Oppanna.com

ಮಧುರ ಗೀತಾಂಜಲಿ – ಪುಸ್ತಕ ಪರಿಚಯ

ಬರದೋರು :   ತೆಕ್ಕುಂಜ ಕುಮಾರ ಮಾವ°    on   08/10/2012    21 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

ಭಾರತೀಯ ಸಾಹಿತ್ಯ ಕ್ಷೇತ್ರಲ್ಲಿ ನೋಬೆಲ್ ಪ್ರಶಸ್ತಿ ಪಡಕ್ಕೊಂಡ ಏಕೈಕ ಕವಿ ಗುರುದೇವ” ರಬೀಂದ್ರನಾಥ ಠಾಗೋರರು. ಅವರ ಕವನ ಸಂಕಲನ “ಗೀತಾಂಜಲಿ”ಗೆ ಆ ಹೆಗ್ಗಳಿಕೆ ಇಪ್ಪದು.ಇದರಲ್ಲಿ ಇಪ್ಪ ಒಟ್ಟು 103 ಪದ್ಯಂಗೊ ಮೂಲತಃ ಬೆಂಗಾಲಿ ಭಾಷೆಲಿ ಬರದರೂ, ಇಂಗ್ಲೀಶಿಂಗೆ ತರ್ಜುಮೆ ಮಾಡಿದ್ದು ಠಾಗೋರರೆ. ಮುಂದೆ ಈ ಕವಿತೆಗೊ ದೇಶ ವಿದೇಶಂಗಳ ಹಲವಾರು ಭಾಷೆಗೊಕ್ಕೆ ಅನುವಾದ ಆಯಿದು. ಕನ್ನಡಲ್ಲಿಯೂ ಅನುವಾದ ಆಯಿದಡ. ಒಂದು ಕವನವಂತೂ ಮದಲಿಂಗೆ ಶಾಲೆಗಳಲ್ಲಿ ಪ್ರಾರ್ಥನಾ ಗೀತೆ ಆಗಿತ್ತಿದ್ದಡ.

ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ|
ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ||
.………………………………………….
…………………………………………..

ಪುಸ್ತಕದ ಮೋರೆಪುಟ

ಎಲ್ಲಿ ದಣಿವಿರದ ಸಾಧನೆಯು ಸಫಲತೆ ಕಡೆಗೆ|
ತೋಳ ನೀಡಿಹುದೊ ತಾನಾನಾಡಿನಲ್ಲಿ||

ಬಹುಶಃ ಈ ಪ್ರಾರ್ಥನಾ ಗೀತೆಂದ ಪ್ರಚೋದನೆಗೊಂಡು,ಠಾಗೋರರ ಗೀತಾಂಜಲಿಯ ಎಲ್ಲ ಕವನ ಕುಸುಮಂಗಳ ಓದಿ,ತೊಡಕಿಲ್ಲದ್ದ ತಿಳುವಳಿಕೆಂದ ಮನನ ಮಾಡಿ,ಕನ್ನಡಕ್ಕೆ ಅನುವಾದ ಮಾಡುವ ದೊಡ್ಡ ಸಾಹಸಕ್ಕೆ ಕೈ ಹಾಕುದು ಒಬ್ಬನ “ಅಳುಕಿಲ್ಲದ ಮನಸ್ಸಿನ” ತೋರ್ಸುತ್ತು.  ಸುಮಾರು 22 ವರ್ಷ ಪರ್ಯಂತ “ಗೀತಾಂಜಲಿ”ಯ ಒಂದೊಂದು ಕವನವನ್ನೂ ಓದಿ, ಆಸ್ವಾದಿಸಿ ಅವುಗಳ ಭಾವವ ಮನನ ಮಾಡಿಗೊಂಡು ಕನ್ನಡಕ್ಕೆ ಅನುವಾದಿಸಿದ್ದವು, ನಮ್ಮ ಬೈಲಿನ ‘ಬಹುಮಾನ್ಯ’ ಕವಿ – ಶ್ರೀ ಬಾಲ ಮಧುರಕಾನನ. ಈ ದೀರ್ಘ ಸಮಯಲ್ಲಿ ಪ್ರತೀ ಕವನಂಗಳ ಮತ್ತೆ ಮತ್ತೆ ಅಭ್ಯಾಸ ಮಾಡಿ ಅವುಗಳ ಭಾವ-ಅರ್ಥ ವಿಸ್ತಾರ ಆದ ಹಾಂಗೆಲ್ಲ ತಿದ್ದಿ ಬರದು,ಬರದು ತಿದ್ದಿ “ಭಾವಾನುವಾದ” ಕಾರ್ಯವ ಒಂದು ತಪಸ್ಸಿನ ಹಾಂಗೆ ಮಾಡಿದ್ದವು. ‘ಗುರುದೇವ’ರಿಂಗೆ ತನ್ನದೇ ರೀತಿಲಿ ವಿಶಿಷ್ಠ ಪುಷ್ಫಾಂಜಲಿ ರೂಪಲ್ಲಿ “ಮಧುರ ಗೀತಾಂಜಲಿ”ಯ ಅರ್ಪಿಸಿ,ಕನ್ನಡಿಗರ ಅಸ್ವಾದನೆಗೆ ಕೊಟ್ಟಿದವು. ಇದು ಕವಿಯ ದಣಿವಿಲ್ಲದ್ದ ಸಾಧನೆಗೆ ಸಿಕ್ಕಿದ ಸಫಲತೆ !

ಶ್ರೀ ಬಾಲ ಮಧುರಕಾನನರ ಕಾವ್ಯ ರಚನಾ ಕೌಶಲ್ಯದ ಪರಿಚಯ ‘ಒಪ್ಪಣ್ಣ’ಬೈಲಿಂಗೆ ಹೊಸತ್ತೇನಲ್ಲ. ವಿಶು ವಿಶೇಷ ಸ್ಪರ್ಧೆ -2012 ರ ಕವಿತಾ ಸ್ಪರ್ಧೆಲಿ ಇವರ ಕವನ “ಅಬ್ಬಿ”ಗೆ ಪ್ರಥಮ ಬಹುಮಾನ ಸಿಕ್ಕಿದ್ದು ನಾವಾರೂ ಮರದ್ದಿಲ್ಲೆ. ಆ ಮೇಲೆಯೂ ‘ಬಾಲಣ್ಣ’ ಹೆಸರಿಲಿ ಹಲವಾರು ಕವನಂಗಳ ರಚಿಸಿ ಬೈಲಿನೋರ ರಂಜಿಸಿದ್ದವು. ‘ಮಧುರ ಗೀತಾಂಜಲಿ’ಲಿ ಬಾಲಣ್ಣ ವಿಶೇಷ ಶ್ರದ್ಧೆ,ಆಸಕ್ತಿಂದ ಠಾಗೋರರ ಕವನಂಗಳ ತುಂಬ ಆಪ್ಯಾಯಮಾನವಾಗಿ ಕನ್ನಡಕ್ಕಿಳಿಸಿ ತಮ್ಮ ಕಾವ್ಯ ಪ್ರತಿಭೆಯ ತೋರ್ಸಿದ್ದವು.

ವಿಮರ್ಶಾತ್ಮಕ ಮುನ್ನುಡಿ ಬರದ ನಾಡೋಜ ಶ್ರೀ ಕಯ್ಯಾರರು ಬಾಲಣ್ಣನ ಸಾಹಸವ ಮುಕ್ತ ಮನಸ್ಸಿಂದ ಅಭಿನಂದಿಸಿದ್ದವು. ರಬೀಂದ್ರನಾಥ ಠಾಕೂರರ ಹೆಸರನ್ನು ಕೀರ್ತಿಯನ್ನು ವಿಶ್ವದಾದ್ಯಂತ ಹೆಚ್ಚಿನ ವಿದ್ಯಾವಂತ ನಾಗರಿಕರು ಕೇಳಿರುವುದು ಸಹಜವಾದರೂ ಅವರ ಸಾಹಿತ್ಯ ಸಂಪತ್ತನ್ನು ಎಲ್ಲರೂ ಸರಿಯಾಗಿ ತಿಳಿದಿರಲಾರರು.ಅದಾಗಿ ಠಾಕೂರರ ಸಾಹಿತ್ಯ ಕೃತಿಗಳು ಇಂತು ಎಲ್ಲ ಭಾಷೆಗಳಲ್ಲೂ ಅನುವಾದಗೊಂಡಲ್ಲಿ ಜನತೆ,ಅದರಿಂದ ಉತ್ತಮ ಉದಾತ್ತ ಜೀವನ ನಡೆಸಲು ಸಹಾಯವಾಗುವುದು.ಶ್ರೀ ಬಾಲ ಮಧುರಕಾನನರು ಈ ಸತ್ಸಂದರ್ಭಕ್ಕೆ ಅನುವಾದದಿಂದ ನೆರವಾಗಿದ್ದಾರೆ.ಪ್ರತಿಭಾ ಸಹಸ್ರ ಕಿರಣಗಳಿಂದ ಸಾಹಿತ್ಯ ಸಾಮ್ರಾಜ್ಯದಲ್ಲಿ ರಾರಾಜಿಸುವ ವಿಶ್ವಕವಿ ರಬೀಂದ್ರನಾಥರ ಅಮರಕೃತಿಯನ್ನು ಆಕರ್ಷಕ ಹಾಗೂ ಸರಲ ಅನುವಾದದ ಸಾಧನೆಯಿಂದ ಪ್ರಪಂಚವನ್ನೇ ಬೆಳಗಿದ ಆ ಕವಿ ರಬೀಂದ್ರರಿಗೆ ತನ್ನೀ ಅರ್ಘ್ಯಾಂಜಲಿಯ ಕಾಣ್ಕೆ ನೀಡಿದ ಶ್ರೀ ಬಾಲ ಮಧುರಕಾನನರು ಜೀವನದ ಪರಮ ಸಿದ್ಧಿ ಪಡೆಯಲಿ ಎಂದು ಹಾರೈಸುತ್ತೇನೆ.

ಮೇಲೆ ಹೇಳಿದ ಪ್ರಾರ್ಥನಾ ಗೀತೆ, ಮೂಲ ಇಂಗ್ಲೀಷ್ ಭಾಷೆಲಿಪ್ಪದರ ನೋಡುವೊ.

ಪುಸ್ತಕದ ಹಿಂದಾಣ ಪುಟ
ಪುಸ್ತಕದ ಹಿಂದಾಣ ಪುಟ

Where the mind is without fear and the head is held high
Where knowledge is free
Where the world has not been broken up into fragments
By narrow domestic walls
Where words come out from the depth of truth
Where tireless striving stretches its arms towards perfection
Where the clear stream of reason has not lost its way
Into the dreary desert sand of dead habit
Where the mind is led forward by thee
Into ever-widening thought and action
Into that heaven of freedom,
My Father, let my country awake.

ಅದರ ಭಾವಾನುವಾದವ ಬಾಲಣ್ಣ “ನಾಡನೆಚ್ಚರಿಸಯ್ಯ” ಹೆಸರಿಲಿ ತುಂಬ ಚೆಂದಕ್ಕೆ ಮಾಡಿದ್ದವು.

ಮನಕೆ ನಿರ್ಭಯವೆಲ್ಲಿ ಶಿರವೆಲ್ಲಿ ಬಾಗಿರದೊ
ತಿಳುವಳಿಕೆ
ಮುಕ್ತವಾಗಿರುವುದೆಲ್ಲಿ
ಮನೆಭಿತ್ತಿ
ಬೆಸೆದಿರಲದಲ್ಲಿ ಬಿರುಕೊಡೆದಿಲ್ಲ
ಒಡೆದು
ಚೂರಾಗದಾ ನಾಡದೆಲ್ಲಿ

ಸತ್ಯಮೂಲದಿನೆಲ್ಲಿ ನಲ್ವಾತು ಹೊಮ್ಮುವುದೊ
ಸದ್ವಿಚಾರಗಳೆಲ್ಲ
ಹರಿವುದೆಲ್ಲಿ
ಎಲ್ಲಿ
ದಣಿವಿರದ ಗೈಮೆಯು ಕೈಯ್ಯ ನೀಡಿಹುದೊ
ಪರಿಪೂರ್ಣ
ಸಫಲತೆಯ ಕಡೆಗದೆಲ್ಲಿ.

 ಕೆಡುಕು ಆಚಾರಗಳ ಮರಳಲ್ಲಿ ಇಂಗದಿಹ
ಸದ್ವಿಚಾರವೆ
ಹರಿವ ತೊರೆಯದೆಲ್ಲಿ
ಎಮ್ಮ
ಮನವನು ಮುಂದಕೊಯ್ಯುತಿಹೆ ಬಿತ್ತರಕೆ
ಚಿಂತನಕೆ
ತೊಡಗಿಸುತ ನೀನದೆಲ್ಲಿ.

ಅಲ್ಲಿ ಸ್ವಾತಂತ್ರ್ಯದಾ ಸೊಗದ ಸಗ್ಗದಲಿ
ನಾಡನೆಚ್ಚರಿಸಯ್ಯ
ಓ! ಎನ್ನ ತಂದೆ.

 ಕವಿ ಠಾಗೋರರ ಜೀವನ ಕಾಲ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಪರ್ವ ಕಾಲ. ತಿಲಕ,ಗೋಖಲೆ,ಗಾಂಧೀಜಿ ಇತ್ಯಾದಿ ರಾಷ್ತ್ರ ನಾಯಕರುಗಳ ಹೋರಾಟದ ಕರೆಗೆ ಇಡೀ ನಾಡು ಎಚ್ಚರಗೊಂಡು ಕೈ ಜೋಡಿಸಿದ ಸಮಯಲ್ಲಿ ಠಾಗೋರರು ಸ್ಪಂದಿಸಿ ಈ ರೀತಿ ಮಾರ್ಮಿಕವಾಗಿ ಹಾಡಿದವು.ರಾಷ್ಟ್ರಭಕ್ತಿಯ ಸಂದೇಶದ ಒಟ್ಟಿಂಗೆ ಪಾರಮಾರ್ಥಿಕ ಸಂದೇಶಗಳನ್ನೂ ತಮ್ಮ ಕವಿತೆ ಮೂಲಕ ನಾಡಿಂಗೆ ಕೊಟ್ಟಿದವು. ‘ಶಾಂತಿನಿಕೇತನ’ ಗುರುಕುಲಲ್ಲಿ ಆಶ್ರಮ ಜೀವನ ನಡೆಶಿಗೊಂಡು, ವಿಶ್ವ ಜನತೆಗೆ ‘ಸಂತವಾಣಿ’ಯ ಹಾಂಗಿಪ್ಪ ವಿಶಾಲ ಅರ್ಥಗರ್ಭಿತವಾಗಿಪ್ಪ ಸಂದೇಶವ ತಮ್ಮ ಗೀತೆಗಳ ಮೂಲಕ ಕೊಟ್ಟಿದವು.ಇಂಥಾ ಅಸಾಮಾನ್ಯ ಪ್ರತಿಭೆಯ ‘ವಿಶ್ವಕವಿ’ಯ ಅತ್ಯುತ್ಕೃಷ್ಟ ಕೃತಿಯ ಕನ್ನಡಕ್ಕೆ ಕೊಟ್ಟ ಬಾಲಣ್ಣ,ಧನ್ಯರೇ ಸರಿ.

….ನನ್ನ ಗಾನದ ರೆಂಕೆ ಹರಡಿ ವಿಸ್ತಾರದಲಿ
ಅಂಚುಗಳ
ಸೋಕಿಸಿತು ನಿನ್ನ ಪದಗಳಿಗೆ….
ಇದು ‘ನನ್ನ ಹಾಡು’ಕವನದ ತುಣುಕು.

‘ದುಡಿಮೆಯೇ ದೇವರು’ ಹೇಳ್ತ ಸಂದೇಶವ ಅದೇ ಹೆಸರಿನ ಕವನಲ್ಲಿ ಕಾಂಬಲಕ್ಕು.

ಎಲ್ಲಿ ರೈತನು ಒರಟು ನೆಲವ ಹದಗೊಳಿಸುವನೊ
ಎಲ್ಲಿ
ಬೀದಿಯ ಕೂಲಿ ಕಲ್ಲನೊಡೆವಲ್ಲಿ
ಅಲ್ಲೆ
ಇರುವನು ಅವನು ಬಿಸಿಲು ಮಳೆ
ಲೆಕ್ಕಿಸದೆ….

ಆತ್ಮ ಪರಮಾತ್ಮ ಸಂಬಂಧ೦ಗಳ ಹೆಣೆವ ಒಂದು ಮನೋಜ್ಞ ಕವಿತೆ ‘ನಿದಿರೆ ಕಳೆಯಲಿ’ ಹೀಂಗಿದ್ದು

….ಅವ ಬಂದು ಬಾಗಿಲಲಿ ನಿಂದುದಾದರೆ ನೀವು
ತಡೆಯದಿರಿ
ಅವಗಾಗಿ ಬಿಡಿದಾರಿಯನ್ನು…..

ನನ್ನ ದೊರೆ ಬಂದೆನ್ನ ಬಾಗಿಲಲಿ ನಿಂದರೂ
ನಿಶ್ಚಿಂತೆಯಾಗೆನ್ನ
ನಿದ್ರಿಸಲು ಬಿಡಿರಿ….

ಎಲ್ಲ ರೂಪಗಳಿಂದ ಎಲ್ಲ ಬೆಳಕುಗಳಿಂದ
ಮೊದಲವನು
ಎನ್ನೆದುರು ಬಂದು ನಿಲಲಿ
ಅವನ
ನೋಟಕೆ ನನ್ನ ಎಚ್ಚೆತ್ತ ಆತ್ಮವದು
ಅಪರಿಮಿತ
ಸಂತಸದಿ ಪುಳಕಗೊಳಲಿ.

 ಜೀವನವ ಪ್ರೀತಿಸುವೆಅದನು ನಾನರಿತಿರುವೆ
ಅಂತೆಯೆ
ಮರಣವನು ಪ್ರೀತಿಸುವ ನಿಲುವ….

 ಹೇಳಿ ಮುಂದೆ ಇನ್ನೊಂದು ಕವನಲ್ಲಿ

ನಾನು ನಿರ್ಗಮಿಸುವೆನು ಬಿಡುವು ದೊರೆತಿದೆ ನನಗೆ
ವಂದಿಸುವೆ
ಬಂಧುಗಳೆ ಬೀಳ್ಕೊಡಿರಿ ನನ್ನ……

ರಾಜ ರಾಯಸವಿಂದು ಬಂದಿಹುದು ನಾನಿದೋ
ಸಿದ್ದವಾಗಿಹೆ
ನನ್ನ ಪಯಣಕೆ.

 ಹೇಳಿ ‘ವಿದಾಯ’ಲ್ಲಿ ಹಾಡಿ,’ಕೊನೆಯ ಕಾಣ್ಕೆ’ಲಿ,

ನಿನ್ನ ಸೇವಕ ಮೃತ್ಯು ನನ್ನ ಬಾಗಿಲಲಿಹನು
ನಿನ್ನ
ಕರೆಯನು ನನ್ನ ಮನೆಗೆ ತಂದಿಹನು……

ಆರಾಧಿಸುವೆನವನ ಕೈಮುಗಿದು-ಇರಿಸುವೆನು
ಹೃದಯ ಸಂಪದವನ್ನು ಅವನ ಪದತಲದಿ…..

ಕೊನೆಯ ಕಾಣಿಕೆಯಾಗಿ ನಿನಗರ್ಪಿಸಲು ಇದಕೊ
ನನ್ನ ದಿಕ್ಕಿಲ್ಲದೀ ಆತ್ಮ ಮಾತ್ರ.

 ಹೀಂಗೆ ‘ಗೀತಾಂಜಲಿ’ಯ ಎಲ್ಲ 103 ಕವನಂಗಳ ವಿಶ್ವಕವಿಯ ಭಾವನೆಗಳನ್ನೂ ಮಿಳಿತಗೊಳಿಸಿ ಕನ್ನಡಕ್ಕೆ ಭಾವನುವಾದ ಮಾಡಿ ಒದಗಿಸಿದ ಕವಿ ಬಾಲ ಮುಧುರಕಾನನರ ಸಾಧನೆ ಎಲ್ಲೋರು ಕೊಂಡಾಡುವಂತದ್ದು.ಪ್ರತಿಯೊಂದು ಕವನದ ಒಟ್ಟಿಂಗೆ ಅದಕ್ಕೊಪ್ಪುವ ನಮುನೆಲಿ ಬಿಡಿಸಿದ ರೇಖಾಚಿತ್ರಂಗೊ ಪುಸ್ತಕದ ತೂಕವ ಹೆಚ್ಚಿಸಿದ್ದು. ಅಷ್ಟೇ ಅಲ್ಲ, ಪುಸ್ತಕದ ಮೋರೆಪುಟಲ್ಲಿಪ್ಪ ಠಾಗೋರರ ಚಿತ್ರ ರಚನೆ ಬಾಲಣ್ಣನ ಚಿತ್ರಕಲಾ ನೈಪುಣ್ಯಕ್ಕೆ ಸಾಕ್ಷಿ.  ಅವರ ಕೃತಿ’ಮಧುರ ಗೀತಾಂಜಲಿ’ಕೊಂಡು ಓದಿ ಪ್ರೋತ್ಸಾಹಿಸೆಕ್ಕು ಹೇಳುದೇ ‘ಒಪ್ಪಣ್ಣ ಪ್ರತಿಷ್ಠಾನ’ಪರವಾಗಿ ಕಳಕಳಿಯ ಪ್ರಾರ್ಥನೆ.

ಕವಿ ಪರಿಚಯ : ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಲಿ ಸುಮಾರು ಮೂವತ್ತು ವರ್ಷಕ್ಕೂ ಅಧಿಕ ಸಮಯ ಚಿತ್ರಕಲಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿ ವಿಶ್ರಾಂತ ಜೀವನ ನಡೆಶುತ್ತಾ ಇಪ್ಪ ಶ್ರೀ ಬಾಲ ಮಧುರಕಾನನ “ಡ್ರಾಯಿಂಗ್ ಮಾಷ್ಟ್ರು” ಹೇಳಿ ಹೆಸರುವಾಸಿ.ನಮ್ಮ ಬೈಲಿಲಿ ‘ಬಾಲಣ್ಣ’ ಹೇಳಿ ಗುರ್ತಿಸಿಗೊಂಡಿದವು. ಹಲವಾರು ಸೃಜನಶೀಲ ಸಾಹಿತ್ಯ – ಕಲಾಕೃತಿಗಳ ಮೂಲಕ ಕಲಾಸೇವೆ ಮುಂದುವರುಸುತ್ತಾ ಇದ್ದವು. ಖ್ಯಾತ ಕಲಾವಿದ ಎಂ.ಟಿ.ವಿ. ಆಚಾರ್ಯರಿಂದ ತರಬೇತಿ ಪಡದ ಬಾಲಣ್ಣ ಸುಮಾರು ದಿಕ್ಕೆ ಚಿತ್ರಕಲಾ ಶಿಬಿರ ನಡೆಶಿದ್ದಲ್ಲದ್ದೆ, ಕವನ,ಕಥಾ ಕಮ್ಮಟಂಗಳಲ್ಲಿ ಸಂಪನ್ಮೂಲ ವೆಗ್ತಿಯಾಗಿ ಭಾಗಿವಹಿಸಿದ್ದವು.

ವಿಳಾಸ/ ಸಂಪರ್ಕ :  ಶ್ರೀ ಬಾಲ ಮಧುರಕಾನನ
ಅಂಚೆ : ಮಧುರಕಾನನ, ಬೇಳ, ಕಾಸರಗೋಡು – 671321.
ಮೊಬೈಲು : 9995560844.

 


 

21 thoughts on “ಮಧುರ ಗೀತಾಂಜಲಿ – ಪುಸ್ತಕ ಪರಿಚಯ

  1. * ಎಲ್ಲಿ ಮನಕಳುಕಿರದೋ… ಪ್ರಥಮವಾಗಿ ಬೋಧಿನಿ ಹೇಳುತ್ತ ಪತ್ರಿಕೆಲಿ ಪ್ರಕಟವಾದ್ದದು.. ೧೯೧೭.

    * ಗೀತಾಂಜಲಿಯ ಪದ್ಯದ ಅನುವಾದಕರು ಶ್ರೀ ಎಮ್ ಎನ್ ಕಾಮತ್ .

    * ನೋಡಿ.. ಶ್ರೀ ಎಮ್ ಎನ್ ಕಾಮತ್ ಕೃತಿಗಳು ಸಂಪುಟ ೪ ಭಾಗ ೨ ೧೯೯೫

    (ಪ್ರಕಾಶಕರು- ಕರ್ಣಾಟಕ ಸಂಘ , ಪುತ್ತೂರು. ೫೭೪೨೦೧ . ಸಂ..ಪ್ರೊ।ಲೀಲಾ ಭಟ್,

    *ಪ್ರಾರ್ಥನೆ .. ಪುಟ ಸಂ. ೨೧೩-೨೧೪ ರಲ್ಲಿ ಈ ಪದ್ಯ ಕೊಟ್ಟಿದವು

    ಮಾಹಿತಿ ಕೊಟ್ಟೋರು ಹಿರಿಯರಾದ ಪ್ರೊ। ವಿ ಬಿ ಅರ್ತಿಕಜೆ . ಅವಕ್ಕೆ ಧನ್ಯವಾದಂಗೊ

    1. ಧನ್ಯವಾದ ಬಾಲಮಾವ..

  2. , ಗೋಪಾಲಣ್ಣ, ನಿಂಗೊ ಹೇಳಿದ ಅಭಿಪ್ರಾಯ ವೇ ಎನ್ನದೂ ಕೂಡಾ.ಈ ಎಲ್ಲಾ ಪುಸ್ತಕಂಗಳೂ ಸಿಕ್ಕುಗು .ಹುಡುಕ್ಕಿ ಹೇಳುವಗ ರೆಜ ದಿನ

    ಕಳಿಗು ಹೇಳಿ ಕಾಣ್ತು,

  3. ಒಪ್ಪ ಕೊಟ್ಟ ಎಲ್ಲೋರಿಂಗು ನಮಸ್ಕಾರಂಗೊ ” ಎಲ್ಲಿಮನಕಳುಕಿರದೊ…” ಪದ್ಯ ಬರದ್ದು ಶ್ರೀ ಎಮ್ ಎನ್ ಕಾಮತ್ (ಮುಂಡ್ಕೂರು ನರಸಿಂಗ ಕಾಮತ್, ಮಂಗಳೂರು) ಹೇಳಿ ಓದಿದ ನೆಂಪು, ಆನು ಕೊಟ್ಟ ಲಿಂಕಿಲಿ ಬಿ ಎಮ್ ಶ್ರೀ ಹೇಳಿ ಕಾಣ್ತು ದಾಖಲೆ ಹುಡ್ಕೆಕಶ್ತೆ.ಎಮ್ ಎನ್ ಕಾಮತ್ರ ಅಭಿನಂದನಾ ಗ್ರಂಥ ಬಂದಿರೆಕು ಅದರಲ್ಲಿ ಇರೆಕು ಕಾಣ್ತು

    ಎನ್ನ ಪುಸ್ತಕಂಗಳಲ್ಲಿ-ಗೀತಾಂಜಲಿ ಅಂದು “ಅತ್ರಿ ಬುಕ್ ಸೆಂಟರ್”ಲಿ ಕೊಟ್ಟಿದೆ, ಎನ್ನ ಹತ್ರೆ ಇದ್ದು. .ಬಾಕಿ… ಚಿತ್ರ ಪುಸ್ತಕಂಗೊ ಕೆಲವು ಸ್ಟಾಲ್ ಗಳಲ್ಲಿ ಕಾಣ್ತು. ಮಕ್ಕಳ ಪುಸ್ತಕಂಗಳ ಪ್ರತಿಗೊ ಶಾಲಗಳಲ್ಲೇ ಮುಗುದ್ದು .

    ಪುಸ್ತಕ ಪರಿಚಯ ಮಾಡಿದ ಕುಮಾರಣ್ಣಂಗೆ ಧನ್ಯವಾದಂಗೊ .

    1. ಪುತ್ತೂರಿನ ಕರ್ನಾಟಕ ಸಂಘ ಪ್ರಕಟಿಸಿದ ಎಂ.ಎನ್.ಕಾಮತ್ ಸಮಗ್ರ ಸಾಹಿತ್ಯಲ್ಲಿ[ಸಂ.ಲೀಲಾ ಭಟ್] ಇಪ್ಪಲೂ ಸಾಕು.ಆ ಅನುವಾದ ಬರದ್ದು ಕಾಮತರೇ ಹೇಳುದು ಸರಿ ಹೇಳಿ ಎನಗೆ ೯೯% ವಿಶ್ವಾಸ ಇದ್ದು.ಕಯ್ಯಾರರು ಬರೆದ ಕವೀಂದ್ರ ರವೀಂದ್ರರು ಹೇಳುವ ಲೇಖನ[ರತ್ನರಾಶಿ ಸಂಕಲನಂದ-ಇದು ಮೊದಲು ಕೇರಳದ ಸವಿಗನ್ನಡ ಪಾಠಮಾಲೆಯ ೯ನೇ ತರಗತಿಯ ಮೊದಲ ಕನ್ನಡ ಪಾಠ]ಲ್ಲಿ ಈ ಅನುವಾದವ ಇಡಿಯಾಗಿ ಉಲ್ಲೇಖಿಸಿದ್ದವು. ಆ ಪುಸ್ತಕಲ್ಲೊ,ಯಾ ಬೇರೆ ಪುಸ್ತಕಲ್ಲೊ ಇದು ಎಂ.ಎನ್.ಕಾಮತರ ಅನುವಾದ ಹೇಳಿ ಓದಿದ್ದೆ.ಈಗ ಎನ್ನ ಹತ್ತರೆ ಆ ಪುಸ್ತಕ ಇಲ್ಲೆ.

  4. ರವೀ೦ದ್ರನಾಥ ಟ್ಯಾಗೋರ್ ಅ೦ದ ತಕ್ಷಣ ನೆ೦ಪಾಗೂದು ನ೦ಗಳ ರಾಷ್ಟ್ರಗೀತೆ. ಆದರೆ ಇವ್ರ ಇನ್ನೂ ಬಹಳಷ್ಟು ಸಾಹಿತ್ಯ ಪ್ರಾಕಾರಕ್ಕೊ ಜಾಸ್ತಿ ಪ್ರಚಾರ ಆಯ್ದಿಲ್ಲೆ. ನನ್ನೂ ಸೇರಿಸ್ಕೊ೦ಡು ಕನ್ನಡ ಜೆನಕ್ಕೆ ಹೆಚ್ಚು ಗೊತ್ತಿರಲಾರ್ದು.
    ಇವರ ಸಾಹಿತ್ಯವನ್ನ ಕನ್ನಡಕ್ಕೆ ಅನುವಾದಿಸಿ ಬಾಲಣ್ಣ ಪುಣ್ಯದ ಕೆಲಸ ಮಾಡಿದ್ದ. ಇದರಿ೦ದ ನನ್ನ೦ತಾ ಅನೇಕ ಜೆನರಿಗೆ ಸಾಹಿತ್ಯದ ಔತಣ ಬಡಿಸಿದ್ದ ಅ೦ದುಕೊಳ್ತೆ. ಬಾಲಣ್ಣನ ಅದ್ಭುತ ಲೋಕವನ್ನು ಚೆ೦ದದಲ್ಲಿ ಪರಿಚಯಿಸಿದ ಶ್ರೀ ತೆಕ್ಕು೦ಜ ಕುಮಾರ ಮಾವರಿಗೆ ಧನ್ಯವಾದ೦ಗೊ.
    ಡ್ರಾಯಿ೦ಗ್ ಮಾಸ್ತರಿಗೆ ಈ ’ಗುಪ್ತ’ ಸಾಧನೆಗಾಗಿ ಒ೦ದು ಸೆಲ್ಯೂಟು.
    ಕುಮಾರಮಾವಾ, ಶ್ರೀ ಬಾಲಣ್ಣರ ಬಗ್ಗೆ ಒ೦ದು ಪುಟ್ಟ ಲೇಖನವನ್ನ ನಮ್ಮ ಹವ್ಯಕ ಪತ್ರಿಕೆಯ ’ವನಸುಮ’ ಕ್ಕೂ ಕಳಿಸಿದ್ರೆ ಚೆನ್ನಾಗಿರ್ತಿತ್ತು ಅ೦ತ ಎನ್ನ ಅನಿಸಿಕೆ.

  5. ಬಹಳ ಒಳ್ಳೆ ಸಾಧನೆ. ಆ ಪುಸ್ತಕ ಎಲ್ಲಿ ಸಿಕ್ಕುತ್ತು?

  6. ೧೯೭೧-೭೨ರಲ್ಲಿ ಆನು ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಲಿ ೮ನೆಯ ಕ್ಲಾಸಿಲ್ಲಿ ಕಲ್ತೊ೦ಡಿಪ್ಪಾಗ ಹೇಳಿ ಕಾಣ್ತು, ಶ್ರೀ ಬಾಲ ಮಧುರಕಾನನ ಡ್ರಾಯಿಂಗ್ ಮಾಷ್ಟ್ರು ಆಗಿ ಆ ಶಾಲೆಗೆ ಸೇರಿದ್ದು. ಆನು ಅವರಿ೦ದ ಡ್ರಾಯಿಂಗ್ ಕಲ್ತಿದೆ. ಅವರ ಕಾವ್ಯ ಪ್ರತಿಭೆಯ ಬಗ್ಗೆ ಎನಗೆ ಗೊ೦ತಿತ್ತಿಲ್ಲೆ. ಅವರ, ಠಾಕೋರರ ಕವನದ ಅನುವಾದ ಓದಿ ಸ೦ತೋಷ ಆತು. ಅವರ ಬಗ್ಗೆ ಓದಿ ತು೦ಬ ಖೊಷಿ ಆತು. ಮಾಷ್ಟ್ರಿ೦ಗೆ ಎನ್ನ ಪ್ರಣಾಮ, ಅಭಿನಂದನೆಗೊ. ಪರಿಚಯಿಸಿದ ತೆಕ್ಕು೦ಜೆ ಕುಮಾರರಿ೦ಗೆ ಧನ್ಯವಾದ.

  7. ಬಹುಮುಖ ಪ್ರತಿಭೆಯ ಬಾಲಣ್ಣನ ಈ ಪುಸ್ತಕದ ಕವಿತೆಗಳ ತುಣುಕುಗಳ ನೋಡಿಯಪ್ಪಗ ಅವರ ಅಗಾಧ ಪಾ೦ಡಿತ್ಯದ ಪರಿಚಯ ಆತು.
    ”ನಾಡನೆಚ್ಚರಿಸಯ್ಯ”ದ ಇ೦ಗ್ಲಿಷ್ ಮತ್ತೆ ಕನ್ನಡ ಭಾವಾನುವಾದವ ಓದೊಗ ಕವಿಯ ಆಶಯವ ಪ್ರಾಸ,ಲಯಬದ್ಧವಾಗಿ ಇಷ್ಟು ಗಟ್ಟಿ ಸಾಹಿತ್ಯಲ್ಲಿ ರಚಿಸಿದ್ದವು ಹೇಳಿ ಕೊಶಿ,ಗೌರವ ಹೆಚ್ಚಾತು.ಈ ಪುಸ್ತಕ ಪರಿಚಯ ಮಾಡಿದ ತೆಕ್ಕು೦ಜ ಮಾವ೦ಗೆ ಧನ್ಯವಾದ.
    ಕನ್ನಡ,ಹವ್ಯಕ ಸಾಹಿತ್ಯ ಕ್ಷೇತ್ರಕ್ಕೆ ಬಾಲಣ್ಣನ ಕೊಡುಗೆ ಇನ್ನೂ ಹೆಚ್ಚಲಿ,ಅವರ ಪ್ರಯತ್ನಕ್ಕೆ ಮನ್ನಣೆ ಸಿಕ್ಕಲಿ ಹೇಳಿ ಹಾರೈಕೆಗೊ.
    ಈ ಪುಸ್ತಕ ಮಾ೦ತ್ರ ಅಲ್ಲ,ಬಾಲಣ್ಣ ಬರದ ಎಲ್ಲಾ ಪುಸ್ತಕ೦ಗೊ(ಶರ್ಮಪ್ಪಚ್ಚಿ ಪಟ್ಟಿಯನ್ನೇ ಕೊಟ್ಟಿದವು) ಎಲ್ಲಿ ಸಿಕ್ಕುಗು?

  8. ಮಧುರಂಕಾನ ಬಾಲಣ್ಣ ಬರದ ಪುಸ್ತಕಂಗಳ ಪರಿಚಯ ನಮ್ಮ ಬೈಲಿಲ್ಲಿ ಆದ್ದು ತುಂಬಾ ಸಂತೋಷದ ವಿಷಯ. ಚಿತ್ರಕಲೆಯ ಒಟ್ಟೊಟ್ಟಿಂಗೆ ಅವು ಸಾಹಿತ್ಯಲ್ಲಿ, ಬಾಲಕವಿತೆಗಳಲ್ಲಿ ಹೆಸರು ಸಾಧಿಸಿದ್ದಕ್ಕೆ ಹೆಮ್ಮೆ ಆವ್ತು. ಠಾಗೋರರ ಗೀತಾಂಜಲಿಯ ಭಾವಾನುವಾದ ಪುಸ್ತಕದ ಮುಖಪುಟವ ನೋಡುವಗಳೇ ಕೊಶಿ ಆವ್ತು. ಬಾಲಣ್ಣಂಗೆ ಅಭಿನಂದನೆಗೊ, ಪರಿಚಯ ಮಾಡಿದ ಕುಮಾರಣ್ಣಂಗೆ ವಂದನೆಗೊ.

  9. ಅಭಿನಂದನೆಗೊ ಬಾಲಣ್ಣಂಗೆ.

    ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ|
    ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ||
    .………………………………………….
    …………………………………………..

    ಎಲ್ಲಿ ದಣಿವಿರದ ಸಾಧನೆಯು ಸಫಲತೆ ಕಡೆಗೆ|
    ತೋಳ ನೀಡಿಹುದೊ ತಾನಾನಾಡಿನಲ್ಲಿ|

    ಈ ಹಾಡಿನ ಸಾಹಿತ್ಯ ಆರತ್ತರಾದರು ಇದ್ದಾ? ಇದ್ದರೆ ಎನಗೆ ಬೇಕಿತ್ತು . ಇದ್ದರೆ ಅದರ ಕಳುಹಿಸಿ.

    1. ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ|
      ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ||
      ಎಲ್ಲಿ ಮನೆಯೊಕ್ಕಟ್ಟು, ಸಂಸಾರ ನೆಲೆಗಟ್ಟು|
      ಧೂಳೊಡೆಯದಿಹುದೊ ತಾನಾನಾಡಿನಲ್ಲಿ||

      ಎಲ್ಲಿ ಸತ್ಯದಗಾಧ ನೆಲೆಯಿಂದ ಸವಿವಾತು|
      ಸಲ್ಲಲಿತ ನಡೆಯಿಂದ ಮುಂಬರಿವುದಲ್ಲಿ||
      ಎಲ್ಲಿ ದಣಿವಿರದ ಸಾಧನೆಯು ಸಫಲತೆ ಕಡೆಗೆ|
      ತೋಳ ನೀಡಿಹುದೊ ತಾನಾನಾಡಿನಲ್ಲಿ||

      ಎಲ್ಲಿ ಸುವಿಚಾರ ನಿರ್ಮಲ ಜಲದೊಸರು ಹರಿದು|
      ಕಾಳುರೂಢಿಯ ಮರಳೊಳಿಂಗಿ ಕೆಡದಲ್ಲಿ||
      ಎಲ್ಲಿ ನೀನೆಮ್ಮ ಚಿಂತನವನುದ್ಯಮವ ಸುವಿ|
      ಶಾಲತೆಯ ಪೂರ್ಣತೆಗೆ ಮುನ್ನಡೆಸುವಲ್ಲಿ||

      ಅಲ್ಲಿಯಾ ಬಂಧನ ರಹಿತ ಸುಖದ ಸ್ವರ್ಗದಲಿ|
      ಪಾಲಿಸೈ ಪಿತ ನಮ್ಮ ನಾಡೆಚ್ಚರಿರಲಿ||

      1. ೫ನೇ ಸಾಲಿಲಿ ಸತ್ಯದಗಾಧ ಹೇಳಿ,[ಸತ್ಯಗಂಧ-ಅಲ್ಲ] ೧೦ನೇ ಸಾಲಿಲಿ ಕಾಳುರೂಢಿಯ [ಕಾಲರೂಢಿ-ಅಲ್ಲ]ಹೇಳಿ ತಿದ್ದಿಕೊಳೆಕು ಹೇಳಿ ಕೇಳಿಕೊಳ್ತೆ.
        ಈ ಕವನದ ಈ ಒಂದು ಅನುವಾದ ಮಾಡಿದವರು-ಎಂ.ಎನ್.ಕಾಮತ್ ಹೇಳಿ ಓದಿದ್ದೆ.ಬಿ.ಎಮ್.ಶ್ರೀಕಂಠಯ್ಯ ಹೇಳಿ ಓದಿ ಆಶ್ಚರ್ಯ ಆತು.ಸರಿಯಾದ ಮಾಹಿತಿ ಬೇಕಾತು.

        1. ತಿದ್ದುಪಡಿ ಸೂಚಿಸಿದ್ದಕ್ಕೆ ಧನ್ಯವಾದಂಗೊ. ಆನು ಅಂತರ್ಜಾಲಲ್ಲಿ ಹುಡ್ಕಿ, ಅಲ್ಲಿಂದ ಹಾಕಿ ಬಂದ ದೋಷ ಇದು.
          ಸರಿ ಮಾಡಿ ಹಾಕಿದ್ದೆ.
          ಅನುವಾದ ಬಗ್ಗೆ ಗೂಗ್ಲ್ ಹುಡ್ಕಿರೆ ಬಿ.ಎಂ ಶ್ರೀಕಂಠಯ್ಯ ಹೇಳಿ ಎಲ್ಲಾ ಕಡೆ ಸಿಕ್ಕುತ್ತಾ ಇದ್ದು.
          ಮಂಗಳೂರಿನ ಎಂ.ಎನ್ ಕಾಮತ್ ಹೇಳಿ ಬಾಲಣ್ಣನೂ ಅಭಿಪ್ರಾಯ ವ್ಯಕ ಪಡಿಸಿತ್ತದ್ದವು.
          ಸರಿಯಾದ ಮಾಹಿತಿ ಇದ್ದವು ಕೊಟ್ಟರೆ ಒಳ್ಳೆದು.

          1. ಧನ್ಯವಾದಂಗೊ ಬಾಲಣ್ಣ ,ಶರ್ಮಪ್ಪಚ್ಚಿ ..

          2. ಅನುವಾದ ಮಾಡಿದ್ದು ಬಿ.ಎಮ್. ಶ್ರೀ. ಹೇಳಿ ಅಂತರ್ಜಾಲಲ್ಲಿ ನೋಡುವಾಗ ಗೊಂತಾದ್ದು, ಅವರ “ಇಂಗ್ಲೀಷ್ ಗೀತಗಳು” ಸಂಗ್ರಹಲ್ಲಿ ಇಪ್ಪದು ಹೇಳಿಯೂ ಕೆಲವು ದಿಕ್ಕೆ ಹೇಳ್ತವು. ಆನು “ಇಂಗ್ಲೀಷ್ ಗೀತಗಳು” ಪುಸ್ತಕವ ಎಲ್ಲ ಹುಡುಕಿದೆ, ಅದರಲ್ಲಿ ಈ ಕವನ ಇಲ್ಲೆ.
            ಹಾಂಗಾಗಿ ಇದರ ಅನುವಾದಕ ಆರು ಮಾಡಿದ್ದು ಹೇಳುದು ಪ್ರಶ್ನಾರ್ಥಕವೇ..!

      2. ಕಾಳುರೂಢಿ ಅಲ್ಲ ಕಾಳರೂಢಿ. ರೂಢಿಗೊ ಎಲ್ಲವುದೆ ಸರಿಯಾದ್ದಲ್ಲ ಹೇಳ್ತ ಭಾವ ಇಲ್ಲಿದ್ದು. ಕೆಲವು ದಿಕ್ಕೆ ಕಾಲರೂಢಿ ಹೇಳಿ ಬರಕ್ಕಂಡು ಕಾಣ್ತು. ಅದೂ ತಪ್ಪು.

        ಕನ್ನಡಲ್ಲಿ ಈ ಪದ್ಯವ ಎರಡು-ಮೂರು ಜೆನ ಅನುವಾದ ಮಾಡಿದ್ದವು. “ಎಲ್ಲಿ ಅರಿವಿಗಿರದೊ ಬೇಲಿ, ಎಲ್ಲಿ ಇರದೋ ಭಯದ ಗಾಳಿ ” ಇದು ವೆಂಕಟೇಶಮೂರ್ತಿಯವರ ಅನುವಾದ. ಬಿ.ಎಂ.ಶ್ರೀಕಂಠಯ್ಯನವರ ಅನುವಾದ ಇನ್ನೊಂದು ಇದ್ದು ಹೇಳಿ ಹೇಳ್ತವು.

  10. ಬಾಲಣ್ಣ ಯಾವದೇ ಪ್ರಚಾರ ಬಯಸದ್ದವು. ಇಲ್ಲದ್ರೆ ಇಷ್ಟು ಸಾಧನೆ ಮಾಡಿದವಕ್ಕೆ ದೊಡ್ಡ ದೊಡ್ಡ ಪ್ರಶಸ್ತಿಗೊ ಸಿಕ್ಕುತ್ತಿತ್ತು.
    ಅವರ ವೃತ್ತಿ ಜೀವನದೊಟ್ಟಿಂಗೆ ಸಾಹಿತ್ಯ. ಚಿತ್ರಕಲೆಗೆ ಕೂಡಾ ಪ್ರಾಮುಖ್ಯತೆ ಕೊಟ್ಟು, ಶಿಬಿರಂಗಳ ಮಾಡಿ ಮಕ್ಕಳಲ್ಲಿ ಸುಪ್ತ ಆಗಿಪ್ಪ ಪ್ರತಿಭೆಯ ಹೆರ ತಪ್ಪ ಕೆಲಸವನ್ನೂ ಮಾಡಿದ್ದವು.
    ಠಾಗೋರರ ಕೃತಿಗಳ ತುಂಬಾ ಚೆಂದಕೆ ಅನುವಾದ ಮಾಡಿದ್ದು ಕನ್ನಡ ಸಾರಸ್ವತ ಲೋಕಕ್ಕೆ ದೊಡ್ಡ ಕೊಡುಗೆಯೇ ಸರಿ.
    ಅಭಿನಂದನೆಗೊ ಬಾಲಣ್ಣಂಗೆ.
    ಅವರ ಕೃತಿಯ ಪರಿಚಯ ಮಾಡಿದ ತೆಕ್ಕುಂಜ ಕುಮಾರಣ್ಣಂಗೆ ಧನ್ಯವಾದಂಗೊ.
    ಅವರ ಪ್ರಕಟಿತ ಕೃತಿಗೊ ಇನ್ನೂದೆ ಆರು ಇದ್ದುಃ
    ೧. ನಗು ಮಗು- ಮಕ್ಕಳ ಕವನಂಗಳ ಸಂಕಲನ
    ೨. ಹಕ್ಕಿಯ ಹಾಡು-ಮಕ್ಕಳ ಕವನಂಗಳ ಸಂಕಲನ
    ೩. ಮಧುರ-ಮಕ್ಕಳ ಕವನಂಗಳ ಸಂಕಲನ
    ೪. ಪುಟಾಣಿ ಪುಟ್ಟಿ-ಮಕ್ಕಳ ಕವನಂಗಳ ಸಂಕಲನ
    ೫. ಸುಲಭ ಚಿತ್ರಗಳು- ಮಕ್ಕಳಿಗೆ ಚಿತ್ರ ಕಲೆಯ ಪಾಠ
    ೬. ಮೋಜಿನ ಚಿತ್ರ ಕಲೆ-ಮಕ್ಕಳಿಗೆ ಚಿತ್ರ ಕಲೆಯ ಪಾಠ.

  11. ಒಳ್ಳೆ ಸುದ್ದಿ ಹಾಕಿದ್ದಿ, ಲೇಖನ ಲಾಯ್ಕ ಆಯ್ದು. ಗೀತಾಂಜಲಿಯ ಕನ್ನಡ ಅನುವಾದ ಮಾಡುದು ಹೇಳಿರೆ ತುಂಬಾ ಕಷ್ಟದ ಕೆಲಸ. ಅದರ ಎನ್ನ ಅಪ್ಪ ಮಾಡಿದ್ದವು. He is really great..

    ಅಪ್ಪ ಸಾಹಿತ್ಯಲ್ಲಿ ತುಂಬಾ ಕೆಲಸ ಮಾಡ್ತಾ ಇದ್ದವು. ಅದರ ಎಲ್ಲರು ಗುರುತಿಸಿ ಪ್ರೊತ್ಸಾಹ ಕೊಡೆಕ್ಕು..
    ಧನ್ಯವಾದಂಗೊ ತೆಕ್ಕುಂಜ ಮಾವಂಗೆ..

  12. ಒಳ್ಳೆ ಶುದ್ದಿ. ಅಭಿನಂದನೆಗೊ ಬಾಲಣ್ಣಂಗೆ ಮತ್ತೆ ಧನ್ಯವಾದಂಗೊ ತೆ.ಕು ಮಾವಂಗೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×