Oppanna.com

ಆನೆಗೆ ಮದ ಬಂದರೆ “ಮದವೂರ ದೇವರೇ” ಗೆತಿ..!!

ಬರದೋರು :   ಒಪ್ಪಣ್ಣ    on   04/01/2013    14 ಒಪ್ಪಂಗೊ

ಜೀವಮಾನದ ಒಂದೊಂದು ಸನ್ನಿವೇಶವನ್ನೂ ಅನುಭವಿಸಿ ಬದ್ಕುದು ಒಂದು.
ಅದರ ಹಾಂಗೇ ಸ್ಮೃತಿಲಿ ನೆಂಪು ಮಡಗಿ ಮತ್ತಾಣೋರಿಂಗೆ ತಿಳುಶುತ್ತದು ಇನ್ನೊಂದು.
ಹೆರಿಯೋರು ತಿಳುಶಿದ್ದರ ನೆಂಪು ಮಡಗಿ ಜೀವನಲ್ಲಿ ಅಳವಡುಸಿಗೊಂಬದು ಮತ್ತೊಂದು.
– ನೆರಿಯ ದೊಡ್ಡಪ್ಪ ಈ ಮೂರನ್ನೂ ಜೀವಿಸುತ್ತ ಜೆನ.
ಅವರ ಜೀವಮಾನದ ಪ್ರತಿ ಕ್ಷಣವನ್ನೂ ಅನುಭವಿಸಿ ಬದ್ಕುದಲ್ಲದ್ದೇ, ಎಲ್ಲವನ್ನೂ ನೆಂಪು ಮಡಿಕ್ಕೊಂಡು, ಅವರ ಹೆರಿಯೋರು ಹೇಳಿಗೊಂಡಿದ್ದ ಕತೆಗಳನ್ನೂ ಮುಂದಾಣೋರಿಂಗೆ ಎತ್ತುಸುತ್ತ ಮಹಾ ಧಾರಣಾ ಶೆಗ್ತಿಯ ಜೆನ ಅವು. ಅವರ ತಲೆಲಿ ಏನಿಲ್ಲದ್ದರೂ – ಸಾವಿರಗಟ್ಳೆ ಕತೆಗೊ ಅಚ್ಚಾಗಿದ್ದು. ಹಲವು ಅವಕ್ಕೇ ಅನುಭವಕ್ಕೆ ಬಂದದಾಯಿಕ್ಕು, ಇನ್ನು ಕೆಲವು ಇನ್ನಾರೋ ಹೇಳಿದ್ದು, ಮತ್ತೆ ಕೆಲವು ಎಲ್ಲೋ ಓದಿದ್ದು – ಅಂತೂ ಅದೆಲ್ಲವನ್ನೂ ಒಟ್ಟಾಗಿ ತಲೆಲಿ ನೆಂಪು ಮಡಿಕ್ಕೊಂಡಿದವು ಹೇದರೆ ಅದೇ ದೊಡ್ಡ ಸಾಧನ. ಹಳೆ ತಲೆಮಾರಿನ ಹೆರಿ ತಲೆಗೊ ಹೇದರೆ ಕೆಲವು ಜೆನ ಅಂತೂ ಅಕ್ಷರಷಃ ಕಥಾ ಗಣಿಗಳೇ.
ಮಾತುಕತೆಲಿ ಒಂದೊಂದು ಸಂದರ್ಭ ಬಪ್ಪಗಳೂ – “ಅದಕ್ಕೊಂದು ಕತೆ ಇದ್ದು”, “ಒಂದು ಕತೆ ಹೇಳುದು ಕೇಳಿದ್ದೆ”, “ಮದಲಿಂಗೆ ಒಂದರೀ…” ಹೇದು ಕತೆಗಳ ಸುರುಮಾಡಿರೆ; ಒಪ್ಪಣ್ಣಂಗಂತೂ ಎದುರಂದ ಹಂದಲೇ ಮನಸ್ಸು ಬಾರ!
ದೊಡ್ಡಪ್ಪ ಹಲವು ಸರ್ತಿ ಹೇಳಿದ ಕತೆ ಒಂದು – ಈಗ ಜೋರು ನೆಂಪಿಂಗೆ ಬತ್ತಾ ಇದ್ದು.

~

ಧರ್ಮಸ್ಥಳಲ್ಲಿ ಒಂದು ಆನೆ ಇದ್ದತ್ತಾಡ, ಮಂಜಯ್ಯ ಹೆಗ್ಗಡೆಯವರ ಕಾಲಲ್ಲಿ.
ಆ ಆನೆಗೆ ಎಂತಾತೋ – ಒಂದರಿ ಅದರ ಮಾವುತನ ಬಡುದ್ದು ಕೊಂದತ್ತಾಡ!!
ಸರಿ, ಖಾವಂದರಾದ ಮಂಜಯ್ಯ ಹೆಗ್ಗಡೆಗೆ ವಿಷಯ ಕೊಟ್ಟವು – “ಹೀಂಗೀಂಗೆ, ದೇವಸ್ಥಾನದ ಆನೆಗೆ ಮದ ಬಯಿಂದು; ಮಾವುತನ ಜೆಪ್ಪಿ ಕೊಂದತ್ತು” – ಹೇದು.
ಮಂಜಯ್ಯ ಹೆಗ್ಗಡೆಗೆ ಎಲ್ಲಿಲ್ಲದ್ದ ದುಖ್ಖ ಬಂತು! ಸೀತ ಬಂದವಾಡ ಆನೆಯ ಎದುರಂಗೆ.
ಅದಷ್ಟೇ ಒಂದು ಮಾವುತನ ಬಡುದು ಕೊಂದ ಆನೆಯ ಹತ್ತರೆ ಹೋಪಲೇ ಒಳುದೋರೆಲ್ಲ ಹೆದರಿಂಡು ಇಪ್ಪಾಗ, ಈ ಮಂಜಯ್ಯ ಹೆಗ್ಗಡೆ ಸೀತ ಆನೆಯ ಎದುರಂಗೆ ಹೋಗಿ ನಿಂದವು!
“ಹ್ಮ್, ನೋಡಿಗೊಳ್ತ ಮಾವುತನ ಕೊಂದೆ ಅಲ್ಲದೋ? ಇನ್ನು ಸಾಂಕಿದ ಎನ್ನನ್ನೂ ಕೊಂದಿಕ್ಕು ನೀನು” ಹೇದು ಎದುರೆ ನಿಂದವಾಡ ಹೆಗ್ಗಡೆ.
ಎರಡೂ ಮುಂಗಾಲಿನ ಬಗ್ಗುಸಿ ನಿಂದು ಸೊಂಡಿಲು ಮುಂದೆ ಮಾಡಿ ದಿರೀನೆ ಕಣ್ಣನೀರು ಹಾಕಿತ್ತಾಡ ಆನೆ!
ಮೂಲತಃ ಸೌಮ್ಯ ಹೃದಯಿ ಆದ ಈ ಆನೆ ಮಾವುತನ ಎಂತಗೆ ಕೊಂದತ್ತು?
ಕೊಲ್ಲುವಷ್ಟು ದೊಡ್ಡ ಪ್ರಮಾದ ಮಾವುತನಿಂದ ಎಂತ ನೆಡದತ್ತು?
ಬಾಯಿಯೇ ಬಾರದ್ದ ಈ ಜೀವ ಎಂತದೋ ಅದರ ಕಷ್ಟವ ಹೇಳುವ ಹಾಂಗೆ ಕಂಡತ್ತು ಖಾವ೦ದರಿ೦ಗೆ.
ತನ್ನ ಮೂಕವೇದನೆ ಎಜಮಾನಂಗೆ ಅರ್ತ ಆತು, ಈ ಆನೆ ಮಾವುತನ ಅಂತೇ ಕೊಂದದಲ್ಲ, ಎಂತದೋ ಕಾರಣ ಇದ್ದು – ಹೇಳ್ತದು ಅರಡಿಗಾತು.

ಕೆಲವು ಜೆನರ ವಿಚಾರ್ಸಿ ಸತ್ಯ ತಿಳಿವಾಗ ಗೊಂತಾತಡ, ಆ ಮಾವುತನ ಕತೆ.
ಆನೆಯ ಸಾಂಕಲೆ ಹೇದು ದೇವಸ್ಥಾನಂದ ಕೊಟ್ಟ ಪೈಶೆ, ಆಹಾರ ವಸ್ತುಗಳ ಸರಿಯಾಗಿ ವಿನಿಯೋಗ ಮಾಡದ್ದೆ, ಸ್ವಂತಕ್ಕೆ ಮಡಿಕ್ಕೊಂಡು ಹಗರಣ ಮಾಡಿಗೊಂಡಿತ್ತಾಡ ಮಾವುತ.
ಪಾಪ, ಈ ಆನೆಗೆ ಹೊಟ್ಟೆ ತುಂಬುಸೇಕಾದ್ದಲ್ಲದ್ದೆ ಬೇರೆ ಚಿನ್ನಗಿನ್ನ ಎಂತಗೆ ಬೇಕು? ಅದಕ್ಕೆ ಹೊಟ್ಟಗೆ ಸರಿ ಸಿಕ್ಕಿಗೊಂಡಿತ್ತಿಲ್ಲೆ.
ಹೊಟ್ಟಗೆ ಸರಿಯಾಗಿ ಕೊಡದ್ದೆ ತಲೆಂದ ಮೇಗೆ ದುಡಿಶಿರೆ ಯೇವ ಆನೆಗಾದರೂ ಕೋಪ ಬಾರದೋ? ಕೋಪ ಹೇಳ್ತದು ಮೆದುಳು ಇಪ್ಪ ಎಲ್ಲ ಜೀವಿಗೂ ಇದ್ದು ಹೇಳ್ತದರ ಬೋಚಬಾವಂದೇ ಒಪ್ಪುಗು.
ಹಾಂಗಿಪ್ಪಗ ಆನೆಗೆ ಕೋಪ ಬಂದದರ್ಲಿ ತಪ್ಪಿಲ್ಲೆ. ಎಷ್ಟೋ ಸಮಯ ನೋಡಿತ್ತು ಈ ಆನೆ, ಊಹೂಂ, ಇಲ್ಲೆ.
ಮಾವುತ ಮತ್ತುದೇ ಅದೇ ನಮುನೆ ಅರೆಹೊಟ್ಟೆಲಿ ದುಡುಶಿತ್ತು. ಒಂದು ದಿನ ಆನೆಗೆ ಸಹನೆಯ ಕಟ್ಟೆ ಒಡದೇ ಹೋತು; ಮಾವುತನ ಹಿಡುದು ಜೋರು ಕುಲ್ಕಿತ್ತು!!
ಕದ್ದು ಮಡಗಿದ ಪೈಶೆ ಉದುರಲಿ ಹೇದು ಕುಲ್ಕಿದ್ದೋ ಏನೋ – ಆನೆ ಕುಲ್ಕಿರೆ ಜೆನಂಗೊ ಒಳಿಗೋ?!
ಪಾಪ, ಮಾವುತ ಸತ್ತತ್ತು!!

ಆನೆಯ ಪ್ರತಿಭಟನೆಯ ರೀತಿ ಅದೊಂದೇ ಇಪ್ಪದು. ನಮ್ಮ ಹಾಂಗೆ ಹಲವು ವಿಧ – ಕೇಂಡ್ಳು ಹೊತ್ತುಸುದು, ಬೇನರು ಹಿಡಿವದು, ಕಪ್ಪು ಪಟ್ಟಿ ಕಟ್ಟಿಗೊಂಬದು, ಮೋರೆಪುಟಲ್ಲಿ ಬರವದು – ಯೇವದೂ ಗೊಂತಿಲ್ಲೆ ಅದಕ್ಕೆ!
ಪಾಪ!
~

ಎಷ್ಟೋ ಆನೆಗೊ ನಮ್ಮ ದೇಶಲ್ಲಿ ಇದ್ದು.ಕಾಡಿಲಿಪ್ಪದು ಬೇರೆ, ನಾಡಿಲೇ ಹಲವು ಸಾವಿರ ಇದ್ದು. ಕಾಡಿನ ಸಂಸ್ಕಾರಂದ ನಾಡಿನ ಸಂಸ್ಕಾರಕ್ಕೆ ಬದಲುಸಲೆ ಅವರ ಪಳಗುಸೇಕು.
ಹಟ್ಟಿಲಿಪ್ಪ ಹೋರಿಕಂಜಿಗೆ ಯೇವ ರೀತಿ ಹೂಡ್ತ ಅಭ್ಯಾಸ ಮಾಡುಸುತ್ತೋ – ಅದೇ ರೀತಿ ಆನೆಗೆ ಸ್ವತಃ ಇಪ್ಪ ಬುದ್ಧಿಗೆ ಇನ್ನಷ್ಟು ಸಂಸ್ಕಾರ ಸೇರ್ಸಿ ಮನುಷ್ಯರ ಒಟ್ಟಿಂಗೆ ಹೊಂದಿಗೊಂಡು ಹೋಪಲೆ ಎಡಿವ ಹಾಂಗೆ ಮಾಡೇಕು. ಇದಕ್ಕೇ ಇಪ್ಪದು ಮಾವುತಂಗೊ.

ಹೂಡ್ತ ಹೋರಿಗೆ ತುಳುವಿನ “ಆಜ್ಞೆಗೊ” ಇಪ್ಪ ಹಾಂಗೇ ಮಾವುತಂಗಳದ್ದು ಕೆಲವು ನಿರ್ದಿಷ್ಟ ಆಜ್ಞೆಗೊ ಇದ್ದು.
ಆ ಶಬ್ದ ಹೇಳಿರೆ ಇಂತಾ ಕೆಲಸವನ್ನೇ ಮಾಡೇಕು ಹೇದು ಆನೆಗೊಕ್ಕೆ ಅಭ್ಯಾಸ ಮಾಡುಸಿರ್ತವು.
ಇದರಿಂದಾಗಿ, ಆನೆಗೆ ಮಾವುತ ಬದಲಿರೂ ತೊಂದರೆ ಆವುತ್ತಿಲ್ಲೆ, ಮಾವುತಂಗೆ ಆನೆ ಬದಲಿರೂ ತೊಂದರೆ ಆವುತ್ತಿಲ್ಲೆ.
ಆಜ್ಞೆ, ಸಂಜ್ಞೆಗೊ ಎಲ್ಲವೂ ಇಬ್ರಿಂಗೂ ಗೊಂತಿರ್ತನ್ನೇ!

ಸಂಜ್ಞೆಗೊ ಅರ್ತ ಆಯೇಕಾರೆ ಪೆಟ್ಟಿನ ಬೆಶಿ ಅರಡಿಯೇಕು. ಆನೆಗೆ ಬೆಶಿ ಗೊಂತಾಯೇಕಾರೆ ಎಷ್ಟು ದೊಡ್ಡ ಪೆಟ್ಟು ಕೊಡೆಕ್ಕು!
ಅದಕ್ಕೆ, ಒಂದು ಅಂಕುಶ – ದಬ್ಬಾಣಲ್ಲಿ ಕೆಮಿಗೆಂಡಗೆ ಕುತ್ತುಸ್ಸು!! ಯೋಪ – ಎಂತಾ ಬೇನೆ ತಿನ್ನೇಕಪ್ಪೋ!
ಸಂಸ್ಕಾರ ಕಲಿಯೇಕಾರೆ ಸಂಸ್ಕರಣೆ ಆಯೇಕು; ಶಿಕ್ಷಣಲ್ಲಿ ಶಿಕ್ಷೆ ಇರ್ತು – ಹೇದು ಮಾಷ್ಟ್ರುಮಾವಂದ್ರು ಹೇಳ್ತ ಹಾಂಗೆ!!

~

ಕರಿ ಆನೆ; ಮದ ಏರಿರೆ ಮದಕರಿ! (ಪಟ: ಶೇಪುಭಾವ)
ಕರಿ ಆನೆ; ಮದ ಏರಿರೆ ಮದಕರಿ! (ಪಟ: ಶೇಪುಭಾವ)

ಆನೆಗೆ ಅದರದ್ದೇ ಆದ ಬುದ್ಧಿ “ಹುಟ್ಟುವಗಳೇ” ಇರ್ತು. ಆದರೂ – ಮನುಷ್ಯರು ಈ ಸಂಸ್ಕಾರ ಕಲಿಶಿಕ್ಕಿ “ಬುದ್ಧಿ ಕಲುಶಿದೆ” ಹೇಳಿಗೊಳ್ತವು. ನಿಜವಾಗಿ ಅವು ಅವರ ಬುದ್ಧಿ ಮಾಂತ್ರ ಅಲ್ಲದ್ದೆ, ಮನುಷ್ಯರ ಬುದ್ಧಿಯನ್ನೂ ಕಲ್ತುಗೊಳ್ತು! ಒಂದರಿ ಹೀಂಗೆ ಬುದ್ಧಿ ಕಲ್ತ ಆನೆ ಮತ್ತೆ ಜೀವಮಾನ ಪೂರ್ತಿ ಮನುಷ್ಯರ ಒಡನಾಟಲ್ಲೇ ಇರ್ತು. ಆ ಮಾವುತನ ಹಚ್ಚಿಗೊಳ್ತು.
ಮಾವುತ ಆ ಆನೆಯ ಸ್ವಂತ ಮಗುವಿನ ಹಾಂಗೆ ನೋಡಿಗೊಂಬಲೆ ಸುರುಮಾಡ್ತ°.
ಆ ಮಾವುತ ಇಲ್ಲದ್ದರೆ ಆನೆಗೆ ಊಟ ಇಲ್ಲೆ; ಆ ಆನೆ ಇಲ್ಲದ್ದರೆ ಮಾವುತಂಗೆ ಊಟ ಇಲ್ಲೆ!

ಆನೆಯ ದೈಹಿಕ ಸಾಮರ್ಥ್ಯ ವಿಶೇಷದ್ದು; ಆದ ಕಾರಣ ಅದರ ಉಪಕಾರವ ಮನುಷ್ಯರೂ ಪಡಕ್ಕೊಳ್ತವು.
ಮರ ಎಳವಲೆ, ಮರ ಸಾಗುಸಲೆ, ಹೀಂಗೆಂತಾರು ಕಾರ್ಯಕ್ಕೆ ಆನೆಗೊ ಸೇರಿಗೊಳ್ತವು.
ಆನೆಗೊ ಈ ಕೆಲಸಂಗಳ ಮನಸ್ಸು ಮಡಗಿ ಮಾಡುದು ಹೇಳಿ ಅಲ್ಲ, ಆದರೆ ಅವರ ಯೆಜಮಾನಂಗೆ ಬೇಕಾಗಿ ಮಾಡ್ತು. ಮಾಡಿಯೇ ಮಾಡ್ತು.
ಎಲ್ಲ ಸಂದರ್ಭಲ್ಲಿಯೂ ಆ ಆನೆಯ ಮಾವುತ ಬೇಕುಬೇಕಾದ ಹಾಂಗೆ ಮಾರ್ಗದರ್ಶನ ಕೊಟ್ಟುಗೊಂಡು ನೆಡೆಶಿಗೊಂಡಿತ್ತವು.

~

ಭಾರತದ ಸಂಸ್ಕೃತಿಲಿ – ಪ್ರಾಕಿ೦ದಲೇ ಆನೆಗಳ ಉಪಯೋಗ ಮಾಡಿಗೊಂಡಿತ್ತಿದ್ದವು.
ದೇವೇಂದ್ರನ ವಾಹನದ ಹೆಸರೇ ಐರಾವತ ಹೇದು. ಈಗ ಟೀಕೆಮಾವ ಬೆಂಗುಳೂರಿಂಗೆ ಹೋಪ ಬಸ್ಸಿನ ಹೆಸರೂ ಅದುವೇ! ಅದು ಬೇರೆ! ಮಹಾಭಾರತಲ್ಲಿ ಅಕ್ಷೋಹಿಣಿಲಿ ಆನೆಯ ದಳದ ಬಗ್ಗೆಯೇ ವರ್ಣನೆ ಬತ್ತಾಡ; ವಿದ್ವಾನಣ್ಣ ಹೇಳಿತ್ತಿದ್ದವು. ಚತುರಂಗ ಹೇಳಿರೆ ಆನೆದಳವೂ ಸೇರಿದ್ದೇ ಇದಾ. ಸೈನ್ಯಲ್ಲಿ ಅಂಬಗ ಸೇರಿದ ಆನೆಗೊ – ಮೊನ್ನೆ ಮೊನ್ನೆ ಒರೆಂಗೆ, ಇತಿಹಾಸಲ್ಲಿಯೂ ಇತ್ತಿದ್ದವಾಡ.
ತೀರಾ ಮತ್ತೆ ಬಾಬರನ ಪಿರೆಂಗಿ ಬಂದ ಮತ್ತೆ ಆನೆಗೊಕ್ಕೆ ಪೆರ್ಚಿಬಪ್ಪ ಕಾರಣ ಕಮ್ಮಿ ಮಾಡಿದ್ದವಾಡ; ಅಲ್ಲದ್ದರೆ ಆನೆಗೊ ಇದ್ದೇ ಇತ್ತು. ಮೈಸೂರು ಒಡೆಯರ ಸೈನ್ಯಲ್ಲಿ ಆನೆ ಇಪ್ಪ ಲಕ್ಷಣಕ್ಕೆ, ಈಗಳೂ ಆ ಅಂಬಾರಿಯ ನವರಾತ್ರಿಗೆ ಹೊರುದು ಆನೆಯೇ!
~

ಸೈನ್ಯಲ್ಲಿ ರಾಜರ ಆಶ್ರಯಲ್ಲಿ ಆನೆಗೊ ಇದ್ದ ಹಾಂಗೇ, ಮುಂದೆ ಅದೊಂದು ಗಾಂಭೀರ್ಯದ ಪ್ರತೀಕ ಆತು.
ಊರ ರಾಜಂಗೆ ಯೇವದು ಇಷ್ಟವೋ ಅದು ಊರ ದೇವರಿಂಗೂ ಇಷ್ಟವೇ ತಾನೇ? 😉
ಹಾಂಗೆ, ಕೆಲವು ದೇವಸ್ಥಾನಂಗಳಲ್ಲಿಯೂ ಆನೆ ಇಪ್ಪಲೆ ಸುರು ಆತು.
ದೇವಸ್ಥಾನದ ಆಶ್ರಯಲ್ಲೇ ಇಪ್ಪದರ ಒಟ್ಟಿಂಗೆ ಅಲ್ಯಾಣ ದೇವರ ಸೇವೆ, ದೇವರ ಹೊರುದು – ಇತ್ಯಾದಿ ಕಾರ್ಯಂಗಳ ಮಾಡಿಂಡು ಚೆಂದಕೆ ನೆಡವಲೆ ಸುರು ಆತು.

ದೇವಸ್ಥಾನದ ಆನೆ ಹೇಳಿದ ಕೂಡ್ಳೇ ಆ ಗುರುವಾಯೂರಿನ “ಕೇಶವ” ಹೇಳ್ತ ಆನೆಯ ಕತೆ ನೆಂಪಾವುತ್ತು.
ಅದರ ಸಾಧು ಸ್ವಭಾವಂದ ಪ್ರಚಲಿತ ಆದ ಆ ಆನೆ ಗುರುವಾಯೂರು ದೇವರ ನಂಬಿಗೊಂಡು, ಗುರುವಾಯೂರು ಆಸುಪಾಸಿಲಿ ಮಾಂತ್ರ ಅಲ್ಲದ್ದೆ, ಇಡೀ ಕೇರಳ ದೇಶಲ್ಲೇ ಪ್ರಸಿದ್ಧಿ ಆಗಿತ್ತಾಡ.
ನೆರಿಯದೊಡ್ಡಪ್ಪ ಮತ್ತೊಂದು ಕತೆ ಹೇಳಿತ್ತಿದ್ದವು, ಈ ಆನೆಯ ಬಗ್ಗೆ. ಈ ಕೇಶವನ ಬಗ್ಗೆಯೇ!
ಪೂರ್ತಿ ನೆಂಪಿಲ್ಲೆ, ಅರ್ಧಂಬರ್ಧ ನೆಂಪಾವುತ್ತು ಒಪ್ಪಣ್ಣಂಗೆ. ಸರೀ ನೆಂಪಿಪ್ಪೋರು ಹೇಳಿಕ್ಕಿ, ಆತೋ?! 🙂

ಕೇಶವ° ಆನೆಗೆ ನೆಡು ಪ್ರಾಯ. ಮಹಾ ತ್ರಾಣಿ.
ಒಂದರಿ ಅದೆಂತದೋ ಕಾರಣಕ್ಕೆ ಪಿಸುರು ಬಂತು ಕೇಶವಂಗೆ. ಮಾವುತ ಬೇರೆ ಹೊಸಬ್ಬನೋ, ಅಲ್ಲ ಹಳೆ ಮಾವುತನ ಬದಲಿಂಗೆ ಹೊಸ ಮಾವುತ° ಬಂದದೋ – ಉಮ್ಮ, ಒಪ್ಪಣ್ಣಂಗೆ ಅದುವೇ ನೆಂಪಿಲ್ಲದ್ದು.
ಅಂತೂ ಮಾವುತನ ಕೈ ಹಿಡಿತಕ್ಕೆ ಈ ಆನೆ ಸಿಕ್ಕುತ್ತಿಲ್ಲೆ! ಆರು ಎಂತ ಮಾಡಿರೂ ಅದರ ಮದ ಇಳುದ್ದಿಲ್ಲೆ. ಏನ ಮಾಡಿರೂ, ಎಷ್ಟು ಜೆನ ನೋಡಿರೂ ಪತ್ತಿಂಗೆ ಸಿಕ್ಕುತ್ತಿಲ್ಲೆ. ಎಲ್ಲೋರುದೇ ಪ್ರಯತ್ನ ಪಟ್ಟರೂ ಎಡಿಗಾತಿಲ್ಲೆ.
ಆ ದೇವಸ್ಥಾನದ ಮುದಿ ಪ್ರಾಯದ ಮುಖ್ಯ ಅರ್ಚಕರು – ಬಂಙಲ್ಲಿ ನೆಡವಲೆಡಿತ್ತಷ್ಟೆ ಅವಕ್ಕೆ; ಆನೆಯ ವಿಷಯ ಗೊಂತಾಗಿ ದಂಟು ಕುಟ್ಟಿಗೊಂಡು ಬಂದವು.
ಈ ಆನೆಗೆ ಕೇಳುವ ಹಾಂಗೆ “ಕೇಶವಾ, ಎಂತ ನಿನ್ನದು ಗಲಾಟೆ? ನಿಲ್ಲು ಸುಮ್ಮನೆ” ಹೇಳಿದವಾಡ.
ಒಪ್ಪ ಕುಂಞಿಯ ಹಾಂಗೆ ಹೇಳಿದ್ದು ಕೇಳಿಗೊಂಡು ನಿಂದತ್ತಾಡ!

ಕೆಲವು ಜೆನ ಪವಾಡ ಹೇಳುಗು, ಕೆಲವು ಜೆನ ದೇವರ ಮಹಿಮೆ ಹೇಳುಗು. ಮತ್ತೆ ಕೆಲವು ಜೆನ ಈ ಸಂಗತಿಯ ಒಪ್ಪುಗು: ಎಂತರ? ಈ ಕೇಶವ° ಬರೇ ಸಣ್ಣ ಇಪ್ಪಾಗ ಆ ಅಜ್ಜ° ದೇವಸ್ಥಾನದ ಮುಖ್ಯ ಪೂಜೆಬಟ್ರು.
ಇದಕ್ಕೆ ಬರೇ ಸಣ್ಣ ಪ್ರಾಯ ಇಪ್ಪಾಗ ಆ ಪೂಜೆ ಬಟ್ರು ನೆಡು ಪ್ರಾಯದೋರು, ಮಹಾ ತ್ರಾಣಿ.
ಅಷ್ಟಪ್ಪಗ ಎಡೆಹೊತ್ತಿಲಿ ಈ ಆನೆಕುಂಞಿಯ ಮುಟ್ಟಿ, ಮಾತಾಡ್ಸಿಗೊಂಡು – ಆಟಕ್ಕೆ, ಕೊಂಡಾಟಕ್ಕೆ ಸೇರಿಗೊಂಡಿತ್ತಿದ್ದವು.
ಕುಂಞಿ ಆನೆಗೆ “ಎನ್ನಂದಲೂ ಹೆಚ್ಚಿನ ತ್ರಾಣ ಇಪ್ಪೋರು ಇವು” ಹೇದು ಅಂಬಗಳೇ ಅರ್ತ ಆಗಿತ್ತು.
ಹಾಂಗೆ, ಈ ತೊಂಡು ಪ್ರಾಯಲ್ಲಿದ್ದರೂ – ಆನೆಗೆ ಅದರ ಬಾಲ್ಯದ್ದೇ ನೆಂಪು!!!
ಹಾಂಗೆ ಈ ಜೆನ ಹೇಳಿದ ಮತ್ತೆ ಅಪೀಲಿಲ್ಲೆ, ಗಪ್-ಚುಪ್!!

ಹೀಂಗಿರ್ತ ಅನೇಕ ಕತೆಗೊ ನಮ್ಮ ಜಾನಪದಲ್ಲಿ, ಇತಿಹಾಸಲ್ಲಿ, ಪುರಾಣಲ್ಲಿ ಇದ್ದು. ಅಂತೂ ಈ ಆನೆಗಳ ಬಗ್ಗೆ ಮಾತಾಡ್ತರೆ ಹೊತ್ತು ಹೋದ್ದೇ ಅರಡಿಯ.

~

ದೇಹ ಅಷ್ಟು ದೊಡ್ಡ ಇದ್ದರೂ, ಆನೆಯ ಮೆದುಳು ಬಹು ಸಣ್ಣ ಆಡ.
ಮೆದುಳು ಹೇದರೆ ಬುದ್ಧಿವಂತಿಗೆ. ಮನುಷ್ಯನ ಮೆದುಳು ತುಂಬಾ ಬೆಳದ್ದು; ಗಾತ್ರಲ್ಲಿ ಆನೆಯ ಮೆದುಳಿಂದಲೂ ದೊಡ್ಡದೇ.
ಪಾಪ, ಆನೆಗೆಂತ ಗೊಂತು ಈ ವಿಷಯ!? ಅದಕ್ಕೆ ತನ್ನ ಎಜಮಾನ ಹೇಳಿದ್ದೇ ಅಂತಿಮ, ಅದನ್ನೇ ಮಾಡುಗು.
ಎಜಮಾನನನ್ನೇ ನಂಬಿರ್ತು ಅದು.

~

ಒಬ್ಬ ಹೇಳಿದ ಕೆಲಸ ಮಾಡ್ತ ಹೇದು ಆದರೆ, ಎಷ್ಟು ಮಾಡುಸುದು?
ಎಷ್ಟು ಮಾಡುಸುದು ಹೇದು ಕೆಲಸ ಹೇಳುವೋರು ಅರ್ತ ಮಾಡಿಗೊಳೇಕು, ಮಾಡ್ತೋನಿಂಗೆ ಬೊಡಿವನ್ನಾರ ಮಾಡುಸುದು ಅಲ್ಲ! ಹಾಂಗಾಗಿ, ಆನೆಗಳ ದುಡಿಶುವ ಚಾಣಾಕ್ಷತೆ ಇರೆಕ್ಕಪ್ಪದು ಮಾವುತನಲ್ಲಿ.
ಆನೆಗೆ ಯೇವಗ ಶೀತ ಆತು, ಯೇವಗ ಹಶು ಆತು, ಯೇವಗ ಆಸರಾವುತ್ತು, ಯೇವಗ ಪಿಸುರು ಬತ್ತು – ಇದೆಲ್ಲವೂ ಅರಡಿಯೇಕಾದ್ಸು ಮಾವುತಂಗೆ.
ಆನೆಗೆ ಮಾವುತನೇ ಸರ್ವಸ್ವ, ಮಾವುತಂಗೆ ಆನೆಯೇ ಸರ್ವಸ್ವ. ಇದೆರಡು ಅತಿಮಾನುಷ ಸಂಬಂಧ.

ನಾವು ತನ್ನ ಪ್ರೀತಿ, ಕೋಪ, ರೋಷ, ಮದ, ಏನಿದ್ದರೂ ತೋರುಸುದು ನಮ್ಮ ಹತ್ತರಾಣೋರಿಂಗೇ ತಾನೇ?
ಹಾಂಗೇ, ಆನೆಗೆ ಹತ್ತರಾಣೋರು ಹೇದರೆ ಮಾವುತನೇ!
ಬೇರೆ ಆನೆಗೊ ಒಟ್ಟಿಂಗೆ ಇಲ್ಲದ್ದ ಸಂದರ್ಭಲ್ಲಿ ಅಂತೂ ಮಾವುತನೇ ಆಯೇಕಟ್ಟೆ.
ಮಾವುತನೇ ಅಪ್ಪಮ್ಮ, ಮಾವುತನೇ ಎಜಮಾನ.
ಆನೆಯ ಸರ್ವ ಗುಟ್ಟನ್ನೂ ತಿಳುದು ಚೆಂದಕೆ ತೆಕ್ಕೊಂಡು ಹೋಯೇಕಾದ್ಸು ಮಾವುತನ ಹೆಗಲ್ಲಿಪ್ಪ ದೊಡ್ಡ ಜೆವಾಬ್ದಾರಿ.
ಇದು ಸಣ್ಣ ಕೆಲಸ ಅಲ್ಲಲೇ ಅಲ್ಲ, ಬಹುದೊಡ್ಡ ಕೆಲಸ.
ಹೀಂಗೆ, ಜೀವಮಾನ ಪೂರ್ತಿ ಆನೆಯ ಒಟ್ಟಿಂಗೇ ಒಡನಾಡಿಯಾಗಿ, ಚೆಂದಕೆ ಬೆಳೆಶಿ, ಬೆಳದು ಸಾಫಲ್ಯಕಂಡ ಮಾವುತಂಗೊ ನಮ್ಮ ಸಮಾಜಲ್ಲಿ ಬೆಳದು ಬಯಿಂದವು.

~

ಮಾವುತನ ಕೆಲಸ ಸರಿ ಇದ್ದರೆ ಆರಿಂಗೂ ಗೊಂತಾವುತ್ತಿಲ್ಲೆ. ಆದರೆ ತಪ್ಪಿದರೆ ಇಡೀ ಲೋಕಕ್ಕೇ ಗೊಂತಾವುತ್ತು.
ಆನೆಗೆ ಪಿಸುರು ಬಂದರೆ ಮದಾಲು ತೋರ್ಸುದು ಈ ಮಾವುತನ ಮೇಗೆ ತಾನೇ? ಪಿಸುರು ತೋರ್ಸುದು ಹೇಂಗೆ? ಹಿಡುದು ಒಂದು ಕುಲ್ಕುಗು. ಅಲ್ಲದ್ದರೆ ಒಂದು ತೊಳಿಗು. ಕೊಲ್ಲೆಕ್ಕು ಹೇದು ತೊಳಿವದಲ್ಲದ್ದರೂ – ಆನೆ ಕೈಂದ ಮೆಟ್ಟುಸಿ ಒಳಿಯೇಕಾರೆ ಕಲ್ಲು ಗುಂಡೇ ಆಯೇಕಟ್ಟೆ. ಮದ ಬಪ್ಪನ್ನಾರ ಆನೆ “ಮುದ್ದಾನೆ” ಆಗಿದ್ದರೂ, ಒಂದರಿ ಮದ ಬಂದರೆ ಮತ್ತೆ “ಮದ್ದಾನೆ”. ಯೇವ ಮದ್ದು ಹಾಕಿರೂ ಇಳಿಯ. ಮದ ಬಪ್ಪಲೆ ಕಾರಣ ಎಂತದೋ – ಆ ಕಾರಣ ನೀಗದ್ದೆ ಅದರ ಮದವೂ ನೀಗ.
ಮತ್ತೆ ಮದವೂರಿಲಿ ಕೂದ ಆನೆಮೋರೆಯ ವಿಘ್ನೇಶನೇ ವಿಘ್ನವ ನಾಶ ಮಾಡೇಕಟ್ಟೆ ಹೊರತು ಬೇರೆ ದಾರಿ ಇಲ್ಲೆ!

~

ಇದೆಲ್ಲ ಶುದ್ದಿ ಎಂತಗೆ ಒಪ್ಪಣ್ಣಂಗೆ ನೆಂಪಾತು ಹೇದು ನಿಂಗೊಗೆ ಅಂದಾಜಿ ಆಗಿಕ್ಕು.
ನಿನ್ನೆ-ಮೊನ್ನೆ ಆಗಿ ಪುತ್ತೂರಿಲಿ ಒಂದು ಆನೆಗೆ ಮದ ಬಂದು ರಾಮಾ ರಂಪಾಟ ಮಾಡಿತ್ತಾಡ.
ಅದೆಲ್ಲಿಯೋ ವಿಟ್ಳಲ್ಲಿ ತಲೆಂದ ಮೇಗೆ ದುಡುಶಿ, ಮತ್ತೆ ಸುಳ್ಯಲ್ಲಿ ದುಡುಶಲೆ ಹೇದು ಲೋರಿಲಿ ಕೊಂಡೋಪಗ, ಲೋರಿಗೆ ಯೇವದೋ ರಿಕ್ಷ ಅಡ್ಡ ಬಂದ ಲೆಕ್ಕಲ್ಲಿ ಬ್ರೇಕು ಹಾಕಿದ್ದಕ್ಕೆ- ಆನೆಯ ತಲಗೆ ಹೆಟ್ಟಿದ್ದಕ್ಕೆ – ಪಿಸುರು ಬಂತು ಹೇಳ್ತವು. ಆದರೆ, ಪಾಪ – ಆನೆಗೆ ರಿಕ್ಷ ಅಡ್ಡ ಬಂದ ಸಂಗತಿ ಎಲ್ಲಿ ಅರಡಿಗು!?
ಅದಕ್ಕೆ ಹೊಟ್ಟೆ ಹಶುವೂ, ಬಚ್ಚಿದ್ದದೂ, ತಲೆ ಬೇನೆ ಆದ್ದದೂ – ಇದೆಲ್ಲದಕ್ಕೂ ಕಾರಣ ಆದ ಮಾವುತನನ್ನೂ – ಇಷ್ಟೇ ಗೊಂತಿಪ್ಪದು.
ತನ್ನೆಲ್ಲಾ ಕಷ್ಟಕ್ಕೆ ಈ ಮಾವುತನೇ ಕಾರಣ – ಹೇದು ಆನೆ ತಿಳುದತ್ತು. ಅದಲ್ಲದ್ದೇ, ತನ್ನ ತಲಗೆ ತಾಗುಸಿ ಆ ಮಾವುತ ಕೈಗೆ ಸಿಕ್ಕದ್ದೆ ಪದ್ರಾಡು ಹಾಕಿದ್ದ° – ಹೇದು ಪಿಸುರಿಲಿ ದಿನ ಇಡೀ ಬೊಬ್ಬೆ ಹೊಡಕ್ಕೊಂಡಿತ್ತು.

ಒಳುದೋರು ಹತ್ತರೆ ಹೋದವು, ನೀರು ಕೊಟ್ಟವು, ಈಂದಿನ ಕೈ ಇಡ್ಕಿದವು, ಕಬ್ಬುದಂಡು ಮಡಗಿದವು – ಸಂತೋಷಲ್ಲಿ ತೆಕ್ಕೊಂಡತ್ತು.
ಆರಿಂಗೂ – ಏನೂ ಉಪದ್ರ ಮಾಡಿದ್ದಿಲ್ಲೆ.
ಆದರೆ, ಆ ಮಾವುತನ ಮೇಗೆ ಪಿಸುರು ಕಮ್ಮಿಯೇ ಆಯಿದಿಲ್ಲೆ!
ತಲಗೆ ನೀರೆರದವು, ಎಜಮಾನನ ಬರುಸಿದವು, ಇನ್ನೊಂದು ಆನೆಯ ತರುಸಿ ಈ ಆನೆಯ ಕಟ್ಟಿ ಹಾಕಿದವು. ಒಂದರಿಂಗೆ ಆ ಕೋಪ ತಣುದತ್ತು, ಏನೇ ಆದರೂ – ಮಾವುತನ ಮೇಗೆ ಪಿಸುರು ಇಳುದ್ದಿಲ್ಲೆ.

ಪಿಸುರು ಇಳುತ್ತು ಗ್ರೇಶಿ ನಿಧಾನಕ್ಕೆ ಉಪ್ರಂಗಡಿಗೆ ತೆಕ್ಕೊಂಡು ಹೋದವು, ಅದರ ಎಜಮಾನನ ಮನೆಗೆ.
ಮಾವುತ ಹಿಂದಂದ ಬಂದುಗೊಂಡಿತ್ತು. ಅದೆಲ್ಲಿಯೋ – ಮೂರ್ನಾಕು ಮೈಲು ಹೋಪಾಗ ಮಾವುತ ಸೀತ ಆನೆಯ ಎದುರಂಗೆ ಬಂತಾಡ. ತಕ್ಷಣ “ಸಿಕ್ಕಿದ್ದೇ ತಡ, ಮಡುಗೆ ನಿನ್ನ” ಹೇದು ಹಿಡುದು ಕುಲ್ಕುಸಿ, ನೆಲಕ್ಕೆ ಜೆಪ್ಪಿತ್ತಾಡ.
ಆ ಜೆನ ಅಲ್ಲಿಯೇ ಸ್ವರ್ಗಸ್ಥ!
ನಿಜವಾಗಿಯೂ ಅದಕ್ಕೆ “ಮದ” ಬಂದದಾಗಿದ್ದರೆ, ಒಳುದ ಎಲ್ಲೋರನ್ನೂ ಹಿಂಸೆ ಮಾಡೇಕಾತು. ಆದರೆ, ಅದಕ್ಕೆ ಇದ್ದದು ಮಾವುತನ ಮೇಗೆ ಕೋಪ. ನಿರ್ದಿಷ್ಟವಾಗಿ ಆ ಒಂದು ಜೆನರ ಮೇಗೆ ಮಾಂತ್ರ! ಆ ಜೆನರನ್ನೇ ಅದು ಹುಡ್ಕಿಂಡಿದ್ದದು. ಆ ಜೆನರ ನಾಶ ಮಾಡುದರ ಒಟ್ಟಿಂಗೆ ತನ್ನ ಕಷ್ಟವೂ ದೂರ ಆತು ಹೇದು ಗ್ರೇಶಿತ್ತದು, ಪಾಪ. ಹೆಡ್ಡು ಆನೆ.

ಆನೆಗೆ ಮದ ಏರಿದ್ದು ಹೇಳುದರಿಂದಲೂ, ಅದಕ್ಕೆ ಮಾವುತನ ಮೇಗೆ ಪಿಸುರು ಬಂದದು – ಹೇಳುದು ಹೆಚ್ಚು ಸೂಕ್ತ ಅಲ್ಲದೋ?
ಪೂರ್ತಿ ಆನೆದೇ ತಪ್ಪು ಹೇದು ಹೇಳುವ ಮದಲು, ಮಾವುತಂದೂ ತಪ್ಪು ಇಕ್ಕು – ಹೇದು ನಾವು ಅರ್ತ ಮಾಡಿಗೊಳೇಕು ಹೇಳ್ತದು ಒಪ್ಪಣ್ಣನ ಅಭಿಪ್ರಾಯ.

ತಪ್ಪು ಆರದ್ದೇ ಇರಳಿ, ನಷ್ಟ ಮಾಂತ್ರ ಮನುಕುಲಕ್ಕೆ.
ಒಂದು ಮನುಷ್ಯ ತೀರಿಗೊಂಡತ್ತು. ಅದಲ್ಲದ್ದೇ ಪುತ್ತೂರಿನವರ ಒಂದೆರಡು ದಿನದ ನೆಮ್ಮದಿಯೂ ಹಾಳಾತು.
ಹಳೆಯ ಕೆಲವು ವಿಶ್ಯಂಗೊ ಒಪ್ಪಣ್ಣಂಗೆ ನೆಂಪಾತು, ಬೈಲಿಂಗೊಂದು ಶುದ್ದಿ ಆತು. ಪೂರಕ ಸಂಗತಿಗೊ ನಿಂಗೊಗೆ ಗೊಂತಿದ್ದರೆ ಧಾರಾಳ ಹೇಳಿ, ನಾವು ಕೇಳ್ತು.

ಆನೆ ಆಗಲಿ, ದನ ಆಗಲಿ, ಹೋರಿ ಆಗಲಿ – ಒಡನಾಟ ಕಮ್ಮಿ ಆದಷ್ಟು ಅವರ ಕಷ್ಟಸುಖವ ಅರ್ಥ ಮಾಡಿಗೊಂಬ ಅವಕಾಶ ಕಮ್ಮಿ ಆವುತ್ತು. ಅವರ ಮನಸ್ಸಿನ ಭಾವನೆಗೊಕ್ಕೆ ಸ್ಪಂದಿಸುವ ನಮ್ಮ ಸಂವೇದನೆ ಕಮ್ಮಿ ಆವುತ್ತು. ಅವರ ಭಾವನೆಗೊ ನಮ್ಮೆದುರು ಶೂನ್ಯ ಆವುತ್ತು. ಎಲ್ಲ ಅನಾಹುತಕ್ಕೂ ಕಾರಣ ಇದುವೇ. ನವಗೆ ಪಶು-ಪ್ರಾಣಿಗಳ ನೆಡೆಶಿಗೊಂಬ ಪುರುಸೊತ್ತು ಇಲ್ಲದ್ದರೆ “ಪ್ರಾಣಿಗೊಕ್ಕೆ ಈಗೀಗ ಬುದ್ಧಿಯೇ ಇಲ್ಲೆ” ಹೇದು ಹೇಳುಸ್ಸು ಸರಿಯೋ? ಎಂತ ಹೇಳ್ತಿ!?

~

ಒಂದೊಪ್ಪ: ಮದ ಉನ್ಮಾದಕ್ಕೆ ತಿರುಗದ್ದೆ ಇರೆಕ್ಕಾರ ಪ್ರೀತಿ ಬೇಕಪ್ಪದು. ಅಲ್ಲದೋ?

14 thoughts on “ಆನೆಗೆ ಮದ ಬಂದರೆ “ಮದವೂರ ದೇವರೇ” ಗೆತಿ..!!

  1. ಲೇಖನಕ್ಕೊಂದು ಒಪ್ಪ
    ಆನೆ ಬಂದಿತ್ತಮ್ಮಮ್ಮ-ಮರಿಯಾನೆ ಬಂದಿತ್ತಮ್ಮಮ್ಮ-ತೊಲಗಿರಿತೊಲಗಿರಿ ಪರಬ್ರಹ್ಮ\ ಹೇಳಿ ದಾಸರ ಪದ ಇದ್ದಲ್ಲೊ ಆನಗೊಕ್ಕೆ ಪೂಜನೀಯ ಸ್ಥಾನ ಇದ್ದಲ್ಲೊ? ಒಳ್ಲೆ ಸುದ್ದಿ

  2. ”ಮಾವುತ ಹಿಂದಂದ ಬಂದುಗೊಂಡಿತ್ತು. ಅದೆಲ್ಲಿಯೋ – ಮೂರ್ನಾಕು ಮೈಲು ಹೋಪಾಗ ಮಾವುತ ಸೀತ ಆನೆಯ ಎದುರಂಗೆ ಬಂತಾಡ. ತಕ್ಷಣ “ಸಿಕ್ಕಿದ್ದೇ ತಡ, ಮಡುಗೆ ನಿನ್ನ” ಹೇದು ಹಿಡುದು ಕುಲ್ಕುಸಿ, ನೆಲಕ್ಕೆ ಜೆಪ್ಪಿತ್ತಾಡ.”

    ಒಪ್ಪಣ್ಣೋ… ಇಲ್ಲಿ ಕಥೆ ರಜಾ ಟ್ವಿಸ್ಟ್ ಇದ್ದು. ಆ ಆನೆಯ ತಣಿಶಿಕ್ಕಿ ಉಪ್ಪ್ರಂಗಡಿಗೆ ನಡೆಶುತ್ತಾ ನಡೆಶುತ್ತಾ ಬತ್ತಾ ಇಪ್ಪಾಗ ಈ ಹಳೇ ಕುಡ್ಚೇಲ ಮಾವುತ ಕೋಲಿಲಿ ಬಡ್ಕೋಂಡು ಹೋವ್ತಾ ಇತ್ತಾಡ. ದುಬಾರೆಂದ ಬಂದ ಹೊಸ ಮಾವುತ ಬಗೇತ್ತರಲ್ಲಿ ಹೇದ್ದರ ಕೇಳದ್ದೇ ಬಡಿವದರ ಮುಂದುವರೆಶಿತ್ತಾಡ. ಒಂದು ಹಂತಲ್ಲಿ ಆನೆಗೆ ತಾಳ್ಮೆ ತಪ್ಪಿ ಹಿಂದಾಣ ಕಾಲಿಲಿ ತೊಳುದ್ದು ರಟ್ಟುಸಿಕ್ಕಿ ಕಣಿಯ ಒಳ ಬೀಳುಸಿ ಪುನಾ ತೊಳುದು ದಾಡೆಲಿ ಕುತ್ತಿ ಕೊಂದದು.

    ಆನೆ ದ್ವೇಶ ಸಾಧಿಸಿದ್ದಿಲ್ಲೆ…. ಮಾವುತಂದೇ ತಪ್ಪು. ಪಾಪ ಆನೆ ಹಶು ತಡೆಯದ್ದೆ ನರಳಿಗೊಂಡಿತ್ತು…

  3. ಶುದ್ದಿ ಲಾಯಕ ಆಯಿದು ಒಪ್ಪಣ್ಣಾ……ಧನ್ಯವಾದ೦ಗೊ.

  4. ಆನೆ ಹೋದ್ದದೇ ದಾರಿ ಹೇಳಿ ಮಾತು ಇದ್ದು.
    ಕೋಪ ಬಂದರೆ ಇದರಲ್ಲಿಯೂ ಆನೆ ಎಂತ ಕಮ್ಮಿ ಅಲ್ಲ ಹೇಳಿ ಹಲವಾರು ನಿದರ್ಶನಂಗಳಲ್ಲಿ ಕಂಡಿದು.
    ಹೆಚ್ಚಿನ ಕಡೆಲಿ ಆನೆ ಕೋಪ ಬಂದಪ್ಪಗ, ಮಾವುತನ ಕೊಂದ ಸುದ್ದಿಯೇ ಕೇಳ್ತಷ್ಟೆ.
    ಪುತ್ತೂರಿನ ವಿಶಯಲ್ಲಿ, ಆನೆ ತನ್ನ ಕೋಪವ ಒಂದರಿಯಂಗೆ ತಣುಶಿಗೊಂಡ ಹಾಂಗೆ ಕಂಡರೂ , ಅದರ ಮಾವುತನ ಕಂಡಪ್ಪಗ ಪುನಃ ತೋರಿಸಿಯೇ ಬಿಟ್ಟತ್ತು.
    ಪ್ರಾಣಿಗಳ ಸಾಂಕುವದರೊಟ್ಟಿಂಗೆ ಅವರ ಭಾವನೆಗಳ ಗೌರವಿಸುವದೂ ಅಷ್ಟೇ ಮುಖ್ಯ ಆವ್ತು.
    ಒಪ್ಪಣ್ಣನ ಸಕಾಲಿಕ ಲೇಖನಕ್ಕೆ ಜೈ

  5. ಒಪ್ಪಣ್ಣನ ಆನೆ ಕಥೆ ಸಕಾಲಿಕ,ಒಳ್ಳೆಯದಾಗಿ ಬಯಿಂದು.ಓದಿಯಪ್ಪಗ ಎನಗೆ ಎರಡು ವರ್ಷ ಹಿಂದೆ ಕೇರಳಲ್ಲಿ ನೆಡದ ಘಟನೆ ನೆಂಪಾತಿದ..ಪೇಪರಿಲ್ಲಿ ಬಂದದು..ಕೇರಳದ ಒಂದು ದೇವಸ್ಥಾನ,ಜಾತ್ರೆಗೆ ಆನೆ ಇಲ್ಲದ್ರೆ ಅಗಾನ್ನೇ,ದೇವರ ಮೂರ್ತಿ ಹೊತ್ತೊಂಡು ಆನೆ,ದಾರಿಯುದ್ದಕ್ಕೂ ಪೂಜೆ,ಆರತಿ…ಸಡನ್ನಾಗಿ ಆನೆಗೆ ಮರುಳು ಎಳಗಿತ್ತಿದ,ದೇವರು,ಮಾವುತ ಎಲ್ಲರನ್ನೂ ಕೆಳ ಹಾಕಿ,ದಾರಿಯುದ್ದಕ್ಕೂ ಲಗಾಡಿ ತೆಗಕ್ಕೊಂಡು ಆನೆ ಓಡಿತ್ತು,ಜನಂಗಳೂ ದೇವರ ಅಲ್ಲೇ ಬಿಟ್ಟಿಕ್ಕಿ,ಆನೆಯ ಬಯಿಕ್ಕೊಂಡು,ಅದರ ಹಿಂದೇ ಓಡಿದವು..ಓಡಿ,ಓಡಿ ಆನೆ ಅದು ನಿತ್ಯ ಮೀವ ಬಾತ್ ರೂಂ ಕೆರೆಗೆ ಹಾರಿ ನಿಂದತ್ತು,ಅಲ್ಲಿಗೆ ಎಲ್ಲವೂ ಶಾಂತ.ಮಾವುತ,ಗೋಡಾಕ್ಟ್ರು ಎಲ್ಲ ಬಂದು ಆನೆಯ ಮೈ ಉದ್ದಿ ಸಮಾಧಾನ ಮಾಡಿಯಪ್ಪಗ ಗೊಂತಾತಿದ..ಆನೆಯ ಮುಂದಾಣ ಕಾಲಿಲ್ಲಿ ಗಾಯ,ಹುಣ್ಣು ಆಗಿತ್ತು,ಜೆನಂಗೊ ದೇವರಿಂಗೆ ಹೇಳಿ ಕುಂಕುಮ,ನಿಂಬೆ ಹುಳಿ ತುಂಡಿನ ಆನೆಯ ಗಾಯ ಇಪ್ಪ ಕಾಲಿಂಗೆ ಹಾಕಿದ್ದದು,ಉರಿ ತಡೆಯದ್ದೆ ಆನೆ ಓಡಿ ಹೋದ್ದದು,ಕೆರೆಯ ನೀರಿಲ್ಲಿ ಬಿದ್ದಪ್ಪಗ ಉರಿವದು ತಂಪಿತ್ತು..ಈಗ ಹೇಳಿ ಅರ ತಪ್ಪು,ಎಲ್ಲಿಯೋ ಕಾಡಿಲ್ಲಿ ಮೆಜೆಸ್ಟಿಕ್ ಆಗಿ ಬದುಕ್ಕಕಾದ ಆನೆಯ ನಾವು ದೇವರ ಹೊರ್ಲೆ,ಇಲ್ಲದ್ರೆ ಮರ ಹೊರ್ಲೆ ಉಪಯೋಗಿಸುತ್ತಾನ್ನೇ,ಇದೇ ಆನೆಗೆ ನಮ್ಮ ಮಿದುಳು,ಬಾಯಿ,ನಾಲಗೆ ಇದ್ದಿದ್ದರೆ…

  6. ಒಪ್ಪಣ್ಣನ ಶುದ್ದಿ ಫಸ್ಟ್ ಕ್ಲಾಸಾಯಿದು. ಆನೆ ಆ ಎರೆಪ್ಪು ಮಾವುತನ ಕುಲ್ಕಿ ಇಡುಕ್ಕಿದ್ದದು, ಅದರ ಪ್ರತಿಭಟನೆ ತೋರುಸಿದ್ದದು ಕೇಳಿ ಕೊಶಿ ಆತು. ಈಗಾಣ ಕಾಲಲ್ಲಿ ಭ್ರಷ್ಟಾಚಾರಕ್ಕೆ, ಜೆನಂಗೊ ಮಾಡ್ತ ಕೆಟ ಕೆಲಸಕ್ಕೆ, ಹೀಂಗಿಪ್ಪ ಪ್ರತಿಭಟನೆಯ ಜೆನಂಗೊ ಮಾಡಿರೆ ಎಲ್ಲವುದೆ ಸರೀ ಅಕ್ಕು. ಪ್ರಾಣಿಗಳ ಭಾವನೆಯ ಅರ್ಥ ಮಾಡದ್ದ ಮನುಷ್ಯ, ಪ್ರಾಣಿಗಿಂತ ಕಡೆ, ನಿಜ ಒಪ್ಪಣ್ಣ.

  7. ಶುಧ್ಧಿ ಯಾವತ್ತಿನಂತೆ ಲಾಯಿಕಾಯಿದು.
    ಪಾಪದ ಆನೆ, ಅದರ ಮನಸ್ಸಿನ ತಿಳುಕ್ಕೊಂಬ ಮಾವುತನ ಹತ್ರೆ ಅಲ್ಲದ್ದೆ, ಬೇರೆ ಆರ ಹತ್ರೆ ಅದರ ಸಂತೋಷ, ಬೇಜಾರ ತೋರ್ಸಿಗೊಂಬದು ಅಲ್ಲದಾ?

  8. ಮದ ಗಜದ ಶುದ್ಧಿ ಪಷ್ಟಾಯ್ದು…

  9. ಲೇಖನ ತುಂಬಾ ಖುಷಿ ಆತು ಒಪ್ಪಣ್ಣ… ಹರೇ ರಾಮ…

  10. ಶುದ್ದಿ ಲಾಯಿಕಾಯಿದು ಒಪ್ಪಣ್ಣೋ,
    ಇತ್ತೀಚೆಗೆ ಒಪ್ಪಣ್ಣನ ಭಾಷಾಪ್ರಯೋಗಲ್ಲಿ ಬೆಂಗಳೂರು ಕನ್ನಡದ ಶಬ್ದಂಗೊ ಕಾಣ್ತನ್ನೇ…..?
    ನಾವು ನಮ್ಮ ಭಾಶೆಲಿ “ತಾನೇ ತಾನೇ” ಹೇಳಿ ಬಾಬೆಯ ನಿಲ್ಲುಲೆ ಅಭ್ಯಾಸ ಮಾಡುತ್ಸು ಅಲ್ಲದೋ ಒಪ್ಪಣ್ಣನೂ ಹಾಂಗೆಂತಾರು ಆಲೋಚನೆ ಶುರು ಮಾಡಿದ್ದನೋ ಉಮ್ಮಪ್ಪ..

  11. ಆನೆ ಬಂತು ಆನೆ..
    ಮೈಸೂರಿಲಿ ಆನೆ ಬಂದು ಒಬ್ಬನ ಕೊಂದತ್ತು ಕಳೆದ ವರ್ಷ..ಈಗ ಪುತ್ತೂರಿಲಿ!
    ಆನೆ ಅದ್ಭುತ ಬಲಶಾಲಿ..ಅದು ಒಂದಾರಿ ತೆಗೆದು ಇಡ್ಕಿರೆ ಆರು ಒಳಿಗು?
    ಮನುಷ್ಯ-ಆನೆ ಸ್ನೇಹ ಮುಂದುವರಿತ್ತು,ಆಗಾಗ ಇಂತದ್ದೂ ಆವುತ್ತು.

  12. ಭಾರೀ ಚೆಂದ ಆಯಿದು ಒಪ್ಪಣ್ಣ, ನಿಂಗೊ ಹೇಳಿದ ಆನೆಯ ಶುದ್ದಿಗೊ.

    ಎನ್ನ ಫ್ರೆಂಡು ಒಂದು ಕಥೆ (ನಿಜವಾಗಿ ನಡದ್ದಡ) ಹೇಳಿತ್ತಿದ್ದ –
    ಒಂದು ಕುಂಞಿ ಆನೆ ಒಂದು ನೀರ ಟಾಂಕಿಗೆ ಬಿದ್ದದರ ಮೇಲೆ ಬರುಸುಲೆ ಎಡಿಯದ್ದೆ ಅದರ ಗುಂಪಿನ ಆನೆಗೊ ಪ್ರಯತ್ನ ಕೈ ಬಿಟ್ಟು ಅಲ್ಲೇ ಹತ್ತರೆ ಕಾದುಗೊಂಡಿತ್ತಿದ್ದವಡ. ಊರೋವು ಮರತ್ತುಂಡು ಇತ್ಯಾದಿ ಹಾಕಿ ಇಳಿಜಾರು ಮಾಡಿ ಆ ಕುಂಞಿ ಹೆರ ಬಪ್ಪ ಹಾಂಗೆ ಮಾಡಿದವು. ಅದರ ಕರಕ್ಕೊಂಡು ಒಂದು ನೂರು ಗಜ ಓಡಿಕ್ಕಿ ಆನೆಗೊ ತಿರುಗಿ ನಿಂದು ಒಟ್ಟಿಂಗೆ ಘೀಳಿಟ್ಟು thanks ಕೊಟ್ಟ ಕ್ರಮ ನೋಡಿ ಅಲ್ಲಿದ್ದೋರು ಎಲ್ಲೋರ ಕಣ್ಣು ಮಂಜಾತಡ.

    ಆನೆಗೊ ತುಂಬ ಸೂಕ್ಷ್ಮ (sensitive) ಹಾಂಗೇ ತುಂಬ ಭಾವುಕ (sentimental) ಜೀವಿಗೊ ಹೇಳುದರ ಕೇಳಿದ್ದೆ. ಅವಕ್ಕೂ ನಮ್ಮ ಹಾಂಗೇ ಮೂಡ್ ಓಫ್ ಆವ್ತದು ಸಹಜವೇ.

    ಇನ್ನು ಸಮುದ್ರಮಥನ, ಧರ್ಮರಾಯ ಹೇಳಿದ ಸುಳ್ಳು, ಗಣಪತಿಯ ಹೊಸ ತಲೆ ಇಲ್ಲೆಲ್ಲಾ ಆನೆಯೇ ಕಾರಣ ಅಲ್ಲದೊ?

    ವಿಶ್ವವ ಅವಕ್ಕವಕ್ಕೆ ಅರ್ತ ಆದ ಹಾಂಗೆ ಹೇಳುದರ ಕುರುಡರು ಆನೆಯ ಮುಟ್ಟಿ ತಿಳ್ಕೊಂಬ ಕಥೆಗೆ ಹೋಲಿಸುತ್ತವು.

    ಎನಗಂತೂ ಆನೆ ಹೇಳಿದರೆ ತುಂಬ ಕೊಂಡಾಟ ಕಾಂಬದು.

    ಮಾಯಾವತಿಯ ಆನೆಯ ಬಗ್ಗೆ ರಜ್ಜ ಬೇಸರ ಇದ್ದು. ಇರಲಿ, ಲೋಕ ನವಗೆ ಬೇಕಾದ ಹಾಂಗೇ ಇರೆಕ್ಕು ಹೇಳಿರೆ ಆವ್ತಿಲ್ಲೆನ್ನೆ.

  13. ವಿಷಯ ಭಾರೀ ಪಷ್ಟಾಯ್ದು ಭಾವ. ಭಲೇ ಭಲೇ ಒಪ್ಪ.

    ಪ್ರಾಣಿಗೊಕ್ಕೂ ಮನಸ್ಸಿದ್ದು, ಬುದ್ಧಿ ಇದ್ದು, ಸಂವೇದನಾ ಶಕ್ತಿ ಇದ್ದು ಹೇಳ್ವದರ ಮತ್ತೊಂದರಿ ನಿರೂಪಿಸಿತ್ತು ಈ ಆನೆ. ಪ್ರಾಣಿಗಳನ್ನೂ ನಮ್ಮಾಂಗೆ ಇಪ್ಪ ಇನ್ನೊಂದು ಜೀವ ಹೇದು ತಿಳ್ಕೊಂಬ ಮನೋಭಾವ ಇನ್ನಾರು ಎಲ್ಲೋರಲ್ಲಿ ಮೂಡಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×