ಜಾಕು ಅಜ್ಜಿಯ ಪುಳ್ಳಿ ಜಾನಕಿಯ ಶುದ್ದಿ ನಾವು ಕಳುದವಾರ ಮಾತಾಡಿದ್ದು.
ಪಾರೆಮಗುಮಾವನ ಮಗ° ಬೈಕ್ಕಿಂದ ಉದುರಿ ಅಪ್ಪಗ ಜಾನಕಿ ಕೊಟ್ಟ ಪ್ರಥಮಚಿಕಿತ್ಸೆಯ ಬಗ್ಗೆ ಬೊಳುಂಬುಮಾವಂಗೆ ಒಳ್ಳೆತ ಕೊಶಿ ಆಯಿದು. ಬೇಂಕಿನ ಲೆಕ್ಕಲ್ಲಿ ಪ್ರೈಸು ಕೊಡುಸುವೊ ಹೇದು ಶರ್ಮಪ್ಪಚ್ಚಿಯ ಹತ್ತರೆ ಮಾತಾಡಿಗೊಂಡಿತ್ತಿದ್ದವಾಡ; ಕೇಳಿದೋರು ಹೇಳಿದ್ದು. 🙂
ಈ ವಾರದ ಶುದ್ದಿ ಅದರಿಂದಲೇ ಮುಂದುವರುದ್ದೋ – ಕೇಳಿರೆ, ಅಪ್ಪು. ಅಲ್ಲದೋ ಕೇಳಿರೆ ಅಲ್ಲ. 😀
ಹಾಂಗೆ ನೋಡಿರೆ ನಾವು ಬೈಲಿಲಿ ಶುದ್ದಿಗಳ ಎಡಕ್ಕಿಲಿ ಹಲವೂ ಸಂಕೊಲೆಗಳ ಅತ್ಲಾಗಿತ್ಲಾಗಿ ಎಳೆತ್ತು, ಅದೇ ನಮುನೆ ಇನ್ನೊಂದು ಸಂಕೊಲೆ; ಅಲ್ಲದೋ?
~
ಜಾಕು ಅಜ್ಜಿ ಹೇದರೆ ಬಟ್ಯನ ತಂಗೆ ಹೇಳಿ ಮಾಂತ್ರ ಗುರ್ತವೋ ಬೈಲಿಂಗೆ?!
ಅಲ್ಲಪ್ಪಾ; ಅದೊಂದು ವಿಶೇಷ ಹೆಮ್ಮಕ್ಕೊ. ಊರಿನ ಹಳೆ ತಲೆಮಾರಿನ ಎಲ್ಲಾ ಹೆಮ್ಮಕ್ಕೊಗೂ ಜಾಕುಅಜ್ಜಿ ಬೇಕಾದ ಜೆನ.
ಎಲ್ಲಾ ಕೆಲಸಂಗೊ ಅರಡಿಗು; ಬಾಳಂತಿ ಚಾಕ್ರಿಗೆ, ಬಾಬೆ ಮೀಶಲೆ, ದೃಷ್ಟಿ ತೆಗವಲೆ, ತಟ್ಟಿ ಮಡದು ಕೊಡ್ಳೆ, – ಎಲ್ಲದಕ್ಕೂ ಜಾಕುವೇ ಆಯೇಕು. ಈ ರಂಗಮಾವ°, ಮಾಲಚಿಕ್ಕಮ್ಮ ಎಲ್ಲ ಹುಟ್ಟಿದ್ದೇ, ಹುಟ್ಟಿ ಬೆಳದ್ದೇ ಜಾಕುಅಜ್ಜಿಯ ಚಾಕ್ರಿಲಿ ಆಡ; ಕಾಂಬುಅಜ್ಜಿಯ ಚಾಕ್ರಿ ಮಾಡಿದ್ದು ಮತ್ತಾರು; ಈ ಜಾಕು ಅಜ್ಜಿಯೇ ಇದಾ!
ಹಾಂಗಾಗಿಯೇ ಅದು ಸಣ್ಣ ಪ್ರಾಯಲ್ಲೇ ಅಜ್ಜಿ ಆದ್ಸು. 🙁
ಖಾಸಾ ಅಣ್ಣ ಬಟ್ಯಂಗೆ ಮದುವೆ ಆಯೇಕಾರೆ ಮದಲೇ ಈ ಜಾಕುವಿನ ಎಲ್ಲೋರುದೇ ಅಜ್ಜಿ ಹೇಳುಲೆ ಸುರುಮಾಡಿದ್ದವೋ ತೋರ್ತು.
ಅಂದಿಂದ ಓ ಮೊನ್ನೆ ಒರೆಂಗೂ ಅದು ಅಜ್ಜಿ ಆಗಿಯೇ ಇದ್ದತ್ತು! ಮೊನ್ನೆ ಎಂತಾತು? ಅದೇ ಈ ವಾರದ ಶುದ್ದಿ.
~
ಕಜೆಮೂಲೆ ಹತ್ತರೆ ದೊಡ್ಡಾ ಕಾಡು ಇಪ್ಪದು ನಿಂಗೊಗೆ ಅರಡಿಗು; ಅಲ್ಲದೋ?
ಅದು ಗೋರ್ಮೆಂಟು ಕಾಡು ಆದ ಕಾರಣ ಇನ್ನೂ ರಜ ಒಳುದ್ದು; ಅಲ್ಲದ್ದರೆ ಉಕ್ಕಿನಡ್ಕ ಮಮ್ಮದೆಯ ಕೈಗೆ ಸಿಕ್ಕಿ ಪೂರಾ ಕಾಲಿ ಆವುತಿತು. ಅದಿರಳಿ.
ಕಜೆಮೂಲೆ ಜೋಯಿಶರ ಸೊಸೆ ಓ ಮೊನ್ನೆ ಎರಡ್ಣೇ ಹೆತ್ತತ್ತು ಇದಾ; ಹಾಂಗೆ ಅದರ ಚಾಕ್ರಿಗೆ ಈ ಅಜ್ಜಿಯನ್ನೇ ಬರುಸಿದ್ದು.
ಹತ್ತು ಎಪ್ಪತ್ತು ಒರಿಶ ಕಳುತ್ತೋ ಏನೋ ಈ ಜಾಕುವಿಂಗೆ; ಬಪ್ಪಲೆಡಿತ್ತಿಲ್ಲೆ ಹೇಳಿರೂ ಊರೋರು ಕೇಳ್ತವಿಲ್ಲೆ ಇದಾ!
ಕಜೆಮೂಲೆ ಜೋಯಿಶರ ಮಕ್ಕೊ ಹುಟ್ಟಿದ್ದೇ ಈ ಜಾಕುಅಜ್ಜಿ ಕೈಲಿ; ಹಾಂಗೆ ಅವು ಅವರ ಪುಳ್ಳಿಚಾಕ್ರಿಗೆ ಒತ್ತಾಯ ಮಾಡುವಾಗ ಇಲ್ಲೆ ಹೇಳುಸ್ಸು ಹೇಂಗೆ – ಅಂತೂ ಒಪ್ಪಿತ್ತು ಅದು.
ದಿನಾ ಉದಿಯಪ್ಪಗ ಹೋಪದು; ಬೆಶಿನೀರಿಂಗೆ ಕಿಚ್ಚಾಕಿ ನೀರುಕಾಸಿ, ಬಾಬೆಗೆ ಎಣ್ಣೆಕಿಟ್ಟಿ; ಮೀಶುದು; ಬಾಳಂತಿ ಚಾಕ್ರಿ ಮಾಡುದು; ಒಂದರಿಯಾಣ ಒಸ್ತ್ರಂಗಳ ಒಗವದು; ಉಂಡಿಕ್ಕಿ ಬಪ್ಪದು – ಇದು ಜಾಕು ಅಜ್ಜಿಯ ಕೆಲಸ.
ಹಗುರ ಕೆಲಸ ಆದ ಕಾರಣ ರಜ ನಿಧಾನಕ್ಕೆ ಆದರೂ – ಮಾಡಿಗೊಂಡು ಬತ್ತು. ಜಾಕು ಅಜ್ಜಿಯೇ ಬತ್ತ ಕಾರಣ ಒಳುದೋರಿಂಗೂ ನೆಮ್ಮದಿ; ಆಯೆಕ್ಕಾದ ಹಾಂಗೆ, ಅಬ್ಬೆಯೇ ಎದುರು ನಿಂದು ಮಾಡುಸಿದ ಹಾಂಗೆ, ನಮ್ಮ ಭಾಶೆಲೇ ಮಾತಾಡಿಗೊಂಡು – ಮನಸ್ಸಿಂಗೆ ಹತ್ತರೆ ಇರ್ತು ಇದಾ!
~
ಎಲ್ಲ ದಿನದ ಹಾಂಗೆ ಆ ದಿನವೂ ಉದಿಯಪ್ಪಗ ಬಂತು; ಕೆಲಸಂಗೊ ಎಲ್ಲ ಮಾಡಿತ್ತು.
ಜೋಯಿಶರು ಕೊಟ್ಟ ಊಟವ ಉಂಡಿಕ್ಕಿ, ನಾಳೆ ಬತ್ತೆ ಅಕ್ಕಾ – ಹೇದು ಜೋಯಿಶಮಾವನ ಎಜಮಾಂತಿಯ ಹತ್ತರೆ ಹೇಳಿಕ್ಕಿ ಹೆರಟತ್ತು.
ಅವರ ತೋಟದ ಕರೆಂದಲೇ ಕಾಡು ಸುರು ಆವುತ್ತು; ಆ ಕಾಡಿಲೇ ಹೋದರೆ ಬೈಲಕರೆ ಮಾರ್ಗಕ್ಕೆ ಹತ್ತರೆ ಆಡ; ಹಳಬ್ಬರು ಈಗಳೂ ಅದೇ ಮಾರ್ಗಲ್ಲಿ ಹೋಪದು; ಹೊಸಬ್ಬರು ಮಾರ್ಗಲ್ಲೆ ಆಗಿ ಬೈಕ್ಕಿಲಿ ಹೋಪದಿದಾ!
ಹಾಂಗೆ ಕಾಡಿಲೇ ಹೆರಟತ್ತು. ಗೊಂತಿಪ್ಪ ದಾರಿಯೇ ಆದ ಕಾರಣ ಎಂತೂ ಬಂಙ ಇಲ್ಲೆ.
ಕಾಡಿಲೇ ನೆಡಕ್ಕೊಂಡು ಬಂದು ಇನ್ನೊಂದು ಹೊಡೆಂಗೆ ಎತ್ತಿಗೊಂಡು ಬಂತು. ಮಾರ್ಗ ಕಾಣ್ತಾ ಇದ್ದು – ಓ ಅಲ್ಲೆ ಆಗಿ..
~
ಎಂತದೋ ದುರ್ದೈವ ಹೇಳೇಕಟ್ಟೆ 🙁
ಎಲ್ಲಿಂದಲೋ ಬಂದ ಒಂದು “ಒಳ್ಳೆದು” (ನಾಗರ ಹಾವು) ಜಾಕುಅಜ್ಜಿಯ ಕಾಲಿಂಗೆ ಕೊಡಪ್ಪಿತ್ತು!
ಕಚ್ಚುಲೆ ಹೇಳಿಯೇ ಬಂದ ಹಾಂಗೆ ಬಂದು – ಕಚ್ಚಿ – ಅಷ್ಟೇ ಬೇಗಲ್ಲಿ ಇನ್ನೊಂದು ದಿಕ್ಕಂಗೆ ಹೋತಾಡ.
ಎಲಿಯನ್ನೋ ಎಂತದೋ ಓಡುಸಿಗೊಂಡು ಬಂದ ಹಾವಡ ಅದು; ದಾರಿಗೆ ಅಡ್ಡ ಬಂದ ಈ ಅಜ್ಜಿಯ ಕಾಲಿಂಗೆ ಕಚ್ಚಿಕ್ಕಿ ಮುಂದೆ ಹೋತಾಡ!
ಒಂದು ಕ್ಷಣ ಹಿಂದೆ ಮುಂದೆ ಆಗಿದ್ದರೂ ಕಚ್ಚುತಿತಿಲ್ಲೆ.
~
ಎಂತ ಆವುತ್ತಾ ಇದ್ದು ಹೇದು ಜಾಕು ಅಜ್ಜಿಗೆ ಸಂಗತಿ ಗೊಂತಪ್ಪಲೇ ರಜ ಹೊತ್ತು ಬೇಕಾತು.
ಪಾಪದೋರ ದಿನಮಟ್ಟಿನ ಚಟುವಟಿಕೆಲಿ ಹೀಂಗಿರ್ತದೊಂದು ಅವಘಡ ಆದರೆ, ಒಂದು ಕ್ಷಣಲ್ಲಿ ಇಡೀ ಪರಿಸ್ಥಿತಿ ವಿಷಮ ಆದ್ಸರ ತೆಕ್ಕೊಂಬಲೆ – ರಜ ಹೊತ್ತು ಬೇಕೋ ಬೇಡದೋ!?
ಸಂಗತಿಯ ತೀವ್ರತೆ ಅಂದಾಜಿ ಆದ ಕೂಡ್ಳೇ, ಎಡಿಗಾಷ್ಟು ಬೇಗ ಬಂದು ಮಾರ್ಗದ ಬುಡಕ್ಕೆ ಸೇರಿತ್ತು.
ಅಲ್ಲಿಂದ ಅದರ ಮನೆಗೆ ತುಂಬ ಹತ್ತರೆಯೇ; ಆದರೆ ಅದು ಈಗ ಮನೆಗೆ ಹೋಯೇಕಾದ್ಸೋ? ದಾಕುದಾರನ ಹತ್ತರೆ ಹೋಯೇಕಾದ್ಸೋ?
ಅಜ್ಜಿಗೆ ಹೇಂಗೆ ಅಷ್ಟು ಬೇಗ ಅಂದಾಜಿ ಆಯೇಕು!
ಪಾಪ! ಮದಾಲು ಮಾರ್ಗದ ಕರೆಂಗೆ ಬಂದುಮುಟ್ಟಿತ್ತು.
~
ಮಿಳ್ಟ್ರಿಸಂಜೀವನ ಮಗ ನಾಗೇಸ ಬೆಂಗ್ಳೂರಿಲಿ ಇಪ್ಪದು ನಿಂಗೊಗೆಲ್ಲ ಗೊಂತಿಕ್ಕು.
ಎಂತದೋ ದೊಡ್ಡ ಕೆಲಸಲ್ಲಿಪ್ಪದು ಹೇಳ್ತವು; ಆದರೆ ತಿಂಗಳಿಲಿ ಹದ್ನೈದು ದಿನವೂ ಊರಿಲೇ ಇಪ್ಪದು ಕಾಣ್ತು.
ಬುಲ್ಲೆಟ್ಟು ಬಡಬಡ ಬೈಕ್ಕಿಲಿ ಬೈಲಕರೆಂದ ಅದರ ಮನೆಗೆ, ಮನೆಂದ ಕಳಾಯಿಗೆ, ಅಲ್ಲಿಂದ ಪೇಟಗೆ – ಹೋವುಸ್ಸು ಕಾಣ್ತು.
ಬೈಲಕರೆ ಅಂಗುಡಿಲಿ ಬೆಂಚು ಬೆಶಿ ಮಾಡ್ತು ಕಾಣ್ತು.
ಈ ದಿನವೂ, ಅದರ ಮನೆಂದ ಬೈಲಕರೆ ಅಂಗುಡಿ ಬೆಂಚಿಲಿ ಸೀಟು ಹಿಡಿಯಲೆ ಹೇದು ಬರೋಲನೆ ಹೋಗಿಂಡಿತ್ತು.
ಮಾರ್ಗದ ಬುಡಲ್ಲಿ ಜಾಕುಅಜ್ಜಿ ಸಿಕ್ಕಿತ್ತು; ಕೈ ನೆಗ್ಗಿ ನಿಲ್ಲುಸಲೆ ಹೇಳಿತ್ತು.
ಪೈಶೆ ಬೇಡ್ಳೋ ಮಣ್ಣ ನಿಲ್ಲುಸುಲೆ ಹೇಳುದಾಯಿಕ್ಕು ಹೇದು ನಾಗೇಸ ಗ್ರೇಶಿತ್ತು.
ಅದುವೇ ಅದರ ಅಪ್ಪನತ್ರೆ ಬೇಡಿಕ್ಕಿ ಹೆರಟದು; ಈಗ ಇನ್ನು ಜಾಕು ಅಜ್ಜಿ ಬೇಡಿರೆ, ಪುನಾ ಅಪ್ಪನತ್ರೆ ಬೈಗಳು ತಿನ್ಸು ಆರು? – ಹೇದು ಆಲೋಚನೆ ಬಂತೊಂದರಿ. ನಿಲ್ಲುಸೇಕೋ ಬೇಡದೋ ಹೇದು ಆಲೋಚನೆ ಮಾಡಿಗೊಂಡೇ – ರಜ ದೂರ ಹೋಗಿ – ಅಂತೂ ನಿಲ್ಲುಸುವೊ ಹೇದು ನಿಲ್ಲುಸಿತ್ತು..
ಇಳಿಪ್ರಾಯ, ಬಚ್ಚಲು, ಹೆದರಿಕೆ, ಗಾಬೆರಿ, ವಿಷದ ಅಮಲು – ಎಲ್ಲವೂ ತುಂಬಿಪ್ಪ ಈ ಜಾಕುಅಜ್ಜಿಗೆ ಬೀಸಕೆ ನೆಡವಲೆಡಿತ್ತೋ;
ಅಂತೂ ನಿಧಾನಕ್ಕೆ ಬಂತು; ಬೈಕ್ಕಿನ ಜೆನರ ಹತ್ತರೆ.
ಎಂತಾಯೆಕ್ಕು ಜಾಕು ಅಜ್ಜಿಗೇ – ಬೈಕ್ಕಿಂದ ಒಂದು ಕಾಲು ಕೆಳಮಡಗಿ – ಕೇಳಿತ್ತಾಡ ದರ್ಪಲ್ಲಿ.
ಈ ಆಣು ಸಣ್ಣ ಇಪ್ಪಗಾಳೇ ಚಾಕ್ರಿ ಮಾಡಿ ಜಾಕುಗೆ ಅರಡಿಗು; ಆದರೆ ಅಪ್ಪನ ಹಾಂಗೇ ದರ್ಪ ಈಗ ಬಂದದೋ?! ಇರಳಿ.
ಎಂತಾಯೇಕು ಕೇಳಿತ್ತನ್ನೆ, ಜಾಕು ಅಜ್ಜಿ ಸಂಗತಿ ಹೇಳಿತ್ತು.
ಓ ಅಲ್ಲಿ ಬಪ್ಪಗ ಕಾಲಿಂಗೆ ವಿಷ ತಾಗಿತ್ತು ಕಾಣ್ತು; ವಿಷದ ಮದ್ದು ಅರಡಿತ್ತೋರು ಈಗ ಅಂಬೆರ್ಪಿಂಗೆ ಆರೂ ಸಿಕ್ಕವೋ ಏನೋ; ಒಂದರಿ ಡಾಗುಟ್ರ ಹತ್ತರೆ ಹೋಯೇಕಾತು – ಎಂತಾರು ಮಾಡ್ಳೆಡಿಗೋ – ಕೇಳಿತ್ತಾಡ.
ಜಾಕು ಅಜ್ಜಿ ಹೇಳಿದ್ದು ಸರಿ ಕೇಳದ್ದೆಯೋ, ಅಲ್ಲ ಸರಿ ಅರ್ತ ಆಗದ್ದೆಯೋ, ಅಲ್ಲ – ಉಮ್ಮ, ಎಂತ ಗೊಂತಿಲ್ಲೆ..
“ಆನೀಗ ಡಾಗುಟ್ರ ಹತ್ತರೆ ಹೋಪಲೆ ಹೆರಟದಲ್ಲ” ಅದಲ್ಲದ್ದೆ ಎನ್ನ ಬೈಕ್ಕಿಲಿ ನೀನು ಹೇಂಗೆ ಕೂಪದು?
ಈಗ ಬೈಲಕರೆಂಗೆ ಹೋವುತ್ತಾ ಇದ್ದೆ; ಅಲ್ಲಿ ರಿಕ್ಷ ಇದ್ದರೆ ಬಪ್ಪಲೆ ಹೇಳ್ತೆ; ಅವು ಬಂದರೆ ನೀನು ಯೇವ ಡಾಗುಟ್ರಲ್ಲಿಗೆ ಬೇಕಾರೂ ಹೋಗಿಗೊ – ಹೇಳಿತ್ತಾಡ.
ಜಾಕು ಅಜ್ಜಿಗೆ ಎಂತ ಹೇಳೇಕು ಗೊಂತಾಯಿದಿಲ್ಲೆ; ನೋಡಿಗೊಂಡೇ ಬಾಕಿ. ಜಾಕುಅಜ್ಜಿಯ ಹಲ್ಲೆಲ್ಲ ಹೋದ ಕಾರಣ ನೆಗೆಮಾಡಿರೂ ಗೊಂತಾವುತ್ತಿಲ್ಲೆ; ಅಂತೇ ಮೋರೆಮಾಡಿರೂ ಗೊಂತಾವುತ್ತಿಲ್ಲೆ.
ಛೇ!
~
ಸೆರಗಿನ ತಲಗೆ ಹಾಕಿಂಡು ಬೀಸಬೀಸಕೆ ನಡಕ್ಕೊಂಡು ಮನೆಗೆತ್ತಿತ್ತು.
ಬೀಡಿಕಟ್ಟಿಗೊಂಡಿದ್ದ ಜಾನಕಿಯ ಕಂಡಕೂಡ್ಳೇ “ಎನ್ನನ್ ಒರಿಪ್ಪಾಲ ಮಗಾ. . ” ಜೋರುಸೊರಲ್ಲಿ ಹೇಳಿ ಪಂಚಾಂಗಕ್ಕೆ ಬಜಕ್ಕನೆ ಕೂದತ್ತಾಡ. ಈ ಅಜ್ಜಿಗೆ ಎಂತಾತಪ್ಪಾ – ಬೀಡಿ ತಡ್ಪೆಯ ಕರೆಲಿ ಮಡಗಿ ಎದ್ದಿಕ್ಕಿ ಬಂತಾಡ; ಜಾಕು ಅಜ್ಜಿ ವಿಷಮುಟ್ಟಿದ ಸಂಗತಿ ಹೇಳಿತ್ತಾಡ.
ಜಾನಕಿ ಕೂಡ್ಳೇ ಅದರ ಪೋನು ತೆಗದು ಪುರಂದರಂಗೆ ಮಾಡಿದ್ದು.
~
ಪುರಂದರ ಹೇದರೆ ಬೈಲಕರೆಲಿ ರೀಕ್ಷ ಓಡುಸುವ ಜೆನ ಇದಾ.
ಮಾರ್ಗದ ಕರೆಲಿ ರಿಕ್ಷ ನಿಲ್ಲುಸಿ ಆರಾರು ಬತ್ತವೋ ಹೇದು ದಿನ ಇಡೀ ಕಾವದು, ಆರಾರು ಬಂದರೆ ಅವರ ಎಲ್ಲಿ ಬಿಡೆಕಾದ್ಸೋ ಅಲ್ಲಿ ಬಿಟ್ಟಿಕ್ಕಿ ಒಪಾಸು ಬಪ್ಪದು. ಇದಲ್ಲದ್ದೇ, ನೆರೆಕರೆಯ ಹಲವೂ ಜೆನರ ಮೊಬೈಲಿಲಿ ಅದರ ನಂಬ್ರ ಇದ್ದು – ಆರಾರು ಪೋನಿಲಿ ದಿನಿಗೆಳಿರೂ ಬಕ್ಕು. ಬೈಲಕರೆ ಗಣೇಶಮಾವ ಹಾಂಗೇ ಮಾಡುಸ್ಸು ಯೇವಗಳೂ.
ಮೊನ್ನೆ ನೆಕ್ರಾಜೆ ಅಪ್ಪಚ್ಚಿಯ ಮನೆ ಹೊಡೆಂಗೆ ಹೋಗಿದ್ದತ್ತು; ಅಂಬಗಳೇ ಆ ಜಾನಕಿಯ ಪೋನು ಬಂದ್ಸು.
ಹೀಂಗೀಂಗೆ – ಅಜ್ಜಿಗೆ ಹಾವು ಕಚ್ಚಿದ್ದು ಹೇದು.
ಅನಿವಾರ್ಯ, ಪ್ರಥಮ ಚಿಕಿತ್ಸೆ ಹೇದು ಒಂದರಿಯೇ ರಪಕ್ಕ ಎದ್ದು ಹೆರಟತ್ತು.
~
ಪುರಂದರನ ರಿಕ್ಷ ಜಾಕುಅಜ್ಜಿಯ ಮನೆ ಮೇಲ್ಕಟೆ ಎತ್ತುವಾಗ ಪರಿಸ್ಥಿತಿ ಗಂಭೀರ ಆಗಿತ್ತು.
ವಿಷ ತಲಗೆ ಏರಿ, ಜಾಕು ಅಜ್ಜಿಗೆ ನಿತ್ರಾಣ ಜೋರಾಗಿ, ಎದ್ದು ಕೂಪಲೇ ಎಡಿಯ!
ಮದಲೇ ಪ್ರಾಯ ಹೋದ ಜೀವ ಇದಾ – ಆದರೂ ಪ್ರಾಯದ ಮಟ್ಟಿಂಗೆ ಗಟ್ಟಿ ಇದ್ದತ್ತು, ಅದು ಬೇರೆ.
ಹೇಂಗೋ ಮಾಡಿ ರಿಕ್ಷಲ್ಲಿ ಕೂರ್ಸಿದವು. ದೊಡ್ಡ ಮಾರ್ಗದ ಹೋಡೆಂಗೆ ತಿರುಗಿತ್ತು; ಚರಳು ಮಾರ್ಗ ದಾಂಟಿ ಕರಿಮಾರ್ಗ ಎತ್ತಿತ್ತು; ಹಾವಿನ ವಿಷ ಜಾಕು ಅಜ್ಜಿಯ ತಲಗೆ ಏರಿಂಡೇ ಇದ್ದತ್ತು!
ಕರಿಮಾರ್ಗ ಹೋಗಿ ದೊಡ್ಡ ಮಾರ್ಗ ಎತ್ತುವಗ ಅಂತೂ ಜಾಕು ಅಜ್ಜಿಗೆ ದೊಡ್ಡ ಶೆಗ್ತಿ ಪೂರ ಹಾರಿ ಹೋಗಿತ್ತಾಡ.
ಎನ್ನನ್ ಒರಿಪ್ಪಾಲೇ – ಎನ್ನ ಒಳಿಶೀ ಹೇದು ಮಕ್ಕಳ ಹಾಂಗೆ ಬೊಬ್ಬೆ ಹೊಡವಲೆ ಸುರುಮಾಡಿತ್ತಾಡ. ಜೋಯಿಷರಲ್ಯಾಣದ್ದು ಒಂದು ಮುಗುಶಿಕ್ಕಿ ಹೋವುತ್ತೆ; ಅಷ್ಟು ಸಮಯ ಆದರೂ ಇದ್ದುಗೊಳ್ತೇ – ಹೇದು ಅರೆ ಒರಕ್ಕಿಲಿ ಮಾತಾಡಿದ ಹಾಂಗೆ ಹೇಳಿಗೊಂಡಿತ್ತಾಡ.
ಪೇಟೆಮಾರ್ಗ ಎತ್ತಿಅಪ್ಪಗ ಬಾಯಿಲಿ ನೊರೆ ಬಂತಾಡ; ಆಸ್ಪತ್ರೆ ಎತ್ತಿಅಪ್ಪಗ ಉಸುಲು ನಿಂದಿದಾಡ. 🙁 🙁 🙁
ಊರ ಎಲ್ಲೋರಿಂಗೂ ಅಗತ್ಯಕ್ಕೆ ಬೇಕಾದ ಜಾಕು ಅಜ್ಜಿಯ ಜೀವನ ಆ ದಿನ ಆರೂ ಗ್ರೇಶದ್ದ ನಮುನೆಲಿ ಮುಗಾತು.
~
ಜಾಕು ಅಜ್ಜಿ ತೀರಿದ್ಸು ಬೈಲಕರೆಲಿ ದೊಡ್ಡ ಶುದ್ದಿಯೇ ಆತು. ಎಲ್ಲೋರಿಂಗೂ ಅವರ ಮನೆಅಜ್ಜಿ ಹೋದ ಹಾಂಗೇ ಆಗಿತ್ತು.
ಓ ಮನ್ನೆ ಮುಜುಂಗರೆಲಿ ಕಾರ್ಯಂಗೊ ಎಲ್ಲ ಮುಗುಶಿ ಬಂದವು ಅವರ ಪೈಕಿಯೋರು. ಬಟ್ಯನೇ ಖುದ್ದು ಮುತುವರ್ಜಿಲಿ ಜಾಕುವಿನ ಕಾರ್ಯಂಗಳ ಮಾಡುಸಿದ್ದಾಡ. ಆ ಆಪತ್ಕಾಲಲ್ಲಿ ರಿಕ್ಷದ ಪುರಂದರನೂ ಆ ಜಾನಕಿಯೂ ತನ್ನ ಕೈಲಾದಷ್ಟು ಚಾಕ್ರಿ ಎತ್ತುಸಿದ್ದವನ್ನೇ ಹೇಳ್ತದು ನೆಮ್ಮದಿಯ ವಿಷಯ.
~
ಬಾಡಿಗೆಗೆ ಕಾವಗ ರಿಕ್ಷಲ್ಲೇ ಕೂಪ ಬದಲು ಬೈಲಕರೆ ಕಟ್ಟೆಪಂಚಾತಿಗೆಲಿ ಸೇರುದು ಪುರಂದರ.
ನಮ್ಮ ನಾಗೇಸನೂ ಅದೇ ಕಟ್ಟೆಯ ಒಂದು ಸದಸ್ಯ ಇದಾ; ಹೀಂಗೇ ಮಾತಿಂಗೆ ವಿಷಯಂಗೊ ಬಂದದರ್ಲಿ ಜಾಕುಅಜ್ಜಿ ಮೊನ್ನೆ ಒಂದರಿ ಕೈತೋರ್ಸಿ ದಾಕುದಾರನ ಹತ್ತರೆ ಹೋಪಲೆ ಕೇಳಿಂಡ ಸಂಗತಿಯೂ ಹೆರ ಬಂತಡ.
ಹೇಂಗೆ ಹೆರ ಬಂತೋ – ಆರು ಹೇಳಿದ್ದೋ, ಅದೇನೇ ಇರಳಿ, ಶುದ್ದಿ ಹೆರ ಬಂತು.
ಈಗ ಅಂತೂ – ಊರ ಎಲ್ಲೋರಿಂಗೂ ಈ ನಾಗೇಸನ ಮೇಗೆಯೇ ಉರಿ ದರುಸುತ್ತಾ ಇದ್ದಾಡ.
ಜಾಕುಅಜ್ಜಿಯ ಕೊಂದದು ನಾಗರ ಹಾವು ಅಲ್ಲ, ಈ ನಾಗೇಸ ಹೇದು ಎಲ್ಲೋರುದೇ ಪಿಸಿಪಿಸಿ ಮಾತಾಡಿಗೊಳ್ತಾ ಇದ್ದವಾಡ.
ಈಗ ನಾಗೇಸಂಗೆ ಕೆಲಸ ಜಾಸ್ತಿ ಆಗಿ ಬೆಂಗುಳೂರಿಂದ ಊರಿಂಗೆ ಬಪ್ಪಲೇ ಪುರುಸೊತ್ತಾವುತ್ತಿಲ್ಲೇಡ.
~
ಚೆನ್ನಬೆಟ್ಟಣ್ಣಂಗೆ ಕೂಸು ಹುಟ್ಟಿದ ಲೆಕ್ಕಲ್ಲಿ ಪಾರೆ ಮಾಣಿ ಮೊನ್ನೆ ಹೋಗಿ ನೋಡಿಕ್ಕಿ ಬಂದನಾಡ.
ಜಾಕು ಅಜ್ಜಿ ಇದ್ದಿದ್ದರೆ ಚಾಕ್ರಿಗೆ ಅದುವೇ ಸಾಕಾವುತಿತು – ಹೇಳಿಗೊಂಡ°. ಅಲ್ಲಿಂದ ಶುದ್ದಿ ಹೊರಳಿದ್ದು, ಜಾಕುಅಜ್ಜಿಯ ಅಂತ್ಯದ ಬಗ್ಗೆ ಬಂತು. ಅಷ್ಟಪ್ಪಗಳೇ ಜಾನಕಿ ಅವಂಗೆ ಸಕಾಯ ಮಾಡಿದ್ದದೂ, ಅದರ ಅಜ್ಜಿ ಜಾಕುವಿಂಗೆ ನಾಗೇಸ ಸಕಾಯ ಮಾಡದ್ದದೂ – ಎರಡನ್ನೂ ತುಲನೆ ಮಾಡಿ ಹೋತು. ಅಪಘಾತದ ಆಪತ್ಕಾಲಲ್ಲಿ ಸಕಾಯ ಮಾಡಿದ ಜಾನಕಿಯ ಸ್ವಂತ ಅಜ್ಜಿಗೇ ಅವಘಡ ಆಗಿಪ್ಪಾಗ ಒದಗಿ ಬಯಿಂದಿಲ್ಲೇನೇ – ಹೇದು ಒಂದೊಂದರಿ ಅನುಸುಲೆ ಇದ್ದಾಡ. ಜಾನಕಿಗೆ ಇಪ್ಪ “ತುರ್ತು ಚಿಕಿತ್ಸಾ” ಮನೋಭಾವ ಆ ನಾಗೇಸಂಗೆ ಇಲ್ಲೆನ್ನೇದು ಒಂದೊಂದರಿ ಗ್ರೇಶಿಗೋಳ್ತನಾಡ.
~
ಒಂದೊಪ್ಪ: ಸಮಾಜ ಹಾಳಾಯಿದಿಲ್ಲೆ, ಸಮಾಜದ ಕೆಲವು ಜೆನಂಗೊ ಮಾಂತ್ರ! 🙂
ಸೂಃ ಜಾಕು ಅಜ್ಜಿಯ ಪಟ ಹುಡುಕ್ಕಿ ಕೊಟ್ಟದು ಖಂಡಿಗೆ ಮಾಣಿ.
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಒಳ್ಳೆ ಕುತೂಹಲ ಮೂಡುಸಿಗೊಂಡು ಶುದ್ದಿ ಮುಂದೆ ಹೋತು.
ದೇವರೇ.. ಅಜ್ಜಿ ಬದುಕ್ಕಲಿ ಹೇಳಿ ಹಾರೈಸಿಗೊಂಡು ಓದಿರೆ, ಅಜ್ಜಿಯ ಆ ಸ್ಥಿತಿಲಿ ಸಹಾಯ ಮಾಡದ್ದ ನಾಗೇಸನ ದುರ್ಬುದ್ಧಿಯ ಕಂಡು ಕೋಪ ಬಂತು.
ಒಬ್ಬನ ಕಷ್ಟಕ್ಕೆ ಇನ್ನೊಬ್ಬ ಆಧಾರ ಕೊಡುವ ಕೈತ್ತಾಂಗು ಆಯೆಕ್ಕೇ ವಿನಃ ಕಾಲಿಂಗೆ ತೊಡರುವ ಬಳ್ಳಿ ಅಪ್ಪಲಾಗ.
ಮನಸ್ಸಿಂಗೆ ತಟ್ಟಿದ ಎರಡು ಶುದ್ದಿಗೊ (ಕಳುದ ವಾರದ್ದು ಮತ್ತೆ ಈ ವಾರದ್ದು)
ಯಬ!! ನಾಗೇಸಂಗೆ ಒಂದು ಪರೋಪಕಾರ ಮನೋಭಾವ ಇದ್ದಿದ್ದರೆ ಅಜ್ಜಿಯ ಒಳಿಶಿಗೊಂಬಲಾವ್ತಿತ್ತೋ ಏನೊ. ಎಂತ ಮಾಡುದು ಎಲ್ಲಾ ದೈವೇಚ್ಛೆ!
ಚೆ, ಆ ನಾಗೇಸನ ಕುರೆ ಬುದ್ದಿಯೇ ! ಅದು ಮನಸ್ಸು ಮಾಡಿದ್ದಿದ್ರೆ ಜಾಕಿ ಅಜ್ಜಿ ಖಂಡಿತಾ ಒಳಿತ್ತಿತು. ಅಜ್ಜಿಯ ಕತೆ ಕೇಳಿ ಮನಸ್ಸಿಂಗೆ ತುಂಬಾ ಬೇಜಾರಾತು. ಕಡೇಣ ಒಪ್ಪ ಸರಿಯಾಗಿ ಇದ್ದು. ಸಮಾಜದ ಕೆಲವೇ ಕೆಲವು ಜೆನ ಕೆಟ್ಟ ಜೆನರಿಂದ ಇಡೀ ಲೋಕವೇ ಹಾಳಾವ್ತಾ ಇಪ್ಪದು ತುಂಬಾ ಬೇಜಾರಿನ ವಿಷಯ.
ಏ ಒಪ್ಪಣ್ಣ, ಜಾನಕಿಯ ಒಳ್ಳೆ ಬುದ್ದಿಯ ಆನೊಬ್ಬನೇ ಅಲ್ಲ, ಬೈಲಿನವು ಎಲ್ಲೋರುದೆ ಮೆಚ್ಚೆಂಡಿದವು. ಜಾನಕಿ ಎಲ್ಲಿ, ನಾಗೇಸ ಎಲ್ಲಿ. ಎರಡು ಕತೆಗಳೂ ಮನಸ್ಸು ತಟ್ಟಿತ್ತು.
ಮನ ಕಲಕುವ ಕತೆ
ಇಡೀ ಶುಧ್ಧಿ ಓದುವಗ “ಪಾಪದ ಜಾಕು ಅಜ್ಜಿ ಒಳಿಯಲಿ” ಹೇಳಿ ಮನಸ್ಸು ಕಾದುಗೊಂಡೇ ಇತ್ತಿದ್ದು.
ಹೊಟ್ಟೆ ಎಲ್ಲ ತೊಳಸಿದ ಭಾವನೆ ಇಡೀ ಶುಧ್ಧಿ ಓದುವಗ.
ಜಾನಕಿ, ಪುರಂದರ ಅಷ್ಟು ಸಹಾಯ ಮಾಡಿರೂ, ಸುರುವಿಂಗೆ ನಾಗೇಶ ಸಹಾಯ ಮಾಡದ್ದ ಕಾರಣ ಅಯ್ಯೋ ಜಾಕು ಅಜ್ಜಿ ಒಳುದ್ದಿಲ್ಲೆನ್ನೆ?
ಶುದ್ದಿ ಬಾಯಿ ಮುಚ್ಚಿಸಿತ್ತು 🙁
ಜಾಕು ಅಜ್ಜಿ ಇನ್ನು ಮತ್ತೆ ಹುಟ್ಟುಗೋ ಗೊಂತಿಲ್ಲೆ ಆದರೆ ಜಾನಕಿ ಪುರಂದರನ ಹಾಂಗಿರ್ಸವು ನಮ್ಮಲ್ಲಿ ಇನ್ನೂ ನಾಕು ಹುಟ್ಟಿ ಬೆಳೆಯಲಿ ಹೇದಷ್ಟು ಹೇಳ್ವೋ°
ಪಟ ಪಸ್ಟ್ ಕ್ಲಾಸ್ !!