲೋರುದೇ ಕೇಳುವೊ° – ಆತೋ?

ತ್ಯಾಗರಾಜರ ಅಗಾಧ ಪಾಂಡಿತ್ಯಂದ, ಸಂಗೀತ ಜ್ಞಾನಂದ, ದೈವಭಕ್ತಿಂದಾಗಿ ನಮ್ಮ ಸಂಸ್ಕೃತಿಗೆ ಅನೇಕ ಉಪಕಾರಂಗೊ ಆಯಿದು.
ಮುಖ್ಯವಾಗಿ ನೋಡ್ತರೆ,

  • ಒಂದನೇದಾಗಿ, ಅಂದ್ರಾಣ ಕಾಲಲ್ಲಿ ದೈವಭಕ್ತಿ ಹೆಚ್ಚಾತು.
    ಮಾಪಳೆರಾಜಂಗಳ ಕಾಲದ ಆ ಸಮಾಜಲ್ಲಿ ಧಾರ್ಮಿಕ ಗುರುಗೊ ಆಗಿ ಕೆಲಸ ಮಾಡಿದವಡ.
  • ಎರಡ್ಣೇದಾಗಿ, ಅನೇಕ ದೇವಭಕ್ತಿಯ ಕೀರ್ತನೆಗೊ ರಚನೆ ಆತು.
    ಇಂದಿಂಗೂ ದೈವಭಕ್ತಿ ಪ್ರಕಟಮಾಡ್ಳೆ ತ್ಯಾಗರಾಜರ ಹೀಂಗಿರ್ತ ಕೃತಿಗಳೇ ಮಾಧ್ಯಮ ಆಗಿರ್ತಡ.
  • ಮೂರ್ನೇದಾಗಿ, ಕರ್ನಾಟಕ ಸಂಗೀತದ ರಾಗಂಗೊ ಚಿರಂತನ ಆಗಿ ಒಳುತ್ತು.
    ಅಪೂರ್ವ ಕೃತಿಗಳ ಅಪರೂಪದ ರಾಗಂಗಳಲ್ಲಿ ಬರದ ಕಾರಣ, ಕೃತಿಗೊ ನೆಂಪೊಳಿವ ಮೂಲಕ ಆ ರಾಗಂಗಳೂ ಶಾಶ್ವತ ಆಗಿ ಒಳುತ್ತು
    – ಹೇಳಿದ° ಕುಡ್ಪಲ್ತಡ್ಕ ಭಾವ!

~

ಮಾಷ್ಟ್ರುಮಾವನ ಮನಗೆ ಎತ್ತುವನ್ನಾರವೂ ಇದನ್ನೇ ಮಾತಾಡಿಗೊಂಡು ಹೋದ್ಸು.
ಮಾಷ್ಟ್ರುಮಾವ ಅಂಬೆರ್ಪಿಲಿತ್ತವು; ಅಲ್ಲದ್ದರೆ ಅವರ ಹತ್ತರೆ ಕೇಳಿದ್ದರೆ ಇನ್ನೂ ಹಲವು ವಿಚಾರಂಗೊ ಸಿಕ್ಕುತಿತು.

ಅದೇನೇ ಇರಳಿ:
ಶ್ರೀರಾಗದ ಹಾಂಗಿರ್ತ ಸುಂದರ ರಾಗದ ಕಂಪನ್ನೂ, ಶ್ರೀರಾಘವನ ಹಾಂಗಿರ್ತ ಸುಂದರ ಮೂರ್ತಿಯ ನೆಂಪನ್ನೂ ಚಿರಕಾಲ ಒಳಿವ ಹಾಂಗೆ ಮಾಡಿದ ಸಂಗೀತ ಬ್ರಹ್ಮನ ನಾವು ಯೇವತ್ತಿಂಗೂ ಮರವಲಾಗ  – ಹೇಳ್ತದು ಕುಡ್ಪಲ್ತಡ್ಕ ಭಾವನ ಅಭಿಪ್ರಾಯ.
ನಮ್ಮದೂ ಹಾಂಗೇ.
ನಿಂಗಳದ್ದು?

ಒಂದೊಪ್ಪ: ಶ್ರೀರಾಮಭಕ್ತ ತ್ಯಾಗರಾಜನ ತ್ಯಾಗಂದಾಗಿ ದಕ್ಷಿಣಾದಿ ಸಂಗೀತ ಉತ್ತರೋತ್ತರ ಕಾಲ ಒಳುದತ್ತು.

ಸೂ:

  • ಇಂದು ತ್ಯಾಗರಾಜರ ಆರಾಧನೆ ಅಡ. ಬೈಲಿಲಿ ಸಂಗೀತ ಕಲಿತ್ತ ಎಲ್ಲರಿಂಗೂ ಅವರ ಅನುಗ್ರಹ ಒದಗಲಿ ಹೇಳ್ತದು ಒಪ್ಪಣ್ಣನ ಆಶಯ.
  • ತ್ಯಾಗರಾಜರ ಆರಾಧನೆಯ ಬಗ್ಗೆ ಕಳುದೊರಿಶ ಶ್ರೀಅಕ್ಕ ಹೇಳಿದ ಶುದ್ದಿ ಇಲ್ಲಿದ್ದು:
  • ತ್ಯಾಗರಾಜರ ಬಗ್ಗೆ “ಗಿರಿ ಅಣ್ಣನ” ವಿಮರ್ಶಾ ಲೇಖನ ಇಲ್ಲಿದ್ದು
  • ಶ್ರೀರಾಗಲ್ಲಿಪ್ಪ ಎಂದರೋಮಹಾನುಭಾವುಲು – ಕೇಳ್ತರೆ ಇಲ್ಲಿದ್ದು
  • cheap moncler jackets

30 thoughts on “’ಶ್ರೀ’ರಾಗವಂ, ಶ್ರೀ ‘ರಾಘವಂ’…!

  1. ಈ ಶುದ್ಧಿ ಓದಿ ಮೂರು ವಿಷಯಕ್ಕೆ ಖುಶಿ ಅತೆನಗೆ.
    ೧. ಕರ್ನಾಟಕ ಶಾಸ್ತ್ರೀಯ ಸಂಗೀತವ ಜ್ಯುನಿಯರ್ ಪರೀಕ್ಷೆವರೆಗೆ ಕಲ್ತ ಎನಗೆ ಸಂಗೀತದ ಬಗ್ಗೆ ವಿವರ ಓದಿ ಖುಷಿ ಅತು.
    ೨. ಎನ್ನ ಅಪ್ಪನ ಮನೆಯ ಮದುವೆ ಸುದ್ದಿ ಬಯಿಂದು.
    ೩. ಎನ್ನ ಅಪ್ಪನ ಮನೆಯ ನೆರೆಕರೆ ಮಾಣಿ ಪ್ರಸಾದನ ಬಗ್ಗೆ ಓದಿ ಖುಷಿ ಅತು.
    ~ಸುಮನಕ್ಕ…

    1. ಜ್ಯೂನಿಯರ್ ಪರೀಕ್ಷೆ ವರೆಗೆ ಕಲ್ತ ಸುಮನಕ್ಕನ ಒಪ್ಪ ಕಂಡು ಎನಗೆ ಕೊಶಿ ಆತು.
      ಎಂತಕೆ ಹೇದರೆ, ಒಪ್ಪಣ್ಣಂಗೆ ಅಷ್ಟೂ ಆಯಿದಿಲ್ಲೆ ಇದಾ! 🙁 🙂

  2. ಒಪ್ಪಣ್ಣೋ..,

    [ ಆಲಾಪನೆ-ಆವರ್ತನೆಗಳ ನಡುವಿಲಿ ದೇವರ ಸಂಕೀರ್ತನೆ – ಇದುವೇ ಅಲ್ಲದೋ ಕರ್ನಾಟಕ ಸಂಗೀತದ ಸೂತ್ರ?]

    ಕುಡ್ಪಲ್ತಡ್ಕ ಭಾವನ ಆಲಾಪನೆ, ಶ್ರೀರಾಗದ ಆವರ್ತನೆಯ ನಡೂಕೆ ರಾಮದೇವರ ಅರ್ಚನೆ ಮಾಡಿ ಮಾಡಿ ದೇವರ ರೂಪ ಪಡದ ತ್ಯಾಗರಾಜರ ಸಂಕೀರ್ತನೆ ಮಾಡಿದ್ದದು ಲಾಯ್ಕಾಯಿದು.

    ಆ ಕಾಲದ ನಡೆದಾಡುವ ಸಂತನ ಹಾಂಗೆ ಜೆನಂಗೊಕ್ಕೆ ಹಾಡಿಲಿ ರಾಮನ ಒಲಿಸುಲೆ ಆವುತ್ತು ಹೇಳಿ ತೋರಿಸಿ ಕೊಟ್ಟ ಮಹಾ ಮೇರು ವೆಗ್ತಿತ್ವ! ತ್ಯಾಗರಾಜರ ಎಲ್ಲಾ ಕೃತಿಗಳಲ್ಲಿ ಭಕ್ತಿ ಭಾವ ತುಂಬಿ ಹರಿತ್ತು ಅಲ್ಲದಾ?

    ಒಪ್ಪಣ್ಣ,

    ಸಾವಿರಾರು ಕೃತಿಗೋ, ಮನಸ್ಸಿನ ಎಲ್ಲಾ ಭಾವನೆಗಳ ಏರಿಳಿತದ ಹಾಂಗೆ ಇಪ್ಪ ವಿವಿಧ ರಾಗಂಗಳೂ, ಸ್ವರಂಗಳೂ ಎಲ್ಲವನ್ನೂ ಈ ಲೋಕಲ್ಲಿ ಶಾಶ್ವತ ಮಾಡಿ ಭೌತಿಕವಾಗಿ ಜಗತ್ತಿಂದ ಮರೆ ಆದರೂ ಸಂಗೀತದ ಸ್ವರಂಗಳಲ್ಲಿ ಇನ್ನುದೇ ಹರಿದಾಡುತ್ತಾ ಇಪ್ಪ ಆ ಪುಣ್ಯ ಚೇತನಕ್ಕೆ ಅವರ ಆರಾಧನೆಯ ದಿನವೇ ನೀನು ಅವಕ್ಕೆ ಕೊಟ್ಟ ಗೌರವ ಕಂಡು ಮನಸ್ಸು ತುಂಬಿ ಬಂತು. ಅವರ ನೆನಪ್ಪು ಮಾಡಿದ್ದದು ಕೊಶೀ ಆತು.

    ನಮ್ಮ ಈಗಾಣ, ಮುಂದಾಣ ಪೀಳಿಗೆಯ ಎಲ್ಲಾ ಸಂಗೀತದ ದಾರಿಲಿ ಇಪ್ಪವಕ್ಕೆ ಅವರ ಆಶೀರ್ವಾದ ಸದಾ ಇರಲಿ..
    ಸಂಗೀತ ಎಲ್ಲರ ಮನಸ್ಸಿಲಿ ಯಾವಾಗಲೂ ನಿನ್ನ ಹಾಂಗೆ, ನೀನು ವಿವರ್ಸಿದ ಹಾಂಗೆ ‘ಮೋಹನ ರಾಗ’ ನುಡಿಸುತ್ತಾ ಇರಲಿ.. 🙂

    ಒಂದೊಪ್ಪ ಲಾಯ್ಕಾಯಿದು. ದಕ್ಷಿಣಾದಿ ಸಂಗೀತ ಉತ್ತರೋತ್ತರ ಉಳಿಯಲಿ.. ಜಗತ್ತಿಲಿಡೀ ಹರಡಲಿ..

    1. ಶ್ರೀಅಕ್ಕಾ, ಸಂಗೀತದ ದಾರಿಲಿ ಇಪ್ಪವಕ್ಕೆ ಮಾಂತ್ರ ಅಲ್ಲ, ಎಲ್ಲೋರುದೇ ಸಂಗೀತದ ದಾರಿಗೆ ಬಪ್ಪ ಹಾಂಗೆ ಆಗಲಿ, ಅವಕ್ಕೆ ತ್ಯಾಗರಾಜರ ಒಲುಮೆ, ಆಶೀರ್ವಾದ ಸಿಕ್ಕಲಿ. ಅಲ್ಲದೋ?

      ಒಪ್ಪ ಒಪ್ಪಕ್ಕೆ ಧನ್ಯವಾದಂಗೊ!
      ಹರೇರಾಮ..

  3. ರಾಮನ…ರಾಮ ಭಕ್ತನ…ರಾಘವನ… ಕಥೆಗಳ ಎಷ್ಟು ಕೇಳಿದರೂ ಇನ್ನೂ ಕೇಳೆಕ್ಕು ಹೇಳಿ ಆವುತ್ತು…

    1. ಜಯಕ್ಕೋ,
      ರಾಮಭಕ್ತ ತ್ಯಾಗರಾಜರ ರಾಮಭಕ್ತರಾದ ನಾವೆಲ್ಲ ಆಸ್ವಾದುಸುತ್ತ ಹಾಂಗಾಗಲಿ.
      ಹರೇರಾಮ

  4. ಸಂಗೀತ ಕ್ಷೇತ್ರಕ್ಕೆ ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಾ ಶಾಸ್ತ್ರಿಗೊ, ಮತ್ತೆ ತ್ಯಾಗರಾಜರ ಕೊಡುಗೆ ಅಪಾರ. ಕರ್ಣಾಟಕ ಸಂಗೀತ ಈ ಹಂತಲ್ಲಿ ಪ್ರಸಿದ್ಧಿ ಅಪ್ಪಲೆ ಈ ತ್ರಿಮೂರ್ತಿಗಳೇ ಕಾರಣ ಹೇಳ್ಲಕ್ಕು.
    ತ್ಯಾಗರಾಜ ಪಂಚರತ್ನ ಕೃತಿಯ ಒಂದು ವಿಶೇಷ ಹೇಳಿರೆ ಸ್ವರ ಮತ್ತೆ ಸಾಹಿತ್ಯ ಒಂದಾದ ಮತ್ತೆ ಒಂದು ಬಪ್ಪದು.
    “ಶ್ರೀ” ರಾಗದ “ಎಂದರೋ ಮಹಾನುಭಾವುಲು” ಕೃತಿ ಎಷ್ಟು ಸರ್ತಿ ಕೇಳಿರೂ ಮತ್ತೆ ಮತ್ತೆ ಕೇಳೆಕ್ಕು ಹೇಳ್ತ ಭಾವನೆ ಜಾಸ್ತಿ ಆವ್ತಾ ಹೋವ್ತು.
    ತ್ಯಾಗರಾಜರ ಆರಾಧನೆ ಸಮಯಲ್ಲಿ ಮಾಹಿತಿಪೂರ್ಣ ಸಕಾಲಿಕ ಲೇಖನ. ಧನ್ಯವಾದಂಗೊ

    1. ಅಪ್ಪಚ್ಚಿ, ಚೆಂದದ ಒಪ್ಪ ಇದು.
      ಪಂಚರತ್ನ ಕೃತಿ ಹೇದರೆ ಐದು ರತ್ನಂಗಳೇ. ಒಂದಾದ ಮೇಗೆ ಒಂದು – ಎಲ್ಲವುದೇ ಅಮೂಲ್ಯ. 🙂

      ಅಪ್ಪಚ್ಚಿ ಸಂಗೀತ ಹೇಳ್ತಿರೋ?

  5. ಒಳ್ಳೆ ಲೇಖನ ಒಪ್ಪಣ್ಣ. ಸುಮಾರು ಕೀರ್ತನೆಗಳ ಕೇಳಿ ಗೊಂತಿದ್ದು. ಮತ್ತೆ ತೆಲುಗು ಅರ್ಥ ಆವುತ್ತಿಲ್ಲೆ ಆದರೂ ಸಂಗೀತಕ್ಕೆ ಭಾಷೆಯ ಸಮಸ್ಯೆ ಇಲ್ಲೆ.

    1. { ಸಂಗೀತಕ್ಕೆ ಭಾಶೆಯ ಸಮಸ್ಯೆ ಇಲ್ಲೆ }
      ತುಂಬಾ ಒಳ್ಳೆ ಮಾತು ಕೋಳ್ಯೂರು ಕಿರಣಣ್ಣ.
      ಪಷ್ಟಾಯಿದು.

      ಇಡೀ ಲೋಕಲ್ಲೇ ಎಲ್ಲೋರಿಂಗೂ ಅರ್ತ ಅಪ್ಪ ಭಾಶೆ ಸಂಗೀತವೇ, ಅಲ್ಲದೋ? 🙂

  6. ಲೀಖನ ಲಾಯಕ ಆಯಿದು ಒಪ್ಪಣ್ಣಾ.ಪ೦ಚರತ್ನ್ಸಕೀರ್ತನೆಲಿ ಒ೦ದು ವಿಶೇಶ ಇದ್ದು, ಜಗದಾನ೦ದಕಾರಕ ಸ೦ಸ್ಕ್ರತಲ್ಲಿ ಇಪ್ಪದು,ಬಾಕಿ ನಾಲ್ಕೂ ತೆಲುಗು.ಧನ್ಯವಾದ೦ಗೊ.

  7. ತುಂಬಾ ಮಾಹಿತಿ ಇಪ್ಪ ಲೇಖನ. ಚೆಂದಕೆ ಬರದ್ದೆ ಒಪ್ಪಣ್ಣಾ.

  8. ಶಾಸ್ತ್ರೀಯ ಸಂಗೀತದ ಬಗ್ಗೆ ಕಿಂಚಿತ್ ಬೆಳಕು ಚೆಲ್ಲಿದ ಒಪ್ಪಣ್ಣಂಗೆ ಒಪ್ಪಂಗೊ.

    1. ಹಳೆಮನೆ ರಾಜಮಾವಂಗೆ ನಮೋನಮಃ!
      ಸ್ವತಃ ಜಾಸ್ತಿ ಜ್ಞಾನ ಇಲ್ಲೆ, ಹೀಂಗೇ – ಬೈಲಿಲಿ ಆರಾರು ಹೇಳಿದ್ದರ ಕೇಳಿ ಇಲ್ಲಿ ಬಂದು ಶುದ್ದಿ ಹೇಳ್ತದು ಈ ಒಪ್ಪಣ್ಣನ ಕಾರ್ಯ!

      ಬನ್ನಿ, ನಿಂಗಳೂ ಶುದ್ದಿ ಹೇಳಿ. ಹರೇರಾಮ

  9. ಸಮಯಕ್ಕೆ ತಕ್ಕ ವಿಚಾರಪೂರ್ಣ ಲೇಖನ. ಏವ ವಿಷಯ ಆದರುದೆ, ಒಪ್ಪಣ್ಣನ ಶೈಲಿಗೆ ಅದು ಬಂದಪ್ಪಗ ಅದರ ಚೆಂದ/ಆಕರ್ಷಣೆಯೇ ಬೇರೆ. ಈಗಾಣ ಮಕ್ಕೊಗೆ ಶಾಸ್ತ್ರೀಯ ಸಂಗೀತದ ಬಗ್ಗೆ ಒಲವು ಇನ್ನುದೆ ಒಳುದ್ದದು, ಬೆಳೆತ್ತಾ ಇಪ್ಪದು ಸಂತೋಷದ ವಿಷಯ.

    1. ಬೊಳುಂಬುಮಾವಾ,
      ಈಗಾಣ ಮಕ್ಕಳಲ್ಲಿ ಹೆಚ್ಚಿನೋರುದೇ ಬಾಲ್ಯಲ್ಲಿ ಸಂಗೀತ ಕಲಿತ್ತವು – ಹೇಳ್ತದು ಸಂತೋಷದ ಶುದ್ದಿ. ಹಾಂಗಾರೂ ತ್ಯಾಗರಾಜನ ನೆಂಪಾಗಲಿ, ಅಲ್ಲದೋ? 🙂

  10. ಸಕಾಲಿಕ ಲೇಖನಕ್ಕೆ ಒಪ್ಪಂಗೊ.

  11. ಒಪ್ಪಣ್ಣೋ ,
    ಸಕಾಲಿಕ – ಒಪ್ಪ ಲಾಯಿಕ ಆಯಿದು. ಧನ್ಯವಾದಂಗೊ

  12. ಸಂಗೀತದ ಮೇರುಪುರುಷ ತ್ಯಾಗರಾಜ ಕೋಟಿಗಟ್ಟಲೆ ರಾಮಜಪ ಮಾಡಿದ್ದನಡ.
    ಅವನ ಆರಾಧನೆ ದಿನ ಸಕಾಲಿಕ ಲೇಖನ.

  13. ಈ ಮಹಾಮೇರುಪುರುಷ ಯಾವ ಕೃತಿಗಳನ್ನುದೆ ಸ್ವ೦ತವಾಗಿ ಬರದು ಮಡುಗುತ್ತ ಅಭ್ಯಾಸ ಇತ್ತಿಲ್ಲೆಡ. ಅವರ ಶಿಷ್ಯ೦ಗಳಲ್ಲಿ ಆರಾರು ಅವು ಕೃತಿ ರಚಿಸಿ ಹಾಡುವಗ ಬರದು ಮಡುಗಿಯೊ೦ಡದು ಸಿಕ್ಕುಗು ಅಷ್ಟೆ. ಅದರಲ್ಲಿಯುದೆ ನಾಶವಾಗಿ ಹೋದ್ದದು ಎಷ್ಟೋ.. ಬಾಕಿ ಉಳುದ್ದದರಲ್ಲಿ ಕೆಲವು / ಹಲವು ಈಗಳುದೆ ಚಾಲ್ತಿಲಿ ಇದ್ದು, ಅಮೋಘ ಕೃತಿಗಳಾಗಿ ನಾವು ಕೊ೦ಡಾಡ್ತು. ಅದರಲ್ಲಿಯುದೆ ಒಪ್ಪಣ್ಣ ಸೂಚಿಸಿದ ‘ಘನರಾಗ ಪ೦ಚರತ್ನ ಕೃತಿ’ಗೊ ಭಾರೀ ವಿಶೇಷ.
    ಒಪ್ಪ೦ಗೊ.

    1. ಪೆರುವದಣ್ಣಾ,
      ತ್ಯಾಗರಾಜನ ಬಗ್ಗೆ ಒಳ್ಳೆ ಮಾಹಿತಿ. ಅವರ ಎಷ್ಟೋ ಆಶು-ರಚನೆಗೊ ಅಕ್ಷರರೂಪಕ್ಕೆ ಬಪ್ಪ ಮದಲೇ ಕಾಣೆ ಆದಿಕ್ಕಲ್ಲದೋ – ಹೇದು ಗ್ರೇಶುವಗ ಬೇಜಾರಾವುತ್ತು.

      ಆದರೆ, ಸಾರ ಇಲ್ಲೆ, ಈಗ ಇಪ್ಪದೇ ಒಬ್ಬಂಗೆ ಜೀವಮಾನ ಪೂರ್ತ ಅರಗುಸಲೆ ತಕ್ಕ ಇದ್ದನ್ನೇ! 🙂
      ಬೆಶಿಬೆಶಿ ಒಪ್ಪಂಗೊಕ್ಕೆ ವಂದನೆಗೊ.

  14. ತ್ಯಾಗರಾಜರ ಆರಾಧನೆಯ ದಿನ ಈ ಶುದ್ದಿ ಓದಿ ತು೦ಬಾ ಖುಶಿ ಆತು..ತ್ಯಾಗರಾಜರು ಸ೦ಗೀತ ಜಗತ್ತಿನ ಆರಾಧ್ಯ ದೈವವೇ..
    “ನಮೋ ನಮೋ ರಾಘವಾಯ” ,ದೇಸಿಕ ತೋಡಿ ರಾಗಲ್ಲಿಪ್ಪದು ಅವರ ಸುರೂವಾಣ ಕೀರ್ತನೆ ಅಡ್ಡ.
    ತ್ಯಾಗರಾಜರ ಕೀರ್ತನೆಗಳ ಕೇಳಿರೆ ಗೊ೦ತಾವ್ತು ಅವಕ್ಕೆ ಶ್ರೀ ರಾಮನ ಮೇಲೆ ಇದ್ದ ಭಕ್ತಿ..
    ಹ೦ಸನಾದ ರಾಗದ “ಬ೦ಟುರೀತಿ ಕೋಲು”
    ಧರ್ಮವತಿ ರಾಗದ “ಭಜನಸೇಯ ರಾದ ಶ್ರೀ ರಾಮುನಿ”
    ಶ್ರೀ ರ೦ಜಿನಿ ರಾಗದ “ಸೊಗಸುಗಾಮ್ರುದ೦ಗ ತಾಳಮು”
    ಧನ್ಯಾಸಿ ರಾಗದ “ಸ೦ಗೀತ ಜ್ನ್ಯಾನಮು ಭಕ್ತಿ ವಿನ”
    ಮಧ್ಯಮಾವತಿ ರಾಗದ “ರಾಮಕಥಾಸುಧಾ”
    ಮಲಯಮಾರುತ ರಾಗದ “ಮನಸಾಯಟುಲೋ”

    ಅವರ ಇನ್ನೊ೦ದು ವಿಶೇಷ ರಚನೆಗೊ-“ಉತ್ಸವ ಸ೦ಪ್ರದಾಯ ಕೃತಿಗೊ”
    ಶಹಾನ ರಾಗದ “ವ೦ದನಮು ರಘುನ೦ದನ”
    ರೀತಿಗೌಳ ರಾಗದ “ಜೋ ಜೋ ರಾಮ”
    ಮಧ್ಯಮಾವತಿಯ “ನಗುಮೋಮುಗಲವಾಣಿ” ಬರಕ್ಕೊ೦ಡು ಹೋದರೆ ಪಟ್ಟಿ ಮುಗಿಯ..ಎಲ್ಲವೂ ಒ೦ದಕ್ಕಿ೦ತ ಒ೦ದು ಲಾಯ್ಕ..:-)

    ಮತ್ತೆ ನಿ೦ಗೊ ಹೇಳಿದಾ೦ಗೆ ಪ೦ಚರತ್ನಕೃತಿಗೊ ಅವರ ಅದ್ಭುತ ರಚನೆ..
    ಎನ್ನ ಗುರುಗೊಕ್ಕೆ ಈ ವರ್ಷದ ತ್ಯಾಗರಾಜರ ಆರಾಧನೆಯ ಒಳ ಐದು ಪ೦ಚರತ್ನಕೃತಿಗಳ ಕಲಿಶಿ ಮುಗಿಶೆಕ್ಕು ಹೇಳಿ ಇತ್ತು ಆದರೆ ಈಗ ನಾಲ್ಕೇ ಮುಗಿಶುಲಾತಷ್ಟೇ..(ತೆಲುಗು ಸಾಹಿತ್ಯ ಬೇರೆ ಇದಾ,ಕಲಿವಲೂ ರಜ ಕಷ್ಟ ಆವ್ತು)
    ಇ೦ದು ಈ ಲೇಖನ ಓದಿ ತು೦ಬಾ ಖುಶಿ ಆತು, ಶ್ರೀ ರಾಗದ ಆಲಾಪನೆ ಕೇಳಿದ ಹಾ೦ಗೇ 🙂

    1. ಯಬೋ ದೀಪಿಅಕ್ಕನ ಒಪ್ಪವೇ!
      ಎಷ್ಟೊಂದು ವಿಷಯ, ಎಷ್ಟು ಮಾಹಿತಿಗೊ!
      ಅದುದೇ ಬೆಶಿಬೆಶಿ, ಶುದ್ದಿ ಹೇಳಿ ರಜ್ಜ ಹೊತ್ತಿಲಿ! ಪಷ್ಟಾಯಿದು ಅಕ್ಕ.

      ಹೇಳಿದಾಂಗೆ, ಈ ಶುದ್ದಿ ಬರವಗ ಒಪ್ಪಣ್ಣಂಗೆ ನಿಂಗಳ ನೆಂಪಾಯಿದು, ಆತೋ! 🙂
      ನಿದಾನಕ್ಕಾದರೂ, ಈ ಪದ್ಯಂಗೊ ಬೈಲಿಲಿ ಬಕ್ಕೋ – ನಿಂಗಳ ಸ್ವರಲ್ಲಿ?

  15. ಒಪ್ಪಣ್ಣನ ಪಂಚಾಂಗಲ್ಲಿ ಎಲ್ಲಾ ಹಬ್ಬ, ಹರಿದಿನ, ಜನ್ಮೋತ್ಸ್ವವ, ತಿಥಿ ಪ್ರತಿಯೋಂದು ಮುದ್ರಿತವಾಗಿದ್ದಪ್ಪ.

    ತ್ಯಾಗರಾಜಸ್ವಾಮಿಯನ್ನೂ, ಶ್ರೀರಾಘವನನ್ನೂ, ಶ್ರೀರಾಘವನ್ನೂ ಬೈಲಿಲಿ ನೆಂಪುಮಾಡಿ ಸಂಗೀತಪ್ರಿಯರ ಶುದ್ದಿಲಿ ರಂಜಿಸಿದ್ದು ಲಾಯಕ ಆಯ್ದು ಹೇಳಿವದು – ‘ಚೆನ್ನೈವಾಣಿ’.

    1. ಬಟ್ಟಮಾವನ ಡೈರಿಲಿ ಇಪ್ಪ ಜೆಂಬ್ರಂಗಳೂ, ಜೋಯಿಶಪ್ಪಚ್ಚಿಯ ಒಯಿಜಯಂತಿ ಪಂಚಾಂಗಲ್ಲಿ ಇರ್ತ ದಿನವಿಶೇಷಂಗಳನ್ನೂ, ಮಾಷ್ಟ್ರುಮಾವನ ಕೆಲೆಂಡರಿಲಿ ಇರ್ತ ಹಬ್ಬಹರಿದಿನಂಗಳನ್ನೂ – ಮೂರನ್ನೂ ನೋಡಿಗೊಂಡಿದ್ದರೆ ನವಗೆ ಏನೂ ತಲೆಬೆಶಿ ಇಲ್ಲೆ ಭಾವಾ.

      ಆಯಾ ದಿನಂಗಳ ಬಗ್ಗೆ ಅವ್ವವ್ವೇ ವಿವರಣೆ ಕೊಟ್ಟಿಗುತ್ತವು. ನಾವು ಅಲ್ಲಿ ಕೇಳಿತ್ತು, ಇಲ್ಲಿ ಹೇಳಿತ್ತು. ಅಟ್ಟೇ! 😉

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×