ಹ್ಮ್, ಅದಾ! ಜೆಂಬ್ರಂಗೊ ಮತ್ತೆ ಸುರು ಆತು.
ಮೇಗಂದ ಮೇಗೆ ಮದುವೆ, ಉಪ್ನಾಯನ, ನಾಂದಿ, ಗ್ರಾಶಾಂತಿ!! ಸುರು ಆದರೆ ಎಲ್ಲ ಒತ್ತರೆಗೆ, ಎಲ್ಲಿಗೆ ಹೋಪದು, ಏವದರ ಬಿಡುದು!
ಎಲ್ಲೊರುದೇ ಬೇಕಾದವೇ, ಎಲ್ಲೊರಿಂಗೂ ಅಕ್ಕಾದವೇ!
ಊರೋರಿಂಗೆ ಹೋಪ ತಲೆಬೆಶಿ, ಜೆಂಬ್ರದ ಮನೆಯೋರಿಂಗೆ ತೆಯಾರಿಗೆ ತಲೆಬೆಶಿ. ನವಗೆ ಹೋಗಿ ಪುರೇಸೆಡದೋ. ಒರಿಶಲ್ಲಿ ಇಪ್ಪದು ಹದಿನಾರು ಮೂರ್ತ – ಜೆಂಬ್ರ ತೆಗವವು ಆದರೂ ಎಂತರ ಮಾಡುಸ್ಸು ಪಾಪ – ಹೇಳುಗು ಪೆರಿಯಪ್ಪು ಅಣ್ಣ!
ಕೆಲವು ದಿಕ್ಕಂಗೆ ಮೂರ್ತಕ್ಕೆ ಹೋಪದು, ಕೆಲವು ದಿಕ್ಕಂಗೆ ಮುನ್ನಾಣ ದಿನಕ್ಕೆ ಹೋಪದು, ಕೆಲವು ದಿಕೆ ಮರದಿನಕ್ಕೆ ಹೋಪದು, ಕೆಲವು ದಿಕ್ಕಂಗೆ ಬರೇ ಟೀಪಾರ್ಟಿಗೆ ಹೋಪದು – ಅಂತೂ ಇಂತೂ ಎಲ್ಲ ದಿಕ್ಕೆ ಸುದಾರ್ಸಿದ ಹಾಂಗೆ ಮಾಡುದು.
~
ಇದಾ, ನೋಡಿ ನಿಂಗೊ:
ಮೊನ್ನೆ ಆಯಿತ್ಯವಾರ ಬೈಲಿನ ಎಡಪ್ಪಾಡಿ ಮದುವೆ ಗುರುವಾಯನಕೆರೆಲಿ, ಅರ್ತ್ಯಡ್ಕದ ಮದುವೆ – ಮನೆಲೇ, ಬೈಂಕ್ರೋಡು ಪುಳ್ಳಿಗೆ ಉಪ್ನಾಯನ – ಕೋಲ್ಪೆದೇವಸ್ತಾನಲ್ಲಿ, ಪೆರುಮುದೆಮದುವೆ ಮುದ್ದುಮಂದಿರಲ್ಲಿ, ನವೋದಯದ ಜೋಡುಪ್ನಾಯನ – ಮಾಡಾವಿಲಿ, – ಒಂದೊಂದು ಒಂದೊಂದು ಊರಿಲಿ!
ಎಲ್ಲಿಗೆ ಹೋಪದು, ಎಲ್ಲಿಗೆ ಬಿಡುದು! ಜೆಂಬ್ರಕ್ಕೆ ಹೋಪಲೆಡಿತ್ತಿಲ್ಲೆ ಹೇಳುದಕ್ಕಿಂತಲೂ, ಒಂದರ ಬಿಟ್ಟು ಮತ್ತೆಲ್ಲ ಊಟ ತಪ್ಪುತ್ತನ್ನೇ ಹೇಳ್ತದು ಗುಣಾಜೆಮಾಣಿಗೆ ತಲೆಬೆಶಿ!
ಯೇವದು ಬಗದ್ದೋ – ಅದುವೇ ಸಿಕ್ಕುದು, ಅಷ್ಟೆ ಉಳ್ಳೊ! ಹೇಳಿ ಅಣಿಲೆಡಾಗುಟ್ರು ತತ್ವ ಹೇಳುಗು! ಅದಿರಳಿ.
ಅಂತೂ ಬೈಲಿನೋರಿಂಗೆ ಮದ್ಯಾನಕ್ಕೆ ಏನಾರೊಂದು ಆಯೆಕ್ಕನ್ನೆ!
ಉಪ್ನಾಯನಕ್ಕೆ ಹೋಪಲೆಡಿಯ, ಇನ್ನು ಆ ಮಾಣಿಯ ಮದುವೆಗೆ ಆದರೂ ಹೋಪಲಕ್ಕು, ಮದುವೆದು ಹೇಳಿಕೆ ಸುಮಾರಿದ್ದು, ಯೇವದರ ಬಿಡುದು, ಯೇವದರ ಹಿಡಿವದು!!
ಎಡಪ್ಪಾಡಿ ಮದುವೆಗೆ ಹೋಪದು, ಅರ್ತಿಯಡ್ಕ ಸಟ್ಟುಮುಡಿಗೆ ಹೋಪದು, ಪಂಜಕ್ಕೆ ಚೆತರ್ತಿಗೆ ಹೋಪದು, ಮತ್ತೆಲ್ಲ ಮರದಿನಕ್ಕೆ ಹೋಪದು – ಹೇಳಿ ಸರುವಾನುಮತದ ತೀರ್ಮಾನ ಆತು – ದೊಡ್ಡಬಾವನ ಅಧ್ಯಕ್ಷತೆಲಿ!
~
ಎಡಪ್ಪಾಡಿಮದುವೆ ಲೆಕ್ಕಲ್ಲಿ ಶೆನಿವಾರ ಮದ್ಯಾನ್ನವೇ ಕೊಂಬಿನಹಿಡಿ ಪೀಶಕತ್ತಿಯ ಹರಿ ಮಾಡಿ ಆಗಿತ್ತು ಒಪ್ಪಣ್ಣಂಗೆ!
ಬಳದಕಲ್ಲಿನ ಸ್ಲೇಟಿಂಗೆ ತೆಂಗಿನೆಣ್ಣೆಮುಟ್ಟುಸಿ ಮಸದ್ದು – ಲಾಯಿಕಂಗೆ – ಬೆಂದಿಗೆ ಕೊರವಗ ಹರೀ ಬೇಕಿದಾ!
ಅಂತೂ ಹೊತ್ತೋಪಗ ಒಟ್ಟಿಂಗೆ ಸೇರಿ ಹೋಪದು ಹೇಳಿಗೊಂಡು ಬೈಲಿಂದ ಹೆರಟಾತು, ಬೇರೆ ಜೆಂಬ್ರದ Günstige Replica Uhren ಮನೆಲಿ ಎಂತ ಆವುತ್ತಾ ಇಕ್ಕು – ಹೇಳ್ತದರ ಮಾತಾಡಿಗೊಂಡು. ಎಲ್ಲೊರ ಬೊಬ್ಬೆ ಗೌಜಿಯ ಎಡೆಲಿದೇ ವೇನು ಮೂರುಸಂಧ್ಯೆಗೆ ಮದುವೆಹೋಲಿಂಗೆ ಎತ್ತಿತ್ತು.
~
ಎಡಪ್ಪಾಡಿಬಾವಂಗೆ ಚೆಂಙಾಯಿಗೊ ಧಾರಾಳ! – ಚೆಂಙಾಯಿಗಳೇ ಅವರ ಶೆಗ್ತಿ ಅಡ – ಯೇವತ್ತೂ ಹೇಳುಗು!
ಗ್ರಾಮಹೇಳಿಕೆ, ನೆಂಟ್ರ ಹೇಳಿಕೆಯ ಒಟ್ಟಿಂಗೆ ಈ ಚೆಂಙಾಯಿಗಳ ಹೇಳಿಕೆಯೂ ಆಯಿದಡ. ಹೇಳಿಕೆ ಮಾಡಿ ಮಾಡಿ – ಮದುವೆ ಮುನ್ನಾಣದಿನ ಹೊತ್ತೋಪಗ ಮುಗಾತಡ!
ಕಾಗತ ಕೊಡ್ಳೆ ಎಕ್ಕಿದೋರಿಂಗೆ ಕಾಗತ, ಅದಿಲ್ಲದ್ರೆ ಬಾಯಿಹೇಳಿಕೆ, ಬಾಯಿಹೇಳಿಕೆ ಎತ್ತದ್ದೋರಿಂಗೆ ಹೇಳಿಗೊಂಡು ಸಮೋಸ ಹೇಳಿಕೆಯೂ ಇತ್ತಡ, ದೊಡ್ಡಬಾವಂಗೆ ಹೇಂಗೂ ಆ ವಿಚಾರಲ್ಲಿ ಸರುವೀಸು ಇದ್ದನ್ನೆ! ಸುಲಾಬಲ್ಲಿ ಹೋತಾಯಿಕ್ಕು, ಎಲ್ಲೊರಿಂಗೂ!
ಈ ಹೇಳಿಕೆ ಒಯಿವಾಟಿಲಿ ಒಟ್ಟಾರೆ ತಲೆಬೆಶಿಲಿ ಇತ್ತವು; ’ಅಬ್ಬ, ಒಂದೇ ಮದುವೆ ಸಾಕು’ – ಹೇಳಿ ಕಂಡಿಕ್ಕು ಎಡಪ್ಪಾಡಿಬಾವಂಗೆ! 😉
~
ಹ್ಮ್, ಅದಿರಳಿ..
ಒಂದರಿಯಾಣ ಹೊತ್ತಪ್ಪಗಾಣ ಕೆಲಸ ಅಂಬೆರುಪು ಅಂಬೆರುಪಿಲಿ ಮುಗುಶಿ ಬೈಲಿನೋರ ಗೌಜಿಗದ್ದಲದ ವೇನು ಎತ್ತೆಕ್ಕಾರೇ –
ಹೋಲಿಲಿ ಜೆನ ತುಂಬಿ ಸಮಲುತ್ತು!
ಸಮಪ್ರಾಯದ ಜವ್ವನಿಗರು, ಒಂದೇ ನಮುನೆ ಬೊಬ್ಬೆ, ತಮಾಶೆ, ಗಲಾಟೆ, ಗದ್ದಲ! – ಮದುವೆ ಮನೆ ಗದ್ದಲ ಅದಾಗಲೇ ಸುರು ಆಗಿತ್ತು.
ಎಡಪ್ಪಾಡಿ ಬಾವನ ಬೆಂಗುಳೂರಿನ ಚೆಂಙಾಯಿಗೊ ಅವು – ಹೇಳಿ ಗೊಂತಪ್ಪಲೆ ತುಂಬ ಹೊತ್ತು ಬೇಕಾತಿಲ್ಲೆ.
ಅಜ್ಜಕಾನಬಾವಂಗೆ ಕೆಲಾವು ಜೆನರ ಗುರ್ತ ಇದ್ದನ್ನೇ – ಹಾಂಗಾಗಿ ರಜ ಒಳ್ಳೆದಾತು.
ಎಂಗಳೂ ಸೇರಿದ ಮತ್ತೆ ಗೌಜಿ ಜಾಸ್ತಿ ಅಕ್ಕೇ ವಿನಃ ಕಮ್ಮಿ ಆಗ ಇದಾ!
ಮಾತಾಡಿಗೊಂಡು ಗುರ್ತ ಮಾಡಿಗೊಂಡೆಯೊ.. ಎಲ್ಲ ಬೆಂಗುಳೂರಿಲಿ ಒಂದೊಂದು ಉದ್ಯೋಗಲ್ಲಿ ಇದ್ದೋರು ಹೇಳ್ತದು ಗೊಂತಾತು.
ಎಡಪ್ಪಾಡಿಬಾವಂಗೆ ಬೆಂಗುಳೂರಿಲಿ ಯೇವತ್ತೂ ಸಿಕ್ಕುತ್ತ ಜೆನಂಗೊ ಅಡ! ಪ್ರೀತಿಲಿ ಅಷ್ಟು ದೂರಂದ ಬಯಿಂದವಿದಾ..!
ಮಾತಾಡಿಗೊಂಡು ಇದ್ದ ಹಾಂಗೇ ಇರುಳಾತು, ಒಳದಿಕೆ ಬಟ್ಟಮಾವ ಸೇರಿ ಒಂದು ಗೆಣವತಿ ಪೂಜೆ ಮಾಡಿಕ್ಕಿ ಹೆರ ಬಂದವು.
ಊಟ ಆತು. ಊಟ ಆಗಿ ಬೆಂದಿಗೆ ಕೊರವಲೆ ಸುರುಮಾಡಿದ್ದು – ಸೆಕೆ ಇದಾ, ಬೇಗ ಬೆಂದಿಗೆ ಕೊರವದು ಬೇಡ ಹೇಳಿಗೊಂಡು.
ಎಂಗಳ ಗುರಿಕ್ಕಾರ್ರು ಆ ವಿಶಯಲ್ಲಿ ಒಳ್ಳೆತ ಚುರುಕ್ಕು!
~
ಬೆಂದಿಗೆ ಕೊರವದು ಹೇಳಿತ್ತುಕಂಡ್ರೆ ಜೆಂಬ್ರದ ತೆಯಾರಿಯೂ ಅಪ್ಪು, ಜೆಂಬ್ರದ ಅತ್ಯಂತ ಆನಂದದಾಯಕ ಸಮೆಯವೂ ಅಪ್ಪು!
ಒಂದು ಜೆಂಬ್ರದ ನೆರೆಕರೆಗೆ ನೆಂಟ್ರ ಪರಿಚಯ ಅಪ್ಪದು, ನೆಂಟ್ರಿಂಗೆ ಇಷ್ಟರು, ಇಷ್ಟರಿಂಗೆ ಆಪ್ತರು – ಎಲ್ಲರನ್ನೂ ಪರಸ್ಪರ ಪರಿಚಯ ಅಪ್ಪ ಸಮೆಯ.
ಅದರೊಟ್ಟಿಂಗೆ ಎಲ್ಲೊರೂ ಸಾವಕಾಶಲ್ಲಿ ಕೂದುಗೊಂಡು ತಂದತರಕಾರಿಯ ಕೊರದು ಮರದಿನದ ಜೆಂಬ್ರವ ಸುದಾರುಸಲೆ ಸಕಾಯಮಾಡ್ತ ಸಮೆಯ..
ಮದಲಿಂಗೇ ಹಾಂಗೆ – ಹತ್ತರಾಣೋರ ಜೆಂಬ್ರಕ್ಕೆ ಸೂಟೆಕಟ್ಟಿಗೊಂಡು, ಪೀಶಕತ್ತಿ ಸೊಂಟಲ್ಲಿ ಕುತ್ತಿಗೊಂಡು ಹೆರಡುಗು..
ಜೆಂಬ್ರದ ಮನೆಲಿ ದೊಂದಿಯೋ, ಗೇಸುಲೈಟೋ – ಮತ್ತೊ° ಹೊತ್ತುಸಿಗೊಂಡು, ಸೇರಿದ ಎಲ್ಲೊರುದೇ ತರಕಾರಿ ಹರಗಿ ಮಡಗಿಯೊಂಡು ಕೊರವದು..
ನಾಕು ಜೆನರ ಎದುರೇ ಮಡಗಿ ಕೊರೆತ್ತ ಕಾರಣ ಶುಭ್ರ, ಸ್ವಚ್ಛ, ಬೇಗ ಕೊರದಕ್ಕು!
ಸಾಮಾನ್ಯ ಒಂದು ಮದುವೆಯ ಗೌಜಿ ನವಗೆ ಬೆಂದಿಗೆ ಕೊರವಗಳೇ ನೋಡ್ಳೆ ಸಿಕ್ಕುತ್ತು…
ಒಬ್ಬ ಇನ್ನೊಬ್ಬಂಗೆ ಬತ್ತಿ ಮಡಗಿ, ಆ ಬತ್ತಿ ಮತ್ತೊಬ್ಬನ ಎಣ್ಣೆ ಹೀರಿ, ಆ ಎಣ್ಣೆಗೆ ಮಗದೊಬ್ಬ ಜಾರಿ, ಬೇರೊಬ್ಬನ ಮೇಲೆ ಬಿದ್ದು, ಹತ್ತರಾಣವನ ಹಲ್ಲು ಮುರುದು.. ಒಟ್ಟಾರೆ ಏನೇನಾರು ಅಪ್ಪದದು ಅಕೇರಿಗೆ!
ಪಿಡಿಗೆ ಹಾಕಿದ ಕಳದ ಹಾಂಗೇ, ಬೆಂದಿಗೆಕೊರೆತ್ತ ಕಳ ಒಂದು ಗಮ್ಮತ್ತಿನ ಜಾಗೆಯೇ! ಅಲ್ಲಿ ಕೇಳಿದ ಶುದ್ದಿ ಅಲ್ಲಿಗೆ ಮಾಂತ್ರ! ಅಲ್ಲಿ ಮಾಡಿದ ನೆಗೆ ಅಲ್ಲಿ ಮಾಂತ್ರ..
ಹಾಂಗಾಗಿ, ನಿಜಜೀವನಲ್ಲಿ ಕೆಲವು ಬಯಂಕರ ಗಂಬೀರ ಇಪ್ಪ ಜೆನಂಗಳೂ ಬೆಂದಿಗೆಕೊರೆತ್ತ ಕಳಲ್ಲಿ ಮಕ್ಕಳಾಂಗೆ ಅಪ್ಪದಿದ್ದು.
– ಗೌಜಿ, ಗಮ್ಮತ್ತು, ಬೊಬ್ಬೆ, ಗಲಾಟೆ, ನೆಗೆ, ತಮಾಷೆ! ತರಕಾರಿ ಮುಗುದರೂ ನೆಗೆ ಮುಗಿಯ..!
ತರಕಾರಿ ಕೊರವಲ್ಲಿ ಮಾತಾಡುವಗ ಸಸ್ಯಾಹಾರ, ಮಾಂಸಾಹಾರ – ಎಲ್ಲವುದೇ ಬಕ್ಕು ಹೇಳಿ ಎಡಪ್ಪಾಡಿಬಾವನೇ ಹೇಳುಗು, ಮದುವೆಂದ ಮದಲು!
ನಮ್ಮ ಊರಿಲಿ ಎಲ್ಲಿಗೇ ಹೋದರೂ, ಜನಂಗೊ ಮಾಂತ್ರ ಬೇರೆಬೇರೆ, ಬೆಂದಿಗೆ ಕೊರವ ವಿಧಾನ ಇದುವೇ ಇರ್ತು.
ತೋಟದ ಕೆಲಸದ ಬಚ್ಚಲಿನ ಇರುಳು ಕೂದಂಡು ಬೆಂದಿಗೆಕೊರವದಲ್ಲದ, ಹಾಂಗೆ ರಜರಜ ಹೊಡಿ ಹಾರುಸುತ್ತವುದೇ! ಒರಕ್ಕು ಬಿಡ್ಳೆ.
ಎಡೆಲಿ ಬತ್ತ ಒಂದು ಚಾಯ ಆ ಬೆಂದಿಗೆಕೊರವಗ ಅಮೃತದ ಹಾಂಗೆ ಕಾಣ್ತು!
~
ಅದಿರಳಿ, ಹಾಂಗೇ ಒಂದು ಕಳ ಅಲ್ಲಿಯೂ ತಯಾರಾತು! ತಂದ ಪೀಶಕತ್ತಿ ಬಿಡುಸಗೊಂಡು ಪುಳ್ಳರುಗೊ ಕೂದಾತು.
ಎಷ್ಟರ ಅಟ್ಟಣೆ ಹೇಳ್ತದು ಅಡಿಗೆಯಣ್ಣ ಬಂದು ಹೇಳಿದವು, ನಮ್ಮ ಸರುವೀಸು ಸುರು ಆತು!!
ಬೆಂದಿಗೆ ಕೊರವ ಗೌಜಿ ಸುರು ಆತು! ದೊಡ್ಡಬಾವ ದೊಡ್ಡಮೆಟ್ಟುಕತ್ತಿಲಿ ಕೂದಂಡು ದೊಡ್ಡದೊಡ್ಡ ಮುಂಡಿಯ ಕೆಣಿಮಾಡಿ-ಮಾಡಿ ಹಾಕಿದ – ಎಂಗೊ ಕೊರದು ಮುಗುಶಿದಷ್ಟೂ.
ಎಂಗೊ ಯೇವತ್ತಿನಂತೆ ಮೆಟ್ಟುಕತ್ತಿಯ ಬುಡಲ್ಲಿ ಕೂದೆಯೊ – ಮೆಟ್ಟುಕತ್ತಿಯ ಹತ್ತರಂದ ಸುರುಆದ ಸಾಲು ತುಂಬ ಉದ್ದ ಇತ್ತು. ಅತ್ಲಾಗಿ ಬೀನ್ಸೋ – ತೊಂಡೆಯೋ – ನಾನಾ ತರಕಾರಿಗೊ – ಎಲ್ಲ ಕೊರವಲೆ ಸುರುಮಾಡಿತ್ತಿದ್ದವು.
ಬೈಲಿನ ಎಲ್ಲೋರ ಕಂಡಾಂಗೆ ಆಗಿಯೊಂಡು ಇತ್ತು!
ಅತ್ಲಾಗಿ ಅತ್ಲಾಗಿ ಹೋದ ಹಾಂಗೆ ಬೆಂಗುಳೂರಿನ ಸುಮಾರು ಚೆಂಙಾಯಿಮಾಣಿಯಂಗಳೂ ಕೂದಿತ್ತಿದ್ದವು.. ಯೇವತ್ತೋ ಬಿದ್ದು ಒರಗಲಾವುತಿತು ಅವಕ್ಕೆ, ಆದರೆ ಬೆಂದಿಗೆ ಕೊರವದರ ವಿಶೇಷವಾಗಿ ಭಾಗವಹಿಸುಲೆ ಹೇಳಿಗೊಂಡು ಕೂದುಗೊಂಡಿದವು.
ಕೆಲವೆಲ್ಲ ಕೊರವಲೆ ಕಲ್ತುಗೊಂಡು, ಕೆಲವೆಲ್ಲ ಒರಗುಲೆ ಸುರುಮಾಡಿಗೊಂಡು, ಕೆಲವೆಲ್ಲ ಬಂದಬಚ್ಚಲು ತಣಿಶಿಗೊಂಡು, ಕೆಲವೆಲ್ಲ ಚಾಯ ತಣಿಶಿಗೊಂಡು ಕೂದಂಡು ಮಾತಾಡಿಗೊಂಡು ಇತ್ತಿದ್ದವು.
ಏನೇ ಆಗಲಿ, ಕಳಲ್ಲಿ ಕೂಯಿದವನ್ನೇ – ಹೇಳಿ ದೊಡ್ಡಬಾವಂಗೆ ಕೊಶಿ ಆದ್ದು!
~
ಸುರೂವಿಂಗೆ ಮೌನಲ್ಲಿ ಸುರು ಆದ್ದದು ಕ್ರಮೇಣ ಒಳ್ಳೆ ಏರುಸ್ವರಕ್ಕೆ ಎತ್ತಿತ್ತು, ಬೊಬ್ಬೆ..!
ಎಲ್ಲೇ ಹೋಗಿ ಬೆಂದಿಗೆ ಕೊರೆಯಲಿ, ಬೈಲಿನೋರ ಬೊಬ್ಬೆಗೆ ಮಿತಿ ಇಲ್ಲೆ ಹೇಳಿ ಅನುಸುವಷ್ಟಕೆ..!
ದೊಡ್ಡಬಾವಂಗೆ ಆ ಊರಿನ ಗಾಳಿ-ಮಣ್ಣು-ನೀರು ಮದಲೇ ಪರಿಚಿತ, ಕೇಳೆಕ್ಕೊ!
ಗುಣಾಜೆಮಾಣಿಗೆ ಹೊರನಾಡಿಂದ ಓಮಿನಿಲಿ ಬಪ್ಪಗ ಕೆಮಿಗೆ ಗಾಳಿ ನುಗ್ಗಿದ್ದು, ಕೇಳೆಕ್ಕೊ!
ಬೆಂಗುಳೂರು ಮಾಣಿಯಂಗೊಕ್ಕೆ ಒಂದರಿ ಬಾಯಿ ಒಡವಲೆ ಅವಕಾಶ ಸಿಕ್ಕಿದ್ದು, ಕೇಳೆಕ್ಕೊ!
ಗುರುವಾಯನಕೆರೆ ಪರಿಸರದೋರಿಂಗೆ ಅವರದ್ದೇ ಊರು – ಕೇಳೆಕ್ಕೊ!
ಬೊಬ್ಬೆ ಹೊಡದರೆ ಬೈವಲೆ ಶಾಂಬಾವಂಗೆ ಹತ್ತರೆ ಆಶಕ್ಕ ಇತ್ತಿಲ್ಲೆ, ಕೇಳೆಕ್ಕೊ!
ಅಜ್ಜಕಾನ ಬಾವಂಗೆ ಬೆಂಗುಳೂರಿನ ಚೆಂಙಾಯಿಗಳ ಮೊದಲೇ ಗುರ್ತ, ಕೇಳೆಕ್ಕೊ!
ಒಪ್ಪಣ್ಣಂಗೆ ಹತ್ತರಾಣ ಚೆಂಙಾಯಿಗೊ ಒಟ್ಟಿಂಗೆ ಸಿಕ್ಕಿದವು, ಮತ್ತೆ ಕೇಳೆಕ್ಕೊ!!
ಬೊಬ್ಬೆಯೋ ಬೊಬ್ಬೆ!
ಬೈಲಿನೋರು ಮಾಂತ್ರ ಅಲ್ಲ, ಬೆಂಗುಳೂರಿನೋರೂ ಸೇರಿತ್ತಿದ್ದವು ಇದಾ, ಬೊಬ್ಬಗೆ..
ಪಷ್ಟ್ಳಾಸು ಚಾಯ ತಪ್ಪಗ ಅಂತೂ ಎಲ್ಲೊರದ್ದೂ ಒರಕ್ಕು ಒಂದರಿ ಬಿಟ್ಟಿದು..!
ಹೋಲಿನ ಮಾಡು ಹಾರಿತ್ತೋ ಹೇಳಿ ಯೆಜಮಾನ ಎರಡು ಸರ್ತಿ ಬಂದು ನೋಡಿಕ್ಕಿ ಹೋದನಡ, ಶೇಡಿಗುಮ್ಮೆ ಬಾವನ ಜೋಕು ಹೊಟ್ಟಿತ್ತು!
ನೆಗೆಯೂ ಬಯಿಂದು ಕೆಲವಕ್ಕೆ!
~
ಬೆಂದಿಗೆ ಕೊರವಗ ಕೊರದ್ದರ ತೆಗದುತೆಗದು ಒಂದು ದೊಡ್ಡ ಪಾತ್ರಕ್ಕೆ ಸಮಲುಸೆಕ್ಕು, ಅಲ್ಲದೋ..
ಕೊರದು ಹಾಕುತ್ತಷ್ಟೇ – ಬಾಚುವ ಕೆಲಸ ಮುಖ್ಯ..
ಬಾಗ ಎಷ್ಟಾತು ಹೇಳ್ತದರ ಅಂದಾಜು ಮಾಡಿಗೊಂಡು, ಅಡಿಗೆಅಣ್ಣನತ್ರೆ ವಿಚಾರುಸಿಗೊಂಡು, ಯೇವಗ ಯೇವದರ ಕೊರವದರ ನಿಲ್ಲುಸೆಕ್ಕು – ಹೇಳಿಗೊಂಡು ವಿಚಾರಮಾಡ್ತ ಕೆಲಸ!
ಕುಶಾಲಿಂಗೆ ಅವರ ಬಾಚ° ಹೇಳುದು..
ಸಣ್ಣ ಕಳಕ್ಕೆ ಒಬ್ಬೊಬ್ಬ ಬಾಚ ಸಾಕಾರೂ, ದೊಡ್ಡದಕ್ಕೆ ಜಾಸ್ತಿ ಬೇಕಾವುತ್ತು.
ಬೈಲಿನೋರಿಂಗೆ ಆ ಕೆಲಸ ಕಷ್ಟ ಆಗ, ಆದರೆ ಈ ಸರ್ತಿ ಬಾಚ ಆಗಿ ಇದ್ದೋರಲ್ಲಿ ಒಬ್ಬ° ಬೆಂಗುಳೂರಿನ ಮಾಣಿ!
~
ಬೆಳಿಬೆಳಿ ಮೈಕೈ ಇದ್ದೊಂಡು, ಪ್ರಿಜ್ಜಿನ ಒಳದಿಕೆ ಕೂದುಗೊಂಡು, ಚೆಂದಕೆ ಆರಾಮಲ್ಲಿ ಬೆಳದ ವೆಗ್ತಿಯ ಹಾಂಗೆ ಕಂಡುಗೊಂಡಿತ್ತು.
ಜಾಸ್ತಿ ಶ್ರಮದ ಕೆಲಸ ಮಾಡಿ ಅರಡಿಯ ಮಾಣಿಗೆ – ಆದರೂ ಉತ್ಸಾಹ ಇತ್ತು.. ಬೈಲಿನ ಎಲ್ಲ ನೆಗೆಗೊ ಅರ್ತ ಆಗಿಯೊಂಡು ಇತ್ತಿಲ್ಲೆ, ಆದರೂ ನೆಗೆ ಮಾಡಿಗೊಂಡು ಇತ್ತಿದ್ದ°,
ಬೈಲಿನ ಎಲ್ಲೊರನ್ನುದೇ ಗುರ್ತ ಇತ್ತಿಲ್ಲೆ, ಆದರೆ ಮಾತಾಡುಸಿಗೊಂಡು ಇತ್ತಿದ್ದ°.. ಬಂದೋರ ಪರಿಚಯ ಇತ್ತಿಲ್ಲೆ, ಆದರೆ ಗುರ್ತ ಮಾಡಿಗೊಂಡುಇತ್ತಿದ್ದ°!
~
ಎಂಗೊ ಬೆಂದಿಗೆ ಕೊರವಗ ಮಾತಾಡಿಗೊಂಡೆಯ°- ’ಚೆಲಾ ಈ ಮಾಣಿಯೇ! ಎಷ್ಟು ಉಶಾರಿ..!
ಬೆಂಗುಳೂರಿಲಿ ಇದ್ದಂಡುದೇ ಈ ನಮುನೆ ಕೆಲಸಂಗೊ ಅರಡಿತ್ತಲ್ಲದೋ – ಅರಡಿಯದ್ರೂ ಸಾರ ಇಲ್ಲೆ, ಕಲಿತ್ತ ಉತ್ಸಾಹ ಇದ್ದಲ್ಲದೋ – ಅದು ಮುಖ್ಯ’.. ಹೇಳಿಗೊಂಡು!
ಇವ° ಎಂತರ – ಹೇಳಿ ತಿಳುದೆಯೊ°. ಯೇವದೋ ದೊಡ್ಡ ಕಂಪೆನಿಲಿ ಕೆಲಸ ಅಡ!
ಮೊನ್ನೆ ಇಂಗ್ಳೇಂಡಿಂಗೆ ಹೋಗಿ ಬಂದನಡ, ಬೆಂಗುಳೂರಿಲಿ ಸೊಂತದ ಮನೆ ತೆಗದ್ದನಡ – ಆರು ತಿಂಗಳು ಹಿಂದೆ.
ಸೊಂತ ಕಾರಿದ್ದಡ! ಅಷ್ಟೆಲ್ಲ ಇದ್ದರೂ, ನಮ್ಮೊಟ್ಟಿಂಗೆ ನಮ್ಮವ ಆಗಿ, ಹಳ್ಳಿಕೆಲಸಕ್ಕೆ ಹಳ್ಳಿಯವ ಆಗಿ, ಕೈಕ್ಕಾಲಿಂಗೆ ಮಣ್ಣುಹಿಡುಶಿಗೊಂಡು ಮರಿಯಾದಿ ಮಾಡದ್ದೆ ಸೇರಿದ್ದು ನೋಡಿ ಎಂಗೊಗೆ ಎಲ್ಲ ಕೊಶಿ ಆತು!
ಈ ಮಾಣಿಗೆ ಈ ಕೆಲಸ ಮಾಡ್ಳೆ ಅವಕಾಶ ಸಿಕ್ಕಿದ್ದಕ್ಕೆ ಕೊಶಿ ಇದ್ದಡ.
~
ಬೆಂಗುಳೂರಿಲಿ ಇಪ್ಪದು ಹೇಳಿ ತಲಗೆ ಹೋದ ತಕ್ಷಣ ಹೀಂಗಿರ್ತ ಕೆಲಸ ಕಾರ್ಯಂಗೊ ಮಾಡದ್ದೆ, ದೇವಲೋಕವೇ ಎನ್ನ ಅಪ್ಪನ ಮನೆ – ಹೇಳಿ ತಿಳ್ಕೊಂಬೋರು ನಮ್ಮ ನೆಡುಕೆ ಧಾರಾಳ ಇದ್ದವು.
ಗುರ್ತ ಇಲ್ಲದ್ದೋರ ಮಾತಾಡುಸಿರೆ “ಛೆಕ್,ಹಳ್ಳಿಕ್ರಮ” ಹೇಳಿ ಬೈಕ್ಕೊಂಡು ಕಿರಿಕಿರಿ ಮಾಡಿಗೊಂಬೋರುದೇ ನಮ್ಮ ಒಟ್ಟಿಂಗೆ ಇದ್ದವು.
ಅನಗತ್ಯ ಸ್ಮೈಲು ಕೊಟ್ರೆ ಮರಿಯಾದಿಗೆ ಕೊರತ್ತೆ – ಹೇಳ್ತದರನ್ನೂ ಅಭ್ಯಾಸಮಾಡಿಗೊಂಡೋರು ನಮ್ಮೊಟ್ಟಿಂಗೆ ಇರ್ತವು. ಅವರ ಎಡಕ್ಕಿಲಿ ಇಂತಾ ಅಪುರೂಪದ ಜೆನ ಕಾಂಬಗ ಕೊಶೀ ಅಪ್ಪದಿದಾ.
ನಮ್ಮ ರೂಪತ್ತೆಮಗನೋ ಮತ್ತೊ ಆಗಿದ್ದರೆ ಈಗ ಕುರುಶಿ ಮಡಿಕ್ಕೊಂಡು ಮೊಬಯಿಲು ಒತ್ತುತಿತ, ಮಾತಾಡುಸಿರೆ ಶೇಲೆಮಾಡ್ತಿತ – ಹೇಳಿ ಅಜ್ಜಕಾನಬಾವ ಹೇಳಿದ. ಆ ಮಟ್ಟಿಂಗೆ ಇವನ ಕೊಶಿ ಆತು ಎಂಗೊಗೆ.
ವೆಗ್ತಿಗೆ ಆಸಕ್ತಿ ಮುಖ್ಯ, ಆಸಕ್ತಿ ಉಂಟಪ್ಪದು ಸಂಸ್ಕಾರಂದಾಗಿ, ಸಂಸ್ಕಾರ ಕೊಡುದು ಮನೆಯೋರ ಕರ್ತವ್ಯ, ಆಸಕ್ತಿ ಬಪ್ಪದು ಬಿಡುದು ಆ ವೆಗ್ತಿಯ ಹಕ್ಕು – ಹೇಳಿ ದೊಡ್ಡಬಾವ ದೊಡ್ಡಮೆಟ್ಟುಕತ್ತಿಲಿ ದೊಡ್ಡಮುಂಡಿಯ ಕೆಣಿಮಾಡಿಗೊಂಡು ದೊಡ್ಡಸೊರಲ್ಲಿ ಹೇಳಿದ.
~
ಬೆಂದಿಗೆ ಕೊರದಾತು, ಬಾಚಿ ಆತು. ಮಾಣಿಯ ಕೊಶಿ ಆತು. ಮದುವೆ ಗೌಜಿ ಮುಂದರುತ್ತು. ನೆಡಿರುಳು ಆದಕಾರಣ ಬೊಬ್ಬೆ ನಿಂದತ್ತು. ಜೆನ ಚೆದರಿತ್ತು.
ಮರದಿನದ ಏರ್ಪಾಡಿನ ಬಗ್ಗೆ ಒಂದು ಚರ್ಚೆ ಮಾಡಿಕ್ಕಿ, ಮುಗ್ತಾಯ ಮಾಡಿದೆಯೊ°.
ದೊಡ್ಡಬಾವ ಅಲ್ಲೇ ಎಲ್ಲಿಯೋ ಅವರ ಪೈಕಿ ಮನೆಲಿ ನಿಲ್ಲುತ್ತೆ- ಹೇಳಿಗೊಂಡು ಹೋದ, ಎಂಗೊ ಅಲ್ಲೇ ಹಸೆಬಿಡುಸಿ ಒರಗಿದೆಯೊ°…
ನಿಂಗಳ ಪೈಕಿಯೂ ಆರಾರು ಶೇಲೆಮಾಡಿಗೊಂಡು ಕೂದಿದ್ದರೆ ಎಳದು ನಮ್ಮ ಕಳಕ್ಕೆ ಸೇರುಸಿಗೊಳಿ, ಆತೋ?
ಇಂದಲ್ಲ ನಾಳೆ ನಮ್ಮ ಕಳಕ್ಕೆ ಬಂದೇ ಬಕ್ಕು..
ಒಂದೊಪ್ಪ: ಹಳ್ಳಿಕೆಲಸಂಗಳ ಹಳ್ಳಿಲಿಪ್ಪೋರೇ ಮಾಡೆಕ್ಕು ಹೇಳಿ ಏನೂ ಇಲ್ಲೆ. ಪೇಟೆಕೆಲಸಂಗಳ ಹಳ್ಳಿಯೋರೂ ಮಾಡ್ತವಿಲ್ಲೆಯೋ..!!
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಬೆಂದಿಗೆ(ಕುಂಬ್ಳೆ ಸೀಮೆ 🙂 🙂 🙂 🙂 ) ಕೊರವ ವಿಷಯ ತುಂಬಾ ಚೆಂದಕ್ಕೆ ಮೂಡಿ ಬಯಿಂದು…..
ಎಂಗಳ ಸೀಮೆಲಿ(ವಿಟ್ಳ) ಇದಕ್ಕೆ ಮೇಲಾರಕ್ಕೆ ಕೊರವದು ಹೇಳಿ ಹೇಳ್ತವು…ಮದುವೆ ಗೌಜಿಗಿಂತಲು ಮೇಲಾರಕ್ಕೆ ಕೊರವ ಆ ದಿನ ತುಂಬಾ ವಿನೋದಮಯವಾಗಿರ್ತು…..
ಎಂಗಳ ಹೊಡಿಲಿ ಕಾಣಿಚ್ಹಾರು ಶೀನಣ್ಣ ಬೆಂದಿಗೆ ಕೊರವಲೆ ಬಂದರೆ ಕೇಳುದು ಬೇಡ…
ನೆಗೆ ಮಾಡಿ ಹೊಟ್ಟೆ ಹುಣ್ಣಾವುತ್ತು…ಅಷ್ಟುದೆ ನೆಗೆ ಬರುಸುತ್ತವು…..ಅವರ ಬಾಯಿಗೆ ಸಾದಾರಣಕ್ಕೆ ಆರುದೇ ಕೋಲು ಹಾಕುತ್ತವಿಲ್ಲೆ…..ಮಾತಾಡುವ ಮೊದಲು ರಜಾ ಆಲೋಚನೆ ಮಾಡ್ತವು 🙂 …… ಮಾತಾಡಲೆ ಸುರು ಮಾಡಿದರೆ ನಗೆ ಪಟಾಕಿಯೆ ಸರಿ…..
ಒಂದು ಸಣ್ಣಘಟನೆ ನೆನಪಾವುತ್ತ ಇದ್ದು:
ಸುಮಾರು ಎರಡು ವರ್ಷ ಹಿಂದೆ ನೆಡದ್ದು….ಅರದೋ ಮದುವೆ ಮುನ್ನಣ ದಿನ ಮೇಲಾರಕ್ಕೆ ಕೊರವಗ ಹೀಳಿದ ನಿಜ ಘಟನೆ……
ಶೀನಣ್ಣ ಒಂದರಿ ಹೀಂಗೇ ಕಾರಿಲಿ ಮನೆಂದ ಪೇಟೆಗೆ ಹೊಯ್ಗೊಂಡಿತ್ತಿದವಡ್ದ…
ಸರ್ವೀಸು ಕಾರು ಆದ ಕಾರಣ ತುಂಬಾ ರಶ್ ಇತ್ತಡ….ಕೊರಳು ತಿರುಗುಸುಲೇ ಜಾಗ ಇಲ್ಲೆ….ಅಷ್ಟಪ್ಪಗ ಇವರ ಕಾಲು ಒಂದೇ ಸಮ ತೊರುಸುಲೆ ಶುರು ಆತಡ….ಎಷ್ಟು ತೊರುಸಿದರೂ ಕಡಮ್ಮೆ ಆಗದ್ದೆ ಮತ್ತೆ ಮತ್ತೆ ತೊರುಸಿದನಡ್ಡ….
ಕೊನೆಗೆ ಹತ್ತರೆ ಕೂದ ಹೆಮ್ಮಕ್ಕ ಬೈದ ಮೆಲೆಯೇ ನಿಜ ಸಂಗತಿ ಗೊಂತಾದ್ದು 🙂 🙂 🙂 😀 …
ಅದು ಹೇಳಿಯಪ್ಪಗ, ಅಲ್ಲಿಪ್ಪೋರಿಂಗೆ ನೆಗೆ ಮಾಡಿ ಮಾಡಿ ಸಾಕತು,,……
ಹಾಂಗಾಗಿ ಶೀನಣ್ಣಂಗೆ ಎಂಗಳ ಊರಿಲಿ ಭಾರಿ ಡಿಮಾಂಡು…
ಬಾಲಣ್ಣ..
ಒಂದರಿ ಇದೇ ನಮುನೆಯವು ಎಂಗಳ ಊರಿಲಿ ಎಂತ ಹೇಳಿದ್ದು ಗೊಂತಿದ್ದಾ..?
ಶಿಬಿಕ್ಕ್ಲೆ, ಇಲ್ಲಿ ಬೇಡ, ಸಿಕ್ಕಿಪ್ಪಗ ಹೇಳ್ತೆ.. 😉
ಶುದ್ದಿ ಲಾಯ್ಕಾಯಿದು. ಆ ಗೌಜಿ-ಗಮ್ಮತ್ತು ನಿಜಕ್ಕೂ ಬೇರೆಲ್ಲಿಯೂ ಸಿಕ್ಕಪ್ಪ. ಕೂಸುಗೊಕ್ಕೆ ಮನೆ ಜೆಂಬ್ರ ಇದ್ದರೆ ಮಾತ್ರ ಸಿಕ್ಕುಗಷ್ಟೆ ಇದು. ಬೇರೆ ಕಡೆಂಗೆ ಕೊರವಲೆ ಗೆಂಡುಮಕ್ಕಳೇ ಹೋಪದಲ್ಲದಾ.. ಇರುಳಾಣ ಹೊತ್ತಾದ ಕಾರಣ ಈ ಕ್ರಮ ಬಂದದಾದಿಕ್ಕು.
ಎಂಗಳತ್ಲಾಗಿ ‘ಮೇಲಾರಕ್ಕೆ ಕೊರವಲೆ ಹೋಪದು’ ಹೇಳಿ ಹೇಳುಗು.
ಈ ಬೆಳಿಮಾಣಿಯ ಹಾಂಗೆ ಸರಳವಾಗಿಪ್ಪವ್ವು ವಿರಳವೇ.
ಒಂದೊಪ್ಪವೂ ಲಾಯ್ಕಾಯಿದು.
ನಿಜವಾಗಿಯು ಒಪ್ಪಣ್ಣಣ್ಣ ಬೆಂದಿಗೆ ಕೊರವಗ ಇಪ್ಪ ಮಜ ಬೇರೆಯೆ… ಎನಗೆ ತುಂಬ ಬೆಂದಿಗೆ ಕೊರವಲೆ ಹೋಗಿ ಗೊಂತಿಲ್ಲದ್ರು ಕೂಡ ಮದುವೆಂದ ಹೆಚ್ಚಿಗೆ ಬೆಂದಿಗೆ ಕೊರವಲೆ ಆಸಕ್ತಿ… ಹಾಂಗೆ ಇಲ್ಲಿಪ್ಪ ಬೆಳಿ ಮಾಣಿಯ ಮೆಚ್ಚೆಕ್ಕಾದ್ದೆ…
ಒಪ್ಪಣ್ನೊ ಲಾಯ್ಕಾ ಆಯಿದು ಲೇಖನ. ಆನು ಎಡಪ್ಪಾಡಿ ಬಾವನ ಮದುವೆ ಮಿಸ್ ಮಾಡಿಕೊಂಡೆ ಮಾರಾಯ.. ಎಲ್ಲರೊಂದಿಗೂ ಬೆರವ ಒಂದು ಒಳ್ಳೆ ಅವಕಾಶ ತಪ್ಪಿ ಹೋತು….
ಮದುವೆಂದಲೂ ಗೌಜಿ…ಅದರ ಅತ್ತಾಳ ಎಂತ ಹೇಳ್ತೆ…
ಅಂದ ಹಾಂಗೆ… ಸಂಸಾರ ಜೀವನಕ್ಕೆ ಕಾಲಿಟ್ಟ ಎಡಪ್ಪಾಡಿ ಬಾವಯ್ಯಂಗೆ ಎನ್ನ ಶುಭಾಶಯ….
ಹೇ ಹೇ ..
ಗೊಂತಿದ್ದು ಹಸಿಮೆಣಸು ಕೊರದು ….ಒಳ್ಳೆ ಗಮ್ಮತ್ತಿರ್ತು…ನಿಂಗಳುದೆ ಒಂದರಿ ನೋಡಿ ಆತಾ…ಖಾರದ ಹಸಿಮೆಣಸು ಒಂದು kg ಕೊರದು. 😀
ಒಪ್ಪಣ್ಣ೦ಗೆ ಸಣ್ಣಾದಿಪ್ಪಗ ಬೆ೦ದಿಗೆ ಕೊರವಗ ಹಸಿಮೆಣಸು ಕೊರದ್ದು ನೆ೦ಪಿದ್ದಾ?
ಡಾಗ್ಟ್ರೇ..
ಏಕೆ! ನೆಂಪಿದ್ದಪ್ಪಾ ನೆಂಪಿದ್ದು, ಅದೆಲ್ಲ ಮರಗೋ!?
ಕೊರವಲೆ ಬಂದ ಜೋರಿನಮಾವಂದ್ರು ಹಿಂದೆಹಿಂದೆ ಜಾರಿ, ಮೆಣಸಿನಹಾಳೆ ಮುಂದೆಮುಂದೆ ಜಾರಿ ಪಾಪದ ವಟುಗಳಕೈಗೆ ಎತ್ತುದು ಇಪ್ಪದೇ, ಎಲ್ಲಿಗೆ ಹೋದರೂ!
ನಿಂಗೊ ಕೊರೆಯದ್ರೆ ಈಗಳೇ ಕೊರೆಯಿ, ಮತ್ತೆ ಸಿಕ್ಕ ಆ ಅವಕಾಶ! 😉
lekhana odigondu hopaga enna magala maduve munnana dinada nempatu
ಕೆಲವು ತಿಂಗಳ ಹಿಂದೆ ಎಂಗಳೂ ಮನೆಲಿ ಅಣ್ಣನ ಸಟ್ಟುಮುಡಿಗೆ ಎಲ್ಲರೂ ಒಟ್ಟು ಸೇರಿ ಬೆಂದಿಗೆ ಕೊರದ್ದೆಯ… ಎಂಗೊ ಅಕ್ಕ ತಂಗೆಕ್ಕೊ ಮದುವೆ ಆಗಿ ಗಂಡನ ಮನೆಗೆ ಹೋದೋರು,ಅಪರೂಪಲ್ಲಿ ಸೇರಿದ ಕಾರಣ ಬಾಯಿಲಿಯೇ ಕೊರದ್ದು…
ಆದರೆ ಸಣ್ಣದಿಪ್ಪಗ ಮನೆಲಿ ಯಾವುದೇ ಪೂಜೆಗೊ,ಹಬ್ಬಂಗೊ ಇದ್ದರೂ ಎಲ್ಲರಿಂದಲೂ ಮೊದಲು ಉದಿಯಪ್ಪಗ ಅಜ್ಜಿ ಮೆಟ್ಟುಕತ್ತಿ ಹಿಡುಕ್ಕೊಂಡು ಕೂದುಗೊಂಡಿತ್ತಿದ್ದವು.. ಒಳುದೋರೆಲ್ಲಾ ಅಜ್ಜಿಯ ಸುತ್ತಲೂ ಕೂದುಗೊಂಡು ಅವು ಹೆಳಿದ ಹಾಳಿತ್ತಕ್ಕೆ ತರಕಾರಿ ತುಂಡು ಮಾಡಿಗೊಂಡಿತ್ತಿದ್ದೆಯ… ದೊಡ್ಡೊರು ಚೂರಿ ಹಿಡುಕ್ಕೊಂಡು ಕೆಲಸ ಮಾಡಿದರೆ ಮಕ್ಕೊ ತೊಟ್ಟು ತೆಗವದು ಇತ್ಯಾದಿ ಚೂರಿ ಉಪಯೋಗ ಮಾಡದ್ದೆ ಮಾಡುವ ಕೆಲಸ ಮಾಡುದು…. ಅಜ್ಜಿಯ ಸೊಸೆಯಕ್ಕ ಉಪ್ಪು ಮೆಣಸು ಹಾಕುದು….
ಎಲ್ಲದರದ್ದೂ ಯಜಮಾಂತಿ ಎಂಗಳ ಮುದ್ದಿನ ಅಜ್ಜಿ… 🙂
ಈ ಲೇಖನ ಓದಿ ಸಣ್ಣದಿಪ್ಪಗಣ ನನಪ್ಪು ಪುನಃ ಬಂತು…ಎಂಗೊ ಎಲ್ಲರೂ ಸೇರಿ ಮಾಡಿಗೊಂಡಿದ್ದ ಗಲಾಟೆ ನೆಂಪಾತು….
ಲೇಖನ ಬರದೋರಿಂಗೆ ಧನ್ಯವಾದಂಗ….
ಒಪ್ಪಣ್ಣನ ಬೆಂದಿಗೆ ಕೊರವ ಲೇಖನ ಚೆಂದಲ್ಲಿ ಬಯಿಂದು. ಬೆಂದಿಗೆ ಕೊರವಗ ಸಿಕ್ಕುವ ಕೊಶಿ ಮತ್ತೆಲ್ಲಿಯೂ ಸಿಕ್ಕ. ಇತ್ತೀಚೆಗೆ ಪೇಟೆಗಳಲ್ಲಿ ಮದುವೆ ಹಾಲ್ ಗಳಲ್ಲಿ ಜೆಂಬ್ರಂಗೊ ನೆಡವಗ ಮುನ್ನಾಳ ದಿನಾಣ ಈ “ಬೆಂದಿಗೆ ಕೊರವ ಗಮ್ಮತ್ತು” ಇಲ್ಲದ್ದೆ ಆವುತ್ತಾ ಇದ್ದು. ಸುದರಿಕೆಗೆ ಜವ್ವನಿಗರು, ಸರಿಯಾದ ಜೆನಂಗೊ ಸಿಕ್ಕದ್ದೆ, ಕೇಟರಿಂಗಿನವಕ್ಕೆ ಹೇಳಿ ಜೆಂಬ್ರ ಸುದಾರುಸೆಕಾಗಿ ಬತ್ತು. ಬೆಂದಿಗೆ ಕೊರವಲೆ, ಊಟಕ್ಕೆ ಬಡುಸಲೆ ನಮ್ಮವು ಸಿಕ್ಕದ್ದೆ ಆರಾರಿಂಗೋ ಹೇಳೆಕಾಗಿ ಬತ್ತು. ಮದುವೆ ಮನೆಲಿ ಅತ್ಮೀಯತೆ ಕಡಮೆ ಆವುತ್ತಾ ಇದ್ದು ಹೇಳಿ ಹೇಳಲೆ ಬೇಜಾರು ಆವುತ್ತಾ ಇದ್ದು. ಮಾವಂದ್ರ, ಭಾವಂದ್ರ, ಅತ್ತೆ, ಅತ್ತಿಗೆಕ್ಕಳ, ಅಪ್ಪಚ್ಚಿ, ದೊಡ್ಡಂಪ್ಪಂದ್ರ …… ಎಲ್ಲ ನೆಂಟ್ರ ಪ್ರೀತಿ ವಿಶ್ವಾಸ, ಸಂಬಂಧ ಬೆಳವಲೆ, ಅವಕ್ಕೆಲ್ಲ ಒಟ್ಟು ಸೇರಲೆ ಇಪ್ಪ ಒಳ್ಳೆ ಜಾಗೆ ಜೆಂಬ್ರದ ಮನೆ. ಈಗಾಣ ಮಕ್ಕೊ, ಜವ್ವನಿಗರು/ಜವ್ವನ್ತಿಗೊ ಎಲ್ಲೋರು ಮುಂದೆ ಬನ್ನಿ, ಜೆಂಬ್ರಲ್ಲಿ ಭಾಗವಹಿಸಿ, ಸುದರಿಕೆಲಿ ಸಹಕರಿಸಿ ಅದರ ಕೊಶಿ ಅನುಭವಿಸಿ.
lekhana odi kp ya maduveya nodida hange aatu.vaddhu vararige aashivavada……
ಜೆಂಬಾರಂಗಳಲ್ಲಿ ಬೆಂದಿಗೆ ಕೊರವಲೆ ಕೂಪದು ಹೇಳಿರೆ ಒಂದು ಕೊಶಿಯೆ. ಅಲ್ಲಿ ಸಿಕ್ಕುವ entertainment ಬೇರೆ ಎಲ್ಲೂ ಸಿಕ್ಕ. ಎಲ್ಲರ ಬೊಬ್ಬೆ, ಎಡೆಲಿ ಚಾಯ, ಹೊತ್ತು ಹೋದ್ದೇ ಗೊಂತಾಗ. ಅಕೇರಿಗೆ ಹಸಿ ಮೆಣಸು ಕೊಚ್ಚಲೆ ಮಾತ್ರ ಜೆನ ಸಿಕ್ಕುವದು ಕಷ್ಟ. ಒಂದು ಜೆಂಬಾರಲ್ಲಿ ಎಂಗಳ ಒಬ್ಬ ಭಾವಯ್ಯನ ಬೆಂದಿಗೆ ಕೊರವಲೆ ಎಳಕ್ಕೊಂಡೆಯೊ. ಅವ ಆದರೋ mathematics ಮಾಶ್ಟ್ರು. ಪುಲಾವಿಂಗೆ ಕೇರೇಟ್ ಕೊರವಲೆ ಸುಮಾರು ಒಂದು ಒಂದುವರೆ ಇಂಚು ಉದ್ದ ಇರಲಿ ಹೇಳಿದೆಯೊ. ಅವ ಸ್ಕೇಲ್ ಹುಡುಕ್ಕದ್ದು ಎಂಗಳ ಭಾಗ್ಯ. ಕೈ ಬೆರಳು ತೋರಿಸಿ “ಇಷ್ಟು ಉದ್ದ” ಇರಲಿಯೋ ಹೇಳಿ ಅವ ಕೇಳಿ ಅಪ್ಪಗ ಅಕ್ಕು ಹೇಳಿದೆಯೊ. ಪತಿಯೊಂದು ತುಂಡು ಮಾಡೆಕ್ಕಾರೂ ಅವ ಬೆರಳಿನ ಉದ್ದ ಲೆಕ್ಕ ಹಾಕಿಂಡೇ ಕೊರವದು ನೋಡಿ ಎಂಗೊಗಂತೂ ತಮಾಷೆ.
ಜೆಮ್ಬ್ರಕ್ಕೆ ಬೆಂದಿಗೆ ಕೊರವಲೆ ಬಾರದ್ದವಕ್ಕೆ ಅದರ ಗಮತ್ತುದೇ ನಷ್ಠವೇ….ಗಮ್ಮತ್ತು ಮಾಡ್ಲೆ ಇನ್ನಾಣ ಜೆಮ್ಬ್ರಂಗಳ ಬಿಡೆಡಿ ಆತೋ…
ಒಪ್ಪಣ್ಣ, ಶುದ್ದಿ ಬೆಂದಿಗೆ ಕೊರದು ಚೆಂದಕ್ಕೆ ಸಾಲಾಗಿ ಮಡುಗಿದ ಹಾಂಗೆ ಆಯಿದು… ಈ ಬೆಂಗಳೂರಿನ ಬೆಳಿ ಮಾಣಿಯ ಬಗ್ಗೆ ಶುದ್ದಿ ಓದಿ, ನೀನು ಕೊಟ್ಟ ವಿವರವುದೇ ನೋಡಿ… ಸುಮಾರು ಜೆನ ಕನ್ಯಾ ಪಿತೃಗಳುದೆ, ಕನ್ಯೆಯರುದೆ.. ಎಡಪ್ಪಾಡಿ ಭಾವಂಗೆ ಮಿಂಚಂಚೆಯೂ, ಫೋನೂ ಮಾಡಿ ಅವನ ಸಮ್ಮಾನದ ಊಟ ಉಂಬಲೆ ಬಿಡದ್ದ ಹಾಂಗೆ ಆಯಿದಡ್ದ…
ಅದರ ಎಡೆಲಿ ಅಜ್ಜಕಾನ ಭಾವನ ಶಿಫಾರಸು ಬೇರೆ… ಬೆಳಿಮಾಣಿ ಬಾರಿ ಉಷಾರಿತ್ತಿದ್ದ… ಹೇಳಿ… ಅಜ್ಜಕಾನ ಭಾವನ ನಂಬರ್ ಕೊಟ್ಟರಕ್ಕ ಹೇಳಿ ಕಾಣ್ತು ಬೆಳಿ ಮಾಣಿಯ ಬಗ್ಗೆ ವಿವರ ಹೇಳುಲೆ… ಆಗದಾ ಒಪ್ಪಣ್ಣಾ?
Idella manushyara dhoraNeya mele avalambisiddu heLi kantenage. Pete li kelasa madta ipporu hallige bandippaga intha kelasakke asakthi thorusiroo esto ena antha asakthige thanneererachuvoroo irthavu.
Bangalore lli idda obba yavudo ondu function li baLusi appaga ‘Oh idu bangalore style lli baLusudu’ heLida odanaadigaloo iddavu
k.p ya maduve olle raisiddu,hangeye irulu sattumudi kooda.Adalladde enage namma OPPANNA na kandu matadide heli kushi atu..O Monne b’loringe hogippaga nentrugokkella helidde oppanna.com nodi heli.Ondari odle suru madire matte bidavu kandita.a dristili oppannange ‘HATSOFF’.
ಎಡಪ್ಪಾಡಿ ಅಣ್ಣನ ಮದುವೆ ಬೆಂದಿಗೆ ಕೊರದ್ದು ಪಷ್ಟಾಯಿದು ದೊಡ್ಡಣ್ಣನ ಉಸ್ತುವಾರಿಲಿ.. ಆ ದಿನ ಅವಕ್ಕೆ ಸಮೋಸ ಕಳ್ಸುಲು ಪುರುಸೋತ್ತು ಆಯಿದಿಲ್ಲೆ ಅಷ್ಟೂ ಗೌಜಿ..
ಬೆಳಿಮಾಣಿ ಬಾರಿ ಉಷಾರಿತ್ತಿದ್ದ..