Oppanna.com

ಎಂಜಲು, ಮೈಲಿಗೆ, ಕೊಳೆ, ಶುದ್ಧ – ಅಶೌಚ ಅರ್ತರೇ ನಿಜವಾದ ಶುದ್ಧ!!

ಬರದೋರು :   ಒಪ್ಪಣ್ಣ    on   25/10/2013    12 ಒಪ್ಪಂಗೊ

ಸೂತಕ ಹೇದರೆಂತ್ಸು, ಅದರ ತಿಷ್ಠಗತಿ ಎಂತ್ಸು – ಹೇದು ವಿದ್ವಾನಣ್ಣ ಮಾತಾಡಿದ್ಸರ ಬೈಲಿಲಿ ನಾವು ಕಳುದ ವಾರ ನೆಂಪುಮಾಡಿದ್ದು.
ಉಡುಪಮೂಲೆ ಅಪ್ಪಚ್ಚಿಯ ಹಾಂಗಿರ್ತ ಹೆರಿಯೋರು ಶುದ್ದಿಗೆ ಒಪ್ಪದ ರೂಪಲ್ಲಿ ಅಮೂಲ್ಯ ಮಾಹಿತಿಗಳನ್ನೂ ತೋರ್ಸಿಕೊಟ್ಟು ಹಲವು ವಿಷಯಂಗಳ ತಿಳುಶಿದ್ದವು.
ಗೊಂತಾಯಿದಲ್ಲದೋ?
ಸಂಕೊಲೆ ಇಲ್ಲಿದ್ದಿದಾ: https://oppanna.com/?p=35540
~

ಪ್ರತಿ ಸೂತಕದ ಹಿಂದೆಯೂ ಮಾನಸಿಕ ಅಶೌಚ ಇರ್ತು – ಅದಕ್ಕಾಗಿ ಹತ್ತು ದಿನಗಳ ಕಾಲ ಅಶೌಚ ಆಚರಣೆ ಮಾಡ್ತು.
ದೇವಕಾರ್ಯಂದ ದೂರ ಇದ್ದುಗೊಂಡೇ ಆತ್ಮಾಭಿಮುಖ ಚಿಂತನೆಗಳಲ್ಲಿ ತೊಡಗಿಂಡು ಇರ್ಸಡ ಆ ಸಮೆಯಲ್ಲಿ.
ಕಳುದ ವಾರ ಅಂಬೆರ್ಪಿಲಿ ಸೊರಂಬೈಲಿಂಗೆ ಹೋಪಲಿದ್ದ ಕಾರಣ ಈ ವಿವರ ಹೆಚ್ಚು ಮಾತಾಡ್ಳಾತಿಲ್ಲೆಪ್ಪೋ, ಈ ವಾರ ವಿಧದ ಅಶೌಚಂಗಳ ಬಗ್ಗೆಯೇ ಮಾತಾಡಿರೆ ಅಕ್ಕೋ?
ನವಗೆಲ್ಲೋರಿಂಗೂ ಅರಡಿವದೇ ಆದರೂ – ಒಂದರಿ ನೆಂಪು ಮಾಡಿಗೊಂಡ್ರೆ ಮೈಲಿಗೆ ಇಲ್ಲೆನ್ನೇ! 🙂

ಹಾಂಗೆ, ಎಂತರ ಅಶುದ್ದ ಹೇದರೆ? ಯೇವದೆಲ್ಲ ನಮುನೆಯ ಅಶುದ್ಧಂಗೊ ಇದ್ದು? ಹೇದು ನಾವು ವಿವರ ಕೇಳಿದ್ದು ಚೆನ್ನೈಭಾವನ ಹತ್ತರೆ.
ವಿದ್ವಾನಣ್ಣನ ಕೈಲಿ ಮಾತಾಡಿದ ಅದೇ ದಿನ ನೆಡಿರುಳು ಪೆರ್ಡಾನ ಜೀಪಿಲಿ ಬಂದದಿದಾ; ಬಪ್ಪಗ ಚೆನ್ನೈಭಾವನ ಹತ್ತರೆ ಈ ವಿಷಯವೇ ಮಾತಾಡಿಗೊಂಡು ಬಂದದು.
ಹದಿನಾರು ಸಂಸ್ಕಾರ ಪುಸ್ತಕ ಬರದೋರಿಂಗೆ ಅದು ಸರಿಯಾಗಿ ಅರಡಿಗಷ್ಟೇ ವಿನಹಾ, ನಮ್ಮ ಹಾಂಗೆ ಬೆರಳು ಚೀಪುತ್ತೋರು, ಉಗುರು ತಿಂತೋರ ಹತ್ತರೆ ಕೇಳಿರಕ್ಕೋ?
ಚೆನ್ನೈಭಾವ ವಿವರುಸುದು ಹೇದರೆ, ಅಡಿಗೆ ಸತ್ಯಣ್ಣನ ಹಸರ ಸೀವಿನ ಹಾಂಗೆ.
ಎಳದೂ ಎಳದೂ – ರುಚೀ ಮಾಡಿ ಬಳುಸುವಾಗ; ಅನುಭವಿಸಿ ಉಂಬದು ನಮ್ಮ ಸಾಮರ್ತಿಗೆ!
ಅವು ವಿವರ್ಸುವಗ ಒಂದು ವೇಳೆ ಒರಕ್ಕುತೂಗಿರೆ? ಕುಣಿಯ ತಿನುಸುಗು!
ಹಾಂಗಾಗಿ ಎಡಿಗಾಷ್ಟು ಕಣ್ಣೊಡದು ಕೆಮಿಬಿಡುಸಿ ಕೇಳಿಗೊಂಡೆ. ಬಿಟ್ಟು ಹೋದ್ಸರ ಹೇಳುಲೆ ಅವ್ವೇ ಇದ್ದವನ್ನೇ! 😉

ಅದಿರಳಿ.
~

ಅಶುದ್ಧ ಹೇದರೆಂತ್ಸು – ಗೊಂತಾಯೇಕಾರೆ, ಶುದ್ಧ ಹೇದರೆಂತ್ಸು ಅರಡಿಯೇಕು ಮದಾಲು.
ನಾವು ಯೇವಾಗ ಶುದ್ಧಲ್ಲಿಲ್ಲೆಯೋ, ಅಂಬಗ “ಅಶುದ್ಧ” ಆಯಿದು ಹೇಳ್ತದು.
ಶುದ್ಧಲ್ಲಿಪ್ಪದು ಹೇದರೆ – ದೇವರ ಕಾರ್ಯ ಮಾಡ್ಳಕ್ಕಾದ ನಮುನೆಲಿ ಶುಚಿರ್ಭೂತರಾಗಿಪ್ಪದು – ಹೇಳಿದವು ಚೆನ್ನೈಭಾವ.

ಶುದ್ಧಲ್ಲಿ ಆಂತರ್ಯ ಶುದ್ಧಿ, ಬಾಹ್ಯ ಶುದ್ಧಿ – ಎರಡು ವಿಧ.
ಆಂತರ್ಯ ಶುದ್ಧಿ ಹೇದರೆ ಮನಸ್ಸಿಲಿ ದೇವರ ಧೇನುಸಿಗೊಂಡು, ದೈವದೇವರ ಬಗ್ಗೆ, ಧರ್ಮಕರ್ಮಂಗಳ ಬಗ್ಗೆಯೇ ಧೇನುಸಿಗೊಂಡು ಇಪ್ಪ ಸಂದರ್ಭ.
ಬಾಹ್ಯ ಶುದ್ಧಿ ಹೇದರೆ ಮಿಂದು, ಶುಭ್ರ ಒಸ್ತ್ರ ಸುತ್ತಿಗೊಂಡು, ಶುಚಿವಸ್ತುಗಳ ಮಾಂತ್ರ ಮುಟ್ಟಿಗೊಂಡು ದೇವರ ಗ್ರೇಶಿಗೊಂಡೇ ಇಪ್ಪದು.
ಶುದ್ಧಿ – ಶುಚಿ ಇಲ್ಲದ್ದ ಈ ಸಂದರ್ಭವನ್ನೇ ಅಶುಚಿ / ಅಶೌಚ ಹೇಳ್ತವಾಡ.

~
ಬಾಹ್ಯ ಶುದ್ಧಿ ಹೇದರೆ ಬರೇ ಮಿಂದು, ಹೊಸಾ ಅಂಗಿ ಹಾಕುತ್ತದು ಮಾಂತ್ರ ಅಲ್ಲ; ಮತ್ತೂ ಹಲವಾರು ವಿಷಯಂಗೊ ಇದ್ದು.
ಅದೆಲ್ಲವನ್ನೂ ಮಾತಾಡ್ಳೆ ನವಗೆ ಜಾಸ್ತಿ ಪುರುಸೊತ್ತಾಗ – ಪುರುಸೊತ್ತು ಆದಷ್ಟು ಮಾತಾಡುವೊ.
ಬಾಹ್ಯ ಶುದ್ಧಿಗೆ ಸಮ್ಮಂದಪಟ್ಟ ಬೇರೆ ಏವದೆಲ್ಲ ಸಂಗತಿಗೊ ಇದ್ದು? ಯೇವೆಲ್ಲ ನಮುನೆ ಅಶೌಚಂಗೊ ಇದ್ದು?
~

ಎಂಜಲು:

ನಮ್ಮ ಬಾಯಿಲಿ ಬಪ್ಪ ನೀರು (ಜೊಲ್ಲು) ಎಂಜಲು ನೀರು ಹೇದು ಹೆಸರು.
ಯೇವದೇ ಒಂದು ವಸ್ತು ಒಬ್ಬನ ಬಾಯಿಗೆ ಇಳುದರೆ ಅದು ಮತ್ತೆ “ಎಂಜಲು” ಹೇದು ಪರಿಗಣನೆ ಆವುತ್ತು.
ತಿಂಬ ವಸ್ತುವೇ ಆಗಿರಲಿ, ಬೇರೆ ವಸ್ತುವೇ ಆಗಿರಲಿ, ಬಾಯಿ ಹೊಕ್ಕ ಮತ್ತೆ ಅದು ಎಂಜಲೇ.

ಶಬರಿಯ ಕತೆ ಅರ್ತೋರಿಂಗೆ ಎಂಜಲಿನ ಕತೆ ಗೊಂತಿಲ್ಲದ್ದೆ ಇರ.
ಹಣ್ಣಿನ ರಾಶಿಲಿ ಯೇವದು ಒಳ್ಳೆ ಹಣ್ಣು – ಹೇದು ಕಚ್ಚಿ ಕಚ್ಚಿ ರುಚಿ ನೋಡಿ- ಲಾಯಿಕಿಪ್ಪದರ ಮಾಂತ್ರ ರಾಮಂಗಾತು – ಹೇದು ತೆಗದು ಮಡಗಿತ್ತಲ್ಲದೋ!

ಶಬರಿ ಕತೆ ಹಾಂಗಿರಳಿ, ಅದಲ್ಲದ್ದೇ ಹೋದರೆ, ಒಂದರಿ ಎಂಜಲಾದ ವಸ್ತು ದೇವತಾ ಪ್ರಸಾದಕ್ಕೆ ಅರ್ಹ ಅಲ್ಲ- ಹೇದು ನಮ್ಮ ವಾಡಿಕೆ.
ಆರಾರು ರುಚಿ ನೋಡಿರೆ, ಆರದ್ದಾರು ಎಂಜಲುನೀರು ಮುಟ್ಟಿರೆ – ಅದು ಮತ್ತೆ ದೇವರಿಂಗೆ ಸಮರ್ಪಣೆ ಮಾಡ್ಳಾಗ ಹೇದು ಚೆನ್ನೈಭಾವ ಹೇಳಿದವು.

ಶುದ್ಧಲ್ಲಿದ್ದೋರು ಎಂಜಲು ಮುಟ್ಟಿರೆ ಅಶುದ್ಧ ಆವುತ್ತವು.
ಪುನಾ ಶುದ್ಧ ಆಯೇಕಾರೆ ಕೈ ತೊಳಕ್ಕೊಳೇಕು.

(ಅಂತೇ, ಉಗುರು ಕಚ್ಚಿರೂ ಕೈ ಎಂಜಲಾವುತ್ತೋ? ಉಮ್ಮಪ್ಪ, ಚೆನ್ನೈಭಾವನೇ ಹೇಳೇಕಟ್ಟೆ)

ಅವು ಹಲ್ಲೊಕ್ಕಲೆ ಹೇದು ಬೇರೆಯೇ ಪಿನ್ನು ತೆಗದು ಮಡಿಕ್ಕೊಂಬದು.
ಆ ಪಿನ್ನಿನ ಹೂಗಿನ ಮಾಲೆ ಮಾಡ್ಳೆ ತೆಕ್ಕೊಂಡು, ಆ ಮಾಲೆಯ ದೇವರ ತಲಗೆ ಮಾಡಿಕ್ಕಲಾಗ ಇದಾ! ಎಷ್ಟೂ ಜಾಗ್ರತೆ ಪೋ!!

~

ಕೊಳೆ: (ಮುಸುರೆ)

ಸಾಬೊನು ಹೊಡಿ ಎಡ್ವಟೇಸಿನೋರಿಂಗೆ ಕೊಳೆ ಹೇದರೆ ಕೊಶಿಯೇ.
ಆದರೆ, ಕಾಂಬು ಅಜ್ಜಿಗೆ ಹಾಂಗಲ್ಲನ್ನೇ!? ಅವರ ಕಾಲಲ್ಲಿ ಕೊಳೆ-ಶುದ್ಧ ಜೋರಿತ್ತು.
ಎಂತರ ಈ ಕೊಳೆ ಹೇದರೆ?

ಅಕ್ಕಿ ಅಥವಾ ಭತ್ತವ ಒಂದರಿ ಬೇಶಿರೆ ಅದು ಮತ್ತೆ “ಕೊಳೆ” ಹೇದು ಲೆಕ್ಕ.
ಉದಾಹರಣೆಗೆ, ಅಕ್ಕಿಯ ಬೇಶಿ ಅಶನ ಮಾಡಿರೆ ಅದು ಕೊಳೆ.
ವ್ರತದ ದಿನ ಮದಲಿಂಗೆ ಕೊಳೆ ಉಣ್ಣವು. ಸಜ್ಜಿಗೆಯೋ, ಗೋಧಿಹೊಡಿಯ ಚಪ್ಪಾತಿಯೋ – ಎಂತಾರು ಮಾಡಿ ಉಪಾಹಾರ ಮಾಡಿಗೊಂಗು.

ಕೊಯಿಶಕ್ಕಿ ಬೇಶೇಕು ಹೇದು ಇಲ್ಲೆ, ಅಂತೇ ಮಡಗಿರೂ ಕೊಳೆಯೇ – ಎಂತಗೆ? ಕೊಯಿಶಕ್ಕಿ ಆಯೇಕಾರೆ ಭತ್ತವ ಒಂದರಿ ಬೇಶಿ ತಣಿಶಿ ಮಡಗೇಕಿದಾ! ಹಾಂಗಾಗಿ.
ಅದೇ ನಮುನೆ ತೆಳ್ಳವು ದೋಸೆ – ಅದು ಕೊಳೆ. ಅದು ಅಕ್ಕಿಯನ್ನೇ ಕಡದು, ನೀರು ಮಾಡಿ ಎರದು ತಣಿಶಿದ ಬಗೆ ಇದಾ!!

ಶುದ್ಧಲ್ಲಿದ್ದೋರು ಈ ಕೊಳೆಯ ಮುಟ್ಟಿರೆ ಅಶುದ್ಧ ಆವುತ್ತವು.
ಪುನಾ ಶುದ್ಧ ಆಯೇಕಾರೆ ಒಂದರಿ ನೀರು ಮುಟ್ಟಿಗೊಳೇಕು.
ಹೀಂಗೆ ನೀರು ಮುಟ್ಟುದಕ್ಕೆ “ಕೈ ನಾದುದು” ಹೇಳಿ ಹೇಳುಗು ಮದಲಿಂಗೆ ಕಾಂಬು ಅಜ್ಜಿ.

ಕಾಂಬು ಅಜ್ಜಿಯ ಕೊಳೆಯೂ, ಪಂಜ ಚಿಕ್ಕಯ್ಯನ ಮನೆಲಿಪ್ಪ “ಮುಸುರೆ”ಯೂ ಒಂದೇ ಆಡ – ತರವಾಡುಮನೆಂದ ಪಂಜಚಿಕ್ಕಯ್ಯನ ಮನೆಗೆ ಹೋದ ಮಾಲಚಿಕ್ಕಮ್ಮ ಹೇಳಿತ್ತಿದ್ದವು.

~
ಮೈಲಿಗೆ:

ಮದಲಿಂಗೆ ಶಂಬಜ್ಜ ಉದೆಕಾಲಕ್ಕೆದ್ದು ಮಿಂದು ಕಣ್ಯಾರ ದೇವಸ್ಥಾನಕ್ಕೆ ಹೋಕು.
ಅಲ್ಲಿಗೆ ಎತ್ತಿದ ಮತ್ತೆ ಪುನಾ ಒಂದರಿ ಮಿಂದಿಕ್ಕಿಯೇ ದೇವರ ಕಾಂಬಲೆ ಹೋಕು; ಎಂತಗೆ? ಅದು “ದಾರಿ ಮೈಲಿಗೆ” ಹೋಪಲೆ.
ದಾರಿಲಿ ನಾವು ಎಂತರ ಎಲ್ಲ ಮೆಟ್ಟಿಗೊಂಡು – ಮುಟ್ಟಿಗೊಂಡು ಹೋವುತ್ತು ಹೇದು ಅರಡಿಯ.
ಅದಕ್ಕೆ, ಅಲ್ಲಿಗೆತ್ತಿಯಪ್ಪಗ ಮತ್ತೊಂದರಿ ಮಿಂದಿಕ್ಕಿ, ಶುಚಿಯಾಗಿ ದೇವರ ಕಾಂಬದು.

ಬಾಹ್ಯ ಶುದ್ಧಿ ಇಲ್ಲದ್ದ ಸ್ಥಿತಿಗೆ ಮೈಲಿಗೆ ಹೇಳಿಯೂ ಹೇಳ್ತವಾಡ.

~

ದೇವರ ಕಾರ್ಯಕ್ಕೆ ಎಲ್ಲವೂ ಶುಚಿ-ಶುಭ್ರವಾಗಿರೇಕು.
ವಸ್ತುಗೊ ಹಳತ್ತೇ ಆದರೂ ತೊಂದರೆ ಇಲ್ಲೆ, ಉಪಯೋಗಂದ ಮದಲು ಒಂದರಿ ತೊಳದ ಮತ್ತೆ ಬೇರೇವದಕ್ಕೂ ಉಪಯೋಗ ಆಗಿಪ್ಪಲೆಡಿಯ.
ತರವಾಡು ಮನೆಲಿ ಪೂಜೆ ಇದ್ದಲ್ಲದೋ – ದೇವರ ಸಾಯಿತ್ಯಂಗೊ ಹಲವಿದ್ದು.
ಪಾತಿ ಅತ್ತೆಯೋ, ಅಲ್ಲದ್ದರೆ ಕೆಲಸದ ಕಮಲನೋ – ಅದಕ್ಕೆ ಸುಗುಡು ಹಾಕಿ ತಿಕ್ಕಿ ತಿಕ್ಕಿ ತೊಳಗು; ದೇವರ ಕೋಣೆಯ ಬುಡಲ್ಲಿ ತಂದು ಮಡಗ್ಗು.
ದೇವರ ಪೂಜೆಗೆ ತೆಕ್ಕೊಂಬ ಮದಲು ಎಲ್ಲವನ್ನೂ ಒಂದರಿ ತೊಳಸುಗು ರಂಗಮಾವ – ಎಂತಗೆ?
ಅದರ ಮೈಲಿಗೆ ಹೋಪಲೆ; ಅದು ಶುಭ್ರವಾಗಿ ಶುಚಿಯಾಗಿರೇಕು. ಹೆರ ಎಷ್ಟೇ ತೊಳದರೂ, ಉಪಯೋಗಂದ ಮದಲು ಒಂದರಿ ಶುಚಿ ಮಾಡುಸ್ಸು ಮದಲಿಂಗೆ ಕ್ರಮ.
ಹೆರಾಂದ ತಂದು ದೇವರೆದುರು ಮಡಗುವ ಹೊತ್ತಿಂಗೆ ಪಕ್ಕನೆ ಏವದಾರು ದೃಷ್ಟಿಯೋ ಮಣ್ಣ ತಾಗಿ ಮೈಲಿಗೆ ಅಪ್ಪದು ಬೇಡ- ಹೇದು.

~

ನಿನ್ನೆ ತಂದ ನೀರು – ಇಂದಿಂಗೆ ಮೈಲಿಗೆ ಆತು.
ಸೂರ್ಯೋದಯಂದ ಸೂರ್ಯೋದಯ ಒರೆಂಗೆ ಮಾಂತ್ರ ನೀರಿಂಗೆ ವಾಯಿದೆ.
ಅದಕ್ಕೇ ಅಲ್ಲದೋ, ಪಾತಿಅತ್ತೆ ದಿನಾಗುಳೂ ಉದಿಯಪ್ಪಗ ಎದ್ದು ನೀರು ಎಳವದು?!

ನೀರು ಮೈಲಿಗೆ ಆತು ಹೇದರೆ, ಕುಡಿಯಲಾಗ ಹೇದು ಲೆಖ್ಖ ಅಲ್ಲ, ದೇವರ ಪೂಜೆಗೆ ಬಳಕೆ ಮಾಡ್ಳಿಲ್ಲೆ.
ಅಂಬಗ ಬಾವಿಲಿಪ್ಪ ನೀರು ನಿನ್ನೇಣದ್ದೇ ಅಲ್ಲದೋ – ಕೇಳುಗು ಕಮಿನಿಷ್ಟು ಬೋಚಬಾವಂಗೊ;
ಅವಕ್ಕೆ ಉತ್ತರ ಹೇಳಿಂಡು ಕೂಪಬದಲು ಎರಡು ರಾಮನಾಮ ಮಾಡಿರೆ ಪುಣ್ಯ ಆದರೂ ಬಕ್ಕು.
ಇದೆಲ್ಲ ನಮ್ಮ ವಾಡಿಕೆಲಿ ನೆಡದು ಬಂದ ಕ್ರಮಂಗೊ.

~

ನಿನ್ನೇಣ ನೀರೇ ಮೈಲಿಗೆ ಹೇದರೆ ಇನ್ನು – ನಿನ್ನೇಣ ಅಡಿಗೆ ಮೈಲಿಗೆ ಹೇಳಿ ಬೇರೆ ಹೇಳೇಕೋ?
ಇಂದ್ರಾಣದ್ದು ಇಂದಿಂದಿಂಗೇ ಮಾಡಿ ಉಂಬದು ಮದಲಿಂಗೆ. ಈಗಲ್ಲದೋ – ಪ್ರಿಜ್ಜು, ಬಿಜ್ಜು ಎಲ್ಲ ಬಂದ್ಸು.
ಇರಳಿ, ಅನುಕೂಲಕ್ಕೆ ತುಂಬಾ ಉಪಕಾರಿ; ದೇವರಿಂಗೆ ಪ್ರಿಜ್ಜಿಂದ ತೆಗದು ಕೊಡದ್ದರೆ ಆತು ಇದಾ!

ಮೈಲಿಗೆ ಇಷ್ಟು ಮಾಂತ್ರ ಅಲ್ಲದ್ದೇ ಹಲವು ವಿಧ ಇದ್ದು.

~

ಹೆಮ್ಮಕ್ಕೊ ವಿಶ್ರಾಂತಿ ದಿನಂಗಳಲ್ಲಿ ಕಾಕೆ ಮುಟ್ಟಿದ ಮೈಲಿಗೆ ಹೇದು ದೇವ ಕಾರ್ಯಂಗಳಿಂದ ದೂರ ಇರ್ತವು.
ಕೊರಗ್ಗನ ವೇಷವೋ ಮಣ್ಣ ಮುಟ್ಟಿ ಹೋದರೆ ಅದುದೇ ಒಂದು ಮೈಲಿಗೆ.
ಶವವ ನೋಡಿ ಬಂದರೆ ಅದು ಇನ್ನೊಂದು ಮೈಲಿಗೆ.
ಹಾಂಗೆ, ಹಲವಾರು ನಮುನೆಲಿ ಮೈಲಿಗೆ ಶಾಸ್ತ್ರ ಇದ್ದು.
ಬಂಡಾರಿ ಕೊಟ್ಟಗ್ಗೆ ಹೋಗಿ ಬಂದರೆ ಮೈಲಿ ಪೂರಾ ತಲೆಕಸವು ಇರ್ತು, ತಲೆಕರೆಲಿ ಗಾಯಂಗೊ ಇಪ್ಪಲೂ ಸಾಕು – ಹೇಳ್ತ ಲೆಕ್ಕಲ್ಲಿ ಮೀವನ್ನಾರ ಅದೊಂದು ಮೈಲಿಗೆ.
~

ಹಲ್ಲೆಡಕ್ಕಿಲಿ ಸಿಕ್ಕಿದ ಅಡಕ್ಕೆಯ ರಟ್ಟುಸಲೆ ಪಿನ್ನು ಹಾಕಿದವು,
ಆಗಳೇ ಹೇಳಿದ್ದೆ – ಅದಕ್ಕೆ ಹೇಳಿಯೇ ಇಪ್ಪ ಪಿನ್ನು, ಹಾಂಗಾಗಿ ಮೈಲಿಗೆ ಬೇರೆದಕ್ಕೆ ಪಗರುಲೆ ಇಲ್ಲೆ ಇದಾ! 😉

~

ಅಪ್ಪು, ಈ ಮೈಲಿಗೆಗೆ ಪಗರುವ ಬುದ್ಧಿ ಇದ್ದು!
ಮೈಲಿಗೆ ವಸ್ತುವಿನ ಮುಟ್ಟಿದ ಇನ್ನೊಂದು ವಸ್ತುದೇ ಮೈಲಿಗೆ ಆತು.
ಉದಾಹರಣೆಗೆ, ಒಂದು ಪಾತ್ರಲ್ಲಿ ತಣ್ಣನೆ ಹೆಜ್ಜೆ – ಕೊಳೆ – ಇದ್ದು ಮಡಿಕ್ಕೊಳಿ.
ಅದರ ಹತ್ತರೆ ಇಂದು ಎಳದು ತಂದು ಮಡಗಿದ ನೀರಿನ ಪಾತ್ರ ಇದ್ದು.
ಅಂಬೆರ್ಪಿಲಿ ಆ ತಣ್ಣನೆ ಪಾತ್ರವ ಅಲ್ಲಿಂದ ತೆಗವಾಗ ನೀರ ಪಾತ್ರಕ್ಕೆ ಮುಟ್ಟಿ ಹೋತೋ – ಮುಗಾತು.
ಈಗ ತಣ್ಣನೆ ಪಾತ್ರ ಶುದ್ಧ ಅಪ್ಪದಲ್ಲ; ನೀರ ಪಾತ್ರ ಮೈಲಿಗೆ ಅಪ್ಪದು.
ಪಾತಿಅತ್ತೆಯ ಕೈಲಿ ಹೀಂಗಾದರೆ, ಆ ನೀರಿನ ಚೆಲ್ಲಿ, ಗೆನಾ ನೀರು ಮತ್ತೊಂದರಿ ಎಳಕ್ಕೊಂಡು ಬಕ್ಕು ಬಾವಿಂದ.

~
ಶುದ್ಧ:
ಈ ಮೈಲಿಗೆಗೊ ಪಗರದ್ದೆ ಅಲ್ಲಿಗೇ ನಿರ್ನಾಮ ಆಗಿ ಹೋಯೇಕಾರೆ ಮದ್ದೆಂತರ?
ಮದ್ದು ಹಲವಿದ್ದು, “ಶುದ್ಧ”ಮಾಡ್ಳೆ.
ಸಣ್ಣಮಟ್ಟಿಂದಾದರೆ ಗೋಮಯ ತಳುದರೆ ಹೋವುತ್ತು.
ದನದ ಸಗಣ ಒಂದು ಬಿಂದು ಹಿಡ್ಕೊಂಡು, ನೀರಿನೊಟ್ಟಿಂಗೆ ಮಿಶ್ರಮಾಡಿ ಅಶುದ್ಧಆದ ಜಾಗೆಗೆ ತಳುದರೆ ಸರ್ವ ಶುದ್ಧ ಆತು ಹೇದು ನಮ್ಮ ಮನಸ್ಸು ಹೇಳುಗು.
ರಜಾ ದೊಡ್ಡಮಟ್ಟಿಂದಾದರೆ, ಗೋಮೂತ್ರ, ಗೋಮಯ, ಹಾಲು, ಮಸರು – ಎಲ್ಲ ಸೇರ್ಸಿ ಬಟ್ಟಮಾವ ನಾಕು ಮಂತ್ರ ಹೇಳಿ ಪಂಚಗವ್ಯ ಮಾಡುಗು.
ಆ ಪಂಚಗವ್ಯವ ದರ್ಭೆಕೊಡಿಲಿ ತಳ್ಕೊಂಡು ಹೋದರೆ ಶುದ್ಧ ಆತು ಹೇದು ಲೆಕ್ಕ.
ಇನ್ನೂ ಹೆಚ್ಚಿನ ಮೈಲಿಗೆ ಆದರೆ?
ಮತ್ತೆ ಉದಕಶಾನ್ತಿ,
ಶುದ್ಧಕಲಶ, ಧೃಡಕಲಶ, ಬ್ರಹ್ಮಕಲಶ – ಹೀಂಗೆಲ್ಲ ಹಲವು ವಿಧ ಇದ್ದು.
ಅದೆಲ್ಲ ವಿವರ ಇನ್ನೊಂದರಿ ಮಾತಾಡುವೊ.

ಸಾಮಾನ್ಯದ್ದೆಲ್ಲ ಸಗಣವೋ, ಪಂಚಗವ್ಯವೋ ಮಣ್ಣ ತಳುದರೆ ಎಲ್ಲವೂ ಶುದ್ಧ ಆವುತ್ತಿದಾ, ಅಷ್ಟು ಗೊಂತಿದ್ದರೆ ಧಾರಾಳ ಸಾಕು!
~
ಹೀಂಗೆಲ್ಲ ಕತೆಗೊ ನಮ್ಮ ಅಜ್ಜಿಯಕ್ಕಳದ್ದು!
~

ಒಟ್ಟಿಲಿ ಹಲವಾರು ನಮುನೆ ಮೈಲಿಗೆಗೊ / ಅಶೌಚಂಗೊ ನಮ್ಮ ಊರಿಲಿ ಬಳಕ್ಕೆಲಿ ಇದ್ದು.
ಇಪ್ಪದೆಲ್ಲವೂ ಒಳ್ಳೆದಕ್ಕೆ. ಇದರ್ಲಿ ಯೇವದೇ ಅವಮಾನ ಮಾಡ್ಳೆ ಎಂತದೂ ಇಲ್ಲೆ.
ಅಶೌಚ ಹೋಗಿ ಶುದ್ಧ ಅಪ್ಪನ್ನಾರ ಕಾರ್ಯಂದ ವಿಶ್ರಾಂತಿ – ಹೇದು ಗ್ರೇಶಿಗೂಂಡ್ರೆ ಆತು.
ಎಲ್ಲರೂ ಅಶೌಚ ಆಚರಣೆಲಿ ಇದ್ದರೆ ಸಮಾಜ ಶುಭ್ರವಾಗಿ ಒಳಿಗು ಹೇದು ಕೆಂಪಲ್ಲಿಲಿ ನೆಗೆಮಾಡಿದವು ಚೆನ್ನೈಭಾವ.

~

ಚೆನ್ನೈಭಾವ ಇದರ ಹೇಳಿಗೊಂಡಿಪ್ಪಾಗಳೇ ಬೇರೆಂತದೋ ಶುದ್ದಿ ಬಂತು;
ಸುಭಗಣ್ಣ ಹೇಳುಲೆ ಸುರುಮಾಡಿದ್ದು. ನಮ್ಮ ಧರ್ಮ ರಕ್ಷಣೆಯ ಬಗ್ಗೆ; ನಮ್ಮ ಕೂಸುಗಳ ಪಾವಿತ್ರ್ಯವನ್ನೇ ಮೈಲಿಗೆ ಮಾಡುವ ಹೀನಾಯ ಕಾರ್ಯಂಗಳ ಬಗ್ಗೆ.
ಅದರ ಬಗ್ಗೆ ಇನ್ನೊಂದರಿ ಮಾತಾಡುವೊ, ಆಗದೋ?
~

ಒಂದೊಪ್ಪ: ಬಾಹ್ಯ ಅಶೌಚ ಆದರೆ ಶುದ್ಧಿ ಮಾಡ್ಳೆ ಪಂಚಗವ್ಯ ಇದ್ದು. ಆಂತರ್ಯವೇ ಮೈಲಿಗೆ ಆದರೆ..?

12 thoughts on “ಎಂಜಲು, ಮೈಲಿಗೆ, ಕೊಳೆ, ಶುದ್ಧ – ಅಶೌಚ ಅರ್ತರೇ ನಿಜವಾದ ಶುದ್ಧ!!

  1. ಬೊಳುಂಬು ಗೋಪಾಲ ಭಾವನ ಸಂಶಯ ಒಳ್ಳೆಯದೇ. ಎನಗೆ ಉತ್ತರ ಗೊಂತಿಲ್ಲೆ. ಆದರೆ ಈ ರೀತಿಯ ಜಿಜ್ನಾಸೆಲಿ ಒಂದು ಆಲೋಚನೆ ಮಾಡಲೆ ವಿಷಯ ಇದ್ದು. ಸಂಪ್ರದಾಯಂಗೊ ಬೇಕು. ಆದರೆ ಸಂಪ್ರದಾಯಂಗಳ ನಾವು ತುಂಬಾ ಕಟ್ಟುನಿಟ್ಟಾಗಿ ಆಚರಣೆ ಮಾಡಲೆ ಹೇರಟರೂ ಕಷ್ಟವೇ. ಶೀಲ- ಅಶ್ಲೀಲಂಗಳ ನಡುವಾಣ ಗೆರೆ ತುಂಬಾ ತೆಳು. ಮಡಿ-ಮೈಲಿಗೆ ನಡುವಾಣ ಗೆರೆಯೂ ಹಾಂಗೆಯೇ. ಸಂಪ್ರದಾಯಂಗಳ ಹಿಂದಾಣ ಆಶಯಂಗಳ ಸರಿಯಾಗಿ ಗುರುತಿಸಿ ಆ ಉದ್ದೇಶಂಗಳ ಉಳಿಸಿಕೊಂಡು ಈಗಾಣ ಕಾಲಕ್ಕೆ ತಕ್ಕ ಹಾಂಗೆ ಆಚರಣೆಲಿ ಪರಿಷ್ಕಾರ ಮಾಡೆಕು. ಬುದ್ಧ ಹೇಳಿದ ಹಾಂಗೆ ಆಚರಣೆಗಳಲ್ಲಿ ತೀರಾ ಅತಿಗೂ ಹೋಗದ್ದೆ ತೀರಾ ಮಿತಿಗೂ ಇಳಿಯದ್ದೆ ‘ಮಧ್ಯಮ ಮಾರ್ಗ’ ಲ್ಲಿ ಹೋಪದು ಒಳ್ಳೇದು. ಎಸ್. ಕೆ. ಗೊಪಾಲಣ್ಣ ಹೇಳಿದ ಹಾಂಗೆ – ಮಡಿಯ ಹಿಂದಾಣ ಉದ್ದೇಶ ವೃತ್ತಿ ಮನಾರ. ಆ ಆಶಯವ ತಿಳ್ಕಂಡು ಮಡಿ ಆಚರಿಸುವುದು ಒಳ್ಳೆದು ಹೇಳಿ ಎನ್ನ ಅಭಿಪ್ರಾಯ.

  2. ಶುದ್ದ ಅಶುದ್ದದ ಬಗೆಗಿನ ಶುದ್ದಿಯ ಸದ್ದಿಲ್ಲದ್ದೆ ಓದಿದೆ. ಒಳ್ಳೆ ವಿಚಾರಪೂರ್ಣ ಶುದ್ದಿ. ಈ ವಿಷಯಲ್ಲಿ ಈಗಾಣ ಮಕ್ಕೊ ತಿಳ್ಕೊಂಬಲೆ ತುಂಬಾ ಇದ್ದು. ಎನಗೊಂದು ಸಣ್ಣ ಸಂಶಯ ಇದ್ದು ಭಾವಯ್ಯ, ಅವಲಕ್ಕಿಯ ಮಾಡುವಗಳುದೆ, ಬತ್ತವ ಬೇಶಿ ಗುದ್ದಿ ಮಾಡುವುದು ಹೇಳಿ ಕೇಳಿದ್ದೆ. ಆದರೆ ಅವಲಕ್ಕಿಯ ಕೊಳೆ ಹೇಳಿ ಹೇಳ್ತವಿಲ್ಲೇನೆ, ಅದೆಂತ ಹಾಂಗೆ ಹೇಳಿ.

    1. ನಿತ್ಯಕಟ್ಲೆಲಿ ಉಪಯೋಗಿಸುವಾಗ ಅವಲಕ್ಕಿ ಮುಟ್ಟಿದ್ರೆ ಕೈ ತೊಳವದು/ನಾದುದು ಮಾಡ್ತವಿಲ್ಲೆ ಆದರೆ ಇ೦ದಿಗೂ ಪೂಜೆ, ತಿಥಿ ಮು೦ತಾದ್ದರಲ್ಲಿ (ಯಾರು ಪೂಜೆ, ತಿಥಿ ಮಾಡ್ತವೋ ಅವ್ವು) ಅವಲಕ್ಕಿ ತಿ೦ತವಿಲ್ಲೆ. ಬಾಕಿ ಮನೆಗೆ ಬ೦ದ ನೆ೦ಟ್ರು ತಿ೦ಬಲೆ ಅಡ್ಡಿ ಇಲ್ಲೆ ಹೇಳಿ ಕಾಣ್ತು.

      1. ಎನಗೆ ಅನುಮಾನ ಇಪ್ಪದು ಅಶನವ ಮಾತ್ರ ಯಾಕೆ ‘ಮುಸುರೆ’ ಹೇಳುದು?
        ಈಗ ಬೇರೆ ಪದಾರ್ಥ೦ಗಳನ್ನೂ ಬೇಶುತ್ತು (ಸಜ್ಜಿಗೆ, ತಾೞು, ಕೊದಿಲು ಇತ್ಯಾದಿ), ಅದೆಲ್ಲ ಎ೦ತಕೆ ‘ಕೊಳೆ’ ಪಟ್ಟಿಲಿ ಬತ್ತಿಲ್ಲೆ?

  3. ಹರೇರಾಮ, ಮದಲಿಂಗೆ ಎನ್ನಜ್ಜಿ ಹೇಳ್ವದು ಕೇಳಿದ್ದೆ “ಎಂಜಲು ಮೈಲಿಗೆ ಇಲ್ಲದ್ದ ಜಂತುಗೊ” ಹೇಳಿರೆ ಹಾಂಗಿದ್ದವು ಪಶು-ಪಕ್ಷಿಗೆ ಸಮಾನ! ಅಂದ್ರಾಣ ದಿನಲ್ಲಿ ಶುದ್ಧ ಹೇಳುಸ್ಸು ಈಗಾಣ ಕ್ಲೀನು ಅಪ್ಪು. ಕೆಲವೆಲ್ಲಾ ಯೋಚನೆ ಮಾಡೀರೆ ಈಗಾಣ ಸೈಂಟಿಫಿಕ್ ಕೂಡಾ ಅಪ್ಪು.ಉದಾ;ಹೆಮ್ಮಕ್ಕೊ ಹೆರಗೆ ಆದಿಪ್ಪಗ ದೂರ ಕೂಬ್ಬದು! ನಿಜವಾಗಿಯೂ ಆ ಸಮಯಲ್ಲಿ, ವಿಶ್ರಾಂತಿ ಬೇಕು, ದಾಂಪತ್ಯಲ್ಲಿ ಪತಿ-ಪತ್ನಿ ನಾಲ್ಕು ದಿನ ದೂರ ಇರೆಕು ಹೇಳ್ತ ವಿಚಾರ ವೈದ್ಯರೇ ಹೇಳ್ತವಲ್ಲೋ? ಹಾಂಗೆ ಕಟ್ಟು-ನಿಟ್ಟು ಮಾಡದ್ರೆ ವಿಶಯ ಮೀರುಗು ಹೇಳ್ವ ದೂರಾಲೋಚನೆಲೆ ನಮ್ಮ ಹಿರಿಯವಕ್ಕೆ!ಕೈ ತೊಳದು ಮುಟ್ಟಿಕ್ಕು ಹೇದಿಪ್ಪದು ಕಾಲಾಂತರಲ್ಲಿ ಕೈ ನಾದುವದಕ್ಕೆ ಎತ್ತಿದ್ದಾಯಿಕ್ಕು ಅಂತೂಎಲ್ಲವೂ ಮೂಢ ನಂಬಿಕೆ ಅಲ್ಲ.ಎಂತ ಹೇಳ್ತಿ?

  4. “ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ/ ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ/ ತನ್ನ ಬಣ್ಣಿಸಬೇಡ ಪರರ ಹಳಿಯಲು ಬೇಡ/ ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ / ಇದೇ ನಮ್ಮ ಕೂಡಲ ಸಂಗಮ ದೇವನ ಒಲಿಸುವ ಪರಿ – ಬಸವಣ್ಣ” ನಿಜ! ಇಂಥಹ ಮೌಲ್ಯಂಗಳ ರೂಡಿಸಿಕೊಳ್ಳದ್ದೆ ಯಾಂತ್ರಿಕವಾಗಿ ಶುದ್ಧ ಮಡಿ ಹೇಳಿ ಪೂಜೆ ಮಾಡಿದರೆ ಎಂಥ ಫಲ?

  5. aantharyava shuddi maadekkuli gurugo iga bhavayana helikodthavada

    nammoLA shudda maadyomba,,,,

    hera shudda naave maadyomba ,,
    alladaaa

  6. ಆಂತರ್ಯವೇ ಮೈಲಿಗೆ ಆದರೆ ಶುದ್ಧಿ ಮಾಡುಲೆ ಶ್ರೀ ಗುರುಗಳಿಂದ ಮಾತ್ರ ಸಾಧ್ಯ ಒಪ್ಪಣ್ಣ.

  7. ಚೊಕ್ಕವಾಗಿರೆಕ್ಕು ಹೇಳ್ತ ಕಾರಣಕ್ಕೆ ಈ ‘ಕೊಳೆ’ , ‘ಮೈಲಿಗೆ’ ಇವೆಲ್ಲಾ ಒಂದು ಪದ್ಧತಿಯಾಗಿ ಬೆಳದು ಬಂದದಾದಿಕ್ಕು. ಆದರೆ ನಿಜವಾಗಿಯು ಕೈಗೆ ‘ಕೊಳೆ’ ಅಂಟಿದರೆ ‘ಕೈ ನಾದು’ದರಂದ ಅದು ಹೋಗ ಅಲ್ಲದಾ? ಆದರೆ ಮೊದಲಿಂಗೆ ಕೈ ಕೊಳೆಯಾದರೆ ಕೈಯ ತೊಳಕ್ಕೊಂಬ ಕ್ರಮವೇ ಇದ್ದಿಕ್ಕು- ಕ್ರಮೇಣ ಅದು ‘ಕೈ ನಾದು’ವಲ್ಲಿಗೆ ಬಂದು ಎತ್ತಿದ್ದಾದಿಕ್ಕು. ಈ ಮಡಿ-ಮೈಲಿಗೆಯ ಸರಿಯಾಗಿ ಅರ್ತುಗೊಂಡು ಮಾಡೆಕ್ಕು. ಕುರುಡಾಗಿ ಹಿರಿಯರು ಹೇಳಿದ್ದಕ್ಕೆ ಮಾಡ್ಳೆ ಹೆರಟರೆ ಅದು ಈಗಾಣ ಮಕ್ಕೊಗೆ ಮೂಢನಂಬಿಕೆ ಹೇಳಿ ಕಂಡುಹೋಪದು. ಮಾಡುದರ ನಾವೂ ತಿಳ್ಕೊಂಡು ಮಕ್ಕೊಗೂ ಹೇಳಿಕೊಟ್ರೆ ಅವುದೇ ಅದರ ಆಚರಣೆಗೆ ತಕ್ಕು.
    ಕೆಲವು ಬಟ್ಟಕ್ಕಳ ‘ಮಡಿ ವಸ್ತ್ರ’ ನೋಡಿದರೆ ಅಷ್ಟು ದೂರ ಓಡೆಕ್ಕು- ಹಾಂಗಿರ್ತು ಆ ‘ನಾರುಮಡಿ’ಯ ಅವಸ್ಥೆ!! ಅದರ ತೊಳವಲೇ ಇಲ್ಲೆ- ತೊಳದರೆ ಮಡಿ ಹೋವುತ್ತು! ಅವು ‘ದೂರ ಹೋಗಿ’ ಹೇಳಿ ಹೇಳುವ ಅಗತ್ಯವೇ ಇರ್ತಿಲ್ಲೆ – ಅಷ್ಟುದೇ ‘ನಾರು’ತ್ತು ಅವರ ವಸ್ತ್ರ!
    ಇನ್ನು ಬೆಂಗಳೂರಿನವರ ‘ಮಡಿ’ಯ ಸುದ್ದಿ ಹೇಳದ್ದಿಪ್ಪದೇ ಸುಖ!

  8. ಇಂದ್ರಾಣ (ಕೆಲವು ಮಕ್ಕೊ ಮಾತ್ರ) ಮಕ್ಕೊಗೆ ಮನೆ ಹೆರಡುವಾಗ ಮಾತ್ರ ಮೀವಲೆ ನೆಂಪಪ್ಪದು. ಅವಕ್ಕೆ ಶುದ್ದಕ್ಕೆ ಬೇಕಾದಷ್ಟು ತರದ ಸ್ಪ್ರೇ ಗೊ ಮಾರುಕಟ್ಟೆಲಿ ಸಿಕ್ಕುವಾಗ ಅಂತೇ ನೀರು ಹಾಳುಮಾಡಲೆ ಮನಸ್ಸಾವುತ್ತಿಲ್ಲೆ. ಮೀವಲೇ ಪುರುಸೊತ್ತಿಲ್ಲದ್ದ ಮೇಲೆ ಆತ್ಮ ಶುದ್ಧ, ಬಾಹ್ಯ ಶುದ್ಧ ಹೇಳಿ ಇಲ್ಲೆನ್ನೆ. ಟೀವೀ, ಕಂಪ್ಯೂಟರಿನ ಮುಂದೆ ಕೂದೊಂಡು ಒಂದು ಕೈಲಿ ತಟ್ಟೆ ಹಿಡುಕ್ಕೊಂಡು ಇನ್ನೊಂದು ಕೈಲಿ ತಿಂಬಗ ಯಾವುದು ಶುದ್ದ? ದೇವರೇ ಗತಿ. ಹರೇ ರಾಮ.

  9. ಕೆಲವೊಮ್ಮೆ ಶುದ್ಧ ಮುದ್ರಿಕೆಗೂ ವೃತ್ತಿಮನಾರಕ್ಕೂ ಸಂಬಂಧ ಇರುತ್ತಿಲ್ಲೆ!. ಮನಾರ ಇರೆಕ್ಕು ಹೇಳಿ ಶುದ್ಧ /ಅಶುದ್ಧದ ಆಚರಣೆ ಬಂದದಾದಿಕ್ಕು. ಆದರೆ ಕುರುಡಾಗಿ ಆಚರಣೆ ಮಾಡುವಾಗ ಮನಾರದ ಬಗ್ಗೆ ದೃಷ್ಟಿ ಕಮ್ಮಿ ಆವುತ್ತು. ಸಾಬೂನು ಉಪಯೋಗಕ್ಕೆ ಬಂದ ಮೇಲೆ ಹುಣ್ಣು ಕಜ್ಜಿ ಕಮ್ಮಿ ಆತು ಹೇಳಿ ಹಿರಿಯರು ಹೇಳುದು ಕೇಳಿದ್ದೆ. ಈಗ ತುಂಬಾ ಮಡಿ ಮೈಲಿಗೆಯ ಕಾಲ ಕಳುದು ಹೋತು.ಇನ್ನು ಶುಚಿತ್ವ[ವೃತ್ತಿಮನಾರ] ಕ್ಕೆ ಪ್ರಾಧಾನ್ಯ ಕೊಡೆಕ್ಕು.ಆದರೆ ಎಂಜಲು ಕೈಲಿ ಎಲ್ಲಾ ಸೌಟು,ಚಮ್ಚ ಮುಟ್ಟುದು ,ತಿಂಬ ವಸ್ತುವಿನ ತೆಗೆವದು ಎಲ್ಲಾ ಮಾಡುವ ಆಧುನಿಕರ ಕೆಲವು ಕ್ರಮ ಅಸಹ್ಯ ಹುಟ್ತಿಸುತ್ತು. ಅಂಥವಕ್ಕೆ ಇಂಥ ಪಾಠ ಬೇಕು.

  10. 😀 😀

    ಸೂತಕ, ಅಶೌಚ, ಮುಸುರೆ-ಮಡಿ ವಿಚಾರಲ್ಲಿ ಒಪ್ಪಣ್ಣ ಬೆಣಚ್ಚಿ ಹಾಕಿದ್ದು ಒಪ್ಪ ಆಯ್ದು. ಸೂತಕದ ವಿಷಯಲ್ಲಿ ಇನ್ನೊಂದು ಚೂರು ಸದ್ಯಲ್ಲೇ ನವಗೆ ಮಾತಾಡ್ಳೆ ಇದ್ದು ಗರುಡಪುರಾಣ ಹದಿಮೂರ್ನೇ ಅಧ್ಯಾಯಲ್ಲಿ. ಇರಳಿ.

    ಬಾಹ್ಯಶುಚಿಂದ ಆಂತರಿಕ ಶುಚಿಗೇ ಅಧ್ಯಾತ್ಮಲ್ಲಿ ಪ್ರಾಧನ್ಯ, ಹಾಂಗೇಳಿ ಬಾಹ್ಯಶುಚಿ ಇಲ್ಲದ್ದೆ ಆಂತರಿಕ ಶುಚಿ ಅಪ್ಪದಾರೂ ಎಲ್ಲಿಂದ! ಹಾಂಗಾಗಿ ಎಡಿಗಾಟ್ಟು ಬಾಹ್ಯಶುಚಿ ಮಾಡಿಗೊಂಬದು. ಮಾನಸಿಕ ಶುಚಿ ಸರಿಯಾಗಿದ್ದರೆ ಬಾಹ್ಯ ಶುಚಿ ಎಳ್ಪಲ್ಲಿ ಆಗ್ಯೋವ್ತು. ಮತ್ತೆ – “ಅಪವಿತ್ರಃ ಪವಿತ್ರೋವ ಸರ್ವಾವಸ್ಥಾಂ ಗತೋಪಿವಾ । ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ॥

    ಒಂದೊಪ್ಪ ಚಿಂತನೀಯ ಆಗಿದ್ದು. ಹರೇ ರಾಮ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×