Oppanna.com

ಅಮ್ಮಂದ್ರ ಕೈ ಉದ್ದ!

ಬರದೋರು :   ಕಜೆವಸಂತ°    on   05/06/2013    16 ಒಪ್ಪಂಗೊ

ಕಜೆವಸಂತ°
Latest posts by ಕಜೆವಸಂತ° (see all)

ಈಗಾಣ ಕಾಲಲ್ಲಿ, ಲೋಕದ ಜವ್ವನಿಗರು ಎಲ್ಲ ಕಲ್ತು ಪೇಟೆ ಹೊಡೆಂಗೆ ಮೋರೆ ಮಾಡಿಪ್ಪಗ, ಪೇಟೆಯ ಕೆಲಸಂದಲೂ ಹಳ್ಳಿಲಿ, ತನ್ನ ತೋಟಲ್ಲಿ ತನ್ನ ತಾನು ಪೂರ್ತಿ ತೊಡಗಿಸಿಗೊಳ್ಳೆಕ್ಕು, ಸಾವಯವ ಕೃಷಿ ಮಾಡಿ ಅಬ್ಬೆ ಮಣ್ಣಿನ ತಂಪು ಮಾಡೆಕ್ಕು ಹೇಳ್ತ ದೊಡ್ಡ ಕನಸು ಹೊತ್ತುಗೊಂಡು, ಅಬ್ಬೆ ಮಣ್ಣಿಂಗೆ ತಿರುಗಿ ಬಂದೋರು ಕಜೆ ವಸಂತ°. ನಮ್ಮ ಬೈಲಿಂಗೆ ಅಂಬಗಂಬಗ ಭೇಟಿ ಕೊಟ್ಟುಗೊಂಡಿದ್ದರೂ, ಬೈಲಿಂಗೆ ಇಳುದ್ದದು ಕಡಮ್ಮೆ. ಹತ್ತರಾಣ ಬೈಲುಗಳಲ್ಲಿ ಅವರ ಬರವಣಿಗೆಗ ಬತ್ತಾ ಇರ್ತು, ಈಗ ಅಬ್ಬೆ ಭಾಶೆಲಿ ಬರವ ಒಂದು ಮನಸ್ಸಿಲಿ ನಮ್ಮ ಬೈಲಿಂಗೂ ಬಂದು ಶುದ್ದಿ ಹೇಳುಲೆ ಸುರು ಮಾಡಿದ್ದವು. ಹೆತ್ತ ಅಬ್ಬೆಯ ಮೇಲೆ ಗೌರವ, ಪ್ರೀತಿ ಇಪ್ಪ ಹಾಂಗೇ,  ಹೊತ್ತ ಅಬ್ಬೆಯ ಮೇಲೆಯೂ ಅದೇ ಪ್ರೀತಿ, ಗೌರವ, ವಿಶ್ವಾಸವ ವಸಂತ° ಮಡಿಕ್ಕೊಂಡಿದವು.  ಅದೇ ಮೂಲ ಉದ್ದೇಶದ ಶುದ್ದಿಲಿಯೇ, “ವಿಶ್ವ ಪರಿಸರದ ದಿನ” ಆಗಿಪ್ಪ ಇಂದು ಅಬ್ಬೆ ಪ್ರಕೃತಿಯ ಶುದ್ದಿಲಿ ಬೈಲಿಂಗೆ ಬತ್ತಾ ಇದ್ದವು.

ಬೈಲಿಂಗೆ ಕಜೆ ವಸಂತರಿಂಗೆ ಆತ್ಮೀಯ ಸ್ವಾಗತ ಹೇಳ್ತಾ, ಅವರ ಸಾಹಿತ್ಯ ಕೃಷಿ ಬೈಲಿಲಿಯೂ ನಿರಂತರ ಇರಲಿ ಹೇಳ್ತ ಹಾರೈಕೆ.

ಎಲ್ಲೋರೂ ಕಜೆ ವಸಂತರ ಶುದ್ದಿಗಳ ಓದಿ, ಒಪ್ಪ ಕೊಡಿ.

~

ಬೈಲಿನ ಪರವಾಗಿ

~*~

 

ಒಪ್ಪಣ್ಣನ ಬೈಲು ಸದ್ದಿಲ್ಲದ್ದೆ ಮಾಡ್ತಾ ಇಪ್ಪ ಕ್ರಾಂತಿ ಕಣ್ಣು ಮುಚ್ಚಿ, ಕೆಮಿ ಮುಚ್ಚಿ ಕೂದುಗೊಂಡಿದ್ದರೂ ಮನಸ್ಸಿಂಗೆ ಗೊಂತಾಗದ್ದೆ ಇರ. ಅಂತರ್ಜಾಲ ಹೇಳಿಕೇಳಿ ಒಂದು ಅಮೂರ್ತ ಮಾಧ್ಯಮ. ಹೀಂಗಿಪ್ಪ ಅಂತರ್ಜಾಲ ಕೇಂದ್ರಿತ, ಅಮೂರ್ತವಾದ ಹರಟೆ ಕಟ್ಟೆಲಿ ಬೈಲು, ಚಾವಡಿ, ನೆರೆಕರೆ ಇತ್ಯಾದಿ ಮೂರ್ತ ಕಲ್ಪನೆಗಳ ಹುಟ್ಟುಹಾಕಿ ಇದರ ಹೃದಯಕ್ಕೆ ಹೆಚ್ಚು ಹತ್ತರೆ ತಯಿಂದು ಒಪ್ಪಣ್ಣ.ಕಾಮ್.

ಹೀಂಗಿಪ್ಪ ಬೈಲಿಂಗೆ ಶ್ರೀಅತ್ತಿಗೆ [ನಿಂಗಳ ಶ್ರೀಅಕ್ಕ°] ಎನ್ನ ಆಗ್ರಹಪೂರ್ವಕವಾಗಿ ಸುಮಾರು ಸತ್ತಿ ದಿನಿಗೇಳಿದ್ದವು. ಒಪ್ಪಣ್ಣ ಒಂದೆರಡು ಸರ್ತಿ ಸಿಕ್ಕಿ ಬೈಲಿಂಗೆ ಬಾ ಹೇಳಿ ಆಹ್ವಾನಿಸಿದ°. ಎನಗೆ ಇಷ್ಟರವರೆಗೆ ಬಪ್ಪಲಾಯಿದಿಲ್ಲೆ. ಬೈಲಿನ ಸಹೃದಯಿ ಸ್ನೇಹಿತರು ಕ್ಷಮಿಸಲಿ.
ಎನ್ನ ಹೆಸರು ವಸಂತ ಕಜೆ. ಊರು ಮಂಚಿ. ವೃತ್ತಿ ಸಾಫ್ಟ್ವೇರು. ಕೃಷಿ ಮತ್ತು  ಸಸ್ಯ ವಿಜ್ಞಾನದ ಅಭ್ಯಾಸಿ. ಆನು ಓದುದು, ಬರವದು ಕೃಷಿಯ, ಗೆಡುಗಳ, ಪ್ರಕೃತಿಯ ವಿಷಯವೇ. ನಿಂಗಳ ಬೈಲಿಂಗೆ ತಾಗಿ ಎನ್ನದೊಂದು ಸಣ್ಣ ದರ್ಕಾಸ್ತಾದ ಜಾಗೆ ಇದ್ದು. ಅದರ್ಲಿ ಆನು ಎನ್ನ ಮನಸ್ಸಿಂಗೆ ಕಂಡದರ ಕನ್ನಡಲ್ಲಿ, ಇಂಗ್ಲೀಷಿಲಿ ಬರೆತ್ತಾ ಇರ್ತೆ. ಬೈಲಿಂಗೆ ಬಂದ ಮೇಲೆ ಎಂತಾರು ಹವ್ಯಕಲ್ಲಿ ಬರೇಕನ್ನೆ..

~

ಅಮ್ಮಂದ್ರ ಕೈ ಉದ್ದ!

ಆನು, ಎನ್ನ ಅಣ್ಣ ಸಣ್ಣಾದಿಪ್ಪಗ ಕಜೆ ಬೈಲಿಲಿ ಒಂದು ಏಕೋಪಾಧ್ಯಾಯ ಶಾಲೆಗೆ ಹೋಯ್ಕೊಂಡಿತ್ತಿದ್ದೆಯೊ°. ಶಾಲೆ ಬಿಟ್ಟ ಮೇಲೆ ಶಾಲೆ ಹತ್ರೆ ಇಪ್ಪ ಕೆಳಾಣಜ್ಜನ ಮನೆಗೆ ಹೋಗಿ ಅಲ್ಲಿ ರಜ ಹೊತ್ತು ಆಟಾಡಿ ಮನೆಗೆ ಬಪ್ಪದು ಎಂಗಳ ನಿತ್ಯಾಣ ದಿನಚರಿ. ಕೆಳಾಣಜ್ಜನ ಮನೆಲಿ ಆಟಾಡಿ ಬಂದರೆ ಮಕ್ಕೊ ಮನೆಲಿ ಇರುಳು ಉಣ್ಣವು ಹೇಳಿ ಲೆಕ್ಕವೇ! ಕೆಳಾಣಜ್ಜನ ಹೆಂಡತ್ತಿ (ಕೆಳಾಣಜ್ಜಿ), ಹೊತ್ತು ಕಂತುಲಪ್ಪಗ ಎಂಗೊಗೆ ಬೇಕಾಷ್ಟು ರುಚಿರುಚಿ ತಿಂಡಿಕೊಡುಗು. ಎಂಗೊ ಹೊಟ್ಟೆ ಬಿರೀಯ ತಿಂದು ಬಂದರೆ ಮತ್ತೆ ಮನೆಲಿ ಮಿಂದಿಕ್ಕಿ ಒರಗುದು ಮಾಂತ್ರ ಕೆಲಸ. ಇಂದಿಂಗೂ ಹೊಟ್ಟೆ ತುಂಬ ಆರಾರು ಬಡುಸಿದರೆ ಕೆಳಾಣಜ್ಜಿ ಹಾಂಗೆ ಬಡುಸಿತ್ತು ಹೇಳಿ ಎಂಗೊ ಹೇಳುವ ಕ್ರಮ. ಅಬ್ಬೆಕ್ಕಳ ಕೈ ಉದ್ದ ಹೇಳಿ ಆನು ಹೇಳಿದ್ದು ಆ ಅರ್ಥಲ್ಲಿ. (ಕೆಳಾಣಜ್ಜಿ ಸಣ್ಣ ಪ್ರಾಯಲ್ಲಿ ಅನಾರೋಗ್ಯ ಆಗಿ ಸ್ವರ್ಗವಾಸಿ ಆದವು. ಅವು ಅಲ್ಲಿ ನೆಮ್ಮದಿಲಿರ್ಲಿ..)

ಅಬ್ಬೆಕ್ಕಳ ಕೈ ಉದ್ದ ಇಪ್ಪದು ಎಲ್ಲ ಮಕ್ಕಳ ಅನುಭವಕ್ಕೆ ಬಪ್ಪ ವಿಷಯ, ನಿಂಗೊಗುದೆ ಬಂದಿಕ್ಕು. ಮಕ್ಕೊ ಹೊಟ್ಟೆ ತುಂಬ ತಿಂದರೆ ಅಪ್ಪಷ್ಟು ಸಂತೋಷ ಅಬ್ಬೆಗೆ ಸ್ವತ: ಉಂಡರೆ ಆಗ. ದನಕ್ಕೆ ಹಾಲು ಉಣುಸಿ ಅಪ್ಪಗ ಅಪ್ಪ ಸಂತೋಷ ಕಂಜಿಗೆ ಹಾಲು ಕುಡಿವಗ ಅಪ್ಪ ಸಂತೋಷಂದ ಹೆಚ್ಚು ಹೇಳಿ ಒಂದು ಮಾತಿದ್ದು. ಸಣ್ಣಾದಿಪ್ಪಗ ಎನಗೂ‌, ಅಣ್ಣಂಗೂ ಮ್ಯಾಗಿ ಮಾಡಿ ತಿಂಬದು ಹೇಳಿದರೆ ಅದು ಒಂದು ದೊಡ್ಡ ಆಶೆ ಅಪ್ಪ ವಿಷಯ. ಅವಗ ಕೈಲಿ ಎಳದ್ದು ಕರ್ಚು ಮಾಡುವಷ್ಟು ಪೈಸೆ ಇರ. ಒಂದೋ, ಎರಡೋ ಪಾಕೆಟ್ಟು ಮಕ್ಕಳ ಆಶೆಗೆ ಹೇಳಿ ತಕ್ಕು. ಮ್ಯಾಗಿ ಮಾಡಿ ಅಪ್ಪಗ ಅಮ್ಮ ಎನಗೆ ಹಶು ಇಲ್ಲೆ ಹೇಳಿ ಯಾವಗೊಳು ಹೇಳುಗು. ಎಂಗೊಗೆ ಮನಸ್ಸಿಲಿ ಗೊಂತಕ್ಕು ಅಮ್ಮ ಎಂಗೊಗೆ ಹೆಚ್ಚು ಸಿಕ್ಕಲಿ ಹೇಳಿ ಹಶುವಿಲ್ಲೆ ಹೇಳುದು ಹೇಳಿ; ಆದರೆ ನೀನು ತಿನ್ನಮ್ಮಾ ಹೇಳ್ಲೆ ಆಶೆಯೂ ಅಕ್ಕು. ಹೇಂಗಾರು ಅಮ್ಮ ತಿಂಬಲಿತ್ತಿಲ್ಲೆ, ಅದು ಬೇರೆ ವಿಷಯ. ಇದು ಮ್ಯಾಗಿ ಒಂದರ ವಿಷಯ ಅಲ್ಲ ಮತ್ತು ಹೀಂಗೆ ಮಾಡುದು ಎನ್ನ ಅಮ್ಮ ಒಂದೇ‌ ಅಲ್ಲ. ಇದು ನಿಂಗಳ ಎಲ್ಲೋರ ಅನುಭವೂ ಆದಿಕ್ಕು.

ನಮ್ಮ ಅಮ್ಮಂದ್ರಿಂಗೇ ಅಮ್ಮನ ಹಾಂಗಿಪ್ಪ ಇನ್ನೊಂದು ದೊಡ್ಡಮ್ಮ ಇದ್ದು. ಆ ಅಮ್ಮನ ಹೆಸರು ಪ್ರಕೃತಿ ಹೇಳಿ. ಈ ಅಮ್ಮನ ಕೈಯ ಉದ್ದ, ಅಗಲ ನಮಗೆ ಅಳವಲೆಡಿಯ. ಜಾಲಕೊಡೀಲಿಪ್ಪ ದೊಡ್ಡಮಾವಿನ ಮರ ಹಾಂಗಿಪ್ಪ ಒಂದು ಅಮ್ಮ. ಆ ಮರವ ಸುತ್ತಿ ಹಿಡೆಯೆಕ್ಕಾರೆ ಮೂರು ಜನಬೇಕಕ್ಕು. ಅದಕ್ಕೊಂದು ಐನೂರು ವರ್ಷ ಅಕ್ಕು ಹೇಳಿ ಆನು ಗ್ರೇಶಿಗೊಂಬದಿದ್ದು. ಹೇಳಿದರೆ ಈಸ್ಟ್ ಇಂಡಿಯ ಕಂಪನಿ ಭಾರತಕ್ಕೆ ಬಂದಪ್ಪಗ ಈ‌ ಮರ ಯೌವನಲ್ಲಿದ್ದಿಕ್ಕು! ಎಷ್ಟು ದೊಡ್ಡ ಜೀವನ. ಅದಕ್ಕೆ ತಕ್ಕ ಹಾಂಗಿಪ್ಪ ದೊಡ್ಡ ನಿಲುಮೆ. ಅದರ ಮಾವಿನ ಹಣ್ಣು ಒಂದರಿ ತಿಂದವ ಬಿಡ° ಅಷ್ಟು ಸೀವು. ಅದರ್ಲಿ ಏನಿಲ್ಲೆ ಹೇಳಿದರೂ ಒಂದಿಪ್ಪತ್ತೈದು ಜಾತಿಯ ಸಸ್ಯಂಗೊ ಅದರಿಂದ ಹೆಚ್ಚು ಜಾತಿಯ ಕ್ರಿಮಿಕೀಟಂಗೊ ಆಶ್ರಯ ಪಡಕ್ಕೊಂಡು ಇದ್ದವು – ಹಾಂಗಿಪ್ಪ ಮಹಾಮಾತೆ ಅದು.

ಆ ಮರದ ಕೆಳಾಂದ ಮೇಲೆವರೆಗೆ ಅರ್ಕಬೂರು(ಅಡ್ಕಬೀಳು/Pothos scandens) ಹಬ್ಬಿಗೊಂಡಿದ್ದು. ಅರ್ಕಬೂರಿನ ಬೇರಿನ ಜಜ್ಜಿ ಎಣ್ಣೆಸಮೇತ ತಲೆಗೆ ಹಚ್ಚಿದರೆ ತಲೆ ಕಜ್ಜಿ, ಕುರು ಗುಣ ಆವ್ತಡ*. ಮರದ ಅರ್ಧಲ್ಲಿ ಒಂದೆರಡು ಹಳೇ ತೋರದ ಗೆಲ್ಲುಗೊ ತುಂಡಾಗಿ ಬಿದ್ದದು ಮರಕ್ಕೆ ಗೋಳೆ ಬಿದ್ದಿದು. ಅದರ್ಲಿ ಮರಕೆಸವು ಧಾರಾಳ ಬೆಳೆತ್ತು ಮಳೆಗಾಲಲ್ಲಿ. ಬೇಸಗೆಲಿ ಕಾಣ್ತಿಲ್ಲೆ ಅದರೆ ಗಡ್ಡೆ ಮಾಂತ್ರ ಇರ್ತು. ಇನ್ನೊಂದು ಜಾತಿಯ ಗೆಡು ಇದ್ದು ಈ ಮರಲ್ಲಿ. ಅದರ ಹೆಸರು ಮರಚಪ್ಪರಿಕೆ (Drynaria Quercifolia). ಹತ್ತರಂದ ನೋಡಿದರೆ ಕಾಡಳಿನ ಕಂದು ಬಣ್ಣದ ಗಡ್ಡೆಯ ಹಾಂಗಿಪ್ಪದು ಇದ್ದು ಇದಕ್ಕೆ. ಮುಟ್ಟಿದರೆ ಮೆಸ್ತಂಗೆ. ಇದರ ಬಂದಣಿಗೆ (parasite) ಹೇಳಿ ಊರಿನವು ತಪ್ಪು ತಿಳ್ಕೊಳ್ತವು. ನಿಜವಾಗಿ ಇದು ಮರಂದ ಸತ್ವ ಹೀರ್ತಿಲ್ಲೆ. ಇದು ಒಂದು ಜಾತಿಯ ಫರ್ನ್. ಮರದ ಮೇಲೆ ಬೆಳವ ಜಾತಿ (epiphytic ಎಪಿ=ಹೆರ/ಮೇಲೆ, ಫೈಟ್=ಗೆಡು). ಡ್ರೈನೇರಿಯಾಕ್ಕೆ ಸಿಕ್ಕಾಪಟ್ಟೆ ಔಷಧೀಯ ಉಪಯೋಗ ಇದ್ದು. ಈ ಗೆಡು ದೊಡ್ಡ ಮಾವಿನ ಮರಲ್ಲಿ ಎಷ್ಟು ಇದ್ದು ಹೇಳಿದರೆ ಅದರ ಹರುಂಬಿ ಕೆಳಹಾಕಿ ತೂಕಮಾಡಿದರೆ ಬಹುಶ: ಒಂದು ಸಾವಿರ ಕೇಜಿ ತೂಗುಗು ಹೇಳಿ ಎನ್ನ ಕಣ್ಣಂದಾಜಿ.

ಅಲ್ಲಲ್ಲಿ ಮರದ ಗೆಲ್ಲಿಲಿ ಸಿಂಗಾರದ ಹಾಂಗೆ ಒಂದು ಆರ್ಕಿಡ್ ನೇಲಿಗೊಂಡಿರ್ತು (ಅದರ ಹೆಸರು ಎನಗೆ ಗೊಂತಿಲ್ಲೆ). ಮಾವಿನ ಮರದ ಮೇಲೆ ಸಾಮಾನ್ಯವಾಗಿ ಕಾಂಬಲೆ ಸಿಕ್ಕುವ ಒಂದು ಬಂದಣಿಗೆ (dendrophthoe falcata) ಧಾರಾಳ ಇದ್ದು ಬೇರೆ ಬೇರೆ ಗೆಲ್ಲಿಲಿ. ಈ ಗೆಡು ಒಂದು ರಜ ಹೆಚ್ಚಾದರೆ ಡೇಂಜರ್. ಅದು ಮರವ ಹೀರಿ ಬೆಳವ ಜಾತಿ. ಆದರೆ ಈ‌ ಬಂದಣಿಗೆಯೂದೆ ಸುಮಾರು ಇತರೆ ಜಾತಿಗೊಕ್ಕೆ ಅಬ್ಬೆಯೇ (ಉದ್ದ ಕೈ ಅದಕ್ಕುದೇ). ಅದರ ಬಗ್ಗೆ ಆನು ವಿವರವಾಗಿ ಇಲ್ಲಿ ಬರದ್ದೆ. ಮರದ ಅರ್ಧಲ್ಲಿ ಒಂದು ಆಲದ ಗೆಡು ಹುಟ್ಟಿ ಬೆಳಕ್ಕೊಂಡು ಇದ್ದು. ಇನ್ನೂ ಹತ್ತಾರು ಜಾತಿಯ ಹುಲ್ಲುಗೊ ಇದರ ಮೇಲೆ ಇದ್ದವು. ಈಗ ಕಾಣ್ತವಿಲ್ಲೆ. ಮಳೆ ಬಂದಪ್ಪಗ ಚಿಗುರಿ ಮೇಲೆ ಬತ್ತವು. ಈ‌ ಎಲ್ಲಗೆಡುಗಳ ಸತ್ತ ಭಾಗಂಗಳ, ಮರದ ಒಣಗಿದ ತೊಗಟೆಯ ತಿಂಬಲೆ ರಾಶಿರಾಶಿ ಒರಳೆ ಮರದ ಮೇಲೆ ಇದ್ದು. ಮೆಡಿ ಕೊಯ್ವಲೆ ಹತ್ತಿದವಕ್ಕೆ ಮರುಳು ಹಿಡಿವಷ್ಟು ಉರಿ, ಕೊಯಿಂಪಂಗೊ ಇದ್ದವು. ಬೇರೆ ಸಣ್ಣ ಕೀಟಜಾತಿಗಳ ಲೆಕ್ಕ ಮಾಡ್ಲೆ ನಮಗೆಡಿಯ.

ಇಷ್ಟಲ್ಲದ್ದೆ ಮರದ ಕಾಂಡದ ಮೇಲೆ ಒಂದು ಬೆಳಿ/ಹಾಲು/ಮಾಸಲು ಬಣ್ಣದ್ದು ತೇಪೆ ಹಾಕಿದ ಹಾಂಗೆ ಅಲ್ಲಲ್ಲಿ ಕಲೆ ಇರ್ತನ್ನೆ? ಅದೂ ಒಂದು ಜೀವಿಯೇ! ಅದರ ಹೆಸರು ಲೈಕೆನ್ (lichens). ಅದರ ಹತ್ರಂದ ನೋಡಿದರೆ ಇದಕ್ಕೆ ಜೀವ ಇದ್ದು ಹೇಳಿ ವಸಂತ° ಲೊಟ್ಟೆ ಹೇಳಿದ್ದು ಹೇಳಿ ನಿಂಗೊ ಗ್ರೇಶುವಿ. ಇದೂ ಒಂದು epiphyteಏ.
ಅವೆಲ್ಲಕ್ಕೂ ಈ‌ ಮರ ಸಾಂಕಬ್ಬೆ!

ಒಂದರ್ಥಲ್ಲಿ ನೋಡಿದರೆ ಮಾವಿನ ಮರ ಹೂಗು ಹೋಪವರೆಗೆ ಅಮ್ಮನೂ ಅಲ್ಲ ಅಪ್ಪನೂ ಅಲ್ಲ, ಏಕೆ ಹೇಳಿದರೆ ಅವಗ ಅದರ್ಲಿ ಸ್ತ್ರೀಪುರುಷ ಭಾಗಂಗೊ ಎರಡೂ‌ ಇಲ್ಲೆ. ಒಂದರಿ ಹೂಗಪ್ಪಲೆ ಸುರುವಾತು ಅದರ್ಲಿ ಎಷ್ಟು ಲಕ್ಷ ಕೋಟಿ ಹೂಗುಗೊ ಇಕ್ಕು? ಲೆಕ್ಕಕ್ಕೆ ಸಿಕ್ಕ.  ಹೂಗಿನ ಗಂಡು ಹೆಣ್ಣು ಭಾಗಂಗೊ ಎರಡೂ ಬೆಳದು ಪರಾಗಸ್ಪರ್ಶಕ್ಕೆ ರೆಡಿ ಆದ ಸಮಯವ anthesis ಹೇಳ್ತವು. ಅವಗ ಮರದ ಮೇಲೆ ತುಂಬ ಜೇನು ಹುಳುಗೊ, ಇತರೆ ಕೀಟಂಗೊ ಹಾರ್ತವು. ಮಾವಿಂಗೆ ಅವರ ಮೂಲಕ ಅಪ್ಪ ಪರಾಗ ಸ್ಪರ್ಶದ ಆಶೆ. ಅವರ ಕೈಲಿ ಮರ ದರ್ಮಕ್ಕೆ ಕೆಲಸ ಮಾಡ್ಸಿಗೊಳ್ತಿಲ್ಲೆ. ಅವಕ್ಕೆ ಬದಲಾಗಿ ಮಕರಂದ, ಪರಾಗ ತಿಂಬಲೆ ಕೊಡ್ತು. ಒಂದು ಹೂಗು (ಮಾವಿನ ಹೂಗಲ್ಲ, ಹೂಗು in general), ಅದರ ಅಗತ್ಯಂದ 100 ಪಟ್ಟು ಹೆಚ್ಚು ಪರಾಗ ಉತ್ಪತ್ತಿ ಮಾಡ್ತಡ!. ಹೀಂಗೆ ಒಟ್ಟು ಹೂಗಾದ್ದರ್ಲಿ ಒಂದು ಸಣ್ಣ ಅಂಶ ಮೆಡಿ ನಿಲ್ತು. ಒಳ್ದ ಹೂಗು ಬಾಡಿ ಬಿದ್ದು ಹೋವ್ತವು. ಮತ್ತೆ ಪುನಾ ಸಾವಿರಗಟ್ಲೆ ಮೆಡಿ ಬಾಡಿ ಉದುರಿ ಹೋವ್ತವು. ಸೀಸನ್ನಿನ ಮೊದಲಾಣ ಮಾವಿನಕಾಯಿ ಚಟ್ನಿ ಹೀಂಗೆ ಉದುರಿದ ಮೆಡಿಂದಲೇ‌ ಅಪ್ಪದನ್ನೆ? ಹೀಂಗೆ ಉದುರಿದ ಹೂಗು, ಮೆಡಿ, ಸೊಪ್ಪು, ಗೆಲ್ಲು ಒಂದೂ ಪ್ರಕೃತಿಲಿ ವೇಸ್ಟ್ ಅಲ್ಲ. ಅದರ ತಿಂದು ಬದ್ಕುಲೆ ಬೇರೆ ಬೇರೆ ಜಾತಿಯ ಶಿಲೀಂಧ್ರಂಗೊ, ಹುಳುಹುಪ್ಪಟೆಗೊ ಕಾಯ್ತಾ ಇರ್ತವು ಕೆಳ. ಅಲ್ಲದ್ರೆ ಆಲೋಚನೆ ಮಾಡಿ, ಮರದ ಕೆಳ ಎಲ್ಲ ಸೂಟುಮಣ್ಣಿಂಗೆ ರಾಶಿ ಹಾಕಿದಾಂಗೆ ಸೊಪ್ಪಿನ, ಗೆಲ್ಲಿನ ರಾಶಿ ಇರದ?

ಮೆಡಿ ಆದಪ್ಪಗ ಹೂಗಿಲಿಪ್ಪ ಕೇಸರ(stamen), ಪರಾಗ(pollen) – ಗಂಡು ಭಾಗಂಗೊ – ಎಲ್ಲ ಉದುರಿ ಮುಗುದು ಫಲಕಟ್ಟಿದ ಕಾಯಿಗೊ ಮಾಂತ್ರ ಮರಲ್ಲಿ ಒಳಿತ್ತು. ನಮ್ಮ(ಮನುಷ್ಯರ) ದೃಷ್ಟಿಂದ ಯೋಚನೆ ಮಾಡಿದರೆ ಈಗ ಮರ ಹೆಣ್ಣು! ಒಂದು ದೊಡಾ… ಅಬ್ಬೆ! ಅದು ಈಗ ಲಕ್ಷಗಟ್ಲೆ ಮಕ್ಕಳ ಗರ್ಭ ಧರಿಸಿ ಬೆಳೆಶುತ್ತಾ ಇದ್ದು. ಬೆಳೆಯದ್ದ ಕಾಯಿಗೊ ಈಗ ಹುಳಿ ಇರ್ತವು – ಹಕ್ಕಿಗೊಕ್ಕೆ ಪ್ರಾಣಿಗೊಕ್ಕೆ ಆಕರ್ಷಕ ಆಗದ್ದ ಹಾಂಗೆ – ಈ‌ ಅಬ್ಬೆ ಮರದ ತಲೆ ನೋಡಿ! ಎಳತ್ತು ಮಾವಿನ ಕಾಯಿಯ ಇಷ್ಟ ಪಟ್ಟು ತಿಂಬವ° ಮನುಷ್ಯ ಮಾಂತ್ರ ಇಕ್ಕು. ನಾವು ಒಂದು ಅರ್ಧ ವಾಶಿ ಮೆಡಿ ಕೊಯ್ದು ತೆಗಗು ಉಪ್ಪಿನ ಕಾಯಿಗೆ, ನೀರು ಮಾವಿನ ಕಾಯಿಗೆ. ಮತ್ತೆ ಒಳ್ದು ಹಣ್ಣಾಗಿ ಉದುರ್ತು. ಹಣ್ಣು ಯಾವಗ ಆವ್ತು ಹೇಳಿದರೆ ಗೊರಟಿನೊಳ ಇಪ್ಪ ‘ಬಿತ್ತು’ ಬೆಳದಪ್ಪಗ ಆವ್ತು. ಹಣ್ಣು (pulp) ಹೇಳುದು ನಿಜವಾಗಿ ಹೂಗಿನ ಗರ್ಭಾಶಯದ ಹೊರಗೋಡೆ (pericarp), ಪೆರಿ ಹೇಳಿದರೆ ಹೆರಾಣದ್ದು, ಕಾರ್ಪ್ ಹೇಳಿದರೆ ಬೀಜ = ಬೀಜದ ಹೆರಾಣ ಕವಚ). ಅಡಿಲಿ ಹೋಪವು ಉದುರಿದ ಹಣ್ಣಿನ ಹೆರ್ಕಿ ತಿಂದು ಗೊರಟಿನ ಇಡ್ಕಿದರೆ ಅದುವೇ‌ ನಾವು ಮರಕ್ಕೆ ಮಾಡುವ ಉಪಕಾರ. ಅಷ್ಟಕ್ಕೆ ಬೇಕಾಗಿ ಮರ ಇಷ್ಟು ಕಷ್ಟ ಬಂದದು. ಗೊರಟಿನೊಳ ಸ್ಥೂಲವಾಗಿ ಎರಡು ವಿಷಯ ಇರ್ತವು. ಒಂದು ಹುಟ್ಟುಲಿಪ್ಪ ಕೊಡಿಪ್ಪು. ಇದು ಗಾತ್ರಲ್ಲಿ ಸಣ್ಣದು. ಹೆಚ್ಚಿಗೆ ಇಪ್ಪದು ಈ ಕೊಡಿಪ್ಪಿಂಗೆ ಇಪ್ಪ ಶುರುವಾಣ ಆಹಾರ (endosperm). ಇದು ಅಬ್ಬೆ ಮರ ಪ್ರತೀ‌ ಮರಿಗೂ ಹೇಳಿ ಕಟ್ಟಿ ಕೊಡುದು ಪ್ರೀತಿಲಿ. ಗೊರಟಿನೊಳ ಆಹಾರ ಇರ್ತು ಹೇಳಿ ಹತ್ತಾರು ಜಾತಿಯ ಕ್ರಿಮಿಕೀಟಂಗೊಕ್ಕೂ ಗೊಂತಿರ್ತು. ಅವೆಲ್ಲ ಒಟ್ಟೆ ಮಾಡಿ ಅದರ ತಿಂತವು. ಸುಮಾರು ಗೊರಟುಗೊ ಹೀಂಗೆ ಹುಟ್ಟದ್ದೆ ಸಾಯ್ತವು.

ಹೀಂಗೆ.. ಮಾವಿನ ಮರಲ್ಲಿ ಆದ ಹೂಗಿಂಗೆಲ್ಲ ಪರಾಗ ಸ್ಪರ್ಶ ಆವ್ತಿಲ್ಲೆ. ಪರಾಗಸ್ಪರ್ಶ ಆದ್ದೆಲ್ಲ ಕಾಯಿ ಆವ್ತಿಲ್ಲೆ. ಕಾಯಿ ಆದ್ದೆಲ್ಲ ಹಣ್ಣಾವ್ತಿಲ್ಲೆ. ಹಣ್ಣಾದ್ದೆಲ್ಲ ಸರಿ ಜಾಗೆಗೆ ಹೋಗಿ ಬೀಳ್ತಿಲ್ಲೆ. ಬಿದ್ದದೆಲ್ಲ ಹುಟ್ಟುತ್ತಿಲ್ಲೆ. ಹುಟ್ಟಿದ್ದೆಲ್ಲ ಬೆಳೆತ್ತಿಲ್ಲೆ. ಈ‌ ‘ಇಲ್ಲೆ’ಗೊ ಮಾವಿನ ಮರದ ಪಾಲಿಂಗೆ. ಆದರೆ ಅದರ ತಿಂದು ಜೀವನ ಮಾಡುವ ಆಶ್ರಿತ ಜೀವಿಗೊಕ್ಕೆ ಆ ‘ಇಲ್ಲೆ’ಗೊ ಎಲ್ಲ ‘ಇದ್ದು’ಗೊ. ಅಲ್ಲಲ್ಲಿ ಚೂರುಚೂರು ಉದುರಿದ ಕಾರಣ ಅವೆಲ್ಲ ಬದುಕುತ್ತವು. ಕಲ್ಲಿನಲಿ ಹುಟ್ಟಿ ತಾ ಕೂಗುವಾ ಕಪ್ಪೆಗೆ ಅಲ್ಲೆ ಅಹಾರವ ಇಟ್ಟವರು ಯಾರೋ? ಹೇಳಿ ಅನುಭಾವಿಗೊ ಹೇಳಿದ್ದು ಇದನ್ನೆ. ಈ ದೊಡ್ಡ ಮಾವಿನ ಮರ ಮಾಂತ್ರ ಅಬ್ಬೆ ಹೇಳಿ ಅಲ್ಲ. ಅದರಿಂದ ಉಪಕೃತ ಅಪ್ಪ ಒಂದೊಂದು ಜೀವಿಯೂ ಇನ್ನೆಷ್ಟೋ ಜೀವಿಗೊಕ್ಕೆ ಅಬ್ಬೆಕ್ಕಳೇ. ಮಾವಿನ ಮರ ದೊಡ್ಡ ಇಪ್ಪ ಕಾರಣ ನಮಗೆ ಕಾಣ್ತಷ್ಟೇ.

ಜಾಲ ಕೊಡಿಯಂಗೆ ಹೋಗಿ ಮರದಡಿಲಿ ನಿಂದರೆ ಎನಗೆ ಮೇಲೆ ಬರದ ಯೋಚನೆಗೊ ಎಲ್ಲ ಬತ್ತು. ಕಡಿವೋರ, ಮಾರುವೋರ ದೃಷ್ಟಿಲಿ ಮಾವಿನ ಮರಕ್ಕೆ ರೇಟಿಲ್ಲೆ (ಆದರೂ ಕಡಿತ್ತವು ಅದು ಬೇರೆ). ಅರ್ಕಬೂರಿಂಗೆ, ಬಂದಣಿಗೆಗೆ, ಹಾತೆಪಾತೆಗೊಕ್ಕೆ, ಹಕ್ಕಿಗೊಕ್ಕೆ ಯಾವುದಕ್ಕೂ ರೇಟಿಲ್ಲೆ. ಮಂಗ್ಳೂರಿಲಿ ಯಾವುದು ಸೇಲಾವ್ತು? ಅದಕ್ಕೆ ಮಾಂತ್ರ ರೇಟು. ನಾವೀಗ ನೀರನ್ನೂ ಮಾರ್ತು, ಪೈಸೆ ಕೊಟ್ಟು ತೆಕ್ಕೊಳ್ತು. ನಮ್ಮ ಸಂಸ್ಕಾರ  ಆ ಲೆವೆಲ್ಲಿಂಗೆ ಬಯಿಂದು. ಹೀಂಗೆ ರೇಟು ನೋಡಿಗೊಂಡು ಕೂದರೆ ಮಾವಿನ ಮರಕ್ಕೆ ಹೂಗಿನ, ಹಣ್ಣಿನ, ಸೊಪ್ಪಿನ, ಗೆಲ್ಲಿನ ಅದರ ಆಶ್ರಿತ ಜೀವಿಗೊಕ್ಕೆ ಕೊಡ್ಲೆಡಿಗ? ಅವಕ್ಕೆಲ್ಲ ಕೈಬಿಡ್ಸಿ ಬಡ್ಸುವ ಅಬ್ಬೆ ಅಪ್ಪಲೆಡಿಗ?

ನಾವು ನಮ್ಮ ಅಬ್ಬೆಕ್ಕಳ ಹಾಂಗೆ ಸುತ್ತುಮುತ್ತಲಿನ ನೋಡ್ಲೆ ಕಲಿಯೆಕ್ಕು. ಅವಗ ಮಾಂತ್ರ ನಮ್ಮ ಹೊಟ್ಟೆಲಿ ಹುಟ್ಟಿದ ಮಕ್ಕೊಗೆ ಎಂತಾರು ಒಳಿಗು…

~*~

ಸೂಃ *ಮದ್ದಿನ ವಿವರ :‌ ಸಹಸ್ರಾರ್ಧ ವೃಕ್ಷಗಳ ವರ್ಣನೆ. Kanarese Mission Press Mangalore. ಮುದ್ರಿತ ಇಸವಿ 1922.

16 thoughts on “ಅಮ್ಮಂದ್ರ ಕೈ ಉದ್ದ!

  1. lekhana tumba olleyadagi bayindu. marangala kadidu maari paisa enusuvavara kannu teresidare sarthaka aatu.

  2. ಹರೇರಾಮ. ವಸಂತಣ್ಣಂಗೆ ಪ್ರೀತಿ ಪೂರ್ವಕ ಸ್ವಾಗತ. ಮರ ಅಮರ ಹೇಳ್ತವು. ಅದು ಅಮರವಾದ ಅಬ್ಬೆಯೇ ಸರಿ. ಮಾವಿನ ಮರ ನಮ್ಮಲ್ಲಿ ಮನುಷ್ಯನ ಪರ-ಅಪರ ಎರಡು ಕ್ರಿಯೆಗೂ ಬೇಕಲ್ಲೊ? ಈ ಲೇಖನ ಅರ್ಥ ಗರ್ಭಿತ ಆಯಿದು

  3. ನಿಮ್ಮ ಮನೆಯಂಗಳದ ರೂಪ ಮನಸ್ಸಿನಲ್ಲಿ ಬಂತು ಜೊತೆಗೆ ನಿಮ್ಮಲ್ಲಿಯ ಗೆಣಸು ಮೇಳದ ಸಂಬ್ರಮ,ಲೇಕನ ಲಾಯ್ಕಗಿದೆ.

  4. ಒಳ್ಫ್ಳೇ ವಿಶಯವ ಚಂದಕ್ಕೆ ಹೇಳಿ ಒಪ್ಪುವ ಹಾಂಗೆ ಮಾಡಿದ್ದಿ. ಧನ್ಯವಾದ

  5. ಪ್ರಕೃತಿಯ ವಿಜ್ಞಾನಕ್ಕೆ ಭಾವನಾತ್ಮಕ ಸಂಬಂದ ಕೊಟ್ಟು ಹೇಳಿಗೊಂಡು ಹೋದ ರೀತಿ ಲಾಯಿಕಾಯಿದು . ಇದರ ಓದಿ ಅಪ್ಪಗ , ಹಲವಾರು ಜೀವಿಗೊಕ್ಕೆ ಆಶ್ರಯ ಕೊಡುವ ‘ದೊಡ್ಡ ಮಾವಿನ’ ಮರ ಒಂದು ಮರ ಅಲ್ಲ; ಒಂದು ಸಣ್ಣ ಕಾಡು ಹೇಳಿ ಅನಿಸಿತ್ತು .

    ”ಅಲ್ಲಲ್ಲಿ ಮರದ ಗೆಲ್ಲಿಲಿ ಸಿಂಗಾರದ ಹಾಂಗೆ ಒಂದು ಆರ್ಕಿಡ್ ನೇಲಿಗೊಂಡಿರ್ತು (ಅದರ ಹೆಸರು ಎನಗೆ ಗೊಂತಿಲ್ಲೆ).” —ನಿಂಗೊ ಹೇಳಿದ ಈ ಆರ್ಕಿಡ್ ”ದ್ರೌಪದಿ ಮಾಲೆ” ಆದಿಕ್ಕು.vanda roxburghii ಇದರ ಸಸ್ಯ ಶಾಸ್ತ್ರೀಯ ಹೆಸರು. ayurvedicmedicinalplants.com ಲಿ ಇದರ ಹೂಗು ಸಮೇತ ಇಪ್ಪ ಪಟ ಇದ್ದು.

    1. ಜಯಲಕ್ಷ್ಮಿ ಅಕ್ಕ, ವಂದನೆಗೊ.

      ಆನು ಫೊಟೊ ಹಾಕದ್ದ ಕಾರಣ ನಿಂಗೊಗೆ ಸ್ಪಷ್ಟ ಆವ್ತಿಲ್ಲೆ (ಮನೆಲಿ ಇಂಟರ್ನೆಟ್ಟೂ ಸರಿ ಇಲ್ಲೆ). ಆನು ಹೇಳ್ತಾ ಇಪ್ಪದು ಸಿಂಗಾರವ ಬಿಚ್ಚಿ ಬುಡಲ್ಲಿ ಹಿಡ್ಕೊಂಡರೆ ನೇಲ್ತಿಲ್ಲೆಯೊ ಹಾಂಗೆ ನೇಲ್ತು ಅದರ ಎಲೆಗೊ(ಸರ್ತ ಕೆಳಾಂಗೆ). ಆನು ಆದಷ್ಟು ಬೇಗೆ ಪೊಟೊ ಹಾಕುತ್ತೆ.

      ನಮಸ್ತೆ.

  6. ಬೈಲಿಂಗೆ ಸುರು ಬಂದೋನ ರೇಗಿಂಗು ಮಾಡದ್ದೆ ಪ್ರೀತಿಲಿ ಸ್ವಾಗತ ಮಾಡಿದ್ದಕ್ಕೆ ನಿಂಗೊಗೆಲ್ಲ ವಂದನೆಗ 🙂

    ಮಾವಿನ ಮರವ ಕಂಡಪ್ಪಗ ಎನಗೆ ಬಂದ ಭಾವನೆಗಳ ತಾವುದೆ ಅನುಭವಿಸಿದ ಎಲ್ಲೊರಿಂಗು, ಪ್ರೀತಿಲಿ ಬೆನ್ನುತಟ್ಟಿದೋರಿಂಗೂ, ವಿವರವಾಗಿ ಪ್ರತಿಕ್ರಿಯಿಸಿದ ಡಾಮಹೇಶಣ್ಣ, ಬೊಳುಂಬು ಗೋಪಾಲಣ್ಣರಿಂಗೂ ಧನ್ಯವಾದಂಗೊ.

    ದೊಡ್ಡಮಾಣಿಭಾವ ಎನಗೆ ಹತ್ತುಲೆ ಎಡಿಯದ್ದಷ್ಟು ದೊಡ್ಡ ಕುರ್ಶಿ ಮಾಡಿ ಕೊಟ್ಟಿದವು. ಅದು ಅವರ ದೊಡ್ಡತನ. ಅವರ ಪ್ರೀತಿ ಮುಂದೆಯೂ ಇರಲಿ.

    ನಮಸ್ಕಾರ.
    ವಸಂತ ಕಜೆ

  7. ಸ್ವಾಗತ. ಬರೆದ್ದು ಲಾಯ್ಕ ಆಯಿದು.
    ಮಾವಿನ ಮರ ಹುಟ್ಟುಹಾಕಿದ ಲಹರಿಗೊ!

  8. ಗುರುಗಳಿಂಗೆ ನಮಸ್ಕಾರ,
    ಎನಗೆ ಬ್ಲಾಗ್ ಲೋಕದ ಪರಿಚಯ ಮಾಡುಸಿ ಕೊಟ್ಟ ಗುರುಗೊ, ಈ ಲೇಖನವ ಚೆಂದಕೆ ಬರದ್ದವು.
    ನಾಕೈದು ಒರುಷ ಹಿಂದೆ ಅವು ಬ್ಲಾಗ್ ಲೋಕದ ಬಗ್ಗೆ ಕೊಟ್ಟ ವಿವರಣೆಯ ಹಾಂಗೆಯೇ, ಈ ಬರವಣಿಗೆಯೂ ತುಂಬಾ ಸಮಯ ಮನಸ್ಸಿಲ್ಲಿ ಒಳಿಗು.
    ಬಂದೊಂಡಿರಿ, ಬೈಲಿಲ್ಲಿ ಬರಕ್ಕೊಂಡು ಇರಿ.

  9. ಹೃದಯಕ್ಕೆ ತಟ್ಟಿದ ಶೈಲಿ, ಎಷ್ಟು ಮನೋಹರವಾಗಿ ಹೇಳಿದಿ ವಿಷಯ೦ಗಳ!!! ಅಮೋಘ.
    ಶಿರಬಾಗಿದೆ.

  10. ಅಮ್ಮನ ಉದಾಹರಿಸಿ ಶುದ್ದಿಯ ಸುರು ಮಾಡಿ ಎಲ್ಲೋರಿಂಗು ಪ್ರಕೃತಿಯಬ್ಬೆಯ ಬಗ್ಗೆ ಪ್ರೀತಿ ಹುಟ್ಟುತ್ತ ಹಾಂಗೆ ಮಾಡಿದ ವಸಂತಣ್ಣನ ಶೈಲಿ ತುಂಬಾ ಕೊಶಿ ಆತು. ಮಾವಿನ ಮರವ ದೊಡ್ಡ ಅಬ್ಬೆಗೆ ಹೋಲುಸಿದ ರೀತಿ ತುಂಬಾ ಚೆಂದ ಆಯಿದು.
    ಸಸ್ಯಶಾಸ್ತ್ರವ ನಮ್ಮ ಭಾಷೆಲಿ ಇಷ್ಟು ಚೆಂದಕೆ ವಿವರುಸಲೆ ಎಡಿಗು ಹೇಳಿ ಇಂದು ಗೊಂತಾತು. ವಾಹ್, ಪ್ರತಿಯೊಂದು ವಿಷಯವನ್ನು ಎಷ್ಟು ಚೆಂದಕೆ ವಿವರುಸಿದ್ದ ವಸಂತಣ್ಣ.
    ಅಬ್ಬೆಯ ಕೈ ಉದ್ದ ಹೇಳುವ ವಿಷಯ ಎಲ್ಲೋರಿಂಗು ಅನುಭವದ ಮಾತು. ಅಬ್ಬೆ ಅಶನ/ತಿಂಡಿ ಬಡುಸುವಗ ನಾವು “ಸಾಕು” ಹೇಳಿದ ಮತ್ತೂ ಒಂದು ರಜ ನಮ್ಮ ಬಾಳೆಗೆ ಬೀಳುಗು. ಹಾಂಗಾಗಿ ಮದಲೇ ನಾವು ಸಾಕು ಹೇಳೆಕಕ್ಕು. ಆದರೆ, ಬೇರೆಯವು ಬಡುಸುವಗ ವ್ಯತ್ಯಾಸ ಗೊಂತಾವ್ತು. ನಾವು “ಸಾಕು” ಹೇಳಿ ಅಪ್ಪಗ ಬಡುಸುತ್ತವು ಪಕ್ಕನೆ “ಬ್ರೇಕು” ಹಾಕುಗು. ನಾವು ಮದಲೇ ಸಾಕು ಹೇಳಿತ್ತೊ, ನವಗೆ ಕಡೆಂಗೆ ಮಜ್ಜಿಗೆ ನೀರೇ ಗತಿ.

    ಲೇಖನದ ಕಡೇಂಗೆ ಕೆಂಪಕ್ಷರಲ್ಲಿ ಕೊಟ್ಟ ಮಾತುಗೊ ಮನಸ್ಸಿಂಗೆ ತಟ್ಟಿದ ಮಾತುಗೊ. ನಾವೆಲ್ಲ ಚಿಂತಿಸೆಕಾದ ವಿಷಯ. ವಸಂತಣ್ಣನ ಶುದ್ದಿಗೊ ಮತ್ತೆ ಮತ್ತೆ ಬೈಲಿಂಗೆ ಬರಳಿ.

  11. ಬೈಲಿಂಗೆ ಸ್ವಾಗತ.

    ವಿಶಿಷ್ಟ ರೀತಿಲಿ ಶುದ್ದಿ ಬರದ್ದಿ. ಲಾಯಕ ಆಯ್ದು. ಒಪ್ಪ.

  12. ಸ್ವಾಗತಮ್!!
    ಒಂದು ವೈಜ್ಞಾನಿಕ ವಿಷಯವ “ಸಾಹಿತ್ಯ” ಮಾಡಿ ಮನಸ್ಸಿಂಗೂ ಹೃದಯಕ್ಕೂ ಹತ್ತರೆ ಮಾಡುವ ನಿಂಗಳ ಬರವಣಿಗೆ ಶೈಲಿ ಅಭಿನಂದನೀಯ!!
    ಸುಂದರಮ್, ಮನೋಹರಮ್!!
    ನಿರಂತರವಾಗಿರಲಿ ಈ ಹೃದ್ಯ ಕಾರ್ಯ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×