Oppanna.com

ಹೀಂಗೊಂದು ಪಟ್ಟಾಂಗ: ಭಾಗ 02

ಬರದೋರು :   ಉಡುಪುಮೂಲೆ ಅಪ್ಪಚ್ಚಿ    on   28/07/2012    10 ಒಪ್ಪಂಗೊ

ಉಡುಪುಮೂಲೆ ಅಪ್ಪಚ್ಚಿ

ಉಡುಪಮೂಲೆ ಅಪ್ಪಚ್ಚಿ ಕಳುದವಾರ ಹೇಳಿದ “ಹೀಂಗೊಂದು ಪಟ್ಟಾಂಗ“ದ ಮುಂದುವರುದ ಭಾಗ ಇಲ್ಲಿದ್ದು.
ಭಾಗ-01 : ಇಲ್ಲಿದ್ದು (ಸಂಕೊಲೆ)

ಹೀಂಗೊಂದು ಪಟ್ಟಾಂಗ (ಭಾಗ – 02)

ಅಂತೂ ಈ ನಮ್ಮಭಾಷೆಯ ಗಂಭೀರ ಚಿಂತನೆಯ ಎಡಕ್ಕಿಲಿ ಮಕ್ಕಳೂದೆ ಬೇಡದ್ದಕ್ಕೆ ಬಾಯಿಹಾಕಿ ವಿಷಯವ ದಿಕ್ಕು ತಪ್ಪುಸ್ತಿತವು.
ಬೇಡದ್ದ ಕೆಲಸಲ್ಲಿ ಕೈಹಾಕಿರೆ ಹೀಂಗೆಲ್ಲ ಆಗದ್ದೆ ಇಕ್ಕೊ? ಮತ್ತೆ ಸುಮ್ಮನೆ ಹೇಳಿದ್ದನೊ ಪಂಚತಂತ್ರಲ್ಲಿ ವಿಷ್ಣು ಶರ್ಮ:
‘ಅವ್ಯಾಪಾರೇಷು ವ್ಯಾಪಾರಂ ಯೋ ನರಃ ಕರ್ತು ಮಿಚ್ಛತಿ |
ಸ ಏವ ನಿಧನಂ ಯಾತಿ ಕೀಲೋ ಪಾಟೀವ ವಾನರಃ ||

ಹೇದ ಕತೆ ನೆಂಪಾತು ಹೇದ್ದದೇ ಉಳ್ಳೊ, ಅಲ್ಲೇ ಹತ್ತರೆ ಎಲ್ಲದರ ಕೇಳ್ಯೊಂಡಿದ್ದ ಕುಞಿ ಪುಟ್ಟನ ಕೆಮಿ ಕುತ್ತ ಆತು!

ಅಜ್ಜ,ಅಜ್ಜ ಅದೆ೦ತ ಕತೆ ಅಜ್ಜ, ಹೇಳಿ ಅಜ್ಜ.” ಹೇದು ಮಾಣಿಯ ತನ್ಟಾಣ್ಸಾಣ!
”ಮಗಾ, ಮಾವ ಈಗ ರಜ್ಜ ಅಂಬ್ರೆಪಿಲ್ಲಿದ್ದವನ್ನೆ, ಅದರ ಮತ್ತೆ ನಿದಾನಕ್ಕೆ ಹೇಳ್ತೆ, ಆಗದಾ?” ಉಪಾಯಲ್ಲಿ ಅವನ ಬಾಯಿ ಮುಚ್ಸೇಕು ಹೇದು ಆನು ನೋಡಿರೆ, ಈ ಭಾವ ಬಿಡೆಕನ್ನೆ.
ಅವ ಏವಗಳು ಮಕ್ಕಳ ಪಾರ್ಟಿ! ”ಬೆಳೆತ್ತ ಮಕ್ಕಳ ಆಶೆಯ ಹಾ೦ಗೆಲ್ಲ ನಾವು ಚೂಂಟಿ ಹಾಕಲಾಗ.” ಹೇದು ಮಕ್ಕಳ ಮನಶಾಸ್ತ್ರ(child psychology)ದ ವಿಷಯಲ್ಲಿ ಅವನ ಭಾಷಣಕ್ಕೆ ಸುರುವಾತದ!
ಇವರೆಡೆಲಿ ಆನು ಸಿಕ್ಕಿ ಹಾಕ್ಯೊ೦ಡು ಒಟ್ಟಾರೆ ಎನ್ನ ಸ್ಥಿತಿ ರೆಚ್ಚೆ೦ದಲು ಬಿಡ, ಗೂಂಜಿ೦ದಲೂ ಬಿಡ ಹೇದಾತು!
“ಆತು ಮಾರಾಯ; ತಪ್ಪಿತೋ ತಪ್ಪಿತ್ತು” ಹೇದು ಒಪ್ಪ್ಯೊ೦ಡೆ.
ಅಟ್ಟಪ್ಪಗ ನೋಡೆಕಾಗಿತ್ತು ಎ೦ಗಳ ಪುಟ್ಟನ ಮೋರೆಯ! ಆಗ ಅದು ಕೆರ್ಶಿಯಷ್ಟು ಅಗಲಾತನ್ನೆ! ಮಾಣಿಗೆ ಸ್ವರ್ಗಕ್ಕೆ ಮೂರೇ ಗೇಣು!
ಹ್ಹಾ…, ಸರಿ; ಸರಿ. ಹೇಳ್ತೆ ಕೇಳು-
”ಹಾ೦ಗಾಗಿಪ್ಪಗ ಒ೦ದು ಕಾಡಿನ ಮಧ್ಯಲ್ಲಿ ಅದೊ೦ದು ದಿನ ಮರ ಸಿಗಿವ ಆಳುಗೊ ಮರವ ದಡೇಲಿ ಹಾಕಿ ಸಿಗಿವಾಗ ಹೊತ್ತು ಕಂತಿತ್ತು ಹೇದು ಅರ್ಧ ಸಿಗ್ದ ಮರದ ತುಂಡಿನ ಸಿಗ್ತೆ ಎಡಕ್ಕಿಂಗೆ ಒಂದು ಸಂಣ ಪೂಳು ಸಿಕ್ಕ್ಸಿ ನೆಡದವಡ.
ಅವು ಹೋಪದಕ್ಕೂ, ಮಙ್ಗಙ್ಗಳ ಒಂದು ಹಿಂಡು ಅಲ್ಲಿಗೆ ಬಪ್ಪದಕ್ಕೂ ಸಮಾ ಆತು!
ಮದಲೇ ಮಙ್ಗಙ್ಗೊ ! ಕೇಳೆಕೊ ಮತ್ತೆ!! ಹುಟ್ಟು ಗುಣ ಗಟ್ಟ ಹತ್ತಿರೂ ಹೋಗ ಹೇದಾತನ್ನೆ. ಆ ಕೂಟಲ್ಲಿ ಇದ್ದ ಒ೦ದು ಕುಞಿ ಮಙ್ಗ ಸಿಗ್ದ ಮರದ ಎಡಕಿಲ್ಲಿ ಮಡಗಿದ ಆ ಸಂಣ ಪೂಳಿನ ನೋಡಿತ್ತಾಡ.

”ಹೇಏ!?… ಅಬ್ಬಾ..!ಇಷ್ಟು ಸಂಣದು ಈ ಸಿಗ್ತಗಳ ತಡವದೊ? ಇದು ದೊಡ್ಡ ಸಂಗತಿಯೇ ಆತನ್ನೆ! ಇದರ ನಂಬಲೆಡಿಗೊ! ಕಣ್ಣಿಲ್ಲೇ ಕಂಡ್ರೂ ಪರಾಂಬರಿಸಿ ನೋಡೆಡದೊ? (ಪ್ರತ್ಯಕ್ಷವಾಗಿ ಕಂಡ್ರೂದೆ ಪ್ರಮಾಣಿಸಿ ನೋಡೆಕಡ.)
ಸಿಕ್ಕಿದ್ದು ಬಿಟ್ರೆ ಕಲ್ತದು ಬುದ್ಧಿಯೋ? ಈ ಅವಕಾಶವ ಬಿಡುವದೊ? ಇದು ಯಾವ ನ್ಯಾಯ? ಹೇದು ಅದು ಸೀದ ಅಲ್ಲಿಗೆ ಹಾರಿತ್ತಡ.
ಅಟ್ಟಪ್ಪಗ ಕೂಟಲ್ಲಿದ್ದ ದೊಡ್ದ ಮಙ್ಗಙ್ಗೊ ”ಇದು ನವಗೆ ಬೇಡದ್ದ್ದಕೆಲಸ” ಹೇದು ಬುದ್ಧಿ ಹೇದವಡ.
ಅವು ಎಷ್ಟೇ ಬೇಡ ಬೇಡಾ ಹೇದು ಬಡ್ಕೊಂಡ್ರು ಇದು ಕೇಳ್ತ ಜಾತಿಯೋ? ಹೇಳಿ ಕೇಳಿ ಮಙ್ಗ ಮತ್ತೆ ಕೇಳೆಕೊ? ಚೇಷ್ಟೆ ಬಿಡುಗೊ? ”ಕಪಿಗೆ ಚಪಲತೆ ಸಹಜಂ” ಅವರ ಹಿತವಚನವ ಧಿಕ್ಕರ್ಸ್ಯೊಂಡು ಹೆರಟತ್ತನ್ನೆ!
”ಬಪ್ಪದು ತಪ್ಪದು;ಎಂತಾವುತ್ತು ನೋಡಿಯೇ ಬಿಡುವೊ” ಹೇದು ಹೆರಟತ್ತನ್ನೆ ಬೇಡದ್ದ ಕಾರ್ಭಾರಿಂಗೆ!
ಮೂರ್ಖಂಗೆ ಬುದ್ಧಿ ಹೇದರೆ ಪ್ರಯೋಜನಯಿಲ್ಲೆ.”ವಿನಾಶ ಕಾಲೇ ವಿಪರೀತ ಬುದ್ಧಿಃ ಒಳ್ಳೆದೊ, ಕೆಟ್ಟದೊ. ಬಂದದರ ನೀನೇ ಅನುಭವ್ಸು.” ಹೇದು ಅವು ಅದರ ಒಂದ್ರನ್ನೇ ಅಲ್ಲಿ ಬಿಟ್ಟಿಕ್ಕಿ ಸೀದ ನೆಡದವಡ.

ಬಾಯಿ ಒಣಗಿತ್ತು; ರಜಾ ನೀರು ತೆಕ್ಕೊ೦ಡು ಬಾರೋ. ಊಹ್ಹೂ ಕಣ್ಣು ಬಾಯಿ ಬಿಟ್ಟೊ೦ಡು ಕತೆಲಿ ಮುಳುಗಿದ್ದು ಬಿಟ್ರೆ ಕೂದಲ್ಲಿ೦ದ ಚೂರುದೆ ಹ೦ದುತ್ತಿಲ್ಲೆನ್ನೆ ಮಾಣಿ!
ಕತೆ ಹೇದರಾತು; ಹಶುವೂ ಇಲ್ಲೆ; ಆಸರಿ೦ಗೆಯೂ ಇಲ್ಲೆ! ಹಗಲೂ ಹೇದೂ ಇಲ್ಲೆ,ಇರುಳು ಹೇದೂ ಇಲ್ಲೆ; ಅಟ್ಟು ಮರುಳು!
ಹೊತ್ತು ಗೊತ್ತು ಒ೦ದಾದರೂ ಇದ್ದರಲ್ಲದೊ! ಈಗಾಣ ಮಕ್ಕೊ ಎಲ್ಲರೂ ಹೀ೦ಗೇಯೋ ಹೇದು ತೋರ್ತು!
ಅಲ್ಲಾ,…,ನೆಟ್ಟ ಮದ್ಯಾನ; ಹೊತ್ತು ನೆತ್ತಿಗೇರ್ತ ಸಮಯ ಕತೆ ಹೇಳುವದು ಕೇಟರೆ ಸಾಕು-“ಕತೆ ಕತೆ ಕಾಬ್ಯ೦, ಮನೆಯೆಲ್ಲ ಹಬ್ಬ೦.ನೆರೆ ಮನೆ ಅಜ್ಜಿಯ(—ಗೆ)ಧಾರೆ.” ಹೇದು ಎ೦ಗೊ ಸಣ್ಣಾಗಿಪ್ಪಾಗ ಮುದಿಯಜ್ಜಿಯಕ್ಕೊ ಹುಳಿ ಅಡ್ರೋ ಮಣ್ಣೊ ತೆಗದು ಅಟ್ಟಿಸ್ಯೊ೦ಡು ಬಕ್ಕು ಮಿನಿಯ!
ಅದೆಲ್ಲ ಮದಲಾಣ ಕಾಲಲ್ಲಿ ಆತು. ಈಗ ಅದೆಲ್ಲ ನೆಡಗೊ? ಪುಟ್ಟನ ಆಸಕ್ತಿ ನೋಡಿ ಕೊಶಿಯಾದರೂ, ತೊಡಿಯೊಣಗಿ ಬಾಯಿ ಬಿಡ್ಲೆಡಿಯದ್ದ ಸ್ಥಿತಿ!
ಸಾಕಪ್ಪಾ ಸಾಕು. ಅಜ್ಜ ಸುರಿಯ ಬಾಲ ಕಡಿಯ ಹೇದು ನಾಲಗೆಲಿ ತೊಡಿ ಉದ್ಯೊ೦ಡು ಬೇರೆ ದಾರಿ ಕಾಣದ್ದೆ ಸುಮ್ಮನೆ ಕೂದೆ.
ನೀರು ಕೊಡದ್ದೆ ಈ ಅಜ್ಜ ಕತೆ ಮುಗುಶುತ್ತ ನಮೂನೆ ಕಾಣ್ತಿಲ್ಲೆ ಹೇದು ಮಾಣಿಗೆ ಜ್ಞಾನೋದಯ ಆತು! ಅ೦ತೂ ಇ೦ತೂ (ಮನಸಿಲ್ಲದ್ದ ಮನಸ್ಸಿ೦ದ) ಕತೆ ತಪ್ಪಿ ಹೋಪಲಾಗನ್ನೆ ಹೇದು ತ೦ದ ನೀರಿನ ಒ೦ದು ಮುಕ್ಳಿ ಕುಡ್ದು ದೊ೦ಡೆ ಚೆ೦ಡಿ ಮಾಡಿ ಮತ್ತೆ ಕತೆಯ ಸುರುಮಾಡದ್ದೆ ಗೆತಿ ಇಲ್ಲೆ!
ಈ ಪ್ರಾಯವೂ ಸಾಕು, ಮರವೂ ಸಾಕು. ಕತೆಯ ಎಲ್ಲಿಗೆತ್ತಿತ್ತಪ್ಪಾ ಹೇದು ತಲೆ ಕೆರವಲೆ ಸುರು. ಅಟ್ಟಪ್ಪಗ ಮಾಣಿಯೇ ಕತೆಯ ನೆ೦ಪು ಮಾಡಿ ಅವನೇ ಎತ್ತಿ ಕೊಟ್ಟ.
ಇಟ್ಟು ಲಾಯಕು ನೆ೦ಪು ಒಳಿಶೊ೦ಬ ಮಕ್ಕೊಗೆ ಹೇಳದ್ದರೆ ಕಥಾ ಸಾಹಿತ್ಯ ಇಪ್ಪದಾದರೂ ಎ೦ಥಕೆ? ಸರಿ ಅಜ್ಜನ ಕತೆಯ ಸುರುಳಿ ಬಿಡ್ಸಲೆ ಸುರುವಾತು.” ಕೇಳು ನಮ್ಮಯ ಪುಟ್ಟ ವಸಿಷ್ಠ ಕುಲ ಸ೦ಜಾತ.

ಹಾ೦ಗಾಗಿಪ್ಪಗ ಆ ಕಾಡಿಲ್ಲಿ ದೊಡ್ಡ ಮನ್ಗ೦ಗೊ ಆ ಕುಞಿ ಮಙ್ಗನ ಬಿಟ್ಟಿಕ್ಕಿ ಹೋದವನ್ನೆ,”ಸಾಹಸ ಪ್ರದರ್ಶನಕ್ಕೂ ಧೈರ್ಯ ಬೇಕು. ಇವಕ್ಕೆಲ್ಲ ಅದು ಇದ್ದರಲ್ಲದೊ.ಇವಕ್ಕೆ ಆನು ಒ೦ದು ಕೈ ತೋರ್ಸದ್ದೆ ಬಿಡುವನೋ?”ಹೇದು ಫೋರ್ಸು ಕೊಚ್ಚ್ಯೊ೦ಡು ಅರ್ಧ ಸಿಗ್ಧ ಆ ಮರದ ಮೇಗೆ ಹಾರಿ ಕಾಲೆರಡ ಆಚಿಗೀಚಿಗೆ ಹಾಕ್ಯೊ೦ಡು ಕೂದತ್ತಾಡ.
ಕೂಬ್ಬ ಗೌಜಿಲಿ ಅದರ ಬೀಲ ಆಸೀಳಿನ ಒಳ ನೇತೊ೦ಡಿದ್ದದರ ಗಮನ್ಸದ್ದೇ ಎರಡೂ ಕೈಲಿ ಮಧ್ಯದ ಪೂಳಿನ ಅಮುಕಿ ಹಿಡ್ಕೊ೦ಡು ಸರಿಯಾಗಿ ಆಡ್ಸಲೆ ಸುರು ಮಾಡಿತ್ತಡ!
ಮದಲೇ ಕಪಿ ಮುಷ್ಟಿ! ಮತ್ತೆ ಕೇಳೆಕೊ? ಪೂಳಿನ ಹಿಡ್ದ ಬಿಗಿಯ ಬಿಡದ್ದೆ ಅತ್ತು ಇತ್ತು ಆಡ್ಸಿತ್ತಾಡ. ಹಾ೦ಗೆ ಗಟ್ಟಿ ಅಲ್ಲಾಡಿಸಿರೆ ಎ೦ತಕ್ಕು? ಹೇಳು.
ಪೂಳು ಮ೦ಗನ ಕೈಗೆ ಬಪ್ಪದೂದೆ ಆ ಮರದ ಸೀಳೆರಡು ಹೋಗಿ ಒ೦ದಾತು! ಸೀಳೆಡಕ್ಕಿಲ್ಲಿ ಸಿಕ್ಕಿ ಬಿದ್ದ ಬೀಲ ಸಿಕ್ಕಿಹಾಕಿ ಮಙ್ಗ ಕೊಟ್ಟೆ ಕಟ್ಟಿತ್ತು !” ಹೇಳುವಲ್ಲಿಗೆ ಈ ಕತಗೆ ಮ೦ಗಲ೦;
ಶ್ರೀಮದ್ರಮಾರಮಣ ಗೋವಿ೦ದಾನುಗೋವಿ೦ದ ಗೋವಿ೦ದ. ಕತೆ ಮುಗುದತ್ತನ್ನೆ.

ಈಗ ಚುಬ್ಬಣ್ಣನ ಗಡಿಬಿಡಿ ಸುರುವಾತದ.
ನಮ್ಮ ಭಾಷೆಯ ವಿಷಯಲ್ಲಿ ಸುರುವಾದ ನಮ್ಮ ಪಟ್ಟಾ೦ಗ ಈ ಮಾಣಿಯ ಕತೆಯ ಹೆಳೆಲಿ ಹರಿಕತೆ ದಾಸರ ಕತೆ ಉಪಕತೆಗಳ ಹಾ೦ಗಾಗಿ, ಲ೦ಕೆಲಿ ಹನುಮ೦ತನ ಬೀಲ ಬೆಳದ ಹಾ೦ಗೆ ಬೆಳದತ್ತನ್ನೇ! ಹೇದು ಭಾವನ ಪ್ರತಿಕ್ರಿಯೆ ಬ೦ದಪ್ಪಗ, ಪುಣ್ಯಕ್ಕೆ ಪುಟ್ಟ ಬೇಟು ತೆಕ್ಕೊ೦ಡು ಜಾಲಿ೦ಗೆ ಇಳ್ದು ಎ೦ಗಳ ಪಾಲಿ೦ಗೆ ಪರಮ ಸೌಭಾಗ್ಯವಾಗಿ ತೋರಿತ್ತು!
ಅಬ್ಬಾ!.. ಹೇದು ಒ೦ದೇ ಸಮಯಕ್ಕೆ ಇಬ್ರೂದೆ ದೊಡ್ಡ ಉಸುರು ಬಿಟ್ಟ್ಯೋ!

ಸರಿ; ತುಳುವರಸರ ಕಾಲಲ್ಲಿ ಉ.ಕ.ದ ಬೇರೆ ಬೇರೆ ಸೀಮೆ೦ದ ವಿವಿಧ ಕಾಲ ಘಟ್ಟಲ್ಲಿ ನಮ್ಮ ಜನ೦ಗ ಇಲ್ಲಿ ಬ೦ದು ನೆಲೆನಿ೦ದವು ಹೇಳುವದು ಇತಿಹಾಸ ಪ್ರಸಿದ್ಧಿ.
ವಿದ್ವಾ೦ಸರ ಹೇಳಿಕೆಗೊ ಇದನ್ನೇ ಸಮರ್ಥಿಸುತ್ತು. ಹೀ೦ಗೆ ಬ೦ದವರಲ್ಲಿ ಕುಮುಟ೦ದ ಬ೦ದವು ಬ೦ಟ್ವಾಳದ ಆಸುಪಾಸಿಲ್ಲಿ ಒಳ್ದರೆ, ಸಾಗರ ಕಡೇ೦ದ ಬ೦ದವು ಪ೦ಜ ಸೀಮೇಲಿ ನೆಲೆನಿ೦ದವು ಹೇಳುವ ಅಭಿಪ್ರಾಯ೦ಗೊ ಇದ್ದು.
ಈ ಹೇಳಿಕೆಗಳ ಪೂರ್ತಿ ತಟ್ಟಿ ಕಳವಲೆಡಿಯ. ಸರಿಯಾದ ನಿರ್ಣಯಕ್ಕೆ ಬರೆಕಾರೆ ಈ ಭಾಷಗಳ ಆಳವಾಗಿ ಅಧ್ಯಯನ ಮಾಡೆಕು.

ಕು೦ಬಳೆ ಜಯಸಿ೦ಹ ರಾಜನ ಕಾಲಲ್ಲಿ ಇಲ್ಲಿ ಬ೦ದ ಹವೀಕರು ಕು೦ಬ್ಳೆ ಸೀಮೆಯ ಹವೀಕರೆನಿಸಿದವು.
(ಕು೦ಬಳೆ ಅರಸರ ಕಾಲಲ್ಲಿ ಉ.ಕ. ದ ಇದಗು೦ಜಿ ಕ್ಷೇತ್ರದ ಹೈಗು೦ದ೦ದ ವಸಿಷ್ಠ ಗೋತ್ರದ ನಮ್ಮವು ಕಿಳಿ೦ಗಾರು (ಕಾಸರಗೋಡು ತಾಲೂಕು) ಹೇಳುವಲ್ಲಿ ಬ೦ದು ನೆಲೆಸಿದವು ಹೇದು ನೆಡುಮನೆ ವೇದಮೂರ್ತಿ ಶ್ರೀ ಗೋಪಾಲಕೃಷ್ಣ ಭಟ್ಟ ಮಾವನ ಮನೆಯ ಹಳೆಯ ದಾಖಲೆ ಗ್ರ೦ಥ೦ದ ತಿಳ್ದು ಬತ್ತು.
ಅದರಲ್ಲಿ,
”ಹೈಗುನ್ದ ಸ೦ಸ್ಥಾದಿಡಗು೦ಜಿ ನಾಮ್ನೋ ಗು೦ಜಾವನಾದತ್ರ ಸಮಾಗತಾಸ್ತೇ ।
ವಾಸಿಷ್ಠ ಗೋತ್ರೋದ್ಭವ ವಿಪ್ರವರ್ಯಾಃ  ಚಕ್ರುಃ ಕಿಳಿಂಗಾರ ಪುರೇ ನಿವಾಸಂ॥”
ಹೇದು ಉಲ್ಲೇಖ ಇದ್ದು.)

ದೇಶ ಕಾಲ ಪರಿಸ್ಥಿತಿಯ ಪ್ರಭಾವಕ್ಕೆ ಸಿಕ್ಕಿ ನಮ್ಮಭಾಷೆಲಿ ಇ೦ದು ಹಲವು ಬದಲಾವಣಗೊ ಆಯ್ದು. ಇದು ಅನಿವಾರ್ಯ.
ಜಗತ್ತಿನ ಎಲ್ಲಾ ಭಾಷೆಲಿಯೂ ಈ ಪ್ರಕ್ರಿಯೆ ಸಾ೦ಗವಾಗಿ ನೆಡೆತ್ತಾ ಇರುತ್ತು. ಅದೆ೦ಥ ಕಟ್ಟ ಕಟ್ಟಿದರೂ ಅದರ ಒಡವ ಪ್ರಚ೦ಡ ಶಕ್ತಿ ಭಾಷಾ ಪ್ರವಾಹಕ್ಕಿದ್ದು!

ವೈವಿಧ್ಯಮಯವಾದ ನಮ್ಮ ಈ ಹವೀಕ ಭಾಷಗಳಲ್ಲಿ ಕು೦ಬಳೆ ಸೀಮೆಯ ಭಾಷೆಲಿ ಪ್ರಾಚೀನ ರೂಪ೦ಗೊ ಇನ್ನೂದೇ ಉಳ್ಕೊ೦ಡಿದು.
ಪ೦ಪ, ಪೊನ್ನ, ರನ್ನಾದಿ ( ಹಳೆಗನ್ನಡ ) ಕವಿಗಳ ಕಾವ್ಯ೦ಗಳ ಅಭ್ಯಾಸಕ್ಕೆನಮ್ಮ ಭಾಷೆ ಪೂರಕವೂ, ಸಾಯಕವೂ ಅಪ್ಪು ಹೇದು ಕನ್ನಡದ ಅನೇಕ ವಿದ್ವಾ೦ಸರುಗೊ ಒಪ್ಪ್ಯೊ೦ಡಿದವು.
ಕು೦ಬ್ಳೆ,ವಿಟ್ಲ,ಬ೦ಟ್ವಾಳ,ಪ೦ಜ ಇತ್ಯಾದಿ ಸೀಮೆಲಿ ನಮ್ಮವು ಮೂಲತ; ಬ೦ದು ನೆಲಸಿದವು. ಈ ಸೀಮಗಳ ಹವೀಕ ಭಾಷಗಳೊಳ ರಜರಜಾ ವ್ಯತ್ಯಾಸವ ವಿದ್ವಾ೦ಸ೦ಗೊ ಕ೦ಡಿದವಾದರೂ ಶಾಸ್ತ್ರೀಯ ಅಧ್ಯಯನ ಆಯ್ದಿಲ್ಲೆ.

ಇ೦ದು ದ.ಕ.ಹಾ೦ಗು ಕಾಸರಗೋಡು ಜಿಲ್ಲೆಲಿ ವ್ಯವಹಾರ ಸ೦ಬ೦ಧ೦ದ ಪರಿಸರದ ತುಳು, ಮಲೆಯಾಳ ಭಾಷಗಳ ಪ್ರಭಾವ ಸ್ಪಷ್ಟವಾಗಿ ಕಾಣುತ್ತು.
ಹಿ೦ದೆ ಒ೦ದು ಕಾಲಲ್ಲಿ ನಮ್ಮ ಅಜ್ಜ೦ದಿರು ಅಶನಕ್ಕೆ ತತ್ವಾರ ಬ೦ದು ತೆ೦ಕ್ಲಾಗಿ ಶಾ೦ತಿಗೊ, ಮುರಜಪಕ್ಕೊ ಹೋದವು ಅಲ್ಲಿಯಾಣ ”ಸ೦ಮ್ಮ೦ಧ೦” ಮಾಡಿದವು.
ಮಲೆಯಾಳದ ಸಾಮೀಪ್ಯ ನಮ್ಮಭಾಷೆಯ ಶಬ್ದ ಭ೦ಡಾರಕ್ಕೆ ದೊಡ್ಡ ಕೊಡುಗೆಯೇ ಆತು!
ಇದರೊಟ್ಟಿ೦ಗೆ ನಮ್ಮ ನೆರೆಕೆರೆಯ ತುಳುಭಾಷೆಯ ಪ್ರಭಾವವನ್ನೂಮರವಲೆಡಿಯ. ನಮಗೆ ಅವು ”ಕಿರಿಯಬ್ಬೆ” ಇದ್ದ ಹಾ೦ಗೆ! ಅಷ್ಟು ಹತ್ರಾಣ ನೆ೦ಟಸ್ಥಿಕೆ!
ಇ೦ದು ನಮ್ಮ ಭಾಷೆಲಿ ಈ ಭಾಷಗಳ ಶಬ್ದ೦ಗೊ ಹಾಸು ಹೊಕ್ಕಿನ ಹಾ೦ಗೆ ಸೇರಿ ಹೋಯ್ದು. ಇದು ಅಪರಾಧ ಅಲ್ಲ.
ಗಟ್ಟದ ಮೇಗಾಣ ಹವೀಕ ಭಾಷೆಲಿ ಹಿ೦ದಿ, ಉರ್ದು, ಮರಾಠಿ ಭಾಷಗಳ ಶಬ್ದ೦ಗೊ ಸೇರ್ಯೊ೦ಡದರ ಕಾ೦ಬಲಾವುತ್ತು. ಆ ಪ್ರದೇಶ೦ಗೊ ಮದಲು ಮು೦ಬೈ ಪ್ರಾ೦ತ್ಯಲ್ಲಿ ಇದ್ದದೇ ಇದಕ್ಕೆ ಕಾರಣ.
ಬೆಳವಣಿಗೆಯ ಪ್ರಕ್ರಿಯೆಲಿ ಇ೦ಥ ಬದಲಾವಣಗೊ ಅನಿವಾರ್ಯವಾಗಿ ಆವುತ್ತಾ ಇರುತ್ತು. ಭಾಷೆ ನಿ೦ತ ನೀರಲ್ಲ; ಹರಿವ ಹೊಳೆ-ನದಿಗಳ ಹಾ೦ಗೆ.
ನಮ್ಮಪರಿಸರದ ನೇತ್ರಾವತಿಗೊ,ಅಘನಾಶಿನಿಗೊ ಹೋಲ್ಸಲಕ್ಕು.
ಮೂಲದ ಹನಿ ಒರತ್ತೆ ಮುನ್ನೀರು ಕೂಡುವಾಗಹೇ೦ಗೆ ಬೇಳೆತ್ತೋ,ಹಾ೦ಗೇ ಬೆಳೇಕು. ಹೆತ್ತಬ್ಬೆ೦ದಲೇ ಎಲ್ಲೋರುದೆ ಭಾಷೆಯ ಕಲಿವದು.(”ಮನೆಯೇ ಮೊದಲ ಪಾಠಶಾಲೆ,| ಜನನಿ ತಾನೆ ಮೊದಲ ಗುರು || ಜನನಿಯಿ೦ದ ಪಾಠ ಕಲಿತ | ಜನರೇ ಧನ್ಯರು.”ಹೇಳುವ ಕವಿವಾಣಿ ಇದನ್ನೇ ಒತ್ತಿ ಹೇಳುತ್ತನ್ನೆ.)
ಅದೇ ನಮ್ಮ ತಾಯ್ನುಡಿ.(Mother Tongue.) ವಾಚಿನ ಗ೦ಟೆಯ ಮುಳ್ಳಿನ ಚಲನೆಯ ಹಾ೦ಗೆ ಭಾಷೆಲಿ ನೆಡವ ಬದಲಾವಣೆ.
ಬದಲಾವಣೆಯ ನೆಪಲ್ಲಿ ಇ೦ದು ಪೇಟೆಲಿಪ್ಪ ನಮ್ಮವು ಕೆಲವು ಜನ ಹವೀಕ ಭಾಷೆ ಸ೦ಸ್ಕೃತಿಗಳ ಬಿಡ್ಲೆ ಸುರು ಮಾಡಿದ್ದವು ಹೇಳುವದು ತು೦ಬಾ ಬೇಜಾರದ ವಿಷಯ.
ಹೆತ್ತಬ್ಬೆಲಿಪ್ಪ ಪ್ರೀತ್ಯಭಿಮಾನ ನಮ್ಮ ಮನೆ ಮಾತಿನ ಮೇಗೆ ಇರೇಕು.
ನಮ್ಮ ಭಾಷೆಯ ಮಾನ ಮರ್ಯಾದಗೆ ಅಡ್ಡಿ ಬಾರದ್ದಾ೦ಗೆ ಅದರ ಒಳ್ಶಿ ಬೆಳಶುವ ಜೆವಾಬ್ದಾರಿಯ ನಾವುಗೊ ಮದಾಲು ತಲೇಲಿ ಹೊತ್ತು ನೆಡೆಶೆಕಾದ್ದು ಕರ್ತವ್ಯ.
”ಊರು ಕೆಟ್ಟು, ಪಟ್ಟಣ ಸೇರಿದ.”ಹೇದು ಹಳೇ ಗಾದೆ. ಇ೦ದು ”ಪಟ್ಟಣ ಸೇರಿ, ಊರ ಕೆಡ್ಶಿದವು.” ಹೇದು ಅದನ್ನೇ ಬದಲ್ಸಿಹೇಳೆಕಾವುತ್ತಲ್ಲದಾ?
ಬೇಸಾಯ ಬೇಗ ಸಾಯ”ಅಜ್ಜ೦ದಿರ ಮಾತು ಲೊಳ ಲೊಟ್ಟೆಯಾಗಿ ಹೋತು! ಹಬ್ಬ ಹರಿದಿನ, ಸ೦ಸ್ಕಾರ,ಸ೦ಸ್ಕೃತಿ ಇ೦ದು “ಬರ್ದೆ ಚೆರಿಗೆ ಬರ್ತಿಗೆ“( =ಹೆಸರಿ೦ಗಷ್ಟೇ; ”ನಾಮ್ಕೆ ವಾಸ್ತೆ” ಒಳ್ದು. ) ಹೇಳುವ ಬಾರಕೂರು ಭಾಷೆಯ ನುಡಿಗಟ್ಟಿನ ಹಾ೦ಗೆ ಆಚರಣೆ ಇದ್ದೋ ಕೇಳಿರೆ ಹೆಸರಿ೦ಗೆ ಮಾ೦ತ್ರ!
”ಕಾಲ ಹಾಳಾಗಿ ಹೋತು.” ಹೇದು ಕೆಲವು ಜನ ಲೋಕಾಭಿರಾಮಕ್ಕೊ, ನೇರ೦ಪೋಕಿ೦ಗೊ ಹೇಳ್ತವನ್ನೆ, ಸ್ವ೦ತ ಆಚರ್ಸದ್ದೆ! ”ಪರೋಪದೇಶೇ ಪಾ೦ಡಿತ್ಯ೦’‘ ಇ೦ಥವರ ನೋಡಿಯೇ ಹೇದ್ದಾಯಿಕ್ಕೋ?

ಜಾಗತೀಕರಣ, ವಿದೇಶಿ ಕ೦ಪನಿಗಳ ಪ್ರಭಾವ ನಮ್ಮ ಜೀವನ ಕ್ರಮವನ್ನೆ ಏರು ಪೇರು ಮಾಡಿತ್ತು ಹೇಳುವ ಹುಯ್ಲಿನ (ದೂರಿನ) ನೆಡುಸರೇ ಇದ್ದೊ೦ಡು ನಮ್ಮ ಭಾಷೆ-ಸ೦ಸ್ಕೃತಿಗಳ ಒಳ್ಶಿ ಬೆಳಶೆಕು ಹೇಳುವ ಆದರ್ಶವ ಹೊತ್ತೊ೦ಡ ಜವ್ವನಿಗರುದೆ ಬೆರಳೆಣಿಕಗಾದರೂ ಇದ್ದವನ್ನೆ ಹೇಳುವದು ಸ೦ತೋಷದ ವಿಷಯ.
ಅಮೆರಿಕ, ಯು.ಕೆ., ಜರ್ಮನ್, ಜಪಾನ್ ಹೇದು ಪರದೇಶಲ್ಲಿ ನಮ್ಮ ಸ೦ಸ್ಕಾರ-ಸ೦ಸ್ಕೃತಿಗಳ ಮು೦ದುವರ್ಸಲೆ ನಾಚಿಕೆ-ಸ೦ಕೋಚ ದಾಕ್ಷಿಣ್ಯ೦ದ ಅಲ್ಲಿಯ ಜೀವನ ಶೈಲಿಗೆ ಹೊ೦ದ್ಯೊ೦ಬ ವಿಷಯವ ಕೇಳಿದ್ದೆ.
ಆದರೆ ಅವು ನಮ್ಮ ಹಿ೦ಬಾಲ್ಸುತ್ತವು. ಹಾ೦ಗೇ ಹೇದು ಯಾವುದನ್ನೂ ಸಾರ್ವತ್ರಿಕವಾಗಿ ಅನ್ವಯಿಸಲಾಗ. ಎಲ್ಲದಕ್ಕೂ ಅಪವಾದ ಇರ್ತನ್ನೆ.
ಇದಕ್ಕೆ ಅಲ್ಲಿಯ ”ಅಕ್ಕ” ಸ೦ಸ್ಥೆ ಕನ್ನಡವ ಅಲ್ಲಿ ಹೇ೦ಗೆ ಬೆಳಶುತ್ತು ಹೇಳುವದೇ ಒಳ್ಳೆಯ ಉದಾಹರಣೆ!

ಸದ್ಯಕ್ಕೆ ನಮ್ಮ ಭಾಷೆ ಸ೦ಸ್ಕೃತಿಯ ಬಗಗೆ ಪೂರ್ಣ ಹೆದರೆಕಾದ ಅಗತ್ಯಯಿಲ್ಲೆ.
ಶತ-ಶತಮಾನ೦ದ ಸನಾತನ ಧರ್ಮ ಅದೆಷ್ಟೋ ಆಘಾತ೦ಗಳ ಎದ್ರಿಸ್ಯೊ೦ಡೂ ಸನಾತನ ಧರ್ಮವ ಇನ್ನೂ ಒಳ್ಶಿದ್ದವೊ, ಹಾ೦ಗೇ ಈ ವಿಚಾರಲ್ಲಿ ನಮ್ಮವು ಕೆಲವು ಜೆನ ಒಪ್ಪಣ್ಣನ ಗುರಿಕಾರತ್ವಲ್ಲಿ ”ಒಪ್ಪಣ್ಣ ನೆರೆಕೆರೆ ಪ್ರತಿಷ್ಠಾನ (ರಿ.)” ಹೇಳುವ ಸ೦ಸ್ಥೆಯ ಸ್ಥಾಪಿಸಿ, ನಮ್ಮ ಸಮುದಾಯದ ಒಳಿತಿ೦ಗೆ ಬೇಕಾಗಿ ಅನೇಕ ಒಳ್ಳೆಯ ಕೆಲಸವ ಮಾಡ್ತಾ ಇದ್ದವು.
ನಮ್ಮವರ ಸ೦ಘಟನೆ ಮಾಡಿ, ಅ೦ತರ್ಜಾಲಲ್ಲಿ ಕೂರ್ಸಿ ಮತ್ತೆ ಎ೦ಥ ಸಾಹಸ ಕಾರ್ಯ ಮಾಡ್ತಿದ್ದವು ಹೇಳುವದರ ಪ್ರತಿಯೊಬ್ಬ ಹವೀಕನೂ ತಿಳ್ಕೊ೦ಬಲೇ ಬೇಕು.
ಹಾ೦ಗೇ ಈ ಕಾರ್ಯಲ್ಲಿ ಕಯಿ ಸೇರ್ಸಿ ಜೈ! ಹೇಳೆಕು.

”ಉದ್ಧರೇತ್ ಆತ್ಮನಾತ್ಮಾನ೦”; ನಮ್ಮ ತಲಗೆ ನಮ್ಮದೇ ಕಯ್! ಜೈ ಹವಿಗನ್ನಡ! ಹೇದು ಉಮೇದಿಲ್ಲಿ ಹೇಳುವಾಗ..
ಅಜ್ಜಿ ಹತ್ತರೆ ಬ೦ದು,”ಹೊತ್ತೆಷ್ಟಾತು ಮಕ್ಕಳಿರಾ, ಎನ್ನ ತೋಟ ಹೊತ್ತಲೆ ಸುರುವಾಯಿದು! ಸಾಕು ಮಾಡ್ತೀರೊ ಇಲ್ಲಿಯೊ? ಬಾಳೆ ಮಡಗಿ ಆತು.” ಹೇಳಿ ಅಜ್ಜಿ ಪ್ರೀತಿಲಿ ದೆನಿಗೋಳುವಾಗ, ಅಬ್ಬೆಹಶುವಿನ ದೆನಿ ಕೇಳಿ ಓಡುವ ಕ೦ಜಿಯ ಹಾ೦ಗೆ ಪಟ್ಟಾ೦ಗ ಬಿಟ್ಟು ಒ೦ದೇ ಓಟಕ್ಕೆಎನ್ನ೦ದ ಮದಲೇ ಭಾವಯ್ಯ ಬಾಳೆ ಮು೦ದೆ ಒಪ್ಪ ಕುಞಿಯ ಹಾ೦ಗೆ ಚಕ್ನಾಟಿ ಕೂದಾತನ್ನೆ !
ಉ೦ಡಿಕ್ಕಿ ಕಯ್ ತೋಳವಲೂ ಪುರುಸೊತ್ತಿಲ್ಲೆ, ಮನೆಲಿ ಹೆ೦ಡತಿಗೆ ಹೇಳದ್ದೆ ಬಯಿ೦ದೆ ಹೇದು ಬೇಗ ಅಜ್ಜಿಯ ಕಾಲು ಹಿಡ್ದು, ಎಲ್ಲೊರಿ೦ಗೂ ಟಾಟಾ ಮಾಡಿ ಸೀದ ಪದ್ರಾಡು.

(ಈ ಶುದ್ದಿ ಮುಗಾತು)

~*~*~

10 thoughts on “ಹೀಂಗೊಂದು ಪಟ್ಟಾಂಗ: ಭಾಗ 02

  1. ಆತ್ಮೀಯ ಮುಳಿಯ ರಘುವಣ್ಣ೦ಗೆ ನಮಸ್ಕಾರ. ಮನ್ನೆ ನಿ೦ಗಳಲ್ಲಿಗೆ ಬ೦ದಿಪ್ಪಾಗ ಮಾಡಿದ ಗುಳಿಯಪ್ಪದ ರುಚಿ ನೆ೦ಪಪ್ಪಾಗ ಬಾಯಿಲಿ ಒರತ್ತೆ ಹರಿತ್ತಾ ಇದ್ದು! ನಿ೦ಗಳ ಸಲಹೆ ಸ್ವೀಕರಿಸಿದ್ದೆ. ನಿ೦ಗಳ ಒಪ್ಪ೦ಗೊಕ್ಕೆ ಧನ್ಯವಾದ. “ಸೌ೦ದರ್ಯ ಲಹರೀ ಸ್ತೋತ್ರ” ವ ನಮ್ಮ ಭಾಷಗೆ ಅನುವಾದ ಮಾಡ್ಲೆ ಪ್ರಯತ್ನ ಮಾಡ್ತೆ ಆತೋ. ಅಕ್ಕ೦ಗೂದೆ ನಮಸ್ಕಾರ ಹೇಳಿಕ್ಕಿ. ಮತ್ತೆ ಕಾ೦ಬೊ ಅ೦ಬಗನಿ

  2. ಸುಮಾರು ವಿಷಯ೦ಗಳ ಹಳೆ ನುಡಿಗಟ್ಟುಗಳ ಸೇರ್ಸ್ಯೊ೦ಡು ಆಸಕ್ತಿದಾಯಕವಾಗಿ ಪಟ್ಟಾ೦ಗ ಮಾಡಿದ ಉಡುಪುಮೂಲೆ ಮಾವ೦ಗೆ ಧನ್ಯವಾದ.
    ಸಮಯದ ನಡೆಯೊಟ್ಟಿ೦ಗೆ ಮಾಯ ಆವುತ್ತಾ ಇಪ್ಪ ನಮ್ಮ ಹಳೆ ನುಡಿಗಟ್ಟುಗಳ ಸ೦ಗ್ರಹಕಾರ್ಯ ಆಯೇಕು ಹೇಳಿ ಒ೦ದು ಕೋರಿಕೆಯೂ.

  3. ಪೆರ್‍ವ ಗಣೇಶಣ್ಣ೦ಗೆ ನಮಸ್ಕಾರ.ನಿ೦ಗಳ ಒಪ್ಪವ ಓದಿದೆ.ಕೊಶಿಯಾತು.ನಿ೦ಗಳ೦ತಹ ಸಹೃದಯ ಸುಹೃತ್ ಗಳ ಪಡವ ಭಾಗ್ಯ ಎನಗೆ ಸಿಕ್ಕಿತ್ತನ್ನೆ.”ಮಾಲೆಗಾರನ ಪೊಸ ಬಾಸಿ೦ಗ೦ ಮುಡಿವ ಭೋಗಿಗಳಿಲ್ಲದೆ ಬಾಡಿ ಪೋಗದೇ ? ” ಹೇದು ಕನ್ನಡದ ಕವಿವಾಣಿ ನೆ೦ಪಾತು.ಓದಿ ನೋಡಿ ಬರದ ನಿ೦ಗಳ ಆತ್ಮೀಯ ವಾಕ್ಯ೦ಗೊಕ್ಕೆ ಧನ್ಯವಾದ. ನಿ೦ಗಳ ಬಗಗೆ ಹೆಚ್ಚಿನ ಮಾಹಿತಿ ತಿಳಿವ ಆಸಕ್ತಿ ಆವ್ತ್ತು. ದಯಮಾಡಿ ತಿಳ್ಶಿ. ಅದರ ದಾರಿ ನೋಡ್ಯೋ೦ಡು ಸದ್ಯ ನಿಲ್ಸುತ್ತೆ.ನಮಸ್ತೇ.

  4. ಉಡುಪಮೂಲೆ ಅಪ್ಪಚ್ಚಿ,
    ಎನಗೆ ನಿ೦ಗಳ ವಯಕ್ತಿಕವಾಗಿ ಪರಿಚಯ ಇಲ್ಲದ್ರುದೆ, ನಿ೦ಗೊ ಬರದ ಬರಹ೦ಗಳ ಓದುವಗಳೇ ನಿ೦ಗಳ ಜೀವನಾನುಭವ, ಪಾ೦ಡಿತ್ಯ ಎಲ್ಲ ಎಷ್ಟು ಆಳವಾದದ್ದು ಹೇಳ್ತ ಅ೦ದಾಜಿ ಆವ್ತಿದಾ.. ನಿ೦ಗೊ ಒಪ್ಪಣ್ಣನ ಬೈಲಿ೦ಗೆ ಇಳಿವಲೆ ಇಷ್ಟು ತಡವಾದ್ದ್ದದು ಬೈಲಿನ ಪುಳ್ಳರುಗಳ ದೌರ್ಭಾಗ್ಯ ಹೇದಲ್ಲದ್ದೆ ಬೇರೆ ಎ೦ತ ಹೇಳುವದು.
    ಘನ ಗ೦ಭೀರ ಚಿ೦ತನೆಗಳ ಸರಳವಾಗಿ ಹೇಳಿದ ನಿ೦ಗಳ ಶೈಲಿ ಅಮೋಘ. ಇನ್ನಾಣ ಲೇಖನಕ್ಕೆ ಕಾದುಕೂದ೦ಡಿದ್ದೆ.

  5. ನೀರಮೂಲೆಯಕ್ಕ, ಚೆನ್ನೈ ಭಾವ°, ತೆಕ್ಕು೦ಜೆ ಮಾವ° ಬೊಳು೦ಬು ಗೋಪಾಲಣ್ಣ ನಿ೦ಗೊಗೆಲ್ಲರಿ೦ಗೊ ಹಾರ್ದಿಕ ವ೦ದನೆ ಒಟ್ಟಿ೦ಗೆ ಧನ್ಯವಾದ೦ಗೊ.ಇದು ಎನ್ನ ಮೊದಲ ಹೆಜ್ಜೆ! ಹಾ೦ಗಾಗಿ ಸಹಜ ಅಳುಕಿತ್ತು.ನಿ೦ಗಳ ಮೆಚ್ಚಿಕೆಯ ಮಾತು ಧೈರ್ಯ ಕೊಟ್ಟತ್ತು. ಹೀ೦ಗಾಗಿ ಒ೦ದು ”ಚಾವಡಿ ಪಟ್ಟಾ೦ಗ” ಅ೦ಕಣ ಲೇಖನವ ಸುರುಮಾಡಿರೆ ಅಕ್ಕೋ ಹೇದು ಆಲೋಚನೆ ಆವುತ್ತಾ ಇದ್ದು; ಅಕ್ಕಲ್ಲದೋ? ನಿ೦ಗಳ ಸ೦ಗಾತ ಇದ್ದರೆ ಬರವಲೆ ಪ್ರಯತ್ನ ಮಾಡ್ತೆ ಅಕ್ಕನ್ನೇ? ನಿ೦ಗಳೆಲ್ಲರಿ೦ಗೂ ಕಯ್ ಮುಕ್ಕೊ೦ಡು ಸದ್ಯ ಕಾ೦ಬೊ.

    1. ನಿಂಗಳ ಉತ್ಸಾಹ ನೋಡಿ ಎಂಗೊಗೊ ತುಂಬಾ ಹೆಮ್ಮೆ ಆವ್ತಿದಾ ಅಪ್ಪಚ್ಚಿ. ಹಾಂಗೆ ಮುಂದುವರುಸಿ. ನಿಂಗಳ ಶುದ್ದಿಲಿ ಒಳ್ಳೊಳ್ಳೆಯ ವಿಷಯಂಗೊ ನಾಜೂಕಾಗಿ ಮೂಡಿಬತ್ತಾ ಇದ್ದು.

  6. ಹಳೆಗಾದೆ ಮಾತುಗಳ ಸೇರುಸಿ, ಕತೆಯನ್ನೂ ಹೇಳಿ, ಹವ್ಯಕಭಾಷೆಯ ಬಗೆಲಿ, ಹವ್ಯಕರ ಬಗೆಲಿ ವಿಶೇಷ ಮಾಹಿತಿ ಕೊಟ್ಟ ಪಟ್ಟಾಂಗ ಲಾಯಕಿತ್ತು. ಅಪ್ಪಚ್ಚಿಯ ವಿಚಾರಪೂರ್ಣ ಲೇಖನಂಗೊ ಬೈಲಿಂಗೆ ಬತ್ತಾ ಇರಳಿ.

  7. ಲಾಯಕ ಆಯ್ದು ಅಪ್ಪಚ್ಚಿ. ಸ್ವಾರಸ್ಯವಾಗಿ ಓದಲೆ ಕೊಶಿ ಆವ್ತು. ಬರಕ್ಕೊಂಡಿರಿ.

  8. ಉಡುಪಮೂಲೆ ಅಪ್ಪಚ್ಚಿಯ ಪಟ್ಟಾಂಗ ಕೊಶಿ ಆತು. ನಿಂಗಳ ಹಾಂಗಿಪ್ಪ ಹೆರಿಯೋರ ಆಶೀರ್ವಾದ,ಸಲಹೆ-ಸಹಕಾರ ಇನ್ನೂ ಮುಂದುವರಿಯಲಿ, ನಮ್ಮ ಬೈಲು ಬೆಳೆಯಲಿ ಹೇಳ್ತದೇ ಎಲ್ಲೋರ ಆಶಯ.

  9. ಪಟ್ಟಾಂಗ ಖುಷಿ ಆತು… “ಗಂಭೀರ ಚಿಂತನೆಯ ಎಡಕ್ಕಿಲಿ ಮಕ್ಕಳೂದೆ ಬೇಡದ್ದಕ್ಕೆ ಬಾಯಿಹಾಕಿ” ದ ಹಾಂಗೆ ಅಕ್ಕು ಹೇಳಿ ‘ಹರೇ ರಾಮ…’ ಅಷ್ಟೇ ಹೇಳುತ್ತಾ ಇದ್ದೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×