Oppanna.com

ಅನಾಥೋ ದೈವರಕ್ಷಕಃ . .

ಬರದೋರು :   ಒಪ್ಪಣ್ಣ    on   11/10/2013    10 ಒಪ್ಪಂಗೊ

ದೊಡ್ಡಜ್ಜನ ಅಗಲಿಕೆಲಿ ಒಂದೊರಿಶ ಕಳಾತು ಹೇಳ್ತದೇ ಸಂಗತಿ.
ಬೈಲಿನೊಬ್ಬರು ನೆಂಟ್ರು ನಮ್ಮ ಬಿಟ್ಟು ಹೋದ ಸುರೂವಾಣ ಅನುಭವ. ಅವು ನಮ್ಮ ಬಿಟ್ಟು ಹೋದ ದಿನ ನಾವು ಅವರ ಬಗ್ಗೆ ನಾಕು ಮಾತಾಡಿದ್ದು, ಅಪ್ಪೋ!
ಅವರ ಹಿರಿತನ, ದೊಡ್ಡತನಂಗಳ ಸೇರಿದ ವೆಗ್ತಿತ್ವವ ಎಲ್ಲೋರುದೇ ನೆಂಪುಮಾಡಿಗೊಂಡಿದವು.
ದೊಡ್ಡಜ್ಜ° ಬಿಟ್ಟಿಕ್ಕಿ ಹೋದ ದಿನ ಕಳುದು ಒಂದೊರಿಶ ಆತು. ಈಗ ಒರಿಶಾಂತದ ಸಮೆಯ.
~

ಆರೇ ಆರನ್ನೇ ಬಿಟ್ಟಿಕ್ಕಿ ಹೋದರೂ, ಆ ದೇವರು ನಮ್ಮ ಬಿಟ್ಟಿಕ್ಕಿ ಹೋಪಲಿಲ್ಲೆ – ಹೇದು ವಿದ್ವಾನಣ್ಣ ಒಂದೊಂದರಿ ಹೇಳುದಿದ್ದು.
ಹುಟ್ಟುಸಿದ ದೇವರು ಹುಲ್ಲು ತಿನ್ನುಸುಗೋ – ಹೇಳ್ತವಲ್ಲದೋ ಹಳಬ್ಬರು; ಅದೇ ನಮುನೆ “ಅನಾಥೋ ದೈವರಕ್ಷಕಃ” ಹೇದು ಸಂಸ್ಕೃತಲ್ಲಿ ಒಂದು ಮಾತು ಇದ್ದಾಡ.
ಮೊನ್ನೆ ಮಠಲ್ಲಿ ಮೂರ್ನೇ ರಾಮಕಥೆಯ ಕೊನೇ ದಿನ ಸಿಕ್ಕಿದವಲ್ಲದೋ – ಆ ದಿನ ಹೇಳಿತ್ತಿದ್ದವು.

ಭೂಮಿಗೆ ಬಪ್ಪಗ ನಾವು ಒಬ್ಬನೇ ಬಂದದು. ಮತ್ತೆ ಸಂಪರ್ಕಂದಾಗಿ ಹಲವು ಜೆನ ಸೇರಿರೂ, ಆಂತರ್ಯಲ್ಲಿ ನಾವು ಒಬ್ಬನೇ ಆಗಿರ್ತು. ನಮ್ಮ ಒಟ್ಟಿಂಗೆ ಸದಾ ಇಪ್ಪದು ಆರು – ಹೇದರೆ, ಅದು ಆ ದೇವರೇ – ಹೇದು ವಿದ್ವಾನಣ್ಣನ ಅಭಿಪ್ರಾಯ.
ಇದೆಲ್ಲ ಈಗ ಎಂತಗೆ ನೆಂಪಾತು – ಹೇದರೆ, ಓ ಮೊನ್ನೆ ಪುತ್ತೂರಿಲಿ ಆದ ಒಂದು ಘಟನೆಂದಾಗಿ.
~

ನಿನ್ನೆಲ್ಲ ಮನ್ನೆ ಕಬಕ್ಕ ಹೊಡೆಲಿ ದೊಡ್ಡಮಟ್ಟಿನ ಪೂಜೆ, ನವಗೆ ಹೇಳಿಕೆ ಇದ್ದ ಲೆಕ್ಕಲ್ಲಿ ಹೋಗಿತ್ತಿದ್ದು.
ಸತ್ಯಣ್ಣನ ಮೇಲಡಿಗೆ. ರಂಗಣ್ಣಂದೇ, ಮುರ ರಾಮಣ್ಣಂದೇ ಸಕಾಯಕ್ಕೆ.
ಮಜ್ಜಾನಕ್ಕಪ್ಪಾಗ ಒಂದರಿಯಾಣ ಕೆಲಸ ಆಗಿ ಹಪ್ಪಳ ಹೊರಿಸ್ಸು ಬಾಕಿ ಇದ್ದತ್ತು.
ನಾವು ಮಜ್ಜಿಗೆ ನೀರು ಕುಡಿಯಲೆ ಅಡಿಗೆಕೊಟ್ಟಗೆಲಿ ಓಂಗಿಂಡು ಇಪ್ಪಾಗ – ಓ ಮನ್ನೆ ನೆಡದ ಕತೆ ಕಣ್ಣಿಂಗೆ ಕಟ್ಟುತ್ತ ಹಾಂಗೆ ವಿವರಣೆ ಆತು ರಾಮಣ್ಣನ ಬಾಯಿಲಿ.
ಈಗಾಗಲೇ ನಿಂಗೊಗೆ ಗೊಂತಿಪ್ಪ ವಿಷಯವೇ ಆದರೂ – ರಾಮಣ್ಣ ಹೇಳುವಾಗ ಒಂದರಿ ನೆಂಪಾತು.
ಬಿರ್ಮ ಪೂಜಾರಿಯ ಪುಳ್ಳಿ ಸೂರಿದು ಒಂದು ದುರಂತ ಆದರೆ, ಪುತ್ತೂರಿನ ಈ ಘಟನೆ ಇನ್ನೊಂದು ದುರಂತ!
~

ಅವರದ್ದು ಚಿಕ್ಕಸಂಸಾರ, ಚೊಕ್ಕ ಸಂಸಾರ.
ದಿನನಿತ್ಯವೂ ದುಡುದು ನೆಮ್ಮದಿಯ ಕಂಡು ಬದ್ಕುತ್ತ ಜೀವನ ಆ ಮನೆಲಿ.
ಗೆಂಡೆಂಡತ್ತಿ ಚೆಂದಲ್ಲೇ ಬಾಳಿ ಬದ್ಕಿ ಒಂದು ಮಗನನ್ನೂ ಪಡಕ್ಕೊಂಡವು.
ಮದ್ದಿನಂಗುಡಿಲಿ ಮದ್ದು ಕೊಡ್ತ ಕೆಲಸ ಇದ್ದದು ಎಜಮಾನ್ರಿಂಗೆ. ಮನೆಯ ನೆಡೆಶಿಗೊಂಡು ಹೋವುತ್ತ ಕೆಲಸ ಇದ್ದದು ಹೆಂಡತ್ತಿಗೆ.
ಹಿತ್ತಿಲಾ ಮನೆ, ಸುತ್ತಲಾ ಬೇಲಿ, ಬತ್ತದ್ದ ಪ್ರೀತಿ ಇದ್ದರೆ ಮತ್ತೆಂತಾಯೇಕು ದಾಸಜ್ಞ – ಹೇದು ಸುಬಗಣ್ಣನ ಚಾಟು ಕವಿತೆ ಇರ್ತು ಒಂದೊಂದರಿ, ಹಾಂಗೇ ಈ ಸಂಸಾರವುದೇ ನೆಮ್ಮದಿಲಿ ಇತ್ತಿದ್ದವು!
ಉದಿಯಪ್ಪಗ ಅಂಗುಡಿಗೆ ಕೆಲಸಕ್ಕೆ ಹೋಪದು; ಹೊತ್ತೋಪಗ ಬಪ್ಪದು. ಎಡಕ್ಕಿಲಿ ಒಂದು ಗಳಿಗೆ ಉಂಬಲೆ ಬಪ್ಪದು – ಇದು ಎಜಮಾನ್ರ ದಿನಚರಿ. ಮೂರೊತ್ತೂ ಬೇಶಿ ಬಳುಸುದು, ಮನೆ ನೋಡಿಗೊಂಬದು – ಇದು ಎಜಮಾನ್ತಿಯ ದಿನಚರಿ. ಅಪ್ಪಮ್ಮನ ಪ್ರೀತಿಲಿ ಬೆಳಕ್ಕೊಂಡು ಪಾಟ ಕಲಿವದು – ಮಗನ ದಿನಚರಿ. ಸುಖೀ ಸಂಸಾರ; ನಿತ್ಯವೂ ಬೆಳಗಿಂಡೇ ಇದ್ದತ್ತು.

ಅದೊಂದಿನ – ಯೇವತ್ರಾಣಂತೆ ಒಂದು ದಿನ ಮಜ್ಜಾನ ಎಜಮಾನ್ರು ಉಂಬಲೆ ಬಂದವು.
ಬೆಶಿಬೆಶಿ ಬೆಂದಿ, ಹೆಜ್ಜೆ ತಯಾರಾಗಿಪ್ಪ ಬದಲು, ತಣ್ಣಂಗೆ ತಣುದ ಹೆಂಡತ್ತಿಯ ಕಂಡತ್ತು, ವಿಷದ ಕುಪ್ಪಿಯ ಕರೆಲಿ!
ಪ್ರೀತಿಯ ಹೆಂಡತ್ತಿಯ ಆ ನಮುನೆ ಕಾಂಬಲೆ ಯೇವ ಗೆಂಡನೂ ನಿರೀಕ್ಷೆ ಮಾಡ°.
ಒಂದೇ ಸರ್ತಿಲಿ – ಎಂತ ಅನುಸಿತ್ತೋ ಏನೋ – ತಾನೂ ವಿಷದ ಕುಪ್ಪಿ ಬಗ್ಗುಸಿ ಕುಡುದೇ ಬಿಟ್ಟವು!
ಮಜ್ಜಾನ ಶಾಲೆಬಿಟ್ಟ ಮಾಣಿಗೆ ಅಪ್ಪಮ್ಮನ ಕಾಂಬ ಅಂಬೆರ್ಪು.
ಬೀಸ ಬೀಸಕ್ಕೆ ಬಂದ ಮಗಂಗೆ ಕಂಡದೆಂತರ?
ಅಪ್ಪಂಗೆ ವಿಷದ ಮರ್ಕ; ಹೆರ ಜೆಗಿಲ್ಲಿ ಹೊಡಚ್ಚುದು. ಅಮ್ಮ ಹಂದದ್ದೆ ಮನುಗಿದ್ದು – ಇದೇ ಕಂಡದು.
ಅಪ್ಪಂಗೆ ಎಂತದೊ ಉಷಾರಿಲ್ಲೆ, ಬೇಗ ಬನ್ನೀ… – ಹೇದು ಆಚಮನೆಗೆ ಹೋಗಿ ಹೇಳಿದ ಮಾಣಿ ಅಂಬೆರ್ಪಿಲಿ.
ನೂರೆಂಟು ಆಲೋಚನೆ ಮಾಡಿ ಮತ್ತೆ ನೂರೆಂಟು ವಾಹನಕ್ಕೆ ಹೇಳಿದವಾಡ ನೆರೆಕರೆಯೋರು.
ವಾಹನ ಬಂತು, ಆ ಮಾಣಿಯ ಅಪ್ಪನ ಕರಕ್ಕೊಂಡುಹೋದವು. ಆದರೆಂತ – ಆ ಮಾಣಿಯ ಅಪ್ಪನೂ, ಅಮ್ಮನೂ – ಇಬ್ರೂ ಒಳುದ್ದವಿಲ್ಲೆ!!!
ಎಂತಾ ದುರ್ದೈವ!
ಓದಿಗೊಂಡು ಪರೀಕ್ಷೆಗೆ ಹೋದೋನು ಒಪಾಸು ಬಪ್ಪಗ ಜೀವನದ ಪರೀಕ್ಷೆಯೇ ಸುರು ಆಗಿತ್ತು! 🙁

~

ಜೀವ ಎರಡು ಹೋದ್ಸು ಹೋತು.
ಏಳೊರಿಶದ ಬಾಬೆ ಅನಾಥ ಆಗಿ ಬಾಕಿ ಒಳುದ°.
ಇನ್ನು ಅವನ ಭವಿಷ್ಯ ಎಂತ್ಸರ – ಹೇದು ಆಲೋಚನೆ ಮಾಡುವಾಗ, ವಿದ್ವಾನಣ್ಣ ಹೇಳಿದ ಮಾತೇ ನೆಂಪಪ್ಪದು “ಅನಾಥೋ ದೈವರಕ್ಷಕಃ..”.
~
ಇಷ್ಟೆಲ್ಲ ಅವಘಡಕ್ಕೆ ಕಾರಣ ಎಂತ್ಸರ?
ಪೋಲೀಸು ಬಂದು ವಿಚಾರಣೆ ಸುರುಮಾಡುವಾಗ; ಮಾಣಿಯ ಅಮ್ಮ ಬರದು ಮಡಗಿದ ಚೀಟು ಸಿಕ್ಕಿತ್ತಾಡ – “ತನ್ನ ಅಂತ್ಯಕ್ಕೆ ಆಚಮನೆಯ ತಿನ್ನಪ್ಪನೇ ಕಾರಣ; ಪ್ರೀತಿಯ ಗೆಂಡ ಅಲ್ಲ” – ಹೇದು.

ಒಬ್ಬೊಬ್ಬನ ಬಾಯಿಲಿ ಒಂದೊಂದು ನಮುನೆ ತಿರುಗುತ್ತು. ಕೆಲವು ದಿಕ್ಕೆ ಉಪ್ಪುಮೆಣಸು ಸೇರಿ ಪಾಕ ಆವುತ್ತು; ಮತ್ತೆ ಕೆಲವು ದಿಕ್ಕೆ ಕೈ ಕಾಲು ಎಲ್ಲ ಸೇರಿ ದೊಡ್ಡ ಆವುತ್ತು. ನಿಜ ಕಥೆ ಎಂತ್ಸರ ಹೇದು ಆರಿಂಗೂ ಅರಡಿಯ – ಹೇಳುಗು ಮುರ ರಾಮಣ್ಣ.
ಅವಕ್ಕೆ ಅಡಿಗ್ಗೆ ಉಪ್ಪುಮೆಣಸು ಹಾಕಿ ಅರಡಿಗಷ್ಟೇ ವಿನಃ, ಹೀಂಗೆ – ಆರಾರ ಬಗ್ಗೆ ಮಾತಾಡುವಾಗ ಉಪ್ಪುಮೆಣಸು ಹಾಕಿ ಅರಡಿಯ.
ಅಂತೂ, ಅವಕ್ಕೆ ಗೊಂತಿಪ್ಪ ಪ್ರಕಾರ ಆ ಊರಿನ ಅನುಭವಂಗಳ ತೂಷ್ಣಿಲಿ ವಿವರ್ಸಿದವು.

~

ತಿನ್ನಪ್ಪನ ಕತೆ ಎಂತ್ಸರ?
ಅದೊಂದು ಸಣ್ಣ ಮಟ್ಟಿನ ಪುಢಾರಿ.  ಹಾಂಗಾಗಿ ಅದರ ಹೆಸರೇ ತಿನ್ನಪ್ಪ ಪುಢಾರಿ ಹೇಳಿ ಆಯಿದು ಊರಿಲಿ.
ಹೆಸರಿಂಗೆ ತಕ್ಕ ಹಾಂಗೇ, ಎಲ್ಲಿಂದ ತಿಂಬಲೆ ಸಿಕ್ಕುತ್ತು – ಹೇದು ನೋಡ್ಸಡ.
ಇವರ ಮನೆಯ ಹತ್ತರಾಣ ಜಾಗೆಲೇ ಇದ್ದದು ಇವರ ದುರ್ದೈವ. ನೆರೆಕರೆ ಅಲ್ಲ, ನೆರೆ ಹೊರೆ!
ದುಡುದ ಪೈಶೆಲಿ ಮಾಡಿದ ಇವರ ಸಣ್ಣ ಜಾಗೆಯ ಮೇಗೆ ಅದಕ್ಕೆ ಕಣ್ಣು. ಈಗ ಬಹುಲಕ್ಷ ಬೆಲೆಯ ಆ ಜಾಗೆಯ ಮೂರುಕಾಸಿಂಗೆ ಕ್ರಯಚ್ಚೀಟು ಮಾಡೇಕು – ಹೇದು ಅದರ ದುರಾಲೋಚನೆ.
ಹಾಂಗಾಗಿ, ಇವಕ್ಕೆ ಮಾನಸಿಕವಾಗಿ ಅದೊಂದು ಕಿರಿಕಿರಿ ಕೊಟ್ಟುಗೊಂಡೇ ಇದ್ದತ್ತಾಡ.

ಅದರಿಂದಲೂ ಜಾಸ್ತಿ – ತಿನ್ನಪ್ಪ ಪುಢಾರಿ ಆ ಊರಿನ ಸಣ್ಣಮಟ್ಟಿನ ಕೀಚಕನೂ ಅಪ್ಪು – ಹೇಳ್ತ ಒರ್ತಮಾನ.
ಇದರಿಂದಾಗಿ ಮಧ್ಯಮ ವರ್ಗದ – ಗೆಂಡ ಕೆಲಸಕ್ಕೆ ಹೋವುತ್ತ ನಮುನೆ – ಮನೆಗಳಲ್ಲಿ ಈ ಸಂಗತಿ ಮಹಾ ತಲೆಬೆಶಿ ಆಗಿ ಹೋತಾಡ. ಮನೆಲಿ ಒತ್ತೆ ಹೆಮ್ಮಕ್ಕ ಇಪ್ಪಾಗ ಬಾಗಿಲು ಬಡ್ಕೊಂಡು – ಉಪದ್ರ ಮಾಡಿಗೊಂಡು ಇದ್ದತ್ತಾಡ.
ಇದು ಆ ಹೆಮ್ಮಕ್ಕೊಗೆ ಮಾನಸಿಕವಾಗಿ ಅತಿ ಹಿಂಸೆ ಆಗಿಂಡಿತ್ತಾಡ!

ಅದಲ್ಲದ್ದೇ, ತಿನ್ನಪ್ಪ ಪುಢಾರಿ ಅದರ ಪೈಕಿಯೋರಿಂಗೆಲ್ಲಾ ಈ ಕುಟುಂಬಕ್ಕೆ ಪೀಡೆ ಕೊಡ್ಳೆ ಹೇಳಿದ್ದೋ ತೋರ್ತು, ಅದರ ರಾಜಕೀಯ ಸಂಪರ್ಕಂದಾಗಿ ಒಟ್ಟಾರೆ ಇವಕ್ಕೆ ಕಟ್ಟಿ ಹಾಕಿದಾಂಗೆ ಇತ್ತು.
~

ಅದರ್ಲಿಯೂ ಆ ದಿನ ಆ ಅಕ್ಕ° ವಿಷ ತೆಕ್ಕೊಂಬಲೆ ಕಾರಣ ಎಂತ್ಸರ?
ತಿನ್ನಪ್ಪ ಪುಢಾರಿಯ ಬಗ್ಗೆ ಹಾಂಗೆ ಕಾಗತಲ್ಲಿ ಬರದು ತಾನು ಸಾವ ನಿರ್ಧಾರ ತೆಕ್ಕೊಂಬಲೆ ಕಾರಣ ಎಂತ್ಸರ? ಉಮ್ಮಪ್ಪ!
ಆ ದೇವರಿಂಗೆ ಮಾಂತ್ರ ಅರಡಿಗಷ್ಟೆ! ಛೇ..

~

ತಿನ್ನಪ್ಪ ಪುಢಾರಿಂದಾಗಿ ಆ ಸಂಸಾರಕ್ಕೆ ಆದ ಉಪದ್ರಂಗೊ ಎಲ್ಲ ಹೆರಾಣ ಜಗತ್ತಿಂಗೆ ಗೊಂತಾದ್ಸು ಯೇವಾಗ?
ಅವಿಬ್ರೂ ಲೋಕ ಬಿಟ್ಟು ಹೋದ ಮತ್ತೆ!
ಪಾಪ, ಆ ಮನೆಯೋರು ಎಷ್ಟು ಮಾನಸಿಕ ಹಿಂಸೆ ಅನುಭವಿಸಿಗೊಂಡಿತ್ತಿದ್ದವೋ ಏನೋ!!
ಮದಲೇ ಗೊಂತಾಗಿದ್ದರೆ ಎಂತಾರು ಮಾಡ್ಳಾವುತಿತು – ಹೇದು ಎಲ್ಲೋರುದೇ ಮಾತಾಡಿಗೊಳ್ತವಾಡ.

ಆದರೆ, ಆ ಹೆಮ್ಮಕ್ಕೊ ತನಗೆ ಅಪ್ಪ ಮಾನಸಿಕ ಹಿಂಸೆಯ ತನ್ನ ಅಪ್ಪನ ಮನೆಲಿ ಅದಾಗಲೇ ಹೇಳಿದ್ದವಾಡ ಒಂದೆರಡು ಸರ್ತಿ.
ಆದರೆ, ವಿಷಯ ಇಷ್ಟು ಗಂಭೀರ ಇಕ್ಕು ಹೇದು ಆರೂ ಗ್ರೇಶಿತ್ತಿದ್ದವಿಲ್ಲೆಯೋ ಏನೋ!
ಗಾಂಭೀರ್ಯ ಗೊಂತಾದ್ದು ಈ ಘಟನೆ ಆದ ಮತ್ತೆಯೇ! ಛೇ..

~

ತುಂಬ ಕಷ್ಟ!

ಸಂಕಷ್ಟಲ್ಲಿ ಬಪ್ಪ ಭಗವಂತ!
ಸಂಕಷ್ಟಲ್ಲಿ ಬಪ್ಪ ಭಗವಂತ!

ಆದರೂ – ನಾವೆಲ್ಲ ಈಗ ಆಲೋಚನೆ ಮಾಡೇಕಾದ್ಸು – ಇವು ಈ ಕಾರಣಕ್ಕೆ ತನ್ನ ಅಂತ್ಯವೇ ಕಂಡುಗೊಳ್ಳೇಕಾತೋ?
“ತನ್ನ ರಕ್ಷಣೆಗೆ ಆರೂ ಇಲ್ಲೆ” – ಹೇಳ್ತ ಭಾವನೆ ಅವಕ್ಕೆ ಬಂದದಾದರೂ ಎಂತಗೆ!?
ನಾವೆಲ್ಲೋರುದೇ ಇದ್ದತ್ತಲ್ಲದೋ?
ತಿನ್ನಪ್ಪ ಪುಢಾರಿಯ ಹಾಂಗೆ ಒಂದೊಂದು ಉಪದ್ರ ಕೊಡ್ತರೂ ಸುಸಂಸ್ಕೃತ ಸಮಾಜ ಇಡೀ ಅವರ ಸಕಾಯಕ್ಕೆ ಇದ್ದತ್ತು ಅಲ್ಲದೋ?
ನಾವು ಆರೂ ಸಕಾಯಕ್ಕೆ ಬಾರದ್ದರೂ ಆ ದೇವರು ಇತ್ತಿದ್ದನಲ್ಲದೋ?
ಧರ್ಮಸ್ಥಳದ ದೇವರೋ, ಕಾನತ್ತೂರಿನ ದೈವವೋ, ಪಣೋಳಿಬೈಲಿನ ಶೆಗ್ತಿಯೋ, ಪಾರೆಯ ಅಜ್ಜಿಯೋ – ಆರಾರು ಒಬ್ಬ° ನೋಡಿಗೊಳ್ತಿತವು ಅಂತಾ ಅಧರ್ಮ ಶೆಗ್ತಿಗಳ.
ಇದಕ್ಕೇ ಇದಾ, ವಿದ್ವಾನಣ್ಣ ಹೇಳಿದ ಮಾತು ನೆಂಪಪ್ಪದು – “ಅನಾಥೋ ದೈವರಕ್ಷಕಃ” ಮತ್ತೆ ಮತ್ತೆ ನೆಂಪು ಮಾಡೇಕಪ್ಪದು. . .

~
ಆ ಅಕ್ಕ°, ತನ್ನ ಮಗನ ಉಜ್ವಲ ಭವಿಷ್ಯವ ಗ್ರೇಶಿ ಆದರೂ ಜೀವತೆಕ್ಕೊಳದ್ದೆ ಕೂರೇಕಾತು, ಅಲ್ಲದೋ?
ಏನೋ ಉದ್ವೇಗಲ್ಲಿ ಆ ಹೆಮ್ಮಕ್ಕೊ ಜೀವ ತೆಕ್ಕೊಂಡವು, ಆಗಿಕ್ಕು. ಆದರೆ, ಅದರ ಕಂಡು ಕೂಡ್ಳೇ ಗೆಂಡನೂ ತೀರಿಗೊಳ್ಳೇಕಾತಿಲ್ಲೆ!
ಧೈರ್ಯಲ್ಲಿ ಜೀವನವ ಎದುರಿಸಿ ತಿನ್ನಪ್ಪ ಪುಢಾರಿಯ ಹಾಂಗಿಪ್ಪ ಲೂಟಿಕೋರಂಗೊಕ್ಕೆ ಪಾಠ ಕಲಿಶಲೆ ಆವುತಿತು!
ಮಗನ ಸರಿಯಾಗಿ ವಿದ್ಯಾಭ್ಯಾಸ ಮಾಡುಸಿ ಸಮಾಜ ಸೇವೆಗೆ ಕಳುಸಿ ಹೀಂಗಿರ್ತ ಹುಳುಗಳ ಓಡುಸಲೆ ನೋಡ್ಳಾವುತಿತು.
ಅಲ್ಲದೋ?
~

ಹ್ಮ್,  ಈ ವಿಷಯ ನಮ್ಮ ಗುರುಗೊಕ್ಕೆ ತುಂಬಾ ವ್ಯಥೆ ಆಯಿದಾಡ.
ಇದು ಕೇವಲ ಹವ್ಯಕ ಸಮಾಜಕ್ಕೆ ಆದ ತೊಂದರೆ ಅಲ್ಲ; ಇದೊಂದು ಸುಸಂಸ್ಕೃತ ಸಮಾಜಕ್ಕೆ ಆದ ಹಾನಿ.
ಅಪ್ಪದಾತು.
ಇನ್ನು ಮುಂದಕ್ಕೆ ಹೀಂಗಪ್ಪಲಾಗ – ಹೇದು ಗುರುಗೊ ವಿಶೇಷ ಆಸಕ್ತಿ ತೆಕ್ಕೊಂಡಿದವಾಡ.

~

ಇಲ್ಲಿ ಎರಡು ಸಂಗತಿ ಇದ್ದು.
ಒಂದನೇದಾಗಿ, ನೆರೆಕರೆಂದ ಬಂದ ತೊಂದರೆ.
ಎರಡ್ಣೇದು –ಮನಸ್ಸಿಲಿ ಆದ ಭಾವನೆಗೊ.

ಸುರೂವಾಣದ್ದು – ಎಲ್ಲೋರಿಂಗೂ ಇಪ್ಪದೇ.
ನೆರೆಕರೆ ಹೇಳಿದ ಮತ್ತೆ ಪರಸ್ಪರ ವೈಮನಸ್ಸುಗೊ, ಅಭದ್ರತೆಗೊ ಇಪ್ಪದೇ, ಒಂದರಿ ಗುರ್ತ ಅಪ್ಪನ್ನಾರ.
ಕೆಲವು ಜೆನ ಕಾಟುಗೊ ಗುರ್ತ ಆದ ಮತ್ತೆಯೂ ಕಿರಿಕಿರಿ ಮುಂದುವರುಸುತ್ತವು; ಬೇರೆ ನಮುನೆಲಿ.
ಇಂಥಾದ್ದರ ಎದುರುಸೇಕಾದ್ಸು ಸಂಘಟನೆಲಿ.
ನಮ್ಮ ಗುರುಪೀಠದ ಅಡಿಲಿ ಸಂಘಟನೆ ಇಷ್ಟು ಭದ್ರವಾಗಿದ್ದು.
ಇಂಥಾ ಪರಿಸ್ಥಿತಿಲಿ ಒಟ್ಟಾಗಿ ಹೋರಾಡೇಕಾದ ಸಂದರ್ಭ ಬಪ್ಪಗ ಕೆಲಸ ಮಾಡೇಕಾದ ಅಗತ್ಯವ ಎಲ್ಲೋರುದೇ ಮನಗಂಡಿದವು.
ಆ ಆರಾಲೋಚನೆಲೇ ಗುರುಗೊ ಸಂಘಟನೆಯ ಮನಗಾಣುಸಿದ್ದು; ಒಬ್ಬೊಬ್ಬನೇ ಆಗಿ ಈಗ ಎಲ್ಲೋರುದೇ ಅರ್ಥ ಮಾಡಿಗೊಂಡಿದ್ದವು.
~

ಎರಡ್ಣೇದು, ಅವರ ಮನಸ್ಸಿಂಗೆ ಸಮ್ಮಂದ ಪಟ್ಟದು.
ಆ ಹೆಮ್ಮಕ್ಕಳ ಮನಸ್ಸಿಲಿ ಆ ನಮುನೆಯ ಹೆದರಿಗೆ ಎಂತಗೆ ತುಂಬಿತ್ತು.
ಸತ್ತರೇ ಅದಕ್ಕೆ ಪರಿಹಾರ ಹೇಳ್ತ ಆಲೋಚನೆ ಎಂತಗೆ ಬಂತು? ಅದರಿಂದ ಹೊರತು ಪರಿಹಾರವೇ ಸಿಕ್ಕದೋ?
ಸಾವೇ ಎಲ್ಲದಕ್ಕೂ ಉತ್ತರವಾ?
ತಾನು ಅನಾಥೆ – ಹೇಳ್ತ ಭಾವನೆ ಬಂತೋ?
ಹಾಂಗಿದ್ದಲ್ಲಿ ವಿದ್ವಾನಣ್ಣ ಹೇಳಿದಾಂಗೆ “ಅನಾಥೋ ದೈವರಕ್ಷಕಃ” ಮಾತು ಅವಕ್ಕೆ ಗೊಂತಿತ್ತಿಲ್ಲೆಯೋ? ಆ ಹೊತ್ತಿಂಗೆ ನೆಂಪಾತಿಲ್ಲೆಯೋ? ಅಥವಾ, ಬೇರೆ ಆರನ್ನಾರು ಆಪ್ತರ ನೆಂಪಾಯಿದಿಲ್ಲೆಯೋ? ಜೀವ ತೆಕ್ಕೊಂಬ ಮದಲು ಆರತ್ರಾರು ಮಾತಾಡೇಕು ಕಂಡಿದಿಲ್ಲೆಯೋ?
ತಿನ್ನಪ್ಪ ತಪ್ಪಿಂಗೆ ಶಿಕ್ಷೆ ಅನುಭವಿಸುದರ ನೋಡ್ಳಾದರೂ ಬದ್ಕೇಕು ಅನುಸಿದ್ದಿಲ್ಲೆಯೋ?
ತನ್ನ ಸಾವಿನ ಮೂಲಕ ತಿನ್ನಪ್ಪ ಪುಢಾರಿಗೆ ಬುದ್ಧಿಕಲಿಶಲೆ ಬೇಕಾಗಿ ಸತ್ತುಗೊಂಡವೋ?

ಇದೆಲ್ಲವೂ ಉತ್ತರ ಇಲ್ಲದ್ದ ಪ್ರಶ್ನೆ.
ತೀರಿಗೊಂಡ ಅಕ್ಕನ ಹತ್ತರೆ ಕೇಳುಲೂ ಇಲ್ಲೆ, ಉತ್ತರ ಸಿಕ್ಕುಲೂ ಇಲ್ಲೆ.
ಆದರೆ, ಆದ್ದಾತು; ಮುಂದಕ್ಕೆ ಸುಸಂಸ್ಕೃತರು ಆರೂ ಆತ್ಮಹತ್ಯೆಗೆ ಹೆರಟು ಆರಿಂಗಾರು ಪಾಠ ಕಲಿಶುತ್ತೆ ಹೇದು ಹೆರಡ್ಳಾಗ; ಆತ್ಮ ಹತ್ಯೆಯೇ ಎಲ್ಲದಕ್ಕೂ ಉತ್ತರ – ಹೇದು ಗ್ರೇಶಿಗೊಂಬಲಾಗ.
ಹಾಂಗೆ ಆಯೇಕಾರೆ ಎಂತಾಯೇಕು? ಎಂತ ಮಾಡೇಕು? – ಇದರ ಬಗ್ಗೆ ನಮ್ಮ ಸಮಾಜಲ್ಲಿ ಚಿಂತನೆ ನೆಡೆತ್ತಾ ಇದ್ದಾಡ.

~
ಮನಸ್ಸಿಂಗೆ ತುಂಬಾ ಬೇಜಾರ ಆದ ಕೂಡ್ಳೇ ಅತಿರೇಕ ಮಾಡಿಗೊಂಬ ಮದಲೇ ಆರಾರು ಸಮಾಧಾನ ಹೇಳುವೋರು ಸಿಕ್ಕಿರೆ, ಮತ್ತೆ ಹೀಂಗಿರ್ತ ಅಚಾತುರ್ಯಂಗೊ ಆಗಿ ಹೋವುತ್ತಿಲ್ಲೆ.
ಆದರೆ, ಆ ಸಂದರ್ಭಲ್ಲಿ ಆರು ಮಾತಾಡ್ಳೆ ಸಿಕ್ಕುಗು?
ಖಂಡಿತಾ ಸಿಕ್ಕುಗು; ಏಕೆ ಸಿಕ್ಕದ್ದೆ!?

ಹೀಂಗಿರ್ತ ದುಃಖತಪ್ತರ ಬೇನೆಗೆ ಕೆಮಿಕೊಟ್ಟು ಹೃದಯ ಮಿಡಿವ ಹಲವಾರು ಮನಸ್ಸು ನಮ್ಮ ಸಮಾಜಲ್ಲಿದ್ದು.
ತುಂಬ ಬೇಜಾರಾದಪ್ಪಗ ಅವಕ್ಕೊಂದು ಪೋನು ಮಾಡಿ ಮಾತಾಡಿರೆ ಹೇಂಗೆ?
ಅಥವಾ, ಅವರ ಒಂದರಿ ಕಂಡು; ಶುದ್ದಿ ಮಾತಾಡಿ; ಬೇಜಾರ ಹೇಳಿಗೊಂಡ್ರೆ ಹೇಂಗೆ?
ಈಗ ಹೇಂಗೂ ಮೊಬೈಲು ಇದ್ದು ಎಲ್ಲೋರತ್ರೂ, ಅಟ್ಟುಂಬೊಳವೂ ಮಾತಾಡ್ಳಕ್ಕು!
ಅಷ್ಟಪ್ಪಗ ಏಕಾಂಗಿ ಭಾವನೆ ಬಪ್ಪಲಿಲ್ಲೆ. ಆಗದ್ದೆ ಇಲ್ಲೆ ಅಪ್ಪೋ.
ಹಾಂಗಾಗಿ, ದುಃಖಲ್ಲಿಪ್ಪ ಮನಸ್ಸುಗೊಕ್ಕೆ ಸಾಂತ್ವಾನ ಕೊಡ್ತ ಅಂಶವನ್ನೂ ನಮ್ಮ ಸಂಘಟನೆಲಿ ಸೇರುಸುತ್ತ ಬಗ್ಗೆ ಗುರುಪೀಠ ಆಲೋಚನೆ ಮಾಡಿದ್ದಾಡ.

~

ಅನಾಥ ಪ್ರಜ್ಞೆ ಮನಿಶ್ಶಂಗೆ ಬಪ್ಪಲಾಗ ಹೇಳ್ತ ಲೆಕ್ಕಲ್ಲಿಯೇ “ಅನಾಥೋ ದೈವರಕ್ಷಕಃ” ಹೇಳಿ ನಮ್ಮ ಅಜ್ಜಂದ್ರು ಹೇಳಿದ್ದದು.
ಆರನ್ನಾರು ನೋಡಿಗೊಂಬಲೆ ಆರೂ ಇಲ್ಲೆ ಹೇಳ್ತ ಭಾವನೆ ಬಂದರೆ, ಅಂತೋರ ದೇವರು ನೋಡಿಗೊಳ್ತ ಹೇಳುದು ನಂಬಿಕೆ.
ಮೊನ್ನೆ ತೀರಿಗೊಂಡ ಅಕ್ಕಂಗೂ ಈ ಮಾತು ಅನ್ವಯ ಆವುತ್ತು; ಈಗ ಅಪ್ಪಮ್ಮನ ಕಳಕ್ಕೊಂಡ ಆ ಮಾಣಿಗೂ ಅನ್ವಯ ಆವುತ್ತು.
ದೇವರೇ ಆ ಮಗುವಿನ ಕಾಪಾಡಲಿ; ಉಜ್ವಲ ಭವಿಷ್ಯ ಸಿಕ್ಕುವನ್ನಾರ ರಕ್ಷಣೆ ಕೊಡ್ಳಿ.
ಅಪ್ಪಮ್ಮಂಗೆ ಆದ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡ್ಳೆ ಶೆಗ್ತಿ ಕೊಡ್ಳಿ.
ಅವಂಗೆ ಬೇಕಾದ ಸಕಾಯವ ನಮ್ಮ ಸಂಘಟನೆಗೊ ಮಾಡಲಿ.

ಹಳಿ ತಪ್ಪಿದ ಸಂಸಾರ, ಪ್ರೀತಿ ತಪ್ಪಿದ ಮನೆಯ ಮತ್ತೆ ಕಟ್ಟಿ ಬೆಳೆಶಿ ರಕ್ಷಿಸಲೆ ಆ ದೇವರೊಟ್ಟಿಂಗೆ ನಮ್ಮ ಬೈಲುದೇ ಶೆಗ್ತಿಮೀರಿ ಸಕಾಯ ಮಾಡ್ತು – ಹೇದು ನಾವೆಲ್ಲೋರುದೇ ಅವರ ಪೈಕಿಯೋರಿಂಗೆ ನೆಂಪುಮಾಡುವೊ°.

~

ತಿನ್ನಪ್ಪ ಪುಢಾರಿಗೆ ಆಯೇಕಾದ ಶಿಕ್ಷೆ ಸಿಕ್ಕಲೇಬೇಕು – ಹೇದು ಊರಿನ ಹಲವು ಸಂಘಟಕರು, ಚಿಂತಕರು, ಸುಸಂಸ್ಕೃತರು ಹೋರಾಡಿಗೊಂಡು ಇದ್ದವು.
ಎರಡು ಜೀವದ ನಷ್ಟಕ್ಕೆ ಕಾರಣ ಆದ ಆ ಪ್ರಾಂದಂಗೆ ಶಿಕ್ಷೆ ಆಯೇಕು.
ಅದರಿಂದಲೂ ಮುಖ್ಯವಾಗಿ, ಆ ಮಗನ ಬಾಳು ಉಜ್ವಲವಾಗಿ ಬೆಳೇಕು.
ಆರ ಎದುರುದೇ ತಲೆ ತಗ್ಗುಸಿ ನಿಲ್ಲದ್ದೆ, ಧೈರ್ಯಲ್ಲಿ ಬೆಳದು ಬಾಳುವ ಆ ಮಹಾಶೆಗ್ತಿ ದೈವ-ದೇವರುಗೊ, ಶ್ರೀಗುರುಗೊ ಒದಗುಸಿ ಕೊಡೇಕು – ಹೇಳ್ತದು ಬೈಲಿನ ಪರವಾಗಿ ನಾವು ಎಲ್ಲೋರುದೇ ಕೇಳಿಗೊಂಬದು.

~

ಸಮಾಜದ ಸುಸಂಸ್ಕೃತರಿಂಗೆ ತಿನ್ನಪ್ಪ ಪುಢಾರಿಗಳ ಹಾಂಗಿಪ್ಪ ಕೀಚಕಂಗಳ ಕೈಂದ ದೇವರು ರಕ್ಷೆ ಕೊಡ್ಳಿ.
ಎಂತ ಪರಿಸ್ಥಿತಿ ಬಂದರೂ – ಆರುದೇ ಅನಾಥ ಅಲ್ಲ – ಹೇಳ್ತ ಭಾವನೆ ಬಪ್ಪ ಹಾಂಗೆ ತಿಳ್ಕೊಳ್ಳಲಿ.
ಮಾನಸಿಕವಾಗಿ ಕಿರುಕುಳ ಅನುಭವಿಸುತ್ತೋರಿಂಗೆ ನೆಮ್ಮದಿ ಸಿಕ್ಕುತ್ತ ಹಾಂಗೆ ನಮ್ಮ ಸಂಘಟನೆಗೊ ಸಹಾಯವಾಣಿ ಆರಂಭ ಮಾಡಲಿ – ಹೇಳ್ತದು ಚಿಂತಕರು ಹೇಳ್ತ ಅನಿಸಿಕೆಗೊ.

~

ಒಂದೊಪ್ಪ: ಸ್ವಂತ ರಕ್ಷಣೆಯ ಮನಸ್ಸಿದ್ದರೆ ಮಾಂತ್ರಾ ದೈವರಕ್ಷಣೆ ಸಿಕ್ಕುಗಷ್ಟೆ!

ಸೂ: ಇದು “ಅವರ” ಕತೆಯೇ ಆದರೂ – ಈ ಶುದ್ದಿಲಿ ಬಪ್ಪ “ಅವು”ದೇ, ನಿಜಜೀವನದ “ಅವು” ಬೇರೆಬೇರೆ ಆಗಿಕ್ಕು. ಏ°..!?

10 thoughts on “ಅನಾಥೋ ದೈವರಕ್ಷಕಃ . .

  1. ಹರೇ ರಾಮ ಒಪ್ಪಣ್ಣಾ,
    ವಿಷಯ ತಿಳುದು ಬೇಜಾರಾತು. ಅನಾಥೋ ದೈವ ರಕ್ಶಕಃ ಅಪ್ಪು, ಆದರೇ ದೇವರ ಮಾತ್ರ ನಂಬಿರೆ ಸಾಲ ನಾವೂ ಸಂಘಟಿತ ಆಯೆಕು ಹೇಳುವ ನಿನ್ನ ಮಾತು ಆನೂ ಒಪ್ಪುತ್ತೆ.
    ಶ್ರೀ ಸಂಸ್ಥಾನ ಈ ನಿಟ್ಟಿಲ್ಲಿ ಎಂತ ಸೂಚಿಸಿರೂ/ಅಪ್ಪಣೆ ಕೊಡುಸಿರೂ ಮಾಡುಲೆ ನಾವು ಸಿದ್ಧ.

  2. ಒಪ್ಪಣ್ಣನ ನಿರೂಪಣಾ ಶೈಲಿ ಅದ್ಭುತ… ಗುರು ಹಿರಿಯರು ಹೇಳಿದಾಂಗೆ ನಮ್ಮೊಟ್ಟಿಂಗೆ ದೇವರಿದ್ದ ಹೇಳುದರ ನೆನಪು ಮಡಿಕ್ಕೊಳೆಕ್ಕು ಅಲ್ಲದಾ…….?

  3. “ಅನಾಥೋ (ಜನಾರ್ದನ) ಪೂಜಾರಿ ರಕ್ಷಕ” ಹೇಳಿ ಮಂಗಳೂರಿಲ್ಲೊಂದು ಮನುಷ್ಯ ಇದ್ದು. ಈ ನಡುವೆ ಸಮಾಜ ಪರಿವರ್ತನೆ ಕೆಲಸಕ್ಕೆ ಕೈಹಾಕಿದ್ದು. ಊರು ಉದ್ದಾರ ಮಾಡುವ ನೆಪಲ್ಲಿ ಅದುದೇ ಹೀಂಗಿಪ್ಪ ತಿನ್ನಪ್ಪ ಪುಡಾರಿಯ ಕೆಲಸ ಮಾದ್ತು ಹೇಳಿ ಸುದ್ದಿ ಇದ್ದು. ಯಾವುದಕ್ಕೂ ಆತ್ಮಹತ್ಯೆ ಪರಿಹಾರವಲ್ಲ. ಹರೇರಾಮ.

  4. harerama.
    vishaya tilidu bejaratu. paperilli odithidde. atmahatye parihara alla.namma sanghataneli ondu counselling team kooda beku heli eega kanuthu.shrigurugo eemattilli khanditha munduvarigu .
    harerama.

  5. ಒಪ್ಪಣ್ಣಾ, ಅನಾಥೋ ಶ್ರೀ ಗುರು ರಕ್ಷಕ, ನಮ್ಮ ಹೆಮ್ಮಕ್ಕಳ ಸಂಕುಲಕ್ಕೆಹೀಂಗೆ ಉಪದ್ರ ಕೊಡುತ್ತ ಕೀಚಕಂಗೊ ಎಷ್ಟೋಇದ್ದವು ಕೆಲವು ಬೆಣ್ಚಿಗೆ ಬತ್ತಷ್ಟೆ!. ಸಂಸ್ಥಾನ ಈ ಸಮಸ್ಯೆಪರಿಹಾರಕ್ಕಾಗಿ ಯೋಚನೆ ಮಾಡ್ತವು ಹೇಳ್ತಸಂಗತಿಯೆ ಬದುಕ್ಕಿಲ್ಲಿ ನಿರಾಶೆ ಹುಟ್ಟಿದ ಹೆಣ್ಣು ಸಂತತಿಗೆ ಬದುಕ್ಕುವ ಆಶೆ ಹುಟ್ಟುಸುಗು ಹರೇರಾಮಾ.

  6. ವಿಷಯ ತಿಳುದು ತುಂಬಾ ಬೇಜಾರಾತು. ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರ ಅಲ್ಲ. ಈಗಾಣ ಕೆಲವು ಜವ್ವನಿಗರು/ಜವ್ವನ್ತಿಗಳುದೆ ಈ ಬಗ್ಗೆ ತಿಳ್ಕೊಳೆಕು. ಸಮಯೋಚಿತ ಶುದ್ದಿ.

  7. ಸುದ್ದಿ ಓದಿ ಬೇಜಾರಾವುತ್ತು.
    ನಮ್ಮ ಜೀವನದ ನಿರ್ಣಯಂಗಳ ಪರಿಣಾಮ ನಮ್ಮ ಜೀವನ ಮಾತ್ರ ಅಲ್ಲ ನಮ್ಮ ಇಡೀ ಕುಟುಂಬಕ್ಕೆ, ನಮ್ಮ ನೆರೆಕರೆಗೆ , ನಮ್ಮ ಸಮಾಜಕ್ಕೆ ಆವುತ್ತು.ಅದ್ದರಿಂದ ನಮ್ಮ ನಿರ್ಣಯಂಗಳ ತೆಕ್ಕೊಂಬಗ ಸರಿಯಾಗಿ ಯೋಚನೆ ಮಾಡೆಕ್ಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×