Oppanna.com

'ಅಡಿಗೆ ಸತ್ಯಣ್ಣ' ಜೋಕುಗೊ – ಭಾಗ – 29

ಬರದೋರು :   ಚೆನ್ನೈ ಬಾವ°    on   26/09/2013    15 ಒಪ್ಪಂಗೊ

ಚೆನ್ನೈ ಬಾವ°

1
ಓ ಮನ್ನೆ ಚೌತಿ ಕಳುತ್ತು ಅಪ್ಪೋ..
ಎಲ್ಲೋದಿಕ್ಕೂ ಗಣಹೋಮ, ಗಣಪತಿ ಪೂಜೆ  ಹೇದು ಒಂದಲ್ಲ ಒಂದು.
ಸತ್ಯಣ್ಣಂಗೆ  ದಣಿಯ ಅಂದು ಅನುಪ್ಪತ್ಯದಡಿಗೆ ಹೇದು ಇಲ್ಲದ್ರೂ ನೆರೆಕರೆಂದ ಪ್ರೀತಿ ಹೇಳಿಕೆ ಇತ್ತಿದ್ದು ಚೌತಿದಿನ ಪ್ರೀ ಅಲ್ಲದ, ಬನ್ನಿ ಮನಗೆ ಹೇದು.
ಸತ್ಯಣ್ಣನೂ ಉದಿಯಪ್ಪಗ ಮನೆಲಿ ಮಣಿ ಆಡ್ಸಿಕ್ಕಿ  ನೆರೆಕರೆಲಿ ಒಂದು ಸಣ್ಣ ಗಣಹೋಮ ಅಡಿಗೆ ಮುಗಿಶಿ  ಅಲ್ಲೇ ಉಂಡಿಕ್ಕಿ ತೋಟದ ಕರೇಲ್ಯಾಗಿ ಬಪ್ಪಗ ಸಿಕ್ಕುವ ಮೂರ್ನಾಕು ಮನಗೆ ಹೊಕ್ಕು ಹೆರಟು ಅಲ್ಯಾಣ ಪ್ರಸಾದ ಅಷ್ಟದ್ರವ್ಯ, ಮೋದಕ, ಚಕ್ಕುಲಿ, ಪಾಚ ಹೇದು ಹತ್ತು ಬಗೆ ರುಚಿ ಬಾಯಿಗೆ ತುಂಬ್ಸಿಕ್ಕಿ,  ಮನೆಹೆಮ್ಮಕ್ಕ – ‘ಶಾರದೆಗೆ ಆತು, ರಮ್ಯ ತಿನ್ನಲಿ’ ಹೇದು ಕೊಟ್ಟದರ ತಪ್ಪದ್ದೆ ಮಾರಾಪಿಂಗೆ ತುಂಬ್ಸಿಗೊಂಡು ಮೂರ್ಸಂಧಿಯಪ್ಪಗ ಮನಗೆ ಎತ್ತಿದ°.
ಮನೆಗೆ ಎತ್ತುವಾಗ ಸತ್ಯಣ್ಣಂಗೆ ತಡವಲೆಡಿಯದ್ದ ಹೊಟ್ಟೆ ಬೇನೆ- ಕೂಬಲೂ ಎಡಿಯ, ನಿಂಬಲೂ ಎಡಿಯದ್ದ ನಮುನೆದು. ಜೀರಿಗೆ ಕಷಾಯ ಆತು, ನೆಲ್ಲಿಂಡಿ ಆತು, ಟಿವಿಲಿ ಬಪ್ಪ ಜೆಲುಸಿಲ್‌ ಮಾತ್ರೆಯೂ ತಿಂದಾತು. ಸೋಜನ ಅಂಗುಡಿ ಸೋಡವೂ ಆತು, ಉಹ್ಞುಂ ಎಂತ ಮಾಡಿರೂ ಇವನ ಹೊಟ್ಟೆಬೇನೆ ಕಡಮ್ಮೆ ಆವುತ್ತಿಲ್ಲೆ.
ಇರುಳಿಡೀ ಹಾಂಗೆ ನೆರಕ್ಕೊಂಡಿತ್ತಿದ ಸತ್ಯಣ್ಣ. “ಉದಿ ಆದರೆ ಡಾಕುಟ್ರಣ್ಣನ ಕಾಣೇಕೆ” ಹೇದು ಒಂದು ಹೊಡೆಂಗೆ ಕವುಂಚಿದ.
ಇವನ ನೆರಕ್ಕಾಣ ಕೇಳಿ ಶಾರದೆಗೆ ಬೊಡುದತ್ತು., “ಚೌತಿ ದಿನ ಗಣಪತಿ ತಿನ್ನೆಕ್ಕಾದ್ದರೆಲ್ಲಾ ನಿಂಗಳೇ ತಿಂದರೆ ಅಪ್ಪದು ಹೀಂಗೆ ಇದಾ” ಹೇಳಿ ಗುಡಿ ಹೆಟ್ಟಿ ಅತ್ಲಾಗ್ಯಂಗೆ ಹೊಡಚ್ಚಿತ್ತು ಶಾರದೆ  😀
**
2

ಚಿತ್ರಕೃಪೆ - ವೆಂಕಟ್ ಕೋಟೂರ್
ಚಿತ್ರಕೃಪೆ – ವೆಂಕಟ್ ಕೋಟೂರ್

ಮಾಣಿಮಠದ ಸಮಾವೇಶ ಕಳುದ ಮರದಿನ ಇರುಳಿಂಗೆ ಅಡಿಗೆ ಸತ್ಯಣ್ಣ ಬೆಂಗಳೂರಿಂಗೆ ಹೋದ್ದು.
ಬೆಂಗಳೂರಿಂದ ಬಂದ ಮರದಿನವೆ ಮೀಸೆಬೈಲು ಮಾವನಲ್ಲಿ ಅನುಪ್ಪತ್ಯ.
ಪೂಜೆ ಇರುಳಿಂಗೆ ಆದರೂ ಹೋಳಿಗೆ ಮದಾಲು ಆಯೆಕ್ಕನ್ನೇದು ಸತ್ಯಣ್ಣ ಉದಿಯಪ್ಪಳೇ ಬಂದು ಹೋಳಿಗೆ ಕೆಲಸಕ್ಕೆ ಶುರು ಮಾಡಿತ್ತಿದ್ದ.
ಇರುಳಾಣ ಅಡಿಗೆ ಇಪ್ಪ ಕಾರಣ ಹೋಳಿಗೆ ಕೆಲಸ ಬೇಗ ಮುಗುಶೆಕ್ಕು ಹೇದು ಸತ್ಯಣ್ಣ  ಜಟ್ ಪಟ್ಟಿಲಿ  ಕೆಲಸ ಮಾಡ್ಯೊಂಡಿತ್ತಿದ್ದ.
ಒಟ್ಟಿಂಗೆ ರಂಗಣ್ಣ ಹೇಂಗೂ ಇದ್ದ. ಎರಡ್ನೆ ಸರ್ತಿ ಬೇಶುಲೆ ಮಡಗಿದ ಕಡ್ಲೆ ಬೇಳೆಯ ಕಡವ ಕಲ್ಲಿಂಗೆ ಹಾಕುಲೆ ಪಾತ್ರೆಯ ನೆಗ್ಗುವಗ ಸೊಂಟಲ್ಲಿ ಛುಯಿಂಕ್ ಹೇದು ಕೊಳ್ಪು ಎದ್ದತ್ತು ರಂಗಣ್ಣಂಗೆ.
ಕೆಲಸದ ಎಡೆಲೆ ಆ ಬೇನೆಯ ಗಣ್ಯ ಮಾಡಿದ್ದನಿಲ್ಲೆ.
ಆದರೆ ಹೊತ್ತೋಪಗ ಸೊಂಟ ಬಗ್ಗುಸುಲೆ ಎಡಿಯ, ಬಗ್ಗಿಸಿರೆ ಸರ್ತ ಅಪ್ಪದು ಕಷ್ಟ ಹೇದು ಆತು.
ಮೀಸೆಬೈಲು  ಮಾವಂಗೆ ಗೊಂತಾಗಿ ಸತ್ಯಣ್ಣನ ಒಟ್ಟಿಂಗೆ ರಂಗಣ್ಣನ ಕರಕ್ಕೊಂಡು ಆಚಕರೆ ಮನೆ ಕಲ್ಲಾರಿಮೂಲೆ ಮಾವನಲ್ಲಿಗೆ ಬಂದವು.
ಅವು ರಂಗಣ್ಣನ ಜೆಗಿಲಿಲಿ ದಳಿ ಹತ್ತರೆ ಹಸೆ ಹಾಕಿ ಮನುಗಿಸಿ ಸೊಂಟಕ್ಕೆ ಎಣ್ಣೆ ಉದ್ದುಲೆ ಶುರು ಮಾಡಿದವು. ಶುರುವಿಂಗೆ ಕೈಲಿ ಎಣ್ಣೆ ತೆಕ್ಕೊಂಡು ಮೆಲ್ಲಂಗೆ ಉದ್ದುಲೆ ಶುರು ಮಾಡುವಗ ರಂಗಣ್ಣಂಗೆ ಅಲ್ಲಿಗೇ ಒರಕ್ಕು ತೂಗುಲೆ ಶುರುವಾತು.
“ಇದಾ ಇಲ್ಲಿ ಬೇನೆ ಇಪ್ಪದಿದಾ” ಹೇಳಿ ಕಲ್ಲರಿಮೂಲೆ ಮಾವ ಹೇಳುವಾಗ ರಂಗಣ್ಣಂಗೆ ಅರೆಒರಕ್ಕು ಹಿಡುದ್ದು. ಅಲ್ಲಿಗೂ “ಅಪ್ಪು, ಅಪ್ಪು” ಹೇಳಿಗೊಂಡ.
ಕಲ್ಲಾರಿಮೂಲೆ ಮಾವ ನಿಂದೊಂಡು ದಳಿ ಹಿಡ್ಕೊಂಡು “ಇನ್ನು ಮೆಟ್ಟಿ ಉದ್ದೊದು, ರಂಗಣ್ಣೋ” ಹೇದು ಶುರು ಮಾಡಿದವು.
“ಅಮ್ಮೋ..!” ಹೇದು ರಂಗಣ್ಣ ಅರ್ದಿದ°.
“ಶುರುವಿಂಗೆ ರಜ್ಜ ಬೇನೆ ಅಕ್ಕು,ಮತ್ತೆ ಮತ್ತೆ ಕಮ್ಮಿ ಆಕ್ಕು” ಹೇದು ಮಾವ ಸಮಾಧಾನ ಹೇದವು.
ಅರ್ಧ ಘಂಟೆ ಉದ್ದಿಯಪ್ಪಗ ರಂಗಣ್ಣಂಗೆ ಬೆಗರು ಬಿಚ್ಚಿತ್ತು. “ಇನ್ನು ನಾಳೆ ಉದಿಯಪ್ಪಗಿನ್ನೊಂದರಿ ಉದ್ದುವೋ, ಬೇನೆ ಎಲ್ಲ ಗುಣ ಅಕ್ಕು ರಂಗಣ್ಣೋ”  ಹೇದವು ಕಲಾರಿಮೂಲೆ ಮಾವ°.
“ಅಲ್ಲ ಮಾವ°, ಬೇನೆ ಆಗದ್ದ ಹಾಂಗೆ ಉದ್ದುಲೆ ಎಡಿಯದೋ..?” ಹೇದು ಕೇಟ ರಂಗಣ್ಣ.
“ನಿನಗೆ ಲಟ್ಟುಸದ್ದೆ ಹೋಳಿಗೆ ಮಾಡ್ಲೆ ಎಡಿಗ ರಂಗೋ..? ಈಗ ಹೋಪೋ, ನಾಳೆ ಕಾಂಬೊ.” ಹೇದು ಕಲ್ಲಾರಿಮೂಲೆ ಮಾವನೈಲಿ ಸತ್ಯಣ್ಣ ಹೇದಪ್ಪದೆ ರಂಗಣ್ಣ ತಲೆ ಆಡ್ಸಿಯೊಂಡು ಬೆನ್ನಾರೆ ನಡದ°. 😀
**
3
ಮೀಸೆಬೈಲ ಅನುಪ್ಪತ್ಯದ ಮರದಿನ ಅಲ್ಲ ಅದರ ಮರುದಿನ ಅಡಿಗೆ ಸತ್ಯಣ್ಣಂಗೆ ಪೆರ್ಲಲ್ಲಿ ಶಿವಪೂಜೆ  ಅನುಪ್ಪತ್ಯ ಅಡಿಗೆ.
ಹೋಳಿಗೆ ಆಯೆಕ್ಕು ಹೇಳಿ ಮುನ್ನಾಣದಿನವೇ ಹೋದ ಸತ್ಯಣ್ಣ.
ಪೂಜೆಮನೆಯ ನೆರೆಕರೆ ಭಾವ ಅಲ್ಲಿಗೆ ಬಂದಿತ್ತ ಬಿಲ್ವಪತ್ರೆ ತೆಕ್ಕೊಂಡು.
ಅಡಿಗೆ ಕೊಟ್ಟಗೆಲಿ ಸತ್ಯಣ್ಣನ ಸೊರ ಕೇಳಿಯಪ್ಪದ್ದೇ ಅಲ್ಲಿಗೆ ಹೋದ ಭಾವಯ್ಯ.
ಕುಶಲೋಪರಿ ಆದ ಮತ್ತೆ ಭಾವಯ್ಯ ಸತ್ಯಣ್ಣನತ್ರೇ ಹೇಳಿದ- “ಸತ್ಯಣ್ಣೋ ಇಂದ್ರಾಣ ದಿನ ಸರಿ ಇಲ್ಲೆ. ಉದಿಯಪ್ಪಗ ಎದ್ದು ಮಂಗನ ಮೋರೆ ನೋಡಿದ್ದನೋ ಏನೋ, ಸಂತಗೆ ಬಾಳೆಗೊನೆ ತೆಕ್ಕೊಂಡು ಹೋದೆ, ರೇಟು ಕಮ್ಮಿ. ಬ್ಯಾರಿಗೆ ಅಡಕ್ಕೆ ಕೊಟ್ಟೆ, ಅಲ್ಲೂ ಕೆ.ಜಿಗೆ  ಎರಡ್ರೂಪಾಯಿ ಕಮ್ಮಿ ಆತು..,  ತೆಕ್‌.. ಆತಿಲ್ಲೆ ಇದು”..
“ಉದಿಯಪ್ಪಗ ಎದ್ದು ಮಂಗನ ನೋಡಿದರೆ ಹಾಂಗಾವ್ತೋ ಅಣ್ಣೋ!.. ಅಂಬಗ ನಾಳಂಗೆ ಉದಿಯಪ್ಪಗ ಎದ್ದು ನಿಂಗ ಕನ್ನಾಟಿಲಿ ಮೋರೆ ನೋಡಿರೋ°?!,     ಹೇಂಗೆ??!” ಹೇದವನೇ ಹಂಚಿಲ್ಲಿ ಬೆಂದ ಹೋಳಿಗೆ ತೆಗದು ಕೆರುಶಿಗೆ ಮಡಗಿದ ಸತ್ಯಣ್ಣ. 😀
**
4
ಪೆರ್ಲದ ಅನುಪ್ಪತ್ಯ ಕಳುದ ಮರುದಿನ ಕೆದೂರ್ಲಿ ಅನುಪ್ಪತ್ಯ
ದೇವರೊಳ ಬಟ್ಟಮಾವ, ಅಡಿಗೆ ಕೊಟ್ಟಗೆಲಿ ಸತ್ಯಣ್ಣ, ಚಾವಡಿಲಿ ನೆರೆಕರೆ ಬಂದೋರು
ಬಟ್ಟಮಾವಂಗೆ ಮಂತ್ರ ಹೇಳ್ಳೆ ಇದ್ದು, ಅಡಿಗೆ ಸತ್ಯಣ್ಣ ಅಡಿಗೆ ಮಾಡ್ಳೆ ಇದ್ದು, ಚಾವಡಿಲಿ ಕೂದೋರಿಂಗೊ ?! –
ಏವುತ್ರಾಣಂಗೆ ಪಟ್ಟಾಂಗ.  ಹೊಳೆಕೆರೆ ಗಣಪ್ಪಣ್ಣನೂ, ಗೆದ್ದೆಕೆರೆ ರಾಮಣ್ಣನೂ ಸೇರಿರೆ ಕೇಳೆಕೋ ಮತ್ತೆ..
ಚಾವಡಿಲಿ ಹೇಳ್ತದು ಅಡಿಗೆ ಸತ್ಯಣ್ಣಂಗೂ ಕೇಳ್ತು
ರಾಮಣ್ಣ ಹೇಳೋದು ಕೇಳ್ತು – ಇದಾ  ಎಂಗೊ ಮದಲಿಂಗೆ ಆನು ಸಣ್ಣಾಗಿಪ್ಪಗ ಅಪ್ಪನೂ, ಆನೂ, ಅಣ್ಣನೂ ಒಟ್ಟಿಂಗೆ ಕೆಲಸದ ಬಾಬೂ ಸುಬ್ರಣ್ಯಂದ ದನ ಎಬ್ಯೊಂಡು ಬಪ್ಪದು
ಕಿಡಿಂಜಿ ತಿರ್ಗಾಸು ದಾಂಟಿ ಬದಿಯಡ್ಕ ಹತ್ರೆ ಬಪ್ಪಗ ಎಲ್ಲಿಂದಲೋ ಪದ ಕೇಳ್ತು. ಬಲಿಪ್ಪನ  ಪದ..,  ಏವ?, ಅಜ್ಜ ಬಲಿಪ್ಪನ ಪದ..
ಒಂದು ಮಿನುಟು ಏಚನೆ ಮಾಡ್ಯಪ್ಪಗ ಗೊಂತಾತು ಅಗಲ್ಪಾಡಿಲಿ ಆಟ. ಅಂಬಗ ಈಗಾಣ ಹಾಂಗೆ ಮೈಕು  ಪೆಟ್ಟಿಗೆ ಎಲ್ಲ ಇತ್ತಿಲ್ಲೆ. ಅಜ್ಜ ಬಲಿಪ್ಪ ಅಗಲ್ಪಾಡಿಲಿ ಪದ ಹೇಳಿರೆ ಬದಿಯಡ್ಕಕ್ಕೆ ಕೇಳ್ತು .. !!!
ಗಣಪ್ಪಣ್ಣ   ಪ್ಪ್ಫೇ 😀  ಹೇದು ಗೋಳಿಸೋಡ ಒಡದಹಾಂಗೆ ನೆಗೆ ಮಾಡೋದು ಕೇಳಿತ್ತು
ಸತ್ಯಣ್ಣ ರಂಗಣ್ಣಂಗೆ ಹೇದ° – ರಂಗೋ, ಕರಂಡಿ ತೆಗೆ. ಈಗ ಒಗ್ಗರಣೆ ಹಾಕುತ್ತೆ. ಪರಿಮ್ಮಳ ಮುಟ್ಟತ್ತೋಡಿಗೆ ಎತ್ತುಗು ನೋಡು.
ಅದೇಂಗೆ ಮಾವ  ?!! – ರಂಗಣ್ಣ ಕೇಟ°
ಸತ್ಯಣ್ಣ ಹೇದ°“ಮತ್ತೋ?! … ಅಜ್ಜ ಬಲಿಪ್ಪ ಅಗಲ್ಪಾಡಿಲಿ ಪದ ಹೇಳಿದ್ದು ಬದಿಯಡ್ಕಕ್ಕೆ ಕೇಳ್ತರೆ ಕೆದೂರ್ಲಿ ಸತ್ಯಣ್ಣ ಹಾಕಿದ ಒಗ್ಗರಣೆ ಪರಿಮ್ಮಳ ಮುಟ್ಟತ್ತೋಡಿಗೆ ಎತ್ತದೋ ! 😀
ಈಗ ರಂಗಣ್ಣಂಗೂ ತಡೆಯ,– ‘ಪ್ಪ್ಫೇ’ 😀  ಅವಂಗೆ ಗೊಂತಿಲ್ಲದ್ದೆ ಬಂತು  😀
**
5.
ಕೆದೂರ ಅನುಪ್ಪತ್ಯದ ಮರದಿನ ಪೂವನಡ್ಕ ಅಜ್ಜನಲ್ಲಿ ಅನುಪ್ಪತ್ಯ
ಅಡಿಗೆಕೊಟ್ಟಗೆ ಹತ್ರೆ ಬಂದ ಬಾಯಿತುಂಬ ಮಾತಾಡ್ವ ನೆರೆಕರೆ ಕೆಂಪಿ ಅತ್ತೆ ಸತ್ಯಣ್ಣನತ್ರೆ ಹೇಳಿತ್ತು – ಸತ್ಯಣ್ಣೋ., ಬೆಂಗ್ಳೂರ್ಲಿಪ್ಪ ತಂಗೆ ಮಗಳು ಹೆತ್ತಿದು. ಕೂಸು. ನೀನು ನಾಕು ದಿಕ್ಕೆ ಹೋಪವ° ಅಲ್ಲದ. ಕೂಸಿಂಗೆ ಒಂದು ಲಾಯಕದ,   ಬಾಯಿಲಿ ಸುಲಾಬಕ್ಕೆ ಬಪ್ಪಾಂಗಿಪ್ಪ ಒಂದು ಸಣ್ಣ ಹೆಸರು  ಪಟ್ಕನೆ ಹೇಳು ನೋಡೊ° –
[ಯೋಗ ಹೇಳಿರೆ ತಾನಾಗಿ ಬಪ್ಪದು. ಲೆಕ್ಕ ಹಾಕಿ ಬಪ್ಪದಕ್ಕೆ ಯೋಗ ಹೇಳ್ವದಲ್ಲ]
ಸತ್ಯಣ್ಣ ಪಟ್ಟನೆ ಹೇದ° – ಸುಲಾಬಲ್ಲಿ ಬಾಯಿಲಿ ಬಪ್ಪದು – ‘ವಾಂತಿ’  😀
**
6.
ಅಡಿಗೆ ಸತ್ಯಣ್ಣಂಗೆ ಮಳೆಗಾಲ ಹೇದು ಇಲ್ಲೆ ಬೇಸಗೆ ಕಾಲ ಹೇದು ಇಲ್ಲೆ.
ಅನುಪ್ಪತ್ಯಂಗೊ ಎಳಗಿರೆ ಮೇಗಂದ ಮೇಗೆ . ಬಟ್ಟಮಾವಂಗಾದರೂ ಎರಡು ದಿನಕ್ಕೆ ಎಡೆ ಇಕ್ಕು., ಅಡಿಗೆ ಸತ್ಯಣ್ಣಂಗೆ ಇಲ್ಲೆ.
ಮಳೆಗಾಲಲ್ಲಿ ಊರ್ಲಿ ಪೂಜೆ, ವರ್ಷಾವಧಿ, ತಿಥಿ ಹೇದು ಒಂದರ ಮೇಗೆ ಒಂದು ಇದ್ದರೆ ಎಡೆಲಿ ಬಪ್ಪ ಬೊಜ್ಜಂಗೊ ಬೇರೆ.
ಅದರೆಡಕ್ಕಿಲ್ಲಿ ಬೆಂಗ್ಳೂರ ಸುದರಿಕೆಯೂ ಆಯೇಕು, ಮಾಣಿಮಠಲ್ಲಿ ಸುದರಿಕೆಯೂ ಆಯೇಕು. ಅದು ಕಳಾತು ಹೇಂಗಾರು ಈಗಂಗೆ

ಇದರೆಡಕ್ಕಿಲಿ ದಂಬೆಮೂಲೆ ಮಾವನ ಬೊಂಬಾಯಿ ಮನೆಒಕ್ಕಲು . ಒಂದಾರಿ ನಿಗಂಟು ಆಗಿ,  ಒಳುದು ಮುಂದೆ ಹೋದ್ದು
ಈ ತೆರಕ್ಕಿನೆಡಕ್ಕಿಲ್ಲಿ ಬೊಂಬಾಯಿ ಬೊಂಬಾಯಿ ಹೇದೊಂಡಿತ್ತಿದ್ದ ಅಡಿಗೆ ಸತ್ಯಣ್ಣ ಹೋದಲ್ಯೆಲ್ಲ
ಬೊಂಬಾಯಿದು ಹೇಂಗೊ ಹೋಗಿ ಕಳುಶಿಕ್ಕಿ ಬಂದ ಅಡಿಗೆ ಸತ್ಯಣ್ಣಂಗೆ ಮರುದಿನ ಸಾರಡ್ಕಲ್ಲಿ ಅನುಪ್ಪತ್ಯ.
ಸಾರಡ್ಕ ಅನುಪ್ಪತ್ಯಕ್ಕೆ ಬಂದ ವಾಟೆ ಬಾವ ಸತ್ಯಣ್ಣನ ಕಂಡಪ್ಪಗ ಕೇಟ° – ಬೊಂಬಾಯಿ ಎಂತಾತು ಸತ್ಯಣ್ಣ?
ಸತ್ಯಣ್ಣ ಹೇದ°- ಬೊಂಬಾಯಿ ಈಗ ಮುಂಬಾಯಿ ಆಯ್ದು ಬಾವೋ  😀
**

* * *   😀 😀 😀   * * *

 
 

15 thoughts on “'ಅಡಿಗೆ ಸತ್ಯಣ್ಣ' ಜೋಕುಗೊ – ಭಾಗ – 29

  1. ಒಗ್ಗರಣೆ ಪರಿಮಳ ಮುಟ್ಟತ್ತೋಡಿಗೆ ಎತ್ತದ್ರೂ ಎನ್ನ ಮನಸ್ಸು ಬೆಂಗಳೂರಿಂದ ಆನು ಬಾಲ್ಯವ ಕಳುದ ಮುಟ್ಟತ್ತೋಡಿಗೆ ಎತ್ತಿದ್ದು.ದನ್ಯವಾದ.

  2. ಮೀಸೆಬೈಲು ಮಾವನಲ್ಲಿ ಹೋಳಿಗೆ ಮಾಡುಲೆ ರಂಗಣ್ನಂಗೆ ಒಬ್ಬಂಗೆ ಎಡಿಗಾತೋ ಹೇಳಿ ಒಂದು ಸಂಶಯ ! ಎಷ್ತು ಸೇರಿಂದೋ ?
    * ಎಲ್ಲ ಒಂದಕ್ಕಿಂದ ಒಂದು ಲಾಯಕ ಬತ್ತಾ ಇದ್ದು ಭಾವ …ಒಂದೊಪ್ಪ….ಪ್ಪ..

  3. ಪ್ಪೇ 🙂 ಹೇಳಿ ಹೇಂಗೆ ನೆಗೆ ಮಾಡುದು ಹೇಳಿ ಪ್ರಾಕ್ಟೀಸ್‌ ಮಾಡಿದೆ ಭಾವ…
    ಹು ಹು ಹು.. ಸತ್ಯಣ್ಣನ ರೈಸಾಟಿಕೆಯೇ..

  4. ಮೊನ್ನೆ ಒ೦ದು ಕಡೆ ಹೋದಿಪ್ಪಗ ,
    ಇದೇ ಸತ್ಯಣ್ನನ ಹತ್ತರ ಒಬ್ಬ ಕೇಳುವುದು, ನಾವು ಕೇಟತ್ತು.
    ಮೆನುವಿನ ಎದುರಲೇ ತೂಗು ಹಾಕುವ ಕ್ರಮ ಇನ್ನು ಜಾರಿ ಆಯಿದೆಲ್ಲೆಯೋ,
    ನಿ೦ಗಳ ಸೀಮೆಲಿ ಕೇಳೀದ .
    ಸತ್ಯಣ್ಣ ಹೇಳಿದವು, ಅದು ಹಳೇ ಕ್ರಮ ಆತು,
    ಅದರ ಬದಲು ಕಾಗದಲ್ಲಿ ಪ್ರಿ೦ಟು ಹಾಕುವ ಸಲಹೆ,ಮಾಡಿದ್ದೆ ಹೇಳಿದವು.
    ಹಾ೦ಗೆ ಸ್ವೀಟು ನೋಡಿ ಬೇಕಾದವ ಮಾತ್ರ
    ಸೀಟು ಬುಕ್ಕು ಮಾಡಿದರೆ ಆತಲ್ಲದೋ ಹೇಳೀ.
    ಮೆಲ್ಲ೦ಗೆ ಬಾಯೋಳ ಇಪ್ಪ ಹೊಗೆಸೊಪ್ಪಿನ ಗೂಡಿಲಿ,
    ಎಲ್ಲಾ ತು೦ಬಿಸಿ ಮಡಗಿದವು.
    ನಾವು ತಣ್ಣ೦ಗೆ ಅದರ ಕೇಳಿ,ಬೆಶಿ ಚಾಯ
    ಕ೦ತ್ತಮುಟ್ಟಿ ಮಾಡಿ, ಉರ್ಪಿ ,ಚಾ೦ಬಿತ್ತು.

  5. ಸತ್ಯಣ್ಣನ ಸಾಹಸ ಯಾವಾಗಲು ‘ಎವರ್ ಗ್ರೀನ್ಫ್’ !

  6. ಎಲ್ಲಿಂದ ಸಿಕ್ಕಿದನೋ ಈ ಚೆನ್ನೈ ಭಾವಂಗೆ ಈ ಸತ್ಯಣ್ಣ? ತೆನ್ನಾಲಿ ರಾಮನ ಹಾಂಗೆ ಒಬ್ಬ ಪಾತ್ರ ಆವುತ್ತನೋ ತೋರುತ್ತು. ಶುಭವಾಗಲಿ.

  7. ಹೀಂಗೇ ಹೋದರೆ “ಅಡಿಗೆ ಸತ್ಯಣ್ಣ ಅಭಿಮಾನಿಗಳ ಸಂಘ” ಸುವಾದರೂ ಅಕ್ಕು. ಆನಂತೂ ಈಗ ದೊಡ್ಡ ಅಭಿಮಾನಿ. ದನ್ಯವಾದ.

  8. “ಚೌತಿ ದಿನ ಗಣಪತಿ ತಿನ್ನೆಕ್ಕಾದ್ದರೆಲ್ಲಾ ನಿಂಗಳೇ ತಿಂದರೆ ಅಪ್ಪದು ಹೀಂಗೆ ಇದಾ…..
    ಒಳ್ಳೆ ಹಾಸ್ಯಂಗ ,ಓದಿ ಸುಮಾರು ಹೊತ್ತು ನೆನೆಸಿ ನೆನೆಸಿ ನೆಗೆ ಮಾಡಿದೆ ,ಇಷ್ಟು ಒಳ್ಳೆಯ ರಸವತ್ತಾದ ಹಾಸ್ಯ ಸರಣಿ ಕೊಡ್ತಾ ಇಪ್ಪದಕ್ಕೆ ಚೆನ್ನೈ ಭಾವಂಗೆ ಧನ್ಯವಾದಂಗ

  9. ಗೋಲಿ ಸೋಡ ಒಡದ ಹಾಂಗೆ ನೆಗೆ ಮಾಡ್ತ ಕ್ರಮ ಪಷ್ಟಾಯಿದು.

  10. ಎಡಿಯಪ್ಪಾ ಎಡಿಯ ಈ ಸತ್ಯಣ್ಣನ ಹತ್ತರೆ 😀 😀 😀

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×