- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಶ್ರೀಕೃಷ್ಣಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ
ಅಥ ಪಂಚಮೋsಧ್ಯಾಯಃ – ಕರ್ಮಸಂನ್ಯಾಸಯೋಗಃ
ಶ್ಲೋಕ :
ಅರ್ಜುನ ಉವಾಚ-
ಸಂನ್ಯಾಸಂ ಕರ್ಮಣಾಂ ಕೃಷ್ಣ ಪುನರ್ಯೋಗಂ ಚ ಶಂಸಸಿ ।
ಯಚ್ಛ್ರೇಯ ಏತಯೋರೇಕಂ ತನ್ಮೇ ಬ್ರೂಹಿ ಸುನಿಶ್ಚಿತಮ್ ॥೦೧॥
ಪದವಿಭಾಗ :
ಅರ್ಜುನಃ ಉವಾಚ-
ಸಂನ್ಯಾಸ ಕರ್ಮಣಾಮ್ ಕೃಷ್ಣ ಪುನಃ ಯೋಗಮ್ ಚ ಶಂಸಸಿ । ಯತ್ ಶ್ರೇಯಃ ಏತಯೋಃ ಏಕಮ್ ತತ್ ಮೇ ಬ್ರೂಹಿ ಸುನಿಶ್ಚಿತಮ್ ॥
ಅನ್ವಯ :
ಅರ್ಜುನಃ ಉವಾಚ –
ಹೇ ಕೃಷ್ಣ!, ಕರ್ಮಣಾಂ ಸಂನ್ಯಾಸಂ ಪುನಃ ಯೋಗಂ ಚ ಶಂಸಸಿ । ಏತಯೋಃ ಯತ್ ಏಕಂ ಶ್ರೇಯಃ , ತತ್ ಮೇ ಸುನಿಶ್ಚಿತಂ ಬ್ರೂಹಿ ।
ಪ್ರತಿಪದಾರ್ಥ:
ಅರ್ಜುನಃ ಉವಾಚ – ಅರ್ಜುನ ಹೇಳಿದ°, ಹೇ ಕೃಷ್ಣ – ಹೇ ಕೃಷ್ಣ!, ಕರ್ಮಣಾಮ್ ಸಂಸ್ಯಾಸಮ್ – ಎಲ್ಲ ಕಾರ್ಯಂಗಳ ವಿರಕ್ತಿಯ, ಪುನಃ – ಮತ್ತೆ, ಯೋಗಮ್ – ಭಕ್ತಿಸೇವೆಯ, ಚ – ಕೂಡ, ಶಂಸಸಿ – ನೀನು ಹೊಗಳುತ್ತ ಇದ್ದೆ, ಏತಯೋಃ – ಇವೆರಡರಲ್ಲಿ, ಏಕಮ್ – ಒಂದರ, ಯತ್ – ಯಾವುದು, ಶ್ರೇಯಃ – ಹೆಚ್ಚು ಶ್ರೇಯಸ್ಕರ (ಪ್ರಯೋಜನಕರ), ತತ್ – ಅದರ, ಮೇ – ಎನಗೆ, ಸುನಿಶ್ಚಿತಮ್ – ನಿರ್ಧಾರವಾಗಿ, ಬ್ರೂಹಿ – ದಯವಿಟ್ಟು ಹೇಳು.
ಅನ್ವಯಾರ್ಥ:
ಅರ್ಜುನ° ಹೇಳಿದ° – ಏ ಕೃಷ್ಣ°!, ಮದಲು ನೀನು ಕರ್ಮವ ಬಿಡೆಕು ಹೇಳುತ್ತಾ ಇದ್ದೆ, ಮತ್ತೆ ನೀನು ಭಕ್ತಿಪೂರ್ವಕ ಕರ್ಮವ ಮಾಡೆಕು ಹೇಳಿಯೂ ಹೇಳುತ್ತಾ ಇದ್ದೆ. ಇವೆರಡರಲ್ಲಿ ಯಾವುದು ಹೆಚ್ಚು ಶ್ರೇಯಸ್ಕರ ಹೇಳ್ವದರ ಖಚಿತವಾಗಿ ಎನಗೆ ದಯವಿಟ್ಟು ಹೇಳು.
ತಾತ್ಪರ್ಯ/ವಿವರಣೆ:
ನಾಲ್ಕನೇ ಅಧ್ಯಾಯಲ್ಲಿ ಹೇಳಿದ ‘ಕರ್ಮಸಂನ್ಯಾಸ’ ಹೇಳಿರೆ ಕರ್ಮವ ಬಿಡುವುದು ಅಲ್ಲ ಹೇಳಿ ಕೃಷ್ಣ ಸ್ಪಷ್ಟವಾಗಿ ಹೇಳಿದ್ದ. ಕರ್ಮ ಸಂನ್ಯಾಸ ಹೇಳಿರೆ ಕರ್ಮಫಲಲ್ಲಿ ಬಯಕೆಯ ಇರಿಸಿಗೊಳ್ಳದ್ದೆ ಜ್ಞಾನಪೂರ್ವಕವಾಗಿ ಜ್ಞಾನಯೋಗದ ದಾರಿಲಿ ನಡವದು. ಹಾಂಗಾರೆ ಈ ಕಾಮಕ್ರೋಧಾದಿಗಳ ಬಿಟ್ಟು ಜ್ಞಾನಮಾರ್ಗಲ್ಲಿ ನಡವದು ಹೇಳಿರೆ ಹೇಂಗೆ ಎಂಬುದೀಗ ಅರ್ಜುನನ ಜಿಜ್ಞಾಸೆ. ಎರಡನೇ ಅಧ್ಯಾಯಲ್ಲಿ ಆತ್ಮದ ಸ್ವರೂಪ ಮತ್ತು ಭೌತಿಕ ಶರೀರಲ್ಲಿ ಅದು ಬಂಧಿತವಾಗಿಪ್ಪದರ ಬಗ್ಗೆ ಹೇಳಿದ್ದು. ಭಕ್ತಿಸೇವೆಯ ಮೂಲಕ ಈ ಭೌತಿಕ ಸೆರೆಂದ ಹೇಂಗೆ ಬಿಡುಗಡೆ ಅಪ್ಪಲಕ್ಕು ಹೇಳಿಯೂ ವಿವರಿಸಿದ್ದು. ಮೂರನೇ ಅಧ್ಯಾಯಲ್ಲಿ ಜ್ಞಾನದ ನೆಲಗೆ ಏರಿದವ° ಯಾವ ಕರ್ತವ್ಯಂಗಳನ್ನೂ ಮಾಡೇಕ್ಕಾಗಿಲ್ಲೆ ಹೇಳಿಯೂ ಹೇಳಿದ್ದು. ನಾಲ್ಕನೇ ಅಧ್ಯಾಯಲ್ಲಿ ಯಜ್ಞರೂಪದ ಎಲ್ಲ ಕರ್ಮವೂ ಜ್ಞಾನಲ್ಲಿ ಕೊನೆಗೊಳ್ಳುತ್ತು ಹೇಳಿ ಹೇಳಿದ್ದು. ನಾಲ್ಕನೇ ಅಧ್ಯಾಯದ ಅಕೇರಿಲಿ ಭಗವಂತ° ಅರ್ಜುನಂಗೆ ಪರಿಪೂರ್ಣಜ್ಞಾನಲ್ಲಿ ನೆಲೆಗೊಂಡು, ಜಾಗೃತನಾಗಿ ಯುದ್ಧಮಾಡು ಹೇಳಿ ಎಚ್ಚರಿಸಿದ್ದ°. ಹೀಂಗೆ ಭಗವಂತ° ಏಕಕಾಲಲ್ಲಿ ಭಕ್ತಿಪೂರ್ವಕವಾದ ಕರ್ಮದ ಮಹತ್ವ ಮತ್ತು ಜ್ಞಾನದ ನೆಲೆಲಿ ಕರ್ಮವ ಆಚರುಸದ್ದೆ ಇಪ್ಪದರ ಮಹತ್ವವನ್ನೂ ಹೇಳಿದ್ದ° . ಇದೀಗ ಅರ್ಜುನಂಗೆ ರಜಾ ಗಲಿಬಿಲಿ ಆವ್ತು. ಜ್ಞಾನದ ನೆಲೆಲಿ ನಿಂತು ಗ್ಯಾಗ ಮಾಡುತ್ತದು ಹೇಳಿರೆ ಎಲ್ಲ ಬಗೆಯ ಇಂದ್ರಿಯ ಕಾರ್ಯಂಗಳ ನಿಲ್ಲಿಸಿಬಿಡುವದೋ ಹೇಳಿ ಗೊಂದಲಕ್ಕೆ ಕಾರಣ ಆವ್ತು. ಆದರೆ ಭಕ್ತಿ ಸೇವೆಲಿ ಇದ್ದು ಕಾರ್ಯಮಾಡುವಾಗ ಅದು ನಿಷ್ಕ್ರಿಯ ಹೇಂಗೆ ಅಪ್ಪದು? . ಜ್ಞಾನಪೂರ್ವಕವಾದ ತ್ಯಾಗ ಹೇಳಿ ಎಲ್ಲ ಕಾರ್ಯ ಚಟುವಟಿಕೆಗಳ ನಿಲ್ಲಿಸಿಬಿಡುವದು ಹೇಳಿ ತೋರುತ್ತು. ಎಂತಕೆ ಹೇಳಿರೆ ಕರ್ಮ ಮತ್ತು ಸಂನ್ಯಾಸ ಒಂದಕ್ಕೊಂದು ಹೊಂದುತ್ತದು ಅಲ್ಲ. ಆದರೆ, ಸಂಪೂರ್ಣವಾದ ಜ್ಞಾನಲ್ಲಿ ಮಾಡುವ ಕರ್ಮವು ಪ್ರತಿಕ್ರಿಯೆಯ ಉಂಟುಮಾಡುತ್ತಿಲ್ಲೆ. ಆದ್ದರಿಂದ ಅದು ಅಕರ್ಮ ಹೇಳ್ವದು ಭಗಂತನ ಮಾತುಗಳಿಂದ ಅರ್ಥ ಆವುತ್ತು. ಅಂದರೂ ಅರ್ಜುನ° ವಿಶಯವ ಇನ್ನಷ್ಟು ಸ್ಪಷ್ಟವಾಗಿ ಭಗವಂತ° ಹೇಳ್ಳೆ ಬೇಕಾಗಿ ತಾನು ಕರ್ಮವ ಬಿಟ್ಟುಬಿಡೆಕೋ ಅಥವಾ ಪೂರ್ಣಜ್ಞಾನದ ನೆಲೆಲಿ ನಿಂತು ಕರ್ಮ ಮಾಡೆಕೋ ಹೇಳಿ ಕೇಳುತ್ತ°
ಓ ಕೃಷ್ಣ!, ನೀನು ಒಂದರಿ ಹೋರಾಡು ಹೇಳುತ್ತೆ, ಮತ್ತೊಂದರಿ ಕರ್ಮ ಸಂನ್ಯಾಸವ ಮಾಡು ಹೇಳುತ್ತೆ. ಒಂದುವೇಳೆ ಕರ್ಮ ಸಂನ್ಯಾಸ ಹೇಳಿರೆ ಕರ್ಮತ್ಯಾಗವಾದರೆ ಅದು ಒಂದಕ್ಕೊಂದು ವಿರುದ್ಧ. ಇದರ್ಲಿ ಯಾವುದು ಶ್ರೇಯಸ್ಕರ ಹೇಳ್ವದರ ನಿಶ್ಚಿತವಾಗಿ ತಿಳಿಯಪಡಿಸು. ಯುದ್ಧ ಕರ್ಮ ಹೇಳಿಯಪ್ಪಗ ದ್ವಂದ್ವ ಇಪ್ಪದೇ. ದ್ವಂದ್ವತ್ಯಾಗಂದ ಯುದ್ಧ ಮಾಡುತ್ಸು ಹೇಂಗೆ. ಯುದ್ಧ ಹೇಳಿದ ಮತ್ತೆ ರಾಗ-ದ್ವೇಷ ಇದ್ದೇ ಇಪ್ಪದು. ಹಾಂಗಾಗಿ ಕರ್ಮಸಂನ್ಯಾಸವೋ ಕರ್ಮಯೋಗವೋ ಯಾವುದು ಶ್ರೇಯಸ್ಕರ ಎಂಬುದರ ಸ್ಪಷ್ಟಪಡುಸು ಕೃಷ್ಣ ಹೇಳಿ ಅರ್ಜುನ° ಇಲ್ಲಿ ಕೇಳಿಗೊಳ್ತ°.
“ಕರ್ಷತಿ ಇತಿ ಕೃಷ್ಣಃ”, ಎಲ್ಲರನ್ನೂ ತನ್ನ ಕಡೆಂಗೆ ಸೆಳವ ಶಕ್ತಿ, ಸಂಸಾರಂದ ಎತ್ತರಕ್ಕೆ ಎಳವ ಕರ್ಷಣಶಕ್ತಿಯಾದ ಸೌಂದರ್ಯಮೂರ್ತಿ ಭಗವಂತ° ಕೃಷ್ಣ°, ಅಜ್ಞಾನಂದ ಬಪ್ಪ ಸಂಶಯವ ಕರ್ಷಣೆಮಾಡಿ ಜ್ಞಾನದ ಮಡಿಲಿಂಗೆ ಆಕರ್ಷಿಸುವವ° ನೀನು ಕೃಷ್ಣ°, ಎನಗೆ ಖಚಿತವಾಗಿ ತಿಳಿಯಪಡುಸು”– ಹೇದು ಬನ್ನಂಜೆಯವರ ವ್ಯಾಖ್ಯಾನ.
ಶ್ಲೋಕ :
ಶ್ರೀಭಗವಾನುವಾಚ –
ಸಂನ್ಯಾಸಃ ಕರ್ಮಯೋಗಶ್ಚ ನಿಃಶ್ರೇಯಸಕರಾವುಭೌ ।
ತಯೋಸ್ತು ಕರ್ಮಸಂನ್ಯಾಸಾತ್ ಕರ್ಮಯೋಗೋ ವಿಶಿಷ್ಯತೇ ॥೦೨॥
ಪದವಿಭಾಗ :
ಶ್ರೀ ಭಗವಾನ್ ಉವಾಚ-
ಸಂನ್ಯಾಸಃ ಕರ್ಮ-ಯೋಗಃ ಚ ನಿಃಶ್ರೇಯಸಕರೌ ಉಭೌ । ತಯೋಃ ತು ಕರ್ಮ-ಸಂನ್ಯಾಸಾತ್ ಕರ್ಮ-ಯೋಗಃ ವಿಶಿಷ್ಯತೇ ॥
ಅನ್ವಯ :
ಶ್ರೀ ಭಗವಾನ್ ಉವಾಚ-
ಸಂನ್ಯಾಸಃ ಕರ್ಮ-ಯೋಗಃ ಚ ಉಭೌ ನಿಃಶ್ರೇಯಸಕರೌ । ತಯೋಃ ತು ಕರ್ಮ-ಸಂನ್ಯಾಸಾತ್ ಕರ್ಮ-ಯೋಗಃ ವಿಶಿಷ್ಯತೇ ।
ಪ್ರತಿಪದಾರ್ಥ:
ಶ್ರೀ ಭಗವಾನ್ ಉವಾಚ – ದೇವೋತ್ತಮ ಪರಮ ಪುರುಷ° ಹೇಳಿದ°, ಕರ್ಮಯೋಗಃ – ಭಕ್ತಿಲಿ ಕರ್ಮವು (ಕಾರ್ಯವೂ), ಸಂನ್ಯಾಸಃ – ಕರ್ಮವ ಪರಿತ್ಯಾಗ, ಚ – ಕೂಡ, ಉಭೌ – ಎರಡೂ, ನಿಃಶ್ರೇಯಸಕರೌ – ಮೋಕ್ಷಮಾರ್ಗಕ್ಕೆ ಒಯ್ಯುವಂತಹವು, ತಯೋಃ – ಎರಡರಲ್ಲಿ, ತು – ಆದರೆ, ಕರ್ಮ-ಸಂನ್ಯಾಸಾತ್ – ಕಾಮ್ಯಕರ್ಮಪರಿತ್ಯಾಗಕ್ಕೆ ಹೋಲಿಸಿದರೆ, ಕರ್ಮ-ಯೋಗಃ – ಭಕ್ತಿಪೂರ್ವಕ ಕರ್ಮವು, ವಿಶಿಷ್ಯತೇ – ಉತ್ತಮವಾದ್ದು.
ಅನ್ವಯಾರ್ಥ:
ದೇವೋತ್ತಮ ಪರಮ ಪುರುಷ° ಹೇಳಿದ° – ಕರ್ಮಸಂನ್ಯಾಸ ಮತ್ತು ಭಕ್ತಿಸೇವಾಕರ್ಮ ಎರಡೂ ಮುಕ್ತಿಪಥಕ್ಕೆ ಕೊಂಡೋಪಂತದ್ದು. ಆದರೆ, ಇವೆರಡರಲ್ಲಿ ಭಕ್ತಿಸೇವಾಕರ್ಮವು ಕರ್ಮಸಂನ್ಯಾಸಕ್ಕಿಂತ ಉತ್ತಮವಾದ್ದು.
ತಾತ್ಪರ್ಯ/ವಿವರಣೆ:
ಫಲಾಪೇಕ್ಷೆಂದ ಕೂಡಿದ (ಐಹಿಕ ತೃಪ್ತಿಯ ಬಯಸುವ) ಕರ್ಮಂಗೊ ಐಹಿಕ ಬಂಧನಕ್ಕೆ ಕಾರಣ ಆವ್ತು. ದೈಹಿಕ ಸುಖವ, ಇಂದ್ರಿಯ ಚಾಪಲ್ಯವ ಮಟ್ಟವ ಹೆಚ್ಚಿಸಿಗೊಂಬ ಕಾರ್ಯಲ್ಲಿ ಮನುಷ್ಯ ತೊಡಗಿಪ್ಪಷ್ಟು ಕಾಲವೂ ಆತ° ದೇಹಬಂಧನಲ್ಲೇ ಸಿಲುಕಿಗೊಂಡಿರುತ್ತ°. ಇದರಿಂದ ಐಹಿಕ ಬಂಧನವು ನಿರಂತರವಾಗಿ ಮುಂದುವರುದುಗೊಂಡಿರುತ್ತು. ಭಗವಂತನ ಭಕ್ತಿಸೇವೆಲಿ ಪ್ರೀತಿಯ ಬೆಳೆಶಿಗೊಂಡು ಕಾರ್ಯವ ಮಾಡಿರೆ ಅದು ಐಹಿಕ ಅಸ್ತಿತ್ವದ ಬಂಧನಂದ ಮುಕ್ತನಾಗುವ ಅವಕಾಶ ದೊರಕಿಸಿಕೊಡ್ತು. ಬರೇ ಜ್ಞಾನ ಮುಕ್ತಿಗೆ ಕಾರಣವಾಗ. ಚೇತನಾತ್ಮನ ನೆಲೆಂದ ಮನುಷ್ಯ° ಜ್ಞಾನಪೂರ್ವಕ ಕ್ರಿಯಾಶೀಲನಾಯೆಕು. ಪೂರ್ಣಜ್ಞಾನಂದ ಮಾಡಿದ ಕಾರ್ಯಚಟುವಟಿಕೆಗೊ ಮನುಷ್ಯನ ನಿಜವಾದ ಜ್ಞಾನವ ಬೆಳೆಸಿಗೊಂಬಲೆ ನೆರವಾವ್ತು. ಕೃಷ್ಣಪ್ರಜ್ಞೆ ಇಲ್ಲದ್ದೆ ಫಲಾಪೇಕ್ಷೆ ಇಪ್ಪ ಕೆಲಸಂಗಳ ತ್ಯಜಿಸಿದ ಮಾತ್ರಕ್ಕೆ ಹೃದಯ ಪರಿಶುದ್ಧ ಆವುತ್ತಿಲ್ಲೆ. ಹೃದಯ ಪರಿಶುದ್ಧ ಅಪ್ಪಲ್ಲಿವರೇಗೆ ಮನುಷ್ಯ° ಫಲಾಪೇಕ್ಷೆಯ ನೆಲೆಲಿದ್ದುಗೊಂಡೇ ಕಾರ್ಯ ಮಾಡೇಕ್ಕಾವ್ತು. ಆದರೆ, ಕೃಷ್ಣಪ್ರಜ್ಞೆಲಿ ಮಾಡಿದ ಕರ್ಮವು ತಂತಾನೇ ಕರ್ಮಫಲಂದ ಮನುಷ್ಯನ ಬಿಡುಗಡೆ ಮಾಡ್ಳೆ ಸಹಾಯಕ ಆವ್ತು. ಇದರಿಂದ ಮನುಷ್ಯ° ಐಹಿಕ ನೆಲೆಗೆ ಇಳಿಯುವ ಅಗತ್ಯ ಇರ್ತಿಲ್ಲೆ. ಕರ್ಮತ್ಯಾಗಂದ ವ್ಯಕ್ತಿಯು ವಿಫಲನಪ್ಪ ಅಪಾಯ ಇದ್ದೇ ಇದ್ದು. ಆದ್ದರಿಂದ ಕೃಷ್ಣಪ್ರಜ್ಞೆಂದ ಕೂಡಿದ ಕರ್ಮಾಚರಣೆ ಯಾವಾಗಲೂ ಕರ್ಮತ್ಯಾಗಕ್ಕಿಂತ ಉತ್ತಮವಾದ್ದು. ಕೃಷ್ಣಪ್ರಜ್ಞೆ ಇಲ್ಲದ ಕರ್ಮತ್ಯಾಗವು ಅಪೂರ್ಣವಾದ್ದು.
ಶ್ಲೋಕ :
ಜ್ಞೇಯಃ ಸ ನಿತ್ಯಸಂನ್ಯಾಸೀ ಯೋ ನ ದ್ವೇಷ್ಟಿ ನ ಕಾಂಕ್ಷತಿ ।
ನಿರ್ದ್ವಂದ್ವೋ ಹಿ ಮಹಾಬಾಹೋ ಸುಖಂ ಬಂಧಾತ್ ಪ್ರಮುಚ್ಯತೇ ॥೦೩॥
ಪದವಿಭಾಗ :
ಜ್ಞೇಯಃ ಸ ನಿತ್ಯ-ಸಂನ್ಯಾಸೀ ಯಃ ನ ದ್ವೇಷ್ಟಿ ನ ಕಾಂಕ್ಷತಿ । ನಿರ್ದ್ವಂದ್ವಃ ಹಿ ಮಹಾ-ಬಾಹೋ ಸುಖಮ್ ಬಂಧಾತ್ ಪ್ರಮುಚ್ಯತೇ ॥
ಅನ್ವಯ :
ಯಃ ನ ದ್ವೇಷ್ತಿ, ನ ಚ ಕಾಂಕ್ಷತಿ, ಸಃ ನಿತ್ಯ-ಸಂನ್ಯಾಸೀ ಜ್ಞೇಯಃ । ಮಹಾ-ಬಾಹೋ!, ಹಿ ನಿರ್ದ್ವಂದ್ವಃ ಬಂಧಾತ್ ಸುಖಂ ಪ್ರಮುಚ್ಯತೇ ।
ಪ್ರತಿಪದಾರ್ಥ:
ಯಃ – ಆರು, ನ ದ್ವೇಷ್ಟಿ – ದ್ವೇಷಿಸುತ್ತನಿಲ್ಲೆಯೋ, ಚ – ಕೂಡ, ನ ಕಾಂಕ್ಷತಿ – ಇಚ್ಛಿಸುತ್ತನಿಲ್ಲೆಯೋ, ಸಃ – ಅವ°, ನಿತ್ಯ-ಸಂನ್ಯಾಸೀ – ಯಾವಾಗಲೂ ತ್ಯಾಗಿ ಹೇದು, ಜ್ಞೇಯಃ – ತಿಳಿಯೆಕು, ಹೇ ಮಹಾಬಾಹೋ! – ಮಹಾಬಾಹುವೇ!, ಹಿ – ಖಂಡಿತವಾಗಿಯೂ, ನಿರ್ದ್ವಂದ್ವಃ – ಸಕಲ ದ್ವಂದ್ವಂಗಳಿಂದ ಮುಕ್ತನಾದವ°, ಬಂಧಾತ್ – ಬಂಧನಂದ, ಸುಖಮ್ – ಸುಖವ (ಪಡೆತ್ತ°), ಪ್ರಮುಚ್ಯತೇ – ಪೂರ್ಣನಾಗಿ ಮುಕ್ತನಾವುತ್ತ°.
ಅನ್ವಯಾರ್ಥ:
ಕರ್ಮಫಲಲ್ಲಿ ತಿರಸ್ಕಾರವಾಗಲೀ, ಅಪೇಕ್ಷೆಯಾಗಲೀ ಇಲ್ಲದ್ದವನ ನಿತ್ಯಸಂನ್ಯಾಸೀ ಹೇದು ತಿಳಿಯೆಕು. ಏ ಮಹಾಬಾಹುವಾದ ಅರ್ಜುನನೇ!, ದ್ವಂದ್ವಂಗಳಿಂದ ಮುಕ್ತನಾದ ಇಂತಹ ಮನುಷ್ಯ ಸುಲಭವಾಗಿ ಐಹಿಕ ಬಂಧನಂದ ಪಾರಾವ್ತ ಮತ್ತು ಸಂಪೂರ್ಣವಾಗಿ ಮುಕ್ತನಾವುತ್ತ°.
ತಾತ್ಪರ್ಯ/ವಿವರಣೆ:
ಸಂಪೂರ್ಣವಾಗಿ ಕೃಷ್ಣಪ್ರಜ್ಞೆಲಿಪ್ಪ ವ್ಯಕ್ತಿಯು ಸದಾ ಸಂನ್ಯಾಸಿ. ಅವಂಗೆ ಕರ್ಮಫಲಲ್ಲಿ ತಿರಸ್ಕಾರವೂ ಇಲ್ಲೆ, ಅಪೇಕ್ಷೆಯೂ ಇಲ್ಲೆ. ಭಗವಂತನ ದಿವ್ಯ ಪ್ರೀತಿಪೂರ್ವಕ ಸೇವಗೆ ಮುಡಿಪಾದ ಇಂತಹ ತ್ಯಾಗಿ ಸಂಪೂರ್ಣ ಜ್ಞಾನವುಳ್ಳವ°. ಅವಂಗೆ ಕೃಷ್ಣನ ಮತ್ತು ತನ್ನ ಸಂಬಂಧದ ನಿಜಸ್ವರೂಪದ ತಿಳುವಳಿಕೆ ಇರುತ್ತು. ಕೃಷ್ಣ° (ಭಗವಂತ°) ಪರಿಪೂರ್ಣ°, ಮತ್ತು , ತಾನು ಕೃಷ್ಣನ ವಿಭಿನ್ನಾಂಶ ಹೇಳ್ವದು ಅವಂಗೆ ಸಂಪೂರ್ಣವಾಗಿ ತಿಳಿದಿರುತ್ತು. ಇಂತಹ ಜ್ಞಾನವು ಗುಣಾತ್ಮಕವಾಗಿ ಮತ್ತು ಪರಿಮಾಣಾತ್ಮಕವಾಗಿ ಸರಿಯಾಗಿರುತ್ತು. ಆದ್ದರಿಂದ ಅದು ಪರಿಪೂರ್ಣ ಜ್ಞಾನ. ಕೃಷ್ಣನೊಂದಿಂಗೆ ಒಂದಾಗಿಪ್ಪ ಪರಿಕಲ್ಪನೆ ಸರಿಯಲ್ಲ. ಎಂತಕೆ ಹೇಳಿರೆ, ನಾವು ವಿಭಿನ್ನಾಂಶ ಮಾತ್ರ. ಅಂಶವು ಪೂರ್ಣಕ್ಕೆ ಸಮಾನ ಅಪ್ಪಲೆ ಸಾಧ್ಯ ಇಲ್ಲೆ. ಗುಣಲ್ಲಿ ಒಂದೇ ಆದರೂ ಪರಿಮಾಣಲ್ಲಿ ಬೇರೆಯೇ ಎಂಬ ತಿಳುವಳಿಕೆಯು ಸರಿಯಾದ ಆಧ್ಯಾತ್ಮಿಕ ಜ್ಞಾನ. ಇದರಿಂದ ಮನುಷ್ಯ° ತನ್ನಲ್ಲಿಯೇ ಪೂರ್ಣನಾವುತ್ತ° (ಜ್ಞಾನವುಳ್ಳವವ°ನಾವುತ್ತ°). ಆವಾಗ ಅವಂಗೆ ಯಾವುದಕ್ಕೂ ಆಸೆಪಡೆಕ್ಕಾದ್ದು ಇಲ್ಲೆ, ವಿಷಾದಿಸೆಕ್ಕಾದ್ದೂ ಇಲ್ಲೆ. ಅವನ ಮನಸ್ಸಿಲ್ಲಿ ದ್ವಂದ್ವ ಇಲ್ಲೆ. ಅವ° ಎಂತ ಮಾಡಿದರೂ ಭಗವಂತನ ಸಂಪ್ರೀತಿಗಾಗಿ. ಹೀಂಗೆ ದ್ವಂದ್ವಂಗಳ ನೆಲೆಂದ ಬಿಡುಗಡೆಹೊಂದಿ, ಅವ° ಈ ಐಹಿಕ ಜಗತ್ತಿಲ್ಲಿಪ್ಪಂತೆಯೇ ಮುಕ್ತನಾವುತ್ತ°.
ಬನ್ನಂಜೆ ವ್ಯಾಖ್ಯಾನಿಸುತ್ತವು – ಇಲ್ಲಿ ಸಂನ್ಯಾಸ ಹೇಳುವದು ಸಂನ್ಯಾಸಾಶ್ರಮ ಅಲ್ಲ. ಆರು ರಾಗ-ದ್ವೇಷವ ದಾಂಟಿ ನಿಲ್ಲುತ್ತನೋ ಅವನೇ ಸಂನ್ಯಾಸಿ. ಸ+ಅಹಂ+ನ್ಯಾಸ = ಸಂನ್ಯಾಸ. ಸ ಹೇಳಿರೆ ಸಂಪೂರ್ಣವಾದ, ಸಮೀಚೀನವಾದ, ದೋಷರಹಿತವಾದ ಮತ್ತು ಗುಣಪೂರ್ಣನಾದ ಭಗವಂತ°. ಅವನಲ್ಲಿ ನಮ್ಮ ‘ಅಹಂ’ (ರಾಗ-ದ್ವೇಷ ಅಹಂಕಾರವ) ನ್ಯಾಸ ಮಾಡುವದು ಸಂನ್ಯಾಸ. ಕೃಷ್ಣ ಹೇಳುತ್ತ° – “ಕರ್ಮಯೋಗವು ಕರ್ಮಸಂನ್ಯಾಸಕ್ಕಿಂತ ಮಿಗಿಲು”. ಎಂತಕೆ ಹೇಳಿರೆ, ಇಲ್ಲಿ ಅರ್ಜುನ° “ಎನಗೆ ಕೌರವರ ಮೇಲೆ ದ್ವೇಷ ಇಲ್ಲೆ, ಎಂಗಳೇ ಗೆಲ್ಲೆಕು ಹೇಳುವ ಬಯಕೆ ಇಲ್ಲೆ, ಎನಗೆ ಈ ರಾಜ್ಯದ ಯಾವ ಫಲದ ಆಸೆಯೂ ಇಲ್ಲೆ” ಹೇಳಿ ಯುದ್ಧ ಮಾಡದ್ದೇ ನಿರ್ಲಿಪ್ತನಾಗಿ ನಿಷ್ಕ್ರೀಯನಾಗಿ ಕೂದರೆ ಅದು ಕರ್ಮಸಂನ್ಯಾಸ ಆವುತ್ತು. ಆದರೆ, ಹೀಂಗೆ ಸುಮ್ಮನೆ ಕೂದರೆ ಕರ್ತವ್ಯ ಕರ್ಮ (ಕರ್ಮಯೋಗ) ಮಾಡಿದ ಹಾಂಗೆ ಆವುತ್ತಿಲ್ಲೆ. ಇದರಿಂದ ಅಧರ್ಮಕ್ಕೆ ಜಯ ಆವ್ತು. ಆದ್ದರಿಂದ ಕರ್ಮಸಂನ್ಯಾಸ ಮತ್ತು ಕರ್ಮಯೋಗ ಜೊತೆ-ಜೊತೆಯಾಗಿರೆಕು. ಕರ್ಮಯೋಗ ಇಲ್ಲದ್ದ ಕರ್ಮಸಂನ್ಯಾಸ ಯಾವ ಶ್ರೇಯಸ್ಸನ್ನೂ ತಂದುಕೊಡುತ್ತಿಲ್ಲೆ ಹೇಳಿ ಅರ್ಜುನಂಗೆ ಭಗವಂತ° ಹೇಳುತ್ತ°.
ಸಂನ್ಯಾಸ ಅರ್ಥಪೂರ್ಣ ಆಯೇಕ್ಕಾರೆ ಕಾಮ-ಕ್ರೋಧಂಗಳ ತ್ಯಾಗದ ಜೊತಗೆ ಕ್ರಿಯೆಯೂ ಇರೇಕು. ಹೋರಾಡೆಕು ಆದರೆ ರಾಗದ-ದ್ವೇಷಂದಲ್ಲ. ಕ್ರಿಯೆ ಇಲ್ಲದ ರಾಗ-ದ್ವೇಷ ತ್ಯಾಗ ಅರ್ಥಶೂನ್ಯ. ಆದ್ದರಿಂದ ದ್ವಂದ್ವಾತೀತವಾಗಿ ಕರ್ಮ ಮಾಡೆಕು ಹೇಳಿ ಭಗವಂತನ ಸಂದೇಶ.
ನಮ್ಮ ಜೀವನವೇ ಒಂದು ಹೋರಾಟ. ಇಲ್ಲಿ ನಮ್ಮ ಕರ್ತವ್ಯಕರ್ಮಂದ ದೂರ ಸರುದು, ರಾಗ-ದ್ವೇಷ, ಕಾಮ-ಕ್ರೋಧವ ಬಿಟ್ಟು, ನಿಷ್ಕ್ರೀಯನಾಗಿ, ‘ಕರ್ಮಸಂನ್ಯಾಸವ ಮಾಡಿದೆ’ ಹೇಳಿಗೊಂಡರೆ ನಮ್ಮ ಜೀವನ ವ್ಯರ್ಥ. ಅದರಿಂದ ಎಂದೂ ಶ್ರೇಯಸ್ಸಿಲ್ಲೆ ಮತ್ತು ಮೋಕ್ಷವೂ ಇಲ್ಲೆ. ರಾಗ-ದ್ವೇಷದ ತ್ಯಾಗದ ಜೊತಗೆ ಬದುಕು ಎಂಬ ಜೀವನ ಸಂಗ್ರಾಮಲ್ಲಿ ನಮ್ಮ ಕರ್ತವ್ಯಕರ್ಮದ ಮುಖೇನ ಹೋರಾಟ ಮಾಡುವದೇ ನಿಜವಾದ ಜೀವನಧರ್ಮ. ಈ ರೀತಿ ದ್ವಂದ್ವಾತೀತ ಬದುಕಿನ ಜೀವನಲ್ಲಿ ಅಳವಡಿಸಿಗೊಂಡವ ಕರ್ಮದ ಸೆರೆಂದ ಪಾರಾವ್ತ°.
ಇಲ್ಲಿ ಕೃಷ್ಣ ಅರ್ಜುನನ ‘ಮಹಾಬಾಹು’ ಹೇಳಿ ಹೇಳಿದ್ದ°. ಮೇಲ್ನೋಟಕ್ಕೆ ಮಹಾಬಾಹುಗಳಿಪ್ಪವ / ಮಹಾವೀರ ಹೇಳಿ ಮಾತ್ರ ಅರ್ಥ. ಇಲ್ಲಿ ಈ ವಿಶೇಷಣಕ್ಕೆ ವಿಶೇಷ ಅರ್ಥ ಇದ್ದು. ‘ಮಹಬಾ’ ಹೇಳಿ ರಾಗ-ದ್ವೇಷ ಮತ್ತು ಕಾಮನೆಯ ಮಡುವಿಲ್ಲಿಪ್ಪವ°. ಇಂತಹ ಮಹತ್ತರವಾದ ರಾಗ-ದ್ವೇಷಂಗಳ ತ್ಯಾಗಮಾಡಿದವ ನೀನು ಮಹಾಬಾಹು, ಅರ್ಜುನ° ಹೇಳಿ ಸಂಬೋಧನೆ. ನಿನ್ನಲ್ಲಿ (ನಿನ್ನತ್ರೆ) ಕರ್ಮಸಂನ್ಯಾಸ ಇದ್ದು. ಅದರ ಒಟ್ಟಿಂಗೆ ಕರ್ಮಯೋಗ ಮಾಡ್ಳೆ ಅರ್ಹತೆ ಇಪ್ಪ ಮಹಾವೀರ° ನೀನು” ಹೇಳ್ವ ಧ್ವನಿ ಹೇದು ಬನ್ನಂಜೆಯವು ವ್ಯಾಖ್ಯಾನಿಸಿದ್ದವು.
ಶ್ಲೋಕ :
ಸಾಂಖ್ಯಯೋಗೌ ಪೃಥಗ್ ಬಾಲಾಃ ಪ್ರವದಂತಿ ನ ಪಂಡಿತಾಃ ।
ಏಕಮಪ್ಯಾಸ್ಥಿತಃ ಸಮ್ಯಕ್ ಉಭಯೋರ್ವಿಂದತೇ ಫಲಮ್ ॥೦೪॥
ಪದವಿಭಾಗ :
ಸಾಂಖ್ಯ-ಯೋಗೌ ಪೃಥಕ್ ಬಾಲಾಃ ಪ್ರವದಂತಿ ನ ಪಂಡಿತಾಃ । ಏಕಮ್ ಅಪಿ ಆಸ್ಥಿತಃ ಸಮ್ಯಕ್ ಉಭಯೋಃ ವಿಂದತೇ ಫಲಮ್ ॥
ಅನ್ವಯ :
ಸಾಂಖ್ಯ-ಯೋಗೌ ಪೃಥಕ್ ಇತಿ ಬಾಲಾಃ ಪ್ರವದಂತಿ, ನ ಪಂಡಿತಾಃ । ಏಕಮ್ ಅಪಿ ಸಮ್ಯಕ್ ಆಸ್ಥಿತಃ ಪುರುಷಃ ಉಭಯೋಃ ಫಲಂ ವಿಂದತೇ ।
ಪ್ರತಿಪದಾರ್ಥ:
ಸಾಂಖ್ಯ-ಯೋಗೌ – ಭೌತಿಕ ಜಗತ್ತಿನ ವಿಶ್ಲೇಷಣಾತ್ಮಕ ಅಧ್ಯಯನ ಮತ್ತು ಭಕ್ತಿಸೇವೆಲಿ ಕಾರ್ಯಂಗೊ, ಪೃಥಕ್ ಇತಿ – ಬೇರೆಯೇ ಹೇದು (ವಿಭಿನ್ನ ಹೇದು), ಬಾಲಾಃ – ಮಂದಮತಿಗೊ, ಪ್ರವದಂತಿ – ಹೇಳುತ್ತವು. ನ ಪಂಡಿತಾಃ – ಎಂದಿಂಗೂ ವಿದ್ವಾಂಸರು ಅಲ್ಲ, ಏಕಮ್ – ಒಂದರಲ್ಲಿ, ಅಪಿ – ಕೂಡ, ಸಮ್ಯಕ್ – ಪೂರ್ತಿಯಾಗಿ (ಸರಿಯಾಗಿ), ಆಸ್ಥಿತಃ – ಸ್ಥಿತರಾಗಿ, ಪುರುಷಃ – ಮನುಷ್ಯ°, ಉಭಯೋಃ ಫಲಮ್ – ಎರಡರ ಫಲವ, ವಿಂದತೇ – ಅನುಭವಿಸುತ್ತ°., .
ಅನ್ವಯಾರ್ಥ:
ಭಕ್ತಿಸೇವೆಯು (ಕರ್ಮಯೋಗ) ಐಹಿಕ ಜಗತ್ತಿನ ವಿಶ್ಲೇಷಣಾತ್ಮಕ ಅಧ್ಯಯನಂದ (ಸಾಂಖ್ಯಂದ) ಭಿನ್ನವಾದ್ದು ಹೇದು ಅಜ್ಞಾನಿಗೊ ಮಾತ್ರ ಹೇಳುತ್ತವು. ಇವೆರಡರಲ್ಲಿ ಯಾವುದನ್ನಾದರೂ ಮನಃಪೂರ್ವಕವಾಗಿ ಅನುಷ್ಠಾನ ಮಾಡಿದವ° ಎರಡು ಮಾರ್ಗಂಗಳ ಫಲವನ್ನೂ ಹೊಂದುತ್ತ° ಹೇಳಿ ನಿಜವಾದ ವಿದ್ವಾಂಸರುಗೊ ಹೇಳುತ್ತವು.
ತಾತ್ಪರ್ಯ/ವಿವರಣೆ:
ಸಾಂಖ್ಯದ (ಐಹಿಕ ಜಗತ್ತಿನ ವಿಶ್ಲೇಷಣಾತ್ಮಕ ಅಧ್ಯಯನದ) ಗುರಿ ಜಗತ್ತಿನ ಆತ್ಮವ ಕಂಡುಕೊಂಬದು. ಐಹಿಕ ಜಗತ್ತಿನ ಆತ್ಮವು ಪರಮಾತ್ಮ°. ಭಗವಂತನ ಭಕ್ತಿಪೂರ್ವಕ ಸೇವೆ ಹೇಳಿರೆ ಪರಮಾತ್ಮನ ಸೇವೆ. ಒಂದು ಪ್ರಕ್ರಿಯೆ ಮರದ ಬೇರಿನ ಹುಡುಕ್ಕುತ್ತದಾದರೆ ಇನ್ನೊಂದು ಮರದ ಬೇರಿಂಗೆ ನೀರೆರವದು. ಸಾಂಖ್ಯ ಸಿದ್ಧಾಂತದ ನಿಜವಾದ ವಿದ್ಯಾರ್ಥಿಯು ಐಹಿಕ ಜಗತ್ತಿನ ಬೇರು ಆದ ಭಗವಂತನ ಕಾಣುತ್ತ°. ಅನಂತರ ಸಂಪೂರ್ಣಜ್ಞಾನಲ್ಲಿ ಭಗವಂತನ ಸೇವರೆ ಮುಡಿಪಾವುತ್ತ°. ಸಾಂಖ್ಯ ಮತ್ತು ಕರ್ಮಯೋಗ ಇವ್ವೆರಡರ ಸಾರಲ್ಲಿ ವ್ಯತ್ಯಾಸ ಇಲ್ಲೆ. ಎಂತಕೆ ಹೇಳಿರೆ ಎರಡರ ಗುರಿ ಭಗವಂತನೇ. ಈ ಕಟ್ಟಕಡೆಯ ಗುರಿಯ ತಿಳಿಯದ್ದವು ಸಾಂಖ್ಯ ಮತ್ತು ಕರ್ಮಯೋಗಂಗಳ ಉದ್ದೇಶ ಒಂದೇ ಅಲ್ಲ, ಬೇರೆ ಬೇರೆ ಹೇಳಿ ಹೇಳುತ್ತವು . ಆದರೆ , ವಿದ್ವಾಂಸನಾದವ° ಈ ಭಿನ್ನಪ್ರಕ್ರಿಯೆಗಳ ಗುರಿ ಒಂದೇ ಹೇಳ್ವದರ ತಿಳಿದಿರುತ್ತ°.
ಬನ್ನಂಜೆ ಹೇಳುತ್ತವು – ಜ್ಞಾನ ಮತ್ತು ಕರ್ಮದ ದಾರಿ ಬೇರೆ ಬೇರೆ (ಒಂದು ಸಂನ್ಯಾಸಿಗೊಕ್ಕೆ , ಇನ್ನೊಂದು ಸಂಸಾರಿಗೊಕ್ಕೆ) ಹೇಳಿ ಹೇಳುವವು ಬಾಲಿಷರು (ತಿಳಿಗೇಡಿಗೊ), ಜ್ಞಾನವಂತರಲ್ಲ. ಯಾವುದೇ ಒಂದು ದಾರಿಲಿ ಸರಿಯಾಗಿ ನಡವವ° ಅವ್ವೆರಡರ ಸಂಪೂರ್ಣ ಫಲವ ಪಡೆತ್ತ°.
ಶಾಸ್ತ್ರಲ್ಲಿ ಸಾಂಖ್ಯ (ಸಮ್ಯಕ್ ಖ್ಯಾತಿ) ಹೇಳಿರೆ ಗಣಿತ ಅಲ್ಲ. ಅದು ಶುದ್ಧ ಆತ್ಮತತ್ವವಿಜ್ಞಾನ – ಭಗವಂತನ ಜ್ಞಾನ. ಆರ ಅಂಕೆಲಿ ಈ ಇಡೀ ಜಗತ್ತು ನಡೆತ್ತಾ ಇದ್ದೊ ಆ ಅವನ ಅರಿವು. ಇದರ ತಿಳಿಯದ್ದವು ಬಾಲಿಷರು ಮತ್ತು ಅಂತವರ ಮಾತಿಂಗೆ ಆಧಾರ ಇಲ್ಲೆ. ಸಾಂಖ್ಯ ಮತ್ತು ಕರ್ಮಯೋಗದ ಗುರಿ ಒಂದೇ – ಭಗವಂತನ ಕುರಿತು ಜ್ಞಾನ. ಇದರ್ಲಿ “ಏಕಮಪ್ಯಾಸ್ಥಿತಃ ಸಮ್ಯಗುಭಯೋರ್ವಿಂದತೇ ಫಲಂ” – ಯಾವುದೇ ಒಂದರ ನೀನು ಸರಿಯಾಗಿ ಅರ್ಥಪೂರ್ಣವಾಗಿ ಆಚರಣೆಲಿ ತಂದರೂ ಎರಡರ ಫಲವನ್ನೂ ಪಡೆತ್ತೆ ಹೇಳಿ ಭಗವಂತ ಹೇಳಿದ್ದು. ಇಲ್ಲಿ ಜ್ಞಾನವ ಮಾತ್ರ ಅಥವಾ ಕರ್ಮವ ಮಾತ್ರ ಆಚರಣೆ ಮಾಡುವದು ಹೇಳಿ ಅರ್ಥ ಅಲ್ಲ. ಕರ್ಮವ ಜ್ಞಾನಪೂರ್ವಕವಾಗಿ ಮಾಡುವದು ಹೇಳಿ ತಾತ್ಪರ್ಯ. ಜ್ಞಾನ ಬರೇ ತಿಳುದಿದ್ದರೆ ಮಾಂತ್ರ ಸಾಲ. ಅದರ ಆಚರಣೆಲಿ ಅನುಷ್ಠಾನಗೊಳುಸೆಕು. ಅಂದರೆ ಮಾತ್ರ ಆ ಜ್ಞಾನಕ್ಕೆ ಸಾರ್ಥಕ ಫಲ. ಕರ್ಮವ ಸರಿಯಾಗಿ ಮಾಡುವದು ಹೇಳಿರೆ ಜ್ಞಾನಪೂರ್ವಕ ಮಾಡುವದು ಹೇಳಿ ಅರ್ಥ. ಅದೇ ರೀತಿ ಜ್ಞಾನ ಒಳ್ಳೆದಿಪ್ಪದು ಹೇಳಿರೆ ಆ ತಿಳುದ ಜ್ಞಾನವ ಅನುಷ್ಠಾನ ಮಾಡುವದು. ಆದ್ದರಿಂದ ಒಂದು “ಜ್ಞಾನಪ್ರಧಾನ” ಇನ್ನೊಂದು “ಕರ್ಮಪ್ರಧಾನ”. ಒಂದು ಇನ್ನೊಂದಕ್ಕೆ ಪೂರಕ. ಇದರ ಆರು ಸರಿಯಾಗಿ ಅರ್ಥಮಾಡಿಗೊಂಡಿದವೋ ಅವು ‘ಪಂಡಿತ’ ಮತ್ತು ಇವೆರಡರ ನಿಜವಾದ ಫಲವ ಪಡೆತ್ತವು.
ಶ್ಲೋಕ :
ಯತ್ ಸಾಂಖ್ಯೈಃ ಪ್ರಾಪ್ಯತೇ ಸ್ಥಾನಂ ತದ್ ಯೋಗೈರಪಿ ಗಮ್ಯತೇ ।
ಏಕಂ ಸಾಂಖ್ಯಂ ಚ ಯೋಗಂ ಚ ಯಃ ಪಶ್ಯತಿ ಸ ಪಶ್ಯತಿ ॥೦೫॥
ಪದವಿಭಾಗ :
ಯತ್ ಸಾಂಖೈಃ ಪ್ರಾಪ್ಯತೇ ಸ್ಥಾನಂ ತತ್ ಯೋಗೈಃ ಅಪಿ ಗಮ್ಯತೇ । ಏಕಮ್ ಸಾಂಖ್ಯಮ್ ಚ ಯೋಗಮ್ ಚ ಯಃ ಪಶ್ಯತಿ ಸಃ ಪಶ್ಯತಿ॥
ಅನ್ವಯ :
ಯತ್ ಸ್ಥಾನಂ ಸಾಂಖೈಃ ಪ್ರಾಪ್ಯತೇ, ತತ್ ಯೋಗೈಃ ಅಪಿ ಗಮ್ಯತೇ । ಯಃ ಸಾಂಖ್ಯಂ ಚ ಯೋಗಂ ಚ ಏಕಂ ಪಶ್ಯತಿ, ಸಃ ಏವ ಪಶ್ಯತಿ ।
ಪ್ರತಿಪದಾರ್ಥ:
ಯತ್ – ಏವ, ಸ್ಥಾನಮ್ – ಸ್ಥಾನವು, ಸಾಂಖೈಃ – ಸಾಂಖ್ಯದರ್ಶನಂದ, ಪ್ರಾಪ್ಯತೇ – ಹೊಂದಲ್ಪಡುತ್ತೋ, ತತ್ – ಅದು, ಯೋಗೈಃ – ಭಕ್ತಿಸೇವೆಂದ, ಅಪಿ – ಕೂಡ, ಗಮ್ಯತೇ – ಹೊಂದಲ್ಪಡುತ್ತು. ಯಃ – ಆರು, ಸಾಂಖ್ಯಮ್ – ವಿಶ್ಲೇಷಣಾತ್ಮಕ ಅಧ್ಯಯನವ, ಚ – ಮತ್ತು, ಯೋಗಮ್ – ಭಕ್ತಿಕಾರ್ಯವನ್ನೂ, ಚ – ಕೂಡ, ಏಕಮ್ – ಒಂದು, ಪಶ್ಯತಿ – ನೋಡುತ್ತನೋ, ಸಃ ಅವ°, ಏವ – ಖಂಡಿತವಾಗಿಯೂ, (ಸಃ ಏವ – ಅವನೇ), ಪಶ್ಯತಿ – ವಾಸ್ತವವಾಗಿ ಕಾಣುತ್ತ°.
ಅನ್ವಯಾರ್ಥ:
ಸಾಂಖ್ಯಂದ ಯಾವ ಸ್ಥಾನವ ಪಡವಲೆಡಿಗೋ ಅದೇ ಸ್ಥಾನವ ಭಕ್ತಿಸೇವೆಂದಲೂ ಪಡವಲಕ್ಕು ಹೇಳಿ ತಿಳುಕ್ಕೊಂಡು, ಸಾಂಖ್ಯವೂ ಭಕ್ತಿಸೇವೆಯೂ ಒಂದೇ ಮಟ್ಟಲ್ಲಿ ಇದ್ದು ಹೇಳ್ವದರ ಕಂಡುಗೊಂಬವ°, ವಿಷಯಂಗಳ ಯಥಾವತ್ತಾಗಿ ಕಂಡುಗೊಳ್ಳುತ್ತ°.
ತಾತ್ಪರ್ಯ/ವಿವರಣೆ:
ತತ್ವಶಾಸ್ತ್ರದ ಸಂಶೋಧನೆಯ ನಿಜವಾದ ಉದ್ದೇಶ ಬದುಕಿನ ಅಂತಿಮ ಗುರಿಯ ಕಾಂಬದು. ಆತ್ಮಸಾಕ್ಷಾತ್ಕಾರವೇ ಅಂತಿಮಗುರಿಯಾದ್ದರಿಂದ ಈ ಎರಡು ಪ್ರಕ್ರಿಯೆಗಳ ನಿರ್ಣಯಂಗಳಲ್ಲಿ ವ್ಯತ್ಯಾಸ ಇಲ್ಲೆ. ಸಾಂಖ್ಯ ಸಿದ್ಧಾಂತದ ಸಂಶೋಧನೆಯ ಫಲವಾಗಿ ಜೀವಿಯು ಐಹಿಕ ಜಗತ್ತಿನ ವಿಭಿನ್ನಾಂಶವಲ್ಲ, ಆದರೆ, ಪೂರ್ಣ ಪರಮ ಚೇತನದ ಭಾಗ ಹೇಳ್ವ ನಿರ್ಣಯಕ್ಕೆ ಬತ್ತು. ಆದ್ದರಿಂದ ಆತ್ಮಕ್ಕೂ ಐಹಿಕ ಜಗತ್ತಿಂಗೂ ಸಂಬಂಧ ಇಲ್ಲೆ. ಆತ್ಮನ ಕ್ರಿಯೆಗೊ ಪರಮ ಚೇತನದೊಂದಿಂಗೆ ಯಾವುದಾರು ಸಂಬಂಧ ಹೊಂದಿರೆಕು. ಆತ್ಮ° ಕೃಷ್ಣಪ್ರಜ್ಞೆಲಿ ಕರ್ಮಮಾಡಿಯಪ್ಪಗ ಅವ° ವಾಸ್ತವವಾಗಿ ತನ್ನ ನಿಜಸ್ವರೂಪಲ್ಲಿರುತ್ತ°. ಮದಲಾಣ ಪ್ರಕ್ರಿಯೆಯಾದ ಸಾಂಖ್ಯಲ್ಲಿ ಮನುಷ್ಯ° ಜಡವಸ್ತುವಿಂದ ಬೇರೆಯಾಯೆಕು. ಭಕ್ತಿಯೋಗದ ಪ್ರಕ್ರಿಯೆಲಿ ಅವ° ಕೃಷ್ಣಪ್ರಜ್ಞೆಯ ಕಾರ್ಯಲ್ಲಿ ಆಸಕ್ತನಾಯೆಕು. ಮೇಲ್ನೋಟಕ್ಕೆ ಒಂದು ಪ್ರಕ್ರಿಯೆಲಿ ನಿರಾಸಕ್ತಿಯೂ ಇನ್ನೊಂದು ಪ್ರಕ್ರಿಯೆಲಿ ಆಸಕ್ತಿಯೂ ಅಗತ್ಯ ಹೇಳಿ ಕಂಡರೂ ವಾಸ್ತವವಾಗಿ ಎರಡೂ ಪ್ರಕ್ರಿಯೆಗೊ ಒಂದೇ. ಜಡವಸ್ತುವಿಲ್ಲಿ ನಿರಾಸಕ್ತಿ ಮತ್ತು ಭಗವಂತನಲ್ಲಿ ಆಸಕ್ತಿ ಎರಡೂ ಒಂದೇ. ಇದರ ಅರ್ಥಮಾಡಿಗೊಂಡವ° ವಿಷಯಂಗಳ ಯಥಾವತ್ತಾಗಿ ಕಾಣುತ್ತ°.
ಬನ್ನಂಜೆಯವು ಹೇಳುತ್ತವು – ಜ್ಞಾನಿಗೊ ತಮಗೋಸ್ಕರ ಅಲ್ಲದೆ ಲೋಕಕ್ಕೆ ಮಾರ್ಗದರ್ಶನ ಮಾಡುವ ಸಲುವಾಗಿಯೂ ಕರ್ಮ ಮಾಡೇಕ್ಕಾವ್ತು. ಎಂತಕೆ ಸಮಾಜ ಅವರ ಅನುಸರುಸುತ್ತು. ಅದು ಅವರ ಮೇಲಿಪ್ಪ ಸಾಮಾಜಿಕ ಜವಾಬ್ದಾರಿ. ಆದ್ದರಿಂದ ಜ್ಞಾನ ಮತ್ತು ಕರ್ಮ ಒಂದಕ್ಕೊಂದು ಪೂರಕ. ಜ್ಞಾನಪ್ರದ ಮತ್ತು ಕರ್ಮಪ್ರದ ಈ ಎರಡೂ ಮಾರ್ಗಂಗಳ ಗುರಿ ಒಂದೇ. ಜ್ಞಾನಪ್ರಧಾನವಾಗಿ ಕರ್ಮ ಮಾಡುವ ಋಷಿಗೊ, ದೇವತೆಗೊ ಮತ್ತು ಕರ್ಮಪ್ರಧಾನವಾಗಿ ಜ್ಞಾನಂದ ಕರ್ಮಮಾಡುವ ಮನುಷ್ಯರು ಸೇರುವ ಗುರಿ ಒಂದೇ. ಅದು ಆ ಪರಮ ಸತ್ಯ ಭಗವಂತ°. ಇಲ್ಲಿ ಕರ್ಮಸಂನ್ಯಾಸ ಬೇರೆ ಮತ್ತು ಕರ್ಮಯೋಗವೇ ಬೇರೆ ಹೇಳುವದು ಅರ್ಥಶೂನ್ಯ. ಎರಡೂ ಒಂದಕ್ಕೊಂದು ಪೂರಕ. ಇದರ ತಿಳುದವನೇ ಪಂಡಿತ.
ಶ್ಲೋಕ :
ಸಂನ್ಯಾಸಸ್ತು ಮಹಾಬಾಹೋ ದುಃಖಮಾಪ್ತುಮಯೋಗತಃ ।
ಯೋಗಯುಕ್ತೋ ಮುನಿರ್ಬ್ರಹ್ಮ ನ ಚಿರೇಣಾಧಿಗಚ್ಛತಿ ॥೦೬॥
ಪದವಿಭಾಗ :
ಸಂನ್ಯಾಸಃ ತು ಮಹಾಬಾಹೋ ದುಃಖಮ್ ಆಪ್ತುಮ್ ಅಯೋಗತಃ । ಯೋಗ-ಯುಕ್ತಃ ಮುನಿಃ ಬ್ರಹ್ಮನ ಚಿರೇಣ ಅಧಿಗಚ್ಛತಿ ॥
ಅನ್ವಯ :
ಹೇ ಮಹಾಬಾಹೋ!, ಅಯೋಗತಃ ಸಂನ್ಯಾಸಃ ತು ದುಃಖಮ್ ಆಪ್ತುಮ್, ಯೋಗ-ಯುಕ್ತಃ ಮುನಿಃ ನ ಚಿರೇಣ ಬ್ರಹ್ಮ ಅಧಿಗಚ್ಛತಿ ।
ಪ್ರತಿಪದಾರ್ಥ:
ಹೇ ಮಹಾಬಾಹೋ! – ಏ ಮಹಾಬಾಹುವೇ!, ಅಯೋಗತಃ – ಭಕ್ತಿಸೇವೆ ಇಲ್ಲದ್ದೆ, ಸಂನ್ಯಾಸಃ – ಸಂನ್ಯಾಸಾಶ್ರಮವು, ತು – ಆದರೋ, ದುಃಖಮ್ – ದುಃಖವ, ಆಪ್ತುಮ್ – ಉಂಟುಮಾಡ್ಳೆ, ಯೋಗ-ಯುಕ್ತಃ – ಭಕ್ತಿಸೇವೇಲಿ ತೊಡಗಿದ, ಮುನಿಃ – ಚಿಂತಕ° (ಮುನಿ), ನ ಚಿರೇಣ – ವಿಳಂಬ ಇಲ್ಲದ್ದೆ, ಬ್ರಹ್ಮ – ಪರಮೋನ್ನತನ, ಅಧಿಗಚ್ಛತಿ – ಹೊಂದುತ್ತ°.
ಅನ್ವಯಾರ್ಥ:
ಭಗವಂತನ ಭಕ್ತಿಪೂರ್ವಕ ಸೇವೆಲಿ ತೊಡಗದ್ದೆ ಎಲ್ಲ ಬಗೆಯ ಕರ್ಮಂಗಳ ತ್ಯಜಿಸಿದ ಮಾತ್ರಕ್ಕೆ ಮನುಷ್ಯ° ಸುಖಿಯಾಗ°. ಆದರೆ ಭಕ್ತಿಸೇವೆಲಿ ನಿರತನಾದ ವಿಚಾರವಂತ° ಶೀಘ್ರವಾಗಿ ಪರಮ ಪ್ರಭುವ ಸೇರುತ್ತ°.
ತಾತ್ಪರ್ಯ/ವಿವರಣೆ:
ಕರ್ಮಯೋಗ ಇಲ್ಲದ ಬರೇ ದ್ವಂದ್ವತ್ಯಾಗ (ಸಂನ್ಯಾಸ) ವ್ಯರ್ಥ. ಶಾಸ್ತ್ರವ ಓದಿ ಎನಗೆ ಜ್ಞಾನ ಬಂತು, ನಾನು ದ್ವಂದ್ವಾತೀತ, ಎನಗೆ ಯಾವ ಕರ್ಮವೂ ಬೇಕಾಗಿಲ್ಲೆ ಹೇಳಿ ತಿಳ್ಕೊಂಡು ನಿಷ್ಕ್ರೀಯನಾದರೆ ಅದು ನಮ್ಮ ಅಧೋಗತಿಗೆ ತಳ್ಳುತ್ತು. ಆದರೆ ದ್ವಂದ್ವಾತೀತನಾಗಿ ಕಾಮಕ್ರೋಧವ ಗೆದ್ದು ಜ್ಞಾನಪೂರ್ವಕ ಕರ್ಮಮಾಡಿರೆ ಅದರಿಂದ ಮೋಕ್ಷ ನಿಶ್ಚಿತ.
ಶ್ಲೋಕ :
ಯೋಗಯುಕ್ತೋ ವಿಶುದ್ಧಾತ್ಮಾ ವಿಜಿತಾತ್ಮಾ ಜಿತೇಂದ್ರಿಯಃ ।
ಸರ್ವಭೂತಾತ್ಮಭೂತಾತ್ಮಾ ಕುರ್ವನ್ನಪಿ ನ ಲಿಪ್ಯತೇ ॥೦೭॥
ಪದವಿಭಾಗ :
ಯೋಗ-ಯುಕ್ತಃ ವಿಶುದ್ಧ-ಆತ್ಮಾ ವಿಜಿತ-ಆತ್ಮಾ ಜಿತ-ಇಂದ್ರಿಯಃ । ಸರ್ವ-ಭೂತ ಆತ್ಮ-ಭೂತ-ಆತ್ಮಾ ಕುರ್ವನ್ ಅಪಿ ನ ಲಿಪ್ಯತೇ ॥
ಅನ್ವಯ :
ಯೋಗ-ಯುಕ್ತಃ, ವಿಶುದ್ಧ-ಆತ್ಮಾ, ವಿಜಿತ-ಆತ್ಮಾ, ಜಿತ-ಇಂದ್ರಿಯಃ, ಸರ್ವ-ಭೂತ-ಆತ್ಮ-ಭೂತ-ಆತ್ಮಾ, ಕುರ್ವನ್ ಅಪಿ ನ ಲಿಪ್ಯತೇ ।
ಪ್ರತಿಪದಾರ್ಥ:
ಯೋಗ-ಯುಕ್ತಃ – ಭಕ್ತಿಸೇವೆಲಿ ತೊಡಗಿದ, ವಿಶುದ್ಧ-ಆತ್ಮಾ – ಪರಿಶುದ್ಧ ಆತ್ಮನು, ವಿಜಿತ-ಆತ್ಮಾ – ಆತ್ಮ ನಿಗ್ರಹಿಯಾದ, ಜಿತ-ಇಂದ್ರಿಯಃ – ಇಂದ್ರಿಯಂಗಳ ಜಯಿಸಿದವ°, ಸರ್ವ-ಭೂತ-ಆತ್ಮ-ಭೂತ-ಆತ್ಮಾ – ಎಲ್ಲ ಜೀವಿಗಳಲ್ಲಿ ಕರುಣೆಯಿಪ್ಪವ°, ಕುರ್ವನ್ ಅಪಿ – ಕಾರ್ಯನಿರತನಾಗಿದ್ದರೂ, ನ ಲಿಪ್ಯತೇ – ಸಿಲುಕತ್ತನಿಲ್ಲೆ.
ಅನ್ವಯಾರ್ಥ:
ಆರು ಭಕ್ತಿಂದ ಕರ್ಮ ಮಾಡುವನೋ, ಶುದ್ಧ ಆತ್ಮನೋ, ಮತ್ತು ಮನಸ್ಸನ್ನೂ ಇಂದ್ರಿಯಂಗಳನ್ನೂ ನಿಯಂತ್ರಿಸುವನೋ ಅವ° ಎಲ್ಲೋರಿಂಗೂ ಪ್ರಿಯನಾದವ° ಆವ್ತ°. ಅವ° ಕರ್ಮವ ಮಾಡಿಗೊಂಡಿದ್ದರೂ ಅದರಲ್ಲಿ ಸಿಲುಕಿಹೋವ್ತನಿಲ್ಲೆ.
ತಾತ್ಪರ್ಯ/ವಿವರಣೆ:
ಕೃಷ್ಣಪ್ರಜ್ಞೆಂದ ಮುಕ್ತಿಮಾರ್ಗಲ್ಲಿಪ್ಪವ° ಎಲ್ಲ ಜೀವಿಗೊಕ್ಕೂ ಪ್ರಿಯನಾದವ° ಆಗಿರುತ್ತ° ಮತ್ತು ಎಲ್ಲ ಜೀವಿಗಳೂ ಅವಂಗೆ ಪ್ರಿಯರು. ಇದಕ್ಕೆ ಅವನ ಕೃಷ್ನಪ್ರಜ್ಞೆಯೇ ಕಾರಣ. ಮರದ ಎಲೆಗೊ ಮತ್ತು ರೆಂಬೆಗೊ ಮರಂದ ಹೇಂಗೆ ಬೇರೆ ಅಲ್ಲದೋ ಹಾಂಗೇ ಕೃಷ್ಣಪ್ರಜ್ಞೆಲಿಪ್ಪವಂಗೆ ಯಾವ ಜೀವಿಯೂ ಕೃಷ್ಣನಿಂದ ಬೇರೆಯಲ್ಲ. ಮರದ ಬೇರಿಂಗೆ ನೀರೆರದರೆ ಎಲ್ಲ ಎಲೆ, ರೆಂಬೆಗೊಕ್ಕೂ ನೀರು ಎತ್ತುತ್ತು ಅಥವಾ ಹೊಟ್ಟಗೆ ಆಹಾರ ನೀಡಿರೆ ಚೈತನ್ಯ ಶರೀರಕ್ಕೆ ಎಲ್ಲ ದಿಕ್ಕೆ ಲಭ್ಯ ಆವ್ತು ಹೇಳಿ ಅವಂಗೆ ಚೆನ್ನಾಗಿ ತಿಳಿದಿರುತ್ತು. ಕೃಷ್ಣಪ್ರಜ್ಞೆಲಿ ಕೆಲಸ ಮಾಡುವವ ಎಲ್ಲರಿಂಗೂ ಸೇವಕನಾದ್ದರಿಂದ ಎಲ್ಲರಿಂಗೂ ಅವನಲ್ಲಿ ಬಹುಪ್ರೀತಿ. ಪ್ರತಿಯೊಬ್ಬಂಗೂ ಅವನ ಕೆಲಸಲ್ಲಿ ತೃಪ್ತಿಯಪ್ಪದರಿಂದ ಅವನ ಪ್ರಜ್ಞೆಯು ಪರಿಶುದ್ಧವಾಗಿರುತ್ತು. ಅವನ ಪ್ರಜ್ಞೆಯು ಪರಿಶುದ್ಧವಾದ್ದರಿಂದ ಅವನ ಇಂದ್ರಿಯಂಗಳೂ ಹಿಡಿತಲ್ಲಿರುತ್ತು. ಅವನ ಮನಸ್ಸು ಯಾವತ್ತೂ ಕೃಷ್ಣನಲ್ಲೇ ನೆಲೆಸಿಪ್ಪದರಿಂದ ಅವ° ಕೃಷ್ಣನ (ಭಗವಂತನ) ಬಿಟ್ಟು ಬೇರೆಡೆಂಗೆ ತಿರುಗುವ ಸಾಧ್ಯತೆ ಇಲ್ಲೆ. ಭಗವಂತನ ಕುರಿತ ವಿಷಯಂಗಳ ಬಿಟ್ಟು ಅನ್ಯ ವಿಷಯಂಗಳ ಕೇಳ್ಳೆ ಅವ° ಇಷ್ಟಪಡುತ್ತನಿಲ್ಲೆ. ಕೃಷ್ಣನ ಪ್ರಸಾದ ಬಿಟ್ಟು ಬೇರೆಂತದೂ ಅವ° ಬಯಸುತ್ತನಿಲ್ಲೆ. ಹಾಂಗಾಗಿ ಅವನ ಇಂದ್ರಿಯಂಗೊ ಅವನ ಹತೋಟಿಲಿ ಇರುತ್ತು. ಇಂದ್ರಿಯಂಗಳ ನಿಯಂತ್ರಿಸಿದವ° ಆರನ್ನೂ ನೋಯಿಸಲೂ ಇಲ್ಲೆ. ಹಾಂಗಾರೆ ಯುದ್ಧಲ್ಲಿ ಅರ್ಜುನ ಇತರರ ನೋಯಿಸದ್ದನಿಲ್ಲೆಯೋ? ಅವ° ಕೃಷ್ಣಪ್ರಜ್ಞೆಲಿ ಇತ್ತಿದ್ದನಿಲ್ಲೆಯೋ°? ಅದು ಮೇಲ್ನೋಟಕ್ಕೆ ಮಾತ್ರ ಸರಿ ಆವ್ತು. ಎಂತಕೆ ಹೇಳಿರೆ, ರಣರಂಗಲ್ಲಿ ಇತ್ತಿದ್ದವಲ್ಲೋರು ಪ್ರತ್ಯೇಕ ವ್ಯಕ್ತಿಗೊ ಆಗಿ ಬದುಕಿಯೇ ಇದ್ದವು. ಆತ್ಮನ ನಾಶ ಮಾಡ್ಳೆ ಎಡಿಯ ಹೇಳಿ ಭಗವಂತ ಈ ಮದಲೇ ಹೇಳಿದ್ದ°. ಆದ್ದರಿಂದ ಆತ್ಮದ ದೃಷ್ಟಿಂದ ಕುರುಕ್ಷೇತ್ರದ ರಣಭೂಮಿಲಿ ಆರೂ ಸತ್ತಿದ್ದವಿಲ್ಲೆ. ಸ್ವತಃ ಅಲ್ಲಿದ್ದ ಕೃಷ್ಣನ ಆಜ್ಞೆಯಂತೆ ಅವರ ಉಡುಪುಗಳ ಮಾತ್ರ ಬದಲಿಸಿದ್ದದು. ಆದ್ದರಿಂದ ಕುರುಕ್ಷೇತ್ರ ಯುದ್ಧಭೂಮಿಲಿ ಅರ್ಜುನ ನಿಜವಾಗಿ ಹೋರಾಡುತ್ತ ಇತ್ತಿದ್ದನಿಲ್ಲೆ. ಅವ° ಸಂಪೂರ್ಣ ಕೃಷ್ಣಪ್ರಜ್ಞೆಲಿ ಇದ್ದುಗೊಂಡು ಕೃಷ್ಣನ ಆಜ್ಞೆಯ ನಿರ್ವಹಿಸುತ್ತ ಇತ್ತಿದ್ದ ಮಾತ್ರ. ಇಂತಹ ಮನುಷ್ಯ° ಕರ್ಮದ ಪ್ರತಿಕ್ರಿಯೆಲಿ ಸಿಕ್ಕಿಗೊಳ್ಳುತ್ತನಿಲ್ಲೆ. ಅವ° ಮಾಡುತ್ತಿಪ್ಪ ಕೆಲಸ ಭಗವಂತನ ಸಂಪ್ರೀತಿಗಾಗಿ ಭಗವಂತನ ಆಜ್ಞೆಯ ಕೆಲಸ.
ಬನ್ನಂಜೆ ವ್ಯಾಖ್ಯಾನಿಸುತ್ತವು – ಕರ್ಮಯೋಗಲ್ಲಿ ತೊಡಗಿದವ ತನ್ನ ಮನೋನಿಗ್ರಹ ಮಾಡಿ ಶುದ್ಧ ಮನಸ್ಸಿಂದ ಶುದ್ಧ ಕರ್ಮವ ಮಾಡೆಕು. ಮನಸ್ಸಿನ ಗೆಲ್ಲೆಕ್ಕಾರೆ ಭಗವಂತನ ಒಲವು ಇರೆಕು. ಭಗವಂತನ ಒಲವು ಬೇಕಾರೆ ಭಗವಂತಂಗೋಸ್ಕರ ಕರ್ಮ ಮಾಡೆಕು. ಭಗವಂತನಲ್ಲಿ ಮನಸ್ಸ ನೆಡೆಕ್ಕಾದರೆ ಇಂದ್ರಿಯ ನಿಗ್ರಹ ಆಯೇಕು (ಇಂದ್ರಿಯಂಗಳ ಗೆಲ್ಲೆಕು). ಅದರಿಂದ ಆತ್ಮ ಶುದ್ಧಿಯಾವುತ್ತು. ಅಷ್ಟಪ್ಪಗ ಸರ್ವಭೂತಂಗಳಿಂಗೂ ಆತ್ಮಭೂತನಾದ ಭಗವಂತನೇ ಎನ್ನ ಆತ್ಮ ಹೇಳ್ವ ಪ್ರಜ್ಞೆ ಮೂಡುತ್ತು. ಸರ್ವಗತ, ಸರ್ವ ನಿಯಾಮಕ ಭಗವಂತ ಎನ್ನೊಳವೂ ಇದ್ದ°, ಅವನೇ ವಿಶ್ವನಿಯಾಮಕ, ವಿಶ್ವವ್ಯಾಪಿ. ಜಗತ್ತನ್ನೇ ನಿಯಂತ್ರಿಸುವ ಅಣೋರಣೀಯವಾಗಿ ಎನ್ನ ಜೀವ ಸ್ವರೂಪದೊಳವೂ ತುಂಬಿದ್ದ ಎಂಬ ಅನುಷ್ಠಾನಂದ, ಸರ್ವಭೂತಂಗಳಲ್ಲಿ ಅಂತರ್ಯಾಮಿಯಾದ ಭಗವಂತನಲ್ಲಿ ಮನಸ್ಸಿನ ನೆಲೆಗೊಳುಸಿ ಕರ್ಮ ಮಾಡಿರೆ, ನವಗೆ ಕರ್ಮ ಅಂಟುತ್ತಿಲ್ಲೆ.
ಕರ್ಮಸಂನ್ಯಾಸ ಮತ್ತು ಕರ್ಮಯೋಗ ಈ ಎರಡನ್ನೂ ಬೆರೆಸಿ ಜೀವನಲ್ಲಿ ಕರ್ಮಾನುಷ್ಠಾನ ಮಾಡೆಕು ಹೇಳಿ ಭಗವಂತ ಹೇಳಿದ್ದದು. ಹಾಂಗಾರೆ ನಮ್ಮ ದೈನಂದಿನ ಜೀವನಲ್ಲಿ ಈ ರೀತಿಯ ಕರ್ಮಾನುಷ್ಠಾನ ಹೇಳಿರೆ ಹೇಂಗೆ ? –
ಶ್ಲೋಕ :
ನೈವ ಕಿಂಚಿತ್ ಕರೋಮೀತಿ ಯುಕ್ತೋ ಮನ್ಯೇತ ತತ್ತ್ವವಿತ್ ।
ಪಶ್ಯನ್ ಶೃಣ್ವನ್ ಸ್ಪೃಶನ್ ಜಿಘ್ರನ್ನಶ್ನನ್ ಗಚ್ಛನ್ ಸ್ವಪನ್ ಶ್ವಸನ್ ॥೦೮॥
ಪ್ರಲಪನ್ ವಿಸೃಜನ್ ಗೃಹ್ಣನ್ ಉನ್ಮಿಷನ್ನಿಮಿಷನ್ನಪಿ ।
ಇಂದ್ರಿಯಾಣೀಂದ್ರಿಯಾರ್ಥೇಷು ವರ್ತಂತೇ ಇತಿ ಧಾರಯನ್ ॥೦೯॥
ಪದವಿಭಾಗ :
ನ ಏವ ಕಿಂಚಿತ್ ಕರೋಮಿ ಇತಿ ಯುಕ್ತಃ ಮನ್ಯೇತ ತತ್ತ್ವವಿತ್ । ಪಶ್ಯನ್ ಶೃಣ್ವನ್ ಸ್ಪೃಶನ್ ಜಿಘ್ರನ್ ಅಶ್ನನ್ ಗಚ್ಛನ್ ಸ್ವಪನ್ ಶ್ವಸನ್ ॥
ಪ್ರಲಪನ್ ವಿಸೃಜನ್ ಗೃಹ್ಣನ್ ಉನ್ಮಿಷನ್ ನಿಮಿಷನ್ ಅಪಿ । ಇಂದ್ರಿಯಾಣಿ ಇಂದ್ರಿಯ-ಅರ್ಥೇಷು ವರ್ತಂತೇ ಇತಿ ಧಾರಯನ್ ॥
ಅನ್ವಯ :
ಯುಕ್ತಃ ತತ್ತ್ವವಿತ್ ಪಶ್ಯನ್, ಶೃಣ್ವನ್, ಸ್ಪೃಶನ್, ಜಿಘ್ರನ್, ಅಶ್ನನ್, ಗಚ್ಛನ್, ಸ್ವಪನ್, ಶ್ವಸನ್, ಪ್ರಲಪನ್, ವಿಸೃಜನ್, ಗೃಹ್ಣನ್, ಉನ್ಮಿಷನ್, ನಿಮಿಷನ್ ಅಪಿ, ಇಂದ್ರಿಯಾಣಿ ಇಂದ್ರಿಯ-ಅರ್ಥೇಷು ವರ್ತಂತೇ ಇತಿ ಧಾರಯನ್ ಕಿಂಚಿತ್ ನ ಏವ ಕರೋಮಿ ಇತಿ ಮನ್ಯೇತ ।
ಪ್ರತಿಪದಾರ್ಥ:
ಯುಕ್ತಃ – ದೈವಿಕ ಪ್ರಜ್ಞೆಲಿ ನಿರತನಾಗಿ, ತತ್ತ್ವವಿತ್ – ಸತ್ಯವ ಅರ್ತುಗೊಂಡವ°, ಪಶ್ಯನ್ – ನೋಡ್ಯೋಂಡು, ಶೃಣ್ವನ್ – ಕೇಳ್ಯೋಂಡು, ಸ್ಪೃಶನ್ – ಮುಟ್ಟ್ಯೋಂಡು, ಜಿಘ್ರನ್ – ಮೂಸ್ಯೋಂಡು, ಅಶ್ನನ್ – ತಿಂದೋಂಡು, ಗಚ್ಛನ್ – ಹೋಗ್ಯೋಂಡು, ಸ್ವಪನ್ – ಕನಸುಕಂಡೋಂಡು, ಶ್ವಸನ್ – ಉಸಿರಾಡ್ಯೋಂಡು, ಪ್ರಲಪನ್ – ಮಾತ್ನಾಡ್ಯೋಂಡು, ವಿಸೃಜನ್ – ವಿಸರ್ಜಿಸ್ಯೋಂಡು, ಗೃಹ್ಣನ್ – ಸ್ವೀಕರ್ಸ್ಯೋಂಡು, ಉನ್ಮಿಷನ್ – ಕಣ್ಣರೆಪ್ಪೆ ಬಿಡಿಸ್ಯೋಂಡು, ನಿಮಿಷನ್ – ಮುಚ್ಯೋಂಡು, ಅಪಿ – ಆದರೂ, ಇಂದ್ರಿಯಾಣಿ – ಇಂದ್ರಿಯಂಗಳು, ಇಂದ್ರಿಯ ಅರ್ಥೇಷು – ಇಂದ್ರಿಯ ತೃಪ್ತಿಲಿ, ವರ್ತಂತೇ – ನಿರತವಾಗಿರಲಿ, ಇತಿ – ಹೇದು, ಧಾರಯನ್ – ಪರಿಗಣಿಸಿಗೊಂಡು, ನ ಏವ ಕರೋಮಿ ಇತಿ – ಏವುದನ್ನೂ ಖಂಡಿತವಾಗಿ ಮಾಡುತ್ತಿಲ್ಲೆ ಹೇದು, ಮನ್ಯೇತ – ಯೋಚಿಸುತ್ತ°.
ಅನ್ವಯಾರ್ಥ:
ದೈವೀಪ್ರಜ್ಞೆಲಿಪ್ಪ ಮನುಷ್ಯ° ನೋಡುತ್ತಾ ಇಕ್ಕು, ಕೇಳುತ್ತಾ ಇಕ್ಕು, ಮುಟ್ಟಿಗೊಂಡಿಕ್ಕು, ಮೂಸಿಗೊಂಡಿಕ್ಕು, ತಿಂದೊಂಡಿಕ್ಕು, ನಡಕ್ಕೊಂಡಿಕ್ಕು, ಒರಗಿಯೊಂಡಿಕ್ಕು, ಉಸಿರಾಡಿಗೊಂಡಿಕ್ಕು. ಆದರೆ, ತಾನು ಏನನ್ನೂ ಮಾಡುತ್ತ ಇಲ್ಲೆ ಹೇಳಿ ಅವನ ಒಳಾಣ ಜ್ಞಾನ ಇರ್ತು. ಎಂತಕೆ ಹೇಳಿರೆ, ಮಾತ್ನಾಡುವಾಗ, ವಿಸರ್ಜಿಸುವಾಗ, ಸ್ವೀಕರುಸುವಾಗ, ಕಣ್ಣ ಬಿಡುವಾಗ ಅಥವಾ ಮುಚ್ಚುವಾಗ ಇಂದ್ರಿಯಂಗೊ ತಮ್ಮ ವಿಷಯಲ್ಲಿ ಪ್ರವರ್ತಿಸುತ್ತು. ಆದರೆ ತಾನು ಅವುಗಳಿಂದ ದೂರ ಇದ್ದೆ ಹೇಳ್ವ ಪ್ರಜ್ಞೆ ಅವಂಗೆ ಇರ್ತು.
ತಾತ್ಪರ್ಯ/ವಿವರಣೆ:
ಕೃಷ್ಣಪ್ರಜ್ಞೆಲಿಪ್ಪ ಮನುಷ್ಯ ತನ್ನ ಅಸ್ತಿತ್ವಲ್ಲಿ ಪರಿಶುದ್ಧನಾಗಿರುತ್ತ°. ಪರಿಣಾಮವಾಗಿ ಕರ್ತೃ, ಕಾರ್ಯ, ಸನ್ನಿವೇಶ, ಪ್ರಯತ್ನ ಮತ್ತು ಅದೃಷ್ಟ, ಈ ಐದು ನಿಕಟ ಮತ್ತು ದೂರ ಕಾರಣಂಗಳ ಅವಲಂಬುಸುವ ಯಾವುದೇ ಕೆಲಸಕ್ಕೂ ಆತಂಗೂ ಸಂಬಂಧ ಇರ್ತಿಲ್ಲೆ. ಇದಕ್ಕೆ ಕಾರಣ ಅವ° ಕೃಷ್ಣನ (ಭಗವಂತನ) ಪ್ರೀತಿಪೂರ್ವಕ ಅಲೌಕಿಕ ಸೇವೆಲಿ ನಿರತನಾಗಿಪ್ಪದು, ಮಗ್ನನಾಗಿಪ್ಪದು. ಅವ° ತನ್ನ ದೇಹ ಮತ್ತು ಇಂದ್ರಿಯಂಗಳಿಂದ ಕೆಲಸ ಮಾಡುತ್ತಿಪ್ಪಂತೆ ಕಂಡರೂ ಅವಂಗೆ ತನ್ನ ನಿಜದ ಸ್ಥಿತಿಯ ಅರಿವು ಇರುತ್ತು. ಆಧ್ಯಾತ್ಮಿಕ ಕರ್ತವ್ಯಲ್ಲಿ ನಿರತನಾಗಿಪ್ಪದೇ ಆ ಸ್ಥಿತಿ. ಐಹಿಕ ಪ್ರಜ್ಞೆಲಿ ಇಂದ್ರಿಯಂಗೊ ಇಂದ್ರಿಯ ತೃಪ್ತಿಯ ಪಡವ ಯತ್ನಲ್ಲಿ ತೊಡಗುತ್ತು. ಆದರೆ ಕೃಷ್ಣಪ್ರಜ್ಞೆಲಿ ಇಂದ್ರಿಯಂಗೊ ಭಗವಂತನ ಇಂದ್ರಿಯಂಗಳ ತೃಪ್ತಿಪಡುಸುವಲ್ಲಿ ನಿರತವಾಗಿರುತ್ತು. ಆದ್ದರಿಂದ ಕೃಷ್ಣಪ್ರಜ್ಞೆಲಿಪ್ಪ ಮನುಷ್ಯ° ಇಂದ್ರಿಯ ವ್ಯವಹಾರಲ್ಲಿ ಇಪ್ಪಂತೆ ಕಂಡರೂ ಅವ ಸದಾ ಮುಕ್ತನಾಗಿರುತ್ತ°. ನೋಡ್ತದು, ಕೇಳ್ತದು ಇತ್ಯಾದಿ ಜ್ಞಾನೇಂದ್ರಿಯಂಗೊಕ್ಕೆ ಸಂಬಂಧಪಟ್ಟವು. ನಡವದು , ಮಾತ್ನಾಡುವದು , ವಿಸರ್ಜನೆ ಮೊದಲಾದವು ಕರ್ಮೇಂದ್ರಿಯ ಕಾರ್ಯಂಗೊ. ಕೃಷ್ಣಪ್ರಜ್ಞೆ ಇಪ್ಪ ಮನುಷ್ಯನ ಮೇಲೆ ಇಂದ್ರಿಯಂಗೊ ಯಾವುದೇ ಪರಿಣಾಮ ಮಾಡುತ್ತಿಲ್ಲೆ. ತಾನು ಭಗವಂತನ ಸೇವಕ° ಹೇಳ್ವದು ಅವನು ಪ್ರಜ್ಞೆಲಿ ಸದಾ ಇರ್ತು. ಆದ್ದರಿಂದ ಭಗವಂತನ ಸೇವೆಯ ಬಿಟ್ಟು ಬೇರೆ ಯಾವುದೇ ಕೆಲಸವ ಅವ° ಮಾಡ್ಳಿಲ್ಲೆ.
ಬನ್ನಂಜೆಯವು ಈ ಭಾಗವ ಸೊಗಸಾಗಿ ವಿವರಿಸಿದ್ದವು – ನಮ್ಮ ಜೀವನಲ್ಲಿ ದೇವರಪೂಜೆ ಮಾತ್ರ ಅನುಷ್ಠಾನವಲ್ಲ. ನಮ್ಮ ಪ್ರತಿಯೊಂದು ನಡೆಲಿಯೂ ಒಂದು ಕರ್ಮಯೋಗ ಆಯೇಕು. ಯಾವುದೋ ಕಾಲ ವಿಶೇಷಲ್ಲಿ ಮಾತ ದೇವರ ಪೂಜೆ, ಯಜ್ಞ ಮಾಡುವದು ಅಲ್ಲ. ನಮ್ಮ ಬದುಕೇ ಒಂದು ಯಜ್ಞ ಆಯೇಕು. ಕರ್ಮಾನುಷ್ಠಾನ ಮಾಡುವವ°, ತಾನು ತಾನಾಗಿಯೇ ಏನನ್ನೂ ಮಾಡುತ್ತಿಲ್ಲೆ, ತನ್ನದು ಇಚ್ಛಾಪೂರ್ವಕ ಕೃತಿ ಆದರೆ ಇಲ್ಲಿ ತನಗೆ ಸ್ವಾತಂತ್ರ ಇಲ್ಲೆ ಎಂಬ ಸತ್ಯವ ಅರ್ತಿರೆಕು. ನಾವು ಮಾಡೇಕು ಹೇಳಿ ಗ್ರೇಶಿದ್ದರ ನಮ್ಮಿಂದ ಮಾಡಿಗೊಂಬಲೆ ಆವ್ತಿಲ್ಲೆ., ನಾವು ಬಯಸಿದ್ದು ನವಗೆ ಸಿಕ್ಕುತ್ತಿಲ್ಲೆ, ಫಲಲ್ಲಿ ನವಗೆ ಸ್ವಾತಂತ್ರ ಇಲ್ಲೆ . ಇದು ಪ್ರತಿಯೊಬ್ಬನ ಅನುಭವಕ್ಕೆ ಬಪ್ಪ ವಿಚಾರ. ಆದರೆ, ಕ್ರಿಯೆ ಮಾತ್ರ ನಮ್ಮ ಮುಖೇನ ಆವ್ತಲೇ ಇರ್ತು. ತಾನು ಇಂಥದ್ದೇ ಸಿಕ್ಕುವಂತವನಾಯೇಕು, ಇಂಥದ್ದು ಸಿಕ್ಕಲಾಗ ಎಂಬ ಇಚ್ಛೆಂದಲಾಗಲೀ, ತಾನು ಮಾಡುತ್ತಾ ಇದ್ದೆ ಎಂಬ ಅಹಂಕಾರಂದಲಾಗಲೀ ಮಾಡುತ್ತಿಲ್ಲೆ., ತನ್ನೊಳ ಇಪ್ಪ ಭಗವಂತ°ಇದರ ಮಾಡುಸುತ್ತ ಇದ್ದ° ಎಂಬುದರ ತತ್ತ್ವಜ್ಞಾನಿ ತಿಳುದಿರುತ್ತ°. ಆದ್ದರಿಂದ ತಾನು, ತನ್ನದು ಹೇಳ್ವ ಅಹಂಕಾರ ಇರ್ತಿಲ್ಲೆ. ಇದರ ತತ್ವವಿತ್ ( ಜ್ಞಾನಿಗೊ) ತನ್ನ ಪ್ರತಿಯೊಂದು ಕ್ರಿಯೆಲಿ ಅನುಷ್ಥಾನ ಮಾಡುತ್ತವು.
ನೋಡುವಾಗ, ಕೇಳುವಾಗ, ಮುಟ್ಟುವಾಗ, ಮೂಸುವಾಗ, ತಿಂಬಗ, ತಿರುಗುವಾಗ, ಒರಗುವಾಗ, ಉಸಿರಾಡುವಾಗ , ಮಾತ್ನಾಡುವಾಗ, ವಿಸರ್ಜಿಸುವಾಗ, ಸ್ವೀಕರುಸುವಾಗ, ಕಣ್ಣ ಮುಚ್ಚುವಾಗ, ಬಿಡುಸುವಾಗ… ಹೀಂಗೆ, ತನ್ನೆಲ್ಲಾ ಕ್ರಿಯೆಲಿ ತಾನೇನನ್ನೂ ಮಾಡುತ್ತ ಇಲ್ಲೆ ಎಂಬ ಅರಿವು ತತ್ತ್ವಜ್ಞಾನಿಗೆ ಇರ್ತು. ನಾವು ಒಂದು ಹೂವಿನ ಅಂದವ ಕಣ್ಣಿಂದ ನೋಡುತ್ತು, ಅದರ ಪರಿಮಳವ ಮೂಗಿಂದ ಮೂಸುತ್ತು, ಆ ಹೂವಿನ ಮುಟ್ಟಿ ಆನಂದ ಪಡುತ್ತು. ಈ ಹೂವ ಸೃಷ್ಟಿಸಿದವ°, ಅದಕ್ಕೆ ಅಂದವ, ಪರಿಮ್ಮಳವ ಕೊಟ್ಟವ° ಆ ಭಗವಂತ°. ಆ ಹೂವಿನ ನೋಡುವ ಕಣ್ಣಿನ ನವಗೆ ಕೊಟ್ಟವ°, ಮೂಸುವ ಶಕ್ತಿಯ ಇಂದ್ರಿಯವ ಕೊಟ್ಟವ° ಆ ಭಗವಂತ° ಎಂಬ ಪ್ರಜ್ಞೆ ಸದಾ ಇರೆಕು. ಇಲ್ಲಿ ಅಹಂಕಾರಕ್ಕೆ ಎಡೆಯೇ ಇಲ್ಲೆ. ಅದೇ ರೀತಿ ತಿಂಬ ವಿಚಾರ. ಈ ಪ್ರಪಂಚಲ್ಲಿ ಎಷ್ಟೋ ಜನ ಒಂದು ಹೊತ್ತಿನ ಆಹಾರಕ್ಕೂ ಗತಿ ಇಲ್ಲದ್ದೆ ಇನ್ನೊಬ್ಬನ ಮುಂದೆ ಕೈ ಒಡ್ಡಿ ಬದುಕುತ್ತವು. ಆದರೆ ನವಗೆ ಭಗವಂತ° ಮೂರು ಹೊತ್ತಾಣ ತುತ್ತಿಂಗೆ ಅನುಕೂಲ ಮಾಡಿ ಕೊಟ್ಟಿದ° ಎಂಬ ಅನುಸಂಧಾನಂದ ಊಟ ಮಾಡಿರೆ ಅದೊಂದು ಯಜ್ಞ ಆವ್ತು. ಇನ್ನು ಒರಕ್ಕು., ಒರಕ್ಕಿಲ್ಲಿ ನಾವು ಭಗವಂತನ ಸಮೀಪಲ್ಲಿ ಇರ್ತು. ಆದರೆ ಆ ಎಚ್ಚರ ನವಗೆ ಇರ್ತಿಲ್ಲೆ. ಒಂದು ವೇಳೆ ಒರಕ್ಕೇ ಬಾರದ್ರೆ?! ಇಡೀ ಇರುಳು ಕನಸ್ಸಿಲ್ಲೇ ಕಳದರೆ?! – ಊಹಿಸಲೇ ಕಷ್ಟ. ಹುಟ್ಟಿಂದ ನವಗೆ, ನವಗೆ ಗೊಂತಿಲ್ಲದ್ದೇ ಉಸಿರಾಟ ಪ್ರಾರಂಭ ಆತು. ಒರಕ್ಕಿಲ್ಲಿಯೂ ನವಗರಡಿಯದ್ದೇ ಉಸಿರಾಟ ನಡೆತ್ತಾ ಇರ್ತು. ಈ ಉಸುರು ಯಾವಾಗ ನಿಲ್ಲುತ್ತು ಹೇಳ್ವದು ನವಗೆ ಗೊಂತಿಲ್ಲೆ. ಹೀಂಗೆ ಪ್ರತಿಯೊಂದು ಕ್ರಿಯೆಲಿಯೂ ಆ ವಿಶ್ವಶಕ್ತಿಯ ಅನುಸಂಧಾನ ನಿಜವಾದ ಕರ್ಮಯೋಗ. ಭಗವಂತ° ನವಗೆ ಅಮೂಲ್ಯವಾದ ಎರಡು ಕೈಗಳ ಕೊಟ್ಟಿದ°. ಪ್ರಪಂಚಲ್ಲಿ ಪ್ರಾಣಿಗೊಕ್ಕೆ ನಾಲ್ಕು ಕಾಲು, ಕೈ ಇಲ್ಲೆ!, ಯಾವುದೋ ಪ್ರಾಣಿ ತನ್ನ ಶರೀರಲ್ಲಿ ಕೂದೊಂಡು ರಕ್ತ ಹೀರುತ್ತಿದ್ದರೂ ಅದರ ಓಡುಸಲೆ ಅವಕ್ಕೆ ಕೈ ಇಲ್ಲೆ. ಭಗವಂತ° ನವಗೆ ಅಮೂಲ್ಯ ಎರಡು ಕೈಗಳ ಕೊಟ್ಟಿದ°. ಅತ್ಯಂತ ಸೂಕ್ಷ್ಮ ಇಂದ್ರಿಯ ಕಣ್ಣು, ಇದರ ರಕ್ಷಿಸಲೆ ರೆಪ್ಪಗೊ, ಅವುಗಳ ನಿರಂತರ ಬಿಚ್ಚುವ ಮುಚ್ಚುವ ಕ್ರಿಯೆಂದ ಕಣ್ಣಿನ ರಕ್ಷಣೆ. ನವಗರಡಿಯದ್ದೆ ಕಣ್ಣಿಂಗೇನಾರು ಕಸವು ಬಿದ್ದರೆ, ನವಗರಡಿಯದ್ದೆ ಕಣ್ಣಿಂಗೆ ನೀರಿನ ಸರಬರಾಜಾಗಿ ಕಣ್ಣಿನ ರಕ್ಷಣೆ ಆವುತ್ತು. ಈ ಅಪೂರ್ವ ಯಂತ್ರದ ವಿನ್ಯಾಸ ಮಾಡಿದ ಶಿಲ್ಪಿ ಆ ಭಗವಂತ°. ನಮ್ಮ ಪ್ರತಿಯೊಂದು ಇಂದ್ರಿಯಂಗಳನ್ನೂ ಇಂದ್ರಿಯಾಭಿಮಾನಿ ದೇವತೆಗೊ ನಿಯಂತ್ರಿಸುತ್ತವು. ಕಣ್ಣಿಂಗೆ ಸೂರ್ಯ, ಕೆಮಿಗೆ ಚಂದ್ರ, ಸುಪರ್ಣಿ-ವಾರುಣಿ-ಪಾರ್ವತಿ ಶಬ್ದ-ಸ್ಪರ್ಶ-ಗಂಧ… ಇತ್ಯಾದಿ. ಹೀಂಗೆ ನಮ್ಮ ಕ್ರಿಯೆಯ ಹಿಂದೆ ಅದ್ಭುತವಾದ ಆಧ್ಯಾತ್ಮಿಕ ಶಕ್ತಿ ಕೆಲಸ ಮಾಡುತ್ತು ಹೇಳ್ವ ಜ್ಞಾನ ಸದಾ ನಮ್ಮಲ್ಲಿ ಇರೆಕು. ನಾವು ತಾನಾಗಿ ಏನೂ ಮಾಡುತ್ತಿಲ್ಲೆ, ಭಗವಂತನಿಂದ ಭಗವಂತಂಗೋಸ್ಕರವಾಗಿ ನಡೆತ್ತ ಇಪ್ಪದು ಹೇಳ್ವ ಪ್ರಜ್ಞೆ ನಮ್ಮಲ್ಲಿ ಇರೆಕು.
ಶ್ಲೋಕ :
ಬ್ರಹ್ಮಣ್ಯಾಧಾಯ ಕರ್ಮಾಣಿ ಸಂಗಂ ತ್ಯಕ್ತ್ವಾ ಕರೋತಿ ಯಃ ।
ಲಿಪ್ಯತೇ ನ ಸ ಪಾಪೇನ ಪದ್ಮಪತ್ರಮಿವಾಂಭಸಾ ॥೧೦॥
ಪದವಿಭಾಗ :
ಬ್ರಹ್ಮಣಿ ಆಧಾಯ ಕರ್ಮಾಣಿ ಸಂಗಮ್ ತ್ಯಕ್ತ್ವಾ ಕರೋತಿ ಯಃ । ಲಿಪ್ಯತೇ ನ ಸಃ ಪಾಪೇನ ಪದ್ಮ-ಪತ್ರಮ್ ಇವ ಅಂಭಸಾ ॥
ಅನ್ವಯ :
ಯಃ ಸಂಗಂ ತ್ಯಕ್ತ್ವಾ ಕರ್ಮಾಣಿ, ಬ್ರಹ್ಮಣಿ ಆಧಾಯ ಕರೋತಿ, ಸಃ ಪದ್ಮ-ಪತ್ರಮ್ ಅಂಭಸಾ ಇವ, ಪಾಪೇನ ನ ಲಿಪ್ಯತೇ ॥
ಪ್ರತಿಪದಾರ್ಥ:
ಯಃ – ಆರು, ಸಂಗಮ್ – (ಕಾಮ್ಯಕರ್ಮಫಲಲ್ಲಿ) ಆಸಕ್ತಿಯ, ತ್ಯಕ್ತ್ವಾ – ತ್ಯಜಿಸಿ, ಕರ್ಮಾಣಿ – ಎಲ್ಲಾ ಕರ್ಮಂಗಳ, ಬ್ರಹ್ಮಣಿ – ದೇವೋತ್ತಮ ಪರಮ ಪುರುಷನಲ್ಲಿ, ಆಧಾಯ – ಸಮರ್ಪಿಸಿ, ಕರೋತಿ – ಆಚರುಸುತ್ತನೋ, ಸಃ – ಅವ°, ಪದ್ಮ-ಪತ್ರಮ್ – ತಾವರೆಯ ಎಲೆ, ಅಂಭಸಾ – ನೀರಿಂದ, ಇವ – ಹಾಂಗೇ, ಪಾಪೇನ – ಪಾಪಂದ, ನ ಲಿಪ್ಯತೇ – ಎಂದಿಂಗೂ ಬಾಧಿಸಲ್ಪಡುತ್ತಿಲ್ಲೆ,
ಅನ್ವಯಾರ್ಥ:
ಎಲ್ಲಾ ರೀತಿಯ ಕರ್ಮಂಗಳ ಭಗವಂತಂಗೆ ಅರ್ಪಿಸಿ, ಫಲಲ್ಲಿ ಆಶೆಪಡದ್ದೆ ನಿರ್ಲಿಪ್ತನಾಗಿ ಕರ್ತವ್ಯಂಗಳ ಆರು ಮಾಡುತ್ತನೋ, ಅವಂಗೆ, ತಾವರೆಯ ಎಲಗೆ ಹೇಂಗೆ ನೀರಿನ ಲೇಪ ತಾಗುತ್ತಿಲ್ಲಿಯೋ ಹಾಂಗೆ ಪಾಪದ ಲೇಪ ತಾಗುತ್ತಿಲ್ಲೆ.
ತಾತ್ಪರ್ಯ/ವಿವರಣೆ:
ಇಲ್ಲಿ ಬ್ರಹ್ಮಣಿ ಹೇಳಿರೆ ಕೃಷ್ಣಪ್ರಜ್ಞೆ ಹೇಳಿ ಅರ್ಥ. ಅರ್ಥಾತ್ ಕೃಷ್ಣಪ್ರಜ್ಞೆಲಿ ಭಗವಂತಂಗೆ ಅರ್ಪುಸುವದು ಎಂಬ ಧ್ವನಿ. ಈ ಪ್ರಪಂಚಲ್ಲಿ ಎಲ್ಲವೂ ಕೃಷ್ಣಂಗೆ (ಭಗವಂತಂಗೆ) ಸೇರಿದ್ದದು. ಎಲ್ಲವೂ ಅವಂಗೆ ಸಂಬಂಧಪಟ್ಟದ್ದು, ಎಲ್ಲದಕ್ಕೂ ಅವನೇ ಒಡೆಯ°, ಹಾಂಗಾಗಿ ನಾವು ಅವನ ಬರೇ ಸೇವಕ°. ಅವ° ಕೊಟ್ಟದರ ಅವನ ಸೇವಗೆ ನಾವು ಉಪಯೋಗುಸುವದು ಮಾಂತ್ರ. ಅಕೇರಿಗೆ ಅದು ಹೋಗಿ ಸೇರುವದು ಅವನಲ್ಲಿಗೇ. ಈ ರೀತಿಯ ಮನೋಧರ್ಮವ ಬೆಳಶಿಗೊಂಡು ಕರ್ಮವ ಮಾಡಿರೆ, ತಾವರೆ ಎಲೆಯ ಮೇಲೆ ಇಪ್ಪ ನೀರಿನಹುಂಡು ಹೇಂಗೆ ತಾವರೆ ಎಲೆಯ ಮೇಲೆ ಅಂಟುತ್ತಿಲ್ಲೆಯೋ, ಚಂಡಿಮಾಡುತ್ತಿಲ್ಲೆಯೋ, ಹಾಂಗೇ, ನವಗೆ ಕರ್ಮ ಫಲದ ಆಂಟು ಇರ್ತಿಲ್ಲೆ. ಭಗವಂತ° ಮದಲೇ ಹೇಳಿದಾಂಗೆ “ಮಯಿ ಸರ್ವಾಣಿ ಕರ್ಮಾಣಿ ಸಂನ್ಯಸ್ಯ” – ‘ಎಲ್ಲ ಕರ್ಮಂಗಳ ಎನಗೆ ಬಿಟ್ಟುಬಿಡು/ಒಪ್ಪುಸು’, ಈ ರೀತಿಯಾಗಿ ಜೀವನಲ್ಲಿ ಯಜ್ಞ ಮಾಡೆಕು. ಇದರಿಂದ ಗೊಂತಪ್ಪದೆಂತರ ಹೇಳಿರೆ ಕೃಷ್ಣಪ್ರಜ್ಞೆ ಇಲ್ಲದ್ದವ° ಐಹಿಕ ಶರೀರ ಮತ್ತು ಇಂದ್ರಿಯ ಕಲ್ಪನೆಗೆ ಅನುಗುಣವಾಗಿ ಕರ್ಮ ಮಾಡುತ್ತ° ಮತ್ತು ಕೃಷ್ಣಪ್ರಜ್ಞೆಲಿ ಇಪ್ಪವ° ಈ ಪ್ರಪಂಚ ಮತ್ತು ನಮ್ಮ ದೇಹವೂ ಕೃಷ್ಣನ ಸೊತ್ತು ಮತ್ತು ಅದು ಕೃಷ್ಣನ ಸೇವೆಲಿ ನಿರತವಾಗಿರೆಕು ಎಂಬ ತಿಳುವಳಿಕೆಂದ ಕರ್ಮ ಮಾಡುತ್ತ°. ಈ ರೀತಿ ಕರ್ಮ ಮಾಡಿರೆ ಆನು ಎನ್ನದು ಎನ್ನಿಂದ ಎಂಬ ಅಹಂಕಾರ ಹೊರಟು ಹೋವುತ್ತು. ಕರ್ಮದ ಒಟ್ಟಿಂಗೆ ಇದ್ದು, ಕರ್ಮ ಮಾಡಿ ಕರ್ಮವ ಅಂಟುಸಿಗೊಳ್ಳದ್ದೆ ಇಪ್ಪಲೆ ಸಾಧ್ಯ ಆವ್ತು.
ಮುಂದೆ ಎಂತರ.. ? ಬಪ್ಪ ವಾರ ನೋಡುವೋ°
.. ಮುಂದುವರಿತ್ತು.
ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 05 – SHLOKAS 01 – 10 by CHENNAI BHAAVA
ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download : www.addkiosk.in ; www.giri.in
ಲಾಯಕ ವಿವರಣೆಗೊ.
ಎಲ್ಲೋರು ಹೇಳುತ್ತಾ ಇಪ್ಪ ಹಾಂಗೆ ಭಗವದ್ಗೀತೆ ಒಂದು ವಿಜ್ಹಾನ… ಅದು ಯಾವುದೇ ಕಾಲಕ್ಕೆ,ಯಾವುದೇ ಮತಕ್ಕೆ, ಯಾವುದೇ ಪಂಗಡಕ್ಕೆ ಸೀಮಿತ ಆದ್ದದು ಅಲ್ಲ… ಇಲ್ಲಿ ‘ಕೃಷ್ಣ’ ಹೇಳಿರೆ ಈ ಜಗತ್ತಿನ ಮುನ್ನಡೆಸುವ ಆ ಶಕ್ತಿ…
skg ಭಾವ ಹೇಳಿದ ಹಾಂಗೆ ಇದು ಜಾತಿ ಮತಗಳ ಮೀರಿದ ವಿಷಯ — ಎಲ್ಲರು ಒದೆಕ್ಕಪ್ಪದು — ಯಥಾನುಶಕ್ತಿ ಜೀವನದ ಅನುಭವಕ್ಕೆ ತರೆಕ್ಕಪ್ಪದು |
ಅತಿ ಉತ್ತಮ ವಾಗಿ ಬರಹವು ಪ್ರತಿಕ್ರಿಯೆಗಳು ಓದುದೆ ಒಂದು ಸಂತಸ | – ಚೆನೈ ಭಾವ ಅಭಿನಂದನೆ
ಅದ್ಭುತ ಲೇಖನ ಚೈನ್ನೈ ಭಾವ.
[ಸುಮ್ಮನೆ ಕೂದರೆ ಕರ್ತವ್ಯ ಕರ್ಮ (ಕರ್ಮಯೋಗ) ಮಾಡಿದ ಹಾಂಗೆ ಆವುತ್ತಿಲ್ಲೆ. ಇದರಿಂದ ಅಧರ್ಮಕ್ಕೆ ಜಯ ಆವ್ತು.]
ಧರ್ಮ ಮಾರ್ಗಲ್ಲಿ ನಡವವ, ಸಮಾಜಲ್ಲಿ ಅನ್ಯಾಂಯಂಗೊ ನೆಡೆತ್ತಾ ಇದ್ದರೆ ನೋಡಿಗೊಂಡು ಸುಮ್ಮನೆ ಕೂಬಲೆ ಆಗ. ಅದರ ಪ್ರತಿಭಟಿಸೆಕ್ಕು, ನಾವು ಹಾಂಗೆ ಮಾಡದ್ದರೆ, ನಾವು ಕೂಡಾ ಅದಕ್ಕೆ ಬೆಂಬಲ ಕೊಟ್ಟ ಹಾಂಗೆ ಆವ್ತು ಹೇಳಿ ತುಂಬಾ ಚೆಂದಕೆ ಇಲ್ಲಿ ಹೇಳಿದ್ದ° ಶ್ರೀ ಕೃಷ್ಣ.
[ನಮ್ಮ ಬದುಕೇ ಒಂದು ಯಜ್ಞ ಆಯೇಕು, ಜ್ಞಾನ ಬರೇ ತಿಳುದಿದ್ದರೆ ಮಾಂತ್ರ ಸಾಲ. ಅದರ ಆಚರಣೆಲಿ ಅನುಷ್ಠಾನಗೊಳುಸೆಕು. ಅಂದರೆ ಮಾತ್ರ ಆ ಜ್ಞಾನಕ್ಕೆ ಸಾರ್ಥಕ ಫಲ.] ಎಷ್ಟು ಒಳ್ಳೆಯ ಮಾತುಗೊ.
ನಮ್ಮ ಮನಸ್ಸಿಲಿ ಮೂಡುವಂತ ಪ್ರಶ್ನೆಯನ್ನೇ ಅರ್ಜುನ ಕೇಳಿದ-ಅದಕ್ಕೆ ಕೃಷ್ಣ ಕೊಡುವ ಸ್ಪಷ್ಟ ಉತ್ತರ ಕರ್ಮಸಂನ್ಯಾಸಂದ ಕರ್ಮಯೋಗ ವಿಶೇಷವಾದ್ದು-ಉತ್ತಮ ಹೇಳಿ!
ಭಗವದ್ಗೀತೆಯ ಈ ಸಾಲುಗಳ ಎಲ್ಲಾ ಜನರೂ ಓದೆಕ್ಕು-ಹಿಂದುಗೊ ಮಾತ್ರ ಅಲ್ಲ.ಇದು ಸಾರ್ವಕಾಲಿಕ ಸತ್ಯ.
ಚೆನ್ನೈ ಭಾವಂಗೆ ಅಭಿನಂದನೆ.