ಮನಸ್ಸಿಂಗೆ ಬೇಜಾರಾಗಿಪ್ಪಗ ಬೇಜಾರಪ್ಪಲೆ ಇದ್ದಿದ್ದ ಕಾರಣವೇ ಮನಸ್ಸಿಲಿ ತಿರುಗೆಂಡು ಇರ್ತು; ಮನುಷ್ಯಸಹಜ.
ಬೇಜಾರಾಗಿಪ್ಪಗ ಕೊಶಿಯ ಶುದ್ದಿಗಳೂ ನೆಂಪಾಗ; ಬೇಜಾರದ ಹುಳು ಮನಸ್ಸಿಲೇ ಕೊರದು ಕೊರದು ಮತ್ತೂ ಮತ್ತೂ ಬೇಜಾರಾಗಿ; ಉಸುಲು ಮರದ ಹಾಂಗಾಗಿ ಪಕ್ಕನೆ – ಉಫ್!
ಸುಮಾರು ಹೊತ್ತು ಈ ಗುಂಗಿಲೇ ಇದ್ದು; ಒಂದರಿ ಸೂರ್ಯ ಕಂತಿ, ಪುನಾ ಎದ್ದು ಬಪ್ಪನ್ನಾರವೂ ಆ ಸೂತಕದ ಛಾಯೆ ಇದ್ದೇ ಇರ್ತು!
ಗೌರಿ ಅಮ್ಮನ ಹಬ್ಬ, ಚೌತಿಯ ಗೆಣಪ್ಪಣ್ಣನ ಹಬ್ಬದ ಕೊಶಿಯ ಎಡಕ್ಕಿಲಿಯೂ ಬೇಜಾರ ಎಂತರ?
ಬೈಲಿನ ಹೆರಿಯೋರೊಬ್ಬರ ಕಳಕ್ಕೊಂಡ ಬೇಜಾರ.
~
ನಮ್ಮ ಬೈಲು “ಪ್ರೀತಿಯ ಬೈಲು”.
ಇದರ್ಲಿ ದೂರ ಲೆಕ್ಕ ಇಲ್ಲೆ. ಪ್ರೀತಿ, ಆತ್ಮೀಯತೆ, ಪರಸ್ಪರಾಭಿಮಾನ ಮಾಂತ್ರ ಲೆಕ್ಕ.
ಹಾಂಗಾಗಿ ಒಂದರಿ ಬೈಲಿನೊಳಂಗೆ ಬಂದ ಎಲ್ಲೋರುದೇ – ಒಪ್ಪಣ್ಣನನ್ನೂ ಕೂಡಿ – ಎಲ್ಲೋರನ್ನೂ ಕೈಬೀಸಿ ದಿನಿಗೆಳ್ತವು.
ನೆರೆಕರೆಗೆ ಆರಾರು ಹೊಸ ನೆಂಟ್ರು ಬಂದರೆ ಹೇಂಗೆ ಎಲ್ಲೋರಿಂಗೂ ಕೊಶಿ ಆವುತ್ತೋ – ನೆರೆಕರೆಂದ ಒಬ್ಬನ ಕಳಕ್ಕೊಂಡ್ರೆ ಅಷ್ಟೇ ಬೇಜಾರಾವುತ್ತು ಹೇಳ್ತದು ಗೊಂತಿತ್ತು. ಹಾಂಗಾಗಿ ಬೈಲಿನೊಳ ಬಂದ ಒಬ್ಬನನ್ನೂ ಮತ್ತೆ ಬೈಲಿಂದ ಹೆರಡದ್ದ ಹಾಂಗೆ ಪ್ರೀತಿಲಿ ಕಟ್ಟಿ ಹಾಕಿತ್ತಿದ್ದು ನಮ್ಮ ಬೈಲು.
ಆದರೆ, ಇಂದು ಬೈಲಿನೋರಿಂದಾಗಿ ಕಳಕ್ಕೊಂಡ ಸಂಗತಿ ಅಲ್ಲ; ಇದು ದೇವರಿಂದಾಗಿ ಕಳಕ್ಕೊಂಡದು!
ನೆರೆಕರೆಂದ ಒಬ್ಬ° ಹೆರಿಯೋರ ಕಳಕ್ಕೊಂಡ್ರೆ ಎಷ್ಟು ಬೇನೆ ಆವುತ್ತು ಹೇಳ್ತ ಸಂಗತಿ ಇಂದು ಸ್ಪಷ್ಟ ಆತು ಒಪ್ಪಣ್ಣಂಗೆ.
ಅಪ್ಪು; ನಮ್ಮ ನೆರೆಕರೆಯ “ದೊಡ್ಡಜ್ಜ°”, ದೊಡ್ಡಭಾವನ ಅಜ್ಜನ ಮನೆಯ ಯೆಜಮಾನ್ರು – ಚೌತಿಯ ದಿನ ದೇವರ ಗವುಜಿಯ ನೋಡಿಂಡು; ಮರದಿನ ಪಂಚಮಿಯ ಹೊತ್ತೋಪಗ ದೇವರ ಸಾನ್ನಿಧ್ಯಲ್ಲಿ ಒಂದಾದವು.
~
ದೊಡ್ಡಜ್ಜಂಗೆ ಪ್ರಾಯ ಆದ್ಸು ಇಡೀ ಬೈಲಿಂಗೇ ಅರಡಿಗು.
ಆದರೆ ಅವರ ಸಾಮರ್ತಿಗೆ, ಅವರ ಚುರ್ಕುತನ, ಅವರ ಮಾತುಗಾರಿಕೆ ಕಂಡ ಎಂತೋನಿಂಗೂ “ಛೇ! ಇಷ್ಟು ಬೇಗ ಹೋಯೇಕಾತಿಲ್ಲೆನ್ನೆ” ಹೇದು ಖಂಡಿತವಾಗಿಯೂ ಅನುಸುಗು. ಆ ನಮುನೆ ಚುರ್ಕು!
ಅವಕ್ಕೆ ಸುಮಾರು ನಲುವತ್ತೊರಿಶ ಆದ ಮತ್ತೆ ಅವರ ಮನಸ್ಸಿಂಗೆ ಪ್ರಾಯ ಅಪ್ಪದು ನಿಂದಿದು; ಬರೇ ದೇಹಕ್ಕೆ ಮಾಂತ್ರ ಪ್ರಾಯ ಆಗಿಂಡಿದ್ದತ್ತು – ಹೇದು ದೊಡ್ಡಭಾವ° ಒಂದೊಂದರಿ ಹೇಳಿಗೊಂಡಿದ್ದದು ಜೋರು ನೆಂಪಾವುತ್ತು ಈಗ ಒಪ್ಪಣ್ಣಂಗೆ.
~
ಹೆಚ್ಚು ಹಿಂದೆ ಬೇಡ – ಮನ್ನೆ, ಹತ್ತಿಪ್ಪತ್ತು ದಿನ ಹಿಂದೆ ನಮ್ಮ ಬೈಲಿನ “ಗುರುಭೇಟಿ”ಯ ದಿನ ಹೆರಿಸ್ಥಾನಲ್ಲಿ ಇದ್ದುಗೊಂಡು, ಪಾದಪೂಜೆಲಿ ಸ್ವತಃ ಅಭಿಷೇಕ, ಅರ್ಚನೆಗಳ ಮಾಡಿ ಗುರುಸೇವೆ ಮಾಡಿಂಡು, ಹೆರಿಸ್ಥಾನಲ್ಲಿದ್ದು ಹಲವು ಅನುಭವಂಗಳ ಹಂಚಿಗೊಂಡು, “ಆನು ಬೈಲಿನ ದೊಡ್ಡಜ್ಜ°” ಹೇದು ಪರಿಚಯ ಮಾಡಿಂಡು… ಹೋ! ಎಂತಾ ಜವ್ವನ!!
ಗುರುಭೇಟಿ ದೊಡ್ಡಜ್ಜಂಗೆ ಹೊಸತ್ತಲ್ಲ, ಗುರುಗೊಕ್ಕೆ ದೊಡ್ಡಜ್ಜನ ಹೊಸತ್ತಲ್ಲ.
ಒಂದು ತಲೆಮಾರಿನ ಕಾಲ ಅವರ ಊರಿನ ಗುರಿಕ್ಕಾರ್ತಿಗೆ ಮಾಡಿ ಗುರುಸೇವೆ ಮಾಡಿದ ಸೌಭಾಗ್ಯ ಅವರದ್ದಾಗಿತ್ತಲ್ಲದೋ – ಅದೂ ಅಲ್ಲದ್ದೆ ನಮ್ಮ ಗುರುಗೊ ಒಂದು ವಾರ ದೊಡ್ಡಜ್ಜನ ಮನೆಲೇ ಮೊಕ್ಕಾಂದೇ ಇತ್ತಿದ್ದವಾಡ.
ಹಾಂಗಾಗಿ – ದೊಡ್ಡಜ್ಜನ ಗುರುಸೇವೆ ಇಡೀ ಸೀಮೆಗೇ ಗೊಂತಿದ್ದದಾಗಿದ್ದತ್ತು!
ಅಂತಾ ದೊಡ್ಡಜ್ಜ° “ಆನು ಬೈಲಿನ ದೊಡ್ಡಜ್ಜ°” ಹೇದು ಪರಿಚಯ ಮಾಡಿಗೊಳೇಕಾರೆ ಬೈಲಿನ ಬಗ್ಗೆ ಎಷ್ಟು ಅಭಿಮಾನ ಇರೇಕು?
ಒಪ್ಪಣ್ಣನ ಕಂಡ ಕೂಡ್ಳೇ “ಯೇ ವೊಪ್ಪಣ್ಣೋ, ಇದಾ – ದೊಡ್ಡಜ್ಜ° ಇಲ್ಲಿದ್ದೇ” ಹೇಳುಗು ಪ್ರೀತಿಲಿ!
ದೊಡ್ಡಜ್ಜ° ಹೇಳ್ತ ಒಪ್ಪ ಹೆಸರಿನ ಅಷ್ಟು ಪ್ರೀತಿಲಿ ಅಪ್ಪಿ-ಒಪ್ಪಿತ್ತಿದ್ದವು ನಮ್ಮ ದೊಡ್ಡಜ್ಜ°!
ಹೀಂಗೀಂಗೆ, ಬೈಲಿನ ದೊಡ್ಡಜ್ಜ°… ಹೇಳುವಗ ಸ್ವತಃ ಗುರುಗೊಕ್ಕೇ ಬೇಜಾರಾಯಿದಾಡ! ಎಡಪ್ಪಾಡಿ ಭಾವ° ಈ..ಗ ಹೇಳಿದ°!
~
ಒಂದು ತಲೆಮಾರು ಹೇದರೆ ಸರಿಸುಮಾರು ಮೂವತ್ತು ಒರಿಶ ಅಡ.
ಆಯುಸ್ಸು ಅದರಿಂದ ಜಾಸ್ತಿ ಇದ್ದರೂ – ಕಾರ್ಬಾರಿನ ಸಮಯ ದೇಹಲ್ಲಿ ತ್ರಾಣ ಇಪ್ಪ ಕಾಲಾವಧಿ.
ಆದರೆ ಈ ದೊಡ್ಡಜ್ಜಂಗೆ ಸಮಪ್ರಾಯಲ್ಲೇ ಜೆಬಾದಾರಿ ಒಲುದು, ಕಳುದ ವಾರ ಒರೆಂಗೂ ಕಾರ್ಬಾರು ಮಾಡಿದವು.
ಅವಕ್ಕೆ ಪ್ರಾಯ ಅಷ್ಟಾಗಿತ್ತೋ – ಎಲ್ಲೋರುದೇ ಕೇಳುಗು; ಎಪ್ಪತ್ತೊರಿಶ ಹೇದು ಗೊಂತಪ್ಪಗ.
ಕಾರ್ಬಾರುಗೊ ಎಂತೆಲ್ಲ?
ದೊಡ್ಡಜ್ಜನ ಕಾರ್ಯವೈಖರಿಯ ನಾವು ಅಂದೇ ಒಂದರಿ ಮಾತಾಡಿದ್ದತ್ತು – ಅವಧಾನದ ಶುದ್ದಿಲಿ. ಏಕಕಾಲಲ್ಲಿ ಹಲವು ವಿಷಯಂಗಳ ಬಗ್ಗೆ ತಲೆಕೊಡ್ತದು ಅವರ ಸಾಮರ್ತಿಗೆ ಹೇಳ್ತದು ಬೈಲಿನೋರಿಂಗೆ ಅಂದೇ ಗುರ್ತ ಸಿಕ್ಕಿತ್ತಿದ್ದು. (https://oppanna.com/oppa/ashta-avadhaana-kashta)
ಅದೆಷ್ಟು ಸಮಧಾನ ಇದ್ದರೂ ಸಾಕಾಗ – ಅಷ್ಟು ಸಮದಾನಲ್ಲಿ ಹಲವು ವಿಷಯಂಗೊ ಅವರ ತಲೆಲಿಕ್ಕು.
ಮನೆಲಿ ಎಂತ ಆಯೇಕಾದ್ಸು; ತೋಟದ ಯೇವದೋ ಒಂದು ಕೆಲಸ ಎಲ್ಲಿಗೆತ್ತಿದ್ದು, ಮಠದ ಹೇಳಿಕೆ ಯೇವ ಮನಗೆ ಬಾಕಿದ್ದು, ಬಪ್ಪ ಜೆಂಬ್ರಕ್ಕೆ ಎಂತರ ಸೀವು ಮಾಡುಸೇಕು, ಊರ ದೇವಸ್ಥಾನಲ್ಲಿ ಕಲ್ಲಿನದೀಪ ಎಷ್ಟು ಎತ್ತರ – ಎಲ್ಲವನ್ನೂ ಒಟ್ಟೊಟ್ಟಿಂಗೇ ನಿಭಾಯಿಸುವ ತಾಕತ್ತಿತ್ತು. ಅದರೊಟ್ಟಿಂಗೆ ಕನಿಷ್ಠ ಐನ್ನೂರು ಮನೆಯ ಪೋಷ್ಟು ಎಡ್ರಾಸು ಬಾಯಿಪಾಟ, ಅದರೊಟ್ಟಿಂಗೆ ನೂರಾರು ಪೋನ್ನಂಬ್ರಂಗೊ, ಓಪೀಸರಕ್ಕೊ, ಅವರ ಹೆಸರುಗೊ ಬಾಯಿಪಾಟ; ಅದರೊಟ್ಟಿಂಗೆ ಸಾವಿರಗಟ್ಳೆ ಜೆನರ ಹೆಸರು, ಅವರ ಸಮ್ಮಂದಂಗೊ, ಅವರ ನೆಂಟ್ರಮನೆಗೊ – ಎಲ್ಲವೂ ನಾಲಗೆ ಕೊಡಿಲಿ!
ಅದೆಂತ ದೊಡ್ಡ ಸಂಗತಿ ಹೇದು ನವಗೆ ಕಾಂಬಲೂ ಸಾಕು; ಆದರೆ – ಒಂದೆರಡು ದಿನ ಹಾಂಗೆ ಮಾಡಿರೆ ಸಾಲ; ಒಂದೆರಡು ಒರಿಶ ಹಾಂಗಲ್ಲ – ಬದಲಾಗಿ ಅವರ ಇಡೀ ತಲೆಮಾರು ಹೀಂಗಿತ್ತಿದ್ದವು ಹೇಳ್ತದು ಅವರ ಹೆರಿಮೆಯ ತೋರ್ಸುತ್ತು.
ಅಸೌಖ್ಯಲ್ಲಿ ಹಾಸಿಗೆಲೇ ಮನುಗಿಪ್ಪಗಳೂ – “ಮನೆಲಿ ಚೌತಿಯ ಏರ್ಪಾಡು ಆತೋ?”, ಕಾಯಿ ಸೊಲುದಾತೋ, ದನಗಳ ಅಡಿಯಂಗೆ ಸೊಪ್ಪು ಬಿಕ್ಕಿ ಆತೋ, ಜವ್ವನಿಗರಿಂಗೆ ಪುರುಸೊತ್ತಿದ್ದಲ್ಲದೋ – ದೇವಸ್ಥಾನಲ್ಲಿ ಕಾರ್ಯ ಆಯೇಕಾದ್ದರ ಮಾಡಿಗೊಂಡು ಬನ್ನಿ – ಇಂತಾದ್ದನ್ನೇ ತಲೆಲಿ ಮಡಿಕ್ಕೊಂಡು ಎಡೆಡೆಲಿ ಕೇಳಿಗೊಂಡಿತ್ತವಾಡ.
~
ಊರ ದೇವಸ್ಥಾನಂಗೊ ಆ ಊರಿನ ಭಕ್ತಿ ಶ್ರೀಮಂತಿಕೆಯ ತೋರ್ಸುತ್ತು ಹೇಳ್ತ ಸಂಗತಿಯ ನಾವು ಆಚ ವಾರ ಮಾತಾಡಿದ್ದು. ಪುತ್ತೂರು ದೇವಸ್ಥಾನದ ಜೀರ್ಣೋದ್ಧಾರ ಆವುತ್ತಾ ಇಪ್ಪಗ ಅದಕ್ಕೆ ಸಮ್ಮಂದಪಟ್ಟ ಹತ್ತು ಹಲವು ವಿಷಯಂಗೊ ನಮ್ಮ ಬೈಲಿಲಿ ಬಯಿಂದು. ಅಷ್ಟಪ್ಪಗ ಒಪ್ಪಣ್ಣಂಗೆ ಈ ವಿಷಯವೂ ನೆಂಪಾಯಿದು. ಅದೆಂತರ?
ದೊಡ್ಡಜ್ಜನ ಊರಿನ ದೇವಸ್ಥಾನ ರಜಾ ಹಡ್ಳು ಬಿದ್ದಾಂಗೆ ಆಗಿದ್ದತ್ತು. ದೇವರೇ ಇಲ್ಲೆ ಹೇಳ್ತ ಕಳ್ಳುಕುಡ್ಕಂಗಳ ಎಡಕ್ಕಿಲಿ ದೇವಸ್ಥಾನಕ್ಕೆ ಎಂತ ಬೆಲೆ – ಕೇಳುಗು. ಆದರೆ ದೊಡ್ಡಜ್ಜ° ಹಾಂಗೆ ಕೇಳಿದೋರತ್ರೆ ಮಾತಾಡಿಗೊಂಡು ಹೊತ್ತು ಕಳದ್ದವಿಲ್ಲೆ. ಊರ ಕೆಲವು ಆಸಕ್ತ ತುಂಡು ಜೆವ್ವನಿಗರ ಸೇರ್ಸೆಂಡು, ಆ ದೇವಸ್ಥಾನವ ಚೆಂದಕೆ ಪುನಾ ಕಟ್ಟುಸಿ, ಸುತ್ತುಮುತ್ತ ಬೇಕುಬೇಕಾದ ಹಾಂಗೆ ವೆವಸ್ತೆಗಳ ಮಾಡುಸಿ..!
ಈಗ ಸರ್ವಾನುಸುಂದರವಾದ ಗುಡಿ, ಸಣ್ಣ ಅಂಗಣ, ಅದಕ್ಕೊಂದು ಕಲ್ಲಿನ ಗೋಡೆ – ಎಲ್ಲವೂ ಇದ್ದುಗೊಂಡ ದೊಡ್ಡಜ್ಜನದ್ದೇ ಹೆಸರಿನ ದೇವರು ನೆಮ್ಮದಿಲಿ ಕೂಪ ಹಾಂಗೆ ಮಾಡಿದ್ದವು!
ಆ ಊರಿಂಗೆ ಕರೆಂಟೇ ಇದ್ದತ್ತಿಲ್ಲೇಡ; ಈಗಲ್ಲ – ಚಿನ್ನಕ್ಕೆ ಪವನಿಂಗೆ ಒಂದು ಸಾವಿರ ಇಪ್ಪಾಗ!
ಅಂಬಗಳೇ ಊರ ಹತ್ತೈವತ್ತು ಮನೆಗಳ ಒಟ್ಟುಸೇರ್ಸಿ ಸಮಷ್ಟಿಲಿ ಕರೆಂಟು ವಯರು ಹಾಕುಸಿ ಮನೆಲಿ ಬೆಳಿಬೆಣಚ್ಚು ಕಾಂಬ ಹಾಂಗೆ ಮಾಡಿತ್ತಿದ್ದವಾಡ. ಈಗ ಆ ಊರಿನೋರು ಕರೆಂಟು ಸುಚ್ಚು ಹಾಕುಸುವಗ ದೊಡ್ಡಜ್ಜನ ಶ್ರಮವ ನೆಂಪು ಮಡಗುತ್ತವಾಡ.
ಕಾಂಞಂಗಾಡಿಲಿ ನಾಳ್ತಿಂಗೆ ಎಂತದೋ ಯಾಗ ಇದ್ದಾಡ.
ಅದಕ್ಕೆ ನಮ್ಮ ಗುರುಗಳ ಬರುಸಿ ಆ ಊರಿನೋರಿಂಗೂ ಗುರುಗಳ ಮಂತ್ರಾಕ್ಷತೆ ಎತ್ತುಸುತ್ತ ದೂರಾಲೋಚನೆ ದೊಡ್ಡಜ್ಜನ ಮನಸ್ಸಿಂಗೆ ಬಪ್ಪಲೆ ಸುರು ಅಪ್ಪದ್ದೇ, ಕೂಡ್ಳೇ ಗುರುಗೊಕ್ಕೆ ಅರಿಕೆ ಮಾಡಿಗೊಂಡಿದವಾಡ.
ಆದರೆ, ಆ ಕಾರ್ಯಕ್ರಮ ಅಪ್ಪ ಮದಲೇ ದೊಡ್ಡಜ್ಜ° ದೂರ ಒಳುದವು!
ಇವೆಲ್ಲ ಉದಾಹರಣೆಗೊ ಅಷ್ಟೇ.
ಈ ನಮುನೆ ಹಲವಾರು ಕತೆಗೊ, ಘಟನೆಗೊ ನಮ್ಮ ಕಣ್ಣೆದುರೇ ಇದ್ದು. ಬೈಲಿನೋರ ಪೈಕಿ ಅವರ ಹತ್ತರಂದ ಕಂಡು ಗೊಂತಿಪ್ಪ ಹಲವು ಜೆನಕ್ಕೆ ತುಂಬ ಗೊಂತಿಕ್ಕು. ಒಪ್ಪಣ್ಣಂಗೂ ಕೆಲವು ಹೇಳಿದ್ದು ಕೇಳಿ ಗೊಂತಿತ್ತು. ಕೆಲವು ಅವರ ಬಾಯಿಂದಲೇ ಕೇಳಿ ಗೊಂತಿದ್ದತ್ತು.
~
ದೊಡ್ಡಜ್ಜನ ನೆರೆಕರೆ ಹೇದರೆ ನಾವು ಗ್ರೇಶಿದಷ್ಟು ಸುಲಭ ಇಲ್ಲೆ.
ಪೂರಾ ಕೆಂಪಣ್ಣಂಗಳ ರಾಜ್ಯ. ಅಲ್ಲಿ ಒಂದು ಎಳೆ ಜೆನಿವಾರ ಕಂಡ್ರೆ ಪೆಟ್ಟು ತಿನ್ನೇಕಾದ ಪರಿಸ್ಥಿತಿಯೂ ಇಲ್ಲದ್ದಲ್ಲ.
ಹಾಂಗಿರ್ತಲ್ಲಿ ತಲೆಮಾರು ಇಡೀ ನಿಂದು, ಗುರುಸೇವೆ, ಧರ್ಮಸೇವೆ, ದೈವಸೇವೆ ಮಾಡಿಂಡು ಸ್ವಚ್ಛಂದ ಸನಾತನಿಯಾಗಿ ಬದ್ಕುದು ಹೇದರೆ ಅದೊಂದು ಸಾಧನೇ ಅಲ್ಲದೋ?
ಅರೆ ಬಾಚಿದ ಬೆಳಿತಲೆ, ಮೋರೆಗೊಂದು ಕುಂಕುಮ – ವಿಭೂತಿ; ಕಣ್ಣಿಂಗೊಂದು ಕನ್ನಡ್ಕ, ಬಾಯಿಲೊಂದು ಮುಗುಳು ನೆಗೆ; ಹೆಗಲಿಂಗೊಂದು ಜರಿ ಶಾಲು, ಸೊಂಟಕ್ಕೊಂದು ಬೆಳಿ ಒಸ್ತ್ರ – ಇಷ್ಟರ ಸರಳ ಉಡುಪಿಲಿ ಅವರ ವೆಗ್ತಿತ್ವ ಆತು!
ಮನೆಲಿದ್ದರೆ ಚೆಂಡಿಹರ್ಕು; ಹೆರ ಹೋವುತ್ತರೆ ಬೆಳಿಒಸ್ತ್ರ – ಉಡುಪು ಬದಲಕ್ಕು; ಆದರೆ ಮನಸ್ಸು ಬದಲಾಗ.
ಒಂದು ದಿನ ಎಂತಾತು ಅರಡಿಗೋ?
ಒಪ್ಪಣ್ಣ ಬೈಲಿಲೇ ನೆಡಕ್ಕೊಂಡು ದೊಡ್ಡಜ್ಜನ ಮನಗೆ ಎತ್ತಿ ಅಪ್ಪದ್ದೇ – ಯೇ ಒಪ್ಪಣ್ಣಾ, ಇದಾ – ತೋಟಕ್ಕೆ ಹೋಪೊ°, ಬಾ – ಹೇಳಿದವು.. ಮನೆಲಿ ಅಜ್ಜಿಯಕ್ಕೊ ಅತ್ತೆಕ್ಕೊ ಆಸರಿಂಗೆ ತಪ್ಪಲೂ ಪುರ್ಸೊತ್ತು ಕೊಡದ್ದೆ –ತೋಟಕ್ಕೆ ಬಲುಗಿಂಡು ಹೋದವು.
ಅಡಕ್ಕೆ ಸಲಕ್ಕೆ ದಂಟುಕುಟ್ಟಿಂಡು ಅವು ಹಳೆಕತೆಗೊ ಹೇಳಿಂಡು ಮುಂದೆ ಹೋಪಗ ಒಪ್ಪಣ್ಣಂಗೆ ಹೂಂಕುಟ್ಟುಸ್ಸರಲ್ಲಿ ನುಸಿಕಚ್ಚಿದ್ದೂ ನೆಂಪಿಲ್ಲೆ; ಪಿರ್ಕು ಕಚ್ಚಿದ್ದೂ ನೆಂಪಿಲ್ಲೆ!
~
ಅವರ ಬಾಲ್ಯಂದ ಹಿಡುದು ಬೆಳದ ವಾತಾವರಣ, ಕೆಲವು ಕಾರ್ಬಾರುಗಳ ಸನ್ನಿವೇಶಂಗೊ ಎಲ್ಲವನ್ನೂ ಒಂದೊಂದರಿ ವಿವರ್ಸಿಗೊಂಡು ಹೋದ್ದದು ಈಗಳೋ ಕೆಮಿಲೇ ಕೇಳ್ತಾ ಇದ್ದು. ಸಣ್ಣ ಇಪ್ಪಾಗ ಬಂದ ಬಂಙಂಗೊ, ಆರ್ಥಿಕ ದುರ್ಬಲತೆಗಳ ಚಿತ್ರಣಂಗೊ ಕಣ್ಣಿಂಗೆ ಕಟ್ಟುತ್ತು; ಹಶುಕಟ್ಟಿ ದುಡುದ ದಿನಂಗಳ ವಿವರುಸುವಗ ನವಗೇ ಹಶು ಆಗಿಂಡಿತ್ತು!
ಅವರ ಶುದ್ದಿಗೊ, ಅವು ಹೇಳಿದ ಶುದ್ದಿಗೊ ಒಂದೊಂದೇ ಬೈಲಿಂಗೆ ಹೇಳೇಕು ಹೇದು ಗ್ರೇಶಿಂಡಿಪ್ಪಗಳೇ,
ಅವರ ಬೈಲಿಂಗೆ ಬಪ್ಪಲೆ ಮಾಡೇಕು ಗ್ರೇಶಿಂಡಿಪ್ಪಗಾಳೇ,
ಇನ್ನಾಣ ಸರ್ತಿ ಬೈಲಿನೋರು ಭೇಟಿಮಾಡಿಪ್ಪಾಗ ಅವರ ಕೈಂದ ನಾಕು ಮಾತಾಡ್ಸೇಕು ಹೇದು ಗ್ರೇಶಿಂಡಿಪ್ಪಗಾಳೇ,
ಅವರ ಅನುಭವವ ಬೈಲಿಲಿ ಹಂಚೆಕ್ಕು ಹೇದು ಗ್ರೇಶಿಂಡಿಪ್ಪಗಾಳೇ,
ಆರಿಂಗೂ ಕಾಯದ್ದೆ “ಎದ್ದಿಕ್ಕಿ ಹೋದ ಹಾಂಗೆ” ಹೋದವು.
~
ಆಯಿತ್ಯವಾರ ದೊಡ್ಡಜ್ಜಿಯನ್ನೂ ಕೂಡಿಂಡು ಉದಾಕೆ ನೆಡಕ್ಕೋಂಡು ಹತ್ತರಾಣ ದೇವಸ್ಥಾನಕ್ಕೆ ಹೋಗಿ ದೇವರ ಕಂಡಿಕ್ಕಿ ಬಂದವಡ. ಮನೆಗೆತ್ತಿ ಹೊತ್ತು ಕಂತುವಗಳೇ ಛಳಿಜ್ವರ ಸುರು ಆತಾಡ.
ಗುರ್ತದ ಡಾಗುಟ್ರಲ್ಲಿಗೆ ಹೋಪಗ ಈಗಳೇ ಕೊಡೆಯಾದ ದೊಡ್ಡಾಸ್ಪತ್ರೆಗೆ ಹೋಯೇಕು ಹೇಳಿದವಡ.
ಅಲ್ಲಿ ಒಂದುಕೋಣೆಂದ ಇನ್ನೊಂದು ಕೋಣೆಗೆ ಪಗರ್ಸೆಂಡಿದ್ದದರ್ಲೇ – ದೊಡ್ಡಜ್ಜಂಗೆ ಆರನ್ನೂ ಕಾವ ಮನಸ್ಸಿತ್ತಿಲ್ಲೆ ತೋರ್ತು.
ಆರ ಕೈಂದಲೂ ಹೆಚ್ಚು ಸೇವೆ ತೆಕ್ಕೊಂಡಿದವಿಲ್ಲೆ, ಆರಿಂಗೂ ಹೆಚ್ಚು ಬೇನೆ ಮಾಡುಸಿದ್ದವಿಲ್ಲೆ.
ಅವರ ಹೊತ್ತು ಬಪ್ಪಗ ಆರಿಂಗೂ ಹೇಳದ್ದೆ, ಎಲ್ಲೋರನ್ನೂ ಕಂಡು – ಸೀತ ಹೆರಟು ಹೋದವು.
~
ಅವು ಹೋಪಗಳೂ ಹಾಂಗೆ, ಬೊಡ್ಡಜ್ಜನ ಚೌತಿ ಗೌಜಿ ಕಳಿಶಿಂಡೇ ಹೋದವು.
ಮನೆಯ ಚೌತಿ ಆಚರಣೆ – ಹನ್ನೆರಡು ಕಾಯಿ ಗಣಹೋಮ – ಸಾಂಗವಾಗಿ ನೆಡದು;
ಅದರ ಪ್ರಸಾದ ಸ್ವೀಕಾರ ಮಾಡಿ, ಮನೆ ಎಲ್ಲೋರಿಂಗೂ ಊಟ ಆತೋ ಹೇದು ಎರಡೆರಡು ಸರ್ತಿ ವಿಚಾರ್ಸಿ;
ಮತ್ತೆಯೇ ಅವು ಮಾತಾಡದ್ದ ಸ್ಥಿತಿಗೆ ಹೋದ್ಸು.
ಅಲ್ಲಿಂದ ಮತ್ತೆ ಅರ್ಧ-ಒಂದು ದಿನದ ಸನ್ನಿವೇಶಲ್ಲಿ ಎಲ್ಲವೂ ಮುಗಾತು.
ಅವು ಹೋದ ದಿನ ಋಷಿಪಂಚಮಿ, ಒಳ್ಳೆ ದಿನ ಆಡ; ಪಂಚಾಂಗ ನೋಡಿ ಜೋಯಿಶಪ್ಪಚ್ಚಿ ಹೇಳಿದವು. ಸ್ವರ್ಗಕ್ಕೆ ಹೋಪಗಳೂ ಒಳ್ಳೆ ದಿನ ನೋಡಿ ಹೆರಟವು!
~
ಒಳ್ಳೆ ಮನೆಗಾಗಿ, ಒಳ್ಳೆ ಮನಸ್ಸುಗೊಕ್ಕಾಗಿ, ಒಳ್ಳೆ ಧ್ಯೇಯಕ್ಕಾಗಿ ನಿತ್ಯವೂ ಹಾರೈಸಿಗೊಂಡಿದ್ದ ದೊಡ್ಡಜ್ಜ° ಇನ್ನಿಲ್ಲೆ ಹೇದರೆ ಮನಸ್ಸಿಂಗೆ ಬೇಜಾರಪ್ಪದು ಸಹಜವೇ. ಪ್ರತಿಯೊಬ್ಬನತ್ತರೂ ಎದುರಾಣೋನ ಆಸಗ್ತಿ, ಆಶಯಂಗಳ ಕುರಿತಾಗಿಯೇ ಮಾತಾಡಿಗೊಂಡು, ಎಲ್ಲೋರಿಂಗೂ ಹತ್ತರೆ ಆಗಿಂಡಿತ್ತವು. ಕಾನಾವಣ್ಣನಿಂದ ಹಿಡುದು ದೊಡ್ಡಮಾವನ ಒರೆಂಗೆ ಎಲ್ಲೋರನ್ನೂ ಮಾತಾಡುಸುತ್ತ ಚಾಕಚಕ್ಯತೆ ಅವರ ಕೈಲಿದ್ದತ್ತು. ಮಾತಾಡದ್ದೇ ಕರೆಲಿ ಮನುಗಿಂಡಿಪ್ಪ ಬೋಚಬಾವನನ್ನೇ ಮಾತಾಡುಸಿದ್ದವು ಹೇದರೆ ನಿಂಗೊ ಅರ್ತ ಮಾಡಿಗೊಳ್ಳಿ..!!
ಒಪ್ಪಣ್ಣನ ಹತ್ತರೆ ಮಾತಾಡುವಗ ಬೈಲಿನೋರು ಎಂತ ಮಾಡ್ತವು? ಅವು ಎಂತ ಹೇಳಿದವು? ಇವರ ಕತೆ ಎಂತಾತು – ಹೇದು ಆಸಕ್ತಿಲಿ ಕೇಳಿಗೊಂಡಿತ್ತವು. ಬೈಲಿಂಗೆ ಅವ್ವೇ ಸ್ವತಃ ಶುದ್ದಿ ಹೇಳದ್ದರೂ – ಹತ್ತರಾಣೋರ ಮೂಲಕ ನಿತ್ಯವೂ ಬೈಲ ಸಂಪರ್ಕಲ್ಲಿ ಇತ್ತಿದ್ದವು.
ಅಂತಾ ದೊಡ್ಡಜ್ಜ°…?!
~
ಎಲ್ಲ ಕಳುದ ಮತ್ತೆ ಆಸ್ಪತ್ರೆಲಿ ದೊಡ್ಡಜ್ಜನ ಕೆಮಿಯ ಟಿಕ್ಕಿ ತೆಗವಲೆ ಸುರುಮಾಡಿದವಾಡ ಮಕ್ಕೊ; ನೋಡಿಂಡಿದ್ದ ಬೆಟ್ಟುಕಜೆತ್ತೆ ಹೇಳಿದವು. ದೊಡ್ಡಜ್ಜನ ವೆಗ್ತಿತ್ವದ ಒಂದು ಭಾಗವೇ ಆಗಿದ್ದ ಆ ಟಿಕ್ಕಿಯ ತಿರುಗಣೆ ಒಂದೊಂದೇ ಸುತ್ತು ಬಿಚ್ಚುವಗ ಅಂತೂ – ತಲೆಮಾರಿನ ಒಂದೊಂದೇ ಕೊಂಡಿಗೊ ಕಳಚ್ಚಿದ ಹಾಂಗೆ – ಹವ್ಯಕ ಇತಿಹಾಸದ ಒಂದೊಂದೇ ಪುಟ ಮೊಗಚ್ಚಿದ ಹಾಂಗೆ – ಕಾಸ್ರೋಡಿನ ಕನ್ನಡ ತಂತುಗೊ ಕಡುದ ಹಾಂಗೆ – ಹಳ್ಳಿಯನ್ನೇ ಒಪ್ಪಿ ಅಪ್ಪಿದ ಬ್ರಾಹ್ಮಣ್ಯವೊಂದು ಕಳದು ಹೋದ ಹಾಂಗೆ – ಕಂಡುಗೊಂಡಿತ್ತು – ಹೇಳ್ತದು ಬೆಟ್ಟುಕಜೆ ಅತ್ತೆಯ ಅಭಿಪ್ರಾಯ.
ಅವರ ಟಿಕ್ಕಿ ಈಗಳೂ ಇದ್ದು, ಆದರೆ ಆ ಹೊಳಪ್ಪು ಇಲ್ಲೆ!
ಎಲ್ಲೋರಿಂಗೂ ಬೇಜಾರಾಯಿದು ದೊಡ್ಡಜ್ಜ° ನಮ್ಮ ಬಿಟ್ಟಿಕ್ಕಿ ಹೋದ್ಸು.
ಅದರ್ಲಿಯೂ ಒಂದು ನೆಮ್ಮದಿ ಎಂತರ ಹೇದರೆ – ತುಂಬ ಸಮಯ ಯಾತನೆ ಅನುಭವಿಸಿದ್ದವಿಲ್ಲೆ, ಸೀತ ಎದ್ದುಗೊಂಡು ಹೋಯಿದವು ಹೇಳ್ತದು.
~
ಆ ಬೇಜಾರಲ್ಲೇ ಈ ವಾರದ ಶುದ್ದಿ ಹೇಳ್ತ ದಿನ ಬಂದ ಕಾರಣ ಅವರ ಶುದ್ದಿಯನ್ನೇ ಹೇಳಿ ಬೈಲಿಂಗೆ, ಒಪ್ಪಣ್ಣಂಗೆ ಅವರ ಮೇಗಾಣ ಅಭಿಮಾನವ ತೋರ್ಸುವೊ° ಹೇದು ಅನುಸಿತ್ತು. ಬೇರೇವದೋ ಶುದ್ದಿ ಮಾತಾಡುವೊ° ಹೇದು ಗ್ರೇಶಿಂಡಿಪ್ಪಗಾಳೇ – ಈ ಸಂಗತಿ ಗೊಂತಾಗಿ…
~
ಒಪ್ಪಣ್ಣಂಗೆ ಅವರ ಗ್ರೇಶುವಗ ಎಲ್ಲ ಅವರ ಪ್ರೀತಿಯ ಮಾತುಕತೆ,
ಅವು ಹೇಳಿಂಡಿದ್ದ ಕೆಲವು “ನೆಗೆ ಕತೆಗೊ”,
ಅವು ಮಾತಾಡ್ಸುವ ರೀತಿಗೊ,
ಸಭೆಲಿ ಮಾತಾಡುವ ವಾಗ್ಝರಿ,
ಸ್ಪಷ್ಟ ಹವ್ಯಕ ಬಾಷೆಯ ಸುಸ್ಪಷ್ಟ ಉಚ್ಛಾರಣೆಗೊ,
ಒಬ್ಬೊಬ್ಬನ ಪರಿಚಯ ಮಾಡ್ಸೆಂಡು ಹೋಪ ರೀತಿಗೊ,
ಎಲ್ಲೋರನ್ನೂ ಒರ್ಮೈಶಿಗೊಂಡು ಹೋಪ ಚಾಕಚಕ್ಯತೆ – ಎಲ್ಲವುದೇ ನೆಂಪಾವುತ್ತು.
ನಿಜವಾಗಿ ಹೇಳ್ತರೆ, ಬೈಲಿನ ಹೆರಿಯ ದೊಡ್ಡಜ್ಜನ ಅಕಾಲಿಕ ಮರಣ ನಿಜವಾಗಿಯೂ ತುಂಬಲಾರದ್ದ ನಷ್ಟ. ಅವು ಹಾಂಗೆ ಹೇಳದ್ದೆ ಹೋದ್ಸು ಒಪ್ಪಣ್ಣಂಗೂ ಸೇರಿ ಬೈಲಿಲಿ ಎಲ್ಲೋರಿಂಗೂ ಬೇಜಾರಾಯಿದು.
ಅವರ ಸನಾತನ ಆತ್ಮಕ್ಕೆ ಗುರು-ದೇವರು ಚಿರ ಶಾಂತಿಯ ಅನುಗ್ರಹ ಮಾಡಿ, ಇಷ್ಟು ಸಮೆಯ ಜೆಬಾದಾರಿಕೆ ತೆಕ್ಕೊಂಡದಕ್ಕೆ ಇನ್ನಾದರೂ ರಜ್ಜ ವಿಶ್ರಾಂತಿ ತೆಕ್ಕೊಂಬ ಹಾಂಗೆ ಅನುಗ್ರಹಿಸಲಿ.
ಅವು ನಮ್ಮೆದುರಿದ್ದರೂ, ದೇವರ ಎದುರಿದ್ದರೂ – ಬೈಲಿಲಿ ಎಂದೆಂದಿಂಗೂ ಇದ್ದೇ ಇರ್ತವು.
ಒಂದೊಪ್ಪ: ದೊಡ್ಡಮನಸ್ಸಿನ ದೊಡ್ಡಜ್ಜಂಗೆ ನಿರಂತರವಾಗಿ ಬೈಲಿನ ದೊಡ್ಡ ಪ್ರೀತಿಗೊ.
ಸೂ: ನೆರೆಕರೆಯ ನೆಂಟ್ರುಗೊ ಅಂಬೆರ್ಪಿಲಿ ಕಳುಸಿಕೊಟ್ಟ “ದೊಡ್ಡಜ್ಜ”ನ ಕೆಲವು ಪಟಂಗೊ:
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
condolences to doddajja.
ದೊಡ್ಡಜ್ಜನ ಪ್ರತಿಯೊಂದು ಮಾತುದೇ ಮೊನ್ನೆ ಗುರುಗಳ ಎದುರು ಮಾತಾಡಿದ್ದು ಅಕ್ಷರಶ:ಸತ್ಯ ಹೇಳಿ ಅನ್ಸುತ್ತು.ಬೈಲಿನ ದೊಡ್ಡಜ್ಜ ಹೇಳಿ ಎನ್ನ ಹೇಳ್ತವು ಹೇಳಿ ಎಲ್ಲೋರ ಎದುರು ಘಂಟಾಘೋಷವಾಗಿ ಹೇಳಿದವು.ಆದರೆ ಪ್ರಾಯ ಎನ್ನ ಬಿಡ್ತಿಲ್ಲೆ ಹೇಳಿ ಹೇಳಿಯೂ ಒಂದು ಮಾತು ಹೇಳಿದ್ದು ಈಗ ಸ್ಪಷ್ಟ ನೆಂಪಾವ್ತು…ದೊಡ್ಡಜ್ಜನ ಅವರ ಸ್ವಂತ ಭವಿಷ್ಯ ಅಂಬಗ ಎಷ್ಟು ಸತ್ಯ?ಬೈಲಿನ ಬೆಳವಣಿಗೆಯ ಪ್ರತಿ ಹೆಜ್ಜೆಗೂ ದೊಡ್ಡಜ್ಜನ ಆಶೀರ್ವಾದ ಇರಲಿ.ದೊಡ್ಡಜ್ಜನ ಆತ್ಮಕ್ಕೆ ಶಾಂತಿ ಸಿಕ್ಕಲಿ.ಹರೇರಾಮ
My deep condolences to Doddajjas death.
ಎನ್ನ ಅಜ್ಜನ ಮನೆಗೆ ಹೋದರೆ ಈ ಮಾವನ ಹತ್ರೆ ಎಂಗೊಗೆ ತುಂಬಾ ಪ್ರೀತಿ..ಅದೂ ಅಲ್ಲದ್ದೆ ಫೋನಿಲಿಯೂ ಅವಾಗಾವಗ ಮಾತಾಡಿಕಒಂಡು ಇತ್ತ ಪ್ರೀತಿಯ ಮಾವ ಇನ್ನು ಇಲ್ಲೆ ಹೇಳಿ ಅನುಸುತ್ತಿಲ್ಲೆ..ಅವು ಎಂಗಳ ಎಲ್ಲೊರ ಮನಸಿಲಿ ಶಾಶ್ವತವೇ..ಒಂದು ಜಂಬ್ರಕ್ಕೆ ಹಿಂದಾಣ ತಯಾರಿಯ ಅಚ್ಚುಕಟ್ಟಾಗಿ ಹೇಂಗೆ ಮಾಡ್ಲಕ್ಕು ಹೇಳ್ತದರ ಅವರ ಕೈಂದ ಕಲಿಯೆಕ್ಕು..ಆ ಭಾಗ್ಯ ಎನಗೂ ರಜ್ಜ ಸಿಕ್ಕಿದ್ದು..
ಗೋಪಾಲಣ್ಣ (ದೊಡ್ಡಜ್ಜ) ಹೋದ ಶುದ್ದಿ ಓದಿ ತುಂಬಾ ಬೇಜಾರಾತು. ಜೆಂಬ್ರಲ್ಲಿ ಅವರ ಉಪಶ್ತಿತಿ ಇದ್ದು ಹೇಳಿದರೆ ಅದರ ಕಳೆಯೇ ಬೇರೆ,
ಸುದರಿಕೆಲಿ ಎತ್ತಿದ ಕೈ.ಅವರ ಆತ್ಮಕ್ಕೆ ಚಿರ ಶಾಂತಿ ಸಿಕ್ಕಲಿ,ಕುಟುಂಬದೋರಿಂಗೆ ಅವ್ರ ವಿಯೋಗವ ಸಹಿಸುವ ಶಕ್ತಿ ಆ ದೇವರು
ಕೊಡಲಿ
ಅವರ ದಣಿಯದ್ದ ಉತ್ಸಾಹ, ಪ್ರತಿಯೊಬ್ಬನ ವಿಚಾರುಸುವ ರೀತಿ, ಮಾತಿನ ಪ್ರಬುದ್ಧತೆ ಇದೆಲ್ಲದರ ಪರಿಚಯ ಆದ್ದು ಕಳುದ ವರ್ಷ ಗೋಕರ್ಣಂದ ವಾಪಾಸು ಹೋಪಗ ಎಂಗಳಲ್ಲಿಗೆ ಬಂದ ದಿನ. ಎನಗೆ ಅವರ ಪ್ರಥಮ ಭೇಟಿ ಅದೇ ದಿನ ಆದ್ದು. ಆದರೂ ಮನೆಯವರ ಪ್ರತಿಯೊಬ್ಬನನ್ನೂ ಮಾತಾಡ್ಸಿಕ್ಕಿ ಹೆರಡುವಗ, ಎಂಗಳಲ್ಲಿಗೆ ಎಲ್ಲರೂ ಒಟ್ಟಿಂಗೆ ಬನ್ನಿ ಹೇಳಿ ಆತ್ಮೀಯ ಹೇಳಿಕೆ ಕೊಟ್ಟವು. ಹೊಸಬರು ಬಂದದು ಹೇಳಿ ಅನಿಸಿದ್ದೇ ಇಲ್ಲೆ.
ಬೈಲಿನ ಪುಸ್ತಕ ಬಿಡುಗಡೆ ದಿನವೂ ಅವು ತುಂಬಾ ಉತ್ಸಾಹಲ್ಲಿ ಇತ್ತಿದ್ದವು. ಶ್ರೀ ಗುರುಗೊ ಮಾತಾಡ್ಸುವಾಗ, ಆನು ಬೈಲಿನ ದೊಡ್ಡಜ್ಜ ಹೇಳಿ ಹೆಮ್ಮೆಂದ ಹೇಳಿಗೊಂಡವು.
ಅವರ ಆತ್ಮಕ್ಕೆ ಶಾಂತಿ ಸಿಕ್ಕಲಿ, ಅವರ ಅಗಲುವಿಕೆಯ ಬೇನೆಯ ಸಹಿಸುವ ಶಕ್ತಿ ಅವರ ಕುಟುಂಬಕ್ಕೆ ಸಿಕ್ಕಲಿ.
ಹರೇ ರಾಮ…
ಕೋ೦ಗೊಟಿನ ವಿಶಾಲ ಹೃದಯದ, ದೊಡ್ಡ ಆಲದ ಮರವಾಗಿ ಇದ್ದ ನಮ್ಮ ದೊಡ್ಡಜ್ಜ, ಇನ್ನು ನಮ್ಮ ಒಟ್ಟಿ೦ಗೆ ಇಲ್ಲೆ ಹೇಳುವ ವಿಚಾರವ ಅರಗಿಸಿಯೊ೦ಬಲೇ ಆವುತ್ತಿಲ್ಲೆ… ಅವರ ಕ್ರಿಯಾಶಿಲತೆ,ಮು೦ದಾಳತ್ವ, ಮಾತಿಲ್ಲಿ ಹಿರಿತನ-ತೂಕ, ಸಮಾಧಾನ, ಒ೦ದು ನೆಗೆ…. ಈಗಳೂ ಕಣ್ಣಿ೦ಗೆ ಕಾಣುತ್ತು.. ಎ೦ಥದೇ ಕಾರ್ಯ ಇರಳಿ, ಅದಕ್ಕೆ ಮೂಲಸ್ತ೦ಭ ಆಗಿತ್ತವ್ವು…
ದೊಡ್ಡಜ್ಜಂಗೆ ಎಲ್ಲೋರು ಬೇಕು, ಎಲ್ಲೋರನ್ನು ನೆಗೆ ನೆಗೆ ಮಾಡಿ ಮಾತಾಡುಸುಗು….
ಅವರತ್ತರೆ ಒ೦ದು ಇಷ್ಟು ಕುಶಾಲು-ಕಾರ್ಯ ಮಾತಾಡಿ.. ಕಡೇ೦ಗೆ ನಾವು ಕಾಲು ಹಿದುದಿಕ್ಕಿ ಹೆರಟ್ಟಪ್ಪಗ, “ ಬ೦ದುಗೊ೦ಡು ಇರಿ, ಪ್ರೀತಿ ಇರಳಿ….” ಹೇಳುಗು..
ದೊಡ್ಡಜ್ಜ ನಮ್ಮ ಬಿಟ್ಟಿಕ್ಕಿ ಹೋದ್ದು ಬಾರಿ ಬೇಜಾರದ ಸ೦ಗತಿ…
ಆತ್ಮಕ್ಕೆ ಶಾಂತಿ ಸಿಗಲಿ.
ಬೈಲಿನ ದೊಡ್ಡಜ್ಜ ಹೇಳ್ತ ಅಣ್ಣ (ಎನ್ನ ಅತ್ತಿಗೆ ಗೆ೦ಡ] ಹೊದ ಸುದ್ದಿ ತಿಳುದು ಬೇಜಾರಾತು. ಅವು ನಮ್ಮ ಒಟ್ಟಿ೦ಗೇ ಇದ್ದವು ಹೇಳಿ ಗ್ರೇಶುವೊ°.
Doddajjana bagge innondu sangathi enage nempadsara heluvo anusuthu. Nentro, ishtro, nerekareyo ara maneli jembara iddaru Doddajja irthavu. Manthra alla, alli avara sudarike nodekadse! Ootada chepparada ondu muleli nindondu “Alli saru hogali, illi happala hogali, E mani neeru thekkondu baron” , heligondu sudarike chendave chenda.Doddajja illadda Jambra baree neerasa. Adarallu “Ye Aliyo, ba thimbo” helsu ondu trade mark agithu. Ottare Doddajja illadda Jembra innu henge sudarike akko? Engogella manne manne Bengluringe bandu kambale sikkida drushya innu kanna munde ippagale……….. ellorannu bittikki hodavu.
ನಿನ್ನೆ ದೊಡ್ಡಜ್ಜನ ದಹನ ಬಂದಪ್ಪದ್ದೆ ಈ ಶುದ್ದಿಯ ಓದಿದ್ದೆ,
ಆದರೆ ಅಂಬಗ ಎಂತದೂ ಬರವಲೆ ಎಡಿಗಾಯಿದಿಲ್ಲೆ…
ಹೇಳಿದಾಂಗೆ,
ದೊಡ್ಡಜ್ಜನ ಸ್ವರ ಕೇಳುಲೆ ತುಂಬಾ ಕೊಶಿ ಆಗಿಂಡಿದ್ದತ್ತು,
ಹಾಂಗಿಪ್ಪ ಸ್ವರಲ್ಲಿ ಮಾತಾಡ್ಸುವವು ಇನ್ನು ದೊಡ್ಡಜ್ಜನ ಮನೆಲಿ ಆರೂ ಇಲ್ಲೆ.
ಆ ವಿಶೇಷ ಸ್ವರಲ್ಲಿ ಕೇಳ್ತ ಒಂದು ಮಾತು ಯೇವಾಗಳೂ ನೆಂಪಕ್ಕು,
“ಯೇ ಅಳಿಯೋ ಬಾ, ತಿಂಬೊ…”
ಬೇಜಾರದ ಸಂಗತಿ.ದೊಡ್ಡಜ್ಜ°ನ ಆತ್ಮಕ್ಕೆ ಶಾಂತಿ ಸಿಗಲಿ ಹೇಳಿ ಪ್ರಾರ್ಥನೆ
ದೊಡ್ಡ ಅಜ್ಜನ ದೊಡ್ದ ಮನಸಿನ ಮುಂದೆ
ದಡ್ಡ ಮಕ್ಕೊ ನಾವು ಎಲ್ಲರೂ
ಅಡ್ಡ ಬೀಳುವ ಅವರ ಆತ್ಮಕೆ ಇಂದು ನಾವೆಲ್ಲರೂ…..
ದೊಡ್ಡಜ್ಜನ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ.
ಬೇಜಾರದ ಸ೦ಗತಿ :(. ಇವರ ಬೈಲಿನ ಸಮಾರ೦ಭದಲ್ಲಿ ನೋಡಿದ್ನಾಗಿತ್ತು. ಅದೇ ನನ್ನ ಭಾಗ್ಯ ಹೇಳಿ ಗ್ರೇಶಿದ್ದೆ.
ಭಾವಪೂರ್ಣ ಶ್ರದ್ಧಾ೦ಜಲಿ. ಅವರ ಆತ್ಮಕ್ಕೆ ಭಗವ೦ತ ಚಿರಶಾ೦ತಿ ಕರುಣಿಸಲಿ
ಅವರ ಆತ್ಮಕ್ಕೆ ಶಾಂತಿ ಸಿಕ್ಕಲಿ…
🙁
ದೊಡ್ಡಜ್ಜನ ದಿವ್ಯಾತ್ಮಕ್ಕೆ ಚಿರಶಾಂತಿ ಸಿಕ್ಕಲಿ…
ದೊಡ್ಡಜ್ಜನ ಮುಖತಾ ಪರಿಚಯ ಇಲ್ಲದ್ರೂ ಇಲ್ಲಿ ಅವರ ಬಗ್ಗೆ ಓದಿ ಅಂತಹಾ ವಿಶಾಲ ಮನೋಭಾವದ ಸಜ್ಜನ ಇನ್ನಿಲ್ಲೆನ್ನೇ ಹೇಳಿ ಬೇಜಾರ ಆತು. ಅವರ ಆತ್ಮಕ್ಕೆ ಚಿರ ಶಾಂತಿ ಸಿಕ್ಕಲಿ.
ಈ ದೊಡ್ಡಜ್ಜನ ಬಗ್ಗೆ ಓದುವಗ ಎನಗೆ ಎನ್ನ ಗಂಡನ ಅಜ್ಜನ ಮನೆ ಅಜ್ಜ “ಹಾರಕರೆ” ಅಜ್ಜನನ್ನೆ ನೆಂಪಾತು.
ದೊಡ್ಡಜ್ಜನ ಮುಖತಾ ನೋಡಿ ಪರಿಚಯ ಇಲ್ಲದ್ರು ಅವರ ವೆಗ್ತಿತ್ವ ಪರಿಚಯ ಆತು. ಅವರ ಆತ್ಮಕ್ಕೆ ಶಾಂತಿಯಿರಲಿ. ಅವರ ಚುರುಕುತನ ನವಗೆಲ್ಲ ಸ್ಫೂರ್ತಿಆಗಲಿ.
ಶನಿವಾರ ಮಣಿಪಾಲಕ್ಕೆ ಹೋಗಿತ್ತಿದ್ದೆ.
ಆದಿತ್ಯ ವಾರ ಕಾರು ತೊಳಕ್ಕೊಂಡು ಇತ್ತಿದ್ದೆ. ದೊಡ್ಡಜ್ಜ ಅಲ್ಲೆ ತುಳಸಿ ಕೊಯ್ಕೊಂಡು ಇತ್ತಿದ್ದವು… “ನಿನ್ನೆ ಊರಿಂಗೆ ಹೋಗಿತ್ತಿದ್ದಿರ?” ಕೇಳಿದವು. “ಇಲ್ಲೆ, ಮಣಿಪಾಲಕ್ಕೆ ಹೋಗಿತ್ತಿದ್ದೆ” ಹೇಳಿದೆ. ” ತುಳಸಿ ಕೊಯ್ತಾ ಇದ್ದೆ, ಎನಗೆ ಹೋಪಲಿದ್ದು” ಹೇಳಿದವು. ಆನು ತಿಳ್ಕೊಂಡದು ಅಲ್ಲೇ ದೇವಸ್ಟಾನಕ್ಕೆ ಹೇಳಿ.
ಇಂದು ಉದೆಕಾಲ ನಾಲ್ಕು ಗಂಟೆಗೆ ಅವರ ಅಳಿಯ ಬಂದು ” ಮಾವ ನಿನ್ನೆ ಹೋದವು” ಹೇಳಿ ಹೇಳಿದವು.
ಮುಖತಹ ಅಥವ ಅವರ ಬಗ್ಗೆ ಕೇಳಿ ಗೊ೦ತಿಲ್ಲೆ. ಫೊಟೊ ನೋಡುವಗಳೇ ಅಧ್ಬುತ ವ್ಯಕ್ತಿತ್ವ ಅನ್ಸಿತ್ತು.ಅವರ ಆತ್ಮಕ್ಕೆ ಶಾಂತಿ ಸಿಕ್ಕಲಿ.
ಚವುತಿ ದಿನ ಕೊಡೆಯಾಲಲ್ಲಿದಪ್ಪ ಕಾರಣ ಕುಂಟಾಂಗಿಲ ಬಾವಂಗೆ ಪೋನು ಮಾಡಿತ್ತು ಯೇವ ಹೊಡೆಲಿದ್ದು ಹೇಳಿ. ಅಸ್ಟಪ್ಪಗ ಆಸ್ಪತ್ರೆ ಹೇಳಿದ° ಹಾಂಗೆ ಉದೆಕಾಲವೇ ಶರವು ಗಣಪತಿ ನಮಸ್ಕಾರ ಮಾಡಿ, ಗಂಧ ಪ್ರಸಾದ ತೆಕ್ಕೊಂಡು ಅಲ್ಲಿಗೆ ಹೋದರೆ ದೊಡ್ಡಜ್ಜ° “ಅಜ್ಜಕಾನ ಬಾವ°” ಹೇದು ದಿನಿಗೇಳಿದವು. ಅಷ್ಟೇ ಅಲ್ಲ ಮತ್ತೆ ಬೈಲ ಕಾರ್ಯಕ್ರಮವ ನೆಂಪು ಮಾಡಿ ಬಾರೀ ಕೊಶಿ ಆಯಿದು ಹೇಳಿಯೂ ಹೇಳಿದವು.
ಆದರೆ ಮದ್ಯಾನ್ನ ನಂತ್ರದ ಒಂದು ದಿನಲ್ಲಿ ಎಲ್ಲವೂ ಕಳುದತ್ತು. ನಾಕುವರೆ ಹೊತ್ತಿಂಗೆ ಸಣ್ಣ ಕೋಣೆಂದ ಕೋಣೆಂದ ದೊಡ್ಡ ಕೋಣೆಗೆ ಹೋದ ದೊಡ್ಡಜ್ಜ° ಮರುದಿನ ಅದೇ ಹೊತ್ತಿಂಗೆ ದೊ..ಡ್ಡ ಕೋಣೆಗೆ ಹೋದವು.
ಗಣಪತಿಯ ಗಂಧಪ್ರಸಾದವೂ ದೊಡ್ಡಕೋಣೆಗೆ ಹೋಯೆಕ್ಕಾರೆ ಮೊದಲು ಕುಡುದ ಗೆಂದಾಳಿ ಬೊಂಡದ ನೀರು ಅವರ ದೇಹಕ್ಕೆ ಶಾಂತಿ ಕೊಟ್ಟತ್ತೋ ಹೇಳುವಾಂಗೆ ನಮ್ಮಂದ ದೂರ ಆದವು. ಇದು ಅವರ ಹತ್ತಿರಂದ ತಿಳುದವಕ್ಕೆ ದೊಡ್ಡ ಆಘಾತವೇ..
ಅವು ಚಿರಶಾಂತಿಧಾಮಲ್ಲಿ ಆಶೀರ್ವಾದ ಮಾಡಿಗೊಂಡು ನಮ್ಮೊಟ್ಟಿಂಗೆ ಯಾವತ್ತೂ ಇರಲಿ..
ಸುದ್ದಿ ಕೇಳಿ ಬೇಜಾರಾತು. ಅವರ ಆತ್ಮಕ್ಕೆ ಶಾಂತಿ ಸಿಕ್ಕಲಿ. ಹೇಳಿ ದೇವರತ್ರೆ ಕೇಳಿಗೊಂಬ.
ತುಂಬಾ ಬೇಜಾರದ ಸುದ್ದಿ. ಗೋಪಜ್ಜ ಜೇಂಬ್ರಕ್ಕೆ ಬಂದರೆ ಮತ್ತೆ ಅದರ ಕಳೆಯೇ ಬೇರೆ. ಅಷ್ಟು ಉತ್ಸಾಹ. ಅವರ ಆದರ್ಶಂಗ ನಮಗೆಲ್ಲ ಮುಂದೆ ಮಾರ್ಗದರ್ಶಕವಾಗಲಿ ಹೇಳಿ ಆಶಿಸುತ್ತೆ. ಶ್ರೀರಾಮ ಅವರ ಆತ್ಮಕ್ಕೆ ಸದ್ಗತಿ ನೀಡಲಿ.
ಹಿರಿಯೋರ ಅಗಲುವಿಕೆ ಮನಸ್ಸಿನ್ಗೆ ತುಂಬಾ ನೋವು ಕೊಡ್ತು 🙁 ಅವರ ಜೀವನ ಅನುಭವಂಗಳ ಕೇಳಿ ತಿಳ್ಕೊಂಬ ಭಾಗ್ಯ ಇಲ್ಲೆ ನವಗೆ 🙁
ನಿನ್ನೆ ದೊಡ್ಡಭಾವ ಕಳುಸಿದ ಸಮೋಸ ಸಿಕ್ಕಿಯಪ್ಪಳೂದೆ ಬೇಜಾರಾತು. ಮನ್ನೆ ಬೆಂಗ್ಳೂರಿಲ್ಲಿ ಮಠಲ್ಲಿ ಕಾಂಬಲೆ ಸಿಕ್ಕಿ ಚೆಂದಕೆ ಮಾತಾಡಿದ್ದವು. ಗುರುಗಳೊಟ್ಟಿಂಗೆ ಭೇಟಿ ಅಪ್ಪಗ ಬೇಜಾರಿಲ್ಲಿ ಅವು ಹೇಳಿದ ಮಾತು ಈಗಳೂ ನೆಂಪಾವುತ್ತು. ಅವರ ಆತ್ಮಕ್ಕೆ ಪರಮಾತ್ಮ ಸದ್ಗತಿ ಕರುಣಿಸಲಿ.
ವಿಷಯ ನಿನ್ನೆಯೇ ಗೊಂತಾತು. ತಿಳುದು ತುಂಬಾ ಬೇಜಾರು ಆತು. ದೊಡ್ಡಜ್ಜನ ಆತ್ಮಕ್ಕೆ ಶಾಂತಿ ಸಿಕ್ಕಲಿ. ಅವಕ್ಕೆ ನುಡಿ ನಮನ ಸಲ್ಲುಸಿದ ಒಪ್ಪಣ್ಣಂಗೆ ಧನ್ಯವಾದಂಗೊ.
ಒಪ್ಪಣ್ಣ,
ದೊಡ್ಡಜ್ಜನ ಬಗ್ಗೆ ಎಂತ ಬರವದು? ಎಷ್ಟು ಬರವದು ಹೇಳಿಯೇ ಗೊಂತಾವುತ್ತಿಲ್ಲೆ. ಅವರ ವೆಗ್ತಿತ್ವವೇ ಹಾಂಗಿಪ್ಪದು. ಹೇಳಿ ಮುಗಿಯ. ಚೆನ್ನೈ ಭಾವ° ಹೇಳಿದ ಹಾಂಗೆ ಒಂದರಿ ಅವರ ಕಂಡು ಮಾತಾಡಿದವಂಗೆ ಅವರ ಮಾತುಗಳೂ ಮರೆಯ, ಅವರ ಒಟ್ಟಿಂಗೆ ಇದ್ದ ಸನ್ನಿವೇಶವೂ ಮರೆಯ.
ಒಪ್ಪಣ್ಣ,
ಬೈಲಿನ ದೊಡ್ಡಜ್ಜ° ಹೇಳುವ ಹೆಸರಿನ ಅವ್ವು ತುಂಬಾ ಇಷ್ಟಪಟ್ಟು ಎಲ್ಲೋರೂ ಹಾಂಗೆ ದಿನಿಗೆಳುವಾಗ ಅದರ ಕೊಶಿ ಪಟ್ಟುಗೊಂಡೂ ಇತ್ತಿದ್ದವು. ದೊಡ್ಡಜ್ಜ° – ಅವ್ವು ಮಾಂತ್ರ ಬೈಲಿನ ಒಂದು ಭಾಗ ಆಗಿದ್ದದಲ್ಲ, ಅವರ ಮನೆ, ಮನೆತನವೇ ಬೈಲಿನ ಒಂದು ಭಾಗ ಆಗಿತ್ತು, ಆಗಿದ್ದು, ಮುಂದೆಯೂ ಹಾಂಗೇ ಇರ್ತು.
ಸಮಷ್ಟಿ ಕುಟುಂಬವೇ ಕಣ್ಣಿಂಗೆ ಕಾಂಬಲೆ ಸಿಕ್ಕದ್ದ ಈಗಾಣ ಕಾಲಲ್ಲಿಯೂ ನಮ್ಮ ಗಡಿ ಜಾಗೆಲಿ ಇದ್ದುಗೊಂಡು ಒಂದು ಕುಟುಂಬವ ಒಗ್ಗಟ್ಟಿಲಿ ಮಡಗಿ, ಒಂದು ಮಹಾವೃಕ್ಷದ ಹಾಂಗೆ ಗಟ್ಟಿ ನಿಂದು, ತನ್ನ ಛಾಯೆಯಡಿ ಇಡೀ ಪರಿವಾರವ ಎಲ್ಲರ ಒಂದೇ ದೃಷ್ಟಿಲಿ ಬೆಳೆಶಿ, ಅವು ಹರಡಿ ವಿಶಾಲ ಅಪ್ಪದರ ಸಂತೃಪ್ತಿಲಿ ಕಂಡಂಥಾ ಜೀವ ದೊಡ್ದಜ್ಜಂದು. ಮನೆಂದ ಕೊಟ್ಟ ಕೂಸುಗೋ ಯಾವ ತಲೆಮಾರಿನವ್ವು ಆಗಿರಲಿ ಅವ್ವು ಎಲ್ಲೋರೂ ಒಂದೇ! ಮನೆ ಮಗಳಕ್ಕ. ಅವು ಮಾಂತ್ರ ಅಲ್ಲ, ಈ ಮಗಳಕ್ಕಳ ಕೊಟ್ಟ ಮನೆಲಿ ಅವರ ಮನೆಯ ಅಕ್ಕತಂಗೆಕ್ಕಳೂ ಕೂಡಾ ದೊಡ್ದಜ್ಜಂಗೆ ಮಗಳಕ್ಕಳ ಹಾಂಗೆ!! ಅದೇ ಭಾವನೆಲಿ ಮಾತಡ್ಸುಗು, ಹಾಂಗೆ ನೋಡಿಗೊಂಗು. ಅಳಿಯಂದ್ರು ಕೂಡಾ ಹಾಂಗೆ ದೊಡ್ದಜ್ಜಂಗೆ. ಮನೆತನದ ಅಳಿಯಂದ್ರು ಎಲ್ಲೋರೂ ಒಂದೇ! ಮಗಳಕ್ಕಳ ಸೌಭಾಗ್ಯ ಬೆಳಗಿದೊರು ಹೇಳ್ತ ಗವುರವ, ಅಭಿಮಾನ. ಮನೆಯ ಎಲ್ಲಾ ಬಂಧು ವರ್ಗವೂ ಕೂಡಾ ದೊಡ್ದಜ್ಜಂಗೆ ಆತ್ಮೀಯರೇ. ಅವರ ಒಗ್ಗಟ್ಟಿನ ಚಿತ್ರಣ ಅವರ ಅಕೇರಿಯ ಸಮೆಯಲ್ಲಿ ಕಂಡೇ ಕಂಡಿದು. ಮನೆ ಮಗಂದ್ರು, ಮನೆ ಮಗಳಕ್ಕ, ಅಳಿಯಂದ್ರು, ಬಂಧುಗ ಎಲ್ಲೋರೂ ಅವರ ಕಂಡಿದವು ಅವು ಒರಕ್ಕಲ್ಲದ್ದ ಒರಕ್ಕಿಂಗೆ ಜಾರುವ ಮದಲು. ಎಲ್ಲರ ಕಾಳಜಿ, ದೊಡ್ಡಜ್ಜನ ಮೇಲೆ ಇಪ್ಪ ಪ್ರೀತಿ ಎಲ್ಲವೂ ಎದ್ದು ಕಂಡುಗೊಂಡು ಇತ್ತು. ನಂದುವ ದೀಪ ಒಂದರಿ ಜೋರು ಉರಿವ ಹಾಂಗೆ ಒಂದರಿ ಉಶಾರಾದವು ಹೇಳುವ ಹಾಂಗೆ ಎಲ್ಲೋರ ಹತ್ತರೆ ಮಾತಾಡಿ ದೊಡ್ಡಜ್ಜ° ಹೇಳುವ ನಂದಾದೀಪ ನಂದಿತ್ತು. ದೀಪ ನಂದಿದರೂ ಅದರ ಪ್ರಭೆ ಬೈಲಿಂಗೆ ಯಾವಾಗಲೂ ಬೆಣಚ್ಚು ಕೊಡ್ತಾ ಇಕ್ಕು.
ಬೈಲಿನವರ ವಿಷಯಲ್ಲಿಯೂ ಹಾಂಗೆಯೇ! ಬೈಲಿಲಿ ಇಪ್ಪ ಒಪ್ಪ ಹೆಸರಿಲಿಯೇ ಎಲ್ಲೋರನ್ನೂ ಪ್ರೀತಿಲಿ ದಿನಿಗೆಳುಗು. ಬೈಲಿನ ಶುದ್ದಿಗಳ ಬಗ್ಗೆ ವಿಮರ್ಶೆ ಮಾಡುಗು. ಆರಾರು ಎಲ್ಲೆಲ್ಲಿ ಎಂತೆಂತ ಮಾಡ್ತವು ಹೇಳಿಯೂ ವಿಚಾರ್ಸುಗು ದೊಡ್ಡಜ್ಜ°. ನಾವು ಬೈಲಿನ ಜೆಂಬರ ಹೇಳಿ ದೊಡ್ಡಜ್ಜನ ಮನೆ ಜೆಂಬರಕ್ಕೆ ಹೋದರೆ ಅದು ನಮ್ಮ ಮನೆ ಜೆಂಬರ ಹೇಳಿಯೇ ಮಾಡುಗು ದೊಡ್ಡಜ್ಜ°. ಎಷ್ಟೇ ತೆರಕ್ಕಿಲಿದ್ದರೂ ಕೂಡಾ ಬೈಲಿನೋರ ಹುಡುಕ್ಕಿ ಬಂದು ಮಾತಾಡ್ಸಿ, ಎಲ್ಲಾ ವಿಚಾರ್ಸಿಕ್ಕಿ, ವಾಪಾಸು ಹೆರಟಪ್ಪಗ ಚೀಪೆಯೂ ಕಟ್ಟಿ ಕೊಡ್ಸುಗು!! ಆರಲ್ಲೂ ಬೇಧ ಇಲ್ಲೆ, ದೊಡ್ಡವ° ಸಣ್ಣವ° ಹೇಳ್ತ ಮಾತಿಲ್ಲೆ. ಈ ಎಲ್ಲಾ ವಿಷಯಲ್ಲಿಯೂ ದೊಡ್ಡಜ್ಜ° ತನ್ನ ದೊಡ್ಡತನವ ಮೆರದ್ದವು.
ಒಪ್ಪಣ್ಣ,
ಕಳುದ ವರ್ಷ ಚಾತುರ್ಮಾಸ್ಯಕ್ಕೆ ಬೈಲಿನವ್ವು ಸೇರಿ ಅಶೋಕೆಗೆ ಹೋಪಗಳೂ ದೊಡ್ಡಜ್ಜನ ಒಟ್ಟಿಂಗೆ ಕೊಶೀಲಿ ಹೋಗಿ ಬಪ್ಪ ಅವಕಾಶ ಸಿಕ್ಕಿದ್ದತ್ತು. ಕಾನಾವಣ್ಣ ಮತ್ತೆ ದೊಡ್ಡಜ್ಜನ ಜುಗಲ್ ಬಂದಿ ಹೋಪಗಳೂ ಬಪ್ಪಗಳೂ ಜೋರಾಗಿಯೇ ಇತ್ತು. ಈ ವರುಷ ಮೊನ್ನೆ ಮೊನ್ನೆ ಬೆಂಗ್ಳೂರಿಂಗೆ ಹೋಪಗಳೂ ಬಪ್ಪಗಳೂ ಅವ್ವು ಮಾತಾಡಿದ ಮಾತುಗೊ, ನೆಗೆಗೊ, ಎಲ್ಲವೂ ಇನ್ನೂ ಕೆಮಿಲಿ ಕೇಳಿದ ಹಾಂಗೆ ಆವುತ್ತು. ಮಾಷ್ಟ್ರುಮಾವನೂ, ದೊಡ್ದಜ್ಜನೂ ಸೇರಿ ಮಾತಾಡುವಾಗ ಬಾಕಿದ್ದೋರಿಂಗೆ ಕೇಳುಲೆ ಅದೊಂದು ಅಪೂರ್ವ ಸಂಗತಿಯೇ. ಸುಮಾರು ವಿಷಯಂಗ ಮಥನ ಅಪ್ಪಗ ಮನಸ್ಸೂ ತಲೆಯೂ ಎರಡೂ ತುಂಬುತ್ತು. ಕಾನಾವಣ್ಣ ಬಯಿಂದಾ° ಇಲ್ಲೆ ಹೇಳಿ ಸುಮಾರು ಸರ್ತಿ ಹೇಳಿಗೊಂಡು, ಇಲ್ಲಿ ಎತ್ತುವಾಗ ನೆಡು ಇರುಳಾದರೂ ಕೂಡಾ ಒಳ ಬಂದು, ಕಾದು ಕೂದಿದ್ದ ಅವನ ಮಾತಾಡ್ಸಿಕ್ಕಿಯೇ ಹೋದ್ದದು ದೊಡ್ಡಜ್ಜ°. ಅಷ್ಟುದೇ ಪ್ರೀತಿ ದೊಡ್ದಜ್ಜಂಗೆ ತನ್ನ ಹತ್ತರೆ ಆದೋರ ಹತ್ತರೆ.
ಒಪ್ಪಣ್ಣ, ಮೊನ್ನೆ ಗುರುಭೇಟಿ ಆದ ಕೂಡ್ಲೇ ಇನ್ನಾಣ ಭೇಟಿಯ ಬಗ್ಗೆ ಮಾತಾಡುವಾಗ ದೊಡ್ಡಜ್ಜನ ಹತ್ರೆ ಮಾತಾಡ್ಸೆಕ್ಕು, ಅವರನ್ನೂ, ಅವರ ಹತ್ತರೆಂದಲೇ ಶುದ್ದಿಗಳ ಬೈಲಿಂಗೆ ತರೆಕ್ಕು ಹೇಳಿ ನಾವು ಕೂಡ್ಸಿ, ಕಳದು ಲೆಕ್ಕ ಹಾಕುವ ಹೊತ್ತಿಂಗೆ ಅವ್ವು ಯಾವ ಸೂಚನೆಯೂ ಕೊಡದ್ದೆ ನೀನು ಹೇಳಿದ ಹಾಂಗೆ ಎದ್ದಿಕ್ಕಿ ಹೋದ ಹಾಂಗೆ ಹೋದವು. ಬೈಲಿನ ಬಗ್ಗೆ ತನ್ನ ಮನೆಯ ಹಾಂಗೆ ಅಭಿಮಾನ ಹೊಂದಿದ್ದ ದೊಡ್ಡಜ್ಜ°, ಎಲ್ಲರನ್ನೂ ಪ್ರೀತಿಯ ಪಾಶಲ್ಲಿ ಕಟ್ಟಿ ಹಾಕಿದ್ದ ದೊಡ್ಡಜ್ಜ° ಎಲ್ಲೋರಿಂದಲೂ ವಿಮುಖನಾಗಿ ಯಾವ ಮಮಕಾರವೂ ಇಲ್ಲದ್ದ ಹಾಂಗೆ ಒಬ್ಬ ಯೋಗಿಯ ಹಾಂಗೆಯೇ ಈ ಲೋಕಂದ ಹೋದವು. ಎಂಗಳ ಕುಟುಂಬದ ಮಗಳ ಸೌಭಾಗ್ಯ ಕಾಲನ ಕೈವಶ ಆತು. ಹುಟ್ಟು- ಸಾವು ಎಲ್ಲವೂ ಪೂರ್ವ ನಿರ್ಧಾರಿತ. ಅದರ ನಡುಕೆ ಈ ಲೋಕಲ್ಲಿ ನಾವು ಹೇಂಗೆ ಬದುಕ್ಕಿ ಬಾಳೆಕ್ಕು, ಹೇಂಗೆ ನಮ್ಮ ಜೀವವ ಇನ್ನೊಬ್ಬಂಗೆ ಸಮರ್ಪಣೆ ಮಾಡಿ ಬದುಕ್ಕೆಕ್ಕು ಹೇಳುದು ದೊಡ್ಡಜ್ಜ° ನವಗೆ ತೋರ್ಸಿ ಕೊಟ್ಟ ಪಾಠ.
[ದೊಡ್ಡಜ್ಜನ ವೆಗ್ತಿತ್ವದ ಒಂದು ಭಾಗವೇ ಆಗಿದ್ದ ಆ ಟಿಕ್ಕಿಯ ತಿರುಗಣೆ ಒಂದೊಂದೇ ಸುತ್ತು ಬಿಚ್ಚುವಗ ಅಂತೂ – ತಲೆಮಾರಿನ ಒಂದೊಂದೇ ಕೊಂಡಿಗೊ ಕಳಚ್ಚಿದ ಹಾಂಗೆ – ಹವ್ಯಕ ಇತಿಹಾಸದ ಒಂದೊಂದೇ ಪುಟ ಮೊಗಚ್ಚಿದ ಹಾಂಗೆ – ಕಾಸ್ರೋಡಿನ ಕನ್ನಡ ತಂತುಗೊ ಕಡುದ ಹಾಂಗೆ – ಹಳ್ಳಿಯನ್ನೇ ಒಪ್ಪಿ ಅಪ್ಪಿದ ಬ್ರಾಹ್ಮಣ್ಯವೊಂದು ಕಳದು ಹೋದ ಹಾಂಗೆ – ಕಂಡುಗೊಂಡಿತ್ತು]
ಇದು ಸತ್ಯದ ಮಾತು ಒಪ್ಪಣ್ಣ. ಅವರ ಅಂತಿಮ ಕ್ಷಣಂಗಳ ನೆನೆಸುವಾಗ ಹಾಂಗೆ ಅನುಸುತ್ತು. ಒಂದೊಂದೇ ಕೊಂಡಿ ಕಳಚಿ ಹೋದವು ಹೇಳಿ. ಕುಂಟಾಂಗಿಲ ಭಾವ° ಮನ್ನೆ ದೊಡ್ದಜ್ಜಂಗೆ ಉಶಾರಿಲ್ಲದ್ದೆ ಆದ ಸೂಚನೆ ಸಿಕ್ಕುವಾಗ ಹೇಳಿದ°- ‘ಶ್ರೀ ಅಕ್ಕೋ, ದೊಡ್ಡಜ್ಜ° ನಮ್ಮ ಸೋಲ್ಸಿದವು’ ಹೇಳಿ. ಈಗ ಅನುಸುತ್ತು. ದೊಡ್ಡಜ್ಜ° ಇಲ್ಲದ್ದೆ ನಾವು ಸೋತತ್ತು ಹೇಳಿ. ಒಪ್ಪಣ್ಣ ಬೈಲಿಲಿ ಯಾವುದೇ ಶುದ್ದಿ ಬರೆಯಲಿ ದೊಡ್ಡಜ್ಜ° ಅದರ ಬಗ್ಗೆ ತಿಳ್ಕೊಂಡೇ ಇರ್ತವು. ಒಪ್ಪಣ್ಣ ದೊಡ್ಡಜ್ಜನ ಬಗ್ಗೆಯೇ ಬರದ ಶುದ್ದಿ ಬಂದಪ್ಪಗ ಮಾಮಾಸಮ ಹೇಳಿದ°, ದೊಡ್ಡಜ್ಜನ ಬಗ್ಗೆಯೇ ಬಂದ ಶುದ್ದಿ, ಆದರೆ ಅದರ ಕೇಳುಲೆ ದೊಡ್ಡಜ್ಜನೇ ಇಲ್ಲೆ ಹೇಳಿ! ಸುಭಗಣ್ಣ ಇನ್ನಾರಿಂಗೆ ಬೈಲಿನ ಶುದ್ದಿಗಳ ಹೇಳುಗು? ಬೇಜಾರಾವುತ್ತು ಅವ್ವಿಲ್ಲದ್ದ ಇನ್ನಾಣ ದಿನಂಗಳ ನೆನೆಸುವಾಗ. ಅವರ ಅನುಭವದ ಮಾತುಗ ಇಲ್ಲದ್ದ ಜೆಂಬರಂಗಳ ನೆನೆಸುವಾಗ. ಅವ್ವಿಲ್ಲದ್ದ ಆ ದೊಡ್ಡ ಮನೆತನವ ಗ್ರೇಶುವಾಗ. ದೊಡ್ಡಜ್ಜ° ನಮ್ಮ ಒಟ್ಟಿಂಗೆ ಇದ್ದು ಇಷ್ಟು ಮಾರ್ಗದರ್ಶನ ಕೊಟ್ಟ ದಾರಿಲಿ ನಾವು ನಡದರೆ ಅದುವೇ ನಾವು ಅವಕ್ಕೆ ಕೊಡುವ ನಿಜವಾದ ಶ್ರದ್ಧಾಂಜಲಿ.
ಒಪ್ಪಣ್ಣನ ಬೈಲಿನ ಬಂಧುಗೊಕ್ಕೂ, ದೊಡ್ಡಜ್ಜನ ಮನೆಯ ಬಂಧುಗೊಕ್ಕೂ ಅವರ ಆಶೀರ್ವಾದದ ನೆರಳಿಲಿದ್ದ ಎಲ್ಲೋರಿಂಗೂ ಅವರ ಈ ಅಂತಿಮ ಯಾತ್ರೆಯ ದುಃಖವ ಭರಿಸುವ ಶಕ್ತಿ ಶ್ರೀಗುರು ದೇವರುಗೊ ಕೊಡಲಿ..
ದೊಡ್ಡ ಮನಸ್ಸಿನ ನೆಗೆ ನೆಗೆ ಮೋರೆಯ ದೊಡ್ಡಜ್ಜ° ಬೈಲಿಲಿ ನಿರಂತರವಾಗಿ ಬತ್ತಾ ಇರಲಿ..
ಪರಾಸುವಿಗೆ ಸಾಯುಜ್ಯ ಸಿಗಲಿ, ಕುಟುಂಬದ ಬಳಗಕ್ಕೆ ದುಃಖ ತಡ್ಕಂಬ ಶಕ್ತಿ ಬರಲಿ ಹೇಳಿ, ಶ್ರೀಗುರುದೇವತೆಗಳ ಬೇಡ್ಕತ್ತೆ.
ಹೊತ್ತೋಪಗ ಅಭಾವನತ್ತರೆ ಮಾತಾಡಿ ದೊಡ್ಡಜ್ಜನ ಅರೋಗ್ಯವ ವಿಚಾರ್ಸಿಯೊಂಡು, ಮತ್ತೆ ಅವರ ಅಳಿಯನತ್ತರವೂ ಮಾತಾಡಿ ದೊಡ್ಡಜ್ಜನ ವಿಶಯವನ್ನೇ ಮಾತಾಡಿದ್ದು. ಅದಾಗಿ ಕೆಲವೇ ನಿಮಿಶಲ್ಲಿ “ದೊಡ್ಡಜ್ಜ ಕಣ್ಮುಚ್ಚಿದವು” ಹೇಳ್ತ ಶುದ್ದಿ ಕೇಳಿ ದುಃಖ ಆತು.
ಶ್ರದ್ಧಾಂಜಲಿ.
ಪ್ರೀತಿಯ ದೊಡ್ದಜ್ಜಂಗೆ ಅಶ್ರುತರ್ಪಣ, ಶ್ರದ್ಧಾಂಜಲಿ.
ಅಗಲಿದ ಆತ್ಮಕ್ಕೆ ಭಾವಪೂರ್ಣ ಶೃದ್ಧಾ೦ಜಲಿ.
ಅವರ ಪರಿಚಯ ಎನಗಿಲ್ಲೆ.ಆದರೆ ಅವರ ಬಗ್ಗೆ ಓದಿ,ಅಭಿಮಾನ ಬಂತು.
ಅವರ ಆತ್ಮಕ್ಕೆ ಶಾಂತಿಯಿರಲಿ.
ಕುಂಟಾಂಗಿಲ ಭಾವ ಮತ್ತೆ ಅಣ್ಣ ಅಕ್ಕಂದಿರ ಗಂಟುಪುಡ್ಕಾಯಿ ರಾಗಕ್ಕೆ ತನ್ನ ಗಂಭೀರ ಸ್ವರವ ಶ್ರುತಿಗೂಡಿಸಿ ಜೋಗುಳ ಹಾಡಿ, ಮಕ್ಕಳೊಟ್ಟಿಂಗೆ ಮಕ್ಕಳಾಂಗೆ, ಹೊಂತಗಾರ ಜವ್ವನಿಗರ ನಡುಕೆ ಕಡುಜವ್ವನಿಗನಾಗಿ, ಪ್ರಬುದ್ಧರ ಮಧ್ಯೆ ಪ್ರಬುದ್ಧನಾಗಿಯೂ ಎಂದಿಂಗೂ ಎಲ್ಲರ ಮನಸ್ಸಿಲ್ಲಿ ಅಚ್ಚಳಿಯದ್ದೆ ಇತ್ತಿದ್ದವು ದೊಡ್ಡಜ್ಜ°.
ಮಂದಹಾಸಲ್ಲಿ ಬಪ್ಪ ದೊಡ್ಡಜ್ಜನ ಮಾತಿನ ಠೇಂಕಾರ ಕೆಮಿಗೂ ಮಾಧುರ್ಯ, ಮನಸ್ಸಿಲ್ಲಿ ಆಳವಾಗಿ ನಿಂಬಂತಾದ್ದು ಹೇಳ್ವದು ದೊಡ್ಡಜ್ಜನ ವ್ಯಕ್ತಿತ್ವದ ಸಂಕೇತ.
ಅವರ ಪ್ರೀತಿಯ ಮಾತುಗೊ ಎಂದಿಂಗೂ ಬೈಲಿಲಿ ಪ್ರತಿಧ್ವನಿಯಾಗಿಯೊಂಡೇ ಇಕ್ಕು.
ಜನಾನುರಾಗಿಯಾಗಿ ಏವ ಹೊಗಳಿಕೆಯನ್ನೂ ಬಯಸ್ಸದ್ದ, ಮಾತ್ನಾಡಿಸಿದವರ ಮನಸ್ಸಿಂದ ಎಂದಿಂಗೂ ಅಳಿಯದ್ದ, ತನಗೇನೂ ಬೇಡ, ಇಪ್ಪವೆಲ್ಲೋರೂ ತನ್ನ ಮಕ್ಕಳಾಂಗೆ ಹೇಳ್ವ ಮನೋಭಾವದ, ಸರಳ ಸಜ್ಜನಿಕೆಯ ಸನಾತನ ವ್ಯಕ್ತಿತ್ವ, ಅನುಭವಿ, ಸಂಘಟಕ°, ಗುರಿಕ್ಕಾರ°, ನಮ್ಮಲ್ಲರ ಹಿರಿಯವನಾಗಿ, ಕಿರಿಯರೊಟ್ಟಿಂಗೂ ಏವತ್ತೂ ಬೆರಕೆಯಾಗ್ಯೊಂಡಿತ್ತಿದ್ದ ದೊಡ್ಡಜ್ಜನ ಅಗಲಿಕೆ ನಮ್ಮ ಬೈಲಿಂಗೆ ದೊಡ್ಡ ಆಘಾತ.
ಮನ್ನೆ ಮನ್ನೆ ದೊಡ್ಡಜ್ಜನೇ ತೋಟಂದ ಹೆರ್ಕಿ ಸುಲುದು ಚೀಲಲ್ಲಿ ತುಂಬ್ಸಿ ಬೆಂಗಳೂರುವರೇಂಗೆ ತಂದುಕೊಟ್ಟ ಹಣ್ಣಡಕ್ಕೆ ತಿಂದು ತುಪ್ಪಿ ಮುಗಿವಂದ ಮದಲೇ ದೊಡ್ಡಜ್ಜ° ಈ ಲೋಕ ಬಿಟ್ಟುಹೋದ್ದು ವಿಷಾದ.
ಅವರ ಪರಲೋಕಯಾತ್ರೆ ಸುಗಮವಾಗಲಿ, ಅವಕ್ಕೆ ಸದ್ಗತಿ ಪ್ರಾಪ್ತಿಯಾಗಲಿ ಹೇದು ಬೈಲ ಹತ್ತು ಸಮಸ್ತರೊಟ್ಟಿಂಗೆ – ‘ಚೆನ್ನೈವಾಣಿ’.
ನಿಜಕ್ಕೂ ದುಃಖದ ಸಂಗತಿ. ದೊಡ್ಡಜ್ಜ°ನ ಆತ್ಮಕ್ಕೆ ಶಾಂತಿ ಸಿಗಲಿ ಹೇಳ್ತ ಪ್ರಾರ್ಥನೆ