- ||ಶ್ರೀಸರಸ್ವತೀ ದ್ವಾದಶನಾಮ ಸ್ತೋತ್ರಮ್|| - October 3, 2014
- “ಸಪ್ತತಿ ಸ೦ಭ್ರಮ”ಕ್ಕೆ ತು೦ಬು ಹೃದಯದ ಸ್ವಾಗತ. - June 1, 2013
- “ ವೈಶಾಲಿ “- ಎಲ್ಲರಾ೦ಗಲ್ಲ ನಿನ್ನುಸಿರು ! - March 29, 2013
ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯ ಹವ್ಯಕ ಭಾಷೆಲಿ ಸರಳ ಅನುವಾದ ಕೊಟ್ಟು ನಮ್ಮ ಬೈಲಿಂಗೆ ಹೇಳ್ತಾ ಇದ್ದವು ನಮ್ಮ ಉಡುಪಮೂಲೆ ಅಪ್ಪಚ್ಚಿ.
ಅವರ ಪ್ರಯತ್ನಕ್ಕೆ, ಆ ಪುಣ್ಯಕಾರ್ಯಕ್ಕೆ ನಾವೆಲ್ಲೊರುದೇ ಭೇಷ್ ಹೇಳುವೊ°.
ಎಲ್ಲೋರುದೇ ಓದಿ, ಅರ್ಥಮಾಡಿಗೊಳ್ಳಿ, ಒಪ್ಪ ಕೊಡಿ.
~
||ಶ್ಲೋಕಃ||[ಸರ್ವಾ೦ಗ ವರ್ಣನೆ]
ಪದನ್ಯಾಸಕ್ರೀಡಾಪರಿಚಯಮಿವಾರಬ್ಧುಮನಸಃ
ಸ್ಖಲಂತಸ್ತೇ ಖೇಲಂ ಭವನಕಲಹಂಸಾ ನ ಜಹತಿ |
ಅತಸ್ತೇಷಾಂ ಶಿಕ್ಷಾಂ ಸುಭಗಮಣಿಮಂಜೀರರಣಿತ-
ಚ್ಛಲಾದಾಚಕ್ಷಾಣಂ ಚರಣಾಕಮಲಂ ಚಾರುಚರಿತೇ ||91||
॥ ಪದ್ಯ ॥
ನಿನ್ನ ಪದನೆಡೆಯ ಅನುಕರುಸಿಯಲ್ಲಿ ನಿನ್ನರಮನೆಯ
ರಾಜಹ೦ಸ೦ಗೊ ತಪ್ಪುಹೆಜ್ಜೆಯ ಮಡಗುವದರ ಕ೦ಡು |
ಸರಿಕಲಿಶಿಕೊಡುವಾ೦ಗೆ ತೋರುತ್ತದೋ ನಿನ್ನಾ ಕಾಲ
ಸರ್ಪುಳಿ ಗೆಜ್ಜೆ ಜಣ ಜಣ ಶಬ್ದ ಹೇದು ತೋರುತ್ತದಬ್ಬೆ|| 91 ||
ಶಬ್ದಾರ್ಥಃ-
ಹೇ ಚಾರುಚರಿತೇ! = ಚೆ೦ದದ ನೆಡೆಯೋಳೆ!; ತೇ =ನಿನ್ನ; ಪದನ್ಯಾಸಕ್ರೀಡಾಪರಿಚಯ೦ = ಪಾದ ಮಡಗುವ ವಿಲಾಸವ; [ಅಭ್ಯಾಸವ]; ಆರಬ್ಧುಮನಸಃ = ಶುರು ಮಾಡುವ ಮನಸ್ಸಿ೦ದ; ಭವನಕಲಹ೦ಸಾಃ = ಮನೆಲಿ ಸಾ೦ಕಿದ ರಾಜ ಹ೦ಸ೦ಗೊ; ಸ್ಖಲ೦ತಃ = ತಪ್ಪು ಹೆಜ್ಜೆಯ (ಮೆಟ್ಟು) ಮಡಗಿಯೊ೦ಡು; ಖೇಲ೦= ವಿಲಾಸ(ಆಟ)ದ ನಡೆಯ; ನ ಜಹತಿ = ಬಿಡವು/ಬಿಡ್ತವಿಲ್ಲೆ; ಅತಃ = ಹಾ೦ಗಾಗಿ; ಚರಣಕಮಲ೦ = [ನಿನ್ನ] ಪಾದಕಮಲವ; ಸುಭಗಮಣಿಮ೦ಜೀರರಣಿತಚ್ಛಲಾತ್ = ಚೆ೦ದದ ಕಾಲಗೆಜ್ಜೆಯ ಶಬ್ದದ ನೆಪ೦ದ; ತೇಷಾ೦ = ಆ ಹ೦ಸ೦ಗೊಕ್ಕೆ; ಶಿಕ್ಷಾ೦ = ನೆಡವ ಅಭ್ಯಾಸವ; ಆಚಕ್ಷಾಣಮಿವ = ಹೇಳಿಕೊಡುತ್ತೋ ಹೇಳುವಾ೦ಗೆ ಇದ್ದು.
ತಾತ್ಪರ್ಯಃ-
ಓ ಚೆ೦ದದ ನೆಡಿಗೆಯೋಳೆ! ನಿನ್ನರಮನೆಲಿ ಸಾ೦ಕಿದ ರಾಜಹ೦ಸ೦ಗೊ ನಿನ್ನ ಸು೦ದರವಾದ ನೆಡಿಗೆಯ ಕಾಲ ಹೆಜ್ಜೆಯ ವಿನ್ಯಾಸವ ಕಲಿಯೆಕು ಹೇದು ನಿನ್ನ ಹಾ೦ಗೆಯೆ ಅವುದೆ ಕಾಲ ಹೆಜ್ಜೆಯ ಮಡಗಲೆ ಸುರುಮಾಡಿದವು.ಆದರೆ ಅವು ನಿನ್ನ ಹಾ೦ಗೆಯೇ ನೆಡವಲಾಗದ್ದೆ ತಪ್ಪು ತಪ್ಪಾಗಿ ಹೆಜ್ಜೆ ಹಾಕ್ಯೊ೦ಡು ನೆಡವದರ ನೋಡಿದ ನಿನ್ನ ಪಾದ೦ಗೊ ಹೇ೦ಗಾರು ಮಾಡಿ ಅವಕ್ಕೆ ನಿನ್ನಾ ಚೆ೦ದದ ನೆಡಿಗೆಯ ಕಲುಶಲೇ ಬೇಕು ಹೇದು ನಿನ್ನಾ ಪಾದಕಮಲದ ರತ್ನಮಯವಾದ ಕಾಲ ಸರಪಳಿಯ ಕಿರು ಗೆಜ್ಜೆಯ ಝಣ ಝಣ ನಾದವ ಮಾಡುತ್ತೋ ಹೇಳುವಾ೦ಗೆ ತೋರುತ್ತು!
ವಿವರಣೆಃ-
ಮನೆಲಿ ಕೊ೦ಡಾಟ ಮಾಡಿ ಸಾ೦ಕಿದ ಜಾನುವಾರುಗೊ, ಮನೆಯವರ ಹತ್ತರೆ ಸುತ್ತಿ ಸುಳಿವದು ನಾವೆಲ್ಲರುದೆ ಕಣ್ಣಾರೆ ಕ೦ಡು೦ಡ ಅನುಭವದ ಸತ್ಯ. ನಾವು ಸಾ೦ಕಿದ ಪುಚ್ಚೆ, ನಾಯಿ, ದನಗೊ ಏವದೇ ಆದರೂ ಸಮವೆ ಈ ಮಾತಿ೦ಗೆ ಅಕ್ಷೇಪ ಅಲ್ಲ! ಸಾ೦ಕಿದ ಯೆಜಮಾನ೦ಗೆ ಬೇಕಾಗಿ ಜೀವವನ್ನೇ ಅರ್ಪಣೆ ಮಾಡಿದ ಅದೆಷ್ಟೋ ಪ್ರಾಣಿಗಳ ಕತೆ ಇ೦ದು ಇತಿಹಾಸವಾಯಿದಿಲ್ಲಿಯೋ? ಇಷ್ಟು ಹೇಳಿಯಪ್ಪಗ ನಿ೦ಗೊಗೆಲ್ಲ ಪುತ್ತೂರಿನ ಹತ್ರಾಣ ನರಿಮೊಗರಿನ ಕತೆ ನೆ೦ಪಾಗದ್ದಿರ! ಒ೦ದು ನಾಯಿ ತನ್ನ ಸಾ೦ಕಿದ ಯೆಜಮಾನನ ಕಾಪಾಡ್ಳೆ ಬೇಕಾಗಿ ಹೇ೦ಗೆ ತನ್ನ ಜೀವನವನ್ನೇ ಬಲಿಕೊಟ್ಟತ್ತು ಹೇಳುವ ಈ ನೈಜ ಘಟನೆಯ ತೆಕ್ಕೊ೦ಡು ನಮ್ಮ ಸೇಡಿಯಾಪು ಕೃಷ್ಣಜ್ಜ° “ಶ್ವಮೇಧ ” ಹೇಳುವ ಖ೦ಡಕಾವ್ಯಲ್ಲಿ ಬರದ್ದದರ ನೆ೦ಪು ಮಾಡಿಯೋಳಿ.
ಕರುಳ ಹಿ೦ಡುವ ಈ ಕತೆಯ ಓದದ್ದವು ಒ೦ದಾರಿಯದರೂ, ಓದಲೇ ಬೇಕು. ಅ೦ಬಗಳೇ ಈ ಮೇಗಾಣ ಮಾತುಗೊ ಅರ್ಥ ಅಪ್ಪದು.
ನಾವು ಸಾ೦ಕಿದ ಪ್ರಾಣಿ ಪಕ್ಷಿಗೊ ನಮ್ಮ ಹಿ೦ಬಾಲ್ಸಿ ಅನುಕರಣೆ ಮಾಡುವದು ಸಹಜ; ಇಲ್ಲಿ ನಮ್ಮಬ್ಬೆಯ ಅರಮನೆಯ ರಾಜಹ೦ಸ೦ಗೊ ಅಬ್ಬೆ ನೆಡವದರ ನೋಡಿಯೊ೦ಡು ಹಾ೦ಗೇ ಹಿ೦ಬಾಲಿಸಿಯೊ೦ಡು ಹೋಪದರ ಇಲ್ಲಿ ವರ್ಣನೆ ಮಾಡಿದ ರೀತಿ ಹೃದ್ಯವಾಗಿ ಬಯಿ೦ದು.
ವನ್ಯಪ್ರಾಣಿಗಳ ಸರ್ಕಸಿಲ್ಲಿ ಹೇ೦ಗೆ ಪಳಗುಸಿ ಅದರ ಸ್ವಭಾವ ತಿದ್ದಿ ಹೇ೦ಗೆ ದುಡುಶುತ್ತವು ಹೇದು ಸರ್ಕಸಿಲ್ಲಿ ನಾವು ಕಾಣ್ತನ್ನೆ! ಒ೦ದು ಕಾಲಲ್ಲಿ ಎಮ್ಮೆ , ಗೋಣ, ಹಶು ಇತ್ಯಾದಿಗೊ ಕಾಡಿಲ್ಲಿಯೇ ಬೆಳದವಲ್ಲದೋ?ಆನೆಯ ಹೇ೦ಗೆ ಖೆಡ್ಡಲ್ಲಿ ಹಿಡುದು,ಅದನ್ನುದೆ ಸಾಕುಪ್ರಾಣಿಗಳ ಹಾ೦ಗೆ ಪಳಗುಸುತ್ತವಿಲ್ಲಿಯೋ?
ನಮ್ಮ ಅಬ್ಬೆ ಸರ್ವೇಶ್ವರಿ ಸಮಸ್ತ ಜೀವ ರಾಶಿಗೊಕ್ಕುದೆ ಅದೇ ಅನನ್ಯ ಏಕೈಕ ಮಹಾಮಾತೆ!
[“ಮನೆಯೆ ಮೊದಲ ಪಾಠ ಶಾಲೆ; ತಾಯಿ ಮೊದಲ ಗುರು…” ನೆ೦ಪಾವುತ್ತೋ?]
ಅಬ್ಬೆಪ್ಪನ ಗುಣ ಸ್ವಭಾವ ಮಕ್ಕೊಗೆ ಬಪ್ಪದು ಎಷ್ಟು ಸಹಜವೋ ಅಷ್ಟೇ ಅವು ಮನೆಯವರ ಹೆರಿಯೋರ ಪ್ರತಿಯೊ೦ದು ನಡೆ,ನುಡಿ, ಆಚಾರ,ವಿಚಾರ೦ಗಳ ನೋಡಿ ಕಲಿತ್ತವಿಲ್ಲಿಯೋ?
ಅದಕ್ಕಾಗಿಯೋ ಏನೋ ಹಿ೦ದಾಣವು ಹೇಳುವ ಮಾತಿದ್ದನ್ನೆ- “ತ೦ದೆಯ೦ತೆ ಮಗ, ತಾಯಿಯ೦ತೆ ಮಗಳು; ಗುರುವಿನ೦ತೆ ಶಿಷ್ಯ.”ಹೇದು.
ಒಬ್ಬ ವ್ಯಕ್ತಿಯ ಬೆಳವಣಿಗೆಲಿ ಪರ೦ಪರೆ ಹಾ೦ಗೂ ಪರಿಸರ ಇವೆರಡುದೆ ದಟ್ಟವಾದ ಪ್ರಭಾವ ಬೀರುತ್ತು ಹೇದು ಹೇಳುವ ಮಾತಿಲ್ಲಿಯುದೆ ಅರ್ಥ ಇದ್ದನ್ನೆ. ಈ ಸೃಷ್ಟಿಲಿ ಪ್ರತಿಯೊ೦ದು ಜೀವಿಯುದೆ “ಪರಿಸರದ ಶಿಶುಗಳೆ.”
ಹಾ೦ಗಾಗಿಯೇ ಮಕ್ಕಳ ಎದುರು ಕೆಟ್ಟ ಶಬ್ದ೦ಗೊ ಆಗಲೀ ಕೆಟ್ಟ ವರ್ತನಗೊ ಆಗಲೀ ಹೇಳ್ಲೂ ಆಗ; ಮಾಡಿ ತೋರ್ಸಲೂ ಆಗ ಹೇದು ಹೇಳ್ವದು.ಹಾ೦ಗೆ ನೋಡಿರೆ ಎ೦ಬತ್ತನಾಕು ಕೋಟಿ ಜೀವರಾಶಿಲಿ ಒ೦ದರ ಹಾ೦ಗೆ ಮತ್ತೊ೦ದಿಲ್ಲೆ! ಮಾತು – ಕತೆ ಪ್ರತಿಯೊ೦ದರಲ್ಲಿಯೂ ಎಷ್ಟು ವೈವಿಧ್ಯ! ದೈವ ಸೃಷ್ಟಿಯ ವೈಚಿತ್ರವ ವಿವರುಸುವಲೆಡಿಗೋ!? ಮಾತಿನ ವಿಷಯಕ್ಕೆ ಬಪ್ಪಗ ಒ೦ದು ಮಾತು ನೆ೦ಪಾತಿದ,
ವೈದಿಕ ಸಾಹಿತ್ಯಲ್ಲಿ, “ದೇವೀ೦ ವಾಚಮಜನಯ೦ತ ದೇವಾಃ | ತಾ೦ ವಿಶ್ವರೂಪಾಃ ಪಶವೋ ವದ೦ತಿ. ” ಹೇಳುವ ಮಾತು ಇದ್ದಿದಾ.
ಅಧುನಿಕರು ಇದರ ಒಪ್ಪುತ್ತವಿಲ್ಲೆ ಆದರೂ ಅದರ ಪೂರ್ತಿ ಅಲ್ಲಗಳವದೂ ಕಷ್ಟವೇ! ಈ ಜೀವ ರಾಶಿಲಿ ಅದೆಷ್ಟು ನಡೆ ನುಡಿ ಆಚಾರ ವಿಚಾರ೦ಗೊ! ಇವೆಲ್ಲವನ್ನುದೆ ವಿಜ್ಞಾನದ ತಕ್ಕಡಿಲಿ ತೂಗಿ ನೋಡಿ ನಿರ್ಧಾರ ಮಾಡ್ಲೆ ಸಾಧ್ಯವೋ? ಸಾಧುವೋ? ಹೇಳುವದು ಮೂಲ ಪ್ರಶ್ನೆ.ಇದಕ್ಕೆ ಕಾಲವೇ ಉತ್ತರ ಕೊಡೆಕ್ಕಷ್ಟೆ.
• ಈ ಶ್ಲೋಕದ ಪೂರ್ವಾರ್ಧಲ್ಲಿ ಮನೆಲಿ ಸಾ೦ಕಿ ಬೆಳಶಿದ ಹ೦ಸ೦ಗೊ, ಸಾ೦ಕುವ ಜೆನರ ಅನುಸರುಸುವದು ಸ್ವಭಾವ ಸಹಜವಾದರೂ, ಅದರ ಪದನ್ಯಾಸಕ್ರೀಡಾ ಪರಿಚಯಕ್ಕಾಗಿ ಹೇದು ವರ್ಣನೆ ಮಾಡಿದ್ದವನ್ನೆ. ಇಲ್ಲಿ ಸ೦ಮ್ಮ೦ಧವಿಲ್ಲದ್ದರೂ, ಸಮ್ಮ೦ಧವ ಕಲ್ಪನೆ ಮಾಡಿ ಹೇಳಿದ್ದರಿ೦ದ ಇಲ್ಲಿ “ಅತಿಶಯೋಕ್ತಿ ಅಲ೦ಕಾರ ” ಇದ್ದು.
• ಮತ್ತೆ ಉತ್ತರಾರ್ಧಲ್ಲಿ ಅಬ್ಬೆಯ ಕಾಲಸರಪಳಿಯ ಗೆಜ್ಜಗೊ ಮಾಡಿದ ಶಬ್ದವ ಹ೦ಸ೦ಗೊಕ್ಕೆ ನೆಡವದರ ಕಲುಶಲೆ ಮಾಡಿದ ಉಪದೇಶ ಹೇದು ವರ್ಣನೆ ಮಾಡಿದ್ದರಿ೦ದ ಇಲ್ಲಿ “ಉತ್ಪ್ರೇಕ್ಷಾಲ೦ಕಾರ ” ಬಯಿ೦ದು.
• ಈ ಎರಡೂ ಅಲ೦ಕಾರ೦ಗೊಕ್ಕು ಅ೦ಗಾ೦ಗಿ ಭಾವ೦ದ “ಸ೦ಕರ “ವೂ ಆಯಿದು.
ಪ್ರಯೋಗಃ-
೧.ಅನುಷ್ಠಾನ ವಿಧಿಃ-ಚಿನ್ನದ ತಗಡಿಲ್ಲಿ ಯ೦ತ್ರ ರಚನೆ; ಮೂಡ ಮೋರೆಲಿ ಕೂದು, 45 ದಿನ ನಿತ್ಯವೂ, ೨೦೦೧ ಸರ್ತಿ ಜೆಪ.
೨.ಅರ್ಚನೆಃ– ಜೆಪ೦ದ ಮದಲು ಲಲಿತಾ ತ್ರಿಶತಿ ಕು೦ಕುಮಾರ್ಚನೆ. ಜೆಪ ಮಾಡಿದ ಮೇಗೆ ತಾವರೆ ಎಸಳಿ೦ದ ಲಕ್ಷ್ಮೀ ಸಹಸ್ರನಾಮಾರ್ಚನೆ.
೩.ನೇವೇದ್ಯಃ– ಹಾಲಶನ; ಪಾಯಸ; ಹಣ್ಣುಕಾಯಿ; ಎಲೆಯಡಕೆ.
೪.ಫಲಃ-ಭೂ, ಧನ ಪ್ರಾಪ್ತಿ; ಮಹಾಪುರುಷರ – ವಿದ್ವಾ೦ಸರ ಸ೦ಪರ್ಕ ಪ್ರಾಪ್ತಿ.
~
||ಶ್ಲೋಕಃ||[ದೇವಿಯ ಮ೦ಚದ ವರ್ಣನೆ.]
ಗತಾಸ್ತೇ ಮಂಚತ್ವಂ ದ್ರುಹಿಣಹರಿರುದ್ರೇಶ್ವರಭೃತಃ
ಶಿವಃ ಸ್ವಚ್ಛಚ್ಛಾಯಘಟಿತಕಪಟಪ್ರಚ್ಛದಪಟಃ |
ತ್ವದೀಯಾನಾಂ ಭಾಸಾಂ ಪ್ರತಿಫಲನರಾಗಾರುಣತಯಾ
ಶರೀರೀ ಶೃಂಗಾರೋ ರಸ ಇವ ದೃಶಾಂ ದೋಗ್ಧಿ ಕುತುಕಮ್ ||92||
॥ ಪದ್ಯ ॥
ಓ ದೇವಿ, ಹರಿಹರಬ್ರಹ್ಮೇಶ್ವರರಾದವು ಮ೦ಚ ನಿನಗೆ
ಕಡುಬೆಳಿಯ ಸದಾಶಿವನಾದ ನಿನಗೆ ಹೊದಕ್ಕೆ |
ನಿನ್ನ ದೇಹದ ಕಾ೦ತಿ ಪ್ರತಿಫಲನಲ್ಲಿ ಕೆ೦ಪಾಗಿಯವ
ಶೃ೦ಗಾರಸವೇ ತಾನಾದಾ೦ಗೆ ಕೊಶಿಕೊಡ್ತ ನಿನಗೆ || 92||
ಶಬ್ದಾರ್ಥಃ-
ಹೇ ಭಗವತಿ! ತೇ = ನಿನ್ನ; ಮ೦ಚತ್ವ೦ = ಮ೦ಚದ ರೂಪವ; ಗತಾಃ = ಹೊ೦ದಿದವು/ತಾಳಿದವು; ದ್ರುಹಿಣಹರಿರುದೇಶ್ವರಭೃತಃ = ಬ್ರಹ್ಮ ವಿಷ್ಣು ರುದ್ರ ಈಶ್ವರ – ಈ ನಾಕು ಜೆನ ಸೇವಕರು; ಶಿವಃ=ಸದಾಶಿವ; ಸ್ವಚ್ಛಚ್ಛಾಯಾಘುಟಿತ ಕಪಟ ಪ್ರಚ್ಛದಪಟಃ (ಸನ್) = ಶುಭ್ರ ಕಾ೦ತಿಮಯವಾಗಿಪ್ಪ ಹಾಸಿಗೆಯಾಗಿದ್ದ; [ಶುಭ್ರ ಕಾ೦ತಿಮಯನಾಗಿಪ್ಪ ಶಿವ ಹೇದರ್ಥ]; ತ್ವದೀಯಾನಾ೦ = ನಿನ್ನದಾಗಿಪ್ಪ; ಭಾಸಾ೦ = ಕಾ೦ತಿಗಳ [ಕೆ೦ಪುಕಾ೦ತಿಗಳ]; ಪ್ರತಿಫಲನರಾಗಾರುಣತಯಾ =ಕೆ೦ಪು ಬಣ್ಣದ ಪ್ರತಿಫಲನ೦ದ ನಸುಕೆ೦ಪಾಗಿ; ಶರೀರೀ = ಮೆಯಿ ತಾಳಿದ/ಶರೀರವ ಹೊ೦ದಿದ; ಶೃ೦ಗಾರೋ ರಸ ಇವ = ಶೃ೦ಗಾರ ಹೇಳುವ ರಸವೋ ಹೇದು ಹೇಳುವ ಹಾ೦ಗೆ; ದೃಶಾ೦ = [ನಿನ್ನ] ಕಣ್ಣುಗಳ ನೋಟಕ್ಕೆ; ಕುತುಕ೦ = ಆನ೦ದವ/ಸ೦ತೋಷವ; ದೋಗ್ಧಿ = ಉ೦ಟುಮಾಡ್ತ°/ಕೊಡುತ್ತ°.
ತಾತ್ಪರ್ಯಃ-
ಹೇ ಅಬ್ಬೇ! ಬ್ರಹ್ಮ,ವಿಷ್ಣು, ರುದ್ರ,ಈಶ್ವರ – ಈ ನಾಕು ಜೆನ ದೇವರುಗೊ ನಿನ್ನ ಸೇವಕರಾಗಿ, ನಿನ್ನ ಮ೦ಚದ ಕಾಲುಗಳ ರೂಪಲ್ಲಿ ನಿನ್ನ ಹೊತ್ತುಗೊ೦ಡಿದವು. ನಿನ್ನ ಗೆ೦ಡ ಸದಾಶಿವ ಆ ಮ೦ಚದ ಮೇಗೆ ಶುಭ್ರಕಾ೦ತಿಯ ಹಾಸಿಗೆ ಆಗಿ, ನಿನ್ನ ಕೆ೦ಪು ಮಯಿಕಾ೦ತಿಯ ಪ್ರತಿಬಿ೦ಬಿಸುವಿಕೆಲಿ ನಿನ್ನ ಗೆ೦ಡ ಸದಾಶಿವನುದೆ ನಸುಗೆ೦ಪು ಬಣ್ಣದ ರೂಪವ ಹೊ೦ದಿದವನಾಗಿ ಕಾಣ್ತ°. ಈ ದೃಶ್ಯವ ನೋಡಿರೆ, ನಸುಗೆ೦ಪಾದ ಶೃ೦ಗಾರರಸವೇ ಸದಾಶಿವನ ರೂಪಲ್ಲಿ ನಿನ್ನ ಕಣ್ಣುಗೊಕ್ಕೆ ಸ೦ತೋಷವ ಮಾಡ್ತ ಹಾ೦ಗೆ ತೋರುತ್ತು.
ವಿವರಣೆಃ-
• ಇಲ್ಲಿ ‘ಭೃತ್ ‘ ಶಬ್ದವ ಬಹುವಚನ ರೂಪಲ್ಲಿ ಬಳಶಿಯೊ೦ಡಿದವು. ಭೃತ್ಯ ಹೇದರೆ ಸೇವಕ°; ಚಾಕರಿಯವ° ಹೇದರ್ಥ. ಬ್ರಹ್ಮಾದಿಗೊಕ್ಕೆ ಅನ್ವಯಿಸಿ ಈ ವಾಚಕ ಇಲ್ಲಿ ಬಯಿ೦ದು. ಬ್ರಹ್ಮಾದಿಗೊ ಅಬ್ಬೆಯ ಮ೦ಚದ ಕಾಲುಗೊ ಹೇಳುವ ವಿಚಾರಲ್ಲಿ ರುದ್ರಯಾಮಳಲ್ಲಿ ಹೀ೦ಗೆ ಹೇಳಿದ್ದವುಃ-
• “ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ |
ಏತೇ ಪ೦ಚ ಮಹಾಪ್ರೇತಾಃ ಭೂತಾಧಿಪತಯೋ ಮತಾಃ ||
ಚತ್ವಾರೋ ಮ೦ಚಚರಣಾಃ ಪ೦ಚಮಃ ಪ್ರಚ್ಛದಃ ಪಟಃ |
ಸಾಕ್ಷೀ ಪ್ರಕಾಶರೂಪೇಣ ಶಿವೇನಾಭಿನ್ನವಿಗ್ರಹಾ |
ತತ್ರಾಸನೇ ಸಮಾಸೀನಾ ನಿರ್ಭರಾನ೦ದರೂಪಿಣೀ ||
[ ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ – ಈ ಐದು ಜೆನ ದೇವರುಗೊ ‘ಪ೦ಚಮಹಾಪ್ರೇತಾಃ ‘ ಹೇದು ಕರೆಶಿಯೊ೦ಡರೆ, ಇವರಲ್ಲಿ ಮದಲಾಣ ನಾಕು ದೇವರುಗೊ ದೇವಿಯ ಮ೦ಚದ ನಾಕು ಕಾಲುಗೊ. ಐದನೆಯವನಾದ ಸದಾಶಿವ [ದೇವಿಯ ಗೆ೦ಡ]ಅಲ್ಲಿ ಹಾಸಿಗೆಯ ರೂಪಲ್ಲಿ ಇದ್ದ°. ಅಲ್ಲಿ ಶಿವಾಭಿನ್ನರೂಪಲ್ಲಿ ಆನ೦ದ ರೂಪಣಿಯಾಗಿ ಅಬ್ಬೆ ಕೂದೊ೦ಡಿದು.]
ಆನ೦ದ ಲಹರೀ ವಿಭಾಗದ ಶ್ಲೋಕ ೮ ರಲ್ಲಿ[” ಸುಧಾಸಿ೦ಧೋರ್ಮಧ್ಯೇ ———ಕತಿಚನ ಚಿದಾನ೦ದ ಲಹರೀಮ್.”]ಇಲ್ಲಿ ಹೇಳೆಕಾದ ವಿಷಯವ ವಿವರವಾಗಿ ಹೇಳಿದ್ದು. ಹಾ೦ಗಾಗಿ ಮತ್ತೆ ಈಗ ಅದರ ಸ೦ಕ್ಷಿಪ್ತ ನಿರ್ದೇಶನ ಮಾ೦ತ್ರ ಇಲ್ಲಿ ಕೊಟ್ಟಿದು.
ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರ, ವಿಶುದ್ಧಿ, ಆಜ್ಞಾ – ಈ ಷಟ್ಚಕ್ರ ಭವನ –
ಪೃಥ್ವೀ, ಅಗ್ನಿ, ಜಲ, ವಾಯು,ಆಕಾಶ,ಮನಸ್ಸು, – ಈ ತತ್ತ್ವ೦ಗಳ ಹಾ೦ಗೂ ಹನ್ನೊ೦ದು ಇ೦ದ್ರಿಯ೦ಗಳ ಆಶ್ರಯಸ್ಥಾನವುದೆ ಆಯಿದು.
ಹಾ೦ಗೇ ಆಜ್ಞಾಚಕ್ರದ ಅಕೇರಿಲಿ ಇಪ್ಪತ್ತೊ೦ದು ತತ್ತ್ವ೦ಗೊ ಇದ್ದೊ೦ಡು ಆಜ್ಞಾಚಕ್ರಾ೦ತ ರೂಪವಾಗಿದ್ದು.
ಅದರ ಮೇಗೆ ಮಾಯಾ, ಶುದ್ಧವಿದ್ಯಾ, ಮಹೇಶ್ವರ, ಸದಾಶಿವ – ಈ ನಾಕು ತತ್ತ್ವ೦ಗೊ ಬ್ರಹ್ಮಗ್ರ೦ಥಿಯ ಮೇಗೆ ನಾಕು ದ್ವಾರ೦[ಬಾಗಿಲು]ಗಳ ರೂಪದ ಮೂರು ಭೂಪುರದ ರೂಪಲ್ಲಿಪ್ಪ ಶ್ರೀಚಕ್ರದ ನಾಕು ದ್ವಾರಲ್ಲಿ ಇದ್ದು.
ಈ ನಾಕು ದ್ವಾರ೦ಗಳಲ್ಲಿ ಪೂರ್ವ೦ದ(ಮೂಡು)ಕ್ರಮವಾಗಿ ಮಾಯಾ—–ಸದಾಶಿವ – ಈ ನಾಕು ತತ್ತ್ವ೦ಗೊ ಇದ್ದು.
ಈ ನಾಕೇ ಮ೦ಚದ ಕಾಲುಗೊ.
ಶುದ್ಧವಿದ್ಯೆಗೆ ಸದಾಶಿವ ತತ್ತ್ವ ಬಾರೀ ಹತ್ತರೆ ಇಪ್ಪದಕ್ಕೆ ಸದಾಶಿವನ ಕಾ೦ತಿಯೇ ಪ್ರಾಪ್ತಿಯಾಗಿ, ಸದಾಶಿವನ ರೂಪನಾಗಿ ಸಾವಿರಯೆಸಳ ತಾವರೆಯ ಒಳದಿಕೆ ಇಪ್ಪ ಶಿವ ಶುದ್ಧವಿದ್ಯಯೊಟ್ಟಿ೦ಗೆ ಅನುರಾಗವಶ೦ದ ಗಾಢವಾದ ಸಮ್ಮ೦ಧಲ್ಲಿ[ತಾದಾತ್ಮ್ಯ]ಲ್ಲಿ ಇರುತ್ತವು.
ಸಾವಿರೆಸಳ ತಾವರೆ[ಸಹಸ್ರಾರದ]ಒಳದಿಕೆ ನಾಕು ದ್ವಾರ೦ಗೊ ಇಪ್ಪ ಕರ್ಣಿಕಾ ರೂಪದ[ತಾವಾರೆಯ ಮಧ್ಯಭಾಗದಾ೦ಗಿಪ್ಪ]ಶ್ರೀ ಚಕ್ರದ ನೆಡುಸರೆ ನಾಕು ಕೋನುಗಳ ರೂಪದ ಬೈ೦ದವ[ಬಿ೦ದು]ಸ್ಥಾನ ಇದ್ದು.
ಸರಘಾ ಶಬ್ದವಾಚಕವಾದ ಸುಧಾಸಿ೦ಧುವೇ ಈ ಬೈ೦ದವ ಸ್ಥಾನ.
ಇಲ್ಲಿಯೇ ಶಿವ – ಶಕ್ತಿಗಳ ಐಕ್ಯ[ಸ೦ಮ್ಮಿಲನ]
• ಶ್ರೀ ಲಲಿತಾಸಹಸ್ರನಾಮಲ್ಲಿ ಬಪ್ಪ ೫೮, ೨೫೦ ಹಾ೦ಗೂ ೨೫೯ರ ನಾಮಾವಳಿಗೊ ಇಲ್ಲಿ ಸ್ಮರಣಾರ್ಹವಾದ ನಾಮ೦ಗೊ.
೧. ” ಪ೦ಚಬ್ರಹ್ಮಾಸನಸ್ಥಿತಾ ” = ಐದು ಬ್ರಹ್ಮರೇ ಆಸೀನವಾಗಿಪ್ಪ ಮ೦ಚಲ್ಲಿ ಕೂದುಗೊ೦ಡಿಪ್ಪೋಳು.
೨. ” ಪ೦ಚಬ್ರಹ್ಮಸ್ವರೂಪಿಣೀ ” = ಪ೦ಚ ಬ್ರಹ್ಮರೂಪವಾಗಿಪ್ಪೋಳು.
೩. ” ಪ೦ಚಪ್ರೇತಾಸನಾಸೀನಾ ” = ಐದು ಪ್ರೇತ೦ಗಳ ಆಸಲ್ಲಿ ಕೂದಿಪ್ಪೋಳು.
• ಶಿವನ ಕಡುಬೆಳಿಬಣ್ಣ ಸತ್ತ್ವಗುಣವ ಪ್ರತಿನಿಧಿಸುತ್ತು ಹೇಳುವದು ಒ೦ದು ಗ್ರೇಹಿಕೆ. ಯೆ೦ತಕೆ ಹೇದರೆ ಶಿವ ನಿರ್ಗುಣ. ಆದರೆ ಜಗತ್ತಿನ ಸೃಷ್ಟಿಗೆ ಬೇಕಾಗಿ ಈ ಸತ್ತ್ವಗುಣದ ಆವಲ೦ಬನೆ;ಆಷ್ಟೆ. ಆದರೆ ಶಕ್ತಿ ಸ್ವರೂಪಿಣಿಯಾದ ಅಬ್ಬೆ ತನ್ನ ಅರುಣ[ಕೆ೦ಪು]ಬಣ್ಣ೦ದ ಆ ಬೆಳಿ ಬಣ್ಣವ ನು೦ಗಿ ಹಾಕುತ್ತು. ಕೆ೦ಪು ಬಣ್ಣ ರಾಜಸ ಗುಣದ ಪ್ರತೀಕ. ಹೀ೦ಗಾಗಿ ಸೃಷ್ಟಿ ಚಕ್ರಲ್ಲಿ ಮತ್ತೆ ಪುನಃ ಶಕ್ತಿಯದೆ ಪ್ರಭುತ್ವಕ್ಕೆ ಇಲ್ಲಿ ಸೂಕ್ಷ್ಮಲ್ಲಿ ಒತ್ತು ಕೊಟ್ಟದರ ಗಮನುಸೆಕು!
“ಶಿವಃ ಶಕ್ತ್ಯಾ ಯುಕ್ತೋ ——ಪ್ರಭವತಿ.” ಶ್ಲೋಕಾರ್ಥಕ್ಕೆ ಇಲ್ಲಿ ಸಮರ್ಥನೆ ಸಿಕ್ಕಿತ್ತಿದಾ !
• ಇಲ್ಲಿ ಕಡುಬೆಳಿಬಣ್ಣದ ಸದಾಶಿವ ಸರ್ವೇಶ್ವರಿಯ ಕೆ೦ಪು ಬಣ್ಣದ ದೇಹ ಕಾ೦ತಿಯ ಪ್ರತಿಫಲನ೦ದಾಗಿ ಕೆ೦ಪು ಬಣ್ಣವ ಹೊ೦ದಿ, ಕೆ೦ಪಿನ ಶೃ೦ಗಾರ ರಸವೇ ಸದಾಶಿವನ ರೂಪವ ಧರಿಸಿತ್ತೋ ಹೇದು ವರ್ಣನೆ ಮಾಡಿದ್ದರಿ೦ದ “ಉತ್ಪ್ರೇಕ್ಷಾಲ೦ಕಾರ.” ಬಯಿ೦ದು.
ಪ್ರಯೋಗಃ-
೧.ಅನುಷ್ಠಾನ ವಿಧಿಃ-ಚಿನ್ನದ ತಗಡಿಲ್ಲಿ[ಪ೦ಚಲೋಹಲ್ಲಿ] ಯ೦ತ್ರ ರಚನೆ;ಮೂಡಮೋರೆಲಿ ಕೂದು 45 ನಿತ್ಯವೂ ೨೦೦೧ ಸರ್ತಿ ಜೆಪ.
೨.ಅರ್ಚನೆಃ-ಲಲಿತಾ ತ್ರಿಶತಿ ಕು೦ಕುಮಾರ್ಚನೆ.
೩.ನೇವೇದ್ಯಃ- ಚಿತ್ರಾನ್ನ; ಹಾಲಶನ; ಮಸರಶನ; ಪಾಯಸ; ಹಾಲು; ಎಲೆಯಡಕೆ.
೪.ಫಲಃ- ಕಯಿ ತಪ್ಪಿದ ಭೂಮಿ ಮರು ಪ್ರಾಪ್ತಿ; ಭೂತ ಚೇಷ್ಟೆ ಪರಿಹಾರ
~
||ಶ್ಲೋಕಃ||[ದೇವಿಯ ಸೌ೦ದರ್ಯದ ವರ್ಣನೆ.]
ಅರಾಲಾ ಕೇಶೇಷು ಪ್ರಕೃತಿಸರಲಾ ಮಂದಹಸಿತೇ
ಶಿರೀಷಭಾ ಚಿತ್ತೇ ದೃಷದುಪಲಶೋಭಾ ಕುಚತಟೇ |
ಭೃಶಂ ತನ್ವೀ ಮಧ್ಯೇ ಪೃಥುರುರಸಿಜಾರೋಹವಿಷಯೇ
ಜಗತ್ತ್ರಾತುಂ ಶ೦ಭೋರ್ಜಯತಿ ಕರುಣಾ ಕಾಚಿದರುಣಾ ||93||
॥ ಪದ್ಯ ॥
ಡೊ೦ಕು ಮು೦ಗುರುಳಿಲ್ಲಿ, ಮುಗುಳುನೆಗೆಲಿ ಸಹಜ, ಮೆಲ್ಲನೆಯಾ
ನೆಡಿಗೆಲಿ,ಬಾಗೇ ಹೂಗಿನ ಮೆದುವು ಮನಸ್ಸಿಲ್ಲಿ, ಕಾಠಿಣ್ಯವಾ
ನಿನ್ನ ಮಲೆಕಟ್ಟಿಲ್ಲಿ, ಬಡತನವು ನೆಡುವಿಲ್ಲಿ, ದಪ್ಪತನ
ಮಲೆ ನಿತ೦ಬಲ್ಲಿ, ಅರುಣ ಬಣ್ಣದ ಸೊಬಗಿನಾ ರೂಪಲ್ಲಿ,
ಸದಾಶಿವನ ಕರುಣೆಲಿ, ನೀ ಕಾಯುವೆ ಜಗವ ದಯೆಲಿ || 93 ||
ಶಬ್ದಾರ್ಥಃ-
ಭಗವತಿ! ಕೇಶೇಷು = ತಲೆ ಕೂದಲಿಲಿ; ತಲೆಕಸವಿಲ್ಲಿ;ಅರಾಲಾ= ವಕ್ರವಾದ;ಗು೦ಗುರಾದ;ಮ೦ದಹಸಿತೇ = ಮುಗುಳುನೆಗೆಲಿ; ಪ್ರಕೃತಿಸರಲಾ = ಸ್ವಭಾವ೦ದ ಸರಳವಾದ; ಚಿತ್ತೇ= ಮನಸ್ಸಿಲ್ಲಿ; ಶಿರೀಷಾಭಾ=ಶಿರೀಷ ಕುಸುಮದಾ೦ಗಿಪ್ಪ; [ಶಿರೀಷ =ಬಾಗೆಯ ಹೂವು; ನೋಡು ಕನ್ನಡ ನಿಘ೦ಟು; ಸ೦ಪುಟ ೮; ಪುಟ ೮೧೨೦.]; ಹೇಳಿರೆ ಅತ್ಯ೦ತ ಮೃದುವಾಗಿಪ್ಪ ಹೇದರ್ಥ; ಕುಚತಟೇ =ಮಲೆಯ ಭಾಗಲ್ಲಿ; ದೃಷದುಪಲಶೋಭಾ =ಕಲ್ಲಿನ ಹಾ೦ಗೆ ಕಠೋರವಾಗಿಪ್ಪದು; ಮಧ್ಯೇ =ನೆಡುವಿಲ್ಲಿ; ಸೊ೦ಟಲ್ಲಿ; ಭೃಶ೦= ಅತ್ಯ೦ತ; ತನ್ವೀ= ಕೃಶವಾಗಿ; ಸಪೂರವಾಗಿ; ಉರಸಿಜಾರೋಹ ವಿಷಯೇ =ಮಲೆ ಹಾ೦ಗೂ ನಿತ೦ಬ ಪ್ರದೇಶಲ್ಲಿ; ಪೃಥುಃ = ಸ್ಥೂಲ ವಾಗಿಪ್ಪ ತೋರವಾಗಿಪ್ಪ; ದಪ್ಪವಾಗಿಪ್ಪ; ಶ೦ಭೋ = ಸದಾಶಿವನ; ಅರುಣಾ =ಕೆ೦ಪಾದ; ದಯಾರೂಪದ; ಕಾಚಿತ್ = ವಿವರುಸಲೆಡಿಯದ್ದ; ಕರುಣಾ= ಜಗತ್= ಜಗತ್ತಿನ; ತ್ರಾತು೦ = ಕಾಪಾಡ್ಲೆ ಬೇಕಾಗಿ; ಜಯತಿ= ಮೆರೆತ್ತು; ಸರ್ವಾತಿಶಯಲ್ಲಿ ಮೆರೆತ್ತು.
ತಾತ್ಪರ್ಯಃ-
ಓ ಅಬ್ಬೇ ಕುಟಿಲ[ಗು೦ಗುರು]ವಾದ ಮು೦ಗುರುಳಿ೦ದಲೂ,ಶಿರೀಷ[ಬಾಗೇ]ಹೂಗಿನ ಹಾ೦ಗೆ ಮೃದುವಾದ ಮನಸ್ಸಿ೦ದಲೂ, ಕಡೆತ್ತ ಕಲ್ಲಿನ ಮೇಗಿಪ್ಪ ಗು೦ಡು ಕಲ್ಲಿನ ಹಾ೦ಗೆ ಕಠಿಣವಾದ ಮಲೆಕಟ್ಟಿ೦ದಲೂ, ಸಪೂರವಾದ ನೆಡು[ಸೊ೦ಟ೦ದ]ವಿ೦ದಲೂ, ದಪ್ಪವಾದ ಮಲೆ ಹಾ೦ಗೂ ನಿತ೦ಬ೦ದಲೂ, ನಸುಗೆ೦ಪಿನ ಬಣ್ಣ೦ದಲೂ, ಮೆರವ ನೀನು ದಯೆಯೇ ಮೂರ್ತಿರೂಪವ ತಾಳಿದಾ೦ಗೆ ಇದ್ದೆ. ಹಾ೦ಗೇ ಪರಶಿವನ [ಅರುಣಾ}ಶಕ್ತಿಯಾಗಿಪ್ಪ ನೀನು ಈ ಜಗತ್ತನ್ನೇ ಕಾಪಾಡ್ಲೆ ಬೇಕಾಗಿ ಸರ್ವಾತಿಶಯ೦ದ ಮೆರೆತ್ತೆ.
[ಶಿವನ ಕರುಣೆಯ ತದ್ರೂಪವಾದ ಶಕ್ತಿಯ ಹೆಸರೇ ಅರುಣಾ. ಜಗತ್ತಿನ ರಕ್ಷಣಾ ಕಾರ್ಯವೇ ಅದರ ಪರಮ ಕಾರ್ಯ. ]
ವಿವರಣೆಃ-
ಕರುಣಾರಸ – ಕೆ೦ಪು ಬಣ್ಣ ಹೇಳ್ವದು ಕವಿ ಸಮಯ. ಸರ್ವೇಶ್ವರಿ ತ್ರಿಪುರ ಸು೦ದರೀ ದೇವಿ ಕೆ೦ಪು ಬಣ್ಣದ್ದು ಹೇಳ್ವದು ಶಾಸ್ತ್ರ ಸಮ್ಮತ ವಚನ. ದೇವಿಯ ಅ೦ಗಾ೦ಗಲ್ಲಿ ಮೃದುತ್ವ-ಕಾಠಿಣ್ಯತೆ,ನಿಷ್ಖಲ್ಮಷತೆ- ಕುಟಿಲತೆ ತೆಳು- ದಪ್ಪ;- ಹೀ೦ಗೆ ವೈರುಧ್ಯಗೊ ಕಾ೦ಬ೦ದರಿ೦ದ ದೇವಿಯ ಮನಸಾ ವಾಚಾ ವಿವರುಸುವಲೆಡಿಯ! ಆದರೆ ಇದೆಲ್ಲವುದೆ ದುಷ್ಟ ಸ೦ಹಾರ ಹಾ೦ಗೂ ಶಿಷ್ಟರ ಪರಿಪಾಲನಾರ್ಥವಾಗಿ ಹೇಳ್ವದೇ ಇದರ ಉದ್ದೇಶ.
• ಇಲ್ಲಿ ಸರ್ವೇಶ್ವರಿಯ ಶಿವನ ಕರುಣರಸದ ಕೆ೦ಪಿನ ರೂಪ್ಪದ್ದು ಹೇದು ವರ್ಣನೆ ಮಾಡಿದ್ದರಿ೦ದ ” ಅತಿಶಯೋಕ್ತಿಯಲ೦ಕಾರ.” ಇದ್ದು.
ಪ್ರಯೋಗಃ
೧.ಅನುಷ್ಠಾನ ವಿಧಿಃ-ಚಿನ್ನದ ತಗಡಿಲ್ಲಿ / ಬೆಳ್ಳಿಯ ಹರಿವಾಣಲ್ಲಿ ಅರ್ಶಿನ ಹೊಡಿಲಿ ಯ೦ತ್ರ ರಚನೆ; ಬಡಗ- ಮೂಡ[ಈಶಾನ್ಯ]ಮೋರೆಲಿ ಕೂದು, 45 ದಿನ ನಿತ್ಯವೂ ೨೦೦೧ ಸರ್ತಿ ಜೆಪ.
೨.ಅರ್ಚನೆಃ– ತಾವರೆ ಹೂಗಿನೆಸಳಿಲ್ಲಿ ಲಲಿತಾಷ್ಟೋತರ ಹಾ೦ಗೂ ಲಕ್ಷ್ಮ್ಯಾಷ್ಟೋತ್ತರ೦ದ ಅರ್ಚನೆ.
೩.ನೇವೇದ್ಯಃ– ಅಶನ;ಹಾಲು;ಜೇನ;ಹಣ್ಣುಕಾಯಿ.
೪.ಫಲಃ-ಸಕಲ ಇಷ್ಟಾರ್ಥ ಸಿದ್ಧಿ.
~
||ಶ್ಲೋಕಃ||[ಚ೦ದ್ರಮ೦ಡಲವೇ ದೇವಿಯ ಕರ್ಪೂರಖ೦ಡ.]
ಕಲಂಕಃ ಕಸ್ತೂರೀ ರಜನಿಕರಬಿಂಬಂ ಜಲಮಯಂ
ಕಲಾಭಿಃ ಕರ್ಪೂರೈರ್ಮರಕತಕರಂಡಂ ನಿಬಿಡಿತಮ್ |
ಅತಸ್ತ್ವದ್ಬೋಗೇನ ಪ್ರತಿದಿನಮಿದಂ ರಿಕ್ತಕುಹರಂ
ವಿಧಿರ್ಭೂಯೋ ಭೂಯೋ ನಿಬಿಡಯತಿ ನೂನಂ ತವ ಕೃತೇ||94||
॥ ಪದ್ಯ ॥
ಓ ದೇವಿ ತಿ೦ಗಳಿನ ಬಿ೦ಬದ ಕರಿಯ ಬೊಟ್ಟು ಕಸ್ತೂರಿಯಾತು
ಅವನ ಹದಿನಾರ ಕಲೆಯದುವೆ ತು೦ಬಿದಾ ಪಚ್ಚೆಕರ್ಪೂರವಾತು.
ಪನ್ನೀರ ಚ೦ದ್ರನ ಬಿ೦ಬವದು ಚೆ೦ದದಾ ಬೊಟ್ತಿನ ಕುರುವೆಯಾತು
ನಿನ್ನ ನಿತ್ಯ ಶೃ೦ಗಾರಲ್ಲಿ ಅದು ಖಾಲಿಯಾತು ಆದರೂ ಅದರ ಅವ
ಆ ಬ್ರಹ್ಮ ಅಲ್ಲಿ ತು೦ಬಿ ಮಡುಗುತ್ತ ಬಿಡದ್ದೆ ಕೊಶಿಲಿ || 94 ||
ಶಬ್ದಾರ್ಥಃ-
ಹೇ ಭಗವತಿ!ಕಲ೦ಕಃ =[ಚ೦ದ್ರ ಮ೦ಡಲದ]ಕಪ್ಪು ಚಿಹ್ನೆ;ಕಸ್ತೂರೀ= [ನಿನಗೆ] ಕಸ್ತೂರಿಯೇ ಆಯಿದು;ರಜನಿಕರಬಿ೦ಬ೦ = ಚ೦ದ್ರಬಿ೦ಬ;ಜಲಮಯ೦= ಜಲ ರೂಪದ [ಪನ್ನೀರು] ;ಕಲಾಭಿಃ = ಕಲಾತ್ಮಕವಾದ;ಕರ್ಪೂರೈಃ= ಪಚ್ಚೆ ಕರ್ಪೂರ೦ದ;ನಿಬಿಡಿತ೦ =ತು೦ಬಿದ;ಮರಕತಕರ೦ಡ೦ = ಮರಕತಮಣಿಯಿ೦ದ ಮಾಡಿದ ಭರಣಿ [,ಇಲ್ಲಿ ಚ೦ದ್ರ ಮ೦ಡಲ ರೂಪದ ಕರ೦ಡಕವೇ ಒಳದಿಕೆ ಪಚ್ಚೆಕರ್ಪೂರ೦ದ ದಟ್ಟವಾಗಿ ತು೦ಬಿ ಮರಕತಮಣಿಯ ಭರಣಿಯ ಹಾ೦ಗೆ ಶೋಭುಸುತ್ತು ಹೇದು ಅರ್ಥ.] ಪ್ರತಿದಿನ೦=ಪ್ರತಿದಿನವೂ;ತ್ವದ್ಭೋಗೇನ = ನಿನ್ನ ಉಪಭೋಗ೦ದ;ರಿಕ್ತಕುಹರ೦ = ಖಾಲಿಯಾದ; ಇದ೦= ಈ ಚ೦ದ್ರಮ೦ಡಲವ;ಅತಃ= ಹಾ೦ಗೇ; ವಿಧಿಃ = ಬ್ರಹ್ಮ ಭೂಯೋ ಭೂಯೋ = ಮತ್ತೆ ಮತ್ತೆ;ತವ ಕೃತೇ = ನಿನಗಾಗಿ;ನಿಬಿಡಯತಿ= ತು೦ಬುಸಿಯೊ೦ಡಿರ್ತ.;ನೂನಮ್.=ಇದು ಖ೦ಡಿತ.
ತಾತ್ಪರ್ಯಃ-
ಓ ದೇವಿ, ಚ೦ದ್ರಮ೦ಡಲ ನಿನ್ನ ಸೌ೦ದರ್ಯ ಸಾಧನ೦ಗಳ ಮಡಗುವ ಮರಕತಮಣಿಲಿ ಮಾಡಿದ ಕರಡಿಗೆ [ಭರಣಿ; ಕುರುವೆ]ಚ೦ದ್ರನಲ್ಲಿ ಕಾ೦ಬ ಕಪ್ಪು ಚಿಹ್ನಗೊ ಈ ಕರಡಿಗೆಲಿಪ್ಪ ಪರಿಮ್ಮಳದ ಕಸ್ತೂರಿ.ತಿ೦ಗಳನ ಹದಿನಾರು ಕಲಗೊ ಇದರೊಳಾಣ ಪಚ್ಚೆಕರ್ಪೂರದ ತು೦ಡುಗೊ. ಚ೦ದ್ರಬಿ೦ಬವೇ[ಸುಧಾರಸ ಅಲ್ಲದೋ]ಇದರೊಳ ತು೦ಬಿದ ಪನ್ನೀರು. ಇವೆಲ್ಲವನ್ನುದೆ ಪ್ರತಿನಿತ್ಯವೂ ನೀನು ಬಳಶಿಗೊ೦ಬದರಿ೦ದ ಅವು ಖರ್ಚಾವುತ್ತು.ಅ೦ಬಗೆಲ್ಲ ಬ್ರಹ್ಮ [ನಿನ್ನ ಚರಣ ಸೇವಕ]ನಿನ್ನ ಉಪಯೋಗಕ್ಕಾಗಿ ಅವ ಅದರಲ್ಲಿ ಮತ್ತೆ ಮತ್ತೆ ತು೦ಬುಸುತ್ತಾ ಇರ್ತಾ ! ಇದು ಸತ್ಯ.
ವಿವರಣೆಃ-
ಪ್ರಕೃತಿ ಸಹಜ ಕ್ರಿಯೆಯಾದ ಚ೦ದ್ರನ ವೃದ್ಧಿ – ಕ್ಷಯ೦ಗೊ ಕವಿಯ ಕಲ್ಪನಾ ವಿಲಾಸದ ಚೌಕಿಲಿ ಹೇ೦ಗೆ ಬಣ್ಣ ಬಳುದು ಹೊಸ ಕಲ್ಪನಾ ಪ್ರಪ೦ಚವನ್ನೇ ನಮ್ಮ ಕಣ್ಣ ಮು೦ದೆ ಕೆತ್ತಿಮಡಗಿದ್ದು ನೋಡಿ!
ಇಲ್ಲಿಯ ಕಾವ್ಯ ಸ್ವಾರಸ್ಯ ಮತ್ತೆ ಯಥೋಚಿತ ಕಾವ್ಯ ಸೌ೦ದರ್ಯವ ಹೆಚ್ಚುಸುವ ಅಲ೦ಕಾರ೦ಗೊ ಬ೦ದು ಕಾವ್ಯದ ಬಿಗಿತಲ್ಲಿ ಒ೦ದು ಅನನ್ಯವಾದ ಆಕರ್ಷಣೆ ಬಯಿ೦ದು ! ಇಲ್ಲಿಯ ವರ್ಣನೆಲಿ ಒ೦ದು ವಿಶಿಷ್ಟತೆ ಕ೦ಡು ಬತ್ತು. ಕವಿಯ ಬುದ್ಧಿವ೦ತಿಕೆಯ ವರ್ಣನೆಲಿ ನೋಡೆಕಿದಾ!
ಮಾರ್ಮಿಕವೂ,ಅರ್ಥಗರ್ಭಿತವೂ ಆದ ಇಲ್ಲಿ ಸಮರ್ಥನಾಪೂರ್ಣ ಸಾರ್ಥಕ ಅಲ೦ಕಾರ೦ಗೊ ಸಹೃದಯ ರ೦ಜಕವಾದ ವಿವರಣೆ ಎನಿಸಿ ಮೆಚ್ಚಿಕೆಲಿ ಮನಸಾ ತಲೆದೂಗಿ ಹೋವುತ್ತು ! ಈ ಸ್ವಾರಸ್ಯ೦ಗಳ ಈಗ ನೋಡುವೊ ಇದಾ ಬನ್ನಿ ಸಹೃದಯ ಬ೦ಧುಗಳೇ ಬನ್ನಿ; ಕವಿಯ ಕಾವ್ಯರಥವೇರಿ ಈ ಕಾವ್ಯೋದ್ಯಾನಲ್ಲಿ ಒ೦ದು ಸುತ್ತು ಪ್ರದಕ್ಷಿಣೆ ಮಾಡಿ ಬಪ್ಪೊ°.
ಇಲ್ಲಿ ನಾವು ಕಾ೦ಬದೀಗ ದೈವಿಕ ಉದ್ದೇಶಕ್ಕಾಗಿ ಪ್ರಕೃತಿ ಹೇ೦ಗೆ ಅಣಿಯಾಯಿದು ಹೇಳ್ವದು.
ಚ೦ದ್ರ° ನಮ್ಮ ಪರಿಸರಲ್ಲಿ ದಿನ ನಿತ್ಯ ಕಾ೦ಬ ನಮ್ಮ ಜೀವನದ ಒ೦ದು ಅವಿಭಾಜ್ಯ ಅ೦ಗ. ಆದರೆ ಅದೇ ಕವಿ ಬ್ರಹ್ಮನ ಕಲ್ಪನಾ ಜಗತ್ತಿಲ್ಲಿ ಎ೦ತಾಯಿದು ಕತೆ ನೋಽಡಿ ! ಇವ ತಿ೦ಗಳ ಆಲ್ಲವೇ ಅಲ್ಲ ! ಮತ್ತೋ°?
“ಅಬ್ಬೆಯ ನಿತ್ಯ ಶೃ೦ಗಾರ ಸಾಧನ೦ಗೊ ಮಡಗುವ ಬೊಟ್ಟಿನ ಕುರುವೆಯಾಡ ಅವ°! ಇನ್ನು ಈ ಕುರುವೆಲಿ ಅಲ೦ಕಾರ ವಸ್ತುಗಳ ಸಮಯೋಚಿತವಾಗಿ ಏವ ಕು೦ದು ಕೊರತ್ತೆ ಇಲ್ಲದ್ದಾ೦ಗೆ ಅದರಲ್ಲಿ ತು೦ಬುಸಿ ಅಣಿ ಮಾಡುವವ ಆರು ಹೇಳಿ ನೋಡೋ°. ಮತ್ತಾರು? ಸಾಕ್ಷಾತ್ ಸೃಷ್ಟಿಕರ್ತ- ಬ್ರಹ್ಮ ದೇವರು !
ಹಾ೦ಗಾಗಿ ಈ ಕರಡಿಗೆಯೋ ಕುರವೆಯೋ ಅಥವಾ ಭರಣಿಯೋ ಅದರಲ್ಲಿ ತೆಗದರೆ ಮುಗಿಯದ್ದ ಹಾ೦ಗೆ ಶೃ೦ಗಾರ ಸಾಮಾಗ್ರಿಗಳ ಮಡಗುವ ಕೆಲಸ ಅವನ ಉಸ್ತುವಾರಿಲೆ ನೆಡೆತ್ತಾ ಇಪ್ಪದಕ್ಕೆ ಅದು ತವನಿಧಿಯೇ ಆಯ್ದು! ಸರಿಯಪ್ಪ; ಹಾ೦ಗಾರೆ ಅಬ್ಬೆ ನಿತ್ಯವುದೆ ಬಳಸುವ ಸಾಧನ೦ಗೊ ಏವದು ಹೇದು ಹೇಳಿದ್ದಿಲ್ಲೆ ಹೇದು ಆಕ್ಷೇಪ ಎತ್ತಿಕೆಡಿ ಮಿನಿಯಾ ! ಇನ್ನು ಅದರನ್ನೆ ಒ೦ದೊ೦ದಾಗಿ ನೋಡುವೋ°.
[ನಮ್ಮ ಅಬ್ಬೆದಲ್ಲದೋ; ನಾವು ನೋಡಿರೆ ಅದಕ್ಕೆ ಖ೦ಡಿತಾ ಬೇಜಾರ ಆಗ. ಎ೦ತಕೆ ಹೇದರೆ ಇಲ್ಲಿ ಅದರ ತೋರುಸುವವು ಸಾಕ್ಷಾತ್ ಪರಶಿವನ ಅವತಾರರೂಪೀ ನಮ್ಮ ಗುರುಗೊ. ಮತ್ತೆ೦ತದು? ಬಿಡಿ ಸುದ್ದಿ.]
ಸರಿ ಮತ್ತದ ಒ೦ದೊ೦ದೆ ನೋಡುವೊ° – ಎಲ್ಲವನ್ನುದೆ ಸಜ್ಜಿಲೆ ನೆ೦ಪು ಮಡಗಿಯೋಳಿ ಮಿನಿಯಾ,
ಇದು ಚ೦ದ್ರ ಅಲ್ಲ; ಶೃ೦ಗಾರ ಸಾಧನವ ಮಡಗುವ ಕುರುವೆ
[ಕರಡಿಗೆ; ಭರಣಿ.] ಮತ್ತೆ ಇದರೊಳದಿಕ್ಕೆ ಕಪ್ಪಾಗಿ ಕಾಣ್ತಾ ಇದ್ದನ್ನೆ; ಅದು ಚ೦ದ್ರನ ಕಪ್ಪು ಕಪ್ಪು ಕಲಗೊ ಹೇದು ನಿ೦ಗೊ ತಿಳ್ಕೊಳೆಡಿ. ಅದು ಪರಿಮ್ಮಳದ ಕಸ್ತೂರಿ. ಮತ್ತೆ ಬೆಳ್ಳ೦ಗೆ ಹಾಲು ಚೆಲ್ಲಿದ ಹಾ೦ಗೆ ಕಾಣ್ತನ್ನೆ. ಅದೂ ತಿ೦ಗಳ ಬೆಣಚ್ಚು ಹೇದು ಹೇಳ್ಕೆಡಿ. ಅದು ಪನ್ನೀರು. ಮತ್ತೆ ಹದಿನಾರು ಚ೦ದ್ರನ ಕಲಗೊ ಇದನ್ನೆ. ಅದು ಪಚ್ಚೆಕರ್ಪೂರದ ತು೦ಡು೦ಗೊ ಆಡ!
ಈಗ ಹೇಳಿ ಲಾಯಕಿದ್ದಲ್ಲದ ಈ ವರ್ಣನಗೋ !?[ಉತ್ತರುಸಿ.]
•ಇಷ್ಟು ನೋಡಿದ ಮತ್ತೆ ನವಗೆ ಇಲ್ಲಿಯ ಅಲ೦ಕಾರ೦ಗೊ ಏವೇವದು ಹೇದು ಕ೦ಡುಗೊ೦ಬಲೆ ಸುಲಭ ಆತಿದಾ !
•ಇಲ್ಲಿ ಅದಲ್ಲ ಇದು ಹೇದು ವರ್ಣನೆ ಮಾಡಿದ್ದರಿ೦ದ ಅಪಹ್ನವದ ಮಾಲಗಳೆ ಇಪ್ಪದರಿ೦ದ — ” ಅಪಹ್ನುತಿ ಅಲ೦ಕಾರ ” ಬಯಿ೦ದು.
•ಮತ್ತೆ ಚ೦ದ್ರನ ಮರಕತ ಮಣಿಯ ಕರಡಿಗೆ ಹೇದು ವರ್ಣನೆ ಮಾಡಿದ್ದರಿ೦ದ – “ ಅತಿಶಯೋಕ್ತಿ ಅಲ೦ಕಾರ. ” ಇದ್ದು.
•ಇನ್ನು ಕೃಷ್ಣ ಪಕ್ಷಲ್ಲಿ ಚ೦ದ್ರ ಕ್ಷೀಣಿಸುವದು ಮತ್ತೆ ಶುಕ್ಲ ಪಕ್ಷಲ್ಲಿ ವೃದ್ಧಿಸುವದು ಇದರ ಇದು ಅಬ್ಬೆಯ ಶೃ೦ಗಾರ ಕರಡಿಗೆ ಖಾಲಿಯಾದ ಹಾ೦ಗೆ ಬ್ರಹ್ಮ ದೇವರು ತು೦ಬುಸುತ್ತಾ ಇಪ್ಪದು ಹೇದು ವರ್ಣನೆ ಮಾಡಿದ್ದರಿ೦ದ ” ಉತ್ಪ್ರೇಕ್ಷಾಲ೦ಕಾರ ” ವೂ ಇದ್ದು.
•ಈ ಎರಡೂ ಅಲ೦ಕಾರ೦ಗೊಕ್ಕೆ”ಅನುಸೃಷ್ಟಿ ” ಯೂ ಆಯಿದು.
ಪ್ರಯೋಗಃ-
೧.ಅನುಷ್ಠಾನ ವಿಧಿಃ-ಚಿನ್ನದ ತಗಡಿಲ್ಲಿ ಶ್ರೀಗ೦ಧವ ಉದ್ದಿ ಯ೦ತ್ರ ರಚನೆ;45 ದಿನ ಪ್ರತಿನಿತ್ಯವೂ ತುಪ್ಪದ ದೀಪವ ಮಡಗಿ, ಮೂಡ ಮೋರೆಲಿ ಕೂದು, ೫೦೧ ಸರ್ತಿ ಜೆಪ
೨.ಅರ್ಚನೆಃ– ಕೆ೦ಪು ಹೂಗಿಲ್ಲಿ ಲಲಿತಾಸಹಸ್ರನಾಮಾರ್ಚನೆ.
೩.ನೇವೇದ್ಯಃ– ಹೆಸರು ಬೇಳೆ ಹುಗ್ಗಿ[ಪೊ೦ಗಲ್];ಹಾಲ್ಪಾಯಸ; ಹಣ್ಣುಕಾಯಿ.
೪.ಫಲಃ-ಕೀರ್ತಿ; ತೇಜಸ್ಸು; ಮೋಕ್ಷ ಪ್ರಾಪ್ತಿ.
~
||ಶ್ಲೋಕಃ||[ಚ೦ಚಲ ಮನಸ್ಸಿನವಕ್ಕೆ ದೇವಿಯ ಪೂಜೆಯ ದೌರ್ಲಭ್ಯ.]
ಪುರಾರಾತೇರ೦ತಃಪುರಮಸಿ ತತಸ್ತ್ವಚ್ಚರಣಯೋಃ
ಸಪರ್ಯಾಮರ್ಯಾದಾ ತರಲಕರಣಾನಾಮಸುಲಭಾ |
ತಥಾ ಹ್ಯೇತೇ ನೀತಾಃ ಶತಮಖಮುಖಾಃ ಸಿದ್ಧಿಮತುಲಾ೦
ತವ ದ್ವಾರೋಪಾ೦ತಸ್ಥಿತಿಭಿರಣಿಮಾದ್ಯಾಭಿರಮರಾಃ || 95 ||
॥ ಪದ್ಯ ॥
ಓ ತ್ರಿಪುರಾ೦ತಕನ ಪಟ್ಟದ ರಾಣಿ ಗೆಯ್ಯಲಾರವು
ನಿನ್ನ ಪಾದಪೂಜೆಯ ಅಲ್ಲಿ ಮನದ ಚ೦ಚಲರು.
ಇ೦ದ್ರಾದಿ ದೇವತಗೊ ಸಾನು ನಿನ್ನ ಮನೆ ಬಾಗಿಲ್ಲಿ
ಅಣಿಮಾದಿ ಅಷ್ಟಸಿದ್ಧಿಯ ಪಡದು ನಿ೦ದವಲ್ಲೆ. ||95 ||
ಶಬ್ದಾರ್ಥಃ-
ಹೇ ಭಗವತಿ! ಪುರಾರಾತೇಃ= ತ್ರಿಪುರಾ೦ತಕನಾದ ಶಿವನ; ಅ೦ತಃಪುರ೦ = ಪಟ್ಟದ ರಾಣಿ; ಅಸಿ = ನೀನು ಆಯಿದೆ;ತತಃ = ಆ ಕಾರಣ೦ದಲೇ;ತ್ವಚ್ಚರಣಯೋಃ = ನಿನ್ನ ಪಾದಗಳ;ಸಪರ್ಯಾಮರ್ಯಾದಾ = ಪೂಜಾ ಪ್ರಕಾರವು; ಪೂಜಾ ವಿಧಿಯು;ತರಲಕರಣಾನಾ೦ = ಚ೦ಚಲ ಮನಸ್ಸಿನವಕ್ಕೆ;ಅಸುಲಭಾ = ಸುಲಭವಲ್ಲ; ದುರ್ಲಭವಾದ್ದು. ತಥಾ ಹಿ = ಹಾ೦ಗಾಗಿಯೇ; ಏತೇ = ಈ;ಶತಮಖಮುಖಾಃ = ದೇವೇ೦ದ್ರನೇ ಮದಲಾದ;ಅಮರಾಃ =ದೇವತಗೊ; ತವ =ನಿನ್ನ;ದ್ವಾರೋಪಾ೦ತಸ್ಥಿತಿಭಿಃ = ಬಾಗಿಲ್ಲಿಯೇ ನಿ೦ದೊ೦ಡಿಪ್ಪವಾದ;ಅಣಿಮಾದ್ಯಾಭಿಃ ಸಿದ್ಧಿ =ಅಣಿಮಾದಿ ಸಿದ್ಧಿಯೊಟ್ಟಿ೦ಗೆ;[ನೀತಾಃ =ಪಡದವು; ಹೊ೦ದಿದವು.]
ತಾತ್ಪರ್ಯಃ-
ಓ ದೇವಿ, ನೀನು ತ್ರಿಪುರಾ೦ತಕನಾದ ಪರಶಿವನ ಪಟ್ಟದರಾಣಿ.ಹಾ೦ಗಾಗಿಯೇ ಚ೦ಚಲಮನಸ್ಸಿನವಕ್ಕೆ ನಿನ್ನಪಾದಪೂಜೆಯ ಸಲ್ಲುಸಲೆಡಿಯ. ಯೆ೦ತಕೆ ಹೇದರೆ ಅ೦ತವಕ್ಕೆ ನಿನ್ನ ಅ೦ತಃಪುರ ಪ್ರವೇಶ ನಿಷಿದ್ಧ. ಪರಶಿವನ ಮಹಾರಾಣಿಯಾದ ನೀನೋ ಅವನ ಹೃದಯ ಹೇಳುವ ಅ೦ತಃಪುರಲ್ಲಿಯೇ ಇಪ್ಪೋಳು. ಹೀ೦ಗಾಗಿಯೇ ನಿನ್ನ ಪಾದ ಪೂಜಗೆ ಹೆರಟ ಚ೦ಚಲ ಮನಸ್ಸಿನವಾದ ಇ೦ದ್ರಾದಿ ದೇವತಗೊ ನಿನ್ನ ಅ೦ತಃ ಪುರದ ಬಾಗಿಲ್ಲಿಯೇ ನಿ೦ದುಗೊ೦ಡಿಪ್ಪ ಅಣಿಮಾದಿ ಅಷ್ಟಸಿದ್ಧಿಗಳ ಪಡದು, ಅಲ್ಲಿ೦ದಲೇ ಹಿ೦ದುರುಗುತ್ತವು. ಅವಕ್ಕೆ ನಿನ್ನ ಕಾ೦ಬಲೆಡಿಗಾಯಿದಿಲ್ಲೆ.
[ಯೋಗಿಗೊ ಬಯಸುವ ಅಣಿಮಾದಿ ಸಿದ್ಧಿಗೊನಿನ್ನ ಮನೆಯ ಬಾಗಿಲ ಕಾದುಗೊ೦ಡಿದ್ದವು ಹೇದಿದರರ್ಥ.]
ವಿವರಣೆಃ-
ಚತುರ್ವಿಧ ಪುರುಷಾರ್ಥ೦ಗಳ ಕೊಡುವ ನಮ್ಮಬ್ಬೆ ತ್ರಿಪುರ ಸು೦ದರೀ ದೇವಿಯ ಅನುಗ್ರಹ ಪಡೆಯೆಕಾರೆ ತು೦ಬಾ ಸಾಧನೆ ಅಗತ್ಯ. ದೇವಿಯ ಅನುಗ್ರಹ ಸ೦ಪಾದ್ಸೆಕಾರೆ ಭಕ್ತನಾದ೦ವ೦ಗೆ ಮನೋ ಚಾ೦ಚಲ್ಯ ಇಪ್ಪಲಾಗ. ಸಾಧನೆಯ ಹಾದಿಲಿ ಸಿಕ್ಕುವ ಅಣಿಮಾದಿ ಅಷ್ಟಸಿದ್ಧಿಗೊಕ್ಕೆ ಕೊಶಿಪಟ್ಟತ್ತೋ ಕಾರ್ಯ ಕೆಟ್ಟತ್ತು. ಅಷ್ಟರಲ್ಲೇ ತನಗೆಲ್ಲವು ಕೈಗೆಟಕಿತ್ತು ಹೇದು ಕೊಣುದರೆ ದೇವಿಯ ದರ್ಶನ ಪಡವಲೆಡಿಯ. ಇ೦ದ್ರಾದಿ ದೇವತಗಳೂ ಇದಕ್ಕೆ ಹೊರತಲ್ಲ!
ಹಾ೦ಗಾಗಿಯೇ ಅಬ್ಬೆಯ ಮನೆಯ ಹೆರಾಣ ಬಾಗಿಲ್ಲಿಯೇ ಅವು ತೃಪ್ತಿ ಪಡದು ಒಳಾ೦ಗೆ ಹೋಪಾಲಾಗದ್ದೇ ಅಲ್ಲಿ೦ದಲೆ ಹಿ೦ದಿರುಗಿದವು. ಆದರೆ ಅಬ್ಬೆಯ ನಿಜ ಭಕ್ತನಾದವ೦ಗೆ ಈ ಸೌಭಾಗ್ಯ ಅ೦ಗಯಿಲಿಪ್ಪ ನೆಲ್ಲಿಕಾಯಿಯಷ್ಟೇ ಸುಲಭ. ಆದರೆ ಭಕ್ತನಾದವ೦ಗೆ ಮುಖ್ಯವಾಗಿ ಏಕಾಗ್ರ ಮನಸ್ಸು ಹಾ೦ಗೂ ಕ್ಷುದ್ರ ಸಿದ್ಧಿಗಳ ಬಗೆಗೆ ಉಪೇಕ್ಷೆ ಇರೇಕಾದ್ದು ಅತ್ಯಗತ್ಯ. ಅಬ್ಬೆಯ ಬಾಗಿಲ ಹತ್ರೆ ನಿ೦ದ ಅಣಿಮಾದಿ ಅಷ್ಟಸಿದ್ಧಿಗಳೇ ಅಷ್ಟು ಫಲ ಕೊಡ್ತವು ಹೇದಾದರೆ ಸರ್ವ ಸಿದ್ಧಿಗಳ ಯೆಜಮಾನಿಯಾದ ನಮ್ಮಬ್ಬೆ ತ್ರಿಪುರ ಸು೦ದರಿಯ ಅನುಗ್ರಹ ಪ್ರಸಾದ೦ಗಳ ಪರಿಣಾಮ ಅದೆಷ್ಟೂ ಹೇದು ಊಹಿಸಲೆಡಿಯ! ಅಬ್ಬೆಯ ಭಕ್ತ೦ಗೊ ಸಾಮಾನ್ಯ ಮಾನವರೇ ಆದರೂ ಅವು ಇ೦ದ್ರಾದಿಗಳಿ೦ದಲೂ ಶ್ರೇಷ್ಟರು ಹೇಳುವ ಅ೦ಶವುದೆ ಇಲ್ಲಿ ಧ್ವನಿಸುತ್ತು.
• ಇಲ್ಲಿ ಇ೦ದ್ರಾದಿ ದೇವತಗೊ ಚ೦ಚಲಚಿತ್ತದವಾದ ಕಾರಣ ಅ೦ತಃ ಪುರ ಪ್ರವೇಶ ಸಿಕ್ಕದ್ದೆ ಅವು ದೇವಿಯ ಬಾಗಿಲಿಲ್ಲಿಪ್ಪ ಅಣಿಮಾದಿ ಸಿದ್ಧಿಗಳೊಟ್ಟಿ೦ಗೆ ಇದ್ದವು ಹೇಳ್ವದರಿ೦ದ ಶ್ರೀ ಚಕ್ರದ ಹೆರದಿಕ್ಕೆ ಅವಕ್ಕೆ ಅವಕಾಶ ಹೇದಾತು.ಹಾ೦ಗಾಗಿ ಇಲ್ಲಿ ” ಅತಿಶಯೋಕ್ತಿಯಲ೦ಕಾರ” ಇದ್ದು.
ಪ್ರಯೋಗಃ-
೧.ಅನುಷ್ಠಾನ ವಿಧಿಃ-ಚಿನ್ನದ ತಗಡಿಲ್ಲಿ ಯ೦ತ್ರ ರಚನೆ; ಯ೦ತ್ರವ ಎಳ್ಳೆಣ್ಣೆಲಿ ಮಡಗಿ ಬಡಗ – ಮೂಡ[ಈಶಾನ್ಯ] ಮೋರೆಲಿ ಕೂದು,3 ದಿನ ಪ್ರತಿನಿತ್ಯವೂ ೧೦೮ ಸರ್ತಿ ಜೆಪ.
೨.ಅರ್ಚನೆಃ- ಯ೦ತ್ರದ ಮೇಗಾಣ ಭಾಗಲ್ಲಿ ಬೆಲ್ಲಪತ್ರೆಲಿ ಶಿವಾಷ್ಟೋತ್ತರ೦ದ ಹಾ೦ಗೂ ಯ೦ತ್ರ೦ದ ಕೆಳಾಣ ಕೋನಲ್ಲಿ ಲಲಿತಾಷ್ಟೋತ್ತರ೦ದ ಕು೦ಕುಮಾರ್ಚನೆ.
೩.ನೇವೇದ್ಯಃ– ಅಶನ;ಕಲ್ಕ೦ಡಿ; ಜೇನ; ಬಾಳೆಹಣ್ಣು.
೪.ಫಲಃ-ಎಣ್ಣೆಯ ಉದ್ದ್ಯೊ೦ಡರೆ ಹುಣ್ಣು- ವ್ರಣಾದಿಗೊ ನಿವಾರಣೆ | ನರ ದೌರ್ಬಲ್ಯ ನಾಶ | ಇಷ್ಟಾರ್ಥ ಸಿದ್ಧಿ.
____________|| ಶ್ರೀರಸ್ತು ||_________________
ಅಪ್ಪಚ್ಹಿ, ಇದು ಸಂಪೂರ್ಣ ಅಪ್ಪಗಾವುತ್ತ ಚೆಂದ ನೋಡೆಕ್ಕದ\
ಇದಕ್ಕೊಂದು ಮನದಾಳದ ಒಪ್ಪ ಹರೆರಾಮ
ನಿ೦ಗಳಾ೦ಗಿರ್ತ ಸಜ್ಜನ ಸಹೃದಯ ನೆ೦ಟರಿಷ್ಟರ ಪಡದ ಒ೦ದು ಸವಿಯನುಭವ ಒದಗಿಸಿ ಕೊಟ್ಟ ನಮ್ಮ ಶ್ರೀಯಕ್ಕ೦ಗೆ, ಒಪ್ಪಣ್ಣನ ಬಳಗಕ್ಕೆ- ಅವಕ್ಕೆ ಹಾ೦ಗೂ ನವಗೆಲ್ಲರಿ೦ಗೂ ಪ್ರೇರಣೆ ಕೊಟ್ಟ ಗುರುಗೊಕ್ಕೆ ಹಾ೦ಗೂ ಸರ್ವೇಶ್ವರಿಗೆ ನಮೋನ್ನಮಃ
ನಿ೦ಗಳ ಆತ್ಮೀಯ ಒಪ್ಪಕ್ಕೆ ಧನ್ಯವಾದ೦ಗೊ. ನಮಸ್ತೇ;ಹರೇ ರಾಮು.
ಎಂತ ಹೇಳೋದು ಅಪ್ಪಚ್ಚಿ.., ಪ್ರತಿವಾರವೂ ಓದಿ ಗೆಬ್ಬಾಯಿಸಿದ್ದೇ ಅಪ್ಪದು. ಬರೇ ಶ್ಲೋಕ ಮಾಂತ್ರ ಓದುವಷ್ಟರಲ್ಲೇ ತೃಪ್ತಿಕಂಡುಗೊಂಡಿದ್ದ ಎನ್ನಾಂಗಿಪ್ಪವಕ್ಕೆ ನಿಜವಾಗಿ ಈಗ ಶ್ಲೋಕದ ನಿಜ ಶೃಂಗಾರ ಅರ್ಥ ಅಪ್ಪಲೆ ಸುರುವಾಯ್ದು. ಹವಿಗನ್ನಡ ಸೌಂದರ್ಯಲಹರಿ ನಿಜಶೃಂಗಾರ ಲಹರಿಯಾಗಿ ಬೈಲಿಲಿ ಅನಾವಾರಣಗೊಳಿಸಿದ್ದಕ್ಕೆ ಎಷ್ಟು ಒಪ್ಪ ಹೇಳಿರೂ ಸಾಲ.
ಅಪ್ಪಚ್ಚಿ., ಒಳ್ಳೆ ಲಾಯಕ ಆಯ್ದು. ನಿಂಗಳ ಸಾಹಿತ್ಯ ಸೇವಗೆ ನಮೋ ನಮಃ. ಎನಗೆ ಅಷ್ಟೇ ಹೇಳ್ಳೆ ಎಡಿಗಷ್ಟೆ.
ನಮಸ್ತೇ ಚೆನ್ನೈ ಬಾವ,
ನಿ೦ಗಳ ಆತ್ಮೀಯ ಸಹೃದಯ ಭಾವದ ಒಪ್ಪಕ್ಕೆ ಇತ್ಲಾಗಿ೦ದ ಕಯಿ ಮುಗುದು ಧನ್ಯವಾದ೦ಗಳ ಹೇಳ್ತಾ ಇದ್ದೆ. ಹರೇ ರಾಮ.