- ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ? - September 28, 2017
- ನೆಗೆ ಚಿತ್ರಂಗೊ - September 19, 2015
- ಹಸುರು ದಿನಿಗಿತ್ತೆನ್ನ ಮತ್ತೊಂದರಿ - July 13, 2015
(ಈ ಕತೆಲಿ ಬಪ್ಪ ಎಲ್ಲ ವ್ಯಕ್ತಿಗಳುದೇ, ಸ್ಥಳ, ಘಟನೆಗಳುದೇ ಕೇವಲ ಕಾಲ್ಪನಿಕ, ಯಾವದೇ ವ್ಯಕ್ತಿ ಅತವಾ ಘಟನೆಗೆ ಸಾಜ ಕಂಡತ್ತು ಹೇಳಿ ಆದರೆ ಅದು ಕೇವಲ ಕಾಕತಾಳೀಯ. ಈ ಕತೆ ಐವತ್ತು ವರ್ಷದ ಮೊದಲು ನಡದ್ದು ಹೇಳಿ ತಿಳ್ಕೊಳ್ಳೆಕ್ಕು.)
*****************************************************************
(ಇಲ್ಯಾಣವರೆಗೆ…)
ಮದ್ಯಾನ್ನ ಆತು. ಬೆಶಿಲು ತಲೆ ಹೊಟ್ಟುವಾಂಗೆ ಬೆಶಿ ಏರಿದ್ದು. ಆದರೆ ನಾಣಿ ಅಲ್ಲೇ ನಿಂದಿದ°, ಹೆಡ್ಮಾಷ್ಟನ ಕೋಣೆ ಎದುರು ದುರುಗುಟ್ಟಿಕೊಂಡು ಗುಳಿಗ್ಗನ ಹಾಂಗೆ.
ಮದ್ಯಾನ್ನಕ್ಕೆ ಉಂಬಲೆ ಹೋಪ ಬೆಲ್ಲುದೆ ಆತು. ಮನೆಗೆ ಉಂಬಲೆ ಹೋಪ ಮಕ್ಕ ಎಲ್ಲ ಮನೆಗೆ ಹೋಪಲೆ ಓಡಿದವು.
ಟೀಚರ್ಸು ರೂಮಿಲಿ ಮಾಷ್ಟಕ್ಕ, ಟೀಚರುಗ ಬುತ್ತಿ ಬಿಚ್ಚಿದವು.
ದಾಸಪ್ಪ° ಯಾವಾಗಳೂ ಮನೆಗೆ ಹೋಗಿ ಉಂಡಿಕ್ಕಿ ಬಪ್ಪ ಮನುಶ್ಯ°…. ಇಂದು ಹೆಡ್ಮಾಷ್ಟನ ಕೋಣೆಯ ಒಳಂದ ಹಂದಿದ್ದಿಲ್ಲೆ.
ನಾಣಿ? ಅವ° ಯಾವಗಳೂ ಬುತ್ತಿ ತಪ್ಪದು ಹೇಳಿ ಇಲ್ಲೆ. ಹೋತ್ತೋಪಗ ಶಾಲೆ ಬಿಟ್ಟಿಕ್ಕಿ ಮನೆಗೆ ಎತ್ತಿದ ಮೇಲೆ ಮನೆಲಿ ಎಂತಾರು ತಿಂಬದು. ಶಾಲೆಲಿ ಮದ್ಯಾನ್ನ ತಿಂಬದು ಹೇಳಿ ಎಂತ ಇಲ್ಲೆ. ಮದ್ಯಾನ್ನ ಎಲ್ಲಿಯಾದ್ರು ಹಶು ಆದರೆ? ಅದಕ್ಕೆ ಅವನ ಹತ್ತರೆ ಒಂದು ಕೆಣಿ ಇದ್ದು. ಮನೆಲಿ ಹಲಸಿನ ಬೇಳೆ ಯಾವಾಗಳು ಇರ್ತು. ಅವನ ಅಬ್ಬೆ ಎಲ್ಲಿ ಸಿಕ್ಕಿದರೂ ತೆಕ್ಕೊಂಡು ಬಂದು ಮಡುಗುಗು. ಯಾವಾಗಾದ್ರೂ ಮನೆಲಿ ಅಕ್ಕಿ ಇಲ್ಲದ್ರೆ ಹಲಸಿನ ಬೇಳೆಲಿ ಎಂತಾದ್ರು ಮಾಡ್ಲಾವುತ್ತು. ಇವ° ಒಂದು ಹತ್ತೊ ಹದಿನೈದೋ ಬೇಳೆಯ ಉದಿಯಪ್ಪಗ ಬೆಶಿನೀರ ಕೊಟ್ಟಗೆ ಒಲೆಲಿ ಸುಟ್ಟಾಕಿ ಬೇಗಿಲಿ ಮಡಿಕ್ಕೊಂಗು. ಮದ್ಯಾನ್ನಪ್ಪಗ ಅದರ ತಿಂದು, ಹೆಚ್ಚಾಗಿ ನೀರು ಹೊಟ್ಟೆತುಂಬ ಕುಡಿವದು. ತಂಪಾವ್ತು.
ಆದರೆ ಇಂದೀಗ? ಇಲ್ಲೆ. ಎಂತದೂ ತಿನ್ನದ್ದೆ ಹೆಡ್ಮಾಷ್ಟನ ಕೋಣೆ ಎದುರು ನಿಂದಿದ°.
ಕೆಲವು ಮಾಷ್ಟಕ್ಕೊಗೆ, ಟೀಚರುಗೊಕ್ಕೆ ನೋಡಿ ಹೊಟ್ಟೆ ಚುರುಕ್ ಹೇಳಿ ಆತು. ಆದರೆ ಎಂತ ಮಾಡುದು…. ದೇವಕ್ಕಿ ಟೀಚರು ಪದ್ರಾಡ್ ಹೆಟ್ಟಿದ್ದರ ನೋಡಿದ ಮತ್ತೆ ಅವನ ಹತ್ತರೆ ಹೋಪಲೆ ಅವಕ್ಕು ದೈರ್ಯ ಇಲ್ಲೆ.
ಮದ್ಯಾನ್ನದ ಮೇಲಾಣ ಕ್ಲಾಸುಗಳೂ ಸುರು ಆತು.
ಆದರೆ ನಾಣೀ ಇನ್ನುದೆ ಅಲ್ಲೇ ನಿಂದಿದ°. ದಾಸಪ್ಪ ಅದರ ಯಾವ ಕ್ಲಾಸುಗೊಕ್ಕು ಹೋಯಿದಿಲ್ಲೆ. ಆ ಕ್ಲಾಸಿನ ಮಕ್ಕೊಗೆ ಗಮ್ಮತ್ತು. (ಮಾಷ್ಟ ಬಯಿಂದಿಲ್ಲೆ…)
ಹೊತ್ತು ಹೀಂಗೇ ಮುಂದೆ ಹೋತು. ನಾಣಿ ಅಲ್ಲೆ. ದಾಸಪ್ಪ° ಒಳವೇ.
ಕಡೇಯಾಣ ಪಿರಿಡು. ಮಕ್ಕ ಎಲ್ಲ ಹೆರಾಣ ಆಟದ ಜಾಲಿಂಗೆ ಇಳುದವು. ಎಷ್ಟೊ ಮಕ್ಕ ಆಡುದು ಬಿಟ್ಟು ನಾಣಿಯ ನೋಡಿಕೊಂಡು ನಿಂದಿದವು. ಆದರೂ ನಾಣಿ ಹಂದಿದ್ದಾಯಿಲ್ಲೆ.
ಶಾಲೆ ಬಿಡುವ ಬೆಲ್ಲು ಅಪ್ಪಲೆ ಇನ್ನು ಕಾಲು ಗಂಟೆ ಇದ್ದು ಹೇಳಿ ಅಪ್ಪಗ ದಾಸಪ್ಪ ಮಾಷ್ಟ ಮೆಲ್ಲಂಗೆ ಎದ್ದು ಅದರ ಚೀಲವ ಹೆಗಲಿಂಗೆ ಏರಿಸಿ ಮೆಲ್ಲಂಗೆ ಕೋಣೆಂದ ಹೆರ ಬಿದ್ದದೇ ನಾಣಿಯ ಹೊಡೆಗೆ ಕಣ್ಣು ಕೂಡ ತಿರುಗುಸದ್ದೇ ಶಾಲೆ ಬಿಟ್ಟು ಮನೆಗೆ ರಟ್ಟುಲೆ ಹೆರಟತ್ತು.
ನಿಂಗೊಗೆ ಕಾಂಗು ಈ ಮಾಷ್ಟ° ಅಷ್ಟು ಹೆದರುಲೆ ಎಂತ ಇದ್ದು ಹೇಳಿ. ನಿಜ ಹೇಳೆಕ್ಕ? ಈ ದಾಸಪ್ಪ ಇದ್ದಲ್ಲದಾ? ಅದು ಮಹಾ ಹೆದರುಪುಕ್ಕ. ಮನೆಲಿ ಅಂತು ಹೆಂಡತ್ತಿ ಸುಗುಣಂಗೆ ಅದು ಹೆದರಿ ಸತ್ತುಕೊಂಡೇ ಇಪ್ಪದು. ಆರೂ ಎದುರು ಬೀಳ್ತವಿಲ್ಲೆ ಹೇಳಿ ಆದರೆ ಎಷ್ಟುದೆ ಹಾಂಕಾರ ತೋರ್ಸುಗು. ಆರಾದರೂ ಎದುರು ಬಿದ್ದವೋ ಇದು ಅಲ್ಲಿಂದ ರಟ್ಟುಗು. ಈಗಳುದೆ ಹಾಂಗೇ ಆದ್ದು.
**********************************************************************
ಶಾಲೆಯ ಎದುರು ದೊಡ್ಡ ಮಾರ್ಗ ಇಪ್ಪದು. ಅದಲ್ಲಿ ಸೀದ ಎಡತ್ತಿಂಗೆ ತಿರುಗಿ ಹೋದರೆ ಸಾಲೆತ್ತೂರು ಆಗಿ ಕೊಡೆಯಾಲಕ್ಕೆ ಹೋವುತ್ತು. ಬಲತ್ತಿಂಗೆ ತಿರುಗಿ ರಜಾ ಮುಂದೆ ಹೋದರೆ, ಎಡತ್ತಿಂಗೆ ಒಂದು ಒಂರ್ಕು ಕಾಣ್ತು. ಅದಲ್ಲಿ ಹೊಕ್ಕಿ ಮುಂದೆ ಹೋಪಗ ಒಂದು ಸಣ್ಣ ಗೆದ್ದೆ ಇದ್ದು. ಹಡಿಲು ಬಿದ್ದಿದು ಆ ಗೆದ್ದೆ. ಅದರ ನಡುವಿಲೆ ನಡಕ್ಕೊಂಡು ಜನಂಗ ಹೋಗಿ ಹೋಗಿ ಒಂದು ಕಾಲು ಹಾದಿ ಆಯಿದು. ಆ ಹಾದಿಲಿ ಮುಂದೆ ಹೋದರೆ ಒಂದು ತಡಮ್ಮೆ ಇದ್ದು. ಅದರ ದಾಂಟಿರೆ ಆಚ ಹೊಡೆಲಿ ಒಂದು ರೋಟು ಇದ್ದು. ಮಣ್ಣಿನ ರೋಟು. ಈ ರೋಟಿನ ಎಡತ್ತಿಂಗೆ ತಿರುಗಿ ಹೋದರೆ ಅದು ಸೀದ ಮುಂದೆ ಹೋಗಿ ಎರಡು ಪರ್ಲಾಂಗು ದೂರಲ್ಲಿ ಅದೇ ಸಾಲೆತ್ತೂರು ಮಾರ್ಗಕ್ಕೆ ಸೇರುತ್ತು. ಬಲತ್ತಿಂಗೆ ತಿರುಗಿ ಅರ್ಧ ಪರ್ಲಾಂಗು ಹೋದರೆ, ಬಲತ್ತಿಂದ ಪೇಟೆಂದ ಬಪ್ಪ ಇನ್ನೊಂದು ರೋಟಿಂಗೆ ಸೇರ್ತು. ಅನು ಈ ದಾರಿ ಎಲ್ಲ ಎಂತಕೆ ನಿಂಗೊಗೆ ಹೇಳ್ತಾ ಇದ್ದೆ ಹೇಳಿ ತಲೆ ಬೆಶಿ ಮಾಡೆಡಿ. ಈ ಕತೆಲಿ ಇಪ್ಪವಕ್ಕೆ ಈ ದಾರಿಗ ಎಲ್ಲ ಗೊಂತಿದ್ದು, ಎನಗೆ ಗೊಂತಿದ್ದು, ಆದರೆ ನಿಂಗೊಗೆ ಗೊಂತಿದ್ದ?
ಹಾಂಗೆ ಆ ಪೇಟೆಂದ ಬಪ್ಪ ರೋಟಿಲಿ ಎಡತ್ತಿಂಗೆ ಮುಂದೆ ಹೋದರೆ ಬಲತ್ತಿಂಗೆ ಭಾರ್ಗವಲಿಂಗೇಶ್ವರ ದೇವಸ್ತಾನ ಇದ್ದು. ದೇವಸ್ತಾನ ದಾಂಟಿದ ಕೂಡ್ಲೆ ಬಲತ್ತಿಂಗೆ ದೇವಸ್ತಾನದ ಕೆರೆ ಸಿಕ್ಕುತ್ತು. ಆ ಕೆರೆಯ ಎದುರಿಂಗಾಗಿ, ರೋಟಿನ ಎಡತ್ತಿಂಗೆ ಒಂದು ದೊಡ್ಡ ತೆಂಗಿನ ಹಿತ್ಲು ಇದ್ದು. ಆ ಹಿತ್ಲಿಲಿ ನಿಂಗೊಗೆ ಒಂದು ದೊಡ್ಡ ಮನೆ ಕಾಣ್ತು. ಅದುವೆ ಆರತಿಯ ಮನೆ, ಹೇಳಿರೆ ಆರತಿಯ ಅಪ್ಪ ವಿಶ್ವನಾಥ ರೈ ಡಾಕ್ಟ್ರನ ಮನೆ.
ಡಾಕ್ಟ್ರನ ಮನೆ ದೊಡ್ಡ ಇದ್ದು. ಅದಕ್ಕೆ ತಾಗಿದ ಹಾಂಗೆ ನಿಂಗೊಗೆ ಉದ್ದಕ್ಕೆ ಒಂದು ಅವುಟು ಹೌಸಿನ ಹಾಂಗೆ ಒಂದು ಬಿಲ್ಡಿಂಗು ಕಾಂಗು. ಅದು ದನ ಕಟ್ಟುವ ಕೊಟ್ಟಗೆ ಅಲ್ಲ. ಡಾಕ್ಟ್ರ ದನ ಸಾಂಕುತ್ತಿಲ್ಲೆ. ಅವರ ಹಿತ್ಲಿಂದ ಆಚ ಹೊಡೆಲಿ ಇಪ್ಪ ಎಂಕಮ್ಮ ದನ ಸಾಂಕುತ್ತು. ಅದುವೆ ಇವಕ್ಕೆ ದಿನಾಗುಳು ಹಾಲು ತಂದು ಕೊಡುದು.
ಈ ಡಾಕ್ಟ್ರನ ಅವುಟುಹೌಸಿಲಿ ನಾಲ್ಕು ಕೋಣೆ ಇದ್ದು. ಮೂರು ಕೋಣೆಲಿ ಒಂದೊಂದು ಮಂಚ, ಹಾಸಿಗೆ ಎಲ್ಲ ಹಾಕಿ ಅದರ ಒಂದು ನರ್ಸಿಂಗು ಹೋಮು ಹೇಳಿ ಮಾಡಿದ್ದು. ಸಣ್ಣ ಮಟ್ಟಿನ ಆಸ್ಪತ್ರೆ. ‘ಆರತಿ ನರ್ಸಿಂಗು ಹೋಮು’ ಹೇಳಿ ಅದಕ್ಕೆ ಹೆಸರು. ಒಳುದ ಇನ್ನೊಂದು ರೂಮಿಲಿ ಶಾಂತಾರಾಮ ಇಪ್ಪದು. ಶಾಂತಾರಾಮ ಹೇಳಿರೆ ಡಾಕ್ಟ್ರನ ಕಂಪೋಂಡ್ರು. ಒಟ್ಟಿಂಗೆ ಡಾಕ್ಟ್ರನ ಒಳುದ ಕೆಲಸಂಗಳನ್ನುದೆ ಅದುವೆ ಮಾಡುದು.
ಹಾಂಗೇ ಡಾಕ್ಟ್ರನ ಮನೆ ದಾಂಟಿ ರೋಟೀಲಿ ಮುಂದೆ ಹೋದರೆ, ಅರ್ಧ ಪರ್ಲಾಂಗು ಮುಂದೆ ಹೋಪಗ ರೋಟಿಲಿ ಎರಡು ಕವಲು ಸಿಕ್ಕುತ್ತು, ಬಲತ್ತಿಂಗೆ ತಿರುಗುವ ಕವಲಿಲಿ ಹೋದರೆ, ಅದು ಕೋಡೆಯಾಲಕ್ಕೆ ಹೋಪ ದೊಡ್ಡ ಮಾರ್ಗಕ್ಕೆ ಸೇರ್ತು. ಇದು ಸಾಲೆತ್ತೂರಿಂದಾಗಿ ಹೋಪ ಮಾರ್ಗ ಅಲ್ಲ, ಮಾಣಿ-ಕಲ್ಲಡ್ಕ ಹೊಡೆಂಗೆ ಹೋಪ ಮಾರ್ಗ. ಎಡತ್ತಿಂಗೆ ತಿರುಗುವ ಕವಲಿಲಿ ಹೋದರೆ, ಒಂದು ಪರ್ಲಾಂಗು ಮುಂದೆ ಬಲತ್ತಿಂಗೆ ಒಂದು ಓಡಿನ ಮನೆ ಸಿಕ್ಕುತ್ತು. ತುಂಬ ದೊಡ್ಡದಲ್ಲ, ಸಣ್ಣದು. ಸುತ್ತಾಣ ಹೋಡೆಂಗೆ ಕಲ್ಲುಗಳ ಓಯಿಶಿ ಮಾಡಿದ, ಸೊಂಟದಷ್ಟೆತ್ತರಕ್ಕೆ ಕಂಪೋಂಡು ಗೋಡೆ ಇದ್ದು. ಮನೆ ಎದುರು ಸಣ್ಣ ಜಾಲು. ರೋಟಿಂದ ಜಾಲಿಂಗೆ ಇಳಿವಲ್ಲಿ ನಣ್ಣ ಗೇಟು. ಈ ಮನೆಯೇ ದಾಸಪ್ಪ ಮಾಷ್ಟನ ಮನೆ.
ಒಟ್ಟಾರೆ ಎಡತ್ತಿಂಗೆ ಬಲತ್ತಿಂಗೆ ಹೇಳಿ ಎಷ್ಟು ತಿರ್ಗಾಸು ಇದ್ದು ಹೇಳಿ ಯೋಚನೆ ಆವುತ್ತ ಇದ್ದ? ಜಾಸ್ತಿ ತಿರ್ಗಾಸು ಇಲ್ಲೆ. ಎರಡೆ ಇಪ್ಪದು – ಎಡತ್ತಿಂಗೆ, ಬಲತ್ತಿಂಗೆ ಹೇಳಿ ಎರಡೆ, ಆತಾ. ಆನು ಈ ಜಾಗೆಯ ವಿಷಯ ನಿಂಗೊಗೆ ಎಲ್ಲ ಹೇಳಿದ್ದೆ ಹೇಳಿ ನಿಂಗ ಇದರ ಇನ್ನು ಗೂಗುಲು ಮೇಪಿಲಿ ಹುಡ್ಕುಲೆ ಹೋಗೆಡಿ. ಐವತ್ತು ವರ್ಷದ ಹಿಂದೆ ಗೂಗುಲು ಮೇಪು ಇತ್ತಿಲ್ಲೆ. ಹಾಂಗಾಗಿ ಅದರಲ್ಲಿ ಈ ಜಾಗೆ ಕಾಣ. ಆ ಕಾಲಲ್ಲಿ ಅಟ್ಳಾಸು ಮೇಪು ಮಾಂತ್ರ ಇದ್ದದು. ಅದಲ್ಲಿ ಸಿಕ್ಕುಗಾ ಹೇಳಿ ಎನಗೆ ಗೊಂತಿಲ್ಲೆ. ಇರ್ಲಿ, ದಾಸಪ್ಪ ಮಾಷ್ಟ° ಯಾವಾಗಳೂ ಇದೇ ದಾರಿಲಿ ಬಪ್ಪದು.
ಇಂದುದೆ ಒಂರ್ಕಿನವರೆಗೆ ಬಂದು, ಒಂರ್ಕಿಲಿ ಒಳಂಗೆ ತಿರುಗಿ, ಗೋಣಂಗ ಹಿಂದೆ ನೋಡಿದ ಹಾಂಗೆ ಮೆಲ್ಲಂಗೆ ಹಿಂದೆ ನೋಡಿತ್ತು. ಛೆ… ಅದಾ.. ಅಲ್ಲಿ ಶಾಲೆ ಗೇಟಿನ ಹತ್ರೆ…! ಕೋಣ ಕಟ್ಟಿದ ನಾಣಿ…! ಈ ಹೊಡೆಂಗೇ ಬತ್ತಾ ಇದ್ದ°!!
ದಾಸಪ್ಪಂಗೆ ಹೊಟ್ಟೆ ತೊಳಸಿದ ಹಾಂಗೆ ಆತು, ಉದಿಯಂದ ಎಂತ ತಿನ್ನದ್ದ ಕಾರಣವೂ ಆದಿಕ್ಕು, ರಪ ರಪನೆ, ಬೀಸ ಬೀಸ ನಡವಲೆ ಸುರು ಮಾಡಿತ್ತು. ಹಡ್ಲು ಬಿದ್ದ ಗೆದ್ದೆ ಕರೆಂಗೆ ಎತ್ತುವಗ ಪುನ ಹಿಂದೆ ನೋಡಿರೆ….! ಅದಾ ಒಂರ್ಕಿನ ಆ ಕೊಡೀಲಿ ನಾಣಿ ಪ್ರತ್ಯಕ್ಷ..!!!
ಗೆದ್ದೆ ಕೊಡೀಂಗೆ ಎತ್ತಿ, ತಡಮ್ಮೆ ಹತ್ರೆ ಹಿಂದೆ ನೋಡಿರೆ, ಗೆದ್ದೆ ಆಚಕೊಡಿಲಿ ನಾಣಿ!!! ಅವ ಮಾಷ್ಟನ ಹಿಂದೆಯೇ ಬತ್ತ ಇದ್ದ°.
ಮಾಷ್ಟ ಓಡವ ಹಾಂಗೆ ಹೋಪಲೆ ಸುರು ಮಾಡಿತ್ತು. ನಾಣಿದೆ ಬೀಸ ಬೀಸ ಬತ್ತ ಇದ್ದ°.
ದೇವಸ್ತಾನದ ಕೆರೆಯ ಹತ್ತರೆ ಎತ್ತಿ ಅಪ್ಪಗ ಮಾಷ್ಟ° ಒಂದರಿ ನಿಂದು, ಹಿಂದೆ ತಿರುಗಿ ನೋಡಿತ್ತು. ಕಾಲು ಪರ್ಲಾಂಗು ಹಿಂದೆ ನಾಣಿ ಇದ್ದ°. ಅವಂದೆ ನಿಂದ°. ಮಾಷ್ಟ° ಮುಂದೆ ಹೋಪಗ ಅವಂದೆ ಹೋಪದು, ಮಾಷ್ಟ° ನಿಂದರೆ ಅವಂದೆ ನಿಂಬದು.
ಅವ ಮಾಷ್ಟನ ಓಡುಸುತ್ತಾ ಇದ್ದನಾ ಹೇಳಿ ಆರಾದ್ರೂ ಗ್ರೇಷೆಕ್ಕು.
ಒಟ್ಟಾರೆ ಮಾಷ್ಟಂಗೆ ಪುಕು ಪುಕು ಅಪ್ಪಲೆ ಸುರುವಾತು. ಈ ಮಾಣಿ ಇಂದು ಎಂತದೋ ಮಾಡಿ ಹಾಕುತ್ತ° ಹೇಳಿ ಕಾಣ್ತು. ಬಿಡುವ ಅಂದಾಜಿ ಕಾಣ್ತಿಲ್ಲೆ.
ಅಂತೂ ಮಾಷ್ಟ° ಮನೆಗೆ ಎತ್ತಿತ್ತು. ಬಾಗಿಲು ನೋಡಿರೆ ಬೀಗ!!!
ಎಲ! ಈ ಸುಗುಣ ಎಲ್ಯೋತು? ದಿನೇಸ?
ಮಾಷ್ಟನ ಹತ್ತರೆ ಯಾವಾಗಳು ಒಂದು ಬೀಗದ ಕೈ ಇರ್ತೇ ಇರ್ತು. ಅದರ್ಲಿ ಬೀಗ ತೆಗದ್ದೆ ತುರ್ಕನೆ ಒಳಂಗೆ ಹೋಗಿ ಬಾಗಿಲು ಹಾಕಿತ್ತು. ಅಲ್ಲಿಂದಲೆ ಬಾಗಿಲಿಂಗೆ ಎರಗಿ ನಿಂದು ಬೆಗರಿನ ಉದ್ದಿಕ್ಕಿ, ರಜಾ ಸುದರ್ಸಿಕೊಂಡತ್ತು.
ಮತ್ತೆ ಬಾಗಿಲ ಸೆರೇಲಿ ಹೆರನೋಡಿರೆ…!!! ಗೇಟಿನ ಹತ್ತರೆ ನಾಣಿ ನಿಂದಿದ°….! ಮನೆಯ ಹೊಡೆಂಗೆ ದುರುಗುಟ್ಟಿ ನೋಡಿಕೊಂಡಿಗೊಂಡು !!!
************************************************************************************************
ಸುಗುಣ ಎಲ್ಲಿದ್ದು? ಶಾಲೆಲಿ ಹೀಂಗೆಲ್ಲ ಅಪ್ಪಗ ಎಂತ ದಿನೇಸ° ಸುಮ್ಮನೆ ಇತ್ತ? ಅದಕ್ಕುದೆ ಎಲ್ಲ ಕಾಣ್ತಿಲ್ಲೆಯ? ಮದ್ಯಾನ್ನ ಉಂಬಲೆ ಬಿಟ್ಟ ಕೂಡ್ಲೆ ಅದು ಮನೆಗೆ ಓಡಿಕೊಂಡು ಬಯಿಂದು. ಮನೆಲಿ ಅಮ್ಮ ಸುಗುಣಂಗೆ ಎಲ್ಲಾ ಕತೆಯ ಉರುಗಿ ಆಯಿದು ಅದಕ್ಕೆ. ಇನ್ನು ಈ ಗಲಾಟೆ ಜೋರಾದರೆ ಕಷ್ಟ ಹೇಳಿ ಸುಗುಣ ದಿನೇಸನ ರಕ್ಷಣೆ ಮಾಡ್ಲೆ, ಅದರ ಕರಕ್ಕೊಂಡು, ಮನೆಗೆ ಬೀಗ ಹಾಕಿ ಅದರ ಅಪ್ಪನ ಮನೆಗೆ ಹೋಯಿದು. ಮಾಷ್ಟಂಗೆ ಗೊಂತಿಲ್ಲೆ. ಹೇಳುವವು ಅರು ಬೇಕನ್ನೆ?
ಮಾಷ್ಟಂಗೆ ಇದು ಹೀಂಗೆ ಆಯಿದು ಹೇಳಿ ಅಂದಾಜಿ ಆತು. ಸರಿ, ಇನ್ನು ನಾಲ್ಕು ದಿನಕ್ಕೆ ಸುಗುಣನ ಕಾಟ ಇಲ್ಲೆ. ಒಳ್ಳೆದೆ ಆತು ಹೇಳಿ ಗ್ರೇಷಿತ್ತು.
ಸೀದಾ ಅಡಿಗೆ ಮನೆಗೆ ಹೋಗಿ ಎಂತ ಇದ್ದು ನೋಡಿತ್ತು. ಹೆಜ್ಜೆ ಒಂದು ಬೇಶಿ ಮಡುಗಿಕ್ಕಿ ಹೋಯಿದು. ಬೇರೆ ಎಂತ ಕಾಣ್ತಿಲ್ಲೆ. ಸರಿ ಬಟ್ಳಿಂಗೆ ಇಷ್ಟು ಹೆಜ್ಜೆ ಹಾಕಿಕೊಂಡತ್ತು, ರಜ ಉಪ್ಪಿನಕಾಯಿ ಹಾಯ್ಕೊಂಡತ್ತು, ತಿಂದತ್ತು. ಅಬ್ಬ, ಹೊಟ್ಟೆ ರಜ ಸುಕ ಆತದ. ಛೆ, ಆ ಮಾಣಿ ಬರೀ ಪಾಪದ್ದು ಹೇಳಿ ಗ್ರೇಷಿದ್ದೆ ತಪ್ಪಾತು. ಎಂತ ಗರ್ವ ಇದ್ದು ಮಾರಾಯನೆ?
ಸೀದ ಬೆಡ್ಡು ರೂಮಿಂಗೆ ಬಂದು ಅಲ್ಲೆ ಇದ್ದ ಕುರ್ಶಿ ಮೇಲೆ ಕೂದತ್ತು. ಆ ಮಾಣಿ ಅಲ್ಲೆ ಹೆರ ಇದ್ದನಾ? ಗಿಳು ಬಾಗಿಲಿನ ಎಡೇಂದ ಹೆರೆಂಗೆ ಇಣ್ಕಿತ್ತು. ಅಪ್ಪು…!! ಅಲ್ಲೇ ಇದ್ದ° ಮಾಣಿ….!!! ದುರುಗುಟ್ಟಿ ನೋಡಿಗೊಂಡು…..!!
ಮಾಷ್ಟ° ಮಂಚದ ಮೇಲೆ ಬಿದ್ದುಕೊಂಡತ್ತು. ಈಗ ಹೆರ ಹೋಪ ಹಾಂಗೆ ಇಲ್ಲೆ. ನಾಣಿ ಇದ್ದ° ಅಲ್ಲಿ ಗೇಟಿನ ಎದುರು ನಿಂದುಕೊಂಡು. ಎಂತ ಮಾಡುದು? ಯಾವಾಗ್ಳಾಣ ಹಾಂಗೆ ಆವುತಿತ್ತರೆ ಮಾಷ್ಟ° ಪೇಟೆಗೆ ಹೋಗಿ ಕಮ್ಮಿನಿಶ್ಟೆ ಆಪೀಸಿಲಿ ಕೂರ್ತಿತ್ತು.
ಸೆಕೆ ಆವುತ್ತಾ ಇದ್ದು. ಮೈ ಎಲ್ಲ ಬೆಗರುಲೆ ಸುರು ಆತು. ಬಹುಶ ಇಂದು ಮಳೆ ಬಪ್ಪ ಅಂದಾಜಿ ಇದ್ದು. ಮೂಡುದಿಕ್ಕಿಲಿ ಆಕಾಶಲ್ಲಿ ಮೋಡ ತುಂಬುಲೆ ಆಗಳೇ ಸುರು ಆಗಿಯೋಂಡಿತ್ತು.
ಕಸ್ತಲೆ ಕಸ್ತಲೆ ಆತು. ಸೂರ್ಯಾಸ್ತ ಆತು ಹೇಳಿ ಕಾಣ್ತು. ನಾಣಿ ಹಂದುವ ಅಂದಾಜಿ ಕಾಣ್ತಿಲ್ಲೆ. ಅಲ್ಲೆ ಗೇಟಿನ ಎದುರು ಕಲ್ಲಿನ ಮೂರ್ತಿಯ ಹಾಂಗೆ ಮಾಷ್ಟನ ಮನೆ ಬಾಗಿಲು ದುರುಗುಟ್ಟಿಕೊಂಡು ನಿಂದಿದ°. ಅಷ್ಟಪ್ಪಗ ಅವನ ಹೊಡೆಂಗೆ ಆರೋ ರೋಟಿಲಿ ಬೀಸ ಬೀಸ ನಡಕ್ಕೊಂಡು ಬಂದ ಹಾಂಗೆ ಕಂಡತ್ತು. ಆರಿಕ್ಕಪ್ಪ?
ಲಿಂಗಪ್ಪ ಮೇಸ್ತ್ರಿ, ತೋಡಕರೆ ಬಾಬು ಇದ್ದಲ್ಲದ? ನಾಣಿಯ ಕ್ಲಾಸಿಂದು? ಅದರ ಅಪ್ಪ°. ಅದು ಯಾವಾಗಳೂ ಪೇಟೆಂದ ಇದೇ ದಾರಿಲಿ ಕೆಲಸ ಮುಗುಶಿಕ್ಕಿ ಬಪ್ಪದು. ಅಲ್ಲೆ ಕೊಡೆಯಾಲಕ್ಕೆ ಹೋಪ ಮಾರ್ಗ ಇದ್ದಲ್ಲದಾ, ಅಲ್ಲೇ ಒಂದು ಸೇಂದಿ ಅಂಗಡಿ ಇದ್ದು, ಅಲ್ಲಿ ಒಂದು ಅರ್ದ ಕುಪ್ಪಿ ಏರ್ಸಿಕ್ಕಿ ಸೀದ ಈ ದಾರಿಲಿ ಬಪ್ಪದದು. ಇದೇ ದಾರಿಲಿ ಒಂದು ಒಳದಾರಿ ಇದ್ದು, ನಾಣೀಯ ಮನೆ ಹೊಡೇಂಗೆ ಹೋಪಲೆ. ಅದೇ ದಾರಿಲಿ ಹೋದರಾತು ಈ ಲಿಂಗಪ್ಪ ಮೇಸ್ತ್ರಿಯ ಮನೆದೇ ಸಿಕ್ಕುತ್ತು.
ಲಿಂಗಪ್ಪಂಗೆ ಒಂದು ಸಣ್ಣ ಮಾಣಿ ಮಾಷ್ಟನ ಮನೆ ಎದುರು ನಿಂದದು ಕಂಡತ್ತು. ಸುರುವಿಂಗೆ ಕಸ್ತಲೆಲಿ ಆರು ಹೇಳಿ ಗೊಂತಾಯಿದಿಲ್ಲೆ. ಹತ್ತರಂಗೆ ಎತ್ತುವಗ ಗುರ್ತ ಸಿಕ್ಕಿತ್ತು, ನಾಣಿ ಹೇಳಿ. ಆದರೆ ಅದು ಎಂತದೂ ಮಾತಾಡದ್ದೆ ಸೀದ ಮುಂದೆ ಹೋತು. ಹಾಂಗೆಲ್ಲ ಕುಪ್ಪಿ ಏರ್ಸಿಪ್ಪಗ ಅದು ಆರತ್ರು ಮಾತಾಡುದು ಕಮ್ಮಿ. ಬಹುಶ ಮಾಷ್ಟ ಬಪ್ಪಲೆ ಹೇಳಿಕ್ಕು ಹೇಳಿ ಗ್ರೇಷಿತ್ತೊ ಏನೋ. ನಾಣಿ ಕಾಲಿ ಕೋಣಲ್ಲಿ ನಿಂದದು ಅದಕ್ಕೆ ಅಂದಾಜಾಯಿದಿಲ್ಲೆ, ಕಸ್ತಲೆಲಿ.
ದಾಸಪ್ಪಂಗೆ ಮನೆಯ ಒಳ ಕಸ್ತಲೆ. ದಾಸಪ್ಪನ ಮನೆಗೆ ಎಲೆಟ್ರಿ ಕರೆಂಟಿನ ಲೈಟು ಇಲ್ಲೆ. ಇಡಿ ಪೇಟೆಲಿ ಡಾಕ್ಟ್ರನ ಹಾಂಗಿಪ್ಪ ದೊಡ್ಡೋರ ಮನೆಗೆ ಮಾಂತ್ರ ಎಲೆಟ್ರಿ ಲೈಟು ಬಂದದು. ಮಾಷ್ಟಂಗು ಹಾಕ್ಸೆಕ್ಕು ಹೇಳಿ ಇತ್ತು. ಆದರೆ ಎಲೆಟ್ರಿ ಹಾಕ್ಸೆಕ್ಕಾದರೆ ಎಲೆಟ್ರಿ ಆಪೀಸಿಲಿ ಸುಪ್ರಿಜನ ಹತ್ತರೆ ಎಂಗಳ ಮನೆಗೆ ಎಲೆಟ್ರಿ ಕರೆಂಟು ಬೇಕು ಹೇಳಿ ಒಂದು ಅರ್ಜಿ ಕೊಡೆಕ್ಕು. ಅದಕ್ಕೆ ಮೊದಲು ಮನೆಗೆ ಎಲ್ಲೆಲ್ಲಿ ಎಲೆಟ್ರಿದು ಬಲ್ಬು ಹಾಕೆಕ್ಕೋ ಅಲ್ಲಿಗೆ ಒಂದು ವಯರು, ಸಪೂರ ಪೈಪ್ಪಿನ ಹಾಂಗಿಪ್ಪದು, ಗೋಡೆ ಮೇಲೆ ಹಾಕೆಕ್ಕಾವುತ್ತು. ಅದರ ಮನೆಯವೇ ಹಾಕುವ ಹಾಂಗೆ ಇಲ್ಲೆ. ವಯರಿನ ಒಳ ಕಸವೋ ಮಣ್ಣ ಸಿಕ್ಕಿದರೆ, ಎಲೆಟ್ರಿ ಕರೆಂಟು ಬಾರದ್ದೆ ಬಲ್ಬು ಹೊತ್ತ. ಹಾಂಗಾಗಿ ಅದರ ಕೆಲಸ ಗೊಂತಿಪ್ಪವೇ ಹಾಕೆಕ್ಕು. ಮತ್ತೆ ಅದಕ್ಕೆ ಅಲ್ಲಲ್ಲಿ ಒಂದು ಸುಚ್ಚು ಹೇಳಿ ಹಾಕುಲೆ ಇದ್ದು. ಅದು ಒಂದು ಸಣ್ಣ ಚೌಕ್ಕದ ಕಪ್ಪು ಪೆಟ್ಟಿಗೆಯ ಹಾಂಗೆ, ಅಲ್ಲದ್ರೆ ಉರುಟು ಕರಡಿಗೆಯ ಹಾಂಗೆ ಇರ್ತು. ಅದಕ್ಕೆ ಎದುರಾಣ ಹೊಡೆಂಗೆ ಒಂದು ಕುಟ್ಟಿ ಇರ್ತು, ಆ ಕುಟ್ಟಿಯ’ ಟಕ್’ ಹೇಳಿ ಕೆಳಂಗೆ ನೂಕಿದರೆ ಬಲ್ಬು ಹೊತ್ತುತ್ತು. ಮೇಲಂಗೆ ನೂಕಿದರೆ ಬಲ್ಬು ನಂದುತ್ತು. ಪೇಟೆಲಿ ಎಲೆಟ್ರಿ ಕರೆಂಟಿನ ಕೆಲಸ ಮಾಡುದು ಉಮೇಶ°, ಪೇಟೆಲಿ ಅಂಗಡಿ ಮಡಿಕ್ಕೊಂಡು ಇದ್ದು. ಅದು ಹಾಕಿ ಕೊಡ್ತೆ ಹೇಳಿದ್ದು. ಆದರೆ ಕೆಲಸ ಆದ ಮೇಲೆ ದಾಸಪ್ಪ° ಕೆಲಸದ ಮಜೂರಿ ಕೊಡದ್ದರೆ ಹೇಳಿ ಉಮೇಶಂಗೆ ಮಾಷ್ಟನ ಮೇಲೆ ಗುಮಾನಿ. ಮೊದಲೇ ಪೈಶೆ ಕೊಟ್ಟರೆ ಉಮೇಶ° ಕೆಲಸ ಮಾಡದ್ದೆ ಕೊಣುಶುಗು ಹೇಳಿ ಮಾಷ್ಟಂಗೆ ಸಂಶಯ. ಹಾಂಗಾಗಿ ಮಾಷ್ಟನ ಮನೆಯ ಎಲೆಟ್ರಿ ಕೆಲಸ ಮುಂದೆ ಹೋವುತ್ತಾ ಇದ್ದು. ಸದ್ಯಕ್ಕೆ ಮಾಷ್ಟಂಗೆ ಚಿಮಿಣಿ ಎಣ್ಣೆ ದೀಪವೇ ಗೆತಿ.
ಸಣ್ಣದೊಂದು ಕುಪ್ಪಿಯ ಮುಚ್ಚಲಿಂಗೆ ಒಂದು ಒಟ್ಟೆ ತೆಗದು, ವಸ್ತ್ರಲ್ಲಿ ಉದ್ದಕ್ಕೆ ಒಂದು ನೆಣೆ ತಿರ್ಪಿ ಅದರ ಆ ಮುಚ್ಚಲಿನ ಒಟ್ಟೆಗೆ ತುರ್ಕುಸುದು. ಮತ್ತೆ ಆ ನೆಣೆಯ ಚಿಮಿಣಿ ಎಣ್ಣೆಲಿ ಅದ್ದಿ, ಆ ಕುಪ್ಪಿಗೆ ಚಿಮಿಣಿ ಎಣ್ಣೆ ತುಂಬುಸಿ, ಆ ನೆಣೆ ಕುಪ್ಪಿಯ ಒಳ ಹೋಪ ಹಾಂಗೆ ತುಂಬುಸಿ, ಅದಕ್ಕೆ ಆ ಮುಚ್ಚಲು ಹಾಕುದು. ಮುಚ್ಚಲಿನ ಮೇಲೆ ಇಪ್ಪ ನೆಣೆಯ ಕೊಡಿಯಂಗೆ ಕಿಚ್ಚು ಹೊತ್ಸಿರೆ ಆತು, ಚಿಮಿಣಿ ಎಣ್ಣೆ ದೀಪ ರೆಡಿ.
ದಾಸಪ್ಪ° ಬೆಂಕಿ ಪೆಟ್ಟಿಗೆಲಿ ಒಂದು ಕಡ್ಡಿ ವರಕ್ಕಿ ಒಂದು ದೀಪ ಹೊತ್ತುಸಿತ್ತು. ಈಗ ಹೆರ ನೋಡಿರೆ ಎಂತದೂ ಕಾಣ್ತಿಲ್ಲೆ. ಹೆರ ಬೆಣ್ಚಿ ಇಲ್ಲೆ. ಮಾಣಿ ಅಲ್ಲೆ ನಿಂದಿದನೋ ಅಲ್ಲ ಹೋಯಿದನೋ? ನೋಡಿರೆ ಕಾಣ.
ಸೆಕೆ ಜೋರಾವ್ತಾ ಇದ್ದು. ಗಿಳು ಬಾಗಿಲು ತೆಗವಲೂ ಮಾಷ್ಟಂಗೆ ದೈರ್ಯ ಇಲ್ಲೆ. ಮೂಡಲ್ಲಿ ಮೋಡ ತುಂಬಿ ಏರ್ತಾ ಇದ್ದು. ಸಣ್ಣಕ್ಕೆ ಗುರುಗುರು ಹೇಳಿ ಗುಡುಗುಲುದೆ ಸುರುವಾಯಿದು. ಗಾಳಿ ರಜವುದೆ ಹಂದುತ್ತ ಇಲ್ಲೆ. ಒಂದೊಂದು ಮಿಂಚುದೆ ಇಡ್ಕುಲೆ ಸುರು ಆಯಿದು. ಮಾಷ್ಟ° ಹೋಗಿ ಮಂಚಲ್ಲಿ ಬಿದ್ದುಕೊಂಡತ್ತು.
ಹಾಂಗೆ ಬಿದ್ದುಕೊಂಡ ಮಾಷ್ಟಂಗೆ ಅಲ್ಲಿಗೇ ಕಣ್ಣು ಎಳದು ವರಕ್ಕು ಬಂದ ಹಾಂಗೆ ಆತು. ಎಷ್ಟೊತ್ತಾತು ಹೇಳಿ ಗೊಂತಿಲ್ಲೆ. ಒಂತರಾ ಅರೆ ವರಕ್ಕು… ದಾಸಪ್ಪಂಗೆ ಕಾರ್ಗಂಡ ಕಸ್ತಲೆಲಿ ನಡಕ್ಕೊಂಡು ಹೋವ್ತಾ ಇಪ್ಪಾಂಗೆ ಅರೆ ಬಿರಿ ಕನಸು…ಹೋವ್ತಾ ಇದ್ದಾಂಗೆ ಒಂದು ಬರೆ ಕರೇಲಿ ಹೋದ ಹಾಂಗೆ ಆಗಿ, ಇದ್ದಕ್ಕಿದ್ದಾಂಗೆ ಬರೆಂದ ಕಾಲು ಜಾರಿ ಬಿದ್ದಾಂಗೆ ಆಗಿ ದಡಕ್ಕನೆ ಎಚ್ಚರಾತು. ತೆಗಲೆ ಧಡ ಧಡ ಬಡ್ಕೋಳ್ತಾ ಇದ್ದು. ಮೈ ಎಲ್ಲ ಬೆಗರಿ ಚೆಂಡಿ.
ಎಷ್ಟೊತ್ತಾದಿಕ್ಕು? ಹನ್ನೆರಡು- ಹನ್ನೆರಡುವರೆ ಆದಿಕ್ಕು. ದಾಸಪ್ಪಂಗೆ ಒಂದರಿ ತಲೆ ವಳ ಎಲ್ಲ ಕಾಲಿ ಕಾಲಿ ಆದಾಂಗೆ, ಎಂತ ಹೇಳಿ ಗೊಂತಯಿದಿಲ್ಲೆ. ಕೈ ಕಾಲು ಎಲ್ಲ ಒಂತರಾ ಎರುಗು ಹರದ ಹಾಂಗೆ ಆಗಿ ಟಪ್ಪನೆ ಎದ್ದು ಕೂದತ್ತು. ಚಿಮಿಣಿ ಎಣ್ಣೆ ದೀಪ ಎಷ್ಟೊತ್ತಿಂಗೊ ನಂದಿ ಹೋಯಿದು. ನೆಣೆ ಹೊತ್ತಿದ ವಾಸನೆ ಕೋಣೆಲಿ ತುಂಬಿದ್ದು. ಬಹುಷ ದೀಪದ ಕುಪ್ಪಿಲಿ ಎಣ್ಣೆ ಮುಗುದು ದೀಪ ನಂದಿದ್ದು. ಸೆಕೆಲಿ ಮೈ ಬೇಯ್ತಾ ಇದ್ದು. ಪಟಕ್ಕನೆ ನೆಂಪಾತು…. ನಾಣಿ…!!
ನಾಣಿ ಹೆರ ಗೇಟಿನ ಹತ್ತರೆ ನಿಂದಿದ°… ಏ ದೇವರೇ…( ಕಮ್ಮಿನಿಶ್ಟಂಗೋ ದೇವರ ನಂಬುತ್ತವಿಲ್ಲೆ… ಆದರೂ ಅಗತ್ಯಕ್ಕೆ ಬೇಕಾದಾಂಗೆ ಒಂದೊಂದರಿ ನಂಬುದು ಹೇಳಿ ಇದ್ದು) ಅವ° ಇನ್ನೂ ಅಲ್ಲೇ ಇದ್ದನೋ ಹೇಂಗೆ? ದಾಸಪ್ಪಂಗೆ ಮೈ ಸಣ್ಣಕ್ಕೆ ನಡುಗುಲೆ ಸುರು ಆತು. ಸುಮ್ಮನೆ ಕೂದು ಹೆರ ಎಂತ ಕೇಳ್ತು ಹೇಳಿ ಕೆಮಿ ಕೊಟ್ಟತ್ತು. ಕೇಳ್ತಾ ಇದ್ದು ಗುಡುಗುದು. ಗಿಳು ಬಾಗಿಲಿನ ಸೆರೆಂದ ಮಿಂಚಿನ ಬೆಣ್ಚಿದೆ ಬೀಳ್ತಾ ಇದ್ದು. ಜೋರು ಜೋರಿಲಿ ಗುಡುಗುತ್ತ ಇದ್ದು. ಸೆಕೆ ನೋಡಿರೆ ಈಗಳೆ ಮಳೆ ಬಪ್ಪದು ಖಂಡಿತ. ಆ ಮಾಣಿ ಅಲ್ಲೆ ಇದ್ದರೆ ಈ ಮಳೆ ಸುರುವಾದರೆ ಎಂತ ಮಾಡುಗು? ಇದರ ಹಾಂಗೇ ಬಿಟ್ಟರೆ ಆಗ. ಎಂತಾರೂ ಹೆಚ್ಚು ಕಮ್ಮಿ ಆದರೆ ನಾಳೆ ಆರ ತಲೆಗೆ ಬಪ್ಪದು?
ದಾಸಷ್ಟ° ಎದ್ದತ್ತು. ಆ ಟೋರ್ಚು ಎಲ್ಲಿದ್ದು? ಪಕ್ಕ ನೆಂಪಾತು, ಅದರ ಬಲ್ಬು ಬರ್ನಾಗಿ ಮೂರುದಿನ ಆಯಿದು. ಮೈ ಕುಡುದೋರ ಹಾಂಗೆ ಮಾಲಿತ್ತು. ನಿಧಾನಕ್ಕೆ ಗೋಡೆ ಹಿಡುದು ಎದುರಾಣ ಬಾಗಿಲಿಂಗೆ ಬಂತು. ಚೀಪು ತೆಗದು, ಬಾಗಿಲಿನ ತೆಗದು ಎರಡು ಹೊಡೆಂಗೆ ದಾರಂದಕ್ಕೆ ಕೈ ಕೊಟ್ಟು ನಿಂದತ್ತು. ತೆಗಲೆ ಇನ್ನುದೆ ಅವಲಕ್ಕಿ ಕುಟ್ಟಿದಾಂಗೆ ದಡ ದಡ ಹೇಳ್ತಾ ಇದ್ದು.
ಹೆರ ನೋಡಿರೆ… ಕಾರ್ಗಾಂಡ ಕಸ್ತಲೆ. ಗಡಗಡಾ ಗುಡುಗುಡೂ ಹೇಳಿ ಗುಡುಗುತ್ತಾ ಇದ್ದು. ಗಡಿ ಗಡಿ ಮಿಂಚುತ್ತಾ ಇದ್ದು. ಆಕಾಶಲ್ಲಿ ಮೋಡ ಸರೀ ತುಂಬಿದ್ದು. ಸಣ್ಣಕ್ಕೆ ಗಾಳಿ ಬೀಸುಲೆ ಸುರು ಆಯಿದು. ಗುಡುಗಿನ ಶಬ್ದ ಬಿಟ್ಟರೆ ಕ್ರಿಮಿಕೀಟಂಗಳ ಶಬ್ದವೂ ಇಲ್ಲೆ…. ಇನ್ನೆಂತ… ಮಳೆ ಬಪ್ಪಲೆ ಹೆಚ್ಚು ಹೊತ್ತಿಲ್ಲೆ. ಮಾಷ್ಟ° ಕಣ್ಣಿನ ದೂಂಚಿ ಮಾಡಿ ಗೇಟಿನ ನೋಡಿತ್ತು. ಕಸ್ತಲೆಲಿ ಎಂತದೂ ಕಾಣ್ತಾ ಇಲ್ಲೆ. ಫಳಕ್ಕನೆ ಒಂದು ಮಿಂಚಿತ್ತು. ಹಿಂದಂದಲೇ ಸಿಡ್ಲು ಬಡುದ ಹಾಂಗೆ ಗುಡುಗು.ಮಿಂಚಿನ ಬೆಣ್ಚಿಲಿ ಕಂಡತ್ತು…. ಎಂತರ?
ಅದಾ… ಅಪ್ಪು… ಆ ಮಾಣಿ ಇನ್ನುದೇ ಗೇಟಿನ ಹತ್ತರೆ ನಿಂದಿದ°, ಮನೆ ಬಾಗಿಲನ್ನೇ ದುರುಗುಟ್ಟಿ ನೋಡಿಕೊಂಡು…!!!!!!!!!!
ಮಾಷ್ಟಂಗೆ ನಂಬಿಕೆ ಬಯಿಂದಿಲ್ಲೆ….. ಇನ್ನುದೇ ಕಣ್ಣಿನ ದೂಂಚಿ ಮಾಡಿ ನೋಡಿತ್ತು……. ಅಷ್ಟಪ್ಪಗ ಇನ್ನೊಂದು ಸಿಡಿಲು ಬಡುದ ಹಾಂಗೆ ಮಿಂಚು… ಗುಡುಗು…. ಅರೆ… ಭ್ರಮೆಯಾ ಎಂತ? ಆ ಮಿಂಚಿನ ಬೆಣ್ಚಿಲಿ ಒಂದು ಸೆಕುಂಡು ಆ ಮಾಣಿ ನಿಂದಲ್ಲೆ ದೊಡ್ಡಕ್ಕೆ, ಒಂದು ಮಾವಿನ ಗಿಡದಷ್ಟೆತ್ತರಕ್ಕೆ ಬೆಳದ ಹಾಂಗೆ ಕಂಡತ್ತು.
ದಾಸಪ್ಪಂಗೆ ಕಾಲು ನಡುಗುಲೆ ಸುರು ಆತು. ಕೈ ದಾರಂದದ ಮೇಲೆ ಇನ್ನುದೆ ಹಿಡಿತ ಗಟ್ಟಿ ಮಾಡಿತ್ತು. ಆಷ್ಟಪ್ಪಗ ಮತ್ತೊಂದು ಮಿಂಚು. ಅದರ ಬೆಣ್ಚಿಲಿ ನಾಣಿ ಅರ್ಧ ತೆಂಗಿನ ಮರದ ಎತ್ತರಕ್ಕೆ ದೊಡ್ಡಕ್ಕೆ ಬೆಳದ ಹಾಂಗೆ ಕಂಡತ್ತು. ಕಣ್ಣು ಕೆಂಪು ಕಿಚ್ಚಿನ ಹಾಂಗೆ, ಗುಳಿಗ್ಗ ಬೂತದ ಹಾಂಗೆ……
“ಟ್ರಿಟ್..ಟ್ಟೀ..ಟ್..ಟ್.ಟ್..ಟ್..ಟ್.ಟ್..ಟ್..ಟ್.ಟ್..ಟ್ರೀಈಈಈಈಈಈಈಈಈಈ……” ಒಂದು ಕೊಲೆ ಹಕ್ಕಿ ಮನೆ ಮೇಗಂದ ಕೊಲೆ ಕೂಗಿದ ಹಾಂಗೆ ಕರ್ಕಶವಾಗಿ ಕೂಗಿಕೊಂಡು ಹಾರಿ ಹೋತು. ಮಾಷ್ಟನ ಮೈ ರೋಮ ಎಲ್ಲ ಕುತ್ತ ಆತು. ಮೈ ಚಳಿ ಹಿಡುದ ಹಾಂಗೆ ಒಂದರಿ ದರಿಸಿತ್ತು. ಇಡಿ ಮೈ ಎರುಗು ಹರುದು ಮರ ಕಟ್ಟಿದ ಹಾಂಗೆ, ಹೊಕ್ಕುಳಿನ ಹತ್ತರೆ ಹೊಟ್ಟೆ ಕಲ್ಲು ಕಟ್ಟಿದ ಹಾಂಗೆ…..
ತಂಪು ಗಾಳಿ ಜೋರು ಬೀಸುಲೆ ಸುರು ಆತು. ಒಟ್ಟಿಂಗೆ ಮಣ್ಣಿನ ವಾಸನೆದೇ……
ಇನ್ನೊಂದು ಮಿಂಚು….ಫ್ಲಾಷು ಲೈಟಿನ ಹಾಂಗೆ… ಹಿಂದಂದ ಸಿಡ್ಲು… ಭ್ರಮೆಯಾ? ನಾಣಿಯ ಮೋರೆ ಭೂತದ ಹಾಂಗೆ, ಕಣ್ಣು ಒಂದು ತಡ್ಪೆಯಷ್ಟು ದೊಡ್ಡಕ್ಕೆ, ಕೆಂಪು ಕೆಂಪು, ಎದುರಾಣ ಹಲ್ಲುಗ ಕೋರೆ ಹಲ್ಲಿನ ಹಾಂಗೆ…ಕಾರ್ಗಾಂಡ ಕಸ್ತಲೆಲಿ ಮಾಷ್ಟ್ರನ ಹೊಡೆಂಗೆ ನುಂಗುಲೆ ಬಂದ ಹಾಂಗೆ…. ಕಂಡತ್ತು.
ಫಟಾರ್ ಹೇಳಿ ಒಂದು ಸಿಡ್ಲು… ಎಲ್ಲಿಯೋ ಹತ್ತರೇ ಬಿದ್ದಿರೆಕ್ಕು…. ದಾಸಪ್ಪ ಮಾಷ್ಟಂಗೆ ಒಂದರಿ ತೆಗಲೆಯ ಎಡದ ಹೊಡೆಲಿ ಒಳದಿಕ್ಕೆ, ಆರೋ ಚಿಮ್ಮಟಿಲಿ ಹಿಡುದು ಪೀಂಟಿಸಿದ ಹಾಂಗೆ ಬೇನೆ ಎದ್ದತ್ತು. ಹಾಂಗೆ ಎದ್ದ ಬೇನೆ ತೆಗಲೆಯ ನಡುವಿಂಗೆ ಹರಡಿ ಅಲ್ಲಿಂದ ಕೊರಳಿನ ಹತ್ತರಂಗೆ ಬಂದು, ಎಡಭುಜಕ್ಕೆ ದಾಂಟಿ, ಇಡಿ ಎಡದ ಕೈಗೆ ಹರಡಿ, ಎಡದ ಕೈ ಇಡೀ ಮರಕಟ್ಟಿದ ಹಾಂಗೆ ಆಗಿ, ಹೆದರಿಕೆಲಿ ದರಿಸಿದ್ದೇ, ಇಡೀ ಊರು ಹಾರಿಹೋಪ ಹಾಂಗೆ ಒಂದು ಆರ್ಭಟೆ ಕೊಟ್ಟು ಎದುರಾಣ ಜಾಲಿಂಗೆ ಕವುಂಚಿ ಬಿದ್ದತ್ತು. ಅದು ಬೀಳುದರನ್ನೇ ಕಾಯ್ತಾ ಇದ್ದ ಹಾಂಗೆ ಮಳೆಯ ಹನಿಗ ಟಪ ಟಪ ಹೇಳಿ ಬೀಳ್ಲೆ ಸುರುವಾಗಿ ಜೊರ್ರೋ ಹೇಳಿ ಮಳೆ ಸೊರುಗುಲೆ ಸುರು ಆತು…..
******************************************************************************************
ಇದಾ…ಅನೀಗ ಇಲ್ಲಿಂದ ಚಾಂಬುತ್ತೆ… ಆ ಮಾಷ್ಟ ಅಲ್ಲಿ ಬಿದ್ದಿದು… ಇನ್ನು ಅದೆಲ್ಲಿಯಾದ್ರೂ ಸತ್ತುಗಿತ್ತು ಹೋಯಿದೋಳಿ ಆದರೆ ಪೋಲಿಸುಗೊ ಬಂದು ಈ ಶ್ಯಾಮಣ್ಣನೇ ಅದರ ಕೊಂದದು ಹೇಳಿ ಎನ್ನ ಎರೆಸ್ಟು ಮಾಡಿ ಕೊಂಡೋದರೆ ಕಷ್ಟ…. ಮುಂದೆಂತಾತು ಹೇಳಿ ಬಪ್ಪವಾರ ನೋಡುವೋ. ಆತಾ…
ನಿಂಗಳ ಒಪ್ಪ ಓದಿ ಕುಷಿ ಆತು…. 🙂
ಮೂರೂ ಭಾಗ ಓದಿ ಅಪ್ಪಗ ಶ್ಯಾಮಣ್ಣ೦ದೆ ಆದ ಒ೦ದು ವಿಶಿಸ್ಟ ಶೈಲಿ ಕಥಗಿದ್ದು ಹೇಳಿ ಅನ್ನಿಸಿತ್ತು.ತಲೆ ಒಳ ಗಿರ್ಗಾಣ್ಸುವ ಭೂತದ ಚಿತ್ರದೆ ಲಾಯಿಕ ಇದ್ದು.
ಒರ್ನ್ಕು, ಬೀಸ ಬೀಸ ನಡವದು.. ಕೆಲವು ಇತ್ಥೀಚೆಗೆ ಬಳಕೆಲಿ ಕಮ್ಮಿ ಆದ ಪದ೦ಗಳ ಓದುವಗ ಹಳೇ ದೋಸ್ತಿಗಳ ಕ೦ಡಸ್ಟೇ ಕುಶಿ ಆತು.
pencilu belakkondu terror kathenda horror kathege tirugida haange kaanthu 🙂
ಕತೆ ಅಲ್ಲದಾ ಭಾವ… ಹೇಂಗೆಲ್ಲ ತಿರುಗುತ್ತೋ ಆರಿಂಗೆ ಗೊಂತು?…. 🙂
ಅಯ್ಯೋ ರಾಮ ! ಒಳ್ಲೆ ಕುತೂಹಲಲ್ಲಿ ಓದುತ್ತಾ ಇಪ್ಪಗ ಇನ್ನಾಣ ವಾರಕ್ಕೆ ಕಾವ ಹಂತ ಬಂತನ್ನೇ ಹೇಳಿ ಬೇಜಾರ.
ನಾಣಿ ಗೆ ಮದ್ಯಾನ್ಹ ಹಶು ಆದರೆ ಹೇಳಿ ತಿಂಬಲೆ ಅವನೆ ಸುಟ್ಟು ಹಾಕಿ ಬೇಳೆ ತಪ್ಪದು ಓದಿ ಪಾಪವೆ ಕಂಡತ್ತು ಅವನ.
ಆ ಮಾಷ್ಟ್ರ ಹಾಂಗೆಲ್ಲ ಎದೆ ಬೇನೆ ಆಗಿ ಬಿದ್ದದು, ಅದರ ತಪ್ಪಿಂದಲೆ, ದಯಮಾಡಿ ಅದರ ನಾಣಿ ಮೇಲೆ ಬಪ್ಪ ಹಾಂಗೆ ಮಾಡೆಡಿ.
ಅದು ಮಾಷ್ಟ್ರಂಗೆ ಕನಸಾಗಿದ್ದು, ಮರುದಿನ ಒಳ್ಲೆ ಬುದ್ಧಿಲಿ ನಾಣಿಯ ಹತ್ರೆ ಪ್ರೀತಿಲಿ ಮಾತಾಡಿ ಅವಂಗೆ ಆದ ಬೇಜಾರವ ಕಮ್ಮಿ ಮಾಡಲಿ, ಈ ರೀತಿ ನಾಣಿ ಮೌನವಾಗಿಯೆ ದಾಸಪ್ಪನ ಬುಧ್ಧಿ ಸರಿ ಮಾಡಲಿ….
ನಿಂಗಳ ಹಾರೈಕೆ ಈಡೇರಲಿ ಹೇಳಿ ಎನ್ನ ಹಾರೈಕೆ…. 🙂
ಪೆನ್ಸಿಲಿಂಗೆ ನಿನ್ನೆ ಮಧ್ಯಾನ್ನಂದ ಕಾದು ಕೂಯಿದೆ. ಬಂತಿಲ್ಲೆ ಹೇಳಿ ಬೇಜಾರಾತು. ದಾಸಪ್ಪ ಮಾಷ್ಟ್ರಿಂಗೆ ಹಾರ್ಟು ಎಟೇಕು ಆದ ಮತ್ತೆ , ಆ ಇರುಳು, ಕಥೆಯ ಬೈಲಿಂಗೆ ಹಾಕಿದವು ಶಾಮಣ್ಣ. ಹಾಂಗಾಗಿ ಓದಲಾತಿಲ್ಲೆ. ಅಂತೂ ಕುತೂಹಲವ ಇನ್ನೂ ಹುಟ್ಟುಸುತ್ತಾ ಇದ್ದು ಕಥೆ. ಆರತಿ ಮನಗೆ ಹೋಪ ದಾರಿಯ ವರ್ಣನೆ ಲಾಯಕಾತು. ಹಾಂಗಿಪ್ಪ ಚಿಮಿಣಿ ದೀಪ ಈಗಾಣ ಮಕ್ಕೊಗೆ ಎಲ್ಲ ಕಂಡೇ ಗೊಂತಿರ ಅಲ್ದೊ ಶಾಮಣ್ಣ.
ಎನಗೆ ಒಂದು ಡೌಟು, ಕತೆಲಿ ಮುಂದೆ ನಮ್ಮ ಹೀರೋ ನಾಣಿ, ದಾಸಪ್ಪ ಮಾಶ್ಟ್ರಿಂಗೆ ಹೆಲ್ಪು ಮಾಡ್ಳೆ ಇಕ್ಕೋ ಹೇಳಿ. ಹೇಂಗಾರು ಮನುಷ್ಯತ್ವ ಹೇಳಿ ನವಗೊಂದು ಇದ್ದಾನೆ. (ದಾಸಪ್ಪ ಮಾಶ್ಟ್ರಿಂಗೆ ಇಲ್ಲೆ ಬಿಡಿ)
ಅದು ಲೇಟಪ್ಪಲೆ ಒಂದು ಕಾರಣ ಇದ್ದು ಭಾವ… ಆದರೆ ಅದು ಗುಟ್ಟು.. ಆರಿಂಗೂ ಹೇಳೆಡಿ. ಆನು ನಿಂಗೊಗೆ ಮಾಂತ್ರ ಹೇಳುದು… ಎಂತಾಳಿ ಹೇಳಿರೆ ಅದೇ ದಿನ ಚೆನ್ನೈ ಭಾವಂದೂ ಎರಡು ಲೇಖನ ಬತ್ತಿದ… 🙂 … ನಾವು ನಂತ್ರ ಹಾಕಿರೆ ನಮ್ಮದು ಮೇಲೆ ಬತ್ತು.. ಅಲ್ಲದಾ. .. ಇದರ ಆರಿಂಗೂ ಹೇಳೆಡಿ… ಚೆನ್ನೈ ಭಾವಂಗೆ ಅಂತೂ ಗೊಂತಪ್ಪಲೇ ಆಗ…. 🙂
ಇಲ್ಲಿ ಎಂತದೋ ಒಪ್ಪ ಬರದಾಂಗೆ ಕಾಣುತ್ತು. ಆದರೆ ಅದು ಎಂತರ ಹೇಳಿ ಓದಲೆ ಕಾಣುತ್ತಿಲ್ಲೆ !!! 🙁
ಒ೦ದು ಪೆನ್ಸಿಲು ಎಷ್ಟು ದೊಡ್ಡ ಕತೆ ಮಾಡಿತ್ತು !
ಶ್ಯಾಮಣ್ಣನ ನಿರೂಪಣಾ ಶೈಲಿ ಕತೆಯ ಮತ್ತೆ ಮತ್ತೆ ಓದುಸಿತ್ತು.
ಅದು ಹಾಂಗೆ ಅಲ್ಲದಾ ಭಾವಾ… ಈ ಸಣ್ಣ ವಿಷಯಂಗಳೆ ಅದಾ ದೊಡ್ಡಕ್ಕೆ ಬೆಳವದು… 🙂
ನಾಣಿ ಪಾಪದವ, ಎರಡು ಹೊತ್ತು ಊಟಕ್ಕೂ ಗತಿ ಇಲ್ಲೆ ಹೇಳಿ ಸಿಕ್ಕಿ ಸಿಕ್ಕಿದ್ದಕ್ಕೆ ಆಪಾದನೆ ಮಾಡಿ ಹೊಡಿವವಕ್ಕೆ ಬುದ್ಧಿ ಕಲ್ಸುತ್ತ ನಾಣೀ..ಆದರೆ ಮಾಷ್ತ್ರನ ಹೃದಯ ಸ್ಥಂಬನಕ್ಕೆ ನಾಣಿಯೇ ಕಾರಣವಾಗಿ ಪುನ ಸುಮ್ಮನೆ ಸಿಕ್ಕಿ ಬೀಳುದು ಬೇಡ ಅವ..ನಾಣಿ ಮಾಷ್ಟಿನ ಕ್ಷಮಿಸಿ ಮನೆಗೆ ಹೋಗಲಿ..ಎಷ್ತಾದ್ರು ಎರಡಕ್ಷರ ಹೇಳಿ ಕೊಟ್ಟವ್ವಲ್ಲದ..?
ಒಪ್ಪಕ್ಕೆ ಧನ್ಯವಾದ. ಎಂತ… ಒಟ್ಟಾರೆ ಮೇಲೆ ನಾಣಿಯ ಎಲ್ಲ ಹೊಡೇಲಿಯೂ ಸಿಕ್ಕಿಸಿಹಾಕುದೇ ಎನ್ನ ಕೆಲಸವೋ? ಹಾಂಗೆಂತ ಆಗ ಬಿಡಿ… 🙂
ಅಬ್ಬಬ್ಬಾ….ಪಾಪಭೀತಿಂದ ನಡುಗುವ ಮಾಷ್ಟ್ರನ ಮನೋಸ್ಥಿತಿಯ ವರ್ಣನೆ ಲಾಯ್ಕ…ಅದ್ಭುತ
ಒಪ್ಪಕ್ಕೆ ಧನ್ಯವಾದಂಗೋ. 🙂
[ಶಾಲೆಯ ಎದುರು ದೊಡ್ಡ ಮಾರ್ಗ ಇಪ್ಪದು. ಅದಲ್ಲಿ ಸೀದ ಎಡತ್ತಿಂಗೆ ತಿರುಗಿ ..] – ಒಟ್ಟಾರೆ ಸಿಕ್ಕುಸಿ ಹಾಕಿದಿ.. , ಎನಗಿನ್ನೊಂದರಿ ಓದಿ ಆಯೇಕ್ಕಷ್ಟೆ
ಹು..! ದೃಶ್ಯಾವಳಿ ಅಲ್ಪ ಇದ್ದು ನೋಡಿಗೊಂಡು ಹೋಪಲೆ ಆರತಿ ನರ್ಸಿಂಗ್ ಹೋಂ ಎತ್ತೆಕ್ಕಾರೆ..
[ಈ ಮನೆಯೇ ದಾಸಪ್ಪ ಮಾಷ್ಟನ ಮನೆ.] ನಿಂಗೊ ಒಟ್ಟಾರೆ ಎಲ್ಲಾಂಗೆ ಕರ್ಕೊಂಡು ಬಂದಿ ಹೇಳಿ ಇನ್ನು ವಾಪಾಸು ಹೋಪಗ ನೋಡಿಗೊಳ್ಳೆಕ್ಕಷ್ಟೇ
[ಇನ್ನು ಗೂಗುಲು ಮೇಪಿಲಿ ಹುಡ್ಕುಲೆ ಹೋಗೆಡಿ ] – ಇದಾ ಗೂಗುಲು ಬಿಡಿಸಿ ನೋಡ್ವೋ ಹೇಳಿ ಗ್ರೇಶಿಯಪ್ಪಗ ಇದನ್ನೇ ನಿಂಗೊ ಹೇಳಿಬಿಟ್ಟಿ !!
[ಅದರ ಅಪ್ಪನ ಮನೆಗೆ ಹೋಯಿದು ] – !!! ಎಲ ಅದುವೆ?!! ದಾಸಪ್ಪ ಮಾಸ್ಟ್ರನ ಒಂದು ಬಗೆ ಮಾಡುತ್ತಾಯ್ಕು ಗ್ರೇಶಿರೆ ನಿಂಗೊ ಬೇರೆ ತಿರ್ಗಾಸಿಂಗೆ ದೂಂಕಿ ಬಿಟ್ಟಿ !)
[ಚಿಮಿಣಿ ಎಣ್ಣೆ ದೀಪ ರೆಡಿ.] – ಸತ್ಯಕ್ಕಾರು ಈಗ ನಿಂಗೊ ಹೇಳಿದ್ದು ನಂಬಲೇ ಬೇಕು – ಇದು ಐವತ್ತೊರಿಷಾಣ ಹಳೇ ಕತೆ
[ಕುಪ್ಪಿಲಿ ಎಣ್ಣೆ ಮುಗುದು ದೀಪ ನಂದಿದ್ದು. ಸೆಕೆಲಿ ಮೈ ಬೇಯ್ತಾ ಇದ್ದು. ಪಟಕ್ಕನೆ ನೆಂಪಾತು…. ನಾಣಿ…!! ] – ನಿಜವಾಗಿ ಹಿನ್ನಲೆ ಸಂಗೀತ ಹಾಕಿ ಧಾರವಾಹಿ ಆಗಿ ಬರೇಕಿದು ಶ್ಯಾಮಣ್ಣನ ನಿರ್ದೇಶನಲ್ಲಿಯೇ.
ಹು! ವಾರದ ಫಿನಿಶಿಂಗ್ ಪಷ್ಟುಕ್ಲಾಸು ಆಯ್ದು ಶ್ಯಾಮಣ್ಣ. ಆ ಚಿತ್ರ ಭಯಂಕರ!
ಶ್ಯಾಮಣ್ಣ… ದಾಸಪ್ಪ ಮಾಸ್ಟ್ರಂಗೆ ತನ್ನ ವೃತ್ತಿಜೀವನಲ್ಲಿ ಒಂದಿರುಳು ಕಂಡ ಕನಸೋ ಹೇಂಗೆ ಕಡೇಂಗೆ .. ಉಮ್ಮಪ್ಪ!
ಚೆನ್ನೈ ಭಾವನ ಒಪ್ಪಕ್ಕೆ ಧನ್ಯವಾದಂಗೋ.
(ದಾಸಪ್ಪ ಮಾಸ್ಟ್ರಂಗೆ ತನ್ನ ವೃತ್ತಿಜೀವನಲ್ಲಿ ಒಂದಿರುಳು ಕಂಡ ಕನಸೋ ಹೇಂಗೆ ಕಡೇಂಗೆ )
ನಿಂಗ ಹೇಳಿದ ಹಾಂಗೇ ….ಉಮ್ಮಪ್ಪ!