Oppanna.com

ಬಿಂಗಿ ಪುಟ್ಟಂಗೆ ಶಾಲೆ ಮುಗುತ್ತು, ಮುಂದೆಂತರ ?

ಬರದೋರು :   ಒಪ್ಪಣ್ಣ    on   16/07/2010    38 ಒಪ್ಪಂಗೊ

ಹ್ಮ್, ಈ ಬಿಂಗಿ ಪುಟ್ಟನ ಶುದ್ದಿ ನಾವು ಮಾತಾಡಿದ್ದಿಲ್ಲೆ, ಅಲ್ಲದೋ?
ಓ ಮೊನ್ನೆ ಒಂದರಿ ಹೇಳುದೋ ಗ್ರೇಶಿದೆ, ಅಂಬಗ ಅವ° ಪರೀಕ್ಷೆಯ ಅಂಬೆರ್ಪಿಲಿ ಇತ್ತಿದ್ದ°.
ಪರೀಕ್ಷೆ ಇದ್ದರೆ ಯಮನೂ ಕಾದು ಕೂರ್ತ°ನಡ, ಮತ್ತೆ ಅಂಬಗ ಬೇಡ ಹೇಳಿ ಕಂಡತ್ತು! 🙂
ಈಗ ಪರೀಕ್ಷೆ ಎಲ್ಲ ಮುಗುದು ಒಂದು ಸಂಕ್ರಮಣ ಹಂತಕ್ಕೆ ಎತ್ತಿದ°, ಹಾಂಗೆ ಅವನ ಶುದ್ದಿ ಒಂದರಿ ಹೇಳಿಕ್ಕುವೊ° – ಹೇಳಿಗೊಂಡು ಈಗ ಸುರುಮಾಡಿದ್ದು.
~
ಈ ಪುಟ್ಟ°  ಮೊದಲಾಣ ಹಾಂಗೆ ಈಗ ಬರೇ ಸಣ್ಣ ಏನಲ್ಲ. ಈಗ ರಾಮಜ್ಜನ ಕೋಲೇಜು.
ಮೊದಲಾದರೆ ಸಮ, ಸಣ್ಣ ಶಾಲಗೆ ಹೋಯ್ಕೊಂಡಿದ್ದದು. ಮಹಾ ಲೂಟಿ. ಹಾಂಗೆ ಕೆಲವು ಜೆನ ಲೂಟಿಪುಟ್ಟ° / ಬಿಂಗಿಪುಟ್ಟ° ಹೇಳಿಯೂ ಹೇಳುಗು.
ದಿನಲ್ಲಿ ಕಡಮ್ಮೆಲಿ ಹತ್ತು ಜೆನರ ಕೈಲಿ ಬೈಗಳು ತಿನ್ನದ್ದರೆ ಆ ಮಾಣಿಗೆ ಸಮಾದಾನ ಆಗದೋ ಏನೋ!
ರಜ್ಜ ಪಾಪದವರ ಕೈಲಿ ಬರೇ ಬೈಗಳು ತಿಂದಿದ್ದರೆ, ರಜ್ಜ ದೊಡ್ಡವರ (ಪ್ರಾಯಲ್ಲಿ / ಪೈಸೆಲಿ) ಕೈಂದ ಪೆಟ್ಟೇ ತಿಂಗು.
ಕೆಲವುಸರ್ತಿ ಆರಾರು ಎಂತಾರು ತಪ್ಪು ಮಾಡಿಕ್ಕಿ ಇವನ ತಲೆಗೆ ಹಾಕಿಬಿಡುದೂ ಇಕ್ಕು ತಪ್ಪು ಮಾಡಿರೂ ಮಾಡದ್ದರೂ ಬೈಗಳು ಇವಂಗೇ ಇಪ್ಪದದು.
ಆ ನಮುನೆ ಇತ್ತು ಅವನ ಬದ್ಕಾಣ.
ಯೇವದಾರು ಜೆಂಬ್ರಲ್ಲಿ ಈ ಪುಟ್ಟ ಇದ್ದರೆ, ಕೈ ತೊರುಸುತ್ತ ದೊಡ್ಡವಕ್ಕೆ ಕೊಶೀ ಅಕ್ಕು, ಮುಟ್ಟಿದ್ದಕ್ಕೆ ಕಿಟ್ಟಿದ್ದಕ್ಕೆ ಬಡಿವಲಕ್ಕಿದಾ..
~

ಬಡಿವಲಕ್ಕಿದಾ..
ಎಂತಕೆ ಹೇಳಿರೆ, ಎಷ್ಟು ಬಡುದರೂ ಅವ° ಮಾತಾಡದ್ದೆ ತಿಂಗು! ಬಡ್ಡುಚರ್ಮ, ಪೆಟ್ಟು ತಿಂದುತಿಂದು!!
ಒಪಾಸು ಮಾತಾಡ°, ಅಷ್ಟೇ ಅಲ್ಲ, ಅವನ ಪರವಾಗಿ ಕೇಳುವೋರು ಆರುದೇ ಇಲ್ಲೆ.

ಸಣ್ಣ ಗುಡಿಚ್ಚೆಲು ಮನೆ. ಅವಂದೇ ಅವನ ಅಮ್ಮಂದೇ ಇಪ್ಪದು.
ಅಮ್ಮಂಗೆ ಅಷ್ಟು ಸೌಖ್ಯ ಇಲ್ಲೆ, ಮದಲಿಂಗೇ. ಇವನ ಹೆತ್ತ ಬಾಳಂತನಲ್ಲಿ ಎಂತದೋ ಆರೋಗ್ಯ ವಿತ್ಯಾಸ ಬಂದು ಮನುಗಿದಲ್ಲೇಡ.
ಈಗಲ್ಲ – ಹತ್ತಿಪ್ಪತ್ತೈದು ಒರಿಶ ಮದಲಾಣ ಕತೆ! ಅಂಬಗ ಮದ್ದುದೇ ಅಷ್ಟೆ ಇದ್ದದಿದಾ..
ಇವ ದೊಡ್ಡ ಮಗ°, ಹ್ಮ್ – ಒಬ್ಬನೇ ಮಗ°!

ಇವನ ಹೆರಿಯೋರು ತುಂಬುಸಂಸಾರಲ್ಲಿ ಬೆಳದಿದ್ದರೂ ಪಿತ್ರಾರ್ಜಿತ ಪಾಲಾತು.
ಇವನ ಅಪ್ಪ° ಪಾಪ ಆದ ಕಾರಣ ಸಾಲ ಮಾಂತ್ರ ಇವರ ತಲಗೆ ಬಂದದೋ ತೋರುತ್ತು.
ಊರಿಲಿ ದೊಡ್ಡೋರು – ಹೇಳಿ ಆರಿದ್ದವು, ಅವರೆಲ್ಲರ ಕೈಲಿ ಸಾಲ ಇತ್ತು – ಅಜ್ಜ° ಮಾಡಿದ್ದು. ಕೆಲವು ಸಾಲಕ್ಕೆ ವಾರೀಸು ಈ ಮಾಣಿಯ ಅಪ್ಪ!
ಪಾಲಪ್ಪನ್ನಾರ ನೆಮ್ಮದಿಯ ಜೀವನ ಇದ್ದರೂ, ಪಾಲಾದ ಮತ್ತೆ ಹಾಂಗಿತ್ತಿಲ್ಲೆ.
ಸಾಲಕ್ಕೆ ದಕ್ಕಿತ ಮೂಲ ಸಿಕ್ಕದ್ದೆ, ಒಟ್ಟಾರೆ ಊರಿಡೀಕ ತಲೆ ಎತ್ತುಲೆಡಿಯದ್ದ ಪರಿಸ್ಥಿತಿ ಬಂದಿತ್ತು ಇವನ ಅಪ್ಪಂಗೆ.
ನಿನ್ನೆ ಒರೆಂಗೆ ಊರಿಲಿ ಕಂಡೋಂಡಿದ್ದ ಜೆನರ ಇಂದು ಮೋರೆಕೊಟ್ಟು ಮಾತಾಡುಸಲೂ ಎಡಿಯದ್ದ ಪರಿಸ್ಥಿತ ಬಂತು!

ಎಂತ ಮಾಡುದು, ತೀರುಸೆಕ್ಕನ್ನೆ – ಅದಕ್ಕೆ ಅಡಿಗ್ಗೆ ಹೋಪಲೆ ಸುರು ಮಾಡಿದವು.
ಅಡಿಗೆ ಕಿಟ್ಟಣ್ಣ ಹೇಳಿರೆ ಮತ್ತಾರೂ ಅಲ್ಲ, ಈ ಪುಟ್ಟನ ಅಪ್ಪನೇ!
ಇಷ್ಟೆಲ್ಲ ಅಪ್ಪಗ ಈ ಮಾಣಿ ಹುಟ್ಟಿದ್ದನೋ – ಇಲ್ಲೆಯೋ.
ಅಂತೂ ಒಂದು ಶುಬಗಳಿಗೆಲಿ ಹುಟ್ಟಿದ°..
~
ಕೆಲವು ಸಮೆಯ ಆತು.
ಈ ಪುಟ್ಟ° ಶಾಲಗೆ ಸೇರ್ತ ಸಮೆಯ ಆತು.
ಕಿಟ್ಟಣ್ಣ ಅಡಿಗೆಗೆ ಹೋದವು ಹೋದವು, ಒರಕ್ಕು ತೂಗಿ ಕೆಲಸ ಮಾಡ್ಳೆ ಕಷ್ಟಪ್ಪದಕ್ಕೆ ಬೀಡಿಯುದೇ ಬಲುಗಿದವು (ಎಳದವು) ಎಡಿಗಾದಷ್ಟು.
ಆರೋಗ್ಯ ತುಂಬಾ ಹಾಳಾತು. ತುಂಡು ಜವ್ವನಿಗನ ಹಾಂಗೆ ತೋಟಲ್ಲಿದ್ದಿದ್ದ ಕಿಟ್ಟಣ್ಣ ಕೆಲವೇ ಒರಿಶಲ್ಲಿ ಕಂಗಾಲಾಗಿಕ್ಕಿದವು.
ಮನೆಗೆ ಬಂದಮತ್ತೂ ಸ್ವಸ್ಥ ಮನಿಕ್ಕೊಳ್ತೆ ಹೇಳಿರಾಗ, ಮನೆಕೆಲಸ ಮಾಡೇಕು.
ಸಣ್ಣಸಣ್ಣದರ ಪುಟ್ಟ° ಮಾಡುಗು, ದೊಡ್ಡದರ ಆರು ಮಾಡೇಕು? ಅಮ್ಮ ಮನುಗಿದಲ್ಲೇ ಅಲ್ಲದೋ?
ಪಕ್ಕನೆ ಕಿಟ್ಟಣ್ಣನ ನೋಡಿಕ್ಕಲೇ ಎಡಿಯದ್ದಷ್ಟು ಬಚ್ಚಿದವು.
ಸೆಮ್ಮ ಜೋರಾಗಿ, ಉಸಿರಾಟದ ಎಂತದೋ ತೊಂದರೆಂದಾಗಿ ಆರೋಗ್ಯ ಹಿಂದೆ ಬಂದು ಬಂದು – ಒಂದು ದಿನ ತೀರಿಗೊಂಡವು.
ಅಪ್ಪ° ತೀರುವಗ ಪುಟ್ಟ ಶಾಲೆಲಿತ್ತಿದ್ದ°, ಯೇವದೋ ಸಣ್ಣ ಕ್ಳಾಸಿಲಿ – ಒಂದನೆಯೋ ಮತ್ತೊ°, ಬೌಶ್ಷ!
ಅಬ್ಬೆ ಮನುಗದಲ್ಲೇ ಇದಾ.!
~
ಅಪ್ಪ ಇಲ್ಲದ್ದೆ ಆದ್ದರ ಬೆಶಿ ಸಣ್ಣ ಮಾಣಿಗೆ ಅಂಬಗಳೇ ಗೊಂತಕ್ಕೋ?, ಚೆ – ಇಲ್ಲೆಪ್ಪ!!
ಅಲ್ಲಿಂದ ಮತ್ತೆ ಆ ಮಾಣಿ – ಕೆಮಿಗೆ ಗಾಳಿ ನುಗ್ಗಿದ ಕಂಜಿಯ ಹಾಂಗೆ – ರಜ ಆರಾಮಲ್ಲಿ ಬೆಳದ°.

ಬೈವಲೆ ಅಪ್ಪ° ಒಟ್ಟಿಂಗೆ ಇಲ್ಲೆ ಇದಾ!
ಎಲ್ಲಿ ಹೋದರೂ ಲೂಟಿ!  ಲೂಟಿ ಹೇಳಿರೆ ಲೂಟಿ ಅಲ್ಲ, ಒಟ್ಟು ಕುತೂಹಲ – ಹೊಸ ವಿಶಯಂಗಳ ಬಗ್ಗೆ.
ಸಾಮಾನ್ಯ ಹೆರ ಕಾಣ್ತ ಎಲ್ಲ ವಿಶಯವೂ ಹೊಸತ್ತೇ ಅವಂಗೆ. ಮನಲಿ ಅಂತೂ ಕಂಡೇ ಗೊಂತಿಲ್ಲೆ ಇದಾ..
ವಿಶಯ ತಿಳ್ಕೊಂಬ ಕುತೂಹಲ ಬಿಂಗಿಮಕ್ಕೊಗೆ ಹೆಚ್ಚೋ – ಹೇಳಿ ಅನುಸಿಹೋಪದು ಒಂದೊಂದರಿ.
ಹ್ಮ್, ಎಂತ ಕಂಡ್ರೂ ಕೈ ಹಾಕುಗು, ಎಲ್ಲೋರ ಕೈಲಿ ಬೈಗಳು ತಿಂಗು. ಬೇಡ ಹೇಳಿರೆ ಕೇಳ°, ಬೇಕೋ – ಕೇಳಿರೆ ತೆಕ್ಕೊಳ°. ಹೆದರಿಕೆ!
ಎದುರಾಣವಂಗೆ ಅದು ಲೂಟಿ – ಹೇಳಿ ಕಾಂಗು.
~
ಎಷ್ಟು ಬೇಕಾರೂ ಬೈವಲಕ್ಕವಂಗೆ.
ಆರೇ ಬಯ್ಯಲಿ, ’ಓ!, ಪುಟ್ಟ° ಮತ್ತೊಂದರಿ ಎಂತದೋ ಬಿಂಗಿ ಮಾಡಿದ್ದ°’ ಹೇಳಿ ಒಳುದವು ತಳೀಯದ್ದೆ ಕೂರುಗು.
ಮತ್ತೆ ಮತ್ತೆ ಕೆಲವು ಜೆನ ಮಾತಾಡುಸುದೇ ಏರುಸೊರಲ್ಲಿ ಆಗಿ ಹೋತು!
ಅಂತೇ, ಅದೊಂದು ಅವರ ಕೊಶಿ! ಪೌರುಶ ತೋರುಸಲೆ ಎಡಿಗಪ್ಪ ಜಾಗೆ!
~

ಇದೆಲ್ಲ ಅವನ ಅಮ್ಮಂಗೆ ಮನುಗಿದಲ್ಲಿಂಗೇ ಗೊಂತಾಗೆಂಡು ಇತ್ತಾತ!

ಪುಟ್ಟನ ಪುಟ್ಟ ಮನೆ, ಪಾಲಾದ ಸಮೆಯಲ್ಲಿ ಅಪ್ಪ° ಕಟ್ಟುಸಿದ್ದಡ; ಹೊಸಮನೆ ಕಟ್ಟುಸುಲೆ ಇನ್ನೂ ಕಾಲ ಬಯಿಂದಿಲ್ಲೆ!

ಆರೋ ಹೇಳಿಯೋ ಮಣ್ಣ ಗೊಂತಕ್ಕು. ಗೊಂತಾದರೆ ಎಂತ ಮಾಡುದು, ಹೊದಕ್ಕೆ ಎಡೆಲಿ ಬೇಜಾರುಮಾಡುದು ಬಿಟ್ಟು.
ಅವಕ್ಕೆ ಹೋಗಿ ಎರಡ್ಡು ಬೈವ° ಹೇಳಿರೆ ಹಂದುಲೆಡಿತ್ತಿಲ್ಲೆ. ಮತ್ತೆ, ನಾಳೆ ಅವರ ಮನಗೇ ಹೋಯೆಕ್ಕಷ್ಟೆ, ಮಗಂಗೆ ಏನಾರೊಂದು ದಾರಿಗೆ.
ಇದು ಆ ಬೈತ್ತವಕ್ಕೂ ಗೊಂತಿದ್ದೋ ಕಾಣ್ತು!

ದೊಡ್ಡವಕ್ಕೆ ಜೋರು ಪಿಸುರು ಬತ್ತಾ ಇದ್ದಿಪ್ಪಗ ಈ ಮಾಣಿ ಎದುರು ಸಿಕ್ಕಿರೆ ಅಂತೂ ಗೋವಿಂದ..
ಏಳುನೆ, ಎಂಟುನೆಗೆತ್ತುವಗ ಈ ವಿಶಯ ಅರ್ತ ಆತು. ಆದರೆ ಅವಕ್ಕೆ ಪಿಸುರು ಯೇವಗ ಬತ್ತು ಹೇಳಿ ಹೇಂಗೆ ಗೊಂತಪ್ಪದೂ..
ಅದಕ್ಕೇ, ಮತ್ತೆಮತ್ತೆ ಜೆಂಬ್ರಂಗಳಲ್ಲಿ ಎದುರು ಕಂಡೋಂಡಿದ್ದದೇ ಇಲ್ಲೆ!
ಉಂಬಲಪ್ಪಗ ಬಕ್ಕು, ಉಂಗು – ಹೋಕು.
ಒಂದು ವೇಳೆ ಬಂದದು ರಜ ಬೇಗ ಆದರೆ ಚೆಪ್ಪರಂದ ಹೆರ ನಿಂಗು. ಆಳುಗಳತ್ರೆ ಮಾತಾಡಿಗೊಂಡೋ – ಮಣ್ಣ.
ಬೈಗಳು ಸಿಕ್ಕಿರೆ – ಎಲೆತುಪ್ಪುಲೆ ಬಂದ ಮಾವಂದ್ರದ್ದು ಮಾಂತ್ರ ಇದಾ..
ಅಲ್ಲದ್ದರೆ ಅಡಿಗೆಕೊಟ್ಟಗೆಗೆ ಹೋಕು,ಎಲ್ಲ ಅಪ್ಪನ ಗುರ್ತದವೇ ಅಲ್ಲದೋ – ಇಪ್ಪದು..
~

ರಜ್ಜ ದೊಡ್ಡ ಅಪ್ಪಗ ಕಡವಲೆ ಹೋಪಲೆ ಸುರು ಮಾಡಿದ°, ಸಣ್ಣ ಸಣ್ಣ ಕೈಗೊ ದೊಡ್ಡ ಕಡವಕಲ್ಲಿನ ತಿರುಗುಸುದು ನೋಡಿರೆ ಎಂತವಂಗೂ ಉಂಬಲೆ ಮೆಚ್ಚ!
ಮೆಚ್ಚ ಹೇಳಿಗೊಂಡ್ರೆ ಇವನ ಹೊಟ್ಟೆತುಂಬೆಕ್ಕನ್ನೆ. ಮನೆಲಿಪ್ಪ ಒಂದು ಕಂಡಿಲಿ ಉಂಬದೋ – ಸಾಲ ತೀರುಸುದೋ?
ಹಾಂಗೆ, ಅಲ್ಲಿಂದ ಬಂದ ಪೈಸೆಲಿ ಅಮ್ಮಂಗೆ ಮದ್ದು, ಮನೆಗೆ ಸಾಮಾನು, ಶಾಲಗೆ ಪುಸ್ತಕ, ಅಂಗಿಚಡ್ಡಿ – ಎಲ್ಲವನ್ನೂ ಹೊಂದುಸಿಗೊಂಡ°,  ಅಮ್ಮ ಹೇಳಿಕೊಟ್ಟಾಂಗೆ.

ಬೈಗಳು, ಪೆಟ್ಟುಗೊ ಅವನ ಜೀವನದ ಸಾಮಾನ್ಯ ಅಂಶ ಆದರೂ – ’ಕೆಟ್ಟಗಳಿಗೆಗೊ’ ಹೇಳಿ ಅನುಸಿಗೊಂಡು ಇತ್ತಿದ್ದು.
ಸುಮಾರು ಕೆಟ್ಟಗಳಿಗೆಗಳ ಸಾಧ್ಯತೆಯ ತಪ್ಪುಸುಲೆ ಅವನೂ ಪ್ರಯತ್ನ ಮಾಡಿದ್ದ°, ಕೆಲವು ಸರ್ತಿ ಎಡಿಗಾಯಿದು, ಕೆಲವು ಸರ್ತಿ ಅನುಬವಿಸಲೇ ಬೇಕಾಯಿದು.
ಒಂದೆರಡು ವಿಶೇಷದ್ದು,
ಒಂದರಿ ಗುರುಗೊ ಬಂದಿತ್ತಿದ್ದವು ಊರಿಂಗೆ. ತೆಂಗಿನಕಾಯಿ ಹಿಡ್ಕೊಂಡು ಫಲಸಮರ್ಪಣೆಗೆ ನಿಲ್ಲೇಕಾತು!
ಈ ಮಾಣಿ ಸಣ್ಣ ಇದಾ, ಮನೆಂದ ಎರಡು ದೊಡ್ಡ – ಇಪ್ಪದರ್ಲಿ ಲಾಯಿಕದ ತೆಂಗಿನಕಾಯಿ ಹುಡ್ಕಿ, ಸೊಲುದು – ಅಂಬಗಳೇ ಸೊಲಿವಲರಡಿಗು – ಸೊಲುದು ತಂದಿತ್ತಿದ್ದ°.
ಸಾಲಿಲಿ ಏವದೋ ದೊಡ್ಡ ಮನಶ್ಶ° ಇತ್ತಿದ್ದ°, ’ಯೇ ಲೂಟಿಮಾಣಿ, ನೀನೆಂತಕೆ ಇಲ್ಲಿ ನಿಂದದು, ಲೂಟಿ! ಕೊಡು ಆ ಕಾಯಿಯ ಇತ್ತೆ!’ – ಹೇಳಿಗೊಂಡು ತೆಕ್ಕೊಂಡ°.
ಆ ಲೂಟಿಮಾಣಿ ಗುರುಗಳ ಎದುರುದೇ ನಿಂದು ಲೂಟಿಮಾಡುದು ಬೇಡ, ಊರಿನ ಮರಿಯಾದಿ ಕಳವದು ಬೇಡ – ಹೇಳಿಗೊಂಡು ಬುದ್ದಿವಂತಿಕೆ ತೋರುಸಿದ°,
ನೆಗೆನೆಗೆಮೋರೆಲಿ ನಾಲ್ಕು ಕಾಯಿ – ಎರಡು ಸಣ್ಣದು, ಅವ ತಂದದು; ಎರಡು ದೊಡ್ಡದು – ಮಾಣಿ ತಂದದು – ನಾಲ್ಕು ಕಾಯಿಯ ಮಡಗಿ ಹೊಡಾಡಿದ°.
ಈ ಮಾಣಿ ಗುರುಗೊಕ್ಕೆ ದೂರಂದಲೇ ಹೊಡಾಡಿದ° – ಗುರುಗಳೂ ಅಲ್ಲಿಂದಲೇ ಆಶೀರ್ವಾದ ಮಾಡಿದವು, ಖಂಡಿತವಾಗಿಯೂ..!

ಇನ್ನೊಂದು ಸರ್ತಿ ನೆರೆಕರೆಯ – ಮದುವೆಯೋ ಎಂತೋ – ಮದುವೆ ದೂರದ ಹೋಲಿಲಿ, ಪುಟ್ಟನ ಬಪ್ಪಲೆ ಹೇಳಿದವು, ಜೆಂಬ್ರಕ್ಕೆ ಅಲ್ಲ; ಮನೆಪ್ಪಾರಕ್ಕೆ!
ಕೂದೇ ಕೂದ°, ಬತ್ತಿಲ್ಲೆ ಹೇಳಿರಾವುತ್ತೋ – ಹಯಿಸ್ಕೂಲಿಲಿಯೋ ಮತ್ತೊ° ಇದ್ದಿಕ್ಕು – ಆ ಪ್ರಾಯಲ್ಲೇ ಒಳ್ಳೆತ ಕೆಲಸ ಮಾಡುಗು.
ಮನೆಪ್ಪಾರ ಹೇಳಿರೆ ಮನೆಯ ಸೊತ್ತುಗಳ ಜೆವಾಬ್ದಾರಿ ಮಾಂತ್ರ ಅಲ್ಲದ್ದೆ ಮನೆಲಿ ಆಯೇಕಾದ ಎಲ್ಲ ಕೆಲಸಂಗಳನ್ನೂ ಮಾಡೆಡದೋ!
ದನಗಳ ಚಾಕಿರಿ, ಅದು, ಇದು – ಎಲ್ಲ! ಎಲ್ಲವನ್ನುದೇ ಮಾಡಿದ್ದ, ಚೆಂದಲ್ಲಿ. ಕೆಲಸ ಮಾಡುದು ಹೇಳಿರೆ ಪುಟ್ಟಂಗೆ ಮದಲಿಂದಲೂ ಹಾಂಗೇ – ಕೊಶಿಯೇ.
ಅಂತೂ ಜೆಂಬ್ರ ಮುಗುಶಿ ಕೊಶೀಲಿ ಮನೆಯೋರು ಬಪ್ಪಗ ಎಲ್ಲ ಕೆಲಸ ಆಗಿತ್ತು, ಮನೆಯೋರಿಂಗೆ ಕೊಶೀ ಆಗಿತ್ತು.
ಎರಡು ದಿನ ಕಳುದು ಗೊಂತಾತು, ಆರದ್ದೋ – ಬಂದ ಒಂದು ನೆಂಟ್ರುಹೆಮ್ಮಕ್ಕಳದ್ದು ಅವಲಕ್ಕಿಸರ ಕಾಣೆ ಆಯಿದು – ಇವ° ಮನೆಪ್ಪಾರ ಮಾಡಿದ ಮನೆಲೇ ಕಾಣೆ ಆದ್ದದು – ಹೇಳಿ.

ಎಷ್ಟೇ ಕಷ್ಟ ಇದ್ದರೂ ಕದಿವಲಾಗ – ಹೇಳಿ ಅಮ್ಮ ಅಂದಿಂದಲೇ ಹೇಳುಗು. ಇವ ಕೇಳುಗುದೇ.
ಅಮ್ಮ ಹೇಳಿದ್ದರ ಇವ° ಕೇಳುಗು, ಆದರೆ ಇವ° ಹೇಳಿದ್ದರ ಆ ಮನೆಯೋರು ಕೇಳ್ತವಾ? ನಂಬಿದ್ದವೇ ಇಲ್ಲೆ!
ಈ ಮಾಣಿಯೇ ಅದರ ತೆಗದ್ದು ಹೇಳಿ ಮಾಡಿ ಹಾಕಿದವು. ಲೂಟಿ, ಬಿಂಗಿ ಎಲ್ಲ ಆದರೆ ತೊಂದರಿಲ್ಲೆ ಭಾವ! ಕಳ್ಳ ಹೇಳಿ ಆದರೆ ಮತ್ತೆ ಜೆನಂಗಳ ನಂಬಿಕೆ ಪ್ರಶ್ನೆ!!
ಈ ವಿಶಯಕ್ಕೆ ಎಡಿಗಾದಷ್ಟು ಪ್ರಚಾರ ಕೊಟ್ಟವು, ಕಳ್ಳುಲೆ ಸುರು ಮಾಡಿದ್ದ° – ಹೇಳಿಗೊಂಡು.
ಮುಂದೆಮುಂದೆ ಅವ ಎಲ್ಲಿಗಾರು ಬಂದರೆ ಇವನೆದುರೇ ಸೊತ್ತುಗಳ ಜಾಗ್ರತೆ ಮಾಡ್ಳೆ ಸುರು ಮಾಡಿದವು, ಇವಂಗೆ ಗೊಂತಪ್ಪ ಹಾಂಗೇ! ಪಾಪ!!
ಸುಮಾರು ಸಮೆಯ ಅಪ್ಪಗ ಒಂದು ಶುದ್ದಿ ಗೊಂತಾತು – ಆ ಸರ ಸಿಕ್ಕಿತ್ತಡ, ಆ ಹೆಮ್ಮಕ್ಕಳ ವೇನಿಟಿಬೇಗಿನ ಒಳದಿಕೆ ಎಲ್ಲಿಯೋ ಇತ್ತಡ – ಹೇಳಿ! ಅದಕ್ಕೆ ಎಂತದೂ ಪ್ರಚಾರ ಇಲ್ಲೆ ಇದಾ, ಅದು ಹಾಂಗಾಗಿ ಪಕ್ಕನೆ ಆರಿಂಗೂ ಗೊಂತಾಯಿದಿಲ್ಲೆ!
ಅವಂಗೆ ಅದು ಗೊಂತಾಗಿ ಮೊದಲಾಣ ಬೇಜಾರು ರಜಾ ಕಮ್ಮಿ ಆಗಿತ್ತು, ಆದರೆ ಅವನ ಅಮ್ಮ ಮೊದಲೂ ಬೇಜಾರಲ್ಲೇ ಇತ್ತಿದ್ದು, ಮತ್ತೆಯೂ ಬೇಜಾರಲ್ಲೇ ಇತ್ತಿದ್ದು.
ಇದೆಲ್ಲ ಅವ° ಶಾಲಗೆ ಹೋಪಗಾಣ ಶುದ್ದಿ.
~

ಅಂಬಗಾಣ ಆ ಘಟನೆಗೊ, ಬೈಗಳುಗೊ ಆ ಪುಟ್ಟು ಮನಸ್ಸಿಲಿ ನೆಂಪಿಲಿತ್ತೋ – ಮರಕ್ಕೊಂಡಿದ್ದಿದ್ದನೋ – ಒಪ್ಪಣ್ಣಂಗರಡಿಯ.
ಇದೆಲ್ಲ ಆ ಮಾಣಿಗೆ ಮರೆಯಲಿ, ಮುಂದಂಗೆ ಇದೇವದೂ ನೆಂಪೊಳಿವದು ಬೇಡ – ಹೇಳಿ ಆರಾರು ಉರುಕ್ಕು ಕಟ್ಟಿರಾವುತಿತೋ..
ನೆಂಪುಮಾಡ್ಳಾಗದ್ದ ಹಳೇ ಹಳೇ ನೆಂಪುಗೊ ಅವನ ತಲೆಲಿ ತುಂಬಿಕ್ಕು.
ಬಾಲ್ಯದ ಮಧುರ ನೆಂಪುಗೊ ಒಳೆಯೇಕಾದ ಜಾಗೆಲಿ ಹೀಂಗಿರ್ತ ಆಪಾದನೆ, ಬೇಜಾರು, ಬೈಗಳು – ಇಂತದೇ ತುಂಬಿ ಹೋಯಿದು!
ನೆಂಟ್ರು, ನೆರೆಕರೆ – ಆರುದೇ ಒಟ್ಟಿಂಗಿಲ್ಲದ್ರೂ ಬದುಕ್ಕಿದ° ಹೇಂಗಾರು.
ಬದುಕ್ಕಿ ತೋರುಸಿದ°. ಅಲ್ಲಲ್ಲ, ಅವನ ಅಮ್ಮ ಬದುಕ್ಕಿಸಿ ತೋರುಸಿತ್ತು.
~

ಏನೇ ಬಂಙ ಇದ್ದರೂ ಶಾಲೆ ಒಂದು ಬಗೆ ತಪ್ಪುಸಿದ್ದನಿಲ್ಲೆ ಕಲ್ತ°, ಕಲ್ತ°, ನಿರಂತರವಾಗಿ ಕಲ್ತಿಕ್ಕಿದ°.
ಹತ್ತನೇ ಕ್ಲಾಸಿಂಗೆ ಬಪ್ಪಗ ’ಆನುದೇ ಕಲಿಯೇಕು’ ಹೇಳಿ ಅನುಸಿ ಹೋತೋ – ಕಾಣ್ತು.
ಉತ್ಸಾಹಕ್ಕೆ ಸರಿಯಾಗಿ ಕೆಲವು ಜೆನ ಸಕಾಯ ಮಾಡಿದವುದೇ.

ಆರತ್ರೋ ಮಾತಾಡಿ, ಎಂತೆಂತದೋ ಮಾಡಿ ರಾಮಜ್ಜನ ಕೋಲೇಜಿಲಿ ಸೀಟು ಮಾಡಿ ಕಲ್ತಿಕ್ಕಿದ°.
ಅಲ್ಲಿ ಕೆಲವೆಲ್ಲ ಪ್ರೈಸು ಸಿಕ್ಕಿದ್ದರನ್ನುದೇ ಸೇರುಸಿಗೊಂಡು, ಎಡೆಡೆಲಿ ಅಡಿಗ್ಗುದೇ ಹೋಯ್ಕೊಂಡು, ಪುರುಸೊತ್ತಾದರೆ ಎಡೆಲಿ ಓದಿಗೊಂಡು, ಮನೆ, ಸಣ್ಣತೋಟ, ಅಮ್ಮನ ಚಾಕಿರಿ – ಎಲ್ಲವನ್ನುದೇ ನೋಡಿಗೊಂಡು – ಅಬ್ಬ, ಸಮೆಯ ಹೇಂಗೆ ಹೊಂದುಸಿಗೊಂಡ° ಹೇಳಿ ಆಶ್ಚರ್ಯ ಅಪ್ಪದು ಒಪ್ಪಣ್ಣಂಗೆ.
ನವಗೆ ಈ ಹಳ್ಳಿಮನೆ ಕೆಲಸಂಗಳ ಎಡಕ್ಕಿಲಿ ವಾರಕ್ಕೊಂದು ಶುದ್ದಿ ಹೇಳುಲೇ ಪುರುಸೊತ್ತಾವುತ್ತಿಲ್ಲೆ. ಅವ ಇಷ್ಟೆಲ್ಲದರ ಹೇಂಗೆ ಮಾಡಿಗೊಂಡಿತ್ತಿದ್ದ ಅಪ್ಪಾ..!

ಅದಿರಳಿ, ರಾಮಜ್ಜನ ಕೋಲೇಜಿಲಿ ಒಂದಲ್ಲ, ಎರಡಲ್ಲ – ಐದೊರಿಶ ಕಲ್ತ°.
ಪ್ಲಸ್ಟುವಿಂದ – ಪೀಯೂಸಿ ಹೇಳ್ತದು ಅವು- ಸುರುಆಗಿ, ಡಿಗ್ರಿ ಅಕೇರಿಯಾಣ ಒರಿಶ ಒರೆಗುದೇ.
ಊರಿನ ಬೈತ್ತ ಮಾವಂದ್ರು ಹತ್ತನೆಲಿಪ್ಪಗ ಬೈದ್ದದು ಅಕೇರಿ, ಮತ್ತೆ ಕಾಂಬಲೇ ಸಿಕ್ಕಿದ್ದನಿಲ್ಲೆ.

ಹೀಂಗೊಬ್ಬ ಜೆನ ಇದ್ದ° – ಹೇಳುದೇ ಮರದಿತ್ತೋ ಏನೋ!
ಅಪುರೂಪಕ್ಕೆ ಒಂದೊಂದರಿ ಊರಿಂಗೆ ಬಂದರೂ – ಒಂದೋ ಎಲ್ಯಾರು ಜೆಂಬ್ರಲ್ಲಿಕ್ಕು, ಅಲ್ಲದ್ದರೆ ಮನೆಲೇ ಸ್ವಸ್ಥ ಕೂದೊಂಡು ಓದಿಗೊಂಡಿಕ್ಕು.
ಹೆರ ಹೋಗಿ ಅಂತೇ ಆರಾರ ಬಾಯಿಗೆ ಸಿಕ್ಕುತ್ತ ಪಂಚಾತಿಗೆ ಇಲ್ಲೆ ಇದಾ! 🙂
~

ಊರವಕ್ಕೆ ಮರದರೂ ಆ ಮಾಣಿಗೆ ಮರದ್ದಿಲ್ಲೆ ಕಾಣ್ತು.
ಹಟಗಟ್ಟಿ ಓದಿದ°. ಬೇರೆ ನೆಂಪುಗಳ ಮರವಲೆ ಗಮನಮಡೂಗಿ ಓದುದೊಂದೇ ಪಿರಿ, ಅಲ್ಲದೋ?
ಓದಿಯೇ ಓದಿದ°. ಕೋಲೇಜಿಲಿಯುದೇ ಹಾಂಗೆ, ಬೇರೆ ಬಿಂಗಿಮಕ್ಕಳ ಹಾಂಗೆ ಹಾರಿದ್ದನಿಲ್ಲೆ.
ಒಂದೋ ಓದುಗು, ಅಲ್ಲದ್ರೆ ಅಲ್ಲಿಪ್ಪ ಪೆಲ್ತಡ್ಕ ಮಾಷ್ಟ್ರತ್ರೋ – ಎಕ್ಕಡ್ಕ ಮಾಷ್ಟ್ರತ್ರೋ – ಮಣ್ಣ ಎಂತಾರು ಪಾಟದಬಗ್ಗೆ ಮಾತಾಡಿಗೊಂಡು, ಅವರ ಪುಸ್ತಕಲ್ಲಿ ಹೇಂಗಿದ್ದು – ಹೇಳಿ ಚರ್ಚೆ ಮಾಡಿಗೊಂಡು ಸಮೆಯವಿನಿಯೋಗ ಮಾಡುಗು.
ಹೀಂಗೆ ಓದಿದ್ದಕ್ಕೆ ದಕ್ಕಿತ ಪಲಿತಾಂಶವೂ ಬಂತು, ಒಳ್ಳೊಳ್ಳೆ ಮಾರ್ಕು ಬಂತಡ..!
~

ಅವನ ಮಾರ್ಕಿನ ಬಗ್ಗೆ ಅವ° ಆಗಿ ಎಂತದೂ ಹೇಳಿದ್ದನಿಲ್ಲೆ, ಒಪ್ಪಣ್ಣ ತಿಳುದ° – ಗೊಂತಾತು!
ಹೇಂಗೆ ತಿಳುದ್ದು ಹೇಳಿ ಕೇಳಿಕ್ಕೆಡಿ, ನಮ್ಮ ಪಂಜೆ ಕುಂಞಜ್ಜಿಯೂ ಅದೇ ಒರಿಶದ ಕ್ಲಾಸು, ಆದರೆ ಕಲಿತ್ತದು ಬೇರೆಬೇರೆಡ.
ಇತ್ತೀಚೆಗೆ ಕೆಲವು ಪರೀಕ್ಷೆಲಿ ಅಂತೂ ತುಂಬಾ ಒಳ್ಳೆ ಮಾರ್ಕು ಬತ್ತಾ ಇದ್ದಡ.
ರೇಂಕೋ ಮಿನಿ ಬಂದುಬಿಡ್ತೋ ಹೇಳಿ ಸಂಶಯ ಇದ್ದಡ ಮಾಷ್ಟ್ರಂಗೊಕ್ಕೆ.
~ ~ ~

ಈಗ ಬಂದದು, ದೊಡಾ ಸಂಶಯ.
ಮುಂದೆಂತರ?

ಮನೆಲೇ ಇಪ್ಪದೋ – ಹೆರ ಹೋಪದೋ? ಹ್ಮ್?
ತೋಟ, ಮನೆ, ಊರು – ಹೇಳಿಗೊಂಡು ಮನೆಲೇ ಕೂದೊಂಡು ಬದುಕ್ಕುದೋ?
ಹಾಂಗೆ ಬದುಕ್ಕಿರೆ ಇನ್ನು ಐವತ್ತೊರಿಶ ಆದರೂ ಈಗಾಣ ಬದುಕ್ಕಾಣಲ್ಲಿ ಉದ್ದಾರಪ್ಪಲೆಡಿಯ.
ಹಾಂಗಿದ್ದು ಪೈಸೆಯ ಅಗತ್ಯತೆ. ಒಂದೋ ಅಪ್ಪನಾಂಗೆ ಅಡಿಗ್ಗೆ ಹೋಯೆಕು, ಅಡಿಗ್ಗೆ ಹೋವುತ್ತರೆ ಇಷ್ಟೊಳ್ಳೆ ಮಾರ್ಕು ತೆಗದ್ದು ಸುಮ್ಮನೆ!

ಅಂಬಗ ಎಲ್ಯಾರು ಮಾಷ್ಟ್ರತ್ತಿಗೆಗೆ ಹೋಪದೋ?
ಹೋದರೆ ಮನೆಲೇ ಇಪ್ಪಲಕ್ಕು, ಆದರೆ ಹತ್ತರೆ ಇವಂಗೆ ಅಪ್ಪಾಂಗಿಪ್ಪ ಶಾಲೆಗೊ ಯೇವದೂ ಇಲ್ಲೆ! ಇದ್ದದರ್ಲಿ ಜೆನ ಇದ್ದವು.
ಹಾಂಗೆ ಶಾಲೆ ಬೇಕಾರೆ ಕೊಡೆಯಾಲಕ್ಕೆ ಹೋಯೆಕ್ಕು. ಮನೆಂದ ನಿತ್ಯ ಅಲ್ಲಿಗೆ ಹೋಗಿಬಂದು ಪೂರೈಶ!

ಅಂಬಗ ಅಮ್ಮನ ಕಷ್ಟ ನೋಡಿ ಮದುವೆ ಅಪ್ಪದೋ?
ಅದಂತೂ ಎಡಿಯಲೇ ಎಡಿಯ, ಕೈಲಿ ಮುಕ್ಕಾಲಿಲ್ಲೆ ಭಾವ! ಮದುವೆ ಅಪ್ಪದೆಲ್ಲಿಂದ.
ಈ ನಮುನೆ ಮಾಣಿಯ ನೋಡಿರೆ ನಮ್ಮೋರಲ್ಲಿ ಆರುದೇ ಕೂಸುಕೊಡುದು ಸಂಶಯ – ಹೇಳಿ ಅವನೇ ಹೇಳಿಗೊಳ್ತ°.
ಮದುವೆ ಆದರೆ ಸಾಕೋ, ಸಾಂಕೆಡದೋ! 😉 ಮನೆಲಿ ಕಷ್ಟ ಇಪ್ಪದಪ್ಪು, ಆದರೆ ಈಗಳೇ ಮದುವೆ ಆದರಾಗ!

ಅಂಬಗ, ಪರಿಕರ್ಮವೋ – ಬಟ್ಟತ್ತಿಗೆಗೋ ಮಣ್ಣ ಹೋಪದೋ?
ಅದಾಗ, ಅಷ್ಟು ನಾಜೂಕುದೇ ಇಲ್ಲೆ, ಅಷ್ಟು ಆಸಕ್ತಿಯುದೇ ಇಲ್ಲೆ.
ಹಾಂಗಾಗಿ ಆ ಒಯಿವಾಟಿಲಿ ಮೇಲೆಬಕ್ಕೂಳಿ ಧೈರ್ಯ ಇಲ್ಲೆ!
~
..ಮೊನ್ನೆ ಬದಿಯೆಡ್ಕ ಬಷ್ಟೇಂಡಿಲಿ ಸಿಕ್ಕಿಪ್ಪಗ ಕೇಳಿದೆ, ಇನ್ನೆಂತರ ಮಾಡುದು – ಹೇಳಿ.
ಅಷ್ಟಪ್ಪಗ ಈ ಶುದ್ದಿಗೊ ಎಲ್ಲ ಬಂತು..
~

ಅಂಬಗ ನಿನ್ನ ಆಸಕ್ತಿ ಇಪ್ಪದು ಯೇವದು – ಕೇಳಿತ್ತು ನಾವು. ಒಪ್ಪಣ್ಣನತ್ರೆ ಎಲ್ಲ ಹೇಳುಗಿದಾ – ಇದನ್ನೂ ಹೇಳಿದ°.
ಈಗ ಕಲ್ತಿದಲ್ಲದೋ – ಅದರ ಮುಂದುವರಿಕೆ ಭಾಗ ಇದ್ದಡ, ಸೀಯೇ ಹೇಳಿ ಹೆಸರಡ, ಬೆಂಗುಳೂರಿಲಿ ಆರದ್ದೋ ಕೆಳ ಕಲಿವಲಾವುತ್ತಡ, ಸೀಯೆ ಮಾಡಿರೆ ಒಳ್ಳೆ ಮುಂದಕ್ಕೆ ಬೆಳವಣಿಗೆ ಅವಕಾಶ ಇದ್ದಡ, ಹಾಂಗೆಲ್ಲ ಹೇಳಿದ°.

ಅದಕ್ಕೆ ಮನಸ್ಸೂ, ಪೈಶವೂ ಬೇಕಡ – ಮನಸ್ಸಿದ್ದು, ಆದರೆ ಎರಡ್ಣೇದು ಎಲ್ಲಿಂದ ಹೊಂದುಸುದು..
ಅವನ ಲೆಗುಚ್ಚರ ಒಬ್ಬ° ಹೇಳಿದ್ದನಡ, ನೀನು ಸೀಯೆ ಮಾಡ್ತರೆ ಮಾಡು, ಕರ್ಚಿನ ಬಗೆ ಆನು ನೋಡ್ತೀ – ಹೇಳಿ.
ಈಗಳೂ ಅಷ್ಟುಪುಣ್ಯವಂತರು ಇದ್ದವೋ ಅಂಬಗ! ನವಗರಡಿಯ.

ಅವಂಗೆ ಆಸಕ್ತಿ ಇದ್ದರೂ ಮನೆ ವಿಚಾರವನ್ನುದೇ ನೋಡೆಕ್ಕಲ್ಲದೋ – ಹಾಂಗೆ ಎಂತ ಮಾಡ್ತದು ಹೇಳಿ ದೊಡಾ ಕನುಪ್ಯೂಸು..
ಅವಂಗೆ ಹೇಳುವೋರು – ಹೇಳಿ ಜೆನ ಇಪ್ಪದು ಕಮ್ಮಿ ಇದಾ..
ಒಂದೊ ಮನೆಪರಿಸ್ತಿತಿ ಅರಡಿಯದ್ದ ಶಾಲೆಯ ಮಾಷ್ಟ್ರಕ್ಕೊ, ಅಲ್ಲದ್ರೆ ನಮ್ಮಾಂಗಿರ್ತ ಏನೂ ಅರಡಿಯದ್ದ ಚೆಂಙಾಯಿಗೊ..
~
ಊರಿಲೇ ನಿಂದರೆ ಎಂತ ಇದ್ದು?
ಎಂತಾರು ಮಾಡಿ ನಾಕು ಮುಕ್ಕಾಲು ಕೈಲಿ ಆಗೆಡದೋ? ಅಶನ ಎಲ್ಲಿ ಬಗದ್ದದೋ ಅಲ್ಲೇ ಸಿಕ್ಕುಗಷ್ಟೆ. ಒಂದುವೇಳೆ ಊರಿನ ಒಂದು ಕಂಡಿ ತೋಟವೂ, ಅನಾರೋಗ್ಯ ಅಮ್ಮನೂ ಇಪ್ಪ ಭಾವನೆಗ ಮನೆಲೇ ನಿಂದರೂ, ಮುಂದಕ್ಕೆ ಹೆರಡೆಕ್ಕಾಗಿ ಬತ್ತೇ ಬತ್ತು – ಸಾಲ ಕೊಡ್ಳೆ ಜಾಗೆ ಮಾರೆಕ್ಕಕ್ಕಿದಾ!
ಮಾರ್ತರೆ ತೆಕ್ಕೊಂಬಲೆ ಮಾಪುಳೆಗೊ ಇದ್ದವು, ಬೇಕಾಷ್ಟು.
ಅದಿರಳಿ,
ಬೆಂಗುಳೂರಲಿ ಕೆಲಸಮಾಡಿಗೊಂಡು ಕಲಿವಲಾವುತ್ತಡ, ಹಾಂಗೆ ಮಾಡಿರೆ ಕಲ್ತ ಹಾಂಗೂ ಆವುತ್ತು, ಕೆಲಸ – ಸಂಪಾದನೆ ಆದಹಾಂಗೂ ಆವುತ್ತು. ಹಾಂಗೆ ಮಾಡಿರೆ ಬೆಂಗುಳೂರಿನ ರಜರಜ ಕರ್ಚಿಂಗೂ, ಅಮ್ಮನ ಮದ್ದಿಂಗೂ ಸಾಕಕ್ಕು. ಎರಡು ವಾರಕ್ಕೊಂದರಿ ರೈಲಿಲಿ ಊರಿಂಗೆ ಹೋಗಿಬಪ್ಪದು – ಹಾಂಗೆ ಹೀಂಗೆ – ಎಲ್ಲ ಹೇಳಿದ°.
ಹೇಳುದು ಕೇಳಿರೆ ಊರು ಹೆರಡುದು ನಿಘಂಟಾದ ಹಾಂಗಿತ್ತು.
~
ಆಗಲಿ, ಅಬ್ಬಗೆ ನೆಮ್ಮದಿ ಹೇಳಿಕ್ಕಿ, ಅಂತೂ ಊರಿನ ಕೆಟ್ಟ ನೆಂಪುಗಳ ಹೊತ್ತೊಂಡು, ಸದ್ಯಲ್ಲೇ ಬೆಂಗುಳೂರಿಂಗೆ ಹೆರಡ್ತ°.

ಹಾಂಗೆ, ಊರವರ ಕೈಲಿ ಪೂರ್ತ ಬೈಗಳು ತಿಂದ ಮಾಣಿ ಈಗ ದೊಡ್ಡದರ ಕಲಿವಲೆ ಬೆಂಗುಳೂರಿಂಗೆ ಹೋವುತ್ತ°.
ಸಾಲವ ಎಲ್ಲ ತೀರುಸುವ, ಅಬ್ಬೆಗೆ ಒಳ್ಳೆ ಮದ್ದು ಮಾಡುವ, ನೆಮ್ಮದಿಲಿ ಬದುಕ್ಕುವ ಭವಿಷ್ಯದ ನಿರೀಕ್ಷೆಲಿ…
ಪುಟ್ಟಂಗೆ ಬೆಂಗುಳೂರು ಹೊಸಪರಿಸರ ಒಳ್ಳೆದಾಗಲಿ. ಉಶಾರಿಮಾಣಿ ಆಗಿ ಬೆಳೆಯಲಿ –  ಅಲ್ಲಿ ಬಿಂಗಿಮಾಣಿ ಹೇಳಿ ಬೈವೋರು ಆರೂ ಇಲ್ಲೆನ್ನೆ!
~
ನಮ್ಮದೇ ಊರಿನ ಒಬ್ಬ ಪುಟ್ಟ° ಬೆಂಗುಳೂರಿಂಗೆ ಹೆರಡ್ತ ಸನ್ನಿವೇಶ ಇದು.
ಅದರ ಹಿಂದಾಣ ಕತೆ ರಜಾ ಹೇಳಿದೆ ಅಷ್ಟೆ.
ಪರೋಕ್ಷವಾಗಿ ನೋಡಿರೆ, ಬೆಂಗುಳೂರಿಂಗೆ ಹೋಗೆಡ ಮಾಣಿ – ಹೇಳಿರೂ ಕೇಳ, ಹಳೇ ಘಟನೆಗಳಿಂದಾಗಿ ಅಷ್ಟು ನಿಗಂಟಾಗಿತ್ತು ಅವನ ಮನಸ್ಸು.
ಹೀಂಗಿದ್ದ ಪುಟ್ಟಂದ್ರು ನಮ್ಮ ಸುತ್ತ ಎಷ್ಟೋ ಜನ ಇಕ್ಕು. ಅಲ್ಲದೋ? ಏ°?

ಪುಟ್ಟು ಮಾಣಿಯಂಗೊ ಲೂಟಿ ಮಾಡಿರೆ ಕಾರಣ ತಿಳಿಯದ್ದೆ ಬೈದಿಕ್ಕೆಡಿ. ಅವರ ಹಿಂದೆ ಹೀಂಗಿಪ್ಪ ಬೇನೆಯ ಕತೆಗೊ ಇಪ್ಪಲೂ ಸಾಕು. ಅಲ್ದಾ ಭಾವ?

ಒಂದೊಪ್ಪ: ನಮ್ಮೋರು ನಮ್ಮ ಪರಿಸರಂದ ದೂರಹೋಪಲೆ ಕಾರಣ ನಮ್ಮ ಪರಿಸರವೇ! ಅಲ್ಲದೋ?

38 thoughts on “ಬಿಂಗಿ ಪುಟ್ಟಂಗೆ ಶಾಲೆ ಮುಗುತ್ತು, ಮುಂದೆಂತರ ?

  1. ಬಿಂಗಿ ಇಲ್ಲದ್ದವು ಆರಿದ್ದವೂ ಬಾವ.. ಎಲ್ಲ ಪರಿಸರದ ಜನರ ಬಾಯಿಲಿ ಇಪ್ಪದು ಒಳ್ಲೆದು ಹೇಳಿರೆ ಕೆಲವಕ್ಕೆ ಗೆಂಟು ಆವುತ್ತು. ಇದಕ್ಕೆ ಏನೂ ಮಾಡುಲೆಡಿಯಾ. ಎಂತಾರೂ ಆಗಲಿ ಮಾಣಿಗೆ ಒಳ್ಳೆದಾಗಲಿ.

  2. ಪಾಪದ ಮಕ್ಕೊ ಹೇಳಿರೆ ಎದುರುತ್ತರ ಕೊಡದ್ದವು, ಬೋಸಂಗೊ ಹೇಳ್ತ ಅರ್ಥ ನಮ್ಮ ಭಾಷೆಲಿ ಇದ್ದು. ಆದರೆ ಈ ಪಾಪದ ಮಾಣಿ (ಕೆಲಾವು ಜೆನಕ್ಕೆ ಬಿಂಗಿ ಮಾಣಿ) ಕಲಿವದರಲ್ಲೂ ತಾನು ಉಶಾರಿ ಹೇಳಿ ತೋರುಸಿ ಕೊಟ್ಟಿದ°. ಅವಂಗೆ ನಮ್ಮ ಬೈಲಿನ ಲೆಕ್ಕಲ್ಲಿ ಒಂದು ಅಭಿನಂದನೆ. ಮುಂದೆಯೂ ಲಾಯ್ಕ ಕಲಿಯಲಿ.

  3. ಒಳ್ಳೆದಾಯಿದು ಬರದ್ದು. ಭಾವನಾತ್ಮಕ ಸತ್ಯ .

  4. ಒಪ್ಪಣ್ಣ ಬರದ ಶುದ್ದಿ ಯೇವತ್ತಿಂದ ಭಿನ್ನ ಆಗಿ ಲಾಯಕ ಆಯಿದು.. ಆರೋ ಮಾಡಿದ್ದು ಆರೋ ಅನುಭವಿಸುದು ಹೇಳಿ ಇಲ್ಲೆಯಾ? ಹಾಂಗೆ ಅಜ್ಜನ ಸಾಲ ಅಪ್ಪನ ತಲೆಗೆ ಮುಂದೆ ಇವಂಗೆ… ಅದರ ಎಡೆಲಿ ಊರ ದೊಡ್ಡ ಮನುಷ್ಯರಿಂದ ಅನಾವಶ್ಯಕ ಇಲ್ಲದ್ದ ಆರೋಪಂಗಳ ಎದುರಿಸಿಗೊಂಡು ಹಿಂಸೆ ಅನುಭವಿಸಿದರೂ, ಅಬ್ಬೆಯ ಮಾತಿಂಗೆ ಬೆಲೆ ಕೊಟ್ಟು ಹಾಂಗೆ ನೆಡದು ಈಗ ಒಂದು ಹಂತಕ್ಕೆ ಎತ್ತಿದಾನ್ನೇ!!! ಒಳ್ಳೇದಾತು… ಸಣ್ಣಾದಿಪ್ಪಗಾಂದ ಅವ° ಕಷ್ಟ, ಇನ್ನೊಬ್ಬನ ತಾತ್ಸಾರ ಅನುಭವಿಸಿದ ಕಾರಣ ಅವನಲ್ಲಿ ಮುಂದೆ ಬರೆಕ್ಕು ಹೇಳ್ತ ಹಠ ಬೆಳದತ್ತು ಅಲ್ಲದಾ? ಎಷ್ಟೇ ಕಷ್ಟ ಆದರೂ ಕೆಟ್ಟ ದಾರಿ ನೋಡದ್ದೆ ಮೈ ಮುರುದು ದುಡುದು ಮೇಲೆ ಬಪ್ಪಗ ಅವನ ಅಬ್ಬೆ ಪಟ್ಟ ಕಷ್ಟಂಗಳ ಮರದಿಕ್ಕು… ಮಾಷ್ಟ್ರು ಮಾವನ ಹಾಂಗಿಪ್ಪವು ಇದ್ದರೆ ಮಕ್ಕೊಗೆ ಹೀಂಗಾಗ ಇದಾ.. ಅವಕ್ಕೆ ಮಕ್ಕಳ ಮನಸ್ಸು ಗೊಂತಿದ್ದು.., ಬೇರೆ ಬೇರೆ ಮಕ್ಕಳ ಒಡನಾಟಲ್ಲಿ ಇದ್ದು ಎಲ್ಲಾ ನಮೂನೆ ಮಕ್ಕಳ ಮನಸ್ಸು ಗೊಂತಿರ್ತು.. ನವಗೆ ಮಕ್ಕ ಬಿಂಗಿ ಮಾಡುದು ಕಂಡಪ್ಪಗ ಕೋಪ ಬತ್ತು.. ಈ ಮಕ್ಕಳ ಅಪ್ಪ, ಅಮ್ಮ ಎಂತ ಹೇಳಿ ಕೊಟ್ಟಿದವಿಲ್ಲೆಯಾ ಹೇಳಿ ಅನುಸುತ್ತು.. ಆ ಮಕ್ಕಳ ಮನಸ್ಸಿಲಿ ಎಂತ ಇರ್ತು ಹೇಳಿ ನವಗೆ ಹೇಳುಲೆ ಎಡಿಯ ಅಲ್ಲದಾ?ನಮ್ಮ ಬಿಂಗಿ ಮಾಣಿಯ ಆರುದೆ ಪ್ರೀತಿ ಮಾಡುವೋರು ಇತ್ತಿದ್ದವಿಲ್ಲೆನ್ನೇ… ಅವಂಗೆ ಪ್ರೀತಿಯ ಸ್ಪರ್ಶ ಗೊಂತೆ ಇದ್ದಿರ… ಬಡಿವದೆ ಪ್ರೀತಿ ಹೇಳಿ ಅನಿಸಿ, ಅವ° ಅದಕ್ಕೆ ಒಗ್ಗಿ ಹೊಯಿದಾ° ಇಲ್ಲೆ ಪುಣ್ಯಕ್ಕೆ!!

    ಬಿಂಗಿ ಮಾಣಿ ಬೆಂಗ್ಲೂರಿಂಗೆ ಹೋಗಿ ಚೆಂದಲ್ಲಿ ಕಲಿವದರ ಒಟ್ಟಿನ್ಗೆ ದುಡುದು, ಪೈಸೆ ಸಂಪಾದನೆ ಮಾಡಿ, ಅವನ ಸಾಲ ಕಳುದು, ಅಮ್ಮಂಗೆ ಮದ್ದು ಮಾಡಿ ತಕ್ಕ ಮಟ್ಟಿ ನ್ಗೆ ಗುಣ ಮಾಡಿ ಅಪ್ಪಗ ಬಹುಷಃ ಅವಂಗೆ ಸಣ್ಣ ಇಪ್ಪಗ ಬಡುದ ಮಾವಂದ್ರಲ್ಲಿ ಆರಾರು ಒಬ್ಬ° ಆದರೂ ಮಗಳ ಜಾತಕ ಪಟ ಹಿಡ್ಕೊಂಡು ಬಕ್ಕೋ ಸಂಶಯ..!!!!!
    ಒಪ್ಪಣ್ಣ .., ಒಂದೊಪ್ಪ ಲಾಯಕ ಆಯಿದು…

  5. ಜೀವನದ ದ್ವಂದ್ವಂಗಳ ಮನಮುಟ್ಟುವ ಹಾಂಗೆ ನಿರೂಪಿಸಿದ್ದೆ ಒಪ್ಪಣ್ಣ !!

    “ಒಂದೊ ಮನೆಪರಿಸ್ತಿತಿ ಅರಡಿಯದ್ದ ಶಾಲೆಯ ಮಾಷ್ಟ್ರಕ್ಕೊ, ಅಲ್ಲದ್ರೆ ನಮ್ಮಾಂಗಿರ್ತ ಏನೂ ಅರಡಿಯದ್ದ ಚೆಂಙಾಯಿಗೊ..”

    ನಿಜವಾಗಿಯೂ ಪರಿಸ್ಥಿತಿಯ ಸರಿಯಾಗಿ ಅರ್ಥ ಮಾಡ್ಯೊಂಡು ಸಲಹೆ ನೀಡುವವು ವಿರಳ!!
    ಹಾಂಗಿಪ್ಪವು ಸಿಕ್ಕುವದು ಸೌಭಾಗ್ಯವೇ ಸರಿ.

    “ನಮ್ಮೋರು ನಮ್ಮ ಪರಿಸರಂದ ದೂರಹೋಪಲೆ ಕಾರಣ ನಮ್ಮ ಪರಿಸರವೇ! ಅಲ್ಲದೋ?”

    ಅಪ್ಪು, ಆದರೆ ಕೆಲವು ಸರ್ತಿ ಧನಾತ್ಮಕವಾಗಿ 🙂
    ಮತ್ತೆ ಕೆಲವು ಸರ್ತಿ ಋಣಾತ್ಮಕವಾಗಿ 🙁

    1. ಭಾರೀ ಲಾಯಿಕಲ್ಲಿ ಬರದ್ದೆ ಕೂಳಕ್ಕೂಡ್ಳಣ್ಣ!
      {ಮತ್ತೆ ಕೆಲವು ಸರ್ತಿ ಋಣಾತ್ಮಕವಾಗಿ }
      ಹೀಂಗಾಗದ್ದ ಹಾಂಗೆ ಆಯೆಕ್ಕು ಹೇಳಿ ಬೈಲಿನೋರ ಆಶಯ,
      ಅಲ್ಲದೋ? ಏ°?

  6. ಒಪ್ಪಣ್ಣೋ.. ಸತ್ಯ ಹೇಳ್ತೆ ಮಾರಾಯಾ.. ಭವಿಷ್ಯಲ್ಲಿ ಆ ಮಾಣಿ ಒಬ್ಬ ದೊಡ್ಡ ವೆಕ್ತಿ ಆವುತ್ತಾ°… ನಮ್ಮ ಬೈಲಿಲ್ಲಿ..ನಮ್ಮೋರು ಅಂಕಣಲ್ಲಿ ಅವನ ಹೆಸರು ಪಟ ಸಮೇತ ಬತ್ತು ನೋಡು….
    ಹಾಂಗೆ ವೈ.ವಿ. ಮಾವಂನ ಸಲಹೆಯ ನಾವು ಗಮನಸೆಕ್ಕು. ಅವಕ್ಕೊಂದು ಕೃತಜ್ಞೆಯನ್ನು ಸಲ್ಲಿಸೆಕ್ಕು..
    ಒಳ್ಳೆ ಲೇಖನ ಕೊಶಿ ಆತು….

    1. ಕೆಪ್ಪಣ್ಣೋ..
      { ವೈ.ವಿ. ಮಾವಂನ ಸಲಹೆಯ ನಾವು ಗಮನಸೆಕ್ಕು }
      ಅಪ್ಪಪ್ಪಾ – ನಿಜವಾಗಿಯೂ ಅದೊಂದು ವಜ್ರತುಲ್ಯ ಸಲಹೆ.. 🙂
      ನಾವೆಲ್ಲರೂ ಗಮನುಸುವ°, ಇನ್ನೂ ಹೆಚ್ಚು ಜೆನ ಹಾಂಗೆ ಇಪ್ಪವರ ಹುಡುಕ್ಕುವ°..

  7. ಅಪ್ಪು ಒಪ್ಪಣ್ಣ ಹೇಳುದು ಸರಿ ..
    ಜೆಮ್ಬ್ರ೦ಗಳಲ್ಲಿ ,ಹಂಗೂ ಇತರ ಕಡೆ ಅಗತ್ಯಂದ ಜಾಸ್ತಿ ಕರ್ಚು ಮಾಡಿ ಸಂಪತ್ತಿನ ಆರಿಂಗು ಉಪಯೋಗ ಇಲ್ಲದ್ದೆ ಹಾಳಪ್ಪಗ, ತಮ್ಮ ಸ್ಥಿತಿವಂತಿಗೆ ತೋರ್ಸುದರಿಂದ ಆರಾದರೂ ಇಂತ ಮಕ್ಕೊಗೆ ಉಪಕಾರ ಮಾಡಿರೆ ಸಂಪತ್ತಿನ ಸರಿಯಾದ ಉಪಯೋಗ ಅಕ್ಕಲ್ಲದ ಹೇಳಿ ಕಾಣ್ತು ಎನಗೆ..

  8. OPPANNA, LEKHANA INDRANA VASTAVIKEYA SARIYAGI BIDUSI MADUGIDA HANGE IDDU.DANYAVADA.

    1. ಶಾಂಬಾವಾ,
      ಚೆಂದದ ಒಪ್ಪಕ್ಕೂ ಧನ್ಯವಾದಂಗೊ.

      ಓದಿ, ಎಲ್ಲದಕ್ಕೂ ಒಪ್ಪ ಕೊಡಿ.
      ನಮಸ್ತೇ.

  9. ಭಾವಯ್ಯಾ…. ಗುರುಗಳ ಎದುರು ಅತೀ ಭಕ್ತಿ ತೋರ್ಸುವ ಓಂತಿಗೊ ಸುಮಾರು ಎನಗೂ ಗೊಂತಿದ್ದು…. ನಾಳ್ತು ಸಿಕ್ಕಿಪ್ಪಗ ಹೇಳ್ತೆ.

  10. ಎಂಚಿನ ಬಾಣಾರೆ ಉಂದು? ಭಾರೀ ಬ್ಯಾಜಾರ್ದ ಸಂಗತಿ ಪಂಡಾರ್. ಬೊಕ್ಕ ಬಾರೀ ಕೊಸಿಲಾ ಆಂಡ್, ನಮ್ಮ ಕಿಟ್ಟಣ್ಣೆರ್ನ ಬಾಲೆ ಇತ್ತೆ ಉಸಾರಾಯಿನ ಕೇಂಡ್ತ್. ದುಂಬಾಗ್ ಈ ಕಿಟ್ಟಣ್ಣೇರ್ನ ಅಡಿಗ್ಗೆ ಪಂಡ ಒಂಜಿ ಪುದಾರ್ ಪೋಯಿನ ಸಂಗತಿ ಅತ್ತಾ?
    ಮಾತೆರೆಗ್ಲಾ ಎಡ್ಡೆ ಆವಡ್.

  11. ಒಪ್ಪಣ್ಣನ ಲೇಖನ ಓದಿದ ಮತ್ತೆ ವಾಸ್ತವಕ್ಕೆ ಬರೆಕ್ಕಾರೆ ಹೊತ್ತು ಹಿಡುದತ್ತು.. ಒಂದೇ ಲೇಖನಲ್ಲಿ ಇಷ್ಟೆಲ್ಲ ವಿಷಯಂಗಳ ಕಲೆ ಹಾಕಿದ ಕೌಶಲ್ಯಕ್ಕೆ ಎಂತ ಹೇಳುದು! ಬಿಂಗಿ ಮಾಣಿಯ ಹಾಂಗಿಪ್ಪ ಹಲವಾರು ಸಂಗತಿಗೊ ನಮ್ಮ ಜೀವನಲ್ಲಿಯೊ ಅಥವ ನವಗೆ ಗೊಂತಿಪ್ಪೋರ ಜಿಇವನಲ್ಲಿಯೋ ನಡದ್ದದೆ/ನಡೆತ್ತಾ ಇಪ್ಪದೆ.. ಇಂಗ್ಲೀಷಿಲಿ ಒಂದು ಮಾತಿದ್ದು, Winners never quit, Quitters never win ಹೇಳಿ, ಸಾಧಿಸುವವ ಬಿಟ್ಟುಕೊಡ, ಬಿಟ್ಟುಕೊಟ್ಟವ ಏನೂ ಸಾಧಿಸ.. ಬದುಕು ಏವತ್ತಿದ್ದರು ಒಂದು ಹೋರಾಟವೇ, ಒಬ್ಬೊಬಂದು ಒಂದೊಂದು ನಮೂನೆಯ ಹೋರಾಟ ಅಷ್ಟೆ. ಗೆಲ್ಲುವ ಛಲ ಇದ್ದರೆ ಊರೇ ಎದುರು ನಿಂದರೂ ನಾವಗೆ ಬದ್ಕುವ ದಾರಿ ಇದ್ದೇ ಇರ್ತು, ಹುಡ್ಕುವ ಎದೆಗಾರಿಕೆ, ತಾಳ್ಮೆ ಬೇಕಷ್ಟೆ.. ಆರು ಬೈದರೆಂತ, ಆರು ಹೊಗಳಿರೆಂತ, ಎರಡುದೆ ಹೊಟ್ಟೆ ತುಂಬ್ಸ.. ಬಿಂಗಿ ಮಾಣೆ ಒಪ್ಪಣ್ಣ ಆಗಿ ಅವನ ಗುರಿಯ ಮುಟ್ಟಲ್ಲಿ ಹೇಳುದಷ್ಟೇ ಎನ್ನ ಹಾರೈಕೆ.. 🙂

  12. ಸಣ್ಣ ಪ್ರಾಯಲ್ಲಿ ಸರಿಯಾಗಿ ಬುದ್ಧಿ ಹೇಳ್ತವು ಇಲ್ಲದೆ ಇದ್ದಲ್ಲಿ ಬಿಂಗಿ ಪುಟ್ಟ° ಬಿಂಗಿಯಾಗಿಯೇ ಇದ್ದದು ನಾವು ನೋಡ್ತು.ಅವಕ್ಕೆ ಆ ಪ್ರಾಯಲ್ಲಿ ಸರಿಯಾದ ದಾರಿ ತೋರುಸುದು ಸಮಾಜದ್ದೂ ಜವಾಬ್ದಾರಿ.ನಮ್ಮ ಬೈಲಿಲ್ಲಿ ಇಪ್ಪ ಬಿಂಗಿ ಮಾಣಿಗೊ ಸರಿಯಾಕ್ಕಾದರೆ ನಮ್ಮ ಜವಾಬ್ದಾರಿ ಇದ್ದಲ್ಲದೋ?ಹಾಂಗಿಪ್ಪ ಒಬ್ಬ° ಮಾಣಿ ಇಂದು ರಾಮಜ್ಜನ ಕೊಲೇಜಿಲ್ಲಿ ಕಲ್ತು ಮತ್ತೆ ಮಂಗಳ ಗಂಗೊತ್ರಿಲಿ ಎಂ ಎಸ ಸಿ ಮಾಡಿ ಒಳ್ಳೆ ಕೆಲಸಲ್ಲಿ ಇದ್ದ°.ಅವ° ಎಸ ಎಸ ಎಲ್ ಸಿ ಕಲ್ತೊಂಡಿಪ್ಪಗ ಎನ್ನ ಹತ್ತರೆ ಬಕ್ಕು.ಅಂಬಗ ಅವ° ಎಲ್ಯಾರೂ ಬಿಕೊಂ ಮಣ್ಣೋ ಮಾಡಿದ್ದರೆ ಪುಟ್ಟಂಗೆ ಆದ ಹಾಂಗೆ ಬೆನ್ಗ್ಲುರಿಂಗೆ ಹೋಪಲೆ ಸಮಸ್ಯೆ ಆವುತಿತ್ತು.
    ಎಂತಕೂ ನಮ್ಮ ಬೈಲಿನ ಮಾಣಿಯನ್ಗೋ,ಕೂಸುಗಳುದೆ,ಒಳ್ಳೆದಾಯೇಕ್ಕಾರೆ ನಾವು ನಮ್ಮಂದ ಅಪ್ಪ ಸಾಕಾಯ ಮಾಡೆಕ್ಕಲ್ಲದ್ದೆ ಕಳ್ಳ ಸುಳ್ಳ ಹೇಳಿ ಅವರ ಧೈರ್ಯ ಕಮ್ಮಿ ಅಪ್ಪ ಹಾಂಗೆ ಮಾಡುದು ನವಗೆ ಹೇಳಿದ್ದಲ್ಲ.

    1. ಓ ಬಟ್ಯ,
      ಎಂತ, ಯಾವಗ್ಳೂ ದನಿಕ್ಕುಳೆ ದನುಕ್ಕುಳೆ ಹೇಳ್ತದು ಇಂದು ಪುಟ್ಟಣ್ಣೇರು ಹೇಳಿದೆ?
      ಉಂಡಿಕ್ಕಿ ಆಯಿದು, ಬಾ – ನಿನಗೆ ಉಂಡಾಗದ್ರೆ ಉಂಬಲಕ್ಕು.

      ಬೈಲಿಲಿ ಎಲ್ಲೋರ ಕೈಲಿ ಮಾತಾಡಿಕ್ಕಿ ಹೋಗು.. ಆತಾ?

  13. Paapadavu helire sasaara allada oppanno…
    adrusta aarindu henge aavuttu heli aaringu gontille. makkala manasina hiriyoru artha maadigolekku allada oppanno.

    heengippa novu yava bingi puttangu bappadu bedappa.
    makkala manasinge santhosha kodle ediyadre novu kodadre aatu. adu parama punya.
    doddoringe badathana hashu gontirthille.”doddoru tindare hashu appadakke papadavu tindare kodi appadakke”…hangondu gaade..

    doddorude olle hrudayadavu iddavu elloru pisuntugo alla.
    bingi puttange good luck..olledagali

    1. ಅಮ್ಮಾ.. ಶುದ್ದಿಗೆ ಕೊಟ್ಟ ಒಪ್ಪ ತುಂಬ ಒಳ್ಳೆದಿದ್ದು.
      { doddorude olle hrudayadavu iddavu elloru pisuntugo alla. }
      – ಅಪ್ಪಪ್ಪಾ, ತುಂಬಾ ಸರಿ. ಎಲ್ಲಾ ನಮುನೆಯವು ಎಲ್ಲಾ ದಿಕ್ಕೆ ಇದ್ದವು. ವಿಪರ್ಯಾಸ ಎಂತರ ಹೇಳಿರೆ – ಅಂತವು ಎಲ್ಲೊರಿಂಗೂ ಸಿಕ್ಕುತ್ತವಿಲ್ಲೆ.

      ಪುಟ್ಟಂಗೆ ಒಳ್ಳೆದಾಗಲಿ, ನವಗೂ.

  14. ಹೆಚ್ಚಿನ ಮಕ್ಕಳ ಕಥೆ ಇದೇ ರೀತಿ ಇರ್ತು ಅಲ್ಲದಾ? ಕೆಲವರಿಂದು ಸಣ್ಣ ಮಟ್ಟಿಂದು ! ಕೆಲವರದ್ದು ದೊಡ್ಡ ದುಃಖದ ಕಥೆ. ಪರಿಣಾಮ ಮಕ್ಕಳ ಮನಸ್ಸಿನ ಮೇಲೆ ಅಪ್ಪದೇ ಅಲ್ಲದ?

  15. ಈ ಲೇಖನ ಓದುವಾಗ, ಮನಸ್ಸಿಂಗೆ ಮುಟ್ಟುವ ಬರದ ಶೈಲಿಗೆ ಕೊಶಿ ಆದರೆ, ಒಳಾಣ ವಿಶಯಂಗೊ ಅಲೋಚನೆಗೆ ಎಡೆ ಮಾಡುತ್ತು.
    ಒಂದು ಸಂದರ್ಭ:
    ಒಂದು ಕುಟುಂಬದವು, ಅವರ ಮಾಣಿಯ ಸಂಬಂದಿಕರಲ್ಲಿಗೆ ಕರಕ್ಕೊಂಡು ಹೋದವು. ಆಲ್ಲಿಗೆ ಎತ್ತಿದ ಮಾಣಿ, ಸಿಕ್ಕಿದ್ದೆಲ್ಲಾ ಎಳದು ಹಾಕಿ, ಪೆನ್ನೋ, ಟೋರ್ಚೋ,ಅಲ್ಲಿಪ್ಪ ಆಟದ ಸಾಮಾನೋ ಸಿಕ್ಕಿದ್ದರ ಬಿಡುಸಿ, ನೆಲಕ್ಕೆ ಇಡ್ಕಿಂಡು ಇದ್ದರೆ ಅವನ ಅಪ್ಪ ಅಮ್ಮ ಅವರದ್ದೇ ಮಾತಿಲ್ಲಿ ಮುಳುಗಿ ಹೋಗಿರ್ತವು. ಈ ಮಾಣಿಯ ಲೂಟಿ ಅವಕ್ಕೆ ಗೊಂತಾವುತ್ತಿಲ್ಲೆ. “ಎಂಗಳ ಮಾಣಿ ಮುಂದೆ ಎಂಜಿನಿಯರ್ ಆವುತ್ತ ಲಕ್ಷಣ ಇದ್ದು. ಈಗಳೇ ಎಲ್ಲದರನ್ನೂ ರೆಪೇರಿ ಮಾಡ್ಲೆ ಕಲಿತ್ತಾ ಇದ್ದ” ಹೇಳಿ ಶಭಾಸ್ ಗಿರಿ ಕೊಡ್ತವು.
    ಈಗ ಅವರ ಮನೆಗೆ ಬಂದ ಬೇರೆ ಒಬ್ಬ ಮಾಣಿ ಈ ರೀತಿ ಮಾಡಿರೆ ” ಅಬ್ಬಾ, ಅವನ ಲೂಟಿಯೇ, ಅಪ್ಪ ಅಮ್ಮ ಸುಮ್ಮನೆ ನೋಡಿಂಡು ಕೂಯಿದವು. ಆನು ಆಗಿದ್ದರೆ ಎರಾಡು ಬೀಸುತ್ತಿತ್ತೆ” ಹೇಳುಗು.
    ಇಲ್ಲಿ ನೋಡುವ ದೃಷ್ಟಿ ಬೇರೆ ಬೇರೆ. ತನ್ನ ಮಕ್ಕೊ ಮಾಡಿರೆ ಸರಿ, ಬೇರೆ ಮಕ್ಕೊ ಮಾಡಿರೆ ಪೋಕ್ರಿತನ. ಎರಡು ಮಕ್ಕಳೂ ಮಾಡಿದ್ದು, ತಿಳಿವ ಕುತೂಹಲಂದ.
    ನಮ್ಮ ಕತೆಲಿ ಬಪ್ಪ ಮಾಣಿ, ಸಣ್ಣ ಇಪ್ಪಗಂದಲೇ ಬೇರೆಯವರಿಂದ ಬೈಸಿಗೊಂಡು, ಪೆಟ್ಟು ತಿಂದೊಂಡು, ಕಳ್ಳನ ಪಟ್ಟ ಕಟ್ಟಿಸಿಗೊಂಡು, ಅವನ ಮನಸ್ಥಿತಿ ಹೇಂಗೆ ಇಕ್ಕು? ಅವಂಗೆ ಸಮಾಜದ ಬಗ್ಗೆ, ಊರಿನ ಬಗ್ಗೆ ತಿರಸ್ಕಾರ ಅಲ್ಲದ್ದೆ ಬೇರೆ ಎಂತ ಇಕ್ಕು?. ಊರು ಬಿಟ್ಟು ಬೇರೆ ಹೋಯೆಕ್ಕು ಹೇಳಿಯೇ ಕಾಂಗು ಅವಂಗೆ.
    ಕಷ್ಟ ಪಟ್ಟು ದುಡಿತ್ತ, ಕಲಿತ್ತ, ಅಬ್ಬೆಯ ಆರೋಗ್ಯವ ನೋಡಿಗೊಳ್ತ. ಇನ್ನೂ ಕಲಿಯೆಕ್ಕು, ಜೀವನಲ್ಲಿ ಮುಂದೆ ಬರೆಕು ಹೇಳಿ ಬಙ ಬತ್ತ. ಇವ ಬಿಂಗಿ ಮಾಣಿಯೋ?
    ನಾವೆಲ್ಲ ಒಂದು ಆಲೋಚನೆ ಮಾಡೆಕ್ಕು:
    ನಮ್ಮ ಹುಟ್ಟು ನಮ್ಮ ನಿರ್ಧಾರಂದ ಬಪ್ಪದು ಅಲ್ಲ. ನಮ್ಮ ಅಬ್ಬೆ ಅಪ್ಪನ ನಾವು ಆಯ್ಕೆ ಮಾಡುವದು ಅಲ್ಲ. ಆತ್ಮಕ್ಕೆ ಒಂದು ಜಾಗೆ ತೋರಿಸಿಕೊಡುವದು ದೇವರು. ಎಲ್ಲರಲ್ಲಿಯೂ ಒಂದು ಆತ್ಮ ಇದ್ದು ಹೇಳಿ ಅದಕ್ಕೆ ಗೌರವ ಕೊಡುವದು ಮುಖ್ಯ. ಅವ ಆರ ಹೊಟ್ಟೆಲಿ ಹುಟ್ಟಿದ ಮಾಣಿಯೇ ಆದಿಕ್ಕು, ಕೂಸು ಆದಿಕ್ಕು, ಅಲ್ಲಿಪ್ಪ ಆತ್ಮಕ್ಕೆ ಗೌರವ ಇದ್ದು.
    ಲೇಖನಲ್ಲಿ ಮನಸ್ಸಿನ ಕಲಸಿದ ಸಾಲುಗೊ:
    ಒಪಾಸು ಮಾತಾಡ°, ಅಷ್ಟೇ ಅಲ್ಲ, ಅವನ ಪರವಾಗಿ ಕೇಳುವೋರು ಆರುದೇ ಇಲ್ಲೆ.
    ಆ ಲೂಟಿಮಾಣಿ ಗುರುಗಳ ಎದುರುದೇ ನಿಂದು ಲೂಟಿಮಾಡುದು ಬೇಡ, ಊರಿನ ಮರಿಯಾದಿ ಕಳವದು ಬೇಡ – ಹೇಳಿಗೊಂಡು ಬುದ್ದಿವಂತಿಕೆ ತೋರುಸಿದ°
    ಬಾಲ್ಯದ ಮಧುರ ನೆಂಪುಗೊ ಒಳೆಯೇಕಾದ ಜಾಗೆಲಿ ಹೀಂಗಿರ್ತ ಆಪಾದನೆ, ಬೇಜಾರು, ಬೈಗಳು – ಇಂತದೇ ತುಂಬಿ ಹೋಯಿದು!

  16. ಒಪ್ಪಣ್ಣ,
    ವಿಷಾದದ ಸಂಗತಿಗಳ ವಿಷದವಾಗಿ ಮನಸ್ಸಿಂಗೆ ತಟ್ಟುವ ಹಾಂಗೆ ಬರದ್ದೆ. ಸಣ್ಣ ಇಪ್ಪಗ ಬಿಂಗಿ ಆಗಿ ಇಪ್ಪವೇ ದೊಡ್ಡ ಅಪ್ಪಗ ಹುಶಾರು ಅಪ್ಪದು. ದೊಡ್ಡವಕ್ಕೆ ಅವು ಮಾಡುವದು ಬಿಂಗಿ ಹೇಳಿ ಕಾಂಗು. ಆದರೆ ಅವಕ್ಕೆ ಅದು ವಿಷಯವ ತಿಳಿವ ಕುತೂಹಲ, ಅದಕ್ಕೆ ಬೇಕಾದ ಪ್ರಯತ್ನ.
    ಒಬ್ಬ ಮಾಣಿಗೆ (ಕೂಸಿಂಗೂ) ಸಣ್ಣ ಇಪ್ಪಗ ಹೆತ್ತವರ ಆಶ್ರಯ ತುಂಬಾ ಮುಖ್ಯ. ಅದು ಇಲ್ಲದ್ದರೆ, ಬೇರೆಯವಕ್ಕೆ ಸಸಾರ. ಜೋರು ಮಾಡ್ಲೆ, ಬಡಿವಲೆ,ಕಳ್ಳನ ಪಟ್ಟ ಕಟ್ಲೆ ಬೇಕಾಷ್ಟು ಜೆನಂಗೊ ಇಕ್ಕು. ಆ ದೊಡ್ದವರ ಆಶಯ ಅವನ ಕುತೂಹಲವ ತಣಿಸಲೆ ಅಲ್ಲ, ಬದಲಿಂಗೆ ಅವರವರ ತೀಟೆ ತೀರುಸಲೆ ಮಾತ್ರ.
    ಬೇರೆಯವರ ಮಕ್ಕಳಲ್ಲಿ ತನ್ನ ಮಕ್ಕಳನ್ನೋ, ಪುಳ್ಳಿಯಕ್ಕಳನ್ನೋ ಕಾಂಬ ಮನಸ್ಸು ಮಾಡಿರೆ, ಈ ಮಾಣಿಗೆ ಬಂದ ಕಷ್ಟ ಬೇರೆಯವಕ್ಕೆ ಬಾರ.

  17. Tumba laikkaidu barada shaily.Aadare kathe kelidare bejaravuthu.oppanna hangippavu aradaru iddare helu.Bengalurilli avakke kalusuva vyvaste madua.Nammanda aaringadaru sahaya avuthare aagali.Ella makkoge kalivale edigadastu sahaya madule indu bekadasthu jena iddovu.Yerady kadeya hondisekku asthe.Oppannainda adu aagali.

    1. ವೈವೀ ಮವಾ°.. ತುಂಬಾ ಕೊಶಿ ಆತು ನಿಂಗಳ ಒಪ್ಪ ಕಂಡು.

      ವಿಶೇಷವಾಗಿ ನಿಂಗೊ ಹೇಳಿದ ಮಾತು, { Bengalurilli avakke kalusuva vyvaste madua } – ಇದು ನಿಜವಾಗಿಯೂ ಮನಸ್ಸು ಮುಟ್ಟಿತ್ತು. ಸವುಕರಿಯ ಇಪ್ಪವು ಧಾರಾಳ ಇದ್ದವು, ದೊಡ್ಡಮನಸ್ಸು ಇಪ್ಪವು ತುಂಬಾ ಕಮ್ಮಿ ಜೆನ – ನಿಂಗೊ ಅವರಲ್ಲಿ ಒಬ್ಬ°. ಬೈಲಿನವರ ಹಾರಯಿಕೆ, ಒಪ್ಪ – ನಿಂಗೊಗೆ ಸದಾ ಸಿಕ್ಕುತ್ತು.

      ಖಂಡಿತವಾಗಿಯೂ, ಅಂತಾ ಅಗತ್ಯತೆ ಬಂದದು ಗೊಂತಾದರೆ ನಿಂಗೊಗೆ ತಿಳುಶುತ್ತೆಯೊ°..
      ಬೈಲಿಂಗೆ ಬಂದೋಂಡಿರಿ,
      ಪ್ರೀತಿಂದ,
      ~
      ಒಪ್ಪಣ್ಣ

  18. “ಒಪಾಸು ಮಾತಾಡ°, ಅಷ್ಟೇ ಅಲ್ಲ, ಅವನ ಪರವಾಗಿ ಕೇಳುವೋರು ಆರುದೇ ಇಲ್ಲೆ.”- ಇದರ ಓದಿ ಬೇಜಾರಾತು…
    ಆ ಅವಲಕ್ಕಿ ಸರ ವಾಪಾಸು ಸಿಕ್ಕಿಯಪ್ಪಗ ಅದಕ್ಕೆ ಯಾವ ಪ್ರಚಾರ ಸಿಕ್ಕದ್ದೇ ಇದ್ದ ವಿಷಯ ಕೇಳಿಯುದೆ ತುಂಬಾ ಬೇಜಾರಾತು.ಛೆ…
    ಗುರುಗೋ ಬಂದಿಪ್ಪಗ ಈ ಮಾಣಿಯ ಸಾಲಿಂದ ಏಳ್ಸಿ ಅತಿಬುದ್ದಿವಂತಿಕೆ ತೋರ್ಸಿದ ಆ ದೊಡ್ಡ ಮನುಷ್ಯ ಇಂದು ಈ ಬೈಲಿನ ಎಲ್ಲೋರಾ ದೃಷ್ಟಿಲಿ ತೀರ ಸಣ್ಣ ಜನ ಆದ…
    ಕಾರಣ ತಿಳಿಯದ್ದೆ ಬೇರೆಯವರ ಮಕ್ಕೊಗೆ ಬಯ್ವವಕ್ಕೆ ಇದು ಒಳ್ಳೆ ಪಾಠ ಆಗಲಿ…ಮಕ್ಕಳ ಭಾವನೆಗೊಕ್ಕೆ ಬೆಲೆ ಕೊಡಲೇ ಕಲಿಯಲಿ….
    ಪುಟ್ಟಂಗೆ ರೇಂಕು ಖಂಡಿತ ಬಕ್ಕು… ಅವನ ಭವಿಷ್ಯ ಒಳ್ಳೆದಾಗಲಿ ಹೇಳಿ ಹಾರೈಸುವೋ…

  19. ಬಿಂಗಿ ಪುಟ್ಟನ ಕಥೆ ಕೇಳಿ ತುಂಬಾ ಬೇಜಾರು ಆತು. ಡಿಗ್ರಿಲಿ ಅವಂಗೆ ಒಳ್ಳೆ ರೇಂಕು ಬಂದೇ ಬಕ್ಕು. ಅವನ ಕಷ್ಟಂಗಳ ಎಡೆಲಿ ಅವನ ಸಾಧನೆ ನೋಡಿರೆ, ಅವ ಮುಂದೆ ಸಿಎ ಮಾಡಿಯೇ ಮಾಡುತ್ತ. ಅವನ ಅಮ್ಮಂಗೂ ಮದ್ದು ಮಾಡಿ ಗುಣ ಮಾಡ್ಳೆಡಿಗು. ಅವಂಗೆ / ಅವನ ಹಾಂಗ್ರುತ್ತವಕ್ಕೆ ಉಜ್ವಲ ಭವಿಷ್ಯ ಖಂಡಿತಾ ಇದ್ದು. ಅವಕ್ಕೆ ಒಳ್ಳೆದಾಗಲಿ. ಗುರುಗಳ ಎದುರು ಪುಟ್ಟ ತಂದ ದೊಡ್ಡ ತೆಂಗಿನಕಾಯಿ ಲಪಟಾಯಿಸಿದ ದೊಡ್ಡ ಮನುಷ್ಯನ ರೀತಿಯವಕ್ಕೆ ದೇವರು ಒಳ್ಳೆ ಬುದ್ಧಿ ಕೊಡ್ಳಿ.

  20. ಬಿಂಗಿಪುಟ್ಟನ ಕಥೆ ಕೇಳುವಗ ಪಾಪ ಹೇಳಿ ಕಾಣ್ತು.. ಕಲಿವಲೆ ಹೇಳಿ ಇಲ್ಲಿಗೆ ಬಂದೋನಿಂಗೆ ಒಳ್ಳೆದಾಗಲಿ.. ಕೆಟ್ಟ ಸಂಗ ಮಾಡದ್ದೆ,ಕೊಳಕ್ಕು ಅಭ್ಯಾಸಂಗಳ ಬೆಳೆಶಿಗೊಳ್ಳದ್ದೆ ಅಮ್ಮನ ನೆಂಪು ಮಡಿಕ್ಕೊಂಡು ಲಾಯಿಕ್ಕಲಿ ಓದಿದರೆ ಅಕ್ಕು… ಇಲ್ಲಿ ಕಲಿವಲೆ ಹೇಳಿ ಬಂದೋರು ಲಂಗು ಲಗಾಮು ಇಲ್ಲದ್ದೆ ಹಾಳಪ್ಪ ಉದಾಹರಣೆಗಳೂ ಇದ್ದು…
    ಕೆಲಸ ಮಾಡಿಗೊಂಡು ಕಲಿವದು ಒಳ್ಳೆ ಕ್ರಮ.. ಆವಗ ಜವಾಬ್ದಾರಿ ಇರ್ತು,ಪೈಸೆ ಮಾಡ್ಲೆ ಎಷ್ಟು ಕಷ್ಟ ಇದ್ದು ಹೇಳಿದೆ ಗೊಂತಾವುತ್ತು..ವಿದೇಶಲ್ಲಿ ಮಕ್ಕೊ ಅವರ ಖರ್ಚಿನ ಪೈಸೆ ಅವ್ವೇ ಕೆಲಸ ಮಾಡಿ ದುಡಿವದಡ್ದ,ಅದು ಒಂದು ರೀತಿಲಿ ಒಳ್ಳೆ ಕ್ರಮ… ಯಾವ ಕೆಲಸವೂ ಸಣ್ಣ ಅಥವಾ ದೊಡ್ಡ ಅಲ್ಲ.. ಹಾಂಗಾಗಿ ಯಾವ ಕೆಲಸ ಮಾಡ್ಲೂ ನಾಚಿಗೆ ಅಪ್ಪಲಾಗ… ಹೀಂಗಿಪ್ಪ ಮನೋಭಾವ ಮಡಿಕ್ಕೊಂಡರೆ ಬಿಂಗಿಮಾಣಿಗೂ ಜೀವನಲ್ಲಿ ಮೇಲೆ ಬಪ್ಪಲೆ ಎಡಿಗು..ಮಾಣಿಗೆ ಒಳ್ಳೆದಾಗಲಿ..ನಮ್ಮ ಗುರುಗಳ ಆಶೀರ್ವಾದ ನಾವು ಎಲ್ಲಿಯೇ ಇರಲಿ ನಮ್ಮ ಮೇಲೆ ಇರ್ತು.. 🙂

  21. ವಿಶ್ಯ ನಿರೂಪಣೆ ಭಾರೀ ಲಾಯಿಕ ಆಯಿದು ಒಪ್ಪಣ್ಣ…
    ಬಾಕಿದ್ದೋರಲ್ಲಿ ಇಪ್ಪ ಸಂಶಯ ಪಿಶಾಚಿಗೆ ಬಿಂಗಿ (ಒಪ್ಪ) ಮಾಣಿ ಆಹಾರ ಆದ ಶುದ್ಧಿ ನಿಜವಾಗಿಯೂ ವ್ಯಥೆಯ ಕಥೆ.
    ನೀರ್ಕಜೆ ಅಪ್ಪಚ್ಚಿ ಹೇಳಿದ್ದುದೆ ಅಲ್ಲದ್ದದಲ್ಲ…. ಮನೆ – ಮನಸ್ಸು ಎರಡೂ ಊರಿಲ್ಲಿದ್ದು ಸಾಲಕ್ಕಾಗಿ ಪೇಟೆಲ್ಲಿ ದೇಹ ಮಡುಗಿದವಕ್ಕುದೇ ಕಮ್ಮಿ ಎಂತ ಇಲ್ಲೆ…..

  22. ಲಾಯಿಕ ಆಯಿದು ಬರವಣಿಗೆ. ಬಿಂಗಿ ಪುಟ್ಟ ಬೆಂಗೂರಿಂಗೆ ಬಂದದಕ್ಕೆ ಬೇಜಾರಿಲ್ಲೆ. ಅವನ ಅಮ್ಮ ಹುಶಾರಾಗಲಿ. ಮೊದಲು ಹೆತ್ತ ತಾಯಿಯ ಕಷ್ಟ ಯೋಚನೆ. ಆಮೇಲೆ ತೋಟ ಮಣ್ಣು ಮಸಿ ಎಲ್ಲ..

    ಆದರೆ ಒಂದು ವಿಷಯ ಇದ್ದು. ಒಪ್ಪಣ್ಣ ಹೇಳಿದ ಹಾಂಗಿಪ್ಪ ಕೇಸುಗೊ ನೂರರಲ್ಲಿ ಹತ್ತೋ ಹೆಚ್ಚೇಳಿರೆ ಇಪ್ಪತ್ತೋ ಇಕ್ಕು. ಒಳುದೆವೆಲ್ಲ ಬೇರೆ ಬೇರೆ ಕಾರಣಕ್ಕೆ ಬೈಂದವು :

    ೧. ಆರೋ ಹೇಳಿಯೋ, ಎಲ್ಲರೂ ಕಲಿತ್ತವು ಹೇಳಿಯೋ ಕಲ್ತದು – ಕಲ್ತಪ್ಪಗ ಕೆಲಸ ಸಿಕ್ಕಿತ್ತು, ಸಂಬಳ ಬಂತು. ಅಷ್ಟು ಸುಲಭಲ್ಲಿ ಪೈಸ ಎಲ್ಲಿ ಸಿಕ್ಕುತ್ತು? ಹಾಂಗೆ ಅದನ್ನೇ ಒಪ್ಪಿಯೊಂಡು ಬೆಂಗೂರಿಲೇ ಸೆಟ್ಲ್ ಆದ್ದು.
    ೨. ಮನೆಲಿ ಕರ್ಚಿಂಗೆ ತಕ್ಕ ಇದ್ದಷ್ಟೆ. ಪೇಟೆಗೆ ಹೋದರೆ ಸವಲತ್ತುಗೊ ಬತ್ತು – ಕಾರು ಕಂಪೀಟರು ಮಾರ್ಬಲು ಮನೆ ಇತ್ಯಾದಿ. ಹೀಂಗಿಪ್ಪಗ ಸಗಣ/ಕಾವಿ ನೆಲದ ಹಳೆ ಮನೆಲಿ ಕೂದೊಂಡು ದನದ ಚಾಕರಿ ಮಾಡ್ತ ಜಂಬ್ರ ಆರಿಂಗೆ ಬೇಕು? ಅದಕ್ಕೇ ಬೆಂಗೂರಿಲಿ ಸೆಟ್ಟ್ಲ್.
    ೩. ಮನೆಲಿ ಆ ಜಮಾನಕ್ಕೆ ತಕ್ಕಾಂಗೆ ಬೇಕಾಷ್ಟು ಇತ್ತು. ಹಾಂಗೆ ಮಗಂಗೆ/ಮಗಳಿಂಗೆ ಒಳ್ಳೆ ಒಳ್ಳೆ ಕಾಲೇಜಿಲಿ ಕಲಿವಲೆ ಅವಕಾಶ ಸಿಕ್ಕಿತ್ತು. ಅಷ್ಟೆಲ್ಲ ಮಾಡಿದ ಮೇಲೆ ಮನೆಲಿ ಅಡಕ್ಕೆ ಹೆರ್ಕುದೋ? ಅದಕ್ಕೇ ಬೆಂಗೂರಿಲಿ ಸೆಟ್ಲ್ ಆದ್ದು.
    ೪. ಮನೆಲಿ ಜಾಸ್ತಿ ಉತ್ಪತ್ತಿ ಎಂತ ಇತ್ತಿಲ್ಲಿ. ಆದರೂ ಅಪ್ಪ ಮಗನ/ಮಗಳ ಕಷ್ಟ ಪಟ್ಟು ಓದ್ಸಿತ್ತಿದವು. ಅಲ್ಲಿ ಇಲ್ಲಿ ಸಾಲ ಮಾಡಿ. ಅಷ್ಟು ಓದಿದ ಮೇಲೆ ದನದ ಚಾಕರಿ ಮಾಡುದ? ಸಾಲ ತೀರ್ಸುದು ಆರು? ಅದಕ್ಕೇ ಬೆಂಗೂರಿಲಿ ಸೆಟ್ಲ್ ಆದ್ದು.

    ಹೀಂಗೆ ಒಬ್ಬೊಬ್ಬಂದು ಒಂದೊಂದು ಕಥೆ. ಆದರೂ ಕ್ಲೈಮಾಕ್ಸ್ ಎಲ್ಲ ಒಂದೆ. ಬೆಂಗೂರಿಲಿ ಸೆಟ್ಟ್ಲ್ ಅಪ್ಪದು. ತಪ್ಪೋ ಸರಿಯೋ ಅದರೆಲ್ಲ ಯೋಚನೆ ಮಾಡುಲೆ ಆವುತ್ತೋ ಅಲ್ಲದಾ? ಅವರವರ ಮನೆ ಕಥೆ ಅವಕ್ಕೇ ಸರಿ. ಇನ್ನೊಬ್ಬಂಗೆ ಹೇಳುಲೆ ಅರಡಿಯ. ಹಿರೀಕರು ಹೇಳಿಯೊಂಡಿತ್ತಿದವಲ್ಲ – ಹೇಂಗೆಂಗೆ ಆಯೆಕ್ಕೋ ಹಾಂಗಾಂಗೇ ಅಪ್ಪದು ಹೇಳಿ – ಅಷ್ಟೆ ಹೇಳಿ ತಿಳಿಯೆಕ್ಕಷ್ಟೆ.

    1. ಅಪ್ಪಚ್ಚೀ,
      { ಆದರೂ ಕ್ಲೈಮಾಕ್ಸ್ ಎಲ್ಲ ಒಂದೆ. ಬೆಂಗೂರಿಲಿ ಸೆಟ್ಟ್ಲ್ ಅಪ್ಪದು. }
      ಇದುದೇ ಅಷ್ಟೆಂತ ಒಳ್ಳೆ ಬೆಳವಣಿಗೆ ಅಲ್ಲ ಅಲ್ಲದ ಅಪ್ಪಚ್ಚಿ?

      ತಾತ್ಕಾಲಿಕ ಪರಿಹಾರ ಸರಿ, ಆದರೆ ಅಶಾಶ್ವತ, ಅಲ್ಲದೋ? ಏ?

      1. {ಇದುದೇ ಅಷ್ಟೆಂತ ಒಳ್ಳೆ ಬೆಳವಣಿಗೆ ಅಲ್ಲ ಅಲ್ಲದ ಅಪ್ಪಚ್ಚಿ}
        ಎನ್ನ ಪ್ರಕಾರ ಅಲ್ಲ. ಮತ್ತೆ ಜಾಸ್ತಿ ಹೇಳುಲೆ ಗೊಂತಿಲ್ಲೆನ್ನೆ.. ಅವರವರ ಭಾವಕ್ಕೆ ತಕ್ಕಂತೆ.. ಊರಿಲಿ ಕೂದೊಂಡು ಜಾಸ್ತಿ ಪೈಸೆ ಮಾಡುಲೆ ಎಡಿಯ. ಅದರಲ್ಲಿ ಎರಡು ಮಾತಿಲ್ಲೆ. ಆದರೆ ಮನಸ್ಸು ಮಾಡಿರೆ ಸರಳ ಜೀವನ ನಡೆಸುಲೆ ಅಡ್ಡಿಲ್ಲೆ. ಆರೆ ಈಗಾಣ ಕಾಲಲ್ಲಿ ಸರಳ ಜೀವನ ಹೇಳ್ತು ನಗೆಪಾಟಲಿಗೀಡಪ್ಪಂಥ ವಿಷಯ ಇದಾ.. ಗಾಂಧಿಯ ತತ್ವಂಗಳ ಕೊಂದೋರು ನಾವೇ ಅಲ್ಲದ.. ಮತ್ತೆಂತ ಹೇಳುಲೆಡಿಗು ಭಾವ??

        1. ಬೇರೆವರ ಎದುರಿಲಿ ದೊಡ್ಡ ಜನ (ಒಳ್ಳೆವ) ಅಪ್ಪಲೆ ಹೋಗಿ, ನಮ್ಮತನವ ಕಳಕ್ಕೊಂಡು ಬದುಕ್ಕುದು ಒಂದು ರೀತಿ ಬದುಕೇ ಅಲ್ಲ!!! ನಾವು ನವಗೆ ಬೇಕಾದ್ದಕ್ಕಿಂತಲೂ, ಬೇರೆವಕ್ಕೆ ಬೇಕಾದಂಗೆ ಬದುಕುವ ಒಂದು ಸಂಕುಚಿತ ಮನೋಭಾವ ನಮ್ಮದು… !!! ಅಂವ ಎಂತ ತಿಳ್ಕೊಳ್ತಾ !!! ಬೇರೆವು ಎಂತ ಗ್ರೆಶುತ್ತವು!!!, (ಗ್ರೆಶುತ್ತವ ಇಲ್ಲೆಯ ಹೇಳಿ ಗೊಂತಿಲ್ಲೇ!!, ನಾವು ಕೇಳ್ತು ಇಲ್ಲೆ!!!)….

        2. ಅಪ್ಪಚ್ಚಿ, ಕಣ್ಣು ಮುಟ್ಟದ್ದ ಹಾಂಗೆ ಆನಿದ್ದೆ.. 🙂 ಬೆಂಗ್ಳೂರು ಬಿಟ್ಟು ಊರಿಲಿ ಸೆಟ್ಲ್ ಆಯ್ದೆ 🙂 ಬೆಂಗ್ಳೂರಿನಂತ ಊರಿಲಿ ಪೈಸ ಆಕ್ಕು, ಆದರೆ ನೆಮ್ಮದಿ ಮತ್ತೆ ಆರೋಗ್ಯ? 🙂 ಯಕ್ಷಪ್ರಶ್ನೆ!

          1. ಆದರ್ಶ ಮಾವ ನಿಂಗೊ ಎಂತ ಸೆಟ್ಲ್ ಆದ್ರೆ ಕೆಲ್ಸ ಹೇಂಗೆ ಮಾಡುದೋ..? ಈ ಯಕ್ಷ ಪ್ರಶ್ನೆ ಎಲ್ಲ ಎವಾಗ ಶುರು ಮಾಡಿದ್ದು ನಿಂಗೊ..?

          2. ಒಳ್ಳೆದು.. ನಿಂಗ ಹಾಕಿಕೊಟ್ಟ ಮೇಲ್ಪಂಕ್ತಿಲಿ ಎಂಗಳುದೆ ಬತ್ತಾ ಇದ್ದೆಯ.. ನಿಂಗಳ ಅನುಭವ ಹೇಳಿರೆ ಚೂರು ಉಪಕಾರ ಅಕ್ಕು ಎಂಗೊಗೆ ಇದ.. 🙂

  23. ಬರದ್ದು ಭಾರೀ ಲಾಯ್ಕಾಯಿದು.
    ಹೀಂಗಿಪ್ಪ ಸುಮಾರು ಘಟನೆಗೊ ನಮ್ಮ ಊರಿಲಿ ಆಯಿದು. ಜಾಗತೀಕರಣಂದ ಆಗಿ ಸುಮಾರು ಉಪದ್ರಂಗೊ ಆದರುದೆ ಉದ್ಯೋಗಂಗೊ ಸುಮಾರು ಸೃಷ್ಟಿ ಆಯಿದು. ಸುಮಾರು ಜನ ನಮ್ಮ ಪೀಳಿಗಯವಕ್ಕೆ ಸ್ವಾಭಿಮಾನಂದ ಬದ್ಕುಲೆ ಅಪ್ಪ ಹಾಂಗೆ ಆಯಿದು.
    ಇದರ ಇನ್ನೊಂದು ಮುಖ ನಮ್ಮ ಹಳ್ಳಿಗೊ ಖಾಲಿ ಅಪ್ಪದು. (ಯುವಕರು ಹೆಚ್ಚಿನವು ಪೇಟೆಗೆ ಹೋಪ ಕಾರಣ). ಎರಡೂ ಒಂದು balence ಲಿ ಇರೆಕ್ಕಷ್ಟೆ.
    ಒಳ್ಳೆ ಲೇಖನ.

    ನಮಸ್ಕಾರ,
    ಮುರಳಿ

    1. ನಿಂಗ ಹೇಳಿದ್ದು ಅಕ್ಷರಶಃ ಸತ್ಯ!!! ಹೀಂಗೆ ಆದರೆ ನಮ್ಮ ಹಳ್ಳಿಗೋ ವ್ರದ್ಧಾಶ್ರಮ ಅಪ್ಪದರ್ಲಿ ಸಂದೇಹವೇ ಇಲ್ಲೆ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×